ಬುಧವಾರ, ಜುಲೈ 4, 2012

ಜೀವನಸೂತ್ರ, ಅಂತರ್ಮುಖಿ ಸದಾ ಸುಖಿ


05
2012............................... ’ಅಮೃತಬಿ೦ದು’ ಸರಣಿಯ ಬರಹಗಳು
Jul

ಮೊದಲನೆಯ ಕ೦ತು

ಜೀವನಸೂತ್ರ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೨/೦೩/೨೦೦೩ರ೦ದು ಪ್ರಕಟವಾಗಿತ್ತು)


ಜೀವನದಲ್ಲಿ ಸುಖವಾಗಿರಬೇಕು ಎನ್ನುವುದೇ ಪ್ರತಿಯೊಬ್ಬರ ಬಯಕೆ, ಹಂಬಲ. ಆದರೆ ಸುಖವಾಗಿರಲು ಏನು ಮಾಡಬೇಕು ಎನ್ನುವುದು ಪ್ರಶ್ನೆ. ಇದರ ಉತ್ತರ ಅತಿ ಸರಳ. ಸುಖವಾಗಿರಲು ಮುಖ್ಯವಾಗಿ ಮನಸ್ಸಿನಲ್ಲಿ ಪ್ರಸನ್ನತೆಯಿರಬೇಕು, ಸಂತೋಷವಾಗಿರಬೇಕು, ಹೌದಲ್ಲ? ಪ್ರಸನ್ನವಾಗಿರುವುದು ಹೇಗೆ ಅಂತ ಈಗ ವಿಚಾರ ಮಾಡೋಣ. ಉದಾಹರಣೆಗೆ ಒಂದು ಗಾಳಿಪಟ. ಅದು ಆಕಾಶದಲ್ಲಿ ಮೇಲೇರಬೇಕು ಎಂದರೆ ಏನು ಬೇಕು? ಒಂದು ಸೂತ್ರ ಬೇಕು, ದಾರದ ಉ೦ಡೆ ಬೇಕು - ಅದನ್ನು ಭೂಮಿಯಲ್ಲಿ ಹಿಡಿದಿಟ್ಟುಕೊಂಡಿರುವುದಕ್ಕೆ. ಹಾಗೆಯೇ ನಮ್ಮ ಜೀವನವೂ ಪ್ರಗತಿಯ ಕಡೆಗೆ ಸಾಗಬೇಕಾದರೆ, ಅನಂತದಲ್ಲಿ ವಿಸ್ತಾರವಾಗಬೇಕಾದರೆ ಅದಕ್ಕೆ ಒಂದುಸೂತ್ರ ಬೇಕು. ಶುಭ ಸೂತ್ರವೋ ಅಶುಭ ಸೂತ್ರವೋ ಎನ್ನುವುದರ ಮೇಲೆ ನಮ್ಮ ಜೀವನದ ದಿಶೆ, ದಿಕ್ಕು ನಿರ್ಭರವಾಗಿದೆ.
ಪ್ರತಿಯೊಬ್ಬರ ಜೀವನದಲ್ಲೂ ಎಳ್ಳಷ್ಟಾದರೂ ಶುಭ ಇದ್ದೇ ಇದೆ. ಒಂದು ಕಿಡಿಯಷ್ಟಾದರೂ ಬೆಳಕು ಇದ್ದೇ ಇದೆ. ಎಂತಹವರೇ ಆಗಿರಲಿ, ಪ್ರತಿಯೊಬ್ಬರ ಜೀವನದಲ್ಲಿಯೂ ಹುಡುಕಿದರೆ ಸ್ವಲ್ಪವಾದರೂ ಸುಖ, ಸಂತೋಷ, ಶುಭ ಇದ್ದೇಇರುತ್ತೆ. ಒಳ್ಳೆಯದು ಶೇಕಡ ಎಂಭತ್ತರಷ್ಟು ಇದ್ದರೆ, ಸಮಸ್ಯೆಗಳು ಶೇಕಡ ಇಪ್ಪತ್ತರಷ್ಟು ಇರುತ್ತದೆ. ಜೀವನದಲ್ಲಿ ನಾವು ಏನು ಮಾಡ್ತೀವಿ ಅಂದರೆ, ಇರುವ ಈ ಇಪ್ಪತ್ತನ್ನು ಎರಡು ಸಾವಿರ ಮಾಡಿಕೊಳ್ತೀವಿ, ಕೊರಗ್ತಾ ಇರ್ತೀವಿ.
ಸತ್ಯವನ್ನು, ಸುಂದರವನ್ನು, ಶಿವತ್ವವನ್ನು, ಜೀವನದಲ್ಲಿ ಒಳ್ಳೆಯದು ಯಾವುದಿದೆಯೋ ಅದನ್ನು ಹಿಡಿದುಕೊಳ್ಳಬೇಕು. ಆ ಸೂತ್ರ ಇಲ್ಲದಿದ್ದರೆ ಜೀವನದಲ್ಲಿ ಸಂತೋಷವಿರುವುದಕ್ಕೆ ಸಾಧ್ಯವಿಲ್ಲ, ಗಾಳಿಪಟ ನೆಲಕ್ಕೆ ಬಿದ್ದುಬಿಡುತ್ತದೆ.
ಗಾಳಿಪಟಕ್ಕೆ ಎಲ್ಲ ಇದ್ದು, ಬಾಲ೦ಗೋಚಿ ಇದ್ದು, ಸೂತ್ರವೇ ಇಲ್ಲದಿದ್ದರೆ ಮೇಲಕ್ಕೆ ಹೇಗೆ ಹೋಗುತ್ತೆ? ಶಿವಮಯವಾದ ಶುಭಸೂತ್ರ ಎಲ್ಲರ ಜೀವನದಲ್ಲೂ ಇದ್ದೇ ಇದೆ. ಶುಭ ಹೇಗೆ ಉಂಟಾಗುತ್ತದೆ? ನಮ್ಮ ಮನಸ್ಸು ಒಳಮುಖವಾದಾಗ ಮಾತ್ರ ಉಂಟಾಗುತ್ತದೆ. ಒಳಮುಖವಾಗೋದೆಂದರೆ ಏನು? ನಾಳೆ ವಿಚಾರ ಮಾಡೋಣ.

* * * * *


ಅಂತರ್ಮುಖಿ ಸದಾ ಸುಖಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೩/೦೩/೨೦೦೩ರ೦ದು ಪ್ರಕಟವಾಗಿತ್ತು)


ನಸ್ಸು ಅಂತರ್ಮುಖವಾದರೆ 'ನಮಃ' ಆಯ್ತು. ಬಹಿರ್ಮುಖವಾದರೆ ಮನಃ ಆಯ್ತು. ಮನಸ್ಸು ಹೊರಮುಖವಾಗಿ ಹೋದಷ್ಟೂ ಅದು ಗೊಂದಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ದುಃಖ ಅಂದರೆ ಏನು ಗೊತ್ತಾ? ಮನಸ್ಸು ಹೊರಗಡೆ ಹೊರಟುಹೋಯ್ತು ಅಂತ. ನಿಮ್ಮನ್ನು ನೀವು ಮರೆಯುವುದರ ಹೆಸರು ದುಃಖ, ನಿಮ್ಮನ್ನು ನೀವು ಸ್ಮರಣೆ ಮಾಡಿಕೊಳ್ಳುವುದರ ಹೆಸರು ಸುಖ.
ಯಾವುದರ ಬಗ್ಗೆ ಪ್ರೀತಿ ಉಂಟಾಗುತ್ತದೆಯೋ ಅದರ ಕಡೆಗೆ ಮನಸ್ಸು ಸಹಜವಾಗಿ ಓಡುತ್ತದೆ, ಅದನ್ನು ಕುರಿತು ಚಡಪಡಿಸುತ್ತದೆ. ಸುಖ ಉಂಟಾದಾಗಲೆಲ್ಲ ಜ್ಞಾಪಿಸಿಕೊಳ್ಳಿ - ನೀವು ನಿಮ್ಮ ಆತ್ಮನ ಜೊತೆಗೆ ಒಂದಾಗಿರುತ್ತೀರಿ, ಅದೇ ಕಾರಣದಿ೦ದ ಸುಖ ಉಂಟಾಗ್ತಾ ಇದೆ. ಆಗ ನಿಮ್ಮ ಮನಸ್ಸು ನಿಮ್ಮಲ್ಲಿರುತ್ತದೆ.
ಮನಸ್ಸಿನ ಹೊರ ಆಕರ್ಷಣೆ ಯಾವುದು? ಸಿರಿ, ಸಂಪತ್ತು, ಸೌಂದರ್ಯ... ಸುಂದರವಾಗಿರುವುದನ್ನು ಏನಾದರೂ ಕಂಡರೆ ಮನಸ್ಸು ಆ ಕಡೆ ಹೋಗುತ್ತದೆ ಅಲ್ವಾ? ದುಡ್ಡು-ಕಾಸು, ಸಂಪತ್ತು, ಯಶಸ್ಸು - ಮನಸ್ಸು ಅವುಗಳ ಕಡೆ ಧಾವಿಸುತ್ತೆ! ಈ ಪ್ರಪಂಚ ತಿರುಗುವುದೆಲ್ಲ ಒಂದೇ ಒಂದು ಅಕ್ಷರದ ಮೇಲೆ - ಅದು 'ಶ್ರೀ'. ವಿದ್ಯೆ, ಸುಖ, ಸೌಂದರ್ಯ, ಧನ, ಯಶಸ್ಸು ಯಾವುದನ್ನೇ ಅಪೇಕ್ಷಿಸಿದರೂ ಅದು ಒಂದೇ - 'ಶ್ರೀ'. 'ಶ್ರೀ'ಯ ಹಿಂದೆ ಇಡೀ ಪ್ರಪಂಚ ತಿರುಗುತ್ತಾ ಇದೆ. ಆದರೆ ಆ 'ಶ್ರೀ' ಹೇಗೆ ಸಿಗುತ್ತದೆ? ಸುಮ್ಮನೆ ತಿರುಗುವುದರಿಂದ ಸಿಗುತ್ತಾ? ಅದು ಸಿಗಬೇಕಾದರೆ ಮನಸ್ಸು ಅಂತರ್ಮುಖವಾಗಬೇಕು; ನಮಃ ಆದ ಕೂಡಲೇ 'ಶ್ರೀ'. ನಿಜವಾದ ಸಂಪತ್ತು ಉತ್ಪನ್ನವಾಗುತ್ತದೆ. ನಿಜವಾದ ಶ್ರೀ ನಿಮ್ಮ ಒಳಗೇ ಇದೆ. ನಿಜವಾದ ಸುಖ, ಸಂತೋಷ ದೊರಕುವುದು ಮನಸ್ಸು ಅಂತರ್ಮುಖವಾದಾಗ ಮಾತ್ರ. ಅದು ಶಾಂತಿದಾಯಕ ಸಂಪತ್ತು. ಅಂತರ್ಮುಖಿ ಸದಾ ಸುಖಿ. ಇದರ ಬಗ್ಗೆ ಇನ್ನೂ ವಿವರವಾಗಿ ವಿಚಾರ ಮಾಡೋಣ.