ಗುರುವಾರ, ಜುಲೈ 12, 2012

ಸಾವಿನ ನಂತರ ಏನಾಗುವುದು?

12
2012
Jul
ಬಾಡ್ ಆಂತೋಗಾಸ್ತ್, ಜರ್ಮನಿ

ಪ್ರಶ್ನೆ: ಗುರೂಜಿ, ದಯವಿಟ್ಟು ನಮಗೆ ಜ್ಞಾನವನ್ನು ನೀಡಿ
ಶ್ರೀ ಶ್ರೀ ರವಿಶಂಕರ್:
ಅದಕ್ಕೆ ನೀನು ಪ್ರಶ್ನೆಗಳನ್ನು ಕೇಳಬೇಕು. ಜ್ಞಾನವೆಂದರೆ ನೀನು ಅದನ್ನು ಹೊರಕ್ಕೆಳೆಯಬೇಕು.
ಪ್ರಶ್ನೆ: ಪ್ರೀತಿಯೆಂದರೇನು?
ಶ್ರೀ ಶ್ರೀ ರವಿಶಂಕರ್:
ಎಲ್ಲಾ ಅಸ್ತಿತ್ವದ ತಳಹದಿ.
ನಿನ್ನ ಶರೀರದಲ್ಲಿರುವ ಎಲ್ಲಾ ಕೋಶಗಳೂ ಪರಸ್ಪರ ಪ್ರೀತಿಸುತ್ತವೆ, ಅದಕ್ಕೇ ಅವುಗಳು ಜೊತೆಯಲ್ಲಿರುವುದು. ಅವುಗಳು ಪರಸ್ಪರ ಪ್ರೀತಿಸುವುದನ್ನು ನಿಲ್ಲಿಸಿದ ದಿನ, ಅವೆಲ್ಲವೂ ಬೇರೆಬೇರೆಯಾಗುತ್ತವೆ. ತಿಳಿಯಿತಾ?
ಯಾವುದರಿಂದ ಎಲ್ಲವೂ ಜೊತೆಯಲ್ಲಿರಿಸಲ್ಪಟ್ಟಿದೆಯೋ, ಅಂತಹ ಒಂದು ವಸ್ತುವಿದ್ದರೆ ಮತ್ತು ನೀವದಕ್ಕೆ ಒಂದು ಹೆಸರನ್ನು ಕೊಡಲು ಬಯಸಿದರೆ, ನೀವದನ್ನು ಪ್ರೀತಿಯೆಂದು ಕರೆಯಬಹುದು. ಪ್ರೀತಿಯು ತಿರುಚಿದ ಭಾವನೆಯಲ್ಲ, "ಓಹ್, ನನಗೆ ನಿನ್ನನ್ನು ಬಿಟ್ಟು ಜೀವಿಸಲು ಸಾಧ್ಯವಿಲ್ಲ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ", ಮತ್ತು ಹೀಗೆಲ್ಲಾ. ಅದು ಪ್ರೀತಿಯಲ್ಲ. ಅದು ಕೇವಲ ಏನೋ ಭಾವನಾತ್ಮಕವಾದುದು. ಪ್ರೀತಿಯೆಂದರೆ (ಮೌನ) ..... ಅಷ್ಟೆ.
ಪ್ರೀತಿಯು ವರ್ಣನಾತೀತವಾದುದು. ನಿಮಗೆ ಅದನ್ನು ವಿವರಿಸಲು ಸಾಧ್ಯವಿಲ್ಲ, ಮತ್ತು ಅದನ್ನು ತಿಳಿಯದೇ ಇರುವ ಒಂದೇ ಒಂದು ಜೀವಿಯೂ ಈ ಭೂಮಿಯ ಮೇಲಿಲ್ಲ. ತಿಳಿಯಿತಾ? ಸಮುದ್ರದಿಂದ ಹಿಡಿದು ಪಕ್ಷಿಗಳ ವರೆಗೆ, ಒಂದು ಕೋಳಿಮರಿಯಿಂದ ಹಿಡಿದು ಒಬ್ಬ ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯ ವರೆಗೆ, ಪ್ರತಿಯೊಬ್ಬರೂ ಪ್ರೀತಿಯನ್ನು ಅನುಭವಿಸಿದ್ದಾರೆ. ಅದು ಜೀವನಕ್ಕಾಗಿರುವ ಪ್ರೀತಿಯೆಂದು ನಾವು ಯೋಚಿಸುವುದು, ಆದರೆ ಜೀವನವೇ ಪ್ರೀತಿಯಾಗಿದೆ. ಆದುದರಿಂದ, ಈ ಸಂಪೂರ್ಣ ವಿಶ್ವವು ಪ್ರೀತಿ - ಈ ಜ್ಞಾನದ ಮೂಲಕ ನೋಡಿ.
ಪ್ರೀತಿಯೆಂಬುದು ಒಂದು ಅಸ್ತಿತ್ವ, ಕೇವಲ ಒಂದು ಭಾವನೆಯಲ್ಲ. ಭಾವನೆ ಕೂಡಾ ಪ್ರೀತಿಯೇ, ಆದರೆ ಅಸ್ತಿತ್ವವೇ ಪ್ರೀತಿಯಾಗಿದೆ. ಭೂಮಿಯು ಸೂರ್ಯನನ್ನು ಪ್ರೀತಿಸುತ್ತದೆ. ಅದಕ್ಕೇ ಅದು ಸೂರ್ಯನ ಸುತ್ತಲೂ ತಿರುಗುತ್ತಾ ಇರುವುದು. ಚಂದ್ರನು ಭೂಮಿಯನ್ನು ಪ್ರೀತಿಸುತ್ತದೆ. ಅದಕ್ಕೇ ಚಂದ್ರನು ಭೂಮಿಯ ಸುತ್ತಲೂ ತಿರುಗುವುದು. ಎಲ್ಲೆಲ್ಲಾ ಒಂದು ಬಲ ಅಥವಾ ಶಕ್ತಿ ಅಥವಾ ಒಂದು ಸೆಳೆತ ಅಥವಾ ಆಕರ್ಷಣೆ ಇರುವುದೋ, ಅದನ್ನು ನೀವು ಪ್ರೀತಿಯೆಂದು ಕರೆಯುವಿರಿ ಮತ್ತು ಎಲ್ಲೆಲ್ಲಾ ವಿಕರ್ಷಣೆ ಇರುವುದೋ, ಅದು ಕೂಡಾ ವಿರುದ್ಧ ದಿಕ್ಕಿನಲ್ಲಿರುವ ಪ್ರೀತಿಯಾಗಿದೆ. ತಿಳಿಯಿತಾ?
ನೀವು ಯಾರ ಕಡೆಗಾದರೂ ಅಥವಾ ಯಾವುದಾದರ ಕಡೆಗಾದರೂ ಎಳೆಯಲ್ಪಡುತ್ತೀರಿ, ಯಾಕೆ? ಯಾಕೆಂದರೆ ನೀವದನ್ನು ಪ್ರೀತಿಸುತ್ತೀರಿ. ನೀವೊಂದು ಚೀಸ್ ಕೇಕನ್ನು ನೋಡುತ್ತೀರಿ ಮತ್ತು ಅದರ ಕಡೆಗೆ ಎಳೆಯಲ್ಪಡುತ್ತೀರಿ, ಯಾಕೆ? ಅಲ್ಲೊಂದು ಸೆಳೆತವಿದೆ. ನೀವೊಬ್ಬಳು ಸುಂದರವಾದ ಹುಡುಗಿಯನ್ನು ನೋಡುತ್ತೀರಿ ಅಥವಾ ಒಬ್ಬಳು ಹುಡುಗಿಯು ಒಬ್ಬ ಸುಂದರನಾದ ಹುಡುಗನನ್ನು ನೋಡುತ್ತಾಳೆ, ಅಲ್ಲೊಂದು ಸೆಳೆತವಿದೆ ಮತ್ತು ನೀವದನ್ನು ಏನೆಂದು ಕರೆಯುವಿರಿ? ನೀವದನ್ನು ಪ್ರೀತಿಯೆಂದು ಕರೆಯುತ್ತೀರಿ! ಯಾಕೆ? ಅದು ಯಾಕೆಂದರೆ ಅಲ್ಲೊಂದು ಸೆಳೆತವಿದೆ, ಅಲ್ಲೊಂದು ಆಕರ್ಷಣೆಯಿದೆ, ಅಲ್ಲೊಂದು ಬಲವಿದೆ ಮತ್ತು ಆ ಬಲವೇ ಸಂಪೂರ್ಣ ವಿಶ್ವವನ್ನು ನಡೆಸುತ್ತಿರುವುದು. ಕೆಲವು ಜಾಗಗಳಲ್ಲಿ ಇದು ಹೆಚ್ಚು ಸ್ಪಷ್ಟವಾಗಿರುತ್ತದೆ ಮತ್ತು ಕೆಲವು ಬೇರೆ ಜಾಗಗಳಲ್ಲಿ, ಇದು ಸ್ಪಷ್ಟವಾಗಿರುವುದಿಲ್ಲ.
ಭೂಮಿಯು ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸಿದ ದಿನ, ನೀವು ಹಾರಾಡಲು ಶುರು ಮಾಡುವಿರಿ. ಭೂಮಿಯು ನಿಮ್ಮನ್ನು ಎಷ್ಟು ಪ್ರೀತಿಸುತ್ತದೆಯೆಂದರೆ, ಗುರುತ್ವಾಕರ್ಷಣ ಶಕ್ತಿಯು, ನೀವು ಭೂಮಿಗೆ ಅಂಟಿಕೊಂಡಿರುವಂತೆ ಮಾಡುತ್ತದೆ. ನಿಮಗಿದು ತಿಳಿಯಿತೇ?
ಆದುದರಿಂದ, ಪ್ರೀತಿಯೆಂದರೆ, ಮಾನವ ಜೀವನದಲ್ಲಿರುವ ಆ ಬಲ. ಎಲ್ಲಾ ನಕಾರಾತ್ಮಕ ಭಾವನೆಗಳು ಕೂಡಾ, ಪ್ರೀತಿಯ ಒಂದು ತಿರುಚಿದ ರೂಪವೇ ಆಗಿದೆ. ಕೋಪದಲ್ಲಿ ಪ್ರೀತಿಯಿದೆ. ಹೇಗೆಂದು ನನ್ನಲ್ಲಿ ಕೇಳಿ. ನೀವು ಸಂಪೂರ್ಣತೆಯನ್ನು ಪ್ರೀತಿಸುತ್ತೀರಿ ಮತ್ತು ಅದಕ್ಕೇ ನೀವು ಕೋಪಗೊಳ್ಳುವುದು. ಲೋಭವು ಪ್ರೀತಿಯಾಗಿದೆ. ಲೋಭವೆಂದರೆ, ನೀವು ಯಾವುದನ್ನಾದರೂ ಜೀವನಕ್ಕಿಂತಲೂ ಬಹಳ ಹೆಚ್ಚಾಗಿ ಪ್ರೀತಿಸುವಾಗ ಆಗುವುದು. ನೀವು ವಸ್ತುಗಳನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವಾಗ, ಅದು ಲೋಭವೆಂದು ಕರೆಯಲ್ಪಡುತ್ತದೆ. ದ್ವೇಷವೆಂದರೆ ಪ್ರೀತಿಯು ತಲೆಕೆಳಗಾದುದು. ಭಯವೆಂದರೆ ಪ್ರೀತಿ ತಲೆಕೆಳಗಾದುದು.
ಪ್ರಶ್ನೆ: ಗುರೂಜಿ, ನನ್ನ ತಾಯಿಯು ಕ್ರಿಸ್ಮಸ್ ದಿನದಂದು ತೀರಿಹೋದರು. ಇದಕ್ಕೆ ಏನಾದರೂ ವಿಶೇಷ ಅರ್ಥವಿದೆಯೇ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಪ್ರಪಂಚದಾದ್ಯಂತ ಹಲವಾರು ಜನರು ಕ್ರಿಸ್ಮಸ್ ದಿನ ಅಥವಾ ಹೊಸವರ್ಷದ ದಿನದಂದು ಸಾಯುತ್ತಾರೆ. ಸಾವಿಗೆ ಯಾವುದೇ ತಾರೀಖು ಗೊತ್ತಿಲ್ಲ. ತಿಳಿಯಿತಾ?
ನೀನು ಯಾವ ದಿನವನ್ನು ಆಚರಿಸುತ್ತೀಯೋ, ಆ ದಿನದಂದು ಅವಳು ತೀರಿಹೋದುದರಿಂದ ನಿನಗೆ ಕಸಿವಿಸಿಯಾಗುತ್ತದೆ. ಆದರೆ ಇದನ್ನು ನೋಡುವ ಇನ್ನೊಂದು ರೀತಿಯೆಂದರೆ - ಆ ದಿನದಂದು ಅವಳು ಇನ್ನೂ ವಿಶಾಲವಾದಳು. ಶರೀರದಲ್ಲಿರುವಾಗಿನ ದುಃಖಗಳಿಂದ, ರೋಗಗಳಿಂದ ಅವಳು ಹೊರಬಂದಳು. ಅವಳು ಮುಕ್ತಳಾದಳು. ಆದುದರಿಂದ ಅವಳಿಗೆ ಅದೊಂದು ಒಳ್ಳೆಯ ಸಂಗತಿ. ಅದು ಅವಳಿಗೆ ಪ್ರಕೃತಿಯಿಂದ, ದೇವರಿಂದ ದೊರೆತ ಒಂದು ಕ್ರಿಸ್ಮಸ್ ಉಡುಗೊರೆ. ಆ ರೀತಿಯಲ್ಲಿ ಯೋಚಿಸು, ಆಗ ನಿನ್ನ ಮನಸ್ಸು ಶಾಂತವಾಗಿರುತ್ತದೆ ಮತ್ತು ನಿನಗೆ ಕ್ರಿಸ್ಮಸ್ಸನ್ನು ಆಚರಿಸಲು ಸಾಧ್ಯವಾಗುತ್ತದೆ. ಅವಳು ಕ್ರಿಸ್ಮಸ್ ದಿನದಂದು ಮುಕ್ತಳಾದಳು ಮತ್ತು ಕ್ರಿಸ್ಮಸ್ ದಿನದಂದು ಅವಳು ಉನ್ನತಿಗೇರಿದಳು. ಇದಲ್ಲವೇ ನೋಡುವ ಉತ್ತಮ ರೀತಿ? ಆದುದರಿಂದ ಅವಳ ಮುಕ್ತಿ ಮತ್ತು ಬಿಡುಗಡೆಯನ್ನು ಆಚರಿಸು.
ಪ್ರಶ್ನೆ: ನನ್ನ ಸುತ್ತಲಿರುವ ಜನರು ಯಾವತ್ತೂ ತುಂಬಾ ನಕಾರಾತ್ಮಕವಾಗಿದ್ದರೆ ಏನು ಮಾಡುವುದು? ಎಲ್ಲದರ ಬಗ್ಗೆಯೂ ವಿಪರೀತವಾಗಿ ನಕಾರಾತ್ಮಕವಾಗಿರುವ ಒಬ್ಬ ಗೆಳೆಯ ನನಗಿದ್ದಾನೆ ಮತ್ತು ಸಮಯದೊಂದಿಗೆ ಆತನು ಇನ್ನೂ ಬಿಗಡಾಯಿಸುತ್ತಿರುವಂತೆ ಕಾಣಿಸುತ್ತಿದೆ.
ಶ್ರೀ ಶ್ರೀ ರವಿಶಂಕರ್:
ನೋಡು, ಯಾರಾದರೊಬ್ಬರು ಅಷ್ಟೊಂದು ಮಟ್ಟಿಗೆ ಸಂಪೂರ್ಣ ನಕಾರಾತ್ಮಕತೆಯ ಕಡೆಗೆ ಹೋದರೆ, ಅದು ಒಬ್ಬ ಮನುಷ್ಯನಿಗೆ ಅಷ್ಟು ಸುಲಭವಲ್ಲ. ಅಷ್ಟೊಂದು ನಕಾರಾತ್ಮಕವಾಗಿರುವುದು ಬಹುತೇಕ ಅಮಾನುಷವಾದುದು ಮತ್ತು ಅವನು ಅಷ್ಟು ದೂರ ಹೋಗಿರುವಾಗ, ಇನ್ನೂ ಮುಂದಕ್ಕೆ ಹೋಗಲು ಅವನಿಗೆ ಸಾಧ್ಯವಿಲ್ಲ, ಅವನು ಹಿಂದಕ್ಕೆ ಬರಲೇಬೇಕು ಯಾಕೆಂದರೆ ಎಲ್ಲವೂ ಒಂದು ಆವರ್ತನೆ. ತಿಳಿಯಿತಾ?
ನೀವು ತಳಭಾಗಕ್ಕೆ ಹೋದಾಗ, ಅಲ್ಲಿಂದ ಕೆಳಕ್ಕೆ ಹೋಗಲು ನಿಮಗೆ ಸಾಧ್ಯವಿಲ್ಲ. ನೀವು ಮೇಲಕ್ಕೆ ಬರಲೇಬೇಕು ಮತ್ತು ಅದನ್ನೇ ಅವನು ಹೇಳಿದುದು. ಅವನು ಎಷ್ಟೊಂದು ಕೆಟ್ಟುಹೋಗಿರುವನೆಂದರೆ, ಈಗ ಅವನು ಹಿಂದಕ್ಕೆ ಬರಲೇಬೇಕು. ಅದು, ಯಾರೂ ಮೂಲತಃ ಕೆಟ್ಟವರಲ್ಲ, ಕೆಟ್ಟದಾಗಿರುವುದು ಕೇವಲ ಆ ಕ್ರಿಯೆ ಎಂಬುದನ್ನು ರುಜುವಾತು ಪಡಿಸಲು ಇರುವುದು. ಆತ್ಮವು ಯಾವತ್ತೂ ಕೆಟ್ಟದಾಗಿರುವುದಿಲ್ಲ. ಆತ್ಮವು ಯಾವತ್ತೂ ಮುಕ್ತವಾಗಿರುತ್ತದೆ ಮತ್ತು ಅತ್ಯಾನಂದಭರಿತವಾಗಿರುತ್ತದೆ.
ಕಾರ್ಯಗಳಿಗೆ ಒಂದು ಸೀಮಿತ ವಲಯ ಮತ್ತು ಸಮಯವಿರುತ್ತದೆ. ನೋಡಿ, ನೀವೊಂದು ಕೆಟ್ಟ ಕೆಲಸವನ್ನು ಮಾಡಿದರೆ, ನೀವು ಯಾವತ್ತೂ ತೆಗೆಳಲ್ಪಡುವುದಿಲ್ಲ. ನಿಮಗೆ ಕೊಡುವ ಒಂದು ಶಿಕ್ಷೆ ಕೂಡಾ ಕೇವಲ ಕೆಲವೇ ವರ್ಷಗಳಿಗೆ ಮಾತ್ರ, ಮತ್ತು ಆ ಕೆಲವು ವರ್ಷಗಳಲ್ಲಿ ಕೂಡಾ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ, ಅಲ್ಲವೇ?
ಒಬ್ಬ ಖೈದಿ, ಅವನು ಯಾವುದೇ ಅಪರಾಧ ಮಾಡಿರಲಿ, ಅವನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆಯೇ? ಇಲ್ಲ, ಅವನನ್ನು ಸಹಾನುಭೂತಿಯಿಂದ ನೋಡಿಕೊಳ್ಳಲಾಗುತ್ತದೆ. ಇದನ್ನೇ ಪುರಾಣದಲ್ಲೂ ಹೇಳಲಾಗಿತ್ತು - ಅತ್ಯಂತ ಹೆಚ್ಚಿನ ಮಟ್ಟದ ಅಪರಾಧವನ್ನು ಮಾಡಿದ ಒಬ್ಬ ವ್ಯಕ್ತಿಯೂ, ಪವಿತ್ರರಾದವರೊಬ್ಬರ, ಜ್ಞಾನಿಗಳಾದವರೊಬ್ಬರ, ಸಕಾರಾತ್ಮಕ ಶಕ್ತಿ ತುಂಬಿದವರೊಬ್ಬರ ಸಂಪರ್ಕಕ್ಕೆ ಬಂದಾಗ, ಆ ಸಕಾರಾತ್ಮಕ ಶಕ್ತಿಯ ಪ್ರಭಾವವು ಎಷ್ಟು ಶಕ್ತಿಯುತವಾಗಿರುತ್ತದೆಯೆಂದರೆ, ಅದು ಕತ್ತಲಿನಲ್ಲೂ ಬೆಳಕನ್ನು ತರಬಹುದು. ನೋಡಿ, ಅತ್ಯಂತ ಕತ್ತಲಿರುವ ಜಾಗದಲ್ಲಿ ಬೆಳಕನ್ನು ತರಲು ಒಂದು ಮೇಣದ ಬತ್ತಿ ಸಾಕು.
ಪ್ರಶ್ನೆ: ಸಾವಿನ ನಂತರ ಏನಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಸಾವಿನ ನಂತರ ಏನಾಗುತ್ತದೆಯೆಂದರೆ, ಮನಸ್ಸು ಶರೀರದಿಂದ, ಆತ್ಮದಿಂದ ಬಿಡುಗಡೆಗೊಳ್ಳುತ್ತದೆ. ಮನಸ್ಸಿನಲ್ಲಿ ಸ್ಮರಣೆ ಮತ್ತು ಬುದ್ಧಿಯಿದೆ. ಈ ಎರಡು ಸಂಗತಿಗಳು ಒಂದು ಬುಗ್ಗೆಯಂತಾಗುತ್ತವೆ. ಕರ್ಮ, ಆಳವಾದ ಅಚ್ಚುಗಳು ಒಂದು ಬುಗ್ಗೆಯನ್ನು ರೂಪಿಸುತ್ತವೆ. ಅದು ನಿದ್ರೆಯಲ್ಲಿರುವಂತೆ. ಸಾವೆಂದರೆ ಒಂದು ಉದ್ದನೆಯ ನಿದ್ರೆಯಲ್ಲದೆ ಬೇರೇನೂ ಅಲ್ಲ. ನಿದ್ರಿಸಲು ಹೋಗುವ ಮೊದಲು ನಿಮಗೆ ಬರುವ ಕೊನೆಯ ಯೋಚನೆಯನ್ನು ನೋಡಿ ಮತ್ತು ನೀವು ಎದ್ದ ಕೂಡಲೇ ಬರುವ ಮೊದಲನೆಯ ಯೋಚನೆ ಯಾವುದೆಂದು ನೋಡಿ. ನೀವು ಗಮನಿಸಿದ್ದೀರಾ? ಅದು ಸುಮಾರಾಗಿ ಒಂದೇ ಆಗಿರುತ್ತದೆ.
ಆದುದರಿಂದ, ಭೌತಿಕ ಶರೀರವು ನಾಶವಾಗುತ್ತದೆ ಮತ್ತು ಸೂಕ್ಷ್ಮ ಶರೀರವು ಎಲ್ಲಾ ಅಚ್ಚುಗಳೊಂದಿಗೆ ಒಂದು ಬುಗ್ಗೆಯನ್ನು ರೂಪಿಸುತ್ತದೆ ಹಾಗೂ ಶರೀರವನ್ನು ಬಿಟ್ಟು ಅಡ್ಡಾಡುತ್ತಿರುತ್ತದೆ. ಒಂದು ಬುಗ್ಗೆಯು ತೂಗಾಡುತ್ತಿರುವುದನ್ನು ಕಲ್ಪಿಸಿಕೊಳ್ಳಬೇಡಿ! ಅದೊಂದು ಪ್ರಕಾಶ; ಒಂದು ಶಕ್ತಿ.
ನಾನು ನಿಮಗೆ ಅತ್ಯುತ್ತಮವಾದ ಉದಾಹರಣೆಯನ್ನು ಕೊಡುತ್ತೇನೆ. ಒಂದು ದೂರದರ್ಶನ ಕೇಂದ್ರದಲ್ಲಿ, ಅವರೊಂದು ಕಾರ್ಯಕ್ರಮವನ್ನು ನಡೆಸುತ್ತಾರೆ ಮತ್ತು ನಂತರ ಅವರು ಅದನ್ನು ಡಿಶ್ ಮೂಲಕ ಪ್ರಸಾರ ಮಾಡುತ್ತಾರೆ. ಕಾರ್ಯಕ್ರಮವು ವಾತಾವರಣದಲ್ಲಿ ಉಳಿಯುತ್ತದೆ - ಇದು ಅದೇ ರೀತಿ. ನೀವು ಕಂಪ್ಯೂಟರಿನಿಂದ ಒಂದು ಇ-ಮೈಲನ್ನು ಕಳುಹಿಸುವಾಗ, ನೀವು ಎಲ್ಲಾ ಅಕ್ಷರಗಳನ್ನು ಟೈಪ್ ಮಾಡುತ್ತೀರಿ ಮತ್ತು ನಂತರ ’ಕಳುಹಿಸು’ ಎಂಬ ಗುಂಡಿಯನ್ನು ಒತ್ತುತ್ತೀರಿ. ಏನಾಗುತ್ತದೆ? ಅದು ಆಕಾಶದೊಳಕ್ಕೆ ಹೋಗುತ್ತದೆ. ಡೌನ್ ಲೋಡ್ ಮಾಡುವಲ್ಲಿಯ ವರೆಗೆ ನಿಮ್ಮ ಇ-ಮೈಲ್ ಆಕಾಶದಲ್ಲಿ ಉಳಿಯುತ್ತದೆಯೇ? ಹಲವಾರು ದಿನಗಳ ಬಳಿಕ ಕೂಡಾ ನಿಮಗೆ ನಿಮ್ಮ ಇ-ಮೈಲನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ಒಂದು ವರ್ಷದ ಬಳಿಕ ಅಥವಾ ಹತ್ತು ವರ್ಷಗಳ ಬಳಿಕ ಕೂಡಾ ನಿಮಗೆ ಒಂದು ಇ-ಮೈಲನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗುತ್ತದೆ. ಅದಕ್ಕೆ ಯಾವುದೇ ಅಂತಿಮ ದಿನಾಂಕವಿರುವುದಿಲ್ಲ, ಅಲ್ಲವೇ? ಕೆಲವೊಮ್ಮೆ ಜನರು ನಿಮಗೆ, ೨೪ ಗಂಟೆಗಳಲ್ಲಿ ಕೊನೆಯಾಗುವ ಶುಭಾಶಯ ಪತ್ರಗಳನ್ನು ಕಳುಹಿಸುತ್ತಾರೆ. ಇದು ಹಾಗಲ್ಲ. ನೀವು ಕಳುಹಿಸುವ ಸಂದೇಶಗಳು ಅಥವಾ ಪತ್ರಗಳು ಆಕಾಶದಲ್ಲಿ ಪತ್ರಗಳಾಗಿ ನೇತಾಡುತ್ತಾ ಇರುವುದಿಲ್ಲ, ಅದು ಆಕಾಶದಲ್ಲಿ ಶಕ್ತಿಯಾಗಿ ಉಳಿಯುತ್ತದೆ. ಅದರಂತೆ, ಪ್ರತಿಯೊಂದು ಆತ್ಮವೂ ಒಂದು ನಿರ್ದಿಷ್ಟ ಫ್ರೀಕ್ವೆನ್ಸಿಯಾಗಿದೆ ಮತ್ತು ಪ್ರತಿಯೊಂದು ಹೆಬ್ಬೆರಳೂ ವಿಭಿನ್ನವಾಗಿದೆ ಯಾಕೆಂದರೆ, ಒಂದು ಹೆಬ್ಬೆರಳು ಒಂದು ನಿರ್ದಿಷ್ಟ ಸೆಲ್ ಫೋನ್ ಚಿಪ್ ನ ಹಾಗೆ.
ಆದುದರಿಂದ ಸಾವಿನ ಬಳಿಕ, ಪ್ರತಿಯೊಂದು ವೈಯಕ್ತಿಕ ಶಕ್ತಿಯು ಮತ್ತು ಅದು ತೆಗೆದುಕೊಂಡ ಅಚ್ಚುಗಳು ಉಳಿದುಕೊಳ್ಳುತ್ತವೆ. ಇದರಂತೆ ಅದು ಅಲ್ಲಿ ಆ ಘಟ್ಟಗಳನ್ನು ಅನುಭವಿಸುತ್ತದೆ. ಆದರೆ, ನಂತರ ಕೆಲವು ಸಮಯದ ಬಳಿಕ ಆ ಆತ್ಮವು ತಿರುಗಿ ಬರುತ್ತದೆ. ಆತ್ಮವು ಶರೀರವನ್ನು ಮೂರು ಸಮಯಗಳಲ್ಲಿ ಪ್ರವೇಶಿಸುತ್ತದೆ - ಇದೆಲ್ಲವೂ ಒಂದು ರಹಸ್ಯ. ಇದು ಜನ್ಮ ರಹಸ್ಯ ಮತ್ತು ಮೃತ್ಯು ರಹಸ್ಯ ಎಂದು ಕರೆಯಲ್ಪಡುತ್ತದೆ.
ಆತ್ಮವು, ಗರ್ಭ ಧರಿಸುವ ಕ್ಷಣದಲ್ಲಿ ಪ್ರವೇಶಿಸುತ್ತದೆ ಅಥವಾ ಅದು ಐದನೆಯ ತಿಂಗಳಿನಲ್ಲಿ ಪ್ರವೇಶಿಸುತ್ತದೆ ಅಥವಾ ಹುಟ್ಟುವ ಸಮಯದಲ್ಲಿ. ಹೀಗೆ ಮೂರು ಭಾಗಗಳಿವೆ, ಆದರೆ ಅದು ಯಾವಾಗ ಪ್ರವೇಶಿಸುತ್ತದೆ ಎಂದು ನಿರ್ಧರಿಸಲು ಯಾವುದೇ ಮಾರ್ಗವಿಲ್ಲ.
ಹಾಗಾದರೆ, ಗರ್ಭಧರಿಸುವ ಸಮಯದಲ್ಲಿ ಅದು ಬಂದರೆ, ಅದರ ಬಗ್ಗೆ ಜಾಗ್ರತೆ ವಹಿಸಲು ಒಬ್ಬರು ಏನು ಮಾಡಬೇಕು? ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳಿ. ಸಾಧಾರಣವಾಗಿ ಭಾರತದಲ್ಲಿ ಗರ್ಭಿಣಿ ಸ್ತ್ರೀಯರನ್ನು ಬಹಳ ಸಂತೋಷವಾಗಿಟ್ಟುಕೊಳ್ಳುತ್ತಾರೆ. ಅವಳು ಏನನ್ನೆಲ್ಲಾ ಬಯಸುತ್ತಾಳೋ ಅವುಗಳನ್ನೆಲ್ಲಾ ಅವಳಿಗೆ ಒದಗಿಸಲಾಗುತ್ತದೆ. ನಾನು ಹೇಳುವುದೇನೆಂದರೆ, ಈ ಎಲ್ಲಾ ಹಿಂಸಾತ್ಮಕ ಸಿನೆಮಾಗಳನ್ನು, ಭಯಗೊಳಿಸುವ ಹಾಡುಗಳನ್ನು ಮತ್ತು ಭಯಗೊಳಿಸುವ ವಿಷಯಗಳನ್ನು ನೋಡಬೇಡಿ. ಸಾಮಾನ್ಯವಾಗಿ, ಹಗುರವಾದ ಕೊಳಲಿನ ಸಂಗೀತವು ಒಳ್ಳೆಯದು ಯಾಕೆಂದರೆ ಅದು ಹಿತವಾಗಿರುತ್ತದೆ. ಸಂಗೀತವನ್ನು, ಜ್ಞಾನವನ್ನು ಕೇಳುವುದು ಒಳ್ಳೆಯದು. ಈ ಎಲ್ಲಾ ವಿಷಯಗಳಿಗೆ ಆದ್ಯತೆ ನೀಡಬೇಕು.
ಆತ್ಮವು, ಎಲ್ಲಿ ಹುಟ್ಟಬೇಕು, ಹುಟ್ಟಿ ಬರಬೇಕಾದ ಜಾಗವನ್ನು ಕೂಡಾ ಆಯ್ಕೆ ಮಾಡುತ್ತದೆ. ಅದರ ಇಚ್ಛೆಯ ಪ್ರಕಾರ ಅದು ಅಲ್ಲಿಗೆ ಸುಮ್ಮನೇ ಬರುತ್ತದೆ.
ಪ್ರಶ್ನೆ: ಆತ್ಮವು ಯಾವತ್ತಾದರೂ ಸಾಯುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಆತ್ಮವು ಯಾವತ್ತೂ ಸಾಯುವುದಿಲ್ಲ. ಅದು ಹೇಗೆಂದರೆ, ನೀನು ಒಂದು ರೈಲಿನೊಳಕ್ಕೆ ಹತ್ತುವೆ ಮತ್ತು ಆ ರೈಲು ಹಾಳಾಯಿತು. ನಂತರ ನೀನು ಹೊರಕ್ಕೆಬಂದೆ ಮತ್ತು ಇನ್ನೊಂದು ರೈಲಿನೊಳಕ್ಕೆ ಹತ್ತಿದೆ. ಅಷ್ಟೆ.
ಪ್ರಶ್ನೆ: (ಸಭಿಕರಲ್ಲೊಬ್ಬನು ಕೂಡಲೇ ಒಂದು ಪ್ರಶ್ನೆಯನ್ನು ಕೇಳಿದನು ಮತ್ತು ಅದು ರೆಕಾರ್ಡಿಂಗಿನಲ್ಲಿ ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಹೌದು, ಮಾನವ ಜೀವನವು, ಹಿತಕರ ಮತ್ತು ಅಹಿತಕರ ದಿನಗಳ ಮಿಶ್ರಣವಾಗಿದೆ. ಶ್ರೀರಾಮ, ಕೃಷ್ಣ, ಯೇಸು, ಬುದ್ಧ, ಮಹಾವೀರ ಅಥವಾ ಗುರು ನಾನಕ್ ಇವರನ್ನೊಳಗೊಂಡಂತೆ ನೀನು ಯಾರ ಜೀವನವನ್ನಾದರೂ ತೆಗೆದುಕೋ. ಚರಿತ್ರೆಯಲ್ಲಿ ಯಾರನ್ನಾದರೂ ತೆಗೆದುಕೋ, ಅವರೆಲ್ಲರಿಗೂ ಕೆಲವು ಕೆಟ್ಟ ದಿನಗಳಿದ್ದವು, ಹಾಗೆಯೇ ಕೆಲವು ದಿನಗಳು ಒಳ್ಳೆಯದಾಗಿದ್ದವು. ಪ್ರಧಾನವಾದುದೇನೆಂದರೆ, ಕೆಟ್ಟ ದಿನಗಳಲ್ಲಿ ಕೆಳಗಿಳಿದು ಹೋಗಬೇಡ ಮತ್ತು ಒಳ್ಳೆಯ ದಿನಗಳಲ್ಲಿ ಆಕಾಶಕ್ಕೇರಬೇಡ. ನಿನ್ನ ಸಮಚಿತ್ತತೆ ಮತ್ತು ಘನತೆಯನ್ನು ಕಾಪಾಡು. ಇದನ್ನೇ ನಿನಗೆ ಜ್ಞಾನವು ಕಲಿಸುವುದು. ಹೌದು, ಕೆಲವು ಕೆಟ್ಟ ದಿನಗಳಿರುತ್ತವೆ, ಆದರೆ ನಿನ್ನಲ್ಲಿ ಜ್ಞಾನವಿದ್ದರೆ, ನೀನು ಸುಮ್ಮನೇ ಅವುಗಳ ಮೂಲಕ ತೇಲಿಹೋಗುವೆ ಮತ್ತು ಅವುಗಳಿಂದ ಹೊರ ಬರುವೆ. ಅದು ನಿನ್ನ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ.
ಕರ್ಮದ ನಿಯಮವು ಬಹಳ ಆಸಕ್ತಿಕರವಾಗಿದೆ ಮತ್ತು ಬಹಳ ವಿಚಿತ್ರವಾಗಿದೆ. ಮಳೆ ಬರಬೇಕೆಂದಿದ್ದರೆ, ಮಳೆ ಬರುತ್ತದೆ. ಆದರೆ ಒದ್ದೆಯಾಗಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಆಯ್ಕೆ. ನೀವು ರೈನ್ ಕೋಟ್ ಹಾಕಿಕೊಂಡು ಮಳೆಯಲ್ಲಿ ನಡೆದರೆ, ಅಷ್ಟೊಂದು ಒದ್ದೆಯಾಗುವುದಿಲ್ಲ, ಕೇವಲ ಕೆಲವೇ ಹನಿಗಳು ನಿಮ್ಮ ಮುಖದ ಮೇಲೆ ಬೀಳುತ್ತವೆ. ಆದರೆ ನೀವು ಛತ್ರಿಯಿಲ್ಲದೇ ನಡೆದರೆ, ಸಂಪೂರ್ಣವಾಗಿ ಒದ್ದೆಯಾಗುತ್ತೀರಿ ಮತ್ತು ನೀವು ಬಂದು ನಿಮ್ಮ ಬಟ್ಟೆಗಳನ್ನು ಬದಲಾಯಿಸಬೇಕಾಗುತ್ತದೆ. ಇವುಗಳೆಲ್ಲಾ - ಸಾಧನೆ, ಧ್ಯಾನ, ಸತ್ಸಂಗ, ಹಾಡು, ಜ್ಞಾನ, ಇವುಗಳೆಲ್ಲಾ ಛತ್ರಿಗಳು ಹಾಗೂ ರೈನ್ ಕೋಟುಗಳು.
ಆದುದರಿಂದ ಜನರನ್ನುತ್ತಾರೆ, "ಓ, ನಿನಗೀಗ ಕೆಟ್ಟಕಾಲವಾಗಿದ್ದರೆ, ಟೊಳ್ಳು ಮತ್ತು ಖಾಲಿ ಧ್ಯಾನವನ್ನು ಮಾಡು, ಸ್ವಲ್ಪ ಓಂ ನಮಃ ಶಿವಾಯ ಜಪವನ್ನು ಮತ್ತು ಹಾಡುವುದನ್ನು ಮಾಡು."
ನೀವು ಮನಸ್ಸಿನಲ್ಲಿ ಸ್ವಲ್ಪ ನಕಾರಾತ್ಮಕತೆಯನ್ನು ಅನುಭವಿಸಬಹುದು, ಆದರೆ ಅವುಗಳು ಕೇವಲ ಬರುತ್ತವೆ ಮತ್ತು ಮಾಯವಾಗುತ್ತವೆ. ನೀವು ಅದರೊಳಕ್ಕೆ ಆಳವಾಗಿ ಹೋದಾಗ, ಅವುಗಳು ನಿಮ್ಮನ್ನು ಮುಟ್ಟದೇ ಇರುವ ಒಂದು ಸಮಯ ಬರುತ್ತದೆ ಮತ್ತು ಅವುಗಳು ನಿಮ್ಮ ಹತ್ತಿರಕ್ಕೆ ಕೂಡಾ ಬರುವುದಿಲ್ಲ. ಅದು ಆತ್ಮಸಾಕ್ಷಾತ್ಕಾರ.
ಪ್ರಶ್ನೆ: ಜ್ಯೋತಿಷ್ಯದ ಬಗ್ಗೆ ನಿಮ್ಮ ಅನಿಸಿಕೆಯೇನು?
ಶ್ರೀ ಶ್ರೀ ರವಿಶಂಕರ್:
ಅದಕ್ಕೇ ನಾನು ಹೇಳುವುದು, ಇದು ಒಂದು ರೀತಿಯಲ್ಲಿ ಕಳೆದುಹೋದ ವಿಜ್ಞಾನ. ಜ್ಯೋತಿಷ್ಯವು ಒಂದು ವಿಜ್ಞಾನವಾಗಿದೆ ಆದರೆ ಜ್ಯೋತಿಷಿಗಳಲ್ಲ. ಅವರು ಕೇವಲ ಕಥೆಕಟ್ಟಿ ಹೇಳುತ್ತಾರೆ. ನೀವು ನಿಮ್ಮ ಅಂತಃಸ್ಫುರಣೆಯನ್ನು ಅನುಸರಿಸಬೇಕು. ಈ ವಿಷಯಗಳ ಬಗ್ಗೆ ನೀವು ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಅದರ ಬಗೆಗಿನ ಒಂದು ಸಾಮಾನ್ಯ ಕಲ್ಪನೆ ಪರವಾಗಿಲ್ಲ. ಉದಾಹರಣೆಗೆ, ಒಂದು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ, ಚಂದ್ರನ ಪ್ರಭಾವ ನಿಮ್ಮ ಮನಸ್ಸಿನ ಮೇಲಾಗುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? ನಿಮ್ಮಲ್ಲಿ ಎಷ್ಟು ಮಂದಿಗೆ ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ನಿದ್ರಿಸಲು ಸಾಧ್ಯವಾಗುವುದಿಲ್ಲ? ಚಂದ್ರ ಮತ್ತು ಮನಸ್ಸಿನ ನಡುವೆ ಬಹಳಷ್ಟು ಸಂಬಂಧವಿದೆ. ಆದುದರಿಂದ ಈ ರೀತಿ ಆಗುತ್ತದೆ. ಕೇವಲ ಜಾಗ್ರತೆಯಾಗಿರಿ, ಅಷ್ಟೆ, ಭ್ರಮೆಗೊಳಗಾಗಬೇಡಿ. ಭ್ರಮೆಗೊಳಗಾಗುವುದು ಮತ್ತು ಕೇವಲ ಒಂದು ಕಲ್ಪನೆಯನ್ನು ಹೊಂದಿರುವುದರ ನಡುವೆ ದೊಡ್ಡ ವ್ಯತ್ಯಾಸವಿದೆ. ಅದರ ಬಗ್ಗೆ ಜಾಗ್ರತೆಯಾಗಿರಿ.
ಪ್ರಶ್ನೆ: ಗುರೂಜಿ, ನಾನು ಬಹಳಷ್ಟು ಜ್ಞಾನವನ್ನು ಓದುತ್ತೇನೆ ಮತ್ತು ಕೇಳುತ್ತೇನೆ. ಆದರೆ, ನಾನು ಕೇಳಿದುದನ್ನು ಬಹುತೇಕವಾಗಿ ಕೂಡಲೇ ಮರೆತುಬಿಡುತ್ತೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಚಿಂತಿಸಬೇಡ; ನಾನು ನಿನ್ನೊಂದಿಗೆ ಮಾತನಾಡುತ್ತಾ ಇರುತ್ತೇನೆ. ಒಂದು ನೂರು ಸಲ ನೀನು ಮರೆತು ಬಿಟ್ಟರೂ ಪರವಾಗಿಲ್ಲ, ನನ್ನಲ್ಲಿ ಸಾಕಷ್ಟು ತಾಳ್ಮೆಯಿದೆ. ನಾನು ಹೇಳಿದ ವಿಷಯಗಳನ್ನೇ ಹೇಳುತ್ತಾ ಇರುತ್ತೇನೆ.
ನಿನ್ನೊಂದಿಗೆ ಮಾತನಾಡುವವರು ಕೂಡಾ ಅದೇ ಪರಿಸ್ಥಿತಿಯಲ್ಲಿದ್ದಾರೆ. ಇಲ್ಲಿರುವ ಹಲವಾರು ಜನರು, ಅವರು ಹೇಳುತ್ತಾರೆ, ಆದರೆ ಇನ್ನೊಂದು ಬದಿಯಲ್ಲೇ ಇರುತ್ತಾರೆ. ಪರವಾಗಿಲ್ಲ! ನೀನು ಯಾವತ್ತಾದರೂ ಅಷ್ಟಾವಕ್ರ ಗೀತೆಯನ್ನು ಕೇಳಿದ್ದೀಯಾ? ಮರೆತುಬಿಟ್ಟಿರುವೆ, ಸರಿಯಾ?! ಅದರಲ್ಲಿರುವ ಒಂದು ಮಾತನ್ನು ಕೇಳಿದ್ದೀಯಾ, "ಭಾಗ್ಯವಂತರು ಯಾರೆಂದರೆ, ಯಾರು ಮರೆತುಬಿಟ್ಟಿರುವರೋ ಅವರು."
ಆದುದರಿಂದ ನೀನು ಅದಕ್ಕೆ ಸೇರಬೇಕು. ಅಷ್ಟಾವಕ್ರ ಗೀತೆಯಲ್ಲಿ ಒಂದು ಮಾತಿದೆ. ಅಲ್ಲಿ ಅಷ್ಟಾವಕ್ರನು ಹೇಳುತ್ತಾನೆ, "ಯಾರು ಎಲ್ಲವನ್ನೂ ಮರೆಯಬಲ್ಲರೋ ಅವರು ಭಾಗ್ಯವಂತರು." ಆದುದರಿಂದ ನೀನು ಆ ವರ್ಗಕ್ಕೆ ಸೇರಿದವನೆಂದು ಕಾಣುತ್ತದೆ. ಆದರೆ ಕನಿಷ್ಠಪಕ್ಷ, ನೀನು ಭಾಗ್ಯವಂತನೆಂಬುದನ್ನು ಮರೆಯಬೇಡ. "ನಾನು ಭಾಗ್ಯವಂತನು", ಕೇವಲ ಇದೊಂದು ವಿಷಯವನ್ನು ನೀನು ನೆನಪಿನಲ್ಲಿಟ್ಟುಕೊಂಡರೆ ಸಾಕು.
ಪ್ರಶ್ನೆ: ಗುರೂಜಿ, ನಾನು ನನ್ನ ಅಂತಃಸ್ಫುರಣೆಯನ್ನು ಕಳೆದುಕೊಂಡಿದ್ದೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ನೀನು ಸರಿಯಾದ ಜಾಗದಲ್ಲಿರುವೆ, ತೊಂದರೆಯಿಲ್ಲ. ನೋಡು, ನಿನ್ನೆ ನಾವು ಮಾಳಿಗೆಯಲ್ಲಿ, ಕೃಷ್ಣ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದೆವು ಮತ್ತು ಅಚಾನಕ್ಕಾಗಿ, ನಾನು ನೆಲಮಾಳಿಗೆಗೆ ಹೋಗಿ ಅದನ್ನು ನೋಡಬೇಕು ಎಂದು ನಾನಂದೆ. ಬಹುಶಃ ನಾನು ನೆಲಮಾಳಿಗೆಗೆ ಹೋಗಿ ಒಂದು ವರ್ಷಕ್ಕಿಂತಲೂ ಮೇಲಾಯಿತು. ಹಾಗೆ ನಾನಂದೆ, ನಾನು ನೆಲಮಾಳಿಗೆಗೆ ಹೋಗಲು ಬಯಸುತ್ತೇನೆಂದು ಮತ್ತು ನಾವೆಲ್ಲರೂ ಅಲ್ಲಿಗೆ ಹೋದೆವು. ನೆಲಮಾಳಿಗೆಯಲ್ಲಿ ನಾನು ಅಚಾನಕ್ಕಾಗಿ ಒಂದು ಕೋಣೆಗೆ ಹೋಗಿ ಕೇಳಿದೆ, "ಈ ಕೋಣೆಯಲ್ಲಿ ಯಾರು ವಾಸಿಸುತ್ತಿದ್ದಾರೆ?" ಅವರಂದರು, "ನಮಗೆ ತಿಳಿಯದು, ಯಾರೋ ವಾಸಿಸುತ್ತಿದ್ದಾರೆ."
ನಾನಂದೆ, "ಬಾಗಿಲನ್ನು ತೆರೆಯಿರಿ." ನಾವು ಬಾಗಿಲನ್ನು ತೆರೆದೆವು ಮತ್ತು ಅಲ್ಲೊಂದು ಮೇಣದ ಬತ್ತಿಯು ಉರಿಯುತ್ತಿರುವುದು ನಮಗೆ ಕಾಣಿಸಿತು. ಮೇಣದ ಬತ್ತಿಯು ಬಹುತೇಕ ಉರಿದು ಮುಗಿದಿತ್ತು ಮತ್ತು ಬೆಂಕಿಯು, ಹಾಸಿಗೆ ಮತ್ತು ಮಂಚಕ್ಕೆ ತಗಲುವುದರಲ್ಲಿತ್ತು. ಅಲ್ಲೊಂದು ಅಗ್ನಿ ದುರಂತ ಸಂಭವಿಸುವುದರಲ್ಲಿತ್ತು ಯಾಕೆಂದರೆ, ಮೇಣದಬತ್ತಿಯ ಜ್ವಾಲೆಯು ಎಲ್ಲೆಡೆ ಹರಡಿತ್ತು. ನಾವು ಹತ್ತು ನಿಮಿಷ ಕಳೆದು ಅಲ್ಲಿಗೆ ಹೋಗಿರುತ್ತಿದ್ದರೆ, ಬಹುಶಃ ಹಾಸಿಗೆಗೆ ಬೆಂಕಿ ಹಿಡಿಯುತ್ತಿತ್ತು. ಯಾರೋ ಮೇಣದಬತ್ತಿಯನ್ನು ಹೊತ್ತಿಸಿ, ಮರೆತುಬಿಟ್ಟಿದ್ದರು. ಅಲ್ಲಿಗೆ, ಆ ಕೋಣೆಗೆ ಹೋಗಲು ನನಗೆ ಯಾವುದೇ ಕಾರ್ಯವಿರಲಿಲ್ಲ.
ಅದು ಅಂತಃಸ್ಫುರಣೆ. ನಾನಲ್ಲಿಗೆ ಹೋಗಬೇಕೆಂದು ನನಗನ್ನಿಸಿತು ಮತ್ತು ನಾನು ಅದೇ ಕೋಣೆಯನ್ನು ತೆರೆದೆ. ನಾನು ಯಾವತ್ತೂ ಹೋಗಿ ಒಬ್ಬರ ಕೋಣೆಯನ್ನು ತೆರೆಯುವುದಿಲ್ಲ. ಆದರೆ ಈಗ ನಿಮಗೆ ತಿಳಿದಿರಬಹುದು, ಎಲ್ಲವೂ ಸಾಧ್ಯವಿದೆ. ನಾನು ಯಾರ ಕೋಣೆಗೆ ಬೇಕಾದರೂ ನುಗ್ಗಬಹುದು. ಹೀಗೆ ನಾನು ಆ ಕೋಣೆಯೊಳಕ್ಕೆ ನುಗ್ಗಿದೆ ಮತ್ತು ಅಲ್ಲಿ ಯಾರೂ ಇರಲಿಲ್ಲವೆಂಬುದು ತಿಳಿಯಿತು ಹಾಗೂ ಮೇಣದಬತ್ತಿಯು ಉರಿಯುತ್ತಿತ್ತು.
ಆದುದರಿಂದ, ಅಂತಃಸ್ಫುರಣೆಯೆಂಬುದು ಎಲ್ಲರೂ ಹುಟ್ಟುವಾಗಲೇ ಪಡಕೊಂಡು ಬಂದುದು ಮತ್ತು ಎಲ್ಲರ ಬಳಿಯೂ ಅದು ಇದೆ. ನೀವು ಹೆಚ್ಚು ಟೊಳ್ಳು ಮತ್ತು ಖಾಲಿಯಾದಷ್ಟೂ, ನೀವು ಹೆಚ್ಚು ಧ್ಯಾನಸ್ತರಾದಷ್ಟೂ, ಅದು ತುಂಬಾ ಸ್ಪಷ್ಟವಾಗುತ್ತದೆ. ಅಲ್ಲವೇ?
ಆದುದರಿಂದ, ನಿಮ್ಮ ಕೋಣೆಯಲ್ಲಿ ಮೇಣದ ಬತ್ತಿಯನ್ನು ಹೊತ್ತಿಸಿ ಅಲ್ಲಿಂದ ಮಾಯವಾಗಿಬಿಡಬೇಡಿ, ಸರಿಯಾ!
ಪ್ರಶ್ನೆ: ಆತ್ಮದ ಪ್ರಪಂಚವು ಎಲ್ಲಿದೆ?
ಶ್ರೀ ಶ್ರೀ ರವಿಶಂಕರ್:
ಅದು ಎಲ್ಲೋ ಇಲ್ಲ, ಅದು ಇಲ್ಲಿಯೇ ಇದೆ.