ಶುಕ್ರವಾರ, ಆಗಸ್ಟ್ 3, 2012

ಪೂರ್ವಜರನ್ನು ಗೌರವಿಸೋಣ

03
2012
Aug
ಬೆಂಗಳೂರು ಆಶ್ರಮ, ಭಾರತ

(ಹಲವಾರು ಭಕ್ತರು ಗುರೂಜಿಯವರಿಗೆ ನವಿಲುಗರಿಗಳನ್ನು ಅರ್ಪಿಸುತ್ತಾರೆ. ಅದಕ್ಕೆ ಅವರು ಹೇಳುತ್ತಾರೆ)
ಇವುಗಳನ್ನು ನವಿಲುಗಳಿಂದ ಕೀಳಲಾಗಿದೆಯೇ ಅಥವಾ ಅವುಗಳು ಸಹಜವಾಗಿ ಕೆಳಬಿದ್ದು, ಜನರು ಅವುಗಳನ್ನು ಹೆಕ್ಕುತ್ತಾರೆಯೇ ಎಂಬುದನ್ನು ನಾನು ತಿಳಿಯಬೇಕು. ಅವರು ಅವುಗಳನ್ನು ಕೀಳುವುದಾದರೆ, ಅವುಗಳನ್ನು ತರಲೇಬೇಡಿ. ನವಿಲುಗಳಿಂದ ಕೀಳಲು ನಾವು ಜನರಿಗೆ ಪ್ರೋತ್ಸಾಹ ನೀಡಬಾರದು. ಇದು ಸಹಜವಾಗಿ ಬೀಳುವುದೇ ಅಥವಾ ಜನರು ಕೀಳುತ್ತಾರೆಯೇ ಎಂಬುದು ನನಗೆ ತಿಳಿಯದು.
(ಸಭಿಕರು: ಅವರು ಕೀಳುತ್ತಾರೆ ಗುರೂಜಿ)
ಹಾಗಾದರೆ ನೀವಿದನ್ನು ತರಲೇಬಾರದು. ಅದನ್ನು ಕೊಂಡುಕೊಳ್ಳಲೇಬೇಡಿ ಯಾಕೆಂದರೆ, ನೀವು ಅದನ್ನು ಕೊಂಡುಕೊಳ್ಳುತ್ತಾ ಇದ್ದರೆ ಅವರು ಇನ್ನೂ ಹೆಚ್ಚು ನವಿಲುಗಳನ್ನು ಕೊಲ್ಲಬಹುದು. ಯಾರೂ ಇದನ್ನು ಕೊಂಡುಕೊಳ್ಳಬಾರದು.
ಯಾರೂ ನವಿಲು ಗರಿಗಳನ್ನು ಕೊಂಡುಕೊಳ್ಳಬಾರದು ಯಾಕೆಂದರೆ ಅದು ಅದು ಕೆಲವು ಜನರಲ್ಲಿ, ನವಿಲುಗಳಿಂದ ಅವುಗಳನ್ನು ಬಲವಂತವಾಗಿ ಕೀಳಲು ಆಸೆಯನ್ನು ಹುಟ್ಟಿಸಬಹುದು - ಈ ಸೂಚನೆಯನ್ನು ನಾವು ಎಲ್ಲೆಡೆಗಳಲ್ಲಿಯೂ ಹಾಕೋಣ. ನೀವೇನನ್ನುವಿರಿ? ಸಮ್ಮತಿಸುವಿರಾ!
ಇದು ಈಗ ಶುರುವಾದ ಒಂದು ಹೊಸ ಪ್ರವೃತ್ತಿ. ನೀವು ಇವುಗಳನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಬೇಕು. ಇವತ್ತು ನಾವೊಂದು ಒಳ್ಳೆಯ ನಿರ್ಧಾರವನ್ನು ಮಾಡಿದೆವು!
ಪ್ರಶ್ನೆ: ಗುರೂಜಿ, ನಾನು ನಿಮ್ಮೊಂದಿಗೆ ನೃತ್ಯ ಮಾಡಲು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್:
ನನ್ನ ಆತ್ಮವು ಯಾವತ್ತೂ ನೃತ್ಯ ಮಾಡುತ್ತಿರುತ್ತದೆ.
ಪ್ರಶ್ನೆ: ಗುರೂಜಿ, ಗುರುವಿಗೆ ಒಬ್ಬ ವ್ಯಕ್ತಿಯ ಕರ್ಮವನ್ನು ಬದಲಾಯಿಸಲು ಸಾಧ್ಯವೇ, ಮತ್ತು ಅದು ಯಾವಾಗ ಆಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಒಬ್ಬ ಗುರುವಿಗೆ ಮಾತ್ರವಾಗಿ ಒಬ್ಬ ವ್ಯಕ್ತಿಯ ಕರ್ಮವನ್ನು ಬದಲಾಯಿಸಲು ಸಾಧ್ಯವಾಗಿರುತ್ತಿದ್ದರೆ, ಅವರು ಎಲ್ಲರ ಕರ್ಮವನ್ನೂ ಒಂದೇ ಏಟಿಗೆ ಬದಲಾಯಿಸಿಬಿಡುತ್ತಿದ್ದರು. ಇಲ್ಲ, ನೀವು ಕೂಡಾ ಸ್ವಲ್ಪ ಪ್ರಯತ್ನವನ್ನು ಹಾಕಬೇಕು. ಗುರುವು ಖಂಡಿತವಾಗಿ ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡುಗಡೆಗೊಳಿಸಬಲ್ಲರು. ನೀವೊಂದು ಪಾಪ ಮಾಡಿದಾಗ ಮತ್ತು ನೀವೊಂದು ತಪ್ಪು ಮಾಡಿದ್ದೀರೆಂಬುದನ್ನು ನೀವು ಅರ್ಥ ಮಾಡಿಕೊಂಡಾಗ, ನಿಮಗೆ ನಿಮ್ಮನ್ನೇ ಆ ಪಾಪದಿಂದ ಬಿಡುಗಡೆಪಡಿಸಲು ಸಾಧ್ಯವಾಗುವುದಿಲ್ಲ, ಆದರೆ ಗುರುವು ಖಂಡಿತವಾಗಿ ನಿಮಗಾಗಿ ಅದನ್ನು ಮಾಡುತ್ತಾರೆ. ಆದುದರಿಂದ, ಆ ಅರ್ಥದಲ್ಲಿ, ಹೌದು! ಅದೇ ಸಮಯದಲ್ಲಿ, ನೀವು ಪುರುಷಾರ್ಥವನ್ನು (ಸ್ವಪ್ರಯತ್ನ) ಮಾಡಬೇಕು. ನೀವು ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡಬೇಕು. ಪ್ರೀತಿ ಮತ್ತು ಭಕ್ತಿಯ ಭಾವನೆಯು, ಬಿಡುಗಡೆಯಾಗುವ ಕರ್ಮದ ನೇರ  ಪ್ರಮಾಣದಲ್ಲಿರುತ್ತದೆ.
ಪ್ರಶ್ನೆ: ನನ್ನ ಅಂಜುಬುರುಕುತನದ ಕಾರಣದಿಂದ, ನಾನು ಜೀವನದಲ್ಲಿನ ಎಲ್ಲಾ ಸವಾಲುಗಳಿಂದ ದೂರ ಓಡುತ್ತೇನೆ. ನಾನು ಇದರಿಂದ ಹೊರಬರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಮೊತ್ತಮೊದಲನೆಯದಾಗಿ, ಯಾವುದೆಲ್ಲಾ ಸವಾಲುಗಳು ನಿನ್ನ ಮುಂದಿವೆಯೋ ಅವುಗಳನ್ನು ಎದುರಿಸಲಿರುವ ಶಕ್ತಿಯು ನಿನ್ನಲ್ಲಿದೆ ಎಂಬುದನ್ನು ತಿಳಿದುಕೋ. ನೀನದನ್ನು ಗುರುತಿಸಿಕೊಳ್ಳಬೇಕು. ಅದನ್ನೆದುರಿಸಲಿರುವ ಶಕ್ತಿ ಮತ್ತು ಚೈತನ್ಯವು ನಿನ್ನಲ್ಲಿದೆ. ಈ ಮನವರಿಕೆಯೊಂದಿಗೆ ನೀನು ಮುಂದೆ ಸಾಗು, ನಾನು ನಿನ್ನೊಂದಿಗಿದ್ದೇನೆ.
ಪ್ರಶ್ನೆ: ಗುರೂಜಿ, ಅಗಲಿ ಹೋದವರಿಗಾಗಿ ನಾವು ನಿರ್ದಿಷ್ಟ ಶಾಸ್ತ್ರಗಳನ್ನು ಮಾಡುತ್ತೇವೆ. ಈ ಶಾಸ್ತ್ರಗಳಿಗೆ ಏನಾದರೂ ಪ್ರಮಾಣವಿದೆಯೇ?
ಶ್ರೀ ಶ್ರೀ ರವಿಶಂಕರ್:
ಈ ಶಾಸ್ತ್ರಗಳಿರುವುದು, ಅಗಲಿ ಹೋದ ಆತ್ಮಗಳಿಗೆ ನಿಮ್ಮ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಮಾತ್ರ. ಆದರೆ ಆಗಿರುವುದೇನೆಂದರೆ, ಪಂಡಿತರು ಮತ್ತು ಪುರೋಹಿತರು ಅದನ್ನು ಎಷ್ಟು ಸಂಕೀರ್ಣಗೊಳಿಸಿದ್ದಾರೆಂದರೆ, ಕೆಲವೊಮ್ಮೆ ಅವರೇನು ಹೇಳುತ್ತಿರುವರೆಂಬುದು ನಿಮಗೆ ಅರ್ಥವಾಗುವುದಿಲ್ಲ. ಅವರು ಸಂಸ್ಕೃತದಲ್ಲಿ ಏನು ಹೇಳುತ್ತಿರುವರೆಂಬುದನ್ನು ನಿಮಗೆ ಅನುವಾದಿಸಿದರೆ, ಅದು ನಿಮಗೆ ಇದರ ಬಗ್ಗೆ ಒಂದು ಕಲ್ಪನೆಯನ್ನು ನೀಡುವುದು.
ನೀವು ಎಳ್ಳು ಬೀಜಗಳನ್ನು ತೆಗೆದುಕೊಂಡು, "ತರ್ಪಯಾಮಿ, ತರ್ಪಯಾಮಿ, ತರ್ಪಯಾಮಿ" ಎಂದು ಹೇಳುವುದು ಯಾಕೆಂದು ನಿಮಗೆ ಗೊತ್ತಿದೆಯಾ? ಅದು ತರ್ಪಣಂ ಎಂದು ಕರೆಯಲ್ಪಡುತ್ತದೆ. ನೀವು ಅಗಲಿ ಹೋದವರ ಹೆಸರನ್ನು ತೆಗೆದುಕೊಳ್ಳುತ್ತೀರಿ ಮತ್ತು ಸ್ವಲ್ಪ ಎಳ್ಳು ಬೀಜಗಳು ಹಾಗೂ ನೀರನ್ನು ತೆಗೆದುಕೊಂಡು, ಅದನ್ನು ಒಂದು ತಟ್ಟೆಯ ಮೇಲೆ ಎರೆಯುತ್ತೀರಿ. ನೀವಿದನ್ನು ಯಾಕೆ ಮಾಡುವಿರಿ? ನೀವಿದನ್ನು ಮಾಡುವುದು ಅಗಲಿದ ಆತ್ಮಗಳಿಗೆ, "ನಿನ್ನ ಮನಸ್ಸಿನಲ್ಲಿ ಏನಾದರೂ ಬಯಕೆಗಳಿದ್ದಲ್ಲಿ, ಅವುಗಳು ಎಳ್ಳುಬೀಜಗಳಂತೆ, ಕ್ಷುಲ್ಲಕವಾದವು. ಅವುಗಳು ಚಿಕ್ಕ ವಿಷಯಗಳಿಗಾಗಿ ಇರುವುದು, ಆದುದರಿಂದ ನೀನು ಅದನ್ನು ಸುಮ್ಮನೇ ಬಿಟ್ಟುಬಿಡು. ದೈವಸನ್ನಿಧಿಯಲ್ಲಿ ಅನಂತಾನಂದ ಮತ್ತು ಪರಮಸುಖವಿದೆ, ಕೇವಲ ಅದನ್ನು ಅನುಭವಿಸು. ನಿನ್ನ ಅತೃಪ್ತ ಬಯಕೆಗಳನ್ನು ನಾವು ಈಡೇರಿಸುತ್ತೇವೆ. ನೀನು ತೃಪ್ತನಾಗು, ಸಂತೋಷಗೊಳ್ಳು" ಎಂದು ಹೇಳಲು. ತರ್ಪಣಂನಲ್ಲಿ ಅಗಲಿದ ಆತ್ಮಗಳಿಗೆ ನಾವು ಹೇಳುವುದು ಇದನ್ನೇ.
ಅವರಿಗೆ ಬಯಕೆಗಳಿರುತ್ತವೆ; ಅವರು ತಮ್ಮ ಮೊಮ್ಮಕ್ಕಳ, ಮರಿಮಕ್ಕಳ ಮದುವೆ ನೋಡಲು ಬಯಸುತ್ತಾರೆ ಅಥವಾ ಮರಿಮಕ್ಕಳು ಇನ್ನೊಬ್ಬಳು ಮಗಳನ್ನು ಪಡೆಯುವುದನ್ನು ನೋಡಲು ಬಯಸುತ್ತಾರೆ. ಸಾಯುವ ಮೊದಲು ಈ ರೀತಿಯ ಬಯಕೆಗಳು ಅವರ ಮನಸ್ಸಿನಲ್ಲಿ ಉಳಿಯುತ್ತವೆ. ಅದಕ್ಕೆ ನಾವು ಅವರಿಗೆ, "ನೋಡಿ, ಈ ಬಯಕೆಗಳು ಚಿಕ್ಕವು, ಅವುಗಳನ್ನು ಬಿಟ್ಟುಬಿಡಿ. ಪ್ರೀತಿಯು ಜೀವನದ ಸಾರ ಮತ್ತು ದೈವವು ಸಂಪೂರ್ಣ ಪ್ರೀತಿಯಾಗಿದೆ. ಸಂಪೂರ್ಣ ಪ್ರೀತಿಯಾಗಿರುವ ಪ್ರಕಾಶದ ಕಡೆಗೆ ನೀವು ಚಲಿಸಿರಿ" ಎಂದು ಹೇಳುತ್ತೇವೆ. ಆದುದರಿಂದ, ಅಗಲಿದ ಆತ್ಮಕ್ಕೆ ಸೂಚನೆಯನ್ನು ಕೊಡುವುದೇ ಶ್ರಾದ್ಧವಾಗಿದೆ.
ನಂತರ ನೀವು ಅವರಲ್ಲಿ ಆಶೀರ್ವಾದಗಳನ್ನು ಕೇಳುತ್ತೀರಿ, "ನಾನು ನನ್ನ ಭಾಗವನ್ನು ಮಾಡುತ್ತೇನೆ. ನೀವು ಅಲ್ಲಿಂದ ಮಾಡಬಹುದಾದುದೇನೆಂದರೆ, ನನ್ನ ಮನಸ್ಸು ಸರಿಯಾದ ಪಥದಲ್ಲಿರಲು ಹಾಗೂ ಸರಿಯಾದ ಸಮಯದಲ್ಲಿ ನಾನು ಸರಿಯಾದ ಕೆಲಸವನ್ನು ಮಾಡಲು ನನಗೆ ಆಶೀರ್ವಾದವನ್ನು ನೀಡುವುದು. ನನಗೆ ಒಳ್ಳೆಯ ಭಾಗ್ಯವನ್ನು, ಸಮೃದ್ಧಿಯನ್ನು ನೀಡಿ ಆಶೀರ್ವದಿಸಿ."
ಈ ರೀತಿಯ ಶ್ರಾದ್ಧವು ಪ್ರಪಂಚದ ಎಲ್ಲೆಡೆಗಳಲ್ಲಿಯೂ ಇದೆ. ದಕ್ಷಿಣ ಅಮೇರಿಕಾದಲ್ಲಿ ಕೂಡಾ ಇದನ್ನು ಮಾಡುತ್ತಾರೆ. ಒಂದು ನಿರ್ದಿಷ್ಟ ದಿನದಂದು ಇಡಿಯ ನಗರವು ರಸ್ತೆಗೆ ಬಂದು, ಅಲ್ಲಿ ತಮ್ಮ ಪೂರ್ವಿಕರಿಗಾಗಿ ಪ್ರತಿಕೃತಿ ಮತ್ತು ಹಲವಾರು ಇತರ ವಸ್ತುಗಳನ್ನು ಸುಡುತ್ತಾರೆ. ಇದನ್ನು ಚೈನಾ ಮತ್ತು ಸಿಂಗಾಪೂರಿನಲ್ಲಿಯೂ ಮಾಡುತ್ತಾರೆ.
ಸಿಂಗಾಪೂರಿನಲ್ಲಿ ಏನು ಮಾಡುತ್ತಾರೆಂದು ನಿಮಗೆ ಗೊತ್ತಾ? ಪೂರ್ವಿಕರಿಗಾಗಿ ಒಂದು ನಿರ್ದಿಷ್ಟ ದಿನವಿದೆ. ಪೂರ್ವಿಕರಿಗೆ ಯಾವುದರ ಮೇಲೆಲ್ಲಾ ಅನುರಾಗವಿತ್ತೋ, ಅವರು ಆ ವಸ್ತುಗಳನ್ನು ಕಾಗದದಲ್ಲಿ ತಯಾರಿಸಿ, ಅವುಗಳನ್ನು ಸುಡುತ್ತಾರೆ. ತಮ್ಮ ತಂದೆಯು ಕಾರುಗಳನ್ನು ಪ್ರೀತಿಸಿದ್ದರೆ, ಅವರೊಂದು ಒಳ್ಳೆಯ ಬೆನ್ಜ಼್ ಕಾರನ್ನು ತಯಾರಿಸಿ, ಸಿಂಗಾಪೂರಿನ ರಸ್ತೆಯಲ್ಲಿಡುತ್ತಾರೆ ಮತ್ತು ಅದನ್ನು ಸುಡುತ್ತಾರೆ. ಸಿಂಗಾಪೂರ್ ಅಷ್ಟೊಂದು ಸ್ವಚ್ಛವಾದ ಮತ್ತು ಅಚ್ಚುಕಟ್ಟಾದ ನಗರ, ಆದರೆ ವರ್ಷದ ಆ ದಿನದಂದು ಅದು ಬಹಳ ಕೊಳೆಯಾಗಿರುತ್ತದೆ ಯಾಕೆಂದರೆ ಎಲ್ಲೆಡೆಗಳಲ್ಲಿಯೂ ನಿಮಗೆ ಹೊತ್ತಿಸಿದ ಕಾಗದಗಳು ಮೂಟೆಗಟ್ಟಲೆ ಕಾಣಸಿಗುತ್ತವೆ.
ಚೈನಾದಲ್ಲಿರುವ ನಂಬಿಕೆಯೇನೆಂದರೆ, ನೀವು ಸ್ವಲ್ಪ ನಕಲಿ ನೋಟುಗಳನ್ನು ಹೊತ್ತಿಸಿದರೆ ಅದು ಪೂರ್ವಿಕರನ್ನು ಹೋಗಿ ಸೇರುತ್ತದೆ ಮತ್ತು ಅವರು ನಿಮಗೆ ಒಳ್ಳೆಯ ಭಾಗ್ಯವನ್ನು ನೀಡುತ್ತಾರೆ ಎಂದು. ಕೆಲವೊಮ್ಮೆ ನನಗನಿಸುತ್ತದೆ, ಇದು ಮೋಸವೆಂದು. ಆದರೆ ಅದೇ ಸಮಯದಲ್ಲಿ, ಇದು ಕೇವಲ ನಂಬಿಕೆ.
ಹೀಗೆ, ಅವರು ಸರಿಯಾಗಿ ರಸ್ತೆಯ ನಡುವಿನಲ್ಲಿ ಮನೆಗಳನ್ನು ಕಟ್ಟುತ್ತಾರೆ ಮತ್ತು ಅವುಗಳನ್ನು ಸುಟ್ಟು ಹಾಕುತ್ತಾರೆ. ಇನ್ನೊಂದು ಬದಿಯಿಂದ ಆಶೀರ್ವಾದವು ಬರುವುದೆಂದು ಅವರು ನಂಬುತ್ತಾರೆ.
ಇನ್ನೊಂದು ಬದಿಯಲ್ಲಿರುವ ಜನರೊಂದಿಗೆ ಜೋಡಿಕೊಳ್ಳುವ ಇಂತಹ ರೀತಿಯೇ ಶ್ರಾದ್ಧವಾಗಿದೆ. ಇದುವೇ ಶ್ರದ್ಧೆಯಾಗಿದೆ; ಇನ್ನೊಂದು ಬದಿಗೆ ದಾಟಿ ಹೋದ ಜನರಿಗೆ ಶ್ರದ್ಧೆಯಿಂದ ಗೌರವವನ್ನು ಅರ್ಪಿಸುವುದು.
ಯುರೋಪಿನಲ್ಲಿ ಕೂಡಾ 'ಎಲ್ಲಾ ಸಂತರ ದಿನ' ಎಂದಿದೆ. ಜನರು ಹೋಗಿ, ಸ್ಮಶಾನ ಭೂಮಿಯಲ್ಲಿ ಹೂವುಗಳನ್ನು ಸಮರ್ಪಿಸುತ್ತಾರೆ.
ಬಹುತೇಕ ಎಲ್ಲಾ ಧರ್ಮಗಳಲ್ಲಿ ಮತ್ತು ಎಲ್ಲಾ ಸಂಸ್ಕೃತಿಗಳಲ್ಲಿ ಶ್ರದ್ಧೆಯೆಂಬುದಿದೆ. ಇಲ್ಲಿ ಸಂಸ್ಕೃತದಲ್ಲಿ ಇದು ಬಹಳ ಅರ್ಥವತ್ತಾಗಿದೆ, ಆದರೆ ಜನರಿಗೆ ಅರ್ಥವಾಗುವುದಿಲ್ಲ.
ಉದಾಹರಣೆಗೆ ಪಿಂಡ ದಾನ - ನೋಡಿ, ನಮ್ಮ ಶರೀರವು ಆಹಾರದ ಒಂದು ಉಂಡೆಯಿಂದ ಬಂದಿದೆ, ಅಲ್ಲವೇ? ಆದುದರಿಂದ ಶಾಸ್ತ್ರವೇನೆಂದರೆ, ಅವರು ಒಂದು ಆಹಾರದ ಉಂಡೆಯನ್ನು ಇಡುತ್ತಾರೆ. ಅದು, ಅಗಲಿದವರು ಇಷ್ಟಪಡುತ್ತಿದ್ದಂತಹ ಏನೇ ಆಗಿರಬಹುದು. ಆದುದರಿಂದ, ಅಗಲಿದವರ ನೆನಪಿನಲ್ಲಿ ನೀವು ಸ್ವಲ್ಪ ಒಳ್ಳೆಯ ಆಹಾರವನ್ನು ತಯಾರಿಸುತ್ತೀರಿ ಮತ್ತು ಅವುಗಳನ್ನು ಬಡವರಿಗೆ ಬಡಿಸುತ್ತೀರಿ. ಇದು ಶ್ರದ್ಧೆ. ಪೂರ್ವಿಕರನ್ನು ನೆನಪಿಸಿಕೊಂಡು ಇದನ್ನು ಕೃತಜ್ಞತಾ ಭಾವದಿಂದ ಮತ್ತು ಆಚರಣೆಯ ಭಾವದಿಂದ ಮಾಡಬೇಕು. ಇಷ್ಟು ಮಾಡಲು ನಿಮಗೆ ಸಾಧ್ಯವಿದೆ; ಅವರ ನೆನಪಿನಲ್ಲಿ, ಅವರು ಇಷ್ಟಪಡುತ್ತಿದ್ದಂತಹ ಆಹಾರವನ್ನು ಸ್ವಲ್ಪ ತಯಾರಿಸುವುದು ಮತ್ತು ನೀವು ತಿಂದು, ಕೆಲವು ಜನರಿಗೆ ಬಡಿಸಿ ಆನಂದಪಡುವುದು.
ಅವರಿಗೆ ಧನ್ಯವಾದಗಳನ್ನರ್ಪಿಸಿ ಮತ್ತು ಅವರಿರುವ ಪ್ರಪಂಚದಲ್ಲಿ ಅವರಿಗೆ ಅಭಿವೃದ್ಧಿಯನ್ನು ಹಾರೈಸಿ ಹಾಗೂ ಇಲ್ಲಿನ ನಿಮ್ಮ ಯಾತ್ರೆಯಲ್ಲಿ ನೀವು ಒಳ್ಳೆಯ ಅಭಿವೃದ್ಧಿ ಹೊಂದುವಂತೆ ಅವರ ಅಶೀರ್ವಾದವನ್ನು ಕೇಳಿಕೊಳ್ಳಿ. ಅಷ್ಟೆ.
ಪ್ರಶ್ನೆ: ಜನರು ತಮ್ಮ ಜೀವನವನ್ನು ಕೊನೆಗೊಳಿಸಲು ಯಾಕೆ ನಿರ್ಧರಿಸುತ್ತಾರೆ?
ಶ್ರೀ ಶ್ರೀ ರವಿಶಂಕರ್:
ಅವರು ಅದನ್ನು ಮಾಡುವುದು ಯಾಕೆಂದರೆ, ಬುದ್ಧಿಯ ಕೊರತೆಯಿಂದ. ಜನರು ಯಾಕೆ ಅದನ್ನು ಮಾಡುತ್ತಾರೆಂದರೆ, ಅವರು ಸುಖಕ್ಕೆ ಬಹಳಷ್ಟು ಅಂಟಿಕೊಂಡಿದ್ದಾರೆ. ಆದುದರಿಂದ, ಅವರಿಗೆ ಕಷ್ಟದ ಅನುಭವವಾದಾಗ, ಈ ಕಷ್ಟವನ್ನು ತೊಡೆದುಹಾಕಲು ಅವರು ತಮ್ಮನ್ನೇ ಕೊಲ್ಲುತ್ತಾರೆ. ಅದೊಂದು ಮೂರ್ಖ ಕೆಲಸ. ಅದು, ನೀವು ಚಳಿಯಲ್ಲಿ ನಡುಗುತ್ತಿರುವಾಗ ನೀವು ನಿಮ್ಮ ಜಾಕೆಟ್ ಮತ್ತು ಅಂಗಿಯನ್ನು ತೆಗೆದಂತೆ. ಇದನ್ನು ಮಾಡುವುದರಿಂದ ಚಳಿಯು ಕಡಿಮೆಯಾಗುವುದಿಲ್ಲ. ಆದರೆ ಈ ತಿಳುವಳಿಕೆ ಇಲ್ಲ ಮತ್ತು ಆದುದರಿಂದ ಅವರು ಅದನ್ನು ಮಾಡುತ್ತಾರೆ. ಅದಕ್ಕಾಗಿಯೇ ಮೊದಲಿನಿಂದಲೂ ನಮಗೆ ಈ ಆಧ್ಯಾತ್ಮಿಕ ಶಿಕ್ಷಣವು ಬೇಕಾಗಿರುವುದು.
ಯಾವ ಜನರಿಗೆ ಟೀಕೆಗಳನ್ನು ಮತ್ತು ದುಃಖವನ್ನು ಎದುರಿಸುವ ಸಹನೆ ಇರುತ್ತದೆಯೋ, ಯಾರು ಸಮಸ್ಯೆಗಳನ್ನು ಎದುರಿಸಬಲ್ಲರೋ, ಅವರಿಗೆ ಆತ್ಮಬಲ ಸಿಗುತ್ತದೆ ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆತ್ಮವು ದುರ್ಬಲವಾಗಿರುವಾಗ ಮತ್ತು ಬಲವಿಲ್ಲದೇ ಇರುವಾಗ ಹಾಗೂ ಒಬ್ಬರು ಸುಖಗಳಿಗೆ ಬಹಳಷ್ಟು ಬಂಧಿತರಾಗಿರುತ್ತಾರೆ,  ಆಗಿರುವಾಗ ಮಾತ್ರ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದುದರಿಂದ ಮೊದಲಿನಿಂದಲೇ ಸುಖಗಳ ಕಡೆಗಿರುವ ಬಂಧನವನ್ನು ತೆಗೆದುಹಾಕಬೇಕು. ಸಂಕಷ್ಟವನ್ನು ನಿಭಾಯಿಸುವುದು ಹೇಗೆಂದು ಜನರಿಗೆ ತಿಳಿದಿದ್ದರೆ ಮತ್ತು ಟೀಕೆಗಳನ್ನು ಎದುರಿಸಲು ಸಮರ್ಥರಾಗಿದ್ದರೆ, ಆಗ ಅವರು ತಮ್ಮ ಜೀವನದಲ್ಲಿ ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.
ಪ್ರಶ್ನೆ: ಗುರೂಜಿ, ದಯವಿಟ್ಟು ನನಗೆ ಮೋಕ್ಷದ ಬಗ್ಗೆ ಹೇಳಿ.
ಶ್ರೀ ಶ್ರೀ ರವಿಶಂಕರ್:
ಜೀವನದಲ್ಲಿ ನಿನಗೆ ಯಾವುದೆಲ್ಲಾ ಬಯಕೆಗಳಿವೆಯೋ, ಅವುಗಳನ್ನು ನೀನು ಸಾಯುವ ಮೊದಲು ಮುಗಿಸು. "ನನಗೇನೂ ಬೇಡ" ಎಂದು ನಿನಗೆ ಅನ್ನಿಸುವ ಒಂದು ಕ್ಷಣವಿರಬೇಕು - ಇದು ಮೋಕ್ಷ. ಮೋಕ್ಷವನ್ನು ಪಡೆಯಲು ಸಾಯಬೇಕಾದ ಅಗತ್ಯವಿಲ್ಲ. ನೀನು ಸಾಯುವ ಮೊದಲು ನೀನು ತೃಪ್ತಿಯ ಭಾವನೆಯನ್ನು ಹೊಂದಬೇಕು. ಜೀವನದಲ್ಲಿ ತೃಪ್ತಿ ಬರುವಾಗ ಅಲ್ಲಿ ಮುಕ್ತಿ ಮತ್ತು ಹೆಚ್ಚು ಮುಕ್ತಿಯಿರುತ್ತದೆ.
ಪ್ರಶ್ನೆ: ಗುರು ಪೂರ್ಣಿಮಾ ದಿನದಂದು ನೀವು ಅಳುವುದನ್ನು ನೋಡಲು ನನಗೆ ಬಹಳ ದುಖವಾಯಿತು.
ಶ್ರೀ ಶ್ರೀ ರವಿಶಂಕರ್:
  ಇಲ್ಲ, ಕಣ್ಣೀರು ಬರುವುದು ಕೇವಲ ಒಬ್ಬನು ದುಃಖದಲ್ಲಿರುವಾಗಲಲ್ಲ; ಪ್ರೀತಿಯಿಂದಲೂ ಕೂಡಾ ಕಣ್ಣೀರು ಬರುತ್ತದೆ. ನಾನು ಕೇವಲ ಅಲ್ಲಿರುವ ಎಲ್ಲರನ್ನೂ ಪ್ರತಿಫಲಿಸುತ್ತಿದ್ದೆ. ಅಲ್ಲಿರುವ ಎಲ್ಲರೂ ಅಳುತ್ತಿದ್ದರು, ಆದುದರಿಂದ ಈ ಶರೀರದಿಂದಲೂ ಕೂಡಾ ಕಣ್ಣೀರು ಹೊರಬಂತು. ಗುರು ಪೂರ್ಣಿಮಾ ದಿನದಂದು ಎಲ್ಲರೂ ಬಹಳ ಕೃತಜ್ಞತೆಯಿಂದ ತುಂಬಿದ್ದರು! ಅಲ್ಲಿ ಒಂದೇ ಒಂದು ಶುಷ್ಕ ಕಣ್ಣು ಕೂಡಾ ಇರಲಿಲ್ಲ. ಹೀಗೆ ಎಲ್ಲರ ಕಣ್ಣುಗಳೂ ಒದ್ದೆಯಾದಾಗ, ನನ್ನ ಕಣ್ಣುಗಳು ಕೂಡಾ ಒದ್ದೆಯಾದವು.