ಮಂಗಳವಾರ, ಆಗಸ್ಟ್ 13, 2013

ದಾನ, ಜ್ಞಾನಗಳ ಮಹತ್ವ

ಅಮೃತಬಿ೦ದು’ ಸರಣಿಯ ಬರಹಗಳು

ಹದಿನೇಳನೆಯ ಕ೦ತು

ಕೊಟ್ಟ ಫಲ ಕುಲ ಕೋಟಿಗೆ (ಸಾತ್ವಿಕ ದಾನ)

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೮.೦೭.೦೩ರಂದು ಪ್ರಕಟವಾಗಿತ್ತು)

ಮ್ಮ ಸಂಸ್ಕೃತಿಯಲ್ಲಿ ದಾನ ಕೊಡುವುದಕ್ಕೆ ಮಹತ್ತ್ವವಿದೆ.ಇದರಲ್ಲಿ ಅಡಕವಾಗಿರುವ ತತ್ವವನ್ನು ತಿಳಿದುಕೊಳ್ಳೋಣ.

ಯಾವಾಗಲಾದರೂ ನಿಮ್ಮ ಮನಸ್ಸು ತೀರಾ ಬೇಸರಗೊಂಡಾಗಲೋ, ನಿರುತ್ಸಾಹದಿಂದ ಖಿನ್ನವಾದಾಗಲೋ ಒಂದು ಪ್ರಯೋಗ ಮಾಡಿ ನೋಡಿ. ತೀರಾ ಅವಶ್ಯಕತೆ ಇರುವಂಥಹವರಿಗೆ ಏನಾದರೂ ಒಂದಷ್ಟು ಪದಾರ್ಥವನ್ನು, ವಸ್ತುವನ್ನು ತೆಗೆದುಕೊಂಡು ಹೋಗಿ ಹಂಚಿ ಬನ್ನಿ. ನೋಡಿ, ತಕ್ಷಣ ಪರಿವರ್ತನೆಯಾಗಿಬಿಡುತ್ತೆ ಮನಸ್ಸು!

ತೀರಾ ಕಷ್ಟದಲ್ಲಿರುವವರಿಗೆ ದಿನಸಿಯೋ, ಬಟ್ಟೆಯೋ, ಕಂಬಳಿಯೋ, ಏನಾದರೂ ಸರಿ ನಿಮ್ಮ ಕೈಲಿ ಕೊಡಲು ಸಾಧ್ಯವಾಗುವಂಥದನ್ನು ದಾನ ಮಾಡೀಪ್ಪ. ಏನೂ ಇಲ್ಲದಿದ್ದರೆ ಅಂತಃಕರಣದಿಂದ ನಾಲ್ಕು ಒಳ್ಳೆಯ ಮಾತನಾದರೂ ಆಡಿ. ನೀವು ಕೊಟ್ಟಾಗ ನಿಮಗೆ ಇನ್ನೂ ಹೆಚ್ಚಾಗಿಯೇ ಬರುತ್ತೆ. ಆದರೆ, ಬರಲಿ ಅಂತ ನಿರೀಕ್ಷೆಯಲ್ಲಿ ಕೊಡುವುದು ದಾನ ಆಗುವುದಿಲ್ಲ. ಕೊಡಬೇಕು ಅಂತ ಕೊಡಿ, ಅದು ಸಾತ್ವಿಕವಾದ ದಾನ.

ನಾವು ರೂಢಿ ಮಾತಿನಲ್ಲಿ ಹೇಳುತ್ತೀವಲ್ಲ, "ಇವತ್ತೆಲ್ಲ ನಾವು ಚೆನ್ನಾಗಿದ್ದರೆ, ನಮ್ಮ ಹಿರಿಯರು ಮಾಡಿದ ಪುಣ್ಯದಿಂದ" ಅಂತ, ಎಂದರೆ ನಮ್ಮ ಹಿರಿಯರೆಲ್ಲ ಏನೋ ಪುಣ್ಯಕಾರ್ಯ ಮಾಡಿದ್ದಾರೆ ಅದಕ್ಕೇ ನಾವೆಲ್ಲಾ ಚೆನ್ನಾಗಿದ್ದೀವಿ ಅಂತ. ಎಂದರೇನು?

’ನಾವು ಮಾಡತಕ್ಕಂಥ ದಾನ, ಸತ್ಕರ್ಮಗಳು, ಸತ್ಕಾರ್ಯಗಳು ನಮಗೆ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೂ ಅದರ ಪ್ರಭಾವ ಇರುತ್ತದೆ’ ಎನ್ನುವುದನ್ನು ಈ ರೀತಿ ಹೇಳುತ್ತಾರೆ. ಇದರಲ್ಲಿ ಸತ್ಯವಡಗಿದೆ.

* * * * *

ದಾನ ಫಲ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೯.೦೭.೦೩ರಂದು ಪ್ರಕಟವಾಗಿತ್ತು)

"ದಾನಂ ಆತ್ಮಜ್ಞಾನಂ"

ದಾನ ಮಾಡಿದರೆ ಪುಣ್ಯ ಬರುತ್ತೆ ಅಂತ ಏಕೆ ಹೇಳ್ತಾರೆ? ದಾನ ಮಾಡಿದಾಗ ನಮಗೆ ನೆಮ್ಮದಿ, ಶಾಂತಿ ಹೇಗೆ ಸಿಗುತ್ತೆ ಅಂತ ಗಮನಿಸಿದ್ದೀರಾ? ಈಗ ಒಂದು ಜೀವ ಹಸಿದು ಬಂದಿದೆಯಪ್ಪ. ಆ ಹಸಿದು ಬಂದ ಜೀವಕ್ಕೆ ನೀವೇನೋ ಒಂದೆರಡು ತುತ್ತು ಕೊಡ್ತೀರ, ಅದಕ್ಕೆ ಹೊಟ್ಟೆ ತುಂಬುತ್ತದೆ. ಆಗ ಆ ಶರೀರದಲ್ಲಿರತಕ್ಕಂಥ ಜೀವ, ಹಸಿವಿನ ಬಾಧೆಯಿಂದ ಮುಕ್ತಿ ಹೊಂದಿದ ಆ ಆತ್ಮ ತೃಪ್ತಿಯಿಂದ ’ಓ! ಊಟ ಕೊಟ್ಟರಪ್ಪ, ಇವರು ಚೆನ್ನಾಗಿರಲಿ’ ಅಂತ ಹರಸುತ್ತೆ. ಅಂತರಾಳದಿಂದ ಬಂದ ಆ ಒಳ್ಳೆಯ ಭಾವನೆ, ಹಾರೈಕೆಯ ಆ ಉದ್ಗಾರ ನಿಮ್ಮ ಜೀವಕ್ಕೆ, ಜೀವನಕ್ಕೆ ತಂಪು ಉಂಟು ಮಾಡುತ್ತೆ.

ಬೇರೆ ಬೇರೆ ತರಹದ ಎಷ್ಟೋ ವಸ್ತುಗಳನ್ನು ಸಂಗ್ರಹ ಮಾಡಿಕೊಂಡು, ಅದನ್ನು ವ್ಯಾವಹಾರಿಕವಾಗಿ ದಾನ ಮಾಡಿದಾಗ ಈ ರೀತಿಯ ಪೂರ್ಣ ತೃಪ್ತಿ ಉಂಟಾಗುವುದಿಲ್ಲ.

ಹೇಗೆ ಒಂದು ಮರದ ನೆರಳಿನ ತಂಪು ನಮ್ಮ ಶರೀರದ ತಾಪವನ್ನೂ, ಆಯಾನವನ್ನೂ ಪರಿಹರಿಸಿ, ವಿಶ್ರಾಂತಿಯನ್ನೂ ಸುಖವನ್ನೂ ಕೊಡುತ್ತದೆಯೋ ಹಾಗೆ ಒಂದು ಆತ್ಮಕ್ಕೆ ಯಾವುದೇ ತರಹದ ಬಾಧೆಯಿಂದ, ಬಂಧನದಿಂದ ಮುಕ್ತಿಯುಂಟಾದಾಗ ಒಳ್ಳೆಯ ಹಾರೈಕೆ ಹೊರಡುತ್ತದೆ. ಆ ಆತ್ಮನಲ್ಲಿ ಆ ಹಾರೈಕೆಯೇ ಪುಣ್ಯ. ಅದರಿಂದಲೇ ನಮಗೆ ನೆಮ್ಮದಿ, ಶ್ರೇಯಸ್ಸು ಎಲ್ಲವೂ ಉಂಟಾಗುತ್ತದೆ.

* * * * *

ಜ್ಞಾನದಾನ ಸರ್ವಶ್ರೇಷ್ಠ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೦.೦೭.೦೩ರಂದು ಪ್ರಕಟವಾಗಿತ್ತು)

ಪ್ರಾಪಂಚಿಕವಾದ ವಸ್ತುಗಳನ್ನು ಕೊಡುವುದಕ್ಕಿಂತಲೂ ಉತ್ತಮವಾದದ್ದು ಜ್ಞಾನದಾನ. ಈಗ, ಜೈಲಿನಲ್ಲಿ ಯಾರೋ ಬಂಧಿಯಾಗಿರುತ್ತಾರೆ, ಅವನನ್ನು ಬಿಡುಗಡೆ ಮಾಡಿದಾಗ ಎಷ್ಟು ಸಂತೋಷ ಆಗುತ್ತೆ! ಒಂದು ಪಕ್ಷಿ ಪಂಜರದಲ್ಲಿ ಸಿಕ್ಕಿಹಾಕಿಕೊಂಡಿದೆ. ಆ ಪಂಜರದಿಂದ ಪಕ್ಷಿಯನ್ನು ಹೊರಗಡೆ ಬಿಟ್ಟಾಗ ಅದಕ್ಕೆ ಎಷ್ಟು ಖುಷಿಯಾಗಬಹುದು! ಹಾಗೆ ಪ್ರತಿಯೊಂದು ಆತ್ಮವೂ ಜ್ಞಾನಕ್ಕಾಗಿ ತಹತಹಿಸುತ್ತದೆ, ತಡಕಾಡುತ್ತಿರುತ್ತದೆ.

"ದಾನಂ ಆತ್ಮಜ್ಞಾನಂ". ಜ್ಞಾನವನ್ನು ಕೊಟ್ಟಾಗ ಏನಾಗುತ್ತೆ? ಆಗ ವ್ಯಕ್ತಿಯು ತನ್ನ ದುಃಖದಿಂದ ದೂರ ಆಗ್ತಾನೆ, ಅದರಿಂದ ಮೇಲೆ ಬರ್ತಾನೆ, ದಿನಾ ಅದೇ ಪರಿಸ್ಥಿತಿಯಲ್ಲಿ ಕುಳಿತುಕೊಂಡು ಗೋಳಾಡುತ್ತಿರತಕ್ಕಂಥ ಆತ್ಮನಿಗೆ ಒಂದು ನೆಮ್ಮದಿಯಾದ ಸ್ವಾತಂತ್ರ್ಯ ಸಿಕ್ಕಿದ ಹಾಗೆ ಆಗುತ್ತದೆ, ಬಿಡುಗಡೆ ಸಿಗುತ್ತದೆ. ಜೀವದ ಅಂತ್ಯದಲ್ಲಿ ನಿಮ್ಮ ಮುಂದೆ ಬರುವುದು, ನಿಮ್ಮ ಜೀವನದ ಸಾರ್ಥಕತೆಯನ್ನು ನಿರ್ಧರಿಸುವಂತಹ ಎರಡು ಪ್ರಮುಖ ಪ್ರಶ್ನೆ

"ಎಷ್ಟು ಜ್ಞಾನದಿಂದ ಎಷ್ಟು ಪ್ರೇಮದಿಂದ ಜೀವನ ನಡೆಸಿಕೊಂಡು ಬಂದಿದ್ದೀಯ, ಎಷ್ಟು ಜ್ಞಾನ ಸಂಪಾದಿಸಿಕೊಂಡಿದ್ದೀಯ? ಆತ್ಮನ ಬಗ್ಗೆ, ನಿನ್ನ ಬಗ್ಗೆ ಎಷ್ಟು ಅರಿವನ್ನು ಮಾಡಿಕೊಂಡಿದ್ದೀಯ? ಎಷ್ಟು ಜನಕ್ಕೆ ನೀನು ಪ್ರೇಮವನ್ನು ಹಂಚಿದ್ದೀಯ?", ಎನ್ನುವುದು. ಒಬ್ಬ ಜ್ಞಾನಿಯು ತನ್ನ ಜೀವನದಲ್ಲಿ ಮಾಡತಕ್ಕಂಥ ಪ್ರತಿಯೊಂದು ಕಾರ್ಯದಲ್ಲಿಯೂ ಆತ್ಮಜ್ಞಾನ ಕಂಡುಬರುತ್ತದೆ.

"ದಾನಂ ಆತ್ಮ ಜ್ಞಾನಂ". ಆತ್ಮಜ್ಞಾನ ದಾನವೆನಿಸುತ್ತದೆ.

* * * * *

ಮುತ್ತಿನಂಥ ಮಾತನಾಡಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೧.೦೭.೦೩ರಂದು ಪ್ರಕಟವಾಗಿತ್ತು)

ಸಾಮಾನ್ಯವಾಗಿ ವ್ಯರ್ಥವಾದ ಮಾತುಗಳನ್ನಾಡುವುದರಲ್ಲಿಯೇ ನಾವು ಜೀವನವನ್ನು ಕಳೆಯುತ್ತಿರುತ್ತೇವೆ. ಆ ಮಾತುಗಳಲ್ಲಿ ಜೀವಂತಿಕೆ, ಅನುಭವ, ಆತ್ಮೀಯತೆ ಇರುವುದಿಲ್ಲ. ವಾರ್ತೆಗಳನ್ನು ಓದುವವರು ಎಲ್ಲಾ ಸುದ್ದಿಗಳನ್ನೂ ಒಂದೇ ಧಾಟಿಯಲ್ಲಿ ಓದುವುದನ್ನು ಕೇಳುತ್ತೀರಲ್ಲ, ಹಾಗೆ ನಾವಾಡುವ ಮಾತುಗಳೂ ಶುಷ್ಕವಾಗಿರುತ್ತವೆ.

ದಿನಾ ಕೇಳುವಂತೆ ಮಾಮೂಲಾಗಿ ಏನೋ ಒಂದು ಪ್ರಶ್ನೆ ಕೇಳಿರುತ್ತೇವೆ.

"ಏನ್ರೀ ಹೇಗಿದೀರಾ; ಏನಡಿಗೆ ಮಾಡಿದೀರಾ ಇವತ್ತು?"

ಅದಕ್ಕೆ ಅವರೂ ಏನೋ ಹೇಳುತ್ತಾ ಹೋಗ್ತಾರೆ. ಅದನ್ನು ಕೇಳಿಸಿಕೊಳ್ಳೋದೂ ಇಲ್ಲ. ಕೇಳೋರು ಪ್ರಶ್ನೆ ಕೇಳಿಬಿಡುತ್ತಾರೆ, ಉತ್ತರಕ್ಕೆ ಕಿವಿಗೊಡೋದೇ ಇಲ್ಲ!

ಇವು ವ್ಯರ್ಥವಾದ ಮಾತುಗಳಾಗುತ್ತವೆ ಅಲ್ವಾ? ನಿಮ್ಮ ಮಾತಿನಲ್ಲಿ ಜೀವ ತುಂಬುವುದು ಯಾವಾಗ ಅಂದರೆ, ಯಾರಿಗಾದರೂ ಚೆನ್ನಾಗಿ ಬೈಯಬೇಕಾದರೆ ಅಥವಾ ಯಾರನ್ನಾದರೂ ಮನಸಾರೆ ಹೊಗಳಬೇಕಾದಾಗ. ನಿಮ್ಮ ಆತ್ಮ ತುಂಬಿರುತ್ತದೆ.

ನೀರಸವಾದ, ವ್ಯರ್ಥವಾದ ಮಾತುಗಳನ್ನಾಡುವ ಅಭ್ಯಾಸವನ್ನು ಮೀರಿ ನಾವು ಮೇಲೇರಬೇಕು. ಜ್ಞಾನವಂತರಾದವರು ಎರಡೇ ಮಾತನಾಡಿದರೂ ಅದರಲ್ಲಿ ಜೀವಂತಿಕೆ ತುಂಬಿರುತ್ತೆ, ಮನಸ್ಸಿಗೆ ಚೆನ್ನಾಗಿ ನಾಟುತ್ತೆ. ಆದ್ದರಿಂದ ಮಿತವಾಗಿ ಮಾತನಾಡಿ, ಸ್ವಲ್ಪವೇ ಮಾತನಾಡಿದರೂ ಚೆನ್ನಾಗಿ, ಘನವಾಗಿ ಮಾತನಾಡಿ. ಆಗ ಜೀವನ ಶುಷ್ಕವಾಗಿರುವುದಿಲ್ಲ, ರಸಮಯವಾಗಿರುತ್ತದೆ.

* * * * *

ಸ್ಮರಣೆ ಮಾಡಿ ನಿರಂತರ...

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೧.೦೫.೦೩ರಂದು ಪ್ರಕಟವಾಗಿತ್ತು)

ಸೃಷ್ಟಿಗೆ ಮೂಲ ಶಬ್ದ. ಮಂತ್ರದಿಂದ ಎಲ್ಲವೂ ಉತ್ಪತ್ತಿಯಾಗಿದೆ. ಶಬ್ದದಿಂದ ಇಡೀ ಪ್ರಪಂಚ ಉಂಟಾಗಿದೆ. ಈಗ ಶಬ್ದದಿಂದ ತಾನೇ ನಮ್ಮ ತಲೆಯಲ್ಲೂ ವಿವೇಚನೆಯ ಭಂಡಾರೆ ಏರ್ಪಟ್ಟಿರುರುವುದು? ಅದಕ್ಕೇ, ಶಬ್ದದ ಮೂಲಕವೇ ಶಾಂತಿ ಸ್ಥಾಪಿಸುವ ಯತ್ನವಾಗಬೇಕು.

’ನಿರಂತರ ಸ್ಮರಣೆ ಮಾಡಿ’ ಎನ್ನುವುದನ್ನು ಜನ ಸ್ವಲ್ಪ ತಪ್ಪಾಗಿ ತಿಳಿದಿದ್ದಾರೆ. ನಿರಂತರ ಸ್ಮರಣೆ ಎಂದರೆ ಹಗಲೂ, ರಾತ್ರಿ ’ರಾಮ ರಾಮ’ ಅಂತ (ಅಥವಾ ಇನ್ನಾವುದೇ ನಾಮ) ಹೇಳಿಕೊಳ್ಳಬೇಕು ಎಂದಲ್ಲ. ಹಾಗೆ ಹೇಳಿಕೊಳ್ಳುತ್ತಾ ಬಂದಾಗ ಬುದ್ಧಿ ಮಂಕಾಗುತ್ತಾ  ಬರುತ್ತದೆ. ಏಕೆಂದರೆ ಚೈತನ್ಯ ಜಾಗೃತವಾಗಿರಲ್ಲ, ’ರಾಮ ರಾಮ’ ಅಂದುಕೊಳ್ಳುತ್ತಾ ಇರ್ತಾರೆ, ’ಅದು ಮಾಡಬೇಕು ಇದು ಮಾಡಬೇಕು’ ಎನ್ನುವ ಯೋಚನೆಯನ್ನೂ ಅದರ ಜೊತೆ ಬೆರೆಸಿಕೊಳ್ಳುತ್ತಿರುತ್ತಾರೆ. ಬೇರೇನು ಮಾಡುವುದಕ್ಕೂ ಜ್ಞಾಪಕ ಇರುವುದಿಲ್ಲ. ನಿರಂತರ ಎಂದರೆ ಈ ರೀತಿಯಲ್ಲ, ತಪ್ಪಾಗಿ ತಿಳಿದುಕೊಂಡುಬಿಟ್ಟಿದ್ದೀವಿ.

ದಿನಾ ಸ್ನಾನ ಮಾಡಿ ಎಂದರೆ ದಿನವಿಡೀ ಸ್ನಾನ ಮಾಡಿ ಎಂದಲ್ಲವಲ್ಲ, ಹಾಗೆಯೇ ನಿರಂತರ ಸ್ಮರಣೆ ಮಾಡಿ ಎಂದರೆ ಪ್ರತಿನಿತ್ಯವೂ ಸ್ಮರಣೆ ಮಾಡಿ, ಆ ಸ್ಮರಣೆ ನಿಮ್ಮ ಮನಸ್ಸಿನಲ್ಲಿ, ನಿಮ್ಮ ಚೇತನದಲ್ಲಿ ಉಳಿದುಕೊಂಡಿರಲಿ ಎಂಬ ಅರ್ಥವನ್ನು ನೀಡುತ್ತದೆ.

* * * * *

ಸಮೂಹ ಸಾಧನೆ, ಸತ್ಸಂಗ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೨.೦೮.೧೩ರಂದು ಪ್ರಕಟವಾಗಿತ್ತು)

ಮಂತ್ರದಿಂದ ಶರೀರದಲ್ಲೂ, ಮನಸ್ಸಿನಲ್ಲೂ, ಆತ್ಮದಲ್ಲೂ ಪರಿಣಾಮವುಂಟಾಗುತ್ತದೆ. ಅದಕ್ಕೇ ಮಂತ್ರಸ್ನಾನ ಎನ್ನುತ್ತೀವಿ. ಸತ್ಸಂಗದಲ್ಲಿ ಕುಳಿತು ಭಜನೆ ಮಾಡಿದಾಗಲೂ ಭಗವನ್ನಾಮ ಮಂತ್ರದ ಉಚ್ಚಾರಣೆಯಿಂದ ಮಂತ್ರಸ್ನಾನವೇ ಆಗುತ್ತದೆ.

ವಾರಕ್ಕೊಂದು ಸಲವಾದರೂ ಭಜನೆ ಮಾಡಿ, ಪ್ರತಿನಿತ್ಯವೂ ನಾಲ್ಕಾರು ಜನ ಸೇರಿಕೊಂಡು ಸತ್ಸಂಗ ಮಾಡಿದರೆ ಇನ್ನೂ ಉತ್ತಮ. ಎಲ್ಲಿ ಇರುತ್ತೀರೋ ಅಲ್ಲೇ ಮಾಡಿ. ಸಮೂಹದಲ್ಲಿರುವ ಶಕ್ತಿ ಒಬ್ಬೊಬ್ಬರೇ ಕುಳಿತುಕೊಂಡು ಮಾಡುವುದರಲ್ಲಿ ಇರುವುದಿಲ್ಲ. ಸಮೂಹದ ಶಕ್ತಿಯ ಸಾಧನೆಯು ವಿವಿಧ ಹಂತಗಳಲ್ಲಿರುವ ಸಾಧಕರೆಲ್ಲರಿಗೂ ಉನ್ನತಿಗೇರಲು ಸಹಾಯಕವಾಗುತ್ತದೆ.

ಸತ್ಸಂಗಕ್ಕೆ ಉತ್ತಮವಾದ ಸಮಯವನ್ನು ಕೊಡಬೇಕು. ಸಾಧಾರಣವಾಗಿ ನಿಮಗೆ ಮಾಡಲು ಬೇರೆ ಕೆಲಸ ಇಲ್ಲದಿದ್ದಾಗ, ಅಥವಾ ನೀವು ಹೋಗಬೇಕಾದ ಮದುವೆ ಮುಂತಾದ ಯಾವ ಸಮಾರಂಭವೂ ಇಲ್ಲದಿದ್ದಾಗ, ನೋಡಲು ಒಳ್ಳೆಯ ಸಿನಿಮಾ, ಧಾರಾವಾಹಿ ಇಲ್ಲವೆಂಬ ಸಂದರ್ಭದಲ್ಲಿ .., ಅಂತಹ ಕಳಪೆ ಸಮಯವನ್ನು ನೀವು ಸತ್ಸಂಗಕ್ಕೆ, ಆಧ್ಯಾತ್ಮಿಕತೆಗೆ ಕೊಡ್ತೀರ.

ಆ ಪರಿಪಾಠ ತೊರೆದು, ಉತ್ಕೃಷ್ಟವಾದ ಸಮಯವನ್ನು ಸಾಧನೆಗೆ, ಸೇವೆಗೆ, ಸತ್ಸಂಗಕ್ಕೆ ವಿನಿಯೋಗಿಸಿ. ನಿಮಗೆ ಶುಭವಾಗುವುದು.

* * * * *

ಸೂತ್ರಧಾರಿಯೇ ಸೂತ್ರವೂ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೩.೦೮.೦೩ರಂದು ಪ್ರಕಟವಾಗಿತ್ತು)

ನೋಡಿ, ಮಣಿಯಿಂದ ಸರ ಯಾವಾಗ ಮಾಡಲು ಸಾಧ್ಯ ಗೊತ್ತಾ? ಮಣಿಯೊಳಗೆ ಖಾಲಿ ಜಾಗ ಇದ್ದರೆ ಮಾತ್ರ. ಆಗಷ್ಟೇ ದಾರ ಅಥವಾ ತಂತಿ ಅದರೊಳಗೆ ಹೋಗಲು ಸಾಧ್ಯ. ಅದು ತುಂಬಿಕೊಂಡುಬಿಟ್ಟರೆ..?

ತುಂಬಿಕೊಡಿರುವುದು ಅಜ್ಞಾನ, ಖಾಲಿಯಾಗಿರೋದು ಜ್ಞಾನ! ಹಾಗೇ ನಮ್ಮ ಮನಸ್ಸು ಖಾಲಿಯಾಗಿದ್ದರೆ ಅದರಲ್ಲಿ ಶುದ್ಧ ಚೈತನ್ಯದ ಪ್ರವೇಶವಾಗುತ್ತದೆ.

ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ, "ಸೂತ್ರೇ ಮಣಿಗಣಾ ಇವಾ".

"ನೀವೆಲ್ಲಾ ಮಣಿಗಳು ಕಣ್ರಯ್ಯಾ, ನಾನು ದಾರ ಅಷ್ಟೆ ಅಂತ. ಇಡೀ ಪ್ರಪಂಚ ಮಣಿಗಳು, ನಾನು ದಾರ, ಈ ಗ್ರಹ, ತಾರೆಗಳೆಲ್ಲ ಮಣಿಗಳು, ಆಕಾಶ ತತ್ವ, ಚೈತನ್ಯ ಎನ್ನುವ ತತ್ವ ಎಲ್ಲದರಲ್ಲೂ ಪ್ರವೇಶವಾಗಿ ಸೃಷ್ಟಿಯನ್ನು ಒಂದು ಮೂಲೆಯನ್ನಾಗಿ ಮಾಡಿದೆ. ಹಾಗೆ ಎಲ್ಲಾ ಶರೀರವೂ, ನೀವೆಲ್ಲರೂ ಮಣಿಗಳು ಆ ಶರೀರದೊಳಗಿನ ’ಆತ್ಮಚೇತನ’ ನಾನು, ಸೂತ್ರ ಇದ್ದ ಹಾಗೆ."

ಮಣಿ ಇಲ್ಲದೆ ದಾರ ಮಾಲೆಯಾಗೋಕೆ ಸಾಧ್ಯ ಇಲ್ಲ, ದಾರ ಇಲ್ಲದೆ ಬರೀ ಮಣಿಗೂ ಏನೂ ಪ್ರಯೋಜನ ಇಲ್ಲ. ಆದರೆ ದಾರ ಮಣಿ ಸೇರಿದರೆ ಮಾಲೆಯಾಗುತ್ತೆ. ಅದರಿಂದ ಶರೀರ, ಪ್ರಪಂಚ, ಆತ್ಮ ಎಲ್ಲಕ್ಕೂ ಪ್ರಾಶಸ್ತ್ಯ ಕೊಡಬೇಕು. ಶರೀರಕ್ಕೂ, ಮನಸ್ಸಿಗೂ, ಉಸಿರಿಗೂ ಎಲ್ಲಕ್ಕೂ ಪ್ರಾಶಸ್ತ್ಯ ಕೊಡಿ...

ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ|
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ|| (ಭಗವದ್ಗೀತೆ ೭.೭)

* * * * *

ಬೂದಿ ಮುಚ್ಚಿದ ಕೆಂಡ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೪.೦೮.೦೩ರಂದು ಪ್ರಕಟವಾಗಿತ್ತು)

ಕೆಂಡದಿಂದ ಉಂಟಾದ ಬೂದಿ ಆ ಕೆಂಡವನ್ನೇ ಮುಗಿಸಿಬಿಡುತ್ತೆ. ಅದೇ ರೀತಿ ನಮ್ಮ ಚೇತನದಲ್ಲಿ ಇರುವ ಜ್ಞಾನದಿಂದಲೇ ಮದ, ಮಾತ್ಸರ್ಯ, ಕಾಮ, ಕ್ರೋಧ ಇವೆಲ್ಲಾ ಉಂಟಾಗಿ ಜ್ಞಾನ ಮರೆಯಾಗಿಬಿಡುತ್ತದೆ.

ಯಾವುದರ ಬಗ್ಗೆ ಇಚ್ಚೆ ಉಂಟಾಗಬೇಕಾದರೂ ಅದರ ಬಗ್ಗೆ ಜ್ಞಾನ ಇರಬೇಕು. ಈಗ ಗುಲಾಬ್ ಜಾಮೂನ್ ತಿನ್ನಬೇಕು ಅಂತ ಮನಸ್ಸಿನಲ್ಲಿ ಆಸೆ ಹುಟ್ಟಬೇಕಾದರೆ ಅದರ ಬಗ್ಗೆ ಜ್ಞಾನ ಇರಬೇಕು. ಜ್ಞಾನದಿಂದಲೇ ಕಾಮ ಉಂಟಾಗುತ್ತದೆ, ಆ ಕಾಮವೇ ಜ್ಞಾನವನ್ನು ನುಂಗಿಹಾಕಿಬಿಡುತ್ತೆ.

ಹಾಗೆ, ಜ್ಞಾನದಿಂದಲೇ ಕ್ರೋಧ ಉಂಟಾಗುತ್ತೆ. ನಿದ್ದೆ ಮಾಡ್ತಿದ್ದಾಗ ಅಥವಾ ಸುಮ್ಮಸುಮ್ಮನೆ ಯಾರಿಗೂ ಕೋಪ ಬರುವುದಿಲ್ಲ ಹೌದಾ? ಕೋಪ ಯಾಕೆ ಬರುತ್ತೆ? ಯಾವುದೋ ನಮಗೆ ಬೇಕಾದದ್ದು ಸಿಗಲಿಲ್ಲ, ಕಾಮನೆ ಪೂರ್ತಿಯಾಗಲಿಲ್ಲ, ಅದರ ಹಿಂದೇನೇ ಕೋಪ ಬಂತು ಹೌದಾ? ಕೋಪ ಹೇಗೆ ಉಂಟಾಯ್ತು, ಹೊಟ್ಟೇಕಿಚ್ಚು ಹೇಗಾಯ್ತು?

ಯಾವುದರ ಬಗ್ಗೆಯೋ ಇದು ಹೀಗಿದೆ ಅಂತ ಅರಿವು ಉಂಟಾಯ್ತು. ’ಇದು ನನಗಿರಬೇಕಿತ್ತು ಅವರ ಹತ್ತಿರ ಹೋಗಿಬಿಟ್ಟಿದೆಯಲ್ಲಾ’ ಅನಿಸಿತು. ಆಗ ಹೊಟ್ಟೆ ಉರಿ ಶುರುವಾಯ್ತ. ಹೀಗೆ ಕೆಂಡದ ಬೂದಿ ಕೆಂಡವನ್ನೇ ನುಂಗಿಹಾಕುವ ಹಾಗೆ ಜ್ಞಾನದಿಂದ ಇವೆಲ್ಲಾ ಶಕ್ತಿಗಳು ಉಂಟಾಗುತ್ತವೆ. ಇದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ ನಾಳೆ..

* * * * *

ಪಶು ಶಕ್ತಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೫.೦೮.೦೩ರಂದು ಪ್ರಕಟವಾಗಿತ್ತು)

ಕೆಂಡದಿಂದ ಉಂಟಾಗುವ ಬೂದಿ ಆ ಕೆಂಡವನ್ನೇ ನುಂಗಿ ಹಾಕುವಂತೆ, ನಮ್ಮ ಚೇತನದಲ್ಲಿ ಜ್ಞಾನದಿಂದಲೇ ಕಾಮ, ಕ್ರೋಧಾದಿ ಶಕ್ತಿಗಳು ಉಂಟಾಗುತ್ತವೆ. ಈ ಶಕ್ತಿಗಳೆಲ್ಲಾ ಉಂಟಾದರೂ ಇವುಗಳನ್ನು ಕೆಟ್ಟದು, ಒಳ್ಳೇದು ಅಂತ ದೂರ ತಳ್ಳೋದಲ್ಲ, ಇವೆಲ್ಲಾ ಶಕ್ತಿಗಳು, ಕಾಮಶಕ್ತಿ ಇಲ್ಲದಿದ್ದರೆ ಜನ್ಮವೇ ಇಲ್ಲ. ಕ್ರೋಧದ ಒಂದು ಶಕ್ತಿ ಇಲ್ಲದಿದ್ದರೆ, ಬಲ ಇಲ್ಲ-ಯಾವುದೇ ಒಂದು ಕೆಲಸ ಮಾಡುವುದಕ್ಕೂ! ಮಾತ್ಸರ್ಯ ಶಕ್ತಿ ಕೆಲವು ಸಾರಿ ಜೀವನದಲ್ಲಿ ಮುಂದುವರಿಯಲು ಸಹಾಯವಾಗುವುದುಂಟು. ಇವೆಲ್ಲಾ ಪಶು ಶಕ್ತಿಗಳು, ಇವು ನಮ್ಮಲ್ಲಿ ಉಂಟಾಗುವುದು ಸಹಜ, ಇವುಗಳ ಅರಿವು ಹೊಂದಿ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.

ವಿಶ್ವಾಮಿತ್ರರ ಕಥೆ ಗೊತ್ತಲ್ಲಾ, ಅವರ ಹಿಂದಿನ ಹೆಸರು ಕೌಶಿಕ. ವಸಿಷ್ಠರನ್ನು, ಅವರ ಶಾಂತವಾದ ತೇಜಸ್ಸನ್ನು ನೋಡಿ ಕೌಶಿಕ ರಾಜನಿಗೆ ಉಂಟಾದ ಮಾತ್ಸರ್ಯದಿಂದಲೇ ತಪಸ್ಸು ಮಾಡಿದ. ವಸಿಷ್ಠರಿಂದಲೇ ಬ್ರಹ್ಮರ್ಷಿ ಅಂತ ಕರೆಸಿಕೊಳ್ಳಬೇಕು ಅಂತ ಮಾಡಿದ.
ವಿಶ್ವಾಮಿತ್ರ ತಪಸ್ಸು ಮಾಡಿದ್ದರಿಂದ ಅತ್ಯಂತ ಮಹತ್ವಪೂರ್ಣವಾದ ’ಗಾಯತ್ರೀ’ ಮಂತ್ರ ಅವರಿಂದ ಪ್ರಪಂಚಕ್ಕೆ ಸಿಕ್ಕಿತು. ಇದರ ಮೂಲ ಏನು? ಮಾತ್ಸರ್ಯ!

ಹಾಗೆಯೇ ಧ್ರುವ ಹೇಗೆ ’ಧ್ರುವ’ನಾದ? ಲೋಭದಿಂದ! ಮೋಹದಿಂದ ತಾನೇ ಧ್ರುವ ತಪಸ್ಸು ಮಾಡಿದ್ದು? ಹೀಗೆ, ಈ ಪಶು ಶಕ್ತಿಗಳೆಲ್ಲಾ ಜೀವನದಲ್ಲಿದ್ದರೂ, ಇವು ಜ್ಞಾನವನ್ನು ಆವರಿಸಿ ಮುಚ್ಚಿಕೊಂಡಿರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಜ್ಞಾನದ ಮೂಲ ಏನು ಅಂತ ಅರಿತಾಗ ಆನಂದದಿಂದ ಚೇತನ ಪುನಃ ತನ್ನ ಸ್ವಸ್ಥಿತಿಗೆ, ಆತ್ಮಸ್ಥಿತಿಗೆ ಮರಳಿ ಬರುತ್ತದೆ.

* * * * *

ಅಂತರ್ದೃಷ್ಟಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೬.೦೮.೦೩ರಂದು ಪ್ರಕಟವಾಗಿತ್ತು)

"ಯೋ ವಿಪಸ್ಥೋ ಜ್ಞಾನ ಹೇತುಶ್ಚ" .. ಇದು ಮುಂದಿನ ಸೂತ್ರ. ಜ್ಞಾನದ ಮೂಲ ಏನು? ಜ್ಞಾನದ ಶಕ್ತಿ ಎಲ್ಲಿದೆ? ಆ ಚೇತನದ ಕಡೆಗೆ ದೃಷ್ಟಿ ಹರಿಸಬೇಕು. ಆಗ ಈ ಕೆಂಡವನ್ನು ಆವರಿಸಿರತಕ್ಕಂಥ ಬೂದೀನೂ ತನ್ನಷ್ಟಕ್ಕೇ ಮಾಯವಾಗುತ್ತದೆ. ಕೆಂಡದ ಮೇಲಿರುವ ಬೂದಿ ದೂರ ಆದಾಗ ಜ್ಞಾನ ಪ್ರಜ್ವಲವಾಗುತ್ತದೆ.

ನಿಮಗೆ ಯಾವಾಗಲಾದರೂ ಕೋಪ ಉಂಟಾದಾಗ, ’ಅಯ್ಯೋ ನಾನಿಷ್ಟೆಲ್ಲಾ ಧ್ಯಾನ, ಸಾಧನೆ ಮಾಡ್ತಾ ಇದ್ದರೂ ಕೋಪ ಬಂತಲ್ಲಾ ಅಂತ ಬೈದುಕೊಳ್ಳಬೇಡಿ. ತಕ್ಷಣ ಎರಡು ರೀತಿಯಲ್ಲಿ ಗಮನಿಸಿ ನೋಡಿ.

’ಎಲ್ಲಿ ಉಂಟಾಗ್ತಾ ಇದೆ ಈ ಕೋಪ?’ ಹಾಗೂ ’ಯಾರಿಗೆ ಉಂಟಾಗ್ತಾ ಇದೆ ಕೋಪ?’ ಎಂದು.

ಜ್ಞಾನದ ಸೂತ್ರವನ್ನು, ಮೂಲವನ್ನು ಗಮನಿಸಿ, ಆಗ ನಮ್ಮಲ್ಲಿರುವ ಚೇತನದಲ್ಲೇ ಎಲ್ಲ ಜ್ಞಾನವೂ ಅಡಗಿದೆಯೆಂದು ಅರ್ಥವಾಗುತ್ತದೆ. ಆ ಜ್ಞಾನವನ್ನು ಸದುಪಯೋಗ ಮಾಡಿಕೊಳ್ಳಲು ಅಗತ್ಯವಾದ ಮಾರ್ಗವು ಗೋಚರಿಸುತ್ತದೆ.

ಇದನ್ನು ನಾವು ತಿಳಿದುಕೊಂಡಾಗ, ನಮ್ಮ ಚೇತನದ ಕಡೆ ನಮ್ಮ ದೃಷ್ಟಿ ಹರಿಯುತ್ತಾ ಇದ್ದಾಗ, ನಮ್ಮ ಮನಸ್ಸಿನಲ್ಲಿ ಸಂಕಲ್ಪಶಕ್ತಿ, ನಿಗ್ರಹ, ಅನುಗ್ರಹ ಶಕ್ತಿ ಹೆಚ್ಚಾಗುತ್ತದೆ. ಶಾಪಾನುಗ್ರಹ ಶಕ್ತಿ ನಮ್ಮ ಚೇತನದಲ್ಲಿ ಉದಯವಾಗುತ್ತೆ. ಅಂದರೆ ನಮ್ಮ ಸಂಕಲ್ಪದಿಂದ ನಾವು ನಮ್ಮ ಸೃಷ್ಟಿಯನ್ನು ನಿರ್ಮಿಸಿಕೊಳ್ಳುತ್ತೀವಿ. ಒಬ್ಬ ಜ್ಞಾನಿ ಪುರುಷ ತನ್ನದೇ ಸಂಕಲ್ಪದಿಂದ ತನ್ನ ಸೃಷ್ಟಿಯನ್ನು ನಿರ್ಮಿಸಿಕೊಳ್ಳುತ್ತಾನೆ.