ಶುಕ್ರವಾರ, ಜುಲೈ 13, 2012

ಕಲೆಯನ್ನು ಅರ್ಥೈಸೋಣ

13
2012
Jul
ಬಾಡ್ ಆಂತೋಗಾಸ್ತ್, ಜರ್ಮನಿ

ತ್ತಲೆ ಕುರಿತು ಮಾತನಾಡಲು ನೀವೇಕೆ ಇಚ್ಚಿಸುತ್ತೀರಿ?
ಬ್ರಹ್ಮಾಂಡವೆಲ್ಲಾ ಕತ್ತಲಿನಿಂದ ಆವರಿಸಲ್ಪಟ್ಟಿದೆ - ನಿಗೂಢ ಶಕ್ತಿ(ಡಾರ್ಕ್ ಎನರ್ಜಿ) ಮತ್ತು ನಿಗೂಢದ್ರವ್ಯ(ಡಾರ್ಕ್ ಮ್ಯಾಟರ್). ಇಂದಿನ ವಿಜ್ಞಾನಿಗಳು ಹೇಳುತ್ತಾರೆ, ನಿಮಗೆ ಇಂದು ಕಾಣುವ ಬೆಳಕು ಕೇವಲ ಒಂದು ಚುಕ್ಕೆ; ಅದು ನೀರಿನ ಬಾಟಲಿಯಲ್ಲಿನ ಗುಳ್ಳೆಯಂತೆ.ಬೆಳಕು ನೀರಿನ ಬಾಟಲಿಯಲ್ಲಿನ ಗುಳ್ಳೆಯಂತೆ.ಆದರೆ ನೀರು ನಿಜವಾದ ವಸ್ತು.ಗುಳ್ಳೆ ಸುಮ್ಮನೆ ಕಾಣಿಸಿಕೊಳ್ಳುವುದಷ್ಟೆ.ಅದು ನಿಜವಾದ ವಸ್ತುವಲ್ಲ.
ಹಾಗಾಗಿ ನಮಗೆ ಕಾಣಿಸುವ ಸೂರ್ಯ ಖಂಡಿತ ಶಕ್ತಿಯ ಮೂಲ. ಆದರೆ ವಿಜ್ಞಾನಿಗಳು ಹೇಳುವುದು, ಆ ಸೂರ್ಯನನ್ನು ಧೃಢವಾಗಿ, ಗೋಲಾಕಾರದಲ್ಲಿ ಇಡುವಂಥದ್ದು ಅದರ ಸುತ್ತಲಿನ ನಿಗೂಢಶಕ್ತಿ.ಹಾಗೆ ನಿಗೂಢದ್ರವ್ಯ ಮತ್ತು ನಿಗೂಢಶಕ್ತಿ ಸೂರ್ಯನಿಗಿಂತ ಮಿಲಿಯಗಟ್ಟಲೆ ಪಾಲು ಹೆಚ್ಚು ಶಕ್ತಿಯುತ.

ನೀರಿನ ಬಾಟಲಿಯೊಳಗಿನ ಗಾಳಿಯ ಗುಳ್ಳೆಯು ನೀರಿನ ಎಲ್ಲಾ ಕಣಗಳ ಒತ್ತಡದಿಂದ ಬಂಧಿಸಲ್ಪಟ್ಟಂತೆ, ಪೂರ್ಣ ಬ್ರಹ್ಮಾಂಡವು ನಿಮಗೆ ಅರಿವಿಲ್ಲದ, ಗೋಚರವಾಗದ ಶಕ್ತಿಯಿಂದ ತುಂಬಿದೆ.ಮತ್ತೆ ನೀವು ಅಲ್ಲಿ ಏನೂ ಇಲ್ಲ ಅಂದುಕೊಳ್ಳುತ್ತೀರಿ.

ವಿಜ್ಞಾನಿಗಳು ಹೇಳುವಂತೆ ಕಪ್ಪು ಕುಳಿಗಳು(ಬ್ಲ್ಯಾಕ್ ಹೋಲ್ಸ್) ಸೂರ್ಯನನ್ನೇ ನುಂಗಿ ಬಿಡಬಹುದು.  ನಮ್ಮ ಭೂಮಿ, ಆ ಸೂರ್ಯ ಮತ್ತು ಸೌರವ್ಯೂಹ ಬೃಹತ್ ಕಪ್ಪು ಕುಳಿಗಳಿಂದ ತಪ್ಪಿಸಿ ಅವುಗಳ ನಡುವಿನ ಸಂಧಿಯಲ್ಲಿ ಚಲಿಸುತ್ತಿವೆ.
ಬ್ರಹ್ಮಾಂಡದಲ್ಲಿ ಹಲವಾರು ಕಪ್ಪು ಕುಳಿಗಳಿವೆ, ಸೂರ್ಯ ಸ್ವಲ್ಪವಾದರೂ ಅದರ ಹತ್ತಿರ ಸುಳಿದರೆ, ಅದು ಸೂರ್ಯನನ್ನು ಪೂರ್ತಿಯಾಗಿ ಸೆಳೆದುಕೊಳ್ಳುತ್ತದೆ ಮತ್ತೆ ಅದು ಎಲ್ಲಿ ಮರೆಯಾಗುತ್ತದೆಂಬುದು ಯಾರಿಗೂ ತಿಳಿಯದು. ಹಾಗೆ ಸಂಪೂರ್ಣ ಜಗತ್ತು ಈ ಅಗೋಚರ ಶಕ್ತಿಯಿಂದ ತುಂಬಿದೆ, ಆದ್ದರಿಂದ ಅದನ್ನು ನಿಗೂಢಶಕ್ತಿ ಅಥವಾ ನಿಗೂಢದ್ರವ್ಯ ಎಂದು ಕರೆಯುವುದು.

ಪ್ರ: ಕಲೆ ಎಂದರೇನು? ಕವಿತೆ ಎಲ್ಲಿಂದ ಸೃಜನವಾಗುವುದು ಮತ್ತು ಅದು ಏನು ಮಾಡುತ್ತದೆ?
ಶ್ರೀ ಶ್ರೀ:
ಓ! ನೀವು ಮೆಚ್ಚಿಕೊಳ್ಳುವಂಥದ್ದೆಲ್ಲಾ ಕಲೆಯಾಗುತ್ತದೆ.ನೀವೆಲ್ಲೋ ಕಲ್ಲುಗಳ ರಾಶಿಯನ್ನು ನೋಡಿ ಅದು ಕೇವಲ ಕಲ್ಲುಗಳ ರಾಶಿ ಎಂದು ಯೋಚಿಸುತ್ತೀರಿ.ಆದರೆ ಅದು ಸ್ವಲ್ಪ ಕ್ರಮವಾಗಿಡಲ್ಪಟ್ಟರೆ, ನೀವು ಅದನ್ನು ಮೆಚ್ಚಲಾರಂಭಿಸುತ್ತೀರಿ.ಆಗ ಅದು ಒಂದು ಕಲೆಯಾಗುತ್ತದೆ.
ಒಂದು ಕಾಗದದ ಹಾಳೆಯಲ್ಲಿ ನೀವು ಬಣ್ಣಗಳನ್ನು ಚಿಮುಕಿಸಿ ಅಥವಾ ಎರಚಿ ಮತ್ತೆ ಅದನ್ನು ಚಿತ್ರಕಲೆಯೆಂದು ಮೆಚ್ಚಿಕೊಂಡಾಗ ಅದು ಒಂದು ಕಲೆಯಾಗುತ್ತದೆ.ಅದು ನಿಮಗೊಂದು ಅರ್ಥ ನೀಡುತ್ತದೆ ಅಲ್ಲವೇ?ಮತ್ತೆ ಕವಿತೆಯು ಮನಸ್ಸಿನ ಒಂದು ಸೂಕ್ಷ್ಮ ಮಟ್ಟದಿಂದ ಬರುತದೆ.ನಿಮ್ಮ ಉಸಿರು ಒಂದು ನಿರ್ದಿಷ್ಠ ಲಯದಲ್ಲಿ ಹರಿದಾಗ, ನಿಮ್ಮಲ್ಲಿನ ಒಂದು ನಿರ್ದಿಷ್ಠ ನಾಡಿ ತೆರೆದಾಗ, ಆ ನಿರ್ದಿಷ್ಠ ಕ್ಷಣದಲ್ಲಿ, ನಿಮ್ಮೊಳಗೆ ಸೃಜನವಾಗಿ ನೀವು ಬರೆಯುತ್ತೀರಿ.ಹಾಗಿರುವಾಗ ಪದಗಳು ಪ್ರಾಸವಾಗುತ್ತವೆ. ಹಾಗಾಗಿ ಅದೊಂದು ವರ! ಕಲ್ಪನೆಯೊಂದು ವರ.

ಇದೆಲ್ಲಾ ಪ್ರಜ್ಞೆಯು ಹೇಗೆ ತನ್ನನ್ನು ಅಭಿವ್ಯಕ್ತಪಡಿಸುತ್ತದೆ ಎಂಬುದರಲ್ಲಿದೆ; ನಿಮ್ಮ ಮನಸ್ಸು ಹೇಗೆ ತನ್ನನ್ನು ಅಭಿವ್ಯಕ್ತಪಡಿಸುತ್ತದೆ.ಮತ್ತೆ ನೀವು ಅದನ್ನು ಮೆಚ್ಚಿದಾಗ, ಅದು ಕಲೆಯಾಗುತ್ತದೆ.
ನಿವು ಅದನ್ನು ಮೆಚ್ಚದೇ ಸುಮ್ಮನೆ ಕೆಲವು ಪದಗಳನ್ನು ಹೇಳಿದರೆ, ಅದು ಕಲೆಯಲ್ಲ. ನೋಡಿ ಆಧ್ಹುನಿಕ ಕವಿತೆಯನ್ನು ಮೆಚ್ಚಲು ಒಂದು ಮಟ್ಟದ ಬುದ್ಧಿಮತ್ತೆ ಅವಶ್ಯಕ.
ನೀವು ಆಧುನಿಕ ಕವಿತೆಯನ್ನು ಓದಿದ್ದೀರಾ?ನಿಮಗಾಗಿ ಒಂದು ಕವಿತೆ ಓದೋಣ.

ಎಲೆಯು ನೆಲದಿ ಕದಡಿತು; ನೀರು ಅದನೆತ್ತಿ ಸಾಗಿತು.

ಅಷ್ಟೇ. (ನಗು)

ನೀವು ಅದರಲ್ಲಿ ಪದಗಳನ್ನು ಜೋಡಿಸುವ ರೀತಿ - ಎಲೆಯು ನೆಲದಿ ಕದಡಿತು; ನೀರು ಅದನೆತ್ತಿ ಸಾಗಿತು - ಇದು ಕವಿತೆ.

ಈಗ ಇದರಲ್ಲಿ ಒಂದೇ ಸಲಕ್ಕೆ ಹಲವಾರು ಅರ್ಥಗಳನ್ನು ಕಾಣಬಹುದು.
ಎಲೆಯೊಂದು ನೆಲದ ಮೇಲಿತ್ತೋ ಅಥವಾ ಗಾಳಿಯಲ್ಲಿ ತೇಲಿ ನೆಲಕ್ಕೆ ಬಂತೋ..ಅಂದರೆ ಅದು ನಿರ್ಜೀವವಾಗುತ್ತಿರಬಹುದು.ಅದು ನೆಲಕ್ಕೆ ಬಿದ್ದಾಗ ಅದನ್ನು ಪ್ರೇಮ ಎತ್ತಿ ಸಾಗುತ್ತಿದೆ- ನೀರು ಪ್ರೇಮಕ್ಕೆ ಸಮಾನಾರ್ಥಕವಾಗಿದೆ.
ನೀರು ಅದನೆತ್ತಿ ಸಾಗುತ್ತಿದೆ, ಹೌದು! ಅಂದರೆ ಪ್ರತಿ ಸಂದಿಗ್ಧ ಪರಿಸ್ಥಿತಿಯಲ್ಲೂ ಆಶಾಕಿರಣವಿದೆ ಎಂಬ ಅರ್ಥವಿರಬಹುದು.
ಆದ್ದರಿಂದ ನೀವು ಇದನ್ನು ವಿಧ ವಿಧವಾಗಿ ಅರ್ಥೈಸಿಕೊಳ್ಳಬಹುದು.ಕವಿತೆಯ ಗುಣವದು.ಪದಗಳು ಭಾವನೆಗಳನ್ನು ಸ್ವಲ್ಪ ತೆರೆದಿಟ್ಟು, ಸ್ವಲ್ಪ ಗೂಢವಾಗಿಟ್ಟು ಸಾಗುತ್ತವೆ.
ಕವಿತೆ ಎಂಬುದು ಭಾವನೆಗಳು ಧರಿಸಿದ ಪದಗಳು, ಸ್ವಲ್ಪ ತೆರೆದಿಟ್ಟ ಮತ್ತು ಸ್ವಲ್ಪ ಮರೆಯಲ್ಲಿರುವ ಭಾವನೆಗಳು..ಸ್ವಲ್ಪ ಸ್ಥೂಲ, ಸ್ವಲ್ಪ ಸೂಕ್ಷ್ಮ.

ಒಬ್ಬ ಕವಿ ದೇವರಿಗೆ ಹೇಳಿದನು, ’ನೀನು ಪ್ರಪಂಚವನ್ನು ಆಳುತ್ತಿದ್ದಿ.ಆದರೆ ಅದನ್ನು ಇನ್ನೂ ಸ್ಪಷ್ಟಪಡಿಸು’(ನಗು).
ಯಾರಿಗೆ ಇದು ವ್ಯಕ್ತವೋ ಅವರು ಸನ್ಯಾಸಿ(ಸಾಧು)ಗಳಾದರು. ಯಾರಿಗೆ ನೀನು(ದೇವರು) ಪ್ರಪಂಚವನ್ನು ಆಳುತ್ತಿರುವುದು ಅರಿಯದೋ, ಅವರು ಒದ್ದಾಡುತ್ತಾರೆ. ಇದನ್ನು ನೀವು ಈ ರೀತಿ ಅರ್ಥಮಾಡಿಕೊಳ್ಳಬಹುದು ಅಲ್ಲವೆ?!

ನಿಮ್ಮನ್ನು ಯಾರಾದರೂ ಮೆಚ್ಚಿದರೆ ’ಓ, ಆ ವ್ಯಕ್ತಿ ನನಗೆ ಗಾಳಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳುತ್ತೀರಿ.ಅವರು ನಿಮ್ಮನ್ನು ಮೆಚ್ಚದಿದ್ದರೆ, ’ಅವರಿಗೆ ಹೊಟ್ಟೆ ಕಿಚ್ಚು’ ಎಂದು ಭಾವಿಸುತ್ತೀರಿ.ಅದೇ ರೀತಿ ನೀವು ಶ್ರೀಮಂತರಾಗಿದ್ದರೆ, ನೀವು ಯೋಚಿಸುತ್ತೀರಿ, ’ನಾನು ಶ್ರೀಮಂತನಾಗಿರುವುದರಿಂದ ಅವರು ನನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.ಅವರು ನನ್ನ ಜೇಬಿನ ಮೇಲೆ ಆಸಕ್ತರು.’ ಅವರು ನಿಮ್ಮನ್ನು ಸತ್ಕರಿಸದಿದ್ದರೆ, ಅವರಿಗೆ ಅಹಂಕಾರ, ಅಸೂಯೆ ಎಂದು ನೀವು ಹೇಳುತ್ತೀರಿ.ಅಬ್ಬಾ ದೇವರೇ!ಮನಸ್ಸು ಎಷ್ಟೊಂದು ಸಂಚುಗಳನ್ನಾಡುತ್ತದೆ.

ಹಾಗೆಯೇ ಒಬ್ಬರು ಕಾರ್ಮಿಕ ಸಂಘ ಮನೋಭಾವಕ್ಕೆ ಹೋಗಬಹುದು.ಕಾರ್ಮಿಕ ಸಂಘ ಮನೋಭಾವ ಎಂದರೇನು ಗೊತ್ತಾ? ’ನಾನು ಯಾರ ಮಾತನ್ನೂ ಕೇಳುವುದಿಲ್ಲ! ಎಲ್ಲರೂ ನನ್ನ ವಿರುದ್ಧ ನಿಂತಿದ್ದಾರೆ.’ ಯಾರು ನಿಮ್ಮ ವಿರುದ್ಧವಾಗಿದ್ದರೆ?!ಮನಸ್ಸು ಅದರ ಬಗ್ಗೆ ಒಂದು ದೊಡ್ಡ ಭ್ರಮೆಯನ್ನೇ ರಚಿಸುತ್ತದೆ. ’ಯಾರೋ ನನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ, ನನ್ನನ್ನು ಆಳಲು ಮತ್ತು ಪೀಡಿಸಲು  ಪ್ರಯತ್ನಿಸುತ್ತಿದ್ದಾರೆ.’

ಒಮ್ಮೆ ಒಬ್ಬರು ನನ್ನ ಬಳಿ ಬಂದು ಹೇಳಿದರು ’ಕಛೇರಿಯಲ್ಲಿ ಎಲ್ಲರೂ ನನ್ನನ್ನು ಪೀಡಿಸುತ್ತಿದ್ದಾರೆ.’ ಎಲ್ಲರೂ ನಿಮ್ಮನ್ನು ಹೇಗೆ ಪೀಡಿಸಬಹುದು? ನೀವು ನಿಜವಾಗಿ ಏನೋ ಘೋರ(ಅಸಹನೀಯ)ವಾದದ್ದು ಮಾಡುತ್ತಿರಬೇಕು. ’ಕಛೇರಿಯಲ್ಲಿ ಎಲ್ಲರೂ ನನ್ನನ್ನು ಪೀಡಿಸುತ್ತಿದ್ದಾರೆ’- ಇದು ಕಾರ್ಮಿಕ ಸಂಘ ಮನೋಭಾವ. ಒಬ್ಬರಿಗೆ ತಮ್ಮ ಬಗ್ಗೆ ನೆಮ್ಮದಿ ಅನಿಸುವುದಿಲ್ಲ, ಹಾಗಾಗಿ ಅವರು ಅದನ್ನು ಉಳಿದವರ ಮೇಲೆ ಹೇರುತ್ತಾರೆ, ’ಎಲ್ಲರೂ ಕೆಟ್ಟವರು. ಎಲ್ಲರೂ ನನ್ನನ್ನು ಗುರಿಪಡಿಸುತ್ತಿದ್ದಾರೆ!’ ಯಾರು ನಿಮ್ಮನ್ನು ಗುರಿಪಡಿಸುತ್ತಿದ್ದಾರೆ?ನಿಮ್ಮನ್ನು ಪೀಡಿಸಿ, ದುಃಖಿಸಿ ಅವರಿಗೇನು ಸಿಗುತ್ತದೆ?ನಿಮ್ಮನ್ನು ನೀವೇ ದೀನತೆಗೆ,ಸಂಕಷ್ಟಕ್ಕೆ ಈಡು ಮಾಡುತ್ತಿದ್ದೀರಿ. ತಿಳಿಯಿತೇ?

ಬಹಳ ಸಂಸ್ಥೆಗಳಲ್ಲಿ, ಇಂಥ ಒಂದು ನಿರ್ವಾಹಕ ಕೂತಿರುವುದರಿಂದ, ಅಲ್ಲಿಯ ಸಿಬಂದಿ ವರ್ಗ ಕಷ್ಟ ಅನುಭವಿಸುತ್ತದೆ.ಅವನು ತನ್ನ ಶಕ್ತಿಯನ್ನು ತೋರಿಸಬೇಕೆಂದು ಎಲ್ಲಾ ರೀತಿಯ ಸಂಚುಗಳನ್ನು ಆಡುತ್ತಾನೆ.ತಾನು ಕುಳಿತಿರುವಂಥ ಮರವನ್ನು ಕಡಿಯುತ್ತಿದ್ದೇನೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ.

ಇಂಥ ಜನರಿದ್ದಾರೆ.ವರ್ಲ್ಡ್ ಬ್ಯಾಂಕ್.ಗೆ ಜೀವನ ಕಲೆಯ ಇಬ್ಬರು ಶಿಕ್ಷಕರು ಹೋಗಿ ಟಿ.ಎಲ್.ಇ.ಎಕ್ಸ್(TLEX) ಕಾರ್ಯಕ್ರಮವನ್ನು ಆಯೋಜಿಸಿದರು ಮತ್ತು ಇಂಥ ಹಲವು ವಿಷಯಗಳು ಮೂಡಿ ಬಂದವು.ಅಲ್ಲವೇ?ಈಗ ಅವರಲ್ಲಿ ಸಂಪೂರ್ಣ ಬದಲಾವಣೆ ಇದೆ, ಕೇವಲ 3 ದಿನಗಳಲ್ಲಿ, 3 ಘಂಟೆ ಪ್ರತಿದಿನದಂತೆ.ಮತ್ತು ವರ್ಲ್ಡ್ ಬ್ಯಾಂಕ್.ನ ಎಲ್ಲಾ ಸಿಬಂದಿಗಳು ಈ ಶಿಬಿರವನ್ನು ಮಾಡಬೇಕು ಎಂದು ಹೇಳಿದ್ದಾರೆ.ಜೀವನ ಕಲೆಯ TLEX ಕಾರ್ಯಕ್ರಮವನ್ನು ಅವರು ತಮ್ಮ ಮುಖಂಡ ತರಬೇತಿ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ.

ಅವರು ಆಫ಼್ರಿಕಾ ಮತ್ತು ವಿವಿಧ ದೇಶಗಳಲ್ಲಿ, ಮುಖಂಡರು ಸುದರ್ಶನಕ್ರಿಯೆಯನ್ನು ಮಾಡಬೇಕೆಂದೂ ಹೇಳಿದ್ದಾರೆ.ಅದಕ್ಕೆ ದೀರ್ಘ(ಶಿಬಿರದಲ್ಲಿ ಮಾಡಿಸುವಂಥ) ಕ್ರಿಯಾ ಅಜೀರ್ಣವಾಗುವುದರಿಂದ, ಲಘು (ಮನೆಯಲ್ಲಿ ಮಾಡುವಂಥ) ಸುದರ್ಶನ ಕ್ರಿಯೆಯನ್ನು ಅಳವಡಿಸಿದ್ದೇನೆ.ಇದು ಜನರ ಮನಮುಟ್ಟಿ ಅವರನ್ನು ಜಾಗೃತಗೊಳಿಸುತ್ತಿದೆ.ಇದಿಲ್ಲದೆ ಬಹಳ ದೇಶಗಳಲ್ಲಿ ಜನರು ಅನ್ಯರಿಂದ ಮೋಸಕ್ಕೊಳಗಾಗಿರುವ ಪ್ರಜ್ಞೆ ಹೊಂದಿದ್ದಾರೆ.

ಮೋಸಕ್ಕೆ ತುತ್ತಾದ ಪ್ರಜ್ಞೆ ಈ ಜಗತ್ತನ್ನು ಮತ್ತೆ ಮತ್ತೆ ಕಾಡುತ್ತದೆ ಮತ್ತು ಅದರಿಂದಾಗಿಬಹಳ ದೇಶಗಳು ಬಡವಾಗಿ ಉಳಿಯುತ್ತವೆ.ಯಾಕೆಂದರೆ ಅಲ್ಲಿ ಜನರು ’ನಾನು ಬಲಿಪಶು’ ಎಂದು ಯೋಚಿಸುತ್ತಾರೆ.ನೀವೊಬ್ಬ ಮೋಸಕ್ಕೀಡಾದ ವ್ಯಕ್ತಿ ಎಂದು ನೀವು ಯೋಚಿಸಿದಾಗ ನಿಮ್ಮಲ್ಲಿ ಬಲವಿರುವುದಿಲ್ಲ ಮತ್ತು ನಿಶ್ಶಕ್ತ ಭಾವನೆ ಮೂಡುತ್ತದೆ.

ಮಹಿಳಾ ಸಶಕ್ತೀಕರಣದಲ್ಲೂ ಇದೇ.ನಿಮ್ಮನ್ನು ಸಶಕ್ತೀಕರಿಸಲು ಯಾರನ್ನೂ ಕೇಳಿಕೊಳ್ಳಬೇಡಿ.ನಿಮಗೊಂದು ಸ್ಥಾನವಿದೆ, ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಿ.ಜನರಲ್ಲಿ ಹೋಗಿ ’ನೀವು ನಮ್ಮನ್ನು ಸಶಕ್ತೀಕರಿಸಬೇಕು’ ಎಂದು ಕೇಳಿಕೊಳ್ಳಬೇಡಿ.ಹಲವು ಮಹಿಳಾ ಕ್ರಾಂತಿಕಾರಿಗಳು ಬಹಳ ಸಿಟ್ಟಿನಿಂದಿರುತ್ತಾರೆ ಅಲ್ಲವೇ?ಅವರು ಬಹಳ ಗಾಬರಿಗೊಂಡ ಮತ್ತು ಕೋಪಿಷ್ಠರಾಗಿರುತ್ತಾರೆ. ಅವರಲ್ಲಿ ಯಾವತ್ತೂ ಬಂಡಾಯ ಮತ್ತು ಸಿಟ್ಟಿರುತ್ತದೆ, ಅದು ಎಲ್ಲೂ ಮುಂದುವರಿಸುವುದಿಲ್ಲ. ಎಲ್ಲರೂ ಹಾಗೆ ಎಂದು ನಾನು ಹೇಳುತ್ತಿಲ್ಲ, ಆದರೆ ಕೆಲವು ಮಹಿಳಾ ಕಾರ್ಯಕರ್ತರು ಬಹಳ ಬಂಡಾಯ ಮತ್ತು ಕೋಪದಿಂದಿರುತ್ತಾರೆ. ನಾನು ಹೇಳುತ್ತೇನೆ, ಸಿಟ್ಟು ನಿಮ್ಮನ್ನು ಎಲ್ಲೂ ಮುಂದುವರಿಸುವುದಿಲ್ಲ. ನಿಶ್ಚಲ ಹಾಗೂ ಪ್ರಶಾಂತ ಮನಸ್ಸಿನಿಂದ ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಿ. ನಿಮಗೊಂದು ಸ್ಥಾನಮಾನವಿದೆ, ಅದನ್ನೇರಿ! ಇದೆಲ್ಲಾ ನಿಮ್ಮ ಮನಸ್ಸಿನಲ್ಲೇ ಇರುವುದು.

ನೋಡಿ, ನೀವು ಸುಂದರವಾಗಿ ಕಾಣಿಸಿಕೊಳ್ಳದಿದ್ದರೆ, ಇನ್ನೊಬ್ಬರು ಸುಂದರವಾಗಿದ್ದಾರೆ ಎಂದು ಬೇಸರಪಟ್ಟುಕೊಳ್ಳಬೇಡಿ.ಅವರಲ್ಲಿ ಸುಂದರ ಶರೀರವಿರಬಹುದು, ನಿಮ್ಮಲ್ಲಿ ಸುಂದರ ಮನವಿದೆ.ಅದನ್ನು ನೆನಪಿನಲ್ಲಿಟ್ಟುಕೊಳ್ಳಿ.ಬಾಹ್ಯ ಸೌಂದರ್ಯವಿರುವವರಲ್ಲೆಲ್ಲಾ ಸುಂದರವಾದ ಮನಸ್ಸಿಲ್ಲ. ಕೆಲವೊಮ್ಮೆ ಅವರ ಮುಖವನ್ನು ನೋಡಿದಾಗ, ಅದು ಎಷ್ಟೊಂದು ಬಾಡಿರುತ್ತದೆ.ಒಬ್ಬರಮನಸ್ಸು ಸುಂದರವಾಗಿರಬಹುದು, ಆದರೆ ಅವರ ಬುದ್ಧಿ ಚುರುಕಿಲ್ಲದಿರಬಹುದು.ನಿಮ್ಮಲ್ಲಿ ಚುರುಕಾದ ಬುದ್ಧಿಯಿದೆ.ಹಾಗಾಗಿ ನಿಮ್ಮಲ್ಲಿರುವುದನ್ನು ನೋಡಿಕೊಳ್ಳಿ.

ಒಬ್ಬರಲ್ಲಿ ಬಹಳ ಹಣವಿರಬಹುದು, ಅದಕ್ಕೇನು?ನಿಮ್ಮಲ್ಲಿ ಪ್ರತಿಭೆಯಿದೆ, ನಿಮ್ಮಲ್ಲಿ ಒಳ್ಳೆಯ ಹೃದಯವಿದೆ, ನಿಮ್ಮಲ್ಲೇನೋ ಇದೆ.ಹಾಗಾಗಿ ಇನ್ನೊಬ್ಬರೊಂದಿಗಾದರೂ ತಮ್ಮ ತುಲನೆ ಮಾಡಿಕೊಳ್ಳುವಾಗ, ನಿಮ್ಮೊಳಗೆ ಎಲ್ಲದಕ್ಕಿಂತಲೂ ದೊಡ್ಡದಾದ ಒಂದು ಆಯಾಮವಿದೆಯೆಂದು ನೀವು ಮರೆಯುತ್ತೀರಿ, ಅದು ಎಲ್ಲರಿಗೂ ಪ್ರತಿಯೊಂದನ್ನು ಕೊಡುವಂಥದ್ದು. ನೀವು ಅದನ್ನರಿತು ಜೀವಿಸುವಾಗ, ಈ ಎಲ್ಲಾ ಮನೋಸಂಕೀರ್ಣಗಳನ್ನು ದಾಟಿಬರುತ್ತೀರಿ.ನಾನು ಹೇಳುತ್ತಿರುವುದನ್ನು ನೀವು ಅರಿಯುತ್ತಿದ್ದೀರಾ?

ಜಗತ್ತಿನ ತುಂಬೆಲ್ಲಾ ಮನಸ್ಸಿನ ಅನೇಕ ಸಂಕೀರ್ಣಗಳಿವೆ.ನೀವು ಆ ಸಂಕೀರ್ಣಗಳನ್ನು ದಾಟಿ ಬರಬೇಕು.ಮತ್ತು ನಿಮ್ಮಿಂದ ಸಂಕೀರ್ಣಗಳನ್ನು ಏನು ದಾಟಿಸಬಹುದು?ಅದು ಮನೋಚಿಕಿತ್ಸೆಯಲ್ಲ, ಆದರೆ ಆಧ್ಯಾತ್ಮಿಕತೆ.ನಿಮ್ಮ ಆಂತರ್ಯದೊಂದಿಗೆ ಸಂಪರ್ಕದಲ್ಲಿರುವುದರಿಂದ ನಿಮ್ಮ ಎಲ್ಲಾ ಮನೋಸಂಕೀರ್ಣಗಳಿಂದ, ರೇಗಾಟದಿಂದ ಮೇಲಕ್ಕೇಳಬಹುದು. ’ಆಹಾ! ಎಷ್ಟೊಂದುಸೊಗಸು, ಎಷ್ಟು ಪ್ರಶಾಂತ’ ಎಂದು ಕಾಣುತ್ತೀರಿ.

ಹಿಂದಿಯ ಒಂದು ನುಡಿಮುತ್ತಿದೆ- ಮನ್ ಮೀಠಾ ತೊ ಜಗ್ ಮೀಠಾ. ನಿಮ್ಮೊಳಗೆ ಮಾಧುರ್ಯವಿದ್ದಾಗ, ನಿಮ್ಮ ಸುತ್ತಎಲ್ಲವೂ ಮಧುರವಾಗಿರುತ್ತದೆ.

ನೋಡಿ, ಜೀವನವು ಸ್ವಯಂಒಂದು ಕಲೆ! ಜೀವನ ಕಲೆ.
ಕಲೆ ಒಂದು ವ್ಯಾಪಾರವಾಗಿರಬಹುದು, ಆದರೆ ವ್ಯಾಪಾರ ಒಂದು ಕಲೆಯೆಂದು ಯೋಚಿಸಬೇಡಿ.ವ್ಯವಹಾರವನ್ನು ಕ್ರಮಬದ್ಧವಾಗಿ ಹೇಗೆ ನಿಭಾಯಿಸುವುದು ಎಂಬ ಅರ್ಥದಲ್ಲಿ ನೀವು ವ್ಯವಹಾರ ಒಂದು ಕಲೆ ಎಂದು ಹೇಳಬಹುದು.ಬಹಳ ಸಂಕೀರ್ಣ ಹಾಗೂ ಭ್ರಷ್ಟ ಜಗತ್ತಿನಲ್ಲಿ ನೀತಿ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡೂ ಹೇಗೆ ವ್ಯಾಪಾರ ಮಾಡುವುದು - ಇದು ಒಂದು ಕಲೆ. ಆ ಅರ್ಥದಲ್ಲಿ! ಈಗ ವ್ಯಾಪಾರದಲ್ಲಿ ಮತ್ತೊಂದು ಪ್ರಕ್ರಿಯೆ.ನೀವು ಮಾರುಕಟ್ಟೆಯನ್ನು ಅರಿತು ಪರೀಕ್ಷಿಸಬೇಕು. ’ಮಾರುಕಟ್ಟೆ ಯಾವ ಸ್ಥಿತಿಯಲ್ಲಿದ್ದರೂ ನನಗೇನು, ನಾನು ನನ್ನ ಸ್ವಂತ ವ್ಯಾಪರವನ್ನು ನಿರ್ಮಿಸುತ್ತೇನೆ’ ಎಂದು ಹೇಳಲಾಗುವುದಿಲ್ಲ. ವ್ಯಾಪಾರವೊಂದು ಬೇರೆ ಕಲೆ, ಅದು ಕುಶಲಕಲೆಯಂತಲ್ಲ. ಕುಶಲಕಲೆಯಲ್ಲಿ ನೀವು ಇನ್ನೊಬ್ಬರನ್ನು ನೋಡುವುದಿಲ್ಲ, ನಿಮ್ಮ ಸೃಜನಶೀಲತೆಯನ್ನು ಹೊರಸೂಸುತ್ತೀರಿ.
ವ್ಯಾಪಾರವೆಂದರೆ ಲೋಕದೊಂದಿಗೆ, ಮಾರುಕಟ್ಟೆಯೊಂದಿಗೆ ವ್ಯವಹರಿಸುವುದು.ಹಾಗಾಗಿ ಅಲ್ಲಿ ಇನ್ನುಳಿದವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಬೇಕು.ನೀವು ಒಂದು ಉತ್ಪನ್ನವನ್ನು ಮಾರುತ್ತಿರುವುದರಿಂದ, ಬೇರೆಯವರು ತಮ್ಮ ಉತ್ಪನ್ನಗಳನ್ನು ಹೇಗೆ ಮಾರುತ್ತಿದ್ದಾರೆ ಮತ್ತು ಅವರ ಮೌಲ್ಯ ಕ್ರಮ ಏನು ಎಂಬುದನ್ನು ಅರಿತಿರಬೇಕು.ಅದನ್ನೆಲ್ಲಾ ನೀವು ನೋಡಿಕೊಳ್ಳಬೇಕು.

ಪ್ರ: ನಾಡಿ ನಮಗೆ ಯಾವುದಾದರೂ ಸೂಚನೆಗಳನ್ನು ನೀಡುತ್ತದೆಯೇ? ಅದು ಈಗ ಏನು ಹೇಳುತ್ತಿದೆ?
ಶ್ರೀ ಶ್ರೀ:
ಹೌದು, ಈಗ ನಾಡಿಯು (ತಮ್ಮ ನಾಸಾಪುಟಗಳಲ್ಲಿ ಉಸಿರನ್ನು ನೋಡಿಕೊಂಡು)’ಸುಮ್ಮನಿರು’ ಎನ್ನುತ್ತಿದೆ.  ಎರಡೂ ನಾಡಿಗಳು ಸಕ್ರಿಯವಾಗಿರುವಾಗ, ಅದರರ್ಥ ಸುಮ್ಮನಿರು, ಏನೂ ಹೇಳಬೇಡ, ಕೇವಲ ಧ್ಯಾನಸ್ಥನಾಗು ಎಂದು.ಆದರೆ ಅದು ಸದಾ ಬದಲಾಗುತ್ತಿರುತ್ತದೆ.ಬ್ರಹ್ಮಾಂಡವೆಲ್ಲಾ ಬದಲಾವಣೆಯಿಂದ ತುಂಬಿದೆ.

ಪ್ರ: (ನೆರೆದಿದ್ದ ಜನರಲ್ಲಿ ಒಬ್ಬ ಸ್ವಯಂಪ್ರೇರಿತವಾಗಿ ಒಂದು  ಪ್ರಶ್ನೆ ಕೇಳಿದ್ದು, ಅದು ಧ್ವನಿಮುದ್ರಣದಲ್ಲಿ ಕೇಳಿಬಂದಿಲ್ಲ)

ಶ್ರೀ ಶ್ರೀ:
ನಿಮಗೆ ಆಯ್ಕೆಯಿಲ್ಲ. ನಿಮಗೆ ಯಾವುದಾದರೂ ಆಯ್ಕೆಯಿದೆಯೇ? ಇವತ್ತಲ್ಲ ನಾಳೆ ಪ್ರತಿಯೊಬ್ಬರೂ ಅದನ್ನು ಮಾಡಬೇಕು.ನೀವು ನಿಮ್ಮ ಸದ್ಗುಣಗಳಿಗೆ ಮನ್ನಣೆಯನ್ನು ಅಪೇಕ್ಷಿಸುವಂತಿಲ್ಲ ಯಾಕೆಂದರೆ ನೀವು ಇರುವುದೇ ಹಾಗೆ.ಈ ಸೂರ್ಯಕಾಂತಿ ಹೂವು ’ನಾನು ಹಳದಿ’ ಎಂದು ಹೇಳಿಕೊಳ್ಳಲಾಗುವುದಿಲ್ಲ. ಹಳದಿಯಾಗಲು ಅದು ಏನನ್ನೂ ಮಾಡಲಿಲ್ಲ, ಅದು ಹಳದಿಯಾಗಿ ಸೃಷ್ಟಿಸಲ್ಪಟ್ಟಿದೆ.
ಗುಲಾಬಿಯು ’ನೋಡು ನಾನೆಷ್ಟು ನಸುಗೆಂಪಗಿದ್ದೇನೆ! ನಾನು ನನ್ನನ್ನು ನಸುಗೆಂಪಗೆ ಮಾಡಿಕೊಂಡೆ’ ಎಂದು ಹೇಳಿಕೊಳ್ಳಲಾಗುವುದಿಲ್ಲ. ನಿಮ್ಮಲ್ಲಿ ಯಾವುದೇ ಸದ್ಗುಣಗಳು, ಪ್ರತಿಭೆ ಇರಲಿ, ನೀವು ಅದಕ್ಕೆ ಗೌರವ ಅಪೇಕ್ಷಿಸುವುದು ಸಾಧ್ಯವಿಲ್ಲ, ನಿಮ್ಮನ್ನು ಮಾಡಿರುವುದೇ ಹಾಗೆ. ಮತ್ತೆ ನಾನಿರುವ ರೀತಿ, ನನ್ನನ್ನು ಮಾಡಿರುವುದೇ ಹಾಗೆ.
ಹಾಗೆಯೇ ನೀವು ನಿಮ್ಮ ನಕಾರಾತ್ಮಕ ಗುಣಗಳಿಗೂ ಅಗೌರವವನ್ನು/ನಿಂದನೆಯನ್ನು ಖಂಡಿತ ಅಪೇಕ್ಷಿಸಬಾರದು.ಮತ್ತು, ನಿಮ್ಮ ಧನಾತ್ಮಕ ಗುಣಗಳಿಗೆ ಗೌರವ ಅಪೇಕ್ಷಿಸಬಾರದು.ಹಾಗಾಗಿ ನೀವು ಹೇಗೆ ಇದ್ದರೂ ನೀವಿರುವುದು ಹಾಗೆ.

ನೀವು ಇದಿರುನಿಲ್ಲುವವರಾಗಿದರೆ ನಿಮ್ಮ ಬಂಡಾಯಗಾರತನವನ್ನು ಸದುಪಯೋಗಪಡಿಸಿ. ಅನ್ಯಾಯವಿರುವಲ್ಲಿ ಹೋರಾಡಿ! ಆದರೆ ಮುಗುಳ್ನಗೆಯೊಂದಿಗೆ ಹೋರಾಡಿ. ನನ್ನ ಜೊತೆಗೂಡಿ ಹೋರಾಡಿ!(ನಗು).
ಅನಕ್ಷರತೆಯ ವಿರುದ್ಧ ಹೋರಾಡಿ.ಅನ್ಯಾಯದ ವಿರುದ್ಧ, ಕೊರತೆಯ ವಿರುದ್ಧ ಹೋರಾಡಿ. ಹೋರಾಟಕ್ಕೆ ಮುನ್ನಡೆಯಿರಿ! ಹೋರಾಟದ ಮಾರ್ಗದಲ್ಲಿ ಸಾಗುತ್ತಿರುವಾಗ ಎಂದೂ ಏರುಪೇರುಗಳಿರುತ್ತವೆ.ಯೋಚಿಸದಿರಿ.ನೀವು ಅದರ ಚಿಂತೆ ಮಾಡಬಾರದು.’ಸರಿ, ಏನೇ ಬರಲಿ, ಹೋರಾಡು!’ ಎಂದು ಯೋಚಿಸಿ.

ಆದ್ದರಿಂದಲೇ ನೀವು ನಿಮ್ಮ ಧರ್ಮ(ಕರ್ತವ್ಯ)ವನ್ನು ಗುರುತಿಸಬೇಕಾಗಿರುವುದು.ನಿಮ್ಮ ಧರ್ಮ ಕಲಿಸುವುದಾಗಿದ್ದರೆ, ಅಥವಾ ಹೋರಾಡುವುದು, ಅಥವಾ ಮನ ಒಪ್ಪಿಸುವುದು, ಅಥವಾ ಸೇವೆ ಮಾಡುವುದಾಗಿದ್ದರೆ; ನಿಮ್ಮ ಧರ್ಮವೇನೋ ಮತ್ತು ಆ ಕ್ಷಣದಲ್ಲಿ ನಿಮ್ಮ ಸಹಜ ಗುಣದಂತೆ ನೀವು ನಡೆಯಬೇಕು.

ನೀವು ಈ ನಾಲ್ಕನ್ನೂ ಮಾಡಬಹುದು, ಪ್ರಯತ್ನಿಸಬಹುದು.ಮೊದಲು ಕಲಿಸಿ ಅರಿವು ಮೂಡಿಸಬೇಕು.ಅದು ಸಾಧ್ಯವಾಗದಿದ್ದರೆ ಮನ ಒಪ್ಪಿಸಲು ನೋಡಿ; ವ್ಯಾಪಾರ ಕೌಶಲಗಳನ್ನು ಉಪಯೋಗಿಸಿ.ಹಾಗಾಗಿ ಅವರನ್ನು ನಿರ್ಬಂಧಗೊಳಿಸಿ, ಪುಸಲಾಯಿಸಿ ಇತ್ಯಾದಿಗಳಿಂದ ಮನ ಒಪ್ಪಿಸಿ. ಇದು ಪ್ರಯೋಜನವಾಗದಿದ್ದರೆ ಅವರ ಸೇವೆ(ಸಹಾಯ) ಮಾಡಿ. ಮತ್ತೆ ಇದು ಯಾವುದೂ ಪ್ರಯೋಜನವಾಗದಿದ್ದರೆ, ಹೋರಾಡಿ! ತಿಳಿಯಿತೇ? ಎಲ್ಲಾ ವಿಧಾನಗಳನ್ನು ಉಪಯೋಗಿಸಿ, ಸರಿಯಾ!

ನಿಮಗೆ ಏನು ಸಹಜವೋ, ಅದು ನಿಮ್ಮ ಧರ್ಮ. ಉದಾಹರಣೆಗೆ, ಅವಳು ಇದಿರುನಿಲ್ಲುವುದು ತನಗೆ ಸ್ವಾಭಾವಿಕ ಎಂದು ಹೇಳುತ್ತಾಳೆ, ಅವಳು ಹೋರಾಡಬಹುದು(ನೆರೆದವರಲ್ಲಿಒಬ್ಬರನ್ನು ಸೂಚಿಸುತ್ತ). ಪ್ರತಿ ಕ್ಷಣ ಅವಳು ಯಾವುದರ ವಿರುದ್ಧವೂ, ಎಲ್ಲಾದರು ಹೋರಾಡಬಹುದು.ಹಾಗೆ ಅದು ಅವಳ ಧರ್ಮ.
ಹಾಗೆ ನೀವು ನಿಮ್ಮ ಧರ್ಮವನ್ನು ಗುರುತಿಸಿ.ಅದು ಸ್ಪಷ್ಟವಾಗುತ್ತದೆ.ನೀವು ಅದನ್ನು ಮಾಡುತ್ತಿದ್ದಂತೆ ಪರಿಪೂರ್ಣ ಶಾಂತಿ ಹಾಗೂ ತ್ರೂಪ್ತಿಯನ್ನು ಅನುಭವಿಸುವಿರಿ.

ನೋಡಿ, ಇವೆಲ್ಲವೂ ಕಷ್ಟಕರ.ಕಲಿಸುವುದು ಸುಲಭವೆಂದುಕೊಂಡಿರಾ?ಅಬ್ಬಾ ದೇವರೇ, ಅದೊಂದು ದೊಡ್ಡ ತಲೆನೋವು.ತೆಲುಗಿನಲ್ಲಿ ಒಂದು ನುಡಿಮುತ್ತಿದೆ - ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಕಲಿಸಬೇಕು ಮತ್ತು ತಾನು ಕಲಿತಿರುವುದನ್ನು ಮರೆಯಬೇಕು, ಯಾಕೆಂದರೆ ತಾನು ಕಲಿತಿರುವುದನ್ನು ಮರೆಯದೇ ಶಿಕ್ಷಕನಿಗೆ ಮುಕ್ತಿಯಿಲ್ಲ.
ನೀವು ಕಲಿಯಬೇಕು, ಆದರೆ ಅದನ್ನೆಲ್ಲಾ ಮರೆತು ಸಂಪೂರ್ಣವಾಗಿ ಖಾಲಿ ಮತ್ತು ಟೊಳ್ಳಾಗಬೇಕು. ಹಾಗಾಗಿ ಒಬ್ಬ ಶಿಕ್ಷಕ ಕಲಿಯಬೇಕು ಮತ್ತು ತಾನು ಯಾವುದೇ ಕ್ಷೇತ್ರದಲ್ಲಿ ಏನೇ ಕಲಿತಿದ್ದರೂ  ಅದನ್ನು ಶಿಷ್ಯರಿಗೆ ನೀಡಿ ಮತ್ತೆ ಅದರ ಬಗ್ಗೆ ಮರೆತುಬಿಡಬೇಕು. ಅವನು ಮೊದಲೇ ಅದನ್ನು ಮರೆಯಲಾಗುವುದಿಲ್ಲ. ಹಾಗಾಗಿ ಇದೂ ಒಬ್ಬ ಶಿಕ್ಷಕನ ನಿಯಮ- ಕಲಿ, ಕಲಿಸು ಮತ್ತೆ ಮರೆತುಬಿಡು.

ಹೇಗೂ ಪ್ರಕೃತಿಯು ನಿಮ್ಮಿಂದ ಅದನ್ನು ಮಾಡಿಸುತ್ತದೆ.ನೀವು ಪ್ರೊಢರಾಗುತ್ತಿದ್ದಂತೆ ನೀವು ಎಲ್ಲವನ್ನೂ ಮರೆಯಲಾರಂಭಿಸುತ್ತೀರಿ, ಹಾಗಾಗುವುದಿಲ್ಲವೇ?ನಿಮಗೆ ಇನ್ನೂ ಹೆಚ್ಚು ಹೆಚ್ಚು ವಯಸ್ಸಾಗುತ್ತಿದ್ದಂತೆ ನೀವು ಎಲ್ಲವನ್ನೂ ಮರೆಯುತ್ತೀರಿ.

ಈಗ ತೆಲುಗಿನಲ್ಲಿ ಒಂದು ಬಹಳ ಹಾಸ್ಯಮಯ ಮಾತಿದೆ - ನಿನ್ನನ್ನು ನನ್ನ ಶಿಷ್ಯನನ್ನಾಗಿ ಮಾಡಿ, ನಿನಗೆ ಕಲಿಸಿ, ನಾನು ನನ್ನ ಕೀರ್ತಿಯನ್ನು ಕಳೆದುಕೊಂಡೆ. ನಿನಗೆ ಎಂದೂ ಕಲಿಯಲಾಗಲಿಲ್ಲ ಮತ್ತು ನನಗೆ ಎಂದೂ ಮರೆಯಲಾಗಲಿಲ್ಲ! (ನಗು)
ಯಾಕೆಂದರೆ ಯಾರಾದರೂ ನಿಮ್ಮನ್ನು ’ನಿನ್ನ ಗುರು ಯಾರು, ನಿನ್ನ ಶಿಕ್ಶಕ ಯಾರು?’ ಎಂದು ಕೇಳಿದರೆ , ನೀವು ಇಂಥವರು ನನ್ನು ಶಿಕ್ಶಕರು ಎಂದು ಹೇಳುತ್ತೀರಿ. ಮತ್ತೆ ಅವರು ನಿನಗೆ ಏನು ಕಲಿಸಿದ್ದಾರೆ?ಹಾಗಾಗಿ ನಿನ್ನನ್ನು ನನ್ನ ಶಿಷ್ಯನನ್ನಾಗಿಸಿ, ನಾನು ನನ್ನ ಕೀರ್ತಿಯನ್ನು ಕಳೆದುಕೊಂಡೆ.ನಿನಗೆಂದು ಕಲಿಯಲಾಗಲಿಲ್ಲ, ನನಗೆಂದೂ ಮರೆಯಲಾಗಲಿಲ್ಲ.

ಹಾಗಾಗಿ ಕಲಿಸುವುದು ಒಂದು ಸುಲಭದ ಕೆಲಸವಲ್ಲ. ಮತ್ತೆ ಹೋರಾಡುವುದೂ ಒಂದು ಸುಲಭದ ಕೆಲಸವಲ್ಲ, ಅದು ಕಠಿಣವಾದ ಕೆಲಸ.ಮನ ಒಪ್ಪಿಸುವುದು ಮತ್ತು ಪುಸಲಾಯಿಸುವುದು ಸುಲಭದ ಕೆಲಸವಲ್ಲ. ಮತ್ತು ಸೇವೆ ಮಾಡುವುದೂ ಒಂದು ದೊಡ್ಡ ಸವಾಲು. ಜನರ ಸೇವೆ ಮಾಡಲು ನೀವು ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ ಆದರೂ ಅವರು ನಿಮ್ಮನ್ನು ದೂಷಿಸುತ್ತಾರೆ, ಹೌದು!

ನಿಮ್ಮಿಂದ ಆಗುವುದನ್ನೆಲ್ಲಾ, ಒಳ್ಳೆಕೆಲಸಗಳನ್ನೆಲ್ಲಾ ನೀವು ಮಾಡುತ್ತೀರಿ; ನೀವೇನು ಮಾಡಿದರೂ ನಿಮಗೆ ಒಬ್ಬರನ್ನು ಸಂತೈಸಲಾಗುವುದಿಲ್ಲ. ಹಾಗಾಗಿ ಸೇವೆ ಮಾಡುವುದೂ ಒಂದು ಸುಲಭದ ಕೆಲಸವಲ್ಲ.

ಹೀಗೆ ನೀವೇನನ್ನಾದರೂ ಪರಿಗಣಿಸಿ, ಒಂದು ದೃಷ್ಟಿಕೋನದಿಂದ ನೋಡಿದರೆ ಅದೆಲ್ಲವೂ ಬಹಳ ಕಷ್ಟಕರ.ಅದಕ್ಕೆನೀವು ’ಸರಿ ಎಲ್ಲವೂ ಕಷ್ಟಕರ, ಆದರೂ ನಾನದನ್ನು ಮಾಡಿ ಸುಮ್ಮನಿರುವೆ.’ ಎಂದು ಯೋಚಿಸಿ.ಆದರೆ ಅದು ಸುಲಭವೇ?ಅದು ಇನ್ನೂ ಕಷ್ಟ. ಆದ್ದರಿಂದ ಏನನ್ನಾದರೂ ಮಾಡುವುದು ಸುಲಭವಲ್ಲ ಮತ್ತು ಏನನ್ನಾದರೂ ಮಾಡದಿರುವುದೂ ಸುಲಭವಲ್ಲ.

ಹಾಗಾಗಿ, ಜೈ ಜೈ ರಾಧಾ ರಮಣ ಹರಿ ಬೋಲ್!