ಸೋಮವಾರ, ಜುಲೈ 2, 2012

ಸತ್ಯವು ವಿರೋಧಾತ್ಮಕ

02
2012
Jul
ಬೂನ್, ನಾರ್ತ್ ಕೆರೋಲಿನಾ

ಪ್ರಶ್ನೆ: ಪ್ರೀತಿಯ ಗುರೂಜಿ, ನೀವು ನಿಜವಾಗಿಯೂ ಗುರುವಾಗಿರುವುದನ್ನು ಇಷ್ಟಪಡುತ್ತೀರಾ? ಮತ್ತು ನೀವು ನಮ್ಮೆಲ್ಲಾ ಸಮಸ್ಯೆಗಳನ್ನು ಓದುತ್ತೀರಾ ಅಥವಾ ನಿಮಗೆ ಸಹಾಯಕರಿದ್ದಾರಾ?
ಶ್ರೀ ಶ್ರೀ ರವಿಶಂಕರ್:
ಸಹಾಯಕರಿದ್ದಾರೆ (ತುಂಟವಾಗಿ ನಗುತ್ತಾರೆ). ನೀವು ನಿಮ್ಮ ಸಮಸ್ಯೆಗಳಿಂದ ಹೊರಬಂದಂತೆ ಅನುಭವಿಸುತ್ತಿದ್ದೀರಾ? ನಿಮ್ಮಲ್ಲಿ ಎಷ್ಟು ಮಂದಿಗೆ ನಿಮ್ಮ ಸಮಸ್ಯೆಗಳಿಂದ ಹೊರಬಂದ ಅನುಭವವಾಗುತ್ತದೆ? (ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ).

ಅದನ್ನು ನೋಡಿ!

ಪ್ರಶ್ನೆ: ರಾಜಕೀಯದ ಬಗ್ಗೆ ನಿಮ್ಮ ಅನಿಸಿಕೆಯೇನು? ಜನರು ರಾಜಕೀಯದಲ್ಲಿ ಭಾಗವಹಿಸಬೇಕೆಂದು ನೀವು ಯೋಚಿಸುತ್ತೀರೇ?
ಶ್ರೀ ಶ್ರೀ ರವಿಶಂಕರ್:
ರಾಜಕೀಯವೆಂದರೇನು? ಜನರ ಬಗ್ಗೆ ಕಾಳಜಿ ವಹಿಸುವುದು, ಅಲ್ಲವೇ? ರಾಜಕೀಯವೆಂದರೆ, ಒಬ್ಬನು ಜನರಿಗಾಗಿ ಎದ್ದು ನಿಲ್ಲುವುದು, ಒಬ್ಬನು ಜನರ ಬಗ್ಗೆ ಕಾಳಜಿ ವಹಿಸುವುದು. ಕಾಳಜಿ ವಹಿಸುವ ಜನರು ರಾಜಕೀಯದಲ್ಲಿರಬೇಕು. ಸ್ವಾರ್ಥಿಗಳಾಗಿರುವವರಲ್ಲ, ಆದರೆ ಯಾರು ಕಾಳಜಿ ವಹಿಸುತ್ತಾರೋ ಅವರು, ಹೌದು!

ದುರದೃಷ್ಟವಶಾತ್, ಈ ದಿನಗಳಲ್ಲಿ, ಹಲವರು ಈ ರೀತಿಯಿಲ್ಲ. ಜನರು ರಾಜಕೀಯಕ್ಕೆ ಬರುವುದು ಕೇವಲ ಸ್ವಲ್ಪ ಅಧಿಕಾರವನ್ನು ಆಸ್ವಾದಿಸಲು, ಜನರನ್ನು ಸಬಲೀಕರಿಸಲಲ್ಲ, ಜನರ ಸೇವೆ ಮಾಡುವುದಕ್ಕಾಗಿಯಲ್ಲ. ಆದುದರಿಂದ ನಿನಗೆ ಸಮಾಜ ಸೇವೆ ಮಾಡುವ ಬಯಕೆಯಿದ್ದರೆ, ಅದು ಒಳ್ಳೆಯದು ಮತ್ತು ಅದು ನಿನ್ನ ಪಾಲಿನದ್ದಾಗಿದ್ದರೆ, ಆಗ ನೀನದನ್ನು ಮಾಡಬೇಕು. ಆದರೆ ನೀನೊಬ್ಬ ವ್ಯಾಪಾರಿಯಾಗಿದ್ದು, ವ್ಯಾಪಾರ ಮಾಡುವುದು ನಿನ್ನ ಪ್ರವೃತ್ತಿಯಾಗಿದ್ದರೆ, ನೀನು ರಾಜಕೀಯಕ್ಕೆ ಇಳಿಯಬಾರದು. ಅದೇ ರೀತಿಯಲ್ಲಿ ಒಬ್ಬ ತತ್ವಜ್ಞಾನಿ ಅಥವಾ ಒಬ್ಬ ವೈದ್ಯ ಕೂಡಾ. ನಿನ್ನ ಯೋಗ್ಯತೆಯನ್ನು ನೋಡು.

ಜನರಿಗಾಗಿ, ದೇಶಕ್ಕಾಗಿ ಅಥವಾ ಪ್ರಪಂಚಕ್ಕಾಗಿ ನಿನ್ನಲ್ಲೊಂದು ದೊಡ್ಡ ಕಲ್ಪನೆಯಿದ್ದರೆ, ಆಗ ನಾನು ನಿನ್ನನ್ನು ರಾಜಕೀಯಕ್ಕೆ ಇಳಿಯುವಂತೆ ಪ್ರೋತ್ಸಾಹಿಸುತ್ತೇನೆ. ವಿಶೇಷವಾಗಿ ಯುವ ಪೀಳಿಗೆಯು ರಾಜಕೀಯದಲ್ಲಿ ಪ್ರವೃತ್ತರಾಗಬೇಕು. 

ಪ್ರಶ್ನೆ: ಗುರೂಜಿ, ಹಿಂದೆ ನನ್ನಿಂದ ಒಂದು ತಪ್ಪು ನಡೆಯಿತು ಮತ್ತು ನಾನು ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ಆದರೆ ಎಲ್ಲಾ ಸಾಧ್ಯವಿರುವ ಸಂದರ್ಭದಲ್ಲಿಯೂ, ನನಗೆ ಆ ತಪ್ಪು ಇತರ ಜನರಿಂದ; ಯಾರು ಅದಕ್ಕೆ ಸಂಬಂಧ ಪಟ್ಟಿಲ್ಲವೋ ಅವರಿಂದಲೂ ಕೂಡಾ ನೆನಪಿಸಲ್ಪಡುತ್ತದೆ. ಕೆಲವೊಮ್ಮೆ ನನಗೆ ಬಹಳ ದುಃಖವಾಗುತ್ತದೆ ಮತ್ತು ಈ ಪ್ರಪಂಚವನ್ನು ಬಿಟ್ಟುಹೋಗುವುದೊಂದೇ ನನಗಿರುವ ಪರಿಹಾರವೇ ಎಂದು ಅನಿಸುತ್ತದೆ. ದಯವಿಟ್ಟು ಸಹಾಯ ಮಾಡಿ.
ಶ್ರೀ ಶ್ರೀ ರವಿಶಂಕರ್:
ಖಂಡಿತಾ ಅಲ್ಲ. ಅದನ್ನು ಮಾಡಲೇ ಬೇಡ. ನಾವೆಲ್ಲರೂ ಇಲ್ಲಿ ನಿನ್ನೊಂದಿಗಿದ್ದೇವೆ, ನಾನು ನಿನ್ನೊಂದಿಗಿದ್ದೇನೆ ಮತ್ತು ಇಲ್ಲಿರುವವರೆಲ್ಲರೂ ನಿನ್ನೊಂದಿಗಿದ್ದಾರೆ. ಯೋಚಿಸಬೇಡ. ನಿನ್ನ ಹಿಂದಿನ ಚರಿತ್ರೆ ಏನೇ ಆಗಿರಲಿ, ವರ್ತಮಾನದಲ್ಲಿನ ನಿನ್ನ ಮುಗ್ಧತೆಯ ಬಗ್ಗೆ ನಂಬಿಕೆಯನ್ನಿರಿಸು. ತಪ್ಪುಗಳಾಗುವುದು ಅಜ್ಞಾನದಿಂದ, ಜ್ಞಾನದ ಕೊರತೆಯಿಂದ, ತಿಳುವಳಿಕೆಯ ಕೊರೆತೆಯಿಂದ. ಕೆಲವು ಹಂಬಲ ಅಥವಾ ತಿರಸ್ಕಾರದಿಂದಾಗಿ ನೀನೊಂದು ತಪ್ಪನ್ನು ಮಾಡಿದೆ. ಅದು ಆಗಿ ಹೋಯಿತು, ಮುಗಿಯಿತು. ನೀವೊಂದು ತಪ್ಪನ್ನು ಅರಿತುಕೊಳ್ಳುವ ಕ್ಷಣದಲ್ಲಿಯೇ ನೀವು ಅದರಿಂದ ಹೊರಬಂದಿರುತ್ತೀರಿ. ಆದುದರಿಂದ, ನಿನ್ನ ಮೇಲೆ ಬಹಳ ಕಠಿಣವಾಗಿರಬೇಡ ಮತ್ತು ಯಾವತ್ತೂ ಕೂಡಾ ನಿನ್ನ ಜೀವನವನ್ನು ಕೊನೆಗೊಳಿಸುವ ಯೋಚನೆ ಮಾಡಬೇಡ, ತಿಳಿಯಿತಾ?

ಮತ್ತು ಇನ್ನೊಬ್ಬರು ಯಾರೋ ಕೂಡಾ ಹಾಗೆ ಮಾಡುತ್ತಿರುವುದು ನಿಮಗೆ ತಿಳಿದರೆ, ಅವರನ್ನು ಸುಮ್ಮನೇ ಪಾರ್ಟ್-೧ ಶಿಬಿರಕ್ಕೆ ಕರೆತನ್ನಿ. ಅವರು ಉಸಿರಾಟದ ಅಭ್ಯಾಸ ಮಾಡಲಿ, ಅವರು ಧ್ಯಾನ ಮಾಡಲಿ ಮತ್ತು ಅವರು ಕೂಡಾ ಈ ಪ್ರವೃತ್ತಿಯಿಂದ ಹೊರಬರುವುದನ್ನು ನೀವು ನೋಡಬಹುದು.

ಪ್ರಶ್ನೆ: ಪ್ರೀತಿಯ ಗುರೂಜಿ, ಯಾರಾದರೊಬ್ಬರು, ತಾವು ಉದ್ದೇಶಿಸದೇ ಇದ್ದರೂ ನನಗೆ ತೊಂದರೆಯನ್ನುಂಟುಮಾಡುವಾಗ ನಾನೇನು ಮಾಡಬೇಕು? ನನಗೆ ಕಂಗೆಡದೇ ಇರಲು ಸಾಧ್ಯವಾಗುವುದಿಲ್ಲ. ನಾನು ಕೋಪಗೊಳ್ಳದಿರಲು ಎಷ್ಟೇ ಪ್ರಯತ್ನಿಸಿದರೂ, ದಿನಗಳ ಕಾಲ ನಾನು ಕೋಪಗೊಳ್ಳುತ್ತೇನೆ.
ಶ್ರೀ ಶ್ರೀ ರವಿಶಂಕರ್:
ಓ! ಭಸ್ತ್ರಿಕಾ ಮಾಡು. ಅದು ನಿನ್ನನ್ನು ಆ ಮನಸ್ಥಿತಿಯಿಂದ ಹೊರತೆಗೆಯಬಹುದು. ಸುದರ್ಶನ ಕ್ರಿಯೆ, ಭಸ್ತ್ರಿಕಾ - ಅಷ್ಟೆ. ನೀನು ಅದರಿಂದ ಹೊರಬರುವೆ.

ಪ್ರಶ್ನೆ: ಗುರೂಜಿ, ಧ್ಯಾನವು ವಿಶ್ರಮಿಸುವಿಕೆಯೆಂದೂ, ಏಕಾಗ್ರತೆಯಲ್ಲವೆಂದೂ ನಮಗೆ ಹೇಳಲಾಗಿದೆ. ಹಾಗಾದರೆ ಧ್ಯಾನದ ಸಮಯದಲ್ಲಿ ನಮಗೆ ಆಲೋಚನೆಗಳು ಬರುವಾಗಲೂ ಅದು ವಿಶ್ರಮಿಸುವಿಕೆಯೇ?
ಶ್ರೀ ಶ್ರೀ ರವಿಶಂಕರ್:
ಹೌದು! ಆಲೋಚನೆಗಳ ಬಗ್ಗೆ ನಿಮಗೆ ಪರಿಜ್ಞಾನವಾದಾಗ, ನೀವೊಂದು ಆಳವಾದ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿ ಮತ್ತು ಬಿಟ್ಟು ಬಿಡಿ ಮತ್ತು ಆಲೋಚನೆಗಳು ಅದಾಗಲೇ ಹೋಗಿರುವುದನ್ನು ನೀವು ನೋಡುತ್ತೀರಿ.

ಧ್ಯಾನವೆಂದರೆ ಏಕಾಗ್ರತೆಯಲ್ಲ. ನೀವು ಒಂದು ಆಲೋಚನೆಯನ್ನು ಓಡಿಸಲು ಹೆಚ್ಚು ಪ್ರಯತ್ನಿಸಿದಷ್ಟೂ, ಅದು ಹೆಚ್ಚು ಬರುತ್ತದೆ. ಅತ್ಯುತ್ತಮವಾದುದೆಂದರೆ, ಆ ಆಲೋಚನೆಗೆ ಒಂದು ಅಪ್ಪುಗೆಯನ್ನು ನೀಡುವುದು ಮತ್ತು ಆ ಆಲೋಚನೆಯು ಒಂದು ಗುಳ್ಳೆಯಂತೆ ಮಾಯವಾಗುವುದನ್ನು ನೀವು ನೋಡುವಿರಿ. ಆಲೋಚನೆಗಳು ಈ ರೀತಿಯಲ್ಲಿ ಬರುತ್ತವೆ, ಸರಿಯಾ? (ಶ್ರೀ ಶ್ರೀಯವರು ಗುಳ್ಳೆಗಳು ಹೊರಬರುತ್ತಿರುವ ಒಂದು ಸಾಬೂನಿನ ಗುಳ್ಳೆಗಳ ಪಿಸ್ತೂಲನ್ನು ಸಭಿಕರಿಗೆ ಮುಖಮಾಡಿ ಹಿಡಿದುಕೊಂಡು).

ಅವುಗಳು ಎಷ್ಟು ಹೊತ್ತು ಉಳಿಯುತ್ತವೆಯೆಂದು ನೋಡಿ (ಗಾಳಿಯಲ್ಲಿರುವ ಗುಳ್ಳೆಗಳ ಬಗ್ಗೆ). ಅವುಗಳು ಹಾಗೇ ಬರುತ್ತವೆ ಮತ್ತು ಮಾಯವಾಗುತ್ತವೆ. ನಮ್ಮೆಲ್ಲಾ ಚಿಂತೆಗಳು ಕೂಡಾ ಹೀಗೆಯೇ. ಈ ಚಿಂತೆಗಳು ಬಂದರೆ ಯೋಚಿಸಬೇಡಿ. ಹಾಗೇ ಹಿಂದೆ ಆಗಿ ಹೋದುದರ ಕಡೆಗೆ ನೋಡಿ; ಹತ್ತು ವರ್ಷಗಳ ಹಿಂದೆ ನೀವು ಚಿಂತಿಸಿರಲಿಲ್ಲವೇ? ನೀವು ಈಗಲೂ ಬದುಕಿದ್ದೀರಿ. ನೀವು ೨೦೧೨ ನ್ನು ನೋಡುವಿರೇ ಇಲ್ಲವೇ ಎಂಬುದಾಗಿ ನೀವು ಚಿಂತಿಸಿದ್ದಿರಿ ಮತ್ತು ನೀವು ೨೦೧೨ನ್ನು ನೋಡುತ್ತಿದ್ದೀರಿ! ೨೦೧೨ ರಲ್ಲಿ ಪ್ರಪಂಚವು ನಾಶವಾಗಿ ಹೋಗಲಿದೆಯೆಂಬ ಸಿನೆಮಾವನ್ನು ನೀವು ನೋಡುವಾಗ, ನೀವು ಯೋಚಿಸುತ್ತೀರಿ, "ಓ ದೇವರೇ!". ಅದು ನಿಮ್ಮನ್ನು ಬಹಳ ಆತಂಕಗೊಳಿಸುತ್ತದೆ. ಆದರೆ ನಾನು ನಿಮಗೆ ಹೇಳುತ್ತೇನೆ, ಎಲ್ಲವೂ ಎಂದಿನಂತೆ ನಡೆಯುತ್ತಿರುತ್ತದೆ. ಕೆಲವೊಮ್ಮೆ ನೀವು ಕೊಡವಿಕೊಂಡು ಎಚ್ಚರಗೊಳ್ಳಬೇಕು ಮತ್ತು ಲವಲವಿಕೆಯಿಂದಿರಬೇಕು!

ಪ್ರಶ್ನೆ: ಪ್ರೀತಿಯ ಗುರೂಜಿ, ಧರ್ಮಗಳಿರುವುದು ಯಾಕೆ? ಅವುಗಳಿರುವುದು ನಮ್ಮನ್ನು ಮಾನಸಿಕವಾಗಿ ಸ್ವಸ್ಥವಾಗಿರಿಸಲು ಮತ್ತು ನಂಬಲು ಏನಾದರೊಂದು  ಬೇಕೆಂಬುದಕ್ಕೆ ಎಂದು ನನಗೆ ತಿಳಿದಿದೆ. ಆದರೆ ಜನರು ತಮ್ಮ ನಂಬಿಕೆಗಳು ಸರಿ ಮತ್ತು ಇತರರು ತಪ್ಪು ಎಂದು ಯಾಕೆ ಅಷ್ಟು ಬಲವಾಗಿ ಅಂದುಕೊಳ್ಳುತ್ತಾರೆ? ಅವರಲ್ಲಿ ಯಾರಾದರೂ ಸರಿಯೇ ಎಂದು ನಾವು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಜನರಿಗೆ ಒಂದು ಗುರುತು ಬೇಕು, ಮತ್ತು ಅವರು ಧರ್ಮವನ್ನು ಒಂದು ಗುರುತನ್ನಾಗಿಸಿಕೊಂಡು ಅದಕ್ಕೆ ಅಂಟಿಕೊಂಡಿದ್ದಾರೆ. ಒಮ್ಮೆ ನೀವು ಒಂದು ಧರ್ಮದೊಂದಿಗೆ ನಿಮ್ಮನ್ನು ಗುರುತಿಸಿಕೊಂಡರೆ, ಆ ಧರ್ಮಕ್ಕೆ ಯಾರು ಸೇರಿರುವುದಿಲ್ಲವೋ ಅವರು ಇನ್ನು ನಿಮಗೆ ಸೇರಿದವರಲ್ಲವೆಂದು ತಿಳಿಯುತ್ತೀರಿ. ಅವರು ಪ್ರತ್ಯೇಕ; ಅವರು ಬೇರೆಯವರು, ಮತ್ತು ಹೀಗೆಯೇ ಕಲಹವಾಗಲು ಪ್ರಾರಂಭವಾದುದು, ಅಂದು ಯುದ್ಧಗಳಾದುದು.

ಮಾನವರಿಗೆ ಒಂದು ಗುರುತು ಬೇಕು ಮತ್ತು ಇದೊಂದು ಕೇವಲ ಗುರುತಿಸುವಿಕೆಯ ಮುಗ್ಗಟ್ಟು. ಅದು ಭಾಷೆಯಿರಲಿ, ಧರ್ಮವಿರಲಿ, ದೇಶೀಯತೆಯಿರಲಿ - ಇದೆಲ್ಲವೂ ಅಹಂನ ಒಂದು ಆಟ. ಒಬ್ಬನು, ಈ ಧರ್ಮವು ಒಳ್ಳೆಯದು ಎಂದು ಹೇಳುವುದು ಅದು ಒಳ್ಳೆಯದಾದುದರಿಂದ ಅಲ್ಲ, ಅವನು ಹೇಳುವುದು ಇದು ಒಳ್ಳೆಯದು ಯಾಕೆಂದರೆ ನಾನು ಆ ಧರ್ಮಕ್ಕೆ ಸೇರಿದ್ದೇನೆ. ಇದು ನನ್ನ ಧರ್ಮ, ಆದುದರಿಂದ ಇದು ಉತ್ತಮ. ಧರ್ಮಕ್ಕಿಂತಲೂ ಹೆಚ್ಚಾಗಿ ಇದೊಂದು ಗುರುತಿಸುವಿಕೆಯ ಮುಗ್ಗಟ್ಟು ಎಂಬುದನ್ನು ನೀವು ಸ್ಪಷ್ಟವಾಗಿ ಕಾಣುವುದು ಇಲ್ಲಿಯೇ. ಎಲ್ಲಾ ಧರ್ಮಗಳು ಒಂದು ವಿಷಯವನ್ನು ಸೂಚಿಸುತ್ತವೆ - ಪ್ರೀತಿ ಮತ್ತು ಸಹೋದರತೆ, ಒಂದು ಪರಮ ಶಕ್ತಿಯ ಅಸ್ಥಿತ್ವ ಮತ್ತು ಆ ಶಕ್ತಿಯನ್ನು ಪ್ರಾರ್ಥಿಸುವುದು, ಮಾನವತೆಯಲ್ಲಿ ವಿಶ್ವಾಸ ಮತ್ತು ಮಾನವರ ಒಳ್ಳೆಯತನದಲ್ಲಿ ವಿಶ್ವಾಸ.

ಹೀಗಿದ್ದರೂ, ಜನರು ಧರ್ಮದ ಆಧ್ಯಾತ್ಮಿಕ ಅಂಶವನ್ನು ಬಿಟ್ಟಿದ್ದಾರೆ ಮತ್ತು ಹೊರಕವಚಕ್ಕೆ ಅಂಟಿಕೊಂಡಿದ್ದಾರೆ ಹಾಗೂ ಆದುದರಿಂದಲೇ ಅವರೆಲ್ಲರೂ ಜಗಳವಾಡುತ್ತಿದ್ದಾರೆ. ಒಬ್ಬ ಏಸುಕ್ರಿಸ್ತನಿದ್ದನು, ಆದರೆ ಇವತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಎಪ್ಪತ್ತೆರಡು ಪಂಥಗಳಿವೆ. ಒಬ್ಬನೇ ಒಬ್ಬ ಪ್ರವಾದಿ ಮುಹಮ್ಮದ್ ಇದ್ದನು, ಆದರೆ ಇವತ್ತು ಇಸ್ಲಾಂ ಧರ್ಮದಲ್ಲಿ ಆರು ಬೇರೆ ಬೇರೆ ಪಂಥಗಳಿವೆ. ಭಗವಾನ್ ಬುದ್ಧನು ಒಬ್ಬನೇ ಒಬ್ಬನಾಗಿದ್ದನು, ಮತ್ತು ಇವತ್ತು ಬೌದ್ಧ ಧರ್ಮದಲ್ಲಿ ಮೂವತ್ತೆರಡು ಪಂಥಗಳಿವೆ ಹಾಗೂ ಹಿಂದೂ ಧರ್ಮದಲ್ಲಿ, ಲೆಕ್ಕವಿಲ್ಲದಷ್ಟು ಸಂಖ್ಯೆಯ ಪಂಥಗಳು! ಎಷ್ಟೊಂದು ಪಂಥಗಳಿವೆಯೆಂದರೆ, ನಿಮಗೆ ಅದನ್ನು ಲೆಕ್ಕ ಹಾಕಲೂ ಸಾಧ್ಯವಿಲ್ಲ.

ನಾನು ಹೇಳುವುದೇನೆಂದರೆ, ನಾವು ನಮ್ಮ ಧಾರ್ಮಿಕ ಗುರುತಿಸುವಿಕೆಯಿಂದ ಮೇಲೇರಬೇಕು ಮತ್ತು ಆಧಾತ್ಮವನ್ನು ಗುರುತಿಸಬೇಕು. ಆಧ್ಯಾತ್ಮವು ಒಂದು ಅನುಭವವಾಗಿದೆ. ಒಮ್ಮೆ ನಿಮಗೆ ಆಳದಲ್ಲಿ ಶಾಂತಿಯ, ಸಮಾಧಾನದ, ಪ್ರೀತಿಯ ಮತ್ತು ಮೌನದ ಅನುಭವವಾದಾಗ, ಅದೇ ಜ್ಞಾನವು ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ ಎಂಬುದು ನಿಮಗೆ ತಿಳಿಯುತ್ತದೆ.

ಆದುದರಿಂದ, ನಾನು ಹೇಳುವುದೇನೆಂದರೆ ನೀವು ಇರುವೆಯಂತಿರಬೇಕು. ಅಲ್ಲೊಂದು ಮರಳು ಮತ್ತು ಸಕ್ಕರೆಯ ಮಿಶ್ರಣವಿದ್ದರೆ, ಇರುವೆ ಏನು ಮಾಡುತ್ತದೆಯೆಂದು ನಿಮಗೆ ಗೊತ್ತಿದೆಯೇ? ಅದು ಸಕ್ಕರೆ ಮತ್ತು ಮರಳನ್ನು ಪ್ರತ್ಯೇಕಗೊಳಿಸುತ್ತದೆ, ಮರಳಿನಿಂದ ಇರುವೆಗೂಡನ್ನು ಕಟುತ್ತದೆ ಹಾಗೂ ಸಕ್ಕರೆಯನ್ನು ತಿನ್ನುತ್ತದೆ. ನಾವು ಇದನ್ನೇ ಮಾಡಬೇಕು. ಅದು ವೈಚಾರಿಕ ಪಕ್ಷಪಾತ; ಅದು ತಾರ್ಕಿಕ.

ನಿಮಗೆ ಗೊತ್ತಿದೆಯಾ, ಹೆಚ್ಚಾಗಿ ನಂಬಿಕೆಯ ಸ್ಥಳಗಳು ತರ್ಕವನ್ನು ದೂರವಿಡುತ್ತವೆ ಮತ್ತು ಬಹಳ ತರ್ಕ ಮಾಡುವವರೆಂಬ ಕಾರಣಕ್ಕೆ ಹೆಮ್ಮೆ ಪಟ್ಟುಕೊಳ್ಳುವವರು ನಂಬಿಕೆಗೆ ಬೆಲೆಕೊಡುವುದಿಲ್ಲ. ಅವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೆ ಜೀವನವು ವಿಕಲವಾಗುತ್ತದೆ. ನಿಮ್ಮಲ್ಲಿ ತರ್ಕಬುದ್ಧಿ ಹಾಗೂ ನಂಬಿಕೆ ಎರಡೂ ಇರಬೇಕು, ಮತ್ತು ಅದುವೇ ಆಧಾತ್ಮ. ಆಧ್ಯಾತ್ಮವೆಂದರೆ ನಂಬಿಕೆ ಮತ್ತು ತರ್ಕಗಳು ಜೊತೆಯಲ್ಲಿರುವುದು, ಹೃದಯ ಮತ್ತು ಮನಸ್ಸು ಎರಡನ್ನೂ ಉತ್ಕೃಷ್ಟಗೊಳಿಸುವುದು.

ನೀವಿದನ್ನು ಪ್ರಪಂಚದ ಚರಿತ್ರೆಯಲ್ಲಿ ಕಾಣಬಹುದು - ಮೂಡಣ ಮತ್ತು ಪಡುವಣ. ಅದನ್ನು ಎರಡು ರೀತಿಗಳಲ್ಲಿ ನೋಡಬಹುದು. ಪಡುವಣದಲ್ಲಿ ಯಾವತ್ತೂ, "ಮೊದಲು ನಂಬಿಕೆಯನ್ನಿರಿಸು ಮತ್ತು ನಂತರ ಒಂದು ದಿನ ನಿನಗೊಂದು ಅನುಭವ ಸಿಗುತ್ತದೆ" ಎಂದು ಹೇಳಲಾಗುತ್ತಿತ್ತು. ಮೂಡಣವು ಒಂದು ವಿಭಿನ್ನವಾದ ದಾರಿಯನ್ನು ಹಿಡಿದಿತ್ತು. ಅದು, "ಮೊದಲು ನಿನಗೊಂದು ಅನುಭವವಾಗುತ್ತದೆ, ಮತ್ತು ನಂತರ, ನಿನಗೆ ಬೇಕಾದರೆ ನೀನು ನಂಬು" ಎಂದು ಹೇಳಿತು, ಮತ್ತು ಇದಕ್ಕೇ ಇರಬೇಕು ಮೂಡಣದಲ್ಲಿ ವಿಜ್ಞಾನವು ಉನ್ನತಿಗೇರಿದುದು, ಯಾಕೆಂದರೆ ವಿಜ್ಞಾನದಲ್ಲೂ ಕೂಡಾ ಇದೇ ವಿಧಾನವಿದೆ.

ವಿಜ್ಞಾನ ಏನನ್ನುತ್ತದೆ? "ಮೊದಲು ನೀನು ಅನುಭವವನ್ನು ಪಡೆ ಮತ್ತು ನಂತರ ನೀನು ಅದನ್ನು ನಂಬಬಹುದು." ಪೂರ್ವದಲ್ಲಿ, ಮೂಡಣ ತತ್ವಜ್ಞಾನದಲ್ಲಿ ವಿಜ್ಞಾನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ಇದೊಂದು ಕಾರಣ, ಯಾಕೆಂದರೆ ನಂಬಿಕೆ ಹಾಗೂ ವಿಜ್ಞಾನಗಳಿಗಿದ್ದ ನಿಯತಾಂಕಗಳು ಒಂದೇ ಆಗಿದ್ದವು. ಅವುಗಳು ಪರಸ್ಪರ ಸಂಘರ್ಷಕ್ಕೆ ಒಳಗಾಗಲಿಲ್ಲ.  ಆದರೂ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅವುಗಳು ಯಾವಾಗಲೂ ಸಂಘರ್ಷಕ್ಕೆ ಒಳಗಾಗಿದ್ದವು.

ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಕೇವಲ ತಿಳಿಯಲು ಬಯಸುತ್ತೇನೆ, ಜೀವನವನ್ನು ಸರಿಯಾಗಿ ಜೀವಿಸಲು ಹಲವಾರು ಮಾರ್ಗಗಳಿವೆಯೇ? ನಾವು ಯಾವತ್ತೂ ಸರಿಯಾದುದನ್ನೇ ಮಾಡಬೇಕೆಂದಿದೆಯೇ ಅಥವಾ ಕೆಲವೊಮ್ಮೆ ತಪ್ಪಾದರೆ ಪರವಾಗಿಲ್ಲವೇ? ಹಲವಾರು ಸರಿಯಾದ ಮಾರ್ಗಗಳಿವೆಯೇ?
ಶ್ರೀ ಶ್ರೀ ರವಿಶಂಕರ್:
ನಿನ್ನ ಆತ್ಮಸಾಕ್ಷಿಯನ್ನು ಕೇಳು. ನಿನ್ನ ಆತ್ಮಸಾಕ್ಷಿಯು ಹೇಳುತ್ತದೆ, "ಇಲ್ಲ, ಇದು ಸರಿಯಲ್ಲ."

ಯಾವುದು ಸರಿಯಲ್ಲ? ಯಾವುದನ್ನು ಇತರರು ನಿನಗೆ ಮಾಡುವುದನ್ನು ನೀನು ಇಷ್ಟಪಡುವುದಿಲ್ಲವೋ, ಅದು ಸರಿಯಲ್ಲ. ನಿನ್ನೊಳಗೆ ಏನಾದರೂ ನಿನಗೆ ಚುಚ್ಚಿದರೆ, ಆಗ ಅದನ್ನು ಮಾಡಬೇಡ.

ಪ್ರಶ್ನೆ: ಪ್ರೀತಿಯ ಗುರೂಜಿ, ಋಷಿ ಅಷ್ಟಾವಕ್ರರು ತಮ್ಮ ಅಷ್ಟಾವಕ್ರ ಗೀತೆಯಲ್ಲಿ, ನಾವು ಕರ್ತೃಗಳಲ್ಲ ಎಂದು ಹೇಳುತ್ತಾರೆ. ಆತ್ಮ-ಸಾಕ್ಷಾತ್ಕಾರಕ್ಕೆ ಆತ್ಮ-ಸಂಯಮವು ಅಗತ್ಯವೆಂದು ಯೋಗ ವಾಸಿಷ್ಠ ಹೇಳುತ್ತದೆ. ಇದು ವಿರೋಧಾತ್ಮಕವಾಗಿ ಕಾಣಿಸುತ್ತದೆ. ದಯವಿಟ್ಟು ನೀವು ಇದರ ಬಗ್ಗೆ ಸ್ವಲ್ಪ ಹೆಚ್ಚು ಪ್ರಕಾಶ ಬೀರುವಿರಾ?
ಶ್ರೀ ಶ್ರೀ ರವಿಶಂಕರ್:
ಸತ್ಯವು ವಿರೋಧಾತ್ಮಕವಾದುದು. ಸತ್ಯವು ಹಲವು ಆಯಾಮಗಳನ್ನೊಳಗೊಂಡಿದೆ. ಅದು ಸಂಘರ್ಷದಲ್ಲಿರುವಂತೆ ಮತ್ತು ವಿರೋಧಾಭಾಸದಲ್ಲಿರುವಂತೆ ಕಾಣಿಸುತ್ತದೆ. ಆದರೆ ಅದು ಹಾಗಿರುವುದಿಲ್ಲ.

ಈ ಸ್ಥಳಕ್ಕೆ ಬರಲು, ಒಂದು ಮಾರ್ಗ ಸೂಚನೆಯು ತಿಳಿಸಬಹುದು, "ನೇರವಾಗಿ ಹೋಗಿ ಮತ್ತು ನಂತರ ಎಡಕ್ಕೆ ತಿರುಗಿ." ಆದರೆ ನೀವು ಇನ್ನೊಂದು ದಿಕ್ಕಿನಿಂದ ಬಂದರೆ, ಅದು ಹೇಳಬಹುದು, "ನೇರವಾಗಿ ಹೋಗಿ ಮತ್ತು ನಂತರ ಬಲಕ್ಕೆ ತಿರುಗಿ." ಎರಡೂ ಸರಿ.

ನಾನು ನಿಮಗೆ ಒಂದು ಘಟನೆಯನ್ನು ಹೇಳಲು ಬಯಸುತ್ತೇನೆ. ನಿಮಗೆ ಅಯಾತೊಲ್ಲಾ ಖೊಮೆನಿಯ ಬಗ್ಗೆ ತಿಳಿದಿದೆಯಾ? ಅವರು ಇರಾನಿನವರು. ಅಯಾತೊಲ್ಲಾ ಖೊಮೆನಿಯ ಆಪ್ತ ಸಹಾಯಕರು ಒಮ್ಮೆ ಬೆಂಗಳೂರಿಗೆ ಬಂದರು. ಅವರು ಸುಮಾರು ೭೮ ವರ್ಷ ವಯಸ್ಸಿನವರು, ಒಬ್ಬರು ಬಹಳ ಹಿರಿಯ ವ್ಯಕ್ತಿ. ಇದು ಬಹಳ ಹಿಂದೆ, ಸುಮಾರು ಹತ್ತರಿಂದ ಹದಿನೈದು ವರ್ಷಗಳ ಹಿಂದೆ. ಅವರು ನನ್ನನ್ನು ಕೇಳಿದರು, "ಗುರುದೇವ್, ನನ್ನಲ್ಲಿ ಒಂದು ಬಹಳ ಗಂಭೀರವಾದ ಪ್ರಶ್ನೆಯಿದೆ, ಒಂದು ಗಂಭೀರವಾದ ಸಂಶಯ. ಇದನ್ನು ನಾನು ನನ್ನ ಜೀವಮಾನವಿಡೀ ಕೇಳುತ್ತಿದ್ದೇನೆ ಮತ್ತು ನನಗೆ ಉತ್ತರ ಸಿಗಲಿಲ್ಲ. ನೀವು ನನಗೆ ಉತ್ತರ ನೀಡುವಿರೆಂದು ಆಶಿಸುತ್ತೇನೆ."

ನಾನಂದೆ, "ಹೌದು, ದಯವಿಟ್ಟು ನನಗೆ ಹೇಳಿ."

ಅವರಂದರು, "ಒಂದು ಪ್ರಶ್ನೆಗೆ ಹಲವಾರು ಸರಿಯಾದ ಉತ್ತರವಿರಲು ಹೇಗೆ ಸಾಧ್ಯ? ಸತ್ಯವು ಒಂದೇ ಆದರೆ, ಆಗ ಉತ್ತರ ಕೂಡಾ ಒಂದೇ ಆಗಿರಬೇಕು. ಒಂದೇ ಒಂದು ಸರಿಯಾದ ಉತ್ತರವಿರಲು ಸಾಧ್ಯ. ಎರಡು ಸರಿಯಾದ ಉತ್ತರಗಳಿರಲು ಸಾಧ್ಯವಿಲ್ಲ ಮತ್ತು ಸರಿಯಾದ ಉತ್ತರ ಒಂದೇ ಒಂದು ಆಗಿದ್ದರೆ, ಆಗ ಅಷ್ಟೊಂದು ಧರ್ಮಗಳಿಗೆ ಯಾವುದೇ ಅರ್ಥವಿಲ್ಲ. ಒಂದೇ ಒಂದು ಸರಿಯಾದ ಧರ್ಮವಿರಲು ಸಾಧ್ಯ. ಪ್ರಪಂಚದಲ್ಲಿ ಹಲವಾರು ಧರ್ಮಗಳಿವೆ. ಎಲ್ಲಾ ಪಥಗಳೂ ಸರಿಯಾಗಲು ಹೇಗೆ ಸಾಧ್ಯ? ಸತ್ಯವು ಒಂದೇ ಆಗಿದ್ದರೆ ಮತ್ತು ಒಂದು ವಿಷಯವು  ಸರಿಯಾಗಿದ್ದರೆ, ಆಗ ಒಂದು ಪ್ರಶ್ನೆಗೆ ಒಂದೇ ಒಂದು ಸರಿಯಾದ ಉತ್ತರವಿರಲು ಸಾಧ್ಯ. ಆಗ ಇತರ ಎಲ್ಲಾ ಧರ್ಮಗ್ರಂಥಗಳು, ಎಲ್ಲವೂ ಪ್ರಶ್ನೆಗೆ ಸರಿಯಾದ ಉತ್ತರವಾಗಿರಲು ಸಾಧ್ಯವಿಲ್ಲ. ಒಂದೇ ಒಂದು ಸರಿಯಾದ ಉತ್ತರವಿರಲು ಸಾಧ್ಯ." ಇದು ಬಹಳ ಮನವೊಲಿಸುವ ವಾದವಾಗಿತ್ತು.

ನಾನು ಅವರಿಗಂದೆ, "ನೋಡಿ, ಈ ಸ್ಥಳಕ್ಕೆ ಬರಲು ಹಲವಾರು ದಾರಿಗಳಿವೆ ಮತ್ತು ಎಲ್ಲಾ ದಾರಿಗಳೂ ಸರಿಯೇ. ಹಾಗೇ ನೇರವಾಗಿ ಹೋಗಿ, ಎಡಕ್ಕೆ ಅಥವಾ ಬಲಕ್ಕೆ ತಿರುಗಬೇಡಿ ಎಂಬುದು ಒಂದು ಸೂಚನೆ. ನೀವು ಆ ಸ್ಥಳವನ್ನು ತಲಪುವಿರಿ. ಅಲ್ಲಿ ಇನ್ನೊಂದು ಸೂಚನೆಯಿರುತ್ತದೆ. ಅದರ ಪ್ರಕಾರ, ನೇರವಾಗಿ ಹೋಗಿ ಮತ್ತು ಬಲಕ್ಕೆ ತಿರುಗಿ ಎಂದಿರುತ್ತದೆ. ಇನ್ನೊಂದು ಸೂಚನೆಯು, ನೇರವಾಗಿ ಹೋಗಿ ಮತ್ತು ಎಡಕ್ಕೆ ತಿರುಗಿ ಎಂದು ಹೇಳುತ್ತದೆ. ಈ ಸ್ಥಳಕ್ಕೆ ಬರಲು ಇರುವ ಎಲ್ಲಾ ಬೇರೆ ಬೇರೆ ಸೂಚನೆಗಳೂ ಸರಿಯೇ.  ಆದುದರಿಂದ, ನಾವು ಗೋಳಾತ್ಮಕವಾಗಿ ಯೋಚಿಸಬೇಕು."

ಕೂಡಲೇ ಅವರಿಗೆ, ನೀವೆಲ್ಲಿದ್ದೀರೆಂಬುದರ ಮೇಲೆ ಅದು ಅವಲಂಬಿಸಿದೆ ಎಂಬುದು ತಿಳಿಯಿತು.

ನಾನಂದೆ, "ಭಾರತದಲ್ಲಿ ಒಂದು ಪ್ರಾಚೀನ ಚಿಂತನೆಯಿದೆ. ಅದು ಹೇಳುತ್ತದೆ - ಜ್ಞಾನವು ನನಗೆ ಎಲ್ಲಾ ಬದಿಗಳಿಂದಲೂ ಬರಲಿ. ಅವರು ಮತಾಂಧತೆಯನ್ನು ಪ್ರೋತ್ಸಾಹಿಸಲಿಲ್ಲ. ಸತ್ಯವು ಒಂದೇ ಆದರೆ ಅದು ಹಲವಾರು ರೀತಿಗಳಲ್ಲಿ ಗ್ರಹಿಸಲ್ಪಡುತ್ತದೆ."

ಏಕಂ ಸತ್ ವಿಪ್ರ ಬಹುಧ ವದಂತಿ - ಸತ್ಯವು ಒಂದೇ, ಆದರೆ ಜ್ಞಾನಿಯು ಅದನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸುತ್ತಾನೆ.

ಅವರು ಬಹಳ ಸಂತೋಷಪಟ್ಟರು. ಅವರು ಬಗ್ಗಿದಾಗ, ಅವರ ಕಣ್ಣುಗಳಲ್ಲಿ ನೀರಹನಿಗಳಿದ್ದವು. ಅವರಂದರು, "ನಿಮಗೆ ಬಹಳ ಧನ್ಯವಾದಗಳು."


ಪ್ರಶ್ನೆ: ಪ್ರೀತಿಯ ಗುರೂಜಿ, ನೀವು ಸುದರ್ಶನ ಕ್ರಿಯೆಯನ್ನು ಹೇಗೆ ಕಂಡುಹಿಡಿದಿರೆಂದು ದಯವಿಟ್ಟು ನಮಗೆ ಹೇಳಿ.
ಶ್ರೀ ಶ್ರೀ ರವಿಶಂಕರ್:
ನನಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ತೋರುತ್ತದೆ!

ಹೀಗೇ ಸುಮ್ಮನೇ ನಾನು ಕುಳಿತೆ ಮತ್ತು ಕೂಡಲೇ ಅದು ಒಂದು ಕವನದಂತೆ ಆಗಿಹೋಯಿತು. ನೀನೊಂದು ಕವನವನ್ನು ಬರೆದಿದ್ದೀಯಾ? ನಿಮ್ಮಲ್ಲಿ ಎಷ್ಟು ಮಂದಿ ಯಾವಾಗಲಾದರೂ ಯಾವುದಾದರೂ ಕವನವನ್ನು ಬರೆದಿದ್ದೀರಿ? ನೀವೊಂದು ಕವನವನ್ನು ಹೇಗೆ ಬರೆಯುತ್ತೀರಿ? ನೀವು ಸುಮ್ಮನೇ ಕುಳಿತುಕೊಳ್ಳುತ್ತೀರಿ ಮತ್ತು ಅದು ಹಾಗೇ ಹರಿಯುತ್ತದೆ, ಅಲ್ಲವೇ?

ಸುದರ್ಶನ ಕ್ರಿಯೆಗಿಂತಲೂ ಮೊದಲು ನಾನು ಯೋಗ ಮತ್ತು ಧ್ಯಾನವನ್ನು ಕಲಿಸುತಿದ್ದೆ. ಆದರೆ ಆಗ, ಅದು ಸಾಕಾಗಲಿಲ್ಲ. ಅಲ್ಲಿ ಏನೋ ಇತ್ತು; ಏನೋ ಒಂದು ಬರಬೇಕೆಂದು ನನಗೆ ಅನ್ನಿಸಿತು. ಎಲ್ಲರೂ ಇತರ ಎಲ್ಲರೊಂದಿಗೆ ಒಂದು ಅತ್ಮೀಯತಾ ಭಾವನೆಯನ್ನು ಅನುಭವಿಸುತ್ತಿರಲಿಲ್ಲ. ನಾನು ಯೋಚಿಸಿದೆ, "ಅದು ಹೇಗೆ ಎಲ್ಲರೂ ಅಷ್ಟೊಂದು ಸಂತೋಷವಾಗಿ ಮತ್ತು ಪ್ರೀತಿ ಹೊಂದಿದವರಾಗಿಲ್ಲ? ಅಲ್ಲಿ ಏನೋ ಇರಬೇಕು, ಯಾವುದಾದರೂ ತಂತ್ರ, ಜನರು ಅದನ್ನು ಅನುಭವಿಸುವಂತೆ ಮಾಡುವ ಯಾವುದಾದರೂ ಮಾರ್ಗ."  ನಂತರ, ನಾನು ಹತ್ತು ದಿನಗಳ ಮೌನವನ್ನು ಪಾಲಿಸಿದೆ ಮತ್ತು ಅದು ಆಗಲು ಪ್ರಾರಂಭವಾಯಿತು.

ಮೊದಲನೆಯ ಶಿಬಿರದಲ್ಲಿ ಮೂವತ್ತು ಜನರಿದ್ದರು. ಮೊದಲನೆಯ ಶಿಬಿರದಲ್ಲಿ, ನಮ್ಮ ಜನರಲ್ಲಿ ಕೆಲವರು ನನ್ನೊಂದಿಗಿದ್ದರು. ನಗರದ ವೈದ್ಯರು ಮತ್ತು ವಕೀಲರಿದ್ದರು. ಅವರೆಲ್ಲರೂ ಅದನ್ನು ಬಹಳವಾಗಿ ಆಸ್ವಾದಿಸಿದರು. ಮುಂದಿನ ವಾರಾಂತ್ಯ ಅವರು ಹೆಚ್ಚು ಜನರನ್ನು ಕರೆತಂದರು. ಹತ್ತು ವರ್ಷಗಳ ವರೆಗೆ, ನಾವಿದನ್ನು ಕೇವಲ ಬಾಯಿ ಮಾತಿನ ಮೂಲಕವೇ ಮಾಡಿದೆವು. ನಂತರ, ಭಾರತದಲ್ಲಿ, ಅಮೇರಿಕಾ ರಾಯಭಾರಿ ಕಛೇರಿಯ ಮತ್ತು ವಿಶ್ವಸಂಸ್ಥೆಯ ಸಿಬ್ಬಂದಿಗಳು ಕೂಡಾ, ಬಂದು ಅವರಿಗೊಂದು ಕಾರ್ಯಕ್ರಮವನ್ನು ಕೊಡುವಂತೆ ನನ್ನನ್ನು ವಿನಂತಿಸಿಕೊಂಡರು ಮತ್ತು ಅದನ್ನು ನಾವು ದಿಲ್ಲಿಯಲ್ಲಿ ಮಾಡಿದೆವು. ಅಲ್ಲಿ ಬ್ರಿಟಿಷ್ ಮತ್ತು ಅಮೇರಿಕಾದ ರಾಯಭಾರಿ ಕಛೇರಿಯ ಜನರಿದ್ದರು. ಹೀಗೆ, ಬಾಯಿಯಿಂದ ಬಾಯಿಗೆ ಹರಡಿ ಅದು ಆಗುತ್ತಾ ಹೋಯಿತು ಮತ್ತು ನಾನು ಪ್ರಯಾಣ ಮಾಡುತ್ತಾ ಹೋದೆ. ಇವತ್ತು, ಇದು ಎಲ್ಲೆಡೆಗಳಲ್ಲೂ ಇದೆ.

ಆರಂಭದ ದಿನಗಳಲ್ಲಿ, ಇದು ದೀರ್ಘವಾದ ಕಾರ್ಯಕ್ರಮವಾಗಿತ್ತು ಮತ್ತು ಎಲ್ಲಾ ಶಿಬಿರಗಳನ್ನೂ ನಾನೇ ಕಲಿಸಬೇಕಾಗುತ್ತಿತ್ತು. ಆಗ ನಾನು ಯೋಚಿಸಿದೆ, ಈ ಗತಿಯಲ್ಲಿ ಹೋದರೆ ಜನರನ್ನು ತಲಪಲು ಲಕ್ಷಗಟ್ಟಲೆ ವರ್ಷಗಳು ಬೇಕಾಗಬಹುದು ಮತ್ತು ಅದು ಸಾಧ್ಯವಾಗದು. ಆದುದರಿಂದ, ನಾನು ಜನರಲ್ಲಿ ಶಿಕ್ಷಕರಾಗುವಂತೆ ಕೇಳಲು ಪ್ರಾರಂಭಿಸಿದೆ. ನನ್ನನ್ನು ನಾನು ಹಲವರಾಗಿ ಹೆಚ್ಚಿಸಿಕೊಳ್ಳಬೇಕಾಗಿ ಬಂತು. ನಾವು ಹಲವಾರು ಶಿಕ್ಷಕರನ್ನು ಮಾಡಿದೆವು ಮತ್ತು ಕೋರ್ಸನ್ನು ಸ್ವಲ್ಪ ಚಿಕ್ಕದಾಗಿಸಿದೆವು ಹಾಗೂ ಅದನ್ನು ಈಗ ಎಲ್ಲರೂ ಆಸ್ವಾದಿಸುತ್ತಿದ್ದಾರೆ.

ನಂತರ, ಕೆಲವು ಜನರು ಬಂದು, ಯುವಜನರಿಗಾಗಿ ಒಂದು ಕಾರ್ಯಕ್ರಮ ಬೇಕೆಂದರು. ಇದರ ಬಳಿಕ ಯೆಸ್ ಪ್ಲಸ್ ಮತ್ತು ಆರ್ಟ್ ಎಕ್ಸೆಲ್ ಕಾರ್ಯಕ್ರಮಗಳು ಪ್ರಾರಂಭವಾದವು. ನಾವು ಮಕ್ಕಳಲ್ಲಿ ಸೃಜನಶೀಲತೆಯನ್ನು ಮೇಲೆ ತರಬೇಕು. ಸೃಜನಶೀಲತೆಯು ದೈವಿಕತೆಯಾಗಿದೆ. ಮಕ್ಕಳು ಒಂದೋ ಸೃಜನಶೀಲರು ಅಥವಾ ವಿನಾಶಕಾರಿಗಳಾಗುತ್ತಾರೆ. ಅವರು ನಡುಮಾರ್ಗದಲ್ಲಿ ನಡೆಯುವುದಿಲ್ಲ. ನಾವು ಮಕ್ಕಳಲ್ಲಿ ಸೃಜನಾತ್ಮಕ ಪ್ರೇರಣೆಯನ್ನು ಪ್ರೋತ್ಸಾಹಿಸಬೇಕು. ಅದು ಬಹಳ ಅವಶ್ಯಕ. ನಿಮಗೆ ಹಾಗೆ ಅನ್ನಿಸುವುದಿಲ್ಲವೇ? ಸೃಜನಶೀಲತೆಯನ್ನು ಪ್ರೋತ್ಸಾಹಿಸಿ!

ಪ್ರಶ್ನೆ: ಗುರೂಜಿ, ಸೇವೆಯ ಪ್ರಾಧಾನ್ಯತೆಯನ್ನು ನಾನು ತಿಳಿದಿದ್ದೇನೆ, ಆದರೆ ಈ ಕ್ಷಣದಲ್ಲಿ, ನನ್ನನ್ನೇ ತಿಳಿದುಕೊಳ್ಳುವುದಕ್ಕಿಂತ ಪ್ರಧಾನವಾದದ್ದು ಯಾವುದೂ ಇಲ್ಲ ಮತ್ತು ಸೇವೆಯು ನನಗೆ ಒಂದು ವಿಕರ್ಷಣೆಯಂತೆ ಅನ್ನಿಸುತ್ತಿದೆ. ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಒಂದು ಮಗುವು ತಾಯಿಯನ್ನು ತಿಳಿಯಲು ಬಯಸುತ್ತದೆಯೇ? ಒಂದು ಮಗುವು ತಾಯಿಯನ್ನು ತಿಳಿಯಬೇಕಾಗಿರುವ ಒಂದು ವಸ್ತುವನ್ನಾಗಿ ಮಾಡಲು ಬಯಸುತ್ತದೆಯೇ? ಯಾವುದಾದರೂ ಮಗುವು ಯಾವತ್ತಾದರೂ ತಾಯಿಯಲ್ಲಿ, "ಅಮ್ಮ, ನೀನು ಕಲಿತಿದ್ದು ಎಲ್ಲಿ? ಮೊದಲು ನನಗೆ ಹೇಳು. ನನಗೆ ನಿನ್ನ ಪರಿಚಯವನ್ನು ಕೊಡು; ನಿನ್ನ ಬಗ್ಗೆ ಇರುವ ಮಾಹಿತಿಯನ್ನು ನನಗೆ ತೋರಿಸು. ನಂತರ ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುತ್ತದೆಯೇ? ಒಂದು ಮಗುವು ಸುಮ್ಮನೇ ತನ್ನ ತಾಯಿಯನ್ನು ಪ್ರೀತಿಸುತ್ತದೆ. ಪ್ರತಿಯೊಂದು ಪ್ರಾಣಿಯೂ ಪ್ರಕೃತಿಯನ್ನು ಪ್ರೀತಿಸುತ್ತದೆ. ಅಷ್ಟೊಂದು ಅಗಾಧವಾದುದನ್ನು, ತಿಳಿಯುವ ಒಂದು ವಸ್ತುವನ್ನಾಗಿ ಮಾಡಲು ಸಾಧ್ಯವಿಲ್ಲ.

ವೇದಾಂತ ತತ್ವಜ್ಞಾನದಲ್ಲಿ ಒಂದು ಉದಾಹರಣೆಯನ್ನು ಕೊಡಲಾಗಿದೆ - ಒಂದು ಚಮಚವು ಸಾಗರವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ, ಆದರೆ ಅದು ಸಾಗರದಲ್ಲಿರಲು ಸಾಧ್ಯವಿದೆ.

ನಮ್ಮ ಬುದ್ಧಿಯು ಬಹಳ ಚಿಕ್ಕದು, ಆದರೆ ಆತ್ಮವು ಬುದ್ಧಿಗಿಂತ ಬಹಳಷ್ಟು ದೊಡ್ಡದು. ಆದುದರಿಂದ, ಚಿಕ್ಕ ಬುದ್ಧಿಯು ಆತ್ಮದ ಆಳವನ್ನು ಸೆರೆಹಿಡಿಯಲು ಸಾಧ್ಯವೇ? ಇಲ್ಲ!

ಹಾಗಾದರೆ, ಹೇಗೆ?

ನೀವು ಅದರಲ್ಲಿ ಇರಬಹುದು ಮತ್ತು ಅದು ಮೌನದಲ್ಲಿ. ನೀವು ಮೌನದಲ್ಲಿರಬಹುದು, ನೀವು ಮೌನವನ್ನು ತಿಳಿಯಲು ಸಾಧ್ಯವಿದೆ, ಆದರೆ ನೀವು ಮೌನವನ್ನು ಬಾಚಿಕೊಳ್ಳಲು ಸಾಧ್ಯವಿಲ್ಲ. ಸರಿಯಾ?!

ಆದುದರಿಂದ, ಆತ್ಮವನ್ನು ತಿಳಿದುಕೊಳ್ಳುವುದೆಂದರೆ, ಕುಳಿತುಕೊಂಡು ಸುಮ್ಮನೇ ಅದನ್ನು ವಿಶ್ಲೇಷಿಸುವುದಲ್ಲ. ನೀವು ನಿಮ್ಮ ಯೋಚನೆಗಳಲ್ಲ, ನೀವು ನಿಮ್ಮ ಭಾವನೆಗಳಲ್ಲ, ಅವುಗಳೆಲ್ಲಾ ಬರುತ್ತವೆ, ಹೋಗುತ್ತವೆ; ನಮ್ಮ ಶರೀರವು ಯಾವತ್ತೂ ಬದಲಾಗುತ್ತಾ ಇರುತ್ತದೆ, ಇದು ನಾನಲ್ಲ, ಆದರೆ ಬೇರೆ ಏನೋ ಇದೆ, ಎಂಬುದು ನಿಮಗೆ ತಿಳಿದಿದ್ದರೆ;  ಅದು ಯಾವುದು? ನಾನು ಯಾರು? - ನಿಮ್ಮನ್ನು ಒಂದು ಸ್ಥಿರತೆಯ ಅವಸ್ಥೆಗೆ ಕೊಂಡೊಯ್ಯಲು ಈ ವಿಚಾರಣೆಯೇ ಸಾಕು. ಒಮ್ಮೆ ನೀವು ಸ್ಥಿರವಾದ ಬಳಿಕ, ನಿಮ್ಮನ್ನೇ ಒಂದು ತಿಳಿಯಲಿರುವ ವಸ್ತುವನ್ನಾಗಿ ಮಾಡಲು ಪ್ರಯತ್ನಿಸಬೇಡಿ. ಅದು ಸಾಧ್ಯವಿಲ್ಲ. ನೀವು ತಿಳಿಯುವವರು, ತಿಳಿಯಲಿರುವ ವಸ್ತುವಲ್ಲ.

ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಅದು ತಲೆಯ ಸ್ವಲ್ಪ ಮೇಲಿನಿಂದಾಗಿ ಹೋದರೆ, ಪರವಾಗಿಲ್ಲ. ನಾವು ನಂತರ ಯಾವಾಗಲಾದರೂ ಪುನಃ ಅದರ ಬಗ್ಗೆ ಮಾತನಾಡೋಣ. ಆದರೆ ನೀವು ಅದರ ಬಗ್ಗೆ ಸುಮ್ಮನೇ ಯೋಚಿಸಬಹುದು - "ನಾನು ನನ್ನನ್ನು ತಿಳಿಯಲಿರುವ ಒಂದು ವಸ್ತುವನ್ನಾಗಿ ಮಾಡುವುದಿಲ್ಲ, ಆದರೆ ನಾನು ಇದ್ದೇನೆ. ಸಂತೋಷವಾಗಿದ್ದರೂ ಅಥವಾ ದುಃಖವಾಗಿದ್ದರೂ, ನಾನು ಇದ್ದೇನೆ. ಒಳ್ಳೆಯದು ಅಥವಾ ಕೆಟ್ಟದು, ನಾನು ಇದ್ದೇನೆ." ಪ್ರಾಣ(ಜೀವಶಕ್ತಿ)ವು ಹೆಚ್ಚಿರುವಾಗ ’ನಾನು ಇದ್ದೇನೆ’ ಎಂಬ ಈ ಜ್ಞಾನವು, ಈ ಪ್ರಜ್ಞೆಯು ಬಹಳಷ್ಟು ಸ್ಪಷ್ಟವಾಗುತ್ತದೆ. ಪ್ರಾಣವು ಕಡಿಮೆಯಿರುವಾಗ ನಿಮಗೆ ಆಯಾಸದ ಅನುಭವವಾಗುತ್ತದೆ, ನಿಮಗೆ ಏನನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮನಸ್ಸು ಸ್ಪಷ್ಟವಿರುವುದಿಲ್ಲ.

ನಿಮಗೆ ಮನಸ್ಸಿನ ಸ್ಪಷ್ಟತೆಯು ಸಿಗುವುದು ಯಾವಾಗ? ಶಕ್ತಿಯು ಹೆಚ್ಚಾಗಿರುವಾಗ. ಶಕ್ತಿಯು ನಿಜವಾಗಿ ಹೆಚ್ಚಿರುವಾಗ, ಇದು ಅಷ್ಟೊಂದು ವ್ಯಕ್ತವಾಗುತ್ತದೆ, ಅಷ್ಟೊಂದು ಸ್ಪಷ್ಟವಾಗುತ್ತದೆ. "ನಾನು ಶರೀರವಲ್ಲ, ಆದರೆ ನಾನು ಆತ್ಮವಾಗಿದ್ದೇನೆ. ನಾನು ಹೊಳೆಯುತ್ತಿರುವ ಆತ್ಮ. ನಾನು ಚೈತನ್ಯ. ನಾನು ಉತ್ಸಾಹ. ನಾನು ಪ್ರೀತಿ." ಈ ಅನುಭವವು ಸುಮ್ಮನೇ ಉದಯವಾಗುತ್ತದೆ.

ಈಗ, ಆ ಅನುಭವದೊಂದಿಗೆ ಮೋಹವಿಟ್ಟುಕೊಳ್ಳಲೂಬೇಡಿ. ತಿಳಿಯಿತಾ?

ಆದುದರಿಂದ, ಸುಮ್ಮನೇ ಸೇವೆ ಮಾಡಿ. ನೀವು ಹೆಚ್ಚು ಸೇವೆ ಮಾಡಿದಷ್ಟೂ, ಜೀವನದಲ್ಲಿ ಹೆಚ್ಚು ಯೋಗ್ಯತೆ ಗಳಿಸುತ್ತೀರಿ. ಹೆಚ್ಚು ಯೋಗ್ಯತೆ ಬಂದಷ್ಟೂ, ನೀವು ಒಳಗಿನಿಂದ ಹೆಚ್ಚು ಶಾಂತ ಮತ್ತು ಅವಿಚಲಿತರಾಗುತ್ತೀರಿ. ಅದರ ಬಗ್ಗೆ ಮಾಡಬೇಕಾಗಿರುವುದು ಇದನ್ನು.

ಸುಮ್ಮನೇ ಒಂದು ಮೂಲೆಯಲ್ಲಿ ಕುಳಿತುಕೊಂಡು, "ನಾನು ಯಾರು? ನಾನು ತಿಳಿಯಲು ಬಯಸುತ್ತೇನೆ" ಎಂದು ಯೋಚಿಸಿದರೆ, ಅದು ಆಗುವುದಿಲ್ಲ. ಅದನ್ನು ಚಟುವಟಿಕೆಯಿಂದ ಮತ್ತು ವಿಶ್ರಾಂತಿಯಿಂದ ಪೂರೈಸಬೇಕು. ಅದೇ ಸಮಯದಲ್ಲಿ, ನೀವು ಬಹಳವಾಗಿ ಚಟುವಟಿಕೆಯಲ್ಲಿದ್ದು, ಸ್ವಲ್ಪವೂ ವಿಶ್ರಾಂತಿಯನ್ನೇ ತೆಗೆದುಕೊಳ್ಳದೇ ಇದ್ದರೆ ಅಲ್ಲೊಂದು ಅಸಮತೋಲನವಿರುತ್ತದೆ. ಅದು ಒಳ್ಳೆಯದಲ್ಲ. ನಿಮ್ಮ ಜೀವನದಲ್ಲಿ ಚಟುವಟಿಕೆ ಮತ್ತು ವಿಶ್ರಾಂತಿಯ ಆ ಸಮತೋಲನವಿರಬೇಕು.

ಕೆಲವೊಮ್ಮೆ ಸಮಯವು ಚಟುವಟಿಕೆ ಮಾಡುವಂತೆ ಕರೆಯುತ್ತದೆ. ಒಂದು ತುರ್ತು ಪರಿಸ್ಥಿತಿಯಿರುವಾಗ ಅಥವಾ ಅಲ್ಲೊಂದು ಬೇಗನೇ ಮಾಡಬೇಕಾದ ಕೆಲಸವಿದ್ದರೆ, ನೀವದನ್ನು ಮಾಡುತ್ತೀರಿ. ಆದರೆ ನಂತರ, ಮೌನವಾಗಿರಲು ಸಮಯವನ್ನು ತೆಗೆದುಕೊಳ್ಳಿ ಮತ್ತು ವಿಶ್ರಾಮ ಮಾಡಿ. ವಿಶ್ರಾಮ ಮಾಡಲು ಸಮಯ ತೆಗೆದುಕೊಳ್ಳಿ.

ನಿನ್ನನ್ನು ತಿಳಿದುಕೊಳ್ಳಲು ನಿನ್ನಲ್ಲಿ ಈ ತೀವ್ರವಾದ ಬಯಕೆ ಇರುವುದು ಒಳ್ಳೆಯದು. ನೀನು ನಿನಗೇ ಅಭಿನಂದನೆಗಳನ್ನು ಸಲ್ಲಿಸಬೇಕು. ಅದು ಒಳ್ಳೆಯದು, ಆದರೆ ಅವಸರ ಮಾಡಬೇಡ. ನಿನ್ನ ಸಮಯವನ್ನು ತೆಗೆದುಕೋ.

ಪ್ರಶ್ನೆ: ಇಲ್ಲಿರಲು ನೀವು ನಮ್ಮನ್ನು ಆಯ್ಕೆ ಮಾಡಿದಿರೇ ಅಥವಾ ಅದು ಕೇವಲ ಒಂದು ಕಾಕತಾಳೀಯ ಮಾತ್ರವೇ? ಇದರಿಂದ ಪ್ರಯೋಜನವನ್ನು ಪಡೆಯಲು, ನಮ್ಮಂತೆ ಇನ್ನೂ ಹೆಚ್ಚಿನ ಜನರು ಇಲ್ಲಿ ಯಾಕೆ ಇಲ್ಲ?
ಶ್ರೀ ಶ್ರೀ ರವಿಶಂಕರ್:
ಈ ಹಜಾರವು ತುಂಬಿರುವುದು ನಿನಗೆ ಕಾಣಿಸುತ್ತಿದೆಯೇ; ಇಲ್ಲಿ ಇನ್ನೂ ಹೆಚ್ಚಿನ ಜನರನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಿಲ್ಲ. ನಾನು ನಿನ್ನನ್ನು ಆಯ್ಕೆ ಮಾಡಿದೆನೇ ಅಥವಾ ನೀನು ನನ್ನನ್ನು ಆಯ್ಕೆ ಮಾಡಿದೆಯೋ ಎಂಬುದರ ಬಗ್ಗೆ ಚಿಂತಿಸಬೇಡ, ನಾವೆಲ್ಲರೂ ಇಲ್ಲಿದ್ದೇವೆ. ನಾವೆಲ್ಲರೂ ಇದನ್ನು ಆಹ್ಲಾದಿಸುತ್ತಿದ್ದೇವೆ ಮತ್ತು  ಸಂತೋಷವಾಗಿದ್ದೇವೆ. ಈ ಆನಂದವನ್ನು, ಈ ಹೆಚ್ಚಿನ ಶಕ್ತಿಯನ್ನು, ಸಂತೋಷವನ್ನು ಉಳಿಸಿಕೊಳ್ಳಲಿರುವ ಮಾರ್ಗವೆಂದರೆ, ಇದನ್ನು ಎಲ್ಲರಿಗೂ ಹರಡುವುದು. ನಿಮಗೆ ಗೊತ್ತಿದೆಯಾ, ನಾವು ಸಂತೋಷವನ್ನು ನಮ್ಮ ಬಳಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದನ್ನು ನಾವು ಪ್ರಪಂಚದಲ್ಲಿ ಹಂಚಬೇಕು. ಸಂತೋಷವು ಬೆಳೆಯುವುದು ಈ ರೀತಿಯಲ್ಲಿ.

ಪ್ರಶ್ನೆ: ಗುರೂಜಿ, ನಿಮ್ಮಂತೆ ಸೌಮ್ಯ ಮತ್ತು ಶಾಂತವಾಗಬೇಕಾದರೆ ನಾನು ಮಾಡಬೇಕಾದುದು ಏನು?
ಶ್ರೀ ಶ್ರೀ ರವಿಶಂಕರ್:
ನೀನು ಆಗಿರುವೆ. ಸುಮ್ಮನೇ ಕನ್ನಡಿಯಲ್ಲಿ ನೋಡು. ನೀನು ಕೂಡಾ ಸೌಮ್ಯ ಮತ್ತು ಶಾಂತವಾಗಿರುವೆ.

ಪ್ರಶ್ನೆ: ನನ್ನ, ವಿಪರೀತ ಅಹಂಕಾರಿ ಮತ್ತು ಕೋಪಿಷ್ಠನಾದ ಹದಿಹರೆಯದ ಮಗನನ್ನು ಹೇಗೆ ನಿಭಾಯಿಸಬೇಕು? ಆರ್ಟ್ ಎಕ್ಸೆಲ್ ಮತ್ತು ಯೆಸ್ ಕೋರ್ಸುಗಳನ್ನು ಮಾಡಿದ ಬಳಿಕವೂ ಅವನು ದೇವರನ್ನು ನಂಬುವುದಿಲ್ಲ. ಅವನು ಬದಲಾಗುವಂತೆ ಕಾಣಿಸುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಅವನನ್ನು ಬದಲಾಯಿಸಲು ನಿನಗೆ ಅವಸರವಾಗುತ್ತಿದೆಯೆಂಬುದು ನನಗೆ ಗೊತ್ತು. ತಾಳ್ಮೆಯಿರಲಿ. ನಿನಗೆ ಗೊತ್ತಿದೆಯಾ, ಒಂದು ಹಳೆಯ ಗಾದೆ ಹೇಳುವುದೇನೆಂದರೆ, ಒಬ್ಬ ಮಗ ಅಥವಾ ಒಬ್ಬಳು ಮಗಳು ಹದಿಹರೆಯದಲ್ಲಿರುವಾಗ, ನೀವು ಅವರೊಂದಿಗೆ ಒಬ್ಬ ಮಿತ್ರನಂತಿರಬೇಕು, ಅಧಿಕಾರವಿರುವ ಹೆತ್ತವರಂತಲ್ಲ. ಒಬ್ಬ ಮಿತ್ರರಂತೆ ಅವರೊಂದಿಗಿರಿ ಮತ್ತು ಅವರ ಮೇಲೆ ಪ್ರಭಾವ ಬೀರಿ ಹಾಗೂ ತಾಳ್ಮೆಯಿಂದಿರಿ.

ಯೆಸ್ ಕೋರ್ಸ್ ಮಾಡಿದ ಬಳಿಕ ಅವರು ಬದಲಾಗದೇ ಇರುವುದು ಅಸಾಧ್ಯ. ಆರ್ಟ್ ಎಕ್ಸೆಲ್ ಬಹಳ ಸಮಯದ ಹಿಂದೆ ಮಾಡಿರಬೇಕು. ಅದು ಹದಿಹರೆಯದವರಿಗಲ್ಲ. ನಿಮ್ಮ ಮಕ್ಕಳು ತಮ್ಮ ಹದಿಹರೆಯದಲ್ಲಿದ್ದರೆ, ಅವರನ್ನು ಯೆಸ್ ಕೋರ್ಸಿಗೆ ಸೇರಿಸಿ. ಅವರು ಸುದರ್ಶನ ಕ್ರಿಯೆ ಮತ್ತು ಇತರ ಪ್ರಕ್ರಿಯೆಗಳನ್ನು ಮಾಡುತ್ತಾರೆ ಹಾಗೂ ಅದು ಅವರಿಗೆ ಸಹಾಯಕವಾಗುತ್ತದೆ.

ಪ್ರಶ್ನೆ: ಡೇಟಿಂಗ್ ವೆಬ್ ಸೈಟುಗಳ ಬಗ್ಗೆ ನಿಮ್ಮ ಅನಿಸಿಕೆಯೇನು? ಒಬ್ಬರು ವಿಶೇಷವಾದವರನ್ನು ಕಂಡುಕೊಳ್ಳಲು ಅದೊಂದು ಒಳ್ಳೆಯ ಮಾರ್ಗವೇ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ನಾನು ಕೇವಲ ನನ್ನ ಅನುಭವವನ್ನು ಆಧರಿಸಿ ಮಾತನಾಡುತ್ತೇನೆ. ಇದರ ಬಗ್ಗೆ ನನಗೆ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ನಾನೊಬ್ಬ ಹೊರಜಗತ್ತಿನವನು! ನೀನು ನಿನ್ನ ಸುತ್ತಲಿರುವ ಯಾರನ್ನಾದರೂ ಕೇಳು.

ಇದು ಒಂದು ದಿನಸಿ ಅಂಗಡಿಗೆ ಹೋಗಿ ಪೆಟ್ರೋಲ್ ಕೇಳುವಂತೆ. ನೀವೊಂದು ಬಟ್ಟೆ ಅಂಗಡಿಗೆ ಹೋಗಿ ಸೂಟ್ ಕೇಸ್ ಕೇಳುತ್ತೀರಿ, ಇದಕ್ಕೆ ಅರ್ಥವಿಲ್ಲ. ಹಲವು ಡೇಟಿಂಗ್ ವೆಬ್ ಸೈಟುಗಳಿಗೆ ಹೋದ ಜನರಿದ್ದಾರೆ, ಅವರನ್ನು ಕೇಳು. ಯಶಸ್ವಿಯಾದವರ ಬಳಿಗೆ ಹೋಗಬೇಡ, ಯಶಸ್ವಿಯಾಗದೇ ಇರುವವರ ಬಳಿಗೆ ಹೋಗು ಯಾಕೆಂದರೆ, ಅವರು ಅದನ್ನು ಹಲವಾರು ಬಾರಿ ಪ್ರಯತ್ನಿಸಿದ್ದಾರೆ. ನೀನು ಏನು ಮಾಡಬಾರದೆಂದು ಅವರು ನಿನಗೆ ಹೇಳುವರು. ಆದುದರಿಂದ, ಹಲವಾರು ದಿನಗಳಿಂದ ಹುಡುಕುತ್ತಿರುವವರಿಂದ ಸಲಹೆ ಪಡೆ.

ನಿಮಗೆ ಗೊತ್ತಿದೆಯಾ, "ಪ್ರೀತಿ ಜಯಶಾಲಿಯಾಗುವಂತೆ ಮಾಡುವುದು ಹೇಗೆ" ಎಂಬ ವಿಚಾರಗೋಷ್ಠಿಯನ್ನು ಒಬ್ಬಳು ಹೆಂಗಸು ಮಾಡುತ್ತಿರುವುದರ ಬಗ್ಗೆ ನಾನು ಕೇಳಿದ್ದೆ ಮತ್ತು ಆಕೆಯು ಏಳು ಸಲ ವಿವೇಹ ವಿಚ್ಛೇದನ ಪಡೆದಿದ್ದಳು! ಏಳು ಸಾರಿ ತನ್ನ ಸ್ವಂತ ವಿವಾಹವು ಸಫಲವಾಗುವಂತೆ ಮಾಡಲು ಸಾಧ್ಯವಾಗದೇ ಹೋದವಳೊಬ್ಬಳು ವಿಚಾರಗೋಷ್ಠಿ ಮಾಡುತ್ತಿರುವುದು ಹಾಸ್ಯಾಸ್ಪದವೆಂದು ಒಬ್ಬರು ಯೋಚಿಸಿದರು. ನಾನಂದೆ, "ಇಲ್ಲ, ಅವಳು ಅತೀ ಹೆಚ್ಚು ಯೋಗ್ಯತೆಯನ್ನು ಹೊಂದಿದ್ದಾಳೆ, ಯಾಕೆಂದರೆ ಅವಳಿಗೆ ಎಲ್ಲಾ ಅಪಾಯಗಳು ಹಾಗೂ ಅವಳೆಷ್ಟು ಸಲ ಸೋತಿರುವಳು ಎಂಬುದೂ ತಿಳಿದಿದೆ." ಆದುದರಿಂದ ನೀವೇನು ಮಾಡಬಾರದು ಎಂಬುದರ ಬಗ್ಗೆ ಅವಳು ನಿಮಗೆ ಎಚ್ಚರಿಕೆಯನ್ನು ಕೊಡಬಲ್ಲಳು. ಅಲ್ಲವೇ ಮೈಕೀ?

(ಮೈಕೆಲ್ ಫಿಶ್ಮನ್ ಅವರನ್ನು ಉದ್ದೇಶಿಸಿ)

ಮೈಕಿಯು ಅದು ಹಾಸ್ಯಾಸ್ಪದವೆಂದು ಯೋಚಿಸಿದ, ಆದರೆ ಆ ಹೆಂಗಸಿಗೆ ಬೆಂಬಲ ನೀಡಲು ನನ್ನಲ್ಲೊಂದು ಬೇರೆಯ ತರ್ಕ ಇತ್ತು. ತರ್ಕವು ಏನು ಮಾಡಬಲ್ಲದು ಎಂಬುದನ್ನು ನೋಡಿ! ಅದು ಯಾರನ್ನೇ ಆದರೂ ಬೆಂಬಲಿಸಬಲ್ಲದು ಮತ್ತು ನಿಮ್ಮನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಲ್ಲದು. ಇದು ಬಹಳ ಹಿಂದೆ, ೮೦ ರ ಕೊನೆಯಲ್ಲಾದುದು. ನಾನಾಗ ಕ್ಯಾಲಿಫೋರ್ನಿಯಾಕ್ಕೆ ಮೊದಲ ಸಲ ಬಂದಿದ್ದೆ ಮತ್ತು ನಾವೊಂದು ಕೋರ್ಸನ್ನು ಮಾಡಿದೆವು. ಅಲ್ಲಿ ಕೋರ್ಸಿನಲ್ಲಿ ಸುಮಾರು ಹದಿನೈದು ಜನರಿದ್ದರು. ಅವರಲ್ಲಿ ಅರ್ಧ ನನ್ನ ಜೊತೆ ಪ್ರಯಾಣಿಸುತ್ತಿದ್ದರು ಮತ್ತು ಹಲವರು ಹೊಸಬರಾಗಿದ್ದರು. ಆಗ ಕೆಲವು ಜನರು ನನ್ನಲ್ಲಿ ಅಂದರು, "ಗುರೂಜಿ, ಇಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬಹಳಷ್ಟು ವಿಚಾರಗೋಷ್ಠಿಗಳಿವೆ. ಅದರಲ್ಲಿ ಅರ್ಥವಿಲ್ಲ. ಯಾರೂ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮತ್ತು ಸುದರ್ಶನ ಕ್ರಿಯೆಯನ್ನು ಮಾಡುವುದಿಲ್ಲ. ಜನರಿಗೆಲ್ಲಿ ಆಸಕ್ತಿಯಿರುವುದೋ ಅಲ್ಲಿ ನೀವು ನಿಮ್ಮ ಗಮನ ಹರಿಸುವುದು ಒಳ್ಳೆಯದು. ಇಲ್ಲಿ, ಹಲವಾರು ಸಂಗತಿಗಳು ಆಗುತ್ತವೆ, ಪ್ರೀತಿ ಜಯಶಾಲಿಯಾಗುವಂತೆ ಮಾಡುವುದು ಹೇಗೆ ಎಂಬ ಕಾರ್ಯಾಗಾರ ಮತ್ತು ಆ ಎಲ್ಲಾ ರೀತಿಯ ವಿಷಯಗಳು."

ನಾನು ಸುಮ್ಮನೇ ಕೇಳಿಸಿಕೊಂಡೆ. ನಾನು ಅವರು ಹೇಳಿದುದನ್ನು ಕೇಳಿಸಿಕೊಂಡೆ ಆದರೆ ನಾನೇನು ಮಾಡಲು ಬಯಸಿದ್ದೆನೋ ಅದನ್ನು ಮಾಡಿದೆ. ನಾನು ಪುನಃ ಹೋದೆ.

ಮುಂದಿನ ಸಲ, ಕೋರ್ಸಿನಲ್ಲಿ ಸ್ವಲ್ಪ ಹೆಚ್ಚು ಜನರಿದ್ದರು, ಸುಮಾರು ಇಪ್ಪತ್ತೈದು ಮಂದಿ. ಅವರಂದರು, "ನೋಡಿ, ನೀವು ನಿಮ್ಮ ಸಮಯ ಮತ್ತು ಹಣವನ್ನು ಯಾಕೆ ವ್ಯರ್ಥ ಮಾಡುತ್ತಿರುವಿರಿ?"  ಆ ದಿನಗಳಲ್ಲಿ ಪ್ರಯಾಣ ಮಾಡಲು ನಮ್ಮ ಬಳಿ ಸ್ವಲ್ಪವೇ ಸ್ವಲ್ಪ ಸಂಪನ್ಮೂಲಗಳಿದ್ದವು. ಅವರಂದರು, "ಎಲ್ಲಾ ರೀತಿಯ ವಿಚಾರಗೋಷ್ಠಿಗಳಿಂದ ಇದು ಈಗಾಗಲೇ ಬಹಳಷ್ಟು ತುಂಬಿಹೋಗಿದೆ" ಮತ್ತು ನಾನು ಪುನಃ ಮುಂದಿನ ಸಲ ಹೋದೆ. ಇವತ್ತು, ಕ್ಯಾಲಿಫೋರ್ನಿಯಾದಲ್ಲಿ ನಮ್ಮ ಕೇಂದ್ರಗಳು ಹಲವಾರಿವೆ. ಇದರಿಂದಾಗಿ ಹಲವು ಜನರು ಲಾಭವನ್ನು ಪಡೆಯುತ್ತಿದ್ದಾರೆ.

ಪ್ರಶ್ನೆ: ಪ್ರೀತಿಯ ಗುರೂಜಿ, ಧಾರ್ಮಿಕ ಅತಿರೇಕದ ಬಗ್ಗೆ ನೀವು ದಯವಿಟ್ಟು ವ್ಯಾಖ್ಯಾನವನ್ನು ನೀಡುವಿರಾ? ಜನರು ಯಾಕೆ ಈ ರೀತಿಯ ಸಂಕುಚಿತ ಮತ್ತು ಅಧಿಕಾರಯುಕ್ತ ಸ್ಥಾನಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ? ಅವರೊಂದಿಗೆ ನಾವು ಚರ್ಚಿಸುವುದಿದ್ದರೂ, ಹೇಗೆ ಚರ್ಚಿಸಬೇಕು?
ಶ್ರೀ ಶ್ರೀ ರವಿಶಂಕರ್:
ಆಧ್ಯಾತ್ಮಿಕತೆಯ ಕೊರತೆ, ಅನುಭವದ ಕೊರತೆ. ಅದಕ್ಕೇ ನಾವು ವಿಶಾಲ ಚಿಂತನೆ ಮತ್ತು ತಾರ್ಕಿಕ ಚಿಂತನೆಗಳನ್ನು ಪ್ರೋತ್ಸಾಹಿಸಬೇಕಾಗಿರುವುದು. ಭಗವದ್ಗೀತೆಯಲ್ಲಿ, ಎಲ್ಲಾ ಶ್ಲೋಕಗಳನ್ನು ನೀಡಿದ ಬಳಿಕ, ಕೊನೆಯಲ್ಲಿ ಭಗವಾನ್ ಕೃಷ್ಣನು, "ಈಗ ನೀನು, ನಾನು ಹೇಳಿದುದನ್ನೆಲ್ಲಾ ತಳ್ಳಿ ಹಾಕು. ಅದು ನಿನ್ನ ಮನಸ್ಸಿಗೆ ಸರಿ ಹೋಗುವುದಿದ್ದರೆ ಮಾತ್ರ ಅದನ್ನು ತೆಗೆದುಕೋ" ಎಂದು ಹೇಳುತ್ತಾನೆ. ನಾನು ಹೇಳುತ್ತಿದ್ದೇನೆ, ಆದುದರಿಂದ ನೀನು ಅದನ್ನು ಸುಮ್ಮನೇ ತೆಗೆದುಕೊಂಡು ಮಾಡು ಎಂದು ಅವನು ಹೇಳಲೇ ಇಲ್ಲ. ಇಲ್ಲ; ಇದು ನಿನ್ನ ತರ್ಕಕ್ಕೆ ಸರಿಹೊಂದುವುದಿದ್ದರೆ, ಆಗ ನೀನು ಅದನ್ನು ತೆಗೆದುಕೋ.

ಆದುದರಿಂದ, ತರ್ಕಕ್ಕೆ ಮೋಡ ಮುಸುಕಿದಾಗ, ಮತಾಂಧತೆಯು ಉಂಟಾಗುತ್ತದೆ. ತರ್ಕವು ವಜಾಗೊಳಿಸಲ್ಪಟ್ಟಾಗ, ಮತಾಂಧರು ಹುಟ್ಟುತ್ತಾರೆ. ಆದುದರಿಂದ, ಬೌದ್ಧಿಕ ಪ್ರಚೋದನೆಯು ಅವಶ್ಯಕವಾಗಿದೆ ಮತ್ತು ಅದೇ ಸಮಯದಲ್ಲಿ; ಅನುಭವದಿಂದ ಬಂದ, ಜ್ಞಾನದ ತಿಳುವಳಿಕೆ ಕೂಡಾ ಬೇಕು. ಮನಸ್ಸಿನ ವಿಶಾಲತೆ ಅವಶ್ಯವಾಗಿದೆ. ಆದುದರಿಂದಲೇ ಮಕ್ಕಳು ಬಹು-ಸಾಂಸ್ಕೃತಿಕ, ಬಹು-ಧಾರ್ಮಿಕ ಶಿಕ್ಷಣದೊಂದಿಗೆ ಬೆಳೆಸಲ್ಪಡಬೇಕು. ಅದರ ಕೊರತೆಯೊಂದಿಗೆ, ಅವರು ಮತಾಂಧರಾಗುತ್ತಾರೆ.

ಹಲವು ಸಲ, ಯುದ್ಧ ಪೀಡಿತ ದೇಶಗಳಲ್ಲಿರುವ ಜನರ ಬಗ್ಗೆ ನನಗೆ ಮರುಕವುಂಟಾಗುತ್ತದೆ. ತಮ್ಮ ಚಿಕ್ಕ ಧರ್ಮದಾಚೆಗೆ, ತಮ್ಮ ಸ್ವಂತ ಧಾರ್ಮಿಕ ನಂಬಿಕೆಗಳಾಚೆಗೆ ನೋಡುವ ಅವಕಾಶ ಅವರಿಗೆ ಸಿಗಲಿಲ್ಲ. ಅವರಿಗೆ ತಮ್ಮ ಅನಿಸಿಕೆಗಳನ್ನು ವಿಶಾಲವಾಗಿಸಲು ಸಾಧ್ಯವಾಗಲಿಲ್ಲ, ಯಾಕೆಂದರೆ ಅವರಿಗೆ ಒಂದು ಅವಕಾಶ ಸಿಗಲಿಲ್ಲ. ಆದುದರಿಂದ, ಅವರಿಗೊಂದು ಅವಕಾಶ ನೀಡಬೇಕು. ಇವತ್ತಿನ ಮಾಹಿತಿ ತಂತ್ರಜ್ಞಾನಕ್ಕೆ ಧನ್ಯವಾದಗಳು, ಪ್ರಪಂಚದ ಎಲ್ಲೆಡೆಯಲ್ಲಿರುವ ಜನರು ಗೂಗಲ್, ವಿಕಿಪಿಡಿಯಾ ಮುಂತಾದವುಗಳ ಮೂಲಕ ಯಾವುದೇ ಮಾಹಿತಿಯನ್ನು ಪಡೆಯಬಹುದು. ಹತ್ತು ವರ್ಷಗಳ ಮೊದಲು, ನಮ್ಮ ಪೀಳಿಗೆಯಲ್ಲಿ ಕೂಡಾ ಇದು ಲಭ್ಯವಿರಲಿಲ್ಲ. ನಮ್ಮ ಪೀಳಿಗೆಯಲ್ಲಿ ಹೆಚ್ಚಿನವರು ಗ್ರಂಥಾಲಯಕ್ಕೆ ಹೋಗಿ ವಿಷಯಗಳನ್ನು ಹುಡುಕಬೇಕಾಗಿ ಬರುತ್ತಿತ್ತು. ನೀವು ಗ್ರಂಥಾಲಯಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಒಂದು ಗುಂಡಿಯನ್ನು ಒತ್ತುವುದರ ಮೂಲಕ ನಿಮಗೆ ಎಲ್ಲಾ ಮಾಹಿತಿಗಳೂ ಸಿಗುತ್ತವೆ. ಆದುದರಿಂದ, ಈಗಿನ ಪೀಳಿಗೆಯು ಹೆಚ್ಚು ಭಾಗ್ಯಶಾಲಿಯೆಂದು ನನಗನಿಸುತ್ತದೆ.

ಆದರೆ ಪುನಃ, ಹಲವು ಸ್ಥಳಗಳಲ್ಲಿ ಇದು ಹಾಗಿಲ್ಲ. ಇದರ ಬಗ್ಗೆ ಮಾತನಾಡುತ್ತಿರುವಾಗ ಅಫ್ಘಾನಿಸ್ತಾನವು ನನ್ನ ಮನಸ್ಸಿಗೆ ಕೂಡಲೇ ಬರುತ್ತದೆ. ಹಲವಾರು ಯುವಜನರಿಗೆ, ಹಲವಾರು ಮಕ್ಕಳಿಗೆ ಹೊರಜಗತ್ತಿನ ಬಗ್ಗೆ ಯಾವುದೇ ಕಲ್ಪನೆಯಿಲ್ಲ. ಹೀಗೆ, ಪ್ರಪಂಚದ ಒಂದು ಚಿಕ್ಕ ಭಾಗ ಅಜ್ಞಾನದಲ್ಲಿ ಉಳಿದರೂ ಕೂಡಾ, ಪ್ರಪಂಚವು ಒಂದು ಸುರಕ್ಷಿತ ಜಾಗವಾಗಿರಲು ಸಾಧ್ಯವಿಲ್ಲ. ಒಬ್ಬ ಒಸಾಮಾ ಬಿನ್ ಲಾಡೆನಿಗೆ ಇಡಿಯ ಪ್ರಪಂಚಕ್ಕೆ ಏನು ಮಾಡಲು ಸಾಧ್ಯವಾಯಿತೆಂಬುದನ್ನು ನೋಡಿ - ಎಲ್ಲರೂ ವಿಮಾನ ನಿಲ್ದಾಣಗಳಲ್ಲಿ ತಮ್ಮ ಬೂಟ್ಸುಗಳನ್ನು ಕಳಚುವಂತಾಯಿತು!

ಇನ್ನೊಂದು ಬದಿಯಲ್ಲಿ, ಅವನು ಹಲವಾರು ಜನರಿಗೆ ನೌಕರಿಗಳನ್ನು ಕೊಟ್ಟನು. ನನಗೆ ನೆನಪಿದೆ, ನಾವು ಯು.ಎಸ್. ಗೆ ಬರುತ್ತಿದ್ದಾಗ, ನಾವು ಬಹಳ ಸರಳವಾದ ಭದ್ರತಾ ಪರಿಶೀಲನೆಯ ಮೂಲಕ ಹಾದುಹೋಗಬೇಕಾಗುತ್ತಿತ್ತು, ಅಷ್ಟೇ. ಕೆಲವೊಮ್ಮೆ ಚಿಕ್ಕ ವಿಮಾನ ನಿಲ್ದಾಣಗಳಲ್ಲಿ ಅದು ಕೂಡಾ ಇರುತ್ತಿರಲಿಲ್ಲ. ನೀವು ಸೀದಾ ಹೋಗಿ ವಿಮಾನದೊಳಕ್ಕೆ ಹತ್ತಬಹುದಿತ್ತು. ಈಗ ಎಷ್ಟೊಂದು ಭದ್ರತಾ ಪರಿಶೀಲನೆಗಳಿವೆ! ಕೇವಲ ಭದ್ರತೆಗಾಗಿ ಬಿಲಿಯಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ, ಅಲ್ಲವೇ? ಇದೆಲ್ಲಾ ಪ್ರಪಂಚದಲ್ಲಿರುವ ಈ ಮತಾಂಧ ಉಗ್ರವಾದಿಗಳ ಕೊಡುಗೆ, ಮತ್ತು ಎಷ್ಟೊಂದು ಯುವಜನರನ್ನು ನಾವು ಕಳಕೊಂಡಿದ್ದೇವೆ! ಎಷ್ಟೊಂದು ಯುವ ಜೀವಗಳನ್ನು ನಾವು ಕಳಕೊಂಡಿದ್ದೇವೆ! ಇದು ನಿಜಕ್ಕೂ ನೋವುಂಟುಮಾಡುತ್ತದೆ. ಇದೆಲ್ಲಾ ವಿಶಾಲ ದೃಷ್ಟಿಕೋನದ ಶಿಕ್ಷಣದ; ಬಹು-ಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕ ಶಿಕ್ಷಣದ ಕೊರತೆಯಿಂದ ಆಗುತ್ತಿರುವುದು. ಒಬ್ಬ ಮತಾಂಧನು, ಕೇವಲ ತಾನು ಮಾತ್ರ ಸ್ವರ್ಗಕ್ಕೆ ಹೋಗುವೆನೆಂದೂ ಮತ್ತು ಇತರ ಎಲ್ಲರೂ ನರಕಕ್ಕೆ ಹೋಗುವರೆಂದೂ ಯೋಚಿಸುತ್ತಾನೆ ಹಾಗೂ ಅವನು ಎಲ್ಲರಿಗೂ ನರಕವನ್ನು ಸೃಷ್ಟಿಸುತ್ತಾನೆ. ನಾವೊಂದು ಬದಲಾವಣೆಯನ್ನು ತರಬೇಕಾಗಿದೆ. ಆಧ್ಯಾತ್ಮಿಕ ಅನುಭವಗಳಿಲ್ಲದಿದ್ದರೆ, ಯಾವುದೇ ಧರ್ಮದ ಜನರಾದರೂ ಮತಾಂಧರಾಗಬಹುದು.

ಪ್ರಶ್ನೆ: ತಾನು ಮಾಡುತ್ತಿರುವುದು ತನಗೆ ಯಾವುದೇ ಒಳ್ಳೆಯ ಫಲವನ್ನು ತರುವುದಿಲ್ಲ ಮತ್ತು ಅವುಗಳು ಮನೆಯಲ್ಲಿ ಆಗಾಗ ಜಗಳವನ್ನು ತರುತ್ತವೆಯೆಂದು ಗೊತ್ತಿದ್ದರೂ, ನನ್ನ ಸಂಗಾತಿಯು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿ, ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವಾಗ ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಕೆಲವೊಮ್ಮೆ ನಾವು ಇತರರಿಗೆ ಅವರೊಂದು ತಪ್ಪು ಮಾಡುತ್ತಿದ್ದಾರೆಂದು ಹೇಳುವುದು ಯಾಕೆಂದರೆ, ಅವರ ತಪ್ಪು ನಮಗೆ ನೋವನ್ನುಂಟುಮಾಡುತ್ತದೆ. ನಾವು ಹೀಗೆ ಮಾಡುವಾಗ ಅವರು ಸರಿಹೋಗುವುದಿಲ್ಲ ಮತ್ತು ಅವರು ನಿಮ್ಮ ಸಲಹೆಗಳಿಗೆ ಕಿವಿಗೊಡುವುದಿಲ್ಲ. ಆದರೆ, ಅವರು ಮಾಡುತ್ತಿರುವುದು ಇತರ ಯಾರಿಗಿಂತಲೂ ಅವರಿಗೇ ಹೆಚ್ಚು ನೋವುಂಟುಮಾಡುತ್ತದೆ ಎಂಬುದನ್ನು ನೀವು ಅವರಿಗೆ ಹೇಳಿದರೆ, ಆಗ ಕೇಳಿಸಿಕೊಳ್ಳಲು ಶುರು ಮಾಡಬಹುದು. ಸಹಾನುಭೂತಿಯಿಂದ, ಅವರು ತಮ್ಮ ನ್ಯೂನತೆಗಳಿಂದ ಹೊರಬರಬೇಕೆಂದು ನೀವು ಬಯಸಿದರೆ, ಅದಕ್ಕೆ ಹೆಚ್ಚು ಅವಕಾಶಗಳಿವೆ. ಆದರೆ ಪ್ರಯತ್ನಿಸುತ್ತಾ ಇರಿ, ನೀವು ಹೇಳುತ್ತಾ ಇರಿ ಮತ್ತು ತಾಳ್ಮೆಯಿಂದಿರಿ. ಜನರು ರಾತ್ರಿಬೆಳಗಾಗುವುದರೊಳಗೆ ಬದಲಾಗುವುದಿಲ್ಲ. ಅವರು ಬದಲಾಗಲು ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ.

ಪ್ರಶ್ನೆ: ಒಳ್ಳೆಯ ಜನರಿಗೆ ಕೆಟ್ಟದಾಗುವುದು ಯಾಕೆ?
ಶ್ರೀ ಶ್ರೀ ರವಿಶಂಕರ್:
ಕೆಟ್ಟದಾಗುವುದು ಎರಡು ಕಾರಣಗಳಿಂದ. ಒಂದು, ಹಿಂದಿನ ಕರ್ಮಗಳು ಮತ್ತು ಎರಡನೆಯದು ಈಗಿನ ಮೂರ್ಖತನ. ನೀವು ಒಳ್ಳೆಯವರಾಗಿದ್ದು ಮೂರ್ಖರಾಗಿದ್ದರೆ, ಆಗ ನಿಮಗೆ ಕೆಟ್ಟದಾಗಬಹುದು. "ನಾನು ಅಷ್ಟು ಒಳ್ಳೆಯವನು, ಆದರೆ ನನ್ನ ಬೆರಳು ಯಾಕೆ ಸುಟ್ಟಿತು?" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ನಿಮ್ಮ ಬೆರಳನ್ನು ಬೆಂಕಿಗೊಡ್ಡಿದರೆ, ಅದು ಸುಟ್ಟು ಹೋಗುತ್ತದೆ. ಅಥವಾ, ಇವತ್ತು ನೀವು ಯಾವುದೇ ತಪ್ಪನ್ನು ಮಾಡಲಿಲ್ಲ ಆದರೆ ಕೆಲವು ದಿನಗಳ ಹಿಂದೆ ವಾಹನವನ್ನು ವೇಗವಾಗಿ ಓಡಿಸಿದ್ದಕ್ಕಾಗಿ ನಿಮಗೆ ಟಿಕೆಟ್ ಸಿಕ್ಕಿತು, ಮತ್ತು ಇವತ್ತು ನೀವು ಅದಕ್ಕಾಗಿ ಹಣ ಪಾವತಿಸಬೇಕು. ನಿನ್ನೆ ನೀವು ಬಹಳ ವೇಗವಾಗಿ, ವೇಗದ ಮಿತಿಗಿಂತಲೂ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದಿರಿ, ಮತ್ತು ಇವತ್ತು ನೀವು ಅದಕ್ಕೆ ದಂಡ ಕಟ್ಟಬೇಕು. ನೀವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ, ಒಂದನೆಯದು ಹಿಂದಿನ ಕರ್ಮಗಳು. ಒಳ್ಳೆಯ ಜನರು ಕೂಡಾ ಹಿಂದೆ ಏನಾದರೂ ಕೆಟ್ಟ ಕೆಲಸಗಳನ್ನು ಮಾಡಿರಬಹುದು - ಇದು ಮೊದಲನೆಯ ಕಾರಣ.

ಎರಡನೆಯ ಕಾರಣ - ಒಳ್ಳೆಯ ಜನರಲ್ಲಿ, ಕೆಟ್ಟ ವಿಷಯಗಳಿಗೆ ಹೋಗಿ ಸೇರದಂತೆ ಅಥವಾ ಕೆಟ್ಟ ವಿಷಯಗಳು ಅವರ ಮೇಲೆ ಪ್ರಭಾವ ಬೀರದಂತೆ ಮಾಡಲು ಇರಬೇಕಾದ ಕುಶಲತೆ ಮತ್ತು ಬುದ್ಧಿವಂತಿಕೆಯ ಕೊರತೆಯಿರಬಹುದು. ಒಂದು ಕರ್ಮವೆಂದು ಕರೆಯಲ್ಪಡುತ್ತದೆ ಮತ್ತು ಇನ್ನೊಂದು ಕುಶಲತೆಯ ಕೊರತೆ ಎಂದು ಕರೆಯಲ್ಪಡುತ್ತದೆ.

ಆದುದರಿಂದ, ನಿಮಗೆ ಎರಡೂ ಬೇಕು. ಜೀವನದಲ್ಲಿ, ನಿಮಗೆ ಮೊದಲನೆಯದಾಗಿ ಮುಕ್ತಿ ಬೇಕು; ಎರಡನೆಯದು ಪ್ರೀತಿ. ಮುಕ್ತಿಯಿಲ್ಲದಿದ್ದರೆ, ಪ್ರೀತಿ ಕೂಡಾ ಇರುವುದಿಲ್ಲ. ನಮಗೆ ಆಂತರಿಕ ಮುಕ್ತಿ ಬೇಕು - ನಮ್ಮದೇ ಭಾವನೆಗಳಿಂದ ಮತ್ತು ಅನ್ನಿಸಿಕೆಗಳಿಂದ ಮುಕ್ತಿ, ಇತರರಿಂದಲ್ಲ. ಮುಕ್ತಿ, ಪ್ರೀತಿ, ಕುಶಲತೆ ಮತ್ತು ಶಕ್ತಿ, ತಿಳಿಯಿತಾ?

ಆದುದರಿಂದ, ಒಳ್ಳೆಯ ಜನರಿಗೆ ಕೆಟ್ಟದಾಗುವಾಗ, "ಓ, ಪಾಪ! ಇದು ನಿನಗೆ ಆಗಬಾರದಿತ್ತು" ಎಂದು ಹೇಳಬೇಡಿ. "ನೀನು ಅದಕ್ಕೆ ಅರ್ಹನಾಗಿದ್ದೀ; ಅದಕ್ಕೇ ಅದು ನಿನಗೆ ಆಗಿರುವುದು!" ಅಥವಾ "ನಿನ್ನಲ್ಲಿ ಕುಶಲತೆಯಿಲ್ಲ. ನೀನು ಅಷ್ಟೊಂದು ಮೂರ್ಖನಾಗಿದ್ದೀ" ಎಂದು ಕೂಡಾ ಹೇಳಬೇಡಿ. ಇಲ್ಲ! ಅವರಿಗೆ ಅದು ಯಾವುದನ್ನೂ ಹೇಳಬೇಡಿ. ಒಂದು ಮುಗುಳ್ನಗೆಯೊಂದಿಗೆ ಕೇವಲ ಅವರೊಂದಿಗಿರಿ ಮತ್ತು ಅವರಿಗೆ ಬೆಂಬಲ ನೀಡಿ. ಅವರ ಪರಿಸ್ಥಿಯ ಬಗ್ಗೆ ವಿಶ್ಲೇಷಣಾತ್ಮಕ ವ್ಯಾಖ್ಯಾನ ನೀಡದೆಯೇ, ಅವರು ಅವರ ಈಗಿನ ಪರಿಸ್ಥಿತಿಯಿಂದ ಹೊರ ಬರಲು ನೀವು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂದು ನೋಡಿ.

ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಬೂನ್ ಆಶ್ರಮಕ್ಕೆ ಹಲವಾರು ಸಲ ಸೇವೆ ಮಾಡಲು ಬಂದಿದ್ದೇನೆ. ನಾನು ಸೇವೆಗಾಗಿ ಬರುತ್ತಿದ್ದಾಗ, ನನಗೆ ಬಹಳಷ್ಟು ಆಂತರಿಕ ಶಾಂತಿ ಇತ್ತು. ಅದು ರಜೆಯ ಮೇಲೆ ಹೋದಂತಿತ್ತು. ಶೌಚಾಲಯಗಳನ್ನು ತೊಳೆಯುವುದು ಮತ್ತು ಅಡುಗೆಮನೆಯಲ್ಲಿ ಸಹಾಯ ಮಾಡುವುದು ಇವುಗಳಲ್ಲೆಲ್ಲಾ ನಾನು ಆನಂದವನ್ನು ಅನುಭವಿಸಿದೆ. ಆದರೆ ಈಗ, ಅದೊಂದು ಹೊರೆಯಾಗಿದೆ. ನನ್ನ ಆಂತರಿಕ ಶಾಂತಿ ಹಾಗೂ ಸೇವೆ ಮಾಡಲಿರುವ ಕಾತುರತೆ ಎಲ್ಲವೂ, ಆರೋಗ್ಯದ ಸಮಸ್ಯೆಯಿರುವುದಾಗಿ ಪತ್ತೆಹಚ್ಚಲಾದ ನನ್ನ ಸಂಗಾತಿಯಿಂದಾಗಿ ಹೊರಟುಹೋಗಿದೆ. ಆ ಆಂತರಿಕ ಶಾಂತಿ ಮತ್ತು ಸೇವೆ ಮಾಡಲಿರುವ ಆ ಕಾತುರತೆಯು ನನಗೆ ತಿರುಗಿ ಬೇಕು. ಸಂತೋಷದ ಸಮಯಗಳಲ್ಲಿ ನಾವು ಸೇವೆ ಮಾಡಬೇಕು ಮತ್ತು ಕೆಟ್ಟ ಅಥವಾ ದುಃಖದ ಸಮಯಗಳಲ್ಲಿ ನಾವು ನಿಮಗೆ ಶರಣಾಗತರಾಗಬೇಕು ಎಂಬುದು ನನಗೆ ತಿಳಿದಿದೆ. ಆದರೆ ಈ ಜ್ಞಾನದ ಇರುವಿಕೆಯೂ ಕೂಡಾ ಪ್ರಯೋಜನವಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.
ಶ್ರೀ ಶ್ರೀ ರವಿಶಂಕರ್:
ನೋಡು, ದುಖದ ಸಮಯಗಳಲ್ಲಿ ನೀನು ಬಹಳವಾಗಿ ಕೆಲಸ ಮಾಡಬೇಕಾಗಿಲ್ಲ. ಕೇವಲ ವಿಶ್ರಾಮ ಮಾಡು. ಧ್ಯಾನ ಮಾಡು. ನೀನು ಇಲ್ಲಿ ಕುಳಿತುಕೊಂಡು ಧ್ಯಾನ ಮಾಡು. ಆಂತರಿಕ ಶಾಂತಿ ಮತ್ತು ಸಮಾಧಾನ ಬರುತ್ತದೆ. ಎದುರಿಸಲಿರುವ ಮತ್ತು ಹೋಗಲು ಬಿಡಲಿರುವ ಶಕ್ತಿ ಕೂಡಾ ನಿನಗೆ ಬರುತ್ತದೆ, ಸರಿಯಾ? ನಾನು ನಿನ್ನೊಂದಿಗಿದ್ದೇನೆ ಮತ್ತು ಇಲ್ಲಿರುವ ಇತರರೆಲ್ಲರೂ ನಿನ್ನೊಂದಿಗಿದ್ದಾರೆ.