ಶುಕ್ರವಾರ, ಆಗಸ್ಟ್ 31, 2012

ಸೂಕ್ತ ನಿರ್ಧಾರಗಳು

ಬ್ರೆಜಿಲ್, ದಕ್ಷಿಣ ಅಮೆರಿಕ
ಆಗಸ್ಟ್ ೩೧, ೨೦೧೨

ನೂ ಕೆಟ್ಟದನ್ನು ಮಾಡದೆಯೇ ನೀವು ಶತ್ರುಗಳನ್ನು ಹೊಂದಿರುವಿರೆಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? ಜನರು ನಿಮ್ಮ ಶತ್ರುಗಳಾಗುತ್ತಾರೆ. ನೀವು ಅವರಿಗೆ ಯಾವುದೇ ತೊಂದರೆಯನ್ನು, ಯಾವುದೇ ತಪ್ಪನ್ನು ಮಾಡಲಿಲ್ಲ ಮತ್ತು ಹಾಗಿದ್ದರೂ ಅವರು ಶತ್ರುಗಳಾಗುತ್ತಾರೆ. ಅದೇ ರೀತಿಯಲ್ಲಿ ಕೆಲವರಿಗೆ ನೀವು ಯಾವುದೇ ದೊಡ್ಡ ಉಪಕಾರಗಳನ್ನು ಮಾಡಲಿಲ್ಲ, ಆದರೆ ಅವರು ನಿಮ್ಮ ಬಹಳ ಒಳ್ಳೆಯ ಮಿತ್ರರಾದರು. ಅಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?
ನೋಡಿ, ಇದು ಅಷ್ಟೆ, ಜನರು ಮಿತ್ರರಾಗುವುದು ಮತ್ತು ಶತ್ರುಗಳಾಗುವುದು ಯಾವುದೋ ವಿಚಿತ್ರವಾದ ಕರ್ಮದಿಂದಾಗಿ, ಯಾವುದೋ ವಿಚಿತ್ರವಾದ ನಿಯಮದಿಂದಾಗಿ. ಯಾವುದೋ ವಿಚಿತ್ರವಾದ ನಿಯಮವಿರುತ್ತದೆ. ಇದರಿಂದಾಗಿ ಹಾಠಾತ್ತನೇ ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಒಳ್ಳೆಯ ಮಿತ್ರರಾಗುತ್ತಾರೆ. ಆದುದರಿಂದ, ಎಲ್ಲಾ ಮಿತ್ರರನ್ನು ಮತ್ತು ಶತ್ರುಗಳನ್ನು ಒಂದು ಬುಟ್ಟಿಯಲ್ಲಿ ಹಾಕಿ ಮುಕ್ತರಾಗಿ.

ನೋಡಿ, ನಿಮ್ಮ ಮನಸ್ಸನ್ನು ತೊಂದರೆಗೊಳಪಡಿಸುವುದು ಒಂದೋ ನಿಮ್ಮ ಮಿತ್ರರು ಅಥವಾ ನಿಮ್ಮ ಶತ್ರುಗಳು. ಅಲ್ಲವೇ? ನೀವು ಧ್ಯಾನ ಮಾಡಲು ಕುಳಿತುಕೊಳ್ಳುವಾಗ, ನೀವು ಅವರೆಲ್ಲರನ್ನೂ; ನಿಮ್ಮ ಮಿತ್ರರನ್ನು, ಶತ್ರುಗಳನ್ನು ಮತ್ತು ಎಲ್ಲರನ್ನೂ ಒಂದು ಬದಿಯಲ್ಲಿರಿಸಬೇಕು. ಕುಳಿತುಕೊಳ್ಳಿ, ವಿಶ್ರಾಮ ಮಾಡಿ ಮತ್ತು ಮುಕ್ತರಾಗಿ.

ನೀವೇನು ಹೇಳುವಿರಿ? ಅದು ಸರಿಯಲ್ಲವೇ?

ನಿಮ್ಮ ಮನಸ್ಸು ತೃಪ್ತವಾದಾಗ, ಅದು ಮೌನವಾಗಿದ್ದು ಸಂತೋಷವಾಗಿರುವಾಗ, ಅದೊಂದು ಬಹಳ ಅಸಾಧಾರಣವಾದ ಶಕ್ತಿಯನ್ನು ಗಳಿಸುತ್ತದೆ, ಅದು ಯಾವುದೆಂದರೆ ಆಶೀರ್ವದಿಸುವ ಶಕ್ತಿ. ನೀವು ಸಂತೋಷವಾಗಿ ಮತ್ತು ತೃಪ್ತರಾಗಿರುವಾಗ, ಇತರರಿಗೆ ಆಶೀರ್ವಾದ ನೀಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಮನಸ್ಸು ತಳಮಳಗೊಂಡಿದ್ದರೆ ಮತ್ತು ನಿಮ್ಮಲ್ಲಿ ಹಲವಾರು ಬಯಕೆಗಳಿದ್ದರೆ, ಆಗ ನಿಮಗೆ ಆಶೀರ್ವಾದ ನೀಡಲು ಸಾಧ್ಯವಿಲ್ಲ. ನೀವು ಆಶೀರ್ವಾದ ನೀಡಿದರೂ ಕೂಡಾ, ಅದು ಅಷ್ಟು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಆದುದರಿಂದ, ಸಮಯದಿಂದ ಸಮಯಕ್ಕೆ, ನಮ್ಮಲ್ಲಿ ತೃಪ್ತಿಯಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನೀವು ತೃಪ್ತರಾದಾಗ, ನಿಮ್ಮ ಬಯಕೆಗಳನ್ನು ಮಾತ್ರವಲ್ಲ, ಇತರರ ಬಯಕೆಗಳನ್ನು ಕೂಡಾ ಈಡೇರಿಸಲು ನಿಮಗೆ ಸಾಧ್ಯವಾಗುತ್ತದೆ.

ಪ್ರಶ್ನೆ: ದಯವಿಟ್ಟು ಸಹಾನುಭೂತಿಯ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿಶಂಕರ್: ಜೀವನದಲ್ಲಿ ಆವಶ್ಯಕವಾಗಿರುವ ಮೂರು ವಿಷಯಗಳಿವೆ:
೧. ಅನುರಾಗ
೨. ವೈರಾಗ್ಯ
೩. ಸಹಾನುಭೂತಿ
ಅನುರಾಗವು ಉಸಿರನ್ನು ಒಳಗೆಳೆದುಕೊಳ್ಳುವಂತೆ ಮತ್ತು ವೈರಾಗ್ಯವು ಉಸಿರನ್ನು ಹೊರಗೆ ಬಿಡುವಂತೆ. "ನಾನು ಉಸಿರನ್ನು ಕೇವಲ ಒಳಗೆಳೆದುಕೊಳ್ಳಲು ಬಯಸುತ್ತೇನೆ, ಉಸಿರನ್ನು ಹೊರಗೆ ಬಿಡಲು ನಾನು ಬಯಸುವುದಿಲ್ಲ" ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಅಸಾಧ್ಯ!
ಆದುದರಿಂದ, ಉಸಿರನ್ನು ಒಳಗೆಳೆದುಕೊಳ್ಳುವುದು ಆವಶ್ಯಕ, ಮತ್ತು ಅದು ಜೀವನದಲ್ಲಿನ ವಿಷಯಗಳ ಕಡೆಗಿರುವ ಅನುರಾಗ. ಮತ್ತೆ, ವೈರಾಗ್ಯದ ಆವಶ್ಯಕತೆಯೂ ಇದೆ. ವೈರಾಗ್ಯವೆಂದರೆ, ಎಲ್ಲವನ್ನೂ ಸುಮ್ಮನೆ ಹೋಗಬಿಡಲಿರುವ ಸಾಮರ್ಥ್ಯ. ವೈರಾಗ್ಯವು ನಿಮಗೆ ಸಮಾಧಾನವನ್ನು ತರುತ್ತದೆ ಮತ್ತು ನಂತರ ಸಹಾನುಭೂತಿಯು ನಿಮ್ಮ ಸ್ವಭಾವವಾಗುತ್ತದೆ.
ಆದುದರಿಂದ, ನೀವು ಕೆಲಸ ಮಾಡುವಾಗ ನಿಮ್ಮಲ್ಲಿ ಅನುರಾಗವಿರಬೇಕು. ನೀವು ವಿಶ್ರಾಂತಿ ತೆಗೆದುಕೊಳ್ಳಲು ಬಯಸುವಾಗ ವೈರಾಗ್ಯವಿರಬೇಕು ಮತ್ತು ಸಹಾನುಭೂತಿಯು ನಿಮ್ಮ ಸ್ವಭಾವವೇ ಆಗಿರಬೇಕು. ಅಷ್ಟೆ!

ಪ್ರಶ್ನೆ: ಧ್ಯಾನ ಮತ್ತು ವಿಶ್ರಾಮದ ಅಗತ್ಯವೇನು?
ಶ್ರೀ ಶ್ರೀ ರವಿಶಂಕರ್: ನೀವು ವಿಶ್ರಾಮ ಮಾಡುವಾಗ ಮನಸ್ಸು ವಿಸ್ತರಿಸುತ್ತದೆ. ನೀವು ಸಂತೋಷವಾಗಿರುವಾಗ ಏನಾಗುತ್ತದೆಯೆಂಬುದನ್ನು ನೀವು ಗಮನಿಸಿದ್ದೀರಾ? ನಿಮ್ಮೊಳಗಿರುವ ಏನೋ ಒಂದು ವಿಸ್ತರಿಸಲು ಶುರುವಾಗುತ್ತದೆ. ನೀವು ದುಃಖಿತರಾಗಿರುವಾಗ ಏನಾಗುತ್ತದೆ? ನಿಮ್ಮೊಳಗಿರುವ ಏನೋ ಒಂದು ಕುಗ್ಗಲು ಶುರುವಾಗುತ್ತದೆ. ಆದುದರಿಂದ ನೀವು ಶರೀರಕ್ಕೆ ವಿಶ್ರಾಂತಿ ನೀಡಿದಾಗ, ಮನಸ್ಸು ಅರಳಲು ಶುರುವಾಗುತ್ತದೆ.

ಪ್ರಶ್ನೆ: ದಯವಿಟ್ಟು ಅನ್ಯೋನ್ಯತೆಯ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿಶಂಕರ್: ಅನ್ಯೋನ್ಯತೆಯು ಬಹಳ ಸ್ವಾಭಾವಿಕ. ಒಂದು ಉನ್ನತ ಮನೋಸ್ಥಿತಿಯಲ್ಲಿ, ಅನ್ಯೋನ್ಯತೆಯು ತತ್ ಕ್ಷಣವಾಗಿರುತ್ತದೆ. ಒಬ್ಬರು ಸೂಕ್ಷ್ಮಮನಸ್ಸಿನವರಾಗಿಲ್ಲದಿರುವಾಗ ಮಾತ್ರ ಅಲ್ಲಿ ಅನ್ಯೋನ್ಯತೆ ಇರುವುದಿಲ್ಲ.
ಹೆಚ್ಚಾಗಿ ಜನರು ಕೆಟ್ಟ ವಿಷಯಗಳಿಗೆ ಪ್ರತಿಕ್ರಿಯಿಸುತ್ತಾರೆ. ನೀವು ಯಾರನ್ನಾದರೂ ದೂಷಿಸಿದರೆ, ಅವರು ಕೂಡಲೇ ನಿಮ್ಮನ್ನು ದೂಷಿಸಲು ತಯಾರಾಗಿರುತ್ತಾರೆ. ನೀವು ಯಾರನ್ನಾದರೂ ಅವಮಾನಿಸಿದರೆ, ಅವರು ನಿಮ್ಮನ್ನು ಕೂಡಲೇ ಅವಮಾನಿಸುತ್ತಾರೆ, ಆದರೆ ಒಳ್ಳೆಯ ವಿಷಯಗಳ ಬಗ್ಗೆ ಅದು ಹಾಗಿರುವುದಿಲ್ಲ. ನೀವು ಏನಾದರೂ ಒಳ್ಳೆಯದನ್ನು ಮಾಡಿದರೆ, ತಾವು ಒಳ್ಳೆಯತನದಿಂದ ಪ್ರತಿಕ್ರಿಯೆ ಮಾಡಬೇಕೆಂದು ಎಲ್ಲರೂ ಯೋಚಿಸುವುದಿಲ್ಲ. ಅದಾಗುವುದು ಮನಸ್ಸು ಒಂದು ಉನ್ನತ ಸ್ಥಿತಿಯಲ್ಲಿರುವಾಗ ಮಾತ್ರ.

ಪ್ರಶ್ನೆ: ನಾನೊಂದು ಬೇರ್ಪಡುವಿಕೆಯ ಮೂಲಕ ಹಾದು ಹೋಗುತ್ತಿದ್ದೇನೆ. ನನ್ನ ಪತ್ನಿ ಮತ್ತು ನಾನು ವಿಭಿನ್ನ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಹಾಗೂ ಬೇರೆ ಬೇರೆ ಜೀವನವನ್ನು ಜೀವಿಸುತ್ತಿದ್ದೇವೆ. ನಾವಿಬ್ಬರೂ ನಮ್ಮ ಮಗುವು ನಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಇರಬೇಕೆಂದು ಬಯಸುತ್ತೇವೆ. ಈ ಪರಿಸ್ಥಿತಿಯಲ್ಲಿ ಮಾಡಬಹುದಾದ ವಿವೇಚನಾಯುಕ್ತ ಕೆಲಸವೇನು? 
ಶ್ರೀ ಶ್ರೀ ರವಿಶಂಕರ್: ಮಗುವನ್ನು ಎರಡೂ ಮಾರ್ಗಗಳಿಗೆ ತೆರೆದಿಡಬೇಕು ಮತ್ತು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ದಂಪತಿಗಳ ನಡುವೆ ಒಪ್ಪಂದ ಇಲ್ಲದಿದ್ದರೆ, ಖಂಡಿತವಾಗಿ ಅದರಿಂದ ಮಗುವಿಗೆ ಪ್ರಯಾಸವಾಗುತ್ತದೆ. ತಂದೆ ತಾಯಿಯರಿಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಅವರು ಮಗುವಿನ ಮುಂದೆ ಪರಸ್ಪರರನ್ನು ದೂಷಿಸುತ್ತಾ ಹೋಗಬಾರದು. ಮಗುವನ್ನು ಹೆತ್ತವರಲ್ಲಿ ಒಬ್ಬರ ವಿರುದ್ಧವಾಗಿ ಇನ್ನೊಬ್ಬರು ಎತ್ತಿಕಟ್ಟುವುದು ಒಳ್ಳೆಯದಲ್ಲ. ಅದೊಂದು ಬಹಳ ಸಂಕುಚಿತ ಮನಸ್ಸಿನ ವಿಧಾನವಾಗಿದೆ.

ಪ್ರಶ್ನೆ: ಸಾವು ಎಂದರೇನೆಂದು ದಯವಿಟ್ಟು ನಮಗೆ ಹೇಳಿ.
ಶ್ರೀ ಶ್ರೀ ರವಿಶಂಕರ್: ಸಾವನ್ನು ವಿವರಿಸುವ ಅಗತ್ಯವಿಲ್ಲ. ಅದೊಂದು ಸ್ಪಷ್ಟವಾದ ವಿದ್ಯಮಾನ. ನಾವು ಹುಟ್ಟಿದ್ದೇವೆ ಮತ್ತು ಒಂದು ದಿನ ನಾವು ಸಾಯಲಿದ್ದೇವೆ. ನಾವು ಈ ಪ್ರಪಂಚಕ್ಕೆ ಬಂದಾಗ, ನಾವು ಮಾಡಿದ ಮೊದಲನೆಯ ಕೆಲಸವೆಂದರೆ ಒಂದು ದೀರ್ಘವಾದ ಉಸಿರನ್ನು ಒಳಗೆಳೆದುಕೊಂಡುದು, ಮತ್ತು ನಂತರ ನಾವು ಅಳಲು ಶುರು ಮಾಡಿದೆವು. ಈ ಜೀವನದಲ್ಲಿ ನಾವು ಮಾಡುವ ಕೊನೆಯ ಕೆಲಸವೆಂದರೆ ಉಸಿರನ್ನು ಹೊರಗೆ ಬಿಡುವುದು, ಮತ್ತು ನಂತರ ಇತರರು ಅಳುತ್ತಾರೆ. ನಾವು ಇತರರು ಅಳುವಂತೆ ಮಾಡದಿದ್ದರೆ, ಆಗ ನಾವು ಒಳ್ಳೆಯ ಜೀವನವನ್ನು ಜೀವಿಸಲಿಲ್ಲ ಎಂದಾಗುತ್ತದೆ.
ಆತ್ಮವು ಶರೀರವನ್ನು ಸಂಪೂರ್ಣ ತೃಪ್ತಿಯಿಂದ, ಬಹಳ ಪ್ರೀತಿ ಮತ್ತು ಜ್ಞಾನದೊಂದಿಗೆ ಬಿಟ್ಟು ಹೋಗುವಾಗ ಮರಳಿ ಬರಲು ಅದಕ್ಕೆ ಬಲವಂತವಿರುವುದಿಲ್ಲ. ಅದು ತನ್ನದೇ ಇಚ್ಛೆಯಿಂದ ಮರಳಿ ಬರಬಹುದು.

ಪ್ರಶ್ನೆ: ನಾನು ಸರಿಯಾದ ನಿರ್ಧಾರವನ್ನು ಮಾಡುತ್ತಿರುವೆನೇ ಎಂದು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನೀನು ಒಂದು ನಿರ್ಧಾರವನ್ನು ಮಾಡುವಾಗ, ಎಲ್ಲೋ ಒಂದು ಕಡೆ, "ಹೌದು, ಇದು ಸರಿ" ಎಂದು ಹೇಳುವ ಆಂತರಿಕ ದೃಢವಾದ ಅನ್ನಿಸಿಕೆಯು ನಿನ್ನಲ್ಲಿ ಬರುತ್ತದೆ. ನೀನು ತಿಳಿಯಬೇಕಾಗಿರುವ ಒಂದು ವಿಷಯವೆಂದರೆ, ನೀನೊಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡರೂ ಕೂಡಾ, ಅದು ಯಾವತ್ತೂ ನಿನ್ನನ್ನು ಪ್ರಗತಿಯ ಕಡೆಗೆ ಕರೆದೊಯ್ಯುತ್ತದೆ. ಒಳಗೆಲ್ಲೋ ಆಳದಲ್ಲಿ ನೀನು ಹೆಚ್ಚು ಶಕ್ತಿಶಾಲಿಯಾಗುವೆ, ನೀನೊಂದು ಪಾಠವನ್ನು ಕಲಿಯುವೆ. ಅದಕ್ಕಾಗಿಯೇ, ಚಿಂತಿಸಬೇಡ.

ಪ್ರಶ್ನೆ: ಗುರೂಜಿ, ಕೆಲವೊಮ್ಮೆ ನನಗೆ ಸಂತೋಷವನ್ನುಂಟು ಮಾಡುವ ವಿಷಯವು, ನನ್ನ ಕುಟುಂಬ ಮತ್ತು ಮಿತ್ರರ ನಿರೀಕ್ಷಣೆಗಳೊಂದಿಗೆ ಸಂಘರ್ಷಕ್ಕೊಳಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾನೇನು ಮಾಡುವುದು?
ಶ್ರೀ ಶ್ರೀ ರವಿಶಂಕರ್: ಹೌದು, ನೀನು ಎರಡನ್ನೂ ಸಂತುಲನದಲ್ಲಿರಿಸಬೇಕು. ನಿನ್ನ ಸಂತೋಷದ ಹುಡುಕಾಟ ಮತ್ತು ನಿನ್ನಿಂದ ಇತರರು ನಿರೀಕ್ಷಿಸುವುದರ ಮಧ್ಯೆ ಸಂತುಲನವನ್ನು ಇರಿಸಿಕೋ. ಅದು ಸ್ವಲ್ಪ ನಾಜೂಕಾದುದು, ಆದರೆ ನೀನು ಖಂಡಿತವಾಗಿ ಪ್ರಯತ್ನವನ್ನು ಮಾಡಬೇಕು.

ಪ್ರಶ್ನೆ: ಮಾನವರಿಗಿರುವ ಅತ್ಯಂತ ದೊಡ್ಡ ಮಿತಿ  ಏನೆಂಬುದನ್ನು ದಯವಿಟ್ಟು ನಮಗೆ ತಿಳಿಸಿ. 
ಶ್ರೀ ಶ್ರೀ ರವಿಶಂಕರ್: ಶರೀರಕ್ಕೆ ಮಿತಿಯಿದೆ, ಮನಸ್ಸಿಗೆ ಮಿತಿಯಿದೆ, ಆದರೆ ಆತ್ಮಕ್ಕೆ ಯಾವುದೇ ಮಿತಿಯಿಲ್ಲ. ನೀನು ಶರೀರವೆಂದು ನೀನು ಯೋಚಿಸುವಾಗ ನಿನಗೆ ಮಿತಿಯಿರುತ್ತದೆ. ಆಗ ನಿನಗೆ ಅಷ್ಟು ಮಾತ್ರ ಮಾಡಲು ಸಾಧ್ಯವಾಗುತ್ತದೆ. ನೀನು ಮನಸ್ಸೆಂದು ನೀನು ಯೋಚಿಸುವಾಗ, ಮನಸ್ಸಿಗೆ ಕೂಡಾ ಸ್ವಲ್ಪ ಮಿತಿಯಿರುತ್ತದೆ. ಆದರೆ ನಿನ್ನ ಪ್ರೀತಿಗೆ ಯಾವುದೇ ಮಿತಿಯಿಲ್ಲ. ನಿನ್ನ ಪ್ರಜ್ಞೆಗೆ ಯಾವುದೇ ಮಿತಿಯಿಲ್ಲ. ನೋಡು, ಒಂದು ಚಿಕ್ಕ ಸೆಲ್ ಫೋನಿನೊಂದಿಗೆ ನೀನು ಹೇಗೆ ಇಡಿಯ ಪ್ರಪಂಚವನ್ನು ತಲಪಬಹುದು. ಒಂದು ಸೆಲ್ ಫೋನಿನೊಂದಿಗೆ ನೀನು ಎಷ್ಟು ಫೋನುಗಳನ್ನು ಬೇಕಾದರೂ ತಲಪಬಹುದು, ಅಲ್ಲವೇ? ಅದೇ ರೀತಿಯಲ್ಲಿ, ಸೆಲ್ ಫೋನನ್ನು ಆವಿಷ್ಕರಿಸಿದ ನಮ್ಮ ಮನಸ್ಸು ಸೆಲ್ ಫೋನಿಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ. ನೀನು ಕೇವಲ ಅದು ಲಭ್ಯವಾಗುವಂತೆ ಮಾಡಬೇಕು.

ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಬಹಳ ದುರಹಂಕಾರಿಯೆಂದು ಕೆಲವೊಮ್ಮೆ ನನಗನಿಸುತ್ತದೆ. ಈ ದುರಹಂಕಾರವನ್ನು ನಾನು ತೊಡೆದು ಹಾಕುವುದು ಹೇಗೆ? ನಾನು ಆರ್ಟ್ ಆಫ್ ಲಿವಿಂಗ್ ಕೋರ್ಸನ್ನು ಮಾಡಿದ್ದೇನೆ ಮತ್ತು ನಾನು ನನ್ನ ಅಭ್ಯಾಸಗಳನ್ನು ಮಾಡುತ್ತಿದ್ದೇನೆ.
ಶ್ರೀ ಶ್ರೀ ರವಿಶಂಕರ್: ಒಂದು ಸಂಗತಿಯನ್ನು ನೀನು ಗಮನಿಸಬೇಕು, ಮೊದಲು ಕೂಡಾ ನೀನು ದುರಹಂಕಾರಿಯಾಗಿದ್ದೆ, ಆದರೆ ನಿನಗೆ ಇದರ ಅರಿವಿರಲಿಲ್ಲ. ಆದರೆ ಈಗ ಕನಿಷ್ಠಪಕ್ಷ, ನೀನು ದುರಹಂಕಾರಿಯಾಗಿರುವೆಯೆಂಬುದು ನಿನಗೆ ಅರಿವಾಗಿದೆ. ಆ ಅರಿವು ಅಲ್ಲಿದೆ, "ಓ, ಇದು ಆಗುತ್ತಿದೆ." ಈ ಅರಿವನ್ನು ಹೊಂದಿರುವುದು ಒಳ್ಳೆಯದು. ಅದರಿಂದ ಹೊರಬರುವಲ್ಲಿ ಇದು ಮೊದಲನೆಯ ಹೆಜ್ಜೆ. ಎರಡನೆಯ ಹೆಜ್ಜೆಯೆಂದರೆ, ನಿನ್ನ ಸ್ವಂತ ಜೀವನದ ಬಗ್ಗೆ ಒಂದು ವಿಶಾಲವಾದ ದೃಷ್ಟಿಕೋನವನ್ನಿರಿಸುವುದು.
ನೀನು ಜ್ಞಾನದಲ್ಲಿ ಹೆಚ್ಚು ಹೆಚ್ಚು ಮುಳುಗಿದಷ್ಟೂ, ಮನಸ್ಸು ಆಡುವ ಈ ಎಲ್ಲಾ ಚಿಕ್ಕ ಆಟಗಳು ಒಂದು ಮಗುವು ಆಟವಾಡುವಂತೆ ಎಂಬುದನ್ನು ನೀವು ಕಾಣುವಿರಿ. ಒಮ್ಮೆ ನೀವು ಇದನ್ನು ನೋಡಿದ ಬಳಿಕ, ನೀವು ಇದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ ಮತ್ತು ಇದರಿಂದಾಗಿ ನೀವಿದನ್ನು ಸ್ವೀಕರಿಸುವಿರಿ ಹಾಗೂ ಅದರಿಂದಾಚೆಗೆ ಸಾಗುವಿರಿ.
ಮನಸ್ಸೆಂಬುದು, ಒಂದು ಚಿಕ್ಕ ಮಗುವು ಆಟವಾಡುವಂತೆ ಎಂಬುದನ್ನು ನೀವು ಕಂಡುಕೊಂಡಾಗ, ನೀವದನ್ನು ಒಂದು ದೊಡ್ಡ ಹಿನ್ನೆಲೆಯಿಂದ, ಒಂದು ದೊಡ್ಡ ದೃಷ್ಟಿಯಿಂದ ನೋಡುವಿರಿ.