ಶನಿವಾರ, ಆಗಸ್ಟ್ 25, 2012

ವೃತ್ತಿಯಿ೦ದ ಸತ್ವದ ಕಡೆಗೆ

ಅಮೃತಬಿ೦ದು’ ಸರಣಿಯ ಬರಹಗಳು

೨೬ ಆಗಸ್ಟ್ ೨೦೧೨
ಆರನೆಯ ಕ೦ತು

ತೃಪ್ತಿ ನಿನ್ನ ಸ್ವಭಾವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೧/೦೪/೨೦೦೩ರ೦ದು ಪ್ರಕಟವಾಗಿತ್ತು)

ಬಾಯಾರಿದವರು ನೀರನ್ನು ಹುಡುಕುತ್ತ ಹೊರಡುವ ಹಾಗೆ ಪೂರ್ಣತೆಯನ್ನರಸುತ್ತ ಮನವು ಅತ್ತಿ೦ದಿತ್ತ ಹೊಯ್ದಾಡುತ್ತಿರುತ್ತದೆ.
ಮನಸ್ಸಿಗೆ ಪೂರ್ಣತೆ ಬೇಕು. ತೃಪ್ತಿಯಿದ್ದಾಗ ಮನಸ್ಸು ಪ್ರಸನ್ನವಾಗುತ್ತದೆ, ತನ್ನಷ್ಟಕ್ಕೆ ತಾನೇ ಶಾಂತವಾಗುತ್ತದೆ.
ತೃಪ್ತಿ ಹೊ೦ದಲು ಹೋರಾಡುವುದೇ ಸಮಸ್ತ ಬದುಕಿನ ಕಾಯಕ. ಯಾವುದೇ ವಸ್ತುವಿನಿಂದಾಗಲೀ, ಪರಿಸ್ಥಿತಿಯಿಂದಾಗಲೀ ಆ ತೃಪ್ತಿ ಸಿಗುತ್ತದಾ? ಯಾವಕಾಲಕ್ಕೂಸಿಗುವುದಿಲ್ಲ.
ತೃಪ್ತಿ ನಿನ್ನ ಸ್ವಭಾವ, ನೀನೇ ತೃಪ್ತಿ, ಅದನ್ನು ಅರಿಯುವುದಕ್ಕೋಸ್ಕರವೇ ಉದ್ಯಮ ಮಾಡು ಅಂತ ಹೇಳುವುದು.

ಈಗ ನಿನ್ನಲ್ಲಿರುವ ರಜೋಗುಣ ಹೆಚ್ಚಾದರೆ ಶರೀರದಲ್ಲಿ ಏನಾಗುತ್ತೆ ಗೊತ್ತಾ? ಸುಮ್ಮನೆ ಕುಳಿತಿರುವುದಕ್ಕೆ ಬಿಡುವುದಿಲ್ಲ.
ಕಸಿವಿಸಿ, ಅದು ಮಾಡು - ಇದು ಮಾಡು, ಅಲ್ಲಿ ಹೋಗು - ಇಲ್ಲಿ ಹೋಗು, ಕೂತಿದ್ದರೂ ನೆಟಿಗೆ ತೆಗಿ, ಕೈ ಅಲ್ಲಾಡಿಸು, ಕಾಲಲ್ಲಾಡಿಸು, ಟೇಬಲ್ ಮೇಲೆ ತಬಲಾ ಬಾರಿಸು.
’ಲಾನ್’ನಲ್ಲಿ ಕುಳಿತಿದ್ದರೂ ತ೦ಗಾಳಿ - ದೃಶ್ಯಗಳನ್ನು ಆನ೦ದಿಸದೆ ಹುಲ್ಲು ಕೀಳುವ ಹುನ್ನಾರ! ಮಂಗನ ಚೇಷ್ಟೆ!!
ಇದೇನು? ರಜೋಗುಣದಿ೦ದ ಪ್ರೇರಿತವಾದ ಅತೃಪ್ತ ಶಾರೀರಿಕ ಸ್ಥಿತಿ, ಮಾನಸಿಕ ಅಲ್ಲೋಲಕಲ್ಲೋಲ.
ಇ೦ಥ ಚಡಪಡಿಕೆಯ ನಿವಾರಣೆಗಾಗಿ, ತೃಪ್ತ ಮನಸ್ಕರಾಗುವ ಸಲುವಾಗಿ ಏನು ಮಾಡಬೇಕು? ಯಾವುದಾದರೂ ಉದ್ಯಮ, ಕೆಲಸ ಮಾಡಬೇಕು.

ಕೆಲವರು ಅಂದುಕೊಳ್ಳುತ್ತಾರೆ, ’ಧ್ಯಾನವೊ೦ದು ಸೋಮಾರಿಗಳ ಲಕ್ಷಣ, ಕೆಲಸಕ್ಕೆ ಬಾರದವರು ಎಲ್ಲೋ ಕುಳಿತು ಧ್ಯಾನ ಮಾಡ್ತಾರೆ, ಭಜನೆ ಮಾಡ್ತಾರೆ’ ಅಂತ.
ಇದೊಂದು ತಪ್ಪು ಅಭಿಪ್ರಾಯ. ಚೆನ್ನಾಗಿ ಕೆಲಸ ಮಾಡುವವರಿಗೆ ಮಾತ್ರವೇ ಚೆನ್ನಾಗಿ ಧ್ಯಾನವನ್ನೂ ಮಾಡಲು ಸಾಧ್ಯ.
ತೃಪ್ತಿ ಹೊ೦ದಲು ವಿಪರೀತ ಕೆಲಸ ಮಾಡಬೇಕು ಎ೦ಬುದು ಅದರ ಅರ್ಥ ಅಲ್ಲ. ಕೆಲವರು ಹುಚ್ಚು ಹಿಡಿದ ಹಾಗೆ ಹಗಲೂ ರಾತ್ರಿ ಕೆಲಸ ಮಾಡ್ತಾರೆ. ಅವರಿಗೆ ನಿದ್ರೆ ಬಂದರೆ ಹೆಚ್ಚು, ಅಥವಾ ಧ್ಯಾನಕ್ಕೆ ಕುಳಿತುಕೊಂಡರೆ ನಿದ್ರೆ ಬಂದುಬಿಡುತ್ತದೆ.
ಒಂದು ಮಿತಿಯಲ್ಲಿ ಚೆನ್ನಾಗಿ ಕೆಲಸ ಮಾಡುವವರಿಗೆ ಧ್ಯಾನವು ಚೆನ್ನಾಗಿ ಆಗುತ್ತದೆ.
ನಾಳೆ ಇದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.
* * * * *

ತ್ರಿಗುಣ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೨/೦೪/೨೦೦೩ರ೦ದು ಪ್ರಕಟವಾಗಿತ್ತು)

ಭಾನುವಾರ ಅಥವಾ ರಜಾ ದಿನಗಳಲ್ಲಿ ಹೆಚ್ಚಾಗಿ ಕೆಲಸ ಏನೂ ಹಚ್ಚಿಕೊಳ್ಳದೆ ಒಂದೆರಡು ಘಂಟೆ ಹೆಚ್ಚಿಗೆ ನಿದ್ದೆ ಮಾಡಿಬಿಡೋಣ ಅಂತ ಮಧ್ಯಾಹ್ನ ಒಳ್ಳೆಯ ಔತಣ ಮಾಡಿ ಮಲಗ್ತೀರಿ.
ಸಂಜೆ ಏಳುತ್ತಾ ಇದ್ದ ಹಾಗೆ ಮೈಯೆಲ್ಲ ಭಾರ. ನಿದ್ರೆ ಹೆಚ್ಚು ಮಾಡಿದಷ್ಟೂ ಶರೀರ ಭಾರ ಆಗುತ್ತೆ. ಇನ್ನೂ ಆಲಸ್ಯ,
ನಮ್ಮಲ್ಲಿರುವ ರಜೋಗುಣ ಹೆಚ್ಚಾಗುತ್ತದೆ. ಒಂದು ಮಿತಿಯಿಂದ ನಿದ್ರೆ ಮಾಡಬೇಕು.

ಕೆಲವು ಸಲ ನಿದ್ರೆಯಿಂದ ಎಚ್ಚೆತ್ತ ತಕ್ಷಣ ಮನಸ್ಸು ನಿರ್ಮಲವಾಗಿ, ನಿರಭ್ರವಾಗಿರುತ್ತದೆ. ಸತ್ವಗುಣವೂ ಹೆಚ್ಚಾಗುತ್ತದೆ.
ಆ ಸಮಯದಲ್ಲಿ ಧ್ಯಾನವೂ ಚೆನ್ನಾಗಿ ಆಗುತ್ತದೆ. ಒಂದು ಮಿತಿಯಲ್ಲಿ ಚೆನ್ನಾಗಿ ಕೆಲಸ, ಒಳ್ಳೆಯ ನಿದ್ರೆ ಎರಡೂ ಆದ ಮೇಲೆ ನಮ್ಮಲ್ಲಿ ಸತ್ವಗುಣ ಹೆಚ್ಚಾಗುತ್ತದೆ. ಸತ್ವ ಉಂಟಾದಾಗ ಮಾತ್ರ ಧ್ಯಾನ ಮಾಡಲು ಸಾಧ್ಯ.
ಸತ್ವ ಯಾವಾಗ ಉಂಟಾಗುತ್ತದೆ? ನಮ್ಮಲ್ಲಿರುವ ತಮೋಗುಣ, ಬೇಸರಿಕೆ, ಆಲಸ್ಯ ಹೋದಾಗ!

ಶಾಂತವಾದ ಮನಸ್ಸು, ಪ್ರಸನ್ನವಾದ ಚಿತ್ತ ಉಂಟಾಗಬೇಕಾದರೆ ಏನು ಆಗಬೇಕು? ರಜೋಗುಣ ಶಾಂತಿಯಾಗಬೇಕು, ತಮೋಗುಣ ನಿವಾರಣೆಯಾಗಬೇಕು.
ರಜೋಗುಣ ಹೇಗೆ ಶಾಂತಿಯಾಗುತ್ತದೆ? ನೀವು ನೂರಕ್ಕೆ ನೂರರಷ್ಟು ನಿಮ್ಮ ಶಕ್ತಿಯನ್ನು ಯಾವುದೇ ಕೆಲಸದಲ್ಲಿ ವಿನಿಯೋಗ ಮಾಡಿ, ಆಗ ರಜೋಗುಣ ಶಾಂತಿಯಾಗುತ್ತದೆ.
ಶಕ್ತಿಯ ವಿನಿಯೋಗದಿಂದಲೇ ತಮೋಗುಣವೂ ನಾಶವಾಗುತ್ತದೆ. ಶಾಂತಿಯಾಗುತ್ತದೆ, ಸತ್ವಗುಣ ಉಂಟಾಗುತ್ತದೆ.
ಆ ಸತ್ವಗುಣ ಹೆಚ್ಚು ಮಾಡಿಕೊಳ್ಳುವುದಕ್ಕೂ ಉದ್ಯಮ ಮಾಡಬೇಕು."ಉದ್ಯಮೋ ಭೈರವಃ".
ಭೈರವ ಎಂದರೆ ಪೂರ್ಣತೆ ಉ೦ಟುಮಾಡುವವನು, ಭರಣ - ಪೋಷಣೆ ಮಾಡತಕ್ಕಂಥವನು ಭೈರವ.
* * * * *

ರಾಗ - ದ್ವೇಷ; ಪ್ರಾಪಂಚಿಕತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೩/೦೪/೨೦೦೩ರ೦ದು ಪ್ರಕಟವಾಗಿತ್ತು)

ಯಾವುದೇ ಕೆಲಸವನ್ನಾದರೂ ನಮ್ಮ ಪೂರ್ಣ ಶಕ್ತಿ ವಿನಿಯೋಗಿಸಿ ಮಾಡಿದಾಗ ಪಶ್ಚಾತ್ತಾಪ ಉಂಟಾಗುವುದಿಲ್ಲ. ಪಶ್ಚಾತ್ತಾಪ ಉಂಟಾಗದಿದ್ದಾಗ ಮನಸ್ಸಿನಲ್ಲಿ ಭಯ, ಆತಂಕ ಇರುವುದಿಲ್ಲ. ಆಗ ಮನಸ್ಸು ಪೂರ್ಣವಾಗಿ ವರ್ತಮಾನದಲ್ಲಿ ಜಾಗೃತಗೊಳ್ಳುತ್ತದೆ. ಆ ಜಾಗೃತವಾದ ಚೇತನದಲ್ಲಿ ’ನಮಃ’ ಉಂಟಾಗುತ್ತದೆ. ಮನಸ್ಸು ಅಂತರ್ಮುಖವಾಗಿ ಶಾಂತಿಯನ್ನೂ ಶರಣಾಗತಿಯನ್ನೂ ಹೊಂದುತ್ತದೆ. ಶರಣಾಗತಿ ಹೊಂದಿದ ಮನಸ್ಸಿನಲ್ಲಿ ಶ್ರೀ, ಸಂಪತ್ತು, ವೈಭವ, ಶಾಂತಿ, ಪ್ರಸನ್ನತೆ, ಶ್ರೇಯಸ್ಸು ಎಲ್ಲಾ ಉಂಟಾಗಿ ’ಆನಂದ ವಪುಷೇ’... ಆನಂದ ವಾತಾವರಣದಲ್ಲಿ ಹರಡುತ್ತದೆ. ಮುಂದಿನ ಸೂತ್ರದ ಅವಶ್ಯಕತೆಯೇ ಇಲ್ಲ. ಒಂದು ವೇಳೆ ಹಾಗೆ ಮಾಡಲು ಆಗಲಿಲ್ಲವೆನ್ನಿ, ನಿಶ್ಶಕ್ತಿ... ಅಥವಾ ಮಾಡಿದಾಗಲೂ ಚಡಪಡಿಕೆ ಜಾಸ್ತಿಯಾಯ್ತು. ಆಗ ಮುಂದಿನ ಸೂತ್ರ ಬೇಕಾಗುತ್ತದೆ.

ಇಲ್ಲೊಂದು ಪ್ರಶ್ನೆ ಹುಟ್ಟುತ್ತದೆ. ತುಂಬಾ ಚೆನ್ನಾಗಿ ಕೆಲಸ ಮಾಡುವುದರಿಂದಲೇ ವ್ಯಕ್ತಿ ಉನ್ನತಿಗೇರಲು ಸಾಧ್ಯವಾಗುವಂತಿದ್ದರೆ, ತುಂಬಾ ಜನ ಕಷ್ಟಪಟ್ಟು ದುಡಿಯುತ್ತಾರೆ. ಬಿಸಿನೆಸ್ ಮಾಡುವವರನ್ನು ಕೇಳಿ ನೋಡಿ. ಅವರೇನೂ ಕಡಿಮೆ ಕೆಲಸ ಮಾಡುವುದಿಲ್ಲ. ಹಗಲು ರಾತ್ರಿ ಕೆಲಸ ಮಾಡ್ತಾರೆ. ಏತಕ್ಕೋಸ್ಕರ? ಲಾಭಕ್ಕೋಸ್ಕರ. ಬರೀ ಉದ್ಯಮದಿಂದಲೇ ಲಾಭ ಸಿಗುತ್ತಾ?

ಕೆಲವು ಸಲ ರಕ್ತದ ಒತ್ತಡ ಜಾಸ್ತಿಯಾಗುತ್ತೆ, ಅಲ್ಸರ್..ಅದೂ..ಇದೂ..ಪ್ರಪಂಚ - ರಾಗ - ದ್ವೇಷ ಸುತ್ತಿಕೊಳ್ಳುತ್ತದೆ. ’ಬೇಕು’ ’ಬೇಡ’ ಸುತ್ತಿಕೊಳ್ಳುತ್ತದೆ, ಜೀವನದಲ್ಲಿ ಈರ್ಷ್ಯೆ ಉಂಟಾಗುತದೆ.

ಶಾಲೆಯಲ್ಲಿ ನೋಡಿ, ಜೊತೆಯಲ್ಲಿಯೇ ಒಟ್ಟಾಗಿ ಓದುವ ಮಕ್ಕಳಲ್ಲೇ ಅಸೂಯೆ ಉಂಟಾಗಿಬಿಡುತ್ತೆ. ’ನಾನೂ ಅಷ್ಟೇ ಬರೆದೆ. ಅವಳೂ ಅಷ್ಟೇ ಬರೆದಿರುವುದು, ಮೇಡಂ ಅವಳಿಗೆ ಜಾಸ್ತಿ ನಂಬರ್ ಕೊಟ್ಟರು - ನನಗೆ ಕೊಟ್ಟಿಲ್ಲ, ಅವಳು ಮೊದಲ ರ‍್ಯಾಂಕ್, ನಾನು ಮೂರನೇ ರ‍್ಯಾಂಕ್... ಅಲ್ಲ? ಅಲ್ಲೂ ಈರ್ಷ್ಯೆ!
ನಿಮಗೆ ತುಂಬಾ ಬೇಕಾದವರು ಯಾರನ್ನೋ ನೋಡಿ ಮುಗುಳ್ನಕ್ಕರು, ಮಾತನಾಡಿದರು, ನಿಮಗೆ ಹೊಟ್ಟೆಯಲ್ಲಿ ಶುರುವಾಯ್ತು, ಕಸಿವಿಸಿ...!! ಪ್ರಪಂಚ ಸುತ್ತಿಕೊಂಡಿರಿ ಮತ್ತೆ! ಹೀಗೇಕೆ?
ನಾಳೆ ವಿಚಾರ ಮಾಡೋಣ.