ಮಂಗಳವಾರ, ಮೇ 22, 2012

ಪ್ರಜ್ಞೆ ಪರಿಪಕ್ವವಾಗುವುದನ್ನು ಪ್ರತೀಕ್ಷೆಯು ಸಂಕೇತಿಸುತ್ತದೆ

22
2012
May
ಬೆಂಗಳೂರು ಆಶ್ರಮ, ಭಾರತ

ಪ್ರಶ್ನೆ: ಪ್ರೀತಿಯ ಗುರೂಜಿ, ಯೋಗಸಾರ ಉಪನಿಷತ್ತಿನಲ್ಲಿ,  ನೀವು ಪರಮಾತ್ಮನು ನಿರಾಕಾರ ಸ್ವರೂಪನೆಂದು ಹಾಗೂ ಗುರುಗಳು, ಸಾಕಾರ ಸ್ವರೂಪಿ ಮತ್ತು ದೈವಸಂಭೂತರು ಎಂದು ಹೇಳಿದ್ದೀರಿ.ಇದರ ಬಗ್ಗೆ ಹೇಳುವಿರಾ? ಪರಮಾತ್ಮನು ಹೇಗೆ ನಿರಾಕಾರ?
ಶ್ರೀ ಶ್ರೀ ರವಿಶಂಕರ್: ಹೌದು, ಎರಡೂ ನಿಜ. ನೀವು ಆಕಾರ ಹೊಂದಿದ್ದರೂ ನಿರಾಕಾರರಾಗಿದ್ದೀರಿ. ನಿಮ್ಮ ದೇಹಕ್ಕೆ ಆಕಾರವಿದೆ ಆದರೆ ನಿಮ್ಮ ಮನಸ್ಸಿಗೆ ರೂಪ,ಆಕಾರವಿದೆಯೇ ? ಇಲ್ಲ. ಹಾಗೆಯೇ ಸುವ್ಯಕ್ತವಾಗಿರುವ ಈ ಬ್ರಹ್ಮಾಂಡ ಪರಮಾತ್ಮನ ಸ್ವರೂಪವಾಗಿದೆ ಮತ್ತು ಅವ್ಯಕ್ತ ರೂಪದಲ್ಲಿರುವ ಪ್ರಜ್ಞೆ, ಆಕಾಶ ಒಂದು ನಿರಾಕಾರ ರೂಪ.

ಪ್ರಶ್ನೆ: ಗುರೂಜಿ,ಯಾವಾಗ ಆತ್ಮ ಸ್ವತಃ ತಾನೇ ಬಹಿರಂಗಗೊಳ್ಳಲು ಅಪೇಕ್ಷಿಸುತ್ತದೆಯೋ ಆಗ ಮಾತ್ರ ನಾವು ಸಾಕ್ಷಾತ್ಕಾರ ಹೊಂದಬಹುದು ಎಂಬುದನ್ನು ಉಪನಿಷತ್ತಿನಲ್ಲಿ ನೀವು ಹೇಳಿದ್ದೀರಿ. ಹಾಗಿದ್ದಾಗ ಈ ಸನ್ನಿವೇಶದಲ್ಲಿ ತವಕದ ಮಹತ್ವವೇನು ? ನನ್ನಲ್ಲಿ ಏನೋ ಒಂದು ತನ್ನನ್ನು ತಾನು ತಿಳಿಯಲು ಹಾತೊರೆಯುತ್ತಿದೆ ಆದರೆ ತನ್ನನ್ನು ಬಹಿರಂಗಗೊಳಿಸುತ್ತಿಲ್ಲ. ಏಕೆ?
ಶ್ರೀ ಶ್ರೀ ರವಿಶಂಕರ್: ಹೌದು,  ಹಣ್ಣು ಪಕ್ವವಾದಾಗ ಅದರ ಬಣ್ಣವೂ ಬದಲಾಗುತ್ತದೆ ಅಲ್ಲವೇ. ಸೇಬು ಮಾಗಿದ ನಂತರ ಅದರ ಬಣ್ಣ ಬದಲಾಗುತ್ತದೆ. ಪರಂಗಿ ಹಣ್ಣು ಮಾಗಿದ ನಂತರ ಹಳದಿ ಬಣ್ಣವಾಗುತ್ತದೆ.ಹಾಗೆಯೇ ಹಾತೊರೆಯುವಿಕೆ(ತವಕ) ಪ್ರಜ್ಞೆಯು ಪರಿಪಕ್ವವಾಗುತ್ತಿರುವ ಸಂಕೇತವಾಗಿದೆ.

ಪ್ರಶ್ನೆ: ಗುರೂಜಿ, ಆತ್ಮವು ಒಂದೇ ಆಗಿದ್ದಾಗ, ನಮ್ಮ ವೈಯಕ್ತಿಕ ಕರ್ಮಗಳನ್ನು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಕೊಂಡೊಯ್ಯುವುದು ಯಾವುದು?
ಶ್ರೀ ಶ್ರೀ ರವಿಶಂಕರ್: ಹೌದು, ಆತ್ಮದಲ್ಲಿ ಎರಡು ಹಂತಗಳಿವೆ, ಒಂದು ಸರ್ವಾತ್ಮ ಮತ್ತು ಇನ್ನೊಂದು ಜೀವಾತ್ಮ. ಒಂದು ಬಲೂನಿನ ಒಳಗೆ ಕೂಡ ಗಾಳಿಯಿದೆ ಆದರೆ ಆ ಗಾಳಿಯು ಬಲೂನಿನಿಂದ ಆವರಿಸಲ್ಪಟ್ಟಿದೆ, ಅಲ್ಲವೇ? ಅದೇ ಜೀವ. ಆದ್ದರಿಂದ ಸಂಸ್ಕಾರಗಳು ಜೀವದ ರೂಪವನ್ನು ತಾಳುತ್ತವೆ, ಆದರೆ ಬಲೂನಿನ ಒಳಗೆ ಹಾಗು ಹೊರಗೆ ಇರುವ ಗಾಳಿ ಮಾತ್ರ ಒಂದೇ ಆಗಿದೆ.

ಪ್ರಶ್ನೆ: ಗುರೂಜಿ, ಎಲ್ಲದರಲ್ಲೂ ಅಡ್ಡ ಪರಿಣಾಮಗಳು ಇದ್ದೇ ಇವೆ.  ಜ್ಞಾನೋದಯದ ಅಡ್ಡ ಪರಿಣಾಮಗಳೇನು?  
ಶ್ರೀ ಶ್ರೀ ರವಿಶಂಕರ್: ಯಾವುದೇ ಅಡ್ಡ ಪರಿಣಾಮಗಳಿಲ್ಲ ಆದರೆ ಇದು ನೇರವಾದ ಪರಿಣಾಮವನ್ನು ಬೀರುತ್ತದೆ.

ಪ್ರಶ್ನೆ: ಗುರೂಜಿ, ’ಡಾರ್ಕ್ ಎನರ್ಜಿ’ ಎಂದರೇನೆಂದು ತಿಳಿಸಿ. ಇತ್ತೀಚಿನ ಒಂದು ಸತ್ಸಂಗದಲ್ಲಿ ನೀವು ಅದನ್ನು ಪ್ರಸ್ತಾಪಿಸಿದಿರಿ. ಗೂಗಲ್ ನಲ್ಲಿ ನೀಡಿರುವ ವಿವರಣೆಯಿಂದ ಅರ್ಥ ಮಾಡಿಕೊಳ್ಳುವುದು ಕ್ಲಿಷ್ಟವಾಗಿದೆ.
ಶ್ರೀ ಶ್ರೀ ರವಿಶಂಕರ್: ’ಡಾರ್ಕ್ ಎನರ್ಜಿ’ಯ ಬಗ್ಗೆ ಬೇಕಾದಷ್ಟು ಜ್ಞಾನವಿದೆ. ಇಡೀ ಬ್ರಹ್ಮಾಂಡವು ’ಡಾರ್ಕ್ ಎನರ್ಜಿ’ಯಿಂದ ತುಂಬಿದೆ. ಸೂರ್ಯವು ದುಂಡಗಿದೆ ಎಂದು ಹೇಳುವುದಾದರೆ, ಅದಕ್ಕೆ ಕಾರಣ ಅದರ ಸುತ್ತಲೂ ಇರುವ ’ಡಾರ್ಕ್ ಎನರ್ಜಿ’ ಅದನ್ನು ದುಂಡಗಿರುವಂತೆ ಮಾಡಿದೆ. ಹಾಗಾಗಿ ಎಲ್ಲ ನಕ್ಷತ್ರಗಳು, ಗ್ರಹಗಳು ಈ ’ಡಾರ್ಕ್ ಎನರ್ಜಿ’ಯಲ್ಲಿಯೇ ಇವೆ.
ಆಕಾಶವು ಕಪ್ಪಾಗಿದೆ ಆದರೆ ಆಕಾಶದಲ್ಲಿನ ನಕ್ಷತ್ರಗಳು ಬೆಳಕಿನ ಬಿಂದುಗಳು. ನಾವು ಕೇವಲ ಈ ನಕ್ಷತ್ರಗಳು ಮಾತ್ರ  ಆಕಾಶದ ಭೌತಿಕವಸ್ತು  ಎಂದುಕೊಂಡಿದ್ದೇವೆ. ಆದರೆ ನಕ್ಷತ್ರಗಳ ನಡುವಿನ ಪ್ರದೇಶವು ಕೂಡ  ದಟ್ಟವಾದ ಸಾಗರದಂತೆ ಶಕ್ತಿಯಿಂದ ತುಂಬಿದೆ ಎಂದು ವಿಜ್ಞಾನವು ಹೇಳುತ್ತದೆ. ಇದೇ ’ಡಾರ್ಕ್ ಎನರ್ಜಿ’. ನಿಮಗೆ ಅದು ಗೋಚರಿಸುವುದಿಲ್ಲ  ಆದರೆ ನಕ್ಷತ್ರಗಳ ನಡುವಿನ ಈ  ಶಕ್ತಿಗೆ  ’ಡಾರ್ಕ್ ಎನರ್ಜಿ’ ಎಂದು ಕರೆಯುತ್ತಾರೆ.
ಇದೇ ಶಿವ ತತ್ವವಾಗಿದೆ. ನಮ್ಮ ಪೂರ್ವಜರು ಇದನ್ನು ಬಲ್ಲವರಾಗಿದ್ದು ಇದನ್ನು 'ಶಿವ  ತತ್ವ' ಎಂದು ಕರೆದರು. ’ಸರ್ವಂ ಶಿವಮಯಂ ಜಗತ್ ’  - ಇಡೀ ಬ್ರಹ್ಮಾಂಡವು ಶಿವ  ತತ್ವದಿಂದ ಧರಿಸಲ್ಪಟ್ಟಿದೆ.

ಪ್ರಶ್ನೆ: ಅಷ್ಟಾವಕ್ರಗೀತೆಯಲ್ಲಿ ನೀವು ಮಹಾತ್ಮ ಗಾಂಧಿಯವರು ಏಕೆ ಹಿಂಸಾತ್ಮಕವಾದ ಸಾವನ್ನು ಹೊಂದಿದರು ಎಂಬುದರ ಬಗ್ಗೆ ಮಾತನಾಡಿದ್ದೀರಿ. ಜೀಸಸ್ ಏಕೆ ಶಿಲುಬೆಯ ಮೇಲೆ ಮೃತರಾಗಬೇಕಾಯಿತು ಎಂದು ಹೇಳಬಲ್ಲಿರಾ?
ಶ್ರೀ ಶ್ರೀ ರವಿಶಂಕರ್: ಅದರ ಬಗ್ಗೆ ಚರ್ಚೆ ಮಾಡಬೇಕಾದ ಅಗತ್ಯವಿದೆಯೆಂದು ನಮಗನ್ನಿಸುತ್ತಿಲ್ಲ. ಏಕೆ? ಏನಾಯಿತು? ಯಾವಾಗ? ಎಂಬುದರ ಬಗ್ಗೆ ಬೇಡ. ಬ್ರಹ್ಮಾಂಡ ಮತ್ತು ಇಲ್ಲಿ ಸಂಭವಿಸುವ ಎಲ್ಲ ಘಟನೆಗಳಿಗೆ ಒಂದೇ ಕಾರಣ – ’ಪರಮ ಕಾರಣ ಕಾರಣಾಯ’ – ಎಲ್ಲ ಕಾರಣಗಳಿಗೆ ಕಾರಣವಾದ ಶಿವ ತತ್ವ, ದೈವೇಚ್ಛೆ ಎಂದುಕೊಳ್ಳೋಣ.

ಪ್ರಶ್ನೆ: ಕರ್ಮ ಅಥವಾ ಪಾಪಗಳನ್ನು ಮಾಡುವವರು ಯಾರು? ದೇಹವೋ ಅಥವಾ ಆತ್ಮವೋ ಹಾಗೂ ಆತ್ಮವು ಪಾಪವೆಸಗಿದರೆ ದೇಹವೇಕೆ ನೋವನ್ನು ಅನುಭವಿಸಬೇಕು?
ಶ್ರೀ ಶ್ರೀ ರವಿಶಂಕರ್: ಈ ಎಲ್ಲ ತರ್ಕ ಮತ್ತು ಗೊಂದಲಗಳಲ್ಲಿ ಸಿಲುಕಬೇಡಿ. ನಿಮಗೆ ತಿಳಿಯುವ ಆಸಕ್ತಿಯಿದ್ದರೆ ಆತ್ಮಸಂಶೋಧನೆಯನ್ನು ಕೈಗೊಳ್ಳಿ – ನಾನು ಯಾರು? ನಾನು ಕರ್ಮವನ್ನು ಹೊಂದಿದ್ದೇನೆಯೋ ಇಲ್ಲವೋ? ಕರ್ಮ ಎಂಬುದಿದ್ದರೆ ಅದೆಲ್ಲಿದೆ? ಇವೆಲ್ಲವೂ ನೀವು ಕುಳಿತು ಆಲೋಚನೆ ಮಾಡಬೇಕಾದುದು
ನಾವು ನೀಡಿದ ಉತ್ತರದಿಂದ ನಿಮಗೆ ಎಂದಿಗೂ ಸಮಾಧಾನವಾಗುವುದಿಲ್ಲ ಏಕೆಂದರೆ ಅದು ನಿಮ್ಮ  ಸ್ವಾನುಭೂತಿಯ ಸ್ತರದಲ್ಲಿರುವುದಿಲ್ಲ . ಹಾಗಾಗಿ, ನೀವು ನನ್ನ ಉತ್ತರವನ್ನು ಆಲಿಸುವಿರಿ, ಆಮೇಲೆ  ಕೆಲದಿನಗಳ  ನಂತರ ಇನ್ನೊಂದು ಸಂದೇಹ ಹುಟ್ಟುತ್ತದೆ. ಹೀಗೆ ಪುನಃ ಪುನಃ ಅದೇ ಪುನರಾವರ್ತಿಸುತ್ತದೆ. ಅತ್ಯುತ್ತಮವಾದ ವಿಧಾನವೆಂದರೆ, ಮೌನವಾಗಿರುವುದು, ಧ್ಯಾನದಲ್ಲಿ ಆಳವಾಗಿ ಮುಳುಗುವುದು. ಆಗ ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳು ಅನುಭವದ ರೂಪದಲ್ಲಿ ಸಹಜವಾಗಿ  ಸ್ಫುರಿಸುತ್ತವೆ.

ಪ್ರಶ್ನೆ: ಗುರೂಜಿ, ನನ್ನೆಲ್ಲ ಪ್ರಯತ್ನಗಳನ್ನು ಮಾಡಿದಾಗಲೂ ನಾನೇಕೆ ವಿಫಲನಾಗುವೆ? ಇಂತಹ ಪರಿಸ್ಥಿತಿಗಳಲ್ಲಿ ನಾವೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನೀವು ಬೆನ್ನಟ್ಟಿರುವ ಗುರಿಯು ನಿಮಗೆ ನಿಜವಾಗಲೂ ಅಗತ್ಯವೆನಿಸಿದರೆ, ಕುಗ್ಗದೇ ಮುನ್ನಡೆಯಿರಿ. ಆದರೆ ಇಷ್ಟೊಂದು ಪರಿಶ್ರಮವನ್ನು ಅದಕ್ಕಾಗಿ ವ್ಯಯಿಸುವುದು ವ್ಯರ್ಥವೆಂದು ನಿಮಗೆನಿಸಿದರೆ ಇದಕ್ಕಿಂತ ಸುಲಭವಾದ ಯಾವುದಾದರೂ ಲಕ್ಷ್ಯದೆಡೆಗೆ ಸಾಗಿರಿ.  ಭಾರತದ ಒಬ್ಬ ಪ್ರಧಾನಿಯಿದ್ದರು. ಅವರು ಕೇವಲ ಕೆಲವೇ ತಿಂಗಳುಗಳ ಕಾಲ ಪ್ರಧಾನಿಯಾಗಿದ್ದರು. ಅವರು ಒಂದು ದಿನ ದೆಹಲಿಯ ಆಚೆ ಇರುವ ತಮ್ಮ ತೋಟದ ಮನೆಗೆ  ನನ್ನನ್ನು ಆಹ್ವಾನಿಸಿದರು. ನಾವು ಒಪ್ಪಿ  ಅಲ್ಲಿಗೆ ಹೋದೆವು. ನಾವು ಅಲ್ಲಿದ್ದಾಗ ಅವರು 'ಗುರೂಜಿ, ನಾನು ನಲವತ್ತು ವರ್ಷಗಳ ಕಾಲ ಈ ಹುದ್ದೆಯನ್ನು ಪಡೆಯಲು ಎಲ್ಲವನ್ನೂ ಮಾಡಿದೆ,  ಉಚಿತ ಹಾಗೂ ಅನುಚಿತವಾದ  ಆಟಗಳನ್ನು ಆಡಿದೆ. ಈಗ ನಾನು ಪ್ರಧಾನಿಯಾಗಿದ್ದೇನೆ, ಈ ಹುದ್ದೆಗಾಗಿ ನಾನು ಜೀವನವಿಡೀ ಹೋರಾಡಿದೆ, ಆದರೆ ಈಗ ಇದು ನನಗೆ ನಿರರ್ಥಕವೆನಿಸುತ್ತಿದೆ. ಮೊದಲು ನಾನು ಇಲ್ಲಿ ಹಾಯಾಗಿ ಮಲಗಬಹುದಿತ್ತು, ಆದರೆ ಈಗ ೫೦ ಪೊಲೀಸರು ನನ್ನನ್ನು  ಕಾವಲು ಕಾಯುತ್ತಿದ್ದಾರೆ ಮತ್ತು ನನ್ನದೇ ಮನೆಯ ಹೊರಗೆ ನಾನು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.  ಇದು ನನ್ನ ಜೀವಮಾನದ ನಿಷ್ಫಲವಾದ ಹೋರಾಟವಾಗಿತ್ತು.’’ ಎಂದು ಹೇಳಿದರು.
ನಾವು ಅವರಿಗೆ ಹೇಳಿದೆವು, ’ಇದನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಇಷ್ಟು ವರ್ಷಗಳು ಬೇಕಾಯಿತು. ಹೋಗಲಿ, ಈಗಲಾದರೂ ಅರಿತುಕೊಂಡಿರಲ್ಲ. ಎಷ್ಟೋ ಜನರು ಇದನ್ನು ಅರಿತುಕೊಳ್ಳುವುದೇ ಇಲ್ಲ’ ಎಂದು.
ಉತ್ತರ ಆಫ್ರಿಕಾದ ಸರ್ವಾಧಿಕಾರಿಗಳೆಲ್ಲ ಮಾಡುತ್ತಿರುವುದೇನು, ಕೇವಲ ಅಧಿಕಾರವನ್ನು ಉಳಿಸಿಕೊಳ್ಳಲು ಸಾವಿರಾರು ಜನರನ್ನು ಕೊಲ್ಲುತ್ತಿದ್ದಾರೆ. ಇದು ಮೂರ್ಖತನ. ಆ ಸಭ್ಯರಿಗೆ ಕನಿಷ್ಠ ಪಕ್ಷ  ಇದೆಲ್ಲ ವ್ಯರ್ಥವೆಂದು ಅರಿಯುವ ವಿವೇಚನೆಯಾದರೂ ಇತ್ತು. ’ನೀವು ಈ ವಿಷಯದಲ್ಲಿ ಅದೃಷ್ಟವಂತರು’ ಎಂದು ನಾವು ಅವರಿಗೆ ತಿಳಿಸಿದೆವು.
ಹಾಗೆ, ನೀವು ಏನಾದರೂ ಸಾಧಿಸಬೇಕೆಂದಿದ್ದರೆ ನಿಮ್ಮ ಇಡೀ ಜೀವನವನ್ನು ಆ  ಸಾಧನೆಯಲ್ಲಿ ತೊಡಗಿಸಿ. ಆದರೆ ನಿಮ್ಮ  ಶಕ್ತಿಯನ್ನು  ಬಳಸಲು  ಬೇರೆ  ಇನ್ನಾವುದಾದರೂ ಉತ್ತಮವಾದ  ಉದ್ದೇಶವಿದ್ದರೆ ಆ ಮಾರ್ಗದಲ್ಲಿ ಸಾಗಿ.
ಒಂದು ದಿನ ಒಬ್ಬ ಯುವಕನು ನಮ್ಮ ಬಳಿಗೆ ಬಂದು ಹೇಳಿದ- ಅವನು ಸಿ. ಎ. ಪರೀಕ್ಷೆಯನ್ನು ಬರೆಯುತ್ತಿದ್ದಾನಂತೆ ಹಾಗೂ ಏಳು ಬಾರಿ ಅನುತ್ತೀರ್ಣನಾಗಿದ್ದಾನಂತೆ. ಅವನ ಪೋಷಕರು ಅವನು ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಲೆಂದು ಅಪೇಕ್ಷಿಸುತ್ತಿದ್ದಾರಂತೆ.
ನಾವು ಅವನನ್ನು ’ನೀನೇಕೆ ಅದನ್ನು ಮಾಡಲು ಬಯಸುತ್ತೀ ? ಏಳು ಬಾರಿ ಆಗಲೇ ಅನುತ್ತೀರ್ಣನಾಗಿರುವೆ! ಈ ಬಾರಿಯಾದರೂ ತೇರ್ಗಡೆ ಹೊಂದುವ ಭರವಸೆಯಿದೆಯೆ?’ ಎಂದು ಕೇಳಿದೆವು.
ಅವನು, ’ಇಲ್ಲ, ಪಾಸಾಗುವ ಯಾವುದೇ ಭರವಸೆ ನನಗಿಲ್ಲ’ ಎಂದನು.
ಸಫಲವಾಗುವ ಯಾವುದೇ ಲಕ್ಷಣಗಳಿಲ್ಲದೇ ಇದ್ದಾಗ ಸುಮ್ಮನೆ ಏಕೆ ಸಮಯವನ್ನು ವ್ಯರ್ಥ ಮಾಡುವುದು, ಯಾವುದಾದರೂ ಉದ್ಯಮವನ್ನು ಆರಂಭಿಸಿ. ಯಾವುದಾದರೂ ಉದ್ಯೋಗವನ್ನು ಮಾಡಿ. ಅದು ಬುದ್ಧಿವಂತಿಕೆಯ ಕೆಲಸ.

ಪ್ರಶ್ನೆ: ನನಗೆ ಯಾವಾಗಲೂ ಮಾತ್ಸರ್ಯ ಹಾಗೂ ಅಹಂಕಾರದ ಭಾವವು ಕಾಡುತ್ತದೆ ಮತ್ತು ನನ್ನನ್ನು ನಾನು ಇತರರೊಂದಿಗೆ  ಹೋಲಿಸಿಕೊಳ್ಳುತ್ತೇನೆ. ಈ ಸ್ವಭಾವದಿಂದ ನಾನು ಹೊರಬರಲು ಇಚ್ಛಿಸುತ್ತಿದ್ದೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನೀವು ಈ ಅಭ್ಯಾಸ ( ಸ್ವಭಾವ)ದಿಂದ ಹೊರಬರಲು  ಇಚ್ಛಿಸುತ್ತಿದ್ದೀರೆಂದರೆ  ನೀವಾಗಲೇ ಆ ಮಾರ್ಗದಲ್ಲಿ  ಅರ್ಧ ಕ್ರಮಿಸಿದ್ದೀರಿ. ಹಾಗೇ ಮುನ್ನಡೆಯಿರಿ.  ಹೆಚ್ಚು ಸಾಧನೆ, ಸತ್ಸಂಗದಲ್ಲಿರಿ. ಆಗ ಇದರಿಂದ ಹೊರಬರುತ್ತೀರಿ.

ಪ್ರಶ್ನೆ: ಗುರೂಜಿ, ದೇವರ ನಾಮಸ್ಮರಣೆ ಮಾಡುವ ಮಹತ್ವವೇನು? ಮನಸಾರೆ ವಿಠ್ಠಲನ ನಾಮಸ್ಮರಣೆ ಮಾಡುವುದರಿಂದ ಯೋಗದ ಎಲ್ಲ ಲಾಭಗಳು ದೊರಕುತ್ತವೆ ಎಂದು ಮಹಾರಾಷ್ಟ್ರದಲ್ಲಿ ಹೇಳುತ್ತಾರೆ. 
ಶ್ರೀ ಶ್ರೀ ರವಿಶಂಕರ್:  ಹೇಗಿದ್ದರೂ ನಾವು ಪ್ರತಿ ಸಂಜೆ ಸತ್ಸಂಗದಲ್ಲಿ ಇದನ್ನು ಮಾಡುತ್ತೇವೆ. ಪರಮಾತ್ಮನ ನಾಮವನ್ನು ಜಪಿಸುತ್ತೇವೆ. ಹೌದು, ಜಪ ಮಾಡುತ್ತಾ ಹೋದಂತೆ ನೀವು ಒಂದು ಅಜಪ ( ಮಂತ್ರ ಉಚ್ಚರಿಸುವ ಮಾನಸಿಕ ಪ್ರಯತ್ನವಿಲ್ಲದೆ ಜಪವಾಗುವ ಅಭ್ಯಾಸ) ಸ್ಥಿತಿಗೆ ತಲುಪುವಿರಿ.ನೀವು ಸ್ತಬ್ಧರಾಗಿ, ಜಪವನ್ನು ಮೀರಿ ನಾಮಕ್ಕೆ ಅತೀತವಾದ ಸಮಾಧಿಯ ಸ್ಥಿತಿಯನ್ನು ತಲುಪುವಿರಿ. ಇದನ್ನು ಭಾವ ಸಮಾಧಿ ಎಂದು ಕರೆಯುತ್ತಾರೆ.
ಭಾವ ಸಮಾಧಿಯೂ ಸಾಧನೆಯ ಒಂದು ಅಂಗ. ಆದರೆ ಜ್ಞಾನವಿಲ್ಲದೆ ಭಕ್ತಿಯು ಪಕ್ವವಾಗುವುದಿಲ್ಲ. ಜ್ಞಾನ ಹಾಗೂ ಭಕ್ತಿ ಜೊತೆ ಜೊತೆಗೆ ಸಾಗಬೇಕು.

ಪ್ರಶ್ನೆ: ಗುರೂಜಿ,  ಮೊಟ್ಟೆಯು ಶಾಕಾಹಾರಿಯೋ ಅಥವಾ ಮಾಂಸಾಹಾರಿಯೋ?
ಶ್ರೀ ಶ್ರೀ ರವಿಶಂಕರ್: ಸತ್ಸಂಗದಲ್ಲಿ ಕುಳಿತುಕೊಂಡು ಮೊಟ್ಟೆಗಳ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ ಎಂದು ನಮಗನಿಸುತ್ತದೆ. ಮೊಟ್ಟೆಗಳನ್ನು ಬಿಡಿ, ಬ್ರಹ್ಮಾಂಡ (ಬ್ರಹ್ಮನಾದ)ದ ಬಗ್ಗೆ ಮಾತನಾಡಿ. ಇಲ್ಲಿ ನಾವು ಶರೀರ ಹಾಗೂ ಬ್ರಹ್ಮಾಂಡದ ಬಗ್ಗೆ ಚರ್ಚಿಸುತ್ತೇವೆ, ಮೊಟ್ಟೆಗಳ ಬಗ್ಗೆ ಅಲ್ಲ. ಮೊಟ್ಟೆಗಳ ಪ್ರಯೋಜನ ಮತ್ತು ಹಾನಿಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಿ.
ಪ್ರತಿದಿನ ೧೦ ನಿಮಿಷಗಳ ಕಾಲ ಸೂರ್ಯನನ್ನು ದಿಟ್ಟಿಸಬೇಕು ಎಂದು ಸಾಕಷ್ಟು ಸಂಶೋಧನೆಯನ್ನು ಮಾಡಿರುವ ವೈದ್ಯರೊಬ್ಬರು ನೆನ್ನೆ ನಮಗೆ ಹೇಳಿದರು. ಸೌರಶಕ್ತಿಯನ್ನು ಹೀರಿಕೊಂಡು ಶರೀರದಲ್ಲಿ ರಕ್ತವನ್ನು ಉತ್ಪಾದಿಸುವ   ಕೆಲವು ಅನನ್ಯವಾದ ಜೀವಕೋಶಗಳು ನಮ್ಮ ಕಣ್ಣುಗಳಲ್ಲಿವೆ ಎಂದು ಹೇಳಲಾಗುತ್ತದೆ. ಇದು ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಇರುವ ಹಾಗೆ. ಸೂರ್ಯನ ಕಿರಣಗಳನ್ನು ಹೀರಿಕೊಂಡು ಗಿಡಮರಗಳು ಅದನ್ನು ಸಸ್ಯಹರಿತ್ತನ್ನಾಗಿ (ಕ್ಲೋರೋಫಿಲ್) ಪರಿವರ್ತಿಸುತ್ತವೆ.
ಸೂರ್ಯನ ಬೆಳಕಿನ ಅದೇ ಪದಾರ್ಥವನ್ನು ನಮ್ಮ ಕಣ್ಣುಗಳ ರಕ್ತನಾಳಗಳು ಹೀರಿಕೊಂಡು ರಕ್ತವನ್ನಾಗಿ ಪರಿವರ್ತಿಸುತ್ತವೆ. ಹಾಗಾಗಿ, ರಕ್ತವನ್ನು ಶುದ್ಧೀಕರಿಸಲು ಅಥವಾ ಉತ್ಪನ್ನವನ್ನು ಹೆಚ್ಚಿಸಲು ಸೂರ್ಯನನ್ನು ದಿಟ್ಟಿಸಿ - ಇದನ್ನೇ ನಮ್ಮ ಪೂರ್ವಜರು ಹೇಳುತ್ತಿದ್ದರು!
ಸಂಧ್ಯಾವಂದನೆಯ ಅರ್ಥವೇನು?  ಕೈಯಲ್ಲಿ ನೀರನ್ನು ಹಿಡಿದು ಸೂರ್ಯೋದಯದ ದಿಕ್ಕಿನಲ್ಲಿ ನಿಂತು ಆ ನೀರು ಕೈಯಿಂದ ಜಾರುವವರೆಗೆ ಸೂರ್ಯನನ್ನು ನೋಡುವುದು. ಇದನ್ನು ನೀವು ಮೂರು ಬಾರಿ ಮಾಡುವಿರಿ. ಇದು ಸುಮಾರು ೧೦ ನಿಮಿಷ ಹಿಡಿಯುತ್ತದೆ. ನಂತರ ಸೂರ್ಯನನ್ನು ನೋಡುತ್ತಾ ನೀವು ಗಾಯತ್ರಿ ಮಂತ್ರವನ್ನು ಜಪಿಸುವಿರಿ. ಇದೇ ರೀತಿ ಸಂಜೆಯೂ ಮಾಡುವಿರಿ. ಸೂರ್ಯನನ್ನು ನೋಡಿದಾಗ ದೇಹದಲ್ಲಿ ಶಕ್ತಿಸಂವಹನವಾಗುತ್ತದೆ.
ನಾವು ಹೆಚ್ಚು ಹಸಿ ತರಕಾರಿ, ಆಹಾರ, ಹಣ್ಣುಗಳು ಹಾಗೂ ಹಣ್ಣಿನ ರಸವನ್ನು ಸೇವಿಸಬೇಕು ಎಂದು ಕೂಡ ಹೇಳಲಾಗಿದೆ. ನಾವು ೮೦%  ಹಸಿಯಾದ ಆಹಾರ  ಮತ್ತು ೨೦% ಬೇಯಿಸಿದ ಆಹಾರವನ್ನು ಸೇವಿಸಬೇಕು. ಮೆದುಳಿನ ವ್ರಣ, ಕ್ಯಾನ್ಸರ್ ಇರುವ ಹಲವರು ಮೂರು ತಿಂಗಳ ಕಾಲ ಕೇವಲ ಹಸಿಯ ಆಹಾರದ ಸೇವನೆ  ಹಾಗೂ ಸೂರ್ಯ ದರ್ಶನದ ಮೂಲಕ ರೋಗವನ್ನು ಗುಣಪಡಿಸಿಕೊಂಡ  ಉದಾಹರಣೆಗಳನ್ನೂ ಅವರು ನೀಡಿದರು. ವ್ಯಾಧಿಗಳ ಉಪಶಮನವು ಸುದರ್ಶನ ಕ್ರಿಯೆಯ ಮೂಲಕವೂ ಖಂಡಿತವಾಗಿ ಆಗುತ್ತದೆ.
ನಮ್ಮ ಶರೀರದ ಮೇಲೆ ನಾವು ಹಾಕಿಕೊಳ್ಳುವ ಕ್ರೀಂಗಳನ್ನು ನೀವು ಸೇವಿಸಿದರೆ ಸತ್ತು ಹೋಗುವಿರಿ ಏಕೆಂದರೆ ಅವುಗಳಲ್ಲಿ ಅಷ್ಟು ಹಾನಿಕಾರಕ ರಾಸಾಯನಿಕ ಪದಾರ್ಥಗಳಿರುತ್ತವೆ. ಈ ಕ್ರೀಂಗಳನ್ನು ನಮ್ಮ ದೇಹ ಹೀರಿಕೊಳ್ಳುತ್ತದೆ. ಅದು ನೇರವಾಗಿ ನಮ್ಮ ರಕ್ತವಾಹಿನಿಯನ್ನು ಸೇರುತ್ತದೆ. ಹಾಗಾಗಿ ನಾವು ಸೇವಿಸಲಾಗದ ಯಾವುದನ್ನೂ ನಮ್ಮ ತ್ವಚೆಗೆ ಲೇಪಿಸಬಾರದು. ಹಾಗಾಗಿಯೇ ಆಯುರ್ವೇದೀಯ ಲೇಪನಗಳನ್ನು ಹೊರತುಪಡಿಸಿ ಇತರ ಯಾವುದೇ ಕ್ರೀಂಗಳು ಲೇಪಿಸಿಕೊಳ್ಳಲು ಯೋಗ್ಯವಲ್ಲ. ಕ್ರೀಂಗಳಲ್ಲಿ ಇಲಿ ಪಾಷಾಣವನ್ನೂ ಸೇರಿಸುತ್ತಾರೆ, ಅದನ್ನು ಸೇವಿಸಿದ ಜನ ಸಾಯುವರು. ಇದನ್ನು ತ್ವಚೆಗೆ ಲೇಪಿಸಿದಾಗ ನಿಧಾನವಾಗಿ ಜನ ಸಾವಿಗೀಡಾಗುವರು.
ಪ್ರಾಚೀನ ಕಾಲದಲ್ಲಿ, ಮಣ್ಣಿನ ಪ್ಯಾಕ್ ಗಳು, ಹಾಲಿನ ಕೆನೆ, ಕಡಲೆ ಹಿಟ್ಟು ಹಾಗೂ ಅರಿಸಿನವನ್ನು ಹಚ್ಚಿಕೊಳ್ಳುತ್ತಿದ್ದರು. ಚರ್ಮವನ್ನು ಶುಚಿಯಾಗಿಡಲು ನಾವು ಇವುಗಳನ್ನು ಬಳಸುತ್ತಿದ್ದೆವು. ಈಗಲೂ ನಾವು ಇದನ್ನೇ ಬಳಸಬೇಕು. ನಾವು ಇದನ್ನು ಅವಲೋಕಿಸುತ್ತೇವೆ. ಕಡಲೆ ಹಿಟ್ಟು ಮುಂತಾದ ಸಾಮಗ್ರಿಗಳಿಂದ ಸೇವಿಸಲು ಹಾಗೂ ದೇಹಕ್ಕೆ ಲೇಪಿಸಲು ಯೋಗ್ಯವಾದ ಹೆಚ್ಚು ಉತ್ಪನ್ನಗಳನ್ನು ನಾವು ತಯಾರಿಸಬೇಕು. ನಾವು ನಮ್ಮ ವೈದ್ಯರೊಂದಿಗೆ ಮಾತನಾಡಿ  ಯಾವುದೇ ವಿಷಕಾರಕಗಳಿಲ್ಲದ  ಅಂಗಲೇಪವನ್ನು ತಯಾರಿಸುವೆವು.

ಪ್ರಶ್ನೆ:  ವಿವೇಕದ ಜಾಗೃತಿಯು ಮಾನವರನ್ನು ಸಂವೇದನಾಶೀಲರನ್ನಾಗಿ ಮಾಡುವುದಿಲ್ಲವೇ? ಹೌದಾದರೆ ಎಷ್ಟೊಂದು ಜ್ಞಾನಿಗಳು ಅನವಶ್ಯಕವಾದ ರೀತಿಯಲ್ಲಿ ಏಕೆ ವರ್ತಿಸುತ್ತಾರೆ?
ಶ್ರೀ ಶ್ರೀ ರವಿಶಂಕರ್: ಇಲ್ಲಿ ಕೇಳಿ, ಈ ಪ್ರಪಂಚದಲ್ಲಿ ಎಲ್ಲ ವಿಧದ ಜನರಿದ್ದಾರೆ. ಸಜ್ಜನರು, ಸಾಧಾರಣ ಜನರು, ನಿಷ್ಪ್ರಯೋಜಕರು ಎಲ್ಲರೂ ಇದ್ದಾರೆ. ನೀವು ಎಲ್ಲರನ್ನೂ ನಿಭಾಯಿಸಬೇಕು. ನಿಷ್ಪ್ರಯೋಜಕರು ನಿಮ್ಮ ಸಂಕಲ್ಪವನ್ನು ಇನ್ನಷ್ಟು ದೃಢವಾಗಿಸುತ್ತಾರೆ, ಸಾಧಾರಣವಾದ ಜನರು ನಿಮ್ಮ ಕೌಶಲ್ಯಗಳನ್ನು ಹೊರಗೆಡಹುವರು ಹಾಗೂ ಸಜ್ಜನರು ನಿಮ್ಮನ್ನು ಬೆಂಬಲಿಸುವರು. ಹಾಗಾಗಿ, ನೀವು ಈ ಮೂರೂ ವಿಧದ ಜನರನ್ನು  ನಿಭಾಯಿಸಬೇಕು.

ಪ್ರಶ್ನೆ:  ನನಗೆ ಮೋಕ್ಷದ ಬಗ್ಗೆ ಹೆಚ್ಚೇನೂ ತಿಳಿಯದೇ ಇರುವಾಗ ಮೋಕ್ಷವನ್ನು ಪಡೆಯುವ ಇಚ್ಛೆಯು ಹೇಗೆ ಉಂಟಾಗಲು ಸಾಧ್ಯ?
ಶ್ರೀ ಶ್ರೀ ರವಿಶಂಕರ್: ನೀವು ಬಂಧನದ ಭಾವವನ್ನು ಅನುಭವಿಸಿದಾಗ ಮಾತ್ರ ನಿಮಗೆ ಮುಕ್ತಿಯನ್ನು ಹೊಂದುವ ಅಪೇಕ್ಷೆಯುಂಟಾಗುವುದು. ನೀವು ಸಂತೋಷವಾಗಿದ್ದು ಯಾವುದೇ ಬಂಧನವನ್ನು ಅನುಭವಿಸದೆ ಇದ್ದಾಗ ಮೋಕ್ಷದ ಹಂಬಲವಿರುವುದಿಲ್ಲ. ಯಾರು ಸಂತೋಷಕ್ಕಾಗಿ ಹಂಬಲಿಸುವುದಿಲ್ಲವೋ ಅವರಿಗೆ ಮೋಕ್ಷ ಸಿಗುತ್ತದೆ ಹಾಗೂ ಯಾರು  ಮೋಕ್ಷವನ್ನೂ ಬಯಸುವುದಿಲ್ಲವೋ ಅವರು ಪ್ರೇಮವನ್ನು ಪಡೆಯುತ್ತಾರೆ.
ಪ್ರೇಮದಲ್ಲಿರುವವರು ಮೋಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರೇಮಿಯು  'ಮೋಕ್ಷವೆಂದರೇನು? ನನಗದರ ಅಗತ್ಯವಿಲ್ಲ'  ಎಂದು ಆಲೋಚಿಸುತ್ತಾನೆ. ಗೋಪಿಯರು ಇದನ್ನೇ  ಹೇಳುತ್ತಿದ್ದರು ' ನಮಗೆ ಯಾವುದೇ ಮೋಕ್ಷದ ಅಗತ್ಯವಿಲ್ಲ; ನಮಗೆ ಯಾವುದೇ ಜ್ಞಾನದ ಅಗತ್ಯವಿಲ್ಲ, ಪ್ರೇಮದಲ್ಲೇ ನಾವು ಆನಂದವಾಗಿದ್ದೇವೆ' ಎಂದು. ಪ್ರೇಮದ ಸಹಜ ಸ್ವಭಾವವೇ ಮುಕ್ತಿ.

ಪ್ರಶ್ನೆ: ಗುರೂಜಿ, ಪರಮಾತ್ಮನೊಂದಿಗೆ ಧರ್ಮದ ಸಂಬಂಧವೇನು?
ಶ್ರೀ ಶ್ರೀ ರವಿಶಂಕರ್: ಪರಮಾತ್ಮನು ಯಾವುದರೊಂದಿಗೆ ಸಂಬಂಧವನ್ನು ಹೊಂದಿಲ್ಲವೆಂದು ನಮಗೆ ತಿಳಿಸಿ? ಪರಮಾತ್ಮನು ಧರ್ಮ ಹಾಗೂ ಅಧರ್ಮ ಎರಡರೊಂದಿಗೂ ಸಂಬಂಧವನ್ನು ಹೊಂದಿದ್ದಾನೆ. ಅಧರ್ಮವನ್ನು ಅಳಿಸಿ ಧರ್ಮವನ್ನು ಎತ್ತಿ ಹಿಡಿಯುವುದು ಕೂಡ ಪರಮಾತ್ಮನ ಜವಾಬ್ದಾರಿಯೇ. ಹಾಗಾಗಿ ಪರಮಾತ್ಮನು ಎಲ್ಲದಕ್ಕೂ ಸಂಬಂಧಿಸಿದ್ದಾನೆ.
ಅದೇ ರೀತಿಯಲ್ಲಿ ಪೂಜೆಯ ವಿಧಾನದಲ್ಲಿ ’ಧರ್ಮಾಯ ನಮಃ, ಅಧರ್ಮಾಯ ನಮಃ’ ಎಂದಿದ್ದಾರೆ. ಎರಡಕ್ಕೂ ನಮಿಸುತ್ತೇವೆ. ಈ ಪ್ರಪಂಚವು ಧರ್ಮ ಹಾಗೂ ಅಧರ್ಮದ ಮಿಶ್ರಣ. ಪರಮಾತ್ಮನು ಎರಡರೊಂದಿಗೂ ಸಂಬಂಧವನ್ನು ಹೊಂದಿದ್ದಾನೆ – ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸುವುದರೊಂದಿಗೆ.

ಪ್ರಶ್ನೆ: ಶಿವ ತತ್ವ ಎಂದರೇನು ?
ಶ್ರೀ ಶ್ರೀ ರವಿಶಂಕರ್: ನೀವು ಇದಲ್ಲ, ಇದಲ್ಲ , ಇದಲ್ಲ ಎಂದು ಎಲ್ಲವನ್ನೂ  ತಿರಸ್ಕರಿಸಿದ ನಂತರ ಯಾವುದು  ಉಳಿಯುವುದೋ ಅದೇ ಶಿವ ತತ್ವ.

ಪ್ರಶ್ನೆ: ಗುರೂಜಿ, ನಾನು ಒಂದು ಆನ್ಲೈನ್ ವ್ಯವಹಾರದಲ್ಲಿ  ಸಾಕಷ್ಡು ಹಣವನ್ನು ಹೂಡಿ ಎಲ್ಲವನ್ನೂ ಕಳೆದುಕೊಂಡೆ, ಅದಾದನಂತರ ನಾನು ಸತ್ಸಂಗದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ಕೇಳು, ಎಲ್ಲವೂ ಒಂದಲ್ಲ ಒಂದು ದಿನ ಹೋಗಲೇ ಬೇಕು, ಹೌದಲ್ಲವೇ ? ನೀನೂ ಹೋಗಬೇಕು ನಾವು ಕೂಡ ಒಂದು ದಿನ ಹೋಗಬೇಕು. ಸಾಮಾನ್ಯವಾಗಿ, ಮೊದಲು ನಾವು ಹೋಗುತ್ತೇವೆ ನಂತರ ನಮ್ಮ ವ್ಯವಹಾರ ಕುಸಿಯುತ್ತದೆ. ಇಲ್ಲಿ ಮೊದಲು ವ್ಯವಹಾರ ಹೋಗಿದೆ ನಂತರ ನಾವು ಅದನ್ನು ಹಿಂಬಾಲಿಸುತ್ತೇವೆ. ಹಾಗಾಗಿ ಹೋಗಿರುವುದನ್ನು ಮರೆತು, ಮುನ್ನಡೆಯಿರಿ. ನೀವು ಹುಟ್ಟಿದಾಗ ನಿಮ್ಮ ವ್ಯವಹಾರದೊಂದಿಗೆ ಬಂದಿರಲಿಲ್ಲ. ನೀವು ಸಣ್ಣ ಮಗುವಾಗಿದ್ದಾಗ ಯಾರೋ ಒಬ್ಬರು ನಿಮ್ಮನ್ನು ನೋಡಿಕೊಂಡರಲ್ಲವೇ?
ನಿಮಗೆ ಅವರು ಆಹಾರ ನೀಡಿದರು,ನಿಮ್ಮ ಕೈಗಳನ್ನು ಹಿಡಿದು ನಿಮ್ಮನ್ನು ನಡೆಸಿದರು,ನಿದ್ದೆ ಮಾಡಿಸಿದರು. ಹಾಗೆಯೇ ಯಾರಾದರೊಬ್ಬರು ನಿಮ್ಮನ್ನು ಆರೈಕೆ ಮಾಡುತ್ತಾರೆ. ಜೀವನ ಸಾಗುತ್ತಲೇ ಇರುತ್ತದೆ, ಯಾವುದರ ಬಗ್ಗೆಯೂ ಯೋಚಿಸದೇ ಮುಂದೆ ಸಾಗುತ್ತಲಿರಿ.
ಹೌದು, ನಿಮಗೆ ನೋವಾಗುತ್ತದೆ, ನೀವು ನಿಮ್ಮ ಜೀವಮಾನದ ಸಂಪಾದನೆಯೆಲ್ಲವನ್ನೂ ಒಂದು ವ್ಯವಹಾರದಲ್ಲಿ ಹೂಡಿದಿರಿ, ಅದು ಈಗ ವಿಫಲವಾಗಿದೆ. ಇದರಿಂದ ನೀವು ನೋವನ್ನು ಅನುಭವಿಸುವುದು ಸಹಜ, ಆದರೆ ನಿಮ್ಮ ಎಲ್ಲಾ ನೋವುಗಳನ್ನು ತೊರೆಯಲು ನೀವು ಸರಿಯಾದ ಸ್ಥಳಕ್ಕೇ ಬಂದಿದ್ದೀರಿ.

ಪ್ರಶ್ನೆ: ಲೋಭಕ್ಕೆ ಕೊನೆಯೆಲ್ಲಿದೆ?
ಶ್ರೀ ಶ್ರೀ ರವಿಶಂಕರ್: ಸ್ಮಶಾನದಲ್ಲಿ. ಅಲ್ಲಿ ನೀವು ಲೋಭಿಯಾಗಲು ಸಾಧ್ಯವಿಲ್ಲ. ಲೋಭವು ನಮ್ಮ ಸಮಾಜ ಹಾಗೂ ಇಡೀ ವಿಶ್ವವನ್ನೇ ಆವರಿಸಿರುವುದು ಅತ್ಯಂತ ದುರದೃಷ್ಟಕರವಾದ ಸಂಗತಿ. ಭ್ರಷ್ಟಾಚಾರವು ಬರೀ ಭಾರತಕ್ಕೆ ಮಾತ್ರ ನಿರ್ದಿಷ್ಟವೆಂದು ತಿಳಿಯಬೇಡಿ.
ನಾವು ಎಲ್ಲಿ ಹೋದರೂ ಅದೇ ವಿಷಯ,  ಬಲ್ಗೇರಿಯಾದಲ್ಲಿ ಭ್ರಷ್ಟಾಚಾರ, ರಷ್ಯಾದಲ್ಲಿ ಭ್ರಷ್ಟಾಚಾರ, ಉಕ್ರೇನ್ ನಲ್ಲಿ ಭ್ರಷ್ಟಾಚಾರ, ಪ್ರತೀ ದೇಶವು ಭ್ರಷ್ಟಾಚಾರದಿಂದ ನರಳುತ್ತಿದೆ. ಗ್ರೀಸ್ ದೇಶದಲ್ಲಿ ಮಹತ್ತರ ಪ್ರಮಾಣದ ಭ್ರಷ್ಟಾಚಾರವಿದೆ, ಭ್ರಷ್ಟಾಚಾರದಿಂದ ಆ ದೇಶವು ಮುಳುಗಿಹೋಗಿದೆ. ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಭ್ರಷ್ಟಾಚಾರವು ಒಂದು ಸಮಸ್ಯೆಯಾಗಿದೆ.

ಪ್ರಶ್ನೆ: ಗುರೂಜಿ, ಅನಾಹತ ನಾದ ಎಂದರೇನು? ಅದನ್ನು ಉಂಟುಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳೇನು?
ಶ್ರೀ ಶ್ರೀ ರವಿಶಂಕರ್: ಯಾವ ಶಬ್ಧವನ್ನು ಎರಡು ವಸ್ತುಗಳಿಂದ ಉತ್ಪತ್ತಿ ಮಾಡಲು ಸಾಧ್ಯವಾಗದೆ ಸ್ವಾಭಾವಿಕವಾಗಿ ಉದಯಿಸುವುದೋ  ಅದೇ ಅನಾಹತ ನಾದ. ಧ್ಯಾನದಲ್ಲಿ ಆಳವಾಗಿ ಹೋಗಿ. ಕೇವಲ ಧ್ಯಾನದಲ್ಲಿ ಮಾತ್ರ ಕೆಲವೊಮ್ಮೆ ನೀವು ಅದನ್ನು ಕೇಳಬಹುದು. ಇದು ಪ್ರತಿಯೊಬ್ಬರಿಗೂ ಕೇಳಿಸಬೇಕು ಎಂದೇನೂ ಇಲ್ಲ. ಕೆಲವರು  ಅನಾಹತ ನಾದವನ್ನು ಕೇಳಬಹುದು, ಕೆಲವರಿಗೆ ಬೆಳಕಿನ ಅನುಭವ ಆಗಬಹುದು, ಕೆಲವರಿಗೆ ಸಾನ್ನಿಧ್ಯದ ಅನುಭೂತಿಯಾಗಬಹುದು. ಇವೆಲ್ಲವೂ ಅನುಭವದ ಹಲವಾರು ಬಗೆಗಳು.

ಪ್ರಶ್ನೆ: ಗುರೂಜಿ, ನಮ್ಮ ಹಿಂದೂ ಪುರಾಣದಲ್ಲಿ ಈ ಭೂಮಿಯು ಒಂದು ಸರ್ಪದ ಹೆಡೆಯ ಮೇಲೆ ನಿಂತಿದೆಯೆಂದೂ ಮತ್ತು ಯಾವಾಗ ಆ ಸರ್ಪ ಹೆಡೆ ಎತ್ತುತ್ತದೆಯೋ ಆಗ ಈ ಇಡೀ ಭೂಮಿಯು ಕಂಪಿಸುತ್ತದೆ ಎಂದು ಹೇಳಲಾಗಿದೆ. ಇದರ ಹಿಂದಿನ ರಹಸ್ಯವೇನು?
ಶ್ರೀ ಶ್ರೀ ರವಿಶಂಕರ್: ಭೂಮಿಗೆ ಸಂಭಂಧ ಪಟ್ಟಂತೆ ಎರಡು ರೀತಿಯ ಶಕ್ತಿಗಳಿವೆ. ಒಂದು ಕೇಂದ್ರಾಭಿಗಾಮಿ ಶಕ್ತಿ (Centripetal force) ಮತ್ತು ಇನ್ನೊಂದು ಕೇಂದ್ರಾಪಗಾಮಿ ಶಕ್ತಿ (Centrifugal force). ಈ ಶಕ್ತಿಗಳ ಚಲನೆಯು ನೇರವಾಗಿಲ್ಲದೆ ಹಾವಿನ ಚಲನೆಯ ಹಾಗೆ ಅಂಕುಡೊಂಕಾಗಿದೆ. ಈ ವಾಸ್ತವವು ನಮ್ಮ ಪೂರ್ವಜರಿಗೆ ತಿಳಿದಿತ್ತು, ಭೂಮಿಯು ಸರ್ಪದ ಹೆಡೆಯ ಮೇಲೆ ನಿಂತಿಲ್ಲ, ಇಲ್ಲಿ ಸರ್ಪ ಎಂದರೆ, ಕೇಂದ್ರಾಭಿಗಾಮಿ ಶಕ್ತಿ ಮತ್ತು ಕೇಂದ್ರಾಪಗಾಮಿ ಶಕ್ತಿ ಎಂದರ್ಥ. ಆದ್ದರಿಂದ, ವಾಸ್ತವವಾಗಿ ಅವರು ಇದನ್ನು ಈ ರೂಪದಲ್ಲಿ ವಿವರಿಸಿದ್ದಾರೆ.
ಉದಾಹರಣೆಗೆ, ಶಿವನು ತನ್ನ ಕುತ್ತಿಗೆಯ ಸುತ್ತ ಒಂದು ಹಾವನ್ನು ಧರಿಸಿ ಕುಳಿತಿದ್ದಾನೆ - ಇದು ಏನನ್ನು ಸೂಚಿಸುತ್ತದೆ ಎಂದರೆ, ಇದು ಧ್ಯಾನಾವಸ್ಥೆಯನ್ನು ಸೂಚಿಸುತ್ತದೆ. ಇಲ್ಲಿ ಕಣ್ಣುಗಳು ಮುಚ್ಚಿದ್ದು, ವ್ಯಕ್ತಿಯು ನಿದ್ರಾವಸ್ಥೆಯಲ್ಲಿರುವಂತೆ ಭಾಸವಾಗುತ್ತದೆ, ಆದರೆ ಅವನು ನಿದ್ರಿಸುತ್ತಿಲ್ಲ, ಒಳಗಿನಿಂದ ಜಾಗೃತನಾಗಿದ್ದಾನೆ. ಇದನ್ನು ವ್ಯಕ್ತಪಡಿಸಲು, ಶಿವನ ಕುತ್ತಿಗೆಯ ಸುತ್ತ ಒಂದು ಹಾವನ್ನು ತೋರಿಸಲಾಗಿದೆ. ಇಲ್ಲದಿದ್ದರೆ, ಶಿವನು ಏಕೆ ತನ್ನ ಕುತ್ತಿಗೆಯ ಸುತ್ತ ಹಾವನ್ನು ಧರಿಸಬೇಕು? ಅವನು ಇಡೀ ವಿಶ್ವಕ್ಕ ಒಡೆಯನು, ಅವನಿಗೆ ಧರಿಸಲು ಬೇರೆ ಏನನ್ನಾದರೂ ಹುಡುಕಿಕೊಳ್ಳಲು ಸಾಧ್ಯವಿಲ್ಲವೇ? ಈ ವಿಶ್ವದ ಒಡೆಯನು ಬಗೆಬಗೆಯ ಬೆಲೆಬಾಳುವ ವಸ್ತುಗಳಿಂದ ಕೂಡಿದ ಮಾಲೆಗಳನ್ನು ಧರಿಸಬಲ್ಲನು. ಏಕೆ ತನ್ನ ಕುತ್ತಿಗೆಗೆ ಒಂದು ಹಾವನ್ನು ನೇತು ಹಾಕಿಕೊಳ್ಳಬೇಕು? ಇಲ್ಲ, ನಮ್ಮ ಪೂರ್ವಜರು ಏನನ್ನೇ ಹೇಳಿರಲಿ ಅದರ ಹಿಂದೆ ಅತ್ಯಂತ ಗಾಢವಾದ ರಹಸ್ಯಗಳು ಅಡಗಿರುತ್ತವೆ.
ಇದೇ ರೀತಿ, ಭೂಮಿಯು, ಶೇಷನಾಗನ ಮೇಲೆ- ಇಲ್ಲಿ ನಾಗ ಎಂದರೆ ಕೇಂದ್ರಾಭಿಗಾಮಿ ಶಕ್ತಿ ಎಂದರ್ಥ. ಹಾವು ಎಂದಿಗೂ ಒಂದು ನೇರವಾದ ಹಾದಿಯಲ್ಲಿ ಚಲಿಸುವುದಿಲ್ಲ, ಅದು ಮುಂದೆ ಹರಿದಂತೆಲ್ಲ ವಕ್ರರೇಖೆಗಳನ್ನು ನಿರ್ಮಿಸುತ್ತದೆ ಇದು ಕೇಂದ್ರಾಭಿಗಾಮಿ ಶಕ್ತಿ ಎಂದೆನಿಸಿಕೊಳ್ಳುತ್ತದೆ. ಯಾವುದು ನೇರವಾಗಿ ಚಲಿಸುವುದಿಲ್ಲವೋ ಅದು ಕೇಂದ್ರಾಭಿಗಾಮಿ ಶಕ್ತಿ ಎಂದರ್ಥ. ಭೂಮಿಯು ತನ್ನ ಅಕ್ಷದಲ್ಲಿ ತಿರುಗುತ್ತಾ ಸೂರ್ಯನ ಸುತ್ತ ಸುತ್ತುತ್ತದೆ. ಆದ್ದರಿಂದ ಇಲ್ಲಿ ಎರಡು ರೀತಿಯ ಶಕ್ತಿಗಳಿವೆ  ಕೇಂದ್ರಾಭಿಗಾಮಿ ಮತ್ತು ಕೇಂದ್ರಾಪಗಾಮಿ.
ಇದನ್ನೇ ನಮ್ಮ ಪೂರ್ವಜರು  ಒಂದು ಹಾವಿನ ಆಕಾರದಲ್ಲಿ ವರ್ಣಿಸಿದ್ದಾರೆ.
ಹಾಗಾದರೆ ಸರ್ಪವು ಯಾವುದರ ಮೇಲೆ ನಿಂತಿದೆ? ಅದು ಒಂದು ಆಮೆಯ ಮೇಲೆ ನಿಂತಿದೆ, ಆಮೆಯು ಸ್ಥಿರತೆಯನ್ನು ಸಂಕೇತಿಸುತ್ತದೆ. ಇದು ಬಹಳ ಕುತೂಹಲಕಾರಿಯಾಗಿದೆ!
ಈಗ ಜ್ಯುಪಿಟರ್ ಗ್ರಹ (ಗುರು) ವಿಲ್ಲದಿದ್ದರೆ,ಭೂಮಿಯು ಉಳಿಯುತ್ತಲೇ ಇರಲಿಲ್ಲ ಎಂದು ಹೇಳಲಾಗಿದೆ.  ಜ್ಯುಪಿಟರ್ ಗ್ರಹವು (ಗುರು) ಏನು ಮಾಡುತ್ತದೆ ಎಂದರೆ, ಬಾಹ್ಯಾಕಾಶದಿಂದ ಬರುವ ಎಲ್ಲ ಉಲ್ಕೆಗಳನ್ನು ತನ್ನೆಡೆಗೆ ಎಳೆದುಕೊಳ್ಳುತ್ತದೆ, ಇದರಿಂದ ಜ್ಯುಪಿಟರ್ ಗ್ರಹವು (ಗುರು) ಭೂಮಿಗೆ ರಕ್ಷಣೆ ನೀಡುತ್ತದೆ. ಭೂಮಿಯ ಮೇಲೆ ಬಾಹ್ಯಾಕಾಶದಿಂದ ಉಲ್ಕೆಗಳ, ಸಣ್ಣ ಸಣ್ಣ ಆಕಾಶಕಾಯಗಳ ಸುರಿಮಳೆಯೇ ಆಗುತ್ತದೆ, ಜ್ಯುಪಿಟರ್ ಗ್ರಹವು (ಗುರು) ಇವುಗಳೆಲ್ಲವನ್ನು ತನ್ನೆಡೆಗೆ ಆಕರ್ಷಿಸಿ ಭೂಮಿಯನ್ನು ಸುರಕ್ಷಿತವಾಗಿಡುತ್ತದೆ.
ನಾಸಾ ಸಂಸ್ಥೆಯು ಇದರ ಸುಂದರವಾದ ವಿವರಣೆ ಸೃಷ್ಟಿಸಿದೆ, ಗುರುವು ಇಡೀ ಬ್ರಹ್ಮಾಂಡದ ರಕ್ಷಕ ಎಂದು ನಮಗೆಲ್ಲ ಹೇಳಲಾಗಿದೆ, ಹಾಗಾಗಿ, ಭೂಮಿಯನ್ನು ಸಂರಕ್ಷಿಸುವ ಕಾರಣದಿಂದಾಗಿ ಆ ಗ್ರಹಕ್ಕೂ ಕೂಡ ಗುರು (ಜ್ಯುಪಿಟರ್) ಎಂಬ ಹೆಸರನ್ನಿಡಲಾಗಿದೆ.