ಭಾನುವಾರ, ಜುಲೈ 8, 2012

ನಾವೆಲ್ಲರೂ ಪರಸ್ಪರರ ಪ್ರತಿಬಿಂಬ

೮ ಜುಲೈ ೨೦೧೨
ಬ್ಯಾಡ್ ಆಂಟೋಗ್ಯಾಸ್ಟ್ , ಜರ್ಮನಿ 

ಪ್ರಶ್ನೆ: ಗುರೂಜಿ, ನನ್ನ ಆಲೋಚನೆಗಳು, ಅನಿಸಿಕೆಗಳು ಹಾಗೂ ಭಾವನೆಗಳಿಂದ ಹೇಗೆ ಮುಕ್ತವಾಗಲಿ? ಎಲ್ಲ ಸಂಬಂಧಗಳಿಂದ ನಾನು ಹೇಗೆ ವಿರಕ್ತಿಯನ್ನು ಹೊಂದಲಿ? 
ಶ್ರೀ ಶ್ರೀ ರವಿಶಂಕರ್: ನೀವು ಸಂಬಂಧಗಳಿಂದ ವಿರಕ್ತರಾಗಲು ಏಕೆ ಬಯಸುತ್ತೀರಿ? ಏಕೆಂದರೆ ಅದು ನಿಮಗೆ ನೋವನ್ನು ನೀಡುತ್ತಿದೆ ಅಲ್ಲವೇ? ಅದು ಏಕೆ ನಿಮಗೆ ನೋವು ನೀಡುತ್ತದೆ? ಏಕೆಂದರೆ ನೀವು ಜೀವನದ ಬಗ್ಗೆ ವಿಶಾಲವಾದ ದೃಷ್ಟಿಕೋನವನ್ನು ಹೊಂದಿಲ್ಲವಾದ್ದರಿಂದ. ಎಲ್ಲ ಸಂಬಂಧಗಳೂ ಕೆಲವು ದಿನ, ಕೆಲವು ತಿಂಗಳು, ಕೆಲವು ವರ್ಷಗಳು ಮಾತ್ರ ಉಳಿಯುತ್ತವೆ. ಆದರೆ ಜೀವನವು ಇವೆಲ್ಲಕ್ಕಿಂತ ದೊಡ್ಡದು. ಹಾಗಾಗಿ, ಸಂಬಂಧಗಳಿಂದ ಮುಕ್ತವಾಗಲು ಪ್ರಯತ್ನಿಸುವ ಬದಲು ನಿಮ್ಮ ಅರಿವನ್ನು ವಿಸ್ತರಿಸಿಕೊಳ್ಳಿ.
ಅಷ್ಟಾವಕ್ರ ಗೀತೆಯ ಜ್ಞಾನವನ್ನು ಒಂದು ಬಾರಿಯಲ್ಲ, ಮತ್ತೆ ಮತ್ತೆ ಆಲಿಸಿ. ಅನಂತವಾದ ಹಾಗೂ ಪರಮಶಕ್ತಿಯಾದ ಬ್ರಹ್ಮನೆಡೆಗೆ ನಿಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಿ. ಎಲ್ಲರೂ ಇದರ ಒಂದು ಭಾಗ, ಎಲ್ಲರೂ ಇದರ ಆವಿರ್ಭಾವ. ಆದ್ದರಿಂದಲೇ ಇದನ್ನು 'ಬ್ರಹ್ಮಚರ್ಯ' ಎನ್ನುವುದು. 'ಬ್ರಹ್ಮ' ಎಂದರೆ ಅನಂತತೆ, 'ಚರ್ಯ' ಎಂದರೆ ಅದರೆಡೆಗೆ ನಡೆಯುವುದು - ದೈವತ್ವದೆಡೆಗೆ ನಿಮ್ಮ ಮನಸ್ಸನ್ನು ಕೊಂಡೊಯ್ಯುವುದು. ಅವನು ಹೀಗೆಂದನು, ಇವಳು ಹೀಗೆಂದಳು ಎಂಬ ಸೀಮಿತವಾದ ಸಂಕುಚಿತ ಮನೋಭಾವನೆಯೆಡೆಗೆ ಗಮನ ನೀಡಬೇಡಿ. ಸದಾ ಇತರರನ್ನು ದೂಷಿಸುತ್ತಾ ನೀವು ವ್ಯಾಮೋಹ ಹಾಗೂ ಜಿಗುಪ್ಸೆ, ಜಿಗುಪ್ಸೆ ಹಾಗೂ ವ್ಯಾಮೋಹಗಳಲ್ಲಿ ಮುಳುಗುತ್ತೀರಿ, ಇದು ಹೀಗೆಯೇ ಕೊನೆಯವರೆಗೂ ನಡೆಯುತ್ತಾ ಹೋಗುತ್ತದೆ. ಹಾಗಾಗಿ, ನಿಮ್ಮ ದೃಷ್ಟಿಕೋನವನ್ನು ವಿಸ್ತಾರಗೊಳಿಸಿ, ಹೆಚ್ಚಿನ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಿರಿ. ಎಲ್ಲ ಜೀವಿಗಳೂ ನೀರಿನ ಗುಳ್ಳೆಯಂತೆ ಎಂದು ತಿಳಿದುಕೊಳ್ಳಿ. ಅವು ಎಷ್ಟು ಹೊತ್ತು ಉಳಿಯುತ್ತವೆ? ಆಕಾಶದಲ್ಲಿನ ಮೋಡಗಳು ಎಷ್ಟು ಹೊತ್ತು ಉಳಿಯುತ್ತವೆ? ಎಲ್ಲವೂ ನಶ್ವರ, ಕ್ಷಣಿಕವಾದುದು ಎಂದು ಅರಿತುಕೊಳ್ಳಿ.
ಪ್ರಶ್ನೆ: ಗುರೂಜಿ, ನಾನು ಗೊಂದಲದಲ್ಲಿ ಸಿಲುಕಿದ್ದೇನೆ, ಹರೇ ಕೃಷ್ಣ ಆಂದೋಲನದಲ್ಲಿ ಅವರು ಕೃಷ್ಣನಿಗೆ ಶರಣಾಗಿ, ಈ ಪ್ರಕ್ರಿಯೆಯು ನಿಮ್ಮನ್ನು ಅಧ್ಯಾತ್ಮ ಪ್ರಪಂಚಕ್ಕೆ ಕರೆದೊಯ್ಯುತ್ತದೆ ಎನ್ನುತ್ತಾರೆ. ನೀವು 'ನಮಗೆ ಶರಣಾಗಿ ನಿಮ್ಮೆಲ್ಲ ತೊಂದರೆಗಳನ್ನು ಸಮರ್ಪಿಸಿ' ಎನ್ನುವಿರಿ. ಹಾಗಾದರೆ ಆರ್ಟ್ ಆಫ್ ಲಿವಿಂಗ್‍ನಲ್ಲಿ ಅಧ್ಯಾತ್ಮ ಪ್ರಪಂಚಕ್ಕೆ ಮರಳಿಸುವ ಪ್ರಕ್ರಿಯೆ ಯಾವುದು? 
ಶ್ರೀ ಶ್ರೀ ರವಿಶಂಕರ್: ಇದುವೇ! ಕೃಷ್ಣನು 'ಎಲ್ಲದರಲ್ಲಿಯೂ ಹಾಗೂ ಎಲ್ಲರಲ್ಲಿಯೂ ನನ್ನನ್ನು ಮತ್ತು ನನ್ನಲ್ಲಿ ಎಲ್ಲರನ್ನೂ ಕಾಣುವವರೇ ಜ್ಞಾನಿಗಳು' ಎಂದೂ ಕೂಡ ಹೇಳಿದ್ದಾನೆ. ನೀವು ಅದನ್ನೇಕೆ ಮರೆತಿರಿ? 'ನಾನು ಪ್ರತಿ ಯುಗದಲ್ಲಿಯೂ ಮರಳುತ್ತೇನೆ' ಎಂಬುದನ್ನೂ ಹೇಳಿರುವನಲ್ಲವೇ!
ಪ್ರಶ್ನೆ: ನನ್ನ ಪತಿಯು ಕೋಪ ಬಂದಾಗ ಅವಾಚ್ಯ ಪದಗಳನ್ನಾಡುತ್ತಾರೆ ಮತ್ತು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಗೊಳ್ಳುತ್ತಾರೆ. ನಂತರ ಅವರು ಆಡಿದ ಮಾತುಗಳನ್ನು ಮರೆತುಹೋಗುತ್ತಾರೆ, ನಾನು ಅಳುತ್ತಲೇ ಇರುತ್ತೇನೆ. ಎರಡನೆಯದಾಗಿ, ನನ್ನಿಂದಲೇ ಅವರು ಕೋಪಗೊಳ್ಳುವುದೆಂದು ನನ್ನನ್ನು ದೂಷಿಸುತ್ತಾರೆ. ಈ ಸಂದರ್ಭದಲ್ಲಿ ಏನು ಮಾಡುವುದೆಂದು ದಯವಿಟ್ಟು ತಿಳಿಸಿ. 
ಶ್ರೀ ಶ್ರೀ ರವಿಶಂಕರ್: ನೋಡಿ, ಅವರು ಹೇಳಿ ಮರೆತುಬಿಡುತ್ತಾರೆ, ಅಲ್ಲವೇ? ಅವರು ದುಷ್ಟ ಮಾತುಗಳನ್ನಾಡಿ ಮರೆತು ಬಿಡುತ್ತಾರೆ, ಹಾಗೆಯೇ ನೀವೂ ಕೇಳಿ ಮರೆತುಬಿಡಿ. 'ಹಾಗೆನ್ನಬೇಡಿ, ಹಾಗೆನ್ನಬೇಡಿ' ಎಂದು ಅವರಿಗೆ ಹೇಳುತ್ತಾ ನಿಮ್ಮ ಹೃದಯದಲ್ಲಿ ಅದನ್ನೇ ಹಿಡಿದಿಟ್ಟುಕೊಳ್ಳುವ ಬದಲು ಅವರು ಕೋಪಗೊಂಡಾಗ ನೀವು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಳ್ಳಿ. ಅವರು ಏನಾದರೂ ಹೇಳಲು ಆರಂಭಿಸಿದ ತಕ್ಷಣ ಕಿವಿಯ ಓಲೆಗಳಲ್ಲಿ ಹತ್ತಿಯನ್ನು ಇಟ್ಟುಕೊಂಡು ಮಂದಹಾಸ ಬೀರಿ.
ಜನರು ಎಷ್ಟು ದೊಡ್ಡ ದೊಡ್ಡ ಓಲೆಗಳನ್ನು ಧರಿಸುತ್ತಾರೆಂದರೆ ಹಕ್ಕಿಗಳೂ ಬಂದು ಅಲ್ಲಿ ಕೂರಬಹುದು. ಹಾಗೆಯೇ ನೀವು ಮಾಡಿ. ಇದು ಫ್ಯಾಷನ್ ಆಗಬಹುದು, ನೀವು ಈ ಟ್ರೆಂಡನ್ನು ಪ್ರಾರಂಭಿಸಬಹುದು - ಕಿವಿಯ ಓಲೆಗಳಲ್ಲಿ ಹತ್ತಿ. ನಿಮ್ಮ ಪತಿ ಏನಾದರೂ ಹೇಳಿದ ತಕ್ಷಣ ನೀವು ಇದನ್ನು ಹಾಕಿಕೊಳ್ಳಿ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ.
ಅಥವಾ ನೀವು ನಿಧಾನವಾಗಿ ಅಲ್ಲಿಂದ ನುಸುಳಿಕೊಳ್ಳಬಹುದು. ಅವರು ಕೋಪಗೊಂಡ ತಕ್ಷಣ ನೀವು ಬಾತ್ ರೂಮಿಗೆ ಹೋಗಬೇಕೆಂದು ಹೇಳಿ ಅರ್ಧ ಅಥವಾ ಒಂದು ಗಂಟೆಯ ಕಾಲ ಅಲ್ಲಿಯೇ ಇರಿ. ಅಥವಾ ಓಡಾಡಲು ಹೋಗಿ; ಯಾವುದಾದರೊಂದು ತಂತ್ರವನ್ನು ಬಳಸಿ.
ಒಬ್ಬ ವ್ಯಕ್ತಿಗೆ ಈ ರೀತಿಯ ಗುಣವಿದೆ ಎಂದು ನಿಮಗೆ ತಿಳಿದಾಗ ಸುಮ್ಮನೆ ಕುಳಿತು ಅತ್ತು ಕರೆದು ನೀವು ದುಃಖಿತರಾಗುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ಹೀಗೆಯೇ ಮಾಡಲ್ಪಟ್ಟಿದ್ದಾರೆ, ಅವರ ಬೆಳವಣಿಗೆಯೇ ಹೀಗಿದೆ, ಹೌದು!
ಪ್ರಶ್ನೆ: ಹಿತ್ತಲಿನಲ್ಲಿ ಈಶಾನ್ಯ ದಿಕ್ಕಿನಲ್ಲಿ ಬೃಹದಾಕಾರದ ಸುಂದರವಾದ ಒಂದು ಮರವಿದ್ದಾಗ, ಆ ಮನೆಯಲ್ಲಿ ವಾಸಮಾಡುವ ಜನರ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಾಸ್ತುಶಾಸ್ತ್ರವು ಬೋಧಿಸುತ್ತದೆ. ಈ ಮರವನ್ನು ಕಡಿದು ಹಾಕಬಹುದೇ ಅಥವಾ ಅಹಿಂಸಾತ್ಮಕವಾದ ಯಾವುದಾದರೂ ಪರಿಹಾರವಿದೆಯೇ? 
ಶ್ರೀ ಶ್ರೀ ರವಿಶಂಕರ್: ಹೌದು, ಈಶಾನ್ಯ ದಿಕ್ಕಿನಲ್ಲಿ ಅಂತಹುದೇನಾದರೂ ಕಂಡುಬಂದಲ್ಲಿ ಆ ಮರದ ಮೇಲೆ ಒಂದು ಶಿವಲಿಂಗವನ್ನು ಇಡುವುದೇ ಪರಿಹಾರ. ಒಂದು ಚಿಕ್ಕ ಶಿವಲಿಂಗ ಅಥವಾ ಗಣೇಶನ ಮೂರ್ತಿಯನ್ನು ಆ ಮರದ ಮೇಲೆ ಅಂಟಿಸಬಹುದು. ಇದೂ ವಾಸ್ತುಶಾಸ್ತ್ರದ ಪರಿಹಾರಗಳಲ್ಲಿ ಒಂದು. ಅಥವಾ ಸುಮ್ಮನೆ 'ಓಂ ನಮಃ ಶಿವಾಯ' ಎಂದು ಬರೆಯಿರಿ, ನೀವು ಮರವನ್ನು ಕತ್ತರಿಸಬೇಕಾಗಿಲ್ಲ.
ನಾವೂ ಕೂಡ ಒಂದು ಸುಂದರವಾದ ಮರವನ್ನು ಕಡಿದುಹಾಕುವುದನ್ನು ಸಮ್ಮತಿಸುವುದಿಲ್ಲ! ಈಶಾನ್ಯ ಮೂಲೆಯು ದೇವಮೂಲೆ. ಆದ್ದರಿಂದ ಅದು ಪೂಜಾಪ್ರಾರ್ಥನೆಗಳ ಸ್ಥಾನವಾಗಬೇಕು, ನೀವು ಆ ಜಾಗದಲ್ಲಿ ಒಂದು ಯೋಗ ಮ್ಯಾಟ್ ಅಥವಾ ಮೇಜನ್ನು ಹಾಕಿ ಕುಳಿತು ಧ್ಯಾನ ಮಾಡಬಹುದು. ಧ್ಯಾನ ಮಾಡುವ ಸ್ಥಳವು ಈಶಾನ್ಯ ದಿಕ್ಕು, ಹಾಗಾಗಿ, ಅಲ್ಲಿ ಯಾವುದೇ ತಡೆಗಳು ಇಲ್ಲದಿದ್ದರೆ ಉತ್ತಮವೆಂದು ಹೇಳುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ದೇವಸ್ಥಾನವಿದ್ದರೆ ಪರವಾಗಿಲ್ಲ. ಸಾಮಾನ್ಯವಾಗಿ, ದೇವಸ್ಥಾನವು ಎತ್ತರವಾಗಿದ್ದು ಮೇಲೆ ಒಂದು ದೊಡ್ಡದಾದ ಗೋಪುರ ಎತ್ತರವಾಗಿರುತ್ತದೆ. ಅದರ ಬಗ್ಗೆ ಯೋಚನೆ ಮಾಡಬೇಡಿ. ವಾಸ್ತುವಿನ ಯಾವುದೇ ಸಣ್ಣ ದೋಷಗಳನ್ನು ಒಂದು ಸರಳವಾದ ಸೂತ್ರದಿಂದ ಸರಿಪಡಿಸಬಹುದು - 'ಓಂ ನಮಃ ಶಿವಾಯ'.
ಪ್ರಶ್ನೆ: ಗುರೂಜಿ, ಒಂದು ವಿನಂತಿ - ನಾಳೆ ಸೋಮವಾರ ಬೆಳಿಗ್ಗೆ ನಾವು ನಿಮ್ಮೊಡನೆ ರುದ್ರ ಪೂಜೆಯನ್ನು ಏರ್ಪಡಿಸಬಹುದೇ? 
ಶ್ರೀ ಶ್ರೀ ರವಿಶಂಕರ್: ಆಗಲಿ, ನಾವೆಲ್ಲರೂ ಒಟ್ಟಿಗೆ ಕುಳಿತು ರುದ್ರ ಪೂಜೆಯನ್ನು ಕೇಳಬಹುದು. ಮೊದಲನೆಯ ಬಾರಿ ಉನ್ನತ ಧ್ಯಾನ ಶಿಬಿರ ಮಾಡುವವರಿಗೆ ಅರ್ಥವಾಗದಿರಬಹುದು, ಆದರೆ ಇದು ಕೇವಲ ಸಂಸ್ಕøತ ಮಂತ್ರೋಚ್ಚಾರ. ನೀವು ಸುಮ್ಮನೆ ಕುಳಿತು ಮಂತ್ರಗಳನ್ನು ಆಲಿಸಬಹುದು. ಇದು ಮಂತ್ರಗಳ ಸ್ನಾನ ಮಾಡಿದಂತೆ.
ಪ್ರಶ್ನೆ: ಗುರೂಜಿ, ನಾನು ಕಳೆದುಹೋದ ಭೂತಕಾಲವನ್ನು ಅದ್ಭುತವಾಗಿತ್ತೆಂದುಕೊಂಡು ಹಿಡಿದಿಟ್ಟುಕೊಂಡಿದ್ದೇನೆ. ಹಿಂದಿನದನ್ನು ಬಿಟ್ಟುಬಿಡಬೇಕೆಂದು ನನಗೆ ಗೊತ್ತು, ಆದರೆ ನಾನು ಅದರೊಂದಿಗೆ ವ್ಯಸ್ತವಾಗಿರುತ್ತೇನೆ. ಏನು ಮಾಡುವುದು? 
ಶ್ರೀ ಶ್ರೀ ರವಿಶಂಕರ್: ಹೌದು, ನೀನೀಗ ಏನು ಹೇಳಿದೆ? ಅದು ಕಳೆದುಹೋದ ಭೂತಕಾಲ, ಚಿಂತಿಸಬೇಡ. ಈಗ?
ಪ್ರಶ್ನೆ: ಗುರೂಜಿ, ಸೇವೆಯು ಧ್ಯಾನಕ್ಕೆ ಹೇಗೆ ಸಹಾಯಕರ? 
ಶ್ರೀ ಶ್ರೀ ರವಿಶಂಕರ್: ಹೌದು, ನೀವು ಸೇವೆ ಮಾಡಿದಾಗ, ನೀವು ಯಾರಿಗೆ ಸೇವೆ ಮಾಡಿದರೂ, ಅದು ನಿಮಗೆ ಸಕಾರಾತ್ಮಕವಾದ ಶಕ್ತಿ ಹಾಗೂ ಪುಣ್ಯವನ್ನು ತರುತ್ತದೆ. ಈ ಪುಣ್ಯವೇ ನಿಮ್ಮನ್ನು ಧ್ಯಾನದಲ್ಲಿ ಆಳವಾಗಿ ಮುಳುಗಿಸುತ್ತದೆ. ನೀವು ಧ್ಯಾನದಲ್ಲಿ ಆಳವಾಗಿ ಹೋಗಲು ಸಾಧ್ಯವಾಗುತ್ತಿಲ್ಲವಾದರೆ, ಅದು ನಿಮ್ಮ ಸ್ವಾರ್ಥದ ಕಾರಣದಿಂದ, ನೀವು ಸದಾಕಾಲ ನಿಮ್ಮ ಬಗ್ಗೆಯೇ ಯೋಚಿಸುತ್ತಿರುವುದರಿಂದ.ನೀವು ಸ್ವಲ್ಪವಾದರೂ ಯಾವುದಾದರೂ ಸೇವೆಯನ್ನು ಮಾಡಿದರೆ, ಸಮಾಜಕ್ಕೆ ಯಾವುದೇ ಸತ್ಕಾರ್ಯವನ್ನು ಮಾಡಿದರೆ, ಅದು ನಿಮಗೆ ಹೆಚ್ಚು ಹೆಚ್ಚು ಪುಣ್ಯವನ್ನು ತರುತ್ತದೆ ಮತ್ತು ನಿಮಗೆ ಧ್ಯಾನದಲ್ಲಿ ಹೆಚ್ಚು ಆಳವಾಗಿ ಮುಳುಗಲು ಸಹಾಯ ಮಾಡುತ್ತದೆ. ಇದು ಒಂದು ವಾಸ್ತವಂಶ ಆದರೆ ಇದೊಂದೇ ಅಲ್ಲ !
ಪ್ರಶ್ನೆ: ಗುರೂಜಿ, ಜೀವನ ಕಲೆಯ ಸೂತ್ರಗಳನ್ನು ಉದ್ಯೋಗದಲ್ಲಿ ಅಳವಡಿಸಲು ನನಗೆ ಕಷ್ಟವಾಗುತ್ತಿದೆ. ನನ್ನ ವೈಯಕ್ತಿಕ ಜೀವನದಲ್ಲಿ ನಾನು ಅವುಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಅರಿತಿದ್ದೇನೆ ಆದರೆ ಉದ್ಯೋಗದಲ್ಲಿ ವ್ಯಾವಹಾರಿಕ ಮೌಲ್ಯ ಮತ್ತು ಜೀವನ ಕಲೆಯ ಸೂತ್ರಗಳನ್ನು ಮೇಳೈಸುವಲ್ಲಿ ಕಷ್ಟವಾಗುತ್ತಿದೆ. ಈ ಸೂತ್ರಗಳನ್ನು ಅಳವಡಿಸಲು ಕೆಲವು ಉದಾಹರಣೆಗಳನ್ನು ಕೊಡಬಲ್ಲಿರಾ? 
ಶ್ರೀ ಶ್ರೀ ರವಿಶಂಕರ್: ತತ್ವಗಳು ತಾವಾಗಿಯೇ ಸಹಜವಾಗಿ ಹಾಗೂ ಸ್ವಯಂಪ್ರೇರಿತವಾಗಿ ಪ್ರಯೋಗಗೊಳ್ಳುತ್ತವೆ, ಸೂತ್ರವನ್ನು ಅಳವಡಿಸಲು ನೀವು ಪರಿಶ್ರಮ ಪಡಬೇಕಾಗಿಲ್ಲ.
ಯಾವ ಸೂತ್ರ? ಜನರನ್ನು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ - ನಿಮ್ಮ ಮನಸ್ಸಿನಲ್ಲಿ ಅದಿದ್ದರೆ ನೀವು ತಂತಾನೇ ಅದನ್ನು ಪ್ರಯೋಗಿಸಲು ಆರಂಭಿಸುವಿರಿ. ಹಾಗಾಗಿ, ಜೀವನ ಕಲಾ ಶಿಬಿರದ ಯಾವುದೇ ಸೂತ್ರಗಳು ನೀವು ಒತ್ತಾಯಪೂರ್ವಕವಾಗಿ ಅಳವಡಿಸುವಂತಹವಲ್ಲ. ತಿಳಿಯಿತೇ?
ಗೆಲುವು ಹಾಗೂ ಸೋಲುಗಳಲ್ಲಿ ನಿಮ್ಮ ಸ್ಥಿರತೆಯನ್ನು ಕಾಪಾಡಿಕೊಳ್ಳಿ - ಇದು ಕೂಡ. ನೀವು ಗಮನಿಸಿಲ್ಲವೇ? ಪ್ರಾಣಾಯಾಮ, ಕ್ರಿಯೆ ಎಲ್ಲ ಮಾಡಿದ ನಂತರ ನಿಮ್ಮ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ಥಿತಿ ಉತ್ತಮವಾಗಿದೆಯೆಂದೆನಿಸುವುದಿಲ್ಲವೇ? ಸಂದರ್ಭಗಳನ್ನು ನಿಭಾಯಿಸಲು ನೀವು ಹೆಚ್ಚು ಪ್ರಬಲರಾಗಿರುವಿರೆಂದು ಭಾವಿಸುವಿರಿ. ಎಷ್ಟು ಜನರಿಗೆ ಹೀಗೆನಿಸುತ್ತದೆ? (ಬಹಳ ಜನ ಕೈ ಎತ್ತುವರು.) ನೋಡಿ, ಎಲ್ಲರೂ. ಎಲ್ಲರಿಗೂ ಉತ್ತಮವೆನಿಸಿದೆ. ಹಾಗೆಯೇ ಸನ್ನಿವೇಶಗಳು ಉತ್ತಮಗೊಳ್ಳುತ್ತಾ ಹೋಗುತ್ತವೆ. ವರ್ತಮಾನದ ಕ್ಷಣದಲ್ಲಿರಿ ಎಂದು ನಾವು ಹೇಳುತ್ತೇವೆ, ಅದೂ ಕೂಡ ಬಹಳ ಸ್ವಯಂಪ್ರೇರಿತವಾಗಿ ಆಗುತ್ತದೆ, ಹೌದು!
ಪ್ರಶ್ನೆ: ಗುರೂಜಿ, ಕೆಲವು ಬಾರಿ ಸನ್ನಿವೇಶಗಳು ನಮ್ಮ ಶಾಂತಿಯನ್ನು ಕೆಡಿಸಲೆಂದೇ ಉಂಟಾಗುತ್ತವೆ ಎಂದು ಏಕೆ ಭಾಸವಾಗುತ್ತವೆ? ಮತ್ತು ನಮ್ಮ ಅತ್ಯುತ್ತಮ ಪ್ರಯತ್ನಗಳ ನಂತರವೂ ಜನರು ಅಸಂಬದ್ಧವಾಗಿ ಏಕೆ ವರ್ತಿಸುತ್ತಾರೆ? 
ಶ್ರೀ ಶ್ರೀ ರವಿಶಂಕರ್: ನೀವು ಸದಾ ತರ್ಕಬದ್ಧವಾಗಿಯೇ ವರ್ತಿಸುವಿರಾ? ನಿಮ್ಮನ್ನು ನೀವು ಈ ಪ್ರಶ್ನೆಯನ್ನು ಕೇಳಿಕೊಳ್ಳಿ. ನೀವೂ ಕೆಲವೊಮ್ಮೆ ಅಸಂಬದ್ಧವಾಗಿ ವರ್ತಿಸುತ್ತೀರಲ್ಲವೇ? ಹಾಗೆಯೇ ಎಲ್ಲರೂ ಕೂಡ. ಎಲ್ಲರೂ ನಿಮ್ಮದೇ ಪ್ರತಿಬಿಂಬವಲ್ಲದೇ ಬೇರೇನೂ ಅಲ್ಲ ಮತ್ತು ನೀವು ಇತರರ ಪ್ರತಿಬಿಂಬವಲ್ಲದೇ ಬೇರೇನೂ ಅಲ್ಲ. ಹಾಗಾಗಿ ಅವರ ವರ್ತನೆಯು ಅಪಕ್ವವಾಗಿದ್ದರೆ ಅವರಿಗೆ ಪ್ರಬುದ್ಧಗೊಳ್ಳಲು ಹೆಚ್ಚು ಸಮಯ ಬೇಕು. ತಾಳ್ಮೆಯನ್ನು ಹೊಂದಿ. ಅವರಿಗೆ ಜ್ಞಾನದ ಕೊರತೆಯಿದ್ದರೆ ಜ್ಞಾನವನ್ನು ನೀಡಿ. ಸುಮ್ಮನೆ ಕುಳಿತುಕೊಂಡು 'ಇತರರು ಏಕೆ ಹೀಗಿದ್ದಾರೆ?' ಎಂದು ಯೋಚಿಸುವುದರಲ್ಲಿ ಅರ್ಥವಿಲ್ಲ. ಸಂಭವಿಸುತ್ತಿರುವ ವಿಷಯಗಳ ಬಗ್ಗೆ ನೀವು ಹೆಚ್ಚು ಚಿಂತಿಸುತ್ತೀರಿ. 'ಓಹ್! ಇದು ಹೀಗೇಕೆ ನಡೆಯುತ್ತಿದೆ? ಈ ವ್ಯಕ್ತಿಯು ಹೀಗೇಕೆ?' ಎಂದು. ನೀವು ಇದನ್ನು ನಿಲ್ಲಿಸಬೇಕು. ನೀವೇನು ಮಾಡುತ್ತಿರುವಿರೆಂದು ಗಮನಿಸಬೇಕು ಏಕೆಂದರೆ ನೀವು ಮಾಡಬಹುದಾದ ಹಾಗೂ ಮಾಡುತ್ತಿರುವ ಕಾರ್ಯಗಳ ಮೇಲೆ ಮಾತ್ರ ನೀವು ಹಿಡಿತವನ್ನು ಹೊಂದಲು ಸಾಧ್ಯ. ಸಂಭವಿಸುವ ಸನ್ನಿವೇಶಗಳು ಅಥವಾ ಇತರರ ಮೇಲೆ ನಿಮಗೆ ಯಾವುದೇ ಹತೋಟಿಯಿಲ್ಲ. ಆದರೆ ನಾವು ಇದರ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ನೀವೇನು ಮಾಡುತ್ತಿರುವಿರಿ, ನೀವು ಹೇಗೆ ವರ್ತಿಸುತ್ತಿರುವಿರಿ, ನಿಮ್ಮ ಮನೋಭಾವವೇನು, ನಿಮ್ಮೊಳಗೆ ಏನಾಗುತ್ತಿದೆ ಎಂಬುದನ್ನು ನೀವು ಗಮನಿಸುವುದೇ ಇಲ್ಲ. ನಿಮ್ಮ ಅಧೀನದಲ್ಲಿರುವ ವಿಷಯಗಳನ್ನು ನೀವು ಅರಿಯುವುದೇ ಇಲ್ಲ, ಆದರೆ ನೀವು ಇತರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಸಂದರ್ಭವನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ, ಅದಾಗದಿದ್ದಾಗ ಇತರರನ್ನು ದೂಷಿಸುವಿರಿ. ತಿಳಿಯಿತೇ? ಇತರರ ಮನಸ್ಸಿನ ಮೇಲೆ ನಿಮಗೆ ಯಾವುದೇ ನಿಗ್ರಹವಿರುವುದಿಲ್ಲ ಆದರೂ ನೀವು ಅವರ ಮನಸ್ಸುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ನೀವು ಕೇವಲ ನಿಮ್ಮ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಬಹುದು, ಆದರೆ ನೀವು ಅದನ್ನು ಗಮನಿಸುವುದೇ ಇಲ್ಲ, ಅಲ್ಲವೇ? ಈ ಪ್ರಪಂಚವು ದುಃಖದಲ್ಲಿ ಮುಳುಗಿರುವುದು ಈ ಕಾರಣದಿಂದಲೇ. ಸಂದರ್ಭಗಳನ್ನು ನಿಯಂತ್ರಿಸುವ ಪ್ರಯತ್ನವನ್ನು ನಿಲ್ಲಿಸಿ ನೀವು ಮಾಡುತ್ತಿರುವುದರ ಮೇಲೆ ಪ್ರಭುತ್ವವನ್ನು ಸಾಧಿಸಿದರೆ ನೀವು ಹೆಚ್ಚು ಪ್ರಬಲರು, ಸಫಲರು, ಯಶಸ್ವಿ ಹಾಗೂ ಸುಖಿಗಳಾಗುವಿರಿ.