ಮಂಗಳವಾರ, ಜುಲೈ 17, 2012

ಶಿವಾನ೦ದ

ಜುಲೈ ೧೭, ೨೦೧೨

’ಅಮೃತಬಿ೦ದು’ ಸರಣಿಯ ಬರಹಗಳು

ಮೂರನೆಯ ಕ೦ತು

ವರ್ಣರಂಜಿತವಾದ ಆನಂದದಿಂದ ನಿಮ್ಮ ಚೈತನ್ಯವನ್ನು ಹೆಚ್ಚಿಸಿಕೊಳ್ಳಿ
(ಈ ಬರಹದ ಪ್ರಕಟಣೆ ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೭.೦೩.೦೩ರ೦ದು ಆರ೦ಭಗೊ೦ಡು ೩೦.೦೩.೦೩ರ೦ದು ಮುಕ್ತಾಯವಾಯಿತು)

ಪುರಾಣ ಎಂಬ ಶಬ್ದದ ಮೂಲ ಸಂಸ್ಕೃತದಲ್ಲಿ ’ಪುರೇ-ನವ’ ಎಂಬುದಾಗಿದೆ. ಎಂದರೆ ಪುರದಲ್ಲಿ (ನಗರದಲ್ಲಿ) ಯಾವುದು ಹೊಸದೋ (ನವ) ಅದು ಎಂಬುದು ಇದರ ಅರ್ಥ. ವಿಚಾರಗಳನ್ನು ತಿಳಿಸಲು ಅದೊಂದು ನವೀನವಾದ ಮಾರ್ಗ. ಪುರಾಣಗಳು ವರ್ಣರಂಜಿತ ದೃಷ್ಟಾಂತಗಳಿಂದ ಹಾಗೂ ಕಥೆಗಳಿಂದ ತುಂಬಿವೆ. ಮೇಲ್ನೋಟಕ್ಕೆ ಅವು ಕಾಲ್ಪನಿಕ ಕಟ್ಟುಕಥೆಗಳಂತೆ ಕಂಡುಬಂದರೂ, ಅವುಗಳಲ್ಲಿ ಸೂಕ್ಷ್ಮವಾದ ತತ್ವ (ಸತ್ಯ) ಅಡಗಿದೆ.
ಅಸುರರ ದೊರೆಯಾದ ಹಿರಣ್ಯಕಶಿಪುವು ಪ್ರತಿಯೊಬ್ಬರೂ ತನ್ನನ್ನು ಪೂಜಿಸಬೇಕೆಂದು ಬಯಸುತ್ತಿದ್ದ. ಅವನ ಮಗ ಪ್ರಹ್ಲಾದನಾದರೋ, ದೊರೆಯ ಆಜನ್ಮ ವೈರಿಯಾದ ನಾರಾಯಣನ ಪರಮ ಭಕ್ತನಾಗಿದ್ದ. ಇದರಿಂದಾಗಿ ಕೋಪಗೊಂಡ ದೊರೆಯು ಪ್ರಹ್ಲಾದನನ್ನು ನಿವಾರಿಸಿಕೊಳ್ಳಬೇಕೆಂದು ಇಚ್ಚಿಸಿ, ತನ್ನ ತಂಗಿಯಾದ ಹೋಲಿಕಾಗೆ ಅಗ್ನಿಯನ್ನೆದುರಿಸಿ ನಿಲ್ಲುವ ಶಕ್ತಿಯನ್ನು ನೀಡಿದ. ಅದರಂತೆ ಹೋಲಿಕಾ ತನ್ನ ಮಡಿಲಲ್ಲಿ ಪ್ರಹ್ಲಾದನನ್ನು ಕುಳ್ಳಿರಿಸಿಕೊಂಡು ಉರಿಯುತ್ತಿರುವ ಚಿತೆಯಲ್ಲಿ ಕುಳಿತು ಭಸ್ಮವಾದಳು. ಪ್ರಹ್ಲಾದ ಏನೂ ಆಗದವನ೦ತೆ, ಪೂರ್ಣ ಸುರಕ್ಷಿತನಾಗಿ, ಅಗ್ನಿಕು೦ಡದಿ೦ದೆದ್ದು ಹೊರಗೆ ಬಂದ.
ಈ ಕಥೆಯಲ್ಲಿ ಹಿರಣ್ಯಕಶಿಪುವು ಜಡವಾದ ಸ್ಥೂಲವಾದ ಐಹಿಕತೆಯ ಪ್ರತೀಕವೆನಿಸಿದರೆ, ಪ್ರಹ್ಲಾದನು ಮುಗ್ಧತೆಯ, ಶ್ರದ್ಧೆ ನಂಬಿಕೆ ಸಂತೋಷ ಆನಂದಗಳ ಸಾಕಾರನಾಗುತ್ತಾನೆ. ಚೇತನವು ಐಹಿಕವಾದುದರಲ್ಲಿ ಮಾತ್ರ ರುಚಿಯನ್ನು, ಪ್ರೀತಿಯನ್ನು ಕಾಣುವಂತಹ ಮಿತಿಗೊಳಪಡಲು ಸಾಧ್ಯವೇ ಇಲ್ಲ . ಹಿರಣ್ಯಕಶಿಪುವೇನೋ ಎಲ್ಲಾ ಸಂತೋಷಗಳನ್ನೂ ಐಹಿಕ ಪ್ರಪಂಚದಿಂದಲೇ ಬಯಸಿದ. ಆದರೆ ಅದು ಆ ರೀತಿ ನಡೆಯಲಿಲ್ಲ.
(ಇದು ೨೭.೦೩.೦೩ ರ೦ದು ಪ್ರಕಟವಾದ ಭಾಗ)

ಹಿಕವಾದುದು (ನಶ್ವರವಾದುದು) ಯಾವುದೇ ಒಂದು ಜೀವಾತ್ಮನನ್ನು ಸದಾಕಾಲಕ್ಕೂ ಪರಿಮಿತಿಗೊಳಪಡಿಸಲು ಸಾಧ್ಯವಿಲ್ಲ. ಕಟ್ಟಕಡೆಗೆ ನಾರಾಯಣನ (ಭಗವಂತನ) ಕಡೆಗೆ ಸಾಗುವುದು, ಯಾವುದೇ ಒಂದು ಉನ್ನತಾತ್ಮಕ್ಕಾದರೂ ತೀರಾ ಸಹಜವಾದುದು.
ಇಲ್ಲಿ ಹೋಲಿಕಾ ಭೂತಕಾಲದಲ್ಲಿ ಅನುಭವದ ಹೊರೆಗಳ ಪ್ರತೀಕವಾಗುತ್ತಾಳೆ. ಅದು ಪ್ರಹ್ಲಾದನನ್ನು ಎಂದರೆ ಮುಗ್ಧತೆ ಸಂತೋಷಗಳನ್ನು ನಾಶಮಾಡಲು ಪ್ರಯತ್ನಿಸುತ್ತದೆ. ಆದರೆ ಪ್ರಹ್ಲಾದನ ಅಂತರಾಳದಲ್ಲಿ ಬೇರೂರಿದ್ದ ಅಪಾರವಾದ ನಾರಾಯಣನ ಭಕ್ತಿಯು ಅವನ ಎಲ್ಲಾ ಪೂರ್ವ ಸಂಸ್ಕಾರಗಳನ್ನು ಭಸ್ಮ ಮಾಡಿ, ವರ್ಣರಂಜಿತವಾದ ಹೊಸ ಆನಂದದ ಚಿಲುಮೆಯು ಚಿಮ್ಮುವಂತೆ ಮಾಡಲು ಶಕ್ತವಾಗಿತ್ತು. ಜೀವನವೇ ಸಂಭ್ರಮದಿಂದ ತುಂಬಿದ ಉತ್ಸವವಾಯಿತು.
ಗತ ಸಂಸ್ಕಾರಗಳು ಭಸ್ಮವಾಗುತ್ತಿದ್ದಂತೆ ಜೀವನದಲ್ಲಿ ನೀನು ಶುಭಾರಂಭಕ್ಕೆ ಅಣಿಯಾಗಿಬಿಡುತ್ತೀಯ. ನಿನ್ನ ಭಾವೋದ್ವೇಗಗಳು ಅಗ್ನಿಯಂತೆ ನಿನ್ನನ್ನು ಸುಡುತ್ತವೆ. ಆದರೆ ಅವು ವರ್ಣರಂಜಿತ ಕಾರಂಜಿಯಾದಾಗ ಅವು ನಿನ್ನ ಜೀವನವನ್ನು ಚೆಲುವಾಗಿಸುತ್ತವೆ. ಅಜ್ಞಾನದಲ್ಲಿದ್ದಾಗ ಮನಸ್ಸಿನ ಭಾವನೆಗಳು ಹಿಂಸಿಸುತ್ತವೆ; ಸುಜ್ಞಾನದಿಂದ ತುಂಬಿದ್ದಾಗ ಅದೇ ಭಾವನೆಗಳು ರಂಗುರಂಗಾಗಿ ಮುದಗೊಳಿಸುತ್ತವೆ.
ನಮ್ಮ ಪ್ರತಿಯೊಂದು ಮನೋಭಾವನೆಯೂ ಒಂದೊಂದು ಬಣ್ಣದೊಂದಿಗೆ ಸಂಬಂಧವನ್ನು ಹೊಂದಿದೆ. ಕೋಪ - ಕೆಂಪು ವರ್ಣ, ಅಸೂಯೆ - ಹಸಿರು, ಚೈತನ್ಯ ಹಾಗೂ ಸಂತೋಷ - ಹಳದಿ, ಪ್ರೀತಿ- ಗುಲಾಬಿ ವರ್ಣ, ವೈಶಾಲ್ಯತೆ - ನೀಲಿ, ಶಾಂತಿ - ಬಿಳಿ, ತ್ಯಾಗ - ಕೇಸರಿ ಹಾಗೂ ಜ್ಞಾನ - ನೇರಳೆ ಬಣ್ಣ ಇತ್ಯಾದಿ.
ಜೀವನವು ಹೋಳಿಯಂತೆ ವರ್ಣಮಯವಾಗಿರಬೇಕು; ನೀರಸವಾಗಿರಬಾರದು. ಪ್ರತಿಯೊಂದು ಬಣ್ಣವೂ ನಿಚ್ಚಳವಾಗಿ ಕಾಣುವಂತಿದ್ದಾಗ ಅದು ವರ್ಣರಂಜಿತವಾಗಿರುತ್ತದೆ. ಎಲ್ಲಾ ಬಣ್ಣಗಳೂ ಮಿಶ್ರವಾಗಿಬಿಟ್ಟಾಗ ಕೊನೆಗೆ ಕಪ್ಪು (ಕತ್ತಲು) ನಿಮಗುಳಿಯುತ್ತದೆ.
(ಇದು ೨೮.೦೩.೦೩ ರ೦ದು ಪ್ರಕಟವಾದ ಭಾಗ) 

ದೇ ರೀತಿ ಜೀವನದಲ್ಲಿಯೂ ನಾವು ವಿಭಿನ್ನ ಪಾತ್ರ ನಿರ್ವಹಿಸುತ್ತೇವೆ. ಪ್ರತಿಯೊಂದು ಪಾತ್ರವೂ ಹಾಗೂ ಮನೋಭಾವವೂ ಶುದ್ಧವಾಗಿ, ಸ್ಪಷ್ಟವಾಗಿ ನಿರೂಪಿಸುವಂತಿರಬೇಕಾದುದು ಅತ್ಯವಶ್ಯಕ. ಭಾವನಾತ್ಮಕ ಗೊಂದಲಗಳು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ನೀನು ತಂದೆ ಆಗಿದ್ದಾಗ ತಂದೆಯ ಪಾತ್ರವನ್ನು ನಿರ್ವಹಿಸಬೇಕು. ನೀನು ಕಛೇರಿಯಲ್ಲಿದ್ದಾಗ ತಂದೆಯಂತೆ ಇರಲಾಗುವುದಿಲ್ಲ. ನಿನ್ನ ಜೀವನದಲ್ಲಿ ಈ ರೀತಿಯಾದ ನಿನ್ನ ವಿಭಿನ್ನ ಪಾತ್ರಗಳನ್ನು ಮಿಶ್ರ ಮಾಡಿಕೊಂಡಾಗ ನೀನು ತಪ್ಪುಗಳನ್ನು ಮಾಡಲು ಪ್ರಾರಂಭಿಸಿಬಿಡುವೆ. ಜೀವನದಲ್ಲಿ ನೀನು ಯಾವುದೇ ಪಾತ್ರ ಮಾಡುವಾಗಲೂ ನಿನ್ನನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೋ, ಅದನ್ನು ಪರಿಪೂರ್ಣವಾಗಿ ಮಾಡು.
ಎಲ್ಲಾ ವಿಭಿನ್ನತೆಯ ನಡುವೆಯೂ ಏರ್ಪಡುವ ಸಾಮರಸ್ಯವು ಜೀವನವನ್ನು ಚೈತನ್ಯಪೂರ್ಣ, ವರ್ಣರ೦ಜಿತ, ಸಂತೋಷಯುಕ್ತವನ್ನಾಗಿಸುತ್ತದೆ.
(ಇದು ೨೯.೦೩.೦೩ ರ೦ದು ಪ್ರಕಟವಾದ ಭಾಗ)

ಪುರಾಣದ ಒಂದು ಕಥೆ ಈ ರೀತಿಯಾಗಿದೆ.
ಶಿವನು ಸಮಾಧಿಯಲ್ಲಿ ಮಗ್ನನಾಗಿದ್ದು, ಪಾರ್ವತಿಯು ತಪಸ್ಸನ್ನಾಚರಿಸುತ್ತಿದ್ದ ಸನ್ನಿವೇಶ. ಎರಡು ದಿವ್ಯತೆಗಳ ದೈವಿಕವಾದ ಸಂಯೋಗವನ್ನು ಸುಗಮಗೊಳಿಸುವುದಕ್ಕಾಗಿ ಪ್ರೀತಿಯ ಅಧಿದೇವತೆಯಾದ ಮನ್ಮಥನು ಶಿವನಿಂದ ಭಸ್ಮಗೊಳಿಸಲ್ಪಟ್ಟು ಹತನಾಗುತ್ತಾನೆ. ಶಿವನು ಪಾರ್ವತಿಯನ್ನು ಸೇರುವುದಕ್ಕಾಗಿ ಹಾಗೂ ಸೃಷ್ಟಿಯಲ್ಲಿ ಸಂಭ್ರಮ ಉತ್ಸಾಹಗಳುಂಟಾಗುವಂತೆ ಮಾಡುವುದಕ್ಕಾಗಿ ತನ್ನ ಸಮಾಧಿ ಅವಸ್ಥೆಯಿಂದ ಹೊರಬರುತ್ತಾನೆ.
ಪರ್ವ ಎಂದರೆ ಹಬ್ಬ. ಪಾರ್ವತಿ ಎಂದರೆ ಹಬ್ಬ ಅಥವಾ ಸಂಭ್ರಮದಿಂದ ಜನಿಸಿದ್ದು ಎಂದರ್ಥ.
ಸಮಾಧಿಯು ಸಂಭ್ರಮದೊಡನೆ ಸಂಯೋಗ ಹೊಂದಲು (ಸೇರಲು) ಆಸೆಯು ಅವಶ್ಯಕ. ಆದ್ದರಿಂದ ಆಸೆಯು (ಕಾಮ) ಆಹ್ವಾನಿತವಾಯಿತು. ಆದರೆ ಮತ್ತೆ ಉತ್ಸಾಹ ಸಂಭ್ರಮಗಳಿಂದಿರಲು ಆಸೆಯನ್ನು ಗೆಲ್ಲಬೇಕಾದ ಅವಶ್ಯಕತೆಯಿದೆ. ಆದ್ದರಿಂದ ಶಿವ ತನ್ನ ಮೂರನೆಯ ಕಣ್ಣನ್ನು ತೆರೆದು ಕಾಮನನ್ನು ಭಸ್ಮಗೊಳಿಸಿದ. ಯಾವಾಗ ಮನದಲ್ಲಿ ಆಸೆ (ಬಯಕೆ) ಸುಟ್ಟುಹೋಯಿತೋ ಉತ್ಸಾಹ ಸಂಭ್ರಮಗಳು ತಾನೇ ತಾನಾಗಿ ಏರ್ಪಟ್ಟವು.
ವಿರಾಗ (ವೈರಾಗ್ಯ) ಅವಸ್ಥೆಯೆಂದರೆ ರಸವಿಹೀನವಾಗುವುದಲ್ಲ; ವರ್ಣಮಯತೆಯನ್ನು ಕಳೆದುಕೊಳ್ಳುವುದಲ್ಲ. ಎಷ್ಟೋ ಸಲ ಅದು ನೀರಸವೆಂದೋ, ಏಕತಾನತೆಯೆಂದೋ ತಿಳಿಯಲ್ಪಟ್ಟಿದೆ. ಆದರೆ, ವಾಸ್ತವವಾಗಿ ಅದು ಎಲ್ಲಾ ವರ್ಣಗಳಿಂದ ತುಂಬಿ ನವರಸಭರಿತವಾಗಿದೆ.
(ಇದು ೩೦.೦೩.೦೩ ರ೦ದು ಪ್ರಕಟವಾದ ಭಾಗ)

ಒಟ್ಟಾರೆಯಾಗಿ ಇದು ಒ೦ದು ಆ೦ಗ್ಲ ಲೇಖನದ ಕನ್ನಡಾನುವಾದ. ಆ೦ಗ್ಲ ಲೇಖನ ೨೦೦೩ರ ಮಾರ್ಚ್ ತಿ೦ಗಳಿನ ಹೋಳೀ ಹಬ್ಬದ ಸಂದರ್ಭದಲ್ಲಿ ’ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಯಲ್ಲಿ ಪೂಜ್ಯ ಗುರೂಜಿಯವರ ಜ್ಞಾನಪತ್ರ ರೂಪದಲ್ಲಿ ಪ್ರಕಟವಾಗಿತ್ತು.