ಶುಕ್ರವಾರ, ಆಗಸ್ಟ್ 16, 2013

ಏಕೈಕ ಚೇತನ

ಅಮೃತಬಿ೦ದು’ ಸರಣಿಯ ಬರಹಗಳು

ಹದಿನೆಂಟನೆಯ ಕ೦ತು

ಏಕಮೇವಾದ್ವಿತೀಯಂ (ವಿಶ್ವವೆಲ್ಲಾ ಒಂದೇ ಚೇತನ)

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೭.೦೮.’೦೩ರಂದು ಪ್ರಕಟವಾಗಿತ್ತು)

“ಸ್ವಶಕ್ತಿ ಪ್ರಚಯೋಸ್ಯ ವಿಶ್ವೋ”. ಈ ಸೂತ್ರದಲ್ಲಿ ಬಹಳ ರಹಸ್ಯ ಇದೆ. ಸೂರ್ಯನಲ್ಲಿರುವ ಯಾವ ತೇಜಸ್ಸಿನಿಂದ ಪ್ರಪಂಚ ನಡೆಯತ್ತಿದೆಯೋ ಆ ತೇಜಸ್ಸಾಗಲೀ, ನಮ್ಮ ಶರೀರದಲ್ಲಿರುವ ಆತ್ಮತೇಜಸ್ಸಾಗಲೀ ಬೇರೆ ಬೇರೆ ಅಲ್ಲ. ಎರಡೂ ಒಂದೇನೆ. ಈಗ, ನೀವು ಮಾತನಾಡ್ತೀರ, ಕೇಳ್ತೀರ, ವಾಸನೆ ನೋಡ್ತೀರ, ಊಟ ಮಾಡ್ತೀರ, ಚಿಂತೆ ಮಾಡ್ತೀರ, ಇವೆಲ್ಲಾ ಯಾವ ಶಕ್ತಿಯಿಂದ ಮಾಡ್ತೀರ? ‘ಚೇತನ ಶಕ್ತಿ’. ಇದರಿಂದಲೇ ನಮ್ಮ ಜೀವನದ ಎಲ್ಲಾ ಕೆಲಸಗಳೂ ನಡೆಯುತ್ತವೆ. ಚೇತನ ಶಕ್ತಿ ಇಲ್ಲದಿದ್ದರೆ ದೇಹ ಒಂದು ಶವ ಆಗಿರುತ್ತೆ!

ಹಾಗೆಯೇ ಈ ಸೃಷ್ಟಿಗೆ ಕಾರಣವೆನಿಸುವ ‘ಚೇತನ ಶಕ್ತಿ’ ಸೂರ್ಯನ ಸುತ್ತಲೂ ಸುತ್ತುತ್ತಾ ಇದೆ. ಗಿಡ ಮರಗಳು ಬೆಳೆಯುತ್ತಿವೆ. ನೀರು ಆವಿಯಾಗಿ ನಭೋಮಂಡಲವನ್ನು ಸೇರಿ ಮೋಡವಾಗಿ ಮತ್ತೆ ಮಳೆಯಾಗಿ ಸುರಿಯುತ್ತೆ, ಈ ಎಲ್ಲಾ ಪ್ರಕ್ರಿಯೆಗಳಿಗೂ ಕಾರಣವಾದ ಸೂರ್ಯನ ಶಕ್ತಿಗೂ ನಮ್ಮಲ್ಲಿರುವ ಜೀವ ಶಕ್ತಿಗೂ ಯಾವುದೇ ತರಹದ ಬೇಧ ಇಲ್ಲ.

ಗೀತೆಯಲ್ಲಿ ಕೃಷ್ಣ, ತಾನು ಎಲ್ಲೆಡೆಯಲ್ಲೂ, ಎಲ್ಲದರಲ್ಲೂ  ಇರುವೆನೆಂಬುದನ್ನು ವಿವರಿಸುತ್ತಾ ಹೀಗೆ ಹೇಳುತ್ತಾನೆ, “ ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಶ್ರೀ". ‘ನಾನು ಹಸಿವೆಯಾಗಿ ಎಲ್ಲರ ಹೊಟ್ಟೆಯಲ್ಲೂ ಕುಳಿತಿದ್ದೀನಿ, ಜೀರ್ಣಶಕ್ತಿಯೂ ನಾನೇ ಕಣಯ್ಯ’ ಅಂತ. ಅಷ್ಟೇ ಅಲ್ಲ, “ಪಾಂಡವರಲ್ಲಿ ಅರ್ಜುನ ನೀನು ಅಂದುಕೊಂಡೆಯಾ? ಅರ್ಜುನ ನಾನೇ ಕಣಯ್ಯ, ಹೇಳ್ತಾ ಇರೋನೂ ನಾನೇ, ಕೇಳ್ತಾ ಇರೋನೂ ನಾನೇ” ಎನ್ನುತ್ತಾನೆ.

ಅಂದರೆ ‘ಸ್ವಶಕ್ತಿ’, ಒಂದೇ ಶಕ್ತಿಯಿಂದ ಇಡೀ ವಿಶ್ವವು ಸೃಷ್ಟಿಯಾಗಿದೆ, ಆ ಶಕ್ತಿಯ ಕೇಂದ್ರ ಬಿಂದು ‘ನಾನಾಗಿದೀನಿ’ ಎಂಬ ನಿರೂಪಣೆಯೇರ್ಪಡುತ್ತದೆ. ಇದು ವೇದಾಂತದ ಮೂಲಾರ್ಥ, ಶಿವಸೂತ್ರದ ಸಾರ.

* * * * *

ಸೃಷ್ಟಿ, ಸ್ಥಿತಿ, ಲಯ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೮.೦೮.’೦೩ರಂದು ಪ್ರಕಟವಾಗಿತ್ತು)

“ಸ್ವಶಕ್ತಿ ಪ್ರಚಯೋಸ್ಯ ವಿಶ್ವಂ, ಸ್ಥಿತಿ, ಲಯ”. ’ನಾನು ಸೃಷ್ಟಿಯನ್ನು ಮಾತ್ರ ಮಾಡುತ್ತಿಲ್ಲ, ಇದರ ಸ್ಥಿತಿ, ಲಯವೂ ನನ್ನಲ್ಲೇ ಆಗುತ್ತಿದೆ, ನಾನೇ ಕಾರಣ’ ಎಂಬುದೇ ಈ ಉಕ್ತಿಯ ಅರ್ಥ.

ದಿನಚರಿಗೆ ಹೋಲಿಸಿಕೊಳ್ಳುವುದಾದರೆ, ಸಂಜೆ ಆಫೀಸಿನಿಂದ ಬರುತ್ತೀರ, ಟಿ.ವಿ. (ದೂರದರ್ಶನ)ಕ್ಕೆ ಚಾಲನೆ ನೀಡುತ್ತೀರ; ತೆರೆಯ ಮೇಲಿನ ಚಲನವಲನಗಳನ್ನು ನೋಡುತ್ತೀರ; ಕೊನೆಗೆ ನೀವೇ ಟಿ.ವಿ. ಸ್ವಿಚ್ಚನ್ನು ‘ಆಫ್’ ಮಾಡ್ತೀರ, ಅಲ್ವಾ?

ನೀವು ಊಟಕ್ಕೆ ಕುಳಿತು ಕೊಳ್ತೀರ, ಎಲೆಯಲ್ಲಿ ಬಡಿಸಿರ್ತಾರೆ, ಬಡಿಸಿರುವುದನ್ನು ಅಚ್ಚುಕಟ್ಟಾಗಿ ಊಟಮಾಡಿ, ನಂತರ ಎಲೇನ ಸುರುಟಿ ಎಸೀತೀರ ತಾನೇ? ಅಯ್ಯೋ! ಎಂಥ ರುಚಿಕಟ್ಟಾದ ಊಟವಿದ್ದ ಎಲೆಯಿದು, ಇದನ್ನು ಎಸೆದು ಬಿಡೋದಾ – ಅಂದರೆ ಮೂರ್ಖತನ ಅಲ್ಲವಾ? ಪ್ರಾರಂಭಿಸಿದ ಯಾವುದೇ ಕೆಲಸಕ್ಕಾದರೂ ಅಂತ್ಯ ಇದ್ದೇ ಇರುತ್ತೆ.

ಉಸಿರು ಒಳಗೆ ತೆಗೆದುಕೊಳ್ತೀವಿ, ಅದನ್ನು ಹೊರಗೆ ಬಿಡಲೇಬೇಕಾಗುತ್ತೆ, ಉಸಿರು ತೆಗೆದುಕೊಂಡು ಒಳಗಡೆಯೇ ಇಟ್ಟುಕೊಂಡು ಬಿಡ್ತೀನಿ ಅಂದರೆ ಆಗುತ್ತಾ? ಅಥವಾ ಹೊರಗಡೆ ಬಿಟ್ಟ ಉಸಿರು ಅಲ್ಲೇ ಇರಲಿ ಎಂದರೆ ಜೀವನ ನಡೆಯುತ್ತಾ?

ಮದುವೆಯ ಸಲುವಾಗಿ ತೋರಣ, ಬಾಳೆಕಂಬ ಕಟ್ಟೀರ, ಚಪ್ಪರ ಹಾಕ್ತೀರ. ಆ ಮೇಲೆ ಅದೆಲ್ಲಾ ತೆಗೆದುಬಿಡ್ತೀರಾ ತಾನೆ?

ಹಾಗೇ ನನ್ನ ಶಕ್ತಿಯಿಂದಲೇ ಹೇಗೆ ಎಲ್ಲವನ್ನೂ ಸೃಷ್ಟಿ ಮಾಡಿದೀನೋ ಹಾಗೇ ಕಾಪಾಡಿಕೊಂಡು ಬರುತ್ತೀನಿ, ಬೇಡವಾದಾಗ ಅದನ್ನು ಅಳಿಸಿಯೂ ಹಾಕ್ತೀನಿ ಎಂಬ ಪೂರ್ಣ ಅರಿವು ಏರ್ಪಟ್ಟಿರುತ್ತೆ, ಓರ್ವ ಜ್ಞಾನಿಯಲ್ಲಿ.

* * * * *

ಗುರು ಶಕ್ತಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೯.೦೮.’೦೩ರಂದು ಪ್ರಕಟವಾಗಿತ್ತು)

“ಸ್ಥಿತಿ ಲಯಾ” ಎಂಬ ಉಕ್ತಿಯಿದೆ.

ಅಂದವಾಗಿ ರಂಗೋಲೆಯನ್ನು ಹಾಕುತ್ತೀವಿ. ಸದಾ ಕಾಲಕ್ಕೂ ಅದನ್ನು ಹಾಗೆಯೇ ಇಟ್ಟುಕೊಳ್ಳುವುದಿಲ್ಲವಲ್ಲ? ಹಾಕಿದ ರಂಗೋಲೆಯನ್ನು ಮತ್ತೆ ಅಳಿಸಿಬಿಡುವುದು ನಮಗೆ ಎಷ್ಟು ಸಹಜವೋ, ಅಷ್ಟೇ ಸಹಜವಾಗಿ ಆತ್ಮಜ್ಞಾನಿಯು ತನ್ನ ಪ್ರಪಂಚವನ್ನು ತಾನೇ ಸೃಷ್ಟಿ ಮಾಡಿಕೊಂಡು, ತನಗೆ ಬೇಡದಿದ್ದಾಗ ಅದನ್ನು ಮುಗಿಸಿಬಿಡುತ್ತಾನೆ.

ಇನ್ನೊಂದು ಉದಾಹರಣೆ. ದಸರಾ (ನವರಾತ್ರಿ) ಹಬ್ಬದಲ್ಲಿ ಚಿತ್ತಾಕರ್ಷಕವಾಗಿ ಬೊಂಬೆ ಕೂರಿಸುತ್ತೀರ. ಪೆಟ್ಟಿಗೆಗಳು, ಇಟ್ಟಿಗೆಗಳು ಎಲ್ಲಾ ಇಟ್ಟು ಏನೋ ಮಾಡಿ ಜೋಡಿಸಿ ಎಂಟು ಮೆಟ್ಟಿಲು, ಒಂಭತ್ತು - ಹತ್ತು ಮೆಟ್ಟಿಲು ಮಾಡಿ ಚೆನ್ನಾಗಿಯೇ ವ್ಯವಸ್ಥೆ ಮಾಡ್ತೀರ. ತರತರದ ಗೊಂಬೆಗಳನ್ನು ಆರಿಸಿ, ಅಲಂಕಾರ ಮಾಡಿ ಕೂಡಿಸುತೀರ. ರುಚಿರುಚಿಯಾದ ಚರುಪು ಮಾಡಿ ಮಕ್ಕಳಿಗೆಲ್ಲಾ ಹಂಚುವ ವೈಖರಿ ಹಿಂದೆಲ್ಲ ವೈಭವವಾಗಿರುತ್ತಿತ್ತು, ಈಗ ಕಡಿಮೆಯಾಗಿ ಬಿಟ್ಟಿದೆ. ಆದರೂ, ದಸರಾ ಬೊಂಬೆ ಇಡೋದು ಅಂದರೆ ಮನೆಮನೆಯಲ್ಲೂ ಹಬ್ಬ. ಇಷ್ಟೆಲ್ಲಾ ಮಾಡಿ ವಿಜಯದಶಮಿ ಆದ ಮೇಲೆ ಅದನ್ನೆಲ್ಲಾ ತೆಗೀಬೇಕು ಅಂದಾಗ ಮಕ್ಕಳಿಗೆ ದುಃಖವಾಗುತ್ತೆ.  ಆದರೆ ದೊಡ್ಡವರು, ಮುಗೀತಪ್ಪಾ ಈ ಸಾಲಿನ ನವರಾತ್ರಿ, ಮುಂದಿನ ವರ್ಷದ ಸಲುವಾಗಿ ಇವುಗಳನ್ನು ಜೋಪಾನ ಮಾಡೋಣ” ಎನ್ನುತ್ತ ಬೊಂಬೆಗಳನ್ನು ಮೆಟ್ಟಿಲುಗಳಿಂದ ಕೆಳಗಿಳಿಸುವ ಕಾಯಕದಲ್ಲಿ ನಿರತರಾಗುತ್ತಾರೆ.

ಬೊಂಬೆಗಳ ಚಿತ್ತಾರವನ್ನು ನಾವು ಸೃಷ್ಟಿಸಿದೆವು, ಒಂದಷ್ಟು ದಿನ ಉಳಿಸಿಕೊಂಡಿದ್ದೆವು, ಬಳಿಕ ಬೇಡವೆಂದು ಅಳಿಸಿದೆವು. ಹಾಗೆಯೇ ಆತ್ಮಜ್ಞಾನಿಯಾದ ಗುರುವಿನಲ್ಲಿ ಬ್ರಹ್ಮಶಕ್ತಿ, ವಿಷ್ಟುಶಕ್ತಿ, ಶಿವಶಕ್ತಿಯೆಂಬ ಸಾಮರ್ಥ್ಯ ತ್ರಯವು ಪರಿಪೂರ್ಣವಾಗಿ ವಿಕಾಸವಾಗಿರುತ್ತವೆ.

“ಗುರುಬ್ರ್ರಹ್ಮಾ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರ:……….

* * * * *

ಬಾಹ್ಯದಲ್ಲಿ ಎಲ್ಲರೂ ಒಂದೇ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೦.೦೮.’೦೩ರಂದು ಪ್ರಕಟವಾಗಿತ್ತು)

ಕ್ತಿಯೊಂದು ಇಂತು ಸಾಗುತ್ತದೆ, “ತತ್ ಪ್ರವೃತ್ತಾವಪಿ ಅನಿರಸ ಸಂವೇತ್ರ ಭಾವಾತ್…….."

ಒಬ್ಬ ಜ್ಞಾನಿಗೂ ನಿಮಗೂ ಹೆಚ್ಚು ವ್ಯತ್ಯಾಸ ಇಲ್ಲ. ಬಾಹ್ಯದಿಂದ ಜ್ಞಾನ, ಕರ್ಮ, ಭಾವವನ್ನು ಅವಲೋಕಿಸಿದಾಗ ಒಬ್ಬ ಜ್ಞಾನಿಯ ಕೃತ್ಯಕ್ಕೂ, ನಿಮ್ಮ ಕೃತ್ಯಕ್ಕೂ ಹೆಚ್ಚು ವ್ಯತ್ಯಾಸ ಕಂಡುಬರದೆ ಇರಬಹುದು. ಆದರೆ ಜ್ಞಾನಿಯನ್ನು ನೀವು ತಿಳಿದುಕೊಳ್ಳುವುದು ಕಷ್ಟ……….

ಯಾಕೆ? ನಾವು ಜ್ಞಾನಿಯ ಬಗ್ಗೆ ನಮ್ಮದೇ ಆದ ಕಲ್ಪನೆ, ಪೂರ್ವ ನಿಶ್ಚಿತ ಮನೋಭಾವ ಇಟ್ಟುಕೊಂಡಿರುತ್ತೀವಿ. ನಮ್ಮ ಪ್ರಕಾರ ಜ್ಞಾನಿ ಅಂದರೇನು? ಸರಿಯಾಗಿ ಊಟವನ್ನಾಗಲೀ, ನಿದ್ರೆಯನ್ನಾಗಲೀ, ಮಾಡದೆ ಇದ್ದರೆ ಜ್ಞಾನಿ. ಯಾವಾಗಲೂ ಸಮತೆಯಿಂದ ಇರುತ್ತಾನೆ ಜ್ಞಾನಿ. ನಗದೆ ಇದ್ದರೆ ಜ್ಞಾನಿ, ಅಳದೆ ಇದ್ದರೆ ಜ್ಞಾನಿ, ಅವನಿಗೆ ಶೋಕವೇ ಉಂಟಾಗುವುದಿಲ್ಲ. ಹೀಗೆಲ್ಲಾ ನಾನಾ ರೀತಿಯ ಅಭಿಪ್ರಾಯಗಳನ್ನಿಟ್ಟುಕೊಂಡಿರುತ್ತೇವೆ. ಇವೆಲ್ಲಾ ನಿರರ್ಥಕವಾದ ಅಭಿಪ್ರಾಯಗಳು. ಹೀಗೆಲ್ಲ ನಾವು ಕಲ್ಪಿಸಿಕೊಳ್ಳುವ ಲಕ್ಷಣಗಳು ಜ್ಞಾನಿಯಲ್ಲಿ ಕಂಡುಬರುವುದಿಲ್ಲ. ಗಮನಿಸಿ ನೋಡಿ, ನಾವು ಪೂಜಿಸುವ ಶ್ರೀ ರಾಮ, ಶ್ರೀ ಕೃಷ್ಣರ ಜೀವನದ ಅನೇಕ ಸನ್ನಿವೇಶಗಳು ಇದಕ್ಕೆ ನಿದರ್ಶನವನ್ನು ಒದಗಿಸಬಲ್ಲವು.

ಹಾಗಾದರೆ ನಿಜವಾದ ಜ್ಞಾನಿಗಳನ್ನು ಅರಿಯುವುದು ಹೇಗೆ? ನಾಳೆ ತಿಳಿದುಕೊಳ್ಳೋಣ..

* * * * *

ದಿವ್ಯ ಸನ್ನಿಧಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೧.೦೮.’೦೩ರಂದು ಪ್ರಕಟವಾಗಿತ್ತು)

“ತತ್ ಪ್ರವೃತ್ತಾವಪಿ ಅನಿರಸ ಸಂವೇತ್ರ ಭಾವಾತ್…….."

ಇದು ಜ್ಞಾನಿಗಳ ಮಾತು. ಕೆಲವು ಸಲ ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೇ ಕಷ್ಟ. ಆದರೆ, ಬೇರೆಯವರನ್ನು ವಿಮರ್ಶೆ ಮಾಡಲು ಪ್ರಯತ್ನ ಪಡುತ್ತೀವಿ.

ಅರೇ!... ನಮ್ಮ ಮನಸ್ಸೇ ನಮಗೆ ಗೊತ್ತಾಗುವುದಿಲ್ಲ, ನಮ್ಮ ಚೇತನವನ್ನೇ ನಾವು ಅರಿತುಕೊಂಡಿಲ್ಲ, ಅರ್ಥಮಾಡಿಕೊಂಡಿಲ್ಲ. ಆದರೆ ಬೇರೆಯವರು ಏನು ಅಂದುಕೊಳ್ಳುತ್ತಿರಬಹುದು ಎಂದು ಅವರ ಭಾವನೆ ಆಲೋಚನೆಗಳನ್ನು ವಿಶ್ಲೇಷಣೆ ಮಾಡಲು ಹೋಗ್ತೀವಿ. ಇದು ಮೂರ್ಖತನ.

ಅದಕ್ಕೇ ಈ ಸೂತ್ರದಲ್ಲಿ ಹೇಳ್ತಾರೆ, ಕೃತ್ಯದಿಂದ ಜ್ಞಾನಿಗಳನ್ನು ನೋಡಬೇಡಿರೆಂದು.

"ಸ್ವಾತ್ಮಾನಂದ ಪ್ರಕಾಶವಪುಷೇ …." ಎಂಬ ಉಕ್ತಿಯ ಪ್ರಕಾರ ಚೇತನವನ್ನು ಅರಿತುಕೊಂಡವರ ಶರೀರದಲ್ಲಿ ಆನಂದ ತುಂಬಿ ತುಳುಕುತ್ತಾ ಇರುತ್ತದೆ. ಅವರ ಮನದ ತರಂಗಗಳು ಪೂರ್ಣಾನಂದಮಯವಾಗಿರುತ್ತವೆ. ಅಹೈತುಕೀ ಪ್ರೇಮದಿಂದ, ಕೃಪೆಯಿಂದ ತುಂಬಿರುವ ಅದರ ಸನ್ನಿಧಿಯಲ್ಲಿರುವ ಪವಿತ್ರ ತರಂಗಗಳಿಂದ ನಿಮ್ಮ ಮನಸ್ಸಿಗೇ ಅನುಭವಕ್ಕೆ ಬರುತ್ತದೆ.

"ಯೋ ಬುದ್ಧೇ ಪರತತ್ವ ಸಹ ….." ಎಂಬ ಸಾಲು ಸೂತ್ರದಲ್ಲಿದೆ. ’ನಾವು ಯಾವಾಗಲೂ ಬುದ್ಧಿಮಟ್ಟದಲ್ಲಿಯೇ ಇದ್ದು ಬಿಟ್ಟರೆ ನಮಗೆ ಶುದ್ಧಜ್ಞಾನ ಉಂಟಾಗಲು ಸಾಧ್ಯ ಇಲ್ಲ. ಶುದ್ಧ ಚೇತನ ಬುದ್ಧಿಗೆ ಅತೀತವಾಗಿದೆ, ಅದರಿಂದ ಬುದ್ಧಿಯನ್ನು ದಾಟಿ ಮುಂದೆ ಹೋಗಬೇಕು” ಎಂಬ ಅರಿವನ್ನು ಅದು ಮೂಡಿಸುತ್ತದೆ.

* * * * *

ಬದುಕೆಂಬ ಜೀವನದಿ 

 (ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೮.’೦೩ರಂದು ಪ್ರಕಟವಾಗಿತ್ತು)

ಜೀವನದ ನದಿ ಸದಾ ಸಮತಲದಲ್ಲಿ ಹರಿಯುತ್ತಿರುವುದಿಲ್ಲ. ಕೆಲವೊಮ್ಮೆ ಜೋಗದ ಜಲಪಾತದಂತೆ ಮೇಲಿಂದ ಕೆಳಗೆ ಬೀಳುತ್ತೆ, ಹಾಗೆ ಬಿದ್ದದ್ದು ಕಲ್ಲುಗಳಿಗೆ ತಾಕಿ ಮತ್ತೆ ಮೇಲೆ ಏಳುತ್ತೆ, ಬಂಡೆಗಳ ಮಧ್ಯೆ ತೂರಿಕೊಂಡು ಹೋಗುತ್ತೆ, ಮತ್ತೆ ಕೆಲವು ಸಲ ಹರಿಯುತ್ತಲೇ ಇಲ್ಲವೇನೋ ಎನ್ನುವ ಹಾಗೆ ತೀರ ಶಾಂತವಾಗಿಯೇ ಹರಿಯುತ್ತಿರುತ್ತೆ.

ಸಮುದ್ರ ಸೇರುವವರೆಗೆ ಒಂದು ನದಿಯ ಚಲನೆ, ಪ್ರವಾಹ ಬೇರೆ ಬೇರೆ ರೀತಿಯಲ್ಲಿ ಆಗುತ್ತಾ ಇರುತ್ತೆ. ಹಾಗೆಯೇ ಜೀವನದಲ್ಲಿ ಯಾವಾಗ ಏನು ಆಗುತ್ತೆ ಅಂತ ಹೇಳೋದು ಕಷ್ಟ. ಜೀವನವೂ ಒಂದು ಪ್ರವಾಹ. ಜೀವನ ಪ್ರವಾಹವಾಗಿ ಹರಿಯುತ್ತಾ ಇದ್ದಾಗಲೇ ಅದು ಶಿವಮಯವಾಗಿರೋದು, ಎಲ್ಲಾದರೂ ನಿಂತು ಬಿಟ್ಟರೆ ಮಲೆತು ಹೋಗುವುದಕ್ಕೆ (ಕೊಳಯುವುದಕ್ಕೆ) ಪ್ರಾರಂಭವಾಗುತ್ತೆ.

ನದಿಗಳಲ್ಲಿ ನೋಡಿ, ಕೆಲವು ಸಲ ಹಣತೆ ದೀಪಗಳನ್ನು ತೇಲಿಬಿಡ್ತೀವಿ. ಹೂಗಳನ್ನು ಹಾಕ್ತೀವಿ, ಕಸ ಎಸೀತಾರೆ ಜನ, ಮರದ ದಿಮ್ಮಿಗಳನ್ನು ಹಾಕ್ತಾರೆ. ಏನು ಹಾಕಿದರೂ ಆ ನೀರು ಎಲ್ಲವನ್ನೂ ಎತ್ತಿಕೊಂಡು, ಕೊಚ್ಚಿಕೊಂಡು ಹೇಗೆ ಮುಂದೆ ಮುಂದೆ ಸಾಗುವುದೋ, ಹಾಗೆ ಪರಿಣಾಮಮಯ ಜೀವನ ನಮ್ಮದಾಗಬೇಕು.

ಇದೇ ಶಿವಸೂತ್ರದ ಮೂಲಭೂತ ರಹಸ್ಯ.

* * * * *

ನೀನು ಪ್ರೇಕ್ಷಕ ಮಾತ್ರ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೩.೦೮.’೦೩ರಂದು ಪ್ರಕಟವಾಗಿತ್ತು)

“ಸುಖದುಃಖಯೋರ್ಬಹಿರ್ಮನನಮ್" ಎಂಬ ಉಕ್ತಿಯಿದೆ. ’ಜೀವನದಲ್ಲಿ ಉಂಟಾಗತಕ್ಕಂಥ ಸುಖದುಃಖಗಳನ್ನು ಹೊರಗೆ ನಿಂತು ವೀಕ್ಷಿಸು” ಎಂಬ ಅರ್ಥವನ್ನು ಅದು ನೀಡುತ್ತದೆ.

ಇದು ಧ್ಯಾನದ ಉತ್ತಮವಾದ ಒಂದು ಪ್ರಕ್ರಿಯೆ. ನಮ್ಮ ಮನಸ್ಸಿನಲ್ಲಿ ಏನೋ ಒಂದು ಸುಖ ಉಂಟಾಗ್ತಾ ಇದೆ, ದುಃಖ ಉಂಟಾಗ್ತಾ ಇದೆ. ’ಅವು ಬೇರೆ ಎಲ್ಲೋ ಒಂದು ಕಡೆ ಆಗ್ತಾ ಇವೆ, ಪರದೆಯ ಮೇಲೆ ಓಡುವ ಚಿತ್ರಗಳ ಥರ’ ಎಂಬ ಅನುಭವವನ್ನು ಮನದಲ್ಲಿ ಮೂಡಿಸಿಕೊಂಡು ಅವುಗಳನ್ನು ವೀಕ್ಷಿಸಿ ವಿಮರ್ಶಿಸಲು ಸಾಧ್ಯವಾ ನಿಮ್ಮಿಂದ?

ಹಳ್ಳಿಯಲ್ಲಿ ಸಿನಿಮಾ ನೋಡುವುದಕ್ಕೆ ಹೋಗ್ತಾರೆ ಜನ. ತೆರೆಯ ಮೇಲೆ ಅತ್ಯಂತ ಪ್ರಿಯನಾದ ನಟ ಪ್ರತ್ಯಕ್ಷನಾದಾಗ, ಆ ನಟ ನಕ್ಕಾಗ ಇವರೂ ನಗ್ತಾರೆ, ಆ ನಟ ಅತ್ತರೆ ಇವರೂ ಅಳ್ತಾರೆ. ಅವರು ದರ್ಶಕರು. ದರ್ಶಕರಿಗೆ, ದರ್ಶನದ ಜೊತೆ ತಾದ್ಮಾತ್ಯ ಆದಾಗ ‘ಹರ್ಷ, ದುಃಖ’ ಎರಡೂ ಉಂಟಾಗುತ್ತೆ. ಆದರೆ, ಅದನ್ನು ಕೇವಲ ನಾನೊಂದು ಚಿತ್ರ ನೋಡ್ತಾ ಇದೀನಿ ಅನ್ನುವ ದೃಷ್ಟಿಯಿಂದ ನೋಡ್ತಿದ್ದರೆ ಅದರೆಲ್ಲಿ ಇರತಕ್ಕಂಥ ಯಾವುದೇ ಆಗುಹೋಗುಗಳೂ ನಮ್ಮ ಚೇತನಕ್ಕೆ ತಗಲುವುದಿಲ್ಲ.

ಹಾಗೆಯೇ ನಮಗೆ ಉಂಟಾಗುವ ಸುಖ ದುಃಖಗಳನ್ನು ಸಾಕ್ಷೀಭಾವದಿಂದ, ಇವು ಮನಸ್ಸಿನ ಹೊರಗಡೆ ಇವೆ ಎಂಬ ಭಾವನೆಯನ್ನು ಬೆಳೆಸಿಕೊಂಡು ಕಾಣಲಾರಂಭಿಸಿದಾಗ ಜೀವನ ಅರ್ಥಪೂರ್ಣವಾಗುತ್ತದೆ, ಪೂರ್ಣಾನಂದವು ನಮ್ಮದಾಗುತ್ತದೆ.

* * * * *

ಪುನರವಲೋಕನ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೪.೦೮.’೦೩ರಂದು ಪ್ರಕಟವಾಗಿತ್ತು)

ಗ ಶಿವಸೂತ್ರದ ಮುಕ್ತಾಯದ ಹಂತವನ್ನು ತಲುಪಿದ್ದೇವೆ. ಈ ಹಂತದಲ್ಲಿ ಒಂದು ಸಲ ಪುನರವಲೋಕನ ಮಾಡೋಣ.

ದುಃಖ ಎಲ್ಲರಿಗೂ ಜೀವನದಲ್ಲಿ ಬರುತ್ತೆ. ಆದರೆ ನಾವು ಭಾಗ್ಯಶಾಲಿಗಳು ಅನ್ನುವುದನ್ನು ಮಾತ್ರ ನಾವು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬೇಕು. ಸುಖ ದುಃಖಗಳು ಅವುಗಳನ್ನು ನಾವು ವೀಕ್ಷಿಸುವ ಮನೋಭಾವದ ಮೇಲೆ ಅವಲಂಬಿತವಾಗಿರುತ್ತವೆ.. ಭಾಗ್ಯವಿದ್ದುದರಿಂದಲೇ ಮನುಷ್ಯ ಜನ್ಮ ಸಿಕ್ಕಿದೆ. ಹೆಚ್ಚಿನ ಭಾಗ್ಯವಿರುವುದರಿಂದಲೇ ತಿಳುವಳಿಕೆ ಇದೆ, ಜ್ಞಾನದ ಬಗ್ಗೆ ಆಸಕ್ತಿ ಬಂದಿದೆ, ಅಲ್ಲವಾ?

ಎಂಥವರೇ ಆಗಿರಲಿ ಪ್ರತಿಯೊಬ್ಬರ ಜೀವನದಲ್ಲಿಯೂ ಹುಡುಕಿದರೆ ಸ್ವಲ್ಪವಾದರೂ ಸುಖ, ಸಂತೋಷ, ಶುಭ ಇದ್ದೇ ಇದೆ. ವಾಸ್ತವವಾಗಿ ನೋಡಿದರೆ ‘ಒಳ್ಳೆಯದು’ ಶೇಕಡಾ ಎಂಭತ್ತರಷ್ಟು ಇದ್ದರೆ ಸಮಸ್ಯೆಗಳು ಶೇಕಡಾ ಇಪ್ಪತ್ತರಷ್ಟು ಮಾತ್ರ ಇರುತ್ತವೆ. ಜೀವನದಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ಶುಭಸೂತ್ರದಂತೆ ಹಿಡಿದುಕೊಳ್ಳಬೇಕು.

ಒಂದು ಗಾಳೀಪಟ ಮೇಲೆ ಹಾರಬೇಕಿದ್ದರೆ ಒಂದು ಚಿಕ್ಕ ದಾರ ಬೇಕು. ಚಿಕ್ಕ ಸೂತ್ರದ ಸಹಾಯದಿಂದ ಗಾಳಿಪಟವೊಂದು ಎಷ್ಟೋ ಎತ್ತರಕ್ಕೆ ಸಾಗುವುದು ಹೇಗೆ ಸಾಧ್ಯವೋ ಹಾಗೆ, ಶಿವಸೂತ್ರದ ಪ್ರತಿ ಉಕ್ತಿಗೂ ನಮ್ಮ ಚೇತನವನ್ನು ಅನಂತದಲ್ಲಿ ವಿಸ್ತಾರಗೊಳ್ಳುವಂತೆ ಮಾಡುವ ಸಾಮರ್ಥ್ಯವಿದೆ.

ಆದ್ದರಿಂದ ಇದನ್ನು ಮತ್ತೆ ಮತ್ತೆ ಕೇಳಬೇಕು, ಮತ್ತೆ ಮತ್ತೆ ಓದಬೇಕು. ಹಾಗೆ ಪ್ರತಿಸಲ ಇದನ್ನು ಓದಿದಾಗಲೂ, ಕೇಳಿದಾಗಲೂ, ಇನ್ನೂ ಸ್ವಲ್ಪ ಹೊಸದಾಗಿ, ಇನ್ನೂ ಸ್ವಲ್ಪ ಆಳವಾಗಿ ನಮ್ಮ ಮನಸ್ಸು ಇದನ್ನು ಅರ್ಥಮಾಡಿಕೊಳ್ಳಲು ಸಮರ್ಥವಾಗುತ್ತೆ. ಮನಸ್ಸಿನಲ್ಲಿ ಆ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬಹುದು. ಹಾಗೇ ಪುನರುಕ್ತಿಯಿಂದಾಗುವ ಹೆಚ್ಚಿನ ಪ್ರಯೋಜನವನ್ನು ನಾಳೆ ಮತ್ತೊಮ್ಮೆ ಅವಲೋಕಿಸೋಣ.

* * * * *

ನಮಃ ಶ್ರೀ ಶಂಭವೇ ಸ್ವಾತ್ಮಾನಂದ ಪ್ರಕಾಶ ವಪುಷೇ…..

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೫.೦೮.’೦೩ರಂದು ಪ್ರಕಟವಾಗಿತ್ತು)

ಪ್ರಕಾಶಮಯವಾದ ಚೇತನ ನಮ್ಮ ಶರೀರದಲ್ಲಿದೆ. ಆ ಚೇತನ ಮೊದಲು ಇಚ್ಛೆಗಳ, ವಾಸನೆಗಳ, ಜ್ವರಪೀಡಿತವಾದ ಕಾಮನೆಗಳ  ರೂಪದಲ್ಲಿರುತ್ತದೆ. ನಾವು ಸಾಧನೆಯಲ್ಲಿ ಮುಂದುವರಿದ ಹಾಗೆ ಆ ಇಚ್ಛೆ ಕಾಮನೆಗಳೆಲ್ಲವೂ ದಿವ್ಯ ಪ್ರೇಮವಾಗಿ ಬದಲಾಗುತ್ತವೆ, ಆ ಪ್ರೇಮವೂ ಬದಲಾಗಿ ಶುದ್ಧ ಜ್ಞಾನ ಉಂಟಾಗುತ್ತದೆ.

ನಮ್ಮ ಶರೀರದ ಮೂರು ಸ್ತರಗಳಲ್ಲಿ - ನಾಭಿಯಿಂದ ಕೆಳಗೆ ಕಾಮನೆಗಳು (ಬ್ರಹ್ಮಸ್ಥಾನ); ನಾಭಿಯಿಂದ ಕಂಠದವರೆಗೆ ಭಾವನೆಗಳು (ವಿಷ್ಣುಸ್ಥಾನ); ಕಂಠದಿಂದ ತಲೆಯ ತುಟ್ಟತುದಿಯವರೆಗೆ ಇಲ್ಲಿ ಶುದ್ಧಜ್ಞಾನ ಅಥವಾ ಚೈತನ್ಯರೂಪದಲ್ಲಿ (ಶಿವಸ್ಥಾನ) - ನಮ್ಮಲ್ಲಿರುವ ಒಂದೇ ಶುದ್ಧ ಚೈತನ್ಯ ಪ್ರಕಾಶವಾಗುತ್ತದೆ.

ಬ್ರಹ್ಮ ಸೃಷ್ಟಿಕರ್ತ – ಎಲ್ಲ ಕಾಮನೆಗಳನ್ನು ಸೃಷ್ಟಿ ಮಾಡತಕ್ಕಂಥವನು ಬ್ರಹ್ಮ, ವಿಷ್ಣು, ಪಾಲನ ಕರ್ತ- ಪ್ರಪಂಚದಲ್ಲಿ ಎಲ್ಲವೂ ಪಾಲನೆಯಾಗುವುದು ಪ್ರೇಮದಿಂದ ಮಾತ್ರ.

ಮೋಕ್ಷಕರ್ತ, ಸಂಹಾರ ಕರ್ತ, ಜ್ಞಾನಕರ್ತ, ಅದು ‘ಶಿವ’ ನಾಯ್ತು.

ಮೇರುವಿನ ಹಾಗೆ ಅತ್ಯುತ್ತಮ ಶ್ರೇಣಿ ನಮ್ಮ ಜೀವನದಲ್ಲಿ ಬರಬೇಕು. ಆ ಶಿವತತ್ವ ನಮ್ಮಲ್ಲಿ ಉಂಟಾಗಿ ಪ್ರಕಾಶಕ್ಕೆ ಬರಬೇಕು. ಹಾಗಾಗಲು ಮತ್ತೆ ಮತ್ತೆ ಧ್ಯಾನದ ಆಳದಲ್ಲಿ ನಾವು ಮುಳುಗಬೇಕು. ಅಂದರೇನು?

ಹಲವಾರು ಉಪಾಯಗಳನ್ನು ಸೂತ್ರರೂಪದಲ್ಲಿ ಇಲ್ಲಿಯವರೆಗೆ ನಾವು ತಿಳಿದುಕೊಂಡಿದ್ದೀವಿ. ಈ ಜೀವನ ಎನ್ನುವುದು ಪರಮಪದ ಸೋಪಾನ ಎಂದರೆ ಹಾವು ಏಣಿ ಆಟದಂತಿದೆ. ಮೇಲೆ ಹತ್ತುವ ಕೆಳಗೆ ಇಳಿಯುವ ಈ ಜೀವನ ಚಕ್ರದಲ್ಲಿ ಈ “ಶಿವಸೂತ್ರ”ವನ್ನು ನಾವು ಭದ್ರವಾಗಿ ಹಿಡಿದುಕೊಂಡಾಗ, ಇದು ಜೀವನದ ಯಾವ ಕ್ಷೇತ್ರದಲ್ಲೂ, ಯಾವ ಪರಿಸ್ಥಿಯಲ್ಲೂ, ಯಾವ ಕ್ಷಣದಲ್ಲೂ ನಮಗೆ ಉಪಯೋಗವಾಗುತ್ತದೆ, ಅನುಕೂಲವೆನಿಸುತ್ತದೆ.

* * * * *

ಅಜ್ಞಾನವೇ ದುಃಖಕ್ಕೆ ಮೂಲ 

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೬.೦೮.’೦೩ರಂದು ಪ್ರಕಟವಾಗಿತ್ತು)

“ಸುಖದುಃಖಯೋರ್ಬಹಿರ್ಮನನಮ್..."

ಸುಖ ದುಃಖಗಳು ಹೊರಗಿನ ವೃತ್ತಿಗಳು ಎಂಬುದನ್ನು ಮತ್ತೆ ಮತ್ತೆ ಮನನ ಮಾಡು. ಜೀವನದಲ್ಲಿ ದುಃಖ ಎಂತೆಂಥಹವರಿಗೂ ಬರುತ್ತೆ. ಆದರೆ, ಜ್ಞಾನಿಗಳ ದುಃಖಕ್ಕೂ ‘ನಾವೇ ಅದು’ ಎಂಬ ರೀತಿಯ ತಾದಾತ್ಮ್ಯವನ್ನು ಉಂಟುಮಾಡಿಕೊಂಡು ದುಃಖಿಸುವವರಿಗೂ ತುಂಬಾ ವ್ಯತ್ಯಾಸವಿದೆ.

ಹೇಗೆ ಅಂದರೆ ಪ್ರಶಾಂತವಾದ ಸರೋವರದಲ್ಲಿ ನಿಮ್ಮ ಪ್ರತಿಬಿಂಬ ನೋಡಿಕೊಳ್ಳುತ್ತಿರುತ್ತೀರ, ಆಗ ಎಲ್ಲಿಂದಲೋ ಒಂದು ಕಲ್ಲು ಬಿದ್ದು ಪ್ರತಿಬಿಂಬ ’ಕದಡಿ ಹೋಗಿಬಿಟ್ಟೆ, ಮುಳುಗಿಹೋಗಿಬಿಟ್ಟೆ’ ಎಂದು ಕೂಗಿಕೊಳ್ಳುವಂತೆ ಅಜ್ಞಾನದಲ್ಲಿದ್ದಾಗ ನಾವೂ ದುಃಖಿಸುತ್ತೀವಿ.

ನಮ್ಮ ಮನಸ್ಸು ತೀರಾ ಮೌಢ್ಯದಿಂದ ತುಂಬಿದ್ದಾಗ ಎಷ್ಷೇ ಓದಿದರೂ, ಎಷ್ಟೇ ಪ್ರವಚನ ಕೇಳಿದರೂ ಎನೇ ಮಾಡಿದರೂ ಪ್ರಯೋಜನವಿಲ್ಲ. ಮುಗ್ಧತೆಯಿಂದ, ಸಹಜತೆಯಿಂದ ಮೌಢ್ಯವನ್ನು ದೂರಮಾಡಿಕೊಳ್ಳುಬೇಕು. ಆಗ ಮನಸ್ಸು ಪೂರ್ಣವಾಗಿ ವರ್ತಮಾನದಲ್ಲಿ ಜಾಗೃತಗೊಳ್ಳುತ್ತದೆ. ಆ ಜಾಗೃತವಾದ ಚೇತನದಲ್ಲಿ ‘ನಮ:’ ಉಂಟಾಗುತ್ತದೆ.

ಮನಸ್ಸು ಅಂತರ್ಮುಖವಾಗಿ ಶಾಂತಿಯನ್ನು, ಶರಣಾಗತಿಯನ್ನು ಹೊಂದುತ್ತದೆ. ಶರಣಾಗತಿ ಹೊಂದಿದ ಮನಸ್ಸಿನಲ್ಲಿ “ನಮ: ಶ್ರೀ ಶಂಭವೇ ಸ್ವಾತ್ಮಾನಂದ ಪ್ರಕಾಶವಪುಷೇ …” ಉಂಟಾಗುತ್ತದೆ. ಇದು ಶಿವಸೂತ್ರದ ಮೊದಲನೆಯ ಸೂತ್ರ ಹಾಗೂ ಫಲಶೃತಿ ಸಹ. (ಎಂದರೆ ಉಂಟಾಗತಕ್ಕಂಥ ಫಲ)

* * * * *