ಭಾನುವಾರ, ಜುಲೈ 1, 2012

ಸಮಯ ಪಕ್ವವಾದಾಗ ಸೂಕ್ತ ಪ್ರತಿಫಲ ದೊರೆಯುತ್ತದೆ

01
2012
Jul
ಬೂನ್, ನಾರ್ತ್ ಕೆರೋಲಿನಾ

ಪ್ರಶ್ನೆ: ಅತೃಪ್ತ ಬಯಕೆಗಳನ್ನು ಏನು ಮಾಡುವುದು? ಸಂಬಂಧಗಳಲ್ಲಿ ಸಮೃದ್ಧಿ ಹೊಂದುವ ಜೀವಮಾನದ ಬಯಕೆಯು ಅತೃಪ್ತವಾಗಿದೆ. ಕಾಲ ಕಳೆದಂತೆಲ್ಲಾ ನಾನು ನಿರಾಶೆ, ವಿಷಾದಗಳನ್ನು ಅನುಭವಿಸುತ್ತಿದ್ದೇನೆ ಹಾಗೂ ಶಕ್ತಿಯು ಕಳೆದುಕೊಂಡಂತಾಗಿದೆ. ಈ ಬಯಕೆಗಳನ್ನು ನಾನು ಪ್ರಕಟಪಡಿಸಿ, ಅವುಗಳನ್ನು ಹೋಗಲು ಬಿಡುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ಅದೊಂದು ಜೀವಮಾನದ ಬಯಕೆಯೆಂದು ನೀನು ಹೇಳುತ್ತಿರುವೆ. ಅದು ನಿಜವಾಗಿ ಒಂದು ಜೀವಮಾನದ ಬಯಕೆಯೇ? ನೀನೊಂದು ಮಗುವಾಗಿದ್ದಾಗ ಅಥವಾ ಹದಿಹರೆಯದಲ್ಲಿದ್ದಾಗ ನಿನ್ನಲ್ಲಿ ಅದೇ ಬಯಕೆಯಿತ್ತೇ? ಸುಮ್ಮನೆ ಅದರ ಕಡೆಗೊಮ್ಮೆ ನೋಡು. ನಿನ್ನ ಬಯಕೆಗಾಗಿ ನೀನು ಅಷ್ಟೆಲ್ಲಾ ಪ್ರಯತ್ನ ಮತ್ತು ಸಮಯ ಹಾಕುವಷ್ಟು ಅದು ಬೆಲೆಬಾಳುತ್ತದೆಯೇ? ಅಥವಾ ನಿನ್ನ ಜೀವನವು ಬೇರೆ ಯಾವುದಾದರೂ ರೀತಿಯಲ್ಲಿ ಬಹಳ ಪ್ರಯೋಜನಕಾರಿಯಾಗಬಹುದೇ? ಇವುಗಳು ನೀನು ವಿಮರ್ಶಿಸಬೇಕಾದ ಕೆಲವು ವಿಷಯಗಳು. ನಿನ್ನಲ್ಲಿ ಶಕ್ತಿಯು ತುಂಬಿದಂತೆಲ್ಲಾ, ಬಿಟ್ಟುಬಿಡು ಮತ್ತು ಬಯಕೆಗಳು ಹಾಗೇ ನೆರವೇರುತ್ತವೆ ಎಂಬುದನ್ನು ನೀನು ಕಂಡುಕೊಳ್ಳುವೆ. ನೀನು ಅವುಗಳಿಗೆ ಹೆಚ್ಚು ಜೋತುಬಿದ್ದಷ್ಟೂ, ಹೆಚ್ಚು ಹಿಡಿದಿಟ್ಟುಕೊಂಡು ಹಂಬಲಿಸಿದಷ್ಟೂ, ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಅದೊಂದು ವಾಸ್ತವ.
ಪ್ರಶ್ನೆ: ಪ್ರೀತಿಯ ಗುರೂಜಿ, ನೀವು ನನ್ನನ್ನು ಪ್ರೀತಿಸುತ್ತೀರೆಂದು ನನಗೆ ಗೊತ್ತು, ಆದರೆ ನಾನು ನನ್ನನ್ನು ಪ್ರೀತಿಸುವುದಿಲ್ಲ. ನಾನು ನನ್ನೊಂದಿಗೆ ಹಾಗೂ ನನ್ನ ಸುತ್ತಲಿರುವ ಇತರರೊಂದಿಗೆ ಹೆಚ್ಚು ನಿರಾಯಾಸದಿಂದ ಬೆರೆಯಬೇಕೆಂದು ಆಶಿಸುತ್ತೇನೆ. ಏನು ಮಾಡುವುದು? 
ಶ್ರೀ ಶ್ರೀ ರವಿಶಂಕರ್: ನೀನು ಸರಿಯಾದ ಕೆಲಸವನ್ನು ಮಾಡುತ್ತಿರುವೆ; ಉನ್ನತ ಧ್ಯಾನ ಶಿಬಿರ. ಶಿಬಿರದಲ್ಲಿ ನಾವು ಮಾಡುವ ಮೊದಲ ವಿಷಯ ಅದು, ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ಹಾಗೂ ನಿಮ್ಮ ಸಂಗಾತಿಯನ್ನು ಹೊಗಳುವುದು. ನೀನದನ್ನು ಮಾಡಿಲ್ಲವೇ? ಅದನ್ನು ಪ್ರಾಮಾಣಿಕವಾಗಿ ಮಾಡು. ಇದು ಕೇವಲ ಇನ್ನೊಂದು ಅಭ್ಯಾಸ ಮತ್ತು ಅವರು ನನ್ನಲ್ಲಿ ಸುಮ್ಮನೇ ಹೊಗಳಲು ಹೇಳುತ್ತಿದ್ದಾರೆ ಎಂದು ಯೋಚಿಸಬೇಡ. ಇಲ್ಲ! ಅದನ್ನು ಗಂಭೀರವಾಗಿ ಮಾಡು. ಇವುಗಳಲ್ಲಿ ಕೆಲವು ವ್ಯಾಯಾಮಗಳು, ಕೆಲವು ಹಂತದಲ್ಲಿ ನಿಮಗೆ ಮೂರ್ಖತೆಯಾಗಿ ತೋರಬಹುದು, ಆದರೆ ಇನ್ನೊಂದು ಹಂತದಲ್ಲಿ, ಅವುಗಳು ನಮ್ಮ ಪ್ರಜ್ಞೆ ಮತ್ತು ನಮ್ಮ ಸುಪ್ತಮನಸ್ಸಿನ ಮೇಲೆ ನಿಜವಾಗಿ ಸ್ವಲ್ಪ ಪ್ರಭಾವವನ್ನು ಬೀರುತ್ತವೆ. ನಿಮ್ಮನ್ನೇ ತೆಗಳುವುದನ್ನು ನಿಲ್ಲಿಸಿ - ಇದು ಆಧ್ಯಾತ್ಮದ ಮೊದಲನೆಯ ನಿಯಮ. ನೀವು ಹೆಚ್ಚು ತೆಗಳಿದಷ್ಟೂ ನೀವು ನಿಮ್ಮ ಆತ್ಮದಿಂದ ಹೆಚ್ಚು ದೂರವಾಗುವಿರಿ. ಆದುದರಿಂದ ನೀವು ನಿಮ್ಮನ್ನು ತೆಗಳುವುದನ್ನು ನಿಲ್ಲಿಸಬೇಕು ಮತ್ತು ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಬೇಕು. ಹೀಗೆ ಮಾಡುವುದನ್ನು ಮುಂದುವರಿಸಿ ಮತ್ತು ಅದು ಆಗುತ್ತದೆ. ಕೆಲವೊಮ್ಮೆ ಈ ಮಾದರಿಗಳು, ಈ ಹಳೆಯ ಅಭ್ಯಾಸಗಳು ಬಿಟ್ಟು ಹೋಗಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. "ನಾನು ನನ್ನನ್ನು ತೆಗಳುವುದನ್ನು ನಿಲ್ಲಿಸಬೇಕು" ಎಂದು ನೀವು ಜಾಗೃತರಾದ ಕೂಡಲೇ ನಿಮ್ಮ ಚೈತನ್ಯವು ಮೇಲೇರುತ್ತದೆ. ಪ್ರಾಣಾಯಾಮ ಮಾಡಿ, ಅದು ಖಂಡಿತವಾಗಿ ಸಹಾಯ ಮಾಡುತ್ತದೆ. ಚೈತನ್ಯವು ಹೆಚ್ಚಿರುವಾಗ, ನೀವು ನಿಮ್ಮನ್ನೇ ತೆಗಳುವುದನ್ನು ಮುಂದುವರಿಸಲು ಸಾಧ್ಯವೇ ಇಲ್ಲ. ಅದು ಸಾಧ್ಯವಿಲ್ಲ.
ಪ್ರಶ್ನೆ: ನಾನು ನನ್ನ ಭಯವನ್ನು ತೊಡೆದು ಹಾಕುವುದು ಹೇಗೆ? ನಾನು ಎಲ್ಲದಕ್ಕೂ ಭಯಪಡುತ್ತೇನೆ. ಎಲ್ಲವೂ ಭಯಾನಕವಾಗಿದೆ. ಸೋಲಿನ ಭಯ, ಭವಿಷ್ಯದ ಭಯ, ಸಾವಿನ ಭಯ, ಹಾರುವ ಭಯ. ಎಲ್ಲವೂ! ದಯವಿಟ್ಟು ಸಹಾಯ ಮಾಡಿ. 
ಶ್ರೀ ಶ್ರೀ ರವಿಶಂಕರ್: ಭಯವೆಂಬುದು ಕೇವಲ ಒಂದು ಭಾವನೆ ಅಥವಾ ಶರೀರದಲ್ಲಿನ ಒಂದು ಸಂವೇದನೆ. ಅದನ್ನು ಬೇರೆ ಬೇರೆ ವಿಷಯಗಳೊಂದಿಗೆ ಸಂಬಂಧ ಕಲ್ಪಿಸುವ ಅಥವಾ ಜೋಡಿಸುವ ಯಾವುದೇ ಅಗತ್ಯವಿಲ್ಲ. ನಿನ್ನಲ್ಲಾಗುವ ಆ ಮಾದರಿಗಳನ್ನು, ಆ ಶಕ್ತಿಗಳನ್ನು ನೀನು ಗಮನಿಸಲು ಶುರು ಮಾಡಿದಾಗ, ಭಯ, ಪ್ರೀತಿ ಮತ್ತು ದ್ವೇಷ ಎಲ್ಲವೂ ಒಂದು ಭಾಗದಲ್ಲಿ ಆಗುತ್ತಿರುವುದು ಎಂಬುದು ನಿನಗೆ ತಿಳಿಯುತ್ತದೆ ಹಾಗೂ ಪ್ರೀತಿ, ದ್ವೇಷ ಅಥವಾ ಭಯವಾಗಿ ಪ್ರಕಟಗೊಳ್ಳುವುದು ಅದೇ ಶಕ್ತಿ. ನಿನ್ನಲ್ಲಿ ಯಾವುದಾದರೂ ಅನುರಾಗವಿರುವಾಗ; ನೀನು ಯಾವುದರದ್ದಾದರೂ ಬಗ್ಗೆ ಅನುರಾಗಿಯಾಗಿರುವಾಗ, ಭಯವು ಮಾಯವಾಗುತ್ತದೆ. ನಿನ್ನ ಜೀವನದಲ್ಲಿ ಯಾವುದೇ ನಿರ್ದಿಷ್ಟವಾದ ಅನುರಾಗವಿಲ್ಲದಿರುವಾಗ ಭಯವು ಕಾಣಿಸಿಕೊಳ್ಳುತ್ತದೆ. ಇದಲ್ಲವೇ ಆಗಿರುವ ಅನುಭವ? ನಿನ್ನಲ್ಲಿ ಅನುರಾಗವಿದ್ದಾಗ ಮಾತ್ರ ಅಥವಾ ನೀನು ಯಾವುದನ್ನಾದರೂ ಬಲವಾಗಿ ದ್ವೇಷಿಸುವಾಗ ಮಾತ್ರ ಭಯವು ಮಾಯವಾಗುತ್ತದೆ. ನೀನು ಯಾವುದಾದರ ಕಡೆಗಾದರೂ ಬಲವಾದ ದ್ವೇಷ ಅಥವಾ ಬಲವಾದ ಪ್ರೀತಿಯಿರಿಸಿದಾಗ ಭಯವು ಮಾಯವಾಗುತ್ತದೆ. ಈ ಎರಡೂ ಇಲ್ಲದಿರುವಾಗ, ಒಂದು ಸ್ವಲ್ಪ ಅಲೆದಾಡುವ ಭಯವು ಬರುತ್ತದೆ. ಆದರೆ, ಪುನಃ, ಹೆಚ್ಚು ಟೊಳ್ಳು ಮತ್ತು ಖಾಲಿ ಧ್ಯಾನಗಳು, ಪ್ರಾಣಾಯಾಮ, ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗುವುದು; ಇವುಗಳೆಲ್ಲಾ ಅದನ್ನು ತೆಗೆದುಹಾಕುವುದರಲ್ಲಿ ಸಹಾಯ ಮಾಡುತ್ತವೆ.
ಪ್ರಶ್ನೆ: ಒಬ್ಬರಿಗೆ ತಮ್ಮ ತಪ್ಪಿನಿಂದಾಗಿ ಒಂದು ಮಗುವಿದ್ದರೆ, ಮತ್ತು ಅವರು ವಿವಾಹಿತರಾಗಿಲ್ಲದಿದ್ದರೆ; ತಾಯಿಯನ್ನು ಪ್ರೀತಿಸದಿದ್ದರೂ, ತಾಯಿ ಮತ್ತು ಮಗುವನ್ನು ಒಪ್ಪಿಕೊಳ್ಳುವುದು ಮತ್ತು ಮಗುವನ್ನು ಬೆಳೆಸುವುದು; ಹಾಗೂ ಒಂದು ತಪ್ಪಿನ ಕಾರಣದಿಂದಾಗಿ ತನ್ನ ಜೀವನದ ನಿಜವಾದ ಪ್ರೀತಿಯನ್ನು ಕಳೆದುಕೊಳ್ಳುವುದು; ಏನು ಮಾಡಬೇಕು? ಇಷ್ಟೇನಾ? 
ಶ್ರೀ ಶ್ರೀ ರವಿಶಂಕರ್: ಕೇಳು, ಮುಂದೆ ಸಾಗು. ಮುಂದೆ ಸಾಗು! ನನಗೆ ಅಷ್ಟೇ ಹೇಳಲು ಸಾಧ್ಯ. ಕುಳಿತುಕೊಂಡು ಅದರ ಬಗ್ಗೆ ಪರಿತಪಿಸುತ್ತಾ ಇರಬೇಡ, ಸರಿಯಾ. ಸುಮ್ಮನೆ ಮುಂದೆ ಸಾಗು. ಜೀವನವು ಇನ್ನೂ ಹೆಚ್ಚಿನದು. ನಿನಗೆ ನಿರ್ವಹಿಸಲು ಹಲವಾರು ಪಾತ್ರಗಳಿವೆ. ಮೊದಲನೆಯದಾಗಿ, ನೀವು ಈ ಸುಂದರವಾದ ಭೂಗ್ರಹದ ಒಬ್ಬ ಸುಂದರ ನಾಗರಿಕ. ಅದನ್ನು ಗುರುತಿಸಿ; ನೀವು ವಿಶ್ವಪ್ರಕಾಶದ ಒಂದು ಭಾಗ, ಅದನ್ನು ಗುರುತಿಸಿ; ಮತ್ತು ನಂತರ ನಿಮಗೆ ನಿರ್ವಹಿಸಲು ಎಲ್ಲಾ ಪಾತ್ರಗಳಿವ, ಒಬ್ಬಳು ತಾಯಿಯಾಗಿ ಅಥವಾ ಒಬ್ಬ ಮಗನಾಗಿ ಅಥವಾ ಒಬ್ಬಳು ಮಗಳಾಗಿ ಅಥವಾ ಏನಾದರೂ. ನೀವೊಂದು ಸಂಕಲ್ಪ ಮಾಡಿ, "ಯಾವುದೂ ನನ್ನನ್ನು ಕೆಳಕ್ಕೆ ಹಾಕುವುದಿಲ್ಲ. ನಾನು ನಿರ್ವಹಿಸಬೇಕಾಗಿರುವ ಯಾವುದೇ ಪಾತ್ರವನ್ನಾದರೂ ೧೦೦% ನಿರ್ವಹಿಸುತ್ತೇನೆ". ಅಷ್ಟೆ; ಅದು ಆ ರೀತಿಯಲ್ಲಿ ಆಗಲು ಶುರುವಾಗುತ್ತದೆ.  
ಪ್ರಶ್ನೆ: ನನ್ನ ತಾಯಿಯು ಒಂದು ವರ್ಷದ ಹಿಂದೆ ಕ್ಯಾನ್ಸರಿನಿಂದ ತೀರಿಹೋದರು. ನಾನು ನನಗೆ ಸಾಧ್ಯವಿದ್ದಷ್ಟೂ ಮಾಡುತ್ತಿದ್ದೇನೆ, ಆದರೆ ನಾನು ಇದರಿಂದ ಸಂಪೂರ್ಣವಾಗಿ ಬಿಡುಗಡೆಯನ್ನನುಭವಿಸುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ಸಮಯವು ಗುಣಪಡಿಸುತ್ತದೆ. ನಿನ್ನ ದೃಷ್ಟಿಯನ್ನು ವಿಶಾಲವಾಗಿಸು.
ಪ್ರಶ್ನೆ: ನಾನು ಇನ್ನೂ ಹೆಚ್ಚು ಪವಿತ್ರವಾಗುವುದು ಹೇಗೆ? ನಾನು ಸಾಧನೆ, ಸತ್ಸಂಗ ಮತ್ತು ಸೇವೆಗಳನ್ನು ಮಾಡುತ್ತಿದ್ದರೂ, ನಾನು ಬಹಳ ಪವಿತ್ರವಾಗಿದ್ದೇನೆಂದು ಅನ್ನಿಸುವುದಿಲ್ಲ. ನಾನು ಅಹಂಕಾರಿ, ಒರಟು ಮತ್ತು ಗರ್ವವಿರುವ ಜನರನ್ನು, ವಿಶೇಷವಾಗಿ ಆರ್ಟ್ ಆಫ್ ಲಿವಿಂಗಿನ ಜನರನ್ನು ನೋಡುವಾಗ, ನನಗೆ ಬಹಳ ದುಃಖವಾಗುತ್ತದೆ. ಇದನ್ನು ನಾನು ತೊಡೆದು ಹಾಕುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ನೀನು ಎರಡು ವಿಷಯಗಳನ್ನು ಹೇಳುತ್ತಿರುವೆ. ಒಂದು, ಇತರರು ಅಹಂಕಾರಿಗಳು, ಇತರರು ಸರಿಯಿಲ್ಲವೆಂದು ನೀನು ಹೇಳುತ್ತಿರುವೆ; ಮತ್ತು ಇನ್ನೊಂದು ವಿಷಯ ನೀನು ಹೇಳುತ್ತಿರುವುದು ನೀನು ಸರಿಯಿಲ್ಲವೆಂದು. ಇದು ಕೇವಲ ಪ್ರತಿಬಿಂಬ; ನೀನು ಎರಡೂ ಬದಿಗಳಲ್ಲಿ ಪ್ರತಿಬಿಂಬಿಸುತ್ತಿರುವೆ. ನಾನು ಹೇಳುವುದೇನೆಂದರೆ, ನೀನು ಪವಿತ್ರವಾಗಿಲ್ಲವೆಂದು ನಿನಗೆ ಅನ್ನಿಸುವುದಾದರೆ, ಪ್ರಾಣಾಯಾಮ ಮತ್ತು ಸರಿಯಾದ ಆಹಾರವು ಸಹಾಯಕವಾಗಬಹುದು. ಆಗಲೂ ನೀನು ಸರಿಯಿಲ್ಲವೆಂದು ನಿನಗನ್ನಿಸಿದರೆ ಆಗ, ಸುಮ್ಮನೆ ಒಂದೆರಡು ದಿನಗಳ ವರೆಗೆ ಹಣ್ಣು ಮತ್ತು ತರಕಾರಿಗಳ ಪಥ್ಯವನ್ನು ಮಾಡು, ಹಾಡು ಹೇಳು ಹಾಗೂ ಜಪ ಮಾಡು. ನೀನು ಸತ್ಸಂಗದಲ್ಲಿ ಕುಳಿತುಕೊಂಡು ಹಾಡುತ್ತಿರುವಾಗ, ನೀನು ಪರಿಶುದ್ಧವಾಗಿಲ್ಲ ಎಂದು ನೀನು ಹೇಗೆ ಹೇಳಲು ಸಾಧ್ಯ? ಸಾಧ್ಯವೇ ಇಲ್ಲ. ಮನಸ್ಸಿನಲ್ಲಿ ನಿನಗೆ ಎಷ್ಟೇ ಅಪವಿತ್ರತೆಯ ಅನುಭವವಾಗುತ್ತಿದ್ದರೂ, ನೀನು ಸತ್ಸಂಗದಲ್ಲಿ ಕುಳಿತುಕೊಂಡಿರುವಾಗ ಅದೆಲ್ಲವೂ ಮೇಲಕ್ಕೆತ್ತಲ್ಪಟ್ಟಂತೆ ನಿನಗನಿಸುವುದಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ ಆ ರೀತಿ ಅನ್ನಿಸುತ್ತದೆ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ನೋಡಿ! ’ನಹಿ ಜ್ಞಾನೇನ ಸದೃಶಂ ಪವಿತ್ರಂ ಇಹ ವಿದ್ಯತೆ. ತತ್ ಸ್ವಯಂ ಯೋಗ ಸಂಸಿದ್ಧಃ ಕಾಲೇನ್ ಆತ್ಮಾನಿ ವಿಂದತಿ’ - (ಶ್ರೀಮದ್ಭಗವದ್ಗೀತೆ ಅಧ್ಯಾಯ ೪, ಶ್ಲೋಕ ೩೮). ಹಳೆಯ ಮಾತೇನೆಂದರೆ - ನಿಮ್ಮ ಮನಸ್ಸನ್ನು, ನಿಮ್ಮ ಆತ್ಮವನ್ನು ಮತ್ತು ನಿಮ್ಮ ಚೈತನ್ಯವನ್ನು ಪವಿತ್ರಗೊಳಿಸಬಲ್ಲಂತಹ ಜ್ಞಾನಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. ಜ್ಞಾನವು ಪವಿತ್ರಗೊಳಿಸುತ್ತದೆ. ಕುಳಿತುಕೊಂಡು ಅಷ್ಟಾವಕ್ರ ಗೀತವನ್ನು ಅರ್ಧ ಗಂಟೆ ಅಥವಾ ೨೦ ನಿಮಿಷಗಳ ವರೆಗೆ ಕೇಳಿ; ನಿಮಗೆ ಮೇಲೆತ್ತಿದ ಅನುಭವವಾಗುತ್ತದೆ. ಇತರರು ಅಹಂಕಾರಿಗಳು ಎಂಬ ನಿನ್ನ ಅನ್ನಿಸಿಕೆಯ ಬಗ್ಗೆ - ಈ ಜನರು ನನ್ನ ಬಳಿಗೆ, ಇಲ್ಲಿಗೆ, ಆರ್ಟ್ ಆಫ್ ಲಿವಿಂಗಿಗೆ ಬಂದಿರುವುದು ಒಳ್ಳೆಯದು. ನನಗೆ ಇದರ ಬಗ್ಗೆ ಸಂತೋಷವಿದೆ ಮತ್ತು ನನಗೆ ತಾಳ್ಮೆಯಿದೆ, ನೀನೂ ತಾಳ್ಮೆಯಿಂದಿರು. ನಾನು ತಾಳ್ಮೆಯಿಂದ ಕಾಯುತ್ತಿರುತ್ತೇನೆ. ಹೊರಪ್ರಪಂಚದಲ್ಲಿ ಅವರು ಸಮಸ್ಯೆಗಳನ್ನೂ, ಹಲವರಿಗೆ ಬಹಳಷ್ಟು ತೊಂದರೆಗಳನ್ನೂ ಸೃಷ್ಟಿಸಿರುತ್ತಿದ್ದರು. ಕಡಿಮೆಪಕ್ಷ ಇಲ್ಲಾದರೂ ಅವರು ಕಡಿಮೆ ಕಷ್ಟದಲ್ಲಿದ್ದಾರೆ ಹಾಗೂ ಮೊದಲನೆಯ ನಿಯಮವನ್ನು ಅಭ್ಯಾಸ ಮಾಡಲು ಅವರು ನಿನಗೊಂದು ಅಭ್ಯಾಸ ಕೊಡುತ್ತಿದ್ದಾರೆ - ಜನರನ್ನು ಅವರಿದ್ದಂತೆಯೇ ಸ್ವೀಕರಿಸಿ. ಹಾಗೆಯೇ, ಆರ್ಟ್ ಆಫ್ ಲಿವಿಂಗಿನ ಜನರು ಎಲ್ಲಿಂದಲೋ ಬಂದ ವಿಶೇಷವಾದ ಒಂದು ಜಾತಿಯಲ್ಲವೆಂದು ನೀನು ತಿಳಿಯಬೇಕೆಂದು ನಾನು ಬಯಸುತ್ತೇನೆ. ಅವರು ಪ್ರಪಂಚದಲ್ಲಿರುವ ಸಾಮಾನ್ಯ ಜನರು ಹಾಗೂ ಅವರಲ್ಲಿ ಪ್ರಪಂಚದ ಜನರಲ್ಲಿರುವ ಎಲ್ಲಾ ಲಕ್ಷಣಗಳಿವೆ. ಅವರು ಬೇರೆಯಲ್ಲ. ಹೌದು, ಆರ್ಟ್ ಆಫ್ ಲಿವಿಂಗಿನ ಜನರಿಂದ ನೀನು ಹೆಚ್ಚು ನಿರೀಕ್ಷಿಸುವೆ ಯಾಕೆಂದರೆ, ಅವರು ಜ್ಞಾನದಲ್ಲಿ ನೆನೆದಿರುತ್ತಾರೆ, ಅವರು ಪ್ರೀತಿಯಿಂದಿರುತ್ತಾರೆ ಹಾಗೂ ಅವರು ಜನರ ಸೇವೆ ಮಾಡುತ್ತಾರೆಂದು ನೀನು ಯೋಚಿಸುವೆ. ಆದುದರಿಂದ ನಿನ್ನ ನಿರೀಕ್ಷೆಗಳು ಬಹಳಷ್ಟು ಹೆಚ್ಚಾಗಿರುತ್ತವೆ ಯಾಕೆಂದರೆ ಅವರು ಬಹಳ ಸವಲತ್ತುಗಳನ್ನು ಹೊಂದಿದವರೆಂಬುದನ್ನು ನೀನು ನೋಡುವೆ. ಅದು ಸರಿ! ಆದರೆ ಮೊದಲಿಗೆ ನೀನು ನಿನ್ನಿಂದ ಪ್ರಾರಂಭಿಸು, ನೀನು ಬಹಳ ಸವಲತ್ತುಗಳನ್ನು ಹೊಂದಿರುವೆ, ಎಲ್ಲರನ್ನೂ ಸ್ವೀಕರಿಸುವ ತಾಳ್ಮೆ ನಿನ್ನಲ್ಲಿದೆ. ಜನರು ನನ್ನಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ, "ಅಂತಹ ಅಹಂಕಾರಿ, ಕೋಪಿಷ್ಠ ಜನರನ್ನು ಯಾಕೆ ನೀವು ಶಿಕ್ಷಕರನ್ನಾಗಿ ಮಾಡಿದ್ದೀರಿ?", ಮತ್ತು ಹೀಗೆ ಮುಂತಾದವುಗಳನ್ನು. ನಾನವರಿಗೆ ಹೇಳುವುದೇನೆಂದರೆ, ನನಗೆ ಎಲ್ಲಾ ನಮೂನೆಯವರು ಮತ್ತು ಎಲ್ಲಾ ಪ್ರಭೇದಗಳೂ ಬೇಕು; ಎಲ್ಲಾ ರೀತಿಯ ಜನರು. ನಾನು ಅವರನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ, ಎಲ್ಲರೂ ನನ್ನೊಂದಿಗೆ ಹಾಯಾಗಿರುತ್ತಾರೆ ಮತ್ತು ನಾನು ಎಲ್ಲರೊಂದಿಗೂ ಹಾಯಾಗಿರುತ್ತೇನೆ. ಅವರು ಬೆಳೆಯುವುದನ್ನು ನೋಡಲು ನನ್ನಲ್ಲಿ ತಾಳ್ಮೆಯಿದೆ. ಹೀಗೆಯೇ ಆರ್ಟ್ ಆಫ್ ಲಿವಿಂಗ್ ಬೆಳೆದಿರುವುದು. ನಾನು ಪರಿಪೂರ್ಣತೆಗಾಗಿ ಹುಡುಕಿರುತ್ತಿದ್ದರೆ, ನಾವಿಂದು ಇಲ್ಲಿ ಇರುತ್ತಿರಲಿಲ್ಲ. ನಾವಿಂದು ಇಲ್ಲಿ ಕುಳಿತಿರುತ್ತಿರಲಿಲ್ಲ. ನಾನು ಬೇರೆಲ್ಲೋ ಇರುತ್ತಿದ್ದೆ ಮತ್ತು ನೀವು ಬೇರೆಲ್ಲೋ ಇರುತ್ತಿದ್ದಿರಿ. ನಮ್ಮಲ್ಲಿ ತಾಳ್ಮೆಯಿರಬೇಕು. ಅದು ಹೇಗೆಂದರೆ, ಶಾಲೆಯಲ್ಲಿ ಎಲ್ಲಾ ಮಕ್ಕಳೂ ಒಂದೇ ತರಗತಿಯಲ್ಲಿರಬೇಕೆಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ ಹಾಗೂ ಒಂದು ತರಗತಿಯು ಇನ್ನೊಂದು ತರಗತಿಗಿಂತ ಪರಮೋಚ್ಛವಾದದ್ದು ಎಂದೇನೂ ಇಲ್ಲ. ನರ್ಸರಿ ಮಕ್ಕಳು ಪ್ರಾಥಮಿಕ ಶಾಲೆಯ ಮಕ್ಕಳಿಗಿಂತ ಹೆಚ್ಚು ಎಂದೇನೂ ಇಲ್ಲ. ಪರಮೋಚ್ಛವಾದುದು ಎಂದೇನೂ ಇಲ್ಲ, ಅದು ಕೇವಲ ಅವರಿರುವ ರೀತಿ ಅಷ್ಟೆ. ಅದು ಕೇವಲ, ಒಂದು ತರಗತಿಯಿಂದ ಇನ್ನೊಂದಕ್ಕೆ, ಒಂದು ಹಂತದಿಂದ ಇನ್ನೊಂದಕ್ಕೆ ಬೆಳೆಯಲು ಅವರು ತೆಗೆದುಕೊಳ್ಳುವ ಸಮಯ ಮತ್ತು ಗತಿ. ಜನರು ಬೆಳೆಯುತ್ತಲೇ ಇರುತ್ತಾರೆ ಮತ್ತು ನಮ್ಮಲ್ಲಿ ತಾಳ್ಮೆಯಿರಬೇಕು. ನಾನು ಹೇಳುವುದೇನೆಂದರೆ, ಇದು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಮತ್ತು ಇದು ಒಳ್ಳೆಯದು.
ಪ್ರಶ್ನೆ: ನಾನು ನಿಮ್ಮನ್ನು, ಅತ್ಯಂತ ಹಾತೊರೆದು ಹಾಗೂ ನನ್ನೆಲ್ಲಾ ಹೃದಯದಿಂದ ಪ್ರಾಮಾಣಿಕವಾಗಿ ಪ್ರಾರ್ಥಿಸಿಕೊಂಡರೆ, ನಾನು ನಿಮ್ಮಿಂದ ಶಾರೀರಿಕವಾಗಿ ಮೈಲುಗಟ್ಟಲೆ ದೂರದಲ್ಲಿದ್ದರೂ ಸಹ, ನಿಮಗೆ ನನ್ನ ಪ್ರರ್ಥನೆಯನ್ನು ಕೇಳಿ ಅದಕ್ಕೆ ಉತ್ತರ ಕೊಡಲು ಸಾಧ್ಯವೇ? 
ಶ್ರೀ ಶ್ರೀ ರವಿಶಂಕರ್: ನಿನಗೆ ಗೊತ್ತಿದೆಯಾ, ಸೆಲ್ ಫೋನುಗಳಿಗೆ ಮೈಲುಗಳಿರುವುದಿಲ್ಲ. ಸೆಲ್ ಫೋನೆಂಬ ಒಂದು ಸಣ್ಣ ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿರುವ ಕೆಲವು ಗುಂಡಿಗಳನ್ನು ಅದುಮುವ ಮೂಲಕ ನೀನು ಪ್ರಪಂಚದ ಸುತ್ತಲಿರುವ ಜನರೊಂದಿಗೆ ಸಂಪರ್ಕ ಹೊಂದಬಲ್ಲೆಯಾದರೆ, ಒಂದು ಪ್ಲಾಸ್ಟಿಕ್ ಆಟಿಕೆಗಿಂತ ಹಲವು ಪಟ್ಟು ಹೆಚ್ಚು ಶಕ್ತಿಯುತವಾದ ನಿನ್ನ ಮೆದುಳು, ನಿನ್ನ ಹೃದಯ ಹಾಗೂ ನಿನ್ನ ಭಾವನೆಗಳನ್ನು ನೀನು ಯಾಕೆ ಅಲ್ಪವಾಗಿ ಕಾಣುವೆ? ಅದು ಆಗುವುದೆಂದು ನಾನು ಹೇಳುತ್ತೇನೆ, ಅಲ್ಲವೇ? ಜಪಾನಿನಲ್ಲಿ ಅಥವಾ ಪಶ್ಚಿಮ ಕರಾವಳಿಯಲ್ಲಿರುವ ಒಬ್ಬ ಆತ್ಮೀಯ ಮಿತ್ರನಿಗೆ ಏನೋ ಒಂದು ಭಾವನೆಯಿರುತ್ತದೆ ಮತ್ತು ನೀವು ಕೂಡಾ ಅದನ್ನು ಅನುಭವಿಸುತ್ತೀರಿ. ಅವರು ಸಂತೋಷವಾಗಿದ್ದಾರೆ ಮತ್ತು ನೀವು ಸಂತೋಷವಾಗಿದ್ದೀರಿ, ಅವರು ದುಃಖದಲ್ಲಿದ್ದಾರೆ ಮತ್ತು ನೀವು ಕೂಡಾ ದುಃಖದಲ್ಲಿದ್ದೀರಿ, ಇದು ನಿಮಗೆ ಆಗಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ, ಯಾವುದೇ ಮೌಖಿಕ ಸಂಪರ್ಕವಿಲ್ಲದೆಯೇ ಅದು ನಿಮಗೆ ಆಗುತ್ತದೆಯೆಂದು ಅನ್ನಿಸುತ್ತದೆ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ಅದೊಂದು, ಆಗುವಂತಹ ಸಂಪರ್ಕದ ಹಂತ. ಇದೊಂದು ಬಹಳ ಸೂಕ್ಷ್ಮ ಹಾಗೂ ಅತೀಂದ್ರಿಯವಾದ ಸಂಪರ್ಕದ ಹಂತ. ಹೌದು, ಅದು ಇದೆ. ಕೆಲವರಿಗೆ ಅದು ಸೆಲ್ ಫೋನಿನಷ್ಟು ಸ್ಪಷ್ಟವಾಗುವುದಿಲ್ಲ, ಆದರೆ ನೀವು ಗಮನವಿಟ್ಟು ಮತ್ತು ಹಿಂದೆ ತಿರುಗಿ ನೋಡಿದರೆ ನಿಮಗೆ ಕಾಣಿಸುತ್ತದೆ.
ಪ್ರಶ್ನೆ: ಕ್ಷಮಾಪಣೆಯೆಂಬುದರ ನಿಜವಾದ ಅರ್ಥವೇನು? ನಾನು ಒಬ್ಬರನ್ನು ಕ್ಷಮಿಸಲು ಪ್ರಯತ್ನಪಡುತ್ತಿದ್ದೇನೆ ಆದರೆ ನನಗೆ ಅದನ್ನು ೧೦೦% ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅನ್ನಿಸುತ್ತಿದೆ. ನಾನು ಇದಕ್ಕಾಗಿ ಬಹಳಷ್ಟು ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದೇನೆ, ಆದರೆ ನನಗೆ ಅದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ನಿಜವಾಗಿ ಕ್ಷಮಿಸಿ ಮುಂದೆ ಸಾಗಲು ನಾನು ಏನು ಮಾಡಬೇಕು? 
ಶ್ರೀ ಶ್ರೀ ರವಿಶಂಕರ್: ಕ್ಷಮಿಸುವ ಸಂಪೂರ್ಣ ವಹಿವಾಟನ್ನು ಕೇವಲ ಮರೆತುಬಿಡು. ನನಗನಿಸುತ್ತದೆ, ನಿನ್ನಲ್ಲಿ ಬಹಳಷ್ಟು ಬಿಡುವಿನ ವೇಳೆಯಿದೆ. ಅಡಿಗೆಕೋಣೆಗೆ ಬಂದು ಅಲ್ಲಿ ಪಾತ್ರೆಗಳನ್ನು ತೊಳೆ. ಅದು ಬಹಳ ಹಗುರವಾದ ಸೇವೆಯಾದರೆ, ಸುಮಾರು ಹತ್ತು ಸಲ ಮೆಟ್ಟಿಲುಗಳನ್ನು ಹತ್ತಿ ಇಳಿ. ನೀನು ಶಾರೀರಿಕವಾಗಿ ಬಳಲಿದಾಗ, ನಿನ್ನ ಮನಸ್ಸು ಆ ವ್ಯಕ್ತಿಯ ಬಗ್ಗೆ ಚಿಂತಿಸುವುದನ್ನು ಕೂಡಾ ನಿಲ್ಲಿಸುತ್ತದೆ. ನೀನು ದ್ವೇಷ, ಕೋಪ, ಹಗೆತನ ಮತ್ತು ಈ ಎಲ್ಲಾ ಭಾವನೆಗಳನ್ನು ಹೊಂದಿಕೊಂಡು ಯಾರ ಬಗ್ಗೆಯಾದರೂ ಯೋಚಿಸುತ್ತಾ ತಿರುಗಿದರೆ, ಅದು, ನಿನಗೆ ಯಾವುದಾದರ ಬಗ್ಗೆಯಾದರೂ ಇರುವ ಬಲವಾದ ಹಂಬಲ ಅಥವಾ ತಿರಸ್ಕಾರ ನೀನು ಆ ರೀತಿ ಮಾಡುವಂತೆ ಮಾಡುವುದು. ನೀನು ಸ್ವಲ್ಪ ಸೇವೆ ಮಾಡುವುದು ಒಳ್ಳೆಯದು. ನಾನು ಹೇಳುತ್ತೇನೆ, ಅದು ಖಂಡಿತವಾಗಿಯೂ ನಿನಗೆ ಸಹಾಯ ಮಾಡುತ್ತದೆ. ಕ್ಷಮಿಸಬೇಡ, ಪರವಾಗಿಲ್ಲ. ಅಡುಗೆಕೋಣೆಗೆ ಹೋಗಿ, ಯಾವ ಪಾತ್ರೆಯನ್ನು ಚೆನ್ನಾಗಿ ತಿಕ್ಕಬೇಕಾಗುತ್ತದೆಯೋ ವಿಶೇಷವಾಗಿ ಆ ಪಾತ್ರೆಯನ್ನು ತೆಗೆದುಕೋ; ಒಂದು ಬ್ರಶ್ ತೆಗೆದುಕೊಂಡು, ನಿನ್ನೆಲ್ಲಾ ಬಲವನ್ನುಪಯೋಗಿಸಿ ಅದನ್ನು ತಿಕ್ಕುತ್ತಾ ಇರು. ನೆಲವು ಎಲ್ಲಾದರೂ ಕೊಳೆಯಾಗಿದ್ದರೆ, ಸ್ವಲ್ಪ ಸೋಪನ್ನು ಹಾಕು ಮತ್ತು ಆ ವ್ಯಕ್ತಿಯ ಬಗ್ಗೆ ಯೋಚಿಸುತ್ತಾ, ನಿನ್ನೆಲ್ಲಾ ಬಲವನ್ನು ಹಾಕಿ ನೆಲವನ್ನು ತೊಳೆ. ಆ ವ್ಯಕ್ತಿಯ ಬಗ್ಗೆ ನಿನಗಿರುವ ಕೋಪವನ್ನು ಹೊರಹಾಕಲು ಅದೊಂದು ಬಹಳ ಒಳ್ಳೆಯ ಮಾರ್ಗವಿರಬಹುದು. ಇಲ್ಲಿ ಸಾಕಷ್ಟು ತೆಂಗಿನಕಾಯಿಗಳಿವೆಯೆಂದು ನನಗನ್ನಿಸುವುದಿಲ್ಲ. ಇಲ್ಲದಿದ್ದರೆ, ನಾನು ನಿನಗೆ ಸ್ವಲ್ಪ ತೆಂಗಿನಕಾಯಿಗಳನ್ನು ತೆಗೆದುಕೊಂಡು ಅವುಗಳನ್ನು ಒಂದೊಂದಾಗಿ ಒಡೆಯಲು ಹೇಳುತ್ತಿದ್ದೆ. ತೆಂಗಿನಕಾಯಿಗಳನ್ನು ಒಡೆ ಮತ್ತು ನಿನಗೆ ಸ್ವಲ್ಪ ಸಮಾಧಾನ ಸಿಗಲೂಬಹುದು. ನಿನಗಾಗಿ, ತಳಹಿಡಿದ ಯಾವುದಾದರೂ ಪಾತ್ರೆಗಳಿವೆಯೇ ಎಂದು ನಾನು ಕೇಳುತ್ತೇನೆ. ತಳಹಿಡಿದ ಪಾತ್ರೆಗಳನ್ನು ತಿಕ್ಕುವುದು, ಅದೊಂದು ಬಹಳ ಒಳ್ಳೆಯ ಉಪಾಯ. ಹಲವು ಜನರಿದ್ದರೆ, ಆಗ ಅಡುಗೆಯವರು ಪಾತ್ರೆಗಳನ್ನು ಆ ರೀತಿಯಲ್ಲಿ ಹಂಚಬೇಕಾಗುತ್ತದೆ.
ಪ್ರಶ್ನೆ: ನಾನು ನನ್ನ ಪತಿಯೊಂದಿಗೆ ಏಳು ವರ್ಷಗಳಿಂದ ಇದ್ದೇನೆ. ಕಳೆದ ಎರಡು ವರ್ಷಗಳಿಂದ ನನಗೆ ಅವರ ಕುಟುಂಬದವರೊಂದಿಗೆ ಸಮಸ್ಯೆಗಳುಂಟಾಗುತ್ತಿವೆ. ನಾನು ಅವರ ತಂದೆಯನ್ನು ದ್ವೇಷಿಸುತ್ತೇನೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳುಂಟಾಗದಿರಲೆಂದು ನಾನು ಅವರ ಕುಟುಂಬದವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ, ಆದರೆ ಅವರ ತಂದೆಗೆ ನನ್ನನ್ನು ಕಿರಿಕಿರಿಗೊಳಿಸುವ ಸಾಮರ್ಥ್ಯವಿದೆ. ಕೆಲವೊಮ್ಮೆ ನನಗೆ ಅವರನ್ನು ಕೊಲ್ಲಬೇಕೆಂದನಿಸುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ನೀನು ಎರಡು ದಿನಗಳ ರೆಜೆ ತೆಗೆದುಕೊಂದು, ಒಂದು ಮಾನಸಿಕ ಆಸ್ಪತ್ರೆಗೆ ಹೋಗಿ ಅಲ್ಲಿ ಸ್ವಲ್ಪ ಸೇವೆ ಮಾಡಬೇಕೆಂದು ನಾನು ಬಯಸುತ್ತೇನೆ. ಎರಡು ದಿನಗಳ ವರೆಗೆ ಮಾನಸಿಕವಾಗಿ ಅಸ್ತವ್ಯಸ್ತರಾದ ವ್ಯಕ್ತಿಗಳೊಂದಿಗೆ ಇದ್ದುಕೊಂಡು ಅಲ್ಲಿ ಸ್ವಲ್ಪ ಕೆಲಸ ಮಾಡು. ನೀನು ಒಂದು ಮಾನಸಿಕ ಆಸ್ಪತ್ರೆಯಲ್ಲಿ ಸ್ವಯಂಸೇವೆ ಮಾಡಿದಾಗ, ತಲೆಕೆಟ್ಟ ಜನರೊಂದಿಗೆ ವ್ಯವಹರಿಸುವುದು ಹೇಗೆ ಎಂಬುದು ನಿನಗೆ ತಿಳಿಯುತ್ತದೆ. ಅವರು ತಲೆಕೆಟ್ಟವರಾಗಿದ್ದರೆ ನೀನೇನು ಮಾಡುವೆ? ನೀನು ಅವರನ್ನು ತಾಳ್ಮೆಯಿಂದ ನೋಡಿಕೊಳ್ಳುವೆ. ನೀನು ಹೋಗಿ ಅವರಿಗೆ ಏಟು ನೀಡುವುದೋ ಅಥವಾ ಕತ್ತುಹಿಸುಕುವುದೋ ಮಾಡುವುದಿಲ್ಲ, ಅಲ್ಲವೇ? ಇದೊಂದು ಬಹಳ ಒಳ್ಳೆಯ ಅಭ್ಯಾಸ, ಒಂದು ಮಾನಸಿಕ ಆಸ್ಪತ್ರೆಗೆ ಹೋಗಿ, ಅಲ್ಲಿ ಒಂದೆರಡು ದಿನಗಳ ವರೆಗೆ ಸೇವೆ ಮಾಡುವುದು. ಅದು ಕಡಿಮೆಯಾದರೆ, ಒಂದು ಸಂಪೂರ್ಣ ವಾರಕ್ಕೆ ಹೋಗಿ. ಅದು ಒಳ್ಳೆಯದು. ಆಗ ನಿಮಗೆ ತಿಳಿಯುತ್ತದೆ, ಅಂತಹ ಜನರು ಮನೆಯಲ್ಲಿ ಮತ್ತು ಎಲ್ಲೆಡೆಯಲ್ಲೂ ಇರುವರೆಂದು. ಪ್ರಪಂಚವು ಮಾನಸಿಕ ಜನರಿಂದ ತುಂಬಿದೆ, ಕೆಲವರು ಆಸ್ಪತ್ರೆಗಳಲ್ಲಿದ್ದಾರೆ ಮತ್ತು ಕೆಲವರು ಹೊರಗಿದ್ದಾರೆ, ಕೇವಲ ಅವರಿಗೆ ಒಂದು ಹಣೆಪಟ್ಟಿಯಿಲ್ಲವೆಂದಷ್ಟೆ. ಆಗ ನಿಮಗೆ ಅವರೆಲ್ಲರೊಂದಿಗೆ ವ್ಯವಹರಿಸಲು ಅಗಾಧವಾದ ತಾಳ್ಮೆಯು ಸಿಗುತ್ತದೆ. ನಿನ್ನ ಸಲುವಾಗಿಯಾದರೂ, ನಿನ್ನನ್ನು ಜೈಲಿಗೆ ಹಾಕುವಂತಹ ಯಾವುದೇ ಕೆಲಸವನ್ನೂ ಮಾಡಬೇಡ, ಸರಿಯಾ! ಕೆಲವೊಮ್ಮೆ ನಿಮ್ಮ ಸ್ವಂತ ತಂದೆ ಅಥವಾ ತಾಯಿಯು ಒಂದು ಕಠೋರವಾದ ಟೀಕೆಯನ್ನು ಮಾಡಿದರೆ ನೀವದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ನೀವು ನಿಮ್ಮ ಹೆತ್ತವರಿಂದ ಹಲವಾರು ಕಠೋರ ಟೀಕೆಗಳನ್ನು ತೆಗೆದುಕೊಂಡಿದ್ದೀರಿ, ಅದು ನಿಮ್ಮೊಂದಿಗೆ ಒಂದು ದಿನ ಇರುತ್ತದೆ ಮತ್ತು ಅದು ಸುಮ್ಮನೇ ದೂರ ಹಾರಿಹೋಗುತ್ತದೆ. ಆದರೆ ನಿಮ್ಮ ಅತ್ತೆ-ಮಾವಂದಿರು, ನಿಮ್ಮ ಹೆತ್ತವರು ಹೇಳಿರಬಹುದಾದ ಮಾತುಗಳಲ್ಲಿ ಅರ್ಧದಷ್ಟನ್ನು ಹೇಳಿದರೂ ಅದು ಸರಿಯಾಗಿ ಒಳಗೆ ಹೋಗಿ ನಿಮ್ಮನ್ನು ಬಹಳ ಕಂಗೆಡಿಸುತ್ತದೆ, ಅಲ್ಲವೇ? ಈಗ ನೀವು ಪಾತ್ರಗಳನ್ನು ಅದಲು ಬದಲಾಗಿಸಬೇಕು ಮತ್ತು ಯೋಚಿಸಬೇಕು, ಎಲ್ಲಾದರೂ ಅವರು ನಿಮ್ಮದೇ ಹೆತ್ತವರಾಗಿರುತ್ತಿದ್ದರೆ, ನೀವದನ್ನು ಹೇಗೆ ನಿರ್ವಹಿಸುತ್ತಿದ್ದಿರಿ? ಅದೊಂದು ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಸಾಧಾರಣವಾಗಿ ಆಶ್ರಮದಲ್ಲಿ ಎಲ್ಲರಿಗೂ ನಾನು, ಅವರು ತಮ್ಮ ಎಲ್ಲಾ ಸಮಸ್ಯೆಗಳನ್ನು ಅಲ್ಲಿ ಬಿಟ್ಟು ಸಂತೋಷವಾಗಿ ಮನೆಗೆ ಹೋಗಬೇಕೆಂದು ಹೇಳುತ್ತೇನೆ. ಒಬ್ಬಳು ಹೆಂಗಸು ಅಂದಳು, "ನಾನಿಲ್ಲಿ ನನ್ನ ಅತ್ತೆಯನ್ನು ಬಿಟ್ಟು ಸಂತೋಷವಾಗಿ ಮನೆಗೆ ಹೋಗಬಹುದೇ?" ನಾನಂದೆ, "ನಿನ್ನ ಅತ್ತೆಯೂ ಅದನ್ನೇ ಹೇಳಿದರೆ, ಆಗ ಇಲ್ಲಿ ಎರಡು ಕೋಣೆಗಳು ಇರಬೇಕಾದೀತು, ಒಂದು ಅತ್ತೆಗೆ ಮತ್ತು ಒಂದು ಸೊಸೆಗೆ." ನಾನು ಅವಳನ್ನು ಕೇಳಿದೆ, "ನಿನ್ನನ್ನು ನಿನ್ನ ತಾಯಿಯು ನಿನ್ನ ಅತ್ತೆಗಿಂತ ಹೆಚ್ಚು ಟೀಕಿಸಲಿಲ್ಲವೇ?" ಆ ಹೆಂಗಸು ಯೋಚಿಸಿ ಹೇಳಿದಳು, "ನೀವು ಹೇಳುವುದು ಸರಿ. ನನ್ನ ತಾಯಿಯು ಯಾವತ್ತೂ ನನ್ನನ್ನು ಟೀಕಿಸುತ್ತಾಳೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಅವಳು ನನ್ನಲ್ಲಿ ತಪ್ಪು ಕಂಡುಹುಡುಕುತ್ತಾಳೆ." ನಾನಂದೆ, "ಇದನ್ನು ನೀನು ಯಾಕೆ ಬೇರೆಯಾಗಿ ತೆಗೆದುಕೊಳ್ಳುವೆ? ನಿನ್ನ ತಾಯಿಯು ನಿನ್ನನ್ನು ಟೀಕಿಸುವಾಗ, ಅದನ್ನು ನೀನು ಆಳವಾಗಿ ತೆಗೆದುಕೊಳ್ಳುವುದಿಲ್ಲ, ಆದರೆ ನಿನ್ನ ಅತ್ತೆಯೊಂದಿಗೆ ನಿನ್ನ ಮನೋಭಾವನೆಯು ವ್ಯತ್ಯಸ್ತವಾಗಿದೆ." ಈ ವಾಸ್ತವತೆಗಳ ಮೇಲೆ ನಾವು ಸ್ವಲ್ಪ ಪ್ರಕಾಶ ಬೀರುವಾಗಲೇ ನಮ್ಮ ಮನೋಭಾವನೆಯು ಬದಲಾಗುತ್ತದೆ ಮತ್ತು ನಂತರ ನಮ್ಮ ಸನ್ನಿವೇಶಗಳು ಕೂಡಾ ಬದಲಾಗುತ್ತವೆ. ಪ್ರಶ್ನೆ: ಒಬ್ಬನು ಉತ್ಸಾಹಿಯಾಗಿ ಆದರೆ ಅದೇ ಸಮಯದಲ್ಲಿ ನಿರ್ಲಿಪ್ತನಾಗಿರುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ಅದು ನಿಜವಾದ ಕುಶಲತೆ. ಸ್ವಯಂ-ಆಸಕ್ತಿ ಇಲ್ಲದಿರುವಾಗ ಇದು ಬಹಳ ಸುಲಭ. ಹೇಗೆಂದರೆ, ನೀವು ಸೇವೆ ಮಾಡುವಾಗ, ನೀವು ಅನುರಾಗಿ, ಹಾಗೆಯೇ ನಿರ್ಲಿಪ್ತರು ಕೂಡಾ ಆಗಿರುತ್ತೀರಿ, ಅಲ್ಲವೇ? ನಿಮ್ಮಲ್ಲಿ ಹಲವರು ಅಡುಗೆಮನೆಯಲ್ಲಿ ಸೇವೆ ಮಾಡುತ್ತಿದ್ದೀರಿ, ನೀವದನ್ನು ಅನುರಾಗದಿಂದ ಮಾಡುತ್ತಿಲ್ಲವೇ? (ಉತ್ತರ: ಹೌದು!) ಅದೇ ಸಮಯದಲ್ಲಿ, ಅದು ನಿಮಗೆ ದೊಡ್ದ ವಿಷಯವೂ ಅಲ್ಲ, ಸರಿಯಾ! ಅಲ್ಲೊಂದು ಅನುರಾಗವಿದೆ ಮತ್ತು ಅಲ್ಲಿ ನಿರ್ಲಿಪ್ತತೆ ಇದೆ. ಇಲ್ಲಿರುವ ಅತ್ಯುತ್ತಮ ವಿಷಯವೆಂದರೆ ಸೇವೆ, ಸಾಗಣೆ ಸೇವೆ, ವಸತಿ ಸೇವೆ, ಮೇಲೆ ಕೆಳಗೆ ಓಡುವ ವ್ಯಾನ್ ಮತ್ತು ರಾತ್ರಿ ೧೨ ಗಂಟೆಯ ವರೆಗೆ ಹಾಸಿಗೆ ಹಾಕುವುದು. ಸುಮಾರು ಮಧ್ಯರಾತ್ರಿಯ ಹೊತ್ತಿಗೆ ನಾನು ಒಂದು ಸುತ್ತು ಬಂದೆ ಮತ್ತು ಈ ಹುಡುಗರು ಹಾಗೂ ಸ್ತ್ರೀಯರು ಹಾಸಿಗೆಗಳನ್ನು ತೆಗೆದುಕೊಂಡು, ಅವುಗಳನ್ನು ಹಾಸುವುದನ್ನು, ಎಲ್ಲರೂ ಹಾಯಾಗಿರುವರೆಂದು ಖಚಿತ ಪಡಿಸಿಕೊಳ್ಳುವುದನ್ನು ನೋಡಿದೆ. ಅವರು ಅದನ್ನು, ಗುರುತಿಸುವಿಕೆಗಾಗಿ ಮಾಡುತ್ತಿರಲಿಲ್ಲ. ಅದರಿಂದ ತಮಗೇನೋ ಸಿಗುವುದೆಂಬ ಕಾರಣಕ್ಕಾಗಿ ಅವರು ಅದನ್ನು ಮಾಡಲಿಲ್ಲ. ಅದನ್ನು ಮಾಡುವುದರಿಂದ ತಮಗೆ ದೊಡ್ಡ ಪುಣ್ಯ ಸಿಗಬಹುದು ಎಂದು ಕೂಡಾ ಅವರು ಯೋಚಿಸುತ್ತಿರಲಿಲ್ಲ. ಅದನ್ನು ಮಾಡಬೇಕಾಗಿತ್ತು ಹಾಗೂ ಅವರು ಅದನ್ನು ಮಾಡಿದರು ಅಷ್ಟೆ. ಅಲ್ಲಿ ಅನುರಾಗವಿತ್ತು ಮತ್ತು ಅದೇ ಸಮಯದಲ್ಲಿ ನಿರ್ಲಿಪ್ತತೆ ಇತ್ತು. ನಾನಂದೆ, "ನೀವೆಲ್ಲರೂ ಈಗ ಹೋಗಿ ಮಲಗಿ. ಅದನ್ನು ನಾಳೆ ಮಾಡಲಾಗುವುದು." ಅವರು ಹೋಗಿ, ಸಂತೋಷವಾಗಿ ಮತ್ತು ಹಾಯಾಗಿ ಮಲಗಿದರು. ಇದು ಎಲ್ಲರೊಂದಿಗೂ ಆಯಿತು. ನಾನು ನಿಮಗೆ ಕೇವಲ ಒಂದು ಉದಾಹರಣೆಯನ್ನು ಕೊಡುತ್ತಿದ್ದೇನೆ; ಎಲ್ಲಾ ಸೇವಕರೊಂದಿಗೂ ಅದು ಒಂದೇ ರೀತಿ. ಅಲ್ಲಿ ಅನುರಾಗವಿದೆ ಮತ್ತು ಅಲ್ಲಿ ನಿರ್ಲಿಪ್ತತೆ ಇದೆ. ಎರಡೂ ಜೊತೆಯಲ್ಲಿ ಇರುವುದಕ್ಕೆ ಸೇವೆಯು ಅತ್ಯುತ್ತಮ ಉದಾಹರಣೆ.
ಪ್ರಶ್ನೆ: ಒಬ್ಬ ವ್ಯಕ್ತಿಗೆ, ಒಬ್ಬರಿಗಿಂತ ಹೆಚ್ಚು ಗುರುಗಳಿರಲು ಸಾಧ್ಯವೇ? 
ಶ್ರೀ ಶ್ರೀ ರವಿಶಂಕರ್: ಒಬ್ಬರನ್ನೇ ನಿಭಾಯಿಸುವುದು ಕಷ್ಟ. ನೀನು ಬೇರೆ ಯಾವುದಾದರೂ ಪಥದಲ್ಲಿ ಯಾರಾದರೂ ಒಬ್ಬರು ಗುರುವಿನೊಂದಿಗೆ ಇದ್ದರೆ, ಅವರ ಆಶೀರ್ವಾದವೇ ಇವತ್ತು ನಿನ್ನನ್ನು ಇಲ್ಲಿಗೆ ಕರೆತಂದಿದೆ ಎಂಬುದನ್ನು ತಿಳಿ. ಆದುದರಿಂದ ಅವರಿಗೆ ಧನ್ಯವಾದಗಳನ್ನರ್ಪಿಸು. ಅವರಿಂದಾಗಿಯೇ ನೀನು ಒಂದು ಹೆಜ್ಜೆಯನ್ನು ಮುಂದಿಟ್ಟು ಇಲ್ಲಿಗೆ ಬಂದಿರುವೆ. ಈಗ ನೀನು ನನ್ನಲ್ಲಿ ತಂತ್ರಗಳ ಬಗ್ಗೆ ಕೇಳಿದರೆ, ನಾವು ತಂತ್ರಗಳನ್ನು ಮಿಶ್ರ ಮಾಡಬಾರದೆಂದು ನಾನು ಹೇಳುತ್ತೇನೆ. ಹೇಗೆಂದರೆ, ನೀನು ಕ್ರಿಯೆಯನ್ನು ಮಾಡುತ್ತಿದ್ದೆ ಮತ್ತು ನಂತರ ನೀನು ಬೇರೇನನ್ನೋ ಕೂಡಾ ಮಾಡಲು ಪ್ರಾರಂಭಿಸುವೆ. ಆಗ ಅದೆಲ್ಲವೂ ಒಂದು ಅಸ್ತವ್ಯಸ್ತತೆ ಆಗುತ್ತದೆ. ಆದುದರಿಂದ, ನೀನು ಒಂದನ್ನು ಮಾಡುತ್ತಿದ್ದೆ, ಅದನ್ನು ನೀನು ಮುಗಿಸಿದೆ ಮತ್ತು ಈಗ ನೀನು ಇದನ್ನು ಮಾಡುತ್ತಿರುವೆ. ಈಗ ನೀನು ನಿನ್ನ ೧೦೦% ವನ್ನು ಹಾಕಿ ಕೇವಲ ಇದನ್ನು ಮಾಡಬೇಕು.
ಪ್ರಶ್ನೆ: ಗುರೂಜಿ, ನನ್ನ ಬಳಿ ಎಲ್ಲವೂ ಇದೆ, ಆದರೂ ನನಗೆ ಜೀವನದಲ್ಲಿ ಅಷ್ಟೊಂದು ಖಾಲಿತನದ ಅನುಭವವಾಗುತ್ತದೆ. ದಯವಿಟ್ಟು ಮಾರ್ಗದರ್ಶನ ಮಾಡಿ, ನಾನು ಏನು ಮಾಡುತ್ತಿರಬೇಕು? 
ಶ್ರೀ ಶ್ರೀ ರವಿಶಂಕರ್: ಅದು ಒಳ್ಳೆಯದು, ಇದು ಮೊದಲನೆಯ ಹೆಜ್ಜೆ. ಮೊದಲು ನೀನು ಎಲ್ಲವನ್ನೂ ಖಾಲಿ ಮಾಡಿ, ನಂತರ ನೀನು ಸಂಪೂರ್ಣನಾಗು. ಸತ್ಸಂಗ ಮತ್ತು ಜ್ಞಾನವು ಖಾಲಿತನವನ್ನು ತುಂಬಲು ಅತ್ಯುತ್ತಮವಾದುದು. ಪ್ರಶ್ನೆ: ಪ್ರೀತಿಯ ಗುರೂಜಿ, ಜೀವನದಲ್ಲಿ ನನ್ನ ಉದ್ದೇಶ, ನನ್ನ ಧರ್ಮವೇನೆಂದು ನಾನು ತಿಳಿಯುವುದು ಹೇಗೆ? ಶ್ರೀ ಶ್ರೀ ರವಿಶಂಕರ್: ಸೇವೆ, ಸೇವೆ, ಸೇವೆ. ನಮ್ಮ ಧರ್ಮವೇನೆಂದರೆ, ನಮ್ಮ ಸುತ್ತಲಿರುವವರಿಗೆಲ್ಲಾ ನಮ್ಮಿಂದೇನಾಗುತ್ತದೋ ಅದನ್ನು ಮಾಡುವುದು. ನೀವು ಕುಳಿತುಕೊಂಡು, ಯಾವತ್ತೂ "ನನಗೇನಾಗುತ್ತದೆ, ನನಗೇನಾಗುತ್ತದೆ" ಎಂದು ಯೋಚಿಸುತ್ತಾ ಇದ್ದರೆ, ಆಗ ಅದು ಖಿನ್ನತೆಗೊಳಗಾಗಲಿರುವ ತಂತ್ರ. ನೀವು, "ನಾನೇನು ಮಾಡಬಹುದು? ನಾನು ನನ್ನ ಕೊಡುಗೆಯನ್ನು ಹೇಗೆ ನೀಡಬಹುದು? ನಾನು ಹೇಗೆ ಹೆಚ್ಚು ಪ್ರಯೋಜನಕಾರಿಯಾಗಬಹುದು?" ಎಂಬ ಆಯಾಮದಿಂದ ಯೋಚನೆ ಮಾಡಿದರೆ, ಆಗ ಅದು ಹಲವಾರು ದಾರಿಗಳನ್ನು ತೆರೆಯುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ತೃಪ್ತಿಯನ್ನು ತರುತ್ತದೆ.
ಪ್ರಶ್ನೆ: ಸರಿಯಾದ ವೃತ್ತಿಯನ್ನು ಆರಿಸುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ನಿನ್ನ ಪ್ರವೃತ್ತಿಯೇನೆಂದು ಮತ್ತು ನಿನಗೇನು ಬೇಕೆಂಬುದನ್ನು ನೀನು ನೋಡಬೇಕು. ’ಕೆಲಸದಲ್ಲಿ ತೃಪ್ತಿ’ ಎಂಬುದೊಂದಿಲ್ಲ. ಈ ಶಬ್ದವನ್ನು ನಿಘಂಟಿನಿಂದ ತೆಗೆದು ಹಾಕಬೇಕು. ತೃಪ್ತಿಯು ಬರುವುದು ಕೇವಲ ಸೇವೆಯ ಮೂಲಕ. ನಿನಗೆ ಇದು ಅರ್ಥವಾಯಿತೇ? ಸೇವೆಯು ಒಂದು ಬೇರೆ ವಿಷಯ. ಆದರೆ ನಿಮ್ಮ ಜೀವನಾಧಾರಕ್ಕಾಗಿ ನೀವು ಯಾವುದಾದರೂ ವೃತ್ತಿಯನ್ನು ಮಾಡಬೇಕು. ನಿಮಗೆ ಸರಿಹೋಗುವ, ನಿಮಗೆ ತಕ್ಕುದಾದ ಯಾವುದೇ ವೃತ್ತಿಯನ್ನಾದರೂ ತೆಗೆದುಕೊಳ್ಳಿ ಮತ್ತು ಇದರೊಂದಿಗೆ, ನಿಮ್ಮ ಸಾಮಾಜಿಕ ಚಟುವಟಿಕೆಗಳನ್ನು, ಆಧ್ಯಾತ್ಮಿಕ ಚಟುವಟಿಕೆಗಳನ್ನು, ಸಾಹಿತ್ಯದ ಚಟುವಟಿಕೆಗಳನ್ನು ಹಾಗೂ ನಿಮ್ಮ ಹವ್ಯಾಸಗಳನ್ನು ಮಾಡಿ. ಹೆಚ್ಚಾಗಿ ಜನರು ತಮ್ಮ ಹವ್ಯಾಸಗಳನ್ನು ತಮ್ಮ ವೃತ್ತಿಯನ್ನಾಗಿ ಹಾಗೂ ತಮ್ಮ ವೃತ್ತಿಯನ್ನು ಒಂದು ಹವ್ಯಾಸವನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಆಗಲೇ ವೃತ್ತಿಯೂ ನಿಲ್ಲದಿರುವುದು, ಹವ್ಯಾಸವೂ ನಿಲ್ಲದಿರುವುದು. ಸಂಗೀತವು ನಿಮ್ಮ ಹವ್ಯಾಸ; ಅದನ್ನು ಹವ್ಯಾಸವಾಗಿಯೇ ಇಡಿ, ಹೌದು! ನೀವಿಲ್ಲಿ ಮಾಡುತ್ತಿರುವುದು ಸರಿಯಾದ ಸಂಗತಿ; ಹೆಚ್ಚು ಟೊಳ್ಳು ಮತ್ತು ಖಾಲಿಯಾಗುವುದು ಸರಿಯಾದ ಸಂಗತಿಯು ಸರಿಯಾದ ಸಮಯದಲ್ಲಿ ಬಂದು ಬೀಳುತ್ತದೆ. ಅದು ಆಗುತ್ತಿಲ್ಲವೇ? ಎಷ್ಟು ಮಂದಿಗೆ ಇದು ಆಗುತ್ತಿದೆ? ಸರಿಯಾದ ಸಂಗತಿಯು ಸರಿಯಾದ ಸಮಯದಲ್ಲಿ ಸುಮ್ಮನೇ ಬರುತ್ತದೆ ಮತ್ತು ಎಲ್ಲವೂ ಸುಗಮವಾಗಿ ಸಾಗುತ್ತದೆ.
ಪ್ರಶ್ನೆ: ಪ್ರಶ್ನೆಯ ಬುಟ್ಟಿಯಲ್ಲಿ, ಇತರ ಜನರ ಮೇಲೆ ಭಾವನಾತ್ಮಕವಾಗಿ ಅವಲಂಬಿಸಿರುವ ಜನರ ಬಗ್ಗೆ ಕೆಲವು ಪ್ರಶ್ನೆಗಳಿವೆ. ಏನು ಮಾಡುವುದು? 
ಶ್ರೀ ಶ್ರೀ ರವಿಶಂಕರ್: ಜೀವನವು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ನಾವು ಹುಟ್ಟಿದಾಗ ನಾವು ಅವಲಂಬಿತರಾಗಿದ್ದೆವು. ನಾವು ಬೆಳೆದು ನಮಗೆ ವಯಸ್ಸಾದಾಗ ನಾವು ಅವಲಂಬಿತರಾಗಿರುತ್ತೇವೆ, ನಿರಾವಲಂಬಿಗಳಲ್ಲ. ಇದರ ಮಧ್ಯೆ, ಈ ಕೆಲವು ವರ್ಷಗಳಲ್ಲಿ, ನಾವು ಬಹಳ ನಿರಾವಲಂಬಿಗಳಾಗಿದ್ದೇವೆಂದು ನಾವು ಯೋಚಿಸುತ್ತೇವೆ. ಅದೊಂದು ಭ್ರಮೆ. ಆ ಸಮಯದಲ್ಲಿ ಕೂಡಾ ನಾವು ಹಲವಾರು ವಿಷಯಗಳಿಗೆ ಹಲವಾರು ಜನರ ಮೇಲೆ ಅವಲಂಬಿತರಾಗಿದ್ದೇವೆ. ಆದುದರಿಂದ, ಈ ಕೋನದಿಂದ ನೀವು ನೋಡಿದರೆ, ಇಡಿಯ ಜೀವನವು ನಿರಂತರ ಅವಲಂಬನೆಯಾಗಿದೆ. ಇನ್ನೊಂದು ಬದಿಯಲ್ಲಿ, ನೀವು ಆತ್ಮವನ್ನು ನೋಡಿದರೆ, ಶರೀರವನ್ನಲ್ಲ, ಕೇವಲ ಆತ್ಮವನ್ನು, ಪ್ರಜ್ಞೆಯನ್ನು ನೋಡಿದರೆ, ಅದು ಉದ್ದಕ್ಕೂ ನಿರಾವಲಂಬಿಯಾಗಿದೆ. ಇದು ಬಹಳ ಸೂಕ್ಷ್ಮವಾದುದು ಮತ್ತು ಈಗ ನಿಮ್ಮ ತಲೆಯ ಮೇಲಿನಿಂದ ಹೋಗಬಹುದು. ಆದರೆ ಸುಮ್ಮನೇ ಕೇಳಿ, ಮತ್ತು ಆಮೇಲೆ ಯಾವಾಗಲಾದರೂ ಇದರ ಬಗ್ಗೆ ನೀವು ಪುನಃ ಯೋಚಿಸುವಾಗ, ನಾವು ಎರಡೂ ಆಗಿದ್ದೇವೆಂಬುದು; ಅವಲಂಬನೆ ಮತ್ತು ನಿರಾವಲಂಬನೆ - ಶರೀರ ಮತ್ತು ಆತ್ಮಗಳ ಸಂಯೋಗವೆಂಬುದನ್ನು ನೀವು ತಿಳಿಯುವಿರಿ. ಆತ್ಮವು ನಿರಾವಲಂಬಿಯಾಗಿರುವಾಗ, ಶರೀರವು ಯಾವತ್ತೂ ಅವಲಂಬಿಯಾಗಿದೆ. ಶರೀರವು ಎಲ್ಲದಕ್ಕೂ ಪರಿಸರವನ್ನು ಅವಲಂಬಿಸಿದೆ - ಬಟ್ಟೆ, ನೀರು, ವಿದ್ಯುತ್, ಶಿಕ್ಷಣ, ನೀವು ಯಾವುದನ್ನೇ ಹೆಸರಿಸಿ. ನಿಮಗೆ ಸರಿಯಾದ ಶಾಲಾ ಶಿಕ್ಷಕರು ಇಲ್ಲದಿರುತ್ತಿದ್ದರೆ, ನೀವೆಲ್ಲಿದ್ದೀರೋ ಅಲ್ಲಿರಲು ಸಾಧ್ಯವಾಗುತ್ತಿರಲಿಲ್ಲ, ಅಲ್ಲವೇ? ಆದುದರಿಂದ ನಾನು ಹೇಳುವುದೇನೆಂದರೆ, ಜೀವನವನ್ನು ಒಂದು ಬಹಳ ವ್ಯತ್ಯಸ್ತ ಹಾಗೂ ಹೊಸ ಕೋನದಿಂದ ನೋಡಿ. ಕೆಲವು ಜನರು ಭಾವನಾತ್ಮಕವಾಗಿ ಅವಲಂಬಿತರಾಗಿದ್ದಾರೆ, ಕೆಲವು ಜನರು ಬೌದ್ಧಿಕವಾಗಿ ಅವಲಂಬಿತರಾಗಿದ್ದಾರೆ ಮತ್ತು ಕೆಲವು ಜನರು ಶಾರೀರಿಕವಾಗಿ ಅವಲಂಬಿತರಾಗಿದ್ದಾರೆ. ಹಲವಾರು ಬೇರೆ ಬೇರೆ ಹಂತಗಳ ಅವಲಂಬನೆಯಿದೆ. ಯಾವತ್ತೂ ಅವಲಂಬಿತವಾಗಿರುವ, ಜೀವನದ ಸಾಪೇಕ್ಷವಾದ ಹಾಗೂ ಬದಲಾಗುವ ಮಗ್ಗಲಿನ ಕಡೆಗೆ ಗಮನ ನೀಡುವ ಬದಲು, ನಿಮ್ಮೊಳಗಿರುವ ನಿರಾವಲಂಬಿಯಾದ, ಅನಂತವಾದ ಹಾಗೂ ಉದ್ದಕ್ಕೂ ಒಂದೇ ಆಗಿರುವ ಮಗ್ಗಲಿನ ಕಡೆಗೆ ಸ್ವಲ್ಪ ಹೆಚ್ಚು ಗಮನವನ್ನು ಹಾಕಿ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ನಿಮ್ಮೊಳಗೆ ನಿರಂತರವಾಗಿರುವ; ಉದ್ದಕ್ಕೂ ಒಂದೇ ಆಗಿರುವ ಏನೋ ಒಂದಿದೆ. ಅಲ್ಲಿಗೆ ಹೆಚ್ಚು ಗಮನವನ್ನು ನೀಡಿ ಮತ್ತು ಜೀವನವು ಹೆಚ್ಚು ಶಕ್ತಿಶಾಲಿಯಾಗುವುದನ್ನು, ಹೆಚ್ಚು ನಿರಾವಲಂಬಿಯಾಗುವುದನ್ನು, ಹೆಚ್ಚು ಸಫಲವಾಗುವುದನ್ನು ಮತ್ತು ಹೆಚ್ಚು ತೃಪ್ತಿಕರವಾಗುವುದನ್ನು ನೀವು ಕಂಡುಕೊಳ್ಳಬಹುದು. ಈ ಎಲ್ಲಾ ಅಂಶಗಳು, ನೀವು ಬಯಸುವುದೆಲ್ಲವೂ ನಿರಂತರವಾಗಿ ವಿಕಸಿತವಾಗುತ್ತದೆ. ಅದು ಪ್ರಯತ್ನವಿಲ್ಲದೆಯೇ ಅರಳುವುದು.
ಪ್ರಶ್ನೆ: ಸುಮಾರು ಐದು ವರ್ಷಗಳ ಹಿಂದೆ ನನಗೆ ಏಕತ್ವದ ಅನುಭವವಾಯಿತು. ಅದು ಸುಮಾರು ಒಂದು ಇಡೀ ದಿನದ ವರೆಗೆ ಉಳಿದಿತ್ತು. 
ಶ್ರೀ ಶ್ರೀ ರವಿಶಂಕರ್: ಅನುಭವಗಳ ಬಗ್ಗೆ ಮರೆತುಬಿಡು. ಅದರ ಬಗ್ಗೆ ಚಿಂತಿಸಬೇಡ; ನಿನಗೆ ಅದು ಆಗಿರಬಹುದು, ಆದರೇನು? ಅದು ಹೋಯಿತು ಮತ್ತು ಯಾವುದು ಹೋಯಿತೋ ಅದು ನಿಜವಲ್ಲ. ಯಾವುದೋ ನಿಜವೋ ಅದು ನಿಮ್ಮನ್ನು ಬಿಡುವುದಿಲ್ಲ ಮತ್ತು ಅದು ನಿಮ್ಮನ್ನು ಬಿಡಲಿಲ್ಲ, ಅದು ಈಗಲೂ ಅಲ್ಲಿದೆ. ನಾವು ಅನುಭವಗಳಿಗಾಗಿ ಹಂಬಲಿಸಬಾರದು. ಅನುಭವಗಳು ಕೂಡಾ ಕ್ಷಣಿಕವಾದವು. ಅವುಗಳು ಬರುತ್ತವೆ, ಹೋಗುತ್ತವೆ. ಹಿತವಾದ ಅಥವಾ ಅಹಿತವಾದ, ಒಳ್ಳೆಯದು ಅಥವಾ ಕೆಟ್ಟದು, ಎಲ್ಲಾ ಅನುಭವಗಳೂ ಕ್ಷಣಿಕವಾದವು. ಸಾಪೇಕ್ಷವಾದವುಗಳು ಯಾವತ್ತೂ ಕ್ಷಣಿಕ, ಅವುಗಳು ಬರುತ್ತವೆ, ಹೋಗುತ್ತವೆ. ನೀನು ಅದಲ್ಲ! ಯಾರಿಗೆ ಅನುಭವವಾಗುತ್ತಿದೆಯೋ ಆ ವ್ಯಕ್ತಿಯ ಮೇಲೆ ಗಮನವನ್ನಿಡು. ಈಗ ಯಾರು ಅನುಭವಿಸುತ್ತಿದ್ದಾರೆ? ಮತ್ತು ಆಗ ಅದನ್ನು ಯಾರು ಅನುಭವಿಸಿದರು? ಯಾರು ಈಗ ಒಂದು ಅನುಭವವನ್ನು ಬಯಸುತ್ತಾರೋ ಅದು ಯಾರು? ಆ ವ್ಯಕ್ತಿಯು ಈಗಲೂ ಅಲ್ಲಿದ್ದಾನೆ, ಈಗ ಮತ್ತು ಅದು ನಿಜವಾದುದು! ಅನುಭವಕ್ಕಿಂತ, ಅನುಭವಕ್ಕಾಗಿ ಹಾತೊರೆಯುವ ವ್ಯಕ್ತಿಯು ಹೆಚ್ಚು ಮುಖ್ಯ. ಒಂದು ದಿನದ ನಿನ್ನ ಅನುಭವಕ್ಕೆ ಯಾವುದೇ ಬೆಲೆಯಿಲ್ಲ. ಅದು ಒಂದು ದಿನದಲ್ಲಿ ಹೊರಟು ಹೋದುದು ಒಳ್ಳೆಯದಾಯಿತು. ಯಾವುದು ನಿಜವಲ್ಲವೋ ಅದು ಒಂದು ದಿನಕ್ಕೆ ಬರುತ್ತದೆ ಮತ್ತು ಹೋಗುತ್ತದೆ. ಯಾವುದು ಸತ್ಯವೋ, ಅದು ನಿಮ್ಮೊಳಗಿದೆ ಮತ್ತು ಎಂದೆಂದಿಗೂ ಉಳಿಯುತ್ತದೆ; ಮತ್ತು ಅದುವೇ ಅನುಭವಿಸುವವನು. ತಿಳಿಯಿತಾ?
ಪ್ರಶ್ನೆ: ನನಗೆ ಜೀವನದ ಬಹುತೇಕ ಎಲ್ಲಾ ಮಗ್ಗಲುಗಳಲ್ಲಿಯೂ ಸಂಶಯಗಳು ಬರುತ್ತವೆ. ಅದರಿಂದಾಗಿ ನನ್ನ ವಿಶ್ವಾಸವು ಕುಂಠಿತವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ನಾನೇನು ಮಾಡಬಹುದು ಎಂದು ದಯವಿಟ್ಟು ಸಲಹೆ ನೀಡಿ. 
ಶ್ರೀ ಶ್ರೀ ರವಿಶಂಕರ್: ಅದು ನನ್ನ ಕೆಲಸವಲ್ಲ. ನನ್ನ ಕೆಲಸವೆಂದರೆ ಹೆಚ್ಚು ಸಂಶಯಗಳನ್ನು ಸೃಷ್ಟಿಸುವುದು. ಸಂಶಯಗಳು ಬೇಕಿಂಗ್ ಸೋಡಾದಂತೆ, ಅದು ನಿಮ್ಮನ್ನು ಚೆನ್ನಾಗಿ ಬೇಯಿಸುತ್ತದೆ, ಆದುದರಿಂದ ಬೇಯಿಸಲ್ಪಡು! ಒಮ್ಮೆ, ನಾನು ಸ್ವೀಡನ್ನಿನಲ್ಲಿದ್ದೆ. ನಾನೊಂದು ಸತ್ಸಂಗದಲ್ಲಿದ್ದೆ ಮತ್ತು ಅಲ್ಲೊಬ್ಬ ಪತ್ರಕರ್ತನಿದ್ದ. ಅವನು ಬಂದು ನನ್ನ ಮುಂದೆ ನಿಂತ ಮತ್ತು ಹೇಳಿದ, "ಗುರೂಜಿ, ನೀವು ಯಾವತ್ತೂ ಸುತ್ತಿ ಬಳಸಿ ಮಾತನಾಡುತ್ತೀರಿ. ನೀವು ಯಾವತ್ತೂ ಪ್ರಶ್ನೆಗಳಿಗೆ ನೇರವಾದ ಉತ್ತರವನ್ನು ನೀಡುವುದಿಲ್ಲ. ನಾನೀಗ ನಿಮಗೊಂದು ನೇರವಾದ ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ನೀಡಬೇಕು, ಇಲ್ಲದಿದ್ದರೆ ನಾನು ನಿಮ್ಮನ್ನು ಬಿಡುವುದಿಲ್ಲ." ನಾನಂದೆ, "ಸರಿ." ಅವನು ಕೇಳಿದ, "ನೀವು ಆತ್ಮಸಾಕ್ಷಾತ್ಕಾರ ಹೊಂದಿದವರೇ?" ನಾನು ಅವನನ್ನು ನೋಡಿ ಮುಗುಳ್ನಕ್ಕು ಹೇಳಿದೆ, "ಅಲ್ಲ." ಸಾಬೀತುಪಡಿಸುವ ತಲೆನೋವು ತೆಗೆದುಕೊಳ್ಳುವುದು ಯಾಕೆ? ನೀವು ’ಅಲ್ಲ’ ಎಂದು ಹೇಳಿದಾಗ ಸಂಗತಿಯು ಮುಗಿಯಿತು. ಮಾತುಕತೆಯು ಮುಗಿಯುತ್ತದೆ. ಪೂರ್ಣ ವಿರಾಮ! ಹಿಂದೆಂದೂ ಯಾರಿಗೂ ಯಾರ ಮನವೊಲಿಸಲೂ ಸಾಧ್ಯವಾಗಿಲ್ಲ ಅಥವಾ ತಾವು ಆತ್ಮಸಾಕ್ಷಾತ್ಕಾರ ಹೊಂದಿದವರು ಎಂದು ಯಾರ ಮನವೊಲಿಸಲು ಪ್ರಯತ್ನಿಸಲೂ ಇಲ್ಲ. ಯಾರಾದರೂ ಹಾಗೆ ಹೇಳಿದ್ದರೆ, ಆಗ ಅವರಿಗೆ ಸಮಸ್ಯೆಗಳು ತಲೆದೋರಿರುತ್ತಿದ್ದವು. ಅವರನ್ನು ಶಿಲುಬೆಗೇರಿಸುತ್ತಿದ್ದರು ಮತ್ತು ಎಲ್ಲಾದರೂ ಹಾಕುತ್ತಿದ್ದರು. ಆದುದರಿಂದ ನಾನು ಸುಮ್ಮನೇ ಇಲ್ಲವೆಂದು ಹೇಳಿದೆ, ಆದರೆ ಅವನು ಜರಗಲಿಲ್ಲ. ಅವನಂದನು, "ನೀವು ಸುಮ್ಮನೆ ತಮಾಷೆ ಮಾಡುತ್ತಿದ್ದೀರಿ, ನನಗೆ ಸತ್ಯ ಹೇಳಿ." ನಾನಂದೆ, "ಅಲ್ಲ." ಅವನಂದನು, "ಇಲ್ಲ, ಇಲ್ಲ. ನಾನು ಒಪ್ಪುವುದಿಲ್ಲ, ನನಗೆ ಸತ್ಯ ಹೇಳಿ." ನಾನಂದೆ, "ನಾನು ’ಹೌದು’ ಎಂದು ಹೇಳಿ ನೀನು ಒಪ್ಪದೇ ಇರುತ್ತಿದ್ದರೆ, ಅದಕ್ಕೆ ಅರ್ಥವಿರುತ್ತಿತ್ತು; ಆದರೆ ನಾನು ’ಅಲ್ಲ’ ಎಂದು ಹೇಳಿದಾಗ, ನೀನು ಅದನ್ನು ಒಪ್ಪುವುದಿಲ್ಲವೆಂದು ನೀನು ಹೇಗೆ ಹೇಳಲು ಸಾಧ್ಯ? ಅದರರ್ಥ, ಅಲ್ಲಿ ಹೆಚ್ಚಿನದೇನೋ ಇದೆ ಎಂದು ನಿನ್ನ ಹೃದಯದಲ್ಲಿರುವ ಏನೋ ಒಂದು ನಿನಗೆ ಹೇಳುತ್ತಿದೆ. ಹಾಗಾದರೆ ನಿನ್ನ ಸ್ವಂತ ಮನಸ್ಸು ಹೇಳುವುದನ್ನು ಕೇಳು, ನನ್ನನ್ನು ಯಾಕೆ ಕೇಳುತ್ತಿರುವೆ?" ಆದುದರಿಂದ, ಬೌದ್ಧಿಕ ಹಂತ ಒಂದು, ಮತ್ತು ಇನ್ನೊಂದು ಬೇರೇನೋ; ಆರನೆಯ ಇಂದ್ರಿಯವು ನಿಮಗೆ ಹೇಳುತ್ತದೆ, "ಓ, ಹೌದು, ಇದು ಸರಿಯಾದ ಉತ್ತರ, ಇದು ಸತ್ಯ."
ಪ್ರಶ್ನೆ: ನಾನು ಬಾಗಿಲನ್ನು ಅಷ್ಟೊಂದು ಬಲವಾಗಿ ಬಡಿಯುವುದು ಹೇಗೆ? ನಾನು ಹೊರಗೆ ಮತ್ತು ಒಳಗೆ, ರೈನ್ ಕೋಟ್ ಇಲ್ಲದೆಯೇ ನಡುಗಿಕೊಂಡು ಇದ್ದೇನೆ. ಟಿ.ಟಿ.ಸಿ. (ಶಿಕ್ಷಕರ ತರಬೇತಿ ಶಿಬಿರ) ಯು ಮುಂದಿನ ಸಹಜವಾದ ಹೆಜ್ಜೆಯೇ? 
ಶ್ರೀ ಶ್ರೀ ರವಿಶಂಕರ್: ಹೌದು, ಅದನ್ನು ಮಾಡು. ಪ್ರಿ-ಟಿ.ಟಿ.ಸಿ. ಒಳ್ಳೆಯದು; ಅದು ಬಹಳಷ್ಟು ಚೈತನ್ಯ ಮತ್ತು ಉತ್ಸಾಹವನ್ನು ತರುತ್ತದೆ. ಎಲ್ಲರೂ ಮೊದಲು ಪ್ರಿ-ಟಿ.ಟಿ.ಸಿ.ಯನ್ನು ಮಾಡಬೇಕು. ನೀವು ಶಿಕ್ಷಕರ ತರಬೇತಿಯನ್ನು ಮಾಡಲು ಬಯಸುತ್ತೀರೋ ಇಲ್ಲವೋ, ಅದು ಮುಂದಿನ ಹೆಜ್ಜೆ. ಆದರೆ ಈ ಎರಡು ವಾರಾಂತ್ಯಗಳ ಪ್ರಿ-ಟಿ.ಟಿ.ಸಿ.ಯು ಒಳ್ಳೆಯದು, ನೀವು ಬಹಳಷ್ಟನ್ನು ಕಲಿಯುತ್ತೀರಿ. ನಿಮ್ಮ ಶಕ್ತಿ, ನಿಮ್ಮ ಕುಶಲತೆಗಳು, ಹಲವಾರು ಸಂಗತಿಗಳು ಹೊರಬರಬಹುದು. ಪ್ರಿ-ಟಿ.ಟಿ.ಸಿ. ಆದ ಮೇಲೆ ನೀವು ನಿರ್ಧರಿಸಬಹುದು, ನೀವು ಟಿ.ಟಿ.ಸಿ. ಮಾಡಲು ಬಯಸುತ್ತೀರೋ ಇಲ್ಲವೋ ಎಂದು. ಶಿಕ್ಷಕರು ಕೂಡಾ ನಿಮಗೆ ಹೇಳುವರು.
ಪ್ರಶ್ನೆ: ನಾವು ಬರುವುದು ಎಲ್ಲಿಂದ? ಜೀವನದ ಉದ್ದೇಶವೇನು ಮತ್ತು ನಾವು ಎಲ್ಲಿಗೆ ಹೋಗುತ್ತೇವೆ? 
ಶ್ರೀ ಶ್ರೀ ರವಿಶಂಕರ್: ಉತ್ತಮ! ನನ್ನ ಕೆಲಸ ಮುಗಿಯಿತು. ನನ್ನ ಕೆಲಸವೆಂದರೆ, ಈ ಪ್ರಶ್ನೆಗಳನ್ನು ನಿಮ್ಮೊಳಗೆ ಜಾಗೃತಗೊಳಿಸುವುದು, ಉತ್ತರಗಳನ್ನು ಕೊಡುವುದಲ್ಲ. ನಿನ್ನಲ್ಲಿ ಈ ಪ್ರಶ್ನೆಗಳು ಬಂದಿವೆ, ಈಗ ನನ್ನ ಕೆಲಸ ಮುಗಿಯಿತು. ಈಗ ನಿನ್ನ ಕಾರು ಚಲಿಸಬಲ್ಲದು. ನಿನ್ನ ಕಾರಿನಲ್ಲಿ ಪೆಟ್ರೋಲಿದೆ. ಈ ಪ್ರಶ್ನೆಗಳನ್ನು ಕೇಳುತ್ತಾ ಇರು; ತಿರುಗಿ ಬಂದು ಈ ಟೊಳ್ಳು ಮತ್ತು ಖಾಲಿ ಧ್ಯಾನಗಳಲ್ಲಿ ಕುಳಿತುಕೊಳ್ಳುತ್ತಾ ಇರು ಮತ್ತು ಉನ್ನತ ಶಿಬಿರಗಳಿಗೆ ಬರುತ್ತಾ ಇರು, ಅದು ಉತ್ತಮ.