ಬುಧವಾರ, ಆಗಸ್ಟ್ 1, 2012

ರಕ್ಷಾ ಬಂಧನ

01
2012
Aug
ಬೆಂಗಳೂರು ಆಶ್ರಮ, ಭಾರತ

ವತ್ತು ಹುಣ್ಣಿಮೆ - ಶ್ರಾವಣ ಹುಣ್ಣಿಮೆ. ಇದರ ಮೊದಲಿನ ಹುಣ್ಣಿಮೆಯು, ಗುರುಗಳಿಗೆ ಮತ್ತು ಶಿಕ್ಷಕರಿಗೆ ಮೀಸಲಾದ ಗುರು ಪೌರ್ಣಿಮೆಯಾಗಿತ್ತು. ಅದರ ಮೊದಲಿನದ್ದು ಬುದ್ಧ ಪೌರ್ಣಿಮೆಯಾಗಿತ್ತು ಮತ್ತು ಅದಕ್ಕಿಂತಲೂ ಮೊದಲಿನದ್ದು ಚೈತ್ರ ಪೌರ್ಣಿಮೆಯಾಗಿತ್ತು. ಈ ನಾಲ್ಕನೆಯ ಹುಣ್ಣಿಮೆಯು ಶ್ರಾವಣ ಪೌರ್ಣಿಮೆಯೆಂದು ಕರೆಯಲ್ಪಡುತ್ತದೆ ಮತ್ತು ಈ ಹುಣ್ಣಿಮೆಯು ಸಹೋದರ - ಸಹೋದರಿ ಸಂಬಂಧಕ್ಕೆ ಮೀಸಲಾಗಿದೆ - ರಕ್ಷಾ ಬಂಧನ. ಇವತ್ತು ಜನಿವಾರವನ್ನು ಬದಲಾಯಿಸುವ ದಿನವೂ ಆಗಿದೆ. ಜನಿವಾರವನ್ನು ಬದಲಾಯಿಸುವುದರ ಮಹತ್ವವೇನೆಂದರೆ, ನಿಮ್ಮ ಹೆಗಲ ಮೇಲೆ ಮೂರು ಜವಾಬ್ದಾರಿಗಳು ಅಥವಾ ಋಣಗಳಿವೆ ಎಂಬುದನ್ನು ನಿಮಗೆ ನೆನಪಿಸುವುದು - ನಿಮ್ಮ ಹೆತ್ತವರ ಕಡೆಗಿರುವ ಜವಾಬ್ದಾರಿ, ಸಮಾಜದ ಕಡೆಗಿರುವ ಜವಾಬ್ದಾರಿ ಮತ್ತು ಜ್ಞಾನದ ಕಡೆಗಿರುವ ಜವಾಬ್ದಾರಿ. ಇವುಗಳು ನಮಗಿರುವ ಮೂರು ಜವಾಬ್ದಾರಿಗಳು ಅಥವಾ ಋಣಗಳು. ನಾವು ನಮ್ಮ ಹೆತ್ತವರಿಗೆ ಋಣಿಗಳಾಗಿದ್ದೇವೆ, ನಾವು ಸಮಾಜಕ್ಕೆ ಋಣಿಗಳಾಗಿದ್ದೇವೆ ಮತ್ತು ನಾವು ಗುರುವಿಗೆ; ಜ್ಞಾನಕ್ಕೆ ಋಣಿಗಳಾಗಿದ್ದೇವೆ. ಹೀಗೆ ನಮಗೆ ಈ ಮೂರು ಋಣಗಳಿವೆ ಮತ್ತು ಜನಿವಾರವು ಈ ಮೂರು ಜವಾಬ್ದಾರಿಗಳನ್ನು ನಮಗೆ ನೆನಪಿಸುತ್ತದೆ.
ನಾವು ಋಣವೆಂದು ಹೇಳುವಾಗ, ಅದರ ಬಗ್ಗೆ; ನಾವು ಪಡೆದು, ಅದನ್ನು ತಿರುಗಿ ಕೊಡಬೇಕಾದ ಒಂದು ಸಾಲವೆಂದು ಯೋಚಿಸುತ್ತೇವೆ. ಆದರೆ ನಾವು ಇದನ್ನು ಒಂದು ಜವಾಬ್ದಾರಿಯನ್ನಾಗಿ ಅರ್ಥೈಸಿಕೊಳ್ಳಬೇಕು. ಈ ವಿಚಾರದಲ್ಲಿ ಋಣ ಎಂಬುದರ ಅರ್ಥವೇನು? ಜವಾಬ್ದಾರಿ! ಅದು, ಹಿಂದಿನ ತಲೆಮಾರಿನ ಕಡೆಗೆ, ಮುಂಬರಲಿರುವ ತಲೆಮಾರಿನ ಕಡೆಗೆ ಮತ್ತು ಈಗಿನ ತಲೆಮಾರಿನ ಕಡೆಗಿರುವ ನಿಮ್ಮ ಜವಾಬ್ದಾರಿಯನ್ನು ವಿಮರ್ಶೆ ಮಾಡುವುದು, ಮತ್ತು ಅದಕ್ಕಾಗಿಯೇ ನೀವು ನಿಮ್ಮ ಹೆಗಲಿನ ಮೇಲೆ ಮೂರು ಎಳೆಗಳ  ನೂಲನ್ನು ಹಾಕಿರುವುದು (ಜನಿವಾರ).
ಇದು ಅದರ ಮಹತ್ವ - ನಾನು ನನ್ನ ಶರೀರವನ್ನು ಶುದ್ಧವಾಗಿಟ್ಟುಕೊಳ್ಳಬೇಕು, ನನ್ನ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು ಮತ್ತು ನನ್ನ ಮಾತನ್ನು ಶುದ್ಧವಾಗಿಟ್ಟುಕೊಳ್ಳಬೇಕು; ಶರೀರ, ಮನಸ್ಸು ಮತ್ತು ಮಾತಿನಲ್ಲಿ ಪವಿತ್ರತೆ. ನಿಮ್ಮ ಸುತ್ತಲೂ ಒಂದು ನೂಲು ನೇತಾಡುತ್ತಿರುವಾಗ, ನಿಮಗೆ ಪ್ರತಿದಿನವೂ ನೆನಪಾಗುತ್ತದೆ, "ಓ, ನನಗೆ ಈ ಜವಾಬ್ದಾರಿಗಳಿವೆ."
ಪ್ರಾಚೀನ ದಿನಗಳಲ್ಲಿ ಮಹಿಳೆಯರೂ ಈ ನೂಲನ್ನು ಧರಿಸಬೇಕಾಗಿದ್ದಿತು. ಅದು ಕೇವಲ ಒಂದು ಜಾತಿಗೆ ಅಥವಾ ಇನ್ನೊಂದು ಜಾತಿಗೆ ಸೀಮಿತವಾಗಿರಲಿಲ್ಲ. ಬ್ರಾಹ್ಮಣರಿರಲಿ, ವೈಶ್ಯರಿರಲಿ, ಕ್ಷತ್ರಿಯರಿರಲಿ, ಶೂದ್ರರಿರಲಿ, ಪ್ರತಿಯೊಬ್ಬರೂ ಇದನ್ನು ಧರಿಸುತ್ತಿದ್ದರು; ಆದರೆ ಕಾಲಕ್ರಮೇಣ ಅದು ಕೆಲವರಿಗೆ ಮಾತ್ರ ಸೀಮಿತವಾಯಿತು.
ಜವಾಬ್ದಾರಿಯು ಎಲ್ಲರಿಗೂ ಇದೆ.
ಒಬ್ಬರಿಗೆ ಮದುವೆಯಾಗುವಾಗ ಅವರಿಗೆ ಆರು ಎಳೆಗಳು ಸಿಗುತ್ತವೆ - ಮೂರು ಎಳೆಗಳು ತಮ್ಮದು ಮತ್ತು ಮೂರು ಪತ್ನಿಯದ್ದೂ ಕೂಡಾ. ನಿಜವಾಗಿ ಪತ್ನಿಯರಲ್ಲಿ ಕೂಡಾ ಅದು ಇರಬೇಕು, ಆದರೆ ಗಂಡಸರು ಅದನ್ನು ತಾವೇ ತೆಗೆದುಕೊಳ್ಳುತ್ತಾರೆ. ಇದೊಂದು ಪುರುಷ ಪ್ರಧಾನ ಸಮಾಜ; ಅವರು ಇದೊಂದು ದೊಡ್ಡ ತಪ್ಪನ್ನು ಮಾಡಿದರು. ಪ್ರಾಚೀನ ದಿನಗಳಲ್ಲಿ ಸ್ತ್ರೀಯರಿಗೆ ಕೂಡಾ ಇದು ಇತ್ತು - ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಮಾರಂಭ. ಆದರೆ ಈಗ ಮದುವೆಯ ಬಳಿಕ ಪುರುಷನು ತನ್ನ ಪತ್ನಿಯ ಕಡೆಗಿರುವ ಜವಾಬ್ದಾರಿಯನ್ನು ಕೂಡಾ ತೆಗೆದುಕೊಳ್ಳುತ್ತಾನೆ.
ರಕ್ಷಾ ಬಂಧನದಂದು ನೀವು ರಾಖಿಯನ್ನು ಕಟ್ಟುತ್ತೀರಿ; ಯಾವುದನ್ನು ನಾವು ಫ್ರೆಂಡ್ ಶಿಪ್ ಬ್ಯಾಂಡ್ ಎಂದು ಕರೆಯುತ್ತೇವೋ ಅದು. ಈ ಪದವು ಇತ್ತೀಚೆಗೆ ಇಂಗ್ಲೀಷಿನಲ್ಲಿ ಹುಟ್ಟಿದ್ದು, ಆದರೆ ಪ್ರಾಚೀನ ಕಾಲದಿಂದಲೇ ರಕ್ಷಾ ಬಂಧನವಿತ್ತು. ಅದು ಸಂರಕ್ಷಣೆಯ ಬಂಧನ; ಇಲ್ಲಿ ಸಹೋದರಿಯು ಸಹೋದರನನ್ನು ಸಂರಕ್ಷಿಸುತ್ತಾಳೆ. ಹೀಗೆ, ಎಲ್ಲಾ ಸಹೋದರಿಯರೂ ಹೋಗಿ ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟುವ ಒಂದು ಹಬ್ಬವಾಗಿದೆ ರಕ್ಷಾ ಬಂಧನ, ಮತ್ತು ಇದು ಕೇವಲ ಅವರ ಸ್ವಂತ ಸಹೋದರರಾಗಬೇಕೆಂದೇನೂ ಇಲ್ಲ. ವಾಸ್ತವವಾಗಿ, ಅವರು ಅದನ್ನು ಎಲ್ಲರಿಗೂ ಕಟ್ಟಲು ಶುರು ಮಾಡುತ್ತಾರೆ ಮತ್ತು ಎಲ್ಲರೂ ಅವರ ಸಹೋದರರಾಗುತ್ತಾರೆ. ಹೀಗೆ, ಇದು ಈ ದೇಶದಲ್ಲಿ ಬಹಳ ಪ್ರಚಲಿತವಾಗಿದೆ ಮತ್ತು ಇದೊಂದು ಶ್ರಾವಣ ಹುಣ್ಣಿಮೆಯ ದೊಡ್ಡ ಹಬ್ಬವಾಗಿದೆ.
ಶ್ರಾವಣ ಹುಣ್ಣಿಮೆಯ ನಂತರ ಬರುವುದು ಭಾದೋ ಹುಣ್ಣಿಮೆ. ಇದನ್ನು ಕೂಡಾ ಆಚರಿಸಲಾಗುತ್ತದೆ. ನಂತರ ಬರುವುದು ಅನಂತ ಹುಣ್ಣಿಮೆ, ಇದು ಅನಂತತೆಯ ಹುಣ್ಣಿಮೆಯಾಗಿದೆ. ನಂತರ ಬರುವುದು ಶರದ್ ಹುಣ್ಣಿಮೆ. ಶರದ್ ಹುಣ್ಣಿಮೆಯು ದೊಡ್ಡದಾದ ಮತ್ತು ಸುಂದರನಾದ ಚಂದ್ರನಿಗೆ ಸಂಬಂಧಿಸಿದೆ. ಯಾರದ್ದಾದರೂ ಮುಖ ಹೊಳೆಯುತ್ತಿದ್ದರೆ  ಮತ್ತು ಅವರು ಬಹಳ ಪ್ರಕಾಶಮಾನವಾಗಿ ಕಾಣಿಸುತ್ತಿದ್ದರೆ, ಆಗ, "ನೀನು ಶರದ್ ಹುಣ್ಣಿಮೆಯಂತೆ ಕಾಣಿಸುತ್ತಿರುವೆ" ಎಂದು ಹೇಳಲಾಗುತ್ತದೆ.
ಶರದ್ ಹುಣ್ಣಿಮೆಯು ಇಡೀ ವರ್ಷದಲ್ಲಿ ಅತ್ಯುತ್ತಮವಾದ, ಎಲ್ಲದಕ್ಕಿಂತ ದೊಡ್ಡದಾದ ಮತ್ತು ಶುಭ್ರವಾದ ಹುಣ್ಣಿಮೆಯೆಂದು ಪರಿಗಣಿಸಲಾಗುತ್ತದೆ. ಯಾರಾದರೂ ಬಹಳ ಆಹ್ಲಾದಕರವಾಗಿ ಹಾಗೂ ಮನೋಹರವಾಗಿದ್ದರೆ, "ಶರದ್ ಚಂದ್ರ ನಿಭಾನನ" ಎಂದು ಹೇಳುತ್ತಾರೆ.
ದೇವಿಯ ಮುಖವು ಶರದ್ ಹುಣ್ಣಿಮೆಯ ಚಂದ್ರನಂತೆ ಎಂದು ಹೇಳಲಾಗುತ್ತದೆ. ಆದುದರಿಂದ ಇದೊಂದು ಬಹಳ ಶುಭಕರವಾದ ಹುಣ್ಣಿಮೆ.
ಅದರ ನಂತರ ಬರುವುದು ಕಾರ್ತಿಕ ಹುಣ್ಣಿಮೆ. ಅಂದು ನೀವು ಬಹಳಷ್ಟು ದೀಪಗಳನ್ನು ಉರಿಸಿ ಆಚರಿಸುತ್ತೀರಿ.
ಹೀಗೆ, ಪ್ರತಿಯೊಂದು ಹುಣ್ಣಿಮೆಗೂ ಒಂದು ಮಹತ್ವವಿದೆ ಮತ್ತು ಅದರೊಂದಿಗೆ ಯಾವುದಾದರೂ ಆಚರಣೆಯು ಜೋಡಿಕೊಂಡಿದೆ.
ಭಗವಾನ್ ಕೃಷ್ಣನು ಗೋಪಿಯರೊಂದಿಗೆ ನೃತ್ಯ ಮಾಡಿದುದು ಶರದ್ ಹುಣ್ಣಿಮೆಯಂದು. ಅವನು ಒಬ್ಬನಿದ್ದು ಗೋಪಿಯರು ಹಲವರಿದ್ದರೂ, ಅವನು ತನ್ನನ್ನೇ ಬಹಳ ಪಟ್ಟು ಹೆಚ್ಚಿಸಿಕೊಂಡು ಎಲ್ಲರೊಂದಿಗೂ ನೃತ್ಯ ಮಾಡಿದುದಾಗಿ ಅವರು ಅಂದುಕೊಂಡರು. ಎಲ್ಲರೂ ಒಂದು ತನ್ಮಯಾವಸ್ಥೆಯಲ್ಲಿದ್ದರು! ಪ್ರತಿಯೊಬ್ಬರೂ, ಕೃಷ್ಣನು ತಮ್ಮ ಸ್ವಂತದವನೆಂದು ಅಂದುಕೊಂಡರು ಮತ್ತು ಅವನು ಅವರೆಲ್ಲರೊಂದಿಗೆ ನೃತ್ಯ ಮಾಡಿದನು. ಶರದ್ ಹುಣ್ಣಿಮೆಯು ಇದಕ್ಕಾಗಿ ಪ್ರಸಿದ್ಧವಾಗಿದೆ.  ಜನರು ಈ ದಿನವನ್ನು ಆಚರಿಸುತ್ತಾರೆ. ಅವರು ಹಾಲನ್ನು ಬೆಳದಿಂಗಳಿನಲ್ಲಿಟ್ಟು ನಂತರ ಕುಡಿಯುತ್ತಾರೆ. ಹೀಗೆ ಶರದ್ ಹುಣ್ಣಿಮೆಯಂದು ಒಂದು ಆಚರಣೆಯು ನಡೆಯುತ್ತದೆ. ನಿಮಗೆ ನಿಮ್ಮ ಜೀವನವನ್ನು ಒಂದು ಉತ್ಸವವನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಮತ್ತು ಪ್ರತಿದಿನವನ್ನೂ ಆಚರಿಸಲು ಸಾಧ್ಯವಿಲ್ಲದಿದ್ದರೆ, ಕನಿಷ್ಠಪಕ್ಷ ಒಂದು ತಿಂಗಳಿನಲ್ಲಿ ಕೆಲವು ದಿನಗಳನ್ನಾದರೂ ನೀವು ಆಚರಿಸಬಹುದು. ಒಂದು ತಿಂಗಳಿನಲ್ಲಿ ಕೆಲವು ದಿನಗಳು ಹೆಚ್ಚಾದರೆ, ಆಗ ಕನಿಷ್ಠಪಕ್ಷ ತಿಂಗಳಿಗೊಮ್ಮೆ - ಅಂದರೆ ಹುಣ್ಣಿಮೆಯ ದಿನದಂದು ನೀವು ಆಚರಿಸಬಹುದು. ಹಾಗೆ, ಒಂದು ವರ್ಷದಲ್ಲಿ ಹನ್ನೆರಡು ಉತ್ಸವಾಚರಣೆಗಳು.
ಮನಸ್ಸು ಚಂದ್ರನೊಂದಿಗೆ ಬಹಳಷ್ಟು ಸಂಬಂಧ ಹೊಂದಿದೆ. ಅದಕ್ಕಾಗಿಯೇ, ಒಂದು ಅಮವಾಸ್ಯೆಯಿರಲಿ ಅಥವಾ ಒಂದು ಹುಣ್ಣಿಮೆಯಿರಲಿ ನಮ್ಮ ಮನಸ್ಸು ಮೇಲೆ ಕೆಳಗೆ ಹೋಗುತ್ತದೆ. ಮನಸ್ಸು ಮತ್ತು ಚಂದ್ರ ಬಹಳ ಸಂಬಂಧ ಹೊಂದಿವೆ. ಅದಕ್ಕಾಗಿಯೇ ವೇದಗಳಲ್ಲಿ ಹೇಳಿದ್ದಾರೆ, "ಚಂದ್ರಮಾ ಮನಸೋ ಜತಾ" - ಮನಸ್ಸು ಚಂದ್ರನಿಂದ ಹುಟ್ಟಿರುವುದಲ್ಲ, ಚಂದ್ರನು ಮನಸ್ಸಿನಿಂದ ಹುಟ್ಟಿರುವುದು. ಅದಕ್ಕಾಗಿಯೇ ಈ ದಿನಗಳು ಬಹಳ ಪ್ರಧಾನವಾದುವು.
ಜೀವನವೇ ಪ್ರಧಾನವಾದುದು. ಜ್ಞಾನಿಗೆ ಈ ಸಂಪೂರ್ಣ ಜೀವನವು ಪ್ರಧಾನವಾದುದು.
ಜನಿವಾರಗಳನ್ನು ಬದಲಾಯಿಸುವ ಈ ದಿನದಂದು, ಅದನ್ನು ಒಂದು ಸಂಕಲ್ಪದೊಂದಿಗೆ ಮಾಡಲಾಗುತ್ತದೆ. - ನನಗೆ ಸಫಲ ಮತ್ತು ಪ್ರಸಿದ್ಧಿಯ ಕಾರ್ಯವನ್ನು ಸಾಧಿಸುವ ಶಕ್ತಿಯು ಪ್ರದಾನವಾಗಲಿ.
ಕಾರ್ಯ ಮಾಡಲೂ ಕೂಡಾ ಒಬ್ಬನಿಗೆ ಸಾಮರ್ಥ್ಯ ಬೇಕಾಗುತ್ತದೆ. ಶರೀರವು ಶುದ್ಧವಾಗಿರುವಾಗ, ಮಾತು ಶುದ್ಧವಾಗಿರುವಾಗ ಮತ್ತು ಪ್ರಜ್ಞೆಯು ಜೀವಂತಿಕೆಯಿಂದಿರುವಾಗ; ಆ ಸಮಯದಲ್ಲೇ ಕಾರ್ಯವು ಸಿದ್ಧಿಸುವುದು. ಒಬ್ಬನಿಗೆ ಕಾರ್ಯ ಮಾಡಲು; ಆಧ್ಯಾತ್ಮಿಕ ಕಾರ್ಯಗಳಿರಲಿ ಅಥವಾ ಪ್ರಾಪಂಚಿಕ ಕಾರ್ಯಗಳಿರಲಿ; ಅವನಿಗೆ ಕುಶಲತೆಯ; ಸಾಮರ್ಥ್ಯದ ಅಗತ್ಯವಿದೆ, ಮತ್ತು ಈ ಕುಶಲತೆ ಮತ್ತು ಸಾಮರ್ಥ್ಯವನ್ನು ಪಡೆಯಬೇಕೆಂದರೆ ನಾವು ಜವಾಬ್ದಾರರಾಗಿರಬೇಕು. ಕೇವಲ ಒಬ್ಬ ಜವಾಬ್ದಾರ ವ್ಯಕ್ತಿಯು ಕೆಲಸ ಮಾಡಲು ಯೋಗ್ಯನು. ನೋಡಿ, ಅಷ್ಟೊಂದು ಒಳ್ಳೆಯ ಸಂದೇಶವನ್ನು ಕೊಡಲಾಗಿದೆ.
ಒಬ್ಬ ಬೇಜವಾಬ್ದಾರಿ ವ್ಯಕ್ತಿಗೆ ನೀವು ಯಾವುದಾದರೂ ಕೆಲಸವನ್ನು ಕೊಟ್ಟರೆ ಅದು ಯಾವತ್ತೂ ನಷ್ಟದ ಕಡೆಗೆ ನಡೆಯುತ್ತದೆ. ಒಬ್ಬ ಬೇಜವಾಬ್ದಾರಿ ವ್ಯಕ್ತಿಯಲ್ಲಿ ನೀವು ಅಡುಗೆಮನೆಯನ್ನು ನೋಡಿಕೊಳ್ಳಲು ಹೇಳಿ, ನಂತರ ಮರುದಿನ ಬೆಳಗ್ಗೆ ಉಪಾಹಾರಕ್ಕೆ ಹೋದರೆ, ಅವನು ನಿಮ್ಮಲ್ಲಿ, "ಉಪಾಹಾರ ಸಿದ್ಧವಾಗಿಲ್ಲ" ಎಂದು ಹೇಳುವನು. ಬೆಳಗ್ಗಿನ ಉಪಾಹಾರವನ್ನು ಮಧ್ಯಾಹ್ನದ ಊಟದ ಸಮಯದಲ್ಲಿ ಕೊಟ್ಟರೆ, ಆಗ ಆ ವ್ಯಕ್ತಿಯು ಜವಾಬ್ದಾರಿಯುಳ್ಳವನಲ್ಲ ಮತ್ತು ಒಬ್ಬ ಬೇಜವಾಬ್ದಾರಿ ವ್ಯಕ್ತಿಯು, ಯಾವುದೇ ಕೆಲಸವನ್ನು; ಪ್ರಾಪಂಚಿಕ ಕೆಲಸವಿರಲಿ ಅಥವಾ ಆಧ್ಯಾತ್ಮಿಕ ಕೆಲಸವಿರಲಿ; ಮಾಡಲು ಸಮರ್ಥನಲ್ಲ. ಆದುದರಿಂದ, ಮೊತ್ತಮೊದಲನೆಯದಾಗಿ ಒಬ್ಬನಿಗೆ ಜೀವನದಲ್ಲಿ ತನ್ನ ಜವಾಬ್ದಾರಿಗಳನ್ನು ಪೂರೈಸುವುದು ಹೇಗೆಂಬುದು ತಿಳಿದಿರಬೇಕು. ಯಜ್ಞೋಪವೀತ ಸಂಸ್ಕಾರ ಇರುವುದು, ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಹೇಗೆಂದು ಕಲಿಯಲು. ಜನಿವಾರವನ್ನು ಸುಮ್ಮನೇ ಹಾಗೆಯೇ ಬದಲಾಯಿಸಬಾರದು. ಜೀವನದಲ್ಲಿ ಜವಾಬ್ದಾರಿಗಳಿವೆ. ಆದುದರಿಂದ ಅದು, ನಾನೇನೇ ಮಾಡಿದರೂ ನಾನದನ್ನು ಜವಾಬ್ದಾರಿಯೊಂದಿಗೆ ಮಾಡುತ್ತೇನೆ ಎಂಬ ತಿಳುವಳಿಕೆ ಮತ್ತು ಸಂಕಲ್ಪಗಳೊಂದಿಗೆ ಬದಲಾಯಿಸಲಾಗುತ್ತದೆ.