ಭಾನುವಾರ, ಮೇ 13, 2012

ನ೦ಬಿಕೆ ಉಳಿಸಿಕೊಳ್ಳುವುದೂ, ಕಳೆದುಕೊಳ್ಳುವುದೂ ನಿಮ್ಮ ಕೈಲಿದೆ


13
2012............................... ಮಾಂಟ್ರಿಯಲ್, ಕೆನಡ
May

ವತ್ತಿನ ಸಂದೇಶವೆಂದರೆ ನಿಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ಮುಂದಾಳುವೆಂಬುದು.
ನೀವು ಯಾರನ್ನಾದರೂ ಎಲ್ಲಿಗಾದರೂ ಮುನ್ನಡೆಸುತ್ತೀರಿ. ಒಂದೋ ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತೀರಿ ಅಥವಾ ಅವರನ್ನು ಹಾದಿತಪ್ಪಿಸುತ್ತೀರಿ. ಪ್ರತಿಯೊಬ್ಬರೂ ಒಬ್ಬ ಮುಂದಾಳುವೆಂಬುದು ಅಕ್ಷರಶಃ ನಿಜ ಮತ್ತು ನೀವು ಎಲ್ಲರನ್ನೂ ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕಾದರೆ, ನಿಮ್ಮ ಜೀವನವು ತುಂಬಾ ಪವಿತ್ರವಾಗಿ, ಕಳಂಕವಿಲ್ಲದೆ ಇರಬೇಕು. ಅದುವೇ ಇಲ್ಲಿರುವುದು. ಇಲ್ಲಿ ನಾವು ಕಳಂಕವಿಲ್ಲದೆ ಸ್ವಚ್ಛವಾಗಿದ್ದೇವೆ. ತುಂಬಾ ಸ್ವಚ್ಛವಾಗಿ, ತುಂಬಾ ಪವಿತ್ರವಾಗಿ. ಇದು ಕೂಡಾ ನಾವು ಸಾಧಿಸಿದಂತಹುದಲ್ಲ, ಇದೊಂದು ಉಡುಗೊರೆ.
ನಿಮಗೆ ಗೊತ್ತಿದೆಯಾ, ಈ ೫೬ ವರ್ಷಗಳಲ್ಲಿ, ನಾನು ಯಾರಿಗೂ ಒಂದು ಕೆಟ್ಟ ಶಬ್ದವನ್ನೂ ಹೇಳಿಲ್ಲ, ಯಾವತ್ತೂ. ನಾನು ಹೇಳಿದ ಅತ್ಯಂತ ಕೆಟ್ಟ ಪದವೆಂದರೆ, ’ಮೂರ್ಖ’, ಅಷ್ಟೇ ನನ್ನ ಬಾಯಿಯಿಂದ ಹೊರ ಬಂದುದು. ಆದರೆ ನಾನು ಅದಕ್ಕೆ ಹೆಮ್ಮೆ ಪಡಲು ಸಾಧ್ಯವಿಲ್ಲ, ಯಾಕೆಂದರೆ ಇತರ ಯಾವುದೇ ಅಂತಹ ಪದಗಳು ನನ್ನಿಂದ ಬರುವುದಿಲ್ಲ, ಅಷ್ಟೆ; ಕೆಟ್ಟ ಪದಗಳು ಬರುವುದಿಲ್ಲ.
ಆದುದರಿಂದ, ನಾನು ಹೇಳುವುದೇನೆಂದರೆ, ಜೀವನದಲ್ಲಿನ ಈ ಪವಿತ್ರತೆಯು ಕೂಡಾ ನೀವು ಮಾಡುವುದಲ್ಲವೆಂಬುದನ್ನು, ಅದು ನಿಮಗೆ ಒಂದು ಉಡುಗೊರೆಯಾಗಿ ಬಂದಿರುವುದೆಂಬುದನ್ನು ನೀವು ತಿಳಿದುಕೊಂಡಾಗ, ಜೀವನದಲ್ಲಿ ನಮ್ರತೆ ಉಳಿಯುತ್ತದೆ. ನಮ್ರತೆ ಇದ್ದರೆ ನೀವು ಯಾವತ್ತೂ ಮುಂದೆ ಸಾಗುತ್ತಿರುತ್ತೀರಿ. ಆಲ್ಲಿ ಯಾವುದೇ ಅಪಾಯ ಇರುವುದಿಲ್ಲ. ನಮ್ರತೆಯು ಇಲ್ಲದಾದಾಗ ಒಬ್ಬ ವ್ಯಕ್ತಿಯು ಬೀಳುತ್ತಾನೆ.
ಆದುದರಿಂದ, ಪ್ರತಿಯೊಬ್ಬನೂ ಒಬ್ಬ ಮುಂದಾಳು. ಸರಿಯಾದ ಮಾರ್ಗದಲ್ಲಿ, ಸರಿಯಾದ ಜ್ಞಾನದಲ್ಲಿ ಮುನ್ನಡೆಸಲು ನಾವು ಪವಿತ್ರವಾಗಿರಬೇಕು; ಒಳಗೂ ಹೊರಗೂ ಪವಿತ್ರವಾಗಿರಬೇಕು. ನೀವು ಪವಿತ್ರರಾಗುವುದು ಹೇಗೆ? ನೀವು ಪವಿತ್ರತೆಯ ಸಾಂಗತ್ಯದಲ್ಲಿರುವಾಗ ನೀವು ಪವಿತ್ರರಾಗುತ್ತೀರಿ ಮತ್ತು ಪವಿತ್ರತೆಯು ಜ್ಞಾನದೊಂದಿಗೆ, ಬುದ್ಧಿಯೊಂದಿಗೆ, ಪ್ರಾಣಾಯಾಮ ಮೊದಲಾದವುಗಳೊಂದಿಗೆ ಬರುತ್ತದೆ. ಜ್ಞಾನವು ನಿಮಗೆ ಏನನ್ನು ಮಾಡುತ್ತದೆ? ಜ್ಞಾನವು ಸುಮ್ಮನೇ ನಿಮ್ಮನ್ನು ಪವಿತ್ರವಾಗಿಸುತ್ತದೆ. ಆದು ಸಾಬೂನಿನಂತೆ. 'ನಹಿ ಜ್ಞಾನೇನ ಸದೃಶಂ ಪವಿತ್ರಂ ಇಹ ವಿದ್ಯತೆ' ನಿಮ್ಮನ್ನು ಪವಿತ್ರಗೊಳಿಸಲು ಜ್ಞಾನಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ.
ಪ್ರತಿಯೊಬ್ಬ ವ್ಯಕ್ತಿಯೂ ವರ್ತಮಾನದ ಕ್ಷಣದಲ್ಲಿ ಪವಿತ್ರನಾಗಿರುತ್ತಾನೆ. ನಿಮ್ಮ ಭೂತಕಾಲ ಹೇಗೇ ಇದ್ದರೂ ಅದು ಸಂಗತಿಯಲ್ಲ. ಆ ವಿಷಯಗಳನ್ನು ಹುಗಿದು ಸಮರ್ಪಿಸಿಕೊಳ್ಳಿ. ಶರಣಾಗತಿ ಅಥವಾ ಸಮರ್ಪಣೆ ಎಂಬ ಶಬ್ದವಿದ್ದದ್ದೇ ಆದರೆ ಅದು ಕೇವಲ ಹಿಂದಿನದ್ದರ ಬಗ್ಗೆ. ಹಿಂದಿನದ್ದು ಹೇಗೆಯೇ ಇದ್ದಿರಲಿ, ಅದನ್ನು ನೀವು ಸಮರ್ಪಿಸಿ, ವರ್ತಮಾನದ ಕ್ಷಣದಲ್ಲಿ ನೀವು ಪವಿತ್ರರು ಮತ್ತು ನೀವು ಮುಗ್ಧರು, ಅದರಲ್ಲಿ ನಂಬಿಕೆಯಿಡಿ. ನಿಮ್ಮ ಪವಿತ್ರತೆಯಲ್ಲಿ ನಂಬಿಕೆಯಿಡಿ ಮತ್ತು ಅಷ್ಟೆ.
ಒಂದು ಸಿದ್ಧಿ ಅಥವಾ ಪರಿಪೂರ್ಣತೆಯು ಇರುವುದು ಈಗಲೇ. ಜ್ಞಾನವು ನಿಮ್ಮನ್ನು ಪವಿತ್ರಗೊಳಿಸುತ್ತದೆ, ಆದರೆ ನೀವು, "ಓಹ್, ನಾನು ಎಲ್ಲರಿಗಿಂತ ಪವಿತ್ರನಾದ ವ್ಯಕ್ತಿ. ನನ್ನಲ್ಲಿ ತುಂಬಾ ಒಳ್ಳೆಯ ಹೃದಯವಿದೆ ಮತ್ತು ಒಂದು ತುಂಬಾ ಒಳ್ಳೆಯ ಮನಸ್ಸಿದೆ" ಮುಂತಾಗಿ ಯೋಚಿಸಿದರೆ, ಆಗ ಆ ಅಹಂಕಾರವು ಅಪಾಯಕಾರಿ ಕೂಡಾ ಆಗಬಹುದು. ಅದು ಬಹಳ ಬೇಗನೇ ನಿಮ್ಮನ್ನು ಅಪವಿತ್ರರನ್ನಾಗಿ ಮಾಡುತ್ತದೆ. ಆದುದರಿಂದ ಪವಿತ್ರತೆಯನ್ನು ಗೌರವಿಸುವುದು ಮತ್ತು ಅದನ್ನು ಖಚಿತಪಡಿಸಿಕೊಳ್ಳದಿರುವುದು (ತೋರಿಸಿಕೊಳ್ಳದಿರುವುದು) ಮುಖ್ಯವಾದುದು; ವಿನಮ್ರರಾಗಿರುವುದು ಆದರೆ ನೀವು ಭೂಮಿಯಲ್ಲೇ ಅತ್ಯಂತ ವಿನಮ್ರ ವ್ಯಕ್ತಿಯೆಂದು ಘೋಷಿಸಿಕೊಳ್ಳದಿರುವುದು. "ನಾನು, ಈ ಭೂಮಿಯಲ್ಲಿ ನೀವು ಎಂದೆಂದಿಗೂ ಕಾಣಬಹುದಾದ ಅತ್ಯಂತ ವಿನಮ್ರ ವ್ಯಕ್ತಿ" ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ.
ಆದುದರಿಂದ ನಾವು ಪವಿತ್ರರಾಗಿದ್ದರೆ, ನಾವು ಎಲ್ಲರನ್ನೂ ಮುನ್ನಡೆಸಬಹುದು, ನಾವು ಸಂಪೂರ್ಣ ಪ್ರಪಂಚವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬಹುದು.
ಚಿಂತನೆ, ಮಾತು ಮತ್ತು ಕೆಲಸ. ನೀವು ಹೇಳಬಹುದು, "ಓಹ್, ನನ್ನ ಕೆಲಸಗಳು ಸರಿಯಾಗಿವೆ ಮತ್ತು ಸ್ಪಷ್ಟವಾಗಿವೆ, ಆದರೆ ನನ್ನ ಆಲೋಚನೆಗಳು, ನಾನು ಅವುಗಳನ್ನು ಹೇಗೆ ಸಂಭಾಳಿಸಲಿ? ನಾನು ಏನನ್ನೂ ಮಾಡುವುದಿಲ್ಲ, ಆದರೆ ಆ ವ್ಯಕ್ತಿಯ ಕತ್ತು ಹಿಸುಕಬೇಕೆಂಬ ಯೋಚನೆ ನನ್ನ ಮನಸ್ಸಿನಲ್ಲಿ ಬರುತ್ತದೆ, ನಾನೇನು ಮಾಡಲಿ?" ಇದೊಂದು ಪ್ರಶ್ನೆ. ನನಗೆ ಹೇಳಿ, ನಿಮ್ಮಲ್ಲಿ ಎಷ್ಟು ಮಂದಿಯಲ್ಲಿ ಈ ಪ್ರಶ್ನೆಯಿತ್ತು? ಹಿಂದೆ ಕುಳಿತಿರುವ ಕೆಲವರಲ್ಲೂ ಈ ಪ್ರಶ್ನೆಯಿತ್ತು. ಈ ಪ್ರಶ್ನೆಯಿರುವವರು ನಿಮ್ಮ ಕೈಗಳನ್ನು ಮೇಲೆತ್ತಿ, ನಾಚಿಕೊಳ್ಳಬೇಡಿ. ನೋಡಿ, ಅಷ್ಟೊಂದು ಜನರು. "ಗುರೂಜಿ, ಕಾರ್ಯವಾಗಿ ನಾವು ಏನನ್ನೂ ಮಾಡುವುದಿಲ್ಲ, ಮಾತನ್ನು ಕೂಡಾ ನಾವು ನಿಯಂತ್ರಿಸಬಹುದು, ಆದರೆ ಈ ಆಲೋಚನೆಗಳನ್ನು ನಾವು ಏನು ಮಾಡುವುದು?" ನಾನು ಹೇಳ್ತೀನಿ ಕೇಳಿ, ಅದು ತನ್ನಿಂತಾನೇ ಆಗಲು ಶುರುವಾಗುತ್ತದೆ. ಅದಕ್ಕೇ ಶರೀರವು ಶುದ್ಧವಾದಾಗ, ಮನಸ್ಸೂ ಶುದ್ಧವಾಗುತ್ತದೆ ಮತ್ತು ಉತ್ತಮ ಸಾಂಗತ್ಯವು ಅಗತ್ಯವಾಗಿದೆ. ನೋಡಿ, ನೀವು ತುಂಬಾ ಸಾತ್ವಿಕವಾದ ಜನರ ಒಡನಾಟದಲ್ಲಿದ್ದರೆ ಅಥವಾ ಸರಿಯಾದ ಪರಿಸರದಲ್ಲಿದ್ದರೆ, ಅಂತಹ ಯೋಚನೆಗಳು ಬರುವುದಿಲ್ಲ. ಅವುಗಳು ಯಾವಾಗ ಬರುತ್ತವೆ? ಅವುಗಳು ಬರುವುದು ನೀವು ಗಾಬರಿಗೊಂಡ, ಕೋಪಿಷ್ಠರಾದ ಮತ್ತು ಕಳವಳಗೊಂಡ ಜನರೊಂದಿಗಿರುವಾಗ. ನೀವು ಅವರ ತರಂಗಗಳನ್ನು ಸ್ವೀಕರಿಸಿದಂತೆ ತೋರುತ್ತದೆ.
ಈಗ, ಪ್ರತಿ ಸಲವೂ ನಿಮಗೆ ನಕಾರಾತ್ಮಕ ಯೋಚನೆ ಬರುವಾಗ, ಇತರರನ್ನು ದೂಷಿಸಬೇಡಿ. ಆ ವ್ಯಕ್ತಿಯು ಈ ಯೋಚನೆಯನ್ನು ನನ್ನ ತಲೆಯೊಳಗೆ ಹಾಕುತ್ತಿದ್ದಾನೆ ಎಂದು ಹೇಳಬೇಡಿ. ಈ ಮನಸ್ಸು ಎಷ್ಟು ತಂತ್ರ ಹೂಡುತ್ತದೆಯೆಂದರೆ ಯಾವುದೇ ಸಂದರ್ಭದಲ್ಲೂ ಅದು ನಿಮ್ಮನ್ನು ಸಿಕ್ಕಿಸಿಹಾಕಬಹುದು. ಅದಕ್ಕಾಗಿಯೇ ಸಂಸ್ಕೃತದಲ್ಲಿ ಒಂದು ಗಾದೆಯಿರುವುದು, ಅದು ಹೇಳುತ್ತದೆ, 'ವಾಚ್ಯಾರಂಭೆ ವಿಕಾರೋ ನಮ ದೇಯಸ್ಯ'. ಅಂದರೆ, ನೀವು ಏನಾದರೂ ಹೇಳಿದ ಕ್ಷಣದಲ್ಲೇ ಸಂಗತಿಗಳು ವಿಕಾರವಾಗುತ್ತವೆ. ಆದುದರಿಂದ ಪ್ರಾಣಾಯಾಮ, ಧ್ಯಾನ, ಇವುಗಳೆಲ್ಲಾ ಯೋಚನೆಗಳನ್ನು ಶುದ್ಧಗೊಳಿಸುತ್ತವೆ.
ನಂತರ ಮಾತುಗಳು; ನಿಮ್ಮ ಛಲ, ಹಿತವಲ್ಲದ ಮತ್ತು ಬಾಯಿಯಿಂದ ಬರಬಾರದಂತಹ ಶಬ್ದಗಳನ್ನು ಉಚ್ಛರಿಸಬಾರದೆಂಬ ನಿಮ್ಮ ಇಚ್ಛೆ. ನೀವು ಅವುಗಳನ್ನು ಉಚ್ಛರಿಸಬಾರದು. ಅವುಗಳು ನಿಮ್ಮ ಬಾಯಿಯಿಂದ ಹೊರಬರುವಂತೆ ನೀವು ಮಾಡಬಾರದು. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ಒಂದು ಸಂಕಲ್ಪ ಮಾಡಿ, "ಈ ಹಿತಕರವಲ್ಲದ ಶಬ್ದಗಳನ್ನು ನಾನು ಹೇಳುವುದಿಲ್ಲ". "ಓಹ್ ನನ್ನ ದೇವರೇ" ಎಂದು ಹೇಳಿದರೆ ಪರವಾಗಿಲ್ಲ, ಆದರೆ, ನೀವು ತಪ್ಪು ಮಾಡಿದರೂ ಬೇರೆಯವರು ತಪ್ಪು ಮಾಡಿದರೂ, ಬೇರೆ ಏನಾದರೂ ಹೊರ ಬರಬಾರದು. ಜನರನ್ನುತ್ತಾರೆ, ’ಓಹ್ ಜೀಸಸ್’, ಅದು ಪರವಾಗಿಲ್ಲ. ’ಹೇ ರಾಮ’, ಅದು ಪರವಾಗಿಲ್ಲ, ಆದರೆ ಬೇರೆ ಶಬ್ದಗಳಲ್ಲ. ನಾವು ನಮ್ಮ ಮಾತನ್ನು ಸುಸಂಸ್ಕೃತವಾಗಿಸಬೇಕು. ನೀವು ಅಹಿತಕರ ಮಾತುಗಳನ್ನಾಡಿದರೆ ಆಗ ಮಕ್ಕಳೂ ಕೂಡಾ ಅದನ್ನೇ ಕಲಿಯುತ್ತಾರೆ.
ಹೀಗೆ ಮಾತು ಮತ್ತು ನಂತರ ಕೃತಿ ಖಂಡಿತವಾಗಿ ಹಿಂಬಾಲಿಸುತ್ತವೆ. ಕೃತಿಯೆಂಬುದು ತುಂಬಾ ಚಿಕ್ಕ ವಿಷಯ. ಎಲ್ಲದಕ್ಕಿಂತ ಮುಖ್ಯ ನಿಮ್ಮ ಮನಸ್ಸು.
ಹೀಗೆ, ಎಲ್ಲರೂ ಒಬ್ಬ ಮುಂದಾಳು. ಒಂದೋ ನೀವು ಜನರನ್ನು ಬೆಳಕಿನ ಕಡೆಗೆ ಅಥವಾ ಕತ್ತಲೆಯ ಕಡೆಗೆ ಮುನ್ನಡೆಸುತ್ತೀರಿ. ಒಂದೋ ನೀವು ಅವರನ್ನು ಗೊಂದಲಗೊಳಿಸುವ ವಿಷಯಗಳನ್ನು ಹೇಳುವ ಮೂಲಕ, ತಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಒಳ್ಳೆಯತನದ ಬಗ್ಗೆ, ಸಮಾಜದ ಬಗ್ಗೆ  ಅವರಿಗಿರುವ ಒಳ್ಳೆಯ ಅಭಿಪ್ರಾಯಗಳು ಕಳೆದು ಹೋಗುವಂತೆ ಮಾಡುತ್ತೀರಿ ಮತ್ತು ಅವರು ಭ್ರಮೆಗೊಳಗಾಗುತ್ತಾರೆ ಹಾಗೂ ದಾರಿ ತಪ್ಪುತ್ತಾರೆ, ಇಲ್ಲದಿದ್ದರೆ ನೀವು ಅವರನ್ನು ಜ್ಞಾನ ಮತ್ತು ಸಂತೋಷದ ಕಡೆಗೆ ಮುನ್ನಡೆಸುತ್ತೀರಿ. ಪ್ರತಿಯೊಬ್ಬ ವ್ಯಕ್ತಿಯೂ ನಂಬಿಕೆಯನ್ನು ತುಂಬಬಹುದು ಅಥವಾ ನಂಬಿಕೆಯನ್ನು ನಾಶಪಡಿಸಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಈ ಸಾಮರ್ಥ್ಯವಿದೆ. ಆದರೂ ಎಂದೆಂದಿಗೂ ಅಲ್ಲ. ನೀವು ಒಬ್ಬರ ನಂಬಿಕೆಯನ್ನು ಎಂದೆಂದಿಗೂ ನಾಶಪಡಿಸಲು ಸಾಧ್ಯವಿಲ್ಲ, ಆದರೆ ತಾತ್ಕಾಲಿಕವಾಗಿ ಮಾತ್ರ. ಎಂಟರಿಂದ ಹತ್ತು ವರ್ಷಗಳ ವರೆಗೆ ಅವರ ಮನಸ್ಸು ಸುತ್ತಲೂ ಸುತ್ತುತ್ತಿರುತ್ತದೆ. ಭೂಮಿಯ ಮೇಲೆ ಒಳ್ಳೆಯ ಜನರಿದ್ದಾರೆಂದು ಅವರು ನಂಬುವುದಿಲ್ಲ ಮತ್ತು ಎಲ್ಲವೂ ಕೆಟ್ಟದೆಂದು, ಎಲ್ಲರೂ ಪ್ರಯೋಜನಕ್ಕಿಲ್ಲದವರು ಎಂದು ಅವರು ನಂಬುತ್ತಾರೆ.
ಮೂರು ವಿಷಯಗಳಿವೆ:
೧.    ವಿವರಣೆಗೆ ನಿಲುಕದ, ತರ್ಕಕ್ಕೆ ನಿಲುಕದ ಒಂದು ಶಕ್ತಿಯ ಮೇಲೆ ನಂಬಿಕೆ. ವಿಶ್ವವನ್ನು ಆವರಿಸಿರುವ ಒಂದು ಶಕ್ತಿ. ಎಲ್ಲೋ ಕುಳಿತುಕೊಂಡು ನಿಮಗೆ ಶಿಕ್ಷೆ ಕೊಡಲು ಪ್ರಯತ್ನಿಸುವ ಒಬ್ಬರು ದೇವರಿಲ್ಲ. ಇಲ್ಲ, ಅದನ್ನು ಮರೆತು ಬಿಡಿ. ಒಂದು ನಿಯಮವಿದೆ, ಒಂದು ದೈವಿಕ ಶಕ್ತಿಯಿದೆ. ನೀವದನ್ನು ದೈವಿಕತೆ ಅಥವಾ ಪರಿಪೂರ್ಣ ನಿಯಮಬದ್ಧತೆಯಿಂದ ಕೂಡಿದ ಸೃಷ್ಟಿಯ ಮೂಲ ಶಕ್ತಿ ಎಂದು ಕರೆಯಬಹುದು. ಇದು ದೇವರಿಗಿರುವ ಅತ್ಯುತ್ತಮ ವ್ಯಾಖ್ಯಾನ. ದೇವರೆಂದರೆ ಪರಿಪೂರ್ಣ ನಿಯಮಬದ್ಧತೆಯಿಂದ ಕೂಡಿದ, ತುಂಬಾ ಸಹಾನುಭೂತಿಯಿರುವ ಮತ್ತು ಪ್ರೀತಿಸುವ ಕ್ಷೇತ್ರ ಅಥವಾ ಶಕ್ತಿ. ಆದುದರಿಂದ, ಪ್ರೀತಿಸುವ ಶಕ್ತಿಯ ಮೇಲಿನ ನಂಬಿಕೆ, ಅದು ಈ ವಿಶ್ವ.
೨.    ಜನರ ಒಳ್ಳೆಯತನದಲ್ಲಿ ನಂಬಿಕೆ. ಈ ಭೂಮಿಯ ಮೇಲೆ ಒಳ್ಳೆಯ ಹೃದಯವಿರುವ ಒಳ್ಳೆಯ ಜನರಿದ್ದಾರೆ. ಮುಗ್ಧ ಜನರಿದ್ದಾರೆ.
೩.    ನಿಮ್ಮ ಮೇಲೆ ನಂಬಿಕೆ.
ಈ ಮೂರರಲ್ಲೂ ಇರುವ ನಂಬಿಕೆಯನ್ನು ನಾಶ ಮಾಡುವುದು ಕೆಟ್ಟ ಸಹವಾಸ. "ನಿನಗೇನು ಮಾಡಲು ಸಾಧ್ಯ? ನಿನಗೆ ಈ ಪ್ರಪಂಚದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಬಾ, ಕುಳಿತುಕೋ, ನಿನಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನೀನೊಂದು ಭ್ರಮೆಯಲ್ಲಿದ್ದಿ". ಈ ರೀತಿಯಲ್ಲಿ, ನಿಮ್ಮ ಮೇಲಿರುವ ನಂಬಿಕೆಯನ್ನು, ನಿಮ್ಮ ಸುತ್ತಲಿರುವ ಜನರ ಒಳ್ಳೆಯತನದಲ್ಲಿರುವ ನಂಬಿಕೆಯನ್ನು ನಾಶಪಡಿಸುವುದು ಮತ್ತು ಪ್ರಪಂಚವೆಂದರೆ ಒಂದು ಭೀಕರ ಜಾಗವೆಂಬ ಚಿತ್ರಣವನ್ನು ಕೊಡುವುದು ಕೆಟ್ಟ ಸಹವಾಸ.
ಒಂದು ದಿನ ಒಬ್ಬರು ದಂಪತಿಗಳು ನನ್ನ ಬಳಿ ಬಂದು, ಅವರ ಹದಿನೈದು ವರ್ಷ ವಯಸ್ಸಿನ ಮಗನು ಆತ್ಮಹತ್ಯೆ ಮಾಡಿಕೊಂಡನು ಎಂದು ಹೇಳಿದರು. ಅವನು ಬರೆದಿಟ್ಟ ಪತ್ರದಲ್ಲಿ, "ಪ್ರಪಂಚವು ಒಂದು ಭೀಕರ ಜಾಗ, ನನಗೆ ಎಲ್ಲೂ ಯಾವುದೇ ಭರವಸೆಯೂ ಕಾಣಿಸುತ್ತಿಲ್ಲ. ಜನರು ಧರ್ಮದ ಮೇಲೆ ಜಗಳವಾಡುತ್ತಿದ್ದಾರೆ ಮತ್ತು ಎಲ್ಲೆಡೆಯೂ ಹಿಂಸೆಯಿದೆ" ಎಂದಿತ್ತು. ಒಬ್ಬ ಯುವ, ಪ್ರತಿಭಾನ್ವಿತ ಹುಡುಗನು, ಈ ಪ್ರಪಂಚವು ಒಂದು ಕತ್ತಲು ಜಾಗವೆಂದನು ಮತ್ತು ತಾನಿನ್ನು ಇಲ್ಲಿ ಜೀವಿಸಲು ಬಯಸುವುದಿಲ್ಲವೆಂದನು.
ನಿಮಗೆ ಗೊತ್ತಿದೆಯಾ, ಜಪಾನಿನಲ್ಲಿ ಪ್ರತಿ ವರ್ಷವೂ ೩೦,೦೦೦ ಯುವ ಜನರು ಆತ್ಮಹತ್ಯೆ ಮಾಡುತ್ತಾರೆಂದು ಹೇಳಲಾಗುತ್ತದೆ. ಯಾಕೆ? ಬಡತನದ ಕಾರಣದಿಂದಲ್ಲ ಆದರೆ, ಜನರ ಮತ್ತು ಸಮಾಜದ ಒಳ್ಳೆಯತನದ ಮೇಲಿರುವ ನಂಬಿಕೆಯು ಹೋಗಿರುವ ಕಾರಣ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಎಲ್ಲರನ್ನೂ ಮೋಸಗಾರರೆಂಬಂತೆ, ಎಲ್ಲರನೂ ಸ್ವಾರ್ಥಿಗಳೆಂಬಂತೆ ಮತ್ತು ಎಲ್ಲರನ್ನೂ ಒಳ್ಳೆಯವರಲ್ಲವೆಂಬಂತೆ ನೋಡುವುದು, ಈ ರೀತಿಯ ಅಭದ್ರತೆಯು ಸಮಾಜದಲ್ಲಿ ಸೃಷ್ಟಿಯಾಗಿದೆ. ಆದುದರಿಂದ ಮದುವೆಯಾದ ಬಳಿಕವೂ ಜನರು ಎಲ್ಲವನ್ನೂ ಪ್ರತ್ಯೇಕವಾಗಿ ಇಡುತ್ತಾರೆ, ಯಾಕೆಂದರೆ ಒಂದೇ ಮನೆಯಲ್ಲಿದ್ದುಕೊಂಡು, ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದೆಂದು ಅವರು ಹೆದರುತ್ತಾರೆ. "ನಾನು ನನ್ನ ವಸ್ತುಗಳನ್ನು ಮತ್ತು ನೀನು ನಿನ್ನ ವಸ್ತುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿನ್ನ ಮನಸ್ಸು ಯಾವಾಗ ತಿರುಗಬಹುದೆಂದು ಹೇಳಲು ಸಾಧ್ಯವಿಲ್ಲ". ಅದರರ್ಥವೇನೆಂದರೆ, ಪಕ್ಕದ ಮನೆಯವರನ್ನು ಬಿಡಿ, ನಿಮಗೆ ನಿಮ್ಮ ಸ್ವಂತ ಸಂಗಾತಿಯ ಒಳ್ಳೆಯತನದಲ್ಲೂ ಕೂಡಾ ನಂಬಿಕೆಯಿರುವುದಿಲ್ಲ. ನಿಮ್ಮ ಸ್ವಂತ ಮಕ್ಕಳ ಒಳ್ಳೆಯತನದಲ್ಲಿ ನಿಮಗೆ ನಂಬಿಕೆಯಿರುವುದಿಲ್ಲ. ಆದುದರಿಂದ ಕೆಟ್ಟ ಸಹವಾಸವೆಂದರೆ ಅದುವೇ. ಅವರು, ಜನರ ಒಳ್ಳೆಯತನದ ಬಗ್ಗೆಯಿರುವ, ಸಮಾಜದ ಬಗ್ಗೆಯಿರುವ ನಂಬಿಕೆಯನ್ನು ನಾಶಪಡಿಸುತ್ತಾರೆ ಮತ್ತು ಕೊನೆಯದಾಗಿ ನಿಮ್ಮ ಆತ್ಮ ವಿಶ್ವಾಸವನ್ನು ಮುರಿಯುತ್ತಾರೆ. "ನಿನಗೆ ಏನೂ ಮಾಡಲು ಸಾಧ್ಯವಿಲ್ಲ, ನಿನಗೆ ಈ ಪ್ರಪಂಚದಲ್ಲಿ ಯಾವುದಾದರೂ ಬದಲಾವಣೆಯನ್ನು ತರಲು ಹೇಗೆ ಸಾಧ್ಯ, ಅದು ಸಾಧ್ಯವಿಲ್ಲ. ಪ್ರಾಯೋಗಿಕವಾಗಿರು". ಇದು ಒಂದು ರೀತಿಯ ಮುಂದಾಳು. ತಮಗರಿವಿಲ್ಲದೆಯೇ ಅವರು ಜನರನ್ನು ಆ ದಿಕ್ಕಿನಲ್ಲಿ ಮುನ್ನಡೆಸುತ್ತಾರೆ. ಉತ್ಸಾಹ, ಸಂತೋಷ, ಶಕ್ತಿಗಳನ್ನು ತರುವವರು ಹಾಗೂ ಇತರರನ್ನು ಮುಂದಕ್ಕೆ ಸಾಗಲು ಪ್ರೋತ್ಸಾಹಿಸುವವರು ಒಳ್ಳೆಯ ಮುಂದಾಳುಗಳು.
"ನೀನು ಹತ್ತು ಸಲ ಸೋತಿದ್ದರೂ ಚಿಂತಿಸಬೇಡ, ಹನ್ನೊಂದನೆಯ ಸಲ ನೀನು ಎದ್ದು ನಿಲ್ಲು ಮತ್ತು ಓಡು. ನಿನಗೆ ಓಡಲು ಸಾಧ್ಯವಿದೆ". ಒಬ್ಬ ಒಳ್ಳೆಯ ಮುಂದಾಳುವು ಒಬ್ಬರಲ್ಲಿ ಈ ವಿಶ್ವಾಸವನ್ನು ತುಂಬುತ್ತಾನೆ. "ಚಿಂತಿಸಬೇಡಿ, ತಪ್ಪುಗಳು ಆಗುತ್ತವೆ, ಮುಂದೆ ಸಾಗಿ".
ಅಪರಾಧಿಗಳಲ್ಲಿ ಕೂಡಾ ಒಳ್ಳೆಯತನವಿದೆ. ಒಬ್ಬ ಅಪರಾಧಿಯ ಒಳಗೆ ಕೂಡಾ ಒಬ್ಬ ಒಳ್ಳೆಯ ವ್ಯಕ್ತಿಯು ಕುಳಿತಿದ್ದಾನೆ. ಪ್ರಿಸನ್ ಸ್ಮಾರ್ಟ್ ಕಾರ್ಯಕ್ರಮವನ್ನು ಕಲಿಸಿದ ನಮ್ಮ ಹಲವಾರು ಶಿಕ್ಷಕರಿಂದ ನಮಗಿದು ತಿಳಿದಿದೆ. ಅವರನ್ನು ಕೇಳಿ, ಅವರು ಜೈಲುವಾಸಿಗಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡುವಾಗ ಅದು ಹೇಗಿರುತ್ತದೆಂದು. ಪ್ರಪಂಚದ ಉಳಿದವರಿಂದ ಖಂಡಿಸಲ್ಪಟ್ಟ ಒಬ್ಬನೊಳಗೆ  ಒಳ್ಳೆಯ ವ್ಯಕ್ತಿಯೊಬ್ಬನು ಕುಳಿತಿದ್ದಾನೆ, ಅಲ್ಲವೇ?
(ಸಭಿಕರಲ್ಲಿ ಹಲವರು ಹೇಳುತ್ತಾರೆ, "ಹೌದು ಗುರೂಜಿ")
ಇವನೊಬ್ಬ ಒಳ್ಳೆಯ ಮುಂದಾಳು; ಅಪರಾಧ ಮಾಡಿದವರಲ್ಲೂ ಅವನು ಒಳ್ಳೆಯತನವನ್ನು ಕಾಣುತ್ತಾನೆ. ಅವರೊಳಗೆ ಕೊಡಾ ಒಳ್ಳೆಯತನವಿದೆ. ಅತ್ಯುತ್ತಮ ಮನುಷ್ಯನಲ್ಲಿ ಕೂಡಾ ಅಥವಾ ಒಂದು ಮಗುವಿನಲ್ಲಿ ಕೂಡಾ ಏನಾದರೂ ತಪ್ಪು ಕಂಡುಹಿಡಿದು, ಮಗುವು ಕೆಟ್ಟದೆಂದು ಸಾಬೀತುಪಡಿಸಲು ಪ್ರಯತ್ನಿಸುವವನು ಒಬ್ಬ ಕೆಟ್ಟ ಮುಂದಾಳು. ನ್ಯಾಯಾಲಯಗಳು ಕೂಡಾ ಎಳೆ ವಯಸ್ಸಿನವರಿಗೆ ಸ್ವಾತಂತ್ರ್ಯವನ್ನು ನೀಡುತ್ತವೆ; ಅವುಗಳು ಅವರನ್ನು ಶಿಕ್ಷಿಸಲು ಸಾಧ್ಯವಿಲ್ಲ ಯಾಕೆಂದರೆ ಅವರು ಮಕ್ಕಳು. ಒಬ್ಬ ಕೆಟ್ಟ ಮುಂದಾಳುವು ಅಲ್ಲಿ ಕೂಡಾ ತಪ್ಪುಗಳನ್ನು ಕಂಡುಹುಡುಕುತ್ತಾನೆ. ಒಬ್ಬ ಒಳ್ಳೆಯ ಮುಂದಾಳುವು ನಿಮ್ಮನ್ನು ಸಂತೋಷ, ವಿಶ್ವಾಸ ಮತ್ತು ಜ್ಞಾನದ  ಕಡೆಗೆ ಕೊಂಡೊಯ್ಯುತ್ತಾನೆ.
ಆದುದರಿಂದ ಇವತ್ತು ನೀವು ತಿಳಿದಿದ್ದೀರಿ; "ನಾನು ಒಳ್ಳೆಯ ಮುಂದಾಳುವಾಗುವುದು ಹೇಗೆ?" ಎಂದು ನನ್ನಲ್ಲಿ ಕೇಳಬೇಡಿ. ನೀವಿಲ್ಲಿರುವುದರ ಅರ್ಥವೇನೆಂದರೆ ನೀವೊಬ್ಬ ಒಳ್ಳೆಯ ಮುಂದಾಳುವೆಂದು, ಯಾಕೆಂದರೆ ಒಂದೇ ರೀತಿಯ ಗರಿಗಳಿರುವ ಪಕ್ಷಿಗಳು ಒಟ್ಟುಗೂಡುತ್ತವೆ. ಆದುದರಿಂದ ನಾವೆಲ್ಲರೂ ಒಟ್ಟುಗೂಡಿದ್ದೇವೆ. ನೀವೊಬ್ಬ ಒಳ್ಳೆಯ ಮುಂದಾಳುವೆಂದು ತಿಳಿಯಿರಿ, ಅಷ್ಟೆ; ಅದನ್ನು ಸಂಶಯಿಸಬಾರದು ಮತ್ತು ಅದನ್ನು ಪ್ರಶ್ನಿಸಬಾರದು. ನಾವು ಈ ಒಪ್ಪಂದವನ್ನು ಮಾಡಿ ಮುಗಿಸಬೇಕು. ಒಪ್ಪಂದ ಮಾಡಿಯಾಯಿತು, "ನಾನೊಬ್ಬ ಒಳ್ಳೆಯ ಮುಂದಾಳು". ಈ ವಿಷಯದ ಬಗ್ಗೆ ಇನ್ನು ಯಾವುದೇ ಪ್ರಶ್ನೆಯಿಲ್ಲ, ಯಾವುದೇ ಪಾಟಿಸವಾಲು ಇಲ್ಲ. ಸರಿ, ಒಪ್ಪಂದವಾಯಿತು! ಇನ್ನು ಮುಂದೆ, "ಓಹ್ ನಾನೊಬ್ಬ ಒಳ್ಳೆಯ ಮುಂದಾಳುವಲ್ಲ" ಎಂದು ಹೇಳಬಾರದು. ಹಿಂದೆ ನೀವು ಹೇಗಿದ್ದರೂ ಅದು ಬೇರೆ ಕಥೆ, ಆದರೆ ಇವತ್ತು ಒಪ್ಪಂದ ಮಾಡಿಯಾಯಿತು. ನೀವೊಬ್ಬ ಒಳ್ಳೆಯ ಮುಂದಾಳು, ಅಷ್ಟೆ.
ಹೌದು. ನಂತರ ನೀವೊಬ್ಬ ಮುಂದಾಳುವೆಂಬುದನ್ನು ನೀವು ಮರೆಯಬೇಕು. ನೀವು ಸರಳವಾದವರು, ನೀವು ಯಾರೂ ಅಲ್ಲ. ಈ ರೀತಿಯಲ್ಲಿದ್ದರೆ ಒಳ್ಳೆಯದು. ನೀವು ತುಂಬಾ ಸೋಮಾರಿತನವನ್ನು ಅನುಭವಿಸುವಾಗ, ಅನೌಪಚಾರಿಕವಾಗಿರುವಾಗ ಮತ್ತು ಸಂಪೂರ್ಣವಾಗಿ ಜಡತ್ವದ ಹಿಡಿತಕ್ಕೊಳಗಾದಾಗ, ನೀವೊಬ್ಬ ಮುಂದಾಳುವೆಂಬುದನ್ನು ನೀವು ತಿಳಿದುಕೊಳ್ಳಬೇಕು. ನೀವು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿದ್ದು, ನೀವು ತುಂಬಾ ಬಿಗಿತವನ್ನು ಮತ್ತು ಜವಾಬ್ದಾರಿಯ ಹೊರೆಯನ್ನು ಅನುಭವಿಸುವಾಗ, ನೀವು ಯಾರೂ ಅಲ್ಲವೆಂಬುದನ್ನು ತಿಳಿಯಿರಿ. ನೀವೊಬ್ಬ ಮುಂದಾಳುವೆಂಬುದನ್ನು ಮರೆತು ಬಿಡಿ. ಮುಂದಾಳುವಾಗಿರುವುದು ಒಂದು ಹೊರೆಯಂತೆ ಭಾಸವಾದರೆ, ಆಗ ನೀವು ಮಾಡುತ್ತಿರುವುದನ್ನು ಮುಂದುವರಿಸಿ ಆದರೆ ನೀವೊಬ್ಬ ಮುಂದಾಳುವೆಂಬುದನ್ನು ಮರೆತು ಬಿಡಿ. ಕೆಲಸವನ್ನು ಬಿಡಬೇಡಿ, ಕೆಲಸವು ಮುಂದುವರಿಯಬೇಕು, ಹೌದು! ಒಳ್ಳೆಯದು!