ಸೋಮವಾರ, ಆಗಸ್ಟ್ 6, 2012

ಗುರುಶಿಷ್ಯ ಪರಂಪರೆಯ ಮಹತ್ವ

06
2012
Aug
ಬೆಂಗಳೂರು ಆಶ್ರಮ, ಭಾರತ


ಪ್ರಶ್ನೆ:  ಪ್ರೀತಿಯ ಗುರುದೇವ, ಆಳವಾದ ಧ್ಯಾನದಲ್ಲಿ ಉಸಿರಾಟವು ನಿಧಾನ ಗತಿಯನ್ನು ತಲುಪಿ ಕೆಲವು ಬಾರಿ ನಿಂತೇ ಹೋಗುತ್ತದೆ. ಇಂತಹ ಸಮಯದಲ್ಲಿ ದೇಹವು ಹೇಗೆ ಕಾರ್ಯಗಳನ್ನು ನಿರ್ವಹಿಸುತ್ತದೆ?
ಶ್ರೀ ಶ್ರೀ ರವಿಶಂಕರ್: ಉಸಿರಾಟವು ನಿಧಾನವಾದಾಗ ದೇಹದ ಚಟುವಟಿಕೆಗಳೂ ಸಹ ನಿಧಾನವಾಗುತ್ತವೆ, ಎಂಟ್ರಾಪಿಯ ಪ್ರಮಾಣವು ಕಡಿಮೆಯಾಗಿರುತ್ತದೆ. ಸಮಾಧಿಯು ಬಹುಶಃ  ಏನೂ ಚಟುವಟಿಕೆಗಳಾಗದ ಸ್ಥಿತಿ. ಚಟುವಟಿಕೆಗಳು  ಶೂನ್ಯ ಎಂದು ನಾವು ಹೇಳುವುದಿಲ್ಲ,   ಶೂನ್ಯಕ್ಕೆ ಸಮೀಪವೆಂದು ಹೇಳಬಹುದು. ಇನ್ನೂ ಅಲ್ಪ ಪ್ರಮಾಣದ  ಚಟುವಟಿಕೆ ನಡೆಯುತ್ತಿರುತ್ತದೆ. ಬಹಳ ಮಂದ ಗತಿಯಲ್ಲಿ ಸ್ವಲ್ಪ ಉಸಿರು ಹರಿಯುತ್ತಿರುತ್ತದೆ.

ಪ್ರಶ್ನೆ: ಯೋಗ ವಸಿಷ್ಠದಲ್ಲಿ ಶ್ರೀ ರಾಮನು ನಮ್ಮ ಮನಸ್ಸಿನ ಕಾರಣದಿಂದ ಮೂರು ಲೋಕಗಳು ಅಸ್ತಿತ್ವದಲ್ಲಿವೆ. ಮನಸ್ಸು ಮಾಯವಾದಾಗ ಲೋಕಗಳು ಕೂಡ ಮಾಯವಾಗುತ್ತವೆ ಎಂದು ಹೇಳಿದ್ದಾನೆ. ಇದರ ಅರ್ಥವೇನು ಹಾಗೂ ಮನಸ್ಸಿನ  ಕಾರಣದಿಂದ  ಲೋಕಗಳು ನೆಲೆಸಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿಶಂಕರ್: ಇದನ್ನು ವಿವರಿಸಲು ಸಾಧ್ಯವಿಲ್ಲ, ಕೇವಲ ಅನುಭವಿಸಲು ಮಾತ್ರ  ಸಾಧ್ಯ. ಇದು ನಿಮ್ಮ ಸ್ವಂತ ಅನುಭವವಾಗುವವರೆಗೆ ಈ ಮಾತುಗಳನ್ನು ಹಾಗೆಯೇ ಸ್ವೀಕರಿಸಿ, ವಿವರಣೆಗಾಗಿ ಹುಡುಕಬೇಡಿ.
ನಾವು ಲಾಡು ಸಿಹಿಯಾಗಿದೆಯೆಂದಾಗ ನೀವು 'ಲಾಡು ಹೇಗೆ ಸಿಹಿ ?' ಎಂದು ಕೇಳಿದರೆ ನಮಗೆ ಗೊತ್ತಿಲ್ಲ. 'ಲಾಡು ನಿಮ್ಮ ಕೈಗೆ ಸಿಗುವವರೆಗೆ ಕಾದು ಅದನ್ನು ಬಾಯಿಯೊಳಗೆ ಹಾಕಿಕೊಳ್ಳಿ, ಆಗ ನಿಮಗೆ ಅನುಭವವಾಗುತ್ತದೆ.' ಎಂದು ಹೇಳುವೆವು. ಅದೇ ರೀತಿಯಲ್ಲಿ ವೇದಾಂತದ ಸತ್ಯವನ್ನು ಕೇಳಿದಾಗ, ವಿವರಣೆಯನ್ನು ಪಡೆದಷ್ಟೂ ಹೆಚ್ಚು ಗೊಂದಲಕ್ಕೊಳಗಾಗುವಿರಿ. ವೇದಾಂತದ ಮಾತುಗಳನ್ನು ಆಲಿಸಿ ನಂತರ ಅವುಗಳನ್ನು ನಮ್ಮಲ್ಲಿ ಅಂತರ್ಗತವಾಗಲು ಬಿಡಬೇಕು. ಅದು ಅಂತರ್ಗತವಾದಾಗ ಅನುಭೂತಿಯ ರೂಪದಲ್ಲಿ ಹೊರಬರುತ್ತದೆ.
ನಾವು ದಿವ್ಯರು ಎಂದು ನಾವು ಹೇಳಿದರೆ  ’ನೀವು ಹೇಗೆ ದಿವ್ಯರು ಮತ್ತು ನಾನು ಹೇಗೆ ದಿವ್ಯ?’ ಎಂದು ಕೇಳುವಿರಿ. ಇದನ್ನು ವಿವರಿಸಲು ಸಾಧ್ಯವಿಲ್ಲ. ನೀವು ಧ್ಯಾನದಲ್ಲಿ ಆಳವಾಗಿ ಹೋದಾಗ ನೀವು ಮನಗಾಣುವಿರಿ ’ಆಹಾ! ನಾನು ದಿವ್ಯ’ ಎಂದು.
ಈಗ ತಾನೆ ನಾವು ಒಂದು ಇರಾನಿನ ಗುಂಪನ್ನು ಭೇಟಿ ಮಾಡಿದೆವು. ಒಬ್ಬ ಸಜ್ಜನರು ನಮಗೆ ಒಂದು ಕಥೆಯನ್ನು ಹೇಳುತ್ತಿದ್ದರು. ಅವರು ಒಂದು ಚಲನಚಿತ್ರವನ್ನು ತಯಾರಿಸುತ್ತಿದ್ದಾರೆ. ಆ ಚಿತ್ರದಲ್ಲಿ ೩೦ ಜನರ ಗುಂಪೊಂದು ಪರಮಾತ್ಮನನ್ನು ತಲುಪಲು ಒಂದು ಅತೀಂದ್ರಿಯವಾದ ಸ್ಥಳಕ್ಕೆ ಹೋಗುವುದು. ಅವರು ಅಲ್ಲಿ ಹೋಗಿ ತಲುಪಿ ನೀರಿನಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿಕೊಂಡು ’ಈಗ ನಾನು ಅರಿತೆ – ನಾನೇ ಪರಮಾತ್ಮ’ ಎನ್ನುವರು. ಇದನ್ನು ಹೋಲುವ ಕಥೆಗಳು ಪಂಚತಂತ್ರದಲ್ಲಿಯೂ ಇವೆ. ನಿಮ್ಮಲ್ಲಿ ಈಗಾಗಲೇ ಇರುವುದನ್ನು ನೀವು ಅನ್ವೇಷಿಸುತ್ತಿರುವಿರಿ. ಆದರೆ ಈ ಅನ್ವೇಷಣೆಯು ಅಗತ್ಯ ಏಕೆಂದರೆ ಒಂದು ಇಡೀ ವೃತ್ತವನ್ನು ತಿರುಗಿ ನೀವು ಅನ್ಹಲಕ್ ( ನಾನೇ ಸೃಷ್ಟಿಕರ್ತ) ಎಂದು ಅರಿಯುವ ಸ್ಥಿತಿಗೆ ನಿಮ್ಮನ್ನು ತಲುಪಿಸುತ್ತದೆ. ಅನ್ಹಲಕ್ ಎಂಬುದು ಉರ್ದು ಪದ. ವೇದಾಂತದಲ್ಲಿಯೂ ಅದನ್ನೇ ಹೇಳಲಾಗಿದೆ – ’ಅಹಂ ಬ್ರಹ್ಮಾಸ್ಮಿ’. ನಾನೇ ಬ್ರಹ್ಮ. ಅನ್ಹಲಕ್ ಎಂದರೆ ಅಹಂ ಬ್ರಹ್ಮಾಸ್ಮಿ.
ಆದರೆ ದುರದೃಷ್ಟವಶಾತ್ ’ಅನ್ಹಲಕ್’ ಎಂದು ನುಡಿದವರೆಲ್ಲರಿಗೂ ಮರಣದಂಡನೆಯಾಗುತ್ತಿತ್ತು. ಅರಬ್ಬೀ ಪ್ರದೇಶದಲ್ಲಿ ಅವರ ರುಂಡಗಳು ಕತ್ತರಿಸಲಾಗುತ್ತಿದ್ದವು. ಅದೃಷ್ಟವಶಾತ್ ಭಾರತದಲ್ಲಿ ಹಾಗಾಗುತ್ತಿರಲಿಲ್ಲ. ’ಅಹಂ ಬ್ರಹ್ಮಾಸ್ಮಿ’ ಎಂದು ನುಡಿದವರಿಗೆ ಉನ್ನತವಾದ ಆಸನವನ್ನು ಹಾಕಿ ಮಾಲೆಗಳನ್ನು ಅರ್ಪಿಸುತ್ತಿದ್ದರು.
ಆದರೆ ಇವೆಲ್ಲ ಸತ್ಯಗಳನ್ನು ನಾವು ಅಂತರಾಳದಲ್ಲಿ ಅನುಭವಿಸಬೇಕು. ಯಾವುದೇ ರೀತಿಯ ವಿವರಣೆಯು ಅದನ್ನು ಹಾಳು ಮಾಡುತ್ತದೆ.

ಪ್ರಶ್ನೆ: ನೀವು ಜನರನ್ನು ಸ್ವತಂತ್ರವಾದ ಆಲೋಚನೆಗೆ ಪ್ರೇರೇಪಿಸುತ್ತೀರಿ ಆದರೆ ಇದು ನಮಗಿರುವ ನಂಬಿಕೆಯೊಂದಿಗೆ ಹೇಗೆ ಅನುರೂಪವಾಗುತ್ತದೆ?
ಶ್ರೀ ಶ್ರೀ ರವಿಶಂಕರ್: ಹೌದು, ಇದೇ ಅದರ ಸೌಂದರ್ಯ.  ಸಾಮಾನ್ಯವಾಗಿ ನಂಬಿಕೆ ಎಂದರೆ ಅಂಧವಿಶ್ವಾಸ ಎಂದು ನೀವು ತಿಳಿದಿದ್ದೀರಿ. ಇಲ್ಲಿ ತರ್ಕಕ್ಕೆ ಸ್ಥಾನವಿಲ್ಲ ಎಂದು. ಆದರೆ ಇದು ಹಾಗಲ್ಲ.
ವೇದಾಂತವು ಸದಾ ವಿಚಾರ ಹಾಗೂ ವಿವೇಕದ ಬಗ್ಗೆ ಉಲ್ಲೇಖಿಸುತ್ತದೆ. ಸಮಾಧಿಯಲ್ಲಿಯೂ ’ವಿಚಾರಾನುಗಮ ಸಮಾಧಿ’ (ಅನುಭವ, ಭಾವನೆ, ಆಲೋಚನೆ, ಯೋಜನೆಗಳೊಂದಿಗೆ ಸಾಮರಸ್ಯ ಹೊಂದಿರುವ ಧ್ಯಾನದ ಸ್ಥಿತಿ), ’ವಿತರ್ಕಾನುಗಮ ಸಮಾಧಿ’ ( ಸೃಷ್ಟಿಯ ಅವಿರೋಧವಾದ  ತಿಳುವಳಿಕೆಯ ಧ್ಯಾನದ ಸ್ಥಿತಿ) ಎಂಬ ಸ್ಥಿತಿಗಳಿವೆ. ಸಮಾಧಿ ಸ್ಥಿತಿಯಲ್ಲಿಯೂ ಸಹ ತರ್ಕಕ್ಕೆ ಅವಕಾಶವಿದೆ.
ಹಾಗಾಗಿಯೇ ಸವಿತರ್ಕ ಸಮಾಧಿ (ಪ್ರಜ್ಞೆಯ ಒಂದು ಭಾಗವು ಇನ್ನೊಂದು ಭಾಗದ ಜೊತೆ ಸಂವಾದ ಅಥವಾ ವಾದವಿವಾದ ಮಾಡುವ ಧ್ಯಾನದ ಸ್ಥಿತಿ), ನಿರ್ವಿತರ್ಕ ಸಮಾಧಿಯೂ (ಯಾವುದೇ ಸಂವಾದ ಅಥವಾ ತರ್ಕಗಳಿಲ್ಲದ ಧ್ಯಾನದ ಸ್ಥಿತಿ ) ಇದೆ. ನಂತರ ಸವಿಚಾರ ಸಮಾಧಿ ( ಜ್ಞಾನವು ಪ್ರವಹಿಸುವ ಧ್ಯಾನದ ಸ್ಥಿತಿ, ಈ ಆಳವಾದ ಸಮಾಧಿಯಲ್ಲಿ ಕೆಲವು ಮಂದವಾದ ಯೋಚನೆಗಳು ತೇಲುತ್ತಿರುತ್ತವೆ) ಮತ್ತು ನಿರ್ವಿಚಾರ ಸಮಾಧಿ ( ಯಾವುದೇ  ಯೋಚನೆಗಳು ಬರದ ಶೂನ್ಯತ್ವದ ಅನುಭವ ನೀಡುವ ಧ್ಯಾನದ ಸ್ಥಿತಿ).
ಆದ್ದರಿಂದ ತರ್ಕವು ನಂಬಿಕೆಗೆ ವಿರೋಧವಲ್ಲ. ತರ್ಕದ ಮೂಲಕವೇ ಜನರು ನಂಬಿಕೆಯೆಡೆಗೆ ಮುಖ ಮಾಡುತ್ತಾರೆ, ಅಲ್ಲವೇ? ನಿಮ್ಮ ತರ್ಕಕ್ಕೆ ಸಮಾಧಾನ ದೊರೆತಾಗ ನಿಮ್ಮ ನಂಬಿಕೆಯು ಗಾಢವಾಗುತ್ತದೆ. ಆಗ ನಿಮ್ಮ ನಂಬಿಕೆಯನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ.
ಯಾರಾದರೂ ’ನಂಬಿಕೆಯಿದ್ದಲ್ಲಿ ತರ್ಕ ಮಾಡಬೇಡಿ’ ಎಂದರೆ ಆಗ ನಂಬಿಕೆಯು ದುರ್ಬಲವಾಗಿರುತ್ತದೆ. ದುರ್ಬಲವಾದ ನಂಬಿಕೆಯು ಸದಾ ತರ್ಕಕ್ಕೆ ಹೆದರುತ್ತದೆ. ಆದರೆ ಸತ್ಯವು ಎಂದಿಗೂ ತರ್ಕಕ್ಕೆ ಹೆದರುವುದಿಲ್ಲ.
ಸತ್ಯವಿದ್ದಾಗ ನೀವು ಯಾವುದೇ ರೀತಿಯಲ್ಲಿ ತರ್ಕ ಮಾಡಿದರೂ ಸತ್ಯವು ಒಂದೇ ಆಗಿರುತ್ತದೆ. ಸತ್ಯದಲ್ಲಿ ವಿಶ್ವಾಸವಿದ್ದಾಗ ಅದು ಎದ್ದು ಕಾಣುತ್ತದೆ. ಆದ್ದರಿಂದಲೇ ಶ್ರೀ ಕೃಷ್ಣನು ಉಪದೇಶವನ್ನು ನೀಡಿದ ನಂತರ ಕೊನೆಯಲ್ಲಿ ’ನಾನು ಹೇಳಬೇಕಾದುದೆಲ್ಲವನ್ನೂ ಹೇಳಿದ್ದೇನೆ, ಈಗ ನೀನು ನಿರ್ಧರಿಸು. ನಿನ್ನ ತರ್ಕಕ್ಕೆ ಇದು ನಿಲುಕಿದರೆ ಇದನ್ನು ಸ್ವೀಕರಿಸು’ ಎಂದು ನುಡಿಯುವನು.
’ಯಥೇಚ್ಛಸಿ ತಥಾ ಕುರು’ (ನಿನ್ನ ಇಚ್ಛೆಯಂತೆ ಮಾಡು) ಎಂದು ಕೃಷ್ಣನು ಹೇಳುತ್ತಾನೆ. ಇದು ಬಹುಮುಖ್ಯವಾದುದು. ಪೂರ್ವಾತ್ಯ ದೇಶಗಳಲ್ಲಿ ನಂಬಿಕೆ ಹಾಗೂ ತರ್ಕಗಳು ವಿರೋಧಾತ್ಮಕವಾಗಿಲ್ಲ. ವಿಶೇಷವಾಗಿ, ಜ್ಞಾನವು ಪೂರ್ವಕಲ್ಪನೆಗಳ ಮೇಲಲ್ಲದೆ ಅನುಭವದ ಮೇಲೆ ಆಧಾರಿತವಾದಾಗ ತರ್ಕವು ನಂಬಿಕೆಯನ್ನು ಅಲ್ಲಾಡಿಸುವ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ.
ಆದರೆ ತಪ್ಪಾದ ತರ್ಕಕ್ಕೆ ಇಲ್ಲಿ ಆಸ್ಪದವಿಲ್ಲ. ತರ್ಕವು ಒಳ್ಳೆಯದು ಆದರೆ ತರ್ಕಹೀನವಾಗಿ ನೀವು ವಿಷಯಗಳನ್ನು ಖಂಡಿಸಿದರೆ ಆಗ ಅದು ನಂಬಿಕೆಗೆ ವಿರುದ್ಧವಾಗಿರುತ್ತದೆ.  ಹಾಗಾಗಿ ಪ್ರಾಮಾಣಿಕವಾದ ಸಾಧಕನು ಕುತರ್ಕವನ್ನು ಉಪಯೋಗಿಸುವುದಿಲ್ಲ.
ಕುತರ್ಕಕ್ಕೆ ಉದಾಹರಣೆ – ಬಾಗಿಲು ಅರ್ಧ ಮುಚ್ಚಿದ್ದರೆ ಅದು ಅರ್ಧ ತೆರೆದಿದೆ ಎಂದು ನೀವು ಹೇಳಬಹುದು, ಆದರೆ ಬಾಗಿಲು ಸಂಪೂರ್ಣವಾಗಿ ಮುಚ್ಚಿದ್ದರೆ ಆಗ ಬಾಗಿಲು ಸಂಪೂರ್ಣ ತೆರೆದಿದೆ ಎಂದು ಅರ್ಥವಲ್ಲ. ಸಂಪೂರ್ಣವಾಗಿ ಮುಚ್ಚಿದ್ದಾಗ ಸಂಪೂರ್ಣ ತೆರೆದಿದೆ ಎಂದು ನೀವು ಹೇಳಿದರೆ ಅದು ಕುತರ್ಕ.
ವಿಜ್ಞಾನದಲ್ಲಿ ತರ್ಕವು ಮೊದಲು ಬರುತ್ತದೆ, ನಂತರ ನಂಬಿಕೆ ಹುಟ್ಟುತ್ತದೆ, ಸರಿಯೇ? ನೀವು ಮೊದಲು ತಾರ್ಕಿಕವಾಗಿ ವಿಶ್ಲೇಷಿಸಿ ನಂತರ ತರ್ಕಬದ್ಧವಾದುದನ್ನು ನಂಬಲು ಆರಂಭಿಸುತ್ತೀರಿ.

ಪ್ರಶ್ನೆ: ಗುರುದೇವ, ಜನರು ನಿಮ್ಮ  ನಡತೆ ಹಾಗೂ ಸಮಗ್ರತೆಯನ್ನು ದೂಷಿಸಿದಾಗ   ಏನು   ಮಾಡುವುದು?
ಶ್ರೀ ಶ್ರೀ ರವಿಶಂಕರ್: ಕನ್ನಡದಲ್ಲಿ ಒಂದು ಸುಂದರವಾದ ವಚನವಿದೆ.
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ |
ಸಮುದ್ರದ ತಡಿಯೊಳು ಮನೆಯ ಮಾಡಿ ನೆರೆತೊರೆಗಂಜಿದೊಡೆಂತಯ್ಯ ||
ಸಂತೆಯೊಳಗೆ ಒಂದು ಮನೆಯ ಮಾಡಿ ಶಬ್ದಕೆ ನಾಚಿದೊಡೆಂತಯ್ಯ |
ಚನ್ನಮಲ್ಲಿಕಾರ್ಜುನ ದೇವ ಕೇಳಯ್ಯ ||
 ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಒಂದೆ |
ಮನದಲಿ ಕೋಪವ ತಾಪವ ತಾಳದೆ ಸಮಾಧಾನಿಯಾಗಿ ಇರಬೇಕಯ್ಯ ||

ಜನರು ದೂಷಿಸುತ್ತಾರೆ, ಏನೇನೋ ಮಾತನಾಡಿಕೊಳ್ಳುತ್ತಾರೆ, ನೀವೇನು ಮಾಡಲು ಸಾಧ್ಯ? ಅವರಿಗೆ ತಿಳಿಹೇಳಿ ಮತ್ತು ನಿರ್ಲಕ್ಷಿಸಿ. ನೀವು ಕೇವಲ ಒಳಿತನ್ನೇ ಮಾಡಿದ್ದರೂ ಜನರು ನಿಮ್ಮನ್ನು ದೂಷಿಸುವರು. ಅವರು ನೀವೇ ಸರಿಯಿಲ್ಲವೆಂಬಂತೆ ನಿಮ್ಮನ್ನು ಕಾಣುತ್ತಾರೆ. ನೀವೇನು ಮಾಡಲು ಸಾಧ್ಯ? ಏನೂ ಇಲ್ಲ.
ನೀವೇನೂ ತಪ್ಪು ಮಾಡದಿದ್ದರೂ ಜನರು ನಿಮ್ಮ ವೈರಿಗಳಾಗಿಬಿಡುತ್ತಾರೆ. ಇಲ್ಲಿ ಎಷ್ಟು ಜನರಿಗೆ ಈ ಅನುಭವವಾಗಿದೆ? (ಹಲವರು ಕೈ ಎತ್ತಿದರು). ನೀವು ಅವರಿಗೆ ಏನೂ ಕೆಡುಕನ್ನುಂಟುಮಾಡಿಲ್ಲ, ಆದರೂ ಅವರು ನಿಮ್ಮ ಶತ್ರುಗಳಾಗಿಬಿಟ್ಟಿದ್ದಾರೆ.
ಹಾಗೆಯೇ, ಕೆಲವರಿಗೆ ನೀವು ಯಾವುದೇ ದೊಡ್ಡ ಉಪಕಾರವನ್ನು ಮಾಡಿಲ್ಲ, ಆದರೂ ಅವರು ನಿಮ್ಮ ಸ್ನೇಹಿತರಾಗಿದ್ದಾರೆ, ಅಲ್ಲವೇ?
ಆದ್ದರಿಂದ ಸ್ನೇಹ ಹಾಗೂ ದ್ವೇಷ ಒಂದು ವಿಶೇಷವಾದ ನಿಬಂಧನೆಗೆ ಒಳಪಟ್ಟಿದೆ. ಅದೇ ಕರ್ಮ. ಕರ್ಮವಿದ್ದಾಗ ಕೆಲವು ಆಗುಹೋಗುಗಳಿಗೆ ಯಾವುದೇ ರೀತಿಯ ಸ್ಪಷ್ಟೀಕರಣ ಅಥವಾ ವಿವರಣೆಗಳು ಇರುವುದಿಲ್ಲ. ಅದು ಹಾಗೆಯೇ ಸಂಭವಿಸುತ್ತದೆ. ಹಾಗಾಗಿ, ನೀವು ಮಾಡದೆ ಇರುವ ತಪ್ಪಿಗೆ ಜನರು ನಿಮ್ಮನ್ನು ದೂಷಿಸಿದರೆ ಚಿಂತಿಸಬೇಡಿ. ವಿಚಲಿತರಾಗಬೇಡಿ.
ವಿಚಲಿತರಾಗಬೇಡಿ ಎಂದು ಹೇಳುವುದು ಸುಲಭ. ನೀವು ವಿಚಲಿತರಾಗಿಯೇ ಆಗುವಿರಿ, ಆದರೆ ಆ ಸಂದರ್ಭದಲ್ಲಿ ಜ್ಞಾನವು ನಿಮ್ಮ ನೆರೆವಿಗೆ ಬರುತ್ತದೆ. 'ಇದು ಯಾವುದೋ ವಿಚಿತ್ರವಾದ ಕರ್ಮ, ಇರಲಿ. ಏನಿವಾಗ, ನಾವೇನು ಮಾಡಲು ಸಾಧ್ಯ? ಇದು ಪ್ರಪಂಚದ ಸ್ವಭಾವ'. ಈ ಬಗೆಯಲ್ಲಿ ನೀವು ನಿಮ್ಮನ್ನು ವಿರಾಗಿಯಾಗಿ ಪರಿವರ್ತಿಸಬೇಕು. ವಿರಾಗಿಯು ಸದಾ ಆನಂದವಾಗಿರುತ್ತಾನೆ. ಕಸ್ಯ ಸುಖಂ ನ ಕರೋತಿ ವಿರಾಗಃ. (ಯಾವುದೇ ಸುಖವನ್ನು ಬಯಸದ ಮನಸ್ಥಿತಿಗಿಂತ ಹೆಚ್ಚಿನ ಸುಖ ಯಾವುದೂ ಇಲ್ಲ)

ಪ್ರಶ್ನೆ: ನನಗೆ ಅನಂತವಾದ ಬಯಕೆಗಳಿವೆ ಹಾಗೂ ನೀವು ಅವುಗಳನ್ನು ಪೂರೈಸುತ್ತಲೇ ಇರುತ್ತೀರಿ ಎಂದು ಕೆಲವೊಮ್ಮೆ ನಾನು ಅಚ್ಚರಿಗೊಳ್ಳುತ್ತೇನೆ. ಬಯಕೆಗಳ ದಾಹವನ್ನು ನಿವಾರಿಸುವುದು ಹೇಗೆ ಗುರುದೇವ?
ಶ್ರೀ ಶ್ರೀ ರವಿಶಂಕರ್: ನಿಮ್ಮ ಬಯಕೆಗಳು ಈಡೇರುತ್ತಿವೆ ಎಂದು ನಿಮಗೆ ತಿಳಿದಿದೆ, ಇಷ್ಟು ಸಾಕು. ಇತರರ ಬಯಕೆಗಳನ್ನು ಈಡೇರಿಸುವಲ್ಲಿ ವ್ಯಸ್ತರಾಗಿ, ನಿಮ್ಮ ಬಯಕೆಗಳನ್ನಲ್ಲ.
ನೋಡಿ, ಗುರು ಶಿಷ್ಯ ಪರಂಪರೆಯ ಮಹತ್ವವೇನು?  ಬಯಕೆಗಳಿಗೆ, ಹಂಬಲಗಳಿಗೆ ಕೊನೆಯಿಲ್ಲ ಎಂದು ಅರಿಯುವುದು. ’ಸಾಗರದ ಅಲೆಗಳಂತೆ ಒಂದಾದ ಮೇಲೆ ಒಂದು ಬಯಕೆಗಳು ಬರುತ್ತಲೇ ಇರುತ್ತವೆ. ಹಾಗಾಗಿ ನಾನು ನನ್ನ ಬಯಕೆಗಳನ್ನು ಬದಿಗಿಟ್ಟು ಗುರುವಿನ ಇಚ್ಛೆಗನುಸಾರವಾಗಿ ಕೆಲಸ ಮಾಡಬೇಕು.’ ನೀವು ಹೀಗೆ ಮಾಡಿದಾಗ ಮನಸ್ಸು ಟೊಳ್ಳು ಹಾಗೂ ಖಾಲಿಯಾಗಿ ಒಂದು ರೀತಿಯ ಹಗುರತನದ ಅನುಭವವಾಗುತ್ತದೆ. ಆಗ ಜೀವನವು ಸುಖ ಮತ್ತು ದುಃಖಗಳನ್ನು ಮೀರಿ ಮುನ್ನಡೆಯುತ್ತದೆ ಹಾಗೂ ಎಲ್ಲ ವ್ಯಾಮೋಹ ಹಾಗೂ ಜಿಗುಪ್ಸೆಗಳು ತಾವಾಗಿಯೇ ಮಾಯವಾಗುತ್ತವೆ.  ವ್ಯಾಮೋಹ ಹಾಗೂ ಜಿಗುಪ್ಸೆಗಳನ್ನು ನಿರ್ಮೂಲಗೊಳಿಸಲು ಇದೊಂದೇ ಮಾರ್ಗ.
ಹಾಗಾಗಿಯೇ ’ನ ಗುರೋರ್ ಅಧಿಕಮ್, ನ ಗುರೋರ್ ಅಧಿಕಮ್, ನ ಗುರೋರ್ ಅಧಿಕಮ್ ’ ಎನ್ನಲಾಗಿದೆ. (ಗುರುವಿಗಿಂತ ಮಹತ್ತರವಾದುದು ಯಾವುದೂ ಇಲ್ಲ ). ಆದ್ದರಿಂದ ಎಲ್ಲವನ್ನೂ ಗುರುಗಳಿಗೆ ಬಿಡಿ, ಗುರುವಿಗೆ ಶರಣಾಗಿ.
ಬಯಕೆಗಳ ಈಡೇರಿಕೆಯಿಂದ ತೃಪ್ತಿಯನ್ನು ಪಡೆಯಲು ಸಾಧ್ಯವಿಲ್ಲ, ಏಕೆಂದರೆ ಒಂದು ಬಯಕೆಯು ಈಡೇರಿದ ನಂತರ ಇನ್ನೊಂದು ಬರುತ್ತದೆ, ಅದು ಈಡೇರಿದರೆ ಮತ್ತೊಂದು ಬರುತ್ತದೆ. ಆಗ ಮನಸ್ಸು ಬಯಕೆಗಳಲ್ಲಿಯೇ ಅಲೆದಾಡುತ್ತಿರುತ್ತದೆ. ಹಗಲು ರಾತ್ರಿ ಒಂದಲ್ಲ ಒಂದು ಬಯಕೆಯು ನಿಮ್ಮನ್ನು ಕಾಡುತ್ತಿರುತ್ತದೆ. ನಿಮಗೆ ಗೊತ್ತೇ, ಈ ಜಗತ್ತಿನಲ್ಲಿ ನಿಮ್ಮನ್ನು ಏನಾದರೂ ಬಾಧಿಸುತ್ತಿದ್ದರೆ, ಆ ಪಟ್ಟಿಯಲ್ಲಿ ಮೊಟ್ಟ ಮೊದಲನೆಯದು ನಿಮ್ಮ ಮನಸ್ಸು!
ಅದು ನಿಮಗೆ ಕಾಣಿಸುವುದಿಲ್ಲವಾದ್ದರಿಂದ  ನಾವು ಅದು ಮೊಟ್ಟ ಮೊದಲನೆಯದು ಎಂದೆವು. ಬೇರೆ ಯಾರೋ ನಿಮಗೆ ತೊಂದರೆ ಕೊಡುತ್ತಿದ್ದಾರೆಂದು ನೀವು ತಿಳಿಯುತ್ತೀರಿ. ನಿಮ್ಮ ಅತ್ತೆ ಅಥವಾ ಸೊಸೆ, ಪತಿ ಅಥವಾ ಪತ್ನಿ  ನಿಮಗೆ ತೊಂದರೆ ಕೊಡುತ್ತಿದ್ದಾರೆಂದು ನೀವು ತಿಳಿಯುವಿರಿ. ಇವೆಲ್ಲವೂ ಪಟ್ಟಿಯಲ್ಲಿ ನಂತರ ಬರುವುವು. ನಿಮ್ಮ ಸ್ವಂತ ಮನಸ್ಸೇ ನಿಮ್ಮನ್ನು ಬಾಧಿಸುತ್ತಿರುವುದು; ಬೇರೆ  ಯಾವ ವೈರಿಗಳೂ ಇಲ್ಲ. ಇದನ್ನು ನೀವು ಅರಿತಾಗ ಬೇರಾವುದೇ ಬಾಧೆಗಳಿಲ್ಲ, ಎಲ್ಲ ಬಾಧೆಗಳು ಮನಸ್ಸಿನದು ಎಂಬುದನ್ನು ಅರ್ಥ ಮಾಡಿಕೊಳ್ಳುವಿರಿ.