ಗುರುವಾರ, ಆಗಸ್ಟ್ 30, 2012

ಪ್ರಪಂಚದ ಅತ್ಯಮೂಲ್ಯ ವಸ್ತು

30
2012
Aug
ಬ್ರೆಜ಼ಿಲ್, ದಕ್ಷಿಣ ಅಮೇರಿಕಾ

ಗ ನಾನು ನಿಮಗೆ ಒಂದು ಬಹಳ ಗಂಭೀರವಾದ ಪ್ರಶ್ನೆಯನ್ನು ಕೇಳಲಿದ್ದೇನೆ: ನೀವು ನಿಜವಾಗಿ ಒಬ್ಬ ವ್ಯಕ್ತಿಗೆ ವಂದಿಸುತ್ತೀರಾ ಅಥವಾ ಅದನ್ನು ಒಂದು ಉಪಚಾರಕ್ಕಾಗಿ ಮಾಡುತ್ತೀರಾ?
ನೋಡಿ, ದಿನನಿತ್ಯ ನಾವು ಜನರಿಗೆ ವಂದಿಸುತ್ತೇವೆ, ನಾವು ಶುಭಾಶಯಗಳನ್ನು ಅದಲು ಬದಲು ಮಾಡಿಕೊಳ್ಳುತ್ತೇವೆ. ಅದೆಲ್ಲವೂ ಒಂದು ಬಹಳ ಔಪಚಾರಿಕ ನೆಲೆಯಲ್ಲಿ. ಅಲ್ಲವೇ? ಒಬ್ಬರು ಒಂದು ಲೋಟ ನೀರು ತಂದಾಗ ನಾವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳುತ್ತೇವೆ. ಆ ’ಬಹಳ’ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ನೀವು ಸಹಾರಾ ಮರುಭೂಮಿಯಲ್ಲಿದ್ದು, ನಿಮಗೆ ಬಹಳ ಬಾಯಾರಿಕೆಯಾಗಿದ್ದಾಗ ಯಾರಾದರೂ ನಿಮಗೆ ಒಂದು ಲೋಟ ನೀರು ತಂದು ಕೊಟ್ಟಲ್ಲಿ ನೀವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳಿದರೆ, ಅದು ವಿಶ್ವಾಸಾರ್ಹವಾದುದು.
ಆದುದರಿಂದ ಜೀವನದಲ್ಲಿ, ಎಲ್ಲಾ ಸಮಯದಲ್ಲೂ ನಾವು ಕೇವಲ ಬಾಹ್ಯ ಮಟ್ಟದಲ್ಲಿ ವ್ಯವಹರಿಸುವಾಗ ಮತ್ತು ನಮ್ಮಲ್ಲಿ ಆಳತೆಯ ಕೊರತೆಯಿರುವಾಗ, ಜೀವನವು ಬಹಳ ಶುಷ್ಕವಾದುದು ಹಾಗೂ ಅರ್ಥವಿಲ್ಲದುದು ಎಂಬ ಅನುಭವವಾಗುತ್ತದೆ. ಸತ್ಯತೆಯ, ಪ್ರಾಮಾಣಿಕತೆಯ ಮತ್ತು ಹೃದಯದಿಂದ ಹೃದಯಕ್ಕೆ ನಿಜವಾದ ಸಂಬಂಧವಿರುವ ಇನ್ನೊಂದು ಮಟ್ಟಕ್ಕೆ ನಾವು ಹೋಗಬೇಕು. ಅದನ್ನೇ ನಾನು ಆಧ್ಯಾತ್ಮಿಕತೆ ಎಂದು ಕರೆಯುವುದು. ನಿಮ್ಮ ಅಸ್ತಿತ್ವದ ನೈಜತೆಯೊಂದಿಗೆ ನೀವು ನಿಮ್ಮನ್ನು ಗುರುತಿಸಿಕೊಳ್ಳುವಾಗ, ಅದು ಆಧ್ಯಾತ್ಮಿಕತೆ. ಮಕ್ಕಳಾಗಿ ನಾವೆಲ್ಲರೂ ಅದನ್ನು ಮಾಡುತ್ತಿದ್ದೆವು.
ನಿಮಗೆ ನೆನಪಿದೆಯೇ, ನೀವೊಂದು ಮಗುವಾಗಿದ್ದಾಗ, ಇಡಿಯ ಗ್ರಹವು, ಸಂಪೂರ್ಣ ವಿಶ್ವವು ಬಹಳಷ್ಟು ಜೀವಂತವಾಗಿತ್ತು. ಚಂದ್ರನು ಮಾತನಾಡುತ್ತಿದ್ದ, ಮರಗಳು ಮಾತನಾಡುತ್ತಿದ್ದವು ಮತ್ತು ಪ್ರಾಣಿಗಳು ಮಾತನಾಡುತ್ತಿದ್ದವು. ನಿಮ್ಮ ಮತ್ತು ಸಂಪೂರ್ಣ ವಿಶ್ವದ ನಡುವೆ ಒಂದು ಸಹಜವಾದ ಮಾತುಕತೆಯಿತ್ತು. ನಿಮಗೆ ನೆನಪಿದೆಯೇ? ಕಾರ್ಟೂನುಗಳಲ್ಲಿನ ಮಕ್ಕಳನ್ನು ನೀವು ನೋಡಿದ್ದೀರಾ? ಅವರೊಂದಿಗೆ ಮರಗಳು ಕೂಡಾ ಮಾತನಾಡುತ್ತವೆ. ಅದೊಂದು ಬೇರೆಯ ಪ್ರಪಂಚ.
ಈಗ ಇರುವ ಪ್ರಶ್ನೆಯೆಂದರೆ, ಈಗಲೂ ನಮಗೆ ಆ ಮುಗ್ಧತೆಯನ್ನು ಉಳಿಸಿಕೊಳ್ಳುವುದರ ಜೊತೆಯಲ್ಲಿಯೇ ಬುದ್ಧಿವಂತಿಕೆಯ ಉನ್ನತಿಗೇರಲು ಸಾಧ್ಯವಿದೆಯೇ?
ನಾನು ಹೇಳುತ್ತೇನೆ, "ಹೌದು, ನಮಗೆ ಸಾಧ್ಯವಿದೆ."
ಬುದ್ಧಿವಂತಿಕೆ ಮತ್ತು ಮುಗ್ಧತೆ ಜೊತೆಯಲ್ಲಿ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಅಮೂಲ್ಯವಾದುದು. ಬುದ್ಧಿವಂತರು ಮತ್ತು ಮೋಸಗಾರರಾಗಿರುವ ಜನರಿರುತ್ತಾರೆ. ಮುಗ್ಧ ಹಾಗೂ ಮೂರ್ಖರಾಗಿರಲು ಸುಲಭ. ಆದರೆ ನಿಜವಾಗಿ ಅಪೇಕ್ಷಾರ್ಹವಾದುದು ಯಾವುದೆಂದರೆ, ಬುದ್ಧಿವಂತಿಕೆಯನ್ನು ತರುವ ಹಾಗೂ ಅದೇ ಸಮಯದಲ್ಲಿ ಮುಗ್ಧತೆಯನ್ನು ಉಳಿಸಿಕೊಳ್ಳುವ ಶಿಕ್ಷಣ.
ಆದುದರಿಂದ, ಈಗ ನಾವು ಹಾಯಾಗಿರುವುದರಿಂದ ಮತ್ತು ಅನೌಪಚಾರಿಕತೆಯನ್ನು ಅನುಭವಿಸುತ್ತಿರುವುದರಿಂದ, ಇವತ್ತು ನಾನು ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ನೀವು ಬಯಸುವಿರಿ?
(ಸಭಿಕರು: ಪ್ರೀತಿ; ಹುಟ್ಟು; ಕ್ಷಮಾಪಣೆ; ಸಂಬಂಧ; ನಿರ್ಧಾರಗಳು; ದೇವರು; ಭ್ರಷ್ಟಾಚಾರ ಮತ್ತು ಶಾಂತಿ; ಸಹಾನುಭೂತಿ; ಕೋಪ; ಭಯ; ಬಂಡವಾಳಶಾಹಿತ್ವ; ಭರವಸೆ; ತಾಳ್ಮೆ)
ನಾನು ತಾಳ್ಮೆಯ ಬಗ್ಗೆ ಮಾತನಾಡಬೇಕೆಂದು ನೀವು ಬಯಸುತ್ತೀರಾ? ಅದನ್ನು ನಾನು ಮುಂದಿನ ವರ್ಷ ಮಾಡುತ್ತೇನೆ. ಆಮೇಲೆ......
ಹೇಳಿ, ಇವತ್ತು ನಾವು ಯಾವ ವಿಷಯದ ಬಗ್ಗೆ ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ? ನಿಮಗೆ ಗೊತ್ತಿದೆಯಾ, ನಾವು ನಮ್ಮ ಮಾತಿಗಿಂತಲೂ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಯಪಡಿಸುತ್ತೇವೆ. ಅಲ್ಲವೇ? ನಾವು ಏನು ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ?
ಪ್ರಪಂಚವೆಲ್ಲಾ ಕೇವಲ ಕಂಪನಗಳು. ನೀವೊಬ್ಬ ಭೌತಶಾಸ್ತ್ರಜ್ಞನಲ್ಲಿ ಮಾತನಾಡಿದರೆ, ಸಂಪೂರ್ಣ ವಿಶ್ವವು ಒಂದು ತರಂಗ ಪ್ರಕ್ರಿಯೆಯಲ್ಲದೆ ಮತ್ತೇನೂ ಅಲ್ಲವೆಂದು ಅವನು ಹೇಳುವನು. ನಮ್ಮಲ್ಲಿ ಪ್ರತಿಯೊಬ್ಬರೂ ತರಂಗಗಳಲ್ಲದೆ ಮತ್ತೇನೂ ಅಲ್ಲ. ನೀವು ನಿಮ್ಮ ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದರೆ, ತರಂಗಗಳು ಧನಾತ್ಮಕವಾಗಿರುತ್ತವೆ. ನೀವು ನಿಮ್ಮ ಕೇಂದ್ರದೊಂದಿಗೆ ಸಂಪರ್ಕದಲ್ಲಿ ಇರದಿದ್ದರೆ ಮತ್ತು ಸಿಲುಕಿಹಾಕಿಕೊಂಡಿದ್ದರೆ, ಆಗ ನಿಮ್ಮ ತರಂಗಗಳು ಋಣಾತ್ಮಕವಾಗುತ್ತವೆ.
ಶಾಂತಿ, ಪ್ರೀತಿ, ಸಹಾನುಭೂತಿ, ಇವುಗಳೆಲ್ಲಾ ನಮ್ಮ ನಿಜವಾದ ತರಂಗಗಳಾಗಿವೆ; ವಿಕೃತಿಯಿಲ್ಲದ ನಮ್ಮ ನಿಜವಾದ ತರಂಗಗಳು. ಇವುಗಳು ನಮ್ಮಿಂದ ಬರುವ ಧನಾತ್ಮಕ ಕಂಪನಗಳು. ನೀವು ಕೋಪಗೊಂಡಾಗ, ದುಃಖಗೊಂಡಾಗ, ನಕಾರಾತ್ಮಕವಾದಾಗ, ನೀವೇನು ಮಾಡುವಿರಿ? ನೀವದನ್ನು ಧನಾತ್ಮಕವಾಗಿ ಬದಲಾಯಿಸಬೇಕು. ಆದರೆ ಇದನ್ನು ಮಾಡುವುದು ಹೇಗೆಂದು, ಮನೆಯಲ್ಲಾಗಲೀ ಶಾಲೆಯಲ್ಲಾಗಲೀ ಯಾರೂ ನಮಗೆ ಕಲಿಸಲಿಲ್ಲ. ಅಲ್ಲವೇ? ಅಜ್ಜಿ ನಮಗೆ ಹೇಳಿರಬಹುದು, "ಮೂಲೆಗೆ ಹೋಗಿ ಹತ್ತರವರೆಗೆ ಎಣಿಸು", ಅಷ್ಟೆ. ಈ ದಿನಗಳಲ್ಲಿ, ಹತ್ತರವರೆಗೆ ಅಥವಾ ನೂರರವರೆಗೆ ಎಣಿಸುವುರಿಂದ ಯಾವುದೇ ಉಪಕಾರವಾಗುವುದಿಲ್ಲ.
ನೀವು ನಿಮ್ಮ ಮನಸ್ಸನ್ನು ಗಮನವಿಟ್ಟು ನೋಡಿದರೆ, ನಿಮ್ಮ ಮನಸ್ಸು ಕಳೆದುಹೋದುದರ ಬಗ್ಗೆ ಕೋಪದಲ್ಲಿರುತ್ತದೆ ಅಥವಾ ಭವಿಷ್ಯದ ಬಗ್ಗೆ ಆತಂಕಗೊಂಡಿರುತ್ತದೆ. ಎರಡರಿಂದಲೂ ಯಾವುದೇ ಉಪಯೋಗವಿಲ್ಲ. ಅಲ್ಲವೇ? ಕಳೆದುಹೋದುದರ ಬಗ್ಗೆ ಕೋಪಗೊಳ್ಳುವುದರಲ್ಲಿ ಯಾವ ಅರ್ಥವಿದೆ, ಅದು ಅದಾಗಲೇ ಹೋಗಿಯಾಯಿತು. ಭವಿಷ್ಯದ ಬಗ್ಗೆ ಆತಂಕಗೊಳ್ಳುವುದರಲ್ಲಿ ಯಾವ ಅರ್ಥವಿದೆ? ಅದು ಅರ್ಥವಿಲ್ಲದ್ದು.
ಈಗ, ಯಾವುದು ವರ್ತಮಾನದ ಕ್ಷಣಕ್ಕೆ ಬರಲು ನಿಮಗೆ ಸಹಾಯ ಮಾಡುವುದೋ ಅದು ಧ್ಯಾನವಾಗಿದೆ. ನೋಡಿ, ಜನರಿಗೆ ಕೆಲವೇ ನಿಮಿಷಗಳ ಕಾಲ, ಪ್ರತಿದಿನವೂ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದು ಹೇಗೆಂದು ತಿಳಿದಿದ್ದರೂ, ಅವರಿಗೆ ಒತ್ತಡವನ್ನು ತೊಡೆದು ಹಾಕಿ ಸಂತೋಷವಾಗಿರಲು ಸಾಧ್ಯವಿದೆ.
ಹಿಂಸಾರಹಿತ ಸಮಾಜ, ರೋಗರಹಿತ ಶರೀರ, ಗೊಂದಲರಹಿತ ಮನಸ್ಸು, ತಡೆರಹಿತ ಬುದ್ಧಿ, ಆಘಾತರಹಿತ ನೆನಪು ಮತ್ತು ದುಃಖರಹಿತ ಆತ್ಮ - ಇದನ್ನು ನೋಡುವುದು ನನ್ನ ಕಲ್ಪನೆಯಾಗಿದೆ. ನಿಮ್ಮಲ್ಲಿ ಎಷ್ಟು ಮಂದಿ ಇದಕ್ಕೆ ಸೇರಿಕೊಳ್ಳಲು ಇಷ್ಟಪಡುವಿರಿ?
(ಸಭಿಕರಲ್ಲಿ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗಳಿಗೆ ನಾವು ಒಂದು ಉತ್ತಮವಾದ ಪ್ರಪಂಚವನ್ನು ನೀಡಬೇಕು. ಹೆಚ್ಚಿನ ಪ್ರೀತಿಯಿರುವ, ಹೆಚ್ಚಿನ ಸಹಾನುಭೂತಿಯಿರುವ ಮತ್ತು ಬಂದೂಕಿನ ಸಂಸ್ಕೃತಿಯಿಲ್ಲದಿರುವ ಒಂದು ಪ್ರಪಂಚವನ್ನು ನಾವು ಅವರಿಗೆ ಕೊಡಬೇಕು. ನಮ್ಮ ಮಕ್ಕಳಿಗೆ ಮಾದಕ ದ್ರವ್ಯಗಳ ಅಥವಾ ಹಿಂಸೆಯ ಸಂಸ್ಕೃತಿ ಬೇಕಾಗಿಲ್ಲ. ಹೆಚ್ಚಿನ ಪ್ರೀತಿಯಿರುವ, ಮಾನವೀಯತೆಯಿರುವ ಮತ್ತು ಸಹಾನುಭೂತಿಯಿರುವ ಸಮಾಜವನ್ನು, ಒಂದು ಆರೋಗ್ಯಕರ ಸಮಾಜವನ್ನು ಪಡೆಯಲು ಅವರು ಅರ್ಹರಾಗಿದ್ದಾರೆ. ನಿಮಗೆ ಹಾಗೆ ಅನ್ನಿಸುವುದಿಲ್ಲವೇ? ಹಾಗಾದರೆ ನಾವು ಕೆಲಸ ಮಾಡಬೇಕಾಗಿರುವುದು ಅದರ ಕಡೆಗೆ.

ಪ್ರಶ್ನೆ: ಭೂಮಿಯ ಮೇಲೆ ನಮ್ಮ ಧ್ಯೇಯವೇನು?
ಶ್ರೀ ಶ್ರೀ ರವಿಶಂಕರ್: ಭೂಮಿಯ ಮೇಲೆ ನಮ್ಮ ಧ್ಯೇಯವಲ್ಲದುದು ಯಾವುದು? ಮೊದಲು ನಾವು ಅದರ ಒಂದು ಪಟ್ಟಿಯನ್ನು ಮಾಡಬೇಕು. ನಿಮ್ಮ ಧ್ಯೇಯವೆಂದರೆ, ದುಃಖಿತರಾಗದೇ ಇರುವುದು ಮತ್ತು ಇತರರನ್ನು ದುಃಖಿತರನ್ನಾಗಿಸದೇ ಇರುವುದು, ಸರಿಯಾ?! ಈಗ ನೀವು ನಿಮ್ಮ ಧ್ಯೇಯವಲ್ಲದೇ ಇರುವುದನ್ನು ತೆಗೆಯುತ್ತಾ ಹೋದರೆ, ಕೊನೆಯಲ್ಲಿ ನೀವು ನಿಮ್ಮ ಧ್ಯೇಯದ ಕಡೆಗೆ ಬರುವಿರಿ.

ಪ್ರಶ್ನೆ: ಇತರರು ನಕಾರಾತ್ಮಕವಾಗಿದ್ದರೆ, ಅದರಿಂದ ಪ್ರಭಾವಕ್ಕೊಳಗಾಗದೇ ಇರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನೀನು ಹೆಚ್ಚು ಕೇಂದ್ರಿತನಾಗು ಮತ್ತು ಕುಂದುಕೊರತೆಗೆ ಸ್ವಲ್ಪ ಜಾಗ ಬಿಡು. ಕೆಲವೊಮ್ಮೆ ನಾವು ಕುಂದುಕೊರತೆಗೆ ಜಾಗ ಬಿಡುವುದಿಲ್ಲ ಮತ್ತು ಇದರಿಂದಾಗಿ ನಾವು ತೊಂದರೆಗೊಳಗಾಗುತ್ತೇವೆ.
ಯಾರಾದರೂ ನಕಾರಾತ್ಮಕವಾಗಿದ್ದರೆ, ಸ್ವಲ್ಪ ಹೊತ್ತಿನ ವರೆಗೆ ನಕಾರಾತ್ಮಕವಾಗಿರಲು ಅವರಿಗೆ ಹಕ್ಕಿದೆ. ಅವರು ಹಾಗಿರಲಿ ಬಿಡಿ. ಅವರಿಗೆ ಸ್ವಲ್ಪ ಜಾಗ ಕೊಡಿ. ನಾನು ನಿಮ್ಮಲ್ಲಿ ಹೇಳುತ್ತಿದ್ದೇನೆ, ನಾನಿಲ್ಲಿರುವುದು ನಿಮ್ಮೆಲ್ಲಾ ಚಿಂತೆಗಳನ್ನು ಸಂಗ್ರಹಿಸಲು. ಆದುದರಿಂದ ನಿಮ್ಮೆಲ್ಲಾ ಸಮಸ್ಯೆಗಳನ್ನು, ತೊಂದರೆಗಳನ್ನು ಮತ್ತು ಚಿಂತೆಗಳನ್ನು ನನಗೆ ಕೊಡಿ. ನಿಮ್ಮ ಮುಖದ ಮೇಲೆ ಒಂದು ಮಾಸದ ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ.

ಪ್ರಶ್ನೆ: ನಮಗೆ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್: ಜೀವನದಲ್ಲಿ ಭಾವನೆಗಳಿಗಿಂತ ಎಷ್ಟೋ ಹೆಚ್ಚು ಮೂಲಭೂತವಾದುದು ಏನೋ ಒಂದಿದೆ ಎಂಬುದು ನಮಗೆ ತಿಳಿದಾಗ ನಾವು ಸುಲಭವಾಗಿ ಭಾವನೆಗಳಾಚೆಗೆ ಹೋಗಬಹುದು; ಮತ್ತು ಅದುವೇ ಆತ್ಮ, ಜೀವನ ಶಕ್ತಿ. ಅದು ಬದಲಾಗುವುದೇ ಇಲ್ಲ.

ಪ್ರಶ್ನೆ: ಪ್ರೇಮ ಮತ್ತು ಬಯಕೆ/ಕಾಮದ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಪ್ರೇಮದಲ್ಲಿ ಇನ್ನೊಬ್ಬರು ಮುಖ್ಯವಾಗಿರುತ್ತಾರೆ. ಕಾಮದಲ್ಲಿ ನೀವು ಮುಖ್ಯವಾಗಿರುತ್ತೀರಿ.

ಪ್ರಶ್ನೆ: ಪ್ರೀತಿಯ ಗುರೂಜಿ, ಮನಸ್ಸಿನಲ್ಲಿ ಬಹಳಷ್ಟು ವಿರೋಧವಿರುವ ಜನರಿಗೆ ನಾನು ಹೇಗೆ ಸಹಾಯ ಮಾಡಬಹುದು?
ಶ್ರೀ ಶ್ರೀ ರವಿಶಂಕರ್: ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಜನರಿದ್ದಾರೆ. ನಾವು ಅವರೆಲ್ಲರನ್ನೂ ಅವರಿರುವಂತೆಯೇ ಸ್ವೀಕರಿಸಬೇಕು. ವಿರೋಧವಿರುವ ಜನರಿದ್ದಾರೆ. ಅದು ಪರವಾಗಿಲ್ಲ. ಅವರು ತಮ್ಮದೇ ಆದ ವೇಗದಲ್ಲಿ ನಡೆಯಲು ಬಿಡಿ. ಈ ಗ್ರಹದಲ್ಲಿ ಮೊಲಗಳಿವೆ, ಜಿಂಕೆಗಳಿವೆ ಮತ್ತು ಬಸವನ ಹುಳಗಳಿವೆ. ಒಂದು ಬಸವನ ಹುಳವು ಒಂದು ಮೊಲದಷ್ಟು ವೇಗವಾಗಿ ಓಡಬೇಕೆಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ, ಅಲ್ಲವೇ? ಇತರರು ಜಿಂಕೆಯಂತೆ ಓಡುತ್ತಿದ್ದರೂ ಒಬ್ಬರು ಒಂದು ಬಸವನ ಹುಳದ ಗತಿಯಲ್ಲಿ ನಡೆಯಲು ಬಿಡಿ. ಪ್ರಪಂಚವಿರುವುದೇ ಹಾಗೆ. ನಗುನಗುತ್ತಾ ಇರಿ ಮತ್ತು ಮುಂದಕ್ಕೆ ಸಾಗುತ್ತಾ ಇರಿ.

ಪ್ರಶ್ನೆ: ಜನರನ್ನು ಕ್ಷಮಿಸಲು ನನಗೆ ಕಷ್ಟವಾಗುತ್ತದೆ.
ಶ್ರೀ ಶ್ರೀ ರವಿಶಂಕರ್: ಅವರನ್ನು ಕ್ಷಮಿಸಬೇಡ, ಮತ್ತು ನಂತರ ನೋಡು, ಅದು ಸುಲಭವಾಗುವುದೇ ಎಂದು. ಒಬ್ಬರನ್ನು ನೀನು ಕ್ಷಮಿಸದೇ ಇದ್ದರೆ, ನೀನು ಯಾವತ್ತೂ ಅವರ ಬಗ್ಗೆ ಯೋಚಿಸುತ್ತಾ ಇರುವೆ.
ಒಬ್ಬರ ಕಡೆಗಿರುವ ಕೋಪವನ್ನು ಹಾಗೇ ಹಿಡಿದಿರಿಸಿಕೊಳ್ಳುವುದು ನಿಜವಾಗಿಯೂ ಸುಲಭವೇ? ದೇವರೇ, ನಮ್ಮ ಬಹಳಷ್ಟು ಶಕ್ತಿಯು ಅದರಲ್ಲಿ ವ್ಯರ್ಥವಾಗುತ್ತದೆ. ನೀವು ಇತರರನ್ನು ಯಾಕೆ ಕ್ಷಮಿಸುವಿರೆಂದು ನಿಮಗೆ ತಿಳಿದಿದೆಯೇ? ಅದು ನಿಮಗೋಸ್ಕರವೇ.
ನೀವೊಬ್ಬ ಅಪರಾಧಿಯನ್ನು ಒಬ್ಬ ಬಲಿಪಶುವನ್ನಾಗಿ ಕೂಡಾ ನೋಡುವಾಗ, ನಿಮಗೆ ಸುಲಭವಾಗಿ ಅವರನ್ನು ಕ್ಷಮಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಅಪರಾಧಿಯೂ ಅಜ್ಞಾನದ, ಸಂಕುಚಿತ ಮನಃಸ್ಥಿತಿಯ ಬಲಿಪಶುವಾಗಿದ್ದಾನೆ. ಅವರಿಗೆ ಜೀವನದ ವಿಶಾಲತೆಯ ಮತ್ತು ಸೌಂದರ್ಯದ ಬಗ್ಗೆ ತಿಳಿಯದು. ಆದುದರಿಂದ ಅವರು ಸ್ವಾರ್ಥಿಗಳಾಗಿರುವ ಹಾಗೂ ಇತರರ ಬಗ್ಗೆ ಕಾಳಜಿ ವಹಿಸದ ಈ ತಿಳಿಗೇಡಿ ತಪ್ಪುಗಳನ್ನು ಮಾಡುತ್ತಾರೆ. ಅದು ಯಾಕೆಂದರೆ ಅವರ ಮನಸ್ಸು ಚಿಕ್ಕದು. ಆದುದರಿಂದ ನಾವು ಅವರನ್ನು ಕ್ಷಮಿಸಬೇಕು. ಮತ್ತೆ, ನೀನು ಮಾಡಿದಂತೆ, ವಿಶಾಲವಾಗಿ ಯೋಚಿಸುವ ಹಾಗೂ ಉದಾರತೆಯನ್ನು ಅನುಭವಿಸುವ ಅವಕಾಶವು ಅವರಿಗೆ ಸಿಗಲಿಲ್ಲವೆಂಬುದನ್ನು ನೀನು ನೋಡಬೇಕು. ಆದುದರಿಂದ, ನೀನು ಅವರ ಬಗ್ಗೆ ಕೇವಲ ಸಹಾನುಭೂತಿ ವ್ಯಕ್ತಪಡಿಸಬಹುದು ಮತ್ತು ಅವರನ್ನು ಕ್ಷಮಿಸಬಹುದು.