ಭಾನುವಾರ, ಆಗಸ್ಟ್ 12, 2012

ಸಫಲ ವೈವಾಹಿಕ ಜೀವನದ ರಹಸ್ಯ

12
2012
Aug
ಬೆಂಗಳೂರು ಆಶ್ರಮ, ಭಾರತ



1356ಭಾವನೆ, ಶಬ್ಧ ಮತ್ತು ರಾಗಗಳ ನಡುವೆ ಒಂದು ಸಂಬಂಧವಿದೆ. ಕೊನೆಯದಾಗಿ ಹಾಡಿದ ಭಜನೆಯಲ್ಲಿ ಜೋಗಿಯ ರಾಗವಿತ್ತು. ಈ ರಾಗವನ್ನು ನೀವು ರಾಧೆಯೊಂದಿಗೆ ಜೋಡಿಸಲು ಸಾಧ್ಯವಿಲ್ಲ. ನೀವು "ಶಿವ, ಶಿವ" ಎಂದು ಹೇಳಿದರೆ, ಅದನ್ನು ವೈರಾಗ್ಯದ ರಾಗದೊಂದಿಗೆ ಜೋಡಿಸಬಹುದು.
ಒಮ್ಮೆ ಯಾರೋ ಒಬ್ಬರು ವಿವಾಹ ಸಮಾರಂಭವೊಂದಕ್ಕೆ ಆಮಂತ್ರಿಸಲ್ಪಟ್ಟಿದ್ದರು ಮತ್ತು ಅವರೊಡನೆ ಹಾಡಲು ವಿನಂತಿಸಲಾಯಿತು. ಅವರು ಹಾಡಲು ಶುರು ಮಾಡಿದರು, "ಈ ದೇಹದಿಂದ ದೂರವಾದೆ ಯಾಕೆ ಆತ್ಮನೇ? ಈ ಸಾವು ನ್ಯಾಯವೇ?" ಈ ಹಾಡು ಆ ಸಂದರ್ಭಕ್ಕೆ ಹೊಂದುತ್ತದೆಯೇ? ನೀವು ಯಾವುದೇ ಹಾಡನ್ನು ಎಲ್ಲಿ ಬೇಕಾದರೂ ಹಾಡಲು ಸಾಧ್ಯವಿಲ್ಲ. ಭಾವನೆ ಮತ್ತು ರಾಗಗಳು ಹೊಂದಿಕೆಯಾಗಬೇಕು.
ನಮ್ಮ ಜೀವನವು ಇದಕ್ಕೆ ಸರಿಸಮಾನವಾದುದಾಗಿದೆ. ಜೀವನದ ನದಿಯು ಹರಿಯುತ್ತಿದೆ, ಆದರೆ ಮುಂದಕ್ಕೆ ಹೋಗುವುದರಲ್ಲಿ ಗಮನವಿರಿಸುವುದರ ಬದಲು, ನಾವು ಹಿಂದಕ್ಕೆ ಹೋಗುತ್ತಿರುತ್ತೇವೆ. ಹರಿಯುತ್ತಿರುವ ನದಿಯ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಯಾವುದಾದರೂ ತಡೆಯಿದ್ದರೆ, ಅದು ಹಿಂದಕ್ಕೆ ಹರಿಯುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಎಲ್ಲೆಲ್ಲಾ ಹರಿವು ಹಿಂದಕ್ಕಿರುವುದೋ ಅಲ್ಲಿ ಕೊಳಕು ಸಂಗ್ರಹವಾಗುತ್ತದೆ. ಮುಂದಕ್ಕೆ ಹರಿಯುವ ನೀರು ಸ್ವಚ್ಛವಾಗಿರುತ್ತದೆ. ಅದೇ ರೀತಿಯಲ್ಲಿ, ನಾವು ಮುಂದಕ್ಕೆ ಚಲಿಸುತ್ತಾ ಇದ್ದರೆ, ಮನಸ್ಸಿನಲ್ಲಿ ಆಹ್ಲಾದವಿರುತ್ತದೆ. ನಾವು ಹಿಂದಿನದನ್ನೇ ಯೋಚಿಸುತ್ತಾ ಇದ್ದರೆ, ನಮ್ಮ ಮನಸ್ಸು ತಳಮಳ ಆಗುತ್ತದೆ. ಇದು ನನ್ನ ಅಭಿಪ್ರಾಯ. ನೀವೇನು ಹೇಳುತ್ತೀರಿ?
ಇವತ್ತು ಯಾರೂ ಯಾವುದೇ ಪ್ರಶ್ನೆಗಳನ್ನು ಕೇಳುತ್ತಿಲ್ಲ! ಇದು ಕೇವಲ ಎರಡು ಕಾರಣಗಳಿಂದಾಗಿರಬಹುದು. ಒಂದು, ನಿಮಗೆಲ್ಲಾ ತಿಳಿದಿದ್ದರೆ. ಇನ್ನೊಂದು, ನಾನು ಹೇಳುತ್ತಿರುವುದರಲ್ಲಿ ನಿಮಗೆ ಒಂದೇ ಒಂದು ಶಬ್ದವೂ ಅರ್ಥವಾಗದಿದ್ದರೆ (ಗುರೂಜಿಯವರು ಕನ್ನಡದಲ್ಲಿ ಮಾತನಾಡುತ್ತಿದ್ದುದರಿಂದ ಹಾಗೂ ಅಲ್ಲಿ ಇತರ ಭಾಷೆಯವರು ಅನೇಕರಿದ್ದುದರಿಂದ). ನೀವು ಯಾವ ಪರಿಸ್ಥಿತಿಯಲ್ಲಿದ್ದೀರಿ?
ಸಭಿಕರು: ನಾವು ನಿಮ್ಮನ್ನು ನೋಡುವಾಗ, ನಮಗೆ ಎಲ್ಲಾ ಪ್ರಶ್ನೆಗಳೂ ಮರೆತು ಹೋಗುತ್ತವೆ!
ಅದು ಒಳ್ಳೆಯದು.
ಪ್ರಶ್ನೆ: ಒಂದು ವಿವಾಹವು ಸಫಲವಾಗುವಂತೆ ಮಾಡುವುದರ  ಹಿಂದಿನ ರಹಸ್ಯವೇನು?
ಶ್ರೀ ಶ್ರೀ ರವಿಶಂಕರ್: ನೀನು ತಪ್ಪಾದ ವ್ಯಕ್ತಿಯಲ್ಲಿ ಕೇಳುತ್ತಿರುವೆಯೆಂದು ನನಗನಿಸುತ್ತದೆ! ಇಲ್ಲೊಬ್ಬ ಜರ್ಮನಿಯ ಸಂಭಾವಿತನಿದ್ದ ಮತ್ತು ಒಬ್ಬಳು ಇಟೆಲಿಯ ಸ್ತ್ರೀಯಿದ್ದಳು. ಅವರಿಬ್ಬರೂ ಮೊದಲು ಹಲವಾರು ಸಾರಿ ಬೇರೆ ಬೇರೆ ಮದುವೆಯಾಗಿದ್ದರು. ಅವರಿಲ್ಲಿಗೆ ಬಂದು, "ಗುರೂಜಿ, ನಮಗೆ ನಿಮ್ಮ ಆಶೀರ್ವಾದ ಬೇಕು. ಕನಿಷ್ಠಪಕ್ಷ ಈ ಮದುವೆ ಸಫಲವಾಗಬೇಕು" ಎಂದು ಹೇಳಿದರು.
ನಾನು ಆ ಸಂಭಾವಿತನಲ್ಲಿ ಅವನಿಗೆ ಇಟಾಲಿಯನ್ ಗೊತ್ತಿದೆಯೇ ಎಂದು ಕೇಳಿದೆ ಮತ್ತು ಅವನು ಇಲ್ಲವೆಂದ. ನಾನು ಆ ಸ್ತ್ರೀಯಲ್ಲಿ ಅವಳಿಗೆ ಜರ್ಮನ್ ಗೊತ್ತಿದೆಯೇ ಎಂದು ಕೇಳಿದೆ ಮತ್ತು ಆಕೆಯು ಇಲ್ಲವೆಂದಳು. ಅವರಿಬ್ಬರಿಗೂ ಇಂಗ್ಲಿಷ್ ಗೊತ್ತಿರಲಿಲ್ಲ. ನಾನಂದೆ, "ನೀವಿಬ್ಬರೂ ಪರಸ್ಪರರ ಭಾಷೆಗಳನ್ನು ಕಲಿಯಬೇಡಿ, ಆಗ ಅದು ಸಫಲವಾಗುತ್ತದೆ!" ಕನ್ನಡದಲ್ಲಿ ಒಂದು ವಚನವಿದೆ, "ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಕೊಲೆಯು, ಮಾತಿನಿಂ ಸರ್ವ ಸಂಪದವು, ಲೋಕಕ್ಕೆ ಮಾತೇ ಮಾಣಿಕವು ಸರ್ವಜ್ಞ." ಆದುದರಿಂದ ಶಬ್ದಗಳನ್ನು ಮಿತವಾಗಿ ಬಳಸಬೇಕು.
ಸಾಧಾರಣವಾಗಿ, ಜನರಲ್ಲಿ ತಪ್ಪು ತಿಳುವಳಿಕೆಯಿರುವಾಗ ಅವರನ್ನುತ್ತಾರೆ, "ಅದನ್ನು ಮಾತನಾಡಿ ಬಗೆಹರಿಸೋಣ." ಮಾತನಾಡಿ ಬಗೆಹರಿಸುವುದು ಕೆಲಸ ಮಾಡುವುದೇ ಇಲ್ಲ. ನಾವು ಮಾತನಾಡಿ ಬಗೆಹರಿಸಬಾರದು. ಕೇವಲ ಮುಂದೆ ಸಾಗಿ, ಅಷ್ಟೆ! ಕುಳಿತುಕೊಂಡು ಹಿಂದಿನದನ್ನು ಚರ್ಚಿಸಬೇಡಿ. ಹಿಂದಿನದರ ಬಗ್ಗೆ ಯಾವುದೇ ವಿವರಣೆಯನ್ನು ಕೇಳಬೇಡಿ. ಒಂದು ತಪ್ಪು ನಡೆದಾಗ, ಅದು ಆಗಿ ಹೋಯಿತು, ಅಷ್ಟೆ. ನೀವು ಮುಂದೆ ಸಾಗಬೇಕು.
ನೀವೊಂದು ತಪ್ಪು ಮಾಡಿ, ಒಬ್ಬರು ನಿಮ್ಮಲ್ಲಿ ನೀವು ಮಾಡಿದ ತಪ್ಪಿಗೆ ವಿವರಣೆಯನ್ನು ಕೇಳುತ್ತಾ ಇರುವ ಒಂದು ಸ್ಥಿತಿಯನ್ನು ಊಹಿಸಿ. ಒಬ್ಬರಿಗೆ ವಿವರಣೆ ನೀಡುವುದು ಅಥವಾ ತನ್ನನ್ನು ಸಮರ್ಥಿಸಿಕೊಳ್ಳುವುದು ಎಷ್ಟೊಂದು ದೊಡ್ಡ ಭಾರ, ಅಲ್ಲವೇ? ಇನ್ನೊಬ್ಬ ವ್ಯಕ್ತಿಯು ತಪ್ಪಿತಸ್ಥ ಭಾವನೆ ಅನುಭವಿಸುವಂತೆ ಯಾವತ್ತೂ ಮಾಡಬೇಡಿ. ಇದು ಬಹಳ ಪ್ರಮುಖವಾದುದು. ಯಾರಲ್ಲಿ ನೀವು ತಪ್ಪಿತಸ್ಥ ಭಾವನೆ ಉಂಟಾಗುವಂತೆ ಮಾಡುವಿರೋ ಅವರು, ಎಲ್ಲೋ ಆಳವಾಗಿ ಒಳಗಡೆಯಲ್ಲಿ, ನಿಮ್ಮ  ಮಿತ್ರರಾಗಿರುವುದನ್ನು ನಿಲ್ಲಿಸುತ್ತಾರೆ. ಸ್ನೇಹದ ಬಂಧನವು ಸಡಿಲವಾಗುತ್ತದೆ.
ಒಬ್ಬನು ತಪ್ಪಿತಸ್ಥ ಭಾವನೆ ಹೊಂದದೆಯೇ ತನ್ನ ತಪ್ಪಿನ ಬಗ್ಗೆ ಅರಿವು ಮೂಡಿಸಿಕೊಳ್ಳುವಂತೆ ಮಾಡಲು ಒಂದು ಕುಶಲತೆಯಿದೆ. ಹಾಗಿದ್ದರೂ, ಮನುಷ್ಯರಲ್ಲಿರುವ ಸಾಧಾರಣ ಪ್ರವೃತ್ತಿಯೆಂದರೆ, ಒಬ್ಬರು ತಪ್ಪಿತಸ್ಥ ಭಾವನೆ ಹೊಂದುವಂತೆ ಮಾಡುವುದು ಮತ್ತು ಅದರ ಬಗ್ಗೆ ಸಂತೋಷ ಪಡುವುದು. ನಾವು ಈ ಸಾಧಾರಣ ಪ್ರವೃತ್ತಿಯಿಂದ ಮೇಲಕ್ಕೇರಬೇಕು ಮತ್ತು ಒಬ್ಬರು ತಪ್ಪಿತಸ್ಥ ಭಾವನೆ ಹೊಂದುವಂತೆ ಮಾಡಬಾರದು. ಆಗ ನಿಮ್ಮ ಸಂಬಂಧವು ದೀರ್ಘಕಾಲ ಉಳಿಯುತ್ತದೆ.
ಮಹಿಳೆಯರಿಗೆ ಒಂದು ಮತ್ತು ಪುರುಷರಿಗೆ ಒಂದು ರಹಸ್ಯವಿದೆ. ಬಹುಶಃ ನೀವು ಇದರ ಬಗ್ಗೆ ಆಲೋಚಿಸಿದರೆ, ಇದು ಫಲಪ್ರದವಾಗಬಹುದು.
ಮಹಿಳೆಯರಿಗೆ: ನೀವು ನಿಮ್ಮ ಪುರುಷನ ಅಹಂನ್ನು ತುಳಿಯಬಾರದು. ಇಡಿಯ ಪ್ರಪಂಚವೇ ಒಬ್ಬನನ್ನು, ಅವನಿಗೆ ಮೆದುಳಿಲ್ಲವೆಂದು ಹೇಳಬಹುದು, ಆದರೆ ಅವನ ಪತ್ನಿಯು ಯಾವತ್ತಿಗೂ ಹಾಗೆ ಹೇಳಬಾರದು. ಅವಳು ಯಾವತ್ತೂ, "ನೀನು ಈ ಭೂಮಿಯಲ್ಲೇ ಅತ್ಯಂತ ಬುದ್ಧಿಶಾಲಿ ವ್ಯಕ್ತಿ. ನೀನು ನಿನ್ನ ಮೆದುಳನ್ನು ಉಪಯೋಗಿಸುವುದಿಲ್ಲವೆಂದ ಮಾತ್ರಕ್ಕೆ ಅದು ನಿನ್ನಲ್ಲಿಲ್ಲವೆಂದು ಅದರರ್ಥವಲ್ಲ!" ಎಂದು ಹೇಳಬೇಕು. ಅವಳು ಯಾವತ್ತೂ ಅವನ ಅಹಂನ್ನು ಉಬ್ಬಿಸಬೇಕು. ಇದು ಬಹಳ ಅಗತ್ಯ. ಮಹಿಳೆಯು ತನ್ನ ಸಂಗಾತಿಯಲ್ಲಿ, "ನೀನು ಯಾವುದಕ್ಕೂ ಪ್ರಯೋಜನವಿಲ್ಲ. ನೀನೊಂದು ತರಕಾರಿ" ಎಂದು ಹೇಳುತ್ತಾ ಇದ್ದರೆ, ಅವನು ನಿಜವಾಗಿಯೂ ಹಾಗೇ ಆಗುತ್ತಾನೆ!
ಈಗ, ಪುರುಷರಿಗಿರುವ ರಹಸ್ಯ - ಒಬ್ಬ ಪುರುಷನು ಯಾವತ್ತಿಗೂ ಒಬ್ಬ ಮಹಿಳೆಯ ಭಾವನೆಗಳನ್ನು ತುಳಿಯಬಾರದು. ಅವಳು ತನ್ನ ಸಹೋದರನ ಬಗ್ಗೆ, ಅಥವಾ ತಾಯಿಯ ಬಗ್ಗೆ ಅಥವಾ ಕುಟುಂಬದವರ ಬಗ್ಗೆ ನಿಮ್ಮಲ್ಲಿ ದೂರಬಹುದು, ಆದರೆ ನೀವು ಅದರೊಂದಿಗೆ ಸೇರಿಕೊಳ್ಳಬಾರದು. ನೀವು ಅವಳ ದೂರುಗಳಿಗೆ ತಲೆದೂಗಲು ಶುರು ಮಾಡಿದ ಕ್ಷಣದಲ್ಲಿ, ಅವಳು ತಿರುಗಿಬಿಡುತ್ತಾಳೆ. ತನ್ನ ದೂರುಗಳ ಬಗ್ಗೆ ಯೋಚಿಸುವುದರ ಬದಲು, ಅವಳು ನಿಮ್ಮ ಬಗ್ಗೆ ದೂರುವಳು. ಅವಳು ಚಕ್ರವನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಲು ಶುರುಮಾಡುವಳು. ಅವಳು ಯಾವುದಾದರೂ ಧಾರ್ಮಿಕ ಕಾರ್ಯಕ್ರಮಕ್ಕೆ, ತೀರ್ಥಯಾತ್ರೆಗೆ, ಸಿನೆಮಾಕ್ಕೆ ಅಥವಾ ಶಾಪಿಂಗ್ ಹೋಗಲು ಬಯಸಿದರೆ ಸುಮ್ಮನೇ ಒಪ್ಪಿಗೆ ನೀಡಿ ಮತ್ತು ಅವಳಿಗೆ ಕ್ರೆಡಿಟ್ ಕಾರ್ಡನ್ನು ಕೊಡಿ! ಆದುದರಿಂದ, ನೀವು ಮಹಿಳೆಯ ಭಾವನೆಗಳನ್ನು ತುಳಿಯದೇ ಇದ್ದರೆ, ಎಲ್ಲವೂ ಸರಿಯಾಗುತ್ತದೆ.
ಈಗ ನಿಮಗಿಬ್ಬರಿಗೂ - ನಿಮ್ಮ ಬಗ್ಗೆ ಇನ್ನೊಬ್ಬ ವ್ಯಕ್ತಿಗಿರುವ ಪ್ರೀತಿಗೆ ಸಾಕ್ಷಿ ಕೇಳಬೇಡಿ. "ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಬೇಡಿ. ಒಬ್ಬರಿಗೆ, ನಿಮ್ಮ ಮೇಲೆ ಅವರಿಗಿರುವ ಪ್ರೀತಿಗೆ ಸಾಕ್ಷಿ ಒದಗಿಸುವ ಹೊರೆಯನ್ನು ನೀಡಬೇಡಿ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಅವರಿಗೆ ನಿಮ್ಮ ಮೇಲಿರುವ ಪ್ರೀತಿ ಕಡಿಮೆಯೆಂದು ನಿಮಗನ್ನಿಸಿದರೆ ನೀವು, "ನೀನು ನನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುವೆ?" ಎಂದು ಹೇಳಬೇಕು. "ನೀನು ನನ್ನನ್ನು ಪ್ರೀತಿಸುವುದಿಲ್ಲ", ಮತ್ತು ಅಂತಹ ಮಾತುಗಳನ್ನು ಹೇಳಬೇಡಿ.
ಪ್ರಶ್ನೆ: ಯಾರಾದರೂ ನಮ್ಮನ್ನು ಕೆರಳಿಸಿದರೆ, ನಾವು ಸುಮ್ಮನಿರಬೇಕೇ ಅಥವಾ ಅವರಿಗೊಂದು ಪಾಠ ಕಲಿಸಬೇಕೇ? ನಾವು ಸುಮ್ಮನಿದ್ದರೆ, ಆಗ ಅವರು ಅದನ್ನೊಂದು ಬಲಹೀನತೆಯೆಂದು ಪರಿಗಣಿಸುತ್ತಾರೆ ಮತ್ತು ನಾವು ಅವರಿಗೊಂದು ಪಾಠ ಕಲಿಸಿದರೆ, ನಾವು ಆಧ್ಯಾತ್ಮಿಕವಾಗಿ ಬೆಳೆದಿಲ್ಲವೆಂದು ಅವರು ಹೇಳುತ್ತಾರೆ. 
ಶ್ರೀ ಶ್ರೀ ರವಿಶಂಕರ್: ಒಬ್ಬರಿಗೆ ಒಂದು ಪಾಠವನ್ನು ಕಲಿಸಲು, ನೀವು ಶಾಂತರಾಗಿರಬೇಕು. ನಿಮ್ಮಲ್ಲಿ ಕೋಪವಿದ್ದರೆ, ನೀವು ವಿಚಲಿತರಾಗಿದ್ದರೆ, ಒಬ್ಬರಿಗೆ ಒಂದು ಪಾಠವನ್ನು ಕಲಿಸಲು ನಿಮಗೆ ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಎಲ್ಲಾ ಸಮಯದಲ್ಲೂ ಹೊಡೆಯಿಸಿಕೊಳ್ಳಲು ನೀವು ನಿಮ್ಮ ಇನ್ನೊಂದು ಕೆನ್ನೆಯನ್ನು ನೀಡುತ್ತಾ ಇರಲು ಸಾಧ್ಯವಿಲ್ಲ. ಪಾಠವನ್ನು ಕಲಿಸಿ, ಆದರೆ ಸಹಾನುಭೂತಿಯೊಂದಿಗೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಸ್ಥಿತಿಯನ್ನು ಮತ್ತು ಅವನು ನಿಮ್ಮನ್ನು ಯಾಕೆ ಕೆರಳಿಸುತ್ತಿರುವನೆಂಬುದನ್ನು ನೀವು ಅರ್ಥಮಾಡಿಕೊಂಡಾಗ, ನೀವು ಶಾಂತ ಹಾಗೂ ಅವಿಚಲಿತ ಮನಸ್ಸಿನಿಂದ ಅವರೊಂದಿಗೆ ವ್ಯವಹರಿಸುವಿರಿ.
ಪ್ರಶ್ನೆ: ನಮ್ಮ ಸುತ್ತಲೂ ನಿರಂತರವಾಗಿ ನಕಾರಾತ್ಮಕತೆಯನ್ನು ಹರಡುವ ಜನರನ್ನು ನಾವು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಮೊದಲನೆಯದಾಗಿ, ಯಾರಿಗೂ ನಿರಂತರವಾಗಿ ನಕಾರಾತ್ಮಕತೆಯನ್ನು ಹರಡಲು ಸಾಧ್ಯವಿಲ್ಲ ಎಂಬುದನ್ನು ತಿಳಿ. ಎರಡನೆಯದಾಗಿ, ಕುಶಲತೆಯಿಂದ ಅದರೊಂದಿಗೆ ವ್ಯವಹರಿಸು. ಮೂರನೆಯದೆಂದರೆ ನಿರ್ಲಕ್ಷಿಸುವುದು.
ಪ್ರಶ್ನೆ: ನಾನು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ನೀವು ದಯವಿಟ್ಟು ವಿವರಿಸುವಿರಾ? ನಾನೊಬ್ಬ ವ್ಯಕ್ತಿಯನ್ನು ಯಾವುದೇ ಅಪೇಕ್ಷೆಯಿಲ್ಲದೆ ಪ್ರೀತಿಸುತ್ತೇನೆ, ಆದರೆ ಆ ವ್ಯಕ್ತಿಯು ನನ್ನನ್ನು ಲಘುವಾಗಿ ತೆಗೆದುಕೊಳ್ಳುತ್ತಾನೆ. ಆ ನೋವನ್ನು ನಾನು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:  ಓ, ಅವರು ನಿನ್ನನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆಯೇ? ಅವರು ನಿನ್ನನ್ನು ತಿರುಗಿ ಪ್ರೀತಿಸುವುದಿಲ್ಲವೇ? ಅವರು ತಮಗೆ ನಿನ್ನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ, ಅದು ಇರುವ ಸಮಸ್ಯೆಯೇ? ಸರಿ, ಅವರ ಪ್ರೀತಿಯನ್ನು ಪ್ರಶ್ನಿಸಬೇಡ. ಅವರು ಪ್ರೀತಿಯಿಂದಿಲ್ಲವೆಂದು ನಿನಗೆ ಅನ್ನಿಸಿದರೆ, "ನೀನು ನನ್ನನ್ನು ಪ್ರೀತಿಸುವುದಿಲ್ಲ" ಎಂದು ಆರೋಪಿಸುವುದರ ಬದಲು, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವೆ?" ಎಂದು ಅವರನ್ನು ಕೇಳು.
ಕೇವಲ ಕಲ್ಪಿಸಿಕೋ, ಒಬ್ಬರು, ನೀನು ಅವರಿಗೆ ದಯೆಯನ್ನು ತೋರಿಸುವುದಿಲ್ಲ, ನೀನು ಅವರೊಂದಿಗೆ ಸಂತೋಷವಾಗಿಲ್ಲ, ನೀನು ಸ್ನೇಹಪೂರ್ವಕವಾಗಿಲ್ಲ ಎಂದು ನಿನ್ನ ಮೇಲೆ ಆರೋಪಿಸುತ್ತಾ ಇದ್ದರೆ, ನಿನಗೆ ಏನಾಗುತ್ತದೆ?
(ಉತ್ತರ : ನಮ್ಮನ್ನು ಕಾಡಿಸಿದ ಅನುಭವವಾಗುತ್ತದೆ )
ಹೌದು! ಈಗ ನೀನು ಇನ್ನೊಬ್ಬ ವ್ಯಕ್ತಿಗೆ ಏನು ಮಾಡುತ್ತಿರುವೆಯೆಂಬುದು ನಿನಗೆ ತಿಳಿಯಿತೇ? ಅರ್ಥವಾಯಿತೇ?
ಯಾವತ್ತೂ ದೂರುತ್ತಾ ಇರುವ ಒಬ್ಬ ವ್ಯಕ್ತಿಯ ಜೊತೆಯಲ್ಲಿರಲು ಯಾರೂ ಬಯಸುವುದಿಲ್ಲ. ನಿಮ್ಮನ್ನು ಕಾಡಿಸುವ, ಯಾರಿಗೆ ನೀವು ಯಾವತ್ತೂ ವಿವರಣೆ ನೀಡಬೇಕಾಗುತ್ತದೆಯೋ ಮತ್ತು ಯಾವತ್ತೂ ನಿಮ್ಮ ಪ್ರೀತಿಗೆ ಸಾಕ್ಷಿ ನೀಡಬೇಕಾಗುತ್ತದೆಯೋ, ಅಂತಹ ಒಬ್ಬ ವ್ಯಕ್ತಿಯ ಜೊತೆಯಲ್ಲಿರಲು ಯಾರಾದರೂ ಬಯಸುತ್ತೀರಾ? ಇಲ್ಲ! ಅದು ಅಷ್ಟೊಂದು ದೊಡ್ಡ ಹೊರೆ, ಅಷ್ಟೊಂದು ದೊಡ್ಡ ಬೇಸರಿಕೆ!
ಒಂದು ಒಳ್ಳೆಯ ಜೊತೆಯೆಂದರೆ, ಯಾರು ಯಾವತ್ತೂ ಉತ್ಸಾಹವನ್ನು ಹೆಚ್ಚಿಸುತ್ತಾರೋ  ಅವರು. ಯಾರಾದರೊಬ್ಬರು ಒಳ್ಳೆಯ ಮನಸ್ಥಿತಿಯಲ್ಲಿರದಿದ್ದರೆ, "ಹೇ, ಬಾ! ಅದರ ಬಗ್ಗೆ ಮರೆತುಬಿಡು. ನಾವು ಮುಂದೆ ಸಾಗೋಣ" ಎಂದು ಅವರು ಹೇಳುತ್ತಾರೆ. ಉತ್ಸಾಹದಲ್ಲಿರುವವರೊಬ್ಬರು, ನಿಮ್ಮನ್ನು ಯಾವತ್ತೂ ಮುಂದಕ್ಕೆ ತಳ್ಳುವವರೊಬ್ಬರು ಒಳ್ಳೆಯ ಜೊತೆಯಾಗಿರುತ್ತಾರೆ. ವಿವರಣೆಗಳನ್ನು ಕೇಳುವವರೊಬ್ಬರು, ನಿಮ್ಮ ಬಗ್ಗೆ ಸಂಶಯ ಪಡುವವರು ಮತ್ತು ನಿಮ್ಮನ್ನು ಪ್ರಶ್ನಿಸುವವರು ಒಳ್ಳೆಯ ಜೊತೆಯಲ್ಲ.
ಆದುದರಿಂದ, ಒಬ್ಬರಿಗೆ ನಿಮ್ಮ ಮೇಲಿರುವ ಪ್ರೀತಿಯ ಬಗ್ಗೆ ಸಂಶಯ ಪಡಬೇಡಿ. ಎಲ್ಲಾ ಸಮಯದಲ್ಲೂ ಪ್ರಶ್ನಿಸುತ್ತಾ ಅಥವಾ ದೂರುತ್ತಾ ಇರಬೇಡಿ. ಮುಂದೆ ಸಾಗಿ!
ಪ್ರಶ್ನೆ: ಆರ್ಟ್ ಆಫ್ ಲಿವಿಂಗ್ ಸೇರಿದಂತೆ, ಯೋಗ ಮತ್ತು ಧ್ಯಾನವನ್ನು ಕಲಿಸುವ ಅನೇಕ ಸಂಸ್ಥೆಗಳು ಭಾರತದಲ್ಲಿವೆ. ನಾವೆಲ್ಲರೂ, ಮಾನವಕುಲಕ್ಕೆ ಶಾಂತಿಯನ್ನು ತರುವ ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುವುದಾಗಿದ್ದರೆ, ಮತ್ತೆ ಯಾಕೆ ಈ ಎಲ್ಲಾ ಸಂಸ್ಥೆಗಳು ಅಷ್ಟೊಂದು ವಿಭಿನ್ನವಾಗಿವೆ?
ಶ್ರೀ ಶ್ರೀ ರವಿಶಂಕರ್: ಕೇಳು, ಒಂದೇ ಉದ್ದೇಶದ ಜನರು ಯಾವಾಗಲೂ ಜೊತೆಯಲ್ಲಿರುತ್ತಾರೆ. ಅವರು ಅದನ್ನು ವಿಭಿನ್ನ ರೀತಿಗಳಲ್ಲಿ ಮಾಡಿದರೂ, ಉದ್ದೇಶ ಒಂದೇ ಆಗಿರುವುದರಿಂದ ಅಲ್ಲಿ ಯಾವುದೇ ಸಂಘರ್ಷವಿರುವುದಿಲ್ಲ.
ನಿಮಗೆ ಗೊತ್ತಿದೆಯಾ, ಆತ್ಮವು ವೈವಿಧ್ಯತೆಯನ್ನು ಪ್ರೀತಿಸುತ್ತದೆ.
ನಾನು ಪಾಕಿಸ್ತಾನಕ್ಕೆ ಹೋದಾಗ, ಜನರು ನನ್ನಲ್ಲಿ, ಭಾರತದಲ್ಲಿ ನಮಗೆ ಯಾಕೆ ಅಷ್ಟೊಂದು ದೇವರಿದ್ದಾರೆ, ಒಬ್ಬನೇ ಒಬ್ಬ ದೇವರಿರಬೇಕು ಎಂದು ಕೇಳಿದರು.
ನಾನು ಅವರಿಗಂದೆ, "ನಿಮ್ಮಲ್ಲಿ, ಒಂದೇ ಗೋಧಿಯಿಂದ ಮಾಡಿದ ಅಷ್ಟೊಂದು ಬಗೆಯ ವ್ಯಂಜನಗಳು ಯಾಕಿವೆ? ದೇವರು ಹಲವಾರು ತರಕಾರಿಗಳನ್ನು ಸೃಷ್ಟಿಸಿದ್ದಾನೆ. ಅವನು ಕೇವಲ ಬದನೆಕಾಯಿಯನ್ನು ಮಾಡಿ, ’ನಿಮ್ಮ ಜೀವಮಾನವಿಡೀ ಇದನ್ನು ತಿನ್ನಿ’ ಎಂದು ಹೇಳಲಿಲ್ಲ. ಎಷ್ಟೊಂದು ಬಗೆಯ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ದೇವರು ಸೃಷ್ಟಿಸಿದ್ದಾರೆ ಎಂದು ನೋಡಿ, ಅಲ್ಲವೇ? ಹಾಗೆ! ಭಾರತದಲ್ಲಿ ಹಲವಾರು ದೇವರಿದ್ದಾರೆ, ಆದರೆ ಒಬ್ಬನೇ ಒಬ್ಬ ಪರಮಾತ್ಮ. ಒಬ್ಬ ದೇವರು ಹಲವಾರು ವಿಭಿನ್ನ ಹೆಸರುಗಳಲ್ಲಿ ಮತ್ತು ರೂಪಗಳಲ್ಲಿ ಇದ್ದಾನೆ. ಅದು ಆಚರಣೆ."
ನೋಡಿ, ಇಲ್ಲಿ ಎಲ್ಲರೂ ಎಷ್ಟೊಂದು ಬಣ್ಣಗಳನ್ನು ಧರಿಸಿದ್ದಾರೆ. ಎಲ್ಲರೂ ಒಂದು ಸಮವಸ್ತ್ರದಲ್ಲಿರುತ್ತಿದ್ದರೆ, ಇದೊಂದು ಸೇನಾ ಶಿಬಿರದಂತೆ ಕಾಣಿಸುತ್ತಿತ್ತು! ತಿಳಿಯಿತಾ? ವೈವಿಧ್ಯತೆಯು ಸೃಷ್ಟಿಯ ಸೌಂದರ್ಯವಾಗಿದೆ ಮತ್ತು ನಾವದನ್ನು ಗೌರವಿಸಬೇಕು.
ನಾನಿದನ್ನು ಹೇಳಿದಾಗ ಅವರು ಅದನ್ನು ಬಹಳ ಮೆಚ್ಚಿದರು ಮತ್ತು ಅವರಂದರು, "ಯಾರೂ ನಮಗೆ ಇದನ್ನು ಈ ರೀತಿಯಲ್ಲಿ ಮೊದಲು ವಿವರಿಸಿರಲಿಲ್ಲ!"
ಪ್ರಶ್ನೆ: ಒಬ್ಬ ವ್ಯಕ್ತಿಯು ದೇವರನ್ನು ನಂಬುತ್ತಾನೆ, ಆದರೆ ಮೋಸ ಮಾಡುತ್ತಾನೆ ಮತ್ತು ಕಳ್ಳತನ ಮಾಡುತ್ತಾನೆ. ಇನ್ನೊಬ್ಬನು ದೇವರನ್ನು ನಂಬುವುದಿಲ್ಲ, ಆದರೆ ಮೋಸ ಮಾಡುವುದಿಲ್ಲ. ಯಾರು ಸರಿ?
ಶ್ರೀ ಶ್ರೀ ರವಿಶಂಕರ್: ನೀನು ಈಗಾಗಲೇ ಉತ್ತರವನ್ನು ನೀಡಿರುವೆ! ಇದು, "ನಾನು ಒಂದು ತಟ್ಟೆಯಲ್ಲಿ ಇದ್ದಿಲನ್ನು ಮತ್ತು ಇನ್ನೊಂದು ತಟ್ಟೆಯಲ್ಲಿ ಬೆಣ್ಣೆಯನ್ನು ಇಟ್ಟಿರುವೆ. ನಿಮಗೆ ಯಾವುದು ಬೇಕು?" ಎಂದು ನನ್ನಲ್ಲಿ ಕೇಳಿದಂತಾಯಿತು. ಅದು ಬಹಳ ಸ್ಪಷ್ಟ.
ಯಾರಾದರೊಬ್ಬರು ದೇವರನ್ನು ನಂಬುವುದಿದ್ದರೆ, ಅವರು ಇತರರನ್ನು ಮೋಸಗೊಳಿಸಲು ಹೇಗೆ ಸಾಧ್ಯ? ನನಗಿದು ಅರ್ಥವಾಗುವುದಿಲ್ಲ. ಅದು ಹೀಗಿರಲೂಬಹುದು: ಇತರರನ್ನು ಮೋಸಗೊಳಿಸುತ್ತಿರುವುದಕ್ಕಾಗಿ ಆತನ ಮನಃಸಾಕ್ಷಿಯು ಆತನನ್ನು ಕೆಟ್ಟದಾಗಿ ಚುಚ್ಚುತ್ತಿರಬಹುದು ಮತ್ತು ಅವನು ದೇವರಲ್ಲಿ ಕ್ಷಮೆ ಕೇಳುತ್ತಿರಬಹುದು. ಮೋಸ ಮಾಡುವ ಒಬ್ಬ ವ್ಯಕ್ತಿಯು ಅಜ್ಞಾನದಲ್ಲಿ ಸಿಲುಕಿರುತ್ತಾನೆ. ಅಲ್ಲಿ ವೈಶಾಲ್ಯತೆಯಿರುವುದಿಲ್ಲ. ಅವನಲ್ಲಿ ಎಲ್ಲೋ ಭಯವಿರುತ್ತದೆ ಮತ್ತು ಅದಕ್ಕೇ ಅವನು ಅಂತಹ ಕೆಲಸಗಳನ್ನು ಮಾಡುವುದು.
ಪ್ರಶ್ನೆ: ನನ್ನ ಸ್ನೇಹಿತರಲ್ಲೊಬ್ಬನಿಗೆ ಹುಚ್ಚು ಹಿಡಿದಿದೆ. ಅವನು ೨೪X೭ ಕೆಲಸ ಮಾಡುತ್ತಾನೆ. ಅವನ ಹೆತ್ತವರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್: ಈ ದಿನಗಳಲ್ಲಿ ಇದು ಬಹಳಷ್ಟು ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಬಹಳಷ್ಟು ಒತ್ತಡ ಇದೆ, ಪರೀಕ್ಷೆಗಳಲ್ಲಿ ಚೆನ್ನಾಗಿ ಮಾಡಲು ಒತ್ತಡ. ಆದುದರಿಂದ ಅವರು ಹಗಲಿರುಳು ಬಹಳಷ್ಟು ಓದುತ್ತಾ ಇರುತ್ತಾರೆ.
ಒಬ್ಬ ಯುವಕನು ನನ್ನಲ್ಲಿಗೆ ಬಂದು, ಅವನು, ನಾಲ್ಕು ದೊಡ್ಡ ಲ್ಯಾಂಪುಗಳು ತನ್ನ ಮೇಜಿನ ಮೇಲೆ ಪ್ರಕಾಶ ಬೀರುವಂತೆ ಇಟ್ಟು ಓದುವುದಾಗಿ ಮತ್ತು ತಾನು ಹಗಲಿರುಳು ಅಧ್ಯಯನ ಮಾಡುವುದಾಗಿ ಹೇಳಿದನು. ನಾವು ಮೆದುಳಿನ ಬಗ್ಗೆ ಜಾಗ್ರತೆ ವಹಿಸಬೇಕು. ನೀವು ಆ ರೀತಿಯಲ್ಲಿ ಮೆದುಳನ್ನು ಅತಿಯಾಗಿ ಬಳಸಲು ಸಾಧ್ಯವಿಲ್ಲ. ಆಗ ಹಠಾತ್ತನೆ ಏನೋ ಆಗುತ್ತದೆ ಮತ್ತು ಫ್ಯೂಸ್ ಹೋಗುತ್ತದೆ!
ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡಿ. ಅದನ್ನು ಯಾವಾಗಾದರೊಮ್ಮೆ ಮಾಡಿದರೆ ಸಾಲದು. ಅಂತಹ ಎಲ್ಲಾ ಸಮಸ್ಯೆಗಳನ್ನು ಯೆಸ್ ಪ್ಲಸ್ ನ ಗಮನಕ್ಕೆ ತನ್ನಿ.