ಸೋಮವಾರ, ಜುಲೈ 30, 2012

ಆನ೦ದ ಗುಚ್ಛ

30
2012
Jul
ಅಮೃತಬಿ೦ದು’ ಸರಣಿಯ ಬರಹಗಳು


ನಾಲ್ಕನೆಯ ಕ೦ತು

ಆನಂದ

ಜೀವನದಲ್ಲಿರುವ ಒಂದೇ ಆಕರ್ಷಣೆ ಎಂದರೆ ಆನಂದದ್ದು. ಆನಂದಕ್ಕೆ ಆಕರ್ಷಿಸುವ ಗುಣವಿದೆ.ಕೆಲವರು ಬೆಳ್ಳಗೆ ನೋಡಲು ಸುಂದರವಾಗಿದ್ದರೂ ಆಕರ್ಷಕರಾಗಿರುವುದಿಲ್ಲ, ಇನ್ನು ಕೆಲವರು ನೋಡಲು ಚೆನ್ನಾಗಿರುವುದಿಲ್ಲ, ಆದರೆ ಆಕರ್ಷಣೆ ತುಂಬಾ ಇರುತ್ತೆ. ಹೌದಾ? ಏಕೆ ಎಂದರೆ ಅವರಲ್ಲಿರುವ ತರಂಗಗಳಿಂದ, ಸ್ವಾತ್ಮಾನಂದಪ್ರಕಾಶ!

ಒಂದು ಮಗು ನೋಡಿ, ಅದು ಯಾವುದೇ ದೇಶಕ್ಕೆ ಸೇರಿದ್ದಾಗಿರಲಿ ಮಗುವಿನಲ್ಲಿ ಆಕರ್ಷಣೆ ಇದೆ. ಆ ಮನಸ್ಸು ಮುಗ್ಧವಾಗಿದೆ, ಪ್ರಸನ್ನವಾಗಿದೆ, ಆ ಚೇತನ ಅರಳಿಕೊಂಡಿದೆ. ಇದೇ ಜೀವನದ ಲಕ್ಷಣ. ಜೀವನ ಆನಂದದಿಂದ ಪ್ರಾರಂಭವಾಗುತ್ತದೆ. ’ಆನಂದೇನ ಜಾತಾನಿ ಜೀವಂತಿ’ ಎಂದು ತೈತ್ತರೀಯ ಉಪನಿಷತ್ತಿನಲ್ಲಿ ಹೇಳಿದ್ದಾರೆ. ಆನಂದದಲ್ಲೇ ಜೀವನವೆಲ್ಲವೂ ನಡೀತಾ ಇದೆ, ಆ ಆನಂದದಲ್ಲೇ ಪೂರ್ಣವಾಗುತ್ತೆ. ಎಲ್ಲಿಂದ ಪ್ರಾರಂಭವಾಯ್ತೋ ಅಲ್ಲೇ ಮುಕ್ತಾಯ, ಅದುವೇ ಜೀವನದ ಲಕ್ಷಣ.

ಕೆಲವರು ಸಾಧನೆ ಮಾಡ್ತಾರೆ - ಬೆಳಗ್ಗಿನಿಂದ ಸಂಜೆಯವರೆಗೂ. ಎಲ್ಲರ ಮೇಲೆ, ಮಕ್ಕಳ ಮೇಲೂ ರೇಗಾಟ, ಕೋಪ ತಾಪ ಬಿಟ್ಟಿಲ್ಲ, ಇದು ಸಾಧನೆಯ ಲಕ್ಷಣವಾ? ಇಂತಹ ಸಾಧನೆ ’ನಮಗೆ ಯಾರಿಗೂ ಬೇಡಪ್ಪಾ’ ಅಂತ ಎಲ್ಲರೂ ದೂರ ಓಡ್ತಾರೆ.

ತುಂಬಾ ಜನ ಯುವಕರು ದೂರ ಹೋಗಿರುವುದು ಇದಕ್ಕೇ, ಮನೇಲಿ  ಅಣ್ಣ, ಅಮ್ಮ, ತಾತ, ಅಜ್ಜಿ, ಎಲ್ಲಾ ಪೂಜೆ ಮಾಡಿದ್ದೂ, ಮಾಡಿದ್ದೇ, ಘಂಟೆ ಬಾರಿಸಿದ್ದೂ ಬಾರಿಸಿದ್ದೇ, ಗಂಧ ತೇದದ್ದೂ ತೇದದ್ದೇ, ನಾಮ ಹಾಕಿದ್ದೂ ಹಾಕಿದ್ದೇ! ಭಕ್ತಿಯ ಭ್ರಮೆ -ಕೋಪ ತಾಪ ಮಾತ್ರ ಕಡಿಮೆಯಾಗಿಲ್ಲ. ಇದನ್ನು ನೋಡಿ ಜನಗಳಿಗೆ ಬೇಸರಿಕೆ ಬಂದುಬಿಡುತ್ತದೆ.

ಎಷ್ಟೋ ಮಠದ ಸ್ವಾಮಿಗಳು ಹೀಗೇ ಮಾಡ್ತಾರೆ. ಸಿಕ್ಕಾಪಟ್ಟೆ ಕೋಪ ತಾಪ! ಜನಗಳು ಭಕ್ತಿಭಾವಗಳಿಂದ ಬರ್ತಾರೆ. ಮಠಾಧಿಪತಿಯ ವರ್ತನೆ - ಅಹಂಕಾರ, ದರ್ಪ, ಕ್ರೋಧ ಕ೦ಡು ಭಾರೀ ಬೇಸರಿಕೆ, ಭಯ ಉಂಟಾಗಿಬಿಡುತ್ತದೆ ಜನಗಳಿಗೆ.

ಆನಂದಮಯವಾಗಿರಬೇಕು ಚೇತನ.ಆ ಆನಂದ ನಮಗೆ ಮಾತ್ರವಲ್ಲ...ನಮ್ಮ ಹತ್ತಿರ ಬಂದವರಲ್ಲೆಲ್ಲಾ ಆ ಆನಂದದ ಸ೦ಚಲನವಾಗಬೇಕು. ಅ೦ಥ ಆನಂದದ ಪ್ರಾಪ್ತಿಯೇ ನಿಜವಾದ ಸಾಧನೆಯ ಲಕ್ಷಣ, ಜೀವನದ ಲಕ್ಷ್ಯ.

* * * * *

ಸಂಪತ್ತು
ಸಂಪತ್ತು ಯಾರಿಗೆ ಬೇಡ? ಐಶ್ವರ್ಯವನ್ನು ಬಯಸದವರಿಲ್ಲ. ಆದರೆ ಎಂತಹ ಸಿರಿವ೦ತಿಕೆಯನ್ನು ಬಯಸುವುದು ಒಳಿತು?

ಕೆಲವು ಸಲ ಸಂಪತ್ತು ಬರುತ್ತೆ. ಅದರ ಹಿಂದೆಯೇ ವಿಪತ್ತು ಬಂದುಬಿಡುತ್ತೆ!.ದೊಡ್ಡ ದೊಡ್ಡ ಶ್ರೀಮಂತರು ಹೊರಗಡೆ ನಗುನಗುತ್ತಾ ಇರಬಹುದು, ನಿಜವಾಗಲೂ ಒಳಗಡೆ ಇಣುಕಿ ನೋಡಿ -.ಅವರ ಮನಸ್ಸಿನಲ್ಲಿ ಪ್ರಸನ್ನತೆಯೇ ಇಲ್ಲ. ಮನಸ್ಸು ಪ್ರಸನ್ನವಾಗಿಲ್ಲದಿದ್ದ ಮೇಲೆ ಆ ಸಂಪತ್ತು, ಆ ಜೀವನ ಯಾತಕ್ಕೆ ಬೇಕಾಗಿದೆ? ಕೊರಗು, ಕೊರಗು, ಆ ಕೊರಗಿನಲ್ಲೇ ಸಾಯೋದು!

ನಮ್ಮ ಮಾಜಿ ಪ್ರಧಾನಮಂತ್ರಿ ಒಂದು ಸಾರಿ ಭೇಟಿ ಮಾಡಿದಾಗ ಅಂದರು, ‘ನೋಡಿ ಗುರುಗಳೇ ನಾನು ಪ್ರಧಾನಮಂತ್ರಿ ಆಗುವುದಕ್ಕೆ ಮೊದಲು ಬಿಸಿಲುಕಾಲದಲ್ಲಿ ಇಲ್ಲೇ ಹೊರಗಡೆ ಮಂಚ ಹಾಕಿಕೊಂಡು ನಮ್ಮಗಾರ್ಡನ್ನಿನಲ್ಲೇ ನಿದ್ದೆ ಮಾಡ್ತಾ ಇದ್ದೆ. ಈಗ ನೋಡಿ ಐವತ್ತು ಜನ ಸುತ್ತಮುತ್ತ ಇದ್ದಾರೆ, ಎಲ್ಲಾ ಕಡೆ ಸೆಕ್ಯೂರಿಟಿ! ತಿಹಾರ್ ಜೈಲಿನಲ್ಲಿರುವ ಕೈದಿಗಿಂತ ದೊಡ್ಡ ಕೈದಿ ಆಗಿಬಿಟ್ಟಿದ್ದೀನಿ ಈಗ!’

ಶಾಂತಿ ತಂದು ಕೊಡತಕ್ಕಂಥ ಧನ ಸಂಪತ್ತಾಗಬೇಕು. ಎಷ್ಟೋ ಸಲ ಸಂಪತ್ತು ಬರುತ್ತೆ, ಅದರ ಹಿಂದೆಯೇ ಬೇಕಾದಷ್ಟು ಸಮಸ್ಯೆಗಳು ಬಂದುಬಿಡುತ್ತವೆ. ಇವತ್ತಿನ ದಿನ ಕೋರ್ಟಿನಲ್ಲಿರುವ ಶೇಕಡಾ ಎಪ್ಪತ್ತೈದು ಎಂಭತ್ತು ಕೇಸುಗಳಿಗೆ ಮೂಲ ಕಾರಣ ಸಂಪತ್ತೇ! ಜನಗಳ ಮಧ್ಯೆ, ಆಪ್ತ ಬಂಧುಗಳ ಮಧ್ಯೆಯೂ ಸಂಘರ್ಷ ಉಂಟಾಗುವುದು ಸಂಪತ್ತಿನಿಂದಲೇ!

ಕೆಲವು ಸಲ ಸಂಪತ್ತು ಬರುತ್ತೆ, ಜೊತೆಗೆ ರೋಗವೂ ಬರುತ್ತೆ. ಅಲ್ಸರ್, ಡಯಾಬಿಟೀಸ್, ಹಾರ್ಟ್ಅಟ್ಯಾಕ್, ಇನ್ನೂ ಏನೇನೋ!

ಸಂಪತ್ತಿನಿಂದ ನಮ್ಮ ತಲೆ ತಿರುಗಿತು, ಕೊಬ್ಬಾಯ್ತು, ವೈಮನಸ್ಯ ಉಂಟಾಯ್ತು, ಬೇಸರಿಕೆ ಉಂಟಾಯ್ತು...ಆ ತರಹ ಸಂಪತ್ತು ಬಂದು ಏನು ಪ್ರಯೋಜನ? ನಿಜವಾದ ಸಂಪತ್ತು ಆನಂದದಿಂದ, ಪ್ರೇಮದಿಂದ ತುಂಬಿರತಕ್ಕಂಥಹುದು, ಪ್ರಸನ್ನತೆಯಿಂದಿರುವುದು.ದೈವಿಕ ಗುಣಗಳ ನಿಜವಾದ ಸಂಪತ್ತು, ನಮ್ಮೊಳಗೇ ಇದೆ. ಅದು ನಮ್ಮ ಅಸ್ತಿತ್ತ್ವವೇ ಆಗಿದೆ. ನಾವು ಗುರುತಿಸಬೇಕಾಗಿದೆ ಅಷ್ಟೆ.

* * * * *

ಪ೦ಡ ಉ೦ಡು ಸುಸ್ತಾದ!
ತುಂಬಾ ತಿಂದ ದಿನ ಏನೂ ಉತ್ಸಾಹವೇ ಇರುವುದಿಲ್ಲ ಹೌದಲ್ಲ?
ತಿಥಿ ಊಟ ಮಾಡುವ ಬ್ರಾಹ್ಮಣರು ಇರುತ್ತಾರೆ (ಮಥುರಾ ಕ್ಷೇತ್ರದಲ್ಲಿ ಇವರು ಸಾಮಾನ್ಯ). ಅವರನ್ನು ’ಪಂಡ’ ಅಂತ ಕರೀತಾರೆ. ಎಲ್ಲಿ ತಿಥಿಯೋ ಅಲ್ಲಿ ಊಟ ಮಾಡೋದು. ಅವರಿಗಿದೇ ಕೆಲಸ. ಕೆಲವು ಸಾರಿ ತುಂಬಾ ಜನ ಸಾಯ್ತಾ ಇದ್ದಾಗ ಇವರಿಗೆ ಬೇಡಿಕೆ ಹೆಚ್ಚಾಗಿರುತ್ತೆ. ಒಂದೇ ದಿನ ಐದಾರು ಜನ ಸತ್ತರೆ, ಐದಾರು ಕಡೆ ಹೋಗಬೇಕಲ್ಲ! ಒಂದು ಸಲ ಈ ರೀತಿ ಹೋದಾಗ ತಂದೆ ಮಗನನ್ನು ಕರೆದುಕೊಂಡು ಹೋಗಿದ್ದರು - ಯಾರು ಹೆಚ್ಚು ತಿಂತಾರೆ ಅಂತ...
ಮಗ ತಿನ್ನುತ್ತಿದ್ದ ಹಾಗೆ ಮಧ್ಯೆ ಒಂದು ಗ್ಲಾಸ್ ನೀರು ಕುಡಿದುಬಿಟ್ಟ. ತಂದೆಗೆ ಸಿಟ್ಟು ಬಂತು. ಎತ್ತಿ ಅವನಿಗೊಂದು ಕಪಾಳಕ್ಕೆ ಹೊಡೆದರು, ’ನೀರು ಯಾಕೆ ಕುಡೀತೀಯ ಊಟ ಮಾಡು’ ಅಂತ. ಬೇರೆ ಏನೂ ಹೆಚ್ಚು ಮಾತಾಡುವುದಕ್ಕೆ ಆಗಲಿಲ್ಲ. ಮನೆಗೆ ಬಂದ ಮೇಲೆ ಆತನನ್ನು ಕೇಳಿದರು, ’ಯಾಕೆ ನೀರು ಕುಡಿದೆ ನೀನು?’ ಅಂತ.
’ಏನಪ್ಪಾ ತಿಂದದ್ದೆಲ್ಲಾ ಚೆನ್ನಾಗಿ ಸೆಟ್ಲ್ ಆಗ್ಲಿ ಅಂತ. ಅದರಿ೦ದ ಇನ್ನೂ ಹೆಚ್ಚು ತಿನ್ನಲು ಸಾಧ್ಯವಾಯಿತು’ ಅಂತ ಉತ್ತರಿಸಿದ ಮಗ.
ಅದಕ್ಕೆ ತಂದೆ ಇನ್ನೂ ಒಂದು ಕಪಾಳಕ್ಕೆ ಬಾರಿಸಿ,.’ಮೊದಲೇ ಯಾಕೆ ಹೇಳ್ಲಿಲ್ಲಾ, ನಾನೂ ಆ ತರಹ ಮಾಡ್ತಾ ಇದ್ದೆ’ ಅಂತ.
ಅದೇ ಸ೦ದರ್ಭದಲ್ಲಿ (ಮಧ್ಯಾಹ್ನ ಒಂದು ಘಂಟೆಯಿರಬಹುದು) ಮನೆಯಲ್ಲಿ ಆ ತ೦ದೆ-ಮಗನ ಮನೆಯ ಯಜಮಾನಿ ಹಾಸಿಗೆ ಹಾಸುತ್ತಾ ಇದ್ದದ್ದನ್ನು ಕ೦ಡ ಪಕ್ಕದ ಮನೆಯಾಕೆ, ’ಏನಮ್ಮಾ ಇಷ್ಟು ಹೊತ್ತಿಗೇ ಹಾಸಿಗೆ ಹಾಸ್ತಾ ಇದ್ದೀಯ’ ಎಂದು ಪ್ರಶ್ನಿಸಿದರು.
’ಅವರು ಶ್ರಾದ್ಧದ ಊಟಕ್ಕೆ ಹೋಗಿದಾರೆ, ಬಂದ ತಕ್ಷಣ ಮಲಗಿಬಿಡ್ತಾರೆ, ಸುಸ್ತಾಗಿರ್ತಾರೆ. ಹಾಸಿಗೆ ಹಾಸಿರುವ ದೃಶ್ಯ ಇಲ್ಲದಿದ್ದರೆ ಕೋಪ ಬಂದುಬಿಡುತ್ತೆ, ಆದ್ದರಿಂದ ಎಲ್ಲ ರೆಡಿ ಮಾಡಿರ್ತೀನಿ’ ಎ೦ಬ ಉತ್ತರ ಈಕೆಯದಾಗಿತ್ತು.
ಆ ಮಾತಿಗೆ ಪಕ್ಕದ ಮನೆಯಾಕೆ, ’ಪರವಾಗಿಲ್ಲ ನಿಮ್ಮೆಜಮಾನರಾದರೆ ಇಲ್ಲಿಗೆ ಬಂದು ಮಲಗ್ತಾರೆ, ನಮಗಂತೂ ಹಾಸಿಗೆ ಅಲ್ಲಿಗೇ ಕಳಿಸಬೇಕಾಗುತ್ತೆ, ಅವರು ಅಲ್ಲೇ ಮಲಗಿಬಿಡ್ತಾರೆ, ಬರುವುದಕ್ಕೂ ಆಗಲ್ಲ ಅವರಿಗೆ’ ಎ೦ದು ಪ್ರತಿಕ್ರಿಯಿಸಿದರು!