ಗುರುವಾರ, ಮೇ 3, 2012

ನಂಬಿಕೆ ಇರುವಲ್ಲಿ ಅದ್ಭುತಗಳು ಸಂಭವಿಸುತ್ತವೆ

03
2012
May
ಕೀವ್, ಯುಕ್ರೇನ್

ನಾವು ಕಂಡುಕೊಂಡಿರುವ ಸಂತೋಷ, ಪರಮಾನಂದವನ್ನು ಎಲ್ಲೆಡೆ ಹಬ್ಬಿಸಬೇಕು. ಹೆಚ್ಚು ಹೆಚ್ಚು ಜನರಿಗೆ ಜೀವನದ ಹೆಚ್ಚುಗಾರಿಕೆಯ ಅರಿವಾಗಬೇಕು. ಜೀವನದ ಬಗೆಗಿನ ನಮ್ಮ ಜ್ಞಾನ ಅತ್ಯಲ್ಪ.  ನಾವು ಅರಿಯಬೇಕಾದುದು ಬೇಕಾದಷ್ಟಿದೆ. ಈ ಜ್ಞಾನವು ಎಷ್ಟು ಅಮೂಲ್ಯವಾದುದಲ್ಲವೇ?

ನೋಡಿ, ನಾವು ಮನಸ್ಸು ದೇಹದೊಳಗೆ ಇದೆ ಎಂದು ತಿಳಿಯುತ್ತೇವೆ. ಇಲ್ಲ, ದೇಹವು ಮನಸ್ಸಿನೊಳಗಿದೆ. ದೇಹವು ದೀಪದ ಬತ್ತಿಯ ಹಾಗೆ. ಮನಸ್ಸು ಅದರ ಸುತ್ತಲೂ ಇರುವ ಪ್ರಕಾಶದಂತೆ. ನೀವು ಹೆಚ್ಚು ಶಾಂತರಾಗಿದ್ದಷ್ಟೂ ಮನಸ್ಸು ವಿಸ್ತಾರಗೊಳ್ಳುತ್ತದೆ ಮತ್ತು ದೊಡ್ಡದಾಗುತ್ತದೆ. ಮನಸ್ಸು ಹೆಚ್ಚು ತೃಪ್ತಿಕರ ಹಾಗೂ ಧನ್ಯತೆಯ ಭಾವದಲ್ಲಿದ್ದಷ್ಟೂ ನೀವು ಪ್ರಜ್ವಲಿಸುವಿರಿ.

ಪ್ರ: ಗುರೂಜಿ, ಕೀವ್‍ನಲ್ಲಿ ನೂರಕ್ಕೂ ಹೆಚ್ಚು ಪುಣ್ಯಾತ್ಮರ ದೇಹಗಳಿವೆ. ಇದರ ಬಗ್ಗೆ ಏನಾದರೂ ಹೇಳುವಿರಾ?
ಶ್ರೀ ಶ್ರೀ ರವಿಶಂಕರ್:
ಸಂತರು ದೇಹ ಸ್ವರೂಪವಲ್ಲ. ಸಂತರು ಚೈತನ್ಯ ಸ್ವರೂಪರು. ದೇಹವು ತರಕಾರಿ, ಕಾಳುಗಳು ಹಾಗೂ ಇತರ ಆಹಾರದಿಂದ ರೂಪುಗೊಂಡದ್ದು. ಅದು ಹಲವು ಯುಗಗಳಿಂದ ಇದೆ. ದೇಹದ ಪ್ರತಿಯೊಂದು ಅಣುವು ಭೂಮಿಗೆ ಸೇರಿದ್ದು. ಅದು ಅಲ್ಲಿಂದ ಬರುತ್ತದೆ ಹಾಗೂ ಪುನಃ ಅಲ್ಲಿಗೇ ಹಿಂದಿರುಗುತ್ತದೆ. ಆದರೆ ಚೇತನವು ಬಹಳ ಪ್ರಮುಖವಾದುದು. ಅದು ಎಲ್ಲೆಡೆಯೂ ವ್ಯಾಪಕವಾದುದು.

ಪ್ರ: ಈ ದೇಹಗಳು ಕ್ಷಯವಾಗುವುದಿಲ್ಲ. ಅವು ಹೇಗಿವೆಯೋ ಹಾಗೇ ಇರುತ್ತವೆ.
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಭಕ್ತಿ. ಹೆಚ್ಚು ಭಕ್ತಿ ಹಾಗೂ ಪ್ರೀತಿ ಇದ್ದಾಗ, ಅದು ನಿಮ್ಮ ದೇಹದ ಪ್ರತಿಯೊಂದು ಜೀವಕೋಶವನ್ನು ಪರಿವರ್ತಿಸಿ ತೇಜಸ್ಸನ್ನು ಸೃಷ್ಟಿಸುತ್ತದೆ. ಎಲ್ಲಿ ನಂಬಿಕೆ ಇರುತ್ತದೋ ಅಲ್ಲಿ ಅದ್ಭುತಗಳು ಸಂಭವಿಸುತ್ತವೆ. ಚೇತನವು ಕೇವಲ ದೇಹಕ್ಕೆ ಅಂಟಿಕೊಂಡಿದೆ ಎಂದುಕೊಳ್ಳಬೇಡಿ. ಚೇತನವು ಎಲ್ಲೆಡೆಯೂ ವ್ಯಾಪಕವಾದುದು.
ಹಾಗಾಗಿ, ನೀವು ಎಲ್ಲೇ ಇದ್ದರೂ ನೀವು ಆಲೋಚಿಸಿದಾಗ, ನೀವು ಆಗಲೇ ಚೇತನದೊಂದಿಗೆ ಸಂಪರ್ಕವನ್ನು ಹೊಂದಿದ್ದೀರಿ. ನಮ್ಮ ದೇಹಗಳು ದೂರದರ್ಶನದಂತೆ. ನಿಜವಾದ ಶಕ್ತಿಯು ಚಾನೆಲ್‍ಗಳ ಸ್ಪಂದನದಲ್ಲಿದೆ. ನೀವು ದೂರದರ್ಶನವನ್ನು ಆನ್ ಮಾಡಿದಾಗ ನೀವು ಚಾನೆಲನ್ನು ನೋಡುತ್ತೀರಿ ಆದರೆ ಆ ಚಾನೆಲ್ ಕೇವಲ ದೂರದರ್ಶನದ ಪೆಟ್ಟಿಗೆಯಲ್ಲಿ ಮಾತ್ರ ಇರುವುದಿಲ್ಲ. ಅದು ಇಡೀ ಕೋಣೆಯನ್ನು ಆವರಿಸುತ್ತದೆ.

ಪ್ರ: ಮನಸ್ಸಿನ ನಕಾರಾತ್ಮಕ ಅಭ್ಯಾಸಗಳಿಂದ ಹೇಗೆ ಮುಕ್ತರಾಗುವುದು?
ಶ್ರೀ ಶ್ರೀ ರವಿಶಂಕರ್:
ಸಜ್ಜನರ ಸಂಗದಿಂದ. ಯಾರೊಡನೆ ನೀವು ಸ್ವಲ್ಪ ಕಾಲ ಕುಳಿತು ನಕಾರಾತ್ಮಕವಾಗಿ ಮಾತನಾಡಿ, ನಂತರ ಧನಾತ್ಮಕರಾಗುವಿರೋ ಅವರೇ ನಿಜವಾದ ಮಿತರ್ರು. ಯಾರೊಡನೆ ನೀವು ಸ್ವಲ್ಪ ನಕಾರಾತ್ಮಕವಾಗಿ ಮಾತನಾಡಿದಾಗ ಅದು ಇನ್ನೂ ಹೆಚ್ಚು ನಕಾರಾತ್ಮಕವಾಗಿ ತೋರುತ್ತದೆಯೋ ಅವನೇ ದುಷ್ಟ ಮಿತ್ರ. ಹಾಗಾಗಿ, ಮೊದಲನೆಯದು, ಸಜ್ಜನರ ಸಂಗ, ಎರಡನೆಯದು ಪ್ರಾಣಾಯಾಮ, ಸುದರ್ಶನ ಕ್ರಿಯೆ ಹಾಗೂ ಧ್ಯಾನ, ಮೂರನೆಯದು ದೇಹಶುದ್ಧಿ.
ಕೆಲವು ಬಾರಿ ನಿಮ್ಮ ಮಲೋತ್ಸರ್ಗವು ಸರಿಯಿಲ್ಲದಿದ್ದರೆ, ನಿಮ್ಮ ಕರುಳು ಬಿರುಸಾಗಿದ್ದರೆ ಅದು ನಿಮ್ಮ ತಲೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಬಾರಿ ದೇಹವನ್ನೂ ಶುದ್ಧಗೊಳಿಸಬೇಕಾಗುತ್ತದೆ. ವಿಷಪೂರಿತ ಅಣುಗಳನ್ನು ಹೊರಹಾಕಿ ಅಥವಾ ಪಥ್ಯವನ್ನು ಮಾಡಿ. ಆಯುರ್ವೇದ, ಪಂಚಕರ್ಮ ಇವೆಲ್ಲವೂ ಸಹಾಯಕ.

ಪ್ರ: ನಮ್ಮ ಜೀವನದಲ್ಲಿ ರೋಗಗಳು ಏಕೆ ಬರುತ್ತವೆ? ಅವುಗಳ ಉದ್ದೇಶವೇನು?
ಶ್ರೀ ಶ್ರೀ ರವಿಶಂಕರ್:
ಏಕೆಂದರೆ ನಾವು ಸೃಷ್ಟಿಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದೇವೆ. ಏನನ್ನು ಸೇವಿಸಬಾರದೋ ಅದನ್ನು ಸೇವಿಸುತ್ತೇವೆ ಅಥವಾ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ನಾವು ಪರಿಸರದ ಕಾಳಜಿಯನ್ನು ವಹಿಸುತ್ತಿಲ್ಲ. ಎಲ್ಲೆಡೆಯೂ ಎಷ್ಟೊಂದು ದೂರವಾಣಿಯ ಸ್ತಂಭ (ಟವರ್)ಗಳಿವೆ. ಇದರಿಂದ ಎಷ್ಟೊಂದು ವಿಕಿರಣಗಳು ಹೊರಹೊಮ್ಮುತ್ತಿವೆ. ಇವೆಲ್ಲವೂ ನಮ್ಮ ಮೇಲೆ ಪರಿಣಾಮವನ್ನು ಬೀರುತ್ತವೆ. ಅಲ್ಲದೇ, ಮನಸ್ಸು ಒತ್ತಡದಲ್ಲಿದ್ದರೆ, ರೋಗನಿರೋಧಕ ಶಕ್ತಿಯು ಕುಂಠಿತಗೊಳ್ಳುತ್ತದೆ.

ಪ್ರ: ನಾವು ಯಾವುದಕ್ಕಾಗಿ ಜೀವಿಸುತ್ತೇವೆ?
ಶ್ರೀ ಶ್ರೀ ರವಿಶಂಕರ್:
ಮೊದಲು ನಾವು ಯಾವುದಕ್ಕಾಗಿ ಜೀವಿಸುವುದಿಲ್ಲ ಎಂಬ ಪಟ್ಟಿಯನ್ನು ಮಾಡಿ. ಜೀವನದ ಉದ್ದೇಶವು ದುಃಖಕ್ಕೊಳಗಾಗದಿರುವುದು ಹಾಗೂ ಇತರರ ಜೀವನದಲ್ಲಿ ದುಃಖವನ್ನುಂಟುಮಾಡದಿರುವುದು. ಅಲ್ಲವೇ?
ಹಾಗಾದರೆ ಜೀವನದ ಉದ್ದೇಶವೇನು? ನಾವು ಹೇಗೆ ಇತರರ ಜೀವನದಲ್ಲಿ ಹೆಚ್ಚು ಸಂತೋಷವನ್ನು ತರಬಹುದು? ನಮ್ಮ ಅಂತರಾಳಕ್ಕೆ, ನಮ್ಮ ಆತ್ಮಕ್ಕೆ ಹೇಗೆ ಸಂಪರ್ಕವನ್ನು ಹೊಂದುವುದು? ನಾವು ಯಾರೆಂಬುದನ್ನು ಕಂಡುಕೊಳ್ಳುವುದು. ಅದೇ ಅಧ್ಯಾತ್ಮ ಹಾಗೂ ಇದನ್ನು ಅರಿಯಲು ನೀವು ಸರಿಯಾದ ಸ್ಥಳದಲ್ಲಿದ್ದೀರಿ.

ಪ್ರ: ದೈವೀ (ದಿವ್ಯವಾದ) ಶಿಶುವನ್ನು ಪಡೆಯಲು ಮನಸ್ಸು ಹಾಗೂ ಹೃದಯವನ್ನು ಹೇಗೆ ಸಜ್ಜುಗೊಳಿಸಬೇಕು?
ಶ್ರೀ ಶ್ರೀ ರವಿಶಂಕರ್:
ಮಗುವಿನಂತೆ ಇರಿ. ಯಾವುದೇ ಪ್ರತಿಬಂಧ ಅಥವಾ ಪೂರ್ವ ಕಲ್ಪನೆಗಳನ್ನು ಹೊಂದಬೇಡಿ. ಸರಳವಾಗಿ, ಸಹಜವಾಗಿ ಇರಿ, ಅಷ್ಟೇ !

ಪ್ರ: ಜನರಿಗೆ ಸಂಗೀತದ ಮೂಲಕ ಆನಂದವನ್ನು ಕೊಡುವುದೇ ನನ್ನ ಪ್ರಾರಬ್ಧವೆಂದು ನಾನು ಆಲೋಚಿಸಿದ್ದೆ.
ಶ್ರೀ ಶ್ರೀ ರವಿಶಂಕರ್:
ಸಂಗೀತವಿಲ್ಲದೆ ಜೀವನವು ಅಪೂರ್ಣ, ಆದರೆ ಜೀವನದಲ್ಲಿ ಸಂಗೀತವೇ ಎಲ್ಲವೂ ಅಲ್ಲ. ಹಾಗಾಗಿ, ಸಂಗೀತವು ಒಂದು ಭಾಗ. ನೀವು ಜೀವನದಲ್ಲಿ ಬೇರೆ ಕೆಲಸಗಳನ್ನೂ ಮಾಡಬೇಕಿದೆ. ಅದನ್ನೂ ಮಾಡಿ. ಆದರೆ, ಇವೆಲ್ಲವುಗಳಲ್ಲಿ ವಿವೇಕವು ಮೊದಲನೆಯದು. ವಿವೇಕವು ಬಹು ಮುಖ್ಯವಾದುದು. ಆಧ್ಯಾತ್ಮಿಕ ಜ್ಞಾನವು ಬಹು ಮುಖ್ಯವಾದುದು.

ಪ್ರ: ಜೂಜಾಡುವ ವ್ಯಸನಕ್ಕೆ ಬಿದ್ದಿರುವ ನನ್ನ ಮಗನನ್ನು ಕಂಡು ನನಗೆ ಬಹಳ ನೋವಾಗುತ್ತಿದೆ.
ಶ್ರೀ ಶ್ರೀ ರವಿಶಂಕರ್:
ನಿಮಗೆ ಒಬ್ಬ ಮಗನಿದ್ದಾನೆ; ನಮಗೆ ಈ ರೀತಿಯ ಹಲವು ದುಷ್ಕರ್ಮಗಳ ವ್ಯಸನಕ್ಕೆ ಬಿದ್ದಿರುವ ಲಕ್ಷಾಂತರ ಮಕ್ಕಳಿದ್ದಾರೆ, ಜಾಗೃತರಾಗಿ ನಿಮ್ಮ ಮಗನಂತಹ ಇತರ ಜನರಿಗೆ ಹೇಗೆ ಸಹಾಯ ಮಾಡಲು ಸಾಧ್ಯವೆಂಬುದನ್ನು ಕಂಡುಕೊಳ್ಳಿ. ನಿಮ್ಮಲ್ಲಿ ಈ ನೋವು ಬಂದಿರುವುದಕ್ಕೆ ಕಾರಣ ನೀವು ಇದಕ್ಕಾಗಿ ಏನಾದರೂ ಮಾಡಲಿ ಎಂದು; ಸಮಾಜಕ್ಕಾಗಿ, ಇತರ ಮಕ್ಕಳಿಗಾಗಿ.