ಗುರುವಾರ, ಆಗಸ್ಟ್ 2, 2012

ಜ್ಞಾನ, ಆತ್ಮದ ಸುತ್ತಮುತ್ತ

02
2012
Aug
ಅಮೃತಬಿ೦ದು’ ಸರಣಿಯ ಬರಹಗಳು
ಐದನೆಯ ಕ೦ತು

ಸೀಮಿತ ಜ್ಞಾನ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೧.೦೩.೦೩ರ೦ದು ಪ್ರಕಟವಾಗಿತ್ತು)

’ನಾನು ಯಾರು’ ಅನ್ನುವುದರ ಜ್ಞಾನ ಪಡೆದುಕೊಳ್ಳದೆ, ’ಇದು ಏನು’ ಎಂಬುದರ ಜ್ಞಾನ ಪಡೆದುಕೊಳ್ಳುತ್ತಿರುತ್ತೀವಲ್ಲ...ಈ ಜ್ಞಾನದಿಂದ ಬಂಧನವಾಗುತ್ತದೆ, ಏಕೆಂದರೆ ಜ್ಞಾನ ಇದ್ದಾಗ ಮನಸ್ಸು ಸೀಮಿತವಾಗುತ್ತದೆ...
ನೀವು ಡ್ರೈವ್ ಮಾಡ್ಕೊಂಡು ಎಲ್ಲೋ ಹೋಗ್ತಾ ಇರಬೇಕಾದರೆ ಅರಿವು ಬೇಕಾಗುತ್ತೆ, ಜ್ಞಾನ ಬೇಕಾಗುತ್ತೆ. ಯಾರಾದರೂ ಎರ್ರಾಬಿರ್ರಿ ಕೆಲಸ ಮಾಡಿದರೆ, ’ಏನೋ, ಪ್ರಜ್ಞೆ ಇಲ್ಲವೇನೋ, ಜ್ಞಾನ ಇಲ್ಲವೇನೋ’ ಅಂತ ಹೇಳ್ತೀವಿ. ಯಾವುದೇ ಕೆಲಸ ಮಾಡಬೇಕಾದ್ರೆ ಏನು ಬೇಕಾಗುತ್ತೆ ನಮಗೆ? ಏಕಾಗ್ರತೆ ಬೇಕಾಗುತ್ತೆ, ಅರಿವು ಬೇಕಾಗುತ್ತೆ, ಒಂದು ಜ್ಞಾನ ಬೇಕಾಗುತ್ತೆ. ಹಾಗೆ ಅರಿವಿದ್ದಾಗ ಮನಸ್ಸು ಸೀಮಿತವಾಗಿರುತ್ತೆ.
ನಿಮ್ಮ ಮನಸ್ಸಿನ ನಿಜವಾದ ಸ್ವಭಾವ ಏನು?..’ನಿಸ್ಸೀಮ’... ’ಅಸೀಮ’. ಆದರೆ ಒಂದು ಕೆಲಸ, ಕಾರ್ಯ ಮಾಡಬೇಕಾದರೆ ಸೀಮಿತವಾಗಿರುತ್ತದೆ ಜ್ಞಾನ. ಆ ಜ್ಞಾನದಲ್ಲೇ ಯಾವಾಗಲೂ ಇದ್ದುಬಿಟ್ಟಾಗ ಅದೇ ನಮಗೆ ಒಂದು ’ಬಂಧನ’ ಉಂಟುಮಾಡಿಬಿಡುತ್ತದೆ. ಎಷ್ಟೋ ಜನಕ್ಕೆ ನಿದ್ದೆ ಬರಲ್ಲ, ಯಾಕೆ ಗೊತ್ತಾ? ಅವರ ತಲೆ ತುಂಬ ಯೋಚನೆಗಳು...ಯೋಚನೆಗಳು ಯಾವುದರಿಂದ ಬರುತ್ತೆ? ಜ್ಞಾನದಿಂದ ಬರುತ್ತೆ. ಜ್ಞಾನ ಇಲ್ಲದಿದ್ದರೆ ಯೋಚನೆ ಹೇಗೆ ಬರೋಕೆ ಸಾಧ್ಯ?
ಒಳ್ಳೆಯದರ ಜ್ಞಾನದಿಂದ ರಾಗ ಉತ್ಪತ್ತಿ ಆಗುತ್ತದೆ.
ಕೆಟ್ಟದ್ದರ ಜ್ಞಾನದಿಂದ ಕ್ರೋಧ, ದ್ವೇಷ ಉಂಟಾಗುತ್ತದೆ.
ರಾಗ, ದ್ವೇಷ ಎರಡನ್ನೂ ಉಂಟುಮಾಡುವಂಥದ್ದು ಯಾವುದು? ಜ್ಞಾನವೇ! ಯಾವುದೋ ಒಂದನ್ನು ನೋಡ್ತೀವಿ - ಸುಂದರವಾದ ವಸ್ತು, ಪರಿಸರ, ವ್ಯಕ್ತಿ...ಆಗ ’ಬೇಕು ಬೇಕು’ ಅನ್ನತಕ್ಕಂಥ ರಾಗ ಒಳಗಡೆ ಉಂಟಾಗುತ್ತದೆ. ಹಾಗೇ ಯಾವುದೋ ತೀರಾ ಅಸಹ್ಯವಾಗಿರುವುದನ್ನು ನೋಡ್ತೀರ, ಆಗ ಅದೇ ಮನಸ್ಸು ತುಂಬ ಬೇಸರಪಟ್ಟುಕೊಳ್ತದೆ.
ಆ ಜ್ಞಾನದಿಂದ ಮತ್ತೆ ಬಂಧನ ಉಂಟಾಯ್ತು. ಅದಕ್ಕೇ ಹೇಳಿದರು ’ಜ್ಞಾನಂ ಬಂಧಃ’ ಅಂತ.

* * * * *

ಜ್ಞಾನವೂ ಬಂಧನವೇ!

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೧.೦೪.೦೩ರ೦ದು ಪ್ರಕಟವಾಗಿತ್ತು)

ನಿದ್ರೆಯಲ್ಲಿ ಯಾವ ರೀತಿಯ ಬಂಧನದ ಅರಿವೂ ನಮಗಿರುವುದಿಲ್ಲ. ಬಂಧನದ ಅರಿವುಂಟಾಗಬೇಕಾದರೆ ಎಚ್ಚೆತ್ತುಕೊಂಡಾಗ ಮಾತ್ರ ಸಾಧ್ಯ. ಜ್ಞಾನ ಉಂಟಾಗುವುದರ ಮೂಲಕ ಬಂಧನದ ಅನುಭವವುಂಟಾಗುತ್ತದೆ. ಸೀಮಿತವಾದ ಜ್ಞಾನದಿಂದ ಬಂಧನ ಉಂಟಾಗುತ್ತದೆ.
ಒಬ್ಬ ವ್ಯಕ್ತಿ ಯಾತ್ರೆಗೆ ಹೋಗಿ ವಾಪಸ್ ಬರ್ತಾ ಇರಬೇಕಾದರೆ ಸುದ್ದಿ ಬಂತು - ಅವನ ಮನೆಗೆ ಬೆಂಕಿ ಬಿದ್ದಿದೆ ಅಂತ. ಈ ಸುದ್ದಿ ಕೇಳಿದ ತಕ್ಷಣ ಆತನಿಗೇನಾಯ್ತು? ’ತಳಮಳ, ಕಾತರ, ದುಃಖ’...ಅಪಘಾತ ಆದ ಹಾಗೆ ಆಯ್ತು. ಹೃದಯವೇ ನಿಂತುಹೋದ ಹಾಗೆ ಆಗೋಯ್ತು! ಬಹಳ ತಳಮಳಿಸಿಬಿಟ್ಟ. ಇನ್ನೂ ಮನೆಗೆ ಹೋಗಿ ಸೇರಿಲ್ಲ, ಬರ್ತಾ ಇದ್ದ ಹಾಗೇ ’ನಿಮ್ಮನೆಗೆ ಬೆಂಕಿ ಬಿದ್ದು ಹೋಯ್ತಪ್ಪಾ’ ಅಂತ ಸುದ್ದಿ ಬಂತು.ಈ ಜ್ಞಾನದಿಂದ ಬಂಧನ ಉಂಟಾಗಿಬಿಟ್ಟಿತು.
ಹೀಗೆ ಸೀಮಿತವಾದ ಜ್ಞಾನವು ಬಂಧನಕ್ಕೆ ಕಾರಣವಾಗುತ್ತೆ. ಸ್ವಲ್ಪ ಹೊತ್ತಾದ ಮೇಲೆ ಇನ್ಯಾರೋ ಬಂದು ಹೇಳಿದರು, ’ಇಲ್ಲಪ್ಪ, ನಿಮ್ಮನೆ ಅಲ್ಲ, ಬೇರೆ ಯಾರದೋ ಮನೆಗೆ ಬಿದ್ದದ್ದು ಬೆಂಕಿ’ ಅಂತ. ’ಹೌದೇನ್ರಿ....? ಪರವಾಗಿಲ್ಲ ಬಿಡಿ’....! ಇದ್ದಕ್ಕಿದ್ದ ಹಾಗೆ ಚೇತರಿಸಿಕೊಂಡುಬಿಟ್ಟ ಆ ಮನುಷ್ಯ!
’ನನ್ನ ಮನೆ’, ’ನನ್ನದು’ ಅನ್ನತಕ್ಕಂಥ ಜ್ಞಾನ ಉಂಟಾದಾಗ ಅದರಿಂದ ಬಂಧನ ಉಂಟಾಗುತ್ತದೆ...ಜ್ಞಾನವು ನಮ್ಮನ್ನು ಬಂಧನಕ್ಕೀಡು ಮಾಡುತ್ತದೆ ಎನ್ನುವುದು ಸೋಜಿಗವಲ್ಲವೇ? ಮುಂದೆ ಇದರ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳೋಣ..

* * * * *

ಚೈತನ್ಯ ಹೆಚ್ಚಿಸಿಕೊಳ್ಳಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೪.೦೩ರ೦ದು ಪ್ರಕಟವಾಗಿತ್ತು)

ಮ್ಮ ಬಗ್ಗೆ ಅರಿವು... ಆತ್ಮನ ಅರಿವು ಹೇಗೆ ಉಂಟಾಗುತ್ತೆ? ಚೈತನ್ಯ ಹೆಚ್ಚಾದಷ್ಟೂ ಉಂಟಾಗುತ್ತೆ.
ಈಗ ನಾವು ಹೇಗಿದ್ದೀವಿ ಅಂದರೆ ಬದುಕಿದ್ದೀವಿ, ಆದರೆ ಸತ್ತಂತೆ ಬದುಕುತ್ತಾ ಇದ್ದೀವಿ. ಏನೋ ನಿದ್ದೆ ಮಾಡೋದು, ಏನೋ ತಿನ್ನೋದು, ಹರಟೆ ಹೊಡೆಯುವುದು, ಏನೋ ಮಾತನಾಡೋದು. ಇಡೀ ಜೀವನ ಎಚ್ಚತ್ತಿಲ್ಲ, ಜಾಗೃತವಾಗಿಲ್ಲ, ನಿದ್ದೆಯಲ್ಲಿ ನಡೆದುಕೊಂಡು ಹೋದಂತೆ,
ಮಕ್ಕಳು ನಿದ್ದೆ ಮಾಡುವಾಗ ಎಷ್ಟೋ ಸಲ ಅಮ್ಮ ನಿದ್ರೆಯಲ್ಲಿ ಹಾಲು ಕುಡಿಸಿ ಮಲಗಿಸಿಬಿಡ್ತಾರೆ. ಆ ಮಕ್ಕಳಿಗೆ ಜ್ಞಾಪಕವೇ ಇರುವುದಿಲ್ಲ. ಬೆಳಿಗ್ಗೆ ಎದ್ದು ಮಕ್ಕಳು ಹೇಳ್ತಾರೆ ’ಅಮ್ಮ ರಾತ್ರಿ ನೀನು ನನಗೆ ಹಾಲು ಕೊಟ್ಟೇ ಇಲ್ಲ’ ಅಂತ. ಅಥವಾ ರಾತ್ರಿ ಊಟ ಮಾಡಿಲ್ಲ ಅಂತ. ಆ ನಿದ್ರೆಯಲ್ಲಿ ಉಂಡು ತಿಂದು ಹೇಗೆ ಮಲಗಿದೆವೋ ಹಾಗೆ ಇಡೀ ಜೀವನ ನಡೆಸಿಕೊಂಡು ಬರುತ್ತಿದ್ದೀವಿ. ಅದರಿಂದ ನಮಗೆ ನಮ್ಮ ಬಗ್ಗೆ ಅರಿವೇ ಇಲ್ಲ.
’ಚೈತನ್ಯ ಆತ್ಮ’. ಶರೀರದಲ್ಲಿ ಜೀವನದಲ್ಲಿ ಚೈತನ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಹಾಗೂ ಆತ್ಮನ ಬಗ್ಗೆ ಅರಿವು ಮೂಡಲು ಸಾಧ್ಯ.
ಆದರೆ ನಾವು ’ಜಡತೆ’ಯನ್ನು ಬೆಳೆಸಿಕೊಳ್ತೀವಿ, ಹೇಗೆ?
ಈಗ ನಮ್ಮಲ್ಲಿರುವ ಆತ್ಮ ಚೈತನ್ಯವನ್ನು ಕಡಿಮೆ ಮಾಡಿಕೊಳ್ಳದಿರುವುದು, ಹಾಗೂ ಅದನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆ?
ನಾಳೆ ವಿಚಾರ ಮಾಡೋಣ.

* * * * *

ಚೈತನ್ಯ–ಆತ್ಮ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೪.೦೪.೦೩ರ೦ದು ಪ್ರಕಟವಾಗಿತ್ತು)

ಮಗೆ ಸ್ವಲ್ಪ ಚೈತನ್ಯ ಉಂಟಾದ ತಕ್ಷಣ ಸಿಕ್ಕಾಪಟ್ಟೆ ಮಾತನಾಡಲು ಪ್ರಾರಂಭಿಸಿಬಿಡುತ್ತೇವೆ. ಮಾತಾಡಿ ಆಡಿ ಚೈತನ್ಯವೆಲ್ಲಾ ಹೊರಟುಹೋಗುತ್ತೆ,
ನೀವು ಗಮನಿಸಿದ್ದೀರಾ? ಕೆಲವು ಸಾರಿ ತುಂಬಾ ಮಾತಾಡಿದ ಮೇಲೆ ಬೇಸರಿಕೆಯುಂಟಾಗಿಬಿಡುತ್ತೆ. ದೂರು ಹೇಳೋದು, ಕುತರ್ಕ ಅಥವಾ ಹಾಳುಮೂಳು ಮಾತನಾಡುವುದು ಈ ತರಹ ಮಾಡಿ ನಮ್ಮ ಚೈತನ್ಯವನ್ನು ನಾವು ಕಳೆದುಕೊಳ್ತೀವಿ. ಹಾಗೇ ತುಂಬಾ ತಿನ್ನುವುದರಿಂದಲೂ ನಮ್ಮ ಚೈತನ್ಯವನ್ನು ಹಾಳು ಮಾಡಿಕೊಳ್ತೀವಿ. ಆ ಊಟವನ್ನು ಕರಗಿಸಲಿಕ್ಕೇ ಅಷ್ಟು ಚೈತನ್ಯ ಬೇಕು, ಇನ್ನು ತಲೆ ಕೆಲಸ ಮಾಡೋದೆಲ್ಲಿ ಬಂತು?
ತುಂಬಾ ತಿನ್ನುವುದರಿಂದಲೂ ನಮ್ಮ ಚೇತನ ಕೆಳಮುಖವಾಗುತ್ತೆ ನೋಡಿದ್ದೀರಾ? ತುಂಬಾ ತಿಂದ ದಿನ ಏನೂ ಉತ್ಸಾಹವೇ ಇರುವುದಿಲ್ಲ. ಹೌದಲ್ಲಾ?
ತುಂಬಾ ತಿಂದರೆ ಚೈತನ್ಯ ಎಲ್ಲಿ ಬರುತ್ತೆ? ಹಾಗೇ ವಿಪರೀತ ನಿದ್ದೆ ಮಾಡುವವರಿಗೂ ಚೈತನ್ಯ ಜಾಗೃತವಾಗುವುದಿಲ್ಲ, ಹಿತಮಿತವಾಗಿರಬೇಕು, ಆಗಲೇ ಚೈತನ್ಯ ಉಂಟಾಗಬೇಕಾದರೆ.
ಚೈತನ್ಯ ಆತ್ಮ! ಎಷ್ಟು ಚೈತನ್ಯ ಉಂಟಾದರೆ ಅಷ್ಟಕ್ಕಷ್ಟು ನೀನು ನಿನ್ನ ಆತ್ಮವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯ. ಅದಕ್ಕೇ ಪ್ರಾಣಾಯಾಮ, ಸುದರ್ಶನ ಕ್ರಿಯಾ, ಧ್ಯಾನ ಇವೆಲ್ಲ ಮಾಡುವುದರಿಂದ ಚೈತನ್ಯ ಉದಯವಾಗುತ್ತೆ. ಸತ್ಸಂಗದಲ್ಲಿ ಏನಾಗುತ್ತೆ? ಎಲ್ಲರೂ ಭಾವದಿಂದ ಕೂತ್ಕೊಂಡು ಹಾಡಿದಾಗ ಚೈತನ್ಯ ಉದಯವಾಗುತ್ತೆ. ಆ ಚೈತನ್ಯವೇ ಆತ್ಮ ಎಂದರು. ಇದು ಮೊದಲನೆಯ ಸೂತ್ರ.

* * * * *

ಪೂರ್ಣತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೫.೦೪.೦೩ರ೦ದು ಪ್ರಕಟವಾಗಿತ್ತು)

ಯಾವುದೇ ಕೆಲಸ ಮಾಡಿದರೂ ನಿನ್ನ ಇಡೀ ಶಕ್ತಿಯನ್ನು ಹಾಕು. ಆಗ ಆ ಕೆಲಸ ಸಫಲವಾದರೂ, ಆಗದಿದ್ದರೂ ನಿನಗೆ ಚಿಂತೆ ಇರುವುದಿಲ್ಲ. ಚಿಂತೆಯ ಲಕ್ಷಣ ಏನು? ನಾವು ನಮ್ಮ ಪೂರ್ಣ ಶಕ್ತಿಯ ವಿನಿಯೋಗ ಮಾಡಿಲ್ಲ.
ಈಗ ಯಾವುದೋ ಒಂದು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತೀರ ಎಂದು ಭಾವಿಸೋಣ. ನೀವು ನಿಮ್ಮ ಇಡೀ ಶಕ್ತಿಯನ್ನು ವಿನಿಯೋಗ ಮಾಡಿದ್ದರೆ ನಿಮ್ಮ ಮನಸ್ಸಿಗೆ ಪಶ್ಚಾತ್ತಾಪ ಉಂಟಾಗುವುದಿಲ್ಲ - ಅಯ್ಯೋ ಇನ್ನೂ ಚೆನ್ನಾಗಿ ಮಾಡಿರಬಹುದಿತ್ತು ಅಂತ. ’ಇನ್ನೂ ಚೆನ್ನಾಗಿ ಮಾಡುವುದಕ್ಕೆ ಎಲ್ಲಿದೆ ನಂಗೆ ದಾರಿ? ನಾನು ನನಗೆ ಆದಷ್ಟು ಮಾಡಿಬಿಟ್ಟು ಮುಗೀತು ಅಂತ ಕೈ ಬಿಟ್ಟುಬಿಟ್ಟಿದ್ದೀನಿ. ಈಗ ಆದರೆ ಆಯಿತು, ಫಲ ಸಿಕ್ಕಿದರೆ ಒಳ್ಳೆಯದು, ಇಲ್ಲದಿದ್ದರೂ ಖುಷಿಯಾಗಿರ್ತೀನಿ’. ’ಅಯ್ಯೋ ನಾನು ಮಾಡಲಿಲ್ಲವಲ್ಲ’ ಅನ್ನುವುದು ಏನು? ನಾವು ನಮ್ಮ ಪೂರ್ಣ ಶಕ್ತಿಯನ್ನು ಪ್ರಯೋಗ ಮಾಡಿಲ್ಲ. ಯಾವುದೇ ಕೆಲಸಕ್ಕೆ ನಿಮ್ಮ ಪೂರ್ಣಶಕ್ತಿಯನ್ನು, ಮನಸ್ಸು, ವಾಣಿ, ಶರೀರವನ್ನು ಪೂರ್ಣವಾಗಿ ಉಪಯೋಗಿಸಿದಾಗ ನೀವೇ ’ಭೈರವ’ರಾಗ್ತೀರ.
ಭೈರವ ಎಂದರೆ ಏನು? ’ಪೂರ್ಣತೆ’,.ಮನಸ್ಸಿನಲ್ಲಿ ಬೇಸರಿಕೆ, ಅಸಂತೋಷ, ಅತೃಪ್ತಿ ಇರುವುದು ಏತಕ್ಕೆ ಗೊತ್ತಾ? ಪೂರ್ಣತೆಯಿಲ್ಲ.
ಪ್ರತಿಯೊಂದು ಜೀವಾನೂ ಆತುರದಿಂದ ಕಾಯುತ್ತಾ ಇದೆ ಪೂರ್ಣವಾಗಲಿಕ್ಕೆ.ಆ ಪೂರ್ಣತೆ ಸಿಗುವ ತನಕ ಜೀವಕ್ಕೆ ನೆಮ್ಮದಿಯಿಲ್ಲ, ಶಾಂತಿಯಿಲ್ಲ, ನಿದ್ದೆಯಿಲ್ಲ, ಜೀವನದಲ್ಲಿ ಏನೋ ಒಂದು ಕಡಿಮೆ, ಏನೋ ಕಸಿವಿಸಿ, ಏನೋ ಬೇಸರಿಕೆ ಆಗುತ್ತಲೇ ಇರುತ್ತದೆ. ಹೆಜ್ಜೆ ಹೆಜ್ಜೆಗೂ ಆಗ್ತಾನೇ ಇರುತ್ತೆ... ಅತೃಪ್ತಿ!
ಅತೃಪ್ತಿಯನ್ನು ಹೋಗಲಾಡಿಸಿಕೊಳ್ಳುವುದಕ್ಕೋಸ್ಕರ ತಾನೇ ಎಲ್ಲರೂ ಮಠ, ಮಂದಿರ, ದೇವಸ್ಥಾನ, ಅಲ್ಲಿ ಇಲ್ಲಿ ಬರುವುದು? ಪ್ರವಚನ ಕೇಳೋಕೆ ಯಾಕೆ ಹೋಗಬೇಕು? ಭಜನೆ ಯಾಕೆ ಮಾಡ್ತೀರ? ದೇವಸ್ಥಾನಕ್ಕೆ ಹೋಗಿ ತೆಂಗಿನಕಾಯಿ ಯಾಕೆ ಒಡೀತೀರಾ? ಮಾಡುವುದಷ್ಟೂ ಅತೃಪ್ತಿಯಿಂದ ತೃಪ್ತಿಯ ಕಡೆಗೆ ಹೋಗುವುದಕ್ಕೋಸ್ಕರ ತಾನೇ? ಅಪೂರ್ಣತೆಯಿ೦ದ ಪೂರ್ಣತೆಯನ್ನು ಪಡೆದುಕೊಳ್ಳುವುದಕ್ಕೆ ತಾನೇ?
ಈ ಬಗ್ಗೆ ಇನ್ನೂ ಆಳವಾಗಿ ಅರಿತುಕೊಳ್ಳೋಣ ಮು೦ದೆ.

* * * * *

ಉದ್ಯಮೋ ಭೈರವಃ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೬.೦೪.೦೩ರ೦ದು ಪ್ರಕಟವಾಗಿತ್ತು)

ದ್ಯಮ ಎಂದರೇನು? ಉದ್ಯಮ ಅಂದರೆ ಪ್ರಯತ್ನ. ನಮ್ಮ ಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಮಾಡುವಂಥಹುದು. ’ಕಾಯಾ ವಾಚಾ ಮನಸಾ’ ಈ ತ್ರಿಕರಣದಿಂದ ಒಟ್ಟಿಗೆ ಕೂಡಿ ಯಾವ ಶಕ್ತಿ ಉಂಟಾಗುತ್ತದೆಯೋ ಆ ಶಕ್ತಿ ನಮ್ಮನ್ನು ಮೇಲೆಬ್ಬಿಸುತ್ತದೆ. ನಮಗೆ ಆಧಾರವಾಗಿರುವ ಯಾವ ಕೆಲಸವನ್ನೂ ಉದ್ಯಮ ಅಂತ ಹೇಳ್ತೀವಿ.
ನಾವು ಜೀವನದಲ್ಲಿ ಏನು ಮಾಡ್ತೀವಿ? ಏನು ಮಾಡಿದರೂ ಸ್ವಲ್ಪ ಸ್ವಲ್ಪಾನೇ ಮಾಡ್ತೀವಿ. ಚಿಂತೆಗೆ ಕಾರಣ ಏನು? ನೂರು ಪ್ರತಿಶತ ನಮ್ಮನ್ನು ನಾವು ಯಾವುದಕ್ಕೂ ಹಾಕಿಕೊಳ್ಳದೆ ಇರುವುದು. ಚಿಂತೇನೇ ಮಾಡಬೇಕಾ? ವಿಶಾಲವಾಗಿ, ದೊಡ್ಡದಾಗಿ ಚಿಂತೆ ಮಾಡಿ. ನಿಮ್ಮ ಚಿಂತೆ ಎಲ್ಲಾ ನಾಳೆ ನಾಡಿದ್ದು ಅಥವಾ ಹತ್ತು ವರ್ಷಕ್ಕೆ ಇರುತ್ತೆ. ಇನ್ನು ನೂರು, ಸಾವಿರ ವರ್ಷ ಆದ ಮೇಲೆ ಈ ಪ್ರಪಂಚ ಹೇಗಿರುತ್ತೆ ಅಂತ ಚಿಂತೆ ಮಾಡು. ಬೆಂಗಳೂರಿನಲ್ಲಿ ಈಗಲೇ ಇಷ್ಟೊಂದು ವಾಯುಮಾಲಿನ್ಯ ಆಗಿಬಿಟ್ಟಿದೆ. ಇನ್ನು ಹದಿನೈದು ಇಪ್ಪತ್ತು ವರ್ಷಕ್ಕೆ ಏನಾಗುತ್ತೆ? ಚಿಂತೆ ಮಾಡಲೇಬೇಕು ಅಂತ ನೀನು ತೀರ್ಮಾನಿಸಿಬಿಟ್ಟಿದ್ದರೆ ಅದನ್ನೇ ಮಾಡು, ಆದರೆ ದೊಡ್ಡದಾಗಿ ಮಾಡು, ಮುಳುಗು ಚಿಂತೆಯಲ್ಲಿ.
ಇಡೀ ಜೀವನ ಆನಂದದಿಂದ ತುಂಬುವುದು ಯಾವಾಗ? ಚೌಕಾಸಿ ಮಾಡ್ತಾ ಕೂತಿರ್ತೀವಿ, ಸ್ವಲ್ಪ ಇದು ಸಿಗಲಿ, ಅದು ಆಗಲಿ ಅಂತ. ಚಿಕ್ಕಪುಟ್ಟ ವ್ಯವಹಾರಗಳಿಂದ, ಚಿಕ್ಕಪುಟ್ಟ ಚಿಂತೆಗಳಿಂದ ತಲೆ ಕೆಡಿಸಿಕೊಂಡಿರತಕ್ಕಂಥ ನಮ್ಮ ಚೇತನವನ್ನು ಮುಕ್ತಗೊಳಿಸಬೇಕು. ಇದಕ್ಕೆ ಉಪಾಯ ’ಉದ್ಯಮೋ ಭೈರವಃ’.

* * * * *

ಮಾತಿನ ನಿರರ್ಥಕತೆ, ಮೌನದ ಮಹತ್ವ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೭.೦೪.೦೩ರ೦ದು ಪ್ರಕಟವಾಗಿತ್ತು)

ಚಿಂತೆಯ ಅನುಭವ ಯಾರಿಗಿಲ್ಲ? ’ಅನುಗಾಲವೂ ಚಿಂತೆ ಜೇವಕೆ’ ಎಂದು ದಾಸವರೇಣ್ಯರು ಹೇಳಿದ್ದಾರಲ್ಲವೆ? ನಮ್ಮ ಚಿಂತೆಯ ಮೂಲ ಕಾರಣವೇನು? ’ಶಬ್ದ!’. ಪದಗಳು ನಮ್ಮ ಚಿಂತೆಯ ಮೂಲ ಕಾರಣ. ನಿಶ್ಶಬ್ದದಿಂದ ಚಿಂತೆಯಾಗುವುದಿಲ್ಲ. ಪದಗಳಿಲ್ಲದೆ ಚಿಂತೆ ಮಾಡಬಲ್ಲಿರಾ? ನಮ್ಮ ಚಿಂತೆಗಳೂ ಆಲೋಚನೆಗಳೂ ಪದಗಳೇ! ಸರಿ, ಈಗ ಹತ್ತು ನಿಮಿಷ ಸುಮ್ಮನೆ ಕುಳಿತುಕೊಂಡು ಚಿ೦ತೆ ಮಾಡಿ, ಮನಸ್ಸಿನಲ್ಲಿ ಯಾವುದೇ ಪದವನ್ನೂ ಉಪಯೋಗಿಸಬೇಡಿ, ಸಾಧ್ಯವೇ? ನಿಮ್ಮಿಂದ ಸಾಧ್ಯವಿಲ್ಲ. ನಾವು ಪದಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಪದಗಳು ನಮ್ಮನ್ನು ಸೀಮಿತವನ್ನಾಗಿಸಿವೆ, ಹಿಡಿದಿಟ್ಟುಕೊಂಡಿವೆ. ಬೆಳಗಿನಿಂದ ರಾತ್ರಿಯವರೆಗೆ ನಾವು ಪದಗಳಿಂದ ಜೀವಿಸುತ್ತೇವೆ. ಇದರ ಪರಾಕಾಷ್ಠೆಯೆಂದರೆ ನಾವು ಗಾಢವಾದ ನಿದ್ರೆಯನ್ನೂ ಸಹ ಮಾಡಲಾರೆವು, ನಿದ್ರೆಯಲ್ಲಿಯೂ ಸಹ ಏನನ್ನೋ ಹೇಳುತ್ತಿರುತ್ತಾರೆ, ಅವರ ತುಟಿಗಳು ಚಲಿಸುತ್ತಿರುತ್ತವೆ.
ಜೀವನದಲ್ಲಿ ಮಹತ್ವಪೂರ್ಣವೂ, ಅರ್ಥಪೂರ್ಣವೂ, ಮೌಲ್ಯಯುತವಾಗಿರುವುದು ಯಾವುದನ್ನೂ ಮಾತಿನಿಂದ ವಿವರಿಸಲು ಸಾಧ್ಯವಿಲ್ಲ. ನೈಜವಾದ ಪ್ರೀತಿ, ಸೌಂದರ್ಯದ ಅನುಭೂತಿ, ಕೃತಜ್ಞತೆ ಮುಂತಾದ ಆಳವಾದ ಭಾವಗಳಾವುದನ್ನೂ ಪದಗಳಿಂದ ವಿವರಿಸಲು ಸಾಧ್ಯವಿಲ್ಲ, ನಿಮ್ಮಲ್ಲಿರುವ ಆತ್ಮೀಯತೆಯನ್ನೂ, ಮೈತ್ರೀ ಭಾವವನ್ನೂ ಪದಗಳಿಂದ ವ್ಯಕ್ತಪಡಿಸಲು ಸಾಧ್ಯವೇ? ಪದಗಳ ಅವಶ್ಯಕತೆಯೂ ಇಲ್ಲ. ನಾವು ಮಾತನಾಡಿ ಆಡಿ ಆ ನೈಜವಾದ ಭಾವನೆಯ ಸೌಂದರ್ಯವನ್ನು ಹಾಳು ಮಾಡುತ್ತೇವೆ. ನಾವು ಪದಗಳ ನಿರರ್ಥಕತೆಯನ್ನೊಮ್ಮೆ ಮನವರಿಕೆ ಮಾಡಿಕೊಂಡರೆ ನಮ್ಮ ಜೀವನವು ಆಳವಾಗಿ ಹೋಗಬಲ್ಲುದು.
ಮೌನದ ಅಗಾಧತೆ, ಆಳ, ಮಹತ್ವ, ಸೌಂದರ್ಯಗಳನ್ನು ಅರ್ಥಮಾಡಿಕೊಂಡಾಗ ಜೀವನದಲ್ಲಿ ಹೊಸ ಆಯಾಮದ ಪರಿಚಯವಾಗುವುದು. ಪದಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಪರಮ ಜ್ಞಾನವು ಮಾತಿಗೆ ಅತೀತವಾಗಿದೆ.
ಅದು ಎಲ್ಲಾ ಪದಗಳ ಸಾರಸರ್ವಸ್ವವಾದ ನಿಮ್ಮದೇ ಅಸ್ತಿತ್ವ. ನಾವು ಶಬ್ದದ ಮಧ್ಯೆ ಇರುವ ನಿಶ್ಶಬ್ದವನ್ನು ಹಿಡಿದುಕೊಂಡಾಗ ಚಿಂತೆ ದೂರವಾಗುತ್ತೆ. ಶಬ್ದದಿಂದ ನಿಶ್ಶಬ್ದದ ಕಡೆಗೆ ಹೋಗುವುದಕ್ಕೆ ’ಜ್ಞಾನಾಧಿಷ್ಟಾನ ಮಾತೃಕಾ’ ಅಂತ ಅಂದರು.
ಒಂದು ವೇಳೆ ಇದೂ ಆಗಲಿಲ್ಲ ಅಂದರೆ ಏನು ಮಾಡೋದು, ಮುಂದಿನಸೂತ್ರ (ಮುಂದಿನಉಪಾಯ) ಮುಂದೆ ತಿಳಿದುಕೊಳ್ಳೋಣ.

* * * * *

ಜ್ಞಾನಬಂಧ - ವಿಮುಕ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೮.೦೪.೦೩ರ೦ದು ಪ್ರಕಟವಾಗಿತ್ತು)

ಜ್ಞಾನದ ಬಂಧನದಿಂದ ಮುಕ್ತಿ ಹೊಂದುವುದು ಹೇಗೆ? ನೋಡೋಣ.
ಜ್ಞಾನ ಪಂಚೇ೦ದ್ರಿಯಗಳಿಂದ ಮಾತ್ರವೇ ಪ್ರಾಪ್ತವಾಗುವ೦ಥದ್ದು. ಇಡೀ ಪ್ರಪಂಚ ಒಂದೇ ಶರೀರ. ಅಗಾಧವಾದ ಪ್ರಪಂಚಕ್ಕೆ ಹೋಲಿಸಿದಾಗ ನಮ್ಮ ಶರೀರ, ನಮ್ಮ ಜೀವನ ಅತ್ಯ೦ತ ನಿಕೃಷ್ಟ. ನಾವು ಇದನ್ನು ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ಪಂಚ ಜ್ಞಾನೇಂದ್ರಿಯಗಳೂ ಮತ್ತು ಮನಸ್ಸೂ ಈ ಪ್ರಪಂಚಕ್ಕೇ ಸೇರಿದ್ದಾಗಿದೆ ಎನ್ನುವುದನ್ನು ಅನುಭವಿಸಿದಾಗ, ಈ ಸುಜ್ಞಾನದಿಂದ ’ನಾನು ಮನಸ್ಸು ಅಲ್ಲ, ರಾಗ ಅಲ್ಲ, ದ್ವೇಷ ಅಲ್ಲ, ನಾನು ಇಂದ್ರಿಯಗಳೂ ಅಲ್ಲ’ ಎನ್ನುವಂತಹ ಸಾಕ್ಷೀಭಾವ ಉದಯವಾಗುತ್ತದೆ. ’ಸಾಕ್ಷೀಭಾವ’ ಉಂಟಾದಾಗ ನಾವು ಬಂಧನಗಳಿಂದ ಪಾರಾಗಿಬಿಡ್ತೀವಿ.
’ವಿಭೂತಿ’ ಹಚ್ಚಿಕೊಳ್ಳುವುದು ಏಕೆ ಗೊತ್ತಾ? ಈ ಚರ್ಮಕ್ಕೂ, ಇದರ ಮೇಲಿರುವ ಬೂದಿಗೂ ಭೇದ ಇಲ್ಲ, ಈ ಚರ್ಮವೂ ಇನ್ನು ಕೆಲವು ದಿನಗಳಲ್ಲಿ ಬೂದಿ ಆಗುತ್ತೆ...ಅಂದಾಗ ಯಾವುದಾದರೂ ಕೆಟ್ಟ ಕೆಲಸ ಮಾಡೋಕೆ ಕೈ ಹೋಗುತ್ತಾ? ವಿಭೂತಿ - ’ಭೂತಿ’ ಅಂದರೆ ಅನುಭೂತಿ ಅಂದರೆ ಅನುಭವ. ವಿಭೂತಿ ಎ೦ದರೆ ’ವಿಶಿಷ್ಟವಾದ ಅನುಭವ’. ಆ ವಿಶಿಷ್ಟವಾದ ಅನುಭವ ಯಾವುದು...? ಎಂದರೆ ’ನಾನು ಆತ್ಮ, ನಾನು ಶಿವಸ್ವರೂಪ’ ಅನ್ನುವುದು.ಈ ಸುಜ್ಞಾನದ ಅರಿವಿನಿಂದಲೂ ಸೀಮಿತ ಜ್ಞಾನದಿಂದ ಉಂಟಾಗುವ ಬಂಧನವು ನಿವಾರಣೆಯಾಗುತ್ತದೆ.
ಈ ಶರೀರವು ನಶ್ವರ ಎನ್ನುವುದಕ್ಕೆ ವಿಭೂತಿ ಒಂದು ಚಿಹ್ನೆ ಮಾತ್ರ. ಹಾಗಿದ್ದ ಮೇಲೆ ನಾವು ಚಿಕ್ಕಚಿಕ್ಕ ವಿಷಯಗಳನ್ನಿಟ್ಟುಕೊಂಡು ಯಾರ ಮೇಲೋ ಕ್ರೋಧ, ದ್ವೇಷ, ಅಸೂಯೆ ಪಡೋದರಲ್ಲಿ ಅರ್ಥವೇ ಇಲ್ಲ, ಇದನ್ನ ಮತ್ತೆ ಮತ್ತೆ ಜ್ಞಾಪಿಸುವುದೇ ನಿತ್ಯ ವಿಭೂತಿ ಹಚ್ಚಿಕೊಳ್ಳುವ ಉದ್ದೇಶ.
ಜ್ಞಾನದಿಂದ ಪರಮ ಜ್ಞಾನಕ್ಕೆ ಹೋಗಬೇಕು. ಇಲ್ಲದಿದ್ದರೆ ಜ್ಞಾನವೇ ಬಂಧನವಾಗಿಬಿಡುತ್ತದೆ.