ಮಂಗಳವಾರ, ಜುಲೈ 31, 2012

ಶ್ರೀ ಶ್ರೀ ವಿಶ್ವವಿದ್ಯಾನಿಲಯ

31
2012
Jul
ಬೆಂಗಳೂರು ಆಶ್ರಮ, ಭಾರತ

ವತ್ತು ನಾವು ಒರಿಸ್ಸಾದ ಭುವನೇಶ್ವರದಲ್ಲಿ ನಮ್ಮ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳ ಮೊದಲ ಗುಂಪು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದೆ, ಮತ್ತು ವಿದ್ಯಾರ್ಥಿಗಳ ಈ ಮೊದಲ ಗುಂಪು ನಮ್ಮ ಹೆಮ್ಮೆಯಾಗಿದೆ, ಯಾಕೆಂದರೆ ಅವರು, ಬಹಳ ದೊಡ್ಡ ಮತ್ತು  ಬಹಳ ಉತ್ತಮವಾಗಲಿರುವ ಒಂದರ ಅಡಿಪಾಯವಾಗಿದ್ದಾರೆ.
ಒರಿಸ್ಸಾದ ಶ್ರೀ ಶ್ರೀ ವಿಶ್ವವಿದ್ಯಾನಿಲಯವು, ಮೌಲ್ಯಗಳು ಮತ್ತು ಸಾರ್ವತ್ರಿಕ ಸಹಕಾರವನ್ನು ಆಧರಿಸಿದೆ.  ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪೂರ್ವದ ಅತ್ಯುತ್ತಮವಾದುದು ಮತ್ತು ಪಶ್ಚಿಮದ ಅತ್ಯುತ್ತಮವಾದುದನ್ನು ಒದಗಿಸಲಾಗುವುದು. ಅವರು ಜಾಗತಿಕ ನಾಗರಿಕರಾಗುವರು ಮತ್ತು ತಮ್ಮ ಕುಶಲತೆಗಳನ್ನು ಹಾಗೂ ತಮ್ಮ ಧೀಮಂತಿಕೆಯನ್ನು ಪ್ರಪಂಚದಲ್ಲೆಲ್ಲಾ ಕೊಂಡೊಯ್ಯುವರು.
ನಮ್ಮ ಉಪಕುಲಪತಿಗಳಾದ ಡಾ.ಮಿಶ್ರಾ ಅವರನ್ನು, ನಮ್ಮ ವಿವಿಶ್ವವಿದ್ಯಾನಿಲಯದ ಡಾ.ರಾವ್ ಅವರನ್ನು ಮತ್ತು ಇತರ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಅವರೆಲ್ಲರೂ ಅಲ್ಪಾವಧಿಯಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಭುವನೇಶ್ವರದ ಮಳೆಯ ಮಧ್ಯೆಯೂ ಅವರು ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಾಗಿ ಬಂತು. ಅವರಿಗೆ ಹಲವಾರು ಸವಾಲುಗಳಿದ್ದವು ಮತ್ತು ಸವಾಲುಗಳ ನಡುವೆ, ವಿಶ್ವವಿದ್ಯಾನಿಲಯವನ್ನು ಹೇಳಿದ ತಾರೀಖಿಗೆ ಸರಿಯಾಗಿ ಪ್ರಾರಂಭಿಸಲು ಅವರಿಗೆ ಸಾಧ್ಯವಾಯಿತು. ನಾವು ಮುಂದೆ ಸಾಗಿದಂತೆಲ್ಲಾ ಉತ್ತಮ ಸೌಕರ್ಯಗಳು ಬರಬಹುದು. ನಾನು ಎಲ್ಲಾ ವಿದ್ಯಾರ್ಥಿಗಳನ್ನೂ ಕೂಡಾ ಅಭಿನಂದಿಸುತ್ತೇನೆ; ನಿಮಗೆಲ್ಲರಿಗೂ ನಿಮ್ಮ ಮುಂದೆ ಒಂದು ಬಹಳ ಉಜ್ವಲ ಭವಿಷ್ಯವಿದೆ!
ವಿಶ್ವವಿದ್ಯಾನಿಲಯವು ಪ್ರಾರಂಭವಾಗುವ ಮೊದಲೇ, ಪ್ರಪಂಚದ ಎಲ್ಲೆಡೆಗಳಿಂದಲೂ ನನಗೆ ಕರೆಗಳು ಬಂದಿದ್ದವು. ವಿಶ್ವವಿದ್ಯಾನಿಲಯದೊಂದಿಗೆ ತಾವು ಹೇಗೆ ಜೊತೆಗೂಡಬಹುದೆಂದು ಜನರು ಸಲಹೆ ನೀಡಿದರು. ಮತ್ತು ಇವತ್ತು, ಬಹಳ ಶುಭದಿನದಂದು, ನಾವು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ಮೊದಲ ಗುಂಪಿನ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿ ಸಂಘದ ಮುಂದಾಳುಗಳಾಗಬಹುದು ಎಂಬ ವಿಶ್ವಾಸ ನನಗಿದೆ.
ಜ್ಞಾನ, ವ್ಯಕ್ತಿತ್ವ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಾಜದಲ್ಲಿ ನಾಯಕತ್ವ - ಇವುಗಳೆಲ್ಲಾ ನಾವು ನಮ್ಮ ವಿದ್ಯಾರ್ಥಿಗಳಿಂದ ನಿರೀಕ್ಷಿಸುತ್ತಿರುವುದು. ಅವರು ಒಂದು ಹೊಸ ಭರವಸೆಯನ್ನು ತರಲಿದ್ದಾರೆಂಬುದರ ಬಗ್ಗೆ ನನಗೆ ವಿಶ್ವಾಸವಿದೆ.  ಆರ್ಥಿಕ ಹಿಂಜರಿತ, ನೈತಿಕ  ಅವನತಿ, ಸಾಮಾಜಿಕ ಅನ್ಯಾಯ, ಬಡತನ ಮತ್ತು ಹಲವಾರು ಇತರ ಸವಾಲುಗಳಿರುವಾಗ ಅವರು, ಒಂದು ಹೊಸ ಭರವಸೆಯನ್ನು ತುಂಬುವರು. ಸಮಾಜವು ಇಂದು ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ಪುನಃ ಲೆಕ್ಕ ಮಾಡಲು ನಾನು ಇಚ್ಛಿಸುವುದಿಲ್ಲ. ಆದರೆ, ಲಕ್ಷಾಂತರ ಜನರ ಕಣ್ಣೀರನ್ನು ಒರೆಸಲು ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಸಮೃದ್ಧಿಯನ್ನು ಪುನಃ ಪ್ರಪಂಚದಲ್ಲಿ ತರಲು ಈ ಯುವಜನರು ಸುಸಜ್ಜಿತರಾಗಿರುವರು ಎಂಬ ವಿಶ್ವಾಸ ನನಗಿದೆ.
ವಿದ್ಯಾರ್ಥಿಗಳಾಗಿ ನಿಮ್ಮಲ್ಲಿ ಎರಡು ವಿಷಯಗಳಿರಬೇಕು:
೧) ನಿಮ್ಮಲ್ಲಿ ಒಂದು ದೊಡ್ಡ ಕಲ್ಪನೆಯಿರಬೇಕು, ಮತ್ತು
೨) ಎಷ್ಟು ಸಾಧ್ಯವೋ ಅಷ್ಟು ಜ್ಞಾನದಿಂದ ನಿಮ್ಮನ್ನು ಸುಸಜ್ಜಿತರನ್ನಾಗಿಸಲು ನಿಮ್ಮಲ್ಲಿ ಇಚ್ಛೆಯಿರಬೇಕು. ನಿಮ್ಮನ್ನು ಪಠ್ಯಕ್ರಮಕ್ಕೆ ಸೀಮಿತವಾಗಿಟ್ಟುಕೊಳ್ಳಬಾರದು, ಆದರೆ ಪಠ್ಯಕ್ರಮದಾಚೆಗೂ ನೋಡಬೇಕು. ನೀವು ಏನನ್ನು ಕಲಿಯಲು ಬಯಸುತ್ತೀರೋ ಅದನ್ನು ಶಿಕ್ಷಕರಿಂದ ಕೇಳಿ ಪಡೆಯಬೇಕು. ಬಹಳ ಉತ್ಸಾಹಿಗಳಾಗಿರುವುದು ವಿದ್ಯಾರ್ಥಿಗಳಿಗೆ ಬಹಳ ಅಗತ್ಯವೆಂದು ನನಗನಿಸುತ್ತದೆ.
ಸಂಸ್ಕೃತದಲ್ಲಿ ಒಂದು ಹಳೆಯ ಮಾತಿದೆ, "ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ, ಸುಖಕ್ಕಾಗಿ ತವಕಿಸಬೇಡಿ, ಮತ್ತು ಯಾರು ಸುಖಗಳಿಗೆ ಸಿಕ್ಕಿಹಾಕಿಕೊಂಡಿರುತ್ತಾರೋ ಅವರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದು."
ವಿದ್ಯಾರ್ಥಿನಾ ಕುತೋ ಸುಖಂ; ಸುಖಾರ್ಥಿನಾ ಕುತೋ ವಿದ್ಯಾ.
ಅದರರ್ಥ ನೀವು ಸುಖವಾಗಿರಬಾರದೆಂದಲ್ಲ. ಆದರೆ ಕೇವಲ ಸುಖಗಳ ಮತ್ತು ಮೋಜಿನ ಕಡೆಗೆ ಗಮನ ಹರಿಸುವುದರಿಂದ ಶಿಕ್ಷಣವು ಹಿಂದೆ ಬೀಳುತ್ತದೆ. ಆದುದರಿಂದ, ನೀವು ಜ್ಞಾನವನ್ನು ಮುಂದೆ ಇರಿಸಿದರೆ, ಆಗ ನಿಮ್ಮ ಜೀವನದಲ್ಲಿಡೀ ನಿಮ್ಮ ಬಳಿ ಸುಖ ಬರುತ್ತದೆ.
ಜ್ಞಾನವೆಂಬುದು ಸುಖವನ್ನು ತನ್ನೆಡೆಗೆ ಎಳೆದುಕೊಳ್ಳುವಂತಹುದು; ಆಂತರಿಕ ಸುಖ ಮತ್ತು ಬಾಹ್ಯ ಸುಖ, ಎರಡೂ. ಆದುದರಿಂದ ನಾವು ಜ್ಞಾನದ ಮೇಲೆ ಗಮನ ಹರಿಸಬೇಕು ಮತ್ತು ಸುಖಗಳು ತಮ್ಮಿಂತಾವೇ ನಮ್ಮನ್ನು ಹಿಂಬಾಲಿಸುತ್ತವೆ.
ವಿದ್ಯಾರ್ಥಿಗಳ ಈ ಮೊದಲ ಗುಂಪು, ಪ್ರಪಂಚದ ಬಗ್ಗೆ ನಮಗಿರುವ ದೊಡ್ಡ ಭರವಸೆಯ ಉಜ್ವಲ ಉದಾಹರಣೆಗಳಾಗಬಹುದು ಎಂದು ನನಗೆ ಬಹಳ ಸಂತೋಷವಾಗುತ್ತಿದೆ ಮತ್ತು ಆ ವಿಶ್ವಾಸ ನನಗಿದೆ.
ನೆರೆದಿರುವ ಶಿಕ್ಷಕರ ವರ್ಗವನ್ನೂ ನಾನು ಅಭಿನಂದಿಸಲು ಬಯಸುತ್ತೇನೆ. ಮನುಕುಲಕ್ಕೆ ಒಂದು ಹೊಸ ಅಡಿಪಾಯವನ್ನು ಹಾಕಲು ನೀವು ಸಿದ್ಧತೆ ಮಾಡುತ್ತಿದ್ದೀರಿ.
ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅಸ್ಥಿಭೈಷಜ್ಯ (ಆಸ್ಟಿಯೋಪತಿ), ಪ್ರಕೃತಿ ಚಿಕಿತ್ಸೆ, ಯೋಗ, ಆಯುರ್ವೇದ ಮತ್ತು ಹಲವಾರು ಇತರ ಶಾಖೆಗಳು ಬರಲಿವೆ; ವಿಶೇಷವಾಗಿ ದೇಶದಲ್ಲಿ ಲಭ್ಯವಿಲ್ಲದ ಅಪರೂಪವಾದಂತವು.
ಭಾರತದಲ್ಲಿ ಮೊತ್ತಮೊದಲನೆಯ ಬಾರಿಗೆ, ನಾವು ಆಸ್ಟಿಯೋಪತಿಯನ್ನು ಒಂದು ಪಠ್ಯವಾಗಿ  ಪರಿಚಯಿಸಲಿದ್ದೇವೆ. ಭಾರತದಲ್ಲಿ ಯಾರಿಗೂ ಆಸ್ಟಿಯೋಪತಿಯ ಬಗ್ಗೆ ಗೊತ್ತಿಲ್ಲ. ನಮ್ಮಲ್ಲಿ ಅಲೋಪತಿ ಔಷಧಿ ಇರುವಂತೆಯೇ, ನಮ್ಮಲ್ಲಿ ಆಸ್ಟಿಯೋಪತಿಯಿದೆ. ಅದು ಸ್ನಾಯುಮೂಳೆ ಚೌಕಟ್ಟನ್ನು (ಸಂಧಿಗಳು, ಸ್ನಾಯುಗಳು ಮತ್ತು ಬೆನ್ನೆಲುಬು) ಸರಿಪಡಿಸುವುದರತ್ತ ಗಮನಹರಿಸುತ್ತದೆ. ಇದರಿಂದಾಗಿ ಹಲವು ರೋಗಗಳು ವಾಸಿಯಾಗುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಮತ್ತು ಒಬ್ಬ ವ್ಯಕ್ತಿಯ ಒಟ್ಟು ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕೂಡಾ ಸುಧಾರಿಸುತ್ತದೆ. ಆದುದರಿಂದ, ಇದರ ಮೇಲೆ ನಾವೊಂದು ಕೋರ್ಸನ್ನು ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸುತ್ತಿದ್ದೇವೆ.
ನಂತರ, ಉತ್ತಮ ಆಡಳಿತದ ಕಾಲೇಜು (ಕಾಲೇಜ್ ಆಫ್ ಗುಡ್ ಗವರ್ನೆನ್ಸ್) ಕೂಡಾ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾಗಲಿದೆ. ಇವತ್ತು, ಪ್ರತಿಯೊಂದು ಕ್ಷೇತ್ರದ ಜನರಿಗೆ ಒಂದಲ್ಲ ಒಂದು ಅರ್ಹತೆ ಇರಬೇಕಾಗುತ್ತದೆ. ಆದರೆ ರಾಜಕೀಯದಲ್ಲಿ ಅದು ಇಲ್ಲ. ಅದಕ್ಕೇ ಮೊದಲೆಂದೂ ಇಲ್ಲದಂತೆ, ರಾಜಕಾರಣಿಗಳ ಗುಣಮಟ್ಟವು ಅಷ್ಟೊಂದು ಕೆಳಕ್ಕೆ ಹೋಗಿರುವುದು.
ಆಡಳಿತದಲ್ಲಿ ಕೂಡಾ - ಹಳ್ಳಿಗಳ ಪಂಚಾಯತುಗಳ ಹಂತದಿಂದ ಹಿಡಿದು ಸಂಸತ್ತಿನ ವರೆಗೆ, ಸರಿಯಾದ, ಸಮಾಜದ  ಆಡಳಿತಗಾರರನ್ನು ಮತ್ತು ನಾಯಕರನ್ನು ನಾವು ಸೃಷ್ಟಿಸಬೇಕಾದ ಅಗತ್ಯವಿದೆ. ಆದುದರಿಂದ ಉತ್ತಮ ಆಡಳಿತದ ಕಾಲೇಜು ಎಂಬುದು ಕೂಡಾ ಯೋಜನೆಯಲ್ಲಿರುವ ಒಂದು ವಿಷಯ. ಅದು ಬಹಳ ಬೇಗನೆ ಬರಲಿದೆ.
ಈಗ, ವ್ಯವಹಾರ ನಿರ್ವಹಣೆ (ಬ್ಯುಸಿನೆಸ್ ಮ್ಯಾನೇಜ್ ಮೆಂಟ್) ಮತ್ತು ವ್ಯವಹಾರ ಆಡಳಿತ (ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್) ಕುರಿತಾಗಿರುವ ಕೋರ್ಸುಗಳು ಇವತ್ತು ಪ್ರಾರಂಭವಾಗಿವೆ. ಮುಂಬರುವ ದಿನಗಳಲ್ಲಿ ಪ್ರಪಂಚದಾದ್ಯಂತದಿಂದ ಜ್ಞಾನವು ನಮ್ಮ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡುವುದನ್ನು ಕಾಣಬಹುದು. ಮನಸ್ಸಿನಲ್ಲಿ ಇದೇ ಉದ್ದೇಶವನ್ನಿಟ್ಟುಕೊಂಡು ನಾವು ಈ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ.
ನೋಡಿ, ನಾವು ನಮ್ಮ ಮಕ್ಕಳನ್ನು ದೂರದ ದೇಶಗಳಿಗೆ ಕಳುಹಿಸುತ್ತೇವೆ. ನಾವು ಅವರನ್ನು ಆಸ್ಟ್ರೇಲಿಯಾ, ಲಂಡನ್, ಅಮೇರಿಕಾಗಳಿಗೆ ಕಳುಹಿಸುತ್ತೇವೆ ಮತ್ತು ಹೊರದೇಶಗಳಲ್ಲಿ ಅವರ ಶಿಕ್ಷಣಕ್ಕೆ ಖರ್ಚು ಮಾಡಲು ಬಹಳಷ್ಟು ಹಣವನ್ನು ಜೋಡಿಸುತ್ತೇವೆ. ಹಾಗಿದ್ದರೂ ನಮ್ಮ ಮಕ್ಕಳನ್ನು ಅಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳಲಾಗುವುದಿಲ್ಲ. ಅಲ್ಲಿ ಬಹಳಷ್ಟು ಹಿಂಸೆಯನ್ನು ಅವರು ಅನುಭವಿಸಬೇಕಾಗುತ್ತದೆ. ನಮ್ಮ ದೇಶವು ತನ್ನ ಹಲವಾರು ಮಕ್ಕಳನ್ನು ಕಳಕೊಂಡಿದೆ. ನಾವು ಅಂತಹ ದೇಶಗಳಿಗಾಗಿ ನಮ್ಮ ಪ್ರತಿಭಾಶಾಲಿ ಮಕ್ಕಳಲ್ಲಿ ಕೆಲವರನ್ನು ಕಳಕೊಂಡಿದ್ದೇವೆ. ಆದುದರಿಂದ, ನಾನು ಯೋಚಿಸಿದೆ, ಪ್ರಪಂಚದ ಅತ್ಯುತ್ತಮ ಶಿಕ್ಷಕರನ್ನು ಭಾರತಕ್ಕೆ ಕರೆಯಿಸಬಹುದು ಮತ್ತು ಮಕ್ಕಳನ್ನು ನಾವು ಯಾವ ಮಟ್ಟದ ಶಿಕ್ಷಣವನ್ನು ಪಡೆಯಲು ಹೊರದೇಶಗಳಿಗೆ ಕಳುಹಿಸುತ್ತೇವೋ, ಅದನ್ನು ಇಲ್ಲಿಯೇ ಅವರಿಗೆ ಕೊಡಿಸಬಹುದು. ಅಂತಹ ಒಂದು ವಿಶ್ವವಿದ್ಯಾನಿಲಯ ಇಲ್ಲಿದ್ದರೆ, ಆಗ ನಾವು ನಮ್ಮ ಮಕ್ಕಳನ್ನು ಇತರ ದೇಶಗಳಿಗೆ ಕಳುಹಿಸಬೇಕಾಗಿಲ್ಲ. ನಾವು ಬಹಳಷ್ಟು ಖರ್ಚು ವೆಚ್ಚಗಳನ್ನು ಉಳಿಸಬಹುದು ಮತ್ತು ನಮ್ಮ ಮಕ್ಕಳು ಇಲ್ಲಿ ಸುರಕ್ಷಿತವಾಗಿರುವರೆಂಬ  ತೃಪ್ತಿಯನ್ನೂ ಅನುಭವಿಸಬಹುದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಒರಿಸ್ಸಾದಲ್ಲಿ ನಾವು ಜಾಗತಿಕ ಶ್ರೇಣಿಯ  ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ.
ಮುಂಬರುವ ವರ್ಷಗಳಲ್ಲಿ ನೀವೆಲ್ಲರೂ ನಿಮ್ಮ ಮಕ್ಕಳನ್ನು ಈ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಬೇಕು ಎಂದು ಹೇಳಲು ಕೂಡಾ ನಾನು ಬಯಸುತ್ತೇನೆ. ನಿಮ್ಮ ಮಕ್ಕಳು ಇಲ್ಲಿ ಪಡೆಯುವ ಶಿಕ್ಷಣವು, ಅವರು ಕೆಲವು ಹೊರದೇಶಗಳಲ್ಲಿ ಪಡೆಯುವ ಶಿಕ್ಷಣಕ್ಕಿಂತ ಹೆಚ್ಚಿನದಲ್ಲದಿದ್ದರೂ, ಅದಕ್ಕೆ ಸರಿಸಮಾನವಾಗಿರುತ್ತದೆ. ಈ ವಿಶ್ವವಿದ್ಯಾನಿಲಯದ ಮೂಲಕ ಅವರು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸುವರು.
ಮತ್ತೊಮ್ಮೆ, ವಿಶ್ವವಿದ್ಯಾನಿಲಯವನ್ನು ಸೇರಿರುವ ಎಲ್ಲಾ ವಿದ್ಯಾರ್ಥಿಗಳಿಗೆ, ಯುವ ಮನಸ್ಸುಗಳಿಗೆ ನಾನು ಆಶೀರ್ವಾದಗಳನ್ನು ನೀಡುತ್ತೇನೆ. ನಿಮ್ಮ ಓದಿನ ಮೇಲೆ ಗಮನವಿರಿಸಿ ಮತ್ತು ನಾನು ಬೇಗನೇ ಬಂದು ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ!

ಪ್ರಶ್ನೆ: ಪ್ರೀತಿಯ ಗುರುದೇವ, ನಾವು ಈ ಪಥದಲ್ಲಿರುವಾಗ, ಎಷ್ಟರ ಮಟ್ಟಿಗೆ ನಾವು ಇತರ ಗುರುಗಳಿಂದ ಜ್ಞಾನವನ್ನು ಕೇಳಬಹುದು?
ಶ್ರೀ ಶ್ರೀ ರವಿಶಂಕರ್:
ನಾನು ಹೇಳುವುದೇನೆಂದರೆ, ಎಲ್ಲರನ್ನೂ ಗೌರವಿಸಿ. ಒಂದೇ ಒಂದು ಜ್ಞಾನವಿರುವುದು ಮತ್ತು ಅದು ನಿಮಗೆ ಲಭ್ಯವಿದೆ. ಆದರೆ ನೀವು ಇಲ್ಲಿ ಅಲ್ಲಿ ಶಾಪಿಂಗ್ ಮಾಡುತ್ತಾ ಹೋದರೆ, ನೀವು ಹೆಚ್ಚು ಗೊಂದಲಕ್ಕೊಳಗಾಗುವಿರಿ. ನಾವನ್ನುತ್ತೇವೆ, "ಸೋ ಹಂ ಮಾಡಿ" ಎಂದು. ಬೇರೆ ಯಾರೋ ಹೇಳುವರು, "ಇಲ್ಲ! ಸೋ ಹಂ ಸರಿಯಲ್ಲ, ಹಂ ಸಾ ಮಾಡಿ" ಎಂದು ಮತ್ತು ಮೂರನೆಯ ಒಬ್ಬ ವ್ಯಕ್ತಿಯು, "ಹಂ ಸಾ ಸರಿಯಲ್ಲ, ನೀವು ಸದಾ ಸೋ ಹಂ ಮಾಡಬೇಕು" ಎಂದು ಹೇಳುತ್ತಾನೆ. ಆಗ ನೀವು ಇನ್ನೂ ದೊಡ್ಡ ಅವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಆದುದರಿಂದ, ಎಲ್ಲರನ್ನೂ ಗೌರವಿಸಿ ಮತ್ತು ಒಂದು ಜ್ಞಾನಕ್ಕೆ ಬದ್ಧರಾಗಿರಿ. ಅದು ನಿಮಗೆ ಏನಾದರೂ ತೃಪ್ತಿಯನ್ನು ಕೊಟ್ಟಿದ್ದರೆ, ಜೀವನದಲ್ಲಿ ಏನಾದರೂ ಮೇಲೆತ್ತುವಿಕೆಯನ್ನು ನೀಡಿದ್ದರೆ, ನೀವು ಅದರೊಳಕ್ಕೆ ಆಳವಾಗಿ ಹೋಗಬೇಕು. ಹಲವಾರು ಹಳ್ಳಗಳನ್ನು ತೋಡುವುದರಲ್ಲಿ ಅರ್ಥವಿಲ್ಲ. ಒಂದು ಜಾಗದಲ್ಲಿ ಆಳಕ್ಕೆ ಹೋಗಿ.

ಪ್ರಶ್ನೆ: ಗುರುದೇವ, ನೀವು ಅಹಂಕಾರವನ್ನು ಮೀರಿರುವಿರಿ ಮತ್ತು ಅದರಿಂದಾಗಿ ನಿಮಗೆ ಯಾವುದೇ ಕರ್ಮವಿಲ್ಲ.  ಆದರೂ ನೀವು ಮನುಕುಲದ ಲಾಭಕ್ಕಾಗಿ ಬಹಳಷ್ಟು ಕರ್ಮಗಳನ್ನು ಮಾಡುತ್ತಿರುವಿರಿ. ಆದರೆ ಕರ್ಮದ ನಿಯಮದ ಪ್ರಕಾರ, ನೀವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ, ನೀವು ಅದನ್ನು ಹೇಗೆ ಮಾಡುತ್ತೀರಿ?
ಶ್ರೀ ಶ್ರೀ ರವಿಶಂಕರ್:
ಬಹಳ ಸುಲಭ! ಅದು ಗರಿಯಷ್ಟು ಹಗುರ.

ಪ್ರಶ್ನೆ: ಗುರುದೇವ, ಹಲವು ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಒಂದು ಬಯಕೆಯಿದೆ.  ಇಷ್ಟರ ವರೆಗೆ ಅದು ನೆರವೇರಲಿಲ್ಲ. ಇದಕ್ಕೆ ಕಾರಣವೇನು?
ಶ್ರೀ ಶ್ರೀ ರವಿಶಂಕರ್:
ಸಮಯ! ಅದು ಅದರದ್ದೇ ಸಮಯವನ್ನು ತೆಗೆದುಕೊಳ್ಳಲಿ. ನೀನು ಯಾವತ್ತೂ, "ಈ ಬಯಕೆಯು ನನಗೆ ಒಳ್ಳೆಯದಾಗಿದ್ದರೆ ಅದು ಆಗಲಿ. ಅಲ್ಲದಿದ್ದರೆ, ಅದು ಆಗದಿರಲಿ" ಎಂದು ಹೇಳಬೇಕು.

ಪ್ರಶ್ನೆ: ಪ್ರೀತಿಯ ಗುರುದೇವ, ಆಧ್ಯಾತ್ಮವು ಕಡ್ಡಾಯವೇ? ಆಧ್ಯಾತ್ಮಿಕ ಪಥವು ಯಾಕೆ ಅಷ್ಟೊಂದು ಜಾರುತ್ತದೆ?
ಶ್ರೀ ಶ್ರೀ ರವಿಶಂಕರ್:
ಹೌದಾ? ಅದು ಕೇವಲ ಹಾಗೆ ಕಾಣುತ್ತದೆ, ಆದರೆ ಹಾಗಿಲ್ಲ. ಆಧ್ಯಾತ್ಮವೆಂದರೆ ಎ.ಸಿ. - ಆಬ್ಸಲ್ಯೂಟ್ ಕಂಫರ್ಟ್ (ಪರಿಪೂರ್ಣ ಸುಖ).

ಪ್ರಶ್ನೆ: ಪ್ರೀತಿಯ ಗುರುದೇವ, ವಿಶ್ವದಲ್ಲಿನ ಎಲ್ಲಾ ಆಗುವಿಕೆಯೂ ದೇವರ ತಿಳುವಳಿಕೆಯಲ್ಲಿಯೇ ಆಗುವುದು ಎಂಬುದು ನನಗೆ ತಿಳಿದಿದೆ.  ಹಾಗಿದ್ದರೆ ಅವನು ಯಾಕೆ ಅಪರಾಧ ಪ್ರಮಾಣವನ್ನು ಹೆಚ್ಚಿಸಿ, ನಂತರ ಅದನ್ನು ಉತ್ತಮ ಮೌಲ್ಯಗಳ ಕ್ರಮಗಳಿಂದ ಪ್ರತಿರೋಧಿಸುತ್ತಾನೆ? ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ಇಂತಹ ಹಲವಾರು ಪ್ರಶ್ನೆಗಳಿವೆ. ದೇವರು ಯಾಕೆ ಎರಡೂ ಕಣ್ಣುಗಳನ್ನು ಮುಂಭಾಗದಲ್ಲಿ ಇಟ್ಟ? ಅವನು, ಒಂದನ್ನು ಮುಂದೆ ಮತ್ತು ಒಂದನ್ನು ಹಿಂದೆ ಇಡಬೇಕಾಗಿತ್ತು. ಆಗ ನಿಮಗೆ ಹಿಂದೆ ತಿರುಗಿ ನೋಡಬೇಕಾಗುವುದಿಲ್ಲ. ನೀವು ಅಡ್ಡವಾಗಿ ಹೋಗಬಹುದು, ಅಲ್ಲವೇ? ದೇವರಲ್ಲಿ ಕೆಲವು ಕಲ್ಪನೆಗಳ ಕೊರತೆಯಿದೆಯೆಂದು ನನಗನಿಸುತ್ತದೆ.
ನೀವೊಬ್ಬ ಸಿನೆಮಾ ನಿರ್ದೇಶಕನಲ್ಲಿ, "ನಾಯಕಿಯನ್ನು ಪಡೆಯಲು ಈ ನಾಯಕನು ಯಾಕೆ ಇಷ್ಟೊಂದು ಕಷ್ಟಪಡಬೇಕು, ಮತ್ತು ಅಲ್ಲೊಬ್ಬ ಖಳನಾಯಕ ಯಾಕಿದ್ದಾನೆ? ನೀನು ಯಾಕೆ ಈ ಎಲ್ಲಾ ನಾಟಕವನ್ನು ಮಾಡುವೆ? ಎಲ್ಲವೂ ಬಹಳ ಸುಗಮವಾಗಿರಬೇಕಿತ್ತು" ಎಂದು ಹೇಳಿದರೆ, ಅವನೇನನ್ನುವನು? ಪತ್ತೆಹಚ್ಚಿ! ನಂತರ ನಿಮಗೆ ನಾನು ಹೇಳುತ್ತೇನೆ. ಯಾಕೆಂದರೆ ಸರಿಯಾಗಿ ಅದನ್ನೇ ದೇವರು ಕೂಡಾ ಹೇಳುವರು!

ಪ್ರಶ್ನೆ: ಪ್ರೀತಿಯ ಗುರುದೇವ, ಗುರು ಮಂಡಲವೆಂದರೇನು, ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ನೀವು ಒಬ್ಬರು ಗುರುವಿನ ಬಳಿಗೆ ಹೋಗಲು ಪ್ರಯತ್ನಿಸುವಾಗ, ದಾರಿಯಲ್ಲಿ ಹಲವಾರು ವಿಷಯಗಳು ಬರುತ್ತವೆ - ಅದು ಗುರು ಮಂಡಲವೆಂದು ಕರೆಯಲ್ಪಡುತ್ತದೆ.
ಮೊದಲಿಗೆ ನಿಮಗೆ ಹಲವಾರು ವಿಕರ್ಷಣೆಗಳು ಎದುರಾಗುತ್ತವೆ, ಮತ್ತು ನೀವು ಅವುಗಳನ್ನು ದಾಟಿದಾಗ ಹಲವಾರು ಆಕರ್ಷಕ ವಸ್ತುಗಳು ಬರುತ್ತವೆ. ಸಿದ್ಧಿಗಳು ಬರುತ್ತವೆ, ಕಡುಬಯಕೆಗಳು ಮತ್ತು ತಿರಸ್ಕಾರಗಳು ಬರುತ್ತವೆ. ನೀವು ಅವುಗಳನ್ನೆಲ್ಲಾ ದಾಟಿದ ನಂತರ ಮಂಡಲದ ಕೇಂದ್ರವನ್ನು ತಲಪುತ್ತೀರಿ. ಮಂಡಲವೆಂದರೆ ವೃತ್ತ ಎಂದು ಅರ್ಥ.
ಹೀಗೆ, ನೀವಿಲ್ಲಿಗೆ ಗುರುವನ್ನು ಭೇಟಿಯಾಗಲು ಮತ್ತು ಸಾಧನೆ ಮಾಡಲು ಬರುತ್ತೀರಿ. ಆಗ ಅಚಾನಕ್ಕಾಗಿ ನಿಮಗೊಬ್ಬಳು ಸುಂದರವಾದ ಹುಡುಗಿ ಅಥವಾ ಒಬ್ಬ ಸುಂದರನಾದ ಹುಡುಗ ಕಾಣಿಸಿದರೆ ನೀವು ಅವರ ಹಿಂದೆ ಹೋಗಲು ಶುರು ಮಾಡುತ್ತೀರಿ. ಅಥವಾ ನೀವು ಜ್ಞಾನ ಪಡೆಯುವ ಉದ್ದೇಶಕ್ಕಾಗಿ ಬರುತ್ತೀರಿ ಮತ್ತು ಅಚಾನಕ್ಕಾಗಿ ನಿಮ್ಮ ಮನಸ್ಸು, "ಓಹ್, ನಾನು ಹಣ ಮಾಡಲು ಬಯಸುತ್ತೇನೆ. ಇದನ್ನು ನಾನು ಹೇಗೆ ಮಾಡಬಹುದು?" ಎಂದು ಹೇಳುತ್ತದೆ.
ಹೀಗೆ ಈ ವಿಕರ್ಷಣೆಗಳು ನಿಮ್ಮಲ್ಲಿರುವ ಏಕಾಗ್ರತೆಯನ್ನು, ನಿಜವಾಗಿ ಕೇಂದ್ರಕ್ಕೆ ಹೋಗಲಿರುವ ನಿಮ್ಮ ಶಕ್ತಿಯನ್ನು ಸೂಚಿಸುತ್ತವೆ. ನಕಾರಾತ್ಮಕತೆ, ಸಂಶಯಗಳು, ಮೋಡಿಗಳು, ಆಕರ್ಷಣೆಗಳು ಮತ್ತು ಈ ಎಲ್ಲಾ ವಿಕರ್ಷಣೆಗಳ ವೃತ್ತವನ್ನು ದಾಟಿ ನೀವು ಕೇಂದ್ರಕ್ಕೆ ಹೇಗೆ ಹೋಗಬಲ್ಲಿರಿ.
ನಂತರ ಅಹಂಕಾರ, "ನಾನು ಗುರುವಿಗಿಂತ ಶ್ರೇಷ್ಠ. ಓ, ಗುರುದೇವ ಏನು ಹೇಳುತ್ತಿರುವರೋ, ಅದು ನನಗೂ ಗೊತ್ತಿದೆ. ನಾನು ಇನ್ನೂ ಉತ್ತಮವಾಗಿ ಮಾಡಬಲ್ಲೆ." ಈ ರೀತಿಯ ಯೋಗ ಮಾಯೆಯು ಬರುತ್ತದೆ. ಅವುಗಳೆಲ್ಲಾ ಇವೆ ಮತ್ತು ಅದೆಲ್ಲಾ ಗುರು ಮಂಡಲವೆಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಆರ್ಟ್ ಆಫ್ ಲಿವಿಂಗ್ ಅಣ್ಣಾ ಚಳುವಳಿಯನ್ನು ಬೆಂಬಲಿಸುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಆರ್ಟ್ ಆಫ್ ಲಿವಿಂಗ್, ಐ.ಎ.ಸಿ. (ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಭ್ರಷ್ಟಾಚಾರದ ವಿರುದ್ಧ ಭಾರತ) ಚಳುವಳಿಯ ಒಂದು ಸ್ಥಾಪಕ ಸದಸ್ಯನಾಗಿದೆ. ನಾವು ಮೊದಲಿನಿಂದಲೂ ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇವೆ ಮತ್ತು ನಮ್ಮ ಪ್ರಯತ್ನಗಳು ಮುಂದುವರಿಯುತ್ತಾ ಇವೆ.
ನಾನು ಅಣ್ಣಾ ಅವರಲ್ಲಿ ಮತ್ತು ಅವರ ತಂಡದವರಲ್ಲಿ ಉಪವಾಸವನ್ನು ಕೈಬಿಡುವಂತೆ ಮನವಿ ಮಾಡುತ್ತೇನೆ. ನಿಮ್ಮ ಪ್ರಯತ್ನಗಳು ಈ ದೇಶಕ್ಕೆ ಬಹಳಷ್ಟು ಅಗತ್ಯವಿದೆ. ಸುಮಾರು ೩೫೦ ಯುವಜನರು ಕಳೆದ ಆರು ದಿನಗಳಿಂದ ಅಲ್ಲಿ ಕುಳಿತಿದ್ದಾರೆ ಮತ್ತು ಏಳನೆಯ ದಿನ ಬರಲಿದೆ. ದಯವಿಟ್ಟು ಇನ್ನೂ ಉಪವಾಸ ಮಾಡಬೇಡಿ ಮತ್ತು ನಿಮ್ಮ ಶರೀರಗಳನ್ನು ಇನ್ನೂ ಹೆಚ್ಚಿನ ತೊಂದರೆಗೆ ಸಿಲುಕಿಸಬೇಡಿ. ನೀವು ನಿಮ್ಮ ಉಪವಾಸವನ್ನು ಕೈಬಿಡುವಂತೆ, ಆದರೆ ಹೋರಾಟವನ್ನು ಉಳಿಸಿಕೊಳ್ಳುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ಬಹಳಷ್ಟು ಕೆಲಸ ಮಾಡಲಿದೆ ಮತ್ತು ನಾವು ಈ ದೇಶದಲ್ಲಿ ಬಹಳಷ್ಟು ಬದಲಾವಣೆಯನ್ನು ತರಬೇಕು. ಭ್ರಷ್ಟಾಚಾರವನ್ನು ತೊಲಗಿಸಬೇಕು ಮತ್ತು ಈ ಪ್ರಯತ್ನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ.
ನಮಗೆಲ್ಲರಿಗೂ ಒಂದೇ ಗುರಿಯಿದೆ. ಅದೇನೆಂದರೆ ಈ ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸುವುದು, ಆದರೆ ನಮ್ಮ ದಾರಿಗಳು ಬೇರೆ ಬೇರೆ. ನಾವು ಕೆಲಸ ಮಾಡುವ ರೀತಿಗಳು ಬೇರೆ ಬೇರೆ. ನಮ್ಮ ವಿಧಾನವೆಂದರೆ, ಯಾರನ್ನೂ ಯಾವತ್ತೂ ಅವಮಾನಿಸದೇ ಇರುವುದು ಅಥವಾ ತೆಗಳದೇ ಇರುವುದು. ನಾವು ಯಾರ ಮನೆಗೂ ಹೋಗಿ ಹಿಂಸೆಯನ್ನು ಸೃಷ್ಟಿಸುವುದಿಲ್ಲ. ನಾವು ಯಾವುದೇ ರೀತಿಯ ಹಿಂಸೆ ಅಥವಾ ಆಕ್ರಮಣವನ್ನು ನಂಬುವುದಿಲ್ಲ.
ನಮ್ಮ ಸತ್ಸಂಗದಲ್ಲಿ ಬಹಳ ಹೆಚ್ಚಾದ ಮತ್ತು ಬಹಳ ಸಕಾರಾತ್ಮಕವಾದ ಒಂದು ಶಕ್ತಿಯಿರುತ್ತದೆ; ಮಾತ್ಸರ್ಯ ಮತ್ತು ಕೋಪದ್ದಲ್ಲ, ಆದರೆ ಉತ್ಸಾಹ, ಆಸಕ್ತಿ ಮತ್ತು ಭರವಸೆಯದ್ದು, ಏನಾದರೂ ಮಾಡಲು, ಒಂದು ಬದಲಾವಣೆಯನ್ನು ತರಲು. ನಾವು ಈ ಚೈತನ್ಯದೊಂದಿಗೆ ನಮ್ಮ ಗುರಿಯ ಕಡೆಗೆ ಮುನ್ನಡೆಯುತ್ತೇವೆ.
ತಿಳುವಳಿಕೆ ಮತ್ತು ಉತ್ಸಾಹಗಳೊಂದಿಗೆ ಸಾಗುವುದು ಆರ್ಟ್ ಆಫ್ ಲಿವಿಂಗಿನ ವಿಧಾನ. ನಾವು ಯಾವತ್ತೂ ನಮ್ಮದಾಗಿಸಿಕೊಂಡ ಮಾರ್ಗ ಇದುವೇ. ಆದುದರಿಂದ ನಾವು ಸಂಪೂರ್ಣ ತಿಳುವಳಿಕೆಯೊಂದಿಗೆ, ಸಂಪೂರ್ಣ ಜ್ಞಾನದೊಂದಿಗೆ ಮತ್ತು ಸಂಗೀತದೊಂದಿಗೆ ಪ್ರತಿಭಟಿಸಬೇಕು.
ಅಣ್ಣಾ ಅವರು ಈಗ ಉಪವಾಸ ಮಾಡುತ್ತಿದ್ದಾರೆ ಮತ್ತು ಆ ಸ್ಥಳದಲ್ಲಿ ಕುಳಿತುಕೊಂಡು ಹಾಡುತ್ತಾ ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ನಮ್ಮ ಆರ್ಟ್ ಆಫ್ ಲಿವಿಂಗಿನ ಗಾಯಕರು. ಆದರೆ ದುರದೃಷ್ಟವಶಾತ್, ನಿನ್ನೆ ಅಲ್ಲಿ, ನಿಯಂತ್ರಣದಲ್ಲಿರಿಸಲಾಗದ ಕೆಲವು ಜನರಿದ್ದರು; ಅವರು ಆರ್ಟ್ ಆಫ್ ಲಿವಿಂಗಿನವರಲ್ಲ. ಇದನ್ನು ಮಾಡಬಾರದು ಮತ್ತು ನಾನು ಯಾವುದೇ ರೀತಿಯ ಅಶಿಸ್ತನ್ನು ಒಪ್ಪುವುದಿಲ್ಲ. ನಾವು ಸಂಪೂರ್ಣ ತಿಳುವಳಿಕೆಯೊಂದಿಗೆ ಒಂದು ಕ್ರಾಂತಿಯನ್ನು ತರಬೇಕು. ಆದುದರಿಂದ ನಾವೆಲ್ಲರೂ ಯೋಚಿಸಿ ವರ್ತಿಸಬೇಕು.

ಪ್ರಶ್ನೆ: ಗುರುದೇವ, ನಾನು ಈಗಷ್ಟೇ ನನ್ನ ಟಿ.ಟಿ.ಸಿ.ಯನ್ನು ಮುಗಿಸಿದ್ದೇನೆ. ನಾನು ಪೂರ್ಣಾವಧಿ ಕಲಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿರುವ ಮಾನದಂಡಗಳು ಯಾವುವು?
ಶ್ರೀ ಶ್ರೀ ರವಿಶಂಕರ್:
ನಿನ್ನ ಕೌಟುಂಬಿಕ ಜವಾಬ್ದಾರಿಗಳ ಕಡೆಗೆ ನೋಡು. ನಿನಗೆ ಯಾವುದೇ ಜವಾಬ್ದಾರಿಯಿಲ್ಲದಿದ್ದರೆ, ಆಗ ನೀನು ಪೂರ್ಣಾವಧಿಯ ಶಿಕ್ಷಕನಾಗಲು ನಿರ್ಧರಿಸಬಹುದು. ನಿನಗೆ ಮನೆಯಲ್ಲಿ ಬಹಳಷ್ಟು ಜವಾಬ್ದಾರಿಗಳಿದ್ದರೆ, ನೀನು ನಿನ್ನ ಜವಾಬ್ದಾರಿಗಳನ್ನು ಮುಂದುವರಿಸಿಕೊಂಡು, ಬದಿಯಲ್ಲಿ ಕಲಿಸುವುದನ್ನು ಕೂಡಾ ಶುರು ಮಾಡಬೇಕೆಂದು ನಾನು ಬಯಸುತ್ತೇನೆ.