ಮಂಗಳವಾರ, ಆಗಸ್ಟ್ 27, 2013

ಹರ್ಷ ಚಿತ್ತದಲ್ಲಿ ಸಹಜತೆಯಿದೆ

ಆಗಸ್ಟ್ ೨೭, ೨೦೧೩
ಬೆಂಗಳೂರು, ಭಾರತ

ಪ್ರ: ಗುರುದೇವ, ಬೌದ್ಧ ಮತೀಯರು ದೇವರನ್ನು ನಂಬುವುದಿಲ್ಲ ಎನ್ನುತ್ತಾರೆ. ಭಗವಾನ್ ಬುದ್ಧನೂ ನಾವು ಮೂರ್ತಿ ಪೂಜೆ ಮಾಡಬಾರದು ಎಂದು ಹೇಳಿದ್ದರು. ಈಗ ಅವರೂ ಒಬ್ಬ ಪ್ರಬುದ್ಧ ಜೀವಿ, ಅವರು ಯಾವ ಅರ್ಥದಿಂದ ಹಾಗೆ ನುಡಿದರು?

ಶ್ರೀ ಶ್ರೀ:
ಭಗವಾನ್ ಬುದ್ಧ ಎಂದೂ ದೇವರ ಬಗ್ಗೆ ಮಾತನಾಡಲಿಲ್ಲ. ಅವರು ದೇವರ ಕುರಿತು ಸಂವಾದಗಳಿಗೆ ಎಂದೂ ಆಸ್ಪದ ನೀಡಲಿಲ್ಲ. ಅವರು ಹೇಳಿದ್ದೇನೆಂದರೆ-ಮೊದಲನೆಯದಾಗಿ ದುಃಖವಿರುವುದನ್ನು ಮನಗಾಣಿ. ಜನರು ದುಃಖವನ್ನು ನಿರಾಕರಿಸುತ್ತಾ ಇರುತ್ತರೆ, ಹಲವಾರು ಜನ ಅದನ್ನು ಗುರುತಿಸುವುದೂ ಇಲ್ಲ. ಬಹಳ ಸಲ ನೀವು ಅಸ್ವಸ್ಥ ವ್ಯಕ್ತಿಯನ್ನು ಮಾತನಾಡಿಸಿದಾಗ ಅವನು ಹೇಳುವುದು "ನಾನು ಆರಾಮವಾಗಿದ್ದೇನೆ ಹಾಗೂ ಆರೋಗ್ಯದಿಂದಿದ್ದೇನೆ". ಅಹಂ ಹೆಚ್ಚಿದ್ದಷ್ಟು ಆ ವ್ಯಕ್ತಿಯು ಜಾಸ್ತಿ ನಿರಾಕರಿಸುತ್ತಾನೆ.

ಬಹಳ ಸಲ ಜನರು ಒಳಗಿನಿಂದ ದುಃಖಿಗಳಾಗಿರುತ್ತಾರೆ, ಆದರೆ ಅವರು ಲವಲವಿಕೆಯ ಮುಖವಾಡ ಧರಿಸುತ್ತಾರೆ ಅಥವಾ ಬಾಹ್ಯವಾಗಿ ಆತ್ಮ ವಿಶ್ವಾಸದ ಹಾಗೂ ಆಳ್ವಿಕೆಯ ಸ್ವಭಾವದವರಂತೆ ನಡೆದುಕೊಳ್ಳುತ್ತಾರೆ. ಅವರು ಎಲ್ಲವೂ ಸರಿಯಾಗಿರುವಂತೆ ನಟಿಸುತ್ತಲೇ ಇರುತ್ತಾರೆ, ಆದರೂ ದುಃಖ ಅವರ ಮುಖದಿಂದ ತೊಟ್ಟಿಕ್ಕುತ್ತಿರುವುದನ್ನು ನೀವು ನೋಡಬಹುದು. ಅವರ ಶರೀರದ ಪ್ರತಿ ಅಂಗವು ಕ್ರೋಧ, ಕಹಿತನ, ದ್ವೇಷ ಹಾಗೂ ದುಃಖವನ್ನು ಪ್ರತಿಬಿಂಬಿಸುತ್ತದೆ. ಭಗವಾನ್ ಬುದ್ಧ ಹೇಳಿರುವುದು ಇದನ್ನೇ- ದುಃಖ ಇದೆ ಎಂದು. ಅದನ್ನು ಗುರುತ್ತಿಸಿ, ಮತ್ತು ಆಗ ಅದಕ್ಕೆ ಪರಿಹಾರೋಪಾಯಗಳಿವೆ. ಯಾರಾದರೂ ದುಃಖಿಯಾಗಿರುವುದು ನನ್ನ ಸ್ವಭಾವ ಎಂದು ಹೇಳಿದರೆ, ಅದರ ಬಗ್ಗೆ ಯಾರಿಗೂ ಏನು ಮಾಡಲೂ ಸಾಧ್ಯವಿಲ್ಲ, ಸಾಕ್ಷಾತ ಆ ಭಗವಂತನಿಂದಲೂ ಸಾಧ್ಯವಿಲ್ಲ. ಹಾಗಾಗಿ ದುಃಖವು ನಮ್ಮ ಸ್ವಭಾವವಲ್ಲ, ಅದು ಸಂಸ್ಕಾರದಿಂದಾಗಿ ಅಥವ ಕರ್ಮದಿಂದಾಗಿ ಬರುವುದು. ಹಾಗೂ ಇದನ್ನು ಬೇರೆ ಸಂಸ್ಕಾರಗಳಿಂದ ತೆಗೆಯಬಹುದು. ಇದಕ್ಕೆ ಒಂದು ಪರಿಹಾರವೆಂದರೆ ಪ್ರತ್ಯಾಹಾರ(ಅಷ್ಟಾಂಗ ಯೋಗಗಳಲ್ಲಿ ಒಂದು, ಪ್ರತ್ಯಾಹಾರವೆಂದರೆ ಇಂದ್ರಿಯ ನಿಗ್ರಹ ಹಾಗೂ ಅವುಗಳ ಅಂತರ್ಮುಖತೆ). ಇದಕ್ಕೆ ಇನ್ನೊಂದು ಪರಿಹಾರವೆಂದರೆ ಧ್ಯಾನ. ಹಾಗಾಗಿ ಧ್ಯಾನ, ಪ್ರಾಣಾಯಾಮ ಮತ್ತು ಸತ್ಸಂಗಗಳ ಮೂಲಕ ನಾವು ವ್ಯಸನಗಳಿಂದ(ದುಃಖ) ಮುಕ್ತರಾಗಬಹುದು. ನಮ್ಮ ಸ್ವಭಾವ ಎಂಬುದು ಸಂತೋಷ ಹಾಗೂ ಪರಮಾನಂದ ಎಂದು ಆಗ ನಾವು ಅರಿತುಕೊಳ್ಳುವುದು. ಬೆಳಕು ಕತ್ತಲನ್ನು ನಿರ್ಮೂಲನಗೊಳಿಸಿದಂತೆ ನಮ್ಮ ಆತ್ಮ ಶಕ್ತಿಯು(ಜಾಗೃತ ಚೈತನ್ಯ) ದುಃಖವನ್ನು ನಿರ್ಮೂಲನಗೊಳಿಸುತ್ತದೆ. ಸಾಧನೆಯ ಪಥದಲ್ಲಿ, ಎಲ್ಲಾ ಋಣಾತ್ಮಕತೆ ಹಾಗೂ ವಿಕಾರಗಳಾಗಿರುವ ಭಯ, ಸಿಟ್ಟು ಇತ್ಯಾದಿ ಕುಸಿದು ಹೋಗುತ್ತವೆ. ಸಾಧನೆಯ ಗುರಿಯೆಂದರೆ ನಮ್ಮ ಮೂಲ ಸ್ವಭಾವದ ಅಂಗವೇ ಆಗಿರುವ ಆ ಅವರ್ಣನೀಯ ಪರಮಾನಂದದಲ್ಲಿ ಲೀನರಾಗುವುದು.

ಭಗವಾನ್ ಬುದ್ಧ ಉಪನಿಷತ್ತುಗಳಲ್ಲಿರುವ ವಿಷಯಗಳನ್ನೇ ಹೇಳಿದ್ದರು. ಒಂದು ಶ್ಲೋಕ ಹೀಗಿದೆ:

ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತ ತ್ವಮನಸುಃ |
ಪರೇನ ನಕಂ ನಿಹಿತಂ ಗುಹ್ಯಂ ವಿಭ್ರಾತೇ ಯದ್ಯತಯೋ ವಿಷಂತಿ ||
(ಸನ್ಯಾಸ ಸೂಕ್ತ, ಮಹಾ ನಾರಾಯಣೋಪನಿಷತ್, ೪.೧೨)


ಅನ್ವಯಾರ್ಥ: ನಮ್ಮ ಕರ್ಮಗಳಿಂದಾಗಲಿ, ಅಥವಾ ಉತ್ತಮ ಸಂತಾನದಿಂದಾಗಲಿ, ಅಥವಾ ಧನ ಸಂಪತ್ತಿನಿಂದಾಗಲಿ ನಮಗೆ ಪರಮಾತ್ಮನನ್ನು ಹೊಂದುವುದು ಸಾಧ್ಯವಿಲ್ಲ. ಕೇವಲ ತ್ಯಾಗ ಅಥವಾ ವಿರಕ್ತಿಯಿಂದ ನಮಗೆ ಅಮರತ್ವವನ್ನು ಹೊಂದಲು ಸಾಧ್ಯ. ಭಗವಾನ್ ಬುದ್ಧ ಹೇಳಿರುವುದೂ ಇದನ್ನೇ. ನೀವು ಉಪನಿಷತ್ತುಗಳನ್ನು ಗಮನಿಸಿ ಆನಂತರ ಭಗವಾನ್ ಬುದ್ಧ ಹೇಳಿರುವುದನ್ನು ಓದಿದರೆ, ಅವೆರಡೂ ಒಂದೇ ಎಂದು ನೀವು ತಿಳಿದುಕೊಳ್ಳುತ್ತೀರಿ. ಅವುಗಳಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ.

ಆದ್ದರಿಂದಲೇ ಶ್ರೀ ಆದಿ ಶಂಕರಾಚಾರ್ಯರನ್ನು ’ಪ್ರಚ್ಚನ್ನ ಬೌದ್ಧ’(ಅರ್ಥ: ಸುಪ್ತ ಅಥವ ಅಪ್ರಕಟಿತ ಬುದ್ಧ) ಯಾಕೆಂದರೆ, ಅವರು ಏನೇ ಹೇಳಿದ್ದರೂ ಅದು ಬೌದ್ಧ ಗ್ರಂಥಗಳಲ್ಲಿ ಹೇಳಿರುವುದಕ್ಕೆ ಅಷ್ಟೊಂದು ಹೋಲುತ್ತದೆ. ಹಾಗಾಗಿ ಸನಾತನ ಧರ್ಮ(ಹಿಂದೂ ಧರ್ಮದ ಇನ್ನೊಂದು ಹೆಸರು) ಹಾಗೂ ಬೌದ್ಧ ಧರ್ಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ತತ್ತ್ವಗಳು ಸುಮಾರಾಗಿ ಒಂದೇ ಆಗಿವೆ. ಅವೆರಡೂ ಚಾಚೂ ತಪ್ಪದಷ್ಟು ಒಂದೇ ಆಗಿವೆ ಎಂಉ ನಾನು ಹೇಳುವುದಿಲ್ಲ, ಆದರೆ ಅವು ತತ್ತ್ವತಃ ಬಹಳ ಸಮೀಪವಾಗಿವೆ. ಬೌದ್ಧ ಧರ್ಮೌ ಶೂನ್ಯವಾದವನ್ನು ಪ್ರತಿಪಾದಿಸುತ್ತದೆ("ಎಲ್ಲವೂ ಏನೂ ಅಲ್ಲ" ಎಂಬ ಅರಿವು; ಸಂಸ್ಕೃತದಲ್ಲಿ ಶೂನ್ಯ ಎಂದರೆ ಸೊನ್ನೆ ಅಥವಾ ಇಲ್ಲದಿರುವುದು), ಹಾಗೂ ವೇದಾಂತವು ಪೂರ್ಣವಾದವನ್ನು(ಎಲ್ಲವೂ ಒಂದು ಮತ್ತು ಸಂಪೂರ್ಣ ಎಂಬ ಪ್ರಧಾನ ನಂಬಿಕೆ) ಪ್ರತಿಪಾದಿಸುತ್ತದೆ. ಬೌದ್ಧ ಧರ್ಮದಲ್ಲಿ ಮೊದಲ ಮುಖ್ಯ ಹೆಜ್ಜೆ ಎಂದರೆ ದುಃಖದ ಅರಿವು, ಅಂತೆಯೇ ವೇದಾಂತದಲ್ಲಿ ಹೇಳುವುದೇನೆಂದರೆ ಯಾವುದೇ ದುಃಖವಿಲ್ಲ ಎಂದು. ಅವರು ಹೇಳುವುದು - "ಎಚ್ಚೆತ್ತು ನೋಡು! ನೀನು ಸಂಪೂರ್ಣ ಆನಂದದಿಂದ ತುಂಬಿರುವೆ(ಆತ್ಮವು ಪರಮಾನಂದ)".

ಹೀಗೆ, ಬೌದ್ಧ ಮತದಲ್ಲಿ ಅದೃಶ್ಯವಾದಾಗ ಆನಂದವನ್ನು ಕಾಣಲಾಗುತ್ತದೆ ಹಾಗೂ ವೇದಾಂತದಲ್ಲಿ (ಆತ್ಮದ) ಆನಂದವನ್ನು ಮನಗಂಡಾಗ, ದುಃಖವು ತಾನಾಗಿಯೇ ಕಾಣೆಯಾಗುತ್ತದೆ. ಹಾಗೆ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ, ಇವು ಎರಡು ವಿವಿಧ ದೃಷ್ಟಿಕೋನಗಳು. ಆದರೆ ಗುರಿಯು ಒಂದೇ ಆಗಿದೆ. ವೇದಾಂತದಲ್ಲಿಯೂ, ಮೂರ್ತಿ ಪೂಜೆಯನ್ನು ಅಗತ್ಯವಾಗಿ ಮಾಡಲೇಬೇಕು ಎಂದು ಹೇಳಿಲ್ಲ. ಆತ್ಮ ದೇವತೆಯನ್ನು(ಶರೀರ ಎಂಬ ದೇವಾಲಾದಲ್ಲಿ ವಾಸವಾಗಿರುವ ಆತ್ಮ ಎಂಬ ಭಗವಂತ ) ಆರಾಧಿಸುವುದು ಅತ್ಯುನ್ನತ ಬಗೆಯ ಆರಾಧನೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಪ್ರಾರಂಭಿಕವಾಗಿ, ಆರಾಧನೆಯ ಆ ಮಟ್ಟವನ್ನು ತಲುಪುವುದಕ್ಕೆ ಯುಕ್ತವಾದ ಪರಿಸರ ಹಾಗೂ ವಾತಾವರಣ ಅಗತ್ಯ. ಇದಕ್ಕಾಗಿಯೇ ಪೂಜೆ ಇರುವುದು. ಆತ್ಯಂತಿಕವಾಗಿ/ಮೂಲಭೂತವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ನೀವು ಅರಿಯುವುದೇನೆಂದರೆ ಎಲ್ಲವೂ ನಿಮ್ಮಾತ್ಮನದೇ ವಿಸ್ತಾರವಾಗಿದೆ, ಎಲ್ಲವೂ ಆ ಒಂದು ಆತ್ಮನ ವ್ಯಕ್ತರೂಪವಾಗಿ ಕಂಡುಬರುತ್ತದೆ. ಈ ಜಗತ್ತು ಹಾಗೂ ಮರಗಳಲ್ಲಿ, ವಿಗ್ರಹಗಳಲ್ಲಿ, ಭೂಮಿಯಲ್ಲಿ, ನೀರಿನಲ್ಲಿ, ಆಗಸದಲ್ಲಿ, ಎಲ್ಲೆಲ್ಲೂ ಇರುವ ಆತ್ಮನ(ಬ್ರಹ್ಮ) ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅರಿತಾಗ; ಆ ಹಂತದಲ್ಲಿ ಯಾವುದನ್ನಾದರೂ ಹಾಗೂ ಎಲ್ಲಾದರೂ ಆರಾಧನೆ ಮಾಡಬಹುದು.(ಅರ್ಥ: ಎಲ್ಲವೂ ಒಬ್ಬ ಪರಮಾತ್ಮನ ವ್ಯಕ್ತರೂಪವಾಗಿವೆ ಎಂದು ಮನಗಾಣುವ ಸ್ಥಿತಿಯನ್ನು ತಲುಪುವುದು).

ರುದ್ರ ಪೂಜೆಯಲ್ಲೂ ಇರುವ ಒಂದು ನಿಯಮ ಹೀಗೆ "ನ ರುದ್ರಂ ರುದ್ರಂ ಅರ್ಚಯತಿ" , ಅಂದರೆ ನೀವು ತಾನೂ ಭಗವಾನ್ ಶಿವನಾಗುವ ತನಕ(ನಿಮ್ಮ ಸ್ವಂತ ನೈಜ ದೈವೀ ಸ್ವಭಾವವನ್ನು ಅರಿಯುವ ತನಕ), ನೀವು ಭಗವಂತನನ್ನು ಆರಾಧಿಸುವಂತಿಲ್ಲ. ಹಾಗಾಗಿ ನೀವು ಮೊದಲು ಭಗವಂತನಾಗಬೇಕು ಆನಂತರ ಅವನನ್ನು ಆರಾಧಿಸಬೇಕು. ಇದರ ಅರ್ಥ ಎಂದರೆ ಆತ್ಮನಲ್ಲಿ ಸ್ಥಿರವಾಗಿರುವುದು. ಹಾಗಾಗಿ ಭಗವಂತನಾದ ಬಳಿಕ, ಆತ್ಮನಲ್ಲಿ ಸ್ಥಿತರಾಗಿರುವಾಗ ಭಗವಂತನನ್ನು ಆರಾಧಿಸಿ ಎಂದು ಹೇಳಲಾಗಿದೆ. ಪೂಜೆ ಎಂದರೆ ಕೇವಲ ಒಂದು ಆಟ, ಒಂದು ಲೀಲೆ, ಆರಾಧನೆಯ ಈ ಆಳವಾದ ಭಾವನೆಯನ್ನು ವ್ಯಕ್ತ ಪಡಿಸುವ ಒಂದು ರೀತಿ.

ಪ್ರ: ಗುರುದೇವ, ನೀವು ಹೇಳುವುದು ’ಸುಖಸ್ಯ ದುಃಖಸ್ಯ ನಕೋಪಿ ದಾತಾ’(ನಮ್ಮ ಮನಸ್ಸನ್ನು ಹೊರತು ಯಾರೂ ನಮಗೆ ಸುಖ ಅಥವಾ ದುಃಖವನ್ನು ಕೊಡುವುದಿಲ್ಲ). ಹಾಗಾದರೆ ನಮ್ಮ ಕ್ರಿಯೆಗಳಿಂದ ಬೇರೆಯವರ ಮೇಲೆ ಯಾವ ಪರಿಣಾಮವೂ ಇಲ್ಲವೇ?

ಶ್ರೀ ಶ್ರೀ:
ನಾವೇನು ಮಾಡುತ್ತೇವೋ ಅದು ಬೇರೆಯವರ ಮೇಲೆ ಅವರು ತೆಗೆದುಕೊಳ್ಳುವಷ್ಟು ಪರಿಣಾಮ ಮಾತ್ರ ಬೀರುತ್ತದೆ(ಅಂದರೆ ಅವರು ಅದನ್ನು ಸ್ವೀಕರಿಸುವಷ್ಟು ಅಥವಾ ಅದರ ಪ್ರಭಾವಕ್ಕೊಳಗಾಗಲು ಇಚ್ಚಿಸಿದಷ್ಟು ಮಾತ್ರ). ಅವರು ಅದನ್ನು ಸ್ವೀಕರಿಸದಿದ್ದರೆ, ಒಳ್ಳೆಯದಿರಲಿ ಕೆಟ್ಟದಿರಲಿ ಅದು ಅವರನ್ನು ಏನಾದರೂ ಪರಿಣಮಿಸುವುದೇ ಇಲ್ಲ. ಡಯೋಜೆನೆಸ್ ಎಂಬ ಒಬ್ಬ ಸನ್ಯಾಸಿ ಅಲೆಕ್ಸಾಂಡರನಿಂದ ಬಂಧಿಸಲ್ಪಟ್ಟಿದ್ದ. ಅಲೆಕ್ಸ್ಂಡರನು ಅವನನ್ನು ಸರಪಳಿಗಳಿಂದ ಸುತ್ತಿ ಕೈಬೇಡಿ ಕಟ್ಟಿದ್ದ.  ಅವನನ್ನು ಆಳನ್ನಾಗಿ ಮಾರುಕತ್ತೆಯಲ್ಲಿ ನಿಲ್ಲಿಸಿದಾಗ ಅವನೆಷ್ಟು ವಿಷ್ವಾಸ ಹಾಗೂ ಗಟ್ಟಿಯಾಗಿದ್ದನೆಂದರೆ ಅವನನ್ನು ಕಟ್ಟಿ ಹಾಕಿದವರು ಆಳುಗಳಂತೆ ತೋರುತ್ತಿದ್ದರು. ಡಯೋಜೆನಿಸ್ ಒಬ್ಬ ಆಳಿನಂತೆ ತೋರುತ್ತಲೇ ಇರಲಿಲ್ಲ. ಹಾಗಾಗಿ ನಾವೇನೇ ಮಾಡಿದರೂ ಅದನ್ನು ಜನರು ಸ್ವೀಕರಿಸಿದಷ್ಟೇ ಅದು ಅವರನ್ನು ಪ್ರಭಾವಿಸುತ್ತದೆ.

ನೀವು ಯಾರ ಮೇಲಾದರೂ ಬೈಗುಳನ್ನು ಹೇರಿದಾಗ ಅವರು ಅದನ್ನು ಕೇಳಿಸಿಕೊಳ್ಳದೇ ಅದರ ಬದಲು ನೀವು ಬೇರೆ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ ಎಂದು ಯೋಚಿಸಿದರೆ ಅಥವಾ ಈವು ಅವರನ್ನು ಹೊಗಳುತ್ತಿದ್ದೀರಿ ಎಂದು ಯೋಚಿಸಿದರೆ, ಆಗ ನಿಮ್ಮ ಮಾತುಗಳು ಅವನ ಮೇಲೆ ಎಷ್ಟು ಪ್ರಭಾವ ಬೀರಬಹುದು? ನೀವು ಏನೋ ಬಹಳ ವಿವೇಕಯುಕ್ತವಾದದ್ದನ್ನು ಮಾತನಾಡುತ್ತಿದ್ದೀರಿ ಎಂದು ಹೇಳೋಣ, ನೀವೇನೋ ಜ್ಞಾನಯುಕ್ತವಾದ ಸಲಹೆ ನೀಡುತ್ತಿರಬಹುದು ಆದರೆ ಆ ಇನ್ನೊಬ್ಬ ವ್ಯಕ್ತಿ ನಿಮ್ಮ ಮಾತನ್ನು ಸ್ವಲ್ಪವೂ ಕೇಳದೇ ಕಲ್ಲಿನಂತೆ ಕುಳಿತಿರಬಹುದು, ಆಗ ನಿಮ್ಮ ಮಾತು ಅವನ ಮೇಲೆ ಏನು ಪ್ರಭಾವ ಉಂಟುಮಾಡುತ್ತದೆ? ಆ ವ್ಯಕ್ತಿಯು ನೀವಿ ಹೇಳುತಿರುವುದನ್ನು ಗ್ರಹಿಸಿಕೊಂಡು ಅದನ್ನು ತನ್ನೊಳಗೆ ಸ್ವೀಕರಿಸಲು ನಿರ್ಧರಿಸುವ ತನಕ, ಅವನು ಅದರಿಂದ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪ್ರಭಾವಿತವಾಗುವುದಿಲ್ಲ.

ಇದರ ಅರ್ಥ ನೀವು ಜನರಿಗೆ ದುಃಖ ಅಥವಾ ಕಷ್ಟ ಕೊಡಬೇಕೆಂದಲ್ಲ. ’ಸುಖಸ್ಯ ದುಃಖಸ್ಯ ನ ಕೋಪಿ ದಾತಾ’ ಎಂದರೆ ಬೇರೆಯವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಕಷ್ಟ ಕೊಡುತ್ತಿರಬೇಕೆಂದಲ್ಲ. ನೀವು ಬೇರೆಯವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸೂಕ್ಷ್ಮವಾಗಿರಬೇಕು. ನಿಮಗಾಗುವುದು ಯಾವುದು ನಿಮಗ್ಷ್ಟವಿಲ್ಲವೋ, ನೀವದನ್ನು ಬೇರೆಯವರಿಗೆ ಯಾಕೆ ಮಾಡಬೇಕು? ಇದು ಧರ್ಮ. ಹಾಗೆ, ಯಾರಾದರೂ ನಮ್ಮನ್ನು ನಿಂದಿಸಿದರೆ ನಾವು ದುಃಖ ಪಡುತ್ತೇವೆ. ಹೀಗಿರುವಾಗ, ನಾವೂ ಇತರರನ್ನು ನಿಂದಿಸಬಾರದು. ಮತ್ತು ನಮ್ಮಿಂದ ಜನರು ಕದಿಯುದನ್ನು ನಾವು ಇಷ್ಟಪಡದಿರುವಾಗ, ನಾವೂ ಇತರರಿಂದ ಕದ್ದುಕೊಳ್ಳಬಾರದು. ಹೀಗೆ, ನಮಗೆ ಯಾವುದೆಲ್ಲಾ ಇಷ್ಟವಾಗುವುದಿಲ್ಲವೋ, ನಾವು ಅದನ್ನು ಇತರರಿಗೆ ಉಂಟುಮಾಡಬಾರದು. ಈ ಸರಳ ಭಾವನೆಯು ಧರ್ಮದ ಸಾರಾಂಶ-ನಮ್ಮ ಕರ್ತವ್ಯದ ಜ್ಞಾನ.

ಪ್ರ: ಗುರೂಜಿ, ರಾಧೆ ಮತ್ತು ಕೃಷ್ಣರ ನಡುವಿನ ಸಂಬಂಧ ಎಂತಹುದು? ಕೃಷ್ಣನ ಪತ್ನಿಗೂ ರಾಧೆಯ ದೊರೆತ ಸ್ಥಾನ ದೊರೆಯಲಿಲ್ಲ, ಅವರ ಸಂಬಂಧದ ಅಂಥ ವೈಶಿಷ್ಟ್ಯವೇನು?

ಶ್ರೀ ಶ್ರೀ:
ನಾನು ಶ್ರೀಮದ್ಭಾಗವತಂ ದಿಲ್ಲವಾದರೂ, ಅದರಲ್ಲಿ ಎಲ್ಲಿಯೂ ರಾಧೆಯ ಉಲ್ಲೇಖವಿಲ್ಲ ಎಂದು ನಾನು ಕೇಳಿದ್ದೇನೆ. ’ರಾಧೆ’ ಎಂಬ ಪದದ ಅರ್ಥವೇ ನಿಮ್ಮ ಮೂಲಕ್ಕೆ ಮರಳುವುದು. ’ಧಾರಾ’ ಎಂದರೆ ಮೂಲದಿಂದ ಬರುವಂಥದ್ದು, ಅಂತೆಯೇ ’ರಾಧ್’ ಎಂದರೆ ಮೂಲಕ್ಕೆ ಮರಳುವಂಥದ್ದು. ಹೀಗೆ ರಾಧಾ ಒಂದು ಶಕ್ತಿ (ದೈವೀ ಶಕ್ತಿ). ನಾವು ನಮ್ಮ ಮೂಲಕ್ಕೆ ಮರಳುವ ತನಕ ನಾವು ಭಗವಾನ್ ಶ್ರೀ ಕೃಷ್ಣನನ್ನು ಅನುಭವಿಸಲು ಆಗುವುದಿಲ್ಲ. ಯಾಕೆ ಹೀಗೆ? ಯಾಕೆಂದರೆ ಭಗವಾನ್ ಕೃಷ್ಣನು ಮೂಲ ಮತ್ತು ರಾಧೆಯು ಮೂಲಕ್ಕೆ ದಾರಿ ಅಥವಾ ಮಾರ್ಗ. ಹಾಗಾಗಿ ನೀವು ರುಕ್ಮಿಣಿಯೋ ಅಥವಾ ಸತ್ಯಭಾಮೆಯೋ ಆಗಿದ್ದರೂ (ಶ್ರೀ ಕೃಷ್ಣನ ಪ್ರಮುಖ ಭಾರ್ಯೆಯರು), ನೀವು ರಾಧೆಯಾಗುವ ತನಕ, ನೀವು ಆ ಮೂಲಕ್ಕೆ ಮರಳುವ ತನಕ, ನೀವು ಭಗವಾನ್ ಕೃಷ್ಣನನ್ನು ಪಡೆಯಲು ಸಾಧ್ಯವಿಲ್ಲ. ಇದು ಈ ಸಾಂಕೇತಿಕತೆಯ ಹಿಂದೆ ಅಡಗಿರುವ ಅರ್ಥ.

ಪ್ರ: ಗುರೂಜಿ, ಕೆಲವೊಮ್ಮೆ ಯೋಗದ ಪಥದಲ್ಲಿ ಸಿದ್ಧಿ ಹೊಂದುತ್ತೇವೆ, ಈ ಸಿದ್ಧಿಗಳು ಕೆಲವೊಮ್ಮೆ ನಮ್ಮನ್ನು ಆಕರ್ಷಿಸಿ ದಾರಿ ತಪ್ಪಿಸುವುದು ಸಾಧ್ಯ. ನಾವು ಈ ಸಿದ್ಧಿಗಳಿಂದ ದೂರ ಓಡದೇ ಅವುಗಳನ್ನು ಹೇಗೆ ನಿಭಾಯಿಸುವುದು?

ಶ್ರೀ ಶ್ರೀ:
ಅದರ ಬಗ್ಗೆ ಜಾಸ್ತಿ ಗಮನವಹಿಸುವುದು ಬೇಡ. ಅದರ ಹಿಂದೆ ಓಡಬೇಡಿ. ಈ ಮಾರ್ಗದಲ್ಲಿ ನಿಮಗೆ ಅಂಥ ಹಲವು ವಿಷಯಗಳು ಒದಗುತ್ತವೆ. ನಿಮ್ಮಲ್ಲಿ ಹಲವು ಮಂದಿಯೂ ಇದನ್ನು ಅನುಭವಿಸಿರಬೇಕು. ಅದಕ್ಕೆ ಅಧಿಕ ಪ್ರಾಮುಖ್ಯವನ್ನು ನೀಡಬೇಡಿ. ನೀವೊಂದು ಸ್ಥಳಕ್ಕೆ ಹೋದಾಗ ಒಬ್ಬರು ನಿಮ್ಮ ಭೇಟಿ ಪತ್ರ(ವಿಸಿಟಿಂಗ್ ಕಾರ್ಡ್) ಕೇಳಿದರೆ ಅವರಿಗೊಂದು ಚೀಟಿ ನೀಡುವಿರಿ ಆದರೆ ನೀವು ಆ ಪರಿಚಯ ಚೀಟಿಯಲ್ಲ. ಹಾಗಾಗಿ ಆತ್ಮನಲ್ಲಿ, ತನ್ನಲ್ಲಿ ಸ್ಥಿರವಾಗಿ ಇರಿ. ಅದು ಗುರಿ.

ಪ್ರ: ಗುರೂಜಿ, ನನಗೆ ನನ್ನ ಸನಿಹದವರ ಪ್ರೀತಿಪಾತ್ರರ ಮರಣದ ಭಯವಿದೆ. ದಯವಿಟ್ಟು ಈ ಭಯವನ್ನು ಹೇಗೆ ಮೀರುವುದು ಎಂದು ತಿಳಿಹೇಳಿ.


ಶ್ರೀ ಶ್ರೀ:
ಈ ಲೋಕದಲ್ಲಿ ಯಾರಾದರೂ ನಿಮಗೆ ಸೇರದವರು ಇದ್ದಾರೆಯೇ? ನಿಮಗೆ ಯಾರು ಪರಕೀಯ? ಸುಮನೆ ಗಮನಿಸಿ. ಭಗವಂತನ ಮೇಲಿನ ನಿಮ್ಮ ವಿಶ್ವಾಸ ಇಲ್ಲಿ ಮುಖ್ಯವಾದುದು. ಸುಮ್ಮನೆ ದೇವರನ್ನು ನಂಬಿ, ಅವನಿದ್ದಾನೆ ಮತ್ತು ಅವನು ನಿಮಗಾಗಿ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ತಿಳಿದಿರಿ. ಅವನು ನಿಮ್ಮನ್ನು ಎಲ್ಲಾ ಕಾಲಗಳಲ್ಲೂ ನೋಡಿಕೊಳ್ಳುತ್ತಾನೆ. ಭಗದ್ಗೀತೆಯಲ್ಲಿ ಭಗವಾನ್ ಕೃಷ್ಣನು ಹೇಳುತ್ತಾನೆ:

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೆ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗ-ಕ್ಷೇಮಂ ವಹಾಮ್ಯಹಂ || (೯.೨೨)


ಭಗವಾನ್ ಕೃಷ್ಣ ಹೇಳುತ್ತಾನೆ, ಒಮ್ಮೆ ನೀವು ಭಗವಂತನಿಗೆ ಶರಣಾದ ಮೇಲೆ, ಒಮ್ಮೆ ನೀವು ಅವನಲ್ಲಿ ಆಶ್ರಯ ಪಡೆದ ಮೇಲೆ, ಆಗ ಅವನು ನಿಮಗ್ ಅಗತ್ಯ ಇರುವ ಎಲ್ಲವನ್ನೂ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ, ಜೊತೆಗೇ ನಿಮ್ಮಲ್ಲಿ ಆಗಲೇ ಇರುವುದನ್ನು ನೋಡಿಕೊಳುವುದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಭಗವಾನ್ ಕೃಷ್ಣ ’ಯೋಗ-ಕ್ಷೇಮಂ ವಹಾಮ್ಯಹಂ’ ಎಂದು ಹೇಳುವುದು ಇದಕ್ಕಾಗಿಯೇ. ಇಲ್ಲಿ ಯೋಗ ಎಂದರೆ ನಿಮಗೆ ಇನ್ನೂ ದೊರೆತಿಲ್ಲದುದನ್ನು ಒದಗಿಸುವುದು, ಮತ್ತು ಕ್ಷೇಮ ಎಂದರೆ ನಿಮಗೆ ಆಗಲೇ ದೊರೆತಿರುವುದನ್ನು ರಕ್ಷಿಸುವುದು. ಎರಡೂ ಭಗವಂತನ ಜವಾಬ್ದಾರಿ, ಭಗವಾನ್ ಕೃಷ್ಣನು ಇದನ್ನು ಸ್ಪಷ್ಟವಾಗಿ ಹೇಳುತ್ತಾನೆ. ಹಾಗಾಗಿ ಇಷ್ಟನ್ನು ಸುಮ್ಮನೆ ತಿಳಿದಿರಿ ಮತ್ತು ವಿಶ್ರಮಿಸಿ.

ಪ್ರ: ಗುರೂಜಿ, ನೀವು ಎಲ್ಲರನ್ನೂ ಂದ್ ರೀತಿಯಾಗಿ ಕಾಣುತ್ತೀರಿ, ಆದರೆ ಯಾರಾದರೂ ನಿಮ್ಮನ್ನು ಅವನ/ಅವಳ ಗುರು ಎಂದು ಹೇಳಿದಾಗ ನನಗೆ ಬಹಳ ಮಾತ್ಸರ್ಯ ಉಂಟಾಗುತ್ತದೆ. ನೀವು ನಮ್ಮೆಲ್ಲರಿಗೂ ಸೇರಿದವರು ತಾನೆ? ಹಾಗಾದರೆ ನಾನು ಇದನ್ನು ನನ್ನ ಮನಸ್ಸಿಗೆ ಹೇಗೆ ತಿಳಿಹೇಳುವುದು? ನನಗೆ ಎಲ್ಲರೊಂದಿಗೂ ಎಲ್ಲವನ್ನೂ ಹಂಚಿಕೊಳ್ಳುವುದು ಸಾಧ್ಯ, ಆದರೆ ನಾನು ನಿಮ್ಮನ್ನು ಬೇರೆಯವರೊಂದಿಗೆ ಹೇಗೆ ಹಂಚಿಕೊಳ್ಳುವುದು?

ಶ್ರೀ ಶ್ರೀ:
ಯಾರಾದರೂ ’ಗುರೂಜಿ ನನ್ನವರು’ ಎಂದು ಹೇಳಿದರೆ, ನೀವು ಅವರು ನನ್ನವರು ಕೂಡ ಎಂದು ಹೇಳಿ! ಹಾಗೆ ಮಾಡುವುದರಿಂದ ನಿಮ್ಮನ್ನು ತಡೆದವರು ಯಾರು? ಅವರು ಒಮ್ಮೆ ಹೇಳಿದರೆ, ನೀವು ಎರಡು ಬಾರಿ ಹೇಳಿ(ನಗು). ನೋಡಿ ನೀವು ನಿಮ್ಮ ಮನೆಯ ಕಿಟಕಿಯನ್ನು ತೆರೆದಾಗ, ಅದರಿಂದ ಸೂರ್ಯನ ಬೆಳಕು ನಿಮ್ಮ ಮನೆಯೊಳಗೆ  ಸಂಪೂರ್ಣವಾಗಿ ಬರುತ್ತದೆಯಲ್ಲವೆ? ಮತ್ತೊಬ್ಬರು ತಮ್ಮ ಮನೆಯ ಕಿಟಕಿಯನ್ನು ತೆರೆದರೆ, ಸುಯನ ಬೆಳಕು ಅಲ್ಲಿಯೂ ಸಂಪೂರ್ಣವಾಗಿ ಬರುತದೆ. ಸೂರ್ಯನ ಬೆಳಕು ನಿಮ್ಮ ಮನೆಯ ಕಿಟಕಿಯಲ್ಲಿ ಕಮ್ಮಿ, ನಿಮ್ಮ ನೆರೆಮನೆಯ ಕಿಟಕಿಯಲ್ಲಿ ಹೆಚ್ಚು ಬೆಳಗಿದ್ದು ಎಂದಾದರೂ ಉಂಟಾಗಿದೆಯೇ? ಗಾಳಿಯೂ ಹೀಗೆಯೇ. ಗಾಳಿ ಎಂದಾದರೂ ಭೇದದಿಂದ ಹೋಗಿ ಒಂದು ಮನೆಯಲ್ಲಿ ಹೆಚ್ಚು ಇನ್ನೊಂದು ಮನೆಯಲ್ಲಿ ಕಮ್ಮಿ ಬೀಸಿದ್ದುಂಟೇ? ಹೊರಗೆ ಬಿಸಿಯಾಗಿರುವಾಗ, ಒಂದು ಮನೆ ಇನ್ನೊಂದು ಮನೆಗಿಂತ ಹೆಚ್ಚು ಶಾಖ ಪಡೆದದ್ದುಂಟೇ? ಇಲ್ಲ, ಪ್ರಕೃತಿಯು ಎಲ್ಲರನ್ನೂ ಒಂದೇ ರೀತಿಯಾಗಿ ನೋಡಿಕೊಳ್ಳುತ್ತದೆ. ಒಂದು ವೇಳೆ ನೀವು ಪೂರ್ಣ ಚಂದ್ರನನ್ನು ನೋಡುತ್ತಿದ್ದರೆ, ಇತರ ನಗರಗಳಲ್ಲಿನ ಜನರಿಗೂ ಚಂದ್ರನು ಪೂರ್ಣವಾಗಿ ಕಾಣುತ್ತಾನೆ. ಅದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಚ್ಚು ಅಥವಾ ಕಮ್ಮಿ ಕಾಣುವುದಿಲ್ಲ. ಪೂರ್ಣಚಂದ್ರನು ನೀವು ಎಲ್ಲೇ ಹೋದರೂ ಪೂರ್ಣ ಚಂದ್ರನಾಗಿಯೇ ಕಾಣುವನು. ನೀವು ನಾಲ್ಕು ಮಕ್ಕಳ ತಾಯಿ ಅಂದುಕೊಳ್ಳಿ. ಇಂದು ಎರಡು ಮಕ್ಕಳಿರುವುದು ಹಚ್ಚು ಸಾಮಾನ್ಯ. ಆಗ ಯಾರೇ ಏನೇ ಅಂದರೂ ನೀವು ಎಲ್ಲಾ ಮಕ್ಕಳನ್ನೂ ಒಂದೇ ಆಗಿ ನೋಡುವುದಿಲ್ಲವೇ? ನೀವು ಒಂದೇ ಮಗುವಿಗೆ ಊಟ ಬಡಿಸಿ ಇನ್ನೊಂದು ಮಗುವನ್ನು ಉಪವಾಸ ಇಡುತ್ತೀರೇ? ಒಬ್ಬ ತಾಯಿ ಇದನ್ನು ಎಂದೂ ಮಾಡಲಾರಳು.

ಪ್ರ: ಗುರೂಜಿ, ನಾನು ಒಬ್ಬ ವ್ಯಕ್ತಿಯೊಡನೆ ಆಳವಾಗಿ ಪ್ರೀತಿಸುತ್ತಿದ್ದೇನೋ ಅಥವಾ ಅದು ಕೇವಲ ಮೋಹವೇ ಎಂದು ಹೇಗೆ ತಿಳಿಯುವುದು?


ಶ್ರೀ ಶ್ರೀ:
ಕಾಲ ತಿಳಿಸುತ್ತದೆ. ಪ್ರೀತಿಯಲ್ಲಿ ಒಂದು ತ್ಯಾಗ ಭಾವವಿದೆ ಎಂದು ಯಾವತ್ತೂ ತಿಳಿದಿರಿ, ಅಲ್ಲದೇ ಮೋಹವು ಕೇವಲ ದುಃಖವನ್ನು ತರುತ್ತದೆ. ಪ್ರೀತಿಯ ಹೆಸರಿನಲ್ಲಿ, ನೀವು ಮೋಹ ಅಥವ ವ್ಯಾಮೋಹದಲ್ಲಿ ಬಿದ್ದರೆ, ನಿಮಗೆ ಕೇವಲ ದುಃಖ ಉಂಟಾಗುತ್ತದೆ. ಆದರೆ ನಿಜವಾದ ಪ್ರೀತಿಯಲ್ಲಿ, ತ್ಯಾಗವೂ ಸಂತುಷ್ಟಿಯನ್ನು ತರುತ್ತದೆ. ಪ್ರೀತಿಯು ತ್ಯಾಗ ಹಾಗೂ ತೃಪ್ತಿಯನ್ನು ತರುತ್ತದೆ, ಆದರೆ ಮೋಹ ಹಾಗೂ ಜ್ವರತೆ ಕೇವಲ ದುಃಖವನ್ನು ತಂದುಕೊಡುತ್ತದೆ.

ಪ್ರ: ಗುರೂಜಿ, ನಮ್ಮ ಚೈತನ್ಯಕ್ಕೆ ಯಾವುದು ಸರಿ ಯಾವುದು ತಪ್ಪು ಎಂಬ ಅರಿವಿದೆ. ಅದನ್ನು ತಿಳಿದಿದ್ದರೂ, ನಾವು ನಮ್ಮ ಅಂತರ್ನುಡಿಯಂತೆ ನಡೆಯುವುದಿಲ್ಲ. ನಮ್ಮ ಆತ್ಮಸಾಕ್ಷಿಯನ್ನು ಕೇಳದಂತೆ ನಮ್ಮನ್ನು ತಡೆಯುದು ಯಾವುದು ಮತ್ತು ನಾವಿದನ್ನು ಹೇಗೆ ಮೀರುವುದ್ದು? 

ಶ್ರೀ ಶ್ರೀ:
ಅದು ಹಳೇ ಅಭ್ಯಾಸಗಳಿರಬಹುದು ಅಥವಾ ಬೇರೇನನ್ನೋ ಮಾಡಿದರೆ ಆನಂದ ಸಿಗುವುದು ಎಂಬ ಭ್ರಮೆ ಇರಬಹುದು. ಈ ಎರಡರ ಹೊರತು ಬೇರಾವುದೂ ಇಲ್ಲ.

ಪ್ರ: ನಿಮ್ಮೊಂದಿಗೆ ಸಂಪರ್ಕ ಹೊಂದಿ ಕೇವಲ ಕೆಲವು ತಿಂಗಳಷ್ಟೇ ಆಗಿವೆ, ಆಗಲೇ ನೀವು ನನ್ನನ್ನು ನಿಮ್ಮ ಪ್ರೀತಿಯಲ್ಲಿ ಮತ್ತೇರಿಸಿದ್ದೀರಿ. ಈ ಹಿಂದಿನ ವರ್ಷಗಳಲ್ಲಿ ನಾನು ಕಳೆದುಕೊಂಡಂಥ ಪ್ರೇಮವನ್ನು ಮತ್ತೆ ಪಡೆಯುವುದು ಸಾಧ್ಯವೇ? ನಾನು ಈ ಬಾಕಿಯನ್ನು ತೀರಿಸಿಕೊಳ್ಳಲು ಇಚ್ಚಿಸುತ್ತೇನೆ.

ಶ್ರೀ ಶ್ರೀ:
ನಮ್ಮ ಪ್ರೇಮದ ಅನುಬಂಧ ಪುರಾತನವಾದುದು. ಹೃದಯವು ಪ್ರಾಚೀನವಾದುದರ ಬಗ್ಗೆ ಹೆಮ್ಮೆಪಡುತ್ತದೆ. ಅದು ಹಳೆಯದರ ಹಿಂದೆ, ಪುರಾತನವಾದುದರ ಹಿಂದೆ ಓಡುತ್ತದೆ, ಅಂತೆಯೇ ಮನಸ್ಸು ಹೊಸತರಿಂದ ಆಕರ್ಷಿತವಾಗುತ್ತದೆ. ಉದಾಹರಣೆಗೆ ನಮ್ಮ ಮನಸ್ಸು ಅತ್ಯಾಧುನಿಕ ಉಡುಪು, ಅತ್ತ್ಯಾಧುನಿಕ ವೈಜ್ಞಾನಿಕ ಅವಿಷ್ಕಾರಗಳತ್ತ ಆಕರ್ಷಿತವಾಗುತ್ತದೆ. ಇದರಿಂದಲೇ ವಿಜ್ಞಾನವೂ ಹೊಸ ಅವಿಷ್ಕಾರಗಳು ಮತ್ತು ನೂತನಸೃಷ್ಟಿಗಳನ್ನು ತೊಡಗಿಸುವುದರಲ್ಲೇ ಇರುತ್ತದೆ. ಹಾಗಾಗಿ ನಮ್ಮ ಮನಸ್ಸು, ನಮ್ಮ ಬುದ್ಧಿ ಯಾವತ್ತೂ ಹೊಸತರೆಡೆಗೆ ಮೋಡಿಗೊಳ್ಳುತ್ತದೆ. ಆದರೆ ಹೃದಯ ಹಾಗಲ್ಲ. ನಾವು ಯಾರನ್ನಾದರೂ ಪ್ರೀತಿಸಿದ್ದರೆ, ನಾವು ಅವರನ್ನು ಎರಡು ದಿನಗಳಿಗೆ ಅಥವಾ ಎರಡು ವಾರಗಳಿಗೆ ಪ್ರೀತಿಸಿದ್ದೇವೆ ಎಂದು ಹೇಳುವುದಿಲ್ಲ, ನಾವವರನ್ನು ಕಾಲಗಟ್ಟಲೆ ಪ್ರೀತಿಸುತ್ತಿದ್ದೇವೆ, ಜನ್ಮಾಂತರಗಳಿಂದ ಪ್ರೀತಿಸುತ್ತಿದ್ದೇವೆ ಎಂದು ಭಾವಿಸುತ್ತೇವೆ! ಇದು ಹೃದಯದ ಗುಣ, ಪುರಾತನ ಹಾಗೂ ಪರಿಚಿತವಾದುದಕ್ಕಾಗಿ ಹಂಬಲಿಸುವುದು. ನಮ್ಮ ಜೀವನವು ಪುರಾತನಹಾಗೂ ನೂತಬವಾದುದರ ಸಂಘಟನೆ. ನಾವು ಅವುಗಳನ್ನು ಜೊತೆಯಲ್ಲಿ ತೆಗೆದುಕೊಳ್ಳಬೇಕು.

ನೀವು ಸಂದಿಗ್ಧತೆ ಅಥವಾ ಭಾಂತಿಯಲ್ಲಿದ್ದಾಗ, ಅಥವಾ ನಿಮ್ಮ ಬುದ್ಧಿ ಹಾಗು ಹೃದಯ ವಿರೋಧಾಭಾಸದಲ್ಲಿದ್ದಾಗ, ಎಲ್ಲಾ ರೀತಿಯ ಜಗಳಗಳು ಹಳೆಯ ವಸ್ತುಗಳ ಬಗ್ಗೆ ಇರುತ್ತವೆ. ನಮ್ಮ ಎಲ್ಲಾ ಆಸೆ ಹಾಗು ವಿರಸಗಳು ಹಿಂದಿನ ವಸ್ತು ಹಾಗೂ ಘಟನೆಗಳ ಕುರಿತಾಗಿ ಇರುತ್ತವೆ. ನಾನು ೨೦ ವರ್ಷಗಳ ಹಿಂದೆ ನಿಮ್ಮ ಮದುವೆಗೆ ಬಂದಿದ್ದಾಗ ನೀವು ನನ್ನನ್ನು ಸರಿಯಾಗಿ ಮಾತನಾಡಿಸಲಿಲ್ಲ. ನೀವು ನನಗೆ ಸಾಕಷ್ಟು ಉಡುಗೊರೆ - ಸಿಹಿತಿನಿಸುಗಳನ್ನು ನೀಡಲಿಲ್ಲ. ನೀವು ನನ್ನೊಂದಿಗೆ ಸರಿಯಾಗಿ ವರ್ತಿಸಲಿಲ್ಲ. ನಿಮ್ಮ ತಂದೆ ತಾಯಿ ಹೀಗೆ ಮಾಡಿದರು, ಹಾಗೆ ಮಾಡಿದರು.’ ಜನರು ೨೦ ವರ್ಷಗಳ ನಂತರವೂ ಆ ಕಹಿತನವನ್ನು ಮನಸ್ಸಿನಲ್ಲಿ ಪೋಷಿಸುತ್ತಾ ಇರುತ್ತಾರೆ. ಜನರು ಇದರಲೆಲ್ಲಾ ಕಗ್ಗಂಟಿಗೊಳಗಾಗುವುದು ಅವಿವೇಕದಿಂದಾಗಿ. ಹಾಗಾಗಿ ನೀವು ಇದರ ಕುರಿತೆಲ್ಲಾ ನಿಮ್ಮ ವಿವೇಕವನ್ನುಪಯೋಗಿಸಿ ಜಾಗೃತರಾಗಬೇಕು. ಹಿಂದಿನದನ್ನೆಲ್ಲಾ ಬಿಟ್ಟು ಬಿಡಿ. ಯಾಕೆ? ನಿಮ್ಮ ಮನಸ್ಸು ಅಥವಾ ಬುದ್ಧಿ ನಡೆದುಹೋದುದರ ಬಗ್ಗೆ ಗೊಣಗಾಡುತ್ತಿದ್ದಾಗ, ಅದು ಋಣಾತ್ಮಕತೆಯಲ್ಲಿ ಸಿಕ್ಕಿಕೊಂಡು ಕೊಳೆತುಕೊಳ್ಳಲು ಆರಂಭವಾಗುತ್ತದೆ. ಹಾಗೂ ಹೃದಯವು ಹೊಸತರೆಡೆಗೆ(ಆಕರ್ಷಣೆ) ಓಡುತ್ತಿರಲು, ಅದು ಅಸ್ಥಿರವಾಗುತ್ತದೆ. ಹಾಗಾಗಿ ಎಲ್ಲವನ್ನು ಸರಿಯಾದ ಸ್ಥಾನದಲ್ಲಿ ಇಡುವುದು ವಿವೇಕ. ಸ್ವಸ್ಥವಾಗಿ ಬಾಳಲು ಒಬ್ಬರಲ್ಲಿ ಬುದ್ಧಿ ಹಾಗೂ ಭಾವನೆಗಳು ಎರಡೂ ಅವಶ್ಯಕ. ಪ್ರತಿಯೊಬ್ಬರ ಜೀವನದಲ್ಲೂ ಬುದ್ಧಿ ಹಾಗೂ ಭಾವನೆಗಳು ಎರಡೂ ಮುಖ್ಯವಾಗಿವೆ. ವ್ಯವಹಾರವನ್ನು ಬುದ್ಧಿಯಿಂದ ಮಾಡಿ ಹಾಗೂ ಜೀವನವನ್ನು ಭಾವನೆಗಳಿಂದ(ಹೃದಯ) ಬಾಳಿ. ನೀವು ನಿಮ್ಮ ಮನೆಯಲ್ಲಿ ಬುದ್ಧಿವಂತರಾಗಿ, ವ್ಯವಹಾರದಲ್ಲಿ ಭಾವುಕರಾಗಿ ಇದ್ದರೆ, ಆಗ ಎರಡೂ ತೊಂದರೆಯಲ್ಲಿರುತ್ತವೆ.

ಪ್ರ: ಗುರೂಜಿ, ರೂಪಾಯಿಯ ಬೆಲೆ ಕುಸಿಯುತ್ತಿದೆ; ಧರ್ಮಾತೀತತೆಯ ಹೆಸರಿನಲ್ಲಿ ನಾನು ನನ್ನ ಧರ್ಮದಿಂದ ದೂರ ಮಾಡಲ್ಪಡುತ್ತಿದ್ದೇನೆ. ಈಜಿಪ್ಟಿನಲ್ಲಿ(ಇತ್ತೀಚೆಗಿನ ಜನಾಂಗ ಯುದ್ಧ ಹಾಗೂ ಸಾರ್ವಜನಿಕ ಅಶಾಂತಿಯನ್ನು ಕುರಿತು ಮಾತನಾಡುತ್ತ) ಆಗುತ್ತಿರುವುದು ಇಲ್ಲಿ ಆದರೆ ಮಾತ್ರ ನಾವು ಉದ್ಧಾರವಾಗುವುದೇ?


ಶ್ರಿ ಶ್ರೀ:
ದೇವರ ದಯೆಯಿಂದ ಅದು ಎಂದೂ ಇಲ್ಲಿ ನಮ್ಮ ದೇಶದಲ್ಲಿ ಆಗದಿರಲಿ. ಈಜಿಪ್ಟ್ ಹಾಗೂ ಸಿರಿಯಾದಲ್ಲಿ ನಡೆಯುತ್ತಿರುವುದು ಯಾವುದೇ ದೇಶದಲ್ಲಿ ಆಗಬಾರದು. ಇಲ್ಲಿ ಭಾರತದಲ್ಲಿ ಧರ್ಮಾತೀತತೆಯ ಹೆಸರಿನಲ್ಲಿ ಯಾವುದೇ ಅನ್ಯಾಯ ನಡೆಯುತ್ತಿದರೆ, ಆಗ ಅದಕ್ಕೆ ನೀವೊಬ್ಬರೇ ಹೊಣೆ, ಇನ್ಯಾರೂ ಅಲ್ಲ. ಹೀಗಾಗುವುದು ಯಾಕೆಂದರೆ ನಾವೆಲ್ಲರೂ ಈ ವಿಷಯಗಳ ವಿರುದ್ಧವಾಗಿ ಒಗ್ಗತ್ತಾಗಿ ನಿಲ್ಲುವುದಿಲ್ಲ. ನಾವು ನಮ್ಮದೇ ಆದ ಧರ್ಮವನ್ನು ಗೌರವಿಸುವುದಿಲ್ಲ, ಹಾಗಿದ್ದರೆ ಇನ್ಯಾರಾದರೂ ಹೇಗೆ ಗೌರವಿಸುತ್ತಾರೆ? ಇನ್ನೊಬ್ಬರನ್ನು ದೂರಿ ಬೆರಳುತೋರಿಸಬೇಡಿ. ನಾವು ನಮ್ಮದೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂದು ಬಹಳ ಜಾತಿವಾದ ಹಾಗೂ ಧರ್ಮಭೇದ ನಡೆಯುತ್ತಿದೆ. ನಾವು ಜಾತಿಯ ಹೆಸರಿನಲ್ಲಿ ಬಹಳ ಬೇರ್ಪಡೆಯಾಗಿದ್ದೇವೆ. ನಾವು ಇದನ್ನು ಮೀರಿ ಮೇಲಕ್ಕೇಳಬೇಕು ಹಾಗೂ ಎಲ್ಲರನ್ನೂ ಪ್ರೀತಿ ಹಾಗೂ ದಯೆಗಳಿಂದ ಒಗ್ಗೂಡಿಸಬೇಕು. ನಾವು ಕ್ರಿಯಾತ್ಮಕ ಹಾಗೂ ಜವಾಬ್ದಾರ ಪ್ರಜೆಗಳಾಗಬೇಕು. ಏನೂ ಅಲ್ಲದಿದ್ದರೆ, ಕನ್ನಿಷ್ಠ ತಿಂಗಳಿಗೆ ಒಂದು ಸಲವಾದರೂ ಎಲ್ಲರಂದು ಒಟ್ಟಾಗಿ ಸೇರಿಸಲು ಪ್ರಯತ್ನ ಮಾಡಿ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೋ. ನಾವಿದನ್ನು ಹಳ್ಳಿಗಳಲ್ಲೂ ಮಾಡಬೇಕು. ನಾವು ಹಬ್ಬಗಳನ್ನು ಆಚರಿಸುವಾಗ, ನಾವು ಅದನ್ನು ಆಯೋಜಿಸಿ ಎಲ್ಲರೂ ಜೊತೆಯಾಗಿ ಒಗ್ಗಟ್ಟಿನಿಂದ ಆಚರಿಸುವಂತೆ ಮಾಡುವ ಪ್ರಯತ್ನ ಮಾಡುವುದಿಲ್ಲ. ಎಲ್ಲರಿಗೂ ತಮ್ಮದೇ ಪ್ರತ್ಯೇಕ ಆಚರಣೆ ಬೇಕು. ನಮ್ಮಲ್ಲಿ ಗಣೇಶ ಚತುರ್ಥಿ ಅಥವಾ ಜನ್ಮಾಷ್ಟಮಿಯಂಥ ಹಬ್ಬಗಳಿದ್ದಾಗಾ ನಾವುಒಂದು ಸ್ಥಳದಲ್ಲಿ ಜೊತೆಯಾಗಿ ಆಚರಿಸುವುದಿಲ್ಲ. ಅದರ ಬದಲಾಗಿ ನಾವು ಒಂದೊಂದಾಗಿ ಪ್ರತ್ಯೇಕ ಆಚರಣೆಯನ್ನು ನಮ್ಮ ಕೇರಿಯಲ್ಲೋ ಓಣಿಯಲ್ಲೋ ನೆರವೇರಿಸುತ್ತೇವೆ. ಇದೆಲ್ಲಾ ಅಹಂನ ಆಟ - ಎಲ್ಲರೂ ಕೇವಲ ’ನಾನು’, ’ನನ್ನದು’, ’ನಾನೊಬ್ಬ’ ಎಂದು ಯೋಚಿಸುತ್ತಾರೆ. ಇದು ಭಾರತದ ಒಂದು ಬಹಳ ದೊಡ್ಡ ದುರಂತ. ನಾವು ಇಷ್ಟೊಂದು ಬೇರಪಟ್ಟವರಾಗಿರುವೆವು ಹಾಗು ಒಂದೇ ಜನಾಂಗವಾಗಿ ಎದ್ದು ನಿಲ್ಲುತ್ತಿಲ್ಲ ಎಂಬುದು ನಮ್ಮ ದುರದೃಷ್ಟ. ನಾವು ಭಾಷೆ, ಜನಾಂಗ, ಜಾತಿ, ದೇಶ, ರಾಜ್ಯ, ಸ್ಥಳದ ಆದಾರದಲ್ಲಿ ಬೇರ್ಪಟ್ಟಿದ್ದೇವೆ; ರಾಜಕೀಯ ಗುಂಪಿನ ಇತ್ಯಾದಿಗಳ ಆದಾರದಲ್ಲೂ ಬೇರ್ಪಟ್ಟಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಒಂದಾದಾಗ, ಧರ್ಮವು(ನ್ಯಾಯನಿಷ್ಠತೆ) ಮೇಲೆದ್ದು ಉನ್ನತಿ ಹೊಂದುತ್ತದೆ. ಆಗ ಯಾರು ನಿಮ್ಮನ್ನು ನೋಯಿಸುತ್ತಾರೆ ಅಥವಾ ನಿಮ್ಮನ್ನು ಕೆಳಕ್ಕಿಳಿಸುತ್ತಾರೆ? ಆದ್ದರಿಂದಲೇ ಹೇಳುವುದು - "ಸಂಘ ಶಕ್ತಿ ಕಲಿಯುಗೇ" (ಒಳ್ಳೆಯವರ ಹಾಗೂ ಸದ್ಗುಣವಂತರ ಸಹವಾಸ ಅಥವಾ ಸಂಘವು, ದುಷ್ಟ ಹಾಗೂ ಕತ್ತಲ ಕಾಲದಲ್ಲಿ, ಒಂದು ಏಕೈಕ ಶಕ್ತಿಯಾಗಿದೆ).

ಇಂದು ಬಹಳ ಜನರು ಅನ್ಯಾಯದಿಂದ ಬಳಲಿದ್ದರೆ ಎಂದು ಹೇಳುತ್ತಾರೆ. ಜಮ್ಮು ಕಾಶ್ಮೀರದಲ್ಲಿ, ಕೇರಳದಲ್ಲಿ ಜನರು ತಮ್ಮದೇ ದೇಶ ಮತ್ತು ರಾಜ್ಯಗಳಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಅನುಭವವಾಗುತ್ತದೆ ಎಂದು ಹೇಳುತ್ತಾರೆ. ಪೂರ್ವೋತ್ತರ ಭಾರತ ಹಾಗೂ ಆಂಧ್ರ ಪ್ರದೇಶದಲ್ಲೂ ಜನರು ವೇದನಶೂನ್ಯತೆ ಹಾಗೂ ಅನ್ಯಾಯಗಳುಂಟಾಗುತ್ತಿವೆ, ಯಾರೂ ಗಮನಕೊಡುವುದಿಲ್ಲ ಎನ್ನುತ್ತಾರೆ. ನಾನು ಇಂಥ ಹಲವು ವಿಷಯಗಳನ್ನು ಕೇಳಿದ್ದೇನೆ ಹಾಗೂ ಬಹಳ ಜನರು ಬಂದು ಆಗಾಗ ನನಗೆ ಹೇಳುತಾರೆ. ಪಶ್ಚಿಮ ಬಂಗಾಲದಲ್ಲಿ ಅಧಿಕಸಂಖ್ಯಾತ ಮತೀಯರೊಡನೆ ಬಹಳ ಚಿಂತನಾರ್ಹ ಅನ್ಯಾಯ ಹಾಗೂ ಅಕಾರ್ಯ ನಡೆಯುತ್ತಿದೆ. ಜನರು ಬಂದು ಇದರ ಬಗ್ಗೆ ನನ್ನ ಮುಂದೆ ಅಳುತ್ತಾರೆ. ನಾನ್ನು ಹೇಳುತ್ತೇನೆ, "ನೀವೆಲ್ಲರೂ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಒಂದಾಗಿ ನಿಲ್ಲಬೇಕು. ನಿಮ್ಮ ಕಾಲಿನ ಮೇಲೆ ನಿಂತುಕೊಳ್ಳಿ. ನೀವು ನಿಮ್ಮೊಳಗೇ ಬೇರ್ಪಟ್ಟು ದೂರ ದೂರದಲ್ಲಿದ್ದಷ್ಟು ಸಮಯ, ಇನ್ನೊಬ್ಬ ಯಾರಾದರು ಅದರ ಉಪಯೋಗ ಪಡಿಸಿಕೊಳ್ಳುತ್ತಾರೆ. ನಾವು ಒಗ್ಗಟ್ಟಾಗುವ ಬದಲು, ಇನೊಬ್ಬರ ಮೇಲೆ ದೂರುತ್ತೇವೆ. ನೋಡಿ ಎಲ್ಲರಿಗೂ ತಮ್ಮದೇ ಸಂಘವನ್ನು ರೂಪಿಸುವ ಹಾಗೂ ಮುನ್ನಡೆಉವ ಹಕಿದೆ. ಹೀಗೆ ಯಾರಾದರೂ ಮುನ್ನಡೆಯುತ್ತಿದ್ದರೆ ನಾವು ಅವರನೇಕೆ ಕೆಳಕ್ಕೆಳೆಯಬೇಕು? ಅವರೂ ಜಯಿಸಲಿ ಹಾಗೂ ನಾವೂ ಜಯಿಸುವ ಪ್ರಯತ್ನ ಮಾಡೋಣ. ಈ ಆಲೋಚನೆ ನಮ್ಮೊಳಗೆ ಹುಟ್ಟಬೇಕು. ನಾನು ಪಂಜಾಬಿಗೆ ಹೋದಾಗ ಅಲ್ಲಿನ ಜನರು ಅದನ್ನೇ ಹೇಳಿದರು - ಅಲ್ಲಿ ಅವರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಲಾಗುತ್ತದೆ ಎಂದು. ಇದೊಂದು ಬಹಳ ದುರದೃಷ್ಟಕರ ಸಂಗತಿ. ನಮ್ಮ ದೇಶದ ಆರ್ಥಿಕ ರಂಗದಲ್ಲೂ ಇದೇ ಆಗುತ್ತಿದೆ.

ಇಂದು ಒಂದು ಚಿಕ್ಕ ಪಟ್ಟಣದಲ್ಲೂ ಹತು ವಿವಿಧ ದೇವಸ್ಥಾನಗಳು ಕಟ್ಟಲ್ಪಟ್ಟಿವೆ. ಈಗ ಹತ್ತು ದೇವಸ್ಥಾನಗಳಿರುವುದು ಒಂದು ಕೆಟ್ಟ ಸಂಗತಿಯಲ್ಲವೇ ಅಲ್ಲ. ಆದರೆ ಏನಾಗುವುದೆಂದರೆ, ಅವರೆಲ್ಲರಲ್ಲೂ ಒಂದು ಪೈಪೋಟಿಯ ಭಾವವಿದೆ. ಆಮೇಲೆ ಒಂದೇ ದೇವಸ್ಥಾನದ ಆಡಳಿತ ಮಂಡಳಿಯವರ ನಡುವೆ ಸಣ್ಣಪುಟ್ಟ ವಿಷಯಗಳ ಬಗ್ಗೆ ವಾದಗಳಾಗುತ್ತವೆ. ಇದೆಲ್ಲವೂ ಅವಿವೇಕ. ಮತ್ತೆ ಅವರು "ನಮ್ಮೊಂದಿಗೆ ಯಾರೂ ಸರಿಯಾಗಿ ವರ್ತಿಸುವುದಿಲ್ಲ, ನಮಗೆ ಬೇಕಾಗಿರುವುದು ಆಗುತ್ತಿಲ್ಲ". ಜೀವನದ ಪ್ರತಿ ಆಯಾಮದಲ್ಲಿ, ಅದು ಧಾರ್ಮಿಕವಾಗಿರಬಹುದು ಅಥವಾ ರಾಜನೈತಿಕ ಅಥವಾ ಆರ್ಥಿಕವಾಗಿರಬಹುದು, ವಿವೇಕವು ಅಗತ್ಯವಾಗಿದೆ. ಇದೆಲ್ಲಕ್ಕೂ ಒಂದು ಪರಿವರ್ತನೆ ಅಗತ್ಯ ಹಾಗೂ ನಮ್ಮ ಯುವಕರು ಈ ಸಂಕುಚಿತ-ದೃಷ್ಟಿಕೋನದಿಂದ ಹೊರಬಂದು ಈ ಪರಿವರ್ತನೆಯನ್ನು ತರುತ್ತಾರೆ ಎಂದು ನನಗೆ ಭರವಸೆಯಿದೆ. ಅವರು ಜೊತೆಗೂಡಿ ಒಳ್ಳೆ ಕೆಲಸ ಮಾಡಬೇಕು.

ಪ್ರ: ಗುರುದೇವ, ಬ್ಲೂ ಸ್ಟಾರ್ ಎಂದರೇನು? ಆನು ಅದರ ಬಗ್ಗೆ ಬಹಳ ಕೇಳಿದ್ದೇನೆ. ದಯವಿಟ್ಟು ವಿವರಿಸಿ.

ಶ್ರೀ ಶ್ರೀ:
ನೀವಿನ್ನೊಬ್ಬ ಯಾರನ್ನಾದರೂ ಏಕೆ ಕೇಳಬಾರದು? ನಿಮಗೆ ನಕ್ಷತ್ರಗಳು ಆಕಾಶದಲ್ಲಿ ಕಾಣುವವೇ ಹೊರತು ನೆಲದ ಮೇಲಲ್ಲ. ಆದರೆ ಯಾರಾದರೂ ನೆಲಕ್ಕಿಳಿಯದೇ ಆಕಾಶದ ಮೇಲೆ ನಡೆಯುವಂತೆ ನಡೆದರೆ(ಅರ್ಥ: ಮೂರ್ಖ ಅಥವಾ ಕಾರ್ಯಸಾಧ್ಯವಲ್ಲದ ಮನೋಭಾವ ಹೊಂದಿದ್ದರೆ), ಆಗ ಆ ವ್ಯಕ್ತಿಯನ್ನು ಬ್ಲೂ ಸ್ಟಾರ್ ಎಂದು ಕರೆಯುತ್ತಾರೆ(ನಗು). ಅದು ಅದರ ಅರ್ಥ. ಆಯಿತೇ? ಆಶ್ರಮದಲ್ಲಿ ಒಬ್ಬ ವ್ಯಕ್ತಿ ಕಾರ್ಯಸಾಧ್ಯ ದೃಷ್ಟಿಕೋನದಿಂದ ಮಾರ್ಗಾಂತರಿಸಿದರೆ, ಜನರು ಆ ವ್ಯಕ್ತಿ ಬ್ಲೂ ಸ್ಟಾರ್ ಆಗಿದ್ದನೆ ಎನ್ನುತ್ತಾರೆ. ಅವನು ಏನು ಹೇಳುತ್ತಾನೆ ಅಥವಾ ಮಾಡುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಅದಕ್ಕೂ ಪರಿಹಾರವಿದೆ!