ಭಾನುವಾರ, ಆಗಸ್ಟ್ 5, 2012

ಸುಂದರ ಭಾರತ

05
2012
Aug
ಬೆಂಗಳೂರು, ಭಾರತ

(ಶ್ರೀ ಶ್ರೀ ಆಕಾಶದೆಡೆಗೆ ನೋಡುತ್ತಾ)
ನೋಡಿ, ಈಗಾಗಲೇ ಮೋಡಗಳು ಬಂದಿವೆ. ಈ ತಿಂಗಳಿನ ಕೊನೆಯ ಹೊತ್ತಿಗೆ ಸಾಕಷ್ಟು ಮಳೆಯಾಗುವುದು. ದೇಶದಲ್ಲಿ ಅಧರ್ಮ ಮತ್ತು ನೈತಿಕ ಮೌಲ್ಯಗಳು ಕುಂದಿದಾಗ ಪ್ರಕೃತಿಯೂ ಸಹ ತನ್ನ ರೋಷವನ್ನು ತೋರಿಸುತ್ತದೆ. ನಾವು ಉನ್ನತ ಹುದ್ದೆಗಳಲ್ಲಿ  ಕೂಡಿಸಿರುವ ಭ್ರಷ್ಟರು ದೇಶಕ್ಕೆ ಅನ್ಯಾಯ ಮಾಡಿದಾಗ   ಪ್ರಕೃತಿಯೂ ಸಹ ತನ್ನ ರೋಷವನ್ನು ತೋರಿಸುತ್ತದೆ.
ನಮ್ಮ ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಅನ್ಯಾಯವಾದರೆ  ಅದು ಪ್ರಕೃತಿಯ ಕ್ರೋಧವಾಗಿ ಪರಿಣಮಿಸುತ್ತದೆ. ಹಾಗಾಗಿ ಜನರಲ್ಲಿ ಧರ್ಮವು ಹೆಚ್ಚಬೇಕು. ದೇಶವನ್ನು ಆಳುವ ಜನರು ಧಾರ್ಮಿಕವಾಗಿಲ್ಲದಿದ್ದರೆ ದೇಶವು ಹಾಳಾಗುತ್ತದೆ, ದೇಶದ ಜನರೂ ಹಾಳಾಗುತ್ತಾರೆ.
ಇದು ಹೊಸದೇನಲ್ಲ; ಇದು ಬಹುಕಾಲದಿಂದ ನಡೆದುಕೊಂಡು ಬಂದಿದೆ.ಹಾಗಾಗಿಯೇ, ಪ್ರಾಚೀನ ಕಾಲದಲ್ಲಿ ರಾಜನು ತಪ್ಪು ಮಾಡಿದಾಗ ಅವನ ಕಿವಿಯನ್ನು ಹಿಂಡಿ ಇದು ನಿನಗೂ ನಿನ್ನ ಪ್ರಜೆಗಳಿಗೂ ಹಾನಿಕಾರಕ ಎಂದು ಎಚ್ಚರಿಕೆ ನೀಡಲು ಒಬ್ಬ ರಾಜಗುರು ಇರುತ್ತಿದ್ದರು.  ಈಗಿನ ಕಾಲದಲ್ಲಿ ಯಾರೂ ಕೇಳುವುದಿಲ್ಲ. ರೈತರಿಗೆ ಅನ್ಯಾಯವಾಗಬಾರದು.
ಇಂದಿನಿಂದ ನೀವು ನಿಮ್ಮ ಆಹಾರವನ್ನು ಸೇವಿಸುವ ಮುನ್ನ 'ಅನ್ನದಾತ ಸುಖೀಭವ' ಎಂದು ಹೇಳಿ.  ನಮಗೆ ಆಹಾರವನ್ನು ಒದಗಿಸುವ  ರೈತರು ಸಂತೋಷವಾಗಿರಲಿ. ನಮಗೆ ಆಹಾರವನ್ನು ತಲುಪಿಸುವ ವ್ಯಾಪಾರಿಗಳು  ಸಂತೋಷವಾಗಿರಲಿ. ಮೂರನೆಯದಾಗಿ, ನಮಗೆ ಅಡುಗೆ ಮಾಡಿ ಹಾಕುವ ಮನೆಯ ಮಹಿಳೆಯರು ಸಂತೋಷವಾಗಿರಲಿ. ಇವರು ಮೂವರು ಸಂತೋಷವಾಗಿದ್ದರೆ ಪ್ರಪಂಚವು  ಸಂತೋಷವಾಗಿರುತ್ತದೆ.
ಮನೆಯ ಮಹಿಳೆಯರು ಸಂತೋಷವಾಗಿದ್ದರೆ  ಮನೆಯಲ್ಲಿ ಸಂತೋಷವಿರುತ್ತದೆ. ಮನೆಯ ಮಹಿಳೆಯರು .
 ಬೇಜಾರಿನಿಂದ, ಹತಾಶೆಯಿಂದ ಅಥವಾ ಕೋಪದಿಂದ ಅಡುಗೆ ಮಾಡಿದರೆ ಆ ಊಟವು ಸರಿಯಾಗಿ ಪಚನವಾಗುವುದಿಲ್ಲ. ಇದು ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತದೆ.  ವ್ಯಾಪಾರಿಗಳು ಸಂತೋಷವಾಗಿದ್ದರೆ ಅವರು ಕಲಬೆರಕೆ ಅಥವಾ ಇನ್ನಾವುದೇ ಮೋಸ ಮಾಡುವುದಿಲ್ಲ. ನಮಗೆ ಶುದ್ಧ ಹಾಗೂ ಶುಚಿಯಾದ ಆಹಾರವು ದೊರಕುತ್ತದೆ. ಅವರು ಬೆಲೆಗಳನ್ನು ಹೆಚ್ಚಿಸಿ ನಮ್ಮನ್ನು ಲೂಟಿ ಮಾಡುವುದಿಲ್ಲ.  ಹಿಂದಿನ ಕಾಲದಿಂದಲೂ ವ್ಯಾಪಾರಿಗಳು ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಉದಾಹರಣೆಗೆ, ತೊಟ್ಟಿ, ದೇವಸ್ಥಾನ, ಧರ್ಮಶಾಲೆಗಳನ್ನು ಕಟ್ಟುವುದು ಇತ್ಯಾದಿ. ವ್ಯಾಪಾರಿಗಳು ಸಂತೋಷವಾಗಿರದೆ ಲೋಭಿಗಳಾದರೆ ಅದು ಜನರ ಮೇಲೆ ಬಹಳ ಕೆಟ್ಟ ಪ್ರಭಾವ ಬೀರುತ್ತದೆ. ಅದೇ ರೀತಿ ರೈತರೂ ಸಹ ಸಂತೋಷವಾಗಿರಬೇಕು. ಇದೂ ಮುಖ್ಯ. ಹಾಗಾಗಿ, ಈ ಮೂರೂ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ’ಅನ್ನದಾತ ಸುಖೀಭವ’ ಎಂಬ ಮಂತ್ರವನ್ನು ಉಚ್ಚರಿಸೋಣ.

ಪ್ರಶ್ನೆ: ಗುರುದೇವ, ಇತ್ತೀಚಿಗೆ ವಿದ್ಯುತ್ ಪೂರೈಕೆಯಲ್ಲಿ ಬಹಳ ತೊಂದರೆಗಳಾಗಿವೆ. ನಾವು ಇದನ್ನು ಹೇಗೆ  ಬಗೆಹರಿಸುವುದು?
ಶ್ರೀ ಶ್ರೀ ರವಿಶಂಕರ್:
ಇಲ್ಲಿ ಒಬ್ಬರು ಕಸದಿಂದ ವಿದ್ಯುತ್ ತಯಾರಿಸುವ ಬಗೆಯನ್ನು ವಿವರಿಸಲು ಬಂದಿದ್ದರು. ನಾವು ಅವರಿಗೆ ಇದನ್ನು ಕರ್ನಾಟಕದಲ್ಲಿ ಮಾಡಲು ಪ್ರೋತ್ಸಾಹಿಸಿದ್ದೇವೆ. ಅವರಿಗೆ ಸಾವಿರ ಕೆಜಿಗಳ ಯಾವುದೇ ರೀತಿಯ ಕಸದ ಅಗತ್ಯವಿದೆ, ಅದನ್ನು ಅವರು ವಿದ್ಯುತ್ತಾಗಿ ಮಾರ್ಪಡಿಸುವರು. ಇದು ಹೇಗೆ ಮುನ್ನಡೆಯುವುದು ಎಂದು ಕಾದು ನೋಡೋಣ.

ಪ್ರಶ್ನೆ: ಜೀಸಸ್ ನಂತಹ ಅನೇಕ ಮಹಾಸಂತರು ದುರಂತದ ಸಾವನ್ನಪ್ಪಿದರು. ಏಕೆ?
ಶ್ರೀ ಶ್ರೀ ರವಿಶಂಕರ್:
ಭಗವದ್ಗೀತೆಯಲ್ಲಿ ಶ್ರೀ ಕಷ್ಣನು ಹೇಳಿದ್ದಾನೆ, ‘’ಕ್ಲೇಷೋಧಿಕತರಸ್ತೇಷಾಂ ಅವ್ಯಕ್ತಾಸಕ್ತ ಚೇತಸಾಂ ಅವ್ಯಕ್ತಾಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೆ’’ (ಅಧ್ಯಾಯ ೧೨, ಶ್ಲೋಕ್ ೫)ಎಂದು. ಒಬ್ಬ ವ್ಯಕ್ತಿಯು ಕೇವಲ ಬ್ರಹ್ಮನ ಅಮೂರ್ತ (ನಿರ್ಗುಣ) ರೂಪವನ್ನು ಮಾತ್ರ ಪೂಜಿಸುವುದರಿಂದ ಬಹಳ ದುಃಖಗಳಿಗೀಡಾಗುತ್ತಾನೆ. ಮೋಸೆಸ್, ಜೀಸಸ್, ಪ್ರವಾದಿ ಮೊಹಮ್ಮದರು ಇವರೆಲ್ಲರ ಜೀವನವನ್ನು  ನೀವು ಗಮನಿಸಿದರೆ ಅದು ಕಷ್ಟಗಳಿಂದ ಕೂಡಿತ್ತು ಎಂಬುದನ್ನು ಮನಗಾಣುವಿರಿ. ಗುರುನಾನಕರ ಪರಂಪರೆಯೂ ಕೂಡ ಇದೇ ರೀತಿಯ ಕಷ್ಟಗಳನ್ನು ಅನುಭವಿಸಿತು. ಏಕೆಂದರೆ ಇವರೆಲ್ಲರೂ ಸಗುಣ ಬ್ರಹ್ಮನನ್ನು ನಿರ್ಲಕ್ಷಿಸಿ ಕೇವಲ ನಿರ್ಗುಣ ಬ್ರಹ್ಮನನ್ನು ಆರಾಧಿಸಿದರು. ಇದು ಬಹಳ ಸ್ವಾರಸ್ಯಕರ.
ಹಾಗಾಗಿಯೇ, ‘ಅವಿದ್ಯಯಾ ಮೃತ್ಯುಂ ತೀರ್ಥ್ವಾ ವಿದ್ಯಯಾ ಅಮೃತಂ ಅಸ್ನುತೆ' ಎಂದು ಹೇಳಲಾಗಿದೆ. ಸಗುಣ ನಿರ್ಗುಣಗಳೆರಡನ್ನೂ ನೀವು ಆರಾಧಿಸಿ. ವ್ಯಕ್ತ ಹಾಗೂ ಅವ್ಯಕ್ತ - ಎರಡೂ ಅಗತ್ಯ.
 'ಈಶ್ವರೋ ಗುರುರಾತ್ಮೇತಿ ಮೂರ್ತಿಭೇದಾ ವಿಭಾಗಿನೆ, ವ್ಯೋಮವದ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ' - ಗುರು, ಆತ್ಮ ಸಾಕ್ಷಾತ್ಕಾರ ಮತ್ತು ಪರಮಾತ್ಮ - ಎಲ್ಲರೂ ಅವಶ್ಯಕ. ಇವೆಲ್ಲವನ್ನೂ ಜೀವನದಲ್ಲಿ ಇಟ್ಟುಕೊಂಡರೆ  ನಾವು ಇಹದಲ್ಲಿ ಮತ್ತು ಪರದಲ್ಲಿ ಸಂತೋಷವಾಗಿರುತ್ತೇವೆ.

ಪ್ರಶ್ನೆ: ನಾನೊಬ್ಬ ರೈತ. ನನಗೆ ಒಂದು ಕ್ವಿಂಟಲ್ ಜೋಳಕ್ಕೆ ರೂ.೧೨೦೦ ಸಿಗುತ್ತದೆ. ಆದರೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ನನಗೆ ಸಿಗುವುದಕ್ಕಿಂತ ಎಷ್ಟೋ ಹೆಚ್ಚಿನ ದರದಲ್ಲಿ ಮಾರುತ್ತಾರೆ. ನಾವು ಬೆಲೆ  ನಿಗದಿಪಡಿಸಲು ಒಂದು  ಸಮಿತಿಯನ್ನು ರಚಿಸಬಹುದೇ? ರೈತರು ಬಹಳ ಕಷ್ಟ ಪಡುತ್ತಾರೆ ಆದರೆ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ.  ಈ ರೀತಿಯ ಒಂದು ಪ್ರಸ್ತಾವನೆಯನ್ನು ನಾವು ಸರಕಾರಕ್ಕೆ ನೀಡಬಹುದೇ?
ಶ್ರೀ ಶ್ರೀ ರವಿಶಂಕರ್:
ನಾವು ಕಾಶ್ಮೀರಕ್ಕೆ ಹೋದಾಗ ನಮನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಒಬ್ಬ ಅಧಿಕಾರಿಗಳು ಬಂದಿದ್ದರು. ಅವರು ಮುಂಚೆ ಹಣಕಾಸು ಇಲಾಖೆ ಹಾಗೂ ಕೃಷಿ ಇಲಾಖೆಗಳಲ್ಲಿದ್ದರು. ಅವರು ರೈತರಿಗೆ ಸಹಾಯಧನ ನೀಡುವ ಬದಲು ಕೈಗಾರಿಕಾ ಉತ್ಪನ್ನಗಳ ಬೆಲೆ ಹೆಚ್ಚಾದಂತೆ ರೈತರಿಗೆ ಹೆಚ್ಚಿನ ಬೆಲೆಯನ್ನು ಮತ್ತು ಬೆಲೆ ಇಳಿದಂತೆ ಕಡಿಮೆ ಬೆಲೆಯನ್ನು ನೀಡುವಂತಹ  ಒಂದು ಯೋಜನೆಯನ್ನು ಹಾಕಿ ಕೊಟ್ಟಿದ್ದರು. ಇದರಿಂದ ಭಾರತಕ್ಕೆ ೧೭೦೦೦ ಕೋಟಿ ರೂಪಾಯಿಗಳ ಉಳಿತಾಯವಾಗಬಹುದಿತ್ತು. ಆದರೆ ಮೇಲಿನ ಹುದ್ದೆಯಲ್ಲಿ ಕುಳಿತಿರುವ ಅಧಿಕಾರಿಗಳು ಈ ಯೋಜನೆಯ ಪತ್ರವನ್ನು ಕಸದ ಬುಟ್ಟಿಗೆ ಬಿಸಾಡಿದರಂತೆ. ಏಕೆ? ಏಕೆಂದರೆ ಇದು ಅವರ ವೈಯಕ್ತಿಕ ಲಾಭಕ್ಕೆ ಸಹಾಯಕವಲ್ಲ. ನಾವು ಆ  ಅಧಿಕಾರಿಗೆ ಯೋಜನೆಯ ವಿವರಗಳನ್ನು ನೀಡಲು ಕೇಳಿದ್ದೇವೆ, ಇದು ಜನರಿಗೆ ತಿಳಿಯುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಅವರಿಗೆ ಹೇಳಿದ್ದೇವೆ. ಇಂತಹ ಎಷ್ಟೋ ಒಳ್ಳೆಯ ಅಧಿಕಾರಿಗಳಿದ್ದಾರೆ ಆದರೆ  ಬಹಳ ಜನರಿಗೆ ಅವರ ಬಗ್ಗೆ ಗೊತ್ತಿಲ್ಲ .
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲು ಕಾರಣ ಅವರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದಿರುವುದು ಎಂದು ಆ ಅಧಿಕಾರಿಗಳು ನಮಗೆ ಹೇಳಿದರು. ಎಲ್ಲ ಪದಾರ್ಥಗಳ ಬೆಲೆ ಹೆಚ್ಚುತ್ತಿದೆ ಆದರೆ ರೈತರಿಗೆ ಸರಿಯಾದ ಬೆಲೆಯನ್ನು ಪಾವತಿಸುತ್ತಿಲ್ಲ. ಅಲ್ಲದೇ, ಉಗ್ರಾಣಗಳಲ್ಲಿ ಆಹಾರವು ಕೊಳೆಯುತ್ತಿದೆ. ಅವರು ಸರಕಾರ ಮತ್ತು ರೈತರು ಇಬ್ಬರಿಗೂ ಸಹಾಯಕವಾಗುವಂತಹ ಯೋಜನೆಯನ್ನು ತಯಾರಿಸಿದರು. ಆದರೆ ಮಂತ್ರಿಗಳು ಅದನ್ನು ಮುಂದುವರಿಸಲೇ ಇಲ್ಲ.
ಇಂತಹ ಮಂತ್ರಿಗಳು ಅಧಿಕಾರದಲ್ಲಿರುವವರೆಗೆ ಏಳಿಗೆಯಾಗಲು ಹೇಗೆ ಸಾಧ್ಯ?  ಎಲ್ಲರೂ ಒಟ್ಟಾಗಿ ಸೇರಿ ಇದರ ಬಗ್ಗೆ ಏನಾದರೂ ಮಾಡಬೇಕು.

ಪ್ರಶ್ನೆ: ಮಾನವ ಜನ್ಮ ಪಡೆಯುವುದು ಒಂದು ಪುಣ್ಯವೆಂದು ಹೇಳುತ್ತಾರೆ. ಆದರೆ, ಕೆಲವರು ಬಹಳ ನೆಮ್ಮದಿಯಾದ ಜೀವನವನ್ನು ಮಾಡುತ್ತಾರೆ, ಇನ್ನು ಕೆಲವರು ಸಂಕಷ್ಟದಲ್ಲಿ ಬಾಳುತ್ತಾರೆ. ಈ ತಾರತಮ್ಯವೇಕೆ?
ಶ್ರೀ ಶ್ರೀ ರವಿಶಂಕರ್:
ಸಂತೋಷವಾಗಿರುವವರು ದುಃಖಿತರೊಡನೆ  ತಮ್ಮ ಸಂತೋಷವನ್ನು ಹಂಚಿಕೊಳ್ಳಬೇಕು. ದುಃಖದಲ್ಲಿರುವವರು ತ್ಯಾಗದ ಮನೋಭಾವವನ್ನು ಹೊಂದಿದ್ದು ಆತ್ಮಬಲವನ್ನು ಬೆಳೆಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಜ್ಞಾನವು ನಿಮಗೆ ಆತ್ಮಬಲವನ್ನು ನೀಡುತ್ತದೆ. ಆತ್ಮಬಲವು ಜೀವನದಲ್ಲಿ ಸಹಿಷ್ಣುತೆಯನ್ನು ತರುತ್ತದೆ ಮತ್ತು ಇತರರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಸಾಮರ್ಥ್ಯವನ್ನು ನೀಡುತ್ತದೆ.  ಆದ್ದರಿಂದ ಜ್ಞಾನ, ಗಾನ ಮತ್ತು ಧ್ಯಾನ ಜೀವನದಲ್ಲಿ ಪ್ರಮುಖವಾದವು.

ಪ್ರಶ್ನೆ: ನಾನು ಕಳೆದ ನಾಲ್ಕು ವರ್ಷದಿಂದ ಸುದರ್ಶನ ಕ್ರಿಯೆಯನ್ನು ಮಾಡುತ್ತಿದ್ದೇನೆ. ನನ್ನ ಪದವಿಪೂರ್ವ ಕಾಲೇಜಿನಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿದೆ. ಇಷ್ಟಾದರೂ ನನಗೆ ಬೇಕಿದ್ದ ಕಾಲೇಜಿನಲ್ಲಿ ಬೇಕಿದ್ದ ಕೋರ್ಸ್ ಸಿಗಲಿಲ್ಲ. ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ನನಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿಷಯ ಸಿಕ್ಕಿದೆ.
ಶ್ರೀ ಶ್ರೀ ರವಿಶಂಕರ್:
ಕಂಪ್ಯೂಟರ್ ಇಂಜಿನಿಯರಿಂಗ್ ಒಳ್ಳೆಯ ವಿಭಾಗ. ಅದನ್ನೇ ಮಾಡು. ಏನೂ ಚಿಂತಿಸಬೇಡ. ಯಾವ ಕೋರ್ಸ್ ಸಿಗುತ್ತದೆಯೋ ಅದಕ್ಕೇ ಹೋಗು. ನಿನ್ನ ಭವಿಷ್ಯವು ಉತ್ತಮವಾಗಿರುತ್ತದೆ. ತಿಳಿಯಿತೇ?
ನಿನ್ನಂತಹ ಎಷ್ಟೋ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳು ಬರದಿದ್ದಾಗ ಅಥವಾ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗದಿದ್ದಾಗ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಂದಿಗೂ ಹಾಗೆ ಮಾಡಬಾರದು. ನಿಮ್ಮದೇ ಸ್ವಂತ ಜೀವನವನ್ನು ತುಚ್ಛವಾಗಿ ಪರಿಗಣಿಸಬೇಡಿ. ನಿಮ್ಮ ಜೀವನವು ಅತ್ಯಂತ ಅಮೂಲ್ಯವಾದುದು. ನಿಮ್ಮಲ್ಲಿ ಏನೇನು ಪ್ರತಿಭೆಗಳು ಹುದುಗಿವೆ ಎಂದು ನಿಮಗೆ ಗೊತ್ತಿಲ್ಲ. ನೀವು ದೊಡ್ಡ ಮಂತ್ರಿಯೋ ಉದ್ಯಮಿಯೋ ಆಗಬಹುದು. ಎಲ್ಲ ಸಾಧ್ಯತೆಗಳೂ ಇವೆ.
ಮುಂಬಯಿಯಲ್ಲಿ ರಾಮನಾಥ ಗೋಯೆಂಕಾ ಎಂಬ ಒಬ್ಬ ತಳ್ಳುಗಾಡಿಯಲ್ಲಿ ತರಕಾರಿಯನ್ನು ಮಾರುವ ವ್ಯಾಪಾರಿಯು ಭಾರತದ ಅತಿ ದೊಡ್ಡ ಪ್ರಕಾಶನವನ್ನು ತೆರೆದರು. ಹಾಗಾಗಿ, ನೀನು ಬೇಜಾರು ಮಾಡಿಕೊಳ್ಳಬಾರದು. ಕಂಪ್ಯೂಟರ್ ಇಂಜಿನಿಯರಿಂಗ್ ಸಿಕ್ಕಿದ್ದರೆ ಅದನ್ನೇ ಓದು. ನಮ್ಮ ದೇಶವು ಈ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯನ್ನು ಹೊಂದಿದೆ ಹಾಗೂ ಇನ್ನೂ ಹೆಚ್ಚಿನ ಸುಧಾರಣೆಯನ್ನು ಹೊಂದಲಿದೆ.

ಪ್ರಶ್ನೆ:  ನಿಮ್ಮ ಕಲ್ಪನೆಯಲ್ಲಿ ನೀವು ಕನಸು ಕಾಣುವ ಭಾರತ ಎಂತಹುದು, ವಿಶೇಷವಾಗಿ ಶಿಕ್ಷಣ, ರಕ್ಷಣೆ, ಅರ್ಥ ವ್ಯವಸ್ಥೆ ಹಾಗೂ ವಿತ್ತೀಯ ಕ್ಷೇತ್ರಗಳಲ್ಲಿ?
ಶ್ರೀ ಶ್ರೀ ರವಿಶಂಕರ್:
ನಾವು ಯಾವುದೇ ಅಪರಾಧ ನಡೆಯದ  ಸ್ವಚ್ಛ ಹಾಗೂ ಸುಂದರವಾದ ಸಮಾಜದ ಕನಸನ್ನು ಕಾಣುತ್ತೇವೆ. ಭುತಾನ್, ಸ್ವಿಟ್ಜೆರ್ಲ್ಯಾಂಡ್ ಮತ್ತು ಐರ್ಲ್ಯಾಂಡ್ ಮುಂತಾದ ಸಣ್ಣ ಸಣ್ಣ ದೇಶಗಳು ಸಾಕಷ್ಟು ಶಾಂತಿಯನ್ನು ಹೊಂದಿವೆ. ಒಂದಾನೊಂದು ಕಾಲದಲ್ಲಿ ಭಾರತವೂ ಹೀಗೆಯೇ ಇತ್ತು. ಮೆಕಾಲೆ ಅವರು ಹೀಗೆ ನುಡಿದಿದ್ದರು: 'ನಾನು ಈ ದೇಶದ ಉದ್ದಗಲಕ್ಕೂ ಸಂಚರಿಸಿದ್ದೇನೆ ಆದರೆ, ಒಬ್ಬ ಭಿಕ್ಷುಕ ಅಥವಾ ಕಳ್ಳನನ್ನು ಕಾಣಲಿಲ್ಲ. ಅಂತಹ ಸಂಪತ್ತು ಮತ್ತು ಅಂತಹ ಉನ್ನತ ನೈತಿಕ ಮೌಲ್ಯಗಳನ್ನು ನಾನು  ಈ ದೇಶದಲ್ಲಿ ಕಂಡಿದ್ದೇನೆ.'
ನಮ್ಮದು ಅಷ್ಟು ವೈಭವೋಪೇತವಾದ  ನಾಡಾಗಿತ್ತು. ನಾವು ನಮ್ಮ ದೇಶವನ್ನು ಪುನಃ ಆ ಸ್ಥಿತಿಗೆ ಕೊಂಡೊಯ್ಯಬೇಕು.

ಪ್ರಶ್ನೆ: ದೇವರಿಂದ ಏನಾದರೂ ಪಡೆಯಲು ನಾವು ಅವನಿಗೆ ಲಂಚವನ್ನು ನೀಡಬಾರದು ಎಂದು ನೀವು ಕೆಲವು ದಿನಗಳ ಹಿಂದೆ ಹೇಳಿದಿರಿ, ಹಿಂದೂ ಸಂಸ್ಕೃತಿಯಲ್ಲಿ ನಾವು ದೇವರಲ್ಲಿ ಏನಾದರೂ ಬೇಡಿ ಬದಲಿಗೆ ಇನ್ನೇನಾದರೂ ನೀಡುವೆವೆಂದು ಹರಕೆ ಹೊರುತ್ತೇವೆ. ಇದು ಸರಿಯೇ?
ಶ್ರೀ ಶ್ರೀ ರವಿಶಂಕರ್:
ಹರಕೆ ಹೊರುವುದು ನಿಮಗೋಸ್ಕರವೇ. ಪರಮಾತ್ಮನ ಅನುಗ್ರಹವು ನಿರುಪಾಧಿಕವಾದುದು. ಪರಮಾತ್ಮನು ನಿಮಗೆ ನಿರುಪಾಧಿಕವಾಗಿ ನೀಡುತ್ತಾನೆ. ಇವುಗಳೆಲ್ಲ ಕೇವಲ ಪದ್ಧತಿಗಳು. ಇವುಗಳಿಗೆಲ್ಲ ವೇದಗಳ ಆಧಾರವಿಲ್ಲ. ನೀವು ಉತ್ತಮವಾದ ಸೇವೆಯನ್ನು ಮಾಡಿದರೆ ಅದು ನಿಮಗೆ ಪುಣ್ಯವನ್ನು ನೀಡುತ್ತದೆ ಹಾಗೂ ಪುಣ್ಯವು ನಿಮಗೆ ಸಂತೋಷವನ್ನು ನೀಡುತ್ತದೆ.

ಪ್ರಶ್ನೆ: ಸ್ವಾಮಿ ನಿತ್ಯಾನಂದನು ಹಿಂದೂ ಸಂಸ್ಕೃತಿಯನ್ನು ಹಾಳು ಮಾಡಿದ್ದಾನೆ. ಆ ಪ್ರಕರಣ ನಡೆದಾಗಿನಿಂದ ಜನರು ಆಶ್ರಮಗಳಿಗೆ ಬರಲು ಸಂದೇಹ ಪಡುತ್ತಾರೆ. ದೇವತ್ವವು ಅವನಿಗೆ ಈ ರೀತಿಯ ಪಾಪವನ್ನೆಸಗಲು ಹೇಗೆ ಆಸ್ಪದ ನೀಡಿತು? ಈ ವಿಷಯವು ನನಗೆ ಬಹಳ ನೋವನ್ನುಂಟುಮಾಡಿದೆ.
ಶ್ರೀ ಶ್ರೀ ರವಿಶಂಕರ್: 
ಇದೇನೂ ಹೊಸ ವಿಷಯವಲ್ಲ. ಈ ಸಂಪ್ರದಾಯವು ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ರಾಮಾಯಣದಲ್ಲಿ ಸೀತೆಯೂ ಕೂಡ ಮೋಸಹೋಗಿದ್ದು ಒಬ್ಬ ಸನ್ಯಾಸಿಯಿಂದಲೇ. ಸನ್ಯಾಸಿಯ ವೇಷ ಹಾಕಿಕೊಂಡರೆ ಸೀತೆಯು ತನ್ನನ್ನು ನಂಬುವಳು ಎಂದು ರಾವಣನಿಗೆ ತಿಳಿದಿತ್ತು.
ವಿಜಯನಗರ ಸಾಮ್ರಾಜ್ಯವೂ ಸಹ  ನಾಶವಾಗಿದ್ದು ಒಬ್ಬ ಸನ್ಯಾಸಿಯ ವೇಷದಲ್ಲಿ ಬಂದ ಶತ್ರುವಿನಿಂದಲೇ. ಅವನು ಚಕ್ರವರ್ತಿಯನ್ನು ಒಂದೇ ದಿನದಲ್ಲಿ ಕೊಂದನು. ಸಾವಿರಾರು ಆನೆಗಳು ಹಾಗೂ ಸೈನಿಕರನ್ನು ಹೊಂದಿದ್ದ ಸಾಮ್ರಾಜ್ಯವನ್ನು ಒಂದೇ ದಿನದಲ್ಲಿ ನಾಶಪಡಿಸಲಾಯಿತು. ಏಕೆಂದರೆ ಆ ದಿನಗಳಲ್ಲಿ ಸನ್ಯಾಸಿಗಳಿಗೆ ಆಸ್ಥಾನದಲ್ಲಿ ನಿರ್ಬಂಧ ಪ್ರವೇಶವಿತ್ತು. ಎಲ್ಲ ಕ್ಷೇತ್ರಗಳಲ್ಲಿಯೂ ಇಂತಹ ಜನರು ಯಾವಾಗಲೂ ಇದ್ದೇ ಇರುತ್ತಾರೆ. ಇಂದು ನಾವು ದೂರದರ್ಶನದಲ್ಲಿ ಈ ತರಹದ ಎಲ್ಲ ಘಟನೆಗಳನ್ನು ಕಾಣುತ್ತಿದ್ದೇವೆ. ಶಿಕ್ಷಕರು ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತಿದ್ದಾರೆ. ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು  ಹೇಗೆ  ವಿಶ್ವಾಸ  ಬರುತ್ತದೆ? ಒಂದು ಆಸ್ಪತ್ರೆಯಲ್ಲಿ ಒಬ್ಬ ವೈದ್ಯನು ರೋಗಿಯನ್ನು ಬಲಾತ್ಕರಿಸಿದನು. ದೇಶದಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಜಾಗೃತಿಯ ತೀವ್ರವಾದ ಅಗತ್ಯವಿದೆ ಎಂಬುದನ್ನು ಇದು ತೋರಿಸುತ್ತದೆ. ನಾವು ಅತಿಯಾಗಿ ಎಡಪಂಥದೆಡೆಗೆ ಹೊರಟುಬಿಟ್ಟಿದ್ದೇವೆ. ಜಾತ್ಯತೀತದ ಹೆಸರಿನಲ್ಲಿ ರಾಷ್ಟ್ರದ ಎಲ್ಲ ಮೌಲ್ಯಗಳು ತೊರೆದಿದ್ದೇವೆ. ನಾವು ಧಾರ್ಮಿಕವಾದ ಸಮಾಜವನ್ನು ಪುನಃ ರಚಿಸಬೇಕು. ಇಲ್ಲವಾದರೆ ಏನಾಗುತ್ತದೆಯೆಂದು ನೀವು ನೋಡುತ್ತಲೇ ಇದ್ದೀರಿ. ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳು ಅಸುರಕ್ಷಿತವಾಗಿವೆ.
ನಮ್ಮ ದೇಶದಲ್ಲಿ ಶಿಕ್ಷಕರು ಹಾಗೂ ವೈದ್ಯರಿಗೆ ಬಹಳ ಗೌರವವನ್ನು ನೀಡುತ್ತಿದ್ದರು.
ವೈದ್ಯೋ ನಾರಾಯಣೋ ಹರಿಃ – ವೈದ್ಯರನ್ನು ನಾವು ನಾರಾಯಣನ ಅವತಾರವನ್ನಾಗಿ ಪರಿಗಣಿಸುತ್ತಿದ್ದೆವು
ನೃಪೋ ನಾರಾಯಣ – ರಾಜನನ್ನು ದೇವರಾಗಿ ಪರಿಗಣಿಸಲಾಗುತ್ತಿತ್ತು.
ದಿವ್ಯತೆಯು ಎಲ್ಲೆಡೆಯಲ್ಲಿಯೂ  ವ್ಯಾಪಿಸಿತ್ತು. ಅದು ದಿವ್ಯವಾದ ಸಮಾಜವಾಗಿತ್ತು. ಆದರೆ ಈಗ ಎಲ್ಲೆಡೆಯೂ ಭಯ ಆವರಿಸಿದೆ. ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಾರೆ. ಜನರು ವೈದ್ಯರ ಹತ್ತಿರ ಹೋಗಲು ಹೆದರುತ್ತಾರೆ. ಎಷ್ಟೋ ಸಲ  ಅವರು ಚಿಕಿತ್ಸೆ ಯಶಸ್ವಿ ಎನ್ನುತ್ತಾರೆ ಆದರೆ ರೋಗಿಯು ಸಾವನ್ನಪ್ಪಿರುತ್ತಾನೆ.
ಇವೆಲ್ಲದಕ್ಕೂ ಮೂಲ ಕಾರಣ ಆಧ್ಯಾತ್ಮಿಕ ಜ್ಞಾನದ ಕೊರತೆ. ಆದ್ದರಿಂದ ನೀವೆಲ್ಲರೂ ಶಿಕ್ಷಕರು ಹಾಗೂ ಸಾಧಕರಾಗಬೇಕು, ಇತರರನ್ನೂ ಸಾಧಕರನ್ನಾಗಿ ಮಾಡಬೇಕು. ಆಗ ಖಂಡಿತವಾಗಿಯೂ ನಾವು ಪರಿವರ್ತನೆಯನ್ನು ತರಲು ಸಾಧ್ಯ.
೨೫೦ ಉಗ್ರವಾದಿಗಳು ತಮ್ಮ ಶಸ್ತ್ರಗಳನ್ನು ತ್ಯಜಿಸಿ ಹೊಸ ಜೀವನವನ್ನು ಆರಂಭಿಸಲು ಇಲ್ಲಿ ನಮ್ಮ ಆಶ್ರಮಕ್ಕೆ ಬಂದಿದ್ದಾರೆ. ಅವರ ಪ್ರತಿಯೊಬ್ಬರ ಜೀವನವೂ ಒಂದು ಸ್ವಾರಸ್ಯಕರವಾದ ಕಥೆ. ಪ್ರತಿಯೊಬ್ಬರ ಬೆಗ್ಗೆಯೂ ಒಂದು ಕಾದಂಬರಿಯನ್ನು ಬರೆಯಬಹುದು.

ಪ್ರಶ್ನೆ: ಆತ್ಮ ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗ ಯಾವುದು?
ಶ್ರೀ ಶ್ರೀ ರವಿಶಂಕರ್:
ಧ್ಯಾನ; ’ನಾನು ಯಾರು’ ಎಂಬ ಆತ್ಮ ಚಿಂತನೆ. ಮತ್ತು ನೀವು ಏನಲ್ಲ ಎಂದು ತಿಳಿಯುವುದರಿಂದ .

ಪ್ರಶ್ನೆ: ಆತ್ಮಹತ್ಯೆಯು ಮಹಾಪಾಪವೆಂದು ಜನರು ಹೇಳುತ್ತಾರೆ ಆದರೆ ಗಾಂಧಿ ಮಾರ್ಗದ ಆಮರಣ ಉಪವಾಸ ಕ್ರಮಗಳು ಪಾಪವಲ್ಲವೇ?
ಶ್ರೀ ಶ್ರೀ ರವಿಶಂಕರ್:
ಯಾವುದೇ ರೂಪದ ಆತ್ಮಹತ್ಯೆಯು ತಪ್ಪೇ.  ನಾವು  ಇದರ ಪರವಾಗಿಲ್ಲ. ಉಪವಾಸ ಮಾಡುತ್ತಾ ಯಾರಾದರೂ ಸಾಯುವುದನ್ನು ನಾವು ಸಮ್ಮತಿಸುವುದಿಲ್ಲ.