ಶನಿವಾರ, ಆಗಸ್ಟ್ 4, 2012

ತ೦ತಾನೇ ಏರ್ಪಡುವ ಪ್ರೇಮ

04
2012
Aug
ಬೆಂಗಳೂರು ಆಶ್ರಮ, ಭಾರತ

ಪ್ರಶ್ನೆ: ಪ್ರೀತಿಯ ಗುರೂಜಿ, ಪ್ರೀತಿ, ಗೌರವ ಮತ್ತು ಬಾಂಧವ್ಯ, ಈ ಮೂರು ಯಾವ ರೀತಿಯ ಸಂಬಂಧವನ್ನು ಹೊಂದಿವೆ. ಸಂಬಂಧಗಳಲ್ಲಿ ನಾವು ಇವುಗಳನ್ನು ಹೇಗೆ ಸಂತುಲನದಲ್ಲಿರಿಸಿಕೊಳ್ಳಬಹುದು?
ಶ್ರೀ ಶ್ರೀ ರವಿಶಂಕರ್:
ನನಗನಿಸುತ್ತದೆ ನಿನ್ನಲ್ಲಿ ಬಹಳಷ್ಟು ಬಿಡುವಿನ ವೇಳೆಯಿದೆಯೆಂದು. ನೀನು ವ್ಯಸ್ತನಾಗಬೇಕು. ಕುಳಿತುಕೊಂಡು ಚಿಂತಿಸಬೇಡ. ಪ್ರೀತಿ, ಗೌರವ, ಈ ಎಲ್ಲಾ ಅನ್ನಿಸಿಕೆಗಳು ಮತ್ತು ಭಾವನೆಗಳು ನಿನ್ನಲ್ಲಿ ಇರುತ್ತವೆ. ನಿನ್ನ ಹೃದಯ ಮತ್ತು ಮನಸ್ಸು ಸ್ಪಷ್ಟವಾಗಿರುವಾಗ, ಸರಿಯಾದ ಭಾವನೆಗಳು ಸರಿಯಾದ ಸಮಯದಲ್ಲಿ ಬರುತ್ತವೆ.
ಪ್ರೀತಿ, ಗೌರವ - ಇವುಗಳೆಲ್ಲವೂ ಆಗುತ್ತವೆ. ಅದು ಆಗುವಂತೆ ಮಾಡಲು ನಿಮಗೆ ಸಾಧ್ಯವಿಲ್ಲ. ಗೌರವವು ನಿಮ್ಮೊಳಗೆ ಬರುವಂತೆ ಮಾಡಲು ನಿಮಗೆ ಸಾಧ್ಯವಿಲ್ಲ. ನೀವು ಪ್ರೀತಿಯನ್ನು ಅಥವಾ ಗೌರವವನ್ನು ಅನುಭವಿಸುವ ಪ್ರಯತ್ನ ಮಾಡಿದರೆ, ಆಗ ಸೋಲುಂಟಾಗುತ್ತದೆ. ಆದುದರಿಂದ, ನೀವು ಮಾಡಬಹುದಾದುದೇನೆಂದರೆ, ಒತ್ತಡದಿಂದ ನಿಮ್ಮನ್ನು ಪಾರುಮಾಡಿಕೊಳ್ಳುವುದು ಮತ್ತು ಮನಸ್ಸಿನಲ್ಲಿ ಜ್ಞಾನವನ್ನಿರಿಸುವುದು. ಜ್ಞಾನವೆಂದರೆ, ಪ್ರಪಂಚವನ್ನು ಒಂದು ವಿಶಾಲ ದೃಷ್ಟಿಯಿಂದ ನೋಡುವುದು.
ಯಾವುದು ಕ್ಷಣಿಕ ಮತ್ತು ಯಾವುದು ಶಾಶ್ವತವೆಂಬುದನ್ನು ನೋಡಿ. ಜನರ ಅಭಿಪ್ರಾಯಗಳೆಲ್ಲವೂ ಕ್ಷಣಿಕವಾದವು. ಅವುಗಳು ಬರುತ್ತವೆ, ಹೋಗುತ್ತವೆ. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಗೌರವಕ್ಕಾಗಿ ಹಾತೊರೆಯಬೇಡಿ. ಕೆಲವು ಜನರು ಗೌರವ ನೀಡುತ್ತಾರೆ, ಕೆಲವರು ನೀಡುವುದಿಲ್ಲ, ಪರವಾಗಿಲ್ಲ. ಅದು ಅವರ ಆಯ್ಕೆ. ಆದರೆ ನಿಮ್ಮ ಜೀವನವು ಇತರರಿಂದ ಸಿಗುವ ಗೌರವದ ಮೇಲೆ ಅವಲಂಬಿಸಿದ್ದರೆ, ಆಗ ನೀವೊಬ್ಬ ದುರ್ಬಲ ವ್ಯಕ್ತಿ. ನಿಮಗೆ ಇನ್ನೂ ಹೆಚ್ಚು ಹೆಚ್ಚು ದುರ್ಬಲರಾದ ಅನುಭವವಾಗುತ್ತದೆ, ಮತ್ತು ನೀವು ದುರ್ಬಲರಾದಾಗ ನೀವು ಶೋಚನೀಯರಾಗುತ್ತೀರಿ. ಯಾರೂ ನಿಮ್ಮನ್ನು ಗೌರವಿಸಬೇಕಾಗಿಲ್ಲ ಎಂಬುದನ್ನು ನೀವು ತಿಳಿಯಬೇಕು. "ನನ್ನ ಗೌರವವು ನನ್ನ ಬಳಿಯಿದೆ, ನನ್ನನ್ನು ಯಾರೂ ಗೌರವಿಸಬೇಕಾಗಿಲ್ಲ", ಅಷ್ಟೆ.
ಆದುದರಿಂದ, ನೀವಿಲ್ಲಿಂದ ಹಿಂತಿರುಗಿ ಹೋಗುವಾಗ, ನೀವು ಅಗೌರವವಾಗಿ ವರ್ತಿಸಬೇಕೆಂದಲ್ಲ. ನೀವು ಗೌರವವನ್ನು ನೀಡಿ, ಆದರೆ ಪ್ರತಿಯಾಗಿ ಗೌರವವನ್ನು ನಿರೀಕ್ಷಿಸಬೇಡಿ. ಕೆಲವೊಮ್ಮೆ ಜನರಲ್ಲಿ ಸ್ವಲ್ಪವೂ ಗೌರವವಿರುವುದಿಲ್ಲ. ಅವರಿರುವುದೇ ಹಾಗೆ, ಪರವಾಗಿಲ್ಲ. ಇತರರು ನಿಮಗೆ ಗೌರವ ನೀಡದಿದ್ದರೆ, ಚಿಂತಿಸಬೇಡಿ. ಅದು ಅವರ ಸಂಸ್ಕೃತಿಯನ್ನು, ಅವರ ವಿಕಾಸವನ್ನು ತೋರಿಸುತ್ತದೆ.
ನೀವು ಹೆಚ್ಚು ವಿಕಾಸ ಹೊಂದಿದ್ದರೆ, ನೀವು ಯಾವತ್ತೂ ಎಲ್ಲರನ್ನೂ ಗೌರವಿಸುವಿರಿ. ಅವರು ವಿವೇಕವುಳ್ಳವರಿರಲಿ ವಿವೇಕವಿಲ್ಲದವರಿರಲಿ, ನೀವು ಅವರನ್ನು ಗೌರವಿಸುವಿರಿ. ಆಗ ನೀವು ಹುಚ್ಚು ಹಿಡಿದ ಜನರನ್ನು ಕೂಡಾ ಗೌರವಿಸುವಿರಿ ಯಾಕೆಂದರೆ ಅದು ನಿಮ್ಮ ಸ್ವಭಾವದಲ್ಲಿದೆ. ನೀವು ಅವರನ್ನು ಈ ಸೃಷ್ಟಿಯ ಒಂದು ಭಾಗವಾಗಿ ಕಾಣುವಿರಿ. ಅವರು ಸೃಷ್ಟಿಗೆ, ದೈವಿಕತೆಗೆ ಸೇರಿದವರಾಗಿದ್ದಾರೆ. ಆದುದರಿಂದ, ನೀವು ಎಲ್ಲರನ್ನೂ ಗೌರವಿಸುವಾಗ, ಅದು, ನೀವು ಎಷ್ಟೊಂದು ಬುದ್ಧಿವಂತರು ಎಂಬುದನ್ನು ತೋರಿಸುತ್ತದೆ. ಗೌರವವನ್ನು ನಿರೀಕ್ಷಿಸುವುದು ನಮ್ಮ ದುರ್ಬಲತೆಯನ್ನು ತೋರಿಸುತ್ತದೆ. ಅವರು ಯಾರೆಂಬುದನ್ನು ಮತ್ತು  ಅವರ ಗುಣಮಟ್ಟವೇನೆಂಬುದನ್ನು ಲೆಕ್ಕಿಸದೆ ಜನರಿಗೆ ಗೌರವ ನೀಡುವುದು, ನಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತದೆ.
ಪ್ರೀತಿಯೆಂಬುದು ಈ ಸೃಷ್ಟಿಯ ಒಂದು ಮೂಲಭೂತ ಅಧಿಷ್ಠಾನವಾಗಿದೆ. ಅದು ಮಾಯವಾಗಲು ಸಾಧ್ಯವಿಲ್ಲ. ಅದು ಯಾವತ್ತೂ ಇದೆ. ಪುನಃ, ಪ್ರೀತಿಯನ್ನು ನೀಡಿ ಮತ್ತು ಅದು ದಶಲಕ್ಷ ಪಟ್ಟು ಹೆಚ್ಚಾಗಿ ನಿಮ್ಮ ಬಳಿಗೆ ತಿರುಗಿ ಬರುತ್ತದೆ.
ಪ್ರಶ್ನೆ: ಅನಂತತೆಯು ತನ್ನ ಅನಾಮಧೇಯತೆಯನ್ನು ಉಳಿಸುವುದು ಯಾಕೆ?
ಶ್ರೀ ಶ್ರೀ ರವಿಶಂಕರ್:
ಯಾಕೆಂದರೆ ನೀನು ಅದನ್ನು ಹುಡುಕಲಿಯೆಂದು. ನೀನು ಯಾವಾಗ ಅದಕ್ಕಾಗಿ ತವಕಿಸುವೆಯೋ, ಆಗ ನೀನು ಹುಡುಕುವೆ, ಮತ್ತು ಹುಡುಕುವಿಕೆಯೂ ಬಹಳಷ್ಟು ಸುಂದರವಾದುದು. ದೈವಕ್ಕಾಗಿ ತವಕಿಸುವುದು, ಅತ್ಯುನ್ನತವಾದುದಕ್ಕಾಗಿ ತವಕಿಸುವುದು, ಇದು ತನ್ನಲ್ಲಿ ತಾನೇ ಬಹಳಷ್ಟು ಸುಂದರವಾಗಿದೆ. ಅದಕ್ಕಾಗಿಯೇ ತವಕಿಸುವುದನ್ನು  ರಾಧಾ ಎಂದು ಕರೆಯಲಾಗಿದೆ. ರಾಧಾ ಎಂದರೆ ತವಕ ಮತ್ತು ಶ್ಯಾಮ್ ಎಂದರೆ ಪ್ರೀತಿ. ತವಕ ಮತ್ತು ಪ್ರೀತಿ ಜೊತೆಯಲ್ಲಿ ಸಾಗುತ್ತವೆ. ತವಕವಿಲ್ಲದಿದ್ದರೆ, ಅಲ್ಲಿ ಪ್ರೀತಿಯಿರಲು ಸಾಧ್ಯವಿಲ್ಲ ಮತ್ತು ಪ್ರೀತಿಯಿದ್ದರೆ, ಅಲ್ಲಿ ತವಕವಿರಲೇ ಬೇಕು. ಅವುಗಳು ಜೊತೆಯಲ್ಲಿ ಸಾಗುತ್ತವೆ.
ಪ್ರಶ್ನೆ: ಪ್ರೀತಿಯ ಗುರೂಜಿ, ಅಸಂಗೋಹಂ (ಉನ್ನತ ಶಿಬಿರದಲ್ಲಿ ಗುರೂಜಿಯವರಿಂದ ಹೆಚ್ಚಾಗಿ ಉಚ್ಛರಿಸಲ್ಪಡುವ ಒಂದು ಮಾತು) ಎಂಬುದರ ಅರ್ಥವನ್ನು ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ನಾನು ಇದಲ್ಲ - ಅಸಂಗೋಹಂ ಎಂಬುದರ ಅರ್ಥ ಇದು. ಉದಾಹರಣೆಗೆ, ನಾನು ಬಟ್ಟೆಯನ್ನು ಧರಿಸಿದ್ದೇನೆ, ಆದರೆ ನಾನು ಬಟ್ಟೆಯಲ್ಲ. ಶರೀರವು ನನ್ನದು, ಆದರೆ ನಾನು ಶರೀರವಲ್ಲ. ನಾನು ಯೋಚನೆಗಳಲ್ಲ, ನಾನು ಮನಸ್ಸಲ್ಲ. ಈ ರೀತಿಯಲ್ಲಿ ನೀವು, ಪರಿಚಯದ ಎಲ್ಲಾ ಪದರಗಳನ್ನು ಒಂದೊಂದೇ ಆಗಿ ನಿರಾಕರಿಸುತ್ತಾ ಬರುತ್ತೀರಿ, ಮತ್ತು ಕೊನೆಯಲ್ಲಿ ನೀವು, "ನಾನು ಯಾರು?" ಎಂದು ಕೇಳುವಾಗ, ನಿಮಗೆ ಏನೂ ಸಿಗುವುದಿಲ್ಲ! "ನಾನು ಏನೂ ಅಲ್ಲ, ನಾನು ಕೇವಲ ಆಕಾಶ." ಅದುವೇ ಅಸಂಗೋಹಂ. ಸಂಗೋಹಂ ಎಂದರೆ ಅದರೊಂದಿಗೆ ಒಂದಾಗುವುದು ಎಂದರ್ಥ. ನಾನೆಂದರೆ ನನ್ನ ಬಟ್ಟೆಗಳು ಎಂದು ನಾನಂದುಕೊಂಡರೆ, ಆಗ ಅದೊಂದು ಸಮಸ್ಯೆ. ನಾನು ಸೃಷ್ಟಿಯ ಈ ಎಲ್ಲಾ ಪದರಗಳನ್ನು ಮೀರಿದವನು. ನಾನು ನನ್ನ ಯೋಚನೆಗಳು, ನನ್ನ ಭಾವನೆಗಳು, ನನ್ನ ಸಂವೇದನೆಗಳು ಎಂದು ಯೋಚಿಸಿದರೆ, ಆಗ ನಾನು ನನ್ನ ವ್ಯಾಪಕ ಸ್ವರೂಪದ ಜಾಡನ್ನು ಕಳೆದುಕೊಳ್ಳುತ್ತೇನೆ. ಆದುದರಿಂದ ನಮ್ಮ ವ್ಯಾಪಕತೆಯ ಅರಿವನ್ನು ತಲಪಲು ನಾವು, "ನಾನು ಇದಲ್ಲ ಮತ್ತು ನಾನು ಇದಲ್ಲ" ಎಂದು ಪುನಃ ಪುನಃ ಹೇಳುತ್ತೇವೆ.
(ಗುರೂಜಿಯವರು ಹಾಡುತ್ತಾರೆ)
ಮನೋ ಬುದ್ಧ್ಯಾಹಂಕಾರ ಚಿತ್ತಾನಿ ನಾಹಂ, ನ ಚ ಶ್ರೋತ್ರ ಜಿಹ್ವೇ, ನ ಚ ಘ್ರಾಣ ನೇತ್ರೇ
 ನ ಚ ವ್ಯೋಮ ಭೂಮಿರ್ ನ ತೇಜೋ ನ ವಾಯುಃ, ಚಿದಾನಂದ ರೂಪಃ ಶಿವೋಹಂ ಶಿವೋಹಂ      
-  ಆದಿ ಶಂಕರಾಚಾರ್ಯರ ಆತ್ಮಾಷ್ಟಕಂನಿಂದ
ನಾನು ಮನಸ್ಸಲ್ಲ, ಬುದ್ಧಿಯಲ್ಲ, ಚಿತ್ತವಲ್ಲ ಅಥವಾ ಅಹಂಕಾರವಲ್ಲ. ನಾನು ಇದಲ್ಲ, ಇದಲ್ಲ, ಇದಲ್ಲ. ಇದು ನಿರಾಕರಿಸುವ ಹಾಗೂ ಆ ಟೊಳ್ಳು ಮತ್ತು ಖಾಲಿ ಆಕಾಶದೊಳಕ್ಕೆ ಹೋಗುವ ರೀತಿ. ನಾನು ನಿಜಕ್ಕೂ ಈ ಶಿವ ತತ್ವವೇ ಆಗಿರುವೆನು. ಈ ತಿಳುವಳಿಕೆಯೇ ಧ್ಯಾನವಾಗಿದೆ; ಅದು ಸಮಾಧಿಯಾಗಿದೆ.
ಪ್ರಶ್ನೆ: ಪ್ರೀತಿಯ ಗುರೂಜಿ, ಕೆಲವು ದಿನಗಳ ಹಿಂದೆ ನೀವು ಗಾಯತ್ರಿ ಮಂತ್ರದ ಮಹತ್ವದ ಬಗ್ಗೆ ಮಾತನಾಡಿದಿರಿ. ಗಾಯತ್ರಿ ಮಂತ್ರವನ್ನು ಉಚ್ಛರಿಸುವ ಮೊದಲು ಮಾಡಲಾಗುವ ದೀಕ್ಷೆಯ ಪ್ರಾಮುಖ್ಯತೆಯ ಬಗ್ಗೆ ದಯವಿಟ್ಟು ನೀವು ನಮಗೆ ಹೇಳುವಿರಾ?
ಶ್ರೀ ಶ್ರೀ ರವಿಶಂಕರ್:
ಹೌದು, ಒಂದು ಮಂತ್ರವನ್ನು ಉಪಯೋಗಿಸುವ ಮೊದಲು ದೀಕ್ಷೆ ಪಡೆಯುವುದು ಅಗತ್ಯವಾದುದು. ಆಗ ಮಾತ್ರ ಮಂತ್ರಕ್ಕೆ ಶಕ್ತಿ ಬರುತ್ತದೆ. ಕೇವಲ ಒಂದು ಪುಸ್ತಕದಿಂದ ಓದುವುದರ ಮೂಲಕ ನೀವು ಒಂದು ಮಂತ್ರವನ್ನು ಉಚ್ಛರಿಸಲು ಸಾಧ್ಯವಿಲ್ಲ. ಅದನ್ನು ಈಗಾಗಲೇ ಉಚ್ಛರಿಸುತ್ತಾ ಇರುವ ಒಬ್ಬರಿಂದ ಅದನ್ನು ಪಡೆಯಬೇಕು.
ಪ್ರಶ್ನೆ: ಗುರೂಜಿ, ನಿಮ್ಮ ಕಡೆಗಿರುವ ಪ್ರೀತಿಯ ಕಾರಣದಿಂದಾಗುವ, ಸಹಿಸಲಸಾಧ್ಯವಾದ ನೋವಿಗಿರುವ ಪರಿಹಾರವೇನು? ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಬರೆಯಲು ಪ್ರಾರಂಭಿಸು; ಕೆಲವು ಕಾವ್ಯಗಳು ಬರಲೂಬಹುದು. ಯಾವುದಾದರೂ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಲು ಪ್ರಾರಂಭಿಸು. ಸೇವೆ ಮಾಡು; ಕಲಿಸು ಮತ್ತು ಜ್ಞಾನದಲ್ಲಿ ನೆಲೆಸು. ಇವುಗಳೆಲ್ಲವೂ, ತವಕದಿಂದ ಸೃಜನಾತ್ಮಕತೆಯನ್ನು ಹೊರ ತರಲು ಸಹಾಯ ಮಾಡಬಹುದು.
ಪ್ರಶ್ನೆ: ನನ್ನ ಪ್ರೀತಿಯ ಗುರೂಜಿ, ನಾನು ನನ್ನ ಹೃದಯದೊಳಕ್ಕೆ ನೋಡಿದಾಗಲೆಲ್ಲಾ ನನಗೆ ಅಲ್ಲಿ ನೀವು ಕಾಣಿಸುವಿರಿ. ನೀವು ನನ್ನನ್ನು ಹಿಡಿದಿರಿ, ತೀಡಿದಿರಿ ಮತ್ತು ಬೇಯಿಸಿದಿರಿ. ನನ್ನಿಂದ ನೀವು ಯಾವ ವ್ಯಂಜನವನ್ನು ತಯಾರಿಸಲು ಪ್ರಯತ್ನಿಸುತ್ತಿರುವಿರಿ ಎಂಬುದನ್ನು ದಯವಿಟ್ಟು ನನಗೆ ತಿಳಿಸಿ.
ಶ್ರೀ ಶ್ರೀ ರವಿಶಂಕರ್:
ಕೇಳು! ನೀನು ಅಪೂರ್ವ. ನೀನು ಅಷ್ಟೊಂದು ಪರಿಪೂರ್ಣನು ಮತ್ತು ಹಾಗಾಗಿಯೇ ನಿನಗೆ ಆ ತೀವ್ರವಾದ ಭಾವನೆಯನ್ನು ಅನುಭವಿಸಲು ಸಾಧ್ಯವಾಯಿತು. ಯಾರಲ್ಲಿ ಆ ಭಾವವು ಇರುವುದಿಲ್ಲವೋ, ಅವನಿಗೆ ಸುಖವನ್ನು ಕೂಡಾ ಅನುಭವಿಸಲು ಸಾಧ್ಯವಿಲ್ಲ ಮತ್ತು ಶಾಂತಿಯನ್ನು ಅನುಭವಿಸಲು ಸಾಧ್ಯವಿಲ್ಲ. ಒಬ್ಬರು ಬುದ್ಧಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಅವರ ಜೀವನವು ಒಣಗಿರುತ್ತದೆ. ಅವರಲ್ಲಿ ಯಾವುದೇ ಶಾಂತಿಯೂ ಇರುವುದಿಲ್ಲ, ಪ್ರೀತಿ ಅಥವಾ ಸುಖವೂ ಇರುವುದಿಲ್ಲ. ಸುಖವಿಲ್ಲದಿರುವಾಗ, ಬಯಕೆಗಳು ಮತ್ತು ಚಪಲಗಳು ಒಬ್ಬ ವ್ಯಕ್ತಿಯನ್ನು ಬೇಟೆಯಾಡುತ್ತವೆ.
ಆದುದರಿಂದ, ಎರಡೂ ಇರಲು ಭಾಗ್ಯ ಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, "ನಾಸ್ತಿ ಬುದ್ಧಿರ್ ಅಯುಕ್ತಸ್ಯ ನ ಚಯುಕ್ತಸ್ಯ ಭಾವನಾ, ನ ಚ ಭಾವಯತಃ ಶಾಂತಿರ್ ಅಶಾಂತಸ್ಯ ಕುತಃ ಸುಖಂ" - (ಅಧ್ಯಾಯ ೨, ಶ್ಲೋಕ ೬೬).
ಯಾರು ಆತ್ಮದೊಂದಿಗೆ ಒಂದಾಗುವುದಿಲ್ಲವೋ, ಅವನಲ್ಲಿ ಬುದ್ಧಿಯೂ ಇರುವುದಿಲ್ಲ, ತೀವ್ರ ಭಾವಗಳೂ ಇರುವುದಿಲ್ಲ, ಮತ್ತು ನಿಮ್ಮಲ್ಲಿ ತೀವ್ರ ಭಾವಗಳು ಇಲ್ಲದಿದ್ದರೆ, ನಿಮಗೆ ಶಾಂತಿಯೂ ಇರುವುದಿಲ್ಲ, ಸುಖವೂ ಇರುವುದಿಲ್ಲ.
ಇದು ಬಹಳ ಸತ್ಯ.
ಆದುದರಿಂದ, ನೀನು ಚೆನ್ನಾಗಿ ಬೇಯುತ್ತಿರುವಾಗ, ಪ್ರಪಂಚಕ್ಕೆ ನೀನೊಂದು ಸಂಪತ್ತಾಗಿ ಪರಿಣಮಿಸುವೆ ಎಂಬ ವಿಶ್ವಾಸ ನನಗಿದೆ. ಎಲ್ಲರಿಗೂ ನೀನೊಂದು ಉಡುಗೊರೆಯಾಗುವೆ.