ಸೋಮವಾರ, ಮೇ 7, 2012

ಸ೦ಕಷ್ಟ ಸಮಯದಲ್ಲಿ ನ೦ಬುಗೆ ಜಾಗೃತವಾಗುತ್ತದೆ


07
2012............................... ಮಾಂಟ್ರಿಯಲ್, ಕೆನಡ
May

ಸಂಪೂರ್ಣ ವಿಶ್ವವು ಒಂದು ಶಕ್ತಿಯಿಂದ ಮಾಡಲ್ಪಟ್ಟಿದೆ. ಎಲ್ಲವೂ ಕೇವಲ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ. ಯಾವಾಗೆಲ್ಲಾ ಏನಾದರೂ ನಿಮಗೆ ತೊಂದರೆ ಕೊಡುತ್ತದೋ, ಆಗ ನೀವು ಈ ಒಂದು ತತ್ವಕ್ಕೆ ಮರಳಿ ಬಂದರೆ - ಎಲ್ಲವೂ ಒಂದೇ ಒಂದು ಶಕ್ತಿಯಿಂದ ಮಾಡಲ್ಪಟ್ಟಿದೆ, ಆದುದರಿಂದ ಹಲವಾರು ಸಾಧ್ಯತೆಗಳಿವೆ; ಇದು ದೊಡ್ಡ ಸಮಾಧಾನವನ್ನು ತರುತ್ತದೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?
ಮೂರು ರೀತಿಯ ಬುದ್ಧಿಶಕ್ತಿಯಿದೆ:
ಒಂದು ಸುಪ್ತವಾಗಿರುವ ಬುದ್ಧಿ ಅಥವಾ ಕೆಲಸವೇ ಮಾಡದಿರುವ ಬುದ್ಧಿ: ತೂಕಡಿಸುವ, ನಿದ್ದೆಯಲ್ಲಿರುವ ಮತ್ತು ನಕಾರಾತ್ಮಕತೆಯ ಕಡೆಗಿರುವುದು. ಇದು ತಾಮಸಿಕ ಬುದ್ಧಿ.
ನಂತರ ರಾಜಸಿಕ ಬುದ್ಧಿ. ಹೆಚ್ಚಿನ ಜನರಲ್ಲಿ ರಾಜಸಿಕ ಬುದ್ಧಿಯಿರುತ್ತದೆ. ಪ್ರತಿಯೊಬ್ಬರೂ ರಾಜಸಿಕ ಬುದ್ಧಿಯೊಂದಿಗೆ ಕೆಲಸ ಮಾಡುತ್ತಾರೆ. ರಾಜಸಿಕ ಬುದ್ಧಿಯೆಂದರೆ ಎಲ್ಲವನ್ನೂ ಬೇರೆಯಾಗಿ ನೋಡುವುದು - ಈ ವ್ಯಕ್ತಿ ಬೇರೆ, ಆ ವ್ಯಕ್ತಿ ಬೇರೆ, ಈ ವ್ಯಕ್ತಿ ಆ ರೀತಿಯಲ್ಲಿ ವರ್ತಿಸುತ್ತಾನೆ, ಆ ಹೆಂಗಸು ಈ ರೀತಿಯಲ್ಲಿ ವರ್ತಿಸುತ್ತಾಳೆ; ಈ ವ್ಯತ್ಯಾಸಗಳ ಮೇಲೆ ಮನಸ್ಸಿಟ್ಟುಕೊಂಡು ಜೀವಿಸುವ ಹಲವಾರು ಜನರಿದ್ದಾರೆಂದು, ಹಲವಾರು ವ್ಯಕ್ತಿತ್ವಗಳಿವೆಯೆಂದು ಯೋಚಿಸುವುದು ಮತ್ತು ಅದನ್ನೇ ವಾಸ್ತವವಾಗಿ ಕಾಣುವುದು. ಇದನ್ನು ಮಾಡುವುದರಿಂದ ಕೆಲವೊಮ್ಮೆ ನೀವು ತುಂಬಾ ಸಂತೋಷವನ್ನು ಹೊಂದುತ್ತೀರಿ ಮತ್ತು ಕೆಲವೊಮ್ಮೆ ನೀವು ದುಃಖಗೊಳ್ಳುತ್ತೀರಿ. ಇದು ರಾಜಸಿಕ ಬುದ್ಧಿ.
ನಂತರ ಸಾತ್ವಿಕ ಬುದ್ಧಿ. ಇದು ವಿಕಾಸದ ಗುರಿ. ಸಾತ್ವಿಕ ಬುದ್ಧಿಯು, ಇತರ ಎಲ್ಲಾ ವ್ಯತ್ಯಾಸಗಳ ಕೆಳಗೂ ಒಂದೇ ಒಂದು ಸಂಗತಿಯಿರುವುದು ಎಂಬುದಾಗಿ ಕಾಣುತ್ತದೆ. ಅದು ವಾಸ್ತವ. ಆಧಾರವಾಗಿರುವ ಒಂದು ಸತ್ಯವಿದೆ. ಆ ಒಂದು ಸಂಗತಿಯು ಹಲವಾರು ರೂಪಗಳಲ್ಲಿ ಬಂದಿದೆ.
ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ನೀವು ಒಂದು ಬೊಂಬೆಯಾಟವನ್ನು ನೋಡಿದ್ದೀರಾ? ರಾಜಸಿಕ ಬುದ್ಧಿಯೆಂದರೆ, ಎಲ್ಲಾ ಬೊಂಬೆಗಳನ್ನು ವಿಭಿನ್ನ ಪಾತ್ರಗಳಾಗಿ ನೋಡುವುದು. ಒಂದು ಸಾತ್ವಿಕ ಬುದ್ಧಿಯು ಏನು ಹೇಳುತ್ತದೆಂದರೆ, ಈ ಎಲ್ಲಾ ಬೊಂಬೆಗಳನ್ನು ನಾಟ್ಯವಾಡಿಸುವವನು ಒಬ್ಬನೇ ಒಬ್ಬ ವ್ಯಕ್ತಿ. ನಿಜವಾಗಿ ಅದೊಂದು ಏಕಪಾತ್ರಾಭಿನಯ. ತೆರೆಯ ಹಿಂದಿರುವ ಒಬ್ಬ ವ್ಯಕ್ತಿಯು ತನ್ನ ಹತ್ತು ಬೆರಳುಗಳಿಂದ, ತೆರೆಯ ಮೇಲೆ ಈ ಎಲ್ಲಾ ಬೇರೆ ಬೇರೆ ಕಥೆಗಳು ಆಗುವಂತೆ ಮತ್ತು ಅವುಗಳು ನಾಟ್ಯವಾಡುವಂತೆ ಮಾಡುತ್ತಾನೆ. ನೀವು ಅಂತಹ ಬೊಂಬೆಯಾಟಗಳನ್ನು ನೋಡಿದ್ದೀರಾ? ಅವರು ಪ್ರತಿಯೊಂದು ಬೆರಳಿಗೂ ನೂಲುಗಳನ್ನು ಕಟ್ಟುತ್ತಾರೆ ಮತ್ತು ಎಲ್ಲಾ ಬೊಂಬೆಗಳು ಓಡಾಡುವಂತೆ ಮಾಡುತ್ತಾರೆ.
ಆದುದರಿಂದ ಸಾತ್ವಿಕ ಬುದ್ಧಿಯೆಂದರೆ, ಸಂಪೂರ್ಣ ಅಸ್ಥಿತ್ವದಡಿಯಲ್ಲಿ ಒಂದು ಸಂಗತಿಯಿರುವುದೆಂಬುದನ್ನು, ಒಂದು ಸತ್ಯವಿರುವುದೆಂಬುದನ್ನು, ಒಂದು ವಾಸ್ತವವಿರುವುದೆಂಬುದನ್ನು, ಒಂದು ಪ್ರಜ್ಞೆಯಿರುವುದೆಂಬುದನ್ನು ಕಾಣುವುದು. ಈ ಸತ್ಯವು ಮನಸ್ಸಿನಲ್ಲಿ ಚೆನ್ನಾಗಿ ಮನೆ ಮಾಡಿದಾಗ, ನೀವು ಭಿನ್ನತೆಗಳನ್ನು ನೋಡಿದರೂ, ಭಿನ್ನತೆಗಳಲ್ಲಿ ವಾಸಿಸಿದರೂ ನೀವು ಅಲ್ಲಾಡದೇ ಇರುತ್ತೀರಿ.
ತುಂಬಾ ಒಳ್ಳೆಯ ಅಡಿಪಾಯವಿರುವ ಮನೆಯು ಭೂಕಂಪ ಬಂದಾಗ ನೆಲಸಮವಾಗುವುದಿಲ್ಲ. ಅದರಲ್ಲಿ ಆಘಾತ ಹೀರಕವಿರುತ್ತದೆ. ಒಳಗೆ ಆಳದಲ್ಲಿ, ಇದೆಲ್ಲವೂ ಒಂದೇ ಪ್ರಜ್ಞೆಯಿಂದ ಮಾಡಲ್ಪಟ್ಟಿದೆ ಎಂಬ ತಿಳುವಳಿಕೆಯು ಒಂದು ನಿಜವಾದ ಆಘಾತ ಹೀರಕವಾಗಿದೆ. ಪದಾರ್ಥಗಳೆಲ್ಲವೂ ಒಂದು ಪ್ರಜ್ಞೆಯಾಗಿದೆ. ನಾನು ಆ ಒಂದು ಪ್ರಜ್ಞೆ ಮತ್ತು ಎಲ್ಲವೂ ಆ ಒಂದು ಪ್ರಜ್ಞೆ. ಯಾರು ಇದನ್ನು ತಿಳಿದಿರುತ್ತಾರೋ ಅವರು ಮುಕ್ತರಾಗಿರುತ್ತಾರೆ. ಇದು ಮುಕ್ತಿಯೆಂದು ಕರೆಯಲ್ಪಡುತ್ತದೆ. "ನಾನು ಮುಕ್ತನಾಗಿದ್ದೇನೆ. ಯಾವುದೂ ನನಗೆ ತೊಂದರೆಯನ್ನುಂಟು ಮಾಡುವುದಿಲ್ಲ".
ನಿಮಗೆ ತಿಳಿದಿದೆಯಾ, ಜೀವನ ಕಲೆಯ ೩೦ ವರ್ಷಗಳಲ್ಲಿ, ನಮ್ಮದು ಯಾವುದೇ ದೊಡ್ಡ ವಿವಾದಗಳಿರಲಿಲ್ಲ. ನಾವು ತುಂಬಾ ಗೌರವಿಸಲ್ಪಟ್ಟೆವು; ಪ್ರಪಂಚದಾದ್ಯಂತ ಒಂದು ತುಂಬಾ ಸುಗಮವಾದ ಸಂಸ್ಥೆಯೆಂದು. ಇತ್ತೀಚೆಗೆ ಒಂದು ವಿವಾದವಾಯಿತು ಮತ್ತು ಎಲ್ಲಾ ಮಾಧ್ಯಮದವರು, ಎಲ್ಲಾ ಉನ್ನತ ರಾಜಕಾರಣಿಗಳು, ಎಲ್ಲರೂ ನನ್ನ ಒಂದು ಹೇಳಿಕೆಯನ್ನು  ಟೀಕಿಸಿದರು. ಆದುದರಿಂದ ನಮ್ಮ ಶಿಕ್ಷಕರಲ್ಲಿ ಕೆಲವರು ಮತ್ತು ಸ್ವಯಂಸೇವಕರಲ್ಲಿ ಕೆಲವರು ಆತಂಕಗೊಂಡರು. "ಇದು ಯಾಕಾಯಿತು. ಓ ದೇವರೇ, ಇದು ನಕಾರಾತ್ಮಕವಾದ ಪ್ರಚಾರ", ಮತ್ತು ಇದು, ಅದು. ನಾನಂದೆ, "ಅದು ಹಾಗೇ ಇರಲು ಬಿಡಿ". ಸರಕಾರವು ಶಾಲೆಗಳನ್ನು ನಡೆಸಬಾರದೆಂದು ನಾನು ಒಂದು ಹೇಳಿಕೆಯನ್ನು ನೀಡಿದ್ದೆ. ನೀವು ನೋಡಿದರೆ, ಸರಕಾರೇತರ ಸಂಸ್ಥೆಗಳಿಂದ ಅಥವಾ ಮಿಷನರಿಗಳಿಂದ ಅಥವಾ ಆಧ್ಯಾತ್ಮಿಕ ಸಂಸ್ಥೆಗಳಿಂದ ನಡೆಸಲ್ಪಡುವ ಶಾಲೆಗಳಿಂದ ಯಾವುದೇ ಹಿಂಸಾ ಪ್ರವೃತ್ತಿಯುಳ್ಳ ವಿದ್ಯಾರ್ಥಿಗಳು ಹೊರಬರುವುದಿಲ್ಲ. ಹಿಂಸೆಯನ್ನು ಕೇವಲ ಸರಕಾರಿ ಶಾಲೆಗಳಲ್ಲಿ ಕಲಿಯಲಾಗುತ್ತದೆ. ನೋಡಿ, ಸರಕಾರದ ಯಾವುದೇ ಮಂತ್ರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವುದಿಲ್ಲ. ಅವರೆಲ್ಲರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಹಾಗೆ ನಾನು ಇದನ್ನು ಹೇಳಿದಾಗ, ಅದೊಂದು ಬಾಂಬಿನಂತೆ ಸಿಡಿಯಿತು. ನಾನಿದನ್ನು, ಒಂದು ನಿರ್ದಿಷ್ಟ ಸಂಸ್ಥೆಯ ರಜತ ಮಹೋತ್ಸವಾಚರಣೆಗೆ ಹೋದಾಗ ಅಲ್ಲಿನ ಒಂದು ಸಭೆಯಲ್ಲಿ ಹೇಳಿದ್ದೆ. ಹಾಗೆ, ಕೂಡಲೇ ನಮ್ಮ ಜೀವನ ಕಲೆಯ ಸಂಪರ್ಕ ಇಲಾಖೆಯವರು ರಾತ್ರಿ ೧೦ ಗಂಟೆಗೆ ನನಗೆ ಫೋನ್ ಮಾಡಿ, "ಗುರೂಜಿ ಈ ಚ್ಯಾನೆಲ್ ನವರು ನಮ್ಮಲ್ಲಿ ಇದರ ಬಗ್ಗೆ ಕೇಳುತ್ತಿದ್ದಾರೆ, ನಾವು ಏನು ಹೇಳಬೇಕು?" ಎಂದು ಕೇಳಿದರು. ನಾನಂದೆ, "ವಿವಾದವಿರಲಿ, ಚಿಂತಿಸಬೇಡಿ. ಯಾವುದೇ ಉತ್ತರವನ್ನು ಕೊಡಬೇಡಿ ಮತ್ತು ಏನನ್ನೂ ಹೇಳಬೇಡಿ".
ನೋಡಿ, ಈ ವಿವಾದದಿಂದಾಗಿ ಏನಾಯಿತು? ರಾಷ್ಟ್ರೀಯ ದೂರದರ್ಶನದಲ್ಲಿ, ಹಲವಾರು ಚ್ಯಾನೆಲ್ಲುಗಳಲ್ಲಿ ಚರ್ಚೆಯಾಯಿತು - ಶ್ರೀ ಶ್ರೀಯವರು ಸರಕಾರಿ ಶಾಲೆಗಳ ಕಡೆಗೆ ನ್ಯಾಯೋಚಿತವಾಗಿದ್ದರಾ? ಅವರು ಈ ಹೇಳಿಕೆಯನ್ನು ನೀಡಬಾರದಾಗಿತ್ತು, ಅವರು ಕ್ಷಮೆ ಕೇಳಬೇಕು; ಮತ್ತು ಇದು ಅದು ಎಂದು. ಹಲವಾರು ಜನರು ನೋಡುತ್ತಿದ್ದರು, ಕೆಲವರು ಪರವಾಗಿ ಮತ್ತು ಕೆಲವರು ವಿರೋಧವಾಗಿ. ಅವರು ನಮ್ಮ ಜನರನ್ನೂ ಆಮಂತ್ರಿಸಿದರು. ನಮ್ಮ ಶಿಕ್ಷಕರು ಹೋಗಿ ಕುಳಿತುಕೊಂಡರು ಮತ್ತು ಅವರು ನಾವು ಮಾಡಿದ  ಎಲ್ಲಾ ಕೆಲಸಗಳ ಬಗ್ಗೆ ಮಾತನಾಡಿದರು. ನಾವು  ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳ ಬಗ್ಗೆ ದೇಶಕ್ಕೆ ಗೊತ್ತಾಯಿತು. ಅಲ್ಲದಿದ್ದರೆ ನಾವು ೧೮೫ ಉಚಿತ ಶಾಲೆಗಳನ್ನು ನಡೆಸುತ್ತಿದ್ದೇವೆ - ಇದೆಲ್ಲವೂ ದೂರದರ್ಶನದಲ್ಲಿ ಪ್ರಸಾರವಾಗುವ ಯಾವುದೇ ಸಾಧ್ಯತೆಯಿರಲಿಲ್ಲ. ಆದುದರಿಂದ ಒಂದೆರಡು ದಿನಗಳ ಮಟ್ಟಿಗೆ ನಕಾರಾತ್ಮಕ ಪ್ರಚಾರವಾಗಿ ತೋರಿದ ವಿಷಯವು, ನಮಗೆ ಉಪಕಾರವಾಗಿ ಪರಿಣಮಿಸಿತು. ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಮೇಲ್ಮೈಯಲ್ಲಿ ವಿಷಯಗಳು ಭಿನ್ನವಾಗಿ ಗೋಚರಿಸುತ್ತವೆ ಆದರೆ ಕೆಳಗೆ ಅವುಗಳು ಭಿನ್ನವಾಗಿರುತ್ತವೆ. ಆದುದರಿಂದ ಗಾಬರಿಗೊಳ್ಳಬೇಡಿ. ಅಲುಗಾಡಬೇಡಿ. ಶಾಂತತೆ ಮತ್ತು ಅವಿಚಲತೆಯಿಂದ, ಎಲ್ಲವೂ ಒಂದು ವಿಷಯದಿಂದ ಮಾಡಲ್ಪಟ್ಟಿದೆಯೆಂಬುದನ್ನು ಹಾಗೂ ಆ ಒಂದು ವಿಷಯವೇ ನಾನು ಮತ್ತು ಎಲ್ಲವೂ ಎಂಬುದನ್ನು ತಿಳಿಯಿರಿ.
ಈ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಈಗ ತುಂಬಾ ಕಷ್ಟವಾದರೆ, ನಾನು ಹೇಳುವುದೆಂದರೆ, ಅದು ಅಸಾಧ್ಯವಲ್ಲ. ನಿಸ್ಸಂದೇಹವಾಗಿ, ನೀವು ಸತ್ಸಂಗದಲ್ಲಿ ಕುಳಿತಿರುವಾಗ, ಹೌದು, ಅದು ನಿಮಗೆ ಆಕರ್ಷಕವಾಗಿ ಕಾಣುತ್ತದೆ, ಅದೊಂದು ತಂತಿಯನ್ನು ಮೀಟುತ್ತದೆ, ಆದರೆ ನಂತರ ನೀವು ಅಡಿಗೆ ಮನೆಯೊಳಗೆ ಹೋದಾಗ ಅದೆಲ್ಲವೂ ಬದಲಾಗಿರುತ್ತದೆ. ನೀವು ಮನೆಗೆ ತೆರಳುತ್ತೀರಿ ಮತ್ತು ಆಗ ಇನ್ನೂ ಕೆಟ್ಟದಾಗಿರುತ್ತದೆ. "ಇದೇನಿದು ಎಲ್ಲವೂ ಒಂದೇ ಎಂದರೆ? ನಾನೀಗ ತೊಂದರೆಯಲ್ಲಿದ್ದೇನೆ. ಆ ವ್ಯಕ್ತಿಯು ನಾನು ಹೇಳುವುದನ್ನು ಕೇಳುವುದಿಲ್ಲ ಮತ್ತು ಈ ಇನ್ನೊಬ್ಬ ವ್ಯಕ್ತಿಯು ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾನೆ" ಎಂದೆಲ್ಲಾ ಚಿಂತಿಸುತ್ತೀರಿ. ಆದರೆ ಇದು ಅಸಾಧ್ಯವಲ್ಲ.
ಸಾತ್ವಿಕ ಬುದ್ಧಿಯು ಉದಯಿಸಿದಾಗ ಅದು ಸತ್ವ ಶುದ್ಧಿಯೆಂದು ಕರೆಯಲ್ಪಡುತ್ತದೆ. ನಿಮ್ಮಲ್ಲಿ ಶುದ್ಧವಾದ ಬುದ್ಧಿಯು ಉದಯಿಸಿದಾಗ, ಅದು ಒಳಗಿನಿಂದ ಅಗಾಧವಾದ ಮುಕ್ತಿಯನ್ನು ತರುತ್ತದೆ; ಭೌತಿಕ ಕೊಳೆಯಿಂದ ಮುಕ್ತಿ, ಭಾವನಾತ್ಮಕ ಕೊಳೆಯಿಂದ ಮುಕ್ತಿ ಮತ್ತು ಪರಿಕಲ್ಪನೆಗಳ ಕೊಳೆಯಿಂದ ಮುಕ್ತಿ.
ನಾವು ನಮ್ಮ ತಲೆಯಲ್ಲಿ ಬಹಳಷ್ಟು ತ್ಯಾಜ್ಯಗಳನ್ನು ಸೃಷ್ಟಿಸುತ್ತೇವೆ. ನಾವು ಜನರ ಸ್ವಭಾವ ಹೀಗಿದೆ ಅಥವಾ ಹಾಗಿದೆಯೆಂದು ಊಹಿಸುತ್ತೇವೆ, ಆದರೆ ನಿಜವಾಗಿ ಅದು ಹಾಗಿಲ್ಲದಿರಬಹುದು. ಜನರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಎಂದು ನಾವು ಊಹಿಸುತ್ತೇವೆ. ಅದು ಹಾಗೆ ಯಾಕಿರಬೇಕು?
ಜೀವನದಲ್ಲಿ ನಿಮಗಾಗಿ ಹಲವಾರು ಅಚ್ಚರಿಗಳಿವೆ. ಕೆಲವೊಮ್ಮೆ ನೀವಂದುಕೊಳ್ಳುತ್ತೀರಿ, ಯಾರೋ ಒಬ್ಬನು ನಿಮ್ಮ ಅತೀ ಒಳ್ಳೆಯ ಸ್ನೇಹಿತನೆಂದು ಮತ್ತು ನೀವು ಹಠಾತ್ತಾಗಿ ತಿರುಗಿ ನೋಡಿದಾಗ ನಿಮಗೆ ತಿಳಿಯುತ್ತದೆ, ಅದೇ ಸ್ನೇಹಿತನು ನಿಮಗೆ ಬಹಳ ತೊಂದರೆಯನ್ನುಂಟು ಮಾಡುತ್ತಿದ್ದಾನೆಂದು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
(ಶ್ರೀ ಶ್ರೀಯವರು ನಗುತ್ತಾ ಪ್ರತಿಕ್ರಿಯಿಸುತ್ತಾರೆ) ಇದನ್ನು ನೋಡಿ.
ಯಾಕೆಂದರೆ ಇಡಿಯ ಚಕ್ರವನ್ನು ತಿರುಗಿಸುವುದು, ಇಡಿಯ ವಿಶ್ವವನ್ನು ತಿರುಗಿಸುವುದು ಒಂದೇ ಪ್ರಜ್ಞೆ.
ಯಾರು ಇದನ್ನು ತಮ್ಮ ಹೃದಯದಲ್ಲಿ ಅನುಭವಿಸುತ್ತಾರೋ ಮತ್ತು ತಮ್ಮಲ್ಲೇ ಅನುಭವಿಸುತ್ತಾರೋ, ಅವರನ್ನುತ್ತಾರೆ, "ಆಹ್! ಮುಕ್ತಿ! ಈಗ ನಾನು ಕುಳಿತುಕೊಂಡು ಈ ವ್ಯಕ್ತಿಯ ಬಗ್ಗೆ, ಆ ವ್ಯಕ್ತಿಯ ಬಗ್ಗೆ ಮತ್ತು ಆ ಹೆಂಗಸಿನ ಬಗ್ಗೆ ಯೋಚಿಸಬೇಕಾದುದಿಲ್ಲ".
ಇವುಗಳೆಲ್ಲಾ ನಿಮ್ಮ ತಲೆಯನ್ನು ಆಕ್ರಮಿಸುತ್ತವೆ. ಅದು ಆಗಬೇಕಾಗಿಲ್ಲ. ಎಲ್ಲವೂ ಒಂದೇ ಪ್ರಜ್ಞೆ. ಪ್ರತಿಯೊಬ್ಬರೂ ಒಂದು ಚಿಕ್ಕ ಬೊಂಬೆಯ ಬೆರಳಿನ ಭಾಗ; ಮೇಲೆ ಕೆಳಗೆ ಹಾರುತ್ತಾ, ಈ ರೀತಿ ಆ ರೀತಿ ವರ್ತಿಸುತ್ತಾ ಮತ್ತು ಅವರ ಕರ್ಮ ಅವರೆಲ್ಲರನ್ನು  ಆ ರೀತಿ ವರ್ತಿಸುವಂತೆ ಮಾಡುತ್ತದೆ.
ಈ ಜ್ಞಾನವು ಮುಕ್ತಿಯನ್ನು ತರುವುದಿಲ್ಲವೇ? ಅಗಾಧವಾದ ಮುಕ್ತಿ! ಹಾಗಾದರೆ ಅದು ಯಾವ ರೀತಿಯ ಮುಕ್ತಿಯನ್ನು ತರುತ್ತದೆ? ಅದು ಕಡುಬಯಕೆಗಳಿಂದ ಮುಕ್ತಿಯನ್ನು ತರುತ್ತದೆ, ಅದು ತಿರಸ್ಕಾರಗಳಿಂದ ಮುಕ್ತಿಯನ್ನು ತರುತ್ತದೆ. ನೀವು ಇದನ್ನು ತಿಳಿದಾಗ, ಭೌತಿಕ ಮಟ್ಟದಲ್ಲಿ ನಾವು ನಮ್ಮ ಮನಸ್ಸಿನಲ್ಲಿ ಸೃಷ್ಟಿಸಿಕೊಂಡ, ಮದ್ಯ, ಮಾದಕ ದ್ರವ್ಯಗಳ ಬಯಕೆ ಮತ್ತು ಈ ಎಲ್ಲಾ ರೀತಿಯ ಅನಾರೋಗ್ಯಕರ ಬಂಧನಗಳು ಬಿದ್ದು ಹೋಗುತ್ತವೆ.
ನಂತರ ಭಾವನಾತ್ಮಕ ತ್ಯಾಜ್ಯಗಳು - ಆ ವ್ಯಕ್ತಿಯು ನನ್ನ ಕಡೆಗೆ ನೋಡಿದನು ಮತ್ತು ಆ ವ್ಯಕ್ತಿಯು ನನ್ನ ಕಡೆಗೆ ನೋಡಲಿಲ್ಲ. ನಾನು ಅವಳನ್ನು ಪ್ರೀತಿಸುತ್ತೇನೆ ಆದರೆ ಅವಳು ನನಗೆ ಪ್ರತಿಕ್ರಿಯಿಸಲಿಲ್ಲ. ಮೊದಲು, ಅವರು ನನ್ನ ಕಡೆಗೆ ಪ್ರೀತಿಯನ್ನು ತೋರುತ್ತಿದ್ದರು ಆದರೆ ಈಗ ಅವರಿಗೆಲ್ಲಾ ಏನಾಗಿದೆ - ಇವುಗಳೆಲ್ಲಾ ಆಗುವುದಿಲ್ಲ. ನಾವು ನಮ್ಮ ತಲೆಯಲ್ಲಿ ಆಶ್ರಯ ಕೊಟ್ಟಿರುವ ಈ ಭಾವನಾತ್ಮಕ ತ್ಯಾಜ್ಯಗಳು; ನಮ್ಮ ಪ್ರೀತಿಯನ್ನು ಸಾಬೀತುಪಡಿಸಲು ಪ್ರಯತ್ನಿಸುವುದು ಮತ್ತು ಇನ್ನೊಬ್ಬರ ಪ್ರೀತಿಗೆ ಸಾಕ್ಷ್ಯ ಕೇಳುವುದು, ಇವುಗಳೆಲ್ಲಾ ಬಿದ್ದು ಹೋಗುತ್ತವೆ.
ನಂತರ ಪರಿಕಲ್ಪನಾ ತ್ಯಾಜ್ಯಗಳು - ದೊಡ್ಡ ಸಂಪುಟಗಳನ್ನು ಬರೆಯಲಾಗಿದೆ; ಹಲವಾರು ಪುಸ್ತಕಗಳನ್ನು ಬರೆಯಲಾಗಿದೆ, ಎಲ್ಲವೂ ಪರಿಕಲ್ಪನೆಗಳ ವಿಷಯವಾಗಿ. ಇದು ಆನೆಯನ್ನು ನೋಡದ ಒಬ್ಬ ವ್ಯಕ್ತಿಯು ಆನೆಯ ಬಗ್ಗೆ ದೊಡ್ಡ ಸಂಪುಟಗಳನ್ನು ಬರೆಯುವಂತೆ. ಸುಮ್ಮನೇ ಕಲ್ಪಿಸಿಕೊಳ್ಳಿ, ದೂರದರ್ಶನ ಕೂಡಾ ಇರಲಿಲ್ಲ, ಒಬ್ಬರು ಆನೆಯ ಒಂದು ಚಿತ್ರವನ್ನು ಮಾತ್ರ ನೋಡಿರುತ್ತಾರೆ, ಕೈಯಲ್ಲಿ ಬಿಡಿಸಿದ ಚಿತ್ರ ಹಾಗೂ ಅವರು ಆನೆಗಳ ಬಗ್ಗೆ, ಅವುಗಳ ವರ್ತನೆಗಳ ಬಗ್ಗೆ ಮತ್ತು ಅವುಗಳನ್ನು ನಿಭಾಯಿಸುವುದು ಹೇಗೆಂಬುದರ ಬಗ್ಗೆ ಪ್ರಬಂಧ ಬರೆಯುತ್ತಾರೆ. ಪರಿಸ್ಥಿತಿ ಹೀಗೆಯೇ ಇರುವುದು. ಪ್ರಜ್ಞೆಯ ಬಗ್ಗೆ ಅತ್ಯಲ್ಪ ತಿಳುವಳಿಕೆಯಿರುವ ಜನರು ಪುಸ್ತಕಗಳ ಮೇಲೆ ಪುಸ್ತಕಗಳನ್ನು, ಸಂಪುಟಗಳನ್ನು ಬರೆಯುತ್ತಿದ್ದಾರೆ ಮತ್ತು ಅವುಗಳು ಎಲ್ಲದಕ್ಕಿಂತ ಹೆಚ್ಚು ಮಾರಾಟವಾಗುತ್ತವೆ ಕೂಡಾ! ಇದು ಇದರಲ್ಲಿರುವ ತಮಾಷೆಯ ಸಂಗತಿ. ಆದುದರಿಂದ ನೀವು ಪರಿಕಲ್ಪನಾ ತ್ಯಾಜ್ಯಗಳಿಂದ ಮುಕ್ತಿಯನ್ನು ಪಡೆಯುತ್ತೀರಿ - ಈ ವ್ಯಕ್ತಿ, ಆ ವ್ಯಕ್ತಿ ಮತ್ತು ಇನ್ನೊಬ್ಬ ವ್ಯಕ್ತಿ ಹೇಳುವುದನ್ನು ಕೇಳುವುದು, ಇಲ್ಲ! ಎಲ್ಲವೂ ಒಂದು ವಸ್ತುವಿನಿಂದ ಮಾಡಲ್ಪಟ್ಟಿವೆ.
ಅದು ಸುಂದರವಾಗಿಲ್ಲವೇ? ತುಂಬಾ ಚೆನ್ನಾಗಿದೆ!
ಪ್ರಶ್ನೆ: ಪ್ರೀತಿಯ ಗುರೂಜಿ, ಭೂತ ಮತ್ತು ಭವಿಷ್ಯಗಳು ವರ್ತಮಾನದ ಕ್ಷಣದಲ್ಲಾಗುತ್ತವೆ ಎಂದು ನೀವು ಹೇಳಿದ್ದಿರಿ. ನಾವು ಯೋಚಿಸುವಂತೆ ಆ ಸಮಯವು ರೇಖಾತ್ಮಕವಾಗಿಲ್ಲ. ನಾನು ಇದರ ಬಗ್ಗೆ  ಅವಲೋಕಿಸುತ್ತಿದ್ದೆ ಮತ್ತು ಸ್ವಲ್ಪ ಗೊಂದಲಗೊಂಡಿದ್ದೇನೆ. ದಯವಿಟ್ಟು ನೀವು ಇದರ ಬಗ್ಗೆ ವಿವರಿಸುವಿರಾ?
ಶ್ರೀ ಶ್ರೀ ರವಿಶಂಕರ್:
ಸ್ವಲ್ಪವೇ ಗೊಂದಲಗೊಂಡಿರುವುದಾ? ನೀನು ಸಂಪೂರ್ಣವಾಗಿ ಗೊಂದಲಗೊಂಡಿರಬೇಕು. (ನಗು)
ಅದು ನನ್ನ ಕೆಲಸ - ನಿನ್ನನ್ನು ಸಂಪೂರ್ಣವಾಗಿ ಗೊಂದಲಗೊಳಿಸುವುದು. ಭವಿಷ್ಯದ ಯೋಜನೆಗಳನ್ನು ಮಾಡುವುದು ಈಗ ವರ್ತಮಾನದಲ್ಲಿ, ಸರಿಯಾ. ಅವುಗಳು ಈ ಕ್ಷಣದಲ್ಲಿ ಮಾತ್ರ. ಭೂತಕಾಲದ ಬಗೆಗಿನ ಚಿಂತೆಗಳು ಇರುವುದು ಈ ಕ್ಷಣದಲ್ಲಿ ಮಾತ್ರ. ಕೇವಲ ಈ ಕ್ಷಣವು ಅಸ್ಥಿತ್ವದಲ್ಲಿರುತ್ತದೆ. ಸಂಪೂರ್ಣ ಭೂತ, ಸಂಪೂರ್ಣ ಭವಿಷ್ಯ, ಎಲ್ಲವೂ ಈ ಕ್ಷಣದಲ್ಲಿ ಮಾತ್ರ ಅಸ್ಥಿತ್ವದಲ್ಲಿರುತ್ತವೆ.
ಪ್ರಶ್ನೆ: ಅಷ್ಟಾವಕ್ರ ಗೀತದಲ್ಲಿ ನೀವು, ಮನಸ್ಸು ರೂಪಿಸಲ್ಪಡಲು ೮೪ ಜನ್ಮಗಳು ಹಿಡಿಯುತ್ತವೆ ಎಂದು ಹೇಳಿದುದರ ಅರ್ಥವೇನು?
ಶ್ರೀ ಶ್ರೀ ರವಿಶಂಕರ್:
ಅದು ಸರಿ, ೮೪ ಬೇರೆ ಬೇರೆ ಜನ್ಮಗಳು. ಹೌದು, ಹಲವಾರು ಶರೀರಗಳಿವೆ. ಅವುಗಳಲ್ಲಿ ನೀವು ಹಲವಾರನ್ನು ದಾಟಿ ಈಗ ಇಲ್ಲಿಗೆ ಬಂದಿದ್ದೀರಿ. ಇದು ೮೪ ನೆಯದು ಮಾತ್ರ ಕೂಡಾ ಆಗಿರಬಹುದು.
ಪ್ರಶ್ನೆ: ಯಾಕೆ ಕೆಲವರು ಮಾತ್ರ ದೇವರ ಸಾಕ್ಷಾತ್ಕರವನ್ನು ಅನ್ವೇಷಿಸುತ್ತಾರೆ ಮತ್ತು ಇತರರು ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ?
ಶ್ರೀ ಶ್ರೀ ರವಿಶಂಕರ್:
ಮೇಪಲ್ ಮರಗಳು ಇಲ್ಲಿ ಮಾತ್ರ ಯಾಕೆ ಬೆಳೆಯುತ್ತವೆ ಮತ್ತು ಫ್ಲೋರಿಡಾದಲ್ಲಿ ಯಾಕಲ್ಲ?
ಪ್ರಶ್ನೆ: ಪ್ರಪಂಚದಲ್ಲಿ ಅಷ್ಟೊಂದು ಬಡತನ ಯಾಕಿದೆ?
ಶ್ರೀ ಶ್ರೀ ರವಿಶಂಕರ್:
ಯಾಕೆಂದರೆ ನೀನು ಅದರ ಬಗ್ಗೆ ಸ್ಪಂದಿಸಿ ಅದಕ್ಕಾಗಿ ಏನಾದರೂ ಮಾಡಲಿಯೆಂದು. ವಿರೋಧಾತ್ಮಕಗಳು ಇಲ್ಲದಿದ್ದರೆ, ನೀವು ಅವುಗಳ ಬಗ್ಗೆ ತಿಳಿಯಲು ಕೂಡಾ ಸಾಧ್ಯವಿಲ್ಲ. ರೋಗಗಳಿರುವುದರಿಂದ ಆರೋಗ್ಯಕ್ಕೆ ಬೆಲೆಯಿದೆ. ಬಡತನವಿರುವುದರಿಂದ ಸಂಪತ್ತಿಗೆ ಸ್ವಲ್ಪ ಬೆಲೆಯಿದೆ. ಸರಿಯಾ? ವಿರೋಧಾತ್ಮಕ ಮೌಲ್ಯಗಳು ಜೊತೆಯಲ್ಲಿ ಅಸ್ಥಿತ್ವದಲ್ಲಿರುತ್ತವೆ ಮತ್ತು ಅವುಗಳು ಪರಸ್ಪರ ಪೂರಕಗಳಾಗಿವೆ. ನಾನಿಲ್ಲಿ ಬಡತನವಿರಬೇಕೆನ್ನುತ್ತಿಲ್ಲ, ನನ್ನನ್ನು ತಪ್ಪಾಗಿ ಉಲ್ಲೇಖಿಸಬೇಡಿ.
ಪ್ರಶ್ನೆ: ನನ್ನ ಗಂಡ, ನಾನು ಕ್ರಿಸ್ತನನ್ನು ನನ್ನ ಸಂರಕ್ಷಕನನ್ನಾಗಿ ಸ್ವೀಕರಿಸದಿದ್ದರೆ ನಾನು ಅವರೊಂದಿಗೆ ಸ್ವರ್ಗದಲ್ಲಿರಲಾರೆನು ಎಂದು ಹೆದರುತ್ತಾರೆ. ಅವರ ಕ್ಯಾಥೋಲಿಕ್ ನಂಬಿಕೆಯು ತುಂಬಾ ಬಲವಾಗಿದೆ. ನಾನು ಯೋಚಿಸುತ್ತಿದ್ದೇನೆ, ನಾವು ಯಾವಾಗಲಾದರೂ ಒಂದೇ ಸ್ವರ್ಗದಲ್ಲಿರುವೆವೇ ಎಂದು.
ಶ್ರೀ ಶ್ರೀ ರವಿಶಂಕರ್:
ನಿಮ್ಮ ಸಲುವಾಗಿಯೇ, ಅವನೊಂದಿಗೆ ವಾದಿಸಿ ಇಲ್ಲಿ ಈಗ ನರಕವನ್ನು ಸೃಷ್ಟಿಸಬೇಡ. ಅವನಿಗೆ ಹೇಳು, "ಹೌದು ಖಂಡಿತವಾಗಿ, ನಾನು ಅದೇ ಸ್ವರ್ಗಕ್ಕೆ ಹೋಗಲು ಒಂದು ಒಳದಾರಿಯನ್ನು ಬಳಸುತ್ತಿದ್ದೇನೆ, ಅಷ್ಟೆ. ಕ್ರಿಸ್ತನು ನನ್ನಲ್ಲಿ ಇದೆಲ್ಲವನ್ನೂ ಮಾಡಲು ಹೇಳಿದನು ಮತ್ತು ಅವನು ಹೇಳಿದುದನ್ನು ನಾನು ನಿಖರವಾಗಿ ಮಾಡುತ್ತಿದ್ದೇನೆ". ಇದನ್ನು ಅವನಿಗೆ ಹೇಳು.
ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಇಷ್ಟ ಪಡುವ ಹುಡುಗಿ ನನ್ನಿಂದ ದೂರ ಓಡುತ್ತಾಳೆ. ಏನು ಮಾಡುವುದು?
ಶ್ರೀ ಶ್ರೀ ರವಿಶಂಕರ್:
ನೀನು ಅವಳ ಮೇಲೆ ನಿನ್ನ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಏನೋ ಗಂಭೀರವಾದ ತಪ್ಪಾಗುತ್ತಿರಬೇಕು. ನಿನ್ನ ಪ್ರೀತಿಯು ತುಂಬಾ ತೀವ್ರವಾಗಿದ್ದು ನೀನದನ್ನು ತುಂಬಾ ಬಲವಂತವಾಗಿ ವ್ಯಕ್ತಪಡಿಸುತ್ತಿರಬೇಕು.
ನೋಡಿ, ನೀವೊಂದು ಷವರಿನ ಕೆಳಗೆ ನಿಂತಿದ್ದರೆ ಮತ್ತು ನೀರು ತುಂಬಾ ರಭಸವಾಗಿ ಹರಿಯುತ್ತಿದ್ದರೆ, ಖಂಡಿತವಾಗಿ ನೀವು ಅದರಿಂದ ದೂರಕ್ಕೆ ಸರಿಯಬೇಕಾಗುತ್ತದೆ. ನಿಮಗೆ ಅರ್ಥವಾಗುತ್ತಿದೆಯೇ? ಸುಮ್ಮನೇ ಕಲ್ಪಿಸಿಕೊಳ್ಳಿ, ನೀವೊಂದು ಷವರಿನ ಕೆಳಗೆ ನಿಂತಿದ್ದೀರಿ ಮತ್ತು ಅದು ಎಷ್ಟು ರಭಸವಾಗಿ ಹರಿಯುತ್ತಿದೆಯೆಂದರೆ ಅದು ಬಿದ್ದು ನಿಮ್ಮ ಕೂದಲನ್ನೆಲ್ಲಾ ಹೊರಕ್ಕೆಳೆಯುತ್ತಿದೆ. ನೀವು ಆ ಷವರಿನ ಕೆಳಗೆ ನಿಲ್ಲಲು ಇಷ್ಟಪಡಲಾರಿರಿ, ಅದು ತುಂಬಾ ನೋವುಂಟುಮಾಡುತ್ತದೆ.
ಆದುದರಿಂದ, ನೀನು ನಿನ್ನ ಪ್ರೀತಿಯನ್ನು ಮೆತ್ತಗೆ, ನವಿರಾಗಿ ವ್ಯಕ್ತಪಡಿಸುವಂತೆ ನೋಡಿಕೋ, ಅತಿಯಾಗಿಯಲ್ಲ. ಕೆಲವೊಮ್ಮೆ ಪ್ರೀತಿಯನ್ನು ಅತಿಯಾಗಿ ವ್ಯಕ್ತಪಡಿಸುವುದು ಉಸಿರುಗಟ್ಟಿಸಿದಂತಾಗುವುದು ಮತ್ತು ಬಹುಶಃ ಆಗುತ್ತಿರುವುದು ಇದೇ. ನೀನು ಮೌನ ಶಿಬಿರದಲ್ಲಿರುವುದು ಒಳ್ಳೆಯದಾಯಿತು. ಮೌನದಲ್ಲಿ ಸುಮ್ಮನೆ ಪುನರಾವಲೋಕನೆ ಮಾಡು.
ಪ್ರಶ್ನೆ: ಗುರೂಜಿ, ನಿರೀಕ್ಷೆಗಳನ್ನು ಕಡಿಮೆ ಮಾಡಲಿರುವ ತಂತ್ರಗಳನ್ನು ನೀವು ನಮಗೆ ಕಲಿಸುವಿರಾ? ಕೆಲಸದಲ್ಲಿ ನಾನು ಹಲವಾರು ಯೋಜನೆಗಳನ್ನು ಹಾಕುತ್ತೇನೆ ಮತ್ತು ಅದು ನಾನು ತುಂಬಾ ನಿರೀಕ್ಷೆ ಮಾಡುವಂತೆ ಮಾಡುತ್ತದೆ.
ಶ್ರೀ ಶ್ರೀ ರವಿಶಂಕರ್:
ಚಿಂತಿಸಬೇಡ, ನಿರೀಕ್ಷಿಸು ಮತ್ತು ಹೋಗಲು ಬಿಡು.
ಪ್ರಶ್ನೆ: ನಾವು ಧ್ಯಾನದ ಬಳಿಕ ವಿಶ್ರಾಂತಿ ತೆಗೆದುಕೊಳ್ಳುವುದು ಯಾಕೆ? ಧ್ಯಾನವೇ ಒಂದು ವಿಶ್ರಾಂತಿ.
ಶ್ರೀ ಶ್ರೀ ರವಿಶಂಕರ್:
ಹೌದು, ಕೆಲವೊಮ್ಮೆ ಕೆಲವು ಪೂರ್ತಿಯಾಗದೇ ಇರುವ ಅನುಭವಗಳಿದ್ದರೆ ಅಥವಾ ಒತ್ತಡ ಬಿಡುಗಡೆಯಾಗುತ್ತಿದ್ದರೆ ನಿಮ್ಮ ಶರೀರವು ಮಲಗಿ ಸ್ವಲ್ಪ ವಿಶ್ರಾಂತಿಯನ್ನು ಪಡೆಯಲು ಇಚ್ಛಿಸಬಹುದು. ನೋಡಿ, ಪ್ರತಿಯೊಂದು ಧ್ಯಾನದೊಂದಿಗೆ, ಒಳಗಡೆ ಅಷ್ಟೊಂದು ಪರಿವರ್ತನೆಗಳು ಆಗುತ್ತಿರುತ್ತವೆ. ಕೆಲವು  ಬದಲಾವಣೆಗಳು ಆಗುತ್ತಿರುತ್ತವೆ ಮತ್ತು ಶರೀರಕ್ಕೆ ಬೇಕಿದ್ದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಅದು ಕಡ್ಡಾಯವಲ್ಲ, ಪ್ರತಿಯೊಬ್ಬರೂ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಆದರೆ ಶರೀರಕ್ಕೆ ಅಗತ್ಯವಿದ್ದರೆ, ನೀವು ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕಾಗಿಯೇ ನಾವು ಯಾವತ್ತೂ ಹೇಳಿರುವುದು, "ನಿಮಗೆ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಅನ್ನಿಸಿದರೆ, ನೀವು ಮಲಗಿ ವಿಶ್ರಾಂತಿ ತೆಗೆದುಕೊಳ್ಳಬಹುದು".
ಪ್ರತಿಯೊಂದು ಸೂಚನೆಯನ್ನು ಸರಿಯಾಗಿ ಅಳತೆ ಮಾಡಿ ಕೊಡಲಾಗಿದೆ. ಇಲ್ಲದಿದ್ದರೆ ನಾವು, "ಎಲ್ಲರೂ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ" ಎಂದು ಹೇಳಿರುತ್ತಿದ್ದೆವು. ಇದೊಂದು ಅಪ್ಪಣೆಯಲ್ಲ. ಅದು, ನಿಮಗೆ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಅನಿಸಿದರೆ, ನೀವು ಹಾಗೇ ಮೈ ಚಾಚಿಕೊಂಡು ಮಲಗಬಹುದು ಮತ್ತು ವಿಶ್ರಾಂತಿ ಪಡೆಯಬಹುದು ಹಾಗೂ ಅದು ಒಳ್ಳೆಯದನ್ನು ಮಾಡುತ್ತದೆ. ಅದು ರಕ್ತ ಸಂಚಲನೆಗೆ ಒಳ್ಳೆಯದು ಮತ್ತು ಅದು ಹೆಚ್ಚು ಆರಾಮವನ್ನು ತರುತ್ತದೆ.
ಪ್ರಶ್ನೆ: ಜನರು ಹೆಚ್ಚಾಗಿ ಯಾವ ಪ್ರಶ್ನೆ ಕೇಳಬೇಕೆಂದು ನೀವು ಬಯಸುತ್ತೀರಿ?
ಶ್ರೀ ಶ್ರೀ ರವಿಶಂಕರ್:
"ನಾನು ಈ ಪ್ರಶ್ನೆಯನ್ನು ಗುರೂಜಿಯಲ್ಲಿ ಕೇಳಲೂ ಬೇಕೆ?" ಇದು ಕೇಳಲು ಒಂದು ಒಳ್ಳೆಯ ಪ್ರಶ್ನೆ.
ಪ್ರಶ್ನೆ: ಗುರೂಜಿ, ನಕಾರಾತ್ಮಕತೆಯ ಕಡೆಗೆ ಹೆಜ್ಜೆಯಿರಿಸುವುದು ನನ್ನ ಮನಸ್ಸಿನ ಪ್ರವೃತ್ತಿಯಾಗಿದ್ದರೆ ಏನು ಮಾಡುವುದು? ಇದು ನನ್ನ ನಮೂನೆಯಾಗಿದೆ. ನಾನು ಮುಕ್ತನಾಗಲು ಮತ್ತು ಹೆಚ್ಚು ಸಕಾರಾತ್ಮಕವಾಗಿರಲು ಬಯಸುತ್ತೇನೆ. ಈ ಕ್ಷಣದಲ್ಲಿ ನಾನು ತುಂಬಾ ದುರ್ಬಲನಾಗಿದ್ದೇನೆ.
ಶ್ರೀ ಶ್ರೀ ರವಿಶಂಕರ್:
ಯಾರು ಹೇಳಿದರು ನೀನು ದುರ್ಬಲನೆಂದು? ನೀನು ಸೂರ್ಯ, ನೀನು ದುರ್ಬಲನಾಗಲು ಹೇಗೆ ಸಾಧ್ಯ? ಎಚ್ಚೆತ್ತುಕೋ! ನಿನಗೆ ನೀನೇ ದುರ್ಬಲನೆಂಬ ಲೇಬಲ್ ಹಚ್ಚಬೇಡ. ಇದು, ಒಂದು ಸಿಂಹವು ತಾನು ಕುರಿಮರಿಯೆಂಬ ಲೇಬಲ್ಲನ್ನು ತನ್ನ ತಲೆ ಮೇಲೆ ಹಚ್ಚಿಕೊಂಡಂತೆ. ಯಾರೂ ಅದನ್ನು ನಂಬುವುದಿಲ್ಲ. ಒಂದು ಸಿಂಹವು, "ನಾನೊಂದು ಕುರಿ ಮರಿ, ನಾನೊಂದು ಕುರಿ" ಎಂದು ಹೇಳುತ್ತಾ ತಿರುಗುತ್ತದೆ - ಇದನ್ನೇ ನೀನು ಮಾಡುತ್ತಿರುವುದು. ನಿನ್ನ ಲೇಬಲ್ಲನ್ನು ಹೊರಗೆ ಬಿಸಾಡು. ನೀನು ದುರ್ಬಲನೆಂದು ಇನ್ನೆಂದಿಗೂ ಹೇಳಬೇಡ. ನಿನ್ನ ಹಿಂದಿನ ಜೀವನ ಹೇಗೆಯೇ ಇರಲಿ, ಅದನ್ನು ಸುಮ್ಮನೇ ಒದ್ದು ವರ್ತಮಾನದ ಕ್ಷಣದಲ್ಲಿರು ಮತ್ತು ಮುಂದೆ ಸಾಗು. ನೀನು ಹತ್ತು ಸಲ ಅಥವಾ ನೂರು ಸಲ ಬಿದ್ದರೂ ಚಿಂತಿಸಬೇಡ; ನಾನು ಚಿಂತಿಸುವುದಿಲ್ಲ, ಆದರೆ ನಡೆಯುತ್ತಾ ಇರು. ಎದ್ದೇಳು ಮತ್ತು ಓಡು, ನೀನು ಬಿದ್ದರೆ ಚಿಂತಿಸಬೇಡ, ಎದ್ದೇಳು ಮತ್ತು ಪುನಃ ಓಡು. ಸಾಧಕನೆಂದರೆ ಅವನು; ಅನ್ವೇಷಕನೆಂದರೆ ಅವನು.
ನೋಡು, ಮಗುವಾಗಿದ್ದಾಗ, ನೀವು ನಿಮ್ಮ ಕಾಲುಗಳ ಮೇಲೆ ನಿಲ್ಲುವ ಮೊದಲು ಎಷ್ಟು ಸಾರಿ ಬಿದ್ದಿದ್ದೀರಿ. ನೀವು ಅಂಬೆಗಾಲು ಹಾಕುತ್ತಾ ಹಾಕುತ್ತಾ ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದಿರಿ ಮತ್ತು ಹಲವು ಸಾರಿ ಬಿದ್ದಿರಿ, ಆದರೆ ಕೊನೆಗೆ ನೀವು ನಡೆಯಲು ಶುರು ಮಾಡಿದಿರಿ. ಅಷ್ಟೆ, ಒಂದೇ ವಿಷಯ. ಆದರೆ, "ನಾನು ಹತ್ತು ಸಾರಿ ಬಿದ್ದಿದ್ದೇನೆ, ನನಗೆ ಎದ್ದು ನಿಲ್ಲಲು ಸಾಧ್ಯವಿಲ್ಲ. ನಾನು ಬೆಕ್ಕಿನಂತೆ ಎರಡು ಕಾಲುಗಳು ಮತ್ತು ಎರಡು ಕೈಗಳೊಂದಿಗೆ ನಡೆಯುತ್ತೇನೆ. ನನಗೆ ಎದ್ದು ನಿಲ್ಲಲು ಸಾಧ್ಯವಿಲ್ಲ" ಎಂದು ಹೇಳಬೇಡಿ. ಇದಕ್ಕೆ ಅರ್ಥವಿಲ್ಲ. ನೀವೊಂದು ಪಕ್ಷಿ, ನೀವು ಬೀಳಬಹುದು, ಆದರೆ ನಿಮ್ಮಲ್ಲಿ ರೆಕ್ಕೆಗಳಿವೆ. ಎದ್ದೇಳಿ ಮತ್ತು ಹಾರುವುದನ್ನು ಮುಂದುವರಿಸಿ. ಇಲ್ಲಿ ಒಂದು ವಾರವಿದ್ದು, ಆಧ್ಯಾತ್ಮದೊಂದಿಗೆ, ಗುರುವಿನೊಂದಿಗೆ ಮತ್ತು ಸಂಪ್ರದಾಯದೊಂದಿಗೆ ಒಂದು ಸಂಪರ್ಕವನ್ನು ಅನುಭವಿಸಿ, "ನಾನು ದುರ್ಬಲ" ಎಂದು ಹೇಳುವುದು ಸ್ವೀಕಾರಾರ್ಹವೇ ಅಲ್ಲ. ಇದೊಂದು ಅಜ್ಞಾನದ ಹೇಳಿಕೆ.
ಪ್ರಶ್ನೆ: ಮದುವೆಯ ಉದ್ದೇಶವೇನು?
ಶ್ರೀ ಶ್ರೀ ರವಿಶಂಕರ್:
ನೀನು ತಪ್ಪಾದ ವ್ಯಕ್ತಿಯನ್ನು ಕೇಳುತ್ತಿದ್ದಿ. ಮದುವೆಯಾದವರನ್ನು ಕೇಳು. ಅವರ ಹತ್ತಿರ ಈ ಪ್ರಶ್ನೆ ಕೇಳು. ನಾನು ಹೇಳುವುದೆಂದರೆ, ಅದೊಂದು ಮುಖ್ಯವಾದ ಆಚಾರ ಮತ್ತು ನಿಮಗೆ ಮಕ್ಕಳು ಬೇಕೆಂದಿದ್ದರೆ, ಆಗ ಖಂಡಿತವಾಗಿ ನೀವು ಮದುವೆಯಾಗಬೇಕು ಮತ್ತು ಮಕ್ಕಳನ್ನು ಪಡೆಯಬೇಕು ಹಾಗೂ ಅವರಿಗೆ ಮೊದಲಿನಿಂದಲೇ ಒಳ್ಳೆಯ ಶಿಕ್ಷಣವನ್ನು ಕೊಡಬೇಕು.
ಮದುವೆಯೆಂದರೆ ಒಂದು ಆಚಾರ, ಅಲ್ಲಿ ನೀವು ಕರಗಿ ಹೋಗಿ ನಿಮ್ಮ ಸಂಗಾತಿಗೆ ಹೇಳುತ್ತೀರಿ, "ನನ್ನ ಎಲ್ಲಾ ಬಯಕೆಗಳನ್ನು ನಾನು ನಿನಗೆ ಕೊಡುತ್ತೇನೆ ಮತ್ತು ನಿನ್ನಿಂದ ನಿನ್ನ ಎಲ್ಲಾ ಬಯಕೆಗಳನ್ನು ನಾನು ತೆಗೆದುಕೊಳ್ಳುತ್ತೇನೆ". ನೀವು ನಿಮ್ಮೆಲ್ಲಾ ಬಯಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೀರಿ, ಆದುದರಿಂದ ಪ್ರತಿಯೊಬ್ಬರಿಗೂ ಇನ್ನೊಬ್ಬರ ಬಯಕೆಗಳನ್ನು ಈಡೇರಿಸುವ ಜವಾಬ್ದಾರಿಯಿರುತ್ತದೆ ಮತ್ತು ತಮ್ಮ ಸ್ವಂತದ್ದಲ್ಲ.
ಒಬ್ಬ ಭಕ್ತನು ತನ್ನ ಬಯಕೆಗಳನ್ನು ದೇವರಿಗೆ ಕೊಡುತ್ತಾನೆ. "ಇವುಗಳು ನನ್ನ ಬಯಕೆಗಳು. ಇದು ನನ್ನ ಕೆಲಸವಲ್ಲ, ನೀವು ಇದನ್ನು ಈಡೇರಿಸಿ. ನಾನು ಮುಕ್ತನಾಗಿದ್ದೇನೆ. ನಾನು ನನ್ನ ಬಯಕೆಗಳನ್ನು ನಿಮಗೆ ಕೊಡುತ್ತಿದ್ದೇನೆ". ನೀವು ನಿಮ್ಮ ಬಯಕೆಗಳನ್ನು ಕೊಟ್ಟಾಗ, ಅದು ನಿಮ್ಮನ್ನು ತೊಂದರೆಗೊಳಿಸುವುದಿಲ್ಲ. ಅದೇ ರೀತಿಯಲ್ಲಿ, ಒಂದು ಮದುವೆಯಲ್ಲಿ, ಒಬ್ಬ ಗಂಡನನ್ನುತ್ತಾನೆ, "ನನ್ನೆಲ್ಲಾ ಬಯಕೆಗಳನ್ನು ನಾನು ನಿನಗೆ ಕೊಡುತ್ತೇನೆ ಮತ್ತು ನಾನು ಬಯಕೆಗಳಿಂದ ಮುಕ್ತನಾಗಿದ್ದೇನೆ. ನಾನು ನೀನು ಬಯಸಿದುದನ್ನು ಮಾತ್ರ ಮಾಡುತ್ತೇನೆ". ಹೆಂಡತಿಯೂ ಅದನ್ನೇ ಹೇಳುತ್ತಾಳೆ, "ನನ್ನ ಬಯಕೆಗಳನ್ನು ನಾನು ನಿಮಗೆ ಕೊಟ್ಟಿದ್ದೇನೆ. ನಾನು ನೀವು ಬಯಸಿದುದನ್ನು ಮಾತ್ರ ಮಾಡುತ್ತೇನೆ". ಆದುದರಿಂದ ಅವರಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರು ಬಯಸಿದುದನ್ನು ಮಾಡಲು ಬದ್ಧರಾಗುತ್ತಾರೆ. ಇದು, ಇನ್ನೊಬ್ಬರು ನಿಮ್ಮ ಬಗ್ಗೆ ಕಾಳಜಿ ವಹಿಸುವರೆಂಬ ನಂಬಿಕೆಯೊಂದಿಗೆ ನೀವು ಮಾಡುವ, ನಿಮ್ಮ ಇಚ್ಛೆ ಮತ್ತು ಬಯಕೆಗಳ ತ್ಯಾಗ.
ದೋಣಿಯಲ್ಲಿ ಹೋಗುತ್ತಿದ್ದ ಇಬ್ಬರು ಜಪಾನೀ ಯಾತ್ರಿಕರ ಬಗ್ಗೆ ಒಂದು ಚಿಕ್ಕ ಕಥೆಯಿದೆ. ಹೊಸತಾಗಿ ಮದುವೆಯಾದ ದಂಪತಿಗಳು ಒಂದು ದೋಣಿಯಲ್ಲಿದ್ದರು. ಅವರು ಅವರ ಮಧುಚಂದ್ರಕ್ಕೆ ಹೋಗುತ್ತಿದ್ದರು. ಹಠಾತ್ತಾಗಿ ದೋಣಿ ಅಲ್ಲಾಡಲು ಶುರುವಾಯಿತು ಮತ್ತು ಅಲ್ಲೊಂದು ದೊಡ್ಡ ಚಂಡಮಾರುತ ಬಂತು. ಮಹಿಳೆಯು ಗಾಬರಿಪಟ್ಟಳು, ಆದರೆ ಗಂಡಸು ತುಂಬಾ ಶಾಂತವಾಗಿದ್ದನು ಹಾಗೂ ಯಾವತ್ತಿನಂತೆ ಮುಗಳ್ನಗುತ್ತಿದ್ದನು. ಹೆಂಗಸು ಅವನಲ್ಲಿ ಕೇಳಿದಳು, "ಈ ದೋಣಿ ಮಗುಚಿ ಹೋಗಬಹುದೆಂದು ನಾನು ತುಂಬಾ ಆತಂಕಗೊಂಡಿದ್ದೇನೆ ಮತ್ತು ಹೆದರಿದ್ದೇನೆ, ಆದರೆ ನೀನು ಅಷ್ಟೊಂದು ಶಾಂತವಾಗಿದ್ದಿ. ನಾವು ಮುಳುಗಿ ಸಾಯಬಹುದೆಂಬುದರ ಬಗ್ಗೆ ನಿನಗೆ ಚಿಂತೆಯಿಲ್ಲ". ಕೂಡಲೇ ಅವನು ತನ್ನ ಚಾಕುವನ್ನು ತೆಗೆದು ಅವಳ ಕೊರಳಿನ ಮೇಲಿಟ್ಟನು. ಆದರೆ ಆಗ ಅವಳು ನಗಲು ಪ್ರಾರಂಭಿಸಿದಳು ಮತ್ತು ಅಂದಳು, "ಇದು ಆಟವಾಡಲಿರುವ ಸಮಯವಾ? ನಮ್ಮ ಭವಿಷ್ಯದ ಬಗ್ಗೆ ಯೋಚಿಸು. ಇದು ತಮಾಷೆ ಮಾಡುವ ಸಮಯವಲ್ಲ". ಅವನಂದನು, "ನಿನಗೆ ಯಾಕೆ ಭಯವಾಗುವುದಿಲ್ಲ? ನಾನು ಒಂದು ಚಾಕುವನ್ನು ನಿನ್ನ ಕೊರಳಲ್ಲಿಟ್ಟಿದ್ದೇನೆ. ನಾನು ನಿನ್ನನ್ನು ಕೊಲ್ಲುತ್ತೇನೆ". ಅವಳು ನಕ್ಕಳು, "ಚಾಕು ನಿನ್ನ ಕೈಯಲ್ಲಿರುವಾಗ ನಾನು ಯಾಕೆ ಚಿಂತೆ ಮಾಡಬೇಕು? ನೀನು ನನಗೆ ಹಾನಿಯನ್ನುಂಟುಮಾಡುವುದಿಲ್ಲವೆಂದು ನನಗೆ ಗೊತ್ತು". ಅವನಂದನು, "ನನಗೆ ಅದೇ ಸಂಬಂಧ ಪ್ರಕೃತಿ ಮತ್ತು ದೇವರ ಜೊತೆಗಿದೆ. ನನ್ನ ಜೀವನವು ಅವರ ಕೈಗಳಲ್ಲಿರುವಾಗ, ಅವರು ನನ್ನನ್ನು ಇಂತಹ ಒಂದು ಚಂಡಮಾರುತದಲ್ಲಿ ಸಾಯಲು ಬಿಡಲಾರರು. ಅವರು ನನ್ನ ಕೈಬಿಡಲಾರರು. ನನಗೆ ಭಯವಾಗುವುದಿಲ್ಲ ಯಾಕೆಂದರೆ ನನ್ನ ಜೀವನದ ತಂತಿಗಳು ಅವರ ಕೈಗಳಲ್ಲಿವೆ. ಆದುದರಿಂದ ನಾನು ಯಾಕೆ ಚಿಂತೆ ಮಾಡಬೇಕು?" ಅದೇ ಕ್ಷಣದಲ್ಲಿ ಅವಳು ಕೂಡಾ ಆಧ್ಯಾತ್ಮಕ್ಕೆ ತಿರುಗಿದಳು, ಮತ್ತು ಕಥೆಯಲ್ಲಿರುವಂತೆ ಸಮುದ್ರವು ಕೂಡಲೇ ಶಾಂತವಾಯಿತು. ಸಮುದ್ರವು ಶಾಂತವಾಯಿತು ಮತ್ತು ಅವರಿಬ್ಬರೂ ಪ್ರಾರ್ಥನೆಯಲ್ಲಿ ತೊಡಗಿದರು.
ನಂಬಿಕೆಯು ಆಪತ್ಕಾಲದಲ್ಲಿ ಮಾತ್ರ ಕಾರ್ಯಪ್ರವೃತ್ತವಾಗಿರುತ್ತದೆ ಮತ್ತು ತಮಾಷೆಯ ಸಂಗತಿಯೆಂದರೆ, ಆಪತ್ಕಾಲದಲ್ಲಿ ಒಬ್ಬರು ಕಳೆದುಕೊಳ್ಳುವ ಮೊದಲನೆಯ ಸಂಗತಿಯೆಂದರೆ ನಂಬಿಕೆ. ಯಾವಾಗ ನಂಬಿಕೆಯ ಅಗತ್ಯ ಅತೀ ಹೆಚ್ಚಾಗಿರುತ್ತದೆಯೋ ಆಗಲೇ ಜನರು ಅದನ್ನು ಕಳೆದುಕೊಳ್ಳುವುದು. ಆದುದರಿಂದಲೇ ನಂಬಿಕೆಯೆಂಬುದು ಕೂಡಾ ಒಂದು ಉಡುಗೊರೆ. ಅದು ನೀವು ಮಾಡುವುದಲ್ಲ. ಯಾರಿಗೂ, "ನಾನು ಎಷ್ಟು ನಂಬುತ್ತೇನೆ, ಆದರೆ ನನಗೀಗ ಇದು ಯಾಕಾಯಿತು?" ಎಂದು ಹೇಳಲು ಸಾಧ್ಯವಿಲ್ಲ. ನೀವು ಯಾವ ದೊಡ್ಡ ಕೆಲಸವನ್ನು ಮಾಡಿದ್ದೀರಿ? ನಂಬಿಕೆಯು ನಿಮಗಾಗಿ ಕೊಡಲ್ಪಟ್ಟುದು. ಅದು, ನಿಮಗೆ ಒಂದು ದೋಣಿಯನ್ನು ಕೊಟ್ಟಂತೆ ಮತ್ತು ನಿಮಗೆ ಒಂದು ಹುಟ್ಟನ್ನು ಕೂಡಾ ಕೊಟ್ಟಂತೆ. ದೋಣಿಯನ್ನು ನಿಮಗಾಗಿ ಕೊಡಲಾಗಿದೆ ಮತ್ತು ಹುಟ್ಟನ್ನು ಕೂಡಾ ನಿಮಗಾಗಿ ಕೊಡಲಾಗಿದೆ. ಆದುದರಿಂದ ನಂಬಿಕೆಯೆಂಬುದು ನೀವು ಬೆಳೆಸಿದಂತಹುದಲ್ಲ, ಆದರೆ ಅಂತಹ ಆಪತ್ಕಾಲದ ಸಮಯಗಳಲ್ಲಿ ತುಂಬಾ ಅಗತ್ಯವಿದ್ದುದಾಗಿತ್ತು. ಅದು ಕೂಡಾ ಒಂದು ಉಡುಗೊರೆ. ಇದು ಗಮನ ಕೊಡಬೇಕಾದ ಒಂದು ಬಹಳ ಬಹಳ ಬಹಳ ಮುಖ್ಯ ವಿಷಯ.
ಈಗ ಬರುವುದು, "ನಂತರ ಏನು?" ನಂತರ ಏನೂ ಇಲ್ಲ! "ನಾನು ನನ್ನ ನಂಬಿಕೆಯನ್ನು ಹೆಚ್ಚಿಸುವುದು ಹೇಗೆ?" ಹೇಗೂ ಇಲ್ಲ, ಆರಾಮವಾಗಿರಿ. ನಿಮಗೆ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮಿಂದ ಕರ್ತೃತ್ವವನ್ನು ದೂರ ಮಾಡಬೇಕಂದಷ್ಟೇ ನಾನು ಹೇಳುವುದು. ಪುನಃ ನೀವು ಕೇಳುತ್ತೀರಿ, "ನಾನು ನನ್ನ ಕರ್ತೃತ್ವವನ್ನು ಬಿಡುವುದು ಹೇಗೆ?". ಇದು ಜನರು ಕೇಳುವ ಅತ್ಯಂತ ಮೂರ್ಖ ಪ್ರಶ್ನೆ, "ನಾನು ಕರ್ತೃತ್ವವನ್ನು ಬಿಡುವುದು ಹೇಗೆ?" ನೀವು ಕರ್ತೃಗಳಲ್ಲ ನನ್ನ ಪ್ರಿಯರೇ, ನಾನು ನಿಮಗೆ ಹೇಳುತ್ತಿದ್ದೇನೆ.
ಮೊದಲನೆಯದಾಗಿ, ನೀವು ಬಿಡಲು ಅಲ್ಲಿ ಕರ್ತೃತ್ವವಿರಬೇಕು. ನೀವು ಕರ್ತೃ ಕೂಡಾ ಅಲ್ಲ, ಹೌದು! ಆದುದರಿಂದ ಯಾವುದೇ ದಾರಿಯಿಲ್ಲ, ಯಾವುದೂ ಇಲ್ಲ, ಎಲ್ಲಾ ರಸ್ತೆಗಳು ತಡೆಯಲ್ಪಟ್ಟಿವೆ ಮತ್ತು ಎಲ್ಲವೂ ಮಾಡಲ್ಪಟ್ಟಿದೆ. ಯಾವುದರ ಬಗ್ಗೆಯೂ ನಿಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ, ತಿಳಿಯಿತಾ? ಇದು ದೊಡ್ಡ ಬಿಡುಗಡೆಯನ್ನು ತರುತ್ತದೆ, "ನನಗೆ ಯಾವುದರ ಬಗ್ಗೆಯೂ ಏನನ್ನೂ ಮಾಡಲು ಸಾಧ್ಯವಿಲ್ಲ". ಈಗ ನನ್ನನ್ನು ಕೇಳಬೇಡಿ, "ಯಾವುದರ ಬಗ್ಗೆಯೂ ಏನನ್ನೂ ಮಾಡಲು ಸಾಧ್ಯವಿಲ್ಲದಿರುವಾಗ ನಾನು ಏನು ಮಾಡಲು ಸಾಧ್ಯ?" (ಶ್ರೀ ಶ್ರೀಯವರು ನಗುತ್ತಾರೆ)
ಪ್ರಶ್ನೆ: ಆಧ್ಯಾತ್ಮಿಕ ಪಥವು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವೇ? ಆಗಿದ್ದರೆ, ನಾವು ನಿಮ್ಮಿಂದ ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಹೌದು, ನಾವು ಪ್ರತ್ಯೇಕವಾಗಿ ಕಲಿಸುತ್ತಿದ್ದೇವೆ, ಅದೇ ಸಮಯದಲ್ಲಿ ಎಲ್ಲರಿಗೂ ಜೊತೆಯಲ್ಲಿ. ಏಳು ಬಿಲಿಯನ್ ಜನರಿದ್ದಾರೆ ಮತ್ತು ನಾವು ತುಂಬಾ ಕಡಿಮೆ ಶಿಕ್ಷಕರಿರುವುದರಿಂದ ಎಲ್ಲರಿಗೂ ಕಲಿಸುತ್ತಿದ್ದೇವೆ. ೭ ಬಿಲಿಯದಲ್ಲಿ ಬರೀ ೦.೦೦೦೦೦೦೦೦೦೦೦೦೦೧ ಶೇಕಡಾ ಜನರಿರಬಹುದು ಮತ್ತು ನೀನು ಅವರಲ್ಲಿ ಒಬ್ಬ.
ಪ್ರಶ್ನೆ: ಗುರೂಜಿ, ನಾನು ನನ್ನ ಜೀವನದ ಒಂದು ಕಷ್ಟದ ಹಂತದಲ್ಲಿ ಸಾಗುತ್ತಿದ್ದೇನೆ ಮತ್ತು ನಾನು ಒಂದರ ಹಿಂದೆ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನಾನು ಅದನ್ನು ಆಧ್ಯಾತ್ಮಿಕವಾಗಿ, ಕ್ರಿಯಾತ್ಮಕವಾಗಿ, ಜ್ಯೋತಿಷ್ಯದ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತೇನೆ ಆದರೆ ಯಾವುದೂ ಕೆಲಸ ಮಾಡುವಂತೆ ತೋರುತ್ತಿಲ್ಲ. ನಾನು ನಿಯಮಿತವಾಗಿ ಸಾಧನೆ ಮಾಡುತ್ತೇನೆ, ನಾನು ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಆದರೂ ಕೂಡಾ ಜೀವನ ಸಾಗುತ್ತಾ ಇದೆ. ಹಾಗೇ ಹಿಂದೆ ತಿರುಗಿ ನೋಡು, ನೀನು ಯಾವುದೇ ಸಮಸ್ಯೆಯನ್ನು ಬಗೆಹರಿಸದೇ ಇದ್ದಿದ್ದರೆ, ನೀನು ಹೇಗೆ ಅಸ್ಥಿತ್ವದಲ್ಲಿದ್ದೀಯಾ? ನೀನು ಹಾಗೇ ಹಿಂದೆ ತಿರುಗಿ ನಿಜವಾದ ಸಂಗತಿಯನ್ನು ನೋಡಬೇಕು, ಬೇರೆ ಯಾರಲ್ಲಾದರೂ ಮೌಲ್ಯಮಾಪನ ಮಾಡುವಂತೆ ಕೇಳು. ಕಳೆದ ಹತ್ತು ವರ್ಷಗಳಲ್ಲಿ ನಿನಗೆ ಸಮಸ್ಯೆಗಳು ಮಾತ್ರವೇ ಇದ್ದುದೇ? ಸರಿ, ನಿನಗೆ ಸಮಸ್ಯೆಗಳಿದ್ದಿದ್ದರೆ, ಕಳೆದ ೧೦ ರಿಂದ ೧೫ ವರ್ಷಗಳಲ್ಲಿ ನೀನು ಒಂದೇ ಒಂದು ಸಮಸ್ಯೆಯನ್ನು ಕೂಡಾ ಬಗೆಹರಿಸಿಲ್ಲವೇ? ಆಗ ಸಮಸ್ಯೆಗಳನ್ನು ಬಗೆಹರಿಸುವುದರ ಅಗತ್ಯವಿರುವುದಿಲ್ಲ ಯಾಕೆಂದರೆ ಹೇಗಿದ್ದರೂ ಬಂದ ಸಮಸ್ಯೆಗಳೆಲ್ಲಾ ಹೋಗಿವೆ ಮತ್ತು ನೀನು ಇನ್ನೂ ಜೀವಂತವಾಗಿದ್ದಿ ಮತ್ತು ನೀನು ಇನ್ನೂ ಸಾಧನೆ ಮಾಡುತ್ತಿದ್ದಿ. ಅದು ಒಳ್ಳೆಯ ವಿಷಯ. ಅದರರ್ಥ ಸಮಸ್ಯೆಗಳಿಗೆ ನಿನ್ನನ್ನು ಏನೂ ಮಾಡಲು ಸಾಧ್ಯವಾಗಿಲ್ಲ. ಅವುಗಳು ಬಂದವು ಮತ್ತು ಅವುಗಳು ಹೋದವು, ನೀನು ಅವುಗಳಿಗಾಗಿ ಒಂದು ಪರಿಹಾರವನ್ನು ಕೂಡಾ ಕಂಡುಹಿಡಿಯಬೇಕಾಗಿ ಬರಲಿಲ್ಲ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಅದನ್ನು ಪುನಃ ಎಲ್ಲದಕ್ಕೂ ಅನ್ವಯಿಸಬೇಡಿ ಅಥವಾ ಲೇಬಲ್ ಹಚ್ಚಬೇಡಿ, "ನನ್ನ ಜೀವನವೊಂದು ಸೋಲು, ನನಗೆ ಯಾವಾಗಲೂ ಸಮಸ್ಯೆಗಳಿರುತ್ತವೆ". ಯಾವಾಗಲೂ ಸಮಸ್ಯೆಗಳಿರುತ್ತವೆಯೇ? ಸಾಧ್ಯವಿಲ್ಲ!
ಹೆಚ್ಚಿನ ಸಮಸ್ಯೆಗಳಿರುವವರ ಕಡೆ ನೋಡಿ, ನನಗಿರುವ ಸಮಸ್ಯೆಗಳನ್ನು ನೋಡಿ. ನಾನು ದಿನಕ್ಕೆ ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆಂದು ನಿಮಗೆ ಗೊತ್ತಿದೆಯಾ? ಯಾರೋ ಹೇಳಿದರು, "ಗುರೂಜಿ, ನೀವು ಪ್ರಶ್ನೆಯೊಂದಕ್ಕೆ ಕೇವಲ ೧೦ ಡಾಲರ್ ಶುಲ್ಕ ಹೊರಿಸಿದ್ದರೂ ನೀವು ಬಿಲ್ ಗೇಟ್ಸಿಗಿಂತ ಶ್ರೀಮಂತರಾಗಿರುತ್ತಿದ್ದಿರಿ". ನಾನು ಆ ವ್ಯಕ್ತಿ ಹೇಳಿದುದನ್ನು ಅಲ್ಲಗಳೆಯುವುದಿಲ್ಲ, ಬಹುಶಃ ಹೌದು. ನನಗೆ ಎಷ್ಟು ಇ-ಮೈಲ್ ಗಳು ಬರುತ್ತವೆಯೆಂದು ನಿಮಗೆ ಗೊತ್ತಿದೆಯಾ? ೧೦೧,೦೦೦ ಇ-ಮೈಲ್ ಗಳು. ಕಳೆದ ತಿಂಗಳು ನಾನು ಹಲವಾರು ದೇಶಗಳಿಗೆ ಪ್ರಯಾಣಿಸಿದೆ; ಒಂದು ತಿಂಗಳಿನಲ್ಲಿ ೧೨ ದೇಶಗಳು ಮತ್ತು ೧೮ ನಗರಗಳು. ದಿನಕ್ಕೆ ೧೯ ಗಂಟೆಗಳು ನಾನು ಕಾರ್ಯನಿರತನಾಗಿರುತ್ತೇನೆ. ನಾನೊಂದು ದೀರ್ಘ ಪ್ರಯಾಣದಿಂದ ಬಂದಿರುತ್ತೇನಷ್ಟೆ, ಕೂಡಲೇ ಅಲ್ಲಿ ನಾನು ಉತ್ತರಿಸಬೇಕಾದ ೧೦೦ ಪ್ರಶ್ನೆಗಳಿರುತ್ತವೆ.
ಜನರನ್ನು ಅವರಿದ್ದಂತೆಯೇ ಸ್ವೀಕರಿಸಿ. ಬೈಪೋಲಾರ್, ಸ್ಕಿಜ಼ೋಫ್ರೇನಿಯಾದಂತಹ ಮನೋವ್ಯಾಧಿಯಿಂದ ಬಳಲುವ ಹಾಗೂ ಇತರ ಎಲ್ಲಾ ರೀತಿಯ ನಮೂನೆಗಳೂ ಇರುತ್ತಾರೆ. ಯಾವತ್ತಾದರೂ, ಅವರಲ್ಲಿ ಒಬ್ಬರಲ್ಲಾದರೂ ನಾನು ಕೋಪಗೊಳ್ಳುವುದನ್ನು ನೀವು ನೋಡಿದ್ದೀರಾ, ಯಾವತ್ತಾದರೂ? ಕಲ್ಪಿಸಿಕೊಳ್ಳಿ, ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಒಂದು ದೊಡ್ಡ ಸಮಸ್ಯೆ. ನಾನು ಕೇಳಿದ್ದೇನೆ ಮನೋವೈದ್ಯರು ತಮ್ಮ ಉದ್ಯೋಗದಲ್ಲಿ ಸ್ವಲ್ಪ ಸಮಯ ಕಳೆದ ಬಳಿಕ ರೋಗಿಗಳಾಗಿ ತಿರುಗುತ್ತಾರೆಂದು, ಯಾಕೆಂದರೆ ಅವರು ಜನರ ಸಮಸ್ಯೆಗಳನ್ನು ಕೇಳುತ್ತಾ ಇರುತ್ತಾರೆ.
ಮೈಖೆಲ್ ಫಿಶ್ಮನ್ ಒಂದು ಸಾರಿ ವೈದ್ಯರು ಮತ್ತು ಅವರ ರೋಗಿಗಳಿಗೆ ಶಿಬಿರ ನಡೆಸುತ್ತಿದ್ದ ಮತ್ತು ಅವನಂದ, "ಗುರೂಜಿ, ಯಾರು ವೈದ್ಯರು ಮತ್ತು ಯಾರು ರೋಗಿಗಳು ಎಂದು ಹೇಳಲು ಕಷ್ಟವಾಗಿತ್ತು". ಆ ಗುಂಪು ಹಾಗಿತ್ತು.
ಇದು ಎಷ್ಟು ಸತ್ಯವೆಂದು ನನಗೆ ಗೊತ್ತಿಲ್ಲ, ಆದರೆ ಅನೇಕ ಸಾರಿ ಈ ಕ್ಷೇತ್ರದಲ್ಲಿ ವೈದ್ಯರಾದವರು ಕೊನೆಗೆ ರೋಗಿಗಳಾಗುತ್ತಾರೆ ಎಂದು ನಾನು ಹಲವರಿಂದ ಕೇಳಿದ್ದೇನೆ. ಇತ್ತೀಚೆಗೆ ಎ.ಐ.ಐ.ಯಮ್.ಯಸ್. (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್) ನಲ್ಲಿ ಒಂದು ಸಮೀಕ್ಷೆ ನಡೆಯಿತು. ೭೮% ವೈದ್ಯರಿಗೆ ಆರೋಗ್ಯ ಸರಿಯಿಲ್ಲವೆಂದೂ, ಅವರೇ ರೋಗಿಗಳಾಗುತ್ತಾರೆಂದೂ ಅವರು ಹೇಳಿದರು. ಇದೊಂದು ಸಮೀಕ್ಷೆಯ ಫಲಿತಾಂಶ, ಅಚ್ಚರಿಪಡಿಸುವಂತಹುದು, ಅಲ್ಲವೇ?
ಆದುದರಿಂದ, ನಿಮಗಿಂತ ಹೆಚ್ಚಿನ ಸಮಸ್ಯೆಗಳಿರುವವರನ್ನು ನೋಡಿ ಮತ್ತು ನಿಮ್ಮ ಸಮಸ್ಯೆಯು ಏನೂ ಅಲ್ಲವೆಂದು ನಿಮಗೆ ತಿಳಿಯುತ್ತದೆ. ಪ್ರಪಂಚವೆಲ್ಲಾ ಸಮಸ್ಯೆಗಳೇ. ಯಾರಿಗೆ ಸಮಸ್ಯೆಗಳಿಲ್ಲ? ಯೇಸುಕ್ರಿಸ್ತನಿಗೆ ಇಲ್ಲಿ ದೊಡ್ಡ ಸಮಸ್ಯೆಗಳಿದ್ದುವು. ಇಡಿಯ ಕ್ಯಾಥೋಲಿಕ್ ಚಳುವಳಿಯು ಯೇಸುಕ್ರಿಸ್ತನ ಸಮಸ್ಯೆಗಳಿಂದ ಎದ್ದಿತು, ಅವರ ಬೋಧನೆಗಳಿಂದಲ್ಲ. ಅದು ಯಾತನೆಯ ಮೇಲೆ ಕೇಂದ್ರೀಕೃತವಾಗಿದೆ, ಅಲ್ಲವೇ? ಖಂಡಿತವಾಗಿ ಅಲ್ಲಿ ಬೋಧನೆಯಿದೆ, ಆದರೆ ಯಾತನೆಯು ಪ್ರಧಾನವಾದುದು. ಕ್ರಿಶ್ಚಿಯನ್ ಧರ್ಮದ ಸಂಕೇತ ಪ್ರದೇಶೀಯತೆಯಲ್ಲ, ಅದು ಶಿಲುಬೆ; ಶಿಲುಬೆಗೇರಿಸಿದುದು.
ಅದೇ ರೀತಿಯಲ್ಲಿ ಕೃಷ್ಣನೊಂದಿಗೆ ಕೂಡಾ, ಅವನಿಗೂ ಕೊನೆಯ ವರೆಗೆ ಹಲವಾರು ಸಮಸ್ಯೆಗಳಿದ್ದುವು. ಕೊನೆಗೆ ಅವನಿಗೆ ಬಿಟ್ಟು ಕೊಡಬೇಕಾಗಿ ಬಂತು. ಅವನು ತನ್ನೆಲ್ಲಾ ಅತೀ ಪ್ರಿಯರಾದವರಿಗೆ ಅಂದನು, "ನೀವೆಲ್ಲರೂ ಮೇಲೆ ಉತ್ತರಕ್ಕೆ ಹೋಗಿ. ನನ್ನ ಈ ನಗರವು ಮುಳುಗಿ ಹೋಗಲಿದೆ". ಅವನ ಸ್ವಂತ ಕುಲದವರು ಪರಸ್ಪರ ಜಗಳವಾಡುತ್ತಿದ್ದರು ಮತ್ತು ತುಂಬಾ ಅಹಂಕಾರಿಗಳಾದರು. ಕೃಷ್ಣನ ಕುಲದವರು, ಅವನ ಎಲ್ಲಾ ಸೈನಿಕರು ಮತ್ತು ಅವನ ಸಾಮ್ರಾಜ್ಯದ ಪ್ರಜೆಗಳೆಲ್ಲಾ ತುಂಬಾ ಅಹಂಕಾರಿಗಳಾಗಿದ್ದರು ಯಾಕೆಂದರೆ, ಅವರು ಆತ್ಮಸಾಕ್ಷಾತ್ಕಾರ ಹೊಂದಿದ ಭಗವಂತ ಕೃಷ್ಣನನ್ನು ತಾವು ಸ್ವಂತವಾಗಿಸಿಕೊಂಡಿದ್ದೇವೆ ಎಂದು ಅಂದುಕೊಂಡಿದ್ದರು. "ಭಗವಂತನೇ ನಮ್ಮವನು ಮತ್ತು ನಾವು ಅವನ ಕುಟುಂಬದವರು. ನಮ್ಮನ್ನು ಯಾರಿಗೆ ಏನು ಮಾಡಲು ಸಾಧ್ಯ?" ಅವರು ಇಂತಹ ಅಹಂಕಾರದೊಂದಿಗೆ ಹೋಗಿ ಪರಸ್ಪರ ಜಗಳವಾಡಿದರು, ಎಲ್ಲರನ್ನೂ ನಾಶಗೊಳಿಸಿದರು ಮತ್ತು ತಾವೂ ನಾಶಹೊಂದಿದರು. ಅದಕ್ಕೇ ನಾನು ಹೇಳುವುದು ಇಲ್ಲಿ ಯಾವುದೇ ರೀತಿಯ ಸಂಪೂರ್ಣತೆಯನ್ನು ಹುಡುಕಬೇಡಿ, ಈ ಪ್ರಪಂಚವು ಅಪೂರ್ಣವಾದುದು. ಪ್ರಪಂಚದಲ್ಲಿ ಯಾವುದೆಲ್ಲಾ ಸಂಪೂರ್ಣತೆಯನ್ನು ನಿಮ್ಮಿಂದ ತರಲು ಸಾಧ್ಯವೋ ಅದನ್ನು ತನ್ನಿ ಮತ್ತು ನಿಮ್ಮ ಕೈಗಳನ್ನು ತೊಳೆದು ಸಂತೋಷವಾಗಿರಿ. ಖಂಡಿತವಾಗಿಯೂ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿ. ಕೆಲವು ವಿಷಯಗಳನ್ನು ನೀವು ಅಪೂರ್ಣವಾಗಿ ಬಿಡಬೇಕೆಂದು ಇದರ ಅರ್ಥವಲ್ಲ, ಅಲ್ಲ! ನೀವಿಲ್ಲಿರುವುದು ನಿಮ್ಮಿಂದಾದಷ್ಟು ಪರಿಪೂರ್ಣತೆಯ ಮಟ್ಟವನ್ನು ತರಲು ಮತ್ತು ಅಷ್ಟು ಅರ್ಹತೆಯನ್ನು ನೀವು ಗಳಿಸುತ್ತೀರಿ. ನೀವೆಷ್ಟು ನಡೆಯುತ್ತೀರೋ, ಅಷ್ಟು ಕುಶಲತೆಗಳು ನಿಮ್ಮ ಸ್ವಂತ ಜೀವನದಲ್ಲಿ ಅರಳುತ್ತವೆ ಮತ್ತು ನೀವು ಅಷ್ಟು ಹೆಚ್ಚು ಸಂತೋಷವಾಗಿರುವಿರಿ. ಆದುದರಿಂದ ನೀವು ಏನೂ ಮಾಡದೇ ಇದ್ದರೆ, ನೀವು ದುಃಖದಲ್ಲಿರುವಿರಿ. ಆದುದರಿಂದ ನೀವು ಮಾಡಬೇಕಾಗಿರುವ ಕೆಲಸಗಳನ್ನು ಮಾಡಿ ಮತ್ತು ನೀವು ಮುಕ್ತರಾಗಿರಿ.