ಸೋಮವಾರ, ಆಗಸ್ಟ್ 13, 2012

ನಂಬಿಕೆ ಮುಖ್ಯವೆ?

13
2012
Aug
ಬೆಂಗಳೂರು ಆಶ್ರಮ, ಭಾರತ




ಹೌದು, ಇವತ್ತಿಗೆ ನಿಮ್ಮ ಮೌನ ಮುಗಿಯಿತು!
(ಶ್ರೀ ಶ್ರೀಯವರು ಉನ್ನತ ಶಿಬಿರಾರ್ಥಿಗಳಿಗೆ ಹೇಳುತ್ತಾರೆ)
ಸರೋವರದ ಕಡೆಗೆ ನಡೆಯುತ್ತಿದ್ದ ಇಬ್ಬರು ಉನ್ನತ ಶಿಬಿರಾರ್ಥಿಗಳು ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ಒಬ್ಬನು ಕೇಳಿದ, "ಮೌನವು ಯಾವಾಗ ಮುಗಿಯುತ್ತದೆ?" ಇನ್ನೊಬ್ಬನಂದ, "ನಾಳೆ ಬೆಳಗ್ಗೆ! ನಾಳೆ ಬೆಳಗ್ಗೆ ಅದು ಮುಗಿಯುತ್ತದೆ."
(ನಗು)
ಹೀಗೆ, ಕೆಲವು ಜನರು ಅಂತಹ ಮೌನವನ್ನೂ ಇರಿಸಿದ್ದಾರೆ! ಮತ್ತು ಕೆಲವು ಜನರು ಸಂಪೂರ್ಣ ಭಕ್ತಿಯಿಂದ ಮೌನವಿರಿಸಿದ್ದಾರೆ.
ಮೌನದಲ್ಲಿ ನೀವು ಶಕ್ತಿಯನ್ನು ಉಳಿತಾಯ ಮಾಡುತ್ತೀರಿ. ಮಾತನಾಡುವುದರೊಂದಿಗೆ, ಬಹಳಷ್ಟು ಶಕ್ತಿಯು ವ್ಯಯವಾಗುತ್ತದೆ. ಅದಕ್ಕಾಗಿಯೇ ಸ್ವಲ್ಪ ಸಮಯದ ಮಟ್ಟಿಗೆ ಮೌನವಾಗಿರುವುದು ಒಳ್ಳೆಯದು. ವರ್ಷದಲ್ಲಿ ಎರಡು ಅಥವಾ ಮೂರು ಸಾರಿ, ಅಥವಾ ನಾಲ್ಕು ತಿಂಗಳುಗಳಿಗೊಮ್ಮೆ, ಮೂರರಿಂದ ನಾಲ್ಕು ದಿನಗಳ ಮೌನ ಶಿಬಿರ ಮಾಡುವುದು ಬಹಳ ಒಳ್ಳೆಯದು. ಇದನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ. ಶಾರೀರಿಕ ಮತ್ತು ಮಾನಸಿಕ ಪ್ರಯೋಜನಗಳಿವೆ. ನರಮಂಡಲದಲ್ಲಿರುವ ಎಲ್ಲಾ ಒತ್ತಡವು ಬಿಡುಗಡೆಯಾಗುತ್ತದೆ. ನಿಮ್ಮ ಬ್ಯಾಟರಿಗಳು ಚಾರ್ಜ್ ಆಗುತ್ತವೆ ಮತ್ತು ನೀವು ಆನಂದಪೂರ್ಣರಾಗುತ್ತೀರಿ! ಮೌನದೊಂದಿಗೆ ನಮ್ಮ ಮಾತು ಶುದ್ಧವಾಗುತ್ತದೆ ಕೂಡಾ, ಮತ್ತು ನಂತರ ನಾವು ಹೇಳುವುದೆಲ್ಲಾ ಆಗಲು ಪ್ರಾರಂಭವಾಗುತ್ತದೆ. ಅದಕ್ಕೇ ಸಾಧನೆಗೆ ತನ್ನದೇ ಆದ ಮಹತ್ವವಿದೆ.

ಪ್ರಶ್ನೆ: ನಂಬಿಕೆಯು ಎಷ್ಟು ಪ್ರಮುಖವಾದುದು?
ಶ್ರೀ ಶ್ರೀ ರವಿಶಂಕರ್: ನಂಬಿಕೆಯಿಲ್ಲದೆ ನೀವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ!
ಕೇಳು, ನೀನಿಲ್ಲಿಗೆ ಒಂದು ಕಾರಿನಲ್ಲಿ ಬಂದಿರುವೆಯೆಂದು ಮತ್ತು ನೀನು ನಿನ್ನ ಕಾರನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿರುವೆಯೆಂದು ಇಟ್ಟುಕೊಳ್ಳೋಣ. ಈಗ ನೀನು ಇಲ್ಲಿ ಕುಳಿತಿರುವಾಗ, ನೀನು ಹಿಂತಿರುಗಿ ಹೋದಾಗ ಕಾರು ಅಲ್ಲಿರುವುದೆಂಬ ನಂಬಿಕೆ ನಿನ್ನಲ್ಲಿರುವುದು, ಅಲ್ಲವೇ?! ಆದುದರಿಂದ, ಈ ನಂಬಿಕೆಯಿಲ್ಲದೆ ನೀನು ಅಸ್ತಿತ್ವದಲ್ಲಿರಲು ಸಾಧ್ಯವೇ? ಇಲ್ಲ!
ಮೊದಲನೆಯದಾಗಿ, ನಿಮಗೆ ನಿಮ್ಮಲ್ಲಿ ನಂಬಿಕೆಯಿರಬೇಕು.
ಪ್ರಧಾನವಾದ ಮೂರು ರೀತಿಯ ನಂಬಿಕೆಗಳಿವೆ.
೧. ನಿಮ್ಮ ಮೇಲೆ ನಂಬಿಕೆ. ನಿಮಗೆ ನಿಮ್ಮ ಮೇಲೆ ನಂಬಿಕೆಯಿಲ್ಲದಿದ್ದರೆ, ಅದು ಭ್ರಮೆಯೆಂದು ಕರೆಯಲ್ಪಡುತ್ತದೆ. ಅದೊಂದು ರೋಗ.
೨. ನಿಮ್ಮ ಸುತ್ತಲಿರುವ ಜನರ ಒಳ್ಳೆಯತನದಲ್ಲಿ ನಂಬಿಕೆ. ಪ್ರಪಂಚದಲ್ಲಿ ಒಳ್ಳೆಯ ಜನರಿದ್ದಾರೆ, ನಿಮ್ಮಲ್ಲಿ ಆ ನಂಬಿಕೆಯಿರಬೇಕು; ಇಲ್ಲದಿದ್ದರೆ ನಿಮಗೆ ಸಮಾಜದಲ್ಲಿ ಒಂದು ಅಂಗುಲದಷ್ಟೂ ಚಲಿಸಲು ಸಾಧ್ಯವಿಲ್ಲ.
೩. ತಿಳಿಯದೇ ಇರುವ ಒಂದರ ಬಗ್ಗೆ ನಂಬಿಕೆ; ಎಲ್ಲವನ್ನೂ ನಡೆಸುವಂತೆ ತೋರುವ ಒಂದು ಅಮೂರ್ತ ಶಕ್ತಿಯಲ್ಲಿ ನಂಬಿಕೆ. ಅದು ಮೂರನೆಯ ರೀತಿಯ ನಂಬಿಕೆ.
ಆದುದರಿಂದ, ಈ ಮೂರು ನಂಬಿಕೆಗಳಲ್ಲಿ, ಮೊದಲನೆಯ ಎರಡು ನಂಬಿಕೆಗಳು ಬಹಳ ಅಗತ್ಯ; ಮೂರನೆಯದು ಜೀವನವನ್ನು ಬಹಳಷ್ಟು ಉತ್ತಮಗೊಳಿಸುತ್ತದೆ.

ಪ್ರಶ್ನೆ: ಪ್ರಯತ್ನಗಳನ್ನು ಮಾಡಿದ ಬಳಿಕವೂ ನನಗೆ ಯಶಸ್ಸು ಸಿಗುವುದಿಲ್ಲ.
ಶ್ರೀ ಶ್ರೀ ರವಿಶಂಕರ್: ನಿನಗೆ ಕೇವಲ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಲು ಸಾಧ್ಯವಿಲ್ಲ. ಪ್ರಯತ್ನದೊಂದಿಗೆ ನಿನ್ನಲ್ಲಿ ಶ್ರದ್ಧೆ ಮತ್ತು ಭಕ್ತಿಯೂ ಇರಬೇಕು. ನಿನ್ನಲ್ಲಿ ಶ್ರದ್ಧೆ ಮತ್ತು ಭಕ್ತಿಗಳಿದ್ದು, ಅವುಗಳು ಜೊತೆಯಲ್ಲಿ ಸಾಗಿದರೆ, ಆಗ ನಿನಗೆ ಯಶಸ್ಸು ಸಿಗುತ್ತದೆ.
ಹಾಗೆಯೇ, ನಿಮ್ಮಲ್ಲಿ ಕೇವಲ ಭಕ್ತಿಯಿದ್ದರೆ ನಿಮಗೆ ಯಶಸ್ಸು ಸಿಗುವುದೆಂದಲ್ಲ. ಅಲ್ಲ! ನಿಮ್ಮಲ್ಲಿ ಭಕ್ತಿ ಮತ್ತು ಪ್ರಯತ್ನವಿರಬೇಕು; ಈ ಎರಡರ ಸಂಯೋಗವಿರುವುದು ಅಗತ್ಯವಾಗಿದೆ.

ಪ್ರಶ್ನೆ: ದಯವಿಟ್ಟು ನಮಗೆ ಅಹಂನ ಬಗ್ಗೆ ಹೇಳಿ.  
ಶ್ರೀ ಶ್ರೀ ರವಿಶಂಕರ್: ಪ್ರೀತಿಯಲ್ಲಿ ಒಂದು ಸೋಲು ಕೂಡಾ ಗೆಲುವಾಗುತ್ತದೆ, ಮತ್ತು ಅಹಂಕಾರದಲ್ಲಿ ಒಂದು ಗೆಲುವು ಕೂಡಾ ಸೋಲಾಗುತ್ತದೆ!

ಪ್ರಶ್ನೆ: ಗುರೂಜಿ, ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು, ಮಾಡುವ ಕೆಲಸವು ಪರಿಪೂರ್ಣವಾಗಿ ಸರಿಯಲ್ಲದಿದ್ದರೂ, ಯಾವುದೆಲ್ಲಾ ಸಹಜವಾಗಿ ಬರುವುದೋ ಅದನ್ನು ಮಾಡುತ್ತಾ ಇರು ಎಂದು ಹೇಳುತ್ತಾನೆ. ದಯವಿಟ್ಟು ಸಲಹೆ ನೀಡಿ.
ಶ್ರೀ ಶ್ರೀ ರವಿಶಂಕರ್: ಹೌದು, ನಿನ್ನ ಸಹಜತೆಯಲ್ಲಿರು, ಅಸಹಜವಾಗಿರಬೇಡ. ಯಾವುದು ನಿನಗೆ ಸಹಜವಲ್ಲವೋ ಅದನ್ನು ತೋರಿಸಿಕೊಳ್ಳಲು ಹೋಗಬೇಡ. ಆದರೆ ಅದರರ್ಥ ನೀನು ಮೂರ್ಖನಾಗಿರು ಎಂದಲ್ಲ, ಸರಿಯಾ!
ನೀನೊಂದು ಅಂತ್ಯಸಂಸ್ಕಾರಕ್ಕೆ ಹೋಗಿರುವೆಯೆಂದೂ ಮತ್ತು ನಿನಗೆ ನೃತ್ಯ ಮಾಡಬೇಕೆಂದನಿಸುವುದೆಂದೂ ಅಂದುಕೊಳ್ಳೋಣ. ನೀನಂದುಕೊಳ್ಳುವೆ, "ಸಹಜವಾಗಿರೆಂದು ಗುರೂಜಿ ಹೇಳಿದ್ದಾರೆ", ಮತ್ತು ಆದುದರಿಂದ ನೀನು ನೃತ್ಯ ಮಾಡಲು, ಚಪ್ಪಾಳೆ ತಟ್ಟಲು ಪ್ರಾರಂಭಿಸುವೆ. ಇಲ್ಲ, ಇದು ಕೆಲಸ ಮಾಡುವುದಿಲ್ಲ. ನೀನು ಔಚಿತ್ಯವನ್ನೂ ಕೂಡಾ ಉಳಿಸಿಕೊಳ್ಳಬೇಕು.
ನೀನಂದುಕೊಳ್ಳುವೆ, "ಗುರೂಜಿಯವರು, ’ಒಂದು ಪ್ರಪಂಚ ಕುಟುಂಬ, ಎಲ್ಲರನ್ನೂ ಅಪ್ಪಿಕೋ ಮತ್ತು ಮುಂದೆ ಸಾಗು’ ಎಂದು ಹೇಳಿದ್ದಾರೆ" ಹಾಗೂ ನೀವು ದಾರಿಯಲ್ಲಿ ಹೋಗುತ್ತಿರುವ ಒಬ್ಬಳು ಸ್ತ್ರೀಯನ್ನು ನೋಡಿ, ಹೋಗಿ, "ಹೇಗಿದ್ದರೂ, ಎಲ್ಲವೂ ನನ್ನದೇ!" ಎಂದು ಯೋಚಿಸುತ್ತಾ ಅವಳನ್ನು ಅಪ್ಪಿಕೊಳ್ಳುತ್ತೀರಿ. ನೀವು ಇದನ್ನು ಮಾಡಿದರೆ ನಿಮಗೊಂದು ಏಟು ಸಿಗುತ್ತದೆ. ಆದುದರಿಂದ ಹಾಗೆ ಮಾಡಬೇಡಿ.
ಹೌದು, ಬ್ರಹ್ಮ ಭಾವವನ್ನು ಬೆಳೆಯಿಸಿಕೊಳ್ಳುವುದು ಒಳ್ಳೆಯದು - ಎಲ್ಲವೂ ಒಂದು; ಇದೆಲ್ಲವೂ ನನ್ನ ಒಂದು ಭಾಗ. ಆದರೆ, ನೀವು ಒಬ್ಬರ ಜೇಬಿನಿಂದ ಕದ್ದು, ಇದೆಲ್ಲವೂ ನನ್ನದೇ ಎಂದು ಹೇಳಬೇಕೆಂದು ಇದರ ಅರ್ಥವಲ್ಲ.

ಪ್ರಶ್ನೆ: ಗುರೂಜಿ, ನನಗನ್ನಿಸುತ್ತದೆ, ನಾನು ಬೇಸರ ತರಿಸುವವನಾದುದರಿಂದ ಜನರು ನನ್ನನ್ನು ಸ್ವೀಕರಿಸುವುದಿಲ್ಲವೆಂದು. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಜನರು ನಿನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡ. ಒಂದು ಗುರಿಯನ್ನಿರಿಸು ಮತ್ತು ಮುಂದೆ ನಡೆ. ನೀನು ಒಬ್ಬಂಟಿಯಾಗಿ ನಡೆಯಬೇಕಾಗಿ ಬಂದರೆ, ಒಬ್ಬಂಟಿಯಾಗಿ ನಡೆ ಮತ್ತು ಜೀವನದಲ್ಲಿ ನೀನು ಏನನ್ನು ಸಾಧಿಸಲು ಬಯಸುವೆಯೋ ಅದನ್ನು ಸಾಧಿಸು. ಆಗ ಎಲ್ಲರೂ ಜೊತೆಯಲ್ಲಿ ಬರುತ್ತಾರೆ.
ನಾನು ಕೂಡಾ ಬಹಳ ಬೇಸರ ತರಿಸುವವನೆಂದು ಯೋಚಿಸಿದ್ದೆ ಯಾಕೆಂದರೆ, ನನಗೆ ಕ್ರಿಕೆಟಿನ ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಆ ದಿನಗಳಲ್ಲಿ ಎಲ್ಲರೂ ಕ್ರಿಕೆಟಿನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ನಾನು ಕೇವಲ ದಿಟ್ಟಿಸಿ ನೋಡುತ್ತಿದ್ದೆ. ನಾನು ಹದಿಹರೆಯದವನಾಗಿದ್ದಾಗ ಅದು ನನ್ನಲ್ಲಿ ಆಸಕ್ತಿಯನ್ನುಂಟುಮಾಡಲಿಲ್ಲ. ನಾನದನ್ನು ಆನಂದಿಸುತ್ತಿರಲಿಲ್ಲ, ಆದರೆ ಜನರು ಹುಚ್ಚರಾಗಿಬಿಡುತ್ತಿದ್ದರು. ನಿರಂತರವಾಗಿ ಐದು ದಿನಗಳ ವರೆಗೆ ಅವರು ರೇಡಿಯೋವನ್ನು ಕಿವಿಗೆ ತಾಗಿಸಿಕೊಂಡು ಕಮೆಂಟರಿಗಳನ್ನು ಕೇಳುತ್ತಿದ್ದರು. ಆ ಸಮಯದಲ್ಲಿ, ಏನು ಮಾತನಾಡುವುದು ಎಂದು ನನಗನ್ನಿಸುತ್ತಿತ್ತು. ಎಲ್ಲರೂ ಕೇವಲ ಕ್ರಿಕೆಟಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದರು, ಬೇರೆ ಮಾತನಾಡುತ್ತಿರಲಿಲ್ಲ.
ನೀನು ನಿನ್ನದೇ ಪಥವನ್ನು ಮಾಡು ಮತ್ತು ಅದರ ಮೇಲೆ ನಡೆ. ನೀನು ನಿನ್ನನ್ನು ಅಳೆಯಬೇಡ ಮತ್ತು ಇತರರನ್ನು ಅಳೆಯಬೇಡ.

ಪ್ರಶ್ನೆ: ಗುರೂಜಿ, ಹಲವಾರು ಆಯ್ಕೆಗಳಿರುವಾಗ ಯಾವುದನ್ನು ಮಾಡುವುದು ಸರಿಯೆಂದು ನಮಗೆ ತಿಳಿಯುವುದು ಹೇಗೆ? ಅಂತೆಯೇ, ಅವುಗಳೆಲ್ಲವೂ ಸರಿಸಮಾನವಾಗಿ ಒಳ್ಳೆಯದಾಗಿರುವಾಗ, ನಾನು ಸರಿಯಾದುದನ್ನು ಹೆಕ್ಕುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಸರಿಯಾದ ಆಯ್ಕೆಯು ತಾನೇ ತಾನಾಗಿ ಕಂಡುಬರುತ್ತದೆ. ಅಂತಹ ಒಂದು ಪರಿಸ್ಥಿತಿ ಎದ್ದಾಗ, ತಾಳ್ಮೆಯಿಂದಿರು, ಸ್ವಲ್ಪ ಕಾದು ನೋಡು ಮತು ಅದು ಆಗುತ್ತದೆ.

ಪ್ರಶ್ನೆ: ಗುರೂಜಿ, ನನ್ನ ಸಹೋದರ ಮತ್ತು ನಾನು ಒಂದೇ ಶಿಕ್ಷಣವನ್ನು ಪಡೆದೆವು, ಆದರೆ ಅದೇ ಸಮಯದಲ್ಲಿ ನಾವಿಬ್ಬರೂ ಬಹಳ ಭಿನ್ನವಾಗಿದ್ದೇವೆ, ಅದು ಆ ರೀತಿ ಇರುವುದು ಹೇಗೆ?
ಶ್ರೀ ಶ್ರೀ  ರವಿಶಂಕರ್: ಇದು ಬಹಳ ಆಳವಾದ ವಿಜ್ಞಾನ. ನೀನು ಇದರ ಬಗ್ಗೆ ಸ್ವಲ್ಪ ಸಮಯ ಯೋಚಿಸಬೇಕು.
ಅಣುರೂಪ ಮತ್ತು ಬ್ರಹ್ಮಾಂಡಗಳು ಮಿಳಿತವಾಗಿವೆ. ನಿಜವಾಗಿ ಅದು ಒಂದೇ. ಆದರೆ ಅಣುರೂಪದಿಂದ ಬ್ರಹ್ಮಾಂಡಕ್ಕೆ ಒಂದು ಕೊಂಡಿಯಿದೆ. ಈ ಭೂಮಿಯಲ್ಲಿರುವ ಪ್ರತಿಯೊಂದು ಚಿಕ್ಕ ಧಾನ್ಯವೂ ಕೆಲವು ವಿಶೇಷ ರೀತಿಯಲ್ಲಿ ವಿಶ್ವದೊಂದಿಗೆ ಜೋಡಿಕೊಂಡಿದೆ. ಪ್ರಾಚೀನ ಜನರು ಇದನ್ನು ಅರಿತಿದ್ದರು. ಆದುದರಿಂದ, ನಮ್ಮ ಸೌರ ಮಂಡಲದಲ್ಲಿ ಒಂಭತ್ತು ಗ್ರಹಗಳಿವೆ ಮತ್ತು ಈ ಒಂಭತ್ತು ಗ್ರಹಗಳು ಒಂಭತ್ತು ವಿವಿಧ ಧಾನ್ಯಗಳೊಂದಿಗೆ, ಒಂಭತ್ತು ವಿವಿಧ ಪ್ರಾಣಿಗಳೊಂದಿಗೆ, ಒಂಭತ್ತು ವಿವಿಧ ಆಕಾರಗಳೊಂದಿಗೆ, ಒಂಭತ್ತು ವಿವಿಧ ಬಣ್ಣಗಳೊಂದಿಗೆ ಮತ್ತು ಒಂಭತ್ತು ವಿವಿಧ ವಸ್ತುಗಳೊಂದಿಗೆ ಜೋಡಿಕೊಂಡಿವೆ ಎಂದು ಅವರು ಹೇಳಿದರು. ಒಂದರಿಂದ ಇನ್ನೊಂದಕ್ಕಿರುವ ಸಂಬಂಧವನ್ನು ಅವರು ಹೇಗೆ ಪತ್ತೆಹಚ್ಚಿದರು ಎಂಬುದು ಅತ್ಯಾಶ್ಚರ್ಯಕರವಾಗಿದೆ. ಅದು ಬಹಳ ಸೋಜಿಗವಾದುದು!
ಭೂಮಿಯು ಗೋಲಾಕಾರದಲ್ಲಿದೆ ಮತ್ತು ಭೂಮಿಯು ಸೂರ್ಯನ ಸುತ್ತಲೂ ಚಲಿಸುತ್ತಿದೆ ಎಂಬುದನ್ನು ಮೊದಲಿಗೆ ಕಂಡುಹಿಡಿದವನು ಗೆಲಿಲಿಯೋ ಎಂದು ನಾವು ನಮ್ಮ ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಓದಿದ್ದೇವೆ. ಪಶ್ಚಿಮದಲ್ಲಿ ಯಾವತ್ತೂ, ಸೂರ್ಯನು ಭೂಮಿಯ ಸುತ್ತಲೂ ಚಲಿಸುವುದು ಎಂದು ಅಂದುಕೊಂಡಿದ್ದರು. ಆದರೆ ನೀವು ಭಾರತದಲ್ಲಿ ಯಾವುದೇ ದೇವಾಲಯಕ್ಕೆ ಹೋದರೂ, ಸೌರಮಂಡಲದ ಕೇಂದ್ರವು ಸೂರ್ಯನೆಂಬುದು ಅವರಿಗೆ ತಿಳಿದಿರುತ್ತದೆ. ಇದನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗಿದೆ. ಅವರು, ಸೂರ್ಯನನ್ನು ಮಧ್ಯದಲ್ಲಿ ಮತ್ತು ಗ್ರಹಗಳನ್ನು ಸುತ್ತಲೂ ಇರಿಸಿದರು, ಹಾಗೂ ಅವರು ಮಾಡಿದ ಇನ್ನೊಂದು ಕೆಲಸವೆಂದರೆ, ಪ್ರತಿಯೊಂದು ಗ್ರಹವನ್ನೂ ಒಂದು ಮಂತ್ರ ಮತ್ತು ಒಂದು ಯಂತ್ರದೊಂದಿಗೆ ಜೋಡಿಸಿದುದು. ಪ್ರಾಣ ಶಕ್ತಿಯು ಒಂದು ನಿರ್ದಿಷ್ಟ ಹರಳು ಮತ್ತು ಒಂದು ನಿರ್ದಿಷ್ಟ ಧಾನ್ಯದೊಂದಿಗೆ ಜೋಡಲ್ಪಟ್ಟಿದೆ. ಉದಾಹರಣೆಗೆ ಮಂಗಳ ಗ್ರಹವು ಕಡಲೆಬೇಳೆಯೊಂದಿಗೆ ಜೋಡಲ್ಪಟ್ಟಿದೆ, ಬುಧ ಗ್ರಹವು ಹೆಸರು ಬೇಳೆಯೊಂದಿಗೆ ಜೋಡಲ್ಪಟ್ಟಿದೆ, ಶನಿ ಗ್ರಹವು ಎಳ್ಳು ಬೀಜಗಳೊಂದಿಗೆ ಜೋಡಲ್ಪಟ್ಟಿದೆ, ಸೂರ್ಯ ಮತ್ತು ಚಂದ್ರನು ಅಕ್ಕಿ ಮತ್ತು ಗೋಧಿಯೊಂದಿಗೆ ಜೋಡಲ್ಪಟ್ಟಿವೆ. ಚಂದ್ರನ ಛೇದಬಿಂದುಗಳಾದ ರಾಹು ಮತ್ತು ಕೇತುಗಳು ಕೂಡಾ ವಿವಿಧ ಬೇಳೆಗಳೊಂದಿಗೆ ಜೋಡಲ್ಪಟ್ಟಿವೆ. ಹೀಗೆ ಪ್ರತಿಯೊಂದು ಗ್ರಹವೂ ಕೂಡಾ ಒಂದು ನಿರ್ದಿಷ್ಟ ಧಾನ್ಯದೊಂದಿಗೆ, ಒಂದು ನಿರ್ದಿಷ್ಟ ಆಕಾರ ಮತ್ತು ಬಣ್ಣದೊಂದಿಗೆ ಹಾಗೂ ನಮ್ಮ ಶರೀರದ ಒಂದು ನಿರ್ದಿಷ್ಟ ಭಾಗದೊಂದಿಗೆ ಜೋಡಲ್ಪಟ್ಟಿದೆ. ನಮ್ಮ ಶರೀರದ ಪ್ರತಿಯೊಂದು ಭಾಗವೂ ಒಂದು ನಿರ್ದಿಷ್ಟ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ನಿಮ್ಮ ಶರೀರದಲ್ಲಿ ಎಲ್ಲಾ ಗ್ರಹಗಳ ವ್ಯವಸ್ಥೆಗಳೂ ಇವೆ. ಇದೊಂದು ಅತ್ಯಾಶ್ಚರ್ಯಕರ ವಿಜ್ಞಾನ.
ಸಾಮುದ್ರಿಕ ಲಕ್ಷಣ ಎಂದು ಕರೆಯಲ್ಪಡುವ ಒಂದು ವಿಜ್ಞಾನವು ಬಳಕೆಯಲ್ಲಿತ್ತು. ಅದರಲ್ಲಿ, ಅವರು ನಿಮ್ಮ ಮುಖವನ್ನು ನೋಡಿ ನಿಮ್ಮ ಜಾತಕವನ್ನು ಬರೆಯುತ್ತಿದ್ದರು. ಕೆಲವೊಮ್ಮೆ, ಅವರು ನಿಮ್ಮ ಹಲ್ಲುಗಳನ್ನು ನೋಡಿ, ನೀವು ಯಾವ ವರ್ಷದಲ್ಲಿ ಹುಟ್ಟಿದಿರೆಂಬುದನ್ನು ನಿಖರವಾಗಿ ಹೇಳುತ್ತಿದ್ದರು. ಆದರೆ ಈ ವಿಜ್ಞಾನವು ಹೇಗೋ ಕಾಣೆಯಾಗಿದೆ. ಬಹಳಷ್ಟು ಜ್ಞಾನವು ದುರುಪಯೋಗಗೊಂಡಿದೆ ಮತ್ತು ಕಾಣೆಯಾಗಿದೆ.
ಇವತ್ತು, ವಿವಿಧ ದೇವಾಲಯಗಳಿಂದ ಪುರೋಹಿತರು ಬಂದಿದ್ದಾರೆ ಮತ್ತು ಅವರು, ಪ್ರಪಂಚದ ಹಾಗೂ ಜನರ ಒಳಿತಿಗಾಗಿ ಒಂಭತ್ತು ಗ್ರಹಗಳ ಒಂದು ಯಜ್ಞವನ್ನು ಮಾಡುತ್ತಿದ್ದಾರೆ. ಬರಲಿರುವ ಕೆಲವು ದಿನಗಳು ಬಹಳ ಕಷ್ಟಕರವಾಗಿರಬಹುದು, ಆದುದರಿಂದ ಪ್ರಪಂಚದಲ್ಲಿ ಹೆಚ್ಚಿನ ಸಕಾರಾತ್ಮಕ ಪ್ರಭಾವವನ್ನು ತರಲು ಹಾಗೂ ನಕಾರಾತ್ಮಕ ಕಂಪನಗಳನ್ನು ಕಡಿಮೆ ಮಾಡಲು ಅವರು ಇವತ್ತು ಮತ್ತು ನಾಳೆ ಈ ಯಜ್ಞವನ್ನು ಮಾಡುತ್ತಿದ್ದಾರೆ. ಇವುಗಳು ಪ್ರಾಚೀನ ವಿಷಯಗಳು. ಆದರೆ ಯಾರೂ ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಮತ್ತು ಇದನ್ನು ಮಾಡಲು ಸರಿಯಾದ ಜನರು ಕೂಡಾ ಇರಲಿಲ್ಲ. ಇಲ್ಲಿಯೇ ನಾವು ಯುವಜನರನ್ನು ಪ್ರೋತ್ಸಾಹಿಸಬೇಕಾಗಿರುವುದು. ಆದುದರಿಂದ, ಈ ಎಲ್ಲಾ ಪುರೋಹಿತರನ್ನು ಕರೆತಂದು ಯುವಜನರನ್ನು ತರಬೇತುಗೊಳಿಸುವಂತೆ ಅವರಲ್ಲಿ ಕೇಳಿಕೊಳ್ಳೋಣವೆಂದು ನಾನು ಯೋಚಿಸಿದೆ.

ಪ್ರಶ್ನೆ: ಒಬ್ಬನು ವ್ಯಸನಗಳಿಂದ ಹೊರಬರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಸಾಧನೆಯನ್ನು ಮಾಡುವುದರಿಂದ. ಯಾವುದೇ ವ್ಯಸನವನ್ನು ಹೋಗಲಾಡಿಸಲು ಸಹಾಯ ಮಾಡಬಲ್ಲ ಒಂದೇ ವಿಷಯವೆಂದರೆ ಸಾಧನೆ. ಇಲ್ಲಿಗೆ ಬಾ, ಕುಳಿತುಕೊಂಡು ಸಾಧನೆ ಮಾಡು. ಉನ್ನತ ಶಿಬಿರಗಳನ್ನು ಮಾಡು. ಕೇವಲ ಒಂದು ಅಥವಾ ಎರಡಲ್ಲ, ಆದರೆ ಮಾಡುತ್ತಾ ಇರು ಮತ್ತು ಆಗ ವ್ಯಸನಗಳು ಹೋಗುತ್ತವೆ. "ನಾನು ಯಾರು? ನಾನು ಯಾರು?" ಎಂದು ಕೇಳುತ್ತಾ ಇರು. ಅದು ಅತ್ಯುತ್ತಮವಾದುದು. ಅದರಿಂದಲೇ ನಿನಗೆ ಉತ್ತರ ಸಿಗುವುದು.

ಪ್ರಶ್ನೆ: ಗುರೂಜಿ, ನನಗೆ ಒಬ್ಬಳೇ ಒಬ್ಬಳು ಮಗಳಿರುವುದು. ಅವಳು ವಿವಾಹವಾಗಿ ಕೆನಡಾದಲ್ಲಿದ್ದಾಳೆ ಮತ್ತು ಒಂದೂವರೆ ವರ್ಷಗಳಿಂದ ನನಗೆ ಅವಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನನಗೆ ಅವಳನ್ನು ಭೇಟಿಯಾಗಲು ಸಾಧ್ಯವಾಗುವುದೇ?
ಶ್ರೀ ಶ್ರೀ ರವಿಶಂಕರ್: ಹೌದು, ಹೋಗಿ ಅವಳನ್ನು ಭೇಟಿಯಾಗು!
ನಿನ್ನ ಮಗಳಿಗೂ ಅನ್ನಿಸಬೇಕು, "ನನಗೆ ನನ್ನ ತಾಯಿಯನ್ನು ಭೇಟಿಯಾಗಬೇಕು."
ಆಗಿರುವುದೇನೆಂದರೆ, ಕೆಲವೊಮ್ಮೆ ನಾವು ನಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸಿರುತ್ತೇವೆಂದರೆ, ಅವರಲ್ಲಿ ಯಾವುದೇ ಭಾವನೆ ಅಥವಾ ಸಹಾನುಭೂತಿ ಇರುವುದಿಲ್ಲ. ನಾವು ಅವರಿಗೆ ಸರಿಯಾದ ಮೌಲ್ಯಗಳನ್ನು ನೀಡಿರುವುದಿಲ್ಲ ಅಥವಾ ಅವರಿಗೆ ಯಾವುದೇ ಸದ್ಗುಣಗಳನ್ನು  ಕಲಿಸಿರುವುದಿಲ್ಲ, ಮತ್ತು ಹೀಗಾಗಿ ಅವರು ಹೊರದೇಶಕ್ಕೆ ಹೋದಾಗ, ಅವರು ಎಲ್ಲವನ್ನೂ ಮರೆತುಬಿಡುತ್ತಾರೆ ಮತ್ತು ಸ್ವಾರ್ಥಿಗಳಾಗುತ್ತಾರೆ.
ನೀನು ಹೋಗಲು ಬಿಡು ಮತ್ತು ಶಾಂತಳಾಗು! ಎಲ್ಲವೂ ಒಳ್ಳೆಯದಾಗುತ್ತದೆ!