ಶನಿವಾರ, ಆಗಸ್ಟ್ 24, 2013

ಜಗತ್ತು ಭಾವನೆಗಳ ಪ್ರತಿಬಿಂಬ

೨೪ನೇ ಆಗಸ್ಟ್ ೨೦೧೩
ಬೆಂಗಳೂರು, ಭಾರತ

ಭಾರತದ ಹಳ್ಳಿ-ಹಳ್ಳಿಗೂ, ಮನೆ-ಮನೆಗೂ ಈ ನಮ್ಮ ಸಂತೋಷ ಹಾಗೂ ಉತ್ಸಾಹವನ್ನು ತಲುಪಿಸಬೇಕು.

ನಮ್ಮ ಭಕ್ತರಲ್ಲೊಬ್ಬಳಾದ ರೋಹಿಣಿಯು, ಸಾಂಗ್ಲಿ ಜಿಲ್ಲೆಯ ಬರ ಪೀಡಿತ ಹಳ್ಳಿಗಳಲ್ಲಿ ನಡೆಯುತ್ತಿರುವ ಒಳ್ಳೆಯ ಕಾರ್ಯಗಳನ್ನು ಕುರಿತು ತಿಳಿಸಿದಳು. ಅಲ್ಲಿ ನಾಲ್ಕು ತಾಲೂಕುಗಳಲ್ಲಿ ಬರ ಪರಿಸ್ಥಿತಿಯುಂಟಾಗಿತ್ತು. ಹದಿನಾರು ಹಳ್ಳಿಗಳು ಮತ್ತು ೧೨ ಜಮೀನುಗಳಲ್ಲಿ ನೀರು ಸರಬರಾಜು ಮಾಡಲು ಪ್ರಾರಂಭಿಸಿದೆವು. ಚಿಕ್ಕ  ಟ್ಯಾಂಕರುಗಳಿದ್ದವು.  ಎಲ್ಲೆಲ್ಲಿ ನಮ್ಮ ಟ್ಯಾಂಕರುಗಳು ಸಾಗುತ್ತಿದ್ದುವೋ ಆ ಪ್ರದೇಶಗಳಲ್ಲಿ ಜನರು ಅವುಗಳ ಹಿಂದೆ ಓಡಿ ಬರುತ್ತಿದ್ದರು. ಒಬ್ಬ ಹುಡುಗನಿಗೆ ಚರ್ಮದ ಖಾಯಿಲೆಯಿತ್ತು. ಕೇವಲ ಈ ನೀರಿನ ಸ್ನಾನದಿಂದ ಗುಣಮುಖನಾದನು. ಬೇರೆ ನೀರನ್ನು ಬೆರೆಸಿ ಹಾಲನ್ನು ಬಿಸಿ ಮಾಡಿದಾಗ ಒಡೆದು ಹೋಗುತಿತ್ತು. ಆದರೆ ನಮ್ಮ ಟ್ಯಾಂಕರ್ ನೀರನ್ನು ಹಾಲಿನೊಂದಿಗೆ ಬೆರೆಸಿದಾಗ ಹಾಲು ಒಡೆಯುತ್ತಿರಲಿಲ್ಲ. ಈ ಕಥೆಯಿಂದ ತಿಳಿಯುವುದೇನೆಂದರೆ ನಿಮ್ಮ ಭಾವನೆಗಳಿಗೆ ತಕ್ಕಂತೆ ಜಗತ್ತು ಪ್ರತಿರೂಪಗೊಳ್ಳುವುದು. “ಜೈಸಾ ಭಾವ್ ತೈಸಾ ಭವ್” ಎಂಬ ಉಕ್ತಿಯಿದೆ; ಅದರ ಅರ್ಥ - ನಿಮ್ಮ ಭಾವನೆ ಹಾಗೂ ಅಭಿಪ್ರಾಯಗಳಿಗೆ ತಕ್ಕಂತೆ ಜಗತ್ತು ಪ್ರತಿಬಿಂಬಿಸುವುದು. ಆದ್ದರಿಂದ ನಿಮ್ಮ ಆಲೋಚನೆಯಂತೆ ಜಗತ್ತು ರೂಪುಗೊಳ್ಳುವುದು. ನಿಮಗಿದೊಂದು ಉದಾಹರಣೆ ನೀಡುತ್ತೇನೆ.  ನೀರನ್ನು ಅದೇ ಬಾವಿಯಿಂದ ತೆಗೆದುಕೊಂಡರೂ, ನಮ್ಮ ಭಕ್ತರು ಅದನ್ನು ವಿತರಿಸಿದಾಗ ಹಾಲು ಒಡೆಯಲಿಲ್ಲ. ಬೇರೆ ಟ್ಯಾಂಕರುಗಳು ವಿತರಿಸಿದಾಗ ಹಾಲು ಏಕೆ ಒಡೆದು ಹೋಗುತ್ತಿತ್ತು? ನೀರು ಭಾವನಾರಹಿತವಾಗಿತ್ತು.

ಇನ್ನೊಂದು ವಿಷಯ. ಭಾರತದಲ್ಲಿ ಗೋವುಗಳನ್ನು ತಾಯಿಯಂತೆ ಪೂಜಿಸುತ್ತಾರೆ, ಗೋಮಾತೆಯೆಂದು ಕರೆಯುತ್ತಾರೆ. ಹಸುವಿನ ಹಾಲಿನಲ್ಲಿ ಎರಡು ಬಗೆಯ ಪ್ರೋಟೀನ್‍ಗಳಿವೆಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ - ಏ೧ ಪ್ರೋಟೀನ್ ಮತ್ತು  ಏ೨ ಪ್ರೋಟೀನ್. ವಿದೇಶದ ಜರ್ಸಿ ಹಸುಗಳ ಹಾಲಿನಲ್ಲಿ ಏ೧ ಪ್ರೋಟೀನ್ ಕಂಡು ಬಂದಿದ್ದು, ಅದು ಮನುಷ್ಯರ ಆರೋಗ್ಯಕ್ಕೆ ಹಾನಿಕಾರಕವಾಗಿದೆ.  ಇದೇ ವೀಗನ್ ಚಳುವಳಿ ಪ್ರಾರಂಭಗೊಳ್ಳಲು ಹಲವಾರು ಕಾರಣಗಳಲ್ಲಿ ಒಂದಾಗಿದೆ.

ಆದರೆ ತಾಯಿಯ ಹಾಲು, ಆಡಿನ ಹಾಲು ಮತ್ತು ಭಾರತದ ಹಸುಗಳ ಹಾಲಿನಲ್ಲಿ ಏ೧ ಪ್ರೋಟೀನ್ ಇರುವುದಿಲ್ಲ. ಬದಲಿಗೆ ಏ೨ ಪ್ರೋಟೀನ್ ಇರುತ್ತದೆ. ಆದ್ದರಿಂದ ಇದು ನಮ್ಮ ಆರೋಗ್ಯಕ್ಕೆ ಲಾಭದಾಯಕವಾಗಿದೆ.

ಅನಾದಿ ಕಾಲದಿಂದ ಹಸುಗಳನ್ನು ಗೋಮಾತೆಯೆಂದು ಕರೆಯುತ್ತಿದ್ದೇವೆ. ನಮ್ಮ ಹಸುಗಳಲ್ಲಿ ಪ್ರೋಟೀನ್ ಕೂಡ ಬದಲಾಗಿದೆ! ನಮ್ಮ ನಾಟಿ ಹಸುಗಳ ಹಾಲು ತಾಯಿಯ ಹಾಲಿನಂತಾಗುತ್ತಿದೆ.  ಇದು ಮನುಷ್ಯರಿಗೆ ಉತ್ತಮವಾದುದು. ಕ್ಯಾನ್ಸರ್ ರೋಗವನ್ನು ತೊಡೆದುಹಾಕುತ್ತದೆ ಮತ್ತು ರೋಗ ನಿರೋಧಕ ವ್ಯವಸ್ಥೆಯನ್ನು ವೃದ್ಧಿಪಡಿಸುತ್ತದೆ. ಆದ್ದರಿಂದಲೇ ನಮ್ಮೊಳಗಿನ ಭಾವನೆ ಹಾಗೂ ಅಭಿಪ್ರಾಯಗಳಿಗೆ ತಕ್ಕಂತೆ ಪ್ರಕೃತಿಯೂ ಪರಿವರ್ತನೆಗೊಳ್ಳುತ್ತದೆ. ಹಸುವನ್ನು ಗೋಮಾತೆಯೆಂದು ಪೂಜಿಸುತ್ತಿರುವುದರಿಂದ ಅದೂ ಕೂಡ ಪೋಷಿಸುವ ತಾಯಿಯಂತೆ ಹಾಲನ್ನು ನೀಡಲಾರಂಭಿಸಿತು. ಈ ಕಾರಣದಿಂದಲೇ ಬ್ರೆಜಿಲ್ ನಂತಹ ದೇಶ ಸಹ ನಮ್ಮ ನಾಟಿ  ಹಸುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಏಕೆಂದರೆ ಅವುಗಳಲ್ಲಿ ಏ೨ ಪ್ರೋಟೀನ್ ಇದೆ.

ಪ್ರ: ಗುರೂಜೀ, ಭಗವದ್ಗೀತೆಯಲ್ಲಿ ಬದುಕಿರುವವರೆಗೂ ಕರ್ಮ (ಕ್ರಿಯೆ)ಗಳನ್ನು ಮಾಡಬೇಕೆಂದು ಶ್ರೀಕೃಷ್ಣನು ಹೇಳುತ್ತಾನೆ. ಆದರೆ ಒಂದು ಕರ್ಮವು ಮತ್ತೊಂದು ಕರ್ಮಕ್ಕೆಡೆ ಮಾಡಿಕೊಡುತ್ತದೆ. ಆದ್ದರಿಂದಲೇ ಈ ಚಕ್ರ ಕೊನೆಗೊಳ್ಳುವುದಿಲ್ಲ. ನನ್ನ ಪ್ರಶ್ನೆಯೇನೆಂದರೆ, ಈ ಕರ್ಮಬಂಧನದಿಂದ ಮುಕ್ತಿ ಹೊಂದಲು ಯಾವ ಕರ್ಮದಿಂದ ಸಾಧ್ಯ?

ಶ್ರೀಶ್ರೀ: ನಿಷ್ಕಾಮ ಕರ್ಮದಿಂದ (ಜ್ವರಪೀಡಿತರಾಗದೆ, ಅಥವಾ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಕ್ರಿಯೆ) ಮುಕ್ತಿಯನ್ನು ಪಡೆಯಬಹುದು.

ಪ್ರ: ಗುರೂಜೀ, ನನಗೆ ಶಕ್ತಿ ಕ್ರಿಯಾ ಬಹಳ ಇಷ್ಟವಾಯಿತು. ಈ ಶಕ್ತಿಯ ಮೂಲ ಯಾವುದು? ಇದರ ರಹಸ್ಯವೇನು? ದಯವಿಟ್ಟು ವಿವರಿಸುವಿರಾ?

ಶ್ರೀಶ್ರೀ: ಎಲ್ಲ ಕಡೆಯೂ ಶಕ್ತಿಯಿದೆ. ಸೃಷ್ಟಿಯಲ್ಲಿರುವುದೆಲ್ಲವೂ ಈ (ದಿವ್ಯ) ಶಕ್ತಿಯ ಲೀಲೆಯೇ. ಯಾವ ಸ್ತುತಿಯೂ ಸಾಲದು. ಅಷ್ಟೇ.

ಪ್ರ: ಗುರೂಜೀ, ಮಹಾರಾಷ್ಟ್ರದಲ್ಲಿ ಅನೇಕ ಸಂತರು ಪವಾಡಗಳನ್ನು ಮಾಡಿ ಬಹಳಷ್ಟು ಜನರನ್ನು ಆಧ್ಯಾತ್ಮಕ್ಕೆ ಕರೆತಂದರು. ಇಂದಿಗೂ ಜನರು ಪವಾಡಗಳನ್ನು ಕಂಡು ಆಧ್ಯಾತ್ಮದೆಡೆಗೆ ಹೊರಳುತ್ತಾರೆ. ಜನರು ಸ್ವಾರ್ಥ, ಲಾಭವನ್ನು ಬಿಟ್ಟು, ಆಧ್ಯಾತ್ಮದತ್ತ ಕೇಂದ್ರೀಕರಿಸುವಂತೆ ಏನು ಮಾಡಬೇಕು? 

ಶ್ರೀಶ್ರೀ: ಮುಕ್ತಿಯನ್ನು ಪಡೆಯಲು ಒಂದರ ನಂತರ ಇನ್ನೊಂದು ಮೆಟ್ಟಿಲನ್ನು ಏರಬೇಕು. ಪ್ರಾರಂಭದಲ್ಲಿ ಜೀವನದ ಕಷ್ಟ ಪರಿಸ್ಥಿತಿಗಳಿಂದ ಸಮಾಧಾನ ಪಡೆಯಲು, ನೋವು-ನರಳುವಿಕೆಯಿಂದ ಮುಕ್ತರಾಗಲು ಬರುತ್ತಾರೆ. ನಂತರ ಜ್ಞಾನದ ದಾಹ ಜಾಗೃತವಾಗುತ್ತದೆ. ಜ್ಞಾನದಲ್ಲಿ ಮಿಂದಾಗ ಮೋಕ್ಷಾಕಾಂಕ್ಷಿಯಾಗುತ್ತಾರೆ. ಎಲ್ಲ ಬಗೆಯ ಜನರು ಈ ಪಥಕ್ಕೆ ಬರುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆಯುತ್ತಿದೆ; ಹೀಗೆ ನಡೆಯುತ್ತಿರುವುದು ಈಗಷ್ಟೇ ಅಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಾಲ್ಕು ಬಗೆಯ ಜನರು ತನ್ನನ್ನು ಪೂಜಿಸುತ್ತಾರೆಂದು ಹೇಳುತ್ತಾನೆ. ಕೆಲವರು ಹಣ ಮತ್ತು ಸೌಕರ್ಯಗಳನ್ನು ಬಯಸಿ ಬರುತ್ತಾರೆ. ಕೆಲವರು ತಮ್ಮ ಕಷ್ಟ-ನೋವುಗಳನ್ನು ತೊಡೆದುಹಾಕಲು ಬರುತ್ತಾರೆ. ಇನ್ನು ಕೆಲವರು ಮೋಕ್ಷಕ್ಕಾಗಿ ಬರುತ್ತಾರೆ ಹಾಗೂ ಜ್ಞಾನಿಗಳೂ ತನ್ನ ಬಳಿಗೆ ಬರುತ್ತಾರೆ.  ಜ್ಞಾನಿಗಳಲ್ಲಷ್ಟೇ ಅಲ್ಲ, ಜಿಜ್ಞಾಸೆಯುಳ್ಳವರೂ ತಮ್ಮ ಗಹನವಾದ ಪ್ರಶ್ನೆಗಳೊಂದಿಗೆ ಹಾಗೂ ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು ತನ್ನ ಬಳಿಗೆ ಬರುತ್ತಾರೆಂದು ಸ್ಪಷ್ಟವಾಗಿ ತಿಳಿಸಿದ್ದಾನೆ. ಈ ನಾಲ್ಕು ತರಹದವರು ದೇವರನ್ನು ಆಶ್ರಯಿಸುತ್ತಾರೆ.

ಪ್ರ: ನನಗೆ ನನ್ನ ಗುರಿಯತ್ತ ಬಹಳ ಆಸಕ್ತಿಯಿದೆ. ಆದರೆ ಅದನ್ನು ಪಡೆಯಲು ಕಾರ್ಯ ಪ್ರವೃತ್ತನಾದಾಗ ಬಹಳ ಗೊಂದಲಗೊಂಡು ನಿರಾಶೆಗೊಳ್ಳುತ್ತೇನೆ. ಇದನ್ನು ಹೇಗೆ ನಿಭಾಯಿಸಲಿ?

ಶ್ರೀಶ್ರೀ: ನಾವು ಹೇಳಿದಂತೆ, ನಿಮಗೆ ಆಸಕ್ತಿ, ವೈರಾಗ್ಯ ಹಾಗೂ ಅನುಕಂಪದ ಅಗತ್ಯವಿದೆ. ಕೇವಲ ಆಸಕ್ತಿಯಿದ್ದರಷ್ಟೇ ಸಾಲದು. ಆಸಕ್ತಿಯೊಂದಿಗೆ ವೈರಾಗ್ಯವೂ ಅಗತ್ಯ.

ಪ್ರ: ಆಧ್ಯಾತ್ಮ ಹಾಗೂ ಮಾನವ ಮೌಲ್ಯಗಳ ಸಾಧನೆಯು ಪುರಾತನವಾದುದೆಂದು ಪರಿಗಣಿಸಲಾಗಿದೆ. ಮುಂದಿನ ಪೀಳಿಗೆಯವರಲ್ಲಿ ಈ ಮೌಲ್ಯಗಳನ್ನು ಪೋಷಿಸಲು ಏನು ಮಾಡಬೇಕು?

ಶ್ರೀಶ್ರೀ: ಇಲ್ಲ. ಅದು ಹಾಗಿಲ್ಲ. ವಾಸ್ತವವಾಗಿ ಅದು ಇಂದಿನ ಫ್ಯಾಷನ್ ಆಗಿದೆ. ನಮ್ಮ ಯೆಸ್+ ಯುವ ಪೀಳಿಗೆಯವರೊಂದಿಗೆ ಮಾತನಾಡಿ. ಕಾಲದೊಂದಿಗೆ ಫ್ಯಾಷನ್ ಕೂಡ ಬದಲಾಗುತ್ತದೆ. ಇಸವಿ ೨೦೦೦ದಿಂದೀಚೆಗೆ ಆಧ್ಯಾತ್ಮ ಭಾರಿ ಫ್ಯಾಷನ್ ಆಗಿದೆ.

ಪ್ರ: ಜೀವನದಲ್ಲಿ ಬಹಳಷ್ಟು ಆಯ್ಕೆಗಳಿದ್ದು, ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ, ಯಾವ ಕ್ಷೇತ್ರದಲ್ಲಿ ಯಶಸ್ವಿಯಾಗುವೆನೆಂದು ಹೇಗೆ ನಿರ್ಧರಿಸಲಿ?

ಶ್ರೀಶ್ರೀ: ನಾನು ಸಾಮಾನ್ಯವಾಗಿ ಹೇಳುತ್ತೇನೆ, ಆಯ್ಕೆ ನಿಮ್ಮದು, ಆಶೀರ್ವಾದ ನನ್ನದು. ಮೊದಲು ವಿಶ್ರಮಿಸಿ. ಅತಿಯಾಗಿ ಮಹತ್ವಾಕಾಂಕ್ಷಿಗಳಾಗಬೇಡಿ. ವಿಶ್ರಾಮ ಮಾಡಿ. ನಂತರ ಆಯ್ಕೆ ಮಾಡಿ.

ಪ್ರ: ಇತ್ತೀಚಿನ ದಿನಗಳಲ್ಲಿ ತಂದೆ-ತಾಯಂದಿರ ಮೇಲೆ ಮಕ್ಕಳ ಕೋಪ ಮತ್ತು ದ್ವೇಷ ಹೆಚ್ಚಾಗಿದೆ. ಇದರ ಬಗ್ಗೆ ನಾವೇನು ಮಾಡಬೇಕು?

ಶ್ರೀಶ್ರೀ: ಏನು ಮಾಡುವುದು! ಅವರನ್ನು ಸಂಗೀತ, ಜ್ಞಾನ ಮತ್ತು ಸೇವೆಯಲ್ಲಿ ತೊಡಗಿಸಿ. ಬಾಲ್ಯದಲ್ಲೇ, ಬೆಳೆಯುವ ವಯಸ್ಸಿನಲ್ಲೇ ಹೀಗೆ ಅಭ್ಯಾಸ ಮಾಡಿಕೊಂಡರೆ, ಆಗ ಕೋಪ ಮತ್ತಿತರ ಪ್ರವೃತ್ತಿಗಳು ಕಡಿಮೆಯಾಗುವುದು.

ಪ್ರ: ನಮ್ಮ ದೈನಂದಿನ ಜೀವನದಲ್ಲಿ ಯೋಗವಸಿಷ್ಠದ ಮಹತ್ವವೇನು? ಪುಸ್ತಕವನ್ನು ಓದಲು ಪ್ರಯತ್ನಿಸಿದರೂ ನನಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತು.

ಶ್ರೀಶ್ರೀ: ಯೋಗವಸಿಷ್ಠವನ್ನು ಒಂದೇ ಬಾರಿ ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಅದನ್ನು ಮತ್ತೆ ಮತ್ತೆ ಓದಬೇಕು. ನಿಮಗೆ ಅನುಕೂಲವಿದ್ದಂತೆ, ದಿನಕ್ಕೆ ಒಂದು ಅಥವಾ ಎರಡು ಪುಟ ಓದಿದರೂ ಸಾಕು. ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಸಿಡಿಗಳು ಮತ್ತು ಆಡಿಯೋ ಟೇಪ್‍ಗಳನ್ನು ಹೊರತರುತ್ತಿದ್ದೇವೆ. ಆಂಗ್ಲ ಭಾಷೆಯಲ್ಲಿ ಸಿಡಿಗಳು ಲಭ್ಯವಿದೆ. ಅದನ್ನು ಕೇಳಿ.

ಪ್ರ: ಗುರೂಜೀ, ಬ್ರಹ್ಮಚರ್ಯೆಯನ್ನು ಹೆಚ್ಚಿಸುವುದರಿಂದ ಆತ್ಮಜ್ಞಾನ ಪಡೆಯಬಹುದೆಂದು ಶೈವ ಸಿದ್ಧಾಂತದಲ್ಲಿ ತಿಳಿಸಲಾಗಿದೆ. ಪ್ರಶಾಂತ ಸ್ಥಿತಿಯಿಂದ ದೈವವನ್ನು ಪಡೆಯಬಹುದೆಂದು ತಿಳಿದಿದ್ದೆವು. ಅನುರಾಗದಿಂದಲೂ ದಿವ್ಯತೆಯನ್ನು ಪಡೆಯಬಹುದೇ?

ಶ್ರೀಶ್ರೀ: ಅನುರಾಗ ಮತ್ತು ಜಾಗೃತಿ ಎರಡೂ ಬೇಕು, ಶಾಂತಿ ಮತ್ತು ಸ್ಥಿರತೆಯೂ ಬೇಕು. ಜೀವನ ಬಹು ಮುಖವುಳ್ಳದ್ದು, ಶಾಂತಿ ಹಾಗೂ ಚೈತನ್ಯ ಇವೆರಡೂ ಇವೆ. ಇವೆಲ್ಲವೂ ಆವಶ್ಯಕ.

ಪ್ರ: ಗುರೂಜೀ, ನಮಗೆ ಅಗತ್ಯವಿರುವುದೆಲ್ಲವನ್ನೂ ನೀವು ನೀಡಿರುವಿರಿ: ಜ್ಞಾನ, ಪ್ರೀತಿ, ಆಶೀರ್ವಾದ ಮತ್ತು ಸಂತೋಷ. ಆದರೆ ಒಂದೇ ಒಂದನ್ನು ನಮಗೆ ನೀಡಿಲ್ಲ – ಅದು ನಿಮ್ಮ ಮೊಬೈಲ್ ನಂಬರ್. ಅದನ್ನು ಯಾವಾಗ ಕೊಡುವಿರಿ?

ಶ್ರೀಶ್ರೀ: (ನಗೆ) ನೋಡಿ, ನಾನು ಯಾವಾಗಲೂ ಮೊಬೈಲ್ ಅನ್ನು ತೆಗೆದುಕೊಂಡು ಹೋಗುವುದಿಲ್ಲ. ಆದರೆ ನೀವು ಏನನ್ನು ಯೋಚಿಸುತ್ತಿರುವಿರೆಂದು ನಾನು ಗ್ರಹಿಸಬಲ್ಲೆ. ಮೊಬೈಲ್ ಅನ್ನು ಕಂಡು ಹಿಡಿದಂತಹ ಸಶಕ್ತ ಮನಸ್ಸನ್ನು ನಾನು ಮತ್ತು ನೀವು ಹೊಂದಿರುವೆವು. ಅದರೊಂದಿಗೇ ಸಂಪರ್ಕಿಸಬಹುದಾದರೆ, ಮೊಬೈಲ್‍ನ ಅಗತ್ಯವೆಲ್ಲಿದೆ?

ಟ್ವಿಟರ್ ನಲ್ಲಿ ಎಲ್ಲರೂ ಇದ್ದೀರ? ಎಷ್ಟು ಜನ ಟ್ವಿಟರ್ ನಲ್ಲಿ  ಇಲ್ಲ? ನನ್ನನ್ನು ಟ್ವಿಟರ್ ನಲ್ಲಿ  ಸಂಪರ್ಕಿಸಿ: @SriSrispeaks ನಲ್ಲಿ ಜ್ಞಾನಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿರುತ್ತೇನೆ. ನನ್ನನ್ನು ಇ-ಮೇಲ್ ನಲ್ಲೂ ಸಂಪರ್ಕಿಸಬಹುದು.

ಪ್ರ: ಗುರೂಜೀ, ಸಾಮಾನ್ಯ ಜನರು ವಿಶಿಷ್ಟವಾದ ಕಾರ್ಯಗಳನ್ನು ಮಾಡಿರುವುದರ ಬಗ್ಗೆ ಓದುತ್ತೇವೆ. ಅವಿದ್ಯಾವಂತರು ದೂರದೃಷ್ಟಿಯುಳ್ಳವರಾಗಿರುತ್ತಾರೆ. ನನ್ನ ಶಿಕ್ಷಣ ಮತ್ತು ಸದ್ಭಾವನೆಯಿಂದ ನಾನೇನನ್ನೂ ಸಾಧಿಸಿಲ್ಲವೆಂದೆನಿಸುತ್ತದೆ. ನಾನೂ ಸಹ ದೂರದೃಷ್ಟಿಯುಳ್ಳವನಾಗುವುದು ಹೇಗೆ?

ಶ್ರೀಶ್ರೀ: ನೀವೀಗಾಗಲೇ ಅದಾಗಿದ್ದೀರೆಂದು ನಂಬಿಕೆಯಿರಲಿ. ಗೊತ್ತಾಯಿತೇ? ನೀವೊಬ್ಬ ದಾರ್ಶನಿಕರು. ನಿಮಗೆ ಈಗ ದೂರದೃಷ್ಟಿಯುಳ್ಳವರಾಗಬೇಕೆಂಬ ಪ್ರಶ್ನೆ ಮೂಡಿದರೆ, ನೀವೀಗಾಗಲೇ ಅದಾಗಿದ್ದೀರ.

ಪ್ರ: ನನಗೆ ಧ್ಯಾನ ಮಾಡುವುದು ಬಹಳ ಸಂತೋಷವೆನಿಸುತ್ತದೆ. ಆದರೆ ಈ ಟೊಳ್ಳು ಮತ್ತು ಖಾಲಿ ಏನೆಂಬುದು ಅರ್ಥವಾಗುತ್ತಿಲ್ಲ. ಇದನ್ನು ತಿಳಿಯುವ ಅಗತ್ಯವಿದೆಯೇ?

ಶ್ರೀಶ್ರೀ: ಇಲ್ಲ. ಅದರ ಅಗತ್ಯವಿಲ್ಲ. ನೀವೀಗಾಗಲೇ ಟೊಳ್ಳು ಮತ್ತು ಖಾಲಿಯಾಗಿರುವಾಗ ಮತ್ತಿನ್ನೇನನ್ನು ತಿಳಿಯಲು ಉಳಿದಿದೆ? ನೀವು ಟೊಳ್ಳು ಮತ್ತು ಖಾಲಿಯಾಗಿರದಿದ್ದರೆ, ಆಗ ಅರ್ಥ ಮಾಡಿಕೊಳ್ಳುವ ಅಗತ್ಯವಿತ್ತು. ಅಲ್ಲವೇ? ಖಾಲಿಯಿರುವುದನ್ನು ಹಿಡಿದುಕೊಳ್ಳಲಾಗದು. ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೆ. ಇದನ್ನು ನಂಬಿ, ಸುಮ್ಮನೆ ಕುಳಿತುಕೊಳ್ಳಿ ಮತ್ತು ವಿಶ್ರಮಿಸಿ. ‘ಭೋಲೇ ಭಾವ್ ಮಿಲೇ ರಘುರಾಯಿ’ (ಪರಿಶುದ್ಧ ಮತ್ತು ಸರಳ ಭಾವನೆಗಳಿಂದ ದಿವ್ಯತೆಯನ್ನು ಪಡೆಯಬಹುದು) ಎಂದು ಹೇಳುತ್ತಾರೆ.