ಮಂಗಳವಾರ, ಆಗಸ್ಟ್ 28, 2012

ಸರ್ವರಿಗೂ ಅತ್ಯಗತ್ಯವಾದ ಶಕ್ತಿ ಚಕ್ರ ಸ೦ಧಾನ


ಅಮೃತಬಿ೦ದು’ ಸರಣಿಯ ಬರಹಗಳು

ಏಳನೆಯ ಕ೦ತು


ನಮ್ಮ ವಿಶ್ವ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೪/೦೪/೨೦೦೩ರ೦ದು ಪ್ರಕಟವಾಗಿತ್ತು)

ಮ್ಮ ತಲೆಯೇ ನಮ್ಮ ಪ್ರಪಂಚ.

ಈ ತಲೆಯೊಳಗೆ ನಾವು ಪ್ರಪಂಚ ಇಟ್ಟುಕೊಂಡಿದ್ದೀವಿ. ವಾಸ್ತವವಾಗಿ ಪ್ರಪಂಚದಲ್ಲಿ ಇದೆಯೋ ಇಲ್ಲವೋ, ನಾವು ತಲೆಯಲ್ಲಿ ಬೇಕಾದಷ್ಟು ಕಲ್ಪನೆ ಮಾಡಿಕೊಂಡುಬಿಡುತ್ತೀವಿ.
ಜೀವನದಲ್ಲಿರತಕ್ಕಂಥ ಶೇಕಡಾ ಎಪ್ಪತ್ತೈದರಷ್ಟು ಸಮಸ್ಯೆಗಳು ನಮ್ಮ ತಲೆಯಲ್ಲಿ ಮೂಡುವ ಕಲ್ಪನೆಯಿಂದಲೇ ಉಂಟಾಗಿರುವಂಥವುಗಳು.
ನಿಮಗೆ ಸುಖ ಸಿಕ್ಕಿಲ್ಲ ಪ್ರಪಂಚದಲ್ಲಿ, ಆನಂದ ಸಿಕ್ಕಿಲ್ಲ ಜೀವನದಲ್ಲಿ ಅಂದರೆ ಅದಕ್ಕೆ ನಿಮ್ಮ ಪ್ರಪಂಚವೇ ಕಾರಣ. ನೀವು ಆ ತರಹ ’ವಿಶ್ವ’ವನ್ನು ರಚನೆ ಮಾಡಿಕೊಂಡಿದ್ದೀರ.
’ವಿಶ್ವ’ ಸಹ ತುಂಬ ವಿಸ್ಮಯಕರವಾದ ಶಬ್ದ. ’ಶ್ವ’ ಎಂದರೆ ಏನು ಗೊತ್ತಾ? ನಿನ್ನೆ ಅಥವಾ ನಾಳೆ. ’ವಿಶ್ವ’ ಎಂದರೆ ವಿಶೇಷವಾಗಿ ನಿನ್ನೆಯನ್ನು ಅಥವಾ ನಾಳೆಯನ್ನು (ಭೂತ, ಭವಿಷ್ಯ) ನಾವು ಮನಸ್ಸಿನಲ್ಲಿ ರಚನೆ ಮಾಡಿಕೊಳ್ಳುವುದು.
ಅದು ಹಾಗಿತ್ತೋ ಇಲ್ಲವೋ ಬಿಡಿ, ನಮ್ಮ ಮನಸ್ಸಿನಲ್ಲಿ ಅದನ್ನು ದೊಡ್ಡದಾಗಿ ವಿಶೇಷವಾಗಿ ರಚನೆ ಮಾಡಿಕೊಂಡುಬಿಡ್ತೀವಿ.

ನಿನ್ನೆಯ ಬಗ್ಗೆ ಚಿಂತೆ, ನಾಳೆಯ ಬಗ್ಗೆ ಕಲ್ಪನೆ. ಅದಕ್ಕೇ ನಮ್ಮ ಜೀವನದಲ್ಲಿ ಉತ್ಸಾಹ ಇಲ್ಲ, ಆನಂದ ಇಲ್ಲ, ಬೇಸರಿಕೆ.
ಜೀವನದ ಲಕ್ಷಣ ಉತ್ಸಾಹ. ಆದರೆ ಜೀವನ ಯಾವ ಕಡೆ ಹರಿಯುತ್ತಾ ಇದೆ, ನೋಡಿ ಸ್ವಲ್ಪ ಗಮನಿಸಿ.
ನಿಮ್ಮ ಜೀವನದಲ್ಲಿ ದಿನದಿನಕ್ಕೆ ಉತ್ಸಾಹ ಹೆಚ್ಚಾಗುತ್ತಿದೆಯೋ ಅಥವಾ ದಿನದಿನಕ್ಕೆ ನೀವು ಉತ್ಸಾಹ ಕಳೆದುಕೊಳ್ಳುತ್ತಿದ್ದೀರೋ? ಏನು?
ಒಂದು ಚಿಕ್ಕ ಮಗು ನೋಡಿ. ಐದಾರು ವರ್ಷದ ಮಕ್ಕಳನ್ನು ನೋಡಿ... ಏನು ಉತ್ಸಾಹ! ಅವರ ಶರೀರದ ಕಣಕಣದಿಂದಲೂ ತುಂಬಿ ತುಳುಕುತ್ತಾ ಇರುತ್ತೆ.
ಅದೇ ಸ್ವಲ್ಪ ದೊಡ್ಡವರಾದವರನ್ನು ನೋಡಿ. ದೊಡ್ಡವರಾಗ್ತಾ ಆಗ್ತಾ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಿದೆಯೋ, ಕಡಿಮೆಯಾಗಿದೆಯೋ?

ಈ ಬಗ್ಗೆವಿಶ್ಲೇಷಣೆಹಾಗೂಪರಿಹಾರಮುಂಬರುವಸಂಚಿಕೆಗಳಲ್ಲಿ…

* * * * *

ಶಕ್ತಿ  ಚಕ್ರ - ೧

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೫/೦೪/೨೦೦೩ರ೦ದು ಪ್ರಕಟವಾಗಿತ್ತು)

ಜೀವನದ ಲಕ್ಷಣ ಉತ್ಸಾಹ.

ಯಾವಾಗಿನಿಂದ ಉತ್ಸಾಹ ಕಳೆದುಕೊಳ್ಳಲು ಶುರು ಮಾಡುತ್ತೇವೋ ಆಗಿನಿಂದಲೇ ಸಾಯುವುದಕ್ಕೂ ಶುರು ಮಾಡಿಕೊಂಡುಬಿಟ್ಟೀದ್ದೀವಿ ಅಂತ ತಿಳಿದುಕೊಳ್ಳಬೇಕು.
ಈಗಂತೂ ಉತ್ಸಾಹದಿಂದ, ಪ್ರಸನ್ನ ಚಿತ್ತತೆಯಿಂದ ಇರುವಂಥ ಜನ ತುಂಬಾ ಕಡಿಮೆಯಾಗಿಬಿಟ್ಟಿದ್ದಾರೆ. ಇದು ಏಕೆ ಹೀಗಾಗ್ತಿದೆ? ನಮ್ಮ ’ವಿಶ್ವ’ದಿಂದ ನಮಗೆ ಹೀಗಾಗ್ತಿದೆ.
ಅಂದರೆ ನಾವು ಆ ತರಹ ಪ್ರಪಂಚವನ್ನು ನಮ್ಮ ಸುತ್ತಲೂ ಸೃಷ್ಟಿ ಮಾಡಿಕೊಂಡುಬಿಟ್ಟಿದ್ದೀವಿ.
ಆದರೆ ಇದನ್ನು ಬಿಡುವುದು ಹೇಗೆ? ಹಿಮಾಲಯಕ್ಕೆ ಓಡಿಹೋಗುವುದಾ? ಬೇರೆ ಎಲ್ಲಾದರೂ ಹೋಗಿಬಿಡೋದಾ?
ಬೇಡಾ...ಬೇಡಾ...ನಿನ್ನ ಶರೀರದಲ್ಲಿಯೇ ಇದೆ. ’ಶಕ್ತಿ ಚಕ್ರ ಸಂಧಾನೇ ವಿಶ್ವಸಂಹಾರ:’...

ನಿನ್ನ ಶರೀರದಲ್ಲಿಯೇ ವಿಭಿನ್ನ ಚಕ್ರಗಳಿವೆ.ಈ ಚಕ್ರಗಳನ್ನು ಅನುಸಂಧಾನ ಮಾಡು.ಇದರಲ್ಲಿ ಮನಸ್ಸಿಟ್ಟು ಧ್ಯಾನ ಮಾಡಿದಾಗ ’ಈ ವಿಶ್ವ’, ನಿನ್ನ ತಲೆಯಲ್ಲಿ ಓಡಾಡ್ತಾ ಇದೆಯಲ್ಲ ಚಿಂತೆ, ವಿಚಾರ.. ಅದೆಲ್ಲಾ ಸಂಹಾರವಾಗುತ್ತದೆ, ಶಾಂತವಾಗುತ್ತದೆ. ಬಹಳ ಮಹತ್ವಪೂರ್ಣವಾದ ಸೂತ್ರ ಇದು. ನಮ್ಮಲ್ಲಿ ಉಂಟಾಗುವ ಯಾವುದೇ ಆವೇಶ, ಭಾವನೆ, ಉದ್ವೇಗದಿಂದ ಏನಾಗುತ್ತೆ? ನಮ್ಮ ಶರೀರದ ವಿಭಿನ್ನ ಅಂಗಗಳಲ್ಲಿ ನಮಗೆ ಸಂವೇದನೆ ಉಂಟಾಗುತ್ತದೆ - ಗಮನಿಸಿದ್ದೀರಾ?

ಕೋಪ ಬಂದಾಗ ಎರಡೂ ಹುಬ್ಬಿನ ನಡುವೆ ತಲೆಯಲ್ಲಿ ಸಿಡಿತ ಉಂಟಾಗುತ್ತದೆ.. ದುಃಖ ಆದಾಗ ಗಂಟಲು ಬಿಗಿಹಿಡಿದಂತೆ.., ದ್ವೇಷ ಉಂಟಾದಾಗ ಹೃದಯದಲ್ಲಿ ಎಲ್ಲೋ ಒಂದು ಕಡೆ ಸಂವೇದನೆ ಉಂಟಾಗುತ್ತದೆ. ಹೊಟ್ಟೆಕಿಚ್ಚು ಉಂಟಾದಾಗ ಹೊಟ್ಟೆಯಲ್ಲಿ ಏನೋಕಸಿವಿಸಿ. ಅದಕ್ಕೆ ಅದನ್ನು ಹೊಟ್ಟೆಕಿಚ್ಚು ಎನ್ನುತ್ತೇವೆ. ಅಲ್ಲವೆ?
ಹೀಗೆ ಶರೀರದಲ್ಲಿ ಏಳು ಕೇಂದ್ರಗಳಿವೆ. ಆ ಏಳು ಕೇಂದ್ರಗಳಲ್ಲಿ ಶರೀರದಲ್ಲಿರತಕ್ಕಂಥ ಎಲ್ಲಾ ನಾಡಿಗಳು ಸೇರುತ್ತವೆ. ಅದಕ್ಕೇ ಇದನ್ನು ಚಕ್ರ ಅಂತ ಅಂದರು. ಇದರಲ್ಲಿ ಅಸದ್ಭಾವನೆಯೂ ಉಂಟಾಗುತ್ತದೆ. ಸದ್ಭಾವನೆಯೂ ಉಂಟಾಗುತ್ತದೆ. ನಮ್ಮಲ್ಲಿರುವ ಬಹುವಾದ ಅಸದ್ಭಾವನೆಗಳಿಂದ ಪಾರಾಗುವ ವಿಧಾನವನ್ನು ನಾಳೆ ತಿಳಿದುಕೊಳ್ಳೋಣ.

* * * * *

ಶಕ್ತಿ ಚಕ್ರ ಸಂಧಾನೇ ವಿಶ್ವ ಸಂಹಾರಃ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೬/೦೪/೨೦೦೩ರ೦ದು ಪ್ರಕಟವಾಗಿತ್ತು)

ತುಂಬಾ ಸಂತೋಷದಿಂದ ನಕ್ಕಾಗ ’ಹೊಟ್ಟೆ ತುಂಬಾ ನಕ್ಕೆವಪ್ಪ’ ಎನ್ನುತ್ತೀವಿ. ತೃಪ್ತಿ ಆದಾಗಲೂ ’ಹೊಟ್ಟೆ ತುಂಬಿತಪ್ಪ ನಮಗೆ’ ಅನ್ನುತ್ತೀವಿ.

ಸಂತೋಷದಲ್ಲಿ ನಮಗೆ ನಾಭೀ ಕೇಂದ್ರದಲ್ಲಿ ಸಂವೇದನೆ ಉಂಟಾಗುತ್ತದೆ. ಅದೇ ದ್ವೇಷ ಉಂಟಾದಾಗಲೂ, ಪ್ರೇಮ ಉಂಟಾದಾಗಲೂ ಹೃದಯದಲ್ಲಿ ಏನೋ ಸಂವೇದನೆ ಉಂಟಾಗುತ್ತದೆ. ಹಾಗೆಯೇ ದುಃಖ ಉಂಟಾದಾಗಲೂ, ಕೃತಜ್ಞತೆ ಉಂಟಾದಾಗಲೂ ಗಂಟಲಿನಲ್ಲಿ ಸಂವೇದನೆಯಾಗುತ್ತದೆ. ’ಕಂಠ ಬಿಗಿ ಹಿಡಿಯಿತು’, ’ಕಂಠ ತುಂಬಿ ಬಂತು’ ಅನ್ನುತ್ತೀವಿ. ಲೋಕಾರೂಢಿಯಲ್ಲಿಯೇ ಹೀಗೆ ಮಾತನಾಡುತ್ತೀವಿ.

ನಮ್ಮ ಜೀವನದ ಶಕ್ತಿ ಈ ಕೇಂದ್ರಗಳಲ್ಲಿ, ಶಕ್ತಿಚಕ್ರಗಳಲ್ಲಿ ಸರಳವಾಗಿ ಹರಿಯುತ್ತಾ ಇರುತ್ತದೆ. ನಮ್ಮಲ್ಲಿ ಒತ್ತಡ, ಬಿಗಿತ, ಮನಸ್ಸಿನಲ್ಲಿ ಉದ್ವೇಗ (ಸ್ಟ್ರೈನ್, ಟೆನ್ಷನ್) ಉಂಟಾದಾಗ ಈ ಕೇಂದ್ರಗಳಲ್ಲಿ ಗಂಟುಗಳುಂಟಾಗಿ ಅಲ್ಲಲ್ಲಿ ತಡೆ (ಬ್ಲಾಕ್) ಉಂಟಾಗಿಬಿಡುತ್ತದೆ. ಶಕ್ತಿ ಸಂಚಾರ ಕಡಿಮೆಯಾಗುತ್ತದೆ. ಶಕ್ತಿ ಕೇಂದ್ರಗಳಲ್ಲಿ ಸಂಧಾನ ಮಾಡಿ ನಿಮ್ಮ ಧ್ಯಾನವನ್ನಿಡಿ, ಆಗ ಅಲ್ಲಿರುವ ನಕಾರಾತ್ಮಕ ಭಾವನೆಗಳು ತನ್ನಷ್ಟಕ್ಕೆ ತಾನೇ ಕರಗುತ್ತವೆ. ದೋಷಗಳೆಲ್ಲಾ ನಿವೃತ್ತಿಯಾಗುತ್ತವೆ, ಗುಣ ಹೆಚ್ಚಾಗುತ್ತದೆ. ’ಹೊಟ್ಟೆಕಿಚ್ಚು ಉಂಟಾದಾಗ ನಾಭೀ ಕೇಂದ್ರದಲ್ಲಿ ಧ್ಯಾನ ಮಾಡಿದಾಗ ಹೊಟ್ಟೆಕಿಚ್ಚು ದೂರವಾಗುತ್ತದೆ, ತನ್ನಷ್ಟಕ್ಕೇ ಶಾಂತವಾಗುತ್ತದೆ.

ಎಷ್ಟೋ ಸಲ ನಾವು ನಮ್ಮ ತಪ್ಪು ಕೆಲಸಗಳನ್ನು ’ನಾ ಮಾಡಿದ್ದೇ ಸರಿ’ ಎಂದು ಸಾಧಿಸಲು ಹೋಗುತ್ತೇವೆ. ಆದರೆ, ಆ ಕೆಲಸ ಆಗಿದ್ದು ನಮ್ಮ ಶಕ್ತಿ ಚಕ್ರಗಳಲ್ಲಿ ಉಂಟಾಗುವ ದೋಷಗಳಿಂದ.

’ಶಕ್ತಿ ಚಕ್ರ ಸಂಧಾನೇ ವಿಶ್ವ ಸಂಹಾರಃ’.. ಈ ಕೇಂದ್ರಗಳಲ್ಲಿ ಸಂಧಾನ ಮಾಡಿ ಧ್ಯಾನ ಮಾಡುವುದರಿಂದ ನಾವೇ (ನಮ್ಮತಲೆಯಲ್ಲಿ) ನಿರ್ಮಿಸಿಕೊಂಡಿರುವ ’ವಿಶ್ವ’ ಸಂಹಾರವಾಗುತ್ತದೆ. ’ವಿಶ್ವ’ ಶಾಂತಿಯಾಗುತ್ತದೆ. ದೋಷ ನಿವೃತ್ತಿಯಾಗುತ್ತದೆ.

* * * * *

ಪ್ರಾಪಂಚಿಕತೆ - ಪುರುಷಾರ್ಥ - ೧

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೭/೦೪/೨೦೦೩ರ೦ದು ಪ್ರಕಟವಾಗಿತ್ತು)


ಒಂದು ಕಥೆ:

ಒಂದು ರಾಜ್ಯದಲ್ಲಿ ಬೀಗ ತಯಾರಿಸುವವನೊಬ್ಬನಿದ್ದ, ಅಪ್ರತಿಮ ಕೌಶಲ್ಯ ಅವನದು. ಅವನು ತಯಾರಿಸಿದ ಬೀಗಗಳನ್ನು ಒಡೆದು ತೆಗೆಯುವುದು ಸಾಧ್ಯವೇ ಇರಲಿಲ್ಲ. ಹೀಗಿರುವಾಗ ಒಂದು ರಾತ್ರಿ ಅವನು ಆ ದೇಶದ ರಾಜನೊಂದಿಗೆ ಎಲ್ಲಿಗೋ ಹೋಗುವ ಪ್ರಮೇಯ ಬಂತು. ಆ ಸಮಯದಲ್ಲಿ ದರೋಡೆಕೋರರ ಗುಂಪೊಂದು ಬಂದು ಇವರಿಬ್ಬರ ಕೈಗೂ ಬೇಡಿ ಹಾಕಿ ಬಳಿಯಿದ್ದುದನ್ನು ದೋಚಿಕೊಂಡು ಹೊರಟುಹೋಯಿತು.

ಬೀಗ ತಯಾರಿಸುವ ನಿಪುಣನೇ ಬಳಿಯಲ್ಲಿದ್ದುದರಿಂದ ರಾಜ ಧೈರ್ಯವಾಗಿಯೇ ಇದ್ದ. ’ಜೊತೆಯಲ್ಲಿ ನೀ ಇದ್ದೀಯಲ್ಲ ಹೇಗಿದ್ದರೂ ಯೋಚನೆಯಿಲ್ಲ’ ಅಂದ. ಬೆಳಗಾಯಿತು. ಬೀಗ ತಯಾರಕ ಬೇಡಿಯ ಬೀಗ ಹೇಗಿದೆ ಅಂತ ಪರೀಕ್ಷಿಸಿ ನೋಡಿ ಗೊಳೋ ಎಂದು ಅಳಲು ಪ್ರಾರಂಭಿಸಿದನಂತೆ. "ಈ ಬೀಗ ತೆಗೆಯುವುದಕ್ಕಾಗುವುದಿಲ್ಲ, ಏಕೆಂದರೆ ನಾನೇ ಮಾಡಿದ ಬೀಗ ಇದು! ನನ್ನ ಕೆಲಸ ಯಾವಾಗಲೂ ಅತ್ಯುತ್ತಮ ಗುಣಮಟ್ಟದ್ದು. ಇದನ್ನು ಒಡಿಯೋದು ಅಷ್ಟೊಂದು ಸುಲಭವಲ್ಲ, ಏಕೆಂದರೆ ನಾನೇ ಮಾಡಿದ್ದು!!"

ಹಾಗೆ ನಮ್ಮ ಕೈಗೆ ನಾವೇ ಬೇಡಿ ಹಾಕಿಕೊಂಡು ಕುಳಿತಿದ್ದೀವಿ ಪ್ರಪಂಚದಲ್ಲಿ!
ನಿಮ್ಮ ಬೇಡಿ, ನಿಮ್ಮ ಬಂಧನ ಯಾರೂ ಮಾಡಿಲ್ಲ. ನೀವೇ ಸ್ವತಃ ಮಾಡಿಕೊಂಡಿದ್ದೀರ. ಸ್ವಲ್ಪ ಎಚ್ಚೆತ್ತುಕೊಂಡು ನೋಡಿ, ನಿಮ್ಮ ಪ್ರಪಂಚ ಏನು? ಏನಿದೆ ಅದರಲ್ಲಿ?ಜೀವನ ನಡೆಸುವುದಕ್ಕಾಗಿ ನಾವು ಏನೋ ಮಾಡ್ತಾ ಇದ್ದೀವಿ. ಪುರುಷಾರ್ಥಕ್ಕೆ ಮಾಡುತ್ತಾ ಇದ್ದೀವಿ ಅಂತ ಅಂದುಕೊಳ್ಳುತ್ತೀವಿ. ಇದು ನಮ್ಮ ಭ್ರಮೆ!

ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕಾದರೆ ಪೂರ್ತಿ ಬೆವರು ಸುರಿಸುತ್ತೀರಾ, ಉಸಿರು ಉಸಿರು ಅದಕ್ಕೆ ಹಾಕ್ತೀರಾ. ಆದರೆ ಸ್ವಲ್ಪ ಏನಾದರೂ ಆತ್ಮವಿಚಾರ ಸಾಧನೆ ಮಾದಬೇಕಾದರೆ "ಅದಕ್ಕೆ ದೇವರ ದಯೆ ಬೇಕು, ದೇವರ ಕೃಪೆ ಯಾವಾಗ ಆಗುತ್ತದೋ ಆಗ ಅದು ಆಗುತ್ತೆ, ಯಾವಾಗ ಅವನ ಕೃಪೆ ಆಗುತ್ತದೋ ಆಗ ಆಗಲಿ" ಎನ್ನುತ್ತೀರಿ. ಅಲ್ಲವೆ?

* * * * *

ಪ್ರಾಪಂಚಿಕತೆ- ಪುರುಷಾರ್ಥ - ೨

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೮/೦೪/೨೦೦೩ರ೦ದು ಪ್ರಕಟವಾಗಿತ್ತು)


ನಿಮಗೆ ಜೀವನದಲ್ಲಿ ಸಿಗುವಂತಹ ಪ್ರಾಪಂಚಿಕವಾದ ಭೋಗ, ಸಾಮಗ್ರಿ, ಸವಲತ್ತು, ಸೌಲಭ್ಯ, ವಸತಿ ಇವೆಲ್ಲಕ್ಕೂ ಪ್ರಾರಬ್ಧ ಕಾರಣ, ನಿಮ್ಮ ಪ್ರಾರಬ್ಧದಿಂದ ನಿಮಗೆ ಪ್ರಪಂಚದಲ್ಲಿ ಸಿಗಬೇಕಾದುದೆಲ್ಲ ಸಿಗುತ್ತದೆ, ಬರೀ ಕೆಲಸದಿಂದ ಅಲ್ಲ, ಬರೀ ನಿಮ್ಮ ಪ್ರಯತ್ನದಿಂದಲ್ಲ! ಬರೀ ನಿಮ್ಮ ಉದ್ಯಮದಿಂದ ಆಗೋದಲ್ಲ ಇದು. ಅಲ್ವಾ? ಆದರೆ ನಿಮ್ಮ ಮನಸ್ಸಿನ ಸ್ತರ ಆತ್ಮನ ಉನ್ನತಿ ಹೆಚ್ಚುವುದು ನಿಮ್ಮ ಪುರುಷಾರ್ಥದಿಂದ. ಆದರೆ, ನಾವಿದನ್ನು ತಲೆ ಕೆಳಗಾಗಿ ಮಾಡುತ್ತೀವಿ. ಎಂದರೆ ಪ್ರಪಂಚದಲ್ಲಿ ನಮಗೆ ಏನು ಬೇಕಾಗಿದ್ದರೂ ಪೂರಾ ನಮ್ಮ ಉಸಿರು ಹಾಕಿ, ಬೆವರು ಸುರಿಸುತ್ತೀವಿ. ಅದೇ ಅಧ್ಯಾತ್ಮಿಕ ಸಾಧನೆ, ಧ್ಯಾನ ಮಾಡಬೇಕಾದರೆ "ದೇವರ ದಯೆ ಆದರೆ ಆಗುತ್ತೆ, ಅವನು ಕರೆಸಿಕೊಂಡಾಗ ಧ್ಯಾನ ಗೀನ ಮಾಡಲು ಹೋಗ್ತೀವಿ" ಅಂತೀವಿ. ಇದು ನಮ್ಮ ಪ್ರಪಂಚ!

ಧ್ಯಾನದಲ್ಲಿ ಕುಳಿತು ಶಕ್ತಿ ಕೇಂದ್ರಗಳಲ್ಲಿ ಸಂಧಾನ ಮಾಡಿದಾಗ ವಿಶ್ವ ಸಂಹಾರವಾಗುತ್ತದೆ. ನೀವೇ ಕಟ್ಟಿಕೊಂಡಿರುವ ’ವಿಶ್ವ’ವನ್ನು, ನಿಮ್ಮ ಬಂಧನವನ್ನು ನೀವೇ ಬಿಡಿಸಿಕೊಳ್ಳಬೇಕು. ನಮ್ಮ ಉನ್ನತ ಧ್ಯಾನ ಶಿಬಿರಗಳಲ್ಲಿ ಶಕ್ತಿ ಚಕ್ರದ ಅನುಸಂಧಾನ ಮಾಡ್ತೀವಿ. ಮೂರು ನಾಲ್ಕು ದಿನ ಮೌನ, ಧ್ಯಾನ ಮಾಡಿದಾಗ ನಮ್ಮ ಇಡೀ ಶರೀರ ಮನಸ್ಸು ಎರಡೂ ಎಷ್ಟು ಲವಲವಿಕೆಯಿಂದ ತುಂಬುತ್ತವೆ, ನಿರ್ಮಲವಾಗುತ್ತವೆ, ಶಾಂತವಾಗುತ್ತವೆ, ಪ್ರಸನ್ನವಾಗುತ್ತವೆ ಅಲ್ವಾ? ಸಾವಿರಾರು ಜನ ಈಗ ಇದನ್ನು ಅನುಭವಿಸಿದ್ದಾರೆ, ಮಾಡಿದ್ದಾರೆ. ವರ್ಷದಲ್ಲಿ ಅಥವಾ ಆರು ತಿಂಗಳಲ್ಲಿ ಮೂರು-ನಾಲ್ಕು ದಿನ ಇದಕ್ಕೋಸ್ಕರ ಕಾಲಾವಕಾಶ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಇದನ್ನು ಮಾಡಬೇಕು.

"ಶಕ್ತಿ ಚಕ್ರ ಸಂಧಾನೇ ವಿಶ್ವ ಸಂಹಾರಃ"

ವಿಶ್ವ ಸಂಹಾರ ಎಂದರೆ ಪ್ರಪಂಚವನ್ನು ಬಿಟ್ಟು ಓಡಿಹೋಗುವುದಲ್ಲ. ಮನೆ ಮಠ ಬಿಟ್ಟು ಎಲ್ಲೋ ಹೋಗಿ, ಹಿಮಾಲಯದ ಗುಹೆಗಳಲ್ಲಿ ಸೇರಿಕೊಳ್ಳುವುದಲ್ಲ. ಹಾಗೆ ಸೇರಿಕೊಂಡಾಕ್ಷಣ ಅವರಿಗೆ ಅಲ್ಲೇನೂ ಆನಂದ ಸಿಗುವುದಿಲ್ಲ. ನೀನೇ ಸೃಷ್ಟಿ ಮಾಡಿಕೊಂಡಿರುವ ನಿನ್ನ ಪ್ರಪಂಚ ನಿನ್ನ ತಲೆಯೊಳಗೇ ಇದೆ.. ಈ ಬೇಡಿಯಿಂದ ಹೊರಗೆ ಬಾ.. ನೀನೇ ಬಿಡಿಸಿಕೊಳ್ಳಬೇಕು ಇದನ್ನು..