ಸೋಮವಾರ, ಜುಲೈ 9, 2012

ತೆರೆದ ಮನಸ್ಸುಳ್ಳವರಾಗಿ

09
2012
Jul
ಬಾಡ್ ಆಂತೋಗಾಸ್ತ್, ಜರ್ಮನಿ

ಪ್ರಶ್ನೆ: ಪ್ರೀತಿಯ ಗುರೂಜಿ, ರುದ್ರ ಪೂಜೆಯ ನಿಜವಾದ ಅರ್ಥ ಮತ್ತು ಪ್ರಾಮುಖ್ಯತೆಯೇನು? ಮತ್ತು ಜನರಿಗೆ ಅಥವಾ ಸ್ಥಳಕ್ಕೆ ಏನಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ರುದ್ರಾಭಿಷೇಕವೆಂಬುದು ಆಕಾಶದಿಂದ ಕೆಳಗಿಳಿಸಲ್ಪಟ್ಟ ಒಂದು ಪ್ರಾಚೀನ ಮಂತ್ರೋಚ್ಛಾರಣೆ. ಪ್ರಾಚೀನ ಋಷಿಮುನಿಗಳು ಧ್ಯಾನದಲ್ಲಿ ಕುಳಿತಾಗ, ಅವರಿಗೆ ಕೇಳಿಸಿತು ಮತ್ತು ಅವರು ಯಾವುದನ್ನು ಕೇಳಿಸಿಕೊಂಡರೋ ಅದನ್ನು ಅವರು ಇತರ ಜನರಿಗೆ ವರ್ಗಾಯಿಸಲು ಪ್ರಾರಂಭಿಸಿದರು. ರುದ್ರಾಭಿಷೇಕದ ಪ್ರಭಾವವೇನೆಂದರೆ, ಅದು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಿ, ನಕಾರಾತ್ಮಕ ಕಂಪನಗಳನ್ನು ತೆಗೆದುಹಾಕುತ್ತದೆ. ರುದ್ರಾಭಿಷೇಕದ ಬಗ್ಗೆ ಬಹಳಷ್ಟು ಹೇಳಲಾಗಿದೆ. ರುದ್ರಾಭಿಷೇಕವಾಗುವಾಗ ಪ್ರಕೃತಿಯು ಸಮೃದ್ಧವಾಗುತ್ತದೆ, ಪ್ರಕೃತಿಯು ಆನಂದಭರಿತವಾಗುತ್ತದೆ, ಸಂತೋಷಗೊಳ್ಳುತ್ತದೆ. ಪ್ರಧಾನ ಸಂಗತಿಯೆಂದರೆ ಕಂಪನ, ಅಷ್ಟೆ. ನೀನು ನನ್ನಲ್ಲಿ, "ಎಲ್ಲಾ ಮಂತ್ರಗಳ ಅರ್ಥ ನಿಮಗೆ ತಿಳಿದಿದೆಯೇ?" ಎಂದು ಕೇಳಿದರೆ, "ನನಗೂ ಗೊತ್ತಿಲ್ಲ" ಎಂದು ನಾನು ಹೇಳುತ್ತೇನೆ. ಪ್ರಧಾನವಾದುದೆಂದರೆ ಮಂತ್ರಗಳ ಕಂಪನಗಳು, ಮತ್ತು ನಂತರ ಅದರ ಅರ್ಥ.
ಅದರಲ್ಲಿ ಎರಡು ಭಾಗಗಳಿವೆ, ಒಂದನೆಯ ಭಾಗವು, "ನಮೋ, ನಮೋ, ನಮೋ, ನಮೋ!" ಎಂದು ಹೇಳುತ್ತದೆ. ಮನ ಅಂದರೆ ಮನಸ್ಸು. ಇಂಗ್ಲೀಷಿನ ’ಮೈಂಡ್’ ಎಂಬ ಪದವು, ’ಮನ’ ಎಂಬ ಸಂಸ್ಕೃತ ಪದದಿಂದ ಬಂದಿದೆ. ನಮ ಎಂಬುದು ಮನಸ್ಸು ಹಿಂದು ಮುಂದಾದುದು. ಮನಸ್ಸು ತನ್ನ ಮೂಲಕ್ಕೆ ಹೋಗುವುದನ್ನು ’ನಮ’ ಎಂದು ಎಂದು ಹೇಳಲಾಗುತ್ತದೆ. ಮನಸ್ಸು ಪ್ರಪಂಚವನ್ನು ಅನುಭವಿಸಲು ಹೊರಮುಖವಾಗಿ ಹೋಗುವಾಗ, ಅದು ಮನ. ಆದುದರಿಂದ ನಮ ಎಂದರೆ, ಮನಸ್ಸು ತನ್ನ ಮೂಲಕ್ಕೆ ತಿರುಗಿ ಹೋಗುವುದು. ಅದು ತನ್ನ ಮೂಲಕ್ಕೆ ಹೋಗುವಾಗ, ಅದಕ್ಕೇನು ತಿಳಿಯುತ್ತದೆ? ಎಲ್ಲವೂ ಒಂದು ಪ್ರಜ್ಞೆಯಿಂದ ಮಾಡಲ್ಪಟ್ಟಿದೆ.
ಈಗ, ಇವತ್ತಿನ ವಿಜ್ಞಾನಿಗಳು ಏನನ್ನುತ್ತಾರೆ? ’ದೇವ ಕಣ’ (God Particle) - ಇದರಿಂದ ಎಲ್ಲವೂ ಮಾಡಲ್ಪಟ್ಟಿದೆ. ಸಾವಿರಾರು ವರ್ಷಗಳ ಹಿಂದೆ ಋಷಿಗಳು ಇದನ್ನೇ ಹೇಳಿದರು, ಎಲ್ಲವೂ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ, ಮತ್ತು ಅದನ್ನು ಅವರು ಬ್ರಹ್ಮ ಎಂದು ಕರೆದರು - ಯಾವುದು ಪುರುಷನೂ ಅಲ್ಲವೋ ಸ್ತ್ರೀಯೋ ಅಲ್ಲವೋ ಅದು. ಅದು ಒಂದು ತತ್ವ, ಬೇರೇನೂ ಅಲ್ಲ. ಎಲ್ಲವೂ ಯಾವ ಒಂದು ಮಹತ್ತಾದ ತತ್ವದಿಂದ ಮಾಡಲ್ಪಟ್ಟಿದೆಯೋ, ಅದನ್ನು ಅವರು ಬ್ರಹ್ಮ ಎಂದು ಕರೆದರು, ಮತ್ತು ಆ ಬ್ರಹ್ಮವು ವೈಯಕ್ತಿಕವಾದಾಗ, ಅದು ಶಿವ ತತ್ವ - ಮುಗ್ಧ ದೈವಿಕತೆ ಎಂದು ಕರೆಯಲ್ಪಡುತ್ತದೆ; ಅದು ಎಲ್ಲದರಲ್ಲೂ ಇದೆ. ಅದಕ್ಕೇ ನಾವು, "ನಮೋ, ನಮೋ" ಎಂದು ಹೇಳುವುದು! ಮರಗಳಲ್ಲಿ, ಹುಲ್ಲುಹಸಿರಿನಲ್ಲಿ, ಪಕ್ಷಿಗಳಲ್ಲಿ, ಕಳ್ಳರು, ದರೋಡೆಕೋರರಲ್ಲಿ ಕೂಡಾ, ಎಲ್ಲೆಡೆಗಳಲ್ಲಿಯೂ ಒಂದೇ ತತ್ವವಿರುವುದು.
ಎರಡನೆಯ ಭಾಗವು, "ಚಮೆ, ಚಮೆ, ಚಮೆ, ಚಮೆ" ಎಂದು ಹೇಳುತ್ತದೆ. ನೀವಿದನ್ನು ಕೇಳಿದ್ದೀರಿ, ಅಲ್ಲವೇ?! ಇದರರ್ಥ, ಎಲ್ಲವೂ ನನ್ನಲ್ಲಿದೆ ಎಂದು. ಇಂಗ್ಲೀಷಿನ "ಮಿ" ಎಂಬ ಪದವು ಸಂಸ್ಕೃತದ ’ಮ’ ಎಂಬ ಪದದಿಂದ ಬಂದಿದೆ. ಅದರರ್ಥ ’ನಾನು’ ಎಂದು. ’ಮಮ’ ಎಂದರೆ ’ನನಗೆ’, ’ನನ್ನಲ್ಲಿ’. ಆದುದರಿಂದ ಎಲ್ಲವೂ ’ನಾನು’ ಎಂಬುದರ ಪರಿಭಾಷೆಯಲ್ಲಿರುವುದು. ಎರಡನೆಯ ಭಾಗವು, ಎಲ್ಲವೂ ನನಗಾಗಿ ಮತ್ತು ಎಲ್ಲವೂ ನನ್ನದೇ ವಿಚಾರದಲ್ಲಿರುವುದು. ಸಂಖ್ಯೆಗಳಿಗೆ ಕೂಡಾ ಅವರು, "ಏಕಾಚಮೆ" ಎಂದು ಹೇಳುತ್ತಾರೆ. ಅದರರ್ಥ, ಒಂದು, ಎರಡು, ಮೂರು, ನಾಲ್ಕು, ಅವುಗಳೆಲ್ಲವೂ ನನ್ನ ರೂಪ; ನಾನೇ. ಹಾಗೆಯೇ, "ಸುಗಂಚಮೆ", ನನಗಾಗಿ ಸಂತೋಷ! ’ಅಭಯಂಚಮೆ’, ನಿರ್ಭಯತೆ, ಸಂತೋಷ, ಆರೋಗ್ಯ, ವಿಶ್ವದಲ್ಲಿರುವ ಎಲ್ಲಾ ಒಳ್ಳೆಯ ವಿಷಯಗಳು, ಇವುಗಳೆಲ್ಲಾ ನನ್ನಲ್ಲಿಗೆ ಬರಲಿ ಮತ್ತು ಇವುಗಳೆಲ್ಲಾ ನನ್ನ ಭಾಗವಾಗಿವೆ. ಅಷ್ಟೆ.
ಇದನ್ನು ಜಪಿಸುತ್ತಿರುವಾಗ, ಸಾಧಾರಣವಾಗಿ ಹಾಲು ಮತ್ತು ನೀರು ಸ್ಫಟಿಕದ ಮೂಲಕ ಹನಿ ಹನಿಯಾಗಿ ಹರಿಯುತ್ತದೆ. ಇದು ಪ್ರಾಚೀನ ವಿಧಾನ. ಇದು ನೀರಿನಿಂದ ಅಥವಾ ಅಗ್ನಿಯಲ್ಲಿ ಕೂಡಾ ಮಾಡಲ್ಪಡುತ್ತದೆ. ಅವರೇನು ಮಾಡುತ್ತಾರೆಂದರೆ, ಒಂದು ಅಗ್ನಿಯನ್ನು ಇಡುತ್ತಾರೆ ಮತ್ತು ಬೇರೆ ಬೇರೆ ಮಂತ್ರಕ್ಕೆ ಬೇರೆ ಬೇರೆ ಗಿಡಮೂಲಿಕೆಗಳನ್ನು ಹಾಕುತ್ತಾರೆ. ಅಥವಾ ನೀವು, ನೀರಿನ ಒಂದು ಧಾರೆಯು ಕಲ್ಲಿನ ಮೇಲೆ ಬೀಳುತ್ತಾ ಇರಲು ಬಿಡುತ್ತೀರಿ ಮತ್ತು ಮಂತ್ರೋಚ್ಛಾರಣೆಯನ್ನು ಕೇಳುತ್ತೀರಿ - ಇದು ಪ್ರಾಚೀನ ವಿಧಾನ. ಸೋಮವಾರಗಳಲ್ಲಿ ಮಾಡಿದರೆ, ಇದು ಇನ್ನೂ ಹೆಚ್ಚು ವಿಶೇಷ. ಸೋಮವಾರವು ಚಂದ್ರನ ದಿನ. ಚಂದ್ರ ಮತ್ತು ಮನಸ್ಸು ಪರಸ್ಪರ ಸಂಬಂಧ ಹೊಂದಿವೆ. ಮಂತ್ರ, ಮನಸ್ಸು, ಚಂದ್ರ - ಇವುಗಳೆಲ್ಲವೂ ಎಲ್ಲೋ ಜೋಡಲ್ಪಟ್ಟಿವೆ. ಆದುದರಿಂದ, ಭಾರತದಲ್ಲಿ ಇದೊಂದು ಪದ್ಧತಿ. ಆಶ್ರಮಗಳಲ್ಲಿ ಈ ಮಂತ್ರೋಚ್ಛಾರಣೆ ಸಾಗುತ್ತಾ ಇರುತ್ತದೆ. ಆದುದರಿಂದ ನಮ್ಮ ಆಶ್ರಮದಲ್ಲಿ ಕೂಡಾ, ಪ್ರತಿ ಸೋಮವಾರ, ನಾವಿದನ್ನು ಮಾಡುತ್ತೇವೆ.
ಎಲ್ಲಾ ಪಂಚಭೂತಗಳೂ ಪೂಜೆಯಲ್ಲಿ ಉಪಯೋಗಿಸಲ್ಪಡುತ್ತವೆ. ಪೂಜೆಯೆಂದರೆ ಎಲ್ಲಾ ಅಂಶಗಳನ್ನು ಗೌರವಿಸುವುದು, ಸಂಪೂರ್ಣತೆಯಿಂದ ಹುಟ್ಟಿದುದು. ಆದುದರಿಂದ, ಅಗ್ನಿ, ನೀರು, ಊದುಬತ್ತಿ ಕಡ್ಡಿಗಳು, ಹಣ್ಣುಗಳು, ಹೂಗಳು, ಅಕ್ಕಿ, ಪ್ರಕೃತಿಯು ನಮಗೆ ಏನನ್ನೆಲ್ಲಾ ನೀಡಿದೆಯೋ, ಅವುಗಳು ಉಪಯೋಗಿಸಲ್ಪಡುತ್ತವೆ ಮತ್ತು ಮಂತ್ರೋಚ್ಛಾರಣೆಯು ಸಾಗುತ್ತದೆ. ಅದು ಬಹಳ ಆಳವಾದುದು ಮತ್ತು ಅದಕ್ಕೆ ಬಹಳ ಅರ್ಥವಿದೆ. ನೀವು ಹೋಗಿ, ಇದರ ಬಗ್ಗೆ ಸ್ವಲ್ಪ ಸಂಶೋಧನೆಯನ್ನು ಮಾಡಬಹುದು, ಹೆಚ್ಚು ಹೆಚ್ಚು ವಿಷಯಗಳು ಹೊರಬರುತ್ತವೆ.
ಪ್ರಧಾನವಾಗಿ, ಇದು ಹೆಚ್ಚು ಧನಾತ್ಮಕ ಅಯೋನುಗಳನ್ನು ಸೃಷ್ಟಿಸುತ್ತದೆ, ಜನರು ಧ್ಯಾನ ಮಾಡುತ್ತಿದ್ದರೆ ಇನ್ನೂ ಹೆಚ್ಚು. ಅದನ್ನು ಕೇವಲ ಒಂದು ಶಾಸ್ತ್ರದಂತೆ ಮಾಡುವುದರಿಂದ ಅಷ್ಟೊಂದು ಪರಿಣಾಮವಾಗುವುದಿಲ್ಲ, ಯಾಕೆಂದರೆ ಜನರು ಒಳಗಿನಿಂದ ಎಚ್ಚರವಾಗಿರುವಾಗ, ವೇದಮಂತ್ರಗಳು ಪರಿಣಾಮಕಾರಿಯಾಗಿರುತ್ತವೆ; ಅವರಿಗೆ, ಈ ಮಂತ್ರಗಳು ಹೆಚ್ಚು ಅರ್ಥಪೂರ್ಣವಾಗಿರುತ್ತವೆ. ಆದುದರಿಂದ ಅವುಗಳು, ಧ್ಯಾನದಲ್ಲಿ ಆಳಕ್ಕೆ ಹೋಗಲು ನಿಮಗೆ ಸಹಾಯ ಮಾಡುತ್ತವೆ.
ಪ್ರಶ್ನೆ: ನಿಮ್ಮ ಜ್ಞಾನದ ಸತ್ಯತೆಯ ಬಗ್ಗೆ ನಾನು ಅರ್ಥಮಾಡಿಕೊಳ್ಳಬಲ್ಲೆ.  ಪೂಜೆ, ಭಜನೆಗಳು ಮತ್ತು ನಿಮ್ಮ ಸುತ್ತಲೂ ನಡೆಯುವ ಎಲ್ಲಾ ಭಾರತೀಯ ಪದ್ಧತಿಗಳನ್ನೂ ಕೂಡಾ ನಾನು ಅಹ್ಲಾದಿಸಬಲ್ಲೆ. ಆದರೆ, ನಾನು ನನ್ನ ಮಿತ್ರರೊಂದಿಗಿರುವಾಗ, ಇದೆಲ್ಲದರ ಬಗ್ಗೆ ಮಾತನಾಡುವುದು ಬಹಳ ಕಷ್ಟ; ವಿಶೇಷವಾಗಿ, ಒಬ್ಬರು ಗುರು ಹೇಳುವುದನ್ನು ಕೇಳುವುದು. ನಮ್ಮ ದೇಶದಲ್ಲಿ, ನಾವು ನಮ್ಮ ಮನಸ್ಸನ್ನು ಅನುಸರಿಸಲು ಕಲಿಯುತ್ತೇವೆ ಮತ್ತು ಯಾವುದೇ ಗುರುಗಳನ್ನಲ್ಲ. ಆರ್ಟ್ ಆಫ್ ಲಿವಿಂಗ್ ಹೆಚ್ಚು ಸ್ವೀಕಾರಾರ್ಹವಾಗುವಂತೆ ಮಾಡಲು ನೀವು ಏನನ್ನು ಸಲಹೆ ಮಾಡುವಿರಿ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ೩೦ ವರ್ಷಗಳ ಹಿಂದೆ, ನಾವು ಆರ್ಟ್ ಆಫ್ ಲಿವಿಂಗನ್ನು ಪ್ರಾರಂಭಿಸಿದಾಗ ಕೂಡಾ ಇದು ಬಹಳ ಕಷ್ಟವಾಗಿತ್ತು. ಯೋಗ ಕಲಿಸುವುದೆಂದರೆ, ಅಲ್ಲೆಲ್ಲೋ ಇರುವ ಯಾರೋ ಒಬ್ಬರು, ಹುಚ್ಚರು ಯಾರೋ, ಯೋಗ ಮಾಡುತ್ತಿದ್ದರು. ಆದರೆ ಇವತ್ತು ಜನರು ಯೋಗವನ್ನು ಇಷ್ಟಪಡುತ್ತಾರೆ.
ನಾನು ನಿಮಗೆ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ತಿಳಿಯದೇ ಇರುವವರ ಜೊತೆಯಲ್ಲಿ ನೀವು ಪೂಜೆ, ಮಂತ್ರ ಮತ್ತು ಇವುಗಳೆಲ್ಲದರ ಬಗ್ಗೆ ಮಾತನಾಡಬೇಕಾಗಿಲ್ಲ. ಕೇವಲ ಧ್ಯಾನ, ಸುದರ್ಶನ ಕ್ರಿಯೆ, ಪಾರ್ಟ್-೧ ಶಿಬಿರ, ಇವುಗಳ ಬಗ್ಗೆ ಮಾತನಾಡಿ, ಅದು ಸಾಕು. ಇವತ್ತು ಜನರು, ಅಂದಿಗಿಂತ ಎಷ್ಟೋ ಹೆಚ್ಚು ತೆರೆದ ಮನಸ್ಸಿನವರಾಗಿದ್ದಾರೆ. ಪ್ರಪಂಚದಾದ್ಯಂತ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿವೆ. ಬೌದ್ಧರು ಮಂಡಲ ಪೂಜೆಯನ್ನು ಮಾಡುತ್ತಾರೆ, ಮತ್ತು ಎಲ್ಲರೂ ಶಾಸ್ತ್ರಗಳನ್ನು ನೋಡಲು ಗುಂಪುಗೂಡುತ್ತಾರೆ. ಬೌದ್ಧಧರ್ಮದಲ್ಲಿ ಇದೇ ರೀತಿಯ ಮಂತ್ರೋಚ್ಛಾರಣೆಗಳಿವೆ ಮತ್ತು ಇದನ್ನು ಕೇಳಲು ಜನರು ಇಷ್ಟಪಡುತ್ತಾರೆ. ಆದುದರಿಂದ, ಕೆಲವೊಮ್ಮೆ, ತಡೆಗಳನ್ನೊಡ್ಡುವುದು ನಮ್ಮ ಮನಸ್ಸೇ.
ನ್ಯೂಯೋರ್ಕಿನಂತಹ ಒಂದು ನಗರದಲ್ಲಿ, ಮಂತ್ರೋಚ್ಛಾರಣೆಯ; ಸಂಸ್ಕೃತ ಮಂತ್ರೋಚ್ಛಾರಣೆಯ ಹಲವಾರು ತರಗತಿಗಳಿವೆ ಮತ್ತು ಈ ತರಗತಿಗಳು ಸಂಪೂರ್ಣವಾಗಿ ತುಂಬಿವೆ, ಯಾವುದೇ ಜಾಗ ಲಭ್ಯವಿಲ್ಲ. ನ್ಯೂಯೋರ್ಕಿನಲ್ಲಿರುವ ನಮ್ಮದೇ ಕೇಂದ್ರದಲ್ಲಿ, ಕ್ರಿಯೆ ಮತ್ತು ಧ್ಯಾನಗಳಿಗಾಗಿ ಮೂರರಿಂದ ನಾಲ್ಕು ಪಾಳಿಗಳಿವೆ. ಪ್ರತಿದಿನವೂ ಹಲವಾರು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದುದರಿಂದ ಇವತ್ತು, ಪಶ್ಚಿಮವು ಪಶ್ಚಿಮವಾಗಿಲ್ಲ ಮತ್ತು ಪೂರ್ವವು ಪೂರ್ವವಾಗಿಲ್ಲ. ನಾಸ್ತಿಕರು, ನಂಬಿಕೆಯಿಲ್ಲದವರು ನಿಮಗೆ ಪೂರ್ವದಲ್ಲೂ ಕಾಣಸಿಗುತ್ತಾರೆ ಮತ್ತು ನಂಬಿಕೆಯುಳ್ಳವರು ನಿಮಗೆ ಪಶ್ಚಿಮದಲ್ಲೂ ಕಾಣಸಿಗುತ್ತಾರೆ. ಆದುದರಿಂದ, ಜನರು ಮೊದಲಿಗಿಂತ ಹೆಚ್ಚು ತೆರೆದ ಮನಸ್ಸಿನವರಾಗಿದ್ದಾರೆ ಮತ್ತು ಅವರ ಪಕ್ಷಪಾತ ಧೋರಣೆಯು ಮೊದಲಿಗಿಂತ ಕಡಿಮೆಯಾಗಿದೆ. ಅವರಲ್ಲಿ ಪಕ್ಷಪಾತವಿರುವುದು ನಿಮಗೆ ಕಂಡುಬಂದರೆ, ಅವರಿಗೆ ಹೇಳಿ, "ಹೇ, ನೀನು ಪಕ್ಷಪಾತ ಮಾಡಬಾರದು. ನೀನೊಬ್ಬ ಜಾಗತಿಕ ನಾಗರಿಕನಾಗಬೇಕು. ನೀನು ಬಹು-ಸಾಂಸ್ಕೃತಿಕತೆ ಮತ್ತು ಬಹು-ಸಾಂಸ್ಕೃತಿಕ ಧಾರ್ಮಿಕ ಉತ್ಸವಗಳನ್ನು ಸ್ವೀಕರಿಸಬೇಕು; ಅಲ್ಲದಿದ್ದರೆ ನೀನು ಮಧ್ಯಯುಗಗಳಲ್ಲಿ, ಕತ್ತಲೆ ಯುಗಗಳಲ್ಲಿರುವೆ. ನೀನು ತೆರೆದ ಮನಸ್ಸಿನವನಲ್ಲ. ನಿನ್ನ ಮನಸ್ಸು ಬಹಳ ಮುಚ್ಚಿಹೋಗಿದೆ. ಎಲ್ಲಾದರೂ ಯಾವಾಗಲಾದರೂ ಏನಾದರೂ ಒಳ್ಳೆಯ ವಿಷಯಗಳಿದ್ದರೆ, ನೀನದನ್ನು ಸ್ವೀಕರಿಸಬೇಕು." ನೀವು, "ನಾನೊಬ್ಬರು ಗುರುವನ್ನು ಅನುಸರಿಸುತ್ತೇನೆ", ಮತ್ತು ಇದು, ಅದು ಎಲ್ಲಾ ಹೇಳಬೇಕಾದ ಅಗತ್ಯವಿಲ್ಲ.
ನಾನು ಎಲ್ಲರನ್ನೂ ಮುಂದಾಳುಗಳನ್ನಾಗಿ ಮಾಡುತ್ತೇನೆ. ನಾನು ಹಿಂದೆ ನಿಂತು, ಮುಂದಕ್ಕೆ ಹೋಗಲು ನಿಮಗೆ ಒಂದು ತಳ್ಳು ನೀಡುತ್ತೇನೆ. ಕ್ರೀಡೆಯಾಗಿರಲಿ, ಅಥವಾ ಸಂಗೀತವಾಗಿರಲಿ, ಅಥವಾ ಅಡುಗೆಯಾಗಿರಲಿ, ಎಲ್ಲೆಡೆಗಳಲ್ಲಿಯೂ ಒಬ್ಬರು ತರಬೇತುದಾರನಿರುವುದು ಅವಶ್ಯಕ. ಒಬ್ಬ ಒಳ್ಳೆಯ ಅಡುಗೆಯವರಾಗುವುದನ್ನು ಕಲಿಯಲು ಸಹಾಯ ಮಾಡಲು ನಿಮಗೊಬ್ಬ ತರಬೇತುದಾರರಿಲ್ಲದಿದ್ದಲ್ಲಿ, ನಿಮಗೆ ಅರ್ಹತಾಪತ್ರ ದೊರೆಯುವುದಿಲ್ಲ. ಆದುದರಿಂದ, ಯೋಗಕ್ಕೆ, ವ್ಯಾಯಾಮಕ್ಕೆ, ಫುಟ್ಬಾಲಿಗೆ ಕೂಡಾ ನಿಮಗೊಬ್ಬರು ಒಳ್ಳೆಯ ತರಬೇತುದಾರ ಬೇಕು, ಅಲ್ಲವೇ? ಅದೇ ರೀತಿಯಲ್ಲಿ, ಬಹಳ ಅಮೂರ್ತವಾದ ಅಧ್ಯಾತ್ಮಿಕತೆಗೆ, ನಿಮಗೆ ಖಂಡಿತವಾಗಿ ಒಬ್ಬರು ತರಬೇತುದಾರ, ನಿಮ್ಮನ್ನು ತರಬೇತುಗೊಳಿಸುವವರೊಬ್ಬರು ಬೇಕು.
ಒಬ್ಬರು ಗುರುವು ನಿಮ್ಮಲ್ಲಿ, "ನಿನ್ನ ಮೆದುಳನ್ನು ಮುಚ್ಚು ಮತ್ತು ಯೋಚನೆಗಳನ್ನು ಮಾಡಬೇಡ" ಎಂದು ಯಾವತ್ತೂ ಹೇಳುವುದಿಲ್ಲ, ಇಲ್ಲ! ನೀವು ಮುಕ್ತವಾಗಿ ಯೋಚಿಸಲು ಅವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಇದನ್ನೇ ನೀವು ತಿಳಿಯಬೇಕಾಗಿರುವುದು. ಆರ್ಟ್ ಆಫ್ ಲಿವಿಂಗ್, ತರ್ಕ ಮತ್ತು ನಂಬಿಕೆ, ಎರಡನ್ನೂ ಪ್ರೋತ್ಸಾಹಿಸುತ್ತದೆ. ನಂಬಿಕೆ ಮತ್ತು ತರ್ಕ, ಅವುಗಳು ಪರಸ್ಪರ ವಿರೋಧಾತ್ಮಕಗಳಂತೆ ತೋರಬಹುದು. ಹಿಂದೆ ಈ ರೀತಿ ಆಗಿದೆ. ಸ್ಪ್ಯಾನಿಷ್ ಶೋಧನೆ ಆದುದು ಹೀಗೆಯೇ. ಹಿಂದಿನ ಕಾಲದಲ್ಲಿ, ಚರ್ಚ್ ಏನನ್ನಾದರೂ ಹೇಳಿದರೆ, ನೀವು ಅದನ್ನು ಪ್ರಶ್ನಿಸಬಾರದಿತ್ತು. ಆದುದರಿಂದ, ಕಮ್ಯುನಿಸಂನ ಬಗ್ಗೆ ರಷ್ಯಾದಲ್ಲಾದ ಇಡಿಯ ಕ್ರಾಂತಿಯು ಪ್ರಾರಂಭವಾದುದು, ತರ್ಕವನ್ನು ದೂರವಿಟ್ಟುದುದರಿಂದ. ಆದರೆ ಪೂರ್ವದಲ್ಲಿ ಅದು ಆಗಲೇ ಇಲ್ಲ. ಪೂರ್ವವು ಯಾವತ್ತೂ, "ನಿಮ್ಮ ತರ್ಕವನ್ನು ಗೌರವಿಸಿ" ಎಂದು ಹೇಳಿತು. ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು ಅರ್ಜುನನಿಗೆ ಸಂಪೂರ್ಣ ಜ್ಞಾನವನ್ನು ಕೊಡುತ್ತಾನೆ ಮತ್ತು ಕೊನೆಯಲ್ಲಿ ಅವನು ಹೇಳುತ್ತಾನೆ, "ನೀನು ತರ್ಕಿಸು, ಅದು ನಿನ್ನ ಬುದ್ಧಿಗೆ ಸರಿ ಅನ್ನಿಸಿದರೆ, ಆಗ ನೀನು ಅದನ್ನು ಸ್ವೀಕರಿಸು. ನಾನೇನೇ ಹೇಳಿದರೂ, ನಿನ್ನ ಬುದ್ಧಿಯು ಅದನ್ನು ಸ್ವೀಕರಿಸದಿದ್ದರೆ, ಆಗ ನೀನು ನಾನು ಹೇಳಿದುದನ್ನೆಲ್ಲಾ ಸ್ವೀಕರಿಸಬೇಕಾದ ಅಗತ್ಯವಿಲ್ಲ."
ಬುದ್ಧನು ಇದನ್ನೇ ಹೇಳಿದನು, "ನಿನ್ನಲ್ಲಿ ತರ್ಕ ಮತ್ತು ಶರಣಾಗತಿ ಕೂಡಾ ಇರಬೇಕು. ನಂಬಿಕೆಯಿರಿಸು." ಭಗವಾನ್ ಬುದ್ಧನು ಹೇಳಿದುದು ಇದನ್ನೇ.
ನೀವು, "ನಾನು ಮೊದಲು ಈಜಲು ಕಲಿಯುತ್ತೇನೆ, ನಂತರ ನೀರಿಗಿಳಿಯುತ್ತೇನೆ" ಎಂದು ಹೇಳಿದರೆ, ಒಬ್ಬ ನಿಜವಾದ ತರಬೇತುದಾರನು, "ನೀರಿಗಿಳಿ ಮತ್ತು ಈಜುವುದು ಹೇಗೆಂದು ನಾನು ನಿನಗೆ ಹೇಳುತ್ತೇನೆ" ಎಂದು ಹೇಳುವನು. ಆದುದರಿಂದ, ಅದು ಒಂದರ ನಂತರ ಇನ್ನೊಂದಲ್ಲ, ಸರಿಯಾ! ನೀವು ನೀರಿಗಿಳಿದ ಕೂಡಲೇ ಈಜಬೇಕು. ನೀವು ಏಕಕಾಲದಲ್ಲಿ ಕಲಿಯಬೇಕು. ಅದಕ್ಕಾಗಿಯೇ, ತರ್ಕ ಮತ್ತು ನಂಬಿಕೆ, ಇವುಗಳೆರಡೂ ಜೀವನದಲ್ಲಿ ಅವಶ್ಯಕ. ನೀವು ಈಜನ್ನು ಮೊದಲು ಗಾಳಿಯಲ್ಲಿ ಕಲಿತು, ನಂತರ ನೀರಿಗಿಳಿಯಲು ಸಾಧ್ಯವಿಲ್ಲ. ಆಗ ನೀವು ಈಜನ್ನು ಕಲಿಯಲಾರಿರಿ. ನೀವು ನೀರಿಗಿಳಿದಾಗಲೇ ಈಜುವುದು ಹೇಗೆಂದು ಕಲಿಯುವಿರಿ, ಸರಿಯಾ! ಮತ್ತು ನಿಮ್ಮ ಸುತ್ತಲೂ ಒಂದು ರಕ್ಷಾಕವಚವಿದೆ. ಗುರುವು ರಕ್ಷಾಕವಚದಂತೆ. ಅವರು ನಿಮಗೆ ಈಜುವುದನ್ನು ಕಲಿಸುತ್ತಾರೆ ಮತ್ತು ಒಮ್ಮೆ ನೀವು ಈಜಲು ಶುರು ಮಾಡಿದಾಗ, ನಿಮಗೆ ಅದರ ಬೆಲೆಯು ತಿಳಿಯುತ್ತದೆ. ಅದು ಹಾಗಲ್ಲವೇ?
ಆದುದರಿಂದ, ಜನರಿಗೆ ಉತ್ತರ ನೀಡುವುದು ಹೇಗೆ? ಯಾರಾದರೂ ಕೇಳುವ ಪ್ರತಿಯೊಂದು ಪ್ರಶ್ನೆಗೂ ನೀವು ಉತ್ತರಿಸಬೇಕಾಗಿಲ್ಲ. ಕೆಲವೊಮ್ಮೆ ಕೇವಲ ನಕ್ಕುಬಿಡಿ. ನಿಮಗೆ ಅದರ ಬೆಲೆಯು ತಿಳಿದಿಲ್ಲ, ಆದರೆ ಕೇವಲ ಅದರ ರುಚಿ ನೋಡಿ ಮತ್ತು ನಂತರ ಅವರಿಗೆ ಹೇಳಿ. ಯಾರಾದರೂ ಹೇಳಬಹುದು, "ಓ, ನೀನು ಯಾಕೆ ಮಂತ್ರಗಳನ್ನು ಕೇಳುತ್ತಿರುವೆ?"
"ಓ! ನಿನಗೆ ಮಂತ್ರಗಳ ಬೆಲೆಯು ತಿಳಿದಿಲ್ಲ. ಅದು ಬಹಳ ಅದ್ಭುತವಾಗಿದೆ. ಸುಮ್ಮನೇ ಅದನ್ನು ಮಾಡು. ಸುಮ್ಮನೇ ಒಂದು ಸಲ ಅದನ್ನು ಕೇಳು ಮತ್ತು ನಿನಗೆ ಅರಿವಾಗುತ್ತದೆ."
ಅದನ್ನೇ ನಾವು ಹಂಚಲು ಬಯಸುವುದು. ಯಾವುದು ಅತ್ಯುತ್ತಮವೋ ಅದನ್ನು ನಾವು ಎಲ್ಲರೊಂದಿಗೆ ಹಂಚಲು ಬಯಸುತ್ತೇವೆ; ಪ್ರತಿಯೊಬ್ಬರೊಂದಿಗೂ. ಭಾರತದಲ್ಲಿ ಎಲ್ಲವೂ ಒಳ್ಳೆಯದಿದೆ ಅಥವಾ ಎಲ್ಲವೂ ಉತ್ತಮವಾಗಿದೆಯೆಂದಲ್ಲ, ಇಲ್ಲ! ಅಲ್ಲಿ ಹಲವಾರು ನಿರಾಶಾದಾಯಕ ಸಂಗತಿಗಳೂ ಇವೆ. ಆದರೆ ನಾವು ಒಳ್ಳೆಯ ವಿಷಯಗಳನ್ನು ಹೆಕ್ಕಿ, ಅವುಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಅದೇ ರೀತಿಯಲ್ಲಿ, ಪ್ರತಿಯೊಂದು ಧರ್ಮ, ಪ್ರತಿಯೊಂದು ಸಂಸ್ಕೃತಿಯಲ್ಲಿ ಕೂಡಾ ಏನೋ ಬಹಳ ಸುಂದರವಾದುದು ಇದೆ. ಅದನ್ನು ನಾವು ಹಂಚಬೇಕು. ಮತಾಂಧತೆ ಮತ್ತು ಸಂಕುಚಿತ ಮನಸ್ಸನ್ನಲ್ಲ. ನೀವೇನು ಹೇಳುವಿರಿ? ನಾವು ಒಳ್ಳೆಯ ವಿಚಾರಗಳನ್ನು ಎಲ್ಲಾ ಕಡೆಗಳಿಂದ ತೆಗೆದುಕೊಳ್ಳುತ್ತೇವೆ, ನಾವದನ್ನು ಮಾಡುತ್ತೇವೆ ಮತ್ತು ನಾವದನ್ನು ಪ್ರಚಾರ ಮಾಡುತ್ತೇವೆ. ಎಲ್ಲರೂ ಅವುಗಳ ಲಾಭ ಪಡೆಯುವುದನ್ನು ನಾವು ನೋಡುತ್ತೇವೆ. ಅಲ್ಲವೇ?
ಯೋಗದಲ್ಲಿ ಕೂಡಾ, ವೈಜ್ಞಾನಿಕವಲ್ಲದ ಹಲವಾರು ವಿಷಯಗಳನ್ನು ಮಾಡುತ್ತಾರೆ. ಹಠಯೋಗದಲ್ಲಿ, ಶರೀರವನ್ನು ಒಂದು ಸೂಜಿಯಿಂದ ಚುಚ್ಚುತ್ತಾರೆ. ನಿಜವಾಗಿ ಧರ್ಮಗ್ರಂಥದಲ್ಲಿಲ್ಲದ ವಿಷಯಗಳನ್ನು ಅವರು ಮಾಡುತ್ತಾರೆ, ಆದರೆ ಜನರು ಅದನ್ನು ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ಆ ವಿಷಯಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಮತ್ತೆ, ಧ್ಯಾನ ಮತ್ತು ಯೋಗದ ಹೆಸರಿನಲ್ಲಿ ಜನರು ತಮ್ಮನ್ನು ತಾವೇ ಹಿಂಸಿಸಿಕೊಳ್ಳುತ್ತಿದ್ದಾರೆ. ಆದುದರಿಂದ, ಈ ವಿಷಯಗಳಿಗೆ ನಾವು ಇಲ್ಲವೆನ್ನುತ್ತೇವೆ ಯಾಕೆಂದರೆ, ಇವುಗಳೆಲ್ಲಾ ಅಧಿಕೃತವಲ್ಲ.
ಅದೇ ರೀತಿಯಲ್ಲಿ, ಶಾಸ್ತ್ರಗಳಿಗೂ ಕೂಡಾ, ಸಂಪೂರ್ಣವಾಗಿ ಅಧಿಕೃತವಲ್ಲದ ಮತ್ತು ಧರ್ಮಗ್ರಂಥಗಳಲ್ಲಿಲ್ಲದ ಹಲವಾರು ಸಂಗತಿಗಳನ್ನು ಅವರು ಸೇರಿಸುತ್ತಾರೆ. ಅದು ಅಗತ್ಯ ಕೂಡಾ ಇಲ್ಲ, ಆದರೆ ಅಭ್ಯಾಸದಿಂದ  ಜನರು ಇವುಗಳನ್ನು ಉಪಯೋಗಿಸುತ್ತಿದ್ದಾರೆ.
ಇಲ್ಲಿಯೇ ನಿಮಗೆ, ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆ ಅಗತ್ಯವಿರುವುದು. ಅದನ್ನು ಮಾತ್ರ ತೆಗೆದುಕೊಳ್ಳಿ.
ಪ್ರಶ್ನೆ: ಗುರೂಜಿ, ನಾನು ನಿಮಗಾಗಿ ಏನು ಮಾಡಬಹುದು?
ಶ್ರೀ ಶ್ರೀ ರವಿಶಂಕರ್:
ನೀನು ಈ ಪ್ರಶ್ನೆಯನ್ನು ಇಟ್ಟುಕೊಂಡು, ಕಾಲಕಾಲಕ್ಕೆ ಯಾವುದು ಅವಶ್ಯಕವೋ ಅದನ್ನು ಮಾಡಬೇಕೆಂದು ಬಯಸುತ್ತೇನೆ. ಇದಕ್ಕೆ ಕೇವಲ ಒಂದು ಉತ್ತರವಿರಲು ಸಾಧ್ಯವಿಲ್ಲ. ಇದು, ನಾವು ಹಲವಾರು ಸಾರಿ ನಡೆಯುವ ಒಂದು ಮಾರ್ಗವಿದ್ದಂತೆ.
ಈಗ, ನೀವು ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ. ಈ ಜ್ಞಾನದಲ್ಲಿ ಮುಳುಗಿರಿ ಮತ್ತು ಇದನ್ನು ಇತರ ಜನರೊಂದಿಗೆ ಹಂಚಿ.
ಪ್ರಶ್ನೆ: ಗುರೂಜಿ, ಈ ಪ್ರಪಂಚದಲ್ಲಿ ನಾನು ಬಹಳ ಒಬ್ಬಂಟಿಯೆಂದು ನನಗನ್ನಿಸುತ್ತದೆ. ಜೊತೆಯಲ್ಲಿ ಜೀವಿಸಲು ಮತ್ತು ಜೀವನದ ಎಲ್ಲಾ ಸಂತೋಷಗಳನ್ನು ಹಂಚಿಕೊಳ್ಳಲು ನಾನು ನನ್ನ ಜೀವನಸಂಗಾತಿಯನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಾನು ಇಲ್ಲಿ ಜರ್ಮನಿಯಲ್ಲಿ ಮತ್ತು ಯುರೋಪಿನಲ್ಲಿ ಕೂಡಾ ಒಂದು ವೈವಾಹಿಕ ತಾಣವನ್ನು ತೆರೆಯಲು ಯೋಚಿಸುತ್ತಿದ್ದೇನೆ. ನೀನು ಈ ಸೇವೆಯನ್ನು ತೆಗೆದುಕೊಳ್ಳಲೂಬಹುದು. ನೀನಿದನ್ನು ಶುರು ಮಾಡಬಹುದು.
ನಾವು ಶ್ರೀ ಶ್ರೀ ಮ್ಯಾಟ್ರಿಮೊನಿಯನ್ನು ಶುರು ಮಾಡೋಣ. ವಿವಾಹವಾಗಲು ಬಯಸುವ ಹಲವಾರು ಪುರುಷರಿದ್ದಾರೆ. ಅವರು ನಿನ್ನದೇ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಇದೇ ಪರಿಸ್ಥಿತಿಯಲ್ಲಿರುವ ಹಲವಾರು ಸ್ತ್ರೀಯರು ಕೂಡಾ ಇದ್ದಾರೆ. ಆದುದರಿಂದ ನಾವು ಕೇವಲ ಒಂದುಗೂಡಿಸೋಣ. ನಿಮ್ಮಲ್ಲಿ ಪ್ರತಿಯೊಬ್ಬರೂ ಆಯ್ಕೆ ಮಾಡಿ ಹೆಕ್ಕಿಕೊಳ್ಳಿ ಮತ್ತು ನನ್ನಲ್ಲಿಗೆ ಬನ್ನಿ. ನಾನು ಆಶೀರ್ವಾದ ಮಾಡುತ್ತೇನೆ.
ಪ್ರಶ್ನೆ: ಪ್ರೀತಿಯ ಗುರೂಜಿ, ಕೆಲಕಾಲ ಹಿಂದೆ, ನಾವೊಂದು ಚಿಕ್ಕ ಗುಂಪಿನಲ್ಲಿ ನಿಮ್ಮ ಸುತ್ತಲೂ ಕುಳಿತಿದ್ದೆವು ಮತ್ತು ನೀವು ಹೇಳುತ್ತಿದ್ದಿರಿ, ಇಷ್ಟರವರೆಗೆ ನೀವು ಕೇವಲ ನರ್ಸರಿ ಜ್ಞಾನವನ್ನು ಮಾತ್ರ ಹಂಚಿದ್ದೀರೆಂದು ಹಾಗೂ ಹೆಚ್ಚಿನ ನವೀಕರಿಸಲಾದ ಜ್ಞಾನಕ್ಕೆ ನಾವು ಸಿದ್ಧರಾಗುವುದನ್ನು ನೀವು ಕಾಯುತ್ತಿರುವಿರೆಂದು.  ಈ ನವೀಕರಿಸಿದ ಜ್ಞಾನವನ್ನು ಪಡೆಯಲು ನಾವು ಈಗ ಸಿದ್ಧರಾಗಿದ್ದೇವೆಯೇ? ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಅತೀ ಹೆಚ್ಚಿನ ಜ್ಞಾನವೇನೆಂದು ತಿಳಿಯಲು ನಾನು ನಿಜವಾಗಿ ಕುತೂಹಲಿಯಾಗಿದ್ದೇನೆ ಮತ್ತು ಬಾಯಾರಿದ್ದೇನೆ. ದಯವಿಟ್ಟು ನಮ್ಮೊಂದಿಗೆ ಹಂಚಿ.
ಶ್ರೀ ಶ್ರೀ ರವಿಶಂಕರ್:
ಸರಿ, ಸ್ವಲ್ಪ ಸ್ವಲ್ಪವಾಗಿ. ಖಂಡಿತಾ! ಆಶೀರ್ವದಿಸುವ ಕೋರ್ಸ್ ಇದೆ. ನಿಮ್ಮಲ್ಲಿ ಎಷ್ಟು ಮಂದಿ ಆಶೀರ್ವದಿಸುವವರಾಗಿದ್ದೀರಿ? ಅದು ಕೆಲಸ ಮಾಡುತ್ತಿದೆಯೇ, ಹೌದು! ನಿಮ್ಮಲ್ಲಿ ಎಷ್ಟು ಮಂದಿ ಆಶೀರ್ವದಿಸುವ ಕೋರ್ಸನ್ನು ಮಾಡಿಲ್ಲ? ನೀವು ಆಶೀರ್ವದಿಸುವ ಕೋರ್ಸ್ ಮಾಡಬೇಕು. ಪ್ರತಿದಿನವೂ ನಿಮ್ಮೊಂದಿಗೆ ಹಲವಾರು ಪವಾಡಗಳಾಗುವುದನ್ನು ನೀವು ಕಾಣುತ್ತೀರಿ.
ಪ್ರಶ್ನೆ: ಗುರೂಜಿ! ಕೆಲವು ನಿರ್ದಿಷ್ಟ ತಂತ್ರಜ್ಞಾನಗಳ ಉದಯದ ಬಗ್ಗೆ ನೀವು ಕಳಕಳಿ ಹೊಂದಿದ್ದೀರಾ; ವಿಶೇಷವಾಗಿ, ಮನುಷ್ಯರ ಚಿಂತನಾ ಪ್ರಕ್ರಿಯೆಯನ್ನು ಮಾರ್ಪಡಿಸಬಲ್ಲಂತಹ, ಮನುಷ್ಯರ ಶರೀರದಲ್ಲಿ ಅಳವಡಿಸುವ ಯಂತ್ರಗಳ ಬಗ್ಗೆ? ಭವಿಷ್ಯದ ಯಂತ್ರಗಳು ಪ್ರಕೃತಿಯೊಂದಿಗೆ ಒಂದಾಗಬಹುದೆಂದು ನಿಮಗನ್ನಿಸುತ್ತಿದೆಯೇ?
ಶ್ರೀ ಶ್ರೀ ರವಿಶಂಕರ್:
ನೀನೇ ಒಂದು ಯಂತ್ರ, ಸರಿಯಾ! ನಿನ್ನ ಶರೀರವು ಬಹಳ ಅದ್ಭುತವಾದ ಯಂತ್ರ. ನಿನ್ನ ಮನಸ್ಸು ಇನ್ನೂ ಉತ್ತಮವಾದುದು ಮತ್ತು ಬುದ್ಧಿ ಕೂಡಾ ಹಾಗೆಯೇ. ಅವುಗಳನ್ನು ಚೆನ್ನಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಮಾತ್ರ ನೀನು ತಿಳಿದಿರಬೇಕು. ನಾನು ಯಂತ್ರಕ್ಕಿಂತಲೂ ನಿರ್ವಾಹಕನ ಬಗ್ಗೆ ಹೆಚ್ಚು ಕಳಕಳಿಯನ್ನು ಹೊಂದಿದ್ದೇನೆ.
ಪ್ರಶ್ನೆ: ಗುರೂಜಿ, ಒಬ್ಬನು ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದರೆ, ಅವನಿಗೆ ನೆಮ್ಮದಿಯಿರಲು ಹೇಗೆ ಸಾಧ್ಯ? ಜೀವನದಲ್ಲಿ ತಪ್ಪುಗಳೊಂದಿಗೆ ವ್ಯವಹರಿಸುವುದು ಹೇಗೆಂದು ನಮಗೆ ತಿಳಿಸಿ.
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಆರ್ಟ್ ಆಫ್ ಲಿವಿಂಗಿನ ಆರಂಭದ ದಿನಗಳಲ್ಲಿ, ನನ್ನ ಮೊದಲ ಪ್ರಯಾಣಗಳಲ್ಲಿ ಒಂದು ಸ್ವಿಟ್ಸರ್ಲೇಂಡಿಗೆ ಆಗಿತ್ತು ಮತ್ತು ನಾನು ಕೆಲವು ಜನರೊಂದಿಗೆ ಉಳಕೊಂಡೆ. ಅವರಲ್ಲಿ ಒಬ್ಬಳು ಹೆಂಗಸಿಗೆ, ಎರಡು ವಾಸ್ತವತೆಗಳನ್ನು ಸ್ವೀಕರಿಸುವುದು ಕಷ್ಟವಾಯಿತು.
ಒಂದು ಜನರ ಗುಂಪು, ಅವರೆಲ್ಲರೂ, ಕೆ.ಜಿ.ಬಿ. (ಕಮಿಟಿ ಆಫ್ ಸ್ಟೇಟ್ ಸೆಕ್ಯೂರಿಟಿ - ರಷ್ಯಾ)ಯು ತಮ್ಮ ಮೆದುಳಿನಲ್ಲಿ ಯಾವುದೋ ಮೈಕನ್ನು ಅಳವಡಿಸಿದೆಯೆಂದು ಮತ್ತು ಅವರು ತಮ್ಮೆಲ್ಲರ ಯೋಚನೆಗಳನ್ನು ಮುದ್ರಿಸುತ್ತಿರುವರೆಂದು ಯೋಚಿಸಿದರು. ಅವರು ಅನ್ನುತ್ತಿದ್ದರು, "ಇಲ್ಲಿ ಮಾತನಾಡುವುದು ಸುರಕ್ಷಿತವೇ?" ನಾನು ಸುತ್ತಲೂ ನೋಡಿ ಹೇಳುತ್ತಿದ್ದೆ, "ಇದು ನಿಮ್ಮ ಸ್ವಂತ ಮನೆ. ಇಲ್ಲಿ ಮಾತನಾಡುವುದು ಸುರಕ್ಷಿತವೆಂದು ನೀವು ಯಾಕೆ ಯೋಚಿಸುತ್ತಿಲ್ಲ?" ಅವರನ್ನುತ್ತಿದ್ದರು, "ಅವರು ಮೋಸ್ಕೋದಲ್ಲಿ ಕೇಳಿಸಿಕೊಳ್ಳುತ್ತಿದ್ದಾರೆ." ಅವುಗಳು ಶೀತಲ ಯುಗದ ದಿನಗಳಾಗಿದ್ದವು. ಶೀತಲ ಸಮರವು ಇನ್ನೂ ಆಗುತ್ತಿತ್ತು. ಬರ್ಲಿನ್ ಗೋಡೆಯು ಧಕ್ಕೆಯಾಗದೆ ಹಾಗೇ ಉಳಿದಿತ್ತು, ಅದು ಮುರಿದು ಬಿದ್ದಿರಲಿಲ್ಲ. ರಷ್ಯಾವು ರಷ್ಯಾವಾಗಿರಲಿಲ್ಲ; ಅದು ಯು.ಎಸ್.ಎಸ್.ಆರ್. ಆಗಿತ್ತು ಮತ್ತು ಅವರಲ್ಲೆಲ್ಲಾ ಬಹಳಷ್ಟು ಭ್ರಮೆಯಿತ್ತು. ಯಾರಾದರೊಬ್ಬರೂ ಹೊರಟು ಹೋಗುವಾಗ; ಅದು ಅವರದ್ದೇ ಮಿತ್ರರು ಅಥವಾ ಅವರದ್ದೇ ಸ್ವಂತ ಬಂಧುಗಳಾಗಿರಬಹುದು; ಅವರನ್ನುತ್ತಿದ್ದರು, "ಹೋದವನು ಯಾರೆಂದು ನಿಮಗೆ ಗೊತ್ತಿದೆಯೇ (ತಮ್ಮ ಮಿತ್ರ ಅಥವಾ ಬಂಧುಗಳ ಕಡೆ ಕೈತೋರಿಸುತ್ತಾ), ಅವನೊಬ್ಬ ಕೆ.ಜಿ.ಬಿ. ಚಾರ."
"ಆದರೆ, ಅವನು ನಿನ್ನ ಸ್ವಂತ ಸಹೋದರ."
"ಇಲ್ಲ! ಕೆ.ಜಿ.ಬಿ.ಯು ಅವನ ತಲೆಯಲ್ಲಿ ಒಂದು ಮೈಕನ್ನು ಅಳವಡಿಸಿದೆ."
ಮತ್ತು ಅವರಲ್ಲಿ ಎಲ್ಲಾ ೧೫ ರಿಂದ ೨೦ ಮಂದಿ, ಯಾರೆಲ್ಲಾ ಬಂದಿದ್ದರೋ, ಅವರೆಲ್ಲರೂ ಹೀಗೇ ಇದ್ದರು. ಅವರೆಲ್ಲರೂ ಯಾವುದೋ ಒಂದು ಔಷಧದ ಪ್ರಭಾವದಲ್ಲಿದ್ದರು. ಅವರು ಎರಡು ವಾಸ್ತವತೆಗಳಲ್ಲಿದ್ದರು - ಸ್ಕಿಜ಼ೋಫ್ರೆನಿಕ್, ಬೈ-ಪೋಲಾರ್, ಅವರೆಲ್ಲರಿಗೂ ಯಾವುದೋ ನ್ಯೂನತೆಗಳಿದ್ದವು.
ನಾನು ಸುಮ್ಮನೇ ಅಲ್ಲಿ ಕುಳಿತುಕೊಂಡು ಯೋಚಿಸಿದೆ, "ಓ ದೇವರೇ! ನೀನು ನನ್ನನ್ನು ಎಲ್ಲಿಗೆ ಕರೆದುಕೊಂಡು ಬಂದಿರುವೆ?" ಸಂಪೂರ್ಣವಾಗಿ ಭಿನ್ನವಾದ ಜಗತ್ತು. ಅದೊಂದು ಬಹಳ ವಿಭಿನ್ನವಾದ ಪ್ರಪಂಚವಾಗಿತ್ತು ಯಾಕೆಂದರೆ ಅವರ ಯೋಚನೆಗಳು ಬಹಳ ವಿಭಿನ್ನವಾಗಿದ್ದವು. ಅವರ ನಂಬಿಕೆಗಳು ಸಂಪೂರ್ಣವಾಗಿ ವಿಭಿನ್ನವಾಗಿದ್ದವು ಮತ್ತು ಕೆ.ಜಿ.ಬಿ.ಯು ತಮ್ಮ ಯೋಚನೆಗಳನ್ನು ಮುದ್ರಿಸುತ್ತಿದೆಯೆಂದು ಅವರು ಪ್ರಾಮಾಣಿಕವಾಗಿ ನಂಬಿದ್ದರು. ಅವರಿಗಾಗಿ ಸಿ.ಐ.ಎ.ಯು ಇದನ್ನು ಮಾಡುತ್ತಿದೆಯೆಂಬುದಾಗಿ ಕೇವಲ ಇಬ್ಬರು ಯೋಚಿಸಿದ್ದರು; ಅದು ಅತ್ಯಂತ ಹಾಸ್ಯಾಸ್ಪದವಾಗಿತ್ತು.
ಮತ್ತು ಈ ಹೆಂಗಸು ನನಗಾಗಿ ಮಾಳಿಗೆಯಲ್ಲಿ ಒಂದು ಕೋಣೆಯನ್ನು ಕಟ್ಟಿಸಿದಳು, ಯಾಕೆಂದರೆ ನಾನು ಬರುತ್ತಿರುವುದು ಒಂದು ದೊಡ್ಡ ವಿಷಯವಾಗಿತ್ತು. ಹೀಗೆ ನನಗೊಂದು ಪ್ರತ್ಯೇಕ ಕೋಣೆಯಿತ್ತು, ಎಲ್ಲವೂ ಹೊಸತು, ಎಲ್ಲವೂ ಪ್ರತ್ಯೇಕ, ಎಲ್ಲವೂ ನನಗಾಗಿ. ರಾತ್ರಿಯ ಮಧ್ಯೆ, ಒಂದು ಗಂಟೆಗೇನೋ ಇರಬೇಕು, ಅವಳು ಬಂದು ನನ್ನ ಕೋಣೆಯ ಬಾಗಿಲು ತಟ್ಟಿ, "ನಾನೀಗ ಈ ಮನೆಯನ್ನು ನಿಮ್ಮ ಹೆಸರಿಗೆ ಬರೆಯಬೇಕು. ನಾನಿದನ್ನು ನಿಮಗೆ ಉಡುಗೊರೆಯಾಗಿ ಕೊಡಬೇಕು" ಎಂದು ಹೇಳಿದಳು.
ನಾನಂದೆ, "ನೀನು ಹೋಗಿ ಮಲಗು, ನಾಳೆ ನಾವು ಇದರ ಬಗ್ಗೆ ಮಾತನಾಡಬಹುದು."
ಅವಳಂದಳು, "ಇಲ್ಲ! ಅದನ್ನು ನಾನು ಈಗಲೇ ಮಾಡಬೇಕು!"
ನಾನಂದೆ, "ನೋಡು, ನಾನು ಯಾವುದೇ ಉಡುಗೊರೆಯನ್ನು ಸ್ವೀಕರಿಸುವುದಿಲ್ಲ. ಅದು ನಿನ್ನ ಹೆಸರಿನಲ್ಲಿದ್ದರೆ, ಅದು ನನ್ನ ಬಳಿಯಿದ್ದಷ್ಟೇ ಉತ್ತಮ, ನೀನೀಗ ಹೋಗಿ ವಿಶ್ರಾಂತಿ ತೆಗೆದುಕೋ." ಆ ದಿನಗಳಲ್ಲಿ, ನಾನು ಅಂತಹ ಯಾವುದೇ ಉಡುಗೊರೆಗಳನ್ನು ಸ್ವೀಕರಿಸುತ್ತಿರಲಿಲ್ಲ.
ಅವಳು ಉದ್ರಿಕ್ತಳಾಗಿದ್ದಳು ಮತ್ತು ಅವಳು ಸ್ನಾನದ ಕೋಣೆಯನ್ನು ಶುಚಿ ಮಾಡಲು ಹೋದಳು. ಅವಳು ಶುಚಿ ಮಾಡಿದಳು, ಶುಚಿ ಮಾಡಿದಳು, ಶುಚಿ ಮಾಡಿದಳು, ಶುಚಿ ಮಾಡಿದಳು, ಐದು ಗಂಟೆಗಳ ಕಾಲ ಮತ್ತು ನೀರು ಮನೆಯಲ್ಲೆಲ್ಲಾ ಹರಿಯಿತು. ಅವಳು ನಲ್ಲಿಯನ್ನು ತೆರೆದಳು ಮತ್ತು ನೀರು ಮನೆಯ ಮೂಲಕವೆಲ್ಲಾ ಹರಿಯಿತು, ಎಲ್ಲಾ ಕಡೆಗಳಲ್ಲಿ ಮತ್ತು ಆಗಲೂ ಅವಳು ಶುಚಿಗೊಳಿಸುತ್ತಾ ಇದ್ದಳು. ಖಂಡಿತಾ, ಮಾರನೆಯ ದಿನ ನಾವು ವೈದ್ಯರನ್ನು ಕರೆಯಬೇಕಾಗಿ ಬಂತು. ಅವಳಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಅವಳು ಚಿಕ್ಕ, ಚಿಕ್ಕ, ಒಳ್ಳೆಯ ಉಡುಗೊರೆಗಳನ್ನು ಮಾಡುತ್ತಿದ್ದಳು. ಅವಳಿಗೆ ಏನಾದರೂ ಮಾಡಬೇಕಾಗಿತ್ತು, ಅವಳಿಗೆ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವಳು ಮತ್ತು ಅವಳ ಸ್ನೇಹಿತೆ, ಅವರು ಬಿಸ್ಕೆಟುಗಳನ್ನೊಳಗೊಂಡ ಚೆನ್ನಾಗಿರುವ ಚಿಕ್ಕ ಕಾಗದದ ಚೀಲಗಳನ್ನು ಮಾಡುತ್ತಿದ್ದರು ಮತ್ತು ಎಲ್ಲರಿಗೂ ಉಡುಗೊರೆಗಳನ್ನು ಮಾಡುತ್ತಿದ್ದರು. ಅಲ್ಲಿ ೨೦ ಜನರಿದ್ದರೆ, ಅವಳು ೨೦೦ ಜನರಿಗೆ ಉಡುಗೊರೆಗಳನ್ನು ಮಾಡುತ್ತಿದ್ದಳು, ಯಾಕೆಂದರೆ ಅವಳಿಗೆ ಏನನ್ನಾದರೂ ಮಾಡುತ್ತಾ ಇರಬೇಕಾಗಿತ್ತು. ನಾನನ್ನುತ್ತಿದ್ದೆ, "ವಿಶ್ರಾಂತಿ ತೆಗೆದುಕೋ! ವಿಶ್ರಾಮ ಮಾಡು!"
"ನಾನು ಹೇಗೆ ವಿಶ್ರಾಂತಿ ತೆಗೆದುಕೊಳ್ಳಲಿ? ನಾನು ಇದನ್ನು ಮಾಡಲು ಬಯಸುತ್ತೇನೆ."
"ಸರಿ, ಮಾಡು."
ಬಹಳ ಆಸಕ್ತಿಕರ! ಆದರೆ ಅವರು ಬಹಳ ಒಳ್ಳೆಯ ಜನರು, ಒಂದು ಒಳ್ಳೆಯ ಹೃದಯವಂತರು. ಒಂದು ಅರ್ಥದಲ್ಲಿ ಅವರು ಬಹಳ ಬುದ್ಧಿವಂತರು, ಆದರೆ ಅವರು ಈ ವಾಸ್ತವವನ್ನು ಅರಿಯದವರು. ಅವರು ಎರಡು ವಾಸ್ತವತೆಗಳ ನಡುವೆ ಸಂಪರ್ಕ ಕಲ್ಪಿಸಲಾರರು.
ಸಾಧಾರಣವಾಗಿ ಸಂತರೊಡನೆ, ಯಾರೋ ಒಬ್ಬರು ಆತ್ಮಸಾಕ್ಷಾತ್ಕಾರ ಹೊಂದಿದರು ಎಂದು ಹೇಳಿದಾಗ, ಅವರು ಮೊದಲಿಗೆ ಕೇಳುತ್ತಾರೆ, "ಅವರು ಹುಚ್ಚರಾದರಾ?" ಅವರು ಕೇಳುವ ಪ್ರಶ್ನೆ ಇದು.
ಆದುದರಿಂದಲೇ, "ಓಹ್, ನಾನು ನಿನ್ನ ಕುಂಡಲಿನಿಯನ್ನು ಮೇಲೆ ತರುತ್ತೇನೆ, ನೀನು ಕೇವಲ ಇದನ್ನು ಮಾಡು" ಎಂದು ಹೇಳುವ ಈ ಎಲ್ಲಾ ಜನರಿಂದ ನೀವು ದೂರವಿರಬೇಕು. ಅವರು ಸುಮ್ಮನೆ ನಿಮ್ಮ ಶರೀರದಲ್ಲಿನ ಕೆಲವು ಬಿಂದುಗಳನ್ನು ಅಥವಾ ನಿಮ್ಮಲ್ಲಿನ ಸ್ವಲ್ಪ ಶಕ್ತಿಯನ್ನು ಪ್ರಚೋದಿಸಬಲ್ಲರು ಮತ್ತು ನಿಮಗೆ ಒಂದು ಅಥವಾ ಎರಡು ದಿನಗಳು ಸ್ವಲ್ಪ ಚೆನ್ನಾಗಿ ಅನಿಸಬಹುದು. ನಂತರ ಫ್ಯೂಸ್ ಹೊರಟು ಹೋಗುತ್ತದೆ. ನಂತರ ನೀವು ಸಂಪೂರ್ಣವಾಗಿ ಹುಚ್ಚರಾಗುತ್ತೀರಿ. ನಿಮಗೆ ವಾಸ್ತವತೆಯೊಂದಿಗೆ ಜೋಡಿರಲು ಸಾಧ್ಯವಾಗುವುದಿಲ್ಲ.
ಆದುದರಿಂದ, ಯಾರಾದರೂ, "ಓಹ್! ನಾನು ನಿನ್ನ ಕುಂಡಲಿನಿಯನ್ನು ಜಾಗೃತಗೊಳಿಸುತ್ತೇನೆ" ಎಂದೆಲ್ಲಾ ಭಾಷೆ ಕೊಟ್ಟರೆ, ಅವರಿಗೆ ಕೇವಲ ಇಷ್ಟು ಹೇಳಿ, "ನಾನು ಬೇಕಾದಷ್ಟು ಜಾಗೃತಗೊಂಡಿದ್ದೇನೆ, ನಾನಲ್ಲಿಗೆ ಹೋಗಲು ಬಯಸುವುದಿಲ್ಲ." ಆದುದರಿಂದ, ನೀವು ಈ ಎಲ್ಲಾ ರೀತಿಯ ಜನರಿಂದ ದೂರವಿರಬೇಕು.
ಇದು ಅತ್ಯುತ್ತಮವಾದುದು; ನೋಡಿ, ಹೇಗೆ ನಾವು ಹಂತ ಹಂತವಾಗಿ ಮುಂದಕ್ಕೆ ಸಾಗುತ್ತಿದ್ದೇವೆ. ಸುಮ್ಮನೇ ಹಿಂದೆ ತಿರುಗಿ, ಸುದರ್ಶನ ಕ್ರಿಯೆಯ ಮೊದಲು ನಿಮ್ಮ ಮನಸ್ಸಿನ ಸ್ಥಿತಿ ಹೇಗಿತ್ತು ಮತ್ತು ಈಗ ಅದು ಹೇಗಿದೆ ಎಂಬುದನ್ನು ನೋಡಿ. ನೀವು ಎಷ್ಟು ಪ್ರಗತಿ ಹೊಂದಿರುವಿರಿ ಎಂಬುದನ್ನು ನೋಡಿ ಹಾಗೂ ನಂತರ ಟೊಳ್ಳು ಮತ್ತು ಖಾಲಿ ಧ್ಯಾನದೊಂದಿಗೆ, ಹಂತ ಹಂತವಾಗಿ, ಜೀವನದ ಸಹಜವಾದ ಅರಳುವಿಕೆಯು ಆಗುತ್ತಿದೆ. ನೀವು ಹೆಚ್ಚು ಹೆಚ್ಚು ಸಂತೋಷವಾಗಿರುವುದು ನಿಮಗೆ ಕಾಣಿಸುತ್ತದೆ. ಅಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ಅದನ್ನು ಒಪ್ಪುತ್ತೀರಿ? (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೋಡಿ, ನಾವು ಹೋಗಬೇಕಾದ ದಾರಿ ಇದು. ಸಹಜವಾಗಿ!