ಬುಧವಾರ, ಮೇ 23, 2012

ಜ್ಞಾನೋದಯವು ನಿಮ್ಮಲ್ಲಿ ಬೀಜ ರೂಪದಲ್ಲಿದೆ


23
2012............................... ಬೆಂಗಳೂರು ಆಶ್ರಮ, ಭಾರತ
May

ನಾವು ಜೀವನದಲ್ಲಿ ಏನನ್ನು ಬಯಸುತ್ತೇವೋ ಅದು ಈಗಾಗಲೇ ನಮ್ಮಲ್ಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನೀವು ಈ ಸಂಕಲ್ಪದಿಂದ ಪ್ರಾರಂಭಿಸಿ, "ನಾನು ಏನನ್ನು ಬಯಸುತ್ತೇನೋ ಅದು ಈಗಾಗಲೇ ನನ್ನಲ್ಲಿದೆ". ಆಗ ನೀವು ಬಯಸುವುದು ಸುಲಭವಾಗಿ ಸಿದ್ಧಿಸುತ್ತದೆ. "ಅದು ನನ್ನಲ್ಲಿದೆ" ಎಂದು ಯೋಚಿಸುವುದು, ಒಂದು ಬೀಜವನ್ನು ಬಿತ್ತುವಂತೆ. ಒಮ್ಮೆ ನೀವು ಬೀಜವನ್ನು ಬಿತ್ತಿದ ಬಳಿಕ, ನೀವು ನೀರು, ಗೊಬ್ಬರಗಳನ್ನು ಹಾಕುತ್ತೀರಿ ಮತ್ತು ಅದು ಮೊಳಕೆಯೊಡೆದು ಬೆಳೆಯುತ್ತದೆ. ಹೀಗೆ, ಅಲ್ಲಿ ಬೀಜವಿದೆ ಎಂಬುದು ಮಾನಸಿಕವಾಗಿ ನಿಮಗೆ ತಿಳಿದಿರುತ್ತದೆ. ಅದೇ ರೀತಿಯಲ್ಲಿ, ನಿಮ್ಮ ಜೀವನದಲ್ಲಿ ನೀವು ಯಾವುದನ್ನೆಲ್ಲಾ ಸಾಧಿಸಲು ಬಯಸುತ್ತೀರೋ, ನೀವು ಅದಾಗಿದ್ದೀರಿ ಮತ್ತು ಅದು ನಿಮ್ಮಲ್ಲಿದೆ ಎಂಬುದನ್ನು ತಿಳಿಯಿರಿ. ಅದು ನಿಮ್ಮಲ್ಲಿಲ್ಲ ಎಂದು ನೀವು ಯೋಚಿಸಿದರೆ, ಆಗ ಕೇವಲ ಆ ಕೊರತೆಯು ಬೆಳೆಯುತ್ತದೆ.
ಅದಕ್ಕಾಗಿಯೇ ಹಣವಿರುವ ಜನರು ಇನ್ನೂ ಹೆಚ್ಚು ಹಣವನ್ನು ಗಳಿಸುತ್ತಾ ಇರುತ್ತಾರೆ ಮತ್ತು ಯಾರಲ್ಲಿಲ್ಲವೋ ಅವರಿಗೆ ಸಿಗುವುದಿಲ್ಲ ಯಾಕೆಂದರೆ ಅವರು, "ನನ್ನಲ್ಲಿಲ್ಲ, ನನ್ನಲ್ಲಿಲ್ಲ" ಎಂದು ಹೇಳುತ್ತಾ ಇರುತ್ತಾರೆ. ಆದುದರಿಂದ ಮನಸ್ಸು ಕೊರತೆಯ ದಿಕ್ಕಿನಲ್ಲಿ ಹೋಗುತ್ತದೆ.
ನಿಮಗೆ ಗೊತ್ತಾ, ಮನೆಯಲ್ಲಿ ಯಾವುದಾದರೂ ವಸ್ತುಗಳಿಲ್ಲದಿದ್ದಾಗ ಅಥವಾ ನಾವು ಮಿಠಾಯಿ ಕೇಳುತ್ತಿದ್ದಾಗ ನಮ್ಮ ಅಜ್ಜಿ ಯಾವತ್ತೂ ಹೇಳುತ್ತಿದ್ದರು, "ಅದು ತುಂಬಾ ಇದೆ, ಧಾರಾಳವಾಗಿದೆ, ನಾವು ಅಂಗಡಿಗೆ ಹೋಗೋಣ". ಅದನ್ನು ಕೇಳಿದವರಿಗೆ, ಅದು ಪೂರ್ತಿ ಅಸಂಬದ್ಧವಾಗಿ ತೋರುತ್ತದೆ. ನಮ್ಮಲ್ಲಿಲ್ಲ ಎಂದು ಅವರು ಹೇಳುವುದನ್ನು ನಾವು ಕೇಳಲಿಲ್ಲ.
ಆದುದರಿಂದ ಆ ’ಕೊರತೆ’ ಎಂಬ ಪ್ರಜ್ಞೆಯು ಹೋಗಬೇಕು ಮತ್ತು ನೀವು ಧಾರಾಳತೆಯನ್ನು ಅನುಭವಿಸಬೇಕು. ನೀವು ಯಾವುದೇ ಗುರಿಯನ್ನು ಸಾಧಿಸಲು ಬಯಸಿದರೂ, ಅದು ನಿಮ್ಮಲ್ಲಿದೆ, ಅದನ್ನು ನೀವು ಸಾಧಿಸಿದ್ದೀರಿ ಎಂಬುದನ್ನು ಮೊದಲು ತಿಳಿಯಿರಿ ಮತ್ತು ನಂತರ ಅದನ್ನು ಸಾಧಿಸಲು ನಿಮ್ಮ ಪ್ರಯತ್ನವನ್ನು ಹಾಕಿ. ಪ್ರಯತ್ನವನ್ನು ಹಾಕಬೇಕು, ಆದರೆ ಕೇವಲ ಪ್ರಯತ್ನವು ಕೆಲಸ ಮಾಡುವುದಿಲ್ಲ. ಪ್ರಯತ್ನದ ಮೊದಲು, ಅಲ್ಲಿ ಗುರಿಯ ಬೀಜವೂ ಕೂಡಾ ಇರಬೇಕು. ಆದುದರಿಂದ, ಅನ್ವೇಷಕನಲ್ಲಿ ಗುರಿಯು ಅದಾಗಲೇ ಇರುತ್ತದೆ. ಗುರಿಯು ಅಲ್ಲೆಲ್ಲೋ ಹೊರಗಡೆಯಿದ್ದು ನೀವು ಅದನ್ನು ತಲಪಲು ಪ್ರಯತ್ನಿಸಬೇಕಾಗಿಲ್ಲ, ಇಲ್ಲ! ಕೇವಲ ವಿಶ್ರಾಮ ಮಾಡಿ; ಗುರಿಯು ಇಲ್ಲಿದೆ ಮತ್ತು ಈಗ ಇದೆ.
ಆದುದರಿಂದ, ಜ್ಞಾನೋದಯ ನಿಮ್ಮಲ್ಲಿದೆ. ನಿಮಗೆ ಅದರ ಕೊರತೆಯಿದೆ ಎಂದು ನೀವು ಯೋಚಿಸಿದರೆ, ನೀವು ಯಾವತ್ತಿಗೂ ಅದನ್ನು ಸಾಧಿಸಲು ಸಾಧ್ಯವಾಗದು. ಅದು ನಿಮ್ಮಲ್ಲಿ ಒಂದು ಬೀಜವಾಗಿ ಇದೆ ಎಂಬುದನ್ನು ನೀವು ತಿಳಿಯಬೇಕು. ನೀವು ಈಗಾಗಲೇ ಒಬ್ಬ ಯೋಗಿ ಎಂಬುದನ್ನು ನೀವು ತಿಳಿಯಬೇಕು ಮತ್ತು ಯೋಗ ಮಾಡುತ್ತಾ ಇರಬೇಕು, ನೀವು ಅದರಲ್ಲಿ ಪರಿಪೂರ್ಣತೆಯನ್ನು ಹೊಂದುತ್ತೀರಿ. ನೀವೊಬ್ಬ ಯೋಗಿಯಲ್ಲವೆಂದು ನೀವು ಯೋಚಿಸಿದರೆ ಮತ್ತು ನಂತರ ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸಿದರೆ ಅದು ಕೆಲಸ ಮಾಡುವುದಿಲ್ಲ. ಆದುದರಿಂದ, ಬೀಜವು ಈಗಾಗಲೇ ಅಲ್ಲಿದೆ ಎಂಬುದನ್ನು ತಿಳಿಯಿರಿ.
ನೀವೊಬ್ಬ ಉದ್ಯಮಿಯಾಗಲು ಬಯಸಿದರೆ, "ನಾನೊಬ್ಬ ಉದ್ಯಮಿ" ಎಂಬ ಬೀಜವನ್ನು ಹಾಕಿ ಮತ್ತು ನಂತರ ಉದ್ಯಮಿಯಾಗುವುದರ ನಿಟ್ಟಿನಲ್ಲಿ ಕೆಲಸ ಮಾಡಿ. ಇದು ತುಂಬಾ ಅಸಂಬದ್ಧವಾಗಿ ತೋರಬಹುದು. ಸಾಧಾರಣವಾಗಿ ಜನರು, "ನನ್ನಲ್ಲಿಲ್ಲ, ಆದುದರಿಂದ ನಾನು ಸಾಧಿಸಬೇಕು" ಎಂದು ಯೋಚಿಸುತ್ತಾರೆ. ಆದರೆ ಅಪರೂಪವಾಗಿ ಮಾತ್ರ ಅವರಿಗೆ ಅದನ್ನು ಮಾಡಲು ಸಾಧ್ಯವಾಗುತ್ತದೆ. ಗುರಿಯು ಅದಾಗಲೇ ಅನ್ವೇಷಕನಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿದೆ.
ಇವತ್ತು ನಿಮಗೆ ತುಂಬಾ ದೊಡ್ಡ ರಹಸ್ಯ ಜ್ಞಾನ ದೊರಕಿತು. 
ಪ್ರಶ್ನೆ: ಪ್ರೀತಿಯ ಗುರೂಜಿ, ಮಹಾಭಾರತದ ಸಮಯದಲ್ಲಿ ತಂತ್ರಜ್ಞಾನವು ಈಗಿರುವುದಕ್ಕಿಂತ ಎಷ್ಟೋ ಹೆಚ್ಚು ಮುಂದುವರಿದಿತ್ತು ಎಂದು ಹೇಳಲಾಗುತ್ತದೆ. ಏನಾಯಿತು? ಎಲ್ಲಾ ಅಭಿವೃದ್ಧಿ ಮತ್ತು ಪ್ರಗತಿಗಳು ಎಲ್ಲಿ ಮಾಯವಾದವು? ನಾವು ಹಿಂದಕ್ಕೆ ಚಲಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಇದು ಪ್ರಕೃತಿಯಲ್ಲಿನ ಒಂದು ಚಕ್ರ. ಎಲ್ಲವೂ ಚಕ್ರದಂತೆ ಸುತ್ತುತ್ತದೆ. ಈ ಗ್ರಹದಲ್ಲಿ ಡೈನೋಸಾರುಗಳಿದ್ದವು ಮತ್ತು ತರಬೇತುಗೊಳಿಸಬಲ್ಲಂತಹ ದೊಡ್ಡ ಪಕ್ಷಿಗಳಿದ್ದವು. ಈ ಪಕ್ಷಿಗಳ ಬೆನ್ನ ಮೇಲೆ ಮಂಟಪಗಳನ್ನು ಕಟ್ಟುತ್ತಿದ್ದರು ಮತ್ತು ಬೇರೆ ಜಾಗಗಳಿಗೆ ಹೋಗಲು ಪಕ್ಷಿಗಳಿಗೆ ತರಬೇತಿ ನೀಡುತ್ತಿದ್ದರು. ಅದು ಹಾರಿಕೊಂಡು ಹೋಗುತ್ತಿತ್ತು. ಡೈನೋಸಾರ್ ಯುಗದಲ್ಲಿ, ಸುಮಾರು ನಮ್ಮ ವಿಮಾನಗಳ ಗಾತ್ರದ ಬೃಹತ್ ಪಕ್ಷಿಗಳಿರುತ್ತಿದ್ದವು. ಅದರ ಬಗ್ಗೆಯಿರುವ ಸಾಕ್ಷ್ಯಚಿತ್ರವನ್ನು ನೀವು ನೋಡಿದ್ದೀರಾ? ಕೆಲವು ಪಕ್ಷಿಗಳು ಸುಮಾರು ೩೦೦೦ ಕಿಲೋಗಳಷ್ಟು ಭಾರವಿರುತ್ತಿದ್ದವು ಮತ್ತು ಜನರು ಅವುಗಳ ಮೇಲೆ ಕೋಣೆಗಳನ್ನು ಕಟ್ಟುತ್ತಿದ್ದರು. ರಾಮಾಯಣದಲ್ಲಿ, ಹೇಗೆ ರಾವಣನು ಸೀತೆಯನ್ನು ಜೊತೆಯಲ್ಲಿ ಕೊಂಡೊಯ್ಯುವಾಗ ಜಟಾಯು (ಒಂದು ದೊಡ್ಡ ಪಕ್ಷಿ) ದಾರಿಯಲ್ಲಿ ಬಂತು ಮತ್ತು ರಾವಣನು ಅದರ ರೆಕ್ಕೆಯನ್ನು ತುಂಡರಿಸಿದ ಎಂಬುದನ್ನು ಬರೆಯಲಾಗಿದೆ.
ಅದನ್ನು ನಾವು ಹೇಗೆ ಕಳೆದುಕೊಂಡೆವು ಮತ್ತು ಯಾಕೆ ಕಳೆದುಕೊಂಡೆವು ಎಂಬುದು ನನಗೆ ತಿಳಿಯದು, ಆದರೆ ಈಗ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ತುಂಬಾ ಕಷ್ಟಪಟ್ಟು ನಮ್ಮ ದೇಶವು ಸ್ವಾತಂತ್ರ್ಯವನ್ನು ಗಳಿಸಿತು, ಆದರೆ ಈಗ ಈ ದೇಶದಲ್ಲಿ ಭ್ರಷ್ಟಾಚಾರವು ಬೆಳೆಯುತ್ತಿರುವ ರೀತಿಯನ್ನು ನೋಡಿದರೆ, ಅದು ಕರುಣಾಜನಕವಾಗಿದೆ. ನಾವು ಆ ವಿಷಯಗಳನ್ನು ಸರಿಪಡಿಸಬೇಕು.
ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಉದ್ಯಮದಲ್ಲಿ ಬಹಳ ಯಶಸ್ವಿಯಾಗಿದ್ದೇನೆ ಆದರೆ ವೈಯಕ್ತಿಕ ಜೀವನದಲ್ಲಿ ದುರಂತ ಹೊಂದಿದವನು. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಮೊದಲನೆಯದಾಗಿ, "ನಾನೊಬ್ಬ ದುರಂತ ಹೊಂದಿದವನು" ಎಂಬ ಈ ಲೇಬಲ್ಲನ್ನು ನಿನ್ನಿಂದ ತೆಗೆ. ನೀನು ಹಿಂದೆ ಒಂದು ತಪ್ಪನ್ನು ಮಾಡಿದ್ದೀಯೆಂಬುದನ್ನು ನೀನು ಅರ್ಥ ಮಾಡಿಕೊಂಡಿದ್ದರೆ, ನೀನು ಈಗಾಗಲೇ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿರುವೆ. ದುರಂತ ಸಂಭವಿಸುವುದು, ನಿನ್ನಿಂದ ದುರಂತವಾಗಿದೆ ಎಂಬುದನ್ನು ನೀನು ಅರ್ಥ ಮಾಡಿಕೊಳ್ಳದೇ ಇರುವಾಗ. ನಿನ್ನಿಂದ ದುರಂತ ಸಂಭವಿಸಿದಾಗ ಮತ್ತು ಅದೊಂದು ದುರಂತ ಎಂಬುದನ್ನು ನೀನು ತಿಳಿದುಕೊಂಡಾಗ ನೀನು ಅದರಿಂದ ಹೊರ ಬಂದಾಯಿತು. ಆದುದರಿಂದ ಈಗ ಸ್ವತಂತ್ರನಾಗಿ ನಡೆ, ಚಿಂತಿಸಬೇಡ.
ಪ್ರಶ್ನೆ: ಪ್ರೀತಿಯ ಗುರೂಜಿ, ಡಮರು, ತ್ರಿಶೂಲ ಮತ್ತು ಶಿವನ ತಲೆಯ ಮೇಲಿರುವ ಅರ್ಧ ಚಂದ್ರನ ಮಹತ್ವವನ್ನು ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ಶಿವ ತತ್ವವೆಂದರೆ ಎಲ್ಲಿ ಮನಸ್ಸಿಲ್ಲವೋ ಅದು ಮತ್ತು ಚಂದ್ರನು ಮನಸ್ಸನ್ನು ಸೂಚಿಸುತ್ತಾನೆ. ಮನಸ್ಸಿಲ್ಲದೇ ಇರುವಾಗ ಈ "ಮನಸ್ಸಿಲ್ಲದಿರುವಿಕೆ" ಯು ವ್ಯಕ್ತವಾಗುವುದು ಹೇಗೆ ಮತ್ತು ಯಾರಿಗಾದರೂ ಅರ್ಥವಾಗುವುದು ಹೇಗೆ? ಅರ್ಥ ಮಾಡಿಕೊಳ್ಳಲು, ಅನುಭವಿಸಲು ಮತ್ತು ವ್ಯಕ್ತಪಡಿಸಲು ನಿಮಗೆ ಸ್ವಲ್ಪ ಮನಸ್ಸಿನ ಅವಶ್ಯಕತೆಯಿದೆ. ಆದುದರಿಂದ, ಅದು ಪೂರ್ಣ ಚಂದ್ರನಲ್ಲ, ಆದರೆ ತಲೆಯ ಮೇಲಿರುವುದು ಚಿಕ್ಕದಾದ ಅರ್ಧಚಂದ್ರ. ಅದರರ್ಥ, ಅವ್ಯಕ್ತವಾದುದನ್ನು ವ್ಯಕ್ತಪಡಿಸಲು ಕೇವಲ ಸ್ವಲ್ಪವೇ ಸ್ವಲ್ಪ ಮನಸ್ಸಿನ ಅಗತ್ಯವಿದೆಯೆಂದು. ಶಿವ ತತ್ವವು ಅವ್ಯಕ್ತವಾದುದು; ಯಾರಿಗೂ ಅದರ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಇದರ ಬಗ್ಗೆ ಒಂದು ಕಥೆಯಿದೆ. ಬ್ರಹ್ಮನು ತಲೆಯನ್ನೂ, ವಿಷ್ಣುವು ಪಾದಗಳನ್ನೂ ಕಂಡುಹುಡುಕಲು ಹೋದರು, ಆದರೆ ಯಾರಿಗೂ ಏನೂ ಸಿಗಲಿಲ್ಲ. ಆದುದರಿಂದ, ಒಂದು ಮನಸ್ಸಿಲ್ಲದೆ, ಅನಂತತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.
ನೀವು ಧ್ಯಾನದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ಏನೂ ಇಲ್ಲದಿರುವಿಕೆಯನ್ನು ಅನುಭವಿಸುತ್ತೀರಿ, ಆದರೆ ಆಗ ಯೋಚನೆಯು ಬರುತ್ತದೆ, "ನಾನು ಈ ಸುಂದರವಾದ ಧ್ಯಾನವನ್ನು ಅನುಭವಿಸುತ್ತಿದ್ದೇನೆ". ಅದನ್ನು ಯಾರು ಅನುಭವಿಸಿದರು? ಅದು ಮನಸ್ಸು. ಮನಸ್ಸು "ಓ, ನಾನು ಚೆನ್ನಾಗಿ ನಿದ್ರಿಸಿದೆ" ಅಥವಾ "ನನಗೆ ಒಳ್ಳೆಯ ಧ್ಯಾನವಾಯಿತು" ಎಂದು ಗ್ರಹಿಸುತ್ತದೆ. ಆದುದರಿಂದ ಆ ಅವ್ಯಕ್ತವಾದುದನ್ನು ವ್ಯಕ್ತಪಡಿಸಲು, ನಿಮಗೆ ಸ್ವಲ್ಪ ಮನಸ್ಸಿನ ಅಗತ್ಯವಿದೆ ಮತ್ತು ಅದಕ್ಕೇ ಆ ಸ್ವಲ್ಪ ಮನಸ್ಸು (ಅರ್ಧ ಚಂದ್ರ) ತಲೆಯ ಮೇಲಿರುವುದು. ತಲೆಯು ಪೂರ್ತಿಯಾಗಿ ಬುದ್ಧಿವಂತಿಕೆಯಾಗಿದೆ. ಬುದ್ಧಿವಂತಿಕೆಯು ಮನಸ್ಸಿನಾಚೆಯದು, ಆದರೆ ಅದು ಸ್ವಲ್ಪ ಮನಸ್ಸಿನೊಂದಿಗೆ ವ್ಯಕ್ತಗೊಳ್ಳಬೇಕಾಗುತ್ತದೆ ಮತ್ತು ಇದು ಅರ್ಧಚಂದ್ರದಿಂದ ಸೂಚಿಸಲ್ಪಟ್ಟಿದೆ.
ಡಮರು, ಯಾವತ್ತೂ ವಿಸ್ತರಿಸುವ ಮತ್ತು ಸಂಕುಚಿಸುವ ವಿಶ್ವವನ್ನು ಸೂಚಿಸುತ್ತದೆ. ಒಂದು ವಿಸ್ತರಿಕೆಯಿಂದ ಅದು ಸಂಕುಚಿಸುತ್ತದೆ ಮತ್ತು ಅದು ಪುನಃ ವಿಸ್ತರಿಸುತ್ತದೆ, ಇದು ಸೃಷ್ಟಿಯ ಪ್ರಕ್ರಿಯೆಯಾಗಿದೆ. ನೀವು ನಿಮ್ಮ ಹೃದಯ ಬಡಿತವನ್ನು ನೋಡಿದರೆ, ಅದು ಕೇವಲ ಒಂದು ನೇರವಾದ ರೇಖೆಯಲ್ಲ ಆದರೆ ಮೇಲೆ ಕೆಳಗೆ ಹೋಗುವ ಒಂದು ಲಯವಾಗಿದೆ.
ಇಡಿಯ ಪ್ರಪಂಚವು ಲಯಗಳಲ್ಲದೆ ಮತ್ತೇನೂ ಅಲ್ಲ; ಶಕ್ತಿಯು ಮೇಲೇರುವುದು ಮತ್ತು ಕುಸಿಯುವುದು, ಪುನಃ ಮೇಲೇರುವುದು. ಆದುದರಿಂದ ಡಮರು ಅದನ್ನು ಸೂಚಿಸುತ್ತದೆ. ಡಮರುವಿನ ಆಕಾರವನ್ನು ನೋಡಿ, ವಿಸ್ತಾರದಿಂದ ಅದು ಸಂಕುಚಿಸುತ್ತದೆ ಮತ್ತು ಪುನಃ ವಿಸ್ತಾರವಾಗುತ್ತದೆ. ಅದು ಶಬ್ದದ ಒಂದು ಚಿಹ್ನೆ ಕೂಡಾ. ಶಬ್ದವು ಲಯವಾಗಿದೆ ಮತ್ತು ಶಬ್ದವು ಶಕ್ತಿಯಾಗಿದೆ. ಸಂಪೂರ್ಣ ವಿಶ್ವವು ಒಂದು ತರಂಗ ಕ್ರಿಯೆಯಲ್ಲದೆ ಮತ್ತೇನೂ ಅಲ್ಲ, ಲಯಗಳಲ್ಲದೆ ಮತ್ತೇನೂ ಅಲ್ಲ.
ಕ್ವಾಂಟಮ್ ಭೌತಶಾಸ್ತ್ರವು ಏನೆಂದು ಹೇಳುತ್ತದೆ? ಅದು ಅದೇ ವಿಷಯವನ್ನು ಹೇಳುತ್ತದೆ - ಸಂಪೂರ್ಣ ವಿಶ್ವವು ಲಯಗಳಲ್ಲದೆ ಮತ್ತೇನೂ ಅಲ್ಲ. ಆದುದರಿಂದ, ಎರಡೆಂಬುದಿಲ್ಲ, ಒಂದೇ ಇರುವುದು. ಅದು ಕೇವಲ ಒಂದು ತರಂಗ. ಅದನ್ನೇ ಆದಿ ಶಂಕರರು ಹೇಳಿದುದು, ಕೇವಲ ಒಂದೇ ವಿಷಯವಿರುವುದು.
ನಿಮಗೆ ಈ ಬಲ್ಬು ಬೇರೆ, ಆ ಬಲ್ಬು ಬೇರೆ, ಫ್ಯಾನು ಬೇರೆ  ಎಂದು ತೋರಿದರೆ, ಆಗ ನೀವು ಗೊಂದಲಗೊಂಡಿರುತ್ತೀರಿ, ನಿಮಗೆ ಸತ್ಯಾಂಶ ತಿಳಿದಿಲ್ಲ. ಸತ್ಯಾಂಶವೇನೆಂದರೆ, ಒಂದೇ ಒಂದು ವಿದ್ಯುಚ್ಛಕ್ತಿಯಿರುವುದು, ಒಂದೇ ಒಂದು ಪ್ರಧಾನ ಸ್ವಿಚ್ ಇರುವುದು ಮತ್ತು ಅದು ಆನ್ ಆಗಿದ್ದರೆ, ಎಲ್ಲಾ ಬಲ್ಬುಗಳು ಉರಿಯುತ್ತವೆ. ಆ ಸ್ವಿಚ್ ಆಫಾಗಿದ್ದರೆ, ಎಲ್ಲವೂ ಆಫಾಗಿರುತ್ತವೆ. ಆದುದರಿಂದ ಆ ಒಂದು ವಿಷಯವು ಎಲ್ಲವನ್ನೂ ಓಡಿಸುತ್ತದೆ ಮತ್ತು ಅದುವೇ ವಿದ್ಯುಚ್ಛಕ್ತಿ. ಆದುದರಿಂದ ಈ ಸಂಪೂರ್ಣ ವಿಶ್ವವು ಪ್ರಜ್ಞೆ ಅಥವಾ ಒಂದು ಶಕ್ತಿಯಾಗಿದೆ. ಈಗ, ವಿದ್ಯುಚ್ಛಕ್ತಿಯು ಒಳ್ಳೆಯದೇ ಅಥವಾ ಕೆಟ್ಟದ್ದೇ? ಎರಡೂ ಅಲ್ಲ. ನೀವು ನಿಮ್ಮ ಕೈಯನ್ನು ಸಾಕೆಟಿನೊಳಗೆ ಹಾಕಿ ನಿಮಗೆ ಶಾಕ್ ತಗಲಿದರೆ, ಅದು ಒಳ್ಳೆಯದೇ? ಆದರೆ ಅದೇ ಸಮಯದಲ್ಲಿ, ನಿಮಗೆ ಒಂದು ಶಾಕ್ ತಗಲಿದರೆ, ವಿದ್ಯುಚ್ಛಕ್ತಿ ಕೆಟ್ಟದ್ದೇ? ಅಲ್ಲ! ವಿದ್ಯುಚ್ಛಕ್ತಿ ಕೆಟ್ಟದ್ದೆಂದು ಹೇಳುವುದು ಮೂರ್ಖತನ. ಯಾಕೆಂದರೆ ಅದು ಅಷ್ಟೊಂದು ಸೌಕರ್ಯಗಳನ್ನು ನೀಡುತ್ತದೆ - ಬೆಳಕು, ಶಬ್ದ, ಗಾಳಿ, ಆಹಾರ - ಎಲ್ಲವೂ ವಿದ್ಯುಚ್ಛಕ್ತಿಯಿಂದ ಬರುತ್ತದೆ. ಅದೇ ಸಮಯದಲ್ಲಿ ವಿದ್ಯುಚ್ಛಕ್ತಿಯು ತುಂಬಾ ಹಾನಿಕಾರಕವಾದುದು. ನಿಮ್ಮ ಮನೆಯ ಮೇಲಿನಿಂದಾಗಿ ಹೈ ಟೆನ್ಶನ್ ತಂತಿಗಳು ಹಾದು ಹೋಗುತ್ತಿದ್ದರೆ, ಅಲ್ಲಿ ಬಹಳ ವಿಕಿರಣವಿರುತ್ತದೆ, ಅದು ತುಂಬಾ ಕೆಟ್ಟದು.
ಆದುದರಿಂದ ವಿದ್ಯುಚ್ಛಕ್ತಿಯು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು. ಅದಕ್ಕೇ ನಾವು ಹೇಳುವುದು, ಬ್ರಹ್ಮತತ್ವಂ ಅಥವಾ ಜೀವವು ಒಳ್ಳೆಯದು ಮತ್ತು ಕೆಟ್ಟದ್ದರ ಆಚಿನದು. ಒಳ್ಳೆಯದು ಮತ್ತು ಕೆಟ್ಟದು ಯಾವತ್ತೂ ಸಾಪೇಕ್ಷವಾದುದು. ಯಾವುದೇ ಕೆಟ್ಟದು ಅಥವಾ ಯಾವುದೇ ಒಳ್ಳೆಯದು ಇಲ್ಲ, ಅದೆಲ್ಲವೂ ಅದರಾಚಿನದು, ಇರುವುದು ಒಂದೇ - ಅದು ತತ್ವ ಜ್ಞಾನ ಎಂದು ಕರೆಯಲ್ಪಡುತ್ತದೆ, ಸತ್ಯ ಜ್ಞಾನ.
ಪ್ರಶ್ನೆ: ಪ್ರೀತಿಯ ಗುರೂಜಿ, ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಾರೆ ಮತ್ತು ತಮಗೆ ಕೊರತೆಯಿದೆಯೆಂದುಕೊಂಡಾಗ ಬಡವರು ಇನ್ನೂ ಹೆಚ್ಚು ಬಡವರಾಗುತ್ತಾರೆ ಎಂದು ನೀವು ಉಲ್ಲೇಖಿಸಿದಿರಿ. ಈ ಅಸಮತೋಲನಗಳನ್ನು ಪ್ರಕೃತಿಯು ಯಾವುದಾದರೂ ರೀತಿಯಲ್ಲಿ ಸರಿದೂಗಿಸುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಹೌದು, ಜ್ಞಾನದ ಮೂಲಕ. ಅದಕ್ಕೇ ನಾವು ಎಲ್ಲರನ್ನೂ ಆತ್ಮ ವಿಶ್ವಾಸ ಹೊಂದುವಂತೆ ಮತ್ತು ’ಕೊರತೆ’ಯ ಪ್ರಜ್ಞೆಯಿಂದ ಹೊರಬರುವಂತೆ ಪ್ರೋತ್ಸಾಹಿಸಬೇಕಾಗಿರುವುದು. ಇರುವವರು ಸೇವೆ ಮಾಡಲು ಪ್ರಾರಂಭಿಸಬೇಕು. ಇಲ್ಲದವರು, ತಮಗೆ ಬೇಕಾಗಿರುವುದು ಸಿಗುವುದೆಂದು ತಿಳಿಯಲು ಪ್ರಾರಂಭಿಸಬೇಕು ಮತ್ತು ಕಷ್ಟಪಟ್ಟು ಕೆಲಸ ಮಾಡಬೇಕು.
ಪ್ರಶ್ನೆ: ನೀವು ಗುರೂಜಿಯಾಗಲು ಇರುವವರೆಂದು ನಿಮಗೆ ತಿಳಿದದ್ದು ಯಾವಾಗ?
ಶ್ರೀ ಶ್ರೀ ರವಿಶಂಕರ್:
ರಾಮಾಯಣದಲ್ಲಿ ಒಂದು ಒಳ್ಳೆಯ ಕಥೆಯಿದೆ. ಒಂದು ಬೀದಿ ನಾಯಿಯು ಬೀದಿಯಲ್ಲಿ ನಡೆಯುತ್ತಿತ್ತು ಮತ್ತು ಯಾರೋ ಒಬ್ಬರು ಅದಕ್ಕೆ ಒಂದು ಕಲ್ಲನ್ನೆಸೆದು ಅದನ್ನು ಅಟ್ಟಿದರು. ಹಾಗೆ ನಾಯಿಯು ನ್ಯಾಯಾಲಯಕ್ಕೆ ಹೋಯಿತು. ಭಗವಾನ್ ರಾಮನ ನ್ಯಾಯಾಲಯದಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತಿತ್ತು ಎಂದು ಹೇಳಲಾಗುತ್ತದೆ, ಪ್ರಾಣಿಗಳಿಗೂ ಕೂಡಾ. ಆದುದರಿಂದ ನಾಯಿಯು ನ್ಯಾಯಾಲಯಕ್ಕೆ ಹೋಗಿ ಹೇಳಿತು, "ರಸ್ತೆಯಿರುವುದು ಎಲ್ಲರಿಗಾಗಿ. ಇಲ್ಲಿ ನಾಯಿಗಳಿಗೆ ಪ್ರವೇಶವಿಲ್ಲವೆಂದು ರಸ್ತೆಯ ಮೇಲೆಲ್ಲೂ ಹೇಳಿಲ್ಲ. ನಾನು ರಸ್ತೆಯ ಮೇಲೆ ನಡೆಯುತ್ತಿದ್ದೆ ಮತ್ತು ಈ ವ್ಯಕ್ತಿಯು ನನಗೆ ನೋಯಿಸಿದನು. ನೀವು ಅವನಿಗೆ ಶಿಕ್ಷೆ ಕೊಡಬೇಕು".
ಭಗವಾನ್ ರಾಮನು ಆ ವ್ಯಕ್ತಿಯಲ್ಲಿ ಇದು ನಿಜವೇ ಎಂದು  ಕೇಳಿದನು. ಆ ವ್ಯಕ್ತಿಗೆ ಸುಳ್ಳು ಹೇಳಲು ಸಾಧ್ಯವಾಗಲಿಲ್ಲ ಮತ್ತು ತಾನು ನಾಯಿಯನ್ನು ನೋಯಿಸಿದುದಾಗಿ ಒಪ್ಪಿಕೊಂಡನು. ಆ ದಿನಗಳಲ್ಲಿ, ಅಪರಾಧಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ಬಲಿಪಶುವಾದವನಲ್ಲಿ ಕೇಳುತ್ತಿದ್ದರು. ಆದುದರಿಂದ, ತನಗೆ ಕಲ್ಲಿನಿಂದ ನೋಯಿಸಿದ ವ್ಯಕ್ತಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ನಾಯಿಯಲ್ಲಿ ಕೇಳಿದಾಗ, ನಾಯಿಯೆಂದಿತು, "ಅವನನ್ನು ಒಂದು ಧಾರ್ಮಿಕ ಸಂಸ್ಥೆಯ ಮುಖ್ಯಸ್ಥನನ್ನಾಗಿ ಮಾಡಿ. ಅವನನ್ನು ಯಾವುದಾದರೂ ಆಶ್ರಮದ ಒಬ್ಬ ಗುರುವನ್ನಾಗಿ ಮಾಡಿ" ಎಂದು. ಜನರಂದರು, ಇದು ಬಹಳ ವಿಚಿತ್ರವಾದ ಶಿಕ್ಷೆಯೆಂದು. ನಾಯಿಯೆಂದಿತು, "ನೀವು ಯಾಕೆ ಕೇಳುತ್ತೀರಿ? ಸುಮ್ಮನೇ ಅವನನ್ನು ಆ ರೀತಿ ಮಾಡಿ. ನಾನು ಕೂಡಾ ನನ್ನ ಹಿಂದಿನ ಜನ್ಮದಲ್ಲಿ ಒಬ್ಬ ಗುರುವಾಗಿದ್ದೆ. ನೋಡಿ ಏನಾಯಿತು! ಆಗ ಸಾಯುವ ಮೊದಲು ನಾನಂದುಕೊಂಡೆ, ನಾನೊಂದು ಬೀದಿ ನಾಯಿಯಾಗಿರಬೇಕಿತ್ತು, ಅದು ಗುರುವಾಗಿರುವುದಕ್ಕಿಂತ ಚೆನ್ನಾಗಿರುತ್ತಿತ್ತು ಎಂದು. ನೋಡಿ, ಅದಕ್ಕೇ ನಾನೀಗ ಒಂದು ನಾಯಿಯಾಗಿರುವುದು. ನನಗೆ ಬಹಳ ಸಮಸ್ಯೆಗಳಿದ್ದವು. ಅವನು ಕೂಡಾ ಒಂದು ಆಶ್ರಮದ ಮುಖ್ಯಸ್ಥನಾಗಬೇಕು ಮತ್ತು ಆಗ ಅವನಿಗೆ ಜೀವನದ ಸಮಸ್ಯೆಗಳೆಂದರೇನು, ನೋವೆಂದರೇನು ಮತ್ತು ನರಳುವಿಕೆಯೆಂದರೇನು ಎಂಬುದರ ಅನುಭವವಾಗುತ್ತದೆ". ಇದು ರಾಮಾಯಣದಲ್ಲಿನ ಒಂದು ಹಾಸ್ಯ ಕಥೆ.
ನೋಡಿ, "ನಾನೊಬ್ಬ ಗುರು" ಎಂದು ಹೇಳುತ್ತಾ ಸುತ್ತುವವನು ಗುರುವಾಗುವುದಿಲ್ಲ. ತಾನು ಗುರುವೆಂಬುದಾಗಿ ಘೋಷಿಸಿಕೊಳ್ಳದಿರುವವನಲ್ಲಿ ಗುರು ತತ್ವವು ಪ್ರಕಟವಾಗುತ್ತದೆ. ಯಾರು ಸರಳವಾಗಿ ಮತ್ತು ಸಹಜವಾಗಿ ಉಳಿಯುತ್ತಾರೋ ಅವರು ಸದ್ಗುರು. ಈ ಗುರು ತತ್ವದ ಸ್ವಲ್ಪ ಅಂಶವು ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ಕೂಡಾ ಇದೆ. ನೀವು ಕೂಡಾ ಈಗೊಮ್ಮೆ ಆಗೊಮ್ಮೆ ಒಬ್ಬರಲ್ಲ ಒಬ್ಬರಿಗೆ ಸ್ವಲ್ಪ ಒಳ್ಳೆಯ ಸಲಹೆಯನ್ನು ಕೊಡುತ್ತೀರಿ ಮತ್ತು ನೀವು ಕೂಡಾ ನಿಮ್ಮ ಸುತ್ತಲಿರುವವರಿಗೆ ಪ್ರೀತಿ ಹಾಗೂ ಸಂತೋಷವನ್ನು ಹರಡುತ್ತೀರಿ, ಅಲ್ಲವೇ?!
ನಾವೇನು ಮಾಡಬೇಕು? ಏನನ್ನೂ ಹಿಂದಿರುಗಿ ಪಡೆಯಲು ಬಯಸದೆಯೇ ನಾವು ಇತರರನ್ನು ಪ್ರೀತಿಸಬೇಕು ಮತ್ತು ಇತರರಿಗೆ ಸೇವೆ ಮಾಡಬೇಕು. ಇದು ಮುಖ್ಯವಾದುದು. ಸಾಧಾರಣವಾಗಿ ನಾವು ಯೋಚಿಸುತ್ತೇವೆ, ನಾನು ಆ ವ್ಯಕ್ತಿಗೆ ಅಷ್ಟೊಂದು ಪ್ರೀತಿಯನ್ನು ನೀಡಿದೆ, ಅವನು ನನಗೆ ತಿರುಗಿ ಏನು ಕೊಟ್ಟ? ಈ ರೀತಿಯಲ್ಲಿ, ಒಬ್ಬ ವ್ಯಕ್ತಿಯನ್ನು ಪ್ರೀತಿಸುವ ಮೂಲಕ ನಾವು ಅವರಿಗೆ ಒಂದು ದೊಡ್ಡ ಉಪಕಾರವನ್ನು ಮಾಡಿದ್ದೇವೆಂದು ಆ ವ್ಯಕ್ತಿಯು ಅಂದುಕೊಳ್ಳುವಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ, ಇದನ್ನು ನಾವು ಮಾಡಬಾರದು.
ಪ್ರೀತಿಯೆಂಬುದು ನಿಮ್ಮ ಸ್ವಭಾವ. ಪ್ರೀತಿಯೆಂದರೆ, "ಓ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಹೇಳುತ್ತಾ ಇರುವುದೆಂದು ಅರ್ಥವಲ್ಲ. ಅಲ್ಲ! ಅದು ಯೋಗ್ಯವಾಗಿ, ಸಹಜವಾಗಿ, ಸಹಾನುಭೂತಿ ಮತ್ತು ಸರಳತೆಯೊಂದಿಗೆ ವರ್ತಿಸುವುದು ಮತ್ತು ನಾವು ಈ ಗುಣಗಳೊಂದಿಗೆ ಹುಟ್ಟಿದ್ದೇವೆ. ಕೆಲವೊಮ್ಮೆ ನೀವು ದೃಢವಾಗಿರಬೇಕಾದರೆ, ಆಗ ದೃಢವಾಗಿರಿ. ಸ್ವಲ್ಪ ಪ್ರೀತಿಯಿರುವಾಗ ಮಾತ್ರ ನಿಮಗೆ ಕೋಪಗೊಳ್ಳಲು ಸಾಧ್ಯ.
ಅದಾಗ್ಗೆಯೂ, ನಿಮ್ಮೆಲ್ಲಾ ಗುಣಗಳನ್ನು ಸಮರ್ಪಣೆ ಮಾಡಿ ಮತ್ತು ಟೊಳ್ಳು ಹಾಗೂ ಖಾಲಿಯಾಗಿ. ಗುರು ತತ್ವದ ಸಮೀಪ ಬರಲು ಇದನ್ನೇ ನೀವು ಮಾಡಬೇಕಾಗಿರುವುದು - ನಿಮ್ಮೆಲ್ಲಾ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳನ್ನು ಸಮರ್ಪಣೆ ಮಾಡಿ ಹಾಗೂ ಸಂತೋಷವಾಗಿರಿ.
ಪ್ರಶ್ನೆ: ಗುರೂಜಿ, ಹಿಂದಿನ ಕಾಲದಲ್ಲಿ, ಜನರು ವರ್ಷಗಟ್ಟಲೆ ಸಮಾಧಿಯಲ್ಲಿರುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಂದಿನ ಯುಗದಲ್ಲಿ, ಇಪ್ಪತ್ತು ನಿಮಿಷಗಳಲ್ಲಿ ಕೆಲಸ ಆಗಿ ಮುಗಿಯುತ್ತದೆ. ಆ ಕಥೆಗಳು ನಿಜವೇ?
ಶ್ರೀ ಶ್ರೀ ರವಿಶಂಕರ್:
ಹೌದು, ಹೇಗೆ ಒಬ್ಬರು ಸಮಾಧಿಯಲ್ಲಿ ಕುಳಿತುಕೊಂಡರು ಮತ್ತು ಕಾಲ ಸರಿಯುತ್ತಿದ್ದಂತೆ ಹೇಗೆ ಅವರ ಮೇಲೆ ಒಂದು ಹುತ್ತವು ಬೆಳೆಯಿತು ಎಂಬುದಾಗಿ ಅವರು ಕಥೆಗಳನ್ನು ಬರೆದರು. ಅದು ಆ ರೀತಿಯಲ್ಲ. ಅದು ಏನನ್ನು ಸೂಚಿಸುತ್ತದೆಯೆಂದರೆ, ಒಬ್ಬನು ಧ್ಯಾನದಲ್ಲಿ ಕುಳಿತುಕೊಳ್ಳುವಾಗ, ಇರುವೆಗಳು ಹರಿದಾಡುವಂತಹ ನಿರ್ದಿಷ್ಟ ಸಂವೇದನೆಗಳು ಮೈಮೇಲೆಲ್ಲಾ ಏಳುತ್ತವೆ. ಒಬ್ಬ ಒಳ್ಳೆಯ ಶಿಕ್ಷಕನಿದ್ದರೆ ಆಗ ಒಬ್ಬನು ಸುಲಭವಾಗಿ ಸಮಾಧಿಯನ್ನು ಹೊಂದಬಹುದು. ಒಬ್ಬರು ಗುರುವಿಲ್ಲದೆ, ಸಮಾಧಿಯನ್ನು ಅನುಭವಿಸಲು ಸಾಧ್ಯವಿಲ್ಲ.
ಪ್ರಶ್ನೆ: ಗುರೂಜಿ, ಕುಂಡಲಿನಿಯೆಂದರೇನು ಮತ್ತು ಕುಂಡಲಿನಿಯನ್ನು ಜಾಗೃತಗೊಳಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಕುಂಡ ಎಂದರೆ ಶರೀರ ಮತ್ತು ಕುಂಡಲಿನಿ ಎಂದರೆ ಈ ಶರೀರದಲ್ಲಿರುವ ಪ್ರಜ್ಞಾಶಕ್ತಿ. ಉನ್ನತ ಶಿಬಿರದಲ್ಲಿ ಧ್ಯಾನಗಳಲ್ಲಿ ಏನೆಲ್ಲಾ ಆಗುತ್ತದೆಯೋ ಅದೆಲ್ಲಾ ಕುಂಡಲಿನಿಯೇ ಆಗಿದೆ. ಕುಂಡಲಿನಿಯನ್ನು ವ್ಯಾಖ್ಯಾನಿಸಲು ಬೇರೆ ಯಾವುದೇ ಮಾರ್ಗವಿಲ್ಲ. ಧ್ಯಾನವಾಗಿದ್ದೇ ಆದರೆ, ಕುಂಡಲಿನಿಯನ್ನು ಜಾಗೃತಗೊಳಿಸದೆಯೇ ಅದಾಗಲು ಸಾಧ್ಯವಿಲ್ಲ. ನೀವು ಧ್ಯಾನದೊಳಕ್ಕೆ ಹೋಗಿದ್ದರೆ, ಅದರರ್ಥ ನಿಮ್ಮಲ್ಲಿ ಕುಂಡಲಿನಿಯು ಜಾಗೃತವಾಗಿದೆಯೆಂದು.
ಪ್ರಶ್ನೆ: ಗುರೂಜಿ, ನೀವು ಹೇಳಿದಂತೆ, ಜೀವನದಲ್ಲಿ ನಮಗೇನು ಬೇಕು ಅದು ಈಗಾಗಲೇ ನಮ್ಮಲ್ಲಿದೆಯೆಂದು ನಾವು ತಿಳಿದುಕೊಳ್ಳಬೇಕು. ನಾನು ನನ್ನ ಜೀವನದಲ್ಲಿ ಬಯಸುವ ಒಬ್ಬ ವ್ಯಕ್ತಿಯ ಬಗ್ಗೆಯೂ ನಾನು ಆ ರೀತಿ ಅಂದುಕೊಳ್ಳಬಹುದಾ?
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಆಗಲೂಬಹುದು ಆದರೆ ಅದು ಈ ಜನ್ಮದಲ್ಲಿಯೇ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅದು ಮುಂದಿನ ಜನ್ಮದಲ್ಲಿ ಅಥವಾ ಹತ್ತು ಜನ್ಮಗಳ ಬಳಿಕವೂ ಆಗಬಹುದು. ಅದಕ್ಕೇ ನಾನು ಹೇಳಿದುದು, ಒಂದು ಸಂಕಲ್ಪವು ಅದರದ್ದೇ ಆದ ಸಮಯದಲ್ಲಿ ಫಲಿಸುತ್ತದೆಯೆಂದು.
ಪ್ರಶ್ನೆ: ಗುರೂಜಿ, ನಾನು ಒಂದು ಒಳ್ಳೆಯ ಸಾಂಸಾರಿಕ ಜೀವನವನ್ನು, ಒಂದು ಒಳ್ಳೆಯ ವೃತ್ತಿಯನ್ನು, ಒಳ್ಳೆಯ ಅಂತರ್ವ್ಯಕ್ತೀಯ ಸಂಬಂಧಗಳನ್ನು ಹೊಂದಿದ್ದೇನೆ ಮತ್ತು ನಾನು ತುಂಬಾ ತೃಪ್ತನಾಗಿದ್ದೇನೆ ಹಾಗೂ ದೇವರು ನನ್ನೊಳಗಿದ್ದಾರೆ ಎಂಬುದನ್ನು ತಿಳಿದಿದ್ದೇನೆ. ಆದರೂ ಕೂಡಾ ನಾನು ಧ್ಯಾನ ಮಾಡಬೇಕೇ?
ಶ್ರೀ ಶ್ರೀ ರವಿಶಂಕರ್:
ನೋಡು, ಧ್ಯಾನವೆಂಬುದು ನೀನು ಏನನ್ನು ಹೊಂದಿದ್ದೀಯೋ ಅದನ್ನು ಉಳಿಸಿಕೊಳ್ಳುವಂತಹುದು. ನಿನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ, ನೀನು ಅದನ್ನು ಉಳಿಸಿಕೊಳ್ಳಲು ಬಯಸುತ್ತೀಯಾ? ನೀನು ಒಳ್ಳೆಯ ಆರೋಗ್ಯವನ್ನು, ಒಳ್ಳೆಯ ಸಂಬಂಧಗಳನ್ನು ಉಳಿಸಿಕೊಳ್ಳಲು ಬಯಸುತ್ತೀಯಾ? ಹಾಗಿದ್ದರೆ ನೀನು ಧ್ಯಾನ ಮಾಡಬೇಕು. ಧ್ಯಾನವು ಒತ್ತಡವನ್ನು ಕಡಿಮೆ ಮಾಡುತ್ತದೆ. ಇಲ್ಲದಿದ್ದರೆ ಮಾನಸಿಕ ಉದ್ವೇಗವು ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಐದರಿಂದ ಹತ್ತು ವರ್ಷಗಳ ಬಳಿಕ ನೀನು ಬಿರಿದು ಹೋಗುವೆ. ಧ್ಯಾನವು, ನೀನು ಮಾನಸಿಕವಾಗಿ ಸ್ವಸ್ಥನಾಗಿರಲು ಸಹಾಯ ಮಾಡುತ್ತದೆ ಮತ್ತು ನೀನು ಈಗಾಗಲೇ ಹೊಂದಿರುವುದನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕೇ ಅದು ಯೋಗಕ್ಷೇಮಂ ಎಂದು ಕರೆಯಲ್ಪಟ್ಟಿರುವುದು; ಯೋಗ ಎಂದರೆ ನಿಮ್ಮಲ್ಲಿಲ್ಲದುದನ್ನು ಹೊಂದಲು ಇರುವುದು ಮತ್ತು ಕ್ಷೇಮಂ ಎಂದರೆ ನಿಮ್ಮಲ್ಲಿ ಈಗಾಗಲೇ ಇರುವುದನ್ನು ಸಂರಕ್ಷಿಸಲು ಇರುವುದು. ನಿಮ್ಮಲ್ಲಿ ಈಗಾಗಲೇ ಇದ್ದು, ನೀವು ಅದನ್ನು ಉಳಿಸಿಕೊಳ್ಳಲು ಬಯಸಿದರೆ, ಆಗಲೂ ಕೂಡಾ ಧ್ಯಾನವು ಅಗತ್ಯವಾಗಿದೆ. ನಿಮ್ಮಲ್ಲಿ ಏನಾದರೂ ಇಲ್ಲದಿದ್ದರೆ, ಅದನ್ನು ಪಡೆಯಲು ಕೂಡಾ ನೀವು ಧ್ಯಾನ ಮಾಡಬೇಕು.