14
2012............................... ’ಅಮೃತಬಿ೦ದು’ ಸರಣಿಯ ಬರಹಗಳು
Jul
ಎರಡನೆಯ ಕ೦ತು
ಜ್ಞಾನ ಮಾರ್ಗ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೪.೦೩.೦೩ರ೦ದು ಪ್ರಕಟವಾಗಿತ್ತು)
ಈಗ ನಿಮಗೆ ಚಿಂತೆ ಆಗಿದ್ದರೆ ಒಂದು ನಿಮಿಷ ಸುಮ್ಮನೆ ಕುಳಿತು, ಚಿಂತೆ ಆಗ್ತಾ ಇದೆ, ಯಾರಿಗೆ ಆಗ್ತಾ ಇದೆಯಪ್ಪ ಈ ಚಿಂತೆ ಎಂದು ಚಿಂತಿಸುವುದರಿ೦ದ ಆತ್ಮನ ಕಡೆಗೆ ಮನಸ್ಸು ಹರಿಯುತ್ತದೆ.
ಜಾಗೃತ ಅವಸ್ಥೆಯಲ್ಲಿ ನಮಗೆ ಚಿಂತೆ ಗೊತ್ತಾಗುವಂತೆ, ನಿದ್ರಾವಸ್ಥೆಯಲ್ಲಿ ಗೊತ್ತಾಗುವುದಿಲ್ಲ ಅಲ್ಲವೆ? ಏಕೆಂದರೆ, ನಿದ್ರೆಯಲ್ಲಿ ನಾವು ಅನುಭವದಿಂದ ಹೊರಬಿದ್ದು ಅನುಭವಕರ್ತಾನಲ್ಲಿ - ಎಂದರೆ ನಮ್ಮ ಕೇಂದ್ರದಲ್ಲಿರ್ತೀವಿ. ಅಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತೀವಿ. ಇದನ್ನು ಜಾಗೃತ ಅವಸ್ಥೆಯಲ್ಲೂ ನಾವು ಅರಿವಿಗೆ ತಂದುಕೋಬೇಕು.
* * * * *
ಸಾಕ್ಷೀಭಾವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೫.೦೩.೦೩ರ೦ದು ಪ್ರಕಟವಾಗಿತ್ತು)

ಎಷ್ಟೋ ಸಲ ಏನನಿಸುತ್ತೆ? 'ಎಲ್ಲರಿಗೂ ವಯಸಾಗ್ತಾ ಇದೆ, ನಾನು ಹೇಗಿದ್ದೆನೋ ಹಾಗೆಯೇ ಇದ್ದೇನೆ. ನಮ್ಮ ಕಣ್ಣೆದುರಿಗಿನ ಚಿಕ್ಕ ಮಕ್ಕಳೆಲ್ಲಾ ದೊಡ್ಡವರಾಗ್ತಾ ಇದ್ದಾರೆ, ಮಿಕ್ಕವರಿಗೆಲ್ಲಾ ವಯಸ್ಸಾಗ್ತಿದೆ. ಅದೇ ನನಗೆ ಮಾತ್ರ ವಯಸ್ಸಾಗಿಲ್ಲ, ಏನೂ ಆಗಿಲ್ಲ...ನಾನು ಇರುವಂತೆಯೇ ಇದ್ದೀನಿ'.
ಇಂತಹ ಅನುಭವ ನಿಮಗೆ ಆಗಿದೆಯೋ ಇಲ್ಲವೋ?
ನಮ್ಮಲ್ಲಿರುವ ಚೇತನಕ್ಕೆ ವಯಸ್ಸಾಗುವುದಿಲ್ಲ, ಅದು ಅಜರ. ಹಾಗೆಯೇ ಯಾರೋ ಸತ್ತರು ಎಂದರೆ ’ಅಯ್ಯೋ ಪಾಪ ಹೋಗಿ ಬಿಟ್ಟರು’ ಅನಿಸುತ್ತದೆ. ಅದೇ ರೀತಿ 'ಒಂದು ದಿನ ನಾನೂ ಸಾಯ್ತೀನಿ' ಎಂಬ ಅನಿಸಿಕೆಯೇ ಉಂಟಾಗೋದಿಲ್ಲ.
ಏಕೆ? ನಮಗೆ ಸಾವಿಲ್ಲ, ಅಜರ, ಅಮರ. 'ಆ ನಾನು ಯಾರು' ಅಂತ ಮತ್ತೆ ಮತ್ತೆ ಕೇಳಿಕೊಳ್ಳಿ.
ದುಃಖಿಯಾಗಿದ್ದರೆ..'ಯಾರು ದುಃಖಿಯಾಗಿದ್ದಾರೆ? ಯಾರಿಗೆ ಈ ಅನುಭವ ಆಗ್ತಾ ಇದೆ?' ಅಂತ ಕೇಳಿಕೊಳ್ಳಿ. ಆಗ ನೀವು ಸಾಕ್ಷಿತ್ವಕ್ಕೆ ಬರುತ್ತೀರಿ.ದುಃಖದಿಂದ ದೂರವಾಗ್ತೀರಿ. ಅನೇಕ ಮಾರ್ಗಗಳಲ್ಲಿ ಅದೊಂದು ಮಾರ್ಗ, ಇದು ಜ್ಞಾನದ ಮಾರ್ಗ.
* * * * *
ಅಂತರ್ಮುಖಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೬.೦೩.೦೩ರ೦ದು ಪ್ರಕಟವಾಗಿತ್ತು)

ಒಂದು ವೇಳೆ ಹತಾಶರಾಗಿದ್ದರೆ ಆ ಹತಾಶೆಯ ಅನುಭವದಲ್ಲಿಯೇ ನಿಮ್ಮ ವೇಳೆಯನ್ನೆಲ್ಲಾ ಕಳೆಯದೆ, ಅದರ ಬದಲು "ಹತಾಶೆ ಯಾರಿಗಾಗಿದೆ?" ಎಂದು ಪ್ರಶ್ನಿಸಿಕೊಳ್ಳಿ.
ನೀವು ದುಃಖಿಗಳಾಗಿದ್ದಾಗ ಪ್ರಶ್ನಿಸಿಕೊಳ್ಳಿ "ದುಃಖ ಯಾರಿಗಾಗಿದೆ?" ಎಂದು.
ನಿಮಗೆ ಏನಾದರೂ ಗೊತ್ತು ಎಂದುಕೊಂಡಾಗ ಕೇಳಿಕೊಳ್ಳಿ "ಯಾರಿಗೆ ಗೊತ್ತು?" ಎಂದು.
ನೀವು ಆತ್ಮಜ್ಞಾನಿ ಎಂದು ಅನಿಸಿದಾಗ ಪ್ರಶ್ನಿಸಿಕೊಳ್ಳಿ "ಯಾರದು ಆತ್ಮಜ್ಞಾನಿಯಾಗಿರುವವನು?" ಎಂದು. ನೀವು ಅಜ್ಞಾನಿಯೆಂದು ಚಿಂತಿಸಿದಾಗ ಕೇಳಿಕೊಳ್ಳಿ "ಯಾರು ಅಜ್ಞಾನಿ?" ಎಂದು.
ನಿಮ್ಮ ಬಗ್ಗೆಯೇ ನಿಮಗೆ ಅಯ್ಯೋಪಾಪ! ಎನಿಸಿದಾಗ ನಿಮ್ಮನ್ನೇ ಕೇಳಿಕೊಳ್ಳಿರಿ "ಯಾರದು ’ಪಾಪದವರು’" ಎಂದು. ನೀವು ತುಂಬಾ ಭಕ್ತರೆಂದುಕೊಂಡಾಗ ಪ್ರಶ್ನಿಸಿಕೊಳ್ಳಿ “ಯಾರು ಭಕ್ತಿಯುಳ್ಳವರು?” ಎಂದು.
ಈ ರೀತಿಯಾಗಿ ನಿಮ್ಮ ವಿಭಿನ್ನ ರೀತಿಯ ಮುಖಗಳಿಂದ ಮುಕ್ತರಾಗಿ (ಕಳಚಿಕೊಂಡು) ಆತ್ಮನನ್ನು ಸಂಧಿಸಿ. ಆಗ ನಿಜವಾಗಿಯೂ ನೀವು (ಭಗವಂತನ ಜೊತೆಯಲ್ಲಿರುತ್ತೀರಿ) ಅಂತರ್ಮುಖಿಗಳಾಗಿ ನಿಮ್ಮ ಕೇಂದ್ರದಲ್ಲಿರುತ್ತೀರಿ.