ಮಂಗಳವಾರ, ಜುಲೈ 3, 2012

ಗುರು ಪೂರ್ಣಿಮೆಯಂದು ಶ್ರೀ ಶ್ರೀಯವರ ಸಂದೇಶ

03
2012
Jul
ಬೂನ್, ಉತ್ತರ ಕ್ಯಾರೋಲಿನಾ, ಅಮೆರಿಕ

ಶ್ವರೋ ಗುರುರಾತ್ಮೇತಿ ಮೂರ್ತಿಭೇದಾ ವಿಭಾಗಿನೆ |
ವ್ಯೋಮವದ್ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||
( ಗುರುಗಳು, ಆತ್ಮ ಹಾಗೂ ಪರಮಾತ್ಮರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವ್ಯೋಮದೆಲ್ಲೆಡೆ ವ್ಯಾಪಿಸಿರುವ ಪರಮಾತ್ಮನ ಸಾಕಾರ ರೂಪವಾದ ಪ್ರಭು  ದಕ್ಷಿಣಾಮೂರ್ತಿಗೆ ಪ್ರಣಾಮಗಳು.)

ಗುರುಗಳು, ಆತ್ಮ ಹಾಗೂ ಪರಮಾತ್ಮರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇವು ಮೂರೂ ಒಂದೇ – ನಿಮ್ಮ ಆತ್ಮ, ಗುರು ತತ್ವ ಮತ್ತು ಪರಮಾತ್ಮ. ಇವು ಮೂರೂ ದೈಹಿಕವಾದ ರೂಪವಲ್ಲ. ಅವರ ದೇಹ ಹೇಗಿದೆ? ಅದು ಆಕಾಶದ ಹಾಗಿದೆ.

’ವ್ಯೋಮವದ್ವ್ಯಾಪ್ತ ದೇಹಾಯ’ ನೀವು ದೇಹವಲ್ಲ, ನೀವು ಆತ್ಮ. ಆತ್ಮದ ಆಕಾರವು ವ್ಯೋಮದ ಹಾಗಿದೆ. ಗುರುಗಳ ವಿಷಯದಲ್ಲಿಯೂ ಇದು ನಿಜ ಗುರುಗಳನ್ನು ಸೀಮಿತವಾದ ದೇಹವೆಂದು ಪರಿಗಣಿಸಬೇಡಿ. ಗುರುವು ಸರ್ವವ್ಯಾಪಿಯಾದ ಶಕ್ತಿ, ಕ್ಷೇತ್ರ ; ಆತ್ಮವೂ ಅಷ್ಟೇ. ಗುರುಗಳನ್ನು ಆದರಿಸುವುದು ನಿಮ್ಮ ಆತ್ಮವನ್ನು ಆದರಿಸಿದ ಹಾಗೆ. 

ಪುರಾಣದಲ್ಲಿ ಒಂದು ಸುಂದರವಾದ ಕಥೆಯಿದೆ. ಶಿವನು ಇಡೀ ಸೃಷ್ಟಿಯ ಗುರು. ಅವನು ಎಲ್ಲ ದೇವತೆಗಳ ಗುರು. ಅವನನ್ನು ಆದಿಗುರು ಎನ್ನುತ್ತಾರೆ – ಆದಿಕಾಲದಿಂದಲೂ ಇರುವ ಗುರು, ಅವನು ಕಾಲಾತೀತನು. ಶಿವನಿಗೆ ಕಾರ್ತಿಕೇಯನೆಂಬ ಮಗನಾದಾಗ ವಿದ್ಯಾಭ್ಯಾಸಕ್ಕಾಗಿ ಅವನನ್ನು ಬ್ರಹ್ಮದೇವರ ಹತ್ತಿರ ಕಳುಹಿಸಲಾಯಿತು. ನಾರಾಯಣಂ ಪದ್ಮಭವಂ – ಬ್ರಹ್ಮದೇವನು ಪದ್ಮಭವ. (ಪದ್ಮದ ಮೇಲೆ ಆಸೀನನಾದವನು). ಬ್ರಹ್ಮದೇವರು ಗುರುಗಳು, ಹಾಗೂ ಅವರ ಗುರುಗಳು ಶ್ರೀಮನ್ನಾರಾಯಣ ಮತ್ತು ಶಿವನು ಶ್ರೀಮನ್ನಾರಾಯಣನ ಗುರು.

ತಂದೆ ತಾಯಿಯರು ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳುಹಿಸುವ ಹಾಗೆ ಪರಮೇಶ್ವರನೂ ಸಹ ತನ್ನ ಮಗನನ್ನು ವಿದ್ಯೆ ಹಾಗೂ ಜ್ಞಾನಾರ್ಜನೆಗಾಗಿ ಬ್ರಹ್ಮದೇವರ ಹತ್ತಿರ ಕಳುಹಿಸಿದನು. ಹಾಗಾಗಿ ಕಾರ್ತಿಕೇಯನು ಬ್ರಹ್ಮದೇವರಿಗೆ ’ನನಗೆ ಓಂಕಾರದ ಅರ್ಥವನ್ನು ಹೇಳಿ’ ಎಂದು ಕೇಳಿದನು.

ಬ್ರಹ್ಮದೇವರು ’ಮೊದಲು ಅಕ್ಷರಗಳನ್ನು ಕಲಿ! ನೀನು ನೇರವಾಗಿ ಓಂಕಾರದ ಅರ್ಥವನ್ನು ಕೇಳುತ್ತಿರುವೆಯಲ್ಲ’ ಎಂದರು.
ಕಾರ್ತಿಕೇಯನು ’ಇಲ್ಲ, ನಾನು ಮೊದಲು ಓಂ ಎಂಬ ಪರಮಜ್ಞಾನವನ್ನು ತಿಳಿಯಲು ಇಚ್ಛಿಸುತ್ತೇನೆ’ ಎಂದನು. ಬ್ರಹ್ಮದೇವರಿಗೆ ಎಲ್ಲ ಅಕ್ಷರಜ್ಞಾನವಿತ್ತು, ಆದರೆ ಅವರಿಗೆ ಓಂಕಾರದ ಅರ್ಥ ಗೊತ್ತಿರಲಿಲ್ಲ. ಏಕೆಂದರೆ ಅವರ ಜ್ಞಾನವು ಓಂಕಾರದ ’ಅ’ ಕಾರಕ್ಕೆ ಮಾತ್ರ ಸೀಮಿತವಾಗಿತ್ತು. ’ಉ’ ಕಾರವು ವಿಷ್ಣುವಿಗೆ ಹಾಗೂ ’ಮ್’  ಕಾರವು ಶಿವನಿಗೆ ಸೇರಿತ್ತು. ಹಾಗಾಗಿ, ಬ್ರಹ್ಮದೇವರಿಗೆ ಓಂಕಾರದ ಬಗ್ಗೆ ಸಂಪೂರ್ಣವಾದ ಜ್ಞಾನವಿರಲಿಲ್ಲ. ಆಗ ಕಾರ್ತಿಕೇಯನು ’ನಿಮಗೆ ಓಂಕಾರದ ಅರ್ಥವೇ ತಿಳಿದಿಲ್ಲ, ನನಗೆ ಹೇಗೆ ಕಲಿಸುವಿರಿ? ನಾನು ನಿಮ್ಮಲ್ಲಿ ವಿದ್ಯೆಯನ್ನು ಕಲಿಯುವುದಿಲ್ಲ’ ಎಂದು ತನ್ನ ತಂದೆಯಾದ ಶಿವನ ಹತ್ತಿರ ಹೋದನು.

ಬ್ರಹ್ಮದೇವರು ಶಿವನಿಗೆ ’ನಿನ್ನಿಂದ ಮಾತ್ರ ನಿನ್ನ ಮಗನನ್ನು ನಿಭಾಯಿಸಲು ಸಾಧ್ಯ. ನನ್ನಿಂದ ಸಾಧ್ಯವಿಲ್ಲ. ನಾನೊಂದು ಹೇಳಿದರೆ ಅವನೊಂದು ಹೇಳುತ್ತಾನೆ. ನಾನು ಏನೇ ಮಾತನಾಡಿದರೂ ಅದಕ್ಕೆ ವಿರುದ್ಧವಾಗಿ ಅವನು ಮಾತನಾಡುತ್ತಾನೆ. ಅವನ ವಿದ್ಯಾಭ್ಯಾಸವು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ಅವನ ಒಳಿತನ್ನು ನೀನೇ ನಿರ್ಧರಿಸು’ ಎಂದು ತಿಳಿಸಿದರು. ಇದನ್ನು ಕೇಳಿ ಶಿವನು ಕಾರ್ತಿಕೇಯನನ್ನು ಕೇಳಿದನು, ’ಏನಾಯಿತು ಮಗುವೇ? ಬ್ರಹ್ಮದೇವರು ಇಡೀ  ಬ್ರಹ್ಮಾಂಡದ ಸೃಷ್ಟಿಕರ್ತ. ನೀನು ಅವರಿಂದ ವಿದ್ಯಾರ್ಜನೆ ಮಾಡಬೇಕು’ ಎಂದು.

ಆಗ ಕಾರ್ತಿಕೇಯನು, ’ಹಾಗಾದರೆ ಓಂಕಾರದ ಅರ್ಥವೇನೆಂದು ಹೇಳಿ’ ಎಂದು ಉತ್ತರಿಸಿದನು. ಶಿವನು ನಸುನಕ್ಕು ’ ನನಗೂ ಗೊತ್ತಿಲ್ಲ’ ಎಂದನು. ಆಗ ಕಾರ್ತಿಕೇಯನು ’ಹಾಗಾದರೆ ನಾನು ನಿಮಗೆ ಹೇಳುವೆ, ನನಗೆ ಓಂಕಾರದ ಅರ್ಥ ಗೊತ್ತು.’ ಎಂದನು.
ಶಿವನು 'ಹಾಗಾದರೆ ನಿನಗೆ ಗೊತ್ತಿದ್ದರೆ ನನಗೆ ಹೇಳು' ಎಂದನು. ಅದಕ್ಕೆ ಕಾರ್ತಿಕೇಯನು 'ಹೀಗೆ  ಹೇಳಲಾಗುವುದಿಲ್ಲ. ನೀವು ನನಗೆ ಗುರುವಿನ ಸ್ಥಾನವನ್ನು ನೀಡಬೇಕು. ನೀವು ನನ್ನನ್ನು ಗುರುಪೀಠದಲ್ಲಿ ಮಂಡಿಸಿದಾಗ ಮಾತ್ರ ನಾನು ಹೇಳುವೆ' ಎಂದನು.   ಗುರುವು ಸದಾ ಉನ್ನತವಾದ ವೇದಿಕೆಯಲ್ಲಿರಬೇಕು. ಶಿಕ್ಷಕರು ಉನ್ನತವಾದ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಹಾಗೂ ವಿದ್ಯಾರ್ಥಿಯು ಕೆಳಗೆ ಕುಳಿತು ಆಲಿಸಬೇಕು. ಈಗ ಕಾರ್ತಿಕೇಯನನ್ನು ಎಲ್ಲಿ ಕೂರಿಸುವುದು? ಶಿವನಿಗಿಂತ ಉನ್ನತವಾದುದು ಎನೂ ಇಲ್ಲ! ಅವನು ಅತ್ಯುನ್ನತ. ಅವನು ಕೈಲಾಸಕ್ಕಿಂತಲೂ ಉನ್ನತ. ಕೈಲಾಸವೂ ಕೂಡ ಅವನಿಗಿಂತ  ಕೆಳಸ್ಥಾನದಲ್ಲಿದೆ. ಏನು ಮಾಡುವುದು? ಏನು ಮಾಡುವುದೆಂದು ಶಿವನಿಗೂ ತಿಳಿಯಲಿಲ್ಲ. ಆಗ ಪಾರ್ವತಿ  ದೇವಿಯು ’ಅವನನ್ನು ನಿಮ್ಮ ಭುಜದ ಮೇಲೆತ್ತಿಕೊಳ್ಳಿ’ ಎಂದು ಹೇಳಿದಳು. ಶಿವನು ಅವನನ್ನು ಭುಜದ ಮೇಲೆತ್ತಿಕೊಂಡು ಎತ್ತರದಲ್ಲಿರಿಸಿದನು. ಶಿವನ ಕಿವಿಯಲ್ಲಿ ಕಾರ್ತಿಕೇಯನು ಪರಮಸತ್ಯವಾದ ಓಂಕಾರದ ಅರ್ಥವನ್ನು ತಿಳಿಸಿದನು!

ಇಲ್ಲಿ ಸಾಂಕೇತಿಕ ಅರ್ಥವೇನೆಂದರೆ ಗುರು ತತ್ವವು ಸಣ್ಣ ಮಗುವಿನಂತೆ. ಗುರು ತತ್ವದಲ್ಲಿ ಮುಗ್ಧತೆ ಹಾಗೂ ಮಾಧುರ್ಯವಿದೆ. ಆ ಗುರು ತತ್ವವನ್ನು ಶಿವನು ಉನ್ನತಕ್ಕೆ ಏರಿಸಬೇಕಾಯಿತು. ದೇವರಾದ ಶಿವನೂ ಸಹ ತನಗಿಂತಲೂ ಉನ್ನತವಾದ ಸ್ಥಾನವನ್ನು ಗುರು ತತ್ವಕ್ಕೆ  ಕೊಡಬೇಕಾಯಿತು. ಏಕೆಂದರೆ ಅಂತಹ ಸಂದರ್ಭದಲ್ಲಿ ಮಾತ್ರ  ಜ್ಞಾನ ನೀಡುವೆ ಎಂದು ಕಾರ್ತಿಕೇಯನು ಹೇಳಿದನು.

ಇದು ಹೇಗೆಂದರೆ ಬಾವಿಯಲ್ಲಿ ನೀರು ಇರುತ್ತದೆ ಆದರೆ ಸ್ನಾನ ಮಾಡಲು ನೀರನ್ನು ಮನೆಯ ಮೇಲಿನ ಟ್ಯಾಂಕ್ ಗೆ ಏರಿಸಬೇಕು. ಹಾಗೆಯೇ ಜ್ಞಾನಕ್ಕೆ ತನ್ನದೇ ಆದ ಸ್ಥಾನವನ್ನು ನೀಡಬೇಕು. ಗುರು ತತ್ವವನ್ನು ಆದರಿಸುವುದು ಜೀವನಕ್ಕೆ ಅತ್ಯಗತ್ಯ. ಅದನ್ನು ಆದರಿಸಿದಾಗ ನಿಮ್ಮ ಆತ್ಮವನ್ನು ಆದರಿಸಿದಂತೆ.

ಹಾಗಾಗಿ ಗುರು ತತ್ವವು ಶಿಶುವಿನಂತೆ ಎಂದು ಇಲ್ಲಿ ಹೇಳಿದೆ - ಮುಗ್ಧ, ಚತುರ, ಗಂಭೀರ, ಆದರೂ ವಿನಮ್ರ, ವಿನಯಶಿಶುವಿನಲ್ಲಿರುವ   ಎಲ್ಲ ಗುಣಗಳು ಗುರು ತತ್ವದ ಸೂಚನೆ. ಮತ್ತು ಗುರುತತ್ವವನ್ನು ಆದರಿಸುವುದು ನಮ್ಮನ್ನು ನಾವು ಆದರಿಸುವುದು, ನಮ್ಮ ಜೀವನವನ್ನು  ಆದರಿಸುವುದು ಎಂದರ್ಥ. ಅದುವೇ ಗುರುಪೂರ್ಣಿಮ - ಗುರುತತ್ವವನ್ನು ಆದರಿಸುವುದು ಮತ್ತು ಆಚರಿಸುವುದು

ಗುರುವನ್ನು ಆದರಿಸುವುದೆಂದರೆ ಜ್ಞಾನ, ವಿವೇಕ, ಮುಗ್ಧತೆ, ಪ್ರೇಮಗಳನ್ನು ಆದರಿಸುವುದು

ನಂತರ ಕಾರ್ತಿಕೇಯನು ಶಿವನಿಗೆ ಹೇಳಿದ್ದೇನು

'ಓಂ ಎಂದರೆ ಪ್ರೇಮ. ನೀವು ಪ್ರೇಮ, ನಾನು ಪ್ರೇಮ. ಇಲ್ಲಿರುವುದೆಲ್ಲವೂ ಪ್ರೇಮ ಮತ್ತು ಪ್ರೇಮದಿಂದ ತುಂಬಿ ಹೋಗಿದೆ. ಎಲ್ಲದರ ಸಾರ ಹಾಗೂ ರುಚಿ ಪ್ರೇಮವೇ. ಅಸ್ತಿತ್ವದಲ್ಲಿರುವುದೆಲ್ಲವೂ ಪ್ರೇಮ.' ಎಂದನು.

ಹೀಗೆ ಕಾರ್ತಿಕೇಯನು ಹೇಳಿದನು. ಓಂಕಾರದ ಅರ್ಥವು ವೇದಿಕೆಯಿಂದ ಬಂದುದು

ನಾವು ಇಂದು ಇಲ್ಲಿ ಕಲಿತಿದ್ದೇನು? ಪ್ರೇಮವು ಜೀವನದ ಸಾರ. ಅದು ಅತಿ ಕೋಮಲ. ಪ್ರೇಮ ಮತ್ತು ನಂಬಿಕೆಯನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ಗುರುವಿನ ಶರೀರವು ಪ್ರೇಮ ಮತ್ತು ನಂಬಿಕೆಯಿಂದ ಕೂಡಿದೆ. ಇದೇ ತಿರುಳು.

ಗುರುಪೂರ್ಣಿಮೆಯು ಪ್ರೇಮ ಮತ್ತು ನಂಬಿಕೆಯ ಪ್ರಾಮುಖ್ಯತೆಯನ್ನು ಅರಿತು ಸಂಭ್ರಮಿಸುವ ದಿನ. ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸುವ ರೀತಿಯನ್ನು ತಿಳಿಯುವ ದಿನ. ಅರ್ಥವಾಯಿತೇ?

ಈ ಕಥೆಯು ಬಲು ಸೊಗಸಾಗಿದೆ. ಗುರುತತ್ವವು ಮಗುವಿನಂತೆ. ಇದನ್ನು ನಾವು ಮುಂಚೆಯೂ ಹೇಳಿದ್ದೇವೆ. ಜಗತ್ತಿನಾದ್ಯಂತ ಸಾವಿರಾರು ನಮ್ಮ ಶಿಕ್ಷಕರಿದ್ದಾರೆ.  ಅವರೆಲ್ಲರೂ ಇದನ್ನು ಸ್ಮರಿಸಲಿ ಎಂದು ನಾವು ಇಚ್ಛಿಸುತ್ತೇವೆ – ’ನಿಮ್ಮ ಜೀವನವನ್ನು ಪವಿತ್ರ, ಪ್ರಾಮಾಣಿಕವನ್ನಾಗಿ ಮಾಡಿಕೊಳ್ಳಿ, ಆಗ ನಿಮಗೆ ಯಾವುದೇ ಕೊರೆತೆಯಿರುವುದಿಲ್ಲ’.

ನಾವು ಒಂದು ಮಾದರಿಯನ್ನು ತೋರಿದ್ದೇವೆ. ಈ ಎಲ್ಲ ವರ್ಷಗಳಲ್ಲಿ ಕಾಯಾ ವಾಚಾ ಹಾಗೂ ಮನಸಾ ನಾವು ಯಾರಿಗೂ ಯಾವುದೇ ಹಾನಿಯನ್ನುಂಟುಮಾಡಿಲ್ಲ. ಒಂದೇ ಒಂದು ಯೋಗ್ಯವಲ್ಲದ ಪದವನ್ನು ಆಡಿಲ್ಲ. 

ಅದರ ಶ್ರೇಯವನ್ನು ನಾವು ತೆಗೆದುಕೊಳ್ಳುವುದಿಲ್ಲ, ನಾವು ಇರುವುದೇ ಹಾಗೆ. ಆದರೆ ನೀವೂ ನಿಮ್ಮ ಜೀವನವನ್ನು ಕೋಮಲತೆ ಹಾಗೂ ಜಾಗರೂಕತೆಯಿಂದ ನಿಭಾಯಿಸಲಿ ಎಂದು ನಾವು ಇಚ್ಚಿಸುತ್ತೇವೆ. ಅದು ಸಂಭವ, ಅಸಂಭವವಲ್ಲ ಎಂದು ನಾವು ಹೇಳುತ್ತಿದ್ದೇವೆ. ಪವಿತ್ರವಾದ ಜೀವನವನ್ನು ನಡೆಸಿಯೂ ಸಹ ಪ್ರಪಂಚದಲ್ಲಿ ಯಶಸ್ವಿಯಾಗಲು ಸಾಧ್ಯ. ಆಗ ಮಾತ್ರ ನಿಜವಾದ ಯಶಸ್ಸು ಬರುವುದು; ನಾವು ಜ್ಞಾನದ, ವಿವೇಕದ ಮಾರ್ಗದಲ್ಲಿ ನಡೆದಾಗ

ಹಾಗಾಗಿ,  ನಮ್ಮ ಸಾವಿರಾರು ಶಿಕ್ಷಕರು ವಿನಮ್ರತೆಯನ್ನು ಸ್ಮರಿಸಲಿ; ವಿನೀತರಾಗಿರಿ; ವಿನಯ ಮತ್ತು ಗಾಂಭೀರ್ಯ! ವೈಭವೋಪೇತರಾಗಿ  ಹಾಗೂ ಗಂಭೀರರಾಗಿ. ವಿನಯವೆಂದರೆ ದುರ್ಬಲರಾಗಿರುವುದೆಂದಲ್ಲ. ಹಾಗೆ ವಿನೀತರಾಗಿ ದುರ್ಬಲವಾಗಿ ಯಾರು ಬೇಕಾದರೂ ಇರಬಹುದುಗಂಭೀರವಾಗಿರಲು ನೀವು ಕಠೋರರಾಗಬೇಕಿಲ್ಲ. ವಿನಮ್ರತೆಯೊಂದಿಗೆ ಗಾಂಭೀರ್ಯ. ತಿಳಿಯಿತೇ ?

ಸಾಮರ್ಥ್ಯದೊಂದಿಗೆ ಅನುಕಂಪ.
ಮುಗ್ಧತೆ ಮತ್ತು ಬುದ್ಧಿವಂತಿಕೆ.
ತಮಾಷೆಯೊಂದಿಗೆ ಜ್ಞಾನ.
ಪಾವಿತ್ರ್ಯದೊಂದಿಗೆ ಚಾರಿತ್ರ್ಯ.
ಬಲದೊಂದಿಗೆ ಸೂಕ್ಷ್ಮತೆ.

ಸಾಮಾನ್ಯವಾಗಿ ಸೂಕ್ಷ್ಮವಾದುದು ಬಲಶಾಲಿಯಾಗಿರುವುದಿಲ್ಲ. ಆದರೆ ಕೋಮಲತೆಯು ವಿಭಿನ್ನವಾದುದಲ್ಲವೇ?
ಗುರುವೆಂದರೆ ಜಾಗರೂಕವಾಗಿ ನಿರ್ವಹಿಸಿ ಎಂದರ್ಥ. (ನಗು). ಶಿಥಿಲ (ನಾಜೂಕು) ಅಲ್ಲ, ಆದರೂ ಜಾಗರೂಕತೆಯಿಂದ ನಿಭಾಯಿಸಿ.