ಮಂಗಳವಾರ, ಜುಲೈ 10, 2012

ಇತ್ತೀಚೆಗೆ ಪತ್ತೆಯಾದ ದೇವ ಕಣದ ಬಗ್ಗೆ ಶ್ರೀ ಶ್ರೀ ಸ೦ವಾದ

10
2012
Jul
ಬಾಡ್ ಆಂತೋಗಾಸ್ತ್, ಜರ್ಮನಿ

ವಿಜ್ಞಾನಿಗಳು ದೇವಕಣವನ್ನು ಪತ್ತೆಹಚ್ಚಿದ್ದಾರೆ; ಅದನ್ನೇ ಅವರು ಹೇಳುತ್ತಿರುವುದು - ಹಿಗ್ಸ್ ಬೋಸನ್. ಸಂಪೂರ್ಣ ವಿಶ್ವವು ಇದರಿಂದ ಮಾಡಲ್ಪಟ್ಟಿದೆಯೆಂದು ಅವರು ಹೇಳುತ್ತಾರೆ. ಅದೊಂದು ಕ್ಷೇತ್ರ ಮತ್ತು ಈ ಕ್ಷೇತ್ರವು ಶಕ್ತಿಯಾಗಿದೆ. ಅದು ಗ್ರಹಗಳು, ನಕ್ಷತ್ರಗಳು ಮತ್ತು ಎಲ್ಲದಕ್ಕೂ ಆಕಾರವನ್ನು ಕೊಡುತ್ತದೆ. ವೇದಾಂತವನ್ನು ಅಧ್ಯಯನ ಮಾಡಿದವರೊಬ್ಬರಿಗೆ ಅಥವಾ ಆಳವಾದ ಧ್ಯಾನವನ್ನು ಅನುಭವಿಸಿದವರೊಬ್ಬರಿಗೆ ಇದು ಬಹಳ ಪರಿಚಿತವಾಗಿರುವಂತೆ ಕೇಳಿಸುತ್ತದೆ.
ಸಂಪೂರ್ಣ ವಿಶ್ವವು ಪ್ರಜ್ಞೆಯಿಂದ ಮಾಡಲ್ಪಟ್ಟಿದೆ. ಅದು ಒಂದು ಪ್ರಜ್ಞೆಯ ಆಟ ಮತ್ತು ಪ್ರದರ್ಶನ. ವೈದಿಕ ಋಷಿಗಳು ಕೂಡಾ ಇದನ್ನೇ ಹೇಳಿದರು. ಮೊದಲು ಮಹಾಭೂತಗಳನ್ನು ತಿಳಿದುಕೊಳ್ಳಿ ಎಂದು ಅವರು ಹೇಳಿದರು; ಅವರು ಬ್ರಹ್ಮನನ್ನು, ಚರಮವನ್ನು ಕೂಡಾ, ಒಂದು ತತ್ವವೆಂದು ಕರೆದರು. ದೇವ ಕಣದ ಹಾಗೆ, ಅವರು ಬ್ರಹ್ಮ ತತ್ವ ಎಂದು ಹೇಳಿದರು.
ಮೊದಲನೆಯ ತತ್ವವೇನು? ಅವರಂದರು ಅಂಶಗಳು; ಪೃಥ್ವಿ ಅಂಶ, ಜಲ, ಅಗ್ನಿ, ವಾಯು. ಈಥರ್, ಮತ್ತು ನಂತರ ಮನಸ್ಸು, ಬುದ್ಧಿ - ನೀವು ಸೂಕ್ಷ್ಮಾತಿಸೂಕ್ಷ್ಮವಾಗಿ ಹೋದಾಗ, ಅಲ್ಲಿಗೆ ತಲಪುತ್ತೀರಿ.
ಆಕಾಶಕ್ಕಿಂತ ಸೂಕ್ಷ್ಮ ಮನಸ್ಸು, ಅದಕ್ಕಿಂತ ಸೂಕ್ಷ್ಮವಾದುದು ಬುದ್ಧಿ ಮತ್ತು ಜ್ಞಾನವು ಅಲ್ಲಿರುತ್ತದೆ. ಅದಕ್ಕಿಂತ ಸೂಕ್ಷ್ಮ ಅಹಂ ಮತ್ತು ಅಹಂಗಿಂತ ನೂರು ಪಟ್ಟು ಸೂಕ್ಷ್ಮವಾದುದೆಂದರೆ ಮಹತ್ ತತ್ವ - ಮಹತ್ ಎಂದು ಕರೆಯಲ್ಪಡುವ ಕ್ಷೇತ್ರ. ಅಹಂ ಎನ್ನುವುದೇ ಒಂದು ಅಣು, ಆದರೆ ಅಹಂಗಿಂತ ಸೂಕ್ಷ್ಮವಾದುದು, ಅಹಂನ ಆಚೆಗಿರುವುದು, ಆ ಬಿಂದು, ಆ ಕಣವು ಮಹತ್ ತತ್ವ ಎಂದು ಕರೆಯಲ್ಪಡುವ ಒಂದು ಕ್ಷೇತ್ರ. ಅದಕ್ಕಿಂತಲೂ ಸೂಕ್ಷ್ಮವಾದುದು ಮೂಲ ಪ್ರಕೃತಿ - ಆದಿ ಶಕ್ತಿ. ಆ ಆದಿಶಕ್ತಿಯ ಆಚೆಗಿರುವುದು ಬ್ರಹ್ಮ. ಇದರಿಂದ ಎಲ್ಲವೂ ಮಾಡಲ್ಪಟ್ಟಿವೆ. ಇದು ಸಂಪೂರ್ಣ ಸೃಷ್ಟಿಯ ವಸ್ತುವಾಗಿದೆ. ಬ್ರಹ್ಮವು ಅನಂತತೆಯಾಗಿದೆ, ಅದು ಹುಟ್ಟಲೂ ಇಲ್ಲ, ಯಾವತ್ತೂ ಸಾಯುವುದೂ ಇಲ್ಲ.
ಋಗ್ವೇದದಲ್ಲಿ, ೧೦ ನೆಯ ಮಂಡಲದಲ್ಲಿ, ೧೨೯ ನೆಯ ಅಧ್ಯಾಯದಲ್ಲಿ ನಾಸದೀಯ ಸೂಕ್ತವೆಂದು ಕರೆಯಲ್ಪಡುವ ಒಂದು ಸೂಕ್ತವಿದೆ. ಅಲ್ಲಿ ಸುಮಾರು ಏಳು ಶ್ಲೋಕಗಳನ್ನು ಬರೆಯಲಾಗಿದೆ. ಸೃಷ್ಟಿಯ ಸ್ತೋತ್ರದ ಏಳು ಶ್ಲೋಕಗಳಲ್ಲಿ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಕ್ವಾಂಟಮ್ ಫಿಸಿಕ್ಸಿನ ಮೂಲಕ ನಾವು ತಿಳಿದಿರುವ ಅಂಶಗಳು ಆಗ ಅಲ್ಲಿ ಇದ್ದವು ಎಂಬುದು ಗಮನಾರ್ಹವಾಗಿದೆ.
ಎಲ್ಲೆಡೆಗಳಲ್ಲಿರುವ, ಗಾಢವಸ್ತು ಮತ್ತು ಗಾಢಚೈತನ್ಯ ಎಂದು ವಿಜ್ಞಾನಿಗಳು ಕರೆಯುವ ಮತ್ತು ನಾವೀಗ ಯಾವುದರ ಬಗ್ಗೆ ಮಾತನಾಡುತ್ತಿರುವೆವೋ ಅದನ್ನೇ ನಾಸದೀಯ ಸೂಕ್ತವು ಹೇಳುತ್ತದೆ.
ನಾಸದಾಸಿನೋಸದಸೀತ್ತದಾನಿಂ ನಾಸೀದ್ರಜೋ ನೊ ವ್ಯೋಮಾಪರೋ ಯತ್
ಕಿಮಾವರೀವಃ ಕುಹ ಕಸ್ಯಶರ್ಮನ್ನಭಃ ಕಿಮಾಸೀದ್ ಗಹನಂ ಗಭೀರಂ
ಆಕಾಶದಾಚೆ, ಆಗ, ಆರಂಭದಲ್ಲಿ, ಅಲ್ಲಿ ಅಸ್ಥಿತ್ವವೂ ಇರಲಿಲ್ಲ, ಅಸ್ಥಿತ್ವವಿಲ್ಲದಿರುವಿಕೆಯೂ ಇರಲಿಲ್ಲ; ಹುಟ್ಟೂ ಇರಲಿಲ್ಲ, ಸಾವೂ ಇರಲಿಲ್ಲ. ಎಲ್ಲವೂ ಕೇವಲ ಚೈತನ್ಯವಾಗಿತ್ತು. "ಕತ್ತಲು ಕತ್ತಲಿನಿಂತ ಆವೃತವಾಗಿತ್ತು" ಎಂಬುದರ ಬಗ್ಗೆಯೂ ಅದು ಹೇಳುತ್ತದೆ. ಮೂರನೆಯ ಶ್ಲೋಕದಲ್ಲಿ ಅದು ಹೇಳುತ್ತದೆ, "ಕತ್ತಲು ಎಲ್ಲಾ ಕತ್ತಲಿನಿಂದ ಆವೃತವಾಗಿತ್ತು." ಆದುದರಿಂದ, ಈ ಶ್ಲೋಕಗಳು, ಇವತ್ತಿನ ವಿಜ್ಞಾನಿಗಳು ಹೇಳುತ್ತಿರುವುದನ್ನು ಬಹುತೇಕ ಅದೇ ಭಾಷೆಯಲ್ಲಿ ಪ್ರಖರವಾಗಿ ಸೂಚಿಸುತ್ತದೆ.
ಅದರ ಅನುವಾದವನ್ನು ನಾನು ಓದುತ್ತೇನೆ:
ಪ್ರಾರಂಭದಲ್ಲಿ ಜೀವವೂ ಇರಲಿಲ್ಲ ಅಥವಾ ಜೀವವಿಲ್ಲದಿರುವಿಕೆಯೂ ಇರಲಿಲ್ಲ. ಅಲ್ಲಿ ಗಾಳಿಯೂ ಇರಲಿಲ್ಲ, ಅದರಾಚೆಗಿನ ಆಕಾಶವೂ ಇರಲಿಲ್ಲ.
ಅದು ಯಾವುದನ್ನು ಆವರಿಸಿತ್ತು? ಎಲ್ಲಿ? ಯಾವ ಸಂರಕ್ಷಣೆಯಲ್ಲಿ?
ಅಲ್ಲಿ ನೀರಿತ್ತೇ, ಅಗಾಧವಾದ ಮತ್ತು ಆಳವಾದ?
ಅಲ್ಲಿ ಆಗ ಸಾವಿರಲಿಲ್ಲ, ಸಾವಿಲ್ಲದಿರುವಿಕೆಯೂ ಇರಲಿಲ್ಲ;
ರಾತ್ರಿಯ ಅಥವಾ ಹಗಲಿನ, ಅಲ್ಲಿ ಯಾವುದೇ ಸೂಚನೆಯಿರಲಿಲ್ಲ.
ಆ ’ಒಂದು’ ಉಸಿರಿಲ್ಲದೆ ಉಸಿರಾಡಿತು, ತನ್ನದೇ ಪ್ರೇರಣೆಯಿಂದ.
ಅದಲ್ಲದೆ ಬೇರೇನೂ ಇರಲೇ ಇಲ್ಲ.
 ಕತ್ತಲಿನಿಂದ ಆವರಿಸಲ್ಪಟ್ಟ ಕತ್ತಲು ಅಲ್ಲಿತ್ತು ಮತ್ತು ಎಲ್ಲವೂ ಭೇದಭಾವವಿಲ್ಲದ ನೀರು. ಎಲ್ಲವೂ ಭೇದಭಾವವಿಲ್ಲದ ಶಕ್ತಿ.
ಶೂನ್ಯದಿಂದ ಮರೆಮಾಚಲ್ಪಟ್ಟ, ಒಂದು ಉದಯಿಸುತ್ತಿರುವ, ಕೋಲಾಹಲಗೊಳಿಸುವ, ಹುಮ್ಮಸ್ಸಿನಿಂದ ಕೂಡಿದಂತಹುದು ಅಸ್ತಿತ್ವಕ್ಕೆ ಬಂತು.
ಪ್ರಾರಂಭದಲ್ಲಿ ಪ್ರೀತಿಯು ಉದಯಿಸಿತು, ಅದು ಮನಸ್ಸಿನ ಆದ್ಯ ಜೀವ ಕಣವಾಗಿತ್ತು.
ನೋಡುಗರು, ಜ್ಞಾನದೊಂದಿಗೆ ತಮ್ಮ ಹೃದಯವನ್ನು ಹುಡುಕುತ್ತಾ, ಅನಾತ್ಮನಲ್ಲಿ ಆತ್ಮನ ಸಂಬಂಧವನ್ನು ಕಂಡುಹಿಡಿದರು. ಅನಾತ್ಮನಿಂದ ಆತ್ಮನನ್ನು ಒಂದು ಅಡ್ಡರೇಖೆಯು ತುಂಡರಿಸಿತು.
ಅದರಿಂದ ಮೇಲಕ್ಕೆ ಏನನ್ನು ವಿವರಿಸಲಾಯಿತು, ಕೆಳಗೆ ಏನನ್ನು?
 ಬೀಜದೂತರು ಅಲ್ಲಿದ್ದರು ಮತ್ತು ಪ್ರಬಲ ಪಡೆಗಳು, ಮುಂದುವರೆಯಲು ಕೆಳಗಿನಿಂದ ಮೆಲಕ್ಕೆ ತಳ್ಳಿದವು
ಯಾರಿಗೆ ನಿಜವಾಗಿ ಗೊತ್ತು? ಯಾರು ಅದನ್ನು ಹೇಳಲು ಶಕ್ತರು?
ಯಾವಾಗ ಅದು ಹುಟ್ಟಿತು? ಎಲ್ಲಿಂದ ಈ ಸೃಷ್ಟಿಯು ಬಿಡುಗಡೆಯಾಯಿತು? ದೇವರುಗಳು ಕೂಡಾ ಬಂದರು ಇದರ ಉದಯದ ನಂತರ.
ಹಾಗಾದರೆ ಯಾರು ಹೇಳಬಲ್ಲರು ಅದು ಎಲ್ಲಿಂದ ಬಂತೆಂದು?
ಯಾವುದರಿಂದ ಸೃಷ್ಟಿಯು ಎದ್ದಿತೋ, ಅದನ್ನು ಹಿಡಿದು ಕೊಂಡಿತ್ತೋ ಇಲ್ಲವೋ;
ಅದನ್ನು ಎತ್ತರದ ಸ್ವರ್ಗದಿಂದ ಸಮೀಕ್ಷೆ ನಡೆಸುವವನು, ಅವನು ಖಂಡಿತಾ ತಿಳಿದಿದ್ದಾನೆ ಅಥವಾ ತಿಳಿದಿಲ್ಲದಿರಲೂಬಹುದು!
ಅದು ಬಹಳ ಆಸಕ್ತಿಕರ - ಅವನು ಖಂಡಿತಾ ತಿಳಿದಿದ್ದಾನೆ ಅಥವಾ ತಿಳಿದಿಲ್ಲದಿರಲೂಬಹುದು - ಯಾಕೆಂದರೆ ತಿಳಿದವನು ಕೂಡಾ ಆಗುವಿಕೆಯ ಭಾಗವಾಗಿದ್ದಾನೆ.
ಮೂರು ರೀತಿಯ ಆಕಾಶವು ವಿವರಿಸಲ್ಪಟ್ಟಿದೆ. ಯಾವುದರಲ್ಲಿ ನಾವು ಅಸ್ಥಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ನೋಡುತ್ತೇವೆಯೋ ಅದು ಒಂದು ಆಕಾಶ; ಹೊರಗಿನ ಆಕಾಶ - ಭೂತಾಕಾಶ. ನಂತರ ಅಲ್ಲಿ ಮಧ್ಯವರ್ತಿ ಆಕಾಶ ಅಥವಾ ಒಳಗಿನ ಆಕಾಶವಿದೆ. ಇಲ್ಲಿ ಎಲ್ಲಾ ಯೋಚನೆಗಳೂ, ಭಾವನೆಗಳೂ ತೇಲುತ್ತವೆ. ಇದು ಚಿತ್ತಾಕಾಶ ಎಂದು ಕರೆಯಲ್ಪಡುತ್ತದೆ - ಚಿತ್ತದ (ಪ್ರಜ್ಞೆಯ) ಆಕಾಶ. ನಂತರ ಚಿದಾಕಾಶ, ಶುದ್ಧವಾದ ಪ್ರಜ್ಞೆಯ ಅಥವಾ ಚೈತನ್ಯದ ಆಕಾಶ. ಅದು ಇಲ್ಲಿ ಅಲ್ಲಿ ಏಕೀಕರಣಗೊಂಡಂತೆ ಕಾಣಿಸುತ್ತದೆ ಮತ್ತು ವಸ್ತುವಿನಂತೆ ಕಾಣಿಸುತ್ತದೆ. ವಸ್ತುವಿನಂತೆ ಯಾವುದು ಕಾಣಿಸುತ್ತದೆಯೋ ಅದು ನಿಜವಾಗಿ ವಸ್ತುವಲ್ಲ, ಅದೆಲ್ಲವೂ ಒಂದು ಚೈತನ್ಯ ಮತ್ತು ಆ ಒಂದು ಕ್ಷೇತ್ರವು ಬ್ರಹ್ಮವೆಂದು ಕರೆಯಲ್ಪಡುತ್ತದೆ, ಮತ್ತು ಅದುವೇ ಎಲ್ಲರೂ, ಅದುವೇ ಎಲ್ಲವೂ.
ಇದು ಹಿಗ್ಸ್ ಬೋಸನ್ ಗೆ ಸದೃಶವಾಗಿ ಕಾಣುವುದಿಲ್ಲವೇ?
ಆದುದರಿಂದ ಬ್ರಹ್ಮ ಅಥವಾ ದೇವರು ಎಂದರೆ ಅವನು ಅಥವಾ ಅವಳಲ್ಲ, ಅವರನ್ನುತ್ತಾರೆ, ಅದೊಂದು ಕ್ಷೇತ್ರ. ಅದೊಂದು ಕ್ಷೇತ್ರ, ಅದೊಂದು ಆಕಾಶ, ಎಲ್ಲದರ ತಳಹದಿ ಮತ್ತು ಎಲ್ಲವೂ ಕೇವಲ ಅದರದ್ದೇ ಪ್ರತಿಬಿಂಬ. ಎಲ್ಲವೂ ಅದರದ್ದೇ ಪ್ರತಿಬಿಂಬದಿಂದ ರೂಪುಗೊಳ್ಳುತ್ತದೆ. ಅದು ಒಂದು ವಸ್ತುವೂ ಅಲ್ಲ, ವಸ್ತುವಲ್ಲದುದೂ ಅಲ್ಲ. ಇದು ಹಿಂದಿನ ಕಾಲದ ವಿಜ್ಞಾನಿ ಹಾಗೂ ಭವಿಷ್ಯದ ವಿಜ್ಞಾನಿಗಳಿಂದ ತಿಳಿಯಲ್ಪಡುತ್ತದೆ ಎಂದು ಕೂಡಾ ಅವರು ಹೇಳಿದರು.
ಋಷಿಯೆಂದರೆ ಕಂಡುಹುಡುಕುವವನು. ಪ್ರಾಚೀನ ಕಾಲದ ವಿಜ್ಞಾನಿಗಳು ಮತ್ತು ಆಧುನಿಕ ಕಾಲದ ವಿಜ್ಞಾನಿಗಳು ಮುಂಬರುವ ವರ್ಷಗಳಲ್ಲಿ ಇದನ್ನು ಪರಿಶೋಧಿಸುವರು. ಅವರು ಅದನ್ನು ತಿಳಿಯುವರು ಅಥವಾ ತಿಳಿಯದೇ ಇರುವರು ಎಂಬುದು ಯಾರಿಗೆ ಗೊತ್ತು?
ಆದುದರಿಂದ ಅವರು ಮುಂದೆ ಹೋದಂತೆ, ಅದು ತಿಳಿಯಲು ಸಾಧ್ಯವಿಲ್ಲದುದು ಎಂಬುದನ್ನು ತಿಳಿಯುತ್ತಾರೆ.
ಇದು ಬಹಳ ಆಸಕ್ತಿಕರ - ಹಿಗ್ಸ್ ಬೋಸನ್, ಅದರ ಪರಿಕಲ್ಪನೆಯು ಹಿಂದಿನ ಕಾಲದಿಂದ ಬಂದಿದೆ.
ನಿಜವಾಗಿ ಈ ಶ್ಲೋಕಗಳು, "ಕತ್ತಲೆಯು ಕತ್ತಲಿನಿಂದ ಆವರಿಸಲ್ಪಟ್ಟಿತ್ತು" ಎಂದು ಜನರು ಹೇಳುತ್ತಿದ್ದಾಗ, ಅದು ಅಷ್ಟು ಅರ್ಥವಾಗುತ್ತಿರಲಿಲ್ಲ. ಸಂಸ್ಕೃತ ಮತ್ತು ವೈದಿಕ ವಿದ್ವಾಂಸರು ಅದಕ್ಕೆ ಸ್ವಲ್ಪ ಅರ್ಥವನ್ನು ನೀಡಲು ಒದ್ದಾಡುತ್ತಿದ್ದರು. ಅದು ಸಂಪೂರ್ಣವಾಗಿ ಅರ್ಥರಹಿತವಾಗಿರುವಂತೆ ತೋರುತ್ತಿತ್ತು - ಇದೂ ಅಲ್ಲ ಅದೂ ಅಲ್ಲ; ಅದು ಅಸ್ತಿತ್ವದಲ್ಲಿದೆ ಅಥವಾ ಅದು ಅಸ್ತಿತ್ವದಲ್ಲಿಲ್ಲ. ಈ ರೀತಿಯ ಪದಗಳು ಸಾಕು ಒಬ್ಬ ವ್ಯಕ್ತಿಯನ್ನು ಗೊಂದಲಕ್ಕೀಡುಮಾಡಲು. ನನಗನಿಸುತ್ತದೆ, ಹಿಗ್ಸ್ ಬೋಸನ್ ಸಂಶೋಧನೆಯಿಂದಾಗಿ ನಿಮಗೆ ಈ ಶ್ಲೋಕಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಯಾಕೆಂದರೆ ಇದುವೇ ಸೃಷ್ಟಿಯ ಸ್ತೋತ್ರ ವೆಂದು ಕರೆಯಲ್ಪಡುವುದು. ಇದು ಬಹಳ ನೇರವಾಗಿಲ್ಲ; ಒಬ್ಬ ಪುರುಷ ಮತ್ತು ಒಬ್ಬಳು ಸ್ತ್ರೀಯಿದ್ದರು, ಅವರು ಪ್ರೀತಿಸಿದರು ಮತ್ತು ಅವರೊಂದು ಸಂತತಿಯನ್ನು ಮುಂದೆ ತಂದರು ಎಂಬಂತೆ - ಇದು ಈ ರೀತಿಯಿರಲಿಲ್ಲ. ಇಲ್ಲಿರುವ ಸೃಷ್ಟಿಯ ಸ್ತೋತ್ರವು ಬಹಳ ಅತೀಂದ್ರಿಯವಾದುದು ಮತ್ತು ಬಹಳ ನಿಗೂಢವಾದುದು.
ಇದರಲ್ಲಿರುವ ಆಧ್ಯಾತ್ಮಿಕತೆಯೆಂದರೆ, ಇದರ ಪ್ರಾರಂಭದಲ್ಲಿ ಹೇಳಿದೆ, ಆತ್ಮನೂ ಇರಲಿಲ್ಲ, ಅನಾತ್ಮನೂ ಇರಲಿಲ್ಲ, ವಸ್ತುವಿರಲಿಲ್ಲ ಅಥವಾ ವಸ್ತುವಲ್ಲದುದೂ ಇರಲಿಲ್ಲ ಮತ್ತು ಎಲ್ಲವೂ ಆಕಾಶದಾಚೆಗಿತ್ತು ಎಂದು.
ಆದುದರಿಂದ ಎಲ್ಲದಕ್ಕಿಂತ ಮೊದಲು, ನೀವು ಆಕಾಶವನ್ನು ತಿಳಿಯಬೇಕು ಮತ್ತು ನಂತರ ನಿಮಗೆ ಆಕಾಶದಾಚಿನದು ತಿಳಿಯಬಹುದು.
ಬ್ರಹ್ಮವು ಪರಮೇ ವ್ಯೋಮನ್ (ಆಕಾಶದ ಆಚಿನ) ಎಂದು ಅವರು ಯಾವತ್ತೂ ಹೇಳಿದ್ದಾರೆ. ನೀವು ಆಕಾಶದಾಚೆಗೆ ಹೋಗಬೇಕು ಮತ್ತು ಆಕಾಶವು ಸಂಪೂರ್ಣ ಸೃಷ್ಟಿಯನ್ನು ವ್ಯಾಪಿಸಿದೆ. ಅವರು ಮೂರು ರೀತಿಯ ಆಕಾಶಗಳ ಬಗ್ಗೆಯೂ ಹೇಳಿದ್ದಾರೆ - ಭೂತಾಕಾಶ, ಚಿತ್ತಾಕಾಶ ಮತ್ತು ಚಿದಾಕಾಶ; ಮೂರು ರೀತಿಯ ಆಕಾಶಗಳನ್ನು ತುಂಡರಿಸುವುದು ಮತ್ತು ನಂತರ ಕಂಡುಹಿಡಿಯುವುದು.
ವಿಜ್ಞಾನಿಗಳು ವಿಷಯಗಳನ್ನು ಕಟ್ಟಕಡೆಯದೆಂದು ತೀರ್ಮಾನಿಸುವುದಿಲ್ಲ, ಆದರೆ ಅವರು ಹೆಚ್ಚಿನ ಸಂಶೋಧನೆಗಾಗಿ ಯಾವತ್ತೂ ಜಾಗವನ್ನು ಬಿಡುತ್ತಾರೆ. ಅವರು ವಿಷಯಗಳನ್ನು ಕೊನೆಗೊಳಿಸದೇ ತೆರೆದಿರಿಸುತ್ತಾರೆ ಮತ್ತು ವೇದಗಳೂ ಹಾಗೆಯೇ ಮಾಡುತ್ತವೆ. ಅವರು ಅದನ್ನು ಅಷ್ಟಕ್ಕೇ ಬಿಡುತ್ತಾರೆ. ಬಹುಶಃ ಯಾರಾದರೂ ಸಂಶೋಧನೆ ನಡೆಸಬಹುದು, ಯಾರಿಗಾದರೂ ಗೊತ್ತಿರಬಹುದು ಅಥವಾ ಯಾರಿಗಾದರೂ ಗೊತ್ತಿಲ್ಲದೇ ಇರಬಹುದು. ಇದು ಸಂಪೂರ್ಣವಾಗಿ ಆಕರ್ಷಕವಾದುದು ಮತ್ತು ಆಸಕ್ತಿಕರವಾದುದು.
ಆದುದರಿಂದ ನಾವು ಈ ವೇದಗಳ ಕಡೆಗೆ ಗಮನ ಹರಿಸಬೇಕು; ಸಾಂಪ್ರದಾಯಿಕ ದೃಷ್ಟಿಯಿಂದಲ್ಲ, ಆದರೆ ವೈಜ್ಞಾನಿಕ ಮನೋಭಾವದಿಂದ. ನೀವದನ್ನು ವೈಜ್ಞಾನಿಕವಾಗಿ ತನಿಖೆ ಮಾಡಬೇಕು. ಬಹುಶಃ ನಿಮಗೆ ಇದರಿಂದ ಸ್ವಲ್ಪ ಹೆಚ್ಚು ವಿಷಯಗಳು ಸಿಗಬಹುದು ಅಥವಾ ಸಿಗದಿರಲೂಬಹುದು.
ಪ್ರಶ್ನೆ: (ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಹೌದು, ಯಾಕೆಂದರೆ ದೇವಕಣವು ಗಾಢಚೈತನ್ಯದಲ್ಲಿಯೇ ಇರುವುದು. ಯಾವುದೂ ಗಾಢಚೈತನ್ಯದ ಹೊರಗಿಲ್ಲ. ಅಸ್ತಿತ್ವದಲ್ಲಿರುವುದೆಂದರೆ, ಗಾಢವಸ್ತು ಮತ್ತು ಗಾಢಚೈತನ್ಯ. ಈ ಎಲ್ಲಾ ಪ್ರಕಾಶದ ಗುಳ್ಳೆಗಳು, ಒಂದು ಪೇಪರಿನ ಹಾಳೆಯ ಮೇಲಿರುವ ಹನಿಗಳಂತೆ.
ನಿನ್ನಲ್ಲಿ ಒಂದು ಪ್ಲಾಸ್ಟಿಕ್ ಹಾಳೆಯಿದ್ದು, ನೀನು ಅದರ ಮೇಲೆ ನೀರಿನ ಕೆಲವು ಹನಿಗಳನ್ನು ಹಾಕುತ್ತೀಯೆಂದು ಇಟ್ಟುಕೊಳ್ಳೋಣ. ಅದು ಒಂದು ಉರುಟಾದ ಆಕಾರವನ್ನು ರೂಪಿಸುತ್ತದೆ. ಅದು ಯಾಕೆ? ಅದು ಹಾಳೆಯಿಂದಾಗಿ. ಅದೇ ರೀತಿಯಲ್ಲಿ, ಈ ಸಂಪೂರ್ಣ ವಿಶ್ವವು, ಗಾಢವಸ್ತು ಮತ್ತು ಗಾಢಚೈತನ್ಯದಿಂದ ಆವರಿಸಲ್ಪಟ್ಟಿದೆ ಹಾಗೂ ಇದನ್ನೇ ಅದು ಹೇಳುವುದು, "ತಮ ಅಸಿತಮಸ ಗೂಢಮಗ್ರೆ."
ಪ್ರಾರಂಭದಲ್ಲಿ ಕತ್ತಲು ಇನ್ನೊಂದು ಕತ್ತಲಿನಿಂತ ಆವರಿಸಲ್ಪಟ್ಟಿದ್ದು ನಿಗೂಢವಾದ ರೀತಿಯಲ್ಲಿತ್ತು ಮತ್ತು ನೀವು ನೋಡುವ ಇದೆಲ್ಲವೂ ಶಕ್ತಿಯಾಗಿತ್ತು - ಸಲಿಲಂ. ಸರಳವಾದ ಅನುವಾದದಲ್ಲಿ ಸಲಿಲಂ ಎಂದರೆ ನೀರು ಎಂದರ್ಥ, ಯಾವುದು ದ್ರವವಾಗಿದೆಯೋ ಅದು. ಆದರೆ ಅದರ ಇನ್ನೊಂದು ಅರ್ಥವೆಂದರೆ ಚಲಿಸುವ ಶಕ್ತಿ. ನೀರು ಚಲಿಸುತ್ತದೆ, ಅದಕ್ಕೇ ಅದೂ ಸಲಿಲಂ ಎಂದು ಕರೆಯಲ್ಪಡುತ್ತದೆ. ವಾಯು ಚಲಿಸುತ್ತದೆ, ಅದಕ್ಕೇ ವಾಯುವು ಸಮೀರ್ ಎಂದು ಕರೆಯಲ್ಪಡುತ್ತದೆ.
ಆದುದರಿಂದ, ಸಲಿಲಂ ಎಂದರೆ ಯಾವ ಶಕ್ತಿಯು ನಿಂತಲ್ಲೇ ನಿಲ್ಲುವುದಿಲ್ಲವೋ, ಆದರೆ ಕ್ರಿಯಾಶೀಲವಾಗಿರುತ್ತದೆಯೋ; ಚಲಿಸುತ್ತದೆಯೋ ಅದು. ಸಂಪೂರ್ಣ ವಿಶ್ವವು ಕೇವಲ ಕ್ರಿಯಾಶೀಲವಾದ ಶಕ್ತಿಯಾಗಿತ್ತು. ದುರದೃಷ್ಟವಶಾತ್ ವೇದಗಳನ್ನು ತಿಳಿದಿರುವ ಜನರು ವಿಜ್ಞಾನದ ಬಗ್ಗೆ ಏನನ್ನೂ ತಿಳಿದಿಲ್ಲ ಮತ್ತು ವಿಜ್ಞಾನದ ಬಗ್ಗೆ ತಿಳಿದಿರುವ ಜನರು ವೇದಗಳ ಬಗ್ಗೆ ಏನನ್ನೂ ತಿಳಿದಿಲ್ಲ. ಅಲ್ಲೊಂದು ದೊಡ್ಡ ಅಂತರವಿದೆ. ವೈದಿಕ ಜನರಿಗೆ ವಿಜ್ಞಾನದಲ್ಲಿ ಪದವಿ ಪಡೆಯಲು ಬಹಳ ಕಷ್ಟವಾಗಬಹುದು. ಯಾವುದು ಸುಲಭವಾಗಬಹುದೆಂದರೆ, ವಿಜ್ಞಾನಿಗಳು ವೇದಗಳನ್ನು ಸ್ವಲ್ಪ ಕಲಿಯುವುದು. ಅವರು ಸ್ವಲ್ಪವಾದರೂ ಪುಸ್ತಕಗಳನ್ನು ಓದಿದರೆ; ಸಮಯ ಕಳೆಯುವುದಕ್ಕಾಗಿಯಾದರೂ; ಅವರಿಗೆ ಪರಿಶೋಧಿಸಲು ಮತ್ತು ಸ್ವಲ್ಪ ಪ್ರಯೋಜನವಿರಲೂಬಹುದಾದಂತಹ  ವಿಷಯಗಳನ್ನು ಪಡೆಯಲು ಸಾಧ್ಯವಾಗಬಹುದು.
ಆಕಾಶದಲ್ಲಿನ ಪ್ರತಿಯೊಂದು ಕಣವೂ ಜ್ಞಾನದಿಂದ, ಮಾಹಿತಿಯಿಂದ ತುಂಬಿದೆಯೆಂದು ಕೂಡಾ ಹೇಳಲಾಗುತ್ತದೆ.
ಚಿತ್ತಾಕಾಶ - ಆಕಾಶವು ಮಾಹಿತಿಯಿಂದ ತುಂಬಿದೆ; ಆಕಾಶದ ದಾಖಲೆಗಳು. ಹಿಂದೆ ಆದುದೆಲ್ಲವೂ; ಯಾರಾದರೂ ಅಥವಾ ಎಲ್ಲರೂ ಹಿಂದೆ ಏನೆಲ್ಲಾ ಮಾತನಾಡಿದರೋ ಅದೆಲ್ಲವೂ ಆಕಾಶದಲ್ಲಿದೆ. ಮುಂದೆ ಏನಾಗಲಿದೆ ಮತ್ತು ಯಾರಾದರೊಬ್ಬರು ಭವಿಷ್ಯದಲ್ಲಿ ಏನನ್ನು ಮಾತನಾಡಲಿದ್ದಾರೆ, ಇದು ಕೂಡಾ ಆಕಾಶದಲ್ಲಿದೆ. ಇದನ್ನೇ ಅವರು ಹೇಳುವುದು; ನಿಮಗೆ ಆಕಾಶಕ್ಕೆ ಪ್ರವೇಶ ದೊರಕಿದರೆ.
ಆತ್ಮದೊಡನೆ ಸಂಪರ್ಕ ಪಡೆಯುವವರು ಮತ್ತು ಪೂರ್ವಸೂಚನೆ ದೊರಕುವ ಜನರು, ಅಸಾಧಾರಣ ಪ್ರಜ್ಞೆಯ ಜನರು, ಇವರೆಲ್ಲರ ಬಗ್ಗೆ, ಈ ಒಂದು ಚಿತ್ತಾಕಾಶದ ಕ್ಷೇತ್ರದಿಂದ ಉತ್ತರ ನೀಡಬಹುದು.
ಚಿತ್ತಾಕಾಶಕ್ಕಿಂತ ಉನ್ನತವಾದುದು ಚಿದಾಕಾಶ - ಚಾಲಕ.
ಚಿತ್ತಾಕಾಶವು ಕೇವಲ ಒಂದು ಸಂಗ್ರಹಾಲಯ; ನೀವೊಂದು ಸಂದೇಶವನ್ನು ಇಲ್ಲಿ ಟೈಪ್ ಮಾಡಿ ’ಕಳುಹಿಸು’ ಎಂಬ ಗುಂಡಿಯನ್ನು ಒತ್ತುತ್ತೀರಿ ಮತ್ತು ಅದು ವಿದ್ಯುನ್ಮಾನದ ಮೂಲಕ ಹೋಗಿ ನೀವು ಯಾವ ಸಂಖ್ಯೆಗೆ ಕಳುಹಿಸಿದ್ದೀರೋ ಆ ಸಂಖ್ಯೆಗೆ ರವಾನೆಯಾಗುತ್ತದೆ. ಅದೇ ರೀತಿಯಲ್ಲಿ ನೀವು ಇ-ಮೈಲುಗಳನ್ನು ಕಳುಹಿಸುವಾಗ ಮತ್ತು ಪಡೆಯುವಾಗ, ಅವುಗಳೆಲ್ಲವೂ ಆಕಾಶದಲ್ಲಿ ಉಳಿಯುತ್ತವೆ ಮತ್ತು ನಿಮಗೆ ಅದನ್ನು ಡೌನ್-ಲೋಡ್ ಮಾಡಲು ಸಾಧ್ಯವಾಗುತ್ತದೆ. ಆ ಅಪ್ ಲೋಡಿಂಗ್ ಮತ್ತು ಡೌನ್-ಲೋಡಿಂಗ್ ಆಗುವುದು ಚಿತ್ತಾಕಾಶದಲ್ಲಿ - ಚಿತ್ತದ ಆಕಾಶ. ಆದರೆ ಅದಕ್ಕಿಂತ ಒಂದು ಮೆಟ್ಟಿಲು ಮೇಲಿರುವುದು ಚಿದಾಕಾಶ.
ಚಿದಾಕಾಶವು ಬುದ್ಧಿಯ ಕ್ಷೇತ್ರ. ಚಿದಾಕಾಶವು ವಿನ್ಯಾಸಗಾರ ಮತ್ತು ಚಿತ್ತಾಕಾಶವು ವಿನ್ಯಾಸ. ನೀವು ಯೋಗ ಮತ್ತು ಧ್ಯಾನ ಮಾಡುವಾಗ ಹಾಗೂ ಅದರೊಳಕ್ಕೆ ಆಳವಾಗಿ ಹೋಗುವಾಗ ನೀವು ಈ ಮೂರು ಆಕಾಶಗಳೊಳಗೆ ಹೋಗುತ್ತೀರಿ. ಭೂತಾಕಾಶದಲ್ಲಿ ಮೊದಲಿಗೆ ನಿಮಗೆ ಶೂನ್ಯತೆಯು ಸಿಗುತ್ತದೆ. ನೀವಂದುಕೊಳ್ಳುತ್ತೀರಿ, ಈ "ಎನೂ ಇಲ್ಲದಿರುವಿಕೆ"ಯೇ ಎಲ್ಲವೂ ಎಂದು, ಅಲ್ಲ! ನೀವು ಅದರಾಚೆಗೆ ಹೋದರೆ, ಅದು ಚಿತ್ತಾಕಾಶ ಮತ್ತು ನಂತರ ಅದರಾಚೆಗೆ ನಿಮಗೆ ಚಿದ್-ಆತ್ಮ - ಆತ್ಮ ಕಾಣಿಸುತ್ತದೆ; ಚಿದಾಕಾಶ. ಅದುವೇ ಶಿವ ತತ್ವ - ಚಿದಾಕಾಶ.
ನೋಡಿ, ನೀವು ಧ್ಯಾನ ಮಾಡಲು ಕುಳಿತಾಗ, ನೀವು ಅನುಭವಿಸುವ ಮೊದಲ ಸಂಗತಿಯೆಂದರೆ ಯೋಚನೆಗಳು ಮತ್ತು ಯೋಚನೆಗಳಿಂದ ನೀವು ಖಾಲಿತನವನ್ನು ಅನುಭವಿಸುತ್ತೀರಿ. ನಂತರ ಖಾಲಿತನದಿಂದ ಮುಂದಕ್ಕೆ ನೀವು ಚೈತನ್ಯವನ್ನು - ಪ್ರಚಂಡವಾದ ಚೈತನ್ಯವನ್ನು ಅನುಭವಿಸುತ್ತೀರಿ, ಅಲ್ಲವೇ?! ನಿಮ್ಮಲ್ಲಿ ಎಷ್ಟು ಮಂದಿ ಆಳವಾದ ಧ್ಯಾನದಲ್ಲಿ ಚೈತನ್ಯವನ್ನು ಅನುಭವಿಸುತ್ತೀರಿ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಹೌದು, ಅದು ಚಿದಾಕಾಶ. ಯಾರೋ ಒಬ್ಬರು ಕೇಳಿದರು, "ಆತ್ಮ ಹೇಗಿದೆ?"
ಅದು ಆಗಸದಂತೆ ಖಾಲಿಯಾಗಿದೆ ಮತ್ತು ಸಾಗರದಂತೆ ತುಂಬಿದೆ.
ಪ್ರಶ್ನೆ: ಒಬ್ಬನಿಗೆ ಯಾವ ರೀತಿಯ ಶಾರೀರಿಕ ವ್ಯಾಧಿ ಸಿಗುತ್ತದೆಯೆಂದು ಯಾವ ಕರ್ಮವು ನಿರ್ಧರಿಸುತ್ತದೆ? ಉದಾಹರಣೆಗೆ, ಒಬ್ಬರಿಗೆ ಕಣ್ಣಿನ ವ್ಯಾಧಿಯಿದ್ದರೆ ಅದರರ್ಥ, ಅವರು ತಮ್ಮ ಪೂರ್ವಜನ್ಮಗಳಲ್ಲಿ ಇತರರಿಗೆ ಕಣ್ಣಿನ ತೊಂದರೆಗಳನ್ನು ಕೊಟ್ಟಿದ್ದರಿಂದ ಹಾಗಾಯಿತು ಎಂದೇ?
ಶ್ರೀ ಶ್ರೀ ರವಿಶಂಕರ್:
ಅಲ್ಲ!
ಗಹನಾ ಕರ್ಮಣೋ ಗತಿಃ - ಕರ್ಮದ ನಿಯಮಗಳ ಆಳವನ್ನು ಅಳೆಯುವುದು ಬಹಳ ಕಷ್ಟ. ಅದರೊಳಕ್ಕೆ ಹೋಗಬೇಡಿ, ಸುಮ್ಮನೇ ಚಿಂತಿಸಬೇಡಿ. ಯಾವ ರೀತಿಯ ಕರ್ಮವು ತನ್ನೊಂದಿಗೆ ಯಾವ ಸಮಸ್ಯೆಯನ್ನು ತರುತ್ತದೆ ಎಂಬುದು ಒಂದು ದೊಡ್ಡ ವಿಷಯ. ನೀವು ಅದರೊಳಕ್ಕೆ ಹೋಗದಿರುವುದು ಒಳ್ಳೆಯದು. ಅದು ಇನ್ನೂ ಹೆಚ್ಚಿನ ಭ್ರಮೆಯನ್ನು ಮಾತ್ರ ಸೃಷ್ಟಿಸುತ್ತದೆ.
ಏನೇ ಕರ್ಮವಿದ್ದರೂ, ಅವುಗಳನ್ನೆಲ್ಲಾ ಜ್ಞಾನವು ಸುಟ್ಟು ಹಾಕಬಲ್ಲದು. ನೀವು ಅವುಗಳನ್ನೆಲ್ಲಾ ಸುಮ್ಮನೇ ಬಿಟ್ಟುಬಿಡಿ ಮತ್ತು ಮುಂದೆ ಸಾಗಿ. ಇಲ್ಲದಿದ್ದರೆ ಅದು ಕಸದ ತೊಟ್ಟಿಯಿಂದ ಹೆಕ್ಕಿದಂತಾಗಬಹುದು - ಬೆಳಗ್ಗಿನ ಕಸ ಯಾವುದು ಮತ್ತು ನಿನ್ನೆಯದ್ದು ಯಾವುದು ಅಥವಾ ಮೂರು ದಿನಗಳ ಮೊದಲಿನದ್ದು ಯಾವುದು. ಅದರಿಂದೇನಾಗಲಿದೆ? ಎಲ್ಲಾ ಕರ್ಮಗಳನ್ನು ಬಿಟ್ಟುಬಿಡಿ ಮತ್ತು ಸುಮ್ಮನೇ ಮುಂದೆ ಸಾಗಿ.
ಪ್ರಶ್ನೆ: ಗುರೂಜಿ, ಎಲ್ಲಾ ಜ್ಞಾನಿಗಳೂ ನಮ್ಮಲ್ಲಿ ಪಂಚೇಂದ್ರಿಯಗಳನ್ನು ನಿಗ್ರಹಿಸಲು ಹೇಳುವುದಾದರೆ, ದೇವರು ನಮಗೆ ಅವುಗಳನ್ನು ಕೊಟ್ಟಿದ್ದಾದರೂ ಯಾಕೆ?
ಶ್ರೀ ಶ್ರೀ ರವಿಶಂಕರ್:
ಯಾಕೆಂದರೆ ನೀನು ಅದಕ್ಕಿಂತಲೂ ಉತ್ತಮವಾದ ಏನನ್ನಾದರೂ ವ್ಯಕ್ತಪಡಿಸಲೆಂದು.
ಮಕ್ಕಳಿಗೆ ಮಿಠಾಯಿಗಳನ್ನು ಕೊಡಲಾಗುತ್ತದೆ. ಆದರೆ ಸ್ವಲ್ಪ ಹೆಚ್ಚು ದೊಡ್ಡವರಾದಾಗ, ಯಾರೂ ಆ ಮಿಠಾಯಿಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು ಸ್ವಲ್ಪ ಹೆಚ್ಚಿನ ಸಂತೋಷದ ಕಡೆಗೆ, ಸ್ವಲ್ಪ ಹೆಚ್ಚಿನ ಅನುಭವಗಳ ಕಡೆಗೆ ಹೋಗುತ್ತಾರೆ.
ನೋಡಿ, ವಿಷಯ ವಸ್ತುಗಳನ್ನು ಆಹ್ಲಾದಿಸಲಿರುವ ನಮ್ಮ ಸಾಮರ್ಥ್ಯವು ಸೀಮಿತವಾದುದಾಗಿದೆ; ಆದರೆ ಬಯಕೆಗೆ ಮಿತಿಯಿಲ್ಲದೇ ಹೋದಾಗ, ಅಲ್ಲೊಂದು ಅಸಮತೋಲನವುಂಟಾಗುತ್ತದೆ. ಆಗಲೇ ನೀವು ಎಚ್ಚರಿಕೆ ವಹಿಸಬೇಕಾಗುವುದು! ಉದಾಹರಣೆಗೆ ಬುಲಿಮಿಯಾವನ್ನು ತೆಗೆದುಕೊಳ್ಳಿ. ನಿಮಗೆ ಎಷ್ಟು ಆಹಾರವನ್ನು ತಿನ್ನಲು ಸಾಧ್ಯ? ಇಷ್ಟು (ಅವರ ಅಂಗೈಗಳನ್ನು ಜೊತೆಸೇರಿಸಿ). ಬುಲಿಮಿಯಾ ಎಂದರೆ, ನೀವು ತಿನ್ನುತ್ತೀರಿ, ಆದರೂ ನಿಮಗೆ ತೃಪ್ತಿಯಾಗುವುದಿಲ್ಲ. ಆಗ ನೀವು ಹೇಳುತ್ತೀರಿ, "ನಿನ್ನ ಇಂದ್ರಿಯಗಳ ಮೇಲೆ ನಿಯಂತ್ರಣವಿರಲಿ", ಯಾಕೆಂದರೆ, ಇಲ್ಲದಿದ್ದರೆ ಅದು ನಿಮ್ಮ ಸ್ವಂತ ಶರೀರಕ್ಕೆ ಹಾನಿಯುಂಟುಮಾಡುತ್ತದೆ.
ಎಲ್ಲಾ ಇಂದ್ರಿಯ ವಸ್ತುಗಳ ವಿಷಯಗಳೂ ಹೀಗೆಯೇ ಯಾಕೆಂದರೆ ಅವುಗಳನ್ನು ಅನುಭವಿಸುವುದು ನಮ್ಮನ್ನು ಆಯಾಸಗೊಳಿಸುತ್ತದೆ. ನೀವು ಸ್ವಲ್ಪ ಆಹಾರವನ್ನು ತಿಂದರೆ, ಅದು ನಿಮಗೆ ಶಕ್ತಿಯನ್ನು ಕೊಡುತ್ತದೆ, ಆದರೆ ನೀವು ಸ್ವಲ್ಪ ಹೆಚ್ಚಿಗೆ ತಿಂದರೆ, ಆಗ ಅದು ನಿಮಗೆ ಆಯಾಸ ತರುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? ನಿಮಗೆ ಶಕ್ತಿಯನ್ನು ಕೊಡುವ ಬದಲು ಅದು ನಿಮ್ಮನ್ನು ಬಹಳ ಆಯಾಸಗೊಳಿಸಿದೆ.
ಆದುದರಿಂದ "ತೇನ ತ್ಯಕ್ತೇನ ಭುಂಜಿತಃ" ಎಂದು ಹೇಳುತ್ತಾರೆ - ಅದರರ್ಥ, ಅದನ್ನು ಅನುಭವಿಸು ಆದರೆ ಅದರಾಚೆಗೆ ಕೂಡಾ ಹೋಗು; ಹೋಗಲು ಬಿಡು. ನೀವು ಉಸಿರನ್ನು ಒಳಕ್ಕೆಳೆದುಕೊಳ್ಳಬಹುದು, ಆದರೆ ನಿಮಗೆ ಉಸಿರನ್ನು ಒಳಕ್ಕೆಳೆದುಕೊಳ್ಳಲು ಮಾತ್ರ ಸಾಧ್ಯವಿಲ್ಲ, ನೀವು ಉಸಿರನ್ನು ಹೊರಕ್ಕೆ ಬಿಡಲೂ ಬೇಕು. ಇಲ್ಲದಿದ್ದರೆ ನೀವು ಸಾಯುವಿರಿ, ಅಲ್ಲವೇ? ಆದುದರಿಂದ ನೀವು ಒಳಮುಖವಾಗಿ ತಿರುಗಿದಾಗ, ನೀವು ಯೋಗದ ಕಡೆಗೆ ಹೋದಾಗ, ನಿಮಗೆ ಹೆಚ್ಚಿನ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಯೋಗವೆಂದರೆ ಶಕ್ತಿಯ ಸಂರಕ್ಷಣೆ, ಇಲ್ಲದಿದ್ದರೆ ಅದು ಶಕ್ತಿಯ ವ್ಯಯ.
ಮಕ್ಕಳು ಖರ್ಚು ಮಾಡಿದರೆ ಯಾರೂ ಚಿಂತಿಸುವುದಿಲ್ಲ, ಹೆತ್ತವರು ಹೇಳುತ್ತಾರೆ, "ಸರಿ, ನೀನು ಖರ್ಚು ಮಾಡು." ಆದರೆ ಒಬ್ಬ ಹದಿಹರೆಯದವನು ಅಥವಾ ಹದಿಹರೆಯ ದಾಟಿ ಬೆಳೆದವನು ಖರ್ಚು ಮಾಡಿದರೆ, ಆಗ ಹೆತ್ತವರು, "ಜಾಗ್ರತೆಯಾಗಿ ಖರ್ಚು ಮಾಡು. ಹಣವನ್ನು ಸಂಪಾದಿಸಬೇಕು ಕೂಡಾ, ನೀನು ಖರ್ಚು ಮಾತ್ರ ಮಾಡಲು ಸಾಧ್ಯವಿಲ್ಲ" ಎಂದು ಹೇಳುತ್ತಾರೆ. ನೀವು ವಯಸ್ಕರಾಗಿದ್ದರೆ, ನೀವು ಹಣಸಂಪಾದನೆ ಕೂಡಾ ಮಾಡಬೇಕೆಂದು ಅವರು ಹೇಳುವರು. ಆದರೆ ಶಿಶುಗಳು ಸಂಪಾದಿಸುವುದಿಲ್ಲ, ಹಾಗಿದ್ದರೂ ಹೆತ್ತವರು ಹೇಳುತ್ತಾರೆ, "ನೀನು ಹೋಗಿ ಸಂಪಾದಿಸು." ಅದೇ ರೀತಿಯಲ್ಲಿ ಇಂದ್ರಿಯಗಳ ಮೂಲಕ ನೀವು ಒಳ್ಳೆಯ ರುಚಿಯನ್ನು, ಒಳ್ಳೆಯ ದೃಶ್ಯವನ್ನು, ಒಳ್ಳೆಯ ಶಬ್ದವನ್ನು, ಎಲ್ಲವನ್ನೂ ಆಸ್ವಾದಿಸುತ್ತೀರಿ. ಆದರೆ ನಂತರ ಬಂದು ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ, ಧ್ಯಾನದಲ್ಲಿ ಆಳಕ್ಕೆ ಹೋಗಿ ಮತ್ತು ಅಲ್ಲಿ ಹೆಚ್ಚಿನ ಆನಂದ, ಹೆಚ್ಚಿನ ಸಂತೋಷ ಇದೆಯೆಂಬುದನ್ನು ಅರ್ಥಮಾಡಿಕೊಳ್ಳಿ ಹಾಗೂ ಅದರ ಕಡೆಗೂ ನೋಡಿ.
ಪ್ರಶ್ನೆ: ಗುರೂಜಿ, ಸಸ್ಯಾಹಾರಿಯಾಗಿರುವುದರ ಬಗ್ಗೆ ದಯವಿಟ್ಟು ಮಾತನಾಡಿ.
ಶ್ರೀ ಶ್ರೀ ರವಿಶಂಕರ್:
ನೀವು ಗೂಗಲಿಗೆ ಹೋಗಿ ಹುಡುಕಿದರೆ, ಅಲ್ಲಿ ಹಲವಾರು ಕಾರಣಗಳು ಸಿಗುತ್ತವೆ. "ನಾನು ಯಾಕೆ ಸಸ್ಯಾಹಾರಿಯಾಗಿರಬೇಕು?" ಅಥವಾ ಕೇವಲ, "ಸಸ್ಯಾಹಾರಿ" ಎಂದು ಟೈಪ್ ಮಾಡಿ ಅಥವಾ "ಸಸ್ಯಾಹಾರದ ಲಾಭಗಳು" ಎಂದು ಟೈಪ್ ಮಾಡಿ. ಅದು ಪುಟಗಟ್ಟಲೆಗಳಷ್ಟು ಬರಬೇಕು. ಹಾಗೆಯೇ ನಿಮಗೆ ವೈದ್ಯರ, ವಿಜ್ಞಾನಿಗಳ, ಪೋಷಣಶಾಸ್ತ್ರಜ್ಞರ ಹಲವಾರು ವಿಡಿಯೋಗಳು ಮತ್ತು ಅಂತಹದ್ದೆಲ್ಲಾ ಸಿಗಬಹುದು.
ಪ್ರಶ್ನೆ: ಗುರೂಜಿ, ನೀವು ತಂತ್ರ ಮತ್ತು ಖಜುರಾಹೋ ದೇವಾಲಯಗಳ ಬಗ್ಗೆ ಮಾತನಾಡುವಿರಾ? ನಾನು ಈ ದೇವಾಲಯಗಳನ್ನು ಬೇರೆ ಬೇರೆ ಗುಂಪುಗಳೊಂದಿಗೆ ಸಂದರ್ಶಿಸುತ್ತಾ ಬಂದಿದ್ದೇನೆ ಮತ್ತು ಪ್ರತಿಯೊಬ್ಬ ಮಾರ್ಗದರ್ಶಕನೂ ಬೇರೆ ಬೇರೆ ವಿಷಯಗಳನ್ನು ಹೇಳುತ್ತಾನೆ ಹಾಗೂ ನನಗೆ ಅದರಲ್ಲಿ ಸತ್ಯವು ಕಾಣಿಸುವುದಿಲ್ಲ.
ಶ್ರೀ ಶ್ರೀ ರವಿಶಂಕರ್:
ಯಂತ್ರ, ಮಂತ್ರ ಮತ್ತು ತಂತ್ರ - ಇವುಗಳು ಮೂರು ವಿಷಯಗಳು.
ಮಂತ್ರವು ಶಬ್ದವಾಗಿದೆ. ಯಂತ್ರವು ಚಿತ್ರಣವಾಗಿದೆ. ಯಹೂದಿ ಧರ್ಮವು ತನ್ನ ಪ್ರಧಾನ ಚಿಹ್ನೆಯಾಗಿ ಉಪಯೋಗಿಸುವ ಸ್ಟಾರ್ ಆಫ್ ಡೇವಿಡ್ ಎಂಬುದು ಅಂತಹ ಒಂದು ಯಂತ್ರ. ತಂತ್ರವೆಂದರೆ, ಒಂದು ಭೌತಿಕ ಚಿತ್ರಣವನ್ನು ಅಥವಾ ಒಂದು ಭಂಗಿಯನ್ನು ಶಬ್ದದೊಂದಿಗೆ ಒಂದುಗೂಡಿಸುವ ಪ್ರಕ್ರಿಯೆ; ಇದು ತಂತ್ರ - ಅದನ್ನು ಮಾಡಲಿರುವ ಕೌಶಲ್ಯ.
ಪ್ರಾಚೀನ ಋಷಿಗಳು ಸಂಭೋಗದ ಬಗ್ಗೆ ಕೂಡಾ ಬರೆದರು - ಕಾಮಸೂತ್ರವು ಬರೆಯಲ್ಪಟ್ಟಿತು, ವಿವಿಧ ಭಂಗಿಗಳು ಹಾಗೂ ತಂತ್ರದ ಬಗ್ಗೆ ವಿವಿಧ ಸಿದ್ಧಾಂತಗಳು ಮತ್ತು ನಿಯಮಗಳು. ಅದು ಗೀಳನ್ನು ತೊಡೆದುಹಾಕಲು ಉಪಯೋಗಿಸಲ್ಪಡುತ್ತದೆ.
ಅದು ದೇವಾಲಯದ ಹೊರಗೋಡೆಗಳ ಮೇಲೆ ಯಾಕಿದೆ, ಅದಕ್ಕೆ ಒಂದು ಕಾರಣವಿದೆ.
ಯಾತ್ರಿಗಳಲ್ಲಿ, ಮೊದಲು ದೇವಾಲಯದ ಸುತ್ತಲೂ ಹೋಗಿ ಎಲ್ಲಾ ಪ್ರತಿಮೆಗಳನ್ನು ನೋಡಲು ಹೇಳಲಾಗುತ್ತದೆ ಮತ್ತು ಯಾವುದಾದರೂ ಪ್ರತಿಮೆಯು, ಯಾವುದಾದರೂ ರೀತಿಯಲ್ಲಿ ನಿಮ್ಮನ್ನು ಉದ್ರೇಕಗೊಳಿಸಿದರೆ, ನೀವಲ್ಲಿ ಕುಳಿತು ಅದನ್ನು ನೋಡುತ್ತಾ ಇರಿ. ಅದನ್ನು ನೋಡುತ್ತಿರುವ ಕ್ಷಣದಲ್ಲಿ ನಿಮ್ಮ ಉದ್ರೇಕವು ಕೆಳಗಿಳಿಯುತ್ತದೆ. ಆದುದರಿಂದ, ಮನಸ್ಸು ಈ ಎಲ್ಲಾ ವಿವಿಧ ಭಂಗಿಗಳ ಕಡೆಗೆ ಉದ್ರೇಕವನ್ನು ಕಳಕೊಂಡಾಗ, ನೀವು ಒಳಗೆ ಹೋಗಿ. ಆಗ ನಿಮ್ಮ ಮನಸ್ಸು ಟೊಳ್ಳು ಮತ್ತು ಖಾಲಿಯಾಗಿರುತ್ತದೆ. ಮನಸ್ಸು ಖಾಲಿಯಾಗಿರುತ್ತದೆ ಮತ್ತು ಆಗ ನಿಮಗೆ ಒಳಗಿನ ಸೂರ್ಯನನ್ನು ನೋಡಲು ಸಾಧ್ಯವಾಗುತ್ತದೆ. ಅದು (ಖಜುರಾಹೋ) ಒಂದು ಸೂರ್ಯ ದೇವಾಲಯ.
ನೀವು ಕೇಳಬಹುದು, "ಆದರೆ ಸೂರ್ಯನು ಹೊರಗಿದ್ದಾನೆ, ಸೂರ್ಯನನ್ನು ನೋಡಲು ನಾವು ದೇವಾಲಯದ ಒಳಗೆ ಯಾಕೆ ಹೋಗಬೇಕು?"
ಪ್ರಾಚೀನ ಜನರು, ಅದು ಹೊರಗಿನ ಸೂರ್ಯ, ಅಲ್ಲೊಂದು ಒಳಗಿನ ಸೂರ್ಯನಿದ್ದಾನೆ - ಆತ್ಮ, ಎಂದು ಹೇಳಿದರು.
ಆತ್ಮನನ್ನು ನೋಡಲಿರುವ ಒಂದು ತಡೆಯೇನು? ಜ್ಞಾನೇಂದ್ರಿಯಗಳ ಬಗ್ಗೆಯಿರುವ ಉದ್ರೇಕ. ವಸ್ತುಗಳ ಕಡೆಗಿರುವ ಜ್ಞಾನೇಂದ್ರಿಯಗಳ ಹರಿಯುವಿಕೆಯು, ಒಳಮುಖವಾಗಿ ಚಲಿಸಬೇಕಾದ ನಿಮ್ಮ ಮನಸ್ಸನ್ನು ಹೊರಮುಖವಾಗಿರಿಸುತ್ತದೆ.
ಆದುದರಿಂದ, ದೇವಾಲಯದಲ್ಲಿ ನೀವು ಹಲವು ಸಾರಿ ಸುತ್ತು ಬರುತ್ತೀರಿ ಮತ್ತು ಆ ಪ್ರತಿಮೆಗಳ ಮುಂದೆ ಕುಳಿತುಕೊಳ್ಳುತ್ತೀರಿ. ಅದೊಂದು ಅಶ್ಲೀಲ ಚಲನಚಿತ್ರದಂತೆ, ಆದರೆ ಅದರಲ್ಲಿ ತಾತ್ಪರ್ಯವಿದೆ. ಅಶ್ಲೀಲ ಚಿತ್ರಗಳು ಜನರನ್ನು ಉದ್ರೇಕಗೊಳಿಸಲು ಬಳಸಲ್ಪಡುತ್ತವೆ, ಆದರೆ ಇದು, ಜನರನ್ನು ಶಾಂತಗೊಳಿಸಲು ಬಳಸಲ್ಪಡುತ್ತದೆ. ಆದುದರಿಂದ ಇದು, ಲೈಂಗಿಕತೆಯ ಬಗೆಗಿನ ಗೀಳಿಗಿರುವ ಚಿಕಿತ್ಸೆಯಾಗಿ ಬಳಸಲ್ಪಡುತ್ತದೆ.
ಲೈಂಗಿಕತೆಯ ಬಗೆಗಿನ ಗೀಳು ಎಂಬುದು ಒಂದು ಹೊಸ ವಿಷಯವಲ್ಲ, ಅದೊಂದು ಹಳೆಯ ರೋಗ. ನೀವದನ್ನು ರೋಗವೆಂದು ಕೂಡಾ ಕರೆಯಲು ಸಾಧ್ಯವಿಲ್ಲ; ಅದು ಜನರಲ್ಲಿರುವ ಒಂದು ಹಳೆಯ ಬಳುವಳಿ. ಆತ್ಮನ ಪ್ರಕಾಶವನ್ನು ನೋಡಲು ನೀವು ಕುಶಲತಾಪೂರ್ವಕವಾಗಿ ಅದನ್ನು ದಾಟಿಹೋಗಬೇಕು ಮತ್ತು ಅದಕ್ಕಾಗಿ ಅವರು ಈ ವಿಷಯಗಳನ್ನು ಬಳಸುತ್ತಾರೆ. ಯಾವುದು ಪ್ರಚೋದಿಸಬಲ್ಲದೋ, ಕಾಡಬಹುದೋ ಅಥವಾ ಉದ್ರೇಕಗೊಳಿಸಬಹುದೋ ಅಂತಹ ಯಾವುದರೊಂದಿಗಾದರೂ ಅವರು ಕುಳಿತುಕೊಳ್ಳುತ್ತಾರೆ ಮತ್ತು ಅದನ್ನು ನೀವು ಹೆಚ್ಚು ನೋಡಿದಷ್ಟೂ ಉದ್ರೇಕವು ಹೋಗುತ್ತದೆ. ಮನಸ್ಸು ಶಾಂತವಾಗುತ್ತದೆ.
ಅಶ್ಲೀಲ ಉದ್ಯಮಗಳಲ್ಲಿರುವ ಜನರಿಗೆ ಅದರಲ್ಲಿ ಯಾವುದೇ ಆಸಕ್ತಿಯಿರುವುದಿಲ್ಲ ಎಂದು ಯಾರೋ ನನಗೆ ಹೇಳಿದ್ದಾರೆ. ಅವರು ಉದ್ರೇಕಗೊಳ್ಳುವುದಿಲ್ಲ. ನಾನು ಅದರ ಬಗ್ಗೆ ಕೇಳಿರುವುದು ಮಾತ್ರ ಮತ್ತು ಅದರಲ್ಲಿ ಅರ್ಥವಿದೆಯೆಂದು ನನಗನಿಸುತ್ತದೆ, ಯಾಕೆಂದರೆ ಅವರು ಹಗಲು ರಾತ್ರಿ ಅದನ್ನೇ ನೋಡುತ್ತಿರುತ್ತಾರೆ. ಅದು ಅವರಿಗೆ ಕೇವಲ ಒಂದು ವ್ಯವಹಾರ, ಅಷ್ಟೆ. ಅದು, ಅವರಿಗೆ ರುಚಿಸುವಂತಹುದಾಗಲೀ ಅಥವಾ ಆನಂದಿಸುವಂತಹುದಾಗಲೀ ಅಲ್ಲ. ಬಹುತೇಕ, ಆಹಾರವನ್ನು ಆಸ್ವಾದಿಸದೇ ಇರುವ ಒಬ್ಬ ಅಡುಗೆಯವನಂತೆ; ಯಾಕೆಂದರೆ ಅವನು ಪ್ರತಿದಿನವೂ ಹಲವಾರು ರೀತಿಯ ವ್ಯಂಜನಗಳನ್ನು ತಯಾರು ಮಾಡುತ್ತಾನೆ. ಆಹಾರವು ನಿಜವಾಗಿ ಒಬ್ಬ ಅಡುಗೆಯವನನ್ನು ಮೋಡಿ ಮಾಡುವುದಿಲ್ಲ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಅದು ಒಬ್ಬ ಅಡುಗೆಯವನಲ್ಲಿ ಒಂದು ದೊಡ್ಡ ಅಚ್ಚರಿಯನ್ನು ಸೃಷ್ಟಿಸುವುದಿಲ್ಲ ಯಾಕೆಂದರೆ ಪ್ರತಿದಿನವೂ ಅವನು ಎಲ್ಲಾ ವಿವಿಧ ಬಗೆಯ ಆಹಾರವನ್ನು ಮಾಡುತ್ತಿರುತ್ತಾನೆ.
ಅದೇ ರೀತಿಯಲ್ಲಿ ತಂತ್ರಗಳು ಬಳಸಲ್ಪಟ್ಟವು. ಆದರೆ ತಂತ್ರಗಳನ್ನು ಬಹಳ ಕಟ್ಟುನಿಟ್ಟಾದ ಮಾರ್ಗದರ್ಶನದಡಿಯಲ್ಲಿ ಅಭ್ಯಾಸ ಮಾಡಬೇಕು, ಇಲ್ಲದಿದ್ದರೆ ಅದು ಒಂದು ಖಡ್ಗದ ಮೇಲೆ ನಡೆಯುವಂತೆ. ಅದರಿಂದ ಕೆಳಗೆ ಬೀಳುವ ಜನರು ಸಂಪೂರ್ಣವಾಗಿ ಕೆಳಗೆ ಬೀಳುತ್ತಾರೆ ಮತ್ತು ಅದು ಅಪಾಯಕಾರಿ. ಸಾಧಾರಣವಾಗಿ ಜನರು, ಅದನ್ನು ಮಾಡುವುದು ಅಪಾಯಕಾರಿ ಸಂಗತಿಯೆಂದು ಹೇಳುತ್ತಾರೆ.
ತಂತ್ರದಲ್ಲಿ ಕೂಡಾ, ಬಿಳಿ ತಂತ್ರ, ಕಪ್ಪು ತಂತ್ರ ಮತ್ತು ಎಲ್ಲಾ ರೀತಿಯ ವಿಷಯಗಳಿವೆ. ಮುಂದೆ ಸಾಗಲು ಯೋಗವು ಅತ್ಯುತ್ತಮವಾದ, ಸುರಕ್ಷಿತವಾದ ಮತ್ತು ನಿರ್ಭಯವಾದ ದಾರಿಯಾಗಿದೆ. ಮಂತ್ರ, ಯಂತ್ರ ಮತ್ತು ಯೋಗ. ಯೋಗದಲ್ಲಿರುವ ಈ ತಂತ್ರವು, ಮನಸ್ಸನ್ನು ಶಾಂತಗೊಳಿಸಲಿರುವ ಉಪಾಯ.
ಪ್ರಶ್ನೆ: ಗುರೂಜಿ, ನಿಮಗೆ ಹತ್ತಿರವಾಗುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಕೆಲವು ವಿಷಯಗಳನ್ನು ನೀವು ಭಾವಿಸಿಕೊಳ್ಳಬೇಕು. ನನ್ನ ಕಡೆಯಿಂದ ನೀವು ಈಗಾಗಲೇ ನನಗೆ ಹತ್ತಿರವಾಗಿರುವಿರಿ. ನೀವು ನನಗೆ ಹತ್ತಿರವಾಗಿರಬೇಕಾದರೆ, ನೀವು ನನಗೆ ಹತ್ತಿರವಾಗಿರುವಿರೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ನೀವು ನನಗೆ ಕೇಳಬಾರದು. ನಾನು ನಿಮಗೆ ಹತ್ತಿರವಾಗಿರುವೆನು ಎಂದು ಅಂದುಕೊಳ್ಳಿ ಮತ್ತು ಅಷ್ಟೆ. ಅದನ್ನೆಂದೂ ಪುನಃ ಪ್ರಶ್ನಿಸಬೇಡಿ.
ಪ್ರಶ್ನೆ: ಗುರೂಜಿ, ನನ್ನ ಕುಟುಂಬವು ಮುರಿದು ಬೀಳುತ್ತಿದೆ ಮತ್ತು ನಾನು ನನ್ನ ಎರಡು ಮಕ್ಕಳ ಬಗ್ಗೆ ಚಿಂತೆಗೊಳಗಾಗಿದ್ದೇನೆ. ನನ್ನ ಸಂಗಾತಿಯೊಂದಿಗಿನ ನನ್ನ ಸಂಬಂಧವು, ಅಪನಂಬಿಕೆ ಮತ್ತು ಅಪಾರ್ಥಗಳಿಂದಾಗಿ ಕಹಿಯಾಗುತ್ತಿದೆ. ನನಗೆ ನಿಮ್ಮ ಸಲಹೆ ಬೇಕು.
ಶ್ರೀ ಶ್ರೀ ರವಿಶಂಕರ್:
ಕೆಲವು ಕಷ್ಟಕಾಲಗಳು ಜೀವನದಲ್ಲಿ ಬರುತ್ತವೆ, ಕೇವಲ ತಾಳ್ಮೆಯಿಂದಿರು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಅವಸರಿಸಬೇಡ. ಭಯಂಕರ ಗೊಂದಲದ ಮತ್ತು ಸಂಘರ್ಷದ ಸಮಯಗಳಲ್ಲಿ ನಿನ್ನಲ್ಲಿ ಸ್ವಲ್ಪ ತಾಳ್ಮೆಯಿರಬೇಕು.