ಶನಿವಾರ, ಆಗಸ್ಟ್ 25, 2012

ನಿಮ್ಮ ಬದುಕನ್ನೊಮ್ಮೆ ಗಮನಿಸಿ

25
2012
Aug
ಡರ್ಬನ್, ದಕ್ಷಿಣ ಆಫ್ರಿಕಾ

ಲ್ಲಿ ನಾವು ಅನೌಪಚಾರಿಕವಾಗಿರುತ್ತೇವೋ ಮತ್ತು ಪರಸ್ಪರರೊಂದಿಗೆ ಹಾಯಾಗಿರುತ್ತೇವೋ ಅಂತಹ ಒಂದು ಮನೆಯ ವಾತಾವರಣದಲ್ಲಿ ಮಾತ್ರ ಜ್ಞಾನವು ಅರಳಬಲ್ಲದು. ನೀವೆಲ್ಲರೂ ಈಗ ಪರಸ್ಪರರೊಂದಿಗೆ ಹಾಯಾಗಿರುವಿರಾ?


ನಾವೆಲ್ಲರೂ ಯಾಕೆ ನಮ್ಮ ಪಕ್ಕದಲ್ಲಿರುವ, ನಮ್ಮ ಹಿಂದಿರುವ ಹಾಗೂ ನಮ್ಮ ಮುಂದೆಯಿರುವ ವ್ಯಕ್ತಿಗೆ ವಂದಿಸಲು ಒಂದು ಕ್ಷಣವನ್ನು ತೆಗೆದುಕೊಳ್ಳಬಾರದು?
ಒಂದು ಔಪಚಾರಿಕ ವಾತಾವರಣವು ಜ್ಞಾನಕ್ಕೆ ಬಹಳ ಸರಿಹೊಂದುವುದಿಲ್ಲ. ಒಂದು ಹೃದಯದಿಂದ ಹೃದಯಕ್ಕಿರುವ ಮಾತುಕತೆಗೆ ನೀವು ಪರಸ್ಪರ ಅನೌಪಚಾರಿಕವಾಗಿರಬೇಕು ಮತ್ತು ಅದುವೇ ಜ್ಞಾನವಾಗಿದೆ. ಅದು ತಲೆಯಿಂದ ತಲೆಗಿರುವುದಲ್ಲ. ಒಂದು ತಲೆಯಿಂದ ತಲೆಗಿರುವ ಸಂಪರ್ಕದಲ್ಲಿ ಹಲವಾರು ವಾದಗಳಿರಬಹುದು. ಆದರೆ ಹೃದಯದಿಂದ ಹೃದಯಕ್ಕಿರುವುದರಲ್ಲಿ ಒಂದೇ ಒಂದು ಭಾಷೆಯಿರುವುದು - ಏಕ ಪ್ರಪಂಚ ಕುಟುಂಬ.
ಈಗ ಎಲ್ಲವನ್ನೂ ಬದಿಗಿಟ್ಟು, ಕೇವಲ ನಿಮ್ಮದೇ ಜೀವನದ ಕಡೆಗೆ ನೋಡಿ. ನಿಮ್ಮ ಜೀವನದಿಂದ ನಿಮಗೆ ಬೇಕಾಗಿರುವುದು ಏನು? ನೀವು ಯಾವತ್ತಾದರೂ ಕುಳಿತು ಅದರ ಬಗ್ಗೆ ಯೋಚಿಸಿದ್ದೀರಾ, "ನನಗೆ ನನ್ನ ಜೀವನದಲ್ಲಿ ಏನು ಬೇಕು?" ಅದನ್ನು ಮಾಡಲು ನಮಗೆ ಸಮಯ ಸಿಗುವುದು ವಿರಳ, ಮತ್ತು "ನಾನು ಯಾರು?" - ಅದರ ಬಗ್ಗೆಯೂ ನಾವು ಯೋಚಿಸುವುದಿಲ್ಲ. ಯಾರೋ ನಮಗೆ ಏನನ್ನೋ ಹೇಳಿದರು ಮತ್ತು ನಾವು ಅದನ್ನು ಕಲಿತೆವು. ನಾವು ಅಧ್ಯಯನ ಮಾಡಿದೆವು ಮತ್ತು ಶಿಕ್ಷಣ ಪಡೆದೆವು, ಆದರೆ "ನಾನು ಯಾರು? ನನಗೇನು ಬೇಕು?" - ಈ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುವುದು ಅಪರೂಪವಾಗಿ.
ನೀವು ೬೦, ೭೦ ಅಥವಾ ೮೦ ವರ್ಷಗಳ ನಿಮ್ಮ ಜೀವನವನ್ನು ನೋಡಿದರೆ, ಆ ೮೦ ವರ್ಷಗಳನ್ನು ನೀವು ಹೇಗೆ ಕಳೆಯುವಿರೆಂಬುದು ನಿಮಗೆ ತಿಳಿದಿದೆಯೇ? ನೀವು ನಿಮ್ಮ ಜೀವನದ ೪೦ ವರ್ಷಗಳನ್ನು ನಿದ್ರಿಸುವುದರಲ್ಲಿ ಕಳೆಯುವಿರಿ. ನೀವು ನಿಮ್ಮ ಜೀವನದ ಸುಮಾರು ಎಂಟು ವರ್ಷಗಳನ್ನು ಬಚ್ಚಲುಮನೆಗಳಲ್ಲಿ ಹಾಗೂ ಶೌಚಾಲಯಗಳಲ್ಲಿ ಕಳೆಯುವಿರಿ ಮತ್ತು ಸುಮಾರು ಅಷ್ಟೇ ವರ್ಷಗಳು ತಿನ್ನುವುದರಲ್ಲಿ ಕಳೆಯುತ್ತದೆ. ೧೦ರಿಂದ ೧೫ ವರ್ಷಗಳು ಟ್ರ್ಯಾಫಿಕ್ಕಿನಲ್ಲಿ, ಪ್ರಯಾಣ ಮಾಡುವುದರಲ್ಲಿ ಮತ್ತು ಕೆಲಸ ಮಾಡುವುದರಲ್ಲಿ ಕಳೆದುಹೋಗುತ್ತವೆ. ನಮ್ಮ ಜೀವನದಲ್ಲಿ, ಕಷ್ಟದಲ್ಲಿ ಎರಡರಿಂದ ಮೂರು ವರ್ಷಗಳು, ನಾವು ’ಸಂತೋಷದ ಜೀವನ’ ಎಂದು ಯಾವುದನ್ನು ಕರೆಯುತ್ತೇವೆಯೋ ಅದರಲ್ಲಿ ಕಳೆದುಹೋಗುತ್ತದೆ. ಅಲ್ಲವೇ? ಮತ್ತು ಅದುವೇ ಅಲ್ಲವೇ ನಿಮಗೆ ಬೇಕಾಗಿರುವುದು - ಸಂತೋಷ?
ಪ್ರಪಂಚದ ಎಲ್ಲಾ ಧರ್ಮಗ್ರಂಥಗಳೂ, ಪ್ರಾಚೀನ ಕಾಲದಿಂದ ಇತ್ತೀಚಿನ ಕಾಲದ ವರೆಗೆ; ಅವುಗಳೆಲ್ಲವೂ ಹೆಚ್ಚಿನ ಸಂತೋಷದ ಬಗ್ಗೆ ಮಾತನಾಡುತ್ತವೆ. ಅಲ್ಲವೇ? ಯಾಕೆಂದರೆ ಪುರುಷರು ಮತ್ತು ಸ್ತ್ರೀಯರು ಸಂತೋಷವನ್ನು ಬಯಸುತ್ತಾರೆ ಎಂಬುದು ಧರ್ಮಗ್ರಂಥಗಳಿಗೆ ತಿಳಿದಿದೆ.
ಸಂತೋಷವೆಂಬುದು ನೀವು ಎಲ್ಲೋ ಖರೀದಿಸಬಹುದಾದಂತಹ ಒಂದು ವಸ್ತುವಲ್ಲ. ಅದು ನೀವೆಲ್ಲಿರುವಿರೋ ಅಲ್ಲಿದೆ, ಇಲ್ಲಿಯೇ ಮತ್ತು ಈಗಲೇ. ಹಾಗೂ ಆ ಸಂತೋಷವನ್ನು ಕಂಡುಹುಡುಕಲಿರುವ ಮಾರ್ಗವೆಂದರೆ ಧ್ಯಾನ. ಧ್ಯಾನವು ನಮ್ಮ ಆರೋಗ್ಯವನ್ನು, ನಮ್ಮ ಮನಃಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಸಂತೋಷವನ್ನು ತರುತ್ತದೆ.
ಯಾವುದನ್ನೆಲ್ಲಾ ನಾವು ಇಲ್ಲಿ ಅಲ್ಲಿ ಹುಡುಕುತ್ತೇವೋ, ಅದು ಇಲ್ಲಿಯೇ ಇದೆ, ನಮ್ಮೊಳಗೆ. ನಾನಿಲ್ಲಿಗೆ ಬಂದಿರುವ ಉದ್ದೇಶವೆಂದರೆ, ನೀವು ಯಾವುದಕ್ಕಾಗಿಯೆಲ್ಲಾ ಹುಡುಕುತ್ತಿರುವಿರೋ ಅದು ನಿಮ್ಮೊಳಗೆ ಆಳದಲ್ಲಿ ಇದೆ ಮತ್ತು ಆ ಬೆಳಕು, ಆ ಚೈತನ್ಯವು ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತದೆ ಎಂಬುದನ್ನು ನಿಮಗೆ ಹೇಳುವುದು. ಆದುದರಿಂದ ಚಿಂತಿಸಬೇಡಿ. ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಕೊಡಿ. ನಾನು ಬಂದಿರುವುದು ಅವುಗಳನ್ನು ದೂರ ಒಯ್ಯಲು. ಎಲ್ಲಾ ಚಿಂತೆಗಳನ್ನು ಇಲ್ಲಿ ಬಿಡಿ, ಸಂತೋಷವಾಗಿರಿ ಮತ್ತು ಸಂತೋಷವನ್ನು ಹರಡಿ. ಜೀವನದಲ್ಲಿ ನಮ್ಮ ಗುರಿಯು ಇದಾಗಿರಬೇಡವೇ? ನಮ್ಮ ಗುರಿಯು ಯಾವುದಾಗಿರಬೇಕು? ಎಲ್ಲರನ್ನೂ ಅಲುಗಾಡಿಸಿ ಅವರಿಗೆ ಹೇಳಿ, "ಹೇ! ಎದ್ದೇಳು! ನಗು ಮತ್ತು ಮುಗುಳ್ನಗು." ನೀವು ಜನರನ್ನು ಸಂತೋಷಗೊಳಿಸಬೇಕು.
ನಿಮಗೆ ಗೊತ್ತಿದೆಯಾ, ನಮ್ಮಲ್ಲಿ ಇರುವಾಗಲೂ ನಾವು ದುಃಖಿತರಾಗಿರುತ್ತೇವೆ ಮತ್ತು ನಮ್ಮಲ್ಲಿ ಇಲ್ಲದಿರುವಾಗಲೂ ನಾವು ದುಃಖಿತರಾಗಿರುತ್ತೇವೆ.
ನಾನು ನಿಮಗೆ ಒಂದು ಕಥೆಯನ್ನು ಹೇಳಲು ಬಯಸುತ್ತೇನೆ. ಕೆನ್ಯಾದ ಒಬ್ಬ ಭಾರತೀಯ-ಆಫ್ರಿಕನ್ ವಲಸೆಗಾರನು ಲಂಡನ್ನಿನಲ್ಲಿದ್ದನು. ಇದು ಬಹಳ ಸಮಯದ ಹಿಂದೆ ನಾನು ಅಲ್ಲಿಗೆ ಹೋಗಿದ್ದಾಗ. ಈ ಸಂಭಾವಿತನು ನನ್ನ ಬಳಿಗೆ ಬಂದು ಹೇಳಿದನು, "ಗುರುದೇವ, ನಾನು ಒಂದು ಬಿ.ಎಮ್.ಡಬ್ಲ್ಯೂ. ಕಾರನ್ನು ಸ್ವಂತದ್ದಾಗಿಸಲು ಬಯಸುತ್ತೇನೆ. ದಯವಿಟ್ಟು ನನಗೆ ಆಶೀರ್ವಾದ ಮಾಡಿ." ನಾನಂದೆ, "ಸರಿ, ದೇವರ ಇಚ್ಛೆಯಿದ್ದಲ್ಲಿ ನಿನಗದು ಸಿಗುತ್ತದೆ."
ಆರು ತಿಂಗಳುಗಳ ಬಳಿಕ ಅವನು ಬಂದು ನನ್ನನ್ನು ಭೇಟಿಯಾದನು. ಅವನು ಸಂತೋಷವಾಗಿದ್ದನು ಮತ್ತು ಹೇಳಿದನು, "ಗುರುದೇವ, ನನಗದು ಸಿಕ್ಕಿತು (ಕಾರು). ಆದರೆ ಬರ್ಮಿಂಗ್ ಹ್ಯಾಮಿನ ರಸ್ತೆಗಳು ಎಷ್ಟು ಚಿಕ್ಕದಾಗಿವೆಯೆಂದರೆ, ಅದರ ಮೇಲೆ ಒಂದು ಗೀರಾಗದೆ ಅದನ್ನು ಅಲ್ಲಿ ಇಲ್ಲಿ ಪಾರ್ಕ್ ಮಾಡಲು ನನಗೆ ಬಹಳ ಅಸೌಕರ್ಯವಾಗುತ್ತಿದೆ. ಏನು ಮಾಡುವುದು?"
ನಿಮಗೆ ಗೊತ್ತಿದೆಯಾ, ಬರ್ಮಿಂಗ್ ಹ್ಯಾಮಿನಲ್ಲಿ ರಸ್ತೆಗಳು ಇಲ್ಲಿರುವುದಕ್ಕಿಂತಲೂ ಚಿಕ್ಕವು. ಕೆಲವು ತಿಂಗಳುಗಳ ಬಳಿಕ ಅವನಂದನು, "ಗುರುದೇವ, ಈ ಕಾರನ್ನು ಇಟ್ಟುಕೊಳ್ಳುವುದು ನನಗೆ ಒಂದು ಕಷ್ಟದ ಕೆಲಸವಾಗುತ್ತಿದೆ. ಈಗ ನನ್ನ ಸ್ಥಿತಿ ದಯನೀಯವಾಗಿದೆ. ನಾನು ಈ ಕಾರನ್ನು ಮಾರಲು ಬಯಸುತ್ತೇನೆ, ಆದರೆ ಅದನ್ನು ಕೊಂಡುಕೊಳ್ಳುವವರು ಯಾರೂ ಇಲ್ಲ." ನಿನ್ನಲ್ಲಿ ಅದು ಇರಲಿಲ್ಲ ಮತ್ತು ನೀನು ದುಃಖಿತನಾಗಿದ್ದೆ. ಈಗ ನಿನ್ನಲ್ಲಿ ಅದು ಇದೆ ಮತ್ತು ನೀನು ದುಃಖಿತನಾಗಿರುವೆ.
ನಾವು ಜೀವನದ ಕಡೆಗೆ ನೋಡುವ ರೀತಿಯಲ್ಲಿ ಏನೋ ಗಂಭೀರವಾದ ತಪ್ಪಾಗುತ್ತಿದೆ. ಇಲ್ಲಿಯೇ ನಮಗೆ ಆ ಜ್ಞಾನವಿರಬೇಕಾದುದು; ಅದನ್ನು ತಿರುಗಿಸಲು ಮತ್ತು ಸಂತೋಷವು, ನಮ್ಮಲ್ಲೇನಿದೆ ಅಥವಾ ನಮ್ಮಲ್ಲೇನಿಲ್ಲವೆಂಬುದರೊಂದಿಗೆ ಸಂಬಂಧ ಹೊಂದಿಲ್ಲ ಎಂದು ನೋಡಲು.  ಅದು ಕೇವಲ ನಮ್ಮ ಮನಃಸ್ಥಿತಿ.
ನಿಮಗೆ ಗೊತ್ತಿದೆಯಾ, ಯುರೋಪಿನ ೩೦% ಖಿನ್ನತೆಗೊಳಗಾಗಿದೆ. ಈ ಸಂಖ್ಯೆಯು ಕಳೆದ ದಶಕದ ಗಣತಿಯ ಪ್ರಕಾರ, ಈಗ ಇದು ಇನ್ನೂ ಹೆಚ್ಚಿದೆ. ಭೂತಾನಿನಂತಹ ಚಿಕ್ಕ ದೇಶವು ತನ್ನ ಸಂತೋಷಕ್ಕಾಗಿ ಗುರುತಿಸಲ್ಪಟ್ಟಿದೆ. ಬಾಂಗ್ಲಾದೇಶದಲ್ಲಿ ಕೂಡಾ ಹೆಚ್ಚು ಸಂತೋಷದಲ್ಲಿರುವ ಜನರಿದ್ದಾರೆ. ದಕ್ಷಿಣ  ಆಫ್ರಿಕಾವು ಈ ಪಟ್ಟಿಯಲ್ಲಿ ಎಲ್ಲಿ ಬರುವುದೆಂಬುದು ನನಗೆ ತಿಳಿಯದು, ಆದರೆ ಇವತ್ತು ಇಲ್ಲಿರುವ ನೀವೆಲ್ಲರೂ, ಸಂತೋಷವಾಗಿರುವ ಹಾಗೂ ಸಂತೋಷವನ್ನು ಹರಡುವ ಸಂಕಲ್ಪವನ್ನು ತೆಗೆದುಕೊಳ್ಳುವಿರೆಂಬ ಭರವಸೆ ನನಗಿದೆ.
ಇದೊಂದು ಒಳ್ಳೆಯ ಅಭಿಪ್ರಾಯವೇ? (ಸಭಿಕರು ಒಪ್ಪಿಗೆಯಿಂದ ತಲೆಯಲ್ಲಾಡಿಸುತ್ತಾ, "ಹೌದು")
ಒಂದು ಹಿಂಸಾರಹಿತ ಸಮಾಜ, ರೋಗರಹಿತ ಶರೀರ, ಒತ್ತಡರಹಿತ ಮನಸ್ಸು, ತಡೆರಹಿತ ಬುದ್ಧಿ, ಆಘಾತರಹಿತ ನೆನಪು ಮತ್ತು ಒಂದು ದುಃಖರಹಿತ ಆತ್ಮ, ಇವುಗಳು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕು.
(ಗುರೂಜಿಯವರು ಒಮ್ಮೆ ಹೊರಗಡೆ ನೋಡುತ್ತಾರೆ ಮತ್ತು ಹೊರಗಿನಿಂದ ಬರುವ ಜೋರಾದ ಸಂಗೀತವನ್ನು ಕೇಳುತ್ತಾರೆ)
ವಿಕರ್ಷಣೆಗಳು ಇರುವುದು, ನೀವು ಜ್ಞಾನವನ್ನು ಹಿಡಿಯಲು ಎಷ್ಟು ಉತ್ಸುಕರಾಗಿರುವಿರಿ ಎಂಬುದನ್ನು ನೋಡಲು. ಸಂಸ್ಕೃತದಲ್ಲಿ ಒಂದು ಮಾತಿದೆ, ’ಶ್ರೇಯಂಸಿ ಬಹು ವಿಘ್ನಾನಿ’, ಅಂದರೆ, ಏನಾದರೂ ಬಹಳ ಅಮೂಲ್ಯವಾದುದು ಇದ್ದರೆ ಆಗ ಅಲ್ಲಿ ಹಲವಾರು ವಿಘ್ನಗಳು ಅಥವಾ ವಿಕರ್ಷಣೆಗಳು ಅದರೊಂದಿಗೆ ಬರುತ್ತವೆ (ಉದ್ಧವ ಗೀತೆಯಿಂದ. ಈ ಉಕ್ತಿಯು ಕೃಷ್ಣ ಪರಮಾತ್ಮನು ತನ್ನ ಭಕ್ತನಾದ ಉದ್ಧವನಿಗೆ ನೀಡಿದ ಪ್ರವಚನದ ಭಾಗವಾಗಿದೆ). ಯಾವುದಕ್ಕಾದರೂ ಬಹಳಷ್ಟು ವಿಘ್ನಗಳು ಬಂದರೆ, ಆಗ ಅದು ಬಹಳಷ್ಟು ಅಮೂಲ್ಯವಾದುದಾಗಿರಬೇಕು.
ನೀವು ಏನಾದರೂ ತಪ್ಪನ್ನು ಮಾಡಲು ಬಯಸಿದರೆ, ಅದಕ್ಕೆ ಯಾವುದೇ ವಿಘ್ನಗಳು ಬರುವುದಿಲ್ಲ. ಆದರೆ ನೀವು ಏನಾದರೂ ಒಳ್ಳೆಯದನ್ನು ಮಾಡಲು ಬಯಸಿದರೆ ಅಥವಾ ಏನಾದರೂ ಅಮೂಲ್ಯವಾದುದನ್ನು ಕೈಗೆತ್ತಿಕೊಳ್ಳಲು ಬಯಸಿದರೆ, ಹಲವಾರು ವಿಘ್ನಗಳು ಎದುರಾಗಬಹುದು.
ಈ ಪ್ರಪಂಚವು ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಇದನ್ನೇ ಇವತ್ತಿನ ವಿಜ್ಞಾನಿಗಳು ಹೇಳಿರುವುದು ಮತ್ತು ಇದನ್ನೇ ಪ್ರಾಚೀನ ಕಾಲದಲ್ಲಿ ಋಷಿಗಳು ಕೂಡಾ ಹೇಳಿರುವುದು. ಪಂಚಭೂತಗಳು - ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಈಥರ್. ಅದಕ್ಕೇ ಅದು ಸಂಸ್ಕೃತದಲ್ಲಿ ಪ್ರಪಂಚ ಎಂದು ಕರೆಯಲ್ಪಟ್ಟಿರುವುದು. ಪಾಂಚ್ ಎಂದರೆ ಐದು, ಮತ್ತು ಪ್ರಪಂಚ ಎಂದರೆ ಪಂಚಭೂತಗಳ ಒಂದು ನಿರ್ದಿಷ್ಟವಾದ ಸಂಯೋಗ. ಇದರಿಂದ ಈ ವಿಶ್ವವು ಮಾಡಲ್ಪಟ್ಟಿದೆ.
ಅದುವೇ ನಮ್ಮ ಶರೀರಕ್ಕೂ ಅನ್ವಯಿಸುತ್ತದೆ. ನಮ್ಮ ಶರೀರದಲ್ಲಿ ೬೦% ಜಲ ಅಂಶವಿದೆ. ಶರೀರದಲ್ಲಿರುವ ಉಷ್ಣವು ಅಗ್ನಿ ಅಂಶವನ್ನು ಪ್ರತಿನಿಧೀಕರಿಸುತ್ತದೆ. ಭೌತಿಕ ಶರೀರವೇ ಪೃಥ್ವಿ ಅಂಶವನ್ನು ಸೂಚಿಸುತ್ತದೆ ಮತ್ತು ಖಾಲಿ ಜಾಗವು ಆಕಾಶ ತತ್ವವನ್ನು ಪ್ರತಿನಿಧೀಕರಿಸುತ್ತದೆ. ಹೀಗೆ ಈ ಪಂಚಭೂತಗಳು ನಮ್ಮ ಸಂಪೂರ್ಣ ಶರೀರವನ್ನು ಮತ್ತು ಈ ವಿಶ್ವದಲ್ಲಿರುವ ಎಲ್ಲವನ್ನೂ ಉಂಟುಮಾಡುತ್ತವೆ.
ನಾವೊಂದು ಚಿಕ್ಕ ಧ್ಯಾನ ಮಾಡೋಣ. ಧ್ಯಾನದ ಬಳಿಕ ನಾವೊಂದು ಚಿಕ್ಕ ಯಜ್ಞವನ್ನು ಮಾಡೋಣ. ಯಜ್ಞವೆಂದರೆ, ವಿಶ್ವದ ತತ್ವಗಳನ್ನು ಒಂದುಗೂಡಿಸುವುದು. ಈ ವಿಶ್ವದೊಳಕ್ಕೆ ಲಕ್ಷಗಟ್ಟಲೆ ಕಿರಣಗಳು ಬರುತ್ತವೆ. ಬ್ರಹ್ಮಾಂಡ ಮತ್ತು ಅಣುಗಳು  ಪರಸ್ಪರ ಸಂಬಂಧ ಹೊಂದಿವೆ. ಇಲ್ಲಿ ತನ್ನ ರೆಕ್ಕೆಗಳನ್ನು ಬಡಿಯುವ ಪ್ರತಿಯೊಂದು ಚಿಕ್ಕ ಚಿಟ್ಟೆಯೂ ಮೋಡಗಳ ಮೇಲೆ ಪ್ರಭಾವ ಬೀರುತ್ತದೆ. ನೀವಿದರ ಬಗ್ಗೆ ಕೇಳಿದ್ದೀರಾ? ಅಮೆಝೋನ್ ಕಾಡುಗಳಲ್ಲಿರುವ ಒಂದು ಚಿಟ್ಟೆಯು ಸಂಪೂರ್ಣ ಕಾಡಿನ ಮೇಲೆ ಮತ್ತು ಚೈನಾದಲ್ಲಿರುವ ಮೋಡಗಳ ಮೇಲೆ ಪ್ರಭಾವ ಬೀರಬಲ್ಲದು.
ಒಂದು ಮಂಗನು ಏನನ್ನಾದರೂ ಮಾಡಿದರೆ, ಅದು ಹಲವಾರು ಇತರ ಮಂಗಗಳ ಮೇಲೆ ಪ್ರಭಾವ ಬೀರುತ್ತದೆ. ಆಫ್ರಿಕಾದಲ್ಲಿ ನೀವು ಇದರ ಬಗ್ಗೆ ಕೇಳಿದ್ದೀರಾ? ಆಫ್ರಿಕಾದಲ್ಲಿ ನಾವದನ್ನು ’ಬಿಗ್ ಫೈವ್’ (ದೊಡ್ಡ ಐದು) ಎಂದು ಕರೆಯುತ್ತೇವೆ; ’ಬಿಗ್ ಫೈವ್’ನ ನಾಡು (ಆಫ್ರಿಕಾದಲ್ಲಿ ಬೇಟೆಯಲ್ಲಿ ಬಳಸಲ್ಪಡುವ ಒಂದು ಪದ. ಆಫ್ರಿಕಾದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಬೇಟೆಯಾಡಲು ಅತ್ಯಂತ ಹೆಚ್ಚು ಕಷ್ಟವಾಗಿರುವ ಐದು ಪ್ರಾಣಿಗಳು - ಸಿಂಹ, ಆಫ್ರಿಕಾದ ಆನೆ, ಕೇಪ್ ಬಫೆಲೋ, ಚಿರತೆ ಮತ್ತು ಖಡ್ಗಮೃಗ. ಇದನ್ನು ಆ ಪದವು ಸೂಚಿಸುತ್ತದೆ).
ಪ್ರತಿಯೊಂದು ಪ್ರಾಣಿಯು ತನ್ನೊಂದಿಗೆ ಒಂದು ನಿರ್ದಿಷ್ಟ ಕಂಪನವನ್ನು ತರುತ್ತದೆ; ಭೂಮಿಯ ಮೇಲೆ ಒಂದು ಕಾಸ್ಮಿಕ್ ವಿದ್ಯುತ್ಕಾಂತೀಯ ಕಂಪನವನ್ನು ತನ್ನೊಂದಿಗೆ ತರುತ್ತದೆ. ಅವುಗಳು ಇದನ್ನು ವಿಶ್ವದಿಂದ ಭೂಮಿಗೆ ಪ್ರವಹಿಸುವಂತೆ ಮಾಡುತ್ತವೆ. ಪ್ರತಿಯೊಂದು ಪ್ರಾಣಿಯೂ ಭೂಗ್ರಹಕ್ಕೆ ಒಂದು ನಿರ್ದಿಷ್ಟ ಕಂಪನವನ್ನು ತರುತ್ತದೆ. ಅದಕ್ಕಾಗಿಯೇ ಪ್ರತಿಯೊಂದು ಪ್ರಾಣಿಯೂ ಬಹಳ ಮುಖ್ಯವಾದುದು. ವೈದಿಕ ಕಾಲದ ಪ್ರಾಚೀನ ಋಷಿಗಳಿಗೆ ಇದರ ಬಗ್ಗೆ ತಿಳಿದಿತ್ತು. ಒಂದು ನಿರ್ದಿಷ್ಟ ಪಕ್ಷಿ, ಒಂದು ನಿರ್ದಿಷ್ಟ ರೀತಿಯ ಬೀಜ ಕೂಡಾ ಒಂದು ನಿರ್ದಿಷ್ಟ ಕಂಪನದೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ಎಲ್ಲವೂ ಒಂದರಿಂದ ಇನ್ನೊಂದಕ್ಕೆ ಸಂಬಂಧ ಹೊಂದಿದೆ. ನಮ್ಮ ಶರೀರದಲ್ಲಿರುವಂತೆ, ನಾವು ಒಂದು ಕೋಶದಿಂದ ಹುಟ್ಟಿದ್ದರೂ, ಆ ಕೋಶದಲ್ಲಿ ೩೩ ವಿವಿಧ ವರ್ಣತಂತುಗಳಿವೆ ಮತ್ತು ಕೋಶದ ಡಿ.ಎನ್.ಎ ಯಲ್ಲಿರುವ ಆ ವಿವಿಧ ವರ್ಣತಂತುಗಳು, ನಮ್ಮ ಶರೀರದ ವಿವಿಧ ಭಾಗಗಳನ್ನು ರೂಪಿಸಲು ಕಾರಣವಾಗಿವೆ.
ಈ ವಿಶ್ವದಲ್ಲಿ ಅದರ ವಿವಿಧ ಭಾಗಗಳಿಂದ ಬರುವ ಹಲವಾರು ವಿವಿಧ ರೀತಿಯ ಕಂಪನಗಳಿವೆ.
ಆದುದರಿಂದ ಬ್ರಹ್ಮಾಂಡ ಮತ್ತು ಅಣುರೂಪಗಳು ಒಂದು ಬಹಳ ಅನನ್ಯವಾದ ರೀತಿಯಲ್ಲಿ ಒಂದುಗೂಡಿದೆ. ಅದನ್ನೇ ಪ್ರಾಚೀನ ಜನರು ಹೇಳಿದುದು. ಈಥರಿನಿಂದ ವಾಯುವಿಗೆ, ವಾಯುವಿನಿಂದ ಬೆಂಕಿಗೆ, ಬೆಂಕಿಯಿಂದ ನೀರಿಗೆ ಮತ್ತು ನಂತರ ಪೃಥ್ವಿ ಅಂಶಕ್ಕೆ ಹೋಗಿ ಸೃಷ್ಟಿಯು ಉಂಟಾಯಿತು.
ಆದುದರಿಂದ ಅವರು ಯಜ್ಞಗಳನ್ನು ಯೋಜಿಸಿದರು (ಈ ಪ್ರಕ್ರಿಯೆಯನ್ನು ವಿರುದ್ಧ ದಿಕ್ಕಿನಲ್ಲಿ ನಕಲು ಮಾಡಲು ಮತ್ತು ಅದನ್ನು ಪ್ರತಿನಿಧೀಕರಿಸಲು - ಪವಿತ್ರ ಮೂಲಿಕೆಗಳನ್ನು ಅರ್ಪಿಸುವುದರ ಮೂಲಕ (ಪೃಥ್ವಿ ಅಂಶ), ತುಪ್ಪವನ್ನು (ಜಲ ಅಂಶ)  ಅಗ್ನಿಗೆ ಅರ್ಪಿಸುವುದರ ಮೂಲಕ (ವಾಯು ಅಂಶದ ಉಪಸ್ಥಿತಿಯೊಂದಿಗೆ ಅಗ್ನಿ ಅಂಶ) ಇಲ್ಲಿಂದ ಕಂಪನಗಳು ಆಕಾಶಕ್ಕೆ (ಆಕಾಶ ಅಂಶ) ರವಾನಿಸಲ್ಪಡುತ್ತವೆ).
ಯಜ್ಞಗಳು ಶಾಂತಿಯನ್ನು ತರಲಿಕ್ಕಾಗಿ ಯೋಜಿಸಲ್ಪಟ್ಟಿವೆ.
ಒಂದು ಯಜ್ಞದ ಉದ್ದೇಶವೇನು? ಮೊದಲನೆಯದ್ದು ಸ್ವಸ್ತಿ - ಒಳ್ಳೆಯ ಆರೋಗ್ಯ; ನಂತರ ಸಮೃದ್ಧಿ, ಮನಃಶಾಂತಿ, ಸಂತೋಷ, ಎಲ್ಲರೊಂದಿಗೂ ಒಂದು ಒಗ್ಗಟ್ಟಿನ ಭಾವನೆ ಮತ್ತು ವಾತಾವರಣದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುವುದು. ನೀವು ನಕಾರಾತ್ಮಕವಾಗಿರುವ ಪ್ರತಿಯೊಂದು ಸಮಯದಲ್ಲೂ ನೀವು ಕೋಪದ, ಮಾತ್ಸರ್ಯದ, ಲೋಭದ, ನಿರಾಶೆಯ ಮತ್ತು ದ್ವೇಷದ ಆ ನಕಾರಾತ್ಮಕ ಕಂಪನಗಳನ್ನು ಹೊರಸೂಸುತ್ತೀರಿ. ಯಜ್ಞಗಳಿರುವುದು ಅವುಗಳನ್ನೆಲ್ಲಾ ತಟಸ್ಥಗೊಳಿಸುವುದಕ್ಕಾಗಿ ಹಾಗೂ ತೊಡೆದುಹಾಕುವುದಕ್ಕಾಗಿ. ಅದಕ್ಕಾಗಿಯೇ ಈ ಸಲ, ಇದನ್ನು ದಕ್ಷಿಣ ಆಫ್ರಿಕಾಕ್ಕೂ ಕೂಡಾ ತೆಗೆದುಕೊಂಡುಹೋಗಬೇಕೆಂದು ನಾನು ಯೋಚಿಸಿದೆ.
ಇತ್ತೀಚೆಗೆ ಆಫ್ರಿಕಾದಲ್ಲಿ ನಡೆದ, ಹಲವಾರು ಕಿರಿಯರು ನಿಧನ ಹೊಂದಿದ ದೌರ್ಭಾಗ್ಯಕರ ಘಟನೆಯ ಬಗ್ಗೆ ನಾನು ಕೇಳಿದೆ.
ಆದುದರಿಂದ, ಎಲ್ಲಾ ಜನತೆಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲು, ಸಾವಿರಾರು ವರ್ಷಗಳಷ್ಟು ಹಿಂದಿನ ಪ್ರಾಚೀನ ಕಾಲದಲ್ಲಿ ಮಾಡುತ್ತಿದ್ದಂತೆ ವೈದಿಕ ಮಂತ್ರೋಚ್ಛಾರಣೆ ಮತ್ತು ನಿರ್ದಿಷ್ಟ ಮೂಲಿಕೆಗಳನ್ನು ಅರ್ಪಿಸುವುದರ ಮೂಲಕ ನಾವೊಂದು ಚಿಕ್ಕ ಯಜ್ಞವನ್ನು ಮಾಡೋಣ. ಆದುದರಿಂದ ನೀವು ಅದಕ್ಕೆ ಕೂಡಾ ಸಾಕ್ಷಿಯಾಗಲಿರುವಿರಿ. ಅದು, ನಾವು ಒಬ್ಬ ಸರ್ವಶಕ್ತನಲ್ಲಿ ನಮಗೆ ಶಾಂತಿ, ಸಮೃದ್ಧಿ, ಸಂತೋಷ, ತೃಪ್ತಿ, ಒಗ್ಗಟ್ಟಿನ ಒಂದು ಭಾವನೆ, ಅತ್ಮೀಯತೆಯ ಭಾವನೆ ಮತ್ತು ಪರಸ್ಪರರ ಬಗ್ಗೆ ಕಾಳಜಿಯನ್ನು ನೀಡಲು ಪ್ರಾರ್ಥಿಸಿಕೊಂಡು ಮಾಡುವ ಒಂದು ಚಿಕ್ಕ ಪೂಜೆಯಂತೆ.
ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ಆ ಆಂತರಿಕ ತೃಪ್ತಿ ಬೇಕು. ನಿಮಗೆ ಗೊತ್ತಿದೆಯಾ, ನಮ್ಮಲ್ಲಿ ಆಂತರಿಕ ತೃಪ್ತಿಯಿದ್ದರೆ, ನಮಗೆ ಇತರರನ್ನು ಆಶೀರ್ವದಿಸುವ ಅನನ್ಯವಾದ ಸಾಮರ್ಥ್ಯವು ಲಭಿಸುತ್ತದೆ. ನಮಗೆ ನಮ್ಮ ಸ್ವಂತ ಬಯಕೆಗಳನ್ನು ಈಡೇರಿಸಲು ಸಾಧ್ಯವಾಗುವುದು ಮಾತ್ರವಲ್ಲ, ಇತರರ ಇಚ್ಛೆಗಳನ್ನು ಕೂಡಾ ಈಡೇರಿಸಲು ನಮಗೆ ಸಾಧ್ಯವಾಗುತ್ತದೆ. ತೃಪ್ತಿಯ ಅವಸ್ಥೆಯಲ್ಲಿದ್ದರೆ, ಮಾನವ ಚೈತನ್ಯವು ಆ ಉಡುಗೊರೆಯನ್ನು ಪಡೆದುಕೊಳ್ಳಬಹುದು.
ಆದುದರಿಂದ, ನಾವೊಂದು ಚಿಕ್ಕ ಯಜ್ಞವನ್ನು ಮಾಡೋಣ. ಅದರಲ್ಲಿ ಅವರು ೧೦,೦೦೦ ವರ್ಷಗಳಷ್ಟು ಹಳೆಯದಾದ ಪ್ರಾಚೀನ ಮಂತ್ರಗಳನ್ನು ಉಚ್ಛರಿಸುವರು. ಮಂತ್ರೋಚ್ಛಾರಣೆಯ ಸಂದರ್ಭದಲ್ಲಿ ನಾವು ಕೇವಲ ನಮ್ಮ ಕಣ್ಣುಗಳನ್ನು ಮುಚ್ಚುತ್ತೇವೆ, ಮಂತ್ರಗಳನ್ನು ಕೇಳುತ್ತಾ ಅದರಲ್ಲಿ ಮೀಯುತ್ತೇವೆ.
(ಗುರೂಜಿಯವರು ಎಲ್ಲರಿಗೂ ಧ್ಯಾನ ಮಾಡಿಸುತ್ತಾರೆ)
ಪ್ರಶ್ನೆ: ಜೈ ಗುರುದೇವ್! ಜೀವಮಾನದಲ್ಲಿ ಒಮ್ಮೆ ಬರುವ ಈ ಅವಕಾಶಕ್ಕಾಗಿ ನಿಮಗೆ ಧನ್ಯವಾದಗಳು. ದಯವಿಟ್ಟು ನನಗೆ ಹೇಳಿ, ನಾನು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿರುವೆನೇ  ಮತ್ತು ಇಲ್ಲಿ ನನ್ನ ಉದ್ದೇಶವನ್ನು ನೆರವೇರಿಸುತ್ತಿರುವೆನೇ ಎಂಬುದನ್ನು ನಾನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಒಳಗಿನಿಂದ ಬರುವ ದೃಢವಾದ ಅನಿಸಿಕೆ (ಗಟ್ ಫೀಲಿಂಗ್) ಎಂಬುದೊಂದಿದೆ. ನಿಮ್ಮೊಳಗೆ ಆಳದಲ್ಲಿರುವ ಏನೋ ಒಂದು ನಿಮಗೆ ಹೇಳುತ್ತದೆ, "ಇದು ಸರಿ", ಮತ್ತು ನೀವು ಅದನ್ನು ಆಯ್ಕೆ ಮಾಡಿಕೊಂಡಾಗ, ನಿಮಗೆ ಅದರ ಬಗ್ಗೆ ಸಂತೋಷವಾಗುತ್ತದೆ.
ನಾನು ನಿಮಗೆ ಹೇಳುತ್ತೇನೆ, ಸಂಶಯಗಳು ಸಾಧಾರಣವಾಗಿ ನಿಮಗೆ ಬರುವುದು ನೀವು ಸರಿಯಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡಾಗ. ಸಂಶಯವು ಯಾವತ್ತೂ ಯಾವುದಾದರೂ ಸಕಾರಾತ್ಮಕ ವಿಷಯಗಳ ಬಗ್ಗೆ ಇರುವುದು. ನೀವಿದನ್ನು ಗಮನಿಸಿದ್ದೀರಾ? ನಾವು ಯಾವತ್ತೂ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ಸಂಶಯಿಸುತ್ತೇವೆ; ಒಬ್ಬ ವ್ಯಕ್ತಿಯ ಅಪ್ರಾಮಾಣಿಕತೆಯ ಬಗ್ಗೆ ನಾವು ಯಾವತ್ತೂ ಸಂಶಯಿಸುವುದಿಲ್ಲ.
ನಾವು ನಮ್ಮ ಪ್ರೀತಿಪಾತ್ರರಲ್ಲಿ ಕೇಳುತ್ತೇವೆ, "ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀಯಾ?"
ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿದರೆ ನೀವು ಕೇಳುತ್ತೀರಿ, "ನಿಜವಾಗಿ?"
ಆದರೆ ಯಾರಾದರೂ, "ನಾನು ನಿನ್ನಲ್ಲಿ ಕೋಪಗೊಂಡಿದ್ದೇನೆ" ಎಂದು ಹೇಳಿದರೆ ನೀವು, "ನಿಜವಾಗಿ?" ಎಂದು ಯಾವತ್ತೂ ಕೇಳುವುದಿಲ್ಲ.
ಅದೇ ರೀತಿಯಲ್ಲಿ, ನಾವು ಯಾವತ್ತೂ ನಮ್ಮ ಸಾಮರ್ಥ್ಯಗಳ ಬಗ್ಗೆ ಸಂಶಯಿಸುತ್ತೇವೆ, ಆದರೆ ನಾವು ನಮ್ಮ ಅಸಾಮರ್ಥ್ಯದ ಬಗ್ಗೆ ಯಾವತ್ತೂ ಸಂಶಯಿಸುವುದಿಲ್ಲ.
ಯಾರಾದರೂ ನಿಮ್ಮಲ್ಲಿ ನೀವು ಸಂತೋಷವಾಗಿರುವಿರೇ ಎಂದು ಕೇಳಿದಾಗ ನೀವು ಹೇಳುತ್ತೀರಿ, "ನನಗೆ ಖಚಿತವಿಲ್ಲ." ಆದರೆ ನೀವು ಖಿನ್ನತೆಯಲ್ಲಿದ್ದಾಗ ಹೀಗೆ ಯಾವತ್ತೂ ಹೇಳಲಿಲ್ಲ. ನೀವು ನಿಮ್ಮ ಖಿನ್ನತೆಯ ಬಗ್ಗೆ ಬಹಳ ಖಚಿತವಾಗಿರುತ್ತೀರಿ. ನೀವು ನಕಾರಾತ್ಮಕತೆಗಳ ಬಗ್ಗೆ ಬಹಳ ಖಚಿತವಾಗಿರುತ್ತೀರಿ, ಆದರೆ ನೀವು ಯಾವತ್ತೂ ಜೀವನದಲ್ಲಿನ ಸಕಾರಾತ್ಮಕ ವಿಷಯಗಳನ್ನು ಪ್ರಶ್ನಿಸುತ್ತೀರಿ. ಆದುದರಿಂದ, ಸಂಶಯವು, ಅಲ್ಲಿ ಏನೋ ಸ್ವಲ್ಪ ಒಳ್ಳೆಯದಿರಬೇಕು ಎಂಬುದನ್ನು ಕೂಡಾ ಸೂಚಿಸುತ್ತದೆ.
ಪ್ರಶ್ನೆ: ನಾವು ಈ ಜನ್ಮದಲ್ಲಿ ಮೋಕ್ಷವನ್ನು ಪಡೆಯುವುದು ಹೇಗೆ ಮತ್ತು ನಾವು ನಮ್ಮೊಂದಿಗೆ ಜೀವಿಸುವ ನಕಾರಾತ್ಮಕ ಜನರನ್ನು ದೂರ ಮಾಡುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನಾನು ಹೇಳಿದುದು ನಿಮ್ಮ ಸಮಸ್ಯೆಗಳನ್ನು ಇಲ್ಲಿ ಬಿಟ್ಟು ಹೋಗಲು, ಆದರೆ ನೀವು ನಿಮಗೆ ತೊಂದರೆ ನೀಡುವ ನಿಮ್ಮ ಕುಟುಂಬದ ಸದಸ್ಯರನ್ನು ಇಲ್ಲಿ ಬಿಟ್ಟು ಹೋಗಬೇಡಿ! (ನಗು)
ಒಮ್ಮೆ ಹಾಗಾಯಿತು, ನಾನು ಅದನ್ನೇ ಆಶ್ರಮದಲ್ಲಿ ಹೇಳಿದೆ, "ನಿಮ್ಮೆಲ್ಲಾ ಸಮಸ್ಯೆಗಳನ್ನು ಇಲ್ಲಿ ಬಿಟ್ಟು ಹೋಗಿ." ಒಬ್ಬಳು ಮಹಿಳೆ ಹೇಳಿದಳು, "ನನ್ನ ಅತ್ತೆಯು ನನ್ನ ಅತೀ ದೊಡ್ಡ ಸಮಸ್ಯೆ, ಆದುದರಿಂದ ನಾನು ಅವರನ್ನು ಇಲ್ಲಿ ಬಿಟ್ಟು ಹೋಗಬಹುದೇ?"
ನಾನಂದೆ, "ನಾನು ನಿನ್ನ ಅತ್ತೆಯನ್ನು ಕೇಳುತ್ತೇನೆ, ಅವಳು ನಿನ್ನ ಬಗ್ಗೆ ಅದನ್ನೇ ಹೇಳಬಹುದು."
ನೋಡಿ, ಜೀವನದಲ್ಲಿ ಸವಾಲುಗಳಿವೆ. ಸವಾಲುಗಳು ಬರುತ್ತವೆ, ವಿಭಿನ್ನ ಮನೋಭಾವವಿರುವ ಜನರು ಬರುತ್ತಾರೆ, ಆದರೆ ನೀವು ನಿಮ್ಮ ದೃಷ್ಟಿಯನ್ನು ವಿಸ್ತರಿಸಿ ನಿಮ್ಮ ಜೀವನವನ್ನು ಒಂದು ವಿಶಾಲವಾದ ದೃಷ್ಟಿಕೋನದಿಂದ ನೋಡಿದಾಗ, ಈಗ ನಿಮಗೆ ಬಹಳ ಮಹತ್ವದ್ದೆಂದು ಕಾಣಿಸುವ ಈ ಎಲ್ಲಾ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಹೋಗಲುಬಿಡುತ್ತೀರಿ. ನೀವು ನಿಮ್ಮ ದೃಷ್ಟಿಯನ್ನು ವಿಶಾಲವಾಗಿಸಬೇಕು.
ಕೆಲವು ಜನರು ನಕಾರಾತ್ಮಕವಾಗಿರುವುದು ನಿಮಗೆ ಕಂಡುಬಂದರೆ, ಅವರನ್ನು ದೂರದಲ್ಲಿಡಿ. ಇದು ಒಂದನೆಯದು.
ಎರಡನೆಯ ವಿಷಯವೆಂದರೆ, ಅವರು ಯಾವತ್ತಿಗೂ ಹಾಗಿರಲಾರರು ಎಂಬುದನ್ನು ತಿಳಿಯಿರಿ. ಸಮಯದೊಂದಿಗೆ ಅವರು ಬದಲಾಗುವರು.
ಮೂರನೆಯ ಆಯ್ಕೆಯೆಂದರೆ, "ಸರಿ, ಅವರು ಹಾಗಿರಲಿ. ಅವರು ನನ್ನೊಳಗಿನಿಂದ ಉತ್ತಮ ಕುಶಲತೆಗಳನ್ನು ಹೊರತರಲಿದ್ದಾರೆ" ಎಂದು ಯೋಚಿಸುವುದು. ಅವರು, ಉತ್ತಮ ಸಂಪರ್ಕದ ಕುಶಲತೆ, ನಿಮ್ಮ ನೆಲೆಯಲ್ಲಿ ಸಕಾರಾತ್ಮಕವಾಗಿರುವ ಕುಶಲತೆಗಳನ್ನು ಹೊರತರುತ್ತಾರೆ.
ಕೊನೆಯ ವಿಷಯವೆಂದರೆ, ಅದನ್ನು ದೇವರಿಗೆ ಬಿಡುವುದು. ಅದನ್ನು ಬಗೆಹರಿಸುವುದನ್ನು ದೇವರಿಗೆ ಬಿಡಿ. ಇದನ್ನು ನಾವು ಮಾಹಾತ್ಮಾ ಗಾಂಧೀಜಿಯವರ ಮೆಚ್ಚಿನ ಹಾಡಿನಲ್ಲಿ ಹಾಡುತ್ತೇವೆ, "ಈಶ್ವರ್ ಅಲ್ಲಾ ತೇರೋ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" - ಎಲ್ಲರ ಮನಸ್ಸು ಮತ್ತು ಬುದ್ಧಿಯು ಪವಿತ್ರವಾಗಿರಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗಲಿ .
ಇದುವೇ ಗಾಯತ್ರಿ ಮಂತ್ರದಲ್ಲಿ ಕೂಡಾ ಇರುವುದು, "ಧಿಯೋ ಯೋ ನಃ ಪ್ರಚೋದಯಾತ್" - ದೇವರು ನನ್ನ ಬುದ್ಧಿಯನ್ನು ಪ್ರೇರೇಪಿಸಲಿ, ನನ್ನ ಬುದ್ಧಿಯು ಸಣ್ಣದಾದ, ಮೂರ್ಖತನದ ಅಭಿಪ್ರಾಯಗಳು ಮತ್ತು ಯೋಚನೆಗಳೊಂದಿಗೆ ಬರದಿರಲಿ. ಈ ಬುದ್ಧಿಯು ದೇವರ, ಸರ್ವಶಕ್ತನ ಇಚ್ಛೆಯನ್ನು ಪ್ರತಿಬಿಂಬಿಸಲಿ.
ಗಾಯತ್ರಿ ಮಂತ್ರವು, ಮಾನವ ಸಮಾಜವು ಪಡೆದ ಅತ್ಯಂತ ಸುಂದರವಾದ ಮಂತ್ರಗಳಲ್ಲಿ ಒಂದು. ಅದು ಕೂಡಾ ಅದನ್ನೇ ಹೇಳುತ್ತದೆ: ದೇವರ ಇಚ್ಛೆಯು ನನ್ನ ಇಚ್ಛೆ ಮತ್ತು ಯೋಚನೆಗಳಲ್ಲಿ; ಬುದ್ಧಿಯಲ್ಲಿ ಪ್ರತಿಬಿಂಬಿಸಲಿ. ನನ್ನ ಬುದ್ಧಿಯು ದೇವರೊಂದಿಗೆ ಜೋಡಿಸಲ್ಪಟ್ಟಿರಲಿ.
ಪ್ರಶ್ನೆ: ನನಗೆ ಬಹಳ ಹತ್ತಿರವಿರುವ ವ್ಯಕ್ತಿಯೊಬ್ಬನು ನಿರಂತರವಾಗಿ ಸುಳ್ಳು ಹೇಳುತ್ತಾನೆ ಮತ್ತು ಮೋಸ ಮಾಡುತ್ತಾನೆ. ಅದು ಅವನ ಎರಡನೆಯ ಸ್ವಭಾವದಂತಿದೆ, ಮತ್ತು ಸುಳ್ಳುಗಳು ಒಂದು ನೇರವಾದ ಮುಖದಿಂದ ಹೇಳಲ್ಪಡುತ್ತದೆ. ಜನರು ಯಾಕೆ ಹೀಗೆ ಮಾಡುತ್ತಾರೆ ಮತ್ತು ಅವರಿಗೇನಾಗಬಹುದು? ದಯವಿಟ್ಟು ಸಹಾಯ ಮಾಡಿ, ನಾನು ನನ್ನ ಮನಸ್ಸಿಗೆ ವಿಶ್ರಾಂತಿ ನೀಡಲು ಬಯಸುತ್ತೇನೆ. 
ಶ್ರೀ ಶ್ರೀ ರವಿಶಂಕರ್: ದೇವರು ವಿನೋದಪ್ರಿಯ ಎಂಬುದನ್ನು ನೀನು ನೆನಪಿಸಿಕೊಳ್ಳಬೇಕು. ಎಲ್ಲರೂ ನಿನ್ನಂತೆ ಇರುತ್ತಿದ್ದರೆ, ನೀವೆಲ್ಲರೂ ಫೋರ್ಡ್ ಕಂಪೆನಿಯಂತಿರುವಿರಿ. ಪ್ರಪಂಚವು, ಒಂದೇ ಒಂದು ರೀತಿಯ ಕಾರುಗಳನ್ನು ಉತ್ಪಾದಿಸುವ ಒಂದು ಫೋರ್ಡ್ ಕಂಪೆನಿಯಲ್ಲ. ಅವರು ಕೂಡಾ ಪ್ರತಿವರ್ಷವೂ ಮಾದರಿಯನ್ನು ಬದಲಾಯಿಸುತ್ತಾರೆ. ದೇವರು ವಿನೋದವನ್ನು ಪ್ರೀತಿಸುತ್ತಾರೆ ಮತ್ತು ಅವನು ಎಲ್ಲಾ ರೀತಿಯ ಜನರನ್ನು ನಿಮ್ಮ ಸುತ್ತಲೂ ಹಾಕುತ್ತಾನೆ.
ಕೇವಲ ನಿಮ್ಮೊಳಗೆ ನೋಡಿ, ನಿಮ್ಮಲ್ಲಿ ಎಷ್ಟು ನಕಾರಾತ್ಮಕ ಅಂಶಗಳಿವೆ ಮತ್ತು ನಿಮ್ಮಲ್ಲಿ ಎಷ್ಟು ಸಕಾರಾತ್ಮಕ ಅಂಶಗಳಿವೆ? ನೀವು ಹೇಗೆ ಸುಧಾರಿಸಬಹುದು, ಇದನ್ನು ನೀವು ಯೋಚಿಸಬೇಕಾಗಿರುವುದು ಮತ್ತು ನೀವು ಮಾಡಬಹುದಾದುದು. ಇತರರು ಹೇಗೆ ಸುಧಾರಿಸಬೇಕು - ಸದ್ಯಕ್ಕೆ ಅದನ್ನು ಅವರಿಗೆ ಬಿಡಿ. ನಿಮಗೆ ಸಾಧ್ಯವಿದ್ದರೆ, ಅವರಿಗೆ ಶಿಕ್ಷಣ ನೀಡಿ, ಆದರೆ ಅದನ್ನು ಸಹಾನುಭೂತಿಯೊಂದಿಗೆ ಮಾಡಿ. ಅಥವಾ ಅವರನ್ನು ಹತ್ತಿರದಲ್ಲಿರುವ ಜೀವನ ಕಲೆಯ ಶಿಕ್ಷಕರೊಬ್ಬರ ಬಳಿಗೆ ಕರೆದುಕೊಂಡುಹೋಗಿ. ಅವರು ಬದಲಾಗಲು ಶಿಕ್ಷಕರು ಸಹಾಯ ಮಾಡಬಹುದು. ನೀನು ಬಹಳಷ್ಟು ಸಹಾನುಭೂತಿಯುಳ್ಳವನಾಗಿದ್ದರೆ, ಅವನ ಜೀವನವು ಉತ್ತಮವಾಗಲೆಂದು ಮತ್ತು ಅವನು ಹೆಚ್ಚು ಪ್ರಾಮಾಣಿಕನಾಗಲೆಂದು ಪ್ರಾರ್ಥಿಸಿ. ಆದರೆ ನಾನು ಮೊದಲೇ ಹೇಳಿದಂತೆ, ಈ ಭೂಮಿಯಲ್ಲಿ ಎಲ್ಲಾ ನಮೂನೆಗಳ ಅಗತ್ಯವಿದೆ. ಅವರು ಪ್ರಪಂಚವನ್ನು ಹೆಚ್ಚು ವರ್ಣರಂಜಿತವನ್ನಾಗಿಸುತ್ತಾರೆ. ತಿಳಿಯಿತಾ? ಅವರು ನಿಮ್ಮಲ್ಲಿ ಕೆಲವು ನಿರ್ದಿಷ್ಟ ಗುಂಡಿಗಳನ್ನು ಒತ್ತುತ್ತಾರೆ ಮತ್ತು ನಿಮ್ಮಲ್ಲಿ ನಿರ್ದಿಷ್ಟ ಭಾವನೆಗಳನ್ನು ಏಳಿಸುತ್ತಾರೆ  ಹಾಗೂ ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದನ್ನು ನೋಡುತ್ತಾರೆ.
ಪ್ರಶ್ನೆ: ಜೈ ಗುರುದೇವ್! ನೀವು ಯುವಜನತೆ ಹಾಗೂ ಆಧ್ಯಾತ್ಮದ ಬಗ್ಗೆ ಮಾತನಾಡಬೇಕೆಂದು ನಾನು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್: ನಾವು ಪದಾರ್ಥ ಮತ್ತು ಚೈತನ್ಯ ಎರಡರಿಂದಲೂ ಮಾಡಲ್ಪಟ್ಟಿದ್ದೇವೆ. ನಮ್ಮ ಶರೀರವು ಕಾರ್ಬೋಹೈಡ್ರೇಟ್, ಪ್ರೊಟೀನ್, ಅಮಿನೋ ಆಸಿಡ್, ವಿಟಮಿನ್ ಮೊದಲಾದವುಗಳಿಂದ ಮಾಡಲ್ಪಟ್ಟಿದೆ ಮತ್ತು ನಮ್ಮ ಆತ್ಮವು ಉದಾರತೆ, ಪ್ರೀತಿ, ಸಹಾನುಭೂತಿ, ಶಕ್ತಿ, ವಿಸ್ತರಿಸುವಿಕೆ, ಸಮಗ್ರತೆ, ಪ್ರಾಮಾಣಿಕತೆ, ಸತ್ಯತೆ, ಬುದ್ಧಿ, ಸೂಕ್ಷ್ಮತೆ; ಈ ಎಲ್ಲಾ ಗುಣಗಳಿಂದ ಮಾಡಲ್ಪಟ್ಟಿದೆ.
ಈ ಆಂತರಿಕ ಗುಣಗಳನ್ನು (ಸೌಂದರ್ಯ, ಪ್ರೀತಿ, ಮೊದಲಾದವು) ಪಾಲನೆ ಮಾಡುವ ಯಾವುದೇ ಕ್ರಿಯೆಯು ಆಧ್ಯಾತ್ಮವಾಗಿದೆ. ಧ್ಯಾನ, ಹಾಡುವಿಕೆ, ಮಂತ್ರೋಚ್ಛಾರಣೆ, ಸೇವೆ ಮಾಡುವುದು, ಮೊದಲಾದವುಗಳೆಲ್ಲಾ ಆಧ್ಯಾತ್ಮದ ಭಾಗವಾಗಿದೆ. ಮತ್ತು ನಿಮ್ಮಲ್ಲಿ ಯೌವನವನ್ನು ಉಳಿಸುವುದು ಈ ಆಧ್ಯಾತ್ಮವಾಗಿದೆ. ಅದು ನಿಮಗೆ ಶಕ್ತಿಯನ್ನು ತರುತ್ತದೆ.
ನಿಮಗೆ ಗೊತ್ತಿದೆಯಾ, ಈಗ ನಾನು ನೇರವಾಗಿ ಭಾರತದಿಂದ, ೧೫ ಗಂಟೆಗಳ ವಿಮಾನ ಪ್ರಯಾಣದಿಂದ ಬಂದಿದ್ದೇನೆ. ನಾನು ಈಗಷ್ಟೇ ತಲುಪಿದೆ, ನನ್ನ ಬಟ್ಟೆಗಳನ್ನು ಬದಲಾಯಿಸಿದೆ ಮತ್ತು ಅರ್ಧ ಗಂಟೆಯಲ್ಲಿ ನಾನು ಇಲ್ಲಿಗೆ ಧಾವಿಸಬೇಕಾಯಿತು. ನನಗೆ ಜೆಟ್-ಲ್ಯಾಗ್ ಆದಂತೆ ಮತ್ತು ಆಯಾಸವಾದಂತೆ ಕಾಣಿಸುತ್ತಿದೆಯಾ?
(ಸಭಿಕರು ’ಇಲ್ಲ’ ಎಂದು ಹೇಳುತ್ತಾ ಪ್ರತಿಕ್ರಿಯಿಸುತ್ತಾರೆ)
ಒಬ್ಬರು ನನ್ನಲ್ಲಿ ಕೇಳಿದರು, "ಗುರೂಜಿ, ನಾವು ಕೇಪ್ ಟೌನಿಗೆ ವಿಮಾನದಲ್ಲಿ ಪ್ರಯಾಣಿಸಿದರೆ ನಮಗೆ ಬಹಳ ಜೆಟ್-ಲ್ಯಾಗ್ ಆಗುತ್ತದೆ. ನಿಮಗೆ ಜೆಟ್-ಲ್ಯಾಗ್ ಆಗುವುದಿಲ್ಲವೇ?"
ನಾನಂದೆ, "ಮನಸ್ಸು ತಾಜಾವಾಗಿರುವಾಗ ಮತ್ತು ಮನಸ್ಸು ಮೂಲಸ್ಥಾನದೊಂದಿಗೆ ಜೋಡಿರುವಾಗ, ಯಾವತ್ತೂ ತಾಜಾತನವಿರುತ್ತದೆ."
ಯೌವನವೆಂದರೆ ಮೂಲಸ್ಥಾನದೊಂದಿಗಿರುವ ಆ ಜೋಡಣೆ ಮತ್ತು ಯೌವನವೆಂದರೆ ಎಲ್ಲರೊಂದಿಗೂ ಜೋಡಿಕೊಳ್ಳುವ ಸಾಮರ್ಥ್ಯ ಹಾಗೂ ಕೇವಲ ಆಧ್ಯಾತ್ಮ ಮಾತ್ರ ಯುವಜನರಲ್ಲಿ ಇದನ್ನು ತರಬಲ್ಲದು.
ಪ್ರಶ್ನೆ: ಪ್ರೀತಿಪಾತ್ರರೊಬ್ಬರು ನಿಧನ ಹೊಂದಿದರೆ, ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಾಧಾರಣವಾಗಿ  ಹೇಳುವ ಮಾತೆಂದರೆ, "ಅವನು/ಅವಳು ಯಾವತ್ತೂ ನಿನ್ನೊಂದಿಗೆ ಇರುತ್ತಾನೆ/ಇರುತ್ತಾಳೆ." ಅದು ನಿಜವಾಗಿಯೂ ಸತ್ಯವೇ? ನಿಧನ ಹೊಂದಿದ ಪ್ರೀತಿಪಾತ್ರರೊಬ್ಬರು ನಿಜವಾಗಿಯೂ ನಿಮ್ಮೊಂದಿಗಿರುತ್ತಾರಾ ಮತ್ತು ಜೀವನದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರಾ?
ಶ್ರೀ ಶ್ರೀ ರವಿಶಂಕರ್: ನೀನು ಯಾಕೆ ಅವರಿಗೆ ಸ್ವಲ್ಪ ವಿರಾಮದ ಸಮಯವನ್ನು ನೀಡಬಾರದು? ಅವರಿಗೆ ಈ ಪ್ರಪಂಚದಲ್ಲಿ ಸಾಕಾಗುವಷ್ಟು ಆಗಿದೆ ಮತ್ತು ಅವರು ಹೋಗಿದ್ದಾರೆ. ಅವರು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಲಿ ಮತ್ತು ಅವರು ಮಾಡಲು ಬಯಸುವ ಬೇರೆ ಏನನ್ನಾದರೂ ಮಾಡಲಿ. ಅವರು ಸ್ವಲ್ಪ ಮೋಜು ಮಾಡಲಿ. ಅವರು  ಯಾಕೆ ನಿನಗೆ ಎಲ್ಲಾ ಸಮಯದಲ್ಲೂ ಮಾರ್ಗದರ್ಶನ ಮಾಡುತ್ತಿರಬೇಕು? (ನಗು) ಮಾರ್ಗದರ್ಶನ ಮಾಡಲು ಏನಿದೆ? ಇದು ಒಂದು ರೈಲಿನಲ್ಲಿ ಕುಳಿತುಕೊಳ್ಳುವಂತೆ. ರೈಲು ನಿಲ್ಲುವಾಗ ನೀವು ಕೆಳಗಿಳಿಯಲಿದ್ದೀರಿ. ಗುರಿಯು ನಿಶ್ಚಿತವಾಗಿದೆ. ಎಲ್ಲರೂ ಒಂದು ದಿನ ಸಾಯಲಿದ್ದಾರೆ. ನೀನು ನಿಧನ ಹೊಂದಿದಾಗ ನೀನು ಇನ್ನೊಂದು ಆಯಾಮವನ್ನು ಕೂಡಾ ನೋಡುವೆ. ಆದುದರಿಂದ ಚಿಂತಿಸಬೇಡ.
ನೀವು ಸಂತೋಷವಾಗಿ ಮತ್ತು ಶಾಂತವಾಗಿದ್ದರೆ, ನಿನ್ನ ಶಾಂತಿಯು ಈ ಪ್ರಪಂಚವನ್ನು ಮೀರಿ ಹೋಗುತ್ತದೆ ಮತ್ತು ಇನ್ನೊಂದು ತೀರವನ್ನು ಕೂಡಾ ತಲಪುತ್ತದೆ. ನೀವು ಪ್ರೀತಿ ಮತ್ತು ಭಕ್ತಿಯಿಂದ ತುಂಬಿದ್ದರೆ, ಅದರ ಒಂದು ಭಾಗವು, ಅದರ ಒಂದು ಕಿರಣವು ಅವರನ್ನು ಕೂಡಾ ತಲಪುತ್ತದೆ ಮತ್ತು ಅವರು ಸಂತೋಷಗೊಳ್ಳುತ್ತಾರೆ. ನೀವು ಏನಾದರೂ ಒಳ್ಳೆಯ ಸೇವೆಯನ್ನು ಮಾಡಿದಾಗ, ಆ ಸೇವೆಯು ಪುಣ್ಯವನ್ನು ತರುತ್ತದೆ ಮತ್ತು ಪುಣ್ಯವು ಕೂಡಾ ಇನ್ನೊಂದು ಬದಿಗೆ ಹೋದವರಿಗೆ ಸಹಾಯ ಮಾಡುತ್ತದೆ.
ಪ್ರಶ್ನೆ: ನೀವು ಮಹಾನ್! ಒಬ್ಬರು ತಡಮಾಡುವುದನ್ನು ನಿವಾರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಇದಕ್ಕೆ ಉತ್ತರವನ್ನು ನಾನು ಮುಂದಿನ ವರ್ಷ ಕೊಡುತ್ತೇನೆ (ನಗು).
ಸುಮ್ಮನೇ ಊಹಿಸಿಕೊಳ್ಳಿ, ನೀವು ದರ್ಜಿಯ ಬಳಿ, ದೀಪಾವಳಿಗೆ ಅಥವಾ ನಿಮ್ಮ ಮದುವೆಗಾಗಿರಬಹುದು, ಬಟ್ಟೆ ಹೊಲಿಯಲು ಕೊಟ್ಟಿದ್ದೀರಿ. ಈಗ ನೀವು ನಿಮ್ಮ ಮದುವೆಗೆ ಒಂದು ವಾರ ಮೊದಲು, ನಿಮ್ಮ ಬಟ್ಟೆ ಸಿದ್ಧವಿರುವುದೆಂಬ ಭರವಸೆಯೊಂದಿಗೆ ದರ್ಜಿಯ ಬಳಿ ಹೋಗುತ್ತೀರಿ, ಮತ್ತು ದರ್ಜಿಯು ತಡಮಾಡುತ್ತಾನೆ ಹಾಗೂ ನಿಮಗೆ ಹೇಳುತ್ತಾನೆ, "ನಾನು ಬಟ್ಟೆಯನ್ನು ಆರು ತಿಂಗಳುಗಳ ಬಳಿಕ ಕೊಡುತ್ತೇನೆ". ನಿಮಗೆ ಹೇಗನಿಸುತ್ತದೆ? ನಿಮ್ಮ ಮನಸ್ಸಿನ ಸ್ಥಿತಿ ಹೇಗಿರುತ್ತದೆ?
ನಿಮ್ಮ ಹಲ್ಲು ನೋಯುತ್ತಿದ್ದು ನಿಮಗೆ ಒಬ್ಬರು ವೈದ್ಯರ ಅಗತ್ಯವಿದೆಯೆಂದಿಟ್ಟುಕೊಳ್ಳೋಣ. ನಿಮ್ಮ ವೈದ್ಯರು ಹೇಳುತ್ತಾರೆ, "ಮೂರು ತಿಂಗಳುಗಳ ಬಳಿಕ ಬಾ ಮತ್ತು ಏನಾದರೂ ಮಾಡಲು ಸಾಧ್ಯವಿದೆಯೇ ಇಲ್ಲವೇ ಎಂಬುದನ್ನು ನಾನು ನೋಡುತ್ತೇನೆ." ನೀವೇನು ಮಾಡುವಿರಿ?
ನಿಮ್ಮ ವೈದ್ಯರು ತಡಮಾಡುವುದು ಅಥವಾ ನಿಮ್ಮ ದರ್ಜಿಯು ತಡಮಾಡುವುದನ್ನು ಮತ್ತು ನಿಮಗೆ ಆವಶ್ಯಕವಾಗಿರುವ ಸೇವೆಗಳಲ್ಲಿ ಯಾವುದೂ ತಡವಾಗುವುದನ್ನು ನೀವು ಬಯಸುವುದಿಲ್ಲ. ಅವರಲ್ಲಿ ಪ್ರತಿಯೊಬ್ಬರೂ ಕೂಡಲೇ ಬಂದು, ಗೊತ್ತುಪಡಿಸಿದ ಸಮಯದಲ್ಲಿ ಸೇವೆ ಸಲ್ಲಿಸಬೇಕೆಂದು ನೀವು ಬಯಸುತ್ತೀರಿ.
ನೀವು ಕೇಳುವ ಪ್ರಶ್ನೆಗಳಿಗೆ ಕೂಡಾ, ಸರಿಯಾದ ಉತ್ತರಗಳು ನಿಮಗೆ ಕೂಡಲೇ ಬೇಕು! ಸರಿಯಾ?! ಆದರೆ ನೀವು ತಡಮಾಡಲು ಬಯಸುತ್ತೀರಾ? ಬನ್ನಿ, ಎಚ್ಚೆತ್ತುಕೊಳ್ಳಿ! ಈಗಲೇ ಎಚ್ಚೆತ್ತುಕೊಳ್ಳಿ!