ಶುಕ್ರವಾರ, ಆಗಸ್ಟ್ 10, 2012

ಕೃಷ್ಣ ಪರಮಾತ್ಮ - ಪ್ರೇಮದ ಪ್ರತೀಕ

10
2012
Aug
ಬೆಂಗಳೂರು ಆಶ್ರಮ, ಭಾರತ


1343ವತ್ತು ಕೃಷ್ಣ ಪರಮಾತ್ಮನ ಜನ್ಮದಿನ, ಮತ್ತು ಜನರು ಇದನ್ನು ಭಾರತದಾದ್ಯಂತ ಆಚರಿಸುತ್ತಿದ್ದಾರೆ.
ಕೃಷ್ಣ ಪರಮಾತ್ಮನು ಹೇಳಿದನು, "ನಾನು ಯಾವತ್ತೂ ಹುಟ್ಟಲಿಲ್ಲ ಮತ್ತು ನಾನು ಯಾವತ್ತೂ ಸಾಯುವುದಿಲ್ಲ. ನಾನು ಅಜನ್ಮಾ (ಯಾವತ್ತೂ ಹುಟ್ಟದೇ ಇರುವವನು)." ಯಾವತ್ತೂ ಹುಟ್ಟದೇ ಇರುವ ಒಬ್ಬನ ಜನ್ಮವನ್ನು ಆಚರಿಸುವುದು ಒಂದು ಬಹಳ ಅತ್ಯಾಕರ್ಷಕ ವಿಷಯ.
ಕೃಷ್ಣ ಪರಮಾತ್ಮನಾಗಿ ಹುಟ್ಟುವ ಮೊದಲು, ಕೃಷ್ಣ ಪರಮಾತ್ಮನು ಪಡೆದ ಇನ್ನೊಂದು ಜನ್ಮವಿತ್ತು. ಆ ಪೂರ್ವ ಜನ್ಮದಲ್ಲಿ ಅವನು ಕಪಿಲ ಮುನಿ (ಒಬ್ಬ ಬುದ್ಧಿವಂತನಾದ ಆತ್ಮಸಾಕ್ಷಾತ್ಕಾರ ಹೊಂದಿದ ಮುನಿ) ಯೆಂದು ತಿಳಿಯಲ್ಪಟ್ಟಿದ್ದನು. ತನ್ನ ಕಪಿಲ ಮುನಿಯ ಅವತಾರದಲ್ಲಿ, ಕೃಷ್ಣ ಪರಮಾತ್ಮನು ತನ್ನ ತಾಯಿಗೆ ಆತ್ಮ ಜ್ಞಾನವನ್ನು; ಸಾಂಖ್ಯ ಯೋಗದ ಜ್ಞಾನವನ್ನು ನೀಡಿದನು. ಹೀಗೆ ಕೃಷ್ಣ ಪರಮಾತ್ಮನಾಗಿ ಹುಟ್ಟುವ ಮೊದಲು ಕಪಿಲ ಮುನಿ ಎಂಬ ಹೆಸರಿನಲ್ಲಿ ಅವನು ಅವತರಿಸಿದನು.
ಒಬ್ಬಳು ತಾಯಿಯ ಪ್ರೀತಿ ಹೇಗಿರುತ್ತದೆಯೆಂದರೆ, ತನ್ನ ಮಗುವು ಪ್ರತಿ ಜನ್ಮದಲ್ಲೂ ತನ್ನ ಬಳಿಗೆ ತಿರುಗಿ ಬರುತ್ತಿರಬೇಕೆಂದು ಆಕೆಯು ಬಯಸುತ್ತಾಳೆ. ಆದುದರಿಂದ, ಆಕೆಯು ಆತ್ಮ ಜ್ಞಾನ ಪಡೆದಿದ್ದರೂ ಕೂಡಾ, ಆಕೆಗೆ ತನ್ನ ಮಗನ ಮೇಲಿದ್ದ ಮೋಹ ಉಳಿಯಿತು. ಆದುದರಿಂದ ಮುಂದಿನ ಜನ್ಮದಲ್ಲಿ ಅವಳು ಮತ್ತೊಮ್ಮೆ ಕೃಷ್ಣ ಪರಮಾತ್ಮನ ತಾಯಿಯಾಗಿ ಹುಟ್ಟಿದಳು - ಯಶೋದೆ, ಮತ್ತು ಕೃಷ್ಣ ಪರಮಾತ್ಮನು ಪುನಃ ಜನ್ಮ ತಾಳಿದನು.
ಕಪಿಲ ಮುನಿಯಾಗಿ, ಅವನು ತನ್ನ ತಾಯಿಗೆ ಆತ್ಮಜ್ಞಾನವನ್ನು ನೀಡಿದನು, ಆದರೆ ಕೃಷ್ಣ ಪರಮಾತ್ಮನಾಗಿ ಅವನು ಅವಳಿಗೆ ಬಹಳ ಪ್ರೀತಿ ಮತ್ತು ಆದರಗಳನ್ನು ನೀಡಿದನು, ಮತ್ತು ಆತ್ಮಜ್ಞಾನವನ್ನಲ್ಲ. ಹೀಗೆ ಒಂದು ಜನ್ಮದಲ್ಲಿ ಅವನು ಅವಳಿಗೆ ಜ್ಞಾನವನ್ನು ಮಾತ್ರ ನೀಡಿದನು ಮತ್ತು ಇನ್ನೊಂದು ಜನ್ಮದಲ್ಲಿ ಅವನು ಅವಳಿಗೆ ಪ್ರೀತಿಯನ್ನು ಮಾತ್ರ ನೀಡಿದನು. ಅವನು ಯಶೋದೆಗೆ ಯಾವುದೇ ಆತ್ಮ ಜ್ಞಾನವನ್ನು ನೀಡಲಿಲ್ಲ. ಅವನು ಯಶೋದೆಯೊಂದಿಗೆ ಆಟವಾಡಿದನು ಮತ್ತು ಬಹಳಷ್ಟು ತುಂಟಾಟಗಳನ್ನು ಮಾಡಿದನು. ಆದುದರಿಂದ ಇವತ್ತಿನ ದಿನವು ತುಂಟಾಟವಾಡಲಿರುವ ದಿನವಾಗಿದೆ! (ನಗು)
ಯಾವ ಜನ್ಮದಲ್ಲಿ ಜ್ಞಾನ, ಪ್ರೀತಿ ಮತ್ತು ತುಂಟತನ ಇವುಗಳೆಲ್ಲವೂ ಒಟ್ಟು ಸೇರುತ್ತವೆಯೋ ಅದು ಕೃಷ್ಣ ಪರಮಾತ್ಮನ ಜನ್ಮ ಅಥವಾ ಅವತಾರ ಎಂದು ಪರಿಗಣಿಸಲ್ಪಡುತ್ತದೆ. ಆದುದರಿಂದ ಇವತ್ತು, ಕೃಷ್ಣ ಪರಮಾತ್ಮನ ಜನ್ಮ ದಿನದಂದು ನೀವೆಲ್ಲರೂ ಭಗವದ್ಗೀತೆಯನ್ನು ಓದುವ ಸಂಕಲ್ಪವನ್ನು ತೆಗೆದುಕೊಳ್ಳಬೇಕು.
ಇಲ್ಲಿರುವವರಲ್ಲಿ ಎಷ್ಟು ಮಂದಿ ಇಲ್ಲಿಯ ವರೆಗೆ ಭಗವದ್ಗೀತೆಯನ್ನು ಓದಿಲ್ಲ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ನೋಡಿ! ನಾವು ಒಂದು ಕೆಲಸ ಮಾಡೋಣ. ನಾವು ಇವತ್ತಿನಿಂದಲೇ ಗೀತೆಯನ್ನು ಓದಲು ಶುರು ಮಾಡೋಣ. ಆದನ್ನು ಅದರ ಸರಳ ಅನುವಾದದೊಂದಿಗೆ ಓದಿ, ಮತ್ತು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಅರ್ಥ ಮಾಡಿಕೊಳ್ಳಿ. ನಿಮಗೆ ಅರ್ಥವಾಗದಿದ್ದರೆ ಚಿಂತಿಸಬೇಡಿ, ಆದರೆ ಕನಿಷ್ಠಪಕ್ಷ ಒಮ್ಮೆಯಾದರೂ ಅದನ್ನು ಓದಿ. ನಿಮಗೆಷ್ಟು ಅರ್ಥವಾಗುವುದೋ ಅಷ್ಟು ಸಾಕು.
ಸಂಪೂರ್ಣ ಭಗವದ್ಗೀತೆಯು ಒಂದೇ ಸಾರಿಗೆ ಅರ್ಥವಾಗಬೇಕು ಎಂದು ನಿರೀಕ್ಷಿಸಬೇಡಿ. ನಿಮ್ಮ ಜೀವಮಾನದುದ್ದಕ್ಕೂ ನೀವು ಗೀತೆಯ ಪುಟಗಳನ್ನು ಪುನಃ ಪುನಃ ಓದಬೇಕು ಮತ್ತು ಅದರ ಮೂಲಕ ಕಣ್ಣು ಹಾಯಿಸಬೇಕು, ಆಗ ಮಾತ್ರ ನಿಮಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ನಮ್ಮ ಮನಸ್ಸಿನ ಮತ್ತು ಬುದ್ಧಿಯ ಪ್ರೌಢತೆಯ ಹಂತವು ಮೇಲೇರಿದಂತೆಲ್ಲಾ, ಭಗವದ್ಗೀತೆಯ ಬಗೆಗಿನ ನಮ್ಮ ತಿಳುವಳಿಕೆಯೂ ಕೂಡಾ ಹೆಚ್ಚಾಗುತ್ತದೆ.
ಇವತ್ತು ಕೃತ್ತಿಕಾ ನಕ್ಷತ್ರವು ಕೂಡಾ ಬಹಳ ಪ್ರಕಾಶಮಾನವಾಗಿ ಮತ್ತು ಕ್ರಿಯಾಶೀಲವಾಗಿದೆ. ಇವತ್ತು ಶುಕ್ರವಾರ, ಅಷ್ಟಮಿ ಕೂಡಾ (ಹಿಂದೂ ಚಾಂದ್ರಮಾನ ತಿಂಗಳಿನ ಎಂಟನೆಯ ದಿನ. ಇದು ಶುಭಕರವಾಗಿ ಪರಿಗಣಿಸಲ್ಪಡುತ್ತದೆ), ಮತ್ತು ಇದು ಜನ್ಮಾಷ್ಟಮಿ ಕೂಡಾ. ಇವುಗಳೆಲ್ಲವೂ ಜೊತೆಯಲ್ಲಿ ಬರುವುದು ಬಹಳ ವಿಶೇಷ.
ಕೃಷ್ಣ ಪರಮಾತ್ಮನು ಹೇಳುತ್ತಾನೆ, "ಸೇನಾನಿನಂ ಅಹಂ ಸ್ಕಂದಃ" - ಸೇನಾನಿಗಳಲ್ಲಿ ನಾನು ಕಾರ್ತಿಕೇಯನು. (ಕಾರ್ತಿಕೇಯನು ಸೇನೆಗಳಲ್ಲಿ ಅತ್ಯಂತ ಶಕ್ತಿಯುತ ನಾಯಕನಾಗಿದ್ದನು).
ಮುನಿಗಳಲ್ಲಿ ನಾನು ಕಪಿಲ ಮುನಿ.
ಋಷಿಗಳಲ್ಲಿ ನಾನು ವೇದ ವ್ಯಾಸ.
ಪಾಂಡವರಲ್ಲಿ ನಾನು ಅರ್ಜುನ.
ಹೀಗೆ ಕೃಷ್ಣ ಮತ್ತು ಅರ್ಜುನ ಇಬ್ಬರೂ ತಾನೇ ಎಂದು ಅವನು ಹೇಳುತ್ತಾನೆ.
ಯಾರಾದರೊಬ್ಬರಿಗೆ ಭಗವದ್ಗೀತೆಯ ಹತ್ತನೆಯ ಅಧ್ಯಾಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ, ಆಗ ಅವರು ಅದ್ವೈತದ ಜ್ಞಾನ (ಎಲ್ಲವನ್ನೂ ’ಒಂದು’ ಎಂಬುದಾಗಿ ಅನುಭವಿಸುವುದು) ದಲ್ಲಿ ಪರಿಪೂರ್ಣರಾಗಿರುತ್ತಾರೆ.
ಅದು ವಿಭೂತಿ ಯೋಗವೆಂದು ಕರೆಯಲ್ಪಡುತ್ತದೆ. ಒಬ್ಬನ ಜೀವನವು ವಿಭೂತಿಯಿಂದ ಸಂಪನ್ನವಾಗುತ್ತದೆ. ವಿಭೂತಿಯೆಂದರೆ, ಒಬ್ಬನು ಹಣೆಯ ಮೇಲೆ ಹಚ್ಚಿಕೊಳ್ಳುವ ಪವಿತ್ರ ಭಸ್ಮವೆಂದು ಮಾತ್ರ ಅರ್ಥವಲ್ಲ. ವಿಭೂತಿಯು ಪವಾಡಗಳು ಎಂಬುದನ್ನೂ ಸೂಚಿಸುತ್ತದೆ.
ಕೃಷ್ಣ ಪರಮಾತ್ಮನ ಜೀವನದಲ್ಲಿ ಹಲವಾರು ಪವಾಡಗಳಾದವು. ಆದರೆ ಅದೇ ಸಮಯದಲ್ಲಿ, ಅವನಿಗೆ ಒಂದು ಆಶೀರ್ವಾದ ಅಥವಾ ನೀವದನ್ನು ಒಂದು ರೀತಿಯಲ್ಲಿ ಒಂದು ಶಾಪ ಎಂದೂ ಕರೆಯಬಹುದು; ಕೂಡಾ ಇತ್ತು. ಒಂದು ಪವಾಡವಾಗುವ ಸಮಯದಲ್ಲಿ, ಜನರು ಆ ಕೂಡಲೇ ಸುಮಾರು ಒಂದು ವರ್ಷದ ವರೆಗೆ ಅದರ ಬಗ್ಗೆ ಮರೆತು ಬಿಡುತ್ತಿದ್ದರು.
ಉದಾಹರಣೆಗೆ, ಇವತ್ತು ಒಂದು ಪವಾಡ ಆಗಿರುತ್ತಿದ್ದರೆ, ಎಲ್ಲರೂ ಅದರ ಬಗ್ಗೆ ಮರೆತು ಬಿಡುತ್ತಿದ್ದರು ಮತ್ತು ಒಂದು ವರ್ಷದ ಬಳಿಕ ಮಾತ್ರವಷ್ಟೇ ಅವರಿಗೆ ಅದನ್ನು ನೆನಪು ಮಾಡಿಕೊಳ್ಳಲು ಸಾಧ್ಯವಾಗಿತ್ತು! ನೀವು ಇದರ ಬಗ್ಗೆ ಕೇಳಿದ್ದೀರಾ?
ಇದು ಶ್ರೀಮದ್ ಭಾಗವತಂನಲ್ಲಿ (ವಿಷ್ಣುವಿನ ಅವತಾರ; ನಿರ್ದಿಷ್ಟವಾಗಿ ಹೇಳುವುದಾದರೆ ಕೃಷ್ಣನ ಕಡೆಗಿರುವ ಭಕ್ತಿಯ ಮೇಲೆ ಆದ್ಯ ಗಮನವಿರಿಸಿಕೊಂಡು ಬರೆಯಲ್ಪಟ್ಟ ಸಂಸ್ಕೃತ ಸಾಹಿತ್ಯ ಗ್ರಂಥ) ಉಲ್ಲೇಖಿಸಲ್ಪಟ್ಟಿದೆ. ಪರಮಾತ್ಮನ ಯಾವುದೇ ತೇಜಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾದ ಬಳಿಕ ಜನರು ಮುಂದಿನ ನಿಮಿಷದಲ್ಲಿ ಅದರ ಬಗ್ಗೆ ಮರೆತು ಬಿಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೀಗೆ ಕೃಷ್ಣ ಪರಮಾತ್ಮನು ಕಾಲಿಯಾ(ಹಲವು ತಲೆಗಳ ಸರ್ಪ)ನ ತಲೆಯ ಮೇಲೆ ನೃತ್ಯ ಮಾಡಿದಾಗ, ಇದನ್ನು ನೋಡಿ ತಮ್ಮ ಮನೆಗೆ ಹಿಂತಿರುಗಿದ ಮೇಲೆ ಜನರು ಆ ಪವಾಡದ ಬಗ್ಗೆ ಮರೆತರು ಮತ್ತು ಏನೂ ಆಗಲಿಲ್ಲವೆಂಬಂತೆ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾ ಹೋದರು.
ಅವನ ಪವಾಡಗಳು ಮರೆತುಹೋಗುವುವು ಮತ್ತು ಒಂದು ವರ್ಷ ಕಳೆದ ಬಳಿಕ ಮಾತ್ರವೇ ನೆನಪಿಸಲ್ಪಡುವುದು ಎಂಬುದು ವಿಧಿಸಲ್ಪಟ್ಟಿತ್ತು. ಅದೊಂದು ವರವಾಗಿತ್ತೆಂದು ಕೆಲವರನ್ನುತ್ತಾರೆ ಮತ್ತು ಕೆಲವರು, ಪವಾಡವಾದಾಗಲೆಲ್ಲಾ ನೆನಪಿಗೆ ತೆರೆಯೊಡ್ಡಲ್ಪಡುವುದು ಎಂಬುದು ಸೃಷ್ಟಿಕರ್ತ ಬ್ರಹ್ಮನ ಶಾಪವಾಗಿತ್ತೆಂದು ಹೇಳುತ್ತಾರೆ.
ಆದುದರಿಂದ, ಗೋಕುಲದ (ಕೃಷ್ಣ ಪರಮಾತ್ಮನ ಹಳ್ಳಿ)ಲ್ಲಿ ಯಾವುದಾದರೂ ವಿಪತ್ತು ಸಂಭವಿಸಿದಾಗಲೆಲ್ಲಾ, ಅಲ್ಲಿನ ವಾಸಿಗಳು ಒಟ್ಟು ಸೇರಿ "ಓಂ ನಮೋ ನಾರಾಯಣ" ಎಂದು ಜಪಿಸುತ್ತಾ, ತಮ್ಮ ಬಾಲಕ ಕೃಷ್ಣನನ್ನು ರಕ್ಷಿಸುವಂತೆ ಮತ್ತು ಯಾವುದೇ ಅಪಾಯದಿಂದ ಅವನನ್ನು ತಪ್ಪಿಸುವಂತೆ ಶ್ರೀಮನ್ನಾರಾಯಣನಲ್ಲಿ ಪ್ರಾರ್ಥಿಸುತ್ತಿದ್ದರು.
ಹೀಗೆ ವೃಂದಾವನದಲ್ಲಿ ಎಲ್ಲರೂ ಯದುಕುಲ ನಂದನನ (ಯದು ಎಂಬ ಕುಲದ ವಂಶಸ್ಥ, ಇಲ್ಲಿ ಕೃಷ್ಣ ಪರಮಾತ್ಮ) ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದರು ಮತ್ತು "ಓಂ ನಮೋ ನಾರಾಯಣ" ಎಂದು ಜಪಿಸುತ್ತಿದ್ದರು. ತಮ್ಮ ಬಾಲಕ ಕೃಷ್ಣನ ರಕ್ಷಣೆ ಮತ್ತು ಯೋಗಕ್ಷೇಮಕ್ಕಾಗಿ ಅವರು ಭಗವಂತ ಶಿವನನ್ನೂ ಪ್ರಾರ್ಥಿಸುತ್ತಿದ್ದರು.
ಆದುದರಿಂದ ಆಗ ನಡೆದ ಎಲ್ಲಾ ಪವಾಡಸದೃಶ ಘಟನೆಗಳು; ಅದು ಶಕಟಾಸುರನ (ಒಬ್ಬ ರಾಕ್ಷಸ) ವಧೆಯಿರಲಿ ಅಥವಾ ಪೂತನಿಯ (ಕೃಷ್ಣನು ಶಿಶುವಾಗಿರುವಾಗ ಅವನನ್ನು ಕೊಲ್ಲಲು ಅವನ ಮಾವ ಕಂಸನಿಂದ ಕಳುಹಿಸಲ್ಪಟ್ಟ ಒಬ್ಬಳು ರಾಕ್ಷಸಿ) ವಧೆಯಿರಲಿ; ಇವುಗಳನ್ನೆಲ್ಲಾ ಕೆಲವೇ ಕ್ಷಣಗಳಲ್ಲಿ ಜನರು ಮರೆಯುತ್ತಿದ್ದರು ಮತ್ತು ಒಂದು ವರ್ಷ ಕಳೆದ ಬಳಿಕವಷ್ಟೇ ಅವರಿಗೆ ಅದರ ನೆನಪು ಬರುತ್ತಿತ್ತು. ಇದರ ಫಲವಾಗಿ, ಜನರು ಕಳೆದು ಹೋದ ಘಟನೆಗಳ ಬಗ್ಗೆ ಮಾತನಾಡುತ್ತಾ ಇರುತ್ತಿದ್ದರು. ಶ್ರೀಮದ್ ಭಾಗವತಂನಲ್ಲಿ ಕಥೆಯು ಈ ರೀತಿ ಸಾಗುತ್ತದೆ.
ಪರಮಾತ್ಮನಿದ್ದ ಸಮಯವು ಮೋಜು, ವಿನೋದ, ಸಂತೋಷ, ಪ್ರೀತಿ ಮತ್ತು ಭಕ್ತಿಯಿಂದ ತುಂಬಿತ್ತು ಎಂಬುದು ಶ್ರೀಮದ್ ಭಾಗವತಂನ್ನು ಓದುವುದರ ಮೂಲಕ ತಿಳಿಯಬಹುದು. ಆದರೆ, ಇದರೊಂದಿಗೆ ಬಹಳಷ್ಟು ವೈರಾಗ್ಯ ಕೂಡಾ ಇದೆ. ನೀವು ವೈರಾಗ್ಯವನ್ನು ಅರ್ಥ ಮಾಡಿಕೊಳ್ಳಲು ಬಯಸಿದರೆ, ನೀವು ಶ್ರೀಮದ್ ಭಾಗವತಂನ್ನು ಓದಬೇಕು. ಆದುದರಿಂದ, ಶ್ರೀಮದ್ ಭಾಗವತಂ ವೈರಾಗ್ಯ ಮತ್ತು ಅನುರಾಗಗಳ; ಜ್ಞಾನ ಮತ್ತು ಭಕ್ತಿಗಳ ಒಂದು ಬಹಳ ಅಪರೂಪದ ಹಾಗೂ ಅಸಾಮಾನ್ಯವಾದ ಸಂಗಮವಾಗಿದೆ.
ಪರಮಾತ್ಮ ಕೃಷ್ಣನು ಆಕರ್ಷಣೆಯ ಕೇಂದ್ರವಾಗಿದ್ದನು. ಆದರೆ ಪರಮಾತ್ಮ ಕೃಷ್ಣನೊಂದಿಗೆ ಪರಮಾತ್ಮ ಬಲರಾಮನಿದ್ದನು (ಕೃಷ್ಣ ಪರಮಾತ್ಮನ ಅಣ್ಣ) ಮತ್ತು ಅವನು ಹೆಚ್ಚಿನ ಶಕ್ತಿ ಮತ್ತು ಬಲವನ್ನು ಪ್ರತಿನಿಧೀಕರಿಸುತ್ತಾನೆ. ಜನರು ಹೆಚ್ಚಾಗಿ ಮಹಾ ಶಕ್ತಿಯಿಂದ ಭಯಭೀತರಾಗುತ್ತಾರೆ. ಸಾಧಾರಣವಾಗಿ ಎಲ್ಲಿ ಆಕರ್ಷಣೆ ಮತ್ತು ಪ್ರೀತಿಯಿರುವುದೋ ಅಲ್ಲಿ ಒಬ್ಬನು ಬಲಹೀನತೆ ಅಥವಾ ಅಸಹಾಯಕತೆಯನ್ನು ಕೂಡಾ ಅನುಭವಿಸುತ್ತಾನೆ. ಪ್ರೀತಿಯು ಅತ್ಯಂತ ಹೆಚ್ಚಿನ ಶಕ್ತಿಯಾಗಿದ್ದರೂ, ಅದು ಒಬ್ಬನು ಬಹಳ ಬಲಹೀನತೆಯನ್ನು ಅನುಭವಿಸುವಂತೆ ಕೂಡಾ ಮಾಡಬಲ್ಲದು, ಮತ್ತು ಒಬ್ಬರು ಪ್ರೀತಿಯಿಂದ ಬರುವ ಈ ಬಲಹೀನತೆಯನ್ನು ಮಾತ್ರ ನೋಡಿದರೆ, ಆಗ ಅವರು ಅದರಿಂದ ದೂರ ಓಡಿಹೋಗುತ್ತಾರೆ. ನಂತರ ಅದು ದ್ವೇಷವಾಗಿ ಪರಿವರ್ತನೆಯಾಗುತ್ತದೆ. ಕೃಷ್ಣ ಪರಮಾತ್ಮನು ಆಕರ್ಷಣೆಯ ಕೇಂದ್ರ ಮತ್ತು ಮತ್ತು ಪ್ರೀತಿಯ ಕಾರಂಜಿಯಾದರೆ, ಪರಮಾತ್ಮ ಬಲರಾಮನು ಘನತೆ ಮತ್ತು ಶಕ್ತಿಯನ್ನು ಪ್ರತಿನಿಧೀಕರಿಸುತ್ತಾನೆ. ಇಬ್ಬರೂ ಯಾವತ್ತೂ ಜೊತೆಯಲ್ಲೇ ಸಾಗುತ್ತಾರೆ.
ಹಾಗೆಯೇ, ಕೃಷ್ಣ ಪರಮಾತ್ಮನಿಗೆ ರಾಧೆಯಿಲ್ಲದೆ ಇರಲಾಗುತ್ತಿರಲಿಲ್ಲ. ಪ್ರೀತಿಯಲ್ಲಿ ಕೂಡಾ ಬಲಹೀನತೆಯಿದೆ ಎಂದು ನಾನು ಹೇಳಿದುದು ಅದಕ್ಕೇ. ರಾಧಾ ಎಂದರೆ ಒಂದು ಶಕ್ತಿ, ರಾಧಾ ಒಬ್ಬಳು ವ್ಯಕ್ತಿಯಾಗಿರಲಿಲ್ಲ. ಅವಳು ಕೃಷ್ಣ ಪರಮಾತ್ಮನ ಶಕ್ತಿಯನ್ನು, ಪ್ರೀತಿಯ ಶಕ್ತಿಯನ್ನು ಪ್ರತಿನಿಧೀಕರಿಸುತ್ತಾಳೆ, ಮತ್ತು ಪರಮಾತ್ಮ ಬಲರಾಮನು, ಕೃಷ್ಣ ಪರಮಾತ್ಮನು ಎಲ್ಲಿಗೇ ಹೋದರೂ ಅವನೊಂದಿಗೆ ನಡೆಯುವ ಪರಾಕ್ರಮವನ್ನು ಪ್ರತಿನಿಧೀಕರಿಸುತ್ತಾನೆ.
"ನಿರ್ಬಲ್ ಕೆ ಬಲರಾಮ್" ಎಂದು ಹೇಳಲಾಗಿದೆ. ಭಗವಂತ ರಾಮನು ಬಲಹೀನರಿಗೆ ಮತ್ತು ಅಸಹಾಯಕರಿಗೆ ಆಶ್ರಯ ನೀಡುವಂತೆಯೇ ಪರಮಾತ್ಮ ಬಲರಾಮನು ಕೂಡಾ. ಅವನು ಕೃಷ್ಣ ಪರಮಾತ್ಮನ ಶಕ್ತಿಯನ್ನು ಸೂಚಿಸುತ್ತಾನೆ ಮತ್ತು ಯಾವತ್ತೂ ಅವನ ಜೊತೆಯಲ್ಲೇ ಇರುತ್ತಾನೆ.
ಎಲ್ಲಿ ಪ್ರೀತಿಯಿರುವುದೋ ಅಲ್ಲಿ ಹಾತೊರೆತವಿರುತ್ತದೆ. ಎಲ್ಲಿ ಹಾತೊರೆತವಿರುವುದೋ ಅಲ್ಲಿ ಖಂಡಿತವಾಗಿ ಪ್ರೀತಿಯಿರುತ್ತದೆ. ಎರಡೂ ಜೊತೆಯಲ್ಲಿ ಸಾಗುತ್ತವೆ. ಹಾತೊರೆತ ಇರುತ್ತದೆ ಯಾಕೆಂದರೆ ಅಲ್ಲಿ ಪ್ರೀತಿಯಿದೆ. ಅದೇ ರೀತಿಯಲ್ಲಿ, ಪ್ರೀತಿಯು ತನ್ನೊಂದಿಗೆ ಹೆಚ್ಚಿನ ಶಕ್ತಿಯನ್ನು ಕೂಡಾ ತರುತ್ತದೆ - ಪರಮಾತ್ಮ ಬಲರಾಮ. ಪರಮಾತ್ಮ ಬಲರಾಮನು ಭೂಮಿಗೆ ಹಲವು ಸಾರಿ ಸುತ್ತು ಬಂದನು ಮತ್ತು ತನ್ನನ್ನು ಭೂಮಿಯ ಪ್ರತಿಯೊಂದು ಭಾಗದೊಂದಿಗೆ ಜೋಡಿಸಿಕೊಂಡನು. ಆದರೆ ಕೃಷ್ಣ ಪರಮಾತ್ಮನು ತಾನು ಎಲ್ಲಿದ್ದನೋ ಅಲ್ಲಿಯೇ ಉಳಕೊಂಡನು ಮತ್ತು ನಕ್ಕನು, ಹಾಗೂ ಸಂಪೂರ್ಣ ಭೂಮಿಯು ಅವನ ಸುತ್ತಲೂ ತಿರುಗಿತು. ಶಕ್ತಿಯನ್ನು ಗಳಿಸಲು ಒಬ್ಬನು ಪ್ರಯತ್ನ ಪಡಬೇಕು, ಆದರೆ ಪ್ರೀತಿಗಾಗಿ ಒಬ್ಬನು ಎಲ್ಲಿಗೂ ಹೋಗಬೇಕಾಗಿಲ್ಲ ಅಥವಾ ಏನನ್ನೂ ಮಾಡಬೇಕಾಗಿಲ್ಲ. ನೀವೆಲ್ಲಿಯೇ ಇದ್ದರೂ ನೀವು ಪ್ರೀತಿಯಲ್ಲಿ ಮುಳುಗಬಹುದು.
ಪರಮಾತ್ಮ ಬಲರಾಮನು ಪ್ರಯತ್ನ ಮತ್ತು ಕಠಿಣ ಪರಿಶ್ರಮವನ್ನು ಸೂಚಿಸುತ್ತಾನಾದರೆ, ಕೃಷ್ಣ ಪರಮಾತ್ಮನು ಆಳವಾದ ವಿಶ್ರಾಂತಿಯ ಸಂಕೇತವಾಗಿದ್ದಾನೆ, ಮತ್ತು ಆ ಆಳವಾದ ವಿಶ್ರಾಂತಿಯಲ್ಲಿ ನಿಮ್ಮೊಳಗೆ ಪ್ರೀತಿಯು ಉದಯವಾಗುತ್ತದೆ. ಪ್ರಯತ್ನ ಪಡುವುದರ ಮೂಲಕ ಪ್ರೀತಿಯನ್ನು ಪಡೆಯಲು ಸಾಧ್ಯವಿಲ್ಲ, ಆದರೆ ಏನನ್ನೂ ಮಾಡದೇ ಇರುವುದರಿಂದ ಸಾಧ್ಯವಿದೆ. ಆದರೆ ಶಕ್ತಿ ಬರುವುದು ಕೇವಲ ಪ್ರಯತ್ನ ಪಡುವುದರಿಂದ ಮತ್ತು ದುಡಿಮೆಯಿಂದ ಮಾತ್ರ. ಆಲಸಿಯಾಗಿ ಕುಳಿತುಕೊಳ್ಳುವುದು ಮತ್ತು ಏನನ್ನೂ ಮಾಡದೇ ಇರುವುದು ನಿಮಗೆ ಹೆಚ್ಚಿನ ಪ್ರಬಲ ಶಕ್ತಿ ನೀಡಲಾರದು.
ಯಾವುದೇ ಕ್ಷೇತ್ರದಲ್ಲಿ ಸಾಮರ್ಥ್ಯ ಅಥವಾ ಹಿರಿಮೆಯನ್ನು ಸಾಧಿಸಲು, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಮತ್ತು ಕಠಿಣ ಪರಿಶ್ರಮ ಬೇಕಾಗುತ್ತದೆ. ನೀವು ಸಿತಾರ್ ನುಡಿಸಲು ಬಯಸಿದರೆ, ನೀವು ಪ್ರತಿದಿನವೂ ಕಟ್ಟುನಿಟ್ಟಾಗಿ ಎರಡು ಗಂಟೆಗಳ ಕಾಲ ಅಭ್ಯಾಸ ಮಾಡಬೇಕಾಗುತ್ತದೆ. ನೀವು ಕೊಳಲು ನುಡಿಸಲು ಇಚ್ಛಿಸಿದರೆ, ಆಗಲೂ ನೀವು ಅಭ್ಯಾಸ ಮಾಡಬೇಕಾಗುತ್ತದೆ. ನಿಮ್ಮ ಶರೀರವನ್ನು ಶಕ್ತಿಯುತವನ್ನಾಗಿಸಲು ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆದುದರಿಂದ, ಶಕ್ತಿಯನ್ನು ಪಡೆಯಲು ಒಬ್ಬನು ಪ್ರಯತ್ನ ಮಾಡಬೇಕಾಗುತ್ತದೆ. ಜ್ಞಾನವನ್ನು ಸ್ವೀಕರಿಸಲು ಕೂಡಾ ಒಬ್ಬನು ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಪ್ರೀತಿಗಾಗಿ, ನೀವು ಯಾವುದೇ ಪ್ರಯತ್ನ ಮಾಡಬೇಕಾಗಿಲ್ಲ. ನೀವು ಕೇವಲ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಆತ್ಮದಲ್ಲಿ ವಿರಮಿಸಬೇಕು.
ಕೃಷ್ಣ ಪರಮಾತ್ಮನು ಹೇಳುತ್ತಾನೆ, "ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ."
ಎಲ್ಲಿಯವರೆಗೆ ನಿನ್ನೊಳಗೆ ಏಳುವ ಬಯಕೆಗಳು ಧರ್ಮವನ್ನು ವಿರೋಧಿಸುವುದಿಲ್ಲವೋ ಅಥವಾ ನಾಶಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಅವುಗಳು ಕೂಡಾ ನಾನೆಂದು ತಿಳಿ (ನನ್ನಿಂದ ಸ್ಫೂರ್ತಿಗೊಂಡು). ಧರ್ಮವನ್ನು ವಿರೋಧಿಸುವ ಯಾವುದೇ ಕಾರ್ಯ ಅಥವಾ ಬಯಕೆಯು ನಾನಲ್ಲ. ಇದು ಸ್ವಲ್ಪ ಆಶ್ಚರ್ಯಕರ. ನೀವು ಧರ್ಮಕ್ಕನುಸಾರವಾಗಿ ನಡೆದುಕೊಂಡರೆ ಮತ್ತು ನಿಮ್ಮ ಸ್ವಧರ್ಮಕ್ಕನುಸಾರವಾಗಿ (ಧರ್ಮಗ್ರಂಥಗಳಲ್ಲಿ ನಿರೂಪಿಸಲ್ಪಟ್ಟಂತೆ ಒಬ್ಬನ ಸ್ವಂತ ಜವಾಬ್ದಾರಿಗಳು) ನಡೆದುಕೊಂಡರೆ, ಆಗ ನಿಮ್ಮಲ್ಲಿ ಮೇಲೇಳುವ ಎಲ್ಲಾ ನ್ಯಾಯಬದ್ಧವಾದ ಬಯಕೆಗಳು ನನ್ನಿಂದ (ಕೃಷ್ಣ ಪರಮಾತ್ಮ) ಹುಟ್ಟುವುದಾಗಿದೆ. ನಿನ್ನಲ್ಲಿ ಏಳುವ ಎಲ್ಲಾ ಒಳ್ಳೆಯ ಉದ್ದೇಶಗಳಿರುವ ಆ ಬಯಕೆಗಳು  ನಾನಾಗಿದ್ದೇನೆ (ನಾನು ಅವುಗಳ ಮೂಲವಾಗಿದ್ದೇನೆ). ಇದು ಬಹಳ ನಿಬ್ಬೆರಗುಗೊಳಿಸುವಂತಹುದು ಮತ್ತು ಅನನ್ಯವಾದುದು.
ಅವನು ಹೇಳುತ್ತಾನೆ, "ಶಕ್ತಿವಂತನಲ್ಲಿರುವ ಶಕ್ತಿ ನಾನು; ಯಾರನ್ನೆಲ್ಲಾ ನೀವು ಸುಂದರವೆಂದು ಅಂದುಕೊಳ್ಳುವಿರೋ ಅವರೆಲ್ಲರಲ್ಲಿರುವ ಸೌಂದರ್ಯ ಕೂಡಾ ನಾನೇ. ಇನ್ನೊಬ್ಬ ವ್ಯಕ್ತಿಯಲ್ಲಿ ನೀವು ನೋಡುವ ಎಲ್ಲಾ ಒಳ್ಳೆಯ ಗುಣಗಳೂ ನನ್ನಿಂದಲೇ ಬರುತ್ತವೆ." ಅವನು ಯಾಕೆ ಇದನ್ನು ಹೇಳುತ್ತಿದ್ದಾನೆ? ಯಾಕೆಂದರೆ, ಮನಸ್ಸಿನ ಪ್ರವೃತ್ತಿಯೆಂದರೆ ಸೌಂದರ್ಯ ಕಂಡಲ್ಲೆಲ್ಲಾ ಓಡುವುದು. ಒಬ್ಬರಲ್ಲಿ ಹೆಚ್ಚಿನ ಸಂಪತ್ತಿದ್ದರೆ ಅಥವಾ ಹೆಚ್ಚಿನ ಶಕ್ತಿಯಿದ್ದರೆ, ಮನಸ್ಸು ಆ ಕಡೆಗೆ ಓಡುತ್ತದೆ.
ಆದುದರಿಂದ, ಮನಸ್ಸನ್ನು ಜೊತೆಗೂಡಿಸಿ ಅದನ್ನು ಆತ್ಮದ ಕಡೆಗೆ ಹಿಂದೆ ತರಲು, ಕೃಷ್ಣ ಪರಮಾತ್ಮನು ಅರ್ಜುನನಿಗೆ, "ನೀನು ನೋಡುವ ಎಲ್ಲದರಲ್ಲೂ ನನ್ನನ್ನು ನೋಡು. ಎಲ್ಲಾದರೂ ಅಥವಾ ಯಾರಲ್ಲಾದರೂ ನೀನು ಯಾವುದೇ ದೊಡ್ಡತನವನ್ನು ನೋಡಿದರೂ, ಅದು ನನ್ನಿಂದಾಗಿ. ಅದೆಲ್ಲದರ ಹಿಂದಿರುವ ಶಕ್ತಿ ನಾನು ಮತ್ತು ನಾನು ಇಲ್ಲೇ ಇದ್ದೇನೆ" ಎಂದು ಹೇಳುತ್ತಾನೆ. ಅದುರುವ ಮತ್ತು ಇಲ್ಲಿ ಅಲ್ಲಿ ಅಲೆಯುವ ಮನಸ್ಸನ್ನು ಮರಳಿ ಸಂಗ್ರಹಿಸಲು ಮತ್ತು ಅದರ ಗಮನವನ್ನು ಎಲ್ಲಾ ಶಕ್ತಿಯ ಮೂಲಸ್ಥಾನವಾಗಿರುವ ಆತ್ಮದ ಕಡೆಗೆ ಹಿಂತಿರುಗಿಸಲು, ಯೋಗೇಶ್ವರನು (ಕೃಷ್ಣ ಪರಮಾತ್ಮ) ಸಿದ್ಧಿಪ್ರಾಪ್ತಿಗಾಗಿ ಈ ವಿಭೂತಿ (ಪವಾಡಸದೃಶ ರಹಸ್ಯ) ಯನ್ನು ನೀಡುತ್ತಾನೆ.
ಕೃಷ್ಣ ಪರಮಾತ್ಮನು ದೇವಿಯನ್ನು ಆರಾಧಿಸುತ್ತಿದ್ದನು. ಇದು ದುರ್ಗಾ ಸಪ್ತಶತಿಯಲ್ಲಿ (ಮಾರ್ಕಂಡೇಯ ಪುರಾಣದಲ್ಲಿರುವ, ದೇವಿಯನ್ನು ಪ್ರಶಂಸಿಸುವ ೭೦೦ ಶ್ಲೋಕಗಳ ಒಂದು ಸರಣಿ). ಎಷ್ಟು ಮಂದಿ ಇದರ ಬಗ್ಗೆ ಕೇಳಿದ್ದೀರಿ?
"ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಶೋ ಜಹಿ". ಈ ಶ್ಲೋಕಗಳು ದುರ್ಗಾ ಸಪ್ತಶತಿಯಲ್ಲಿರುವ ಅರ್ಗಳಾ ಸ್ತೋತ್ರಂನಲ್ಲಿ ಬರುತ್ತವೆ ಮತ್ತು ಅವುಗಳನ್ನು ಪಠಿಸುವವರಿಗೆ ಒಂದು ಕವಚವಾಗುತ್ತವೆ.
"ಕೃಷ್ಣೇನ ಸಂಸ್ತುತೇ ದೇವೀ ಶಾಶ್ವದ್ ಭಕ್ತ್ಯಾ ತಥಾಂಬಿಕೇ, ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಶೋ ಜಹಿ" ಎಂದು ಹೇಳಲಾಗಿದೆ.
ಅಂದರೆ, "ಕೃಷ್ಣ ಪರಮಾತ್ಮನಿಂದ ಅನಂತ ಭಕ್ತಿಭಾವದಿಂದ ಪೂಜಿಸಲ್ಪಡುವ ಓ ದೇವಿ, ನಮಗೆ ರೂಪ, ಜಯ, ಯಶಸ್ಸು ನೀಡಿ ಆಶೀರ್ವದಿಸು ಮತ್ತು ನಮ್ಮಲ್ಲಿರುವ ಎಲ್ಲಾ ಕಡುಬಯಕೆಗಳನ್ನು ಹಾಗೂ ಅಜ್ಞಾನವನ್ನು (ದ್ವಿಶೋ) ನಾಶಗೊಳಿಸು." ಇದು ಪ್ರಾರ್ಥನೆ. ಇದು ಕವಚ ಅರ್ಗಳಾ ಕೀಲಕಂ ನ ೩ ಶ್ಲೋಕಗಳಲ್ಲಿದೆ.
ನೀವು ನೋಡಿದರೆ, ಕೃಷ್ಣ ಪರಮಾತ್ಮನನ್ನು ಕಾಪಾಡಿದುದು ನಿಜವಾಗಿ ದೇವಿ. ದೇವಿಯೂ ಅಷ್ಟಮಿಯ ದಿನದಂದು ಯಶೋದೆಗೆ ಜನಿಸಿದಳು, ಮತ್ತು ಅದೇ ದಿನ ಮಥುರೆಗೆ ಕರೆತರಲ್ಪಟ್ಟಳು. ಕಂಸನು ಅವಳನ್ನು ಹಿಡಿದು ಕೊಲ್ಲಲು ಪ್ರಯತ್ನಪಟ್ಟನು, ಆದರೆ ಅವಳು ಅವನ ಕೈಗಳಿಂದ ತಪ್ಪಿಸಿಕೊಂಡಳು.
ಇಲ್ಲಿ, ಕಂಸನು ಅಹಂಕಾರವನ್ನು ಸೂಚಿಸುತ್ತಾನೆ. ಕೃಷ್ಣ ಪರಮಾತ್ಮನು ಆನಂದವನ್ನು ಸೂಚಿಸುತ್ತಾನೆ ಮತ್ತು ದೇವಿ ಅಥವಾ ದುರ್ಗೆಯು ಆದ್ಯಶಕ್ತಿ (ನಮ್ಮೊಳಗಿರುವ ಆದಿಶಕ್ತಿ ಅಥವಾ ಪ್ರಜ್ಞೆ)ಯನ್ನು ಸೂಚಿಸುತ್ತಾಳೆ.
ಅಹಂಕಾರಕ್ಕೆ ಪ್ರಜ್ಞೆಯನ್ನು ಅಥವಾ ಆದಿಶಕ್ತಿಯನ್ನು (ದೇವಿ) ಹಿಡಿಯಲು ಸಾಧ್ಯವಿಲ್ಲ, ಅದಕ್ಕೆ ಆನಂದವನ್ನೂ (ಕೃಷ್ಣ) ಹಿಡಿಯಲು ಸಾಧ್ಯವಿಲ್ಲ.  ದೈವಿಕ ಪ್ರಜ್ಞೆಯು (ದೇವಿ) ನಂತರ ಒಂದು ಭವಿಷ್ಯವಾಣಿಯನ್ನು ಹೇಳಿತು, ಅಹಂಕಾರವನ್ನು (ಕಂಸ) ನಾಶಪಡಿಸಲಿರುವ ವಿಧಿಯೇ ಆನಂದ (ಕೃಷ್ಣ) ಮತ್ತು ಅವನು ಈಗಾಗಲೇ ಹುಟ್ಟಿದ್ದಾನೆ ಎಂದು.
ಜೀವನವು ಆನಂದದಿಂದ ತುಂಬಿದಾಗ ಅಹಂಕಾರವು ಮಾಯವಾಗುತ್ತದೆ. ಒಬ್ಬನು ಆನಂದವನ್ನು ಅನುಭವಿಸುತ್ತಿರುವಾಗ ಅಲ್ಲಿ ಅಹಂಕಾರವಿರುವುದಿಲ್ಲ. ಆದರೆ ಅಹಂಕಾರವು ಎಲ್ಲಿಯವರೆಗೆ ಉಳಿಯುವುದೋ, ಅಲ್ಲಿಯವರೆಗೆ ಒಬ್ಬ ವ್ಯಕ್ತಿಯು ಬಳಲುತ್ತಾ ಇರುತ್ತಾನೆ ಮತ್ತು ದೀನನಾಗಿರುತ್ತಾನೆ. ಅವರು ಒಂದಲ್ಲ ಒಂದರಿಂದ ದುಃಖಪಡುತ್ತಾರೆ ಅಥವಾ ಒಬ್ಬರಲ್ಲ ಒಬ್ಬರನ್ನು ದೂಷಿಸುತ್ತಾ ಹೋಗುತ್ತಾರೆ. ಆಗಲೂ ಸಹ ಅಹಂಕಾರಕ್ಕೆ ಪ್ರಜ್ಞೆಯನ್ನು ನಾಶಗೊಳಿಸಲು ಸಾಧ್ಯವಿಲ್ಲ, ಯಾಕೆಂದರೆ ಪ್ರಜ್ಞೆಯು ಅನಂತವಾದುದು.
ಯಾವುದಕ್ಕೂ ಪ್ರಜ್ಞೆಯ ಶಕ್ತಿಯನ್ನು ನಾಶಗೊಳಿಸಲು ಅಥವಾ ಕಡಿಮೆ ಮಾಡಲು ಸಾಧ್ಯವಿಲ್ಲ. ಅದು ಅಚಲ ಹಾಗೂ ಅನಂತ. ಭೌತಶಾಸ್ತ್ರ ತಿಳಿದವರಿಗೆ, ಶಕ್ತಿಯನ್ನು ಯಾವತ್ತೂ ಸೃಷ್ಟಿಸಲೂ ಸಾಧ್ಯವಿಲ್ಲ ಅಥವಾ ನಾಶಗೊಳಿಸಲೂ ಸಾಧ್ಯವಿಲ್ಲ ಎಂಬುದು ಬಹಳ ಚೆನ್ನಾಗಿ ತಿಳಿಯುತ್ತದೆ. ಅದರಂತೆಯೇ, ಪ್ರಜ್ಞೆಯನ್ನು ಯಾವತ್ತೂ ಸೃಷ್ಟಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ. ಆ ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಗೊಳಿಸಲು ಯಾವುದೇ ಪ್ರಯತ್ನಗಳನ್ನು ಮಾಡಿದರೂ ಅವುಗಳು ಸೋತುಹೋಗುತ್ತವೆ.
ನೋಡಿ, ನೀವು ಅದರ ಮೇಲಿನ ಸ್ತರದಲ್ಲಿ ಮಾತ್ರ ನೋಡಿದರೆ, ಅದು ಕೇವಲ ಒಂದು ಕಥೆಯಂತೆ ತೋರುತ್ತದೆ. ಆದರೆ ನೀವು ಆಳವಾಗಿ ಅಧ್ಯಯನ ಮಾಡಿದರೆ, ನಿಮಗೆ ಅದರೊಳಗೆ ಅಡಕವಾಗಿರುವ ಅಷ್ಟೊಂದು ಅದ್ಭುತ ಜ್ಞಾನ ಸಿಗುತ್ತದೆ.
ಕೃಷ್ಣ ಪರಮಾತ್ಮನು ಒಂದು ಸೆರೆಮನೆಯಲ್ಲಿ ಹುಟ್ಟಿದನು. ಅವನು ಹುಟ್ಟಿದಾಗ, ಅಲ್ಲಿ ಕಾವಲು ಕಾಯುತ್ತಿದ್ದ ಕಾವಲುಗಾರರೆಲ್ಲಾ ನಿದ್ರೆಗೆ ಜಾರಿದರು. ಕಾವಲುಗಾರರು ಯಾರು? ಅವರು ನಮ್ಮ ಜ್ಞಾನೇಂದ್ರಿಯಗಳನ್ನು ಸೂಚಿಸುತ್ತಾರೆ. ಯಾವತ್ತೂ ಹೊರಜಗತ್ತಿನಲ್ಲಿ ಗಮನವಿರಿಸುವ ನಮ್ಮ ಜ್ಞಾನೇಂದ್ರಿಯಗಳು ವಿಶ್ರಾಂತ ಸ್ಥಿತಿಗೆ ಬಂದಾಗಲೇ ನಮಗೆ ಅಂತರ್ಮುಖವಾಗಿ ಹೋಗಲು ಸಾಧ್ಯ. ಆಗಲೇ ನಮಗೆ, ಅಂತರ್ಮುಖವಾಗಿ ಹೋಗುವುದರಿಂದ ಪುಟಿಯುವ ಆನಂದವನ್ನು ಅನುಭವಿಸಲು ಸಾಧ್ಯ.
ಆದುದರಿಂದ ಈ ಕಥೆಗಳನ್ನು ವಿಚಾರ ಮಾಡುತ್ತಾ ಮತ್ತು ವಿಶ್ಲೇಷಿಸುತ್ತಾ ಹೋಗಿ ಹಾಗೂ ಅದ್ಭುತ ಜ್ಞಾನ ಮತ್ತು ಪ್ರೀತಿ ಎರಡೂ ನಿಮಗೆ ಲಭ್ಯವಾಗುತ್ತವೆ ಎಂಬುದು ನಿಮಗೆ ತಿಳಿಯುತ್ತದೆ.
ಕೃಷ್ಣ ಪರಮಾತ್ಮನು ಹೇಳುತ್ತಾನೆ, "ನಿಮ್ಮದೇ ಪಾಪಗಳಿಂದ ನಿಮಗೆ ನಿಮ್ಮನ್ನು ಮುಕ್ತರನ್ನಾಗಿಸಲು ಸಾಧ್ಯವಿಲ್ಲ. ನಿಮ್ಮ ಪಾಪಗಳಿಂದ ನಾನು ನಿಮ್ಮನ್ನು ಮುಕ್ತಗೊಳಿಸುತ್ತೇನೆ."
ನೋಡಿ, ಒಬ್ಬ ವ್ಯಕ್ತಿಯು ಮಾಡುವ ಎಲ್ಲವೂ - ಉಪವಾಸ ಮಾಡುವುದು, ಆರಾಧನಾ ಸ್ಥಳಗಳನ್ನು ಸಂದರ್ಶಿಸುವುದು, ತಪ್ಪಿತಸ್ಥ ಭಾವನೆಯನ್ನು ಅನುಭವಿಸುವುದು ಮುಂತಾದವುಗಳನ್ನು ಒಬ್ಬನು ಮಾಡುವುದು, ತನ್ನನ್ನು ಪಾಪಗಳಿಂದ ಮುಕ್ತಗೊಳಿಸಲು. ಆದುದರಿಂದ ಕೃಷ್ಣ ಪರಮಾತ್ಮನು ಹೇಳುತ್ತಾನೆ, "ಅಹಂ ತ್ವಾಂ ಸರ್ವ-ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ".
ಅವನನ್ನುತ್ತಾನೆ, "ನೀನು ಕೇವಲ ಒಂದನ್ನು ಮಾತ್ರ ಮಾಡಬೇಕಾಗಿರುವುದು. ನೀನು ಎಲ್ಲವನ್ನೂ ನನಗೆ ಸಮರ್ಪಿಸಬೇಕು ಮತ್ತು ನನ್ನಲ್ಲಿ ಆಶ್ರಯ ಪಡೆಯಬೇಕು".
ಅವನನ್ನುತ್ತಾನೆ, "ಬಾ ಮತ್ತು ನನ್ನಲ್ಲಿ ಆಶ್ರಯ ಪಡೆ", ಅದು ಅವನ ಮೊದಲನೆಯ ಷರತ್ತು. ನಂತರ ಅವನು ಹೇಳುತ್ತಾನೆ, "ನಾನು ನಿನ್ನನ್ನು ನಿನ್ನ ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತೇನೆ. ಅದು ನನ್ನ ಕೆಲಸ."
ಆದುದರಿಂದ, ನೀವು ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ ಅವನ ರಕ್ಷಣೆಯ ಅಡಿಗೆ ಬರುವುದು ಮತ್ತು ಅವನಲ್ಲಿ ಆಶ್ರಯ ಪಡೆದುಕೊಳ್ಳುವುದು ಹಾಗೂ ಅವನು ನಿಮ್ಮನ್ನು ನಿಮ್ಮೆಲ್ಲಾ ಪಾಪಗಳಿಂದ ಮುಕ್ತಗೊಳಿಸುವನು. ಇದರೊಂದಿಗೆ ಅವನು ಎಲ್ಲವನ್ನೂ ಹೇಳುತ್ತಾನೆ. ಇದು ಅವನ ಮಾತನ್ನು ಸಂಪೂರ್ಣಗೊಳಿಸುತ್ತದೆ.
ಕೃಷ್ಣ ಪರಮಾತ್ಮನ ಈ ಮಾತುಗಳು ಎಲ್ಲೆಡೆಯೂ ಲಭ್ಯವಾಗುವಂತೆ ನಾವೆಲ್ಲಾ ಮಾಡಬೇಕು ಎಂದು ನನಗನಿಸುತ್ತದೆ. ನಾವು ಇದನ್ನು ಮಾಡುವುದಿಲ್ಲ, ಆದರೆ ಬದಲಾಗಿ ನಾವು ನಮ್ಮ ಸುತ್ತಲಿರುವ ಇತರ ಹಲವಾರು ವಿಷಯಗಳನ್ನು ಕೇಳಿಸಿಕೊಳ್ಳುತ್ತಿರುತ್ತೇವೆ.
ವಿಶೇಷವಾಗಿ, "ಬಾ ಮತ್ತು ನನಗೆ ಶರಣಾಗು. ನನ್ನಲ್ಲಿ ಆಶ್ರಯ ಪಡೆ. ನಾನು ನಿನ್ನನ್ನು ನಿನ್ನೆಲ್ಲಾ ಪಾಪಗಳಿಂದ ಬಿಡುಗಡೆಗೊಳಿಸುವೆನು" ಈ ಮಾತುಗಳು. ಇದುವೇ, ನಮ್ಮ ದೇಶದಲ್ಲಿ ಆಗುತ್ತಿರುವ ಎಲ್ಲಾ ಮತಾಂತರಗಳನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಬಹುದು.
ಕೃಷ್ಣ ಪರಮಾತ್ಮನು ಹೇಳಿರುವುದು ಇದನ್ನೇ.