ಬುಧವಾರ, ಮೇ 16, 2012

ಕೆಟ್ಟವನ ಆ೦ತರ್ಯದಲ್ಲಿ ಹುದುಗಿ ಕುಳಿತ ಒಳ್ಳೆಯವನನ್ನು ಗುರ್ತಿಸಿ

16
2012
May
ಬಲ್ಗೇರಿಯಾ

ನಾವು ತಂತ್ರಜ್ಞಾನದ ಯುಗದಲ್ಲಿದ್ದೇವೆ. ತಂತ್ರಜ್ಞಾನವು ಪ್ರಪಂಚವನ್ನು ಒಂದು ಗ್ರಾಮವನ್ನಾಗಿ ಕುಗ್ಗಿಸಿದೆ. ಅದನ್ನು ಒಂದು ಪ್ರಪಂಚ ಕುಟುಂಬವಾಗಿ ನೋಡಲು ನಾನು ಬಯಸುತ್ತೇನೆ. ಇದು ನನ್ನ ಕನಸು, ಪ್ರಪಂಚವನ್ನು ಒಂದು ಪ್ರಪಂಚ ಕುಟುಂಬವನ್ನಾಗಿ ನೋಡುವುದು. ಈ ಪ್ರಪಂಚದಲ್ಲಿ ಹಲವಾರು ವಿವಿಧ ಸಂಸ್ಕೃತಿಗಳು, ಸಂಪ್ರದಾಯಗಳು, ಭಾಷೆಗಳು ಮತ್ತು ಧರ್ಮಗಳಿರುವುದು ನಮ್ಮ ಅದೃಷ್ಟ. ಬುದ್ಧಿವಂತ ಜನರು ಏನು ಮಾಡುವರೆಂದು ನಿಮಗೆ ತಿಳಿದಿದೆಯೇ? ಅವರು ಯಾವತ್ತೂ ಭಿನ್ನತೆಯನ್ನು ಮತ್ತು ವಿವಿಧತೆಯನ್ನು ಆಚರಿಸುತ್ತಾರೆ. ಮೂರ್ಖರು ಜಗಳವಾಡುತ್ತಾರೆ ಮತ್ತು ಯುದ್ಧಗಳನ್ನು ಸೃಷ್ಟಿಸುತ್ತಾರೆ. ಅಲ್ಲವೇ?
ನಾವು ಈ ಪ್ರಪಂಚದಲ್ಲಿ ಮಾಡಲು ಬಯಸುವುದೇನೆಂದರೆ ಜನರಿಗೆ ಶಿಕ್ಷಣ ನೀಡುವುದು. ಜನರು ಅಷ್ಟೊಂದು ಅಜ್ಞಾನಿಗಳಾಗಿರಲು ಹಾಗೂ ಮೂರ್ಖರಾಗಿರಲು ಕಾರಣವೇನೆಂದರೆ, ಅವರಿಗೆ ತಮ್ಮ ದೃಷ್ಟಿಯನ್ನು ವಿಶಾಲವಾಗಿಸಲು ಅವಕಾಶ ಸಿಗಲಿಲ್ಲ. ಆರ್ಟ್ ಆಫ್ ಲಿವಿಂಗಿನ ಗುರಿಯೆಂದರೆ, ಜೀವನಕ್ಕೆ ಅಂತಹ ಒಂದು ವಿಶಾಲ ದೃಷ್ಟಿಕೋನವನ್ನು ನೀಡುವುದು; ಪ್ರತಿಯೊಂದು ಕಣ್ಣೀರನ್ನು ಒಂದು ನಗೆಯಾಗಿ ಪರಿವರ್ತಿಸುವುದು, ಕ್ರೋಧವನ್ನು ಸಹಾನುಭೂತಿಯಾಗಿ ಪರಿವರ್ತಿಸುವುದು ಮತ್ತು ದ್ವೇಷವನ್ನು ಅಪೇಕ್ಷಾ-ರಹಿತ ಪ್ರೀತಿಯನ್ನಾಗಿ ಪರಿವರ್ತಿಸುವುದು. ಅಂತಹ ಒಂದು ಪ್ರಪಂಚವನ್ನು ನೋಡಲು ನಾವೆಲ್ಲರೂ ಕೈಗಳನ್ನು ಜೋಡಿಸೋಣ - ಹಿಂಸೆಯಿಂದ, ರೋಗದಿಂದ, ದುಃಖದಿಂದ ಮತ್ತು ಬಡತನದಿಂದ ಮುಕ್ತವಾದ ಒಂದು ಪ್ರಪಂಚ!
ಮೊದಲನೆಯದಾಗಿ, ನಾವು ದೊಡ್ಡ ಕನಸನ್ನು ಕಾಣಬೇಕು. ನಾನು ಶಾಲೆಯಲ್ಲಿದ್ದಾಗ, ನಾನೊಬ್ಬ ಹುಡುಗನಾಗಿದ್ದಾಗ - ಈಗಲೂ ನಾನೊಬ್ಬ ಬಾಲಕನೇ - ನಾನು ನನ್ನ ಸ್ನೇಹಿತರಲ್ಲಿ, ನನ್ನ ಕುಟುಂಬವು ಪ್ರಪಂಚದಾದ್ಯಂತವಿದೆ ಎಂದು ಹೇಳುತ್ತಿದ್ದೆ. ಅವರು ನನ್ನ ತಾಯಿಯ ಬಳಿಗೆ ಬಂದು, ನಮಗೆ ಲಂಡನ್ನಿನಲ್ಲಿ, ಜರ್ಮನಿಯಲ್ಲಿ, ಫ್ರಾನ್ಸಿನಲ್ಲಿ, ಅಮೇರಿಕಾದಲ್ಲಿ ಕುಟುಂಬದವರು ಇರುವರೇ ಎಂದು ಕೇಳುತ್ತಿದ್ದರು, ಮತ್ತು ನನ್ನ ತಾಯಿಯು "ಇಲ್ಲ" ಎಂದು ಉತ್ತರಿಸುತ್ತಿದ್ದರು. ನನ್ನ ತಾಯಿಯು ನನ್ನ ಕಿವಿಹಿಡಿದು ಕೇಳುತ್ತಿದ್ದರು, "ನೀನು ಯಾಕೆ ಸುಳ್ಳು ಹೇಳುವೆ?" ನನ್ನ ತಾಯಿ ಹೇಳುತ್ತಿದ್ದರು, "ಅವನು ಯಾವತ್ತೂ ಸುಳ್ಳು ಹೇಳುವುದಿಲ್ಲ, ಆದರೆ ಇದೊಂದು ವಿಷಯ, ಅವನಿಗೆ ಸಂಬಂಧಿಕರು ಮತ್ತು ಕುಟುಂಬದವರು ಪ್ರಪಂಚದಾದ್ಯಂತ ಇರುವುದಾಗಿಯೂ ಮತ್ತು ಅವನಿಗೆ ಪ್ರಪಂಚದಾದ್ಯಂತದ ಜನರು ತಿಳಿದಿರುವರೆಂದೂ ಅವನು ಹೇಳುತ್ತಾ ಇರುತ್ತಾನೆ."
ನಾನು ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ, "ನಿಮಗೇನು ಬೇಕು? ಸ್ಟ್ಯಾಂಪುಗಳಾ ಅಥವಾ ನಾಣ್ಯಗಳಾ ಅಥವಾ ನೋಟುಗಳಾ? ಅದನ್ನು ನಾನು ನಿಮಗೆ ಕಳುಹಿಸುತ್ತೇನೆ, ಚಿಂತಿಸಬೇಡಿ. ಪ್ರಪಂಚದಾದ್ಯಂತ ನನಗೆ ಎಲ್ಲರೂ ಇದ್ದಾರೆ." ನಾನು ಇದನ್ನು ಯಾಕೆ ಹೇಳಿದೆನೆಂದರೆ, ನಮ್ಮೆಲ್ಲರ ಒಳಗೆ ಆಳದಲ್ಲಿ, ಎಲ್ಲರನ್ನೂ ಜೋಡಿಸುವಂತಹ ಒಂದು ಆತ್ಮವಿದೆ.
ಪ್ರತಿಯೊಬ್ಬ ಮನುಷ್ಯನೂ ಆನಂದ, ಉತ್ಸಾಹ, ಪ್ರೀತಿ ಮತ್ತು ಬುದ್ಧಿಯೊಂದಿಗೆ ಹುಟ್ಟುತ್ತಾನೆ. ಆದರೆ ನಾವು ಬೆಳೆದಂತೆಲ್ಲಾ, ಎಲ್ಲೋ ನಾವು ಅದನ್ನು ಕಳೆದುಕೊಳ್ಳುತ್ತೇವೆ. ನಾವದನ್ನು ಕಳೆದುಕೊಳ್ಳಬಾರದು. ನಮಗೆಲ್ಲರಿಗೂ ಲಭಿಸಿದ ಈ ಉಡುಗೊರೆಯನ್ನು ನಾವು ಉಳಿಸಿಕೊಳ್ಳಬೇಕು. ಸರಿ, ನಾವದನ್ನು ಕಳೆದುಕೊಂಡಿದ್ದರೆ, ನಾವದನ್ನು ಪುನಃ ಪಡೆದುಕೊಳ್ಳಬೇಕು. ನೀವದನ್ನು ಪುನಃ ಪಡೆದುಕೊಳ್ಳುವುದು ಹೇಗೆ? ನಿಮ್ಮ ದೃಷ್ಟಿಯನ್ನು ವಿಶಾಲಗೊಳಿಸುವುದರಿಂದ ಮತ್ತು ನಿಮ್ಮ ಸುತ್ತಲಿರುವ ಎಲ್ಲರೊಂದಿಗೂ ಒಂದು ಆತ್ಮೀಯತೆಯ ಭಾವವನ್ನು ಸೃಷ್ಟಿಸಿಕೊಳ್ಳುವುದರಿಂದ.
ಇದು ಬಲ್ಗೇರಿಯಾಕ್ಕೆ ನನ್ನ ಎರಡನೆಯ ಭೇಟಿ. ನಾನು ಈಗಾಗಲೇ ಇಲ್ಲಿ ಬಹಳಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇನೆ. ಮೂಲಭೂತ ಸೌಲಭ್ಯಗಳು ಬರುತ್ತಿವೆ, ಆರ್ಥಿಕತೆಯು ಮೊದಲಿಗಿಂತ ಉತ್ತಮವಾಗಿದೆ; ಅದು ಇನ್ನೂ ಉತ್ತಮವಾಗಲು ಸಾಧ್ಯವಿದೆ. ಅದೇ ಸಮಯದಲ್ಲಿ, ನಾನು ಹೇಳುವುದೇನೆಂದರೆ, ನಿಮಗೆ ನಿಮ್ಮ ಆಳವಾದ ಬೇರುಗಳಿವೆ - ಸಾವಿರಾರು ವರ್ಷಗಳ ಸಂಸ್ಕೃತಿ ಮತ್ತು ಸಂಪ್ರದಾಯ. ಅದನ್ನು ಕಳೆದುಕೊಳ್ಳಬೇಡಿ. ಯುವಜನತೆಯು ತಮ್ಮ ಬೇರುಗಳನ್ನು ಉಳಿಸಿಕೊಳ್ಳಬೇಕು ಮತ್ತು ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಳ್ಳಬೇಕು. ಇವತ್ತು ಬ್ಯಾಗ್-ಪೈಪರುಗಳ ದೊಡ್ಡದೊಂದು ಕಾರ್ಯಕ್ರಮವನ್ನು ನಾವು ಆಯೋಜಿಸುವೆವು ಎಂದು ನಾವು ಹೇಳಿದುದು ಇದೇ ಕಾರಣಕ್ಕಾಗಿ. ಹಳೆಯ ಸಂಪ್ರದಾಯಗಳನ್ನು ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ. ಬಲ್ಗೇರಿಯಾದ ಗಾಯಕರಲ್ಲಿ ಮತ್ತು ನೃತ್ಯಗಾರರಲ್ಲಿ ಕೆಲವರು ಭಾರತಕ್ಕೂ ಭೇಟಿ ನೀಡಿದರು ಮತ್ತು ಭಾರತದಲ್ಲೂ ಅವರ ಪ್ರದರ್ಶನಗಳು ನಡೆದವು ಎಂಬುದನ್ನು ಕೂಡಾ ನಾನು ಹೇಳಲು ಬಯಸುತ್ತೇನೆ.
ಅದುದರಿಂದ, ನಾವು ಜನರನ್ನು ಒಂದುಗೂಡಿಸುವುದರ ಅಗತ್ಯವಿದೆ. ಅದು ಬುದ್ಧಿವಂತಿಕೆ. ಒಂದು ಹಿಂಸಾ-ರಹಿತ ಸಮಾಜ, ರೋಗ-ರಹಿತ ಶರೀರ, ಗೊಂದಲ-ರಹಿತ ಮನಸ್ಸು, ತಡೆ-ರಹಿತ ಬುದ್ಧಿ, ದುಃಖ-ರಹಿತ ಆತ್ಮ, ಆಘಾತ-ರಹಿತ ನೆನಪು ಮತ್ತು ಒಂದು ಒತ್ತಡ-ರಹಿತ ಜೀವನವು ಪ್ರತಿಯೊಬ್ಬರ ಜನ್ಮಸಿದ್ಧ ಅಧಿಕಾರವಾಗಿದೆ. ಇದರ ಕಡೆಗೆಯೇ ಆರ್ಟ್ ಆಫ್ ಲಿವಿಂಗ್ ಹಾಗೂ ಅದರ ಎಲ್ಲಾ ಸ್ವಯಂ-ಸೇವಕರೂ ಕೆಲಸ ಮಾಡುತ್ತಿರುವುದು. ನಾನು ಬಹಳ ಸಂತೋಷಗೊಂಡಿದ್ದೇನೆ ಮತ್ತು ನಾನು ಅವರನ್ನು ಅಭಿನಂದಿಸುತ್ತೇನೆ. ಜನರ ಮುಖದ ಮೇಲೆ ನಗುವನ್ನು ತರಲು ಹಗಲಿರುಳು ಆಯಾಸಗೊಳ್ಳದೇ ಕೆಲಸ ಮಾಡುತ್ತಿರುವ ನೂರಾರು ಸ್ವಯಂಸೇವಕರು ಇಲ್ಲಿದ್ದಾರೆ.
ಸಂತೋಷವಾಗಿರುವುದು ಹೇಗೆಂಬುದರ ಬಗ್ಗೆ ನಾನು ನಿಮಗೆ ಕೇವಲ ೫ ಅಂಶಗಳನ್ನು ಅಥವಾ ೫ ರಹಸ್ಯಗಳನ್ನು ನೀಡುತ್ತೇನೆ.
ಒಮ್ಮೆ ಒಬ್ಬ ಜ್ಞಾನಿಯು ಒಂದು ರೇಖೆಯನ್ನು ಬರೆದು ತನ್ನ ವಿದ್ಯಾರ್ಥಿಯಲ್ಲಿ, ಆ ರೇಖೆಯನ್ನು ಮುಟ್ಟದೇ ಅಥವಾ ಒರಸದೇ ಅದನ್ನು ಚಿಕ್ಕದಾಗಿಸಲು ಹೇಳಿದರು. ನೀವದನ್ನು ಹೇಗೆ ಮಾಡುವಿರಿ? ಒಂದು ರೇಖೆಯನ್ನು ಮುಟ್ಟದೆಯೇ ಚಿಕ್ಕದಾಗಿಸಬೇಕು. ಒಬ್ಬ ಬುದ್ಧಿವಂತ ವಿದ್ಯಾರ್ಥಿಯು ಆ ರೇಖೆಯ ಕೆಳಗೆ ಸಾಕಷ್ಟು ಉದ್ದವಾದ ಒಂದು ರೇಖೆಯನ್ನು ಬರೆದನು. ಹೀಗೆ, ಆ ರೇಖೆಯು ತನ್ನಿಂತಾನೇ ಚಿಕ್ಕದಾಯಿತು. ಇಲ್ಲಿರುವ ಪಾಠವೇನೆಂದರೆ, ನಿಮ್ಮ ಕಷ್ಟಗಳು ಬಹಳ ದೊಡ್ಡದಾಗಿ ತೋರಿದರೆ, ನಿಮ್ಮ ಕಣ್ಣುಗಳನ್ನು ಮೇಲೆತ್ತಿ, ಯಾಕೆಂದರೆ ನೀವು ನಿಮ್ಮ ಮೇಲೆ ಮಾತ್ರ ಗಮನ ಹರಿಸುತ್ತಿರುವಿರಿ. ನೀವು ನಿಮ್ಮ ಕಣ್ಣುಗಳನ್ನು ಮೇಲೆತ್ತಿ, ನಿಮಗಿಂತ ಕೆಟ್ಟ ಪರಿಸ್ಥಿತಿಯಲ್ಲಿರುವವರ ಕಡೆಗೆ ನೋಡಿದರೆ, ನಿಮ್ಮ ಕಷ್ಟವು ನೀವು ಯೋಚಿಸಿದಷ್ಟು ಕೆಟ್ಟದಾಗಿಲ್ಲವೆಂದು ಹಠಾತ್ತನೇ ನಿಮಗೆ ಅನ್ನಿಸುತ್ತದೆ. ನಿಮಗೆ ಸ್ವಲ್ಪ ದೊಡ್ಡ ಸಮಸ್ಯೆಯಿದೆಯೆಂದು ನಿಮಗನ್ನಿಸಿದರೆ, ಹೆಚ್ಚಿನ ಸಮಸ್ಯೆಗಳಿರುವ ಜನರ ಕಡೆಗೆ ನೋಡಿ. ಕೂಡಲೇ, ನನ್ನ ಸಮಸ್ಯೆಯು ಬಹಳಷ್ಟು ಚಿಕ್ಕದು ಮತ್ತು ನಾನದನ್ನು ನಿಭಾಯಿಸಬಲ್ಲೆನು ಎಂಬ ವಿಶ್ವಾಸವು ನಿಮಗೆ ಬರುತ್ತದೆ.
ಆದುದರಿಂದ, ಸಂತೋಷವಾಗಿರುವುದು ಹೇಗೆಂಬುದರ ಬಗ್ಗೆಯಿರುವ ಮೊದಲನೆಯ ಅಂಶವೆಂದರೆ, ಹೆಚ್ಚಿನ ಮತ್ತು ದೊಡ್ಡ ಸಮಸ್ಯೆಗಳಿರುವ ಪ್ರಪಂಚದ ಕಡೆಗೆ ನೋಡುವುದು. ಆಗ, ನಿಮ್ಮ ಸಮಸ್ಯೆಗಳು ಚಿಕ್ಕದಾಗಿ ತೋರುತ್ತವೆ. ನಿಮ್ಮ ಸಮಸ್ಯೆಗಳು ಚಿಕ್ಕದಾಗಿ ತೋರಿದ ಕ್ಷಣದಲ್ಲಿ, ಅವುಗಳೊಂದಿಗೆ ವ್ಯವಹರಿಸಲಿರುವ ಅಥವಾ ಅವುಗಳನ್ನು ಬಗೆಹರಿಸಲಿರುವ ಚೈತನ್ಯ ಮತ್ತು ವಿಶ್ವಾಸವು ನಿಮಗೆ ಲಭಿಸುತ್ತದೆ. ಸರಳವಾದ ಮಾತಿನಲ್ಲಿ ಹೇಳುವುದಾದರೆ, ಹೆಚ್ಚಿನ ಅವಶ್ಯಕತೆಯಿರುವವರ ಸೇವೆ ಮಾಡಿ.
ಎರಡನೆಯದು, ನಿಮ್ಮ ಸ್ವಂತ ಜೀವನದ ಕಡೆಗೆ ನೋಡಿ. ಹಿಂದೆ ನಿಮಗೆ ಹಲವಾರು ಸಮಸ್ಯೆಗಳಿದ್ದವು. ಅವುಗಳೆಲ್ಲಾ ಬಂದವು ಮತ್ತು ಹೋದವು. ಇದು ಕೂಡಾ ಹೋಗುವುದು ಮತ್ತು ಅದನ್ನು ನಿವಾರಿಸಲಿರುವ ಚೈತನ್ಯ ಹಾಗೂ ಶಕ್ತಿಯು ನಿಮ್ಮಲ್ಲಿದೆ ಎಂಬುದನ್ನು ತಿಳಿಯಿರಿ. ನಿಮ್ಮದೇ ಸ್ವಂತ ಭೂತಕಾಲವನ್ನು ಅರ್ಥೈಸುವುದರ ಮೂಲಕ ಹಾಗೂ ಅದರ ಕಡೆಗೆ ನೋಡುವುದರ ಮೂಲಕ ನಿಮಗೆ ಆತ್ಮ-ವಿಶ್ವಾಸವು ಸಿಗುತ್ತದೆ.

ಮೂರನೆಯದು ಮತ್ತು ಅತ್ಯಂತ ಪ್ರಧಾನವಾದುದು, ಸ್ವಲ್ಪ ಉಸಿರಾಟದ ವ್ಯಾಯಾಮ ಮತ್ತು ವಿಶ್ರಾಮ ಮಾಡಿ.
ನಾಲ್ಕನೆಯದು, ನಿಮಗೆ ಗೊತ್ತಾ, ಕೋಪದಲ್ಲಿ ನಾವು, "ನಾನು ಬಿಟ್ಟು ಬಿಡುತ್ತೇನೆ" ಎಂದು ಹೇಳುತ್ತೇವೆ. ಹತಾಶರಾಗದೇ ಅಥವಾ ಕೋಪಗೊಳ್ಳದೇ, "ನಾನು ಈ ಸಮಸ್ಯೆಯನ್ನು ಬಿಟ್ಟುಬಿಡುತ್ತೇನೆ, ನನಗೆ ಇದನ್ನು ಪರಿಹರಿಸಲು ಸಾಧ್ಯವಿಲ್ಲ, ದೇವರು ನನಗೆ ಸಹಾಯ ಮಾಡಲಿ" ಎಂದು ಹೇಳಿ ಮತ್ತು ನಿಮಗೆ ಯಾವತ್ತೂ ಸಹಾಯ ಲಭಿಸುತ್ತದೆ ಎಂಬುದನ್ನು ತಿಳಿಯಿರಿ. ನಿಮಗೆ ಸಹಾಯ ಮಾಡಲಾಗುತ್ತದೆ ಎಂಬ ವಿಶ್ವಾಸವನ್ನಿರಿಸಿ. ವಿಶ್ವದಲ್ಲಿರುವ ಒಂದು ಶಕ್ತಿಯು ನಿಮಗೆ ಸಹಾಯ ಮಾಡುತ್ತದೆ.
ಐದನೆಯದು - ಐದನೆಯದು ಯಾವುದೆಂದು ನಿಮಗನಿಸುತ್ತದೆ? ಅದನ್ನು ನಾನು ನಿಮಗೆ ಬಿಡುತ್ತೇನೆ. ಐದನೆಯದರ ಬಗ್ಗೆ ನೀವು ಯೋಚಿಸಿ. ನಾನು ೨೫ ಅಥವಾ ೩೦ ಅಂಶಗಳ ವರೆಗೆ ಹೋಗಬಲ್ಲೆನು, ಆದರೆ ನೀವು ಉತ್ತರದೊಂದಿಗೆ ಬರಬೇಕೆಂದು ನಾನು ಬಯಸುತ್ತೇನೆ. ನಾವು ಯಾವತ್ತೂ ಬೇರೆ ಯಾರಿಂದಲೋ ಪರಿಹಾರವನ್ನು ಎದುರು ನೋಡುತ್ತೇವೆ. ನಾವು ನಮ್ಮ ಮನಸ್ಸನ್ನು ಅಂತರ್ಮುಖವಾಗಿ ತಿರುಗಿಸಿದರೆ, ನಮಗೆ ಸ್ವಲ್ಪ ಉಪಾಯಗಳು, ಸ್ವಲ್ಪ ಪರಿಹಾರಗಳು ಸಿಗಬಹುದು ಎಂಬುದನ್ನು ನಾವು ಮರೆಯುತ್ತೇವೆ. ಇದು ಐದನೆಯದು - ಸ್ವಾಭಾವಿಕತೆ! ಸ್ವಾಭಾವಿಕವಾಗಿರಿ. ನಿಮ್ಮೊಳಗೆ ಆಳಕ್ಕೆ ಹೋಗಲು ನೀವು ಕೆಲವು ನಿಮಿಷಗಳನ್ನು ತೆಗೆದುಕೊಂಡಾಗ ಸ್ವಾಭಾವಿಕತೆಯು ಬರುತ್ತದೆ. ಎಲ್ಲವೂ ಸರಿಯಿರುವಾಗ ಮತ್ತು ಎಲ್ಲವೂ ನೀವಂದುಕೊಂಡ ರೀತಿಯಲ್ಲಿ ನಡೆಯುತ್ತಿರುವಾಗ ನಗುತ್ತಿರುವುದರಲ್ಲಿ ಯಾವುದೇ ಹೆಚ್ಚುಗಾರಿಕೆಯಿಲ್ಲ. ಆದರೆ ನೀವು ನಿಮ್ಮೊಳಗಿರುವ ಪರಾಕ್ರಮವನ್ನು ಎಬ್ಬಿಸಿ, "ಏನೇ ಬರಲಿ, ನಾನು ನಗುತ್ತಾ ಇರುತ್ತೇನೆ" ಎಂದು ಹೇಳಿದರೆ, ನಿಮ್ಮೊಳಗಿನಿಂದ ಪ್ರಚಂಡ ಶಕ್ತಿಯು ಹಾಗೆಯೇ ಉದಯಿಸುವುದನ್ನು ನೀವು ಗಮನಿಸುವಿರಿ, ಮತ್ತು ಸಮಸ್ಯೆಗಳು ಏನೂ ಅಲ್ಲ; ಅವುಗಳು ಸುಮ್ಮನೇ ಬರುತ್ತವೆ ಮತ್ತು ಮಾಯವಾಗುತ್ತವೆ.
ನಮ್ಮ ಸ್ವಯಂಸೇವಕರು ಬಲ್ಗೇರಿಯಾದ ಎಲ್ಲಾ ಸೆರೆಮನೆಗಳಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಕೂಡಾ ನಾನು ಹೇಳಲು ಬಯಸುತ್ತೇನೆ. ಕೋರ್ಸ್ ಮಾಡಿದ ಬಳಿಕ, ಸೆರೆಮನೆಯಲ್ಲಿರುವ ನೂರಾರು ಜನರ ಸಂಪೂರ್ಣ ಜೀವನಗಳು ಬದಲಾಗಿವೆ. ಅದು ಬಹಳ ಒಳ್ಳೆಯದು!
ಇದುವೇ ಬುದ್ಧಿವಂತಿಕೆ. ಬುದ್ಧಿವಂತಿಕೆಯೆಂದರೆ, ಅಪರಾಧಿಯಾಗಿರುವ ಒಬ್ಬನ ಒಳಗಿನಿಂದಲೂ ಒಳ್ಳೆಯದನ್ನು ಹೊರತರುವುದು. ಅತ್ಯಂತ ಕೆಟ್ಟ ಅಪರಾಧಿಯ ಒಳಗೂ ಏನೋ ಒಳ್ಳೆಯದಿರುತ್ತದೆ; ಕೆಲವು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ನಾವು ಹೊರಕ್ಕೆ ತರಬೇಕು. ಅದಕ್ಕೆ ಬುದ್ಧಿವಂತಿಕೆಯ ಅಗತ್ಯವಿದೆ. ಒಬ್ಬರನ್ನು ತೆಗಳಲು ಅಷ್ಟು ಬುದ್ಧಿವಂತಿಕೆಯ ಅಗತ್ಯವಿರುವುದಿಲ್ಲ, ಆದರೆ ತೆಗಳಲ್ಪಟ್ಟವರಿಂದ ಸಹಾನುಭೂತಿಯನ್ನು ಹೊರತರಲು ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಸ್ವಾರ್ಥ ಉದ್ದೇಶಗಳಿಲ್ಲದೆ, ಅವರ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಹಿಂದೆ ತರುವ ಒಂದೇ ಒಂದು ಇಚ್ಛೆಯಿಂದ ಸೆರೆಮನೆಗಳಿಗೆ ಹೋದ ನಮ್ಮ ಎಲ್ಲಾ ಸ್ವಯಂಸೇವಕರು ಮತ್ತು ಶಿಕ್ಷಕರನ್ನು ನಾನು ನಿಜವಾಗಿ ಅಭಿನಂದಿಸುತ್ತೇನೆ.
ಮೂರ್ಖ ಜನರು ಎಲ್ಲರನ್ನೂ ರಾಕ್ಷಸರೆಂದು ಮತ್ತು ’ಕೆಟ್ಟ’ವರೆಂದು ತೋರಿಸಲು ಪ್ರಯತ್ನಿಸುತ್ತಾರೆ; ಧರ್ಮನಿಷ್ಠೆಯುಳ್ಳ ವ್ಯಕ್ತಿಗಳನ್ನು ಕೂಡಾ. ಜನರು, ಎಲ್ಲರೂ ಕೆಟ್ಟವರೆಂದು, ಸಂಪೂರ್ಣ ಪ್ರಪಂಚ ಕೆಟ್ಟದು ಎಂದು ಹೇಳುತ್ತಾರೆ. ಅದು ಬಹಳ ದೌರ್ಭಾಗ್ಯಕರ; ಅದು ಒಳ್ಳೆಯ ಸಂಗವಲ್ಲ. ಕಳೆದ ವಾರ ನಾನು ಕೆನಡಾದಲ್ಲಿದ್ದಾಗ, ಒಬ್ಬರು ದಂಪತಿಗಳು ನನ್ನ ಬಳಿಗೆ ಬಂದರು. ಅವರು ಕಣ್ಣೀರು ಹರಿಸುತ್ತಿದ್ದರು.  ಅವರ ಹದಿಹರೆಯದ ಮಗನು ಆತ್ಮಹತ್ಯೆ ಮಾಡಿಕೊಂಡಿದ್ದನು. ಆತ್ಮಹತ್ಯೆಯ ಮುನ್ನ ಪತ್ರದಲ್ಲಿ, ಇಡಿಯ ಪ್ರಪಂಚವು ಕೆಟ್ಟದು, ಬದುಕುಳಿಯಲು ಯೋಗ್ಯವಲ್ಲ. ಒಳ್ಳೆಯ ಜನರಿಗೆ ಈ ಭೂಮಿಯ ಮೇಲೆ ಜಾಗವಿಲ್ಲ. ಎಲ್ಲಾ ದುಷ್ಟ ಮತ್ತು ಕೆಟ್ಟ ಜನರು ಪ್ರಭುತ್ವವನ್ನು ಪಡೆದುಕೊಂಡಿದ್ದಾರೆ ಎಂದು ಬರೆದಿದ್ದನು.
ಆ ಯುವಕನು ಎಷ್ಟೊಂದು ನೋವನ್ನು ಅನುಭವಿಸಿರಬೇಕು, ಯಾಕೆಂದರೆ ಪ್ರತಿಯೊಬ್ಬರು ಇತರರು ಹೇಗೆ ಕೆಟ್ಟವರೆಂದು ನಿಮ್ಮಲ್ಲಿ ಹೇಳುತ್ತಾರೆ. ಅದು ಒಳ್ಳೆಯ ಸಂಗವಲ್ಲ. ಒಬ್ಬ ಕೆಟ್ಟ ವ್ಯಕ್ತಿಯ ಒಳಗೆ ಕೂಡಾ, ಒಬ್ಬ ಒಳ್ಳೆಯ ವ್ಯಕ್ತಿಯು ಅಡಗಿದ್ದಾನೆ. ಅವನು ಮೇಲಕ್ಕೆ ಬರಬೇಕು. ಒಳ್ಳೆಯತನವು ಮೇಲಕ್ಕೆ ಬರುವಾಗ, ನಕಾರಾತ್ಮಕತೆಯು ತನ್ನಿಂತಾನೇ ಮಾಯವಾಗುತ್ತದೆ.

ಪ್ರಶ್ನೆ: ೨೧ ಡಿಸೆಂಬರ್ ೨೦೧೨ ಮತ್ತು ಮುಂಬರಲಿರುವ ವರ್ಷಗಳ ಬಗ್ಗೆ ನಾವು ತಿಳಿಯಬೇಕಾಗಿರುವುದು ಏನಾದರೂ ಇದೆಯೇ?
ಶ್ರೀ ಶ್ರೀ ರವಿಶಂಕರ್:
ಏನೂ ಇಲ್ಲ. ಎಲ್ಲವೂ ಒಳ್ಳೆಯದಾಗಿರುತ್ತದೆ. ಕೇವಲ ವಿಶ್ರಾಮ ಮಾಡಿ. ಪ್ರಪಂಚವು ಕೊನೆಯಾಗುವುದಿಲ್ಲವೆಂದು ನಾನು ಹೇಳುತ್ತೇನೆ. ಅದು ಆಗುವುದು ಕೇವಲ ಅಮೇರಿಕಾದ ಸಿನೆಮಾಗಳಲ್ಲಿ. ಹಿಂದೂ ಕ್ಯಾಲೆಂಡರಿನ ಪ್ರಕಾರ, ಈ ವರ್ಷವು ’ನಂದ’ ಎಂದು ಕರೆಯಲ್ಪಡುತ್ತದೆ. ಅದರರ್ಥ ’ಆನಂದದ ವರ್ಷ’. ಜನರು ಹೆಚ್ಚು ಹೆಚ್ಚು ಆಧ್ಯಾತ್ಮಿಕರಾಗುತ್ತಾರೆ ಮತ್ತು ಇತರರಿಗೆ ಹೆಚ್ಚು ಹೆಚ್ಚು ಸಂತೋಷವನ್ನು ನೀಡಲು ಬಯಸುತ್ತಾರೆ. ಇದು ಹೆಚ್ಚಾಗಬೇಕೆಂದು ಆಶಿಸಲು ನಾನು ಬಯಸುತ್ತೇನೆ. ಎರಡು ರೀತಿಯ ಸಂತೋಷವಿದೆ. ಒಂದನೆಯದು, ಪಡೆಯುವುದರಲ್ಲಿರುವ ಸಂತೋಷ. ಇನ್ನೊಂದು ರೀತಿಯ ಸಂತೋಷ ನಿಮಗೆ ಸಿಗುವುದು, ನೀವು ಕೊಡುವಾಗ.

ಪ್ರಶ್ನೆ: ನಾವು ನಮ್ಮ ಕೆಲಸವನ್ನು ಆನಂದಿಸದೇ ಇರುವಾಗ  ನಾವೇನು ಮಾಡುವುದು?
ಶ್ರೀ ಶ್ರೀ ರವಿಶಂಕರ್: ಜೀವನ ಸಾಗಿಸಲು ನೀವು ಕೆಲಸ ಮಾಡಬೇಕು. ಆದರೆ ಸಂತೋಷಕ್ಕಾಗಿ, ನೀವು ಸ್ವಲ್ಪ ಸೇವೆ ಮಾಡಬೇಕು. ನೀವು ನಿಮ್ಮನ್ನು ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಅದು ನಿಮಗೆ ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ಈ ಪ್ರಶ್ನೆ ಬರಲಿದೆಯೆಂಬುದು ನನಗೆ ತಿಳಿದಿತ್ತು, ಆದುದರಿಂದ, ಕೊಡುವುದರಲ್ಲಿ ಸಂತೋಷವಿದೆಯೆಂದು ನಾನು ಹೇಳಿದೆ. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಿ.
ಪ್ರಶ್ನೆ: ಉತ್ತಮವಾಗುವುದು ಹೇಗೆ ಮತ್ತು ಒಳ್ಳೆಯದು ಜಯಶಾಲಿಯಾಗುವಂತೆ ಮಾಡುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಅದಕ್ಕಾಗಿಯೇ ನಮ್ಮಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳಿರುವುದು; ಎಲ್ಲರಲ್ಲಿರುವ ಒಳ್ಳೆಯತನವನ್ನು ಹೊರತರಲು, ಮತ್ತು ಅದು ಖಂಡಿತವಾಗಿಯೂ ಜಯಶಾಲಿಯಾಗುವುದೆಂಬುದನ್ನು ನೀನು ನೋಡುವೆ.

ಪ್ರಶ್ನೆ: ಇವತ್ತಿನ ವೇಗದ ಸಮಯದಲ್ಲಿ ನಾವು ನಮ್ಮ ಮಕ್ಕಳೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಅದಕ್ಕಾಗಿ ನಾವೊಂದು ಕೋರ್ಸನ್ನು ವಿನ್ಯಾಸಗೊಳಿಸಿದ್ದೇವೆ. ಅದು ಕೆ.ವೈ.ಸಿ. - ನೋ ಯುವರ್ ಚೈಲ್ಡ್ (ನಿಮ್ಮ ಮಗುವನ್ನು ತಿಳಿದುಕೊಳ್ಳಿ) ಮತ್ತು ಕೆ.ವೈ.ಟಿ. - ನೋ ಯುವರ್ ಟೀನ್ (ನಿಮ್ಮ ಹದಿಹರೆಯದವರನ್ನು ತಿಳಿದುಕೊಳ್ಳಿ) ಎಂದು ಕರೆಯಲ್ಪಡುತ್ತದೆ. ಅದು ಕೇವಲ ದಿನಕ್ಕೆ ಎರಡು ಗಂಟೆಗಳಂತೆ, ಎರಡು ದಿನಗಳಿರುವುದು. ಈ ಕೋರ್ಸಿನಲ್ಲಿ ನಿಮಗೆ ಹಲವಾರು ಸುಂದರವಾದ ಉಪಾಯಗಳು ಸಿಗುತ್ತವೆ. ಅದು ಎಲ್ಲೆಡೆಗಳಲ್ಲಿ ಬಹಳ ಜನಪ್ರಿಯವಾಗಿದೆ ಯಾಕೆಂದರೆ ಅದು ಬಹಳ ಪರಿಣಾಮಕಾರಿಯಾಗಿದೆ. ನಿಮ್ಮ ಮಕ್ಕಳೊಂದಿಗಿನ ನಿಮ್ಮ ಸಂಬಂಧವು ಬದಲಾಗುತ್ತದೆ ಮತ್ತು ಅವರು ನಿಮ್ಮೊಂದಿಗೆ ಪ್ರತಿಕ್ರಿಯಿಸುವ ರೀತಿಯೂ ಬದಲಾಗುತ್ತದೆ.

ಪ್ರಶ್ನೆ: ನಮ್ಮಲ್ಲಿರುವ ಭಯಗಳನ್ನು ನಿವಾರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ.