ಶುಕ್ರವಾರ, ಆಗಸ್ಟ್ 30, 2013

ಸೂಕ್ತವಲ್ಲದ್ದನ್ನು ಸರಿದೂಗಿಸಿಕೊಳ್ಳುವ ಕೌಶಲ್ಯ

ಅಗಸ್ಟ್ ೩೦, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ನಾವು ನಿರಂತರವಾದ ದೂಷಣೆಯನ್ನು ವ್ಯಗ್ರತೆಯಿಲ್ಲದೆ ಸಹಿಸಿಕೊಳ್ಳುವುದು (ವಿಶೇಷವಾಗಿ ಓರ್ವ ಪ್ರೀತಿಪಾತ್ರನು ಅಂತು ವರ್ತಿಸುತ್ತಿರಲು) ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೋಡು, ನಿರಂತರವಾದ ಯಾವುದಾದರೂ ನಿನಗೆ ವಾಡಿಕೆಯಾಗಿಬಿಡುತ್ತದೆ (ನಗು). ಹಾಗಾಗಿ ಅದರ ಬಗ್ಗೆ ಚಿಂತಿಸಬೇಡ. ಯಾರಾದರೂ ನಿನ್ನನ್ನು ನಿರಂತರವಾಗಿ ದೂಷಿಸುತ್ತಿರುವುದಾದರೆ, ಆಗ ಅದರ ಬಗ್ಗೆ ಲಕ್ಷ್ಯ ಕೊಡಬೇಡ. ಇದು ಹೆಚ್ಚಾಗಿ ಸಂಭವಿಸುತ್ತದೆ, ತಾಯಂದಿರು ತಮ್ಮ ಮಕ್ಕಳನ್ನು ನಿರಂತರವಾಗಿ ದೂಷಿಸುವಾಗ ಮಕ್ಕಳು, ತಮ್ಮ ತಾಯಂದಿರು ಏನು ಹೇಳುತ್ತಿರುವರೋ ಅದರ ಬಗ್ಗೆ ಲಕ್ಷ್ಯ ಕೊಡುವುದನ್ನು ನಿಲ್ಲಿಸುತ್ತಾರೆ. ಇದು ಯಾಕೆಂದರೆ, ಪ್ರತಿದಿನವೂ ಅವಳು ಅದೇ ವರ್ತನೆಯನ್ನು ಮುಂದುವರಿಸಲಿದ್ದಾಳೆ ಎನ್ನುವುದು ಅವರಿಗೆ ತಿಳಿದಿರುತ್ತದೆ, ಸರಿಯಾ?  
ಯಾವತ್ತಿಗೂ ದೂರದೇ ಇರುವವರೊಬ್ಬರು ಇದ್ದಕ್ಕಿದ್ದಂತೆ ದೂರಿದಾಗ ಸಮಸ್ಯೆಯುಂಟಾಗುತ್ತದೆ. ಯಾವತ್ತಿಗೂ ನಿಷ್ಠುರವಾಗಿರದಿರುವವರು ಇದ್ದಕ್ಕಿದ್ದಂತೆ ನಿಷ್ಠುರವಾದಾಗ, ಅದು ನಿಮಗೆ ಹೆಚ್ಚು ತೊಂದರೆಯನ್ನುಂಟುಮಾಡುತ್ತದೆ, ಅಲ್ಲವೇ?
ಒಂದೋ ನೀವು ಸಮಸ್ಯೆಯನ್ನು ಶಾಶ್ವತವಾಗಿಸುತ್ತೀರಿ ಅಥವಾ ಏನಾಗುತ್ತಿರುವುದೋ ಅದನ್ನು ನಿರ್ವಹಿಸಲಿರುವ ಕುಶಲತೆಯ ಕೊರತೆ ನಿಮ್ಮಲ್ಲಿರುತ್ತದೆ. ಇದಕ್ಕಿರುವ ಗುಣಗಳೆಂದರೆ ಇವುಗಳೆರಡೇ. ಹಾಗಾಗಿ ಈ ಪರಿಸ್ಥಿತಿಗಳನ್ನು ಕುಶಲತಾಪೂರ್ಣವಾಗಿ ನಿರ್ವಹಿಸು ಮತ್ತು ಅವುಗಳನ್ನು ಶಾಶ್ವತವಾಗಿಸಬೇಡ. 
 
ಸ್ವಲ್ಪ ಅಪರಿಪೂರ್ಣರಾಗಿರಲು ಪ್ರತಿಯೊಬ್ಬರಿಗೂ ಹಕ್ಕಿದೆ. ನೀವು ಇತರರ ಕುಂದುಕೊರತೆಗಳನ್ನು ಮತ್ತು ಹಾಗೆಯೇ ನಿಮ್ಮದೇ ಕುಂದುಕೊರತೆಗಳನ್ನು ಕೂಡಾ ಸ್ವೀಕರಿಸಬೇಕು. ನೀವು ಜನರ ಅಪರಿಪೂರ್ಣತೆಗಳನ್ನು ಸ್ವೀಕರಿಸದೇ ಇರುವಾಗ, ನೀವು ಕೋಪಗೊಳ್ಳುತ್ತೀರಿ. ಮತ್ತು ನೀವು ನಿಮ್ಮದೇ ಅಪರಿಪೂರ್ಣತೆಗಳನ್ನು ಸ್ವೀಕರಿಸದೇ ಇರುವಾಗ ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ ಮತ್ತು ನಂತರ ನೀವು ನಿಮ್ಮ ಮೇಲೆಯೇ ಕೋಪಗೊಳ್ಳುತ್ತೀರಿ. ಎರಡೂ ಪರಿಸ್ಥಿತಿಗಳು ನಿಮಗೆ ಆರೋಗ್ಯಕರವಲ್ಲ ಮತ್ತು ಒಳಿತಲ್ಲ. ಹಾಗಾಗಿ, ಅಪರಿಪೂರ್ಣತೆಗಳಿಗಾಗಿ ನೀವು ಜೀವನದಲ್ಲಿ ಸ್ವಲ್ಪ ಜಾಗವಿರಿಸಬೇಕು ಮತ್ತು ಸುಮ್ಮನೇ ಮುಂದುವರಿಯಬೇಕು. ಭೂತಕಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ.

ಪ್ರಶ್ನೆ: ಗುರುದೇವ, ಶ್ರೀಕೃಷ್ಣ ಪರಮಾತ್ಮನು ತನ್ನ ವಿಶ್ವರೂಪವನ್ನು ಅರ್ಜುನನಿಗೆ ಪ್ರಕಟಪಡಿಸಿದನು. ನೀವು ಯಾವಾಗ ನಿಮ್ಮ ವಿಶ್ವರೂಪವನ್ನು ಪ್ರಕಟಪಡಿಸುವಿರಿ ಮತ್ತು ಯಾರಿಗೆ?
ಶ್ರೀ ಶ್ರೀ ರವಿ ಶಂಕರ್: ನೋಡು, ಸಂಪೂರ್ಣ ಸೃಷ್ಟಿಯು ಭಗವಂತನ ಸ್ವರೂಪ. ವಿಶ್ವರೂಪ ದರ್ಶನ ಎಂಬುದರ ಅರ್ಥ ಇದುವೇ. ಅದರರ್ಥ, ಒಬ್ಬ ಭಗವಂತನನ್ನು ನಿನ್ನ ಸುತ್ತಲಿರುವ ಎಲ್ಲದರಲ್ಲೂ ನೋಡುವುದು; ಅದು ನದಿಗಳಾಗಿರಲಿ, ಬೆಟ್ಟಗಳಾಗಿರಲಿ, ಕಲ್ಲುಗಳಾಗಿರಲಿ, ಮನುಷ್ಯರಾಗಿರಲಿ ಅಥವಾ ಪ್ರಾಣಿಗಳಾಗಿರಲಿ.

ದೇವರೆಂದರೆ ಪ್ರೇಮ. ನೀವು ಮೊದಲು ಈ ವಿಶೇಷ ದೃಷ್ಟಿಯನ್ನು ಪಡೆದುಕೊಳ್ಳಬೇಕು, ನಂತರ ಮಾತ್ರವೇ ನಿಮಗೆ ಭಗವಂತನ ವಿಶ್ವರೂಪ ದರ್ಶನ ಪಡೆಯಲು ಸಾಧ್ಯ.
ಯಾವ ಸಂಕುಚಿತ ದೃಷ್ಟಿಯಿಂದ ನೀವು ಪ್ರಪಂಚವನ್ನು ಗ್ರಹಿಸುವಿರೋ ಅದು ಸಹಾಯ ಮಾಡದು. ಅದು ಯಾಕೆಂದರೆ, ’ಓ ಈ ವ್ಯಕ್ತಿ ಹೀಗೆ ಮತ್ತು ಆ ವ್ಯಕ್ತಿ ಹಾಗೆ’ ಎಂದು ನೀವು ಯೋಚಿಸುತ್ತಾ ಇರುತ್ತೀರಿ. ನಿಮ್ಮ ದೃಷ್ಟಿಯು ರಾಗ ದ್ವೇಷಗಳಿಂದ ಅಷ್ಟೊಂದು ಮಸುಕಾಗಿರುವಾಗ ನಿಮಗೆ ಭಗವಂತನ ವಿಶ್ವರೂಪವನ್ನು ಗ್ರಹಿಸಲು ಸಾಧ್ಯವಿಲ್ಲ. ಮೊದಲು ನೀವು ಈ ವಿಶಾಲವಾದ, ಎಲ್ಲವನ್ನೊಳಗೊಂಡ, ಪ್ರೇಮದ ದೃಷ್ಟಿಯನ್ನು ಪಡೆದುಕೊಳ್ಳಬೇಕು. ಅದನ್ನು ನಾನು ಹೇಗಿದ್ದರೂ ನಿಮಗೆ ಕೊಡುತ್ತಿದ್ದೇನೆ. ಒಮ್ಮೆ ನೀವು ಇದನ್ನು ಹೊಂದಿದ ಬಳಿಕ, ನಿಮಗೆ ತನ್ನಿಂತಾನಾಗಿಯೇ ಭಗವಂತನ ವಿಶ್ವರೂಪವನ್ನು ನೋಡಲಿಕ್ಕೆ ಸಾಧ್ಯವಾಗುವುದು.
ಪ್ರಶ್ನೆ: ಗುರುದೇವ, ಮಾನವ ಜನ್ಮ ಅಮೂಲ್ಯವಾದುದು ಮತ್ತು ಒಬ್ಬನು ಈ ಜನ್ಮವನ್ನು ೮೪ ಲಕ್ಷ ಯೋನಿಗಳ ಮೂಲಕ ಹಾದುಹೋದ ಬಳಿಕ ಪಡೆಯುತ್ತಾನೆ ಎಂದು ನೀವು ಹೇಳುತ್ತೀರಿ. ಆದರೆ ಇವತ್ತಿನ ಮಾನವರು ಬೆಳಗ್ಗೆ ಬೇಗ ಏಳಬೇಕು, ಸ್ಕೂಟರಿನಲ್ಲಿ ಅಥವಾ ಒಂದು ಲೋಕಲ್ ರೈಲಿನಲ್ಲಿ ಕೆಲಸಕ್ಕೆ ಧಾವಿಸಬೇಕು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕು. ಇದೆಲ್ಲಾ ಮಾಡಿ ಸಿಗುವುದು, ಕೇವಲ ಸುಸ್ತಾಗಿ ಮನೆಗೆ ಮರಳಿ ನಿದ್ರಿಸುವುದು. ಕೆಲವೊಮ್ಮೆ ಒಬ್ಬರಿಗೆ ಒತ್ತಡದಿಂದಾಗಿ ನಿದ್ರಿಸಲೂ ಸಾಧ್ಯವಾಗುವುದಿಲ್ಲ. ಇದೆಲ್ಲವನ್ನು ಎದುರಿಸಲು ೮೪ ಯೋನಿಗಳ ಮೂಲಕ ಹಾದುಹೋಗಬೇಕಿತ್ತೇ ಎಂದು ನಾನು ಯೋಚಿಸುತ್ತಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ಅದೊಂದು ಒಳ್ಳೆಯ ಯೋಚನೆ. ಹಿಂದಿಯಲ್ಲಿ ಒಂದು ಮಾತಿದೆ, ’ಅಜ್‌ಗರ್ ಕರೇ ನ ಚಾಕ್ರಿ, ಪಂಛಿ ಕರೇ ನ ಕಾಮ್. ದಾಸ್ ಮಲುಕಾ ಕೆಹ್ ಗಯೇ, ಸಬ್ ಕಾ ದಾತಾ ರಾಮ್’ (ಒಬ್ಬನು ಯಾವುದಕ್ಕಾಗಿಯೂ ಪ್ರಯತ್ನಗಳನ್ನು ಮಾಡಬೇಕಾಗಿಲ್ಲ, ಯಾಕೆಂದರೆ ದೇವರು ಪ್ರತಿಯೊಬ್ಬರಿಗೂ ಎಲ್ಲವನ್ನೂ ನೀಡುತ್ತಾನೆ).
ಎಲ್ಲರಿಗೂ ಎಲ್ಲವನ್ನೂ ಕೊಡುವುದು ದೇವರು ಎಂಬ ಈ ನಂಬಿಕೆಯಿರುವಾಗ, ಏನೇ ಬರಲಿ, ನೀವು ಯಾವತ್ತಿಗೂ ನಿಮ್ಮ ಉತ್ಸಾಹವನ್ನು ಕಳಕೊಳ್ಳಲಾರಿರಿ. ನೀವು ಆಫೀಸಿಗೆ ಹೋಗುವಾಗ ಅಥವಾ ಲೋಕಲ್ ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೇ ನಿಮ್ಮ ಸುತ್ತಲೂ ನೋಡಿ, ತಮ್ಮ ದೈನಂದಿನ ದಿನಚರಿಗಳನ್ನು ಮಾಡುತ್ತಾ ಹೋಗುತ್ತಿರುವಂತೆ, ಅಂತಹ ಒಳ್ಳೆಯ ಮತ್ತು ಸಕಾರಾತ್ಮಕ ಯೋಚನೆಗಳನ್ನು ಹೊಂದಿದ ಹಲವಾರು ಒಳ್ಳೆಯ ಜನರಿದ್ದಾರೆ.
ಕೆಲಸದ ಬಗ್ಗೆ ಚಿಂತೆ ಮಾಡುವುದರಿಂದ ಅದು ಮಾಡಿ ಮುಗಿಯುವುದಿಲ್ಲ. ಬುದ್ಧಿವಂತ ಯೋಚನೆ ಮತ್ತು ಕುಶಲತೆಯ ಮೂಲಕ ಅದನ್ನು ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಮ್ಮ ಮನಸ್ಸು ಪ್ರಶಾಂತವಾಗಿಯೂ ಸಂತೋಷವಾಗಿಯೂ ಇರಬೇಕಾಗುತ್ತದೆ. ಮತ್ತು ಕೆಲಸದಲ್ಲಿ ಅಷ್ಟೊಂದು ಕಷ್ಟಗಳಿರುವಾಗ ನೀವು ನಿಮ್ಮ ಮನಸ್ಸಿಗೆ ಆ ಪ್ರಶಾಂತತೆಯನ್ನೂ ಸಂತೋಷವನ್ನೂ ತರುವುದು ಹೇಗೆ? ಅದು, ನನಗೆ ಬೇಕಾಗಿರುವ ಎಲ್ಲವನ್ನೂ ನೀಡಲು ಮತ್ತು ನನ್ನನ್ನು ನೋಡಿಕೊಳ್ಳಲು ದೇವರಿದ್ದಾರೆ ಎಂಬ ಆ ನಂಬಿಕೆಯನ್ನು ಹೊಂದುವ ಮೂಲಕ.
ನನಗೆ ಹೇಳಿ, ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ನೀವು ಏನನ್ನೆಲ್ಲಾ ಬಯಸುವಿರೋ ಅದೆಲ್ಲವೋ ಈಡೇರುತ್ತದೆಯೆಂದು ಅನ್ನಿಸುತ್ತದೆ?
(ಸಭಿಕರಲ್ಲಿರುವ ಹಲವಾರು ಭಕ್ತರು ಕೈಗಳನ್ನೆತ್ತುತ್ತಾರೆ).
ಪ್ರಶ್ನೆ: ನನಗೆ ಯಾವುದನ್ನೂ ಸ್ಥಿರವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಗುಣವನ್ನು ನಾನು ನನ್ನಲ್ಲಿ ಹೇಗೆ ಬೆಳೆಸಬಹುದು?
ಶ್ರೀ ಶ್ರೀ ರವಿ ಶಂಕರ್: ಇದನ್ನು ನೀನಾಗಿಯೇ ತಿಳಿದುಕೊಳ್ಳಬೇಕು. ನಿನಗೆ ಯಾವುದನ್ನೂ ಸ್ಥಿರವಾಗಿ  ಮಾಡಲು ಸಾಧ್ಯವಿಲ್ಲವೆಂದು ನೀನು ಹೇಗೆ ಹೇಳುವೆ? ನೀನು ಯಾಕೆ ನಿನಗೆ ಹಾಗೆ ಲೇಬಲ್ ಹಚ್ಚುವೆ?
ಮೊದಲನೆಯದಾಗಿ, ನಿನಗೆ ಸರಿಯಾಗಿ ನಿನ್ನನ್ನೇ ತಿಳಿಯದು ಎಂಬುದನ್ನು ನೀನು ಒಪ್ಪಿಕೊಳ್ಳಬೇಕು. ನಿನಗೆ ನಿನ್ನನ್ನೇ ತಿಳಿಯದಿರುವಾಗ, ನಿನ್ನೊಳಗೆ ಎಷ್ಟೊಂದು ಶಕ್ತಿಯಿದೆಯೆಂಬುದು ನಿನಗೆ ತಿಳಿದಿರುವುದಿಲ್ಲ. ನೀನು ಎಷ್ಟೆಲ್ಲಾ ವಿಷಯಗಳನ್ನು ಮಾಡಬಲ್ಲೆಯೆಂಬುದರ ಬಗ್ಗೆ ನಿನಗೆ ಕಲ್ಪನೆಯೇ ಇಲ್ಲ. ಹಾಗಾಗಿ ಮೊದಲನೆಯದಾಗಿ ನೀನು, ’ಇದನ್ನು ಸ್ಥಿರವಾಗಿ ಮಾಡಲು ನನಗೆ ಸಾಧ್ಯವಿಲ್ಲ’ ಎಂಬ ಈ ಲೇಬಲನ್ನು ಸುಮ್ಮನೇ ತೆಗೆದುಹಾಕಬೇಕು. ಅದು ಭೂತಕಾಲವಾಗಿತ್ತು. ಈ ಕ್ಷಣ ನೀನು ಭಿನ್ನವಾಗಿರುವೆ. ಪ್ರತಿಕ್ಷಣವೂ ನೀನು ಹೊಸತು ಮತ್ತು ನೀನು ಮೊದಲಿದ್ದುದಕ್ಕಿಂತ ವಿಭಿನ್ನವಾಗಿರುವೆ.
ನಮ್ಮ ಜೀವನವು ಒಂದು ನದಿಯಂತೆ. ನೀನು ಅದೇ ನೀರಿಗೆ ಎರಡು ಸಲ ಇಳಿಯಲು ಸಾಧ್ಯವಿಲ್ಲ. ಹಾಗಾಗಿ ಜೀವನವು ಒಂದೇ ಸಮಯಕ್ಕೆ ನೂತನ ಮತ್ತು ಪುರಾತನ, ಎರಡೂ ಆಗಿದೆ. ನಿನ್ನ ಚೇತನವು ಕಲ್ಲುಗಳಿಗಿಂತ, ನದಿಗಳಿಗಿಂತ, ಬೆಟ್ಟಗಳಿಗಿಂತ ಮತ್ತು ವಿಶ್ವದಲ್ಲಿರುವ ಬೇರೆಲ್ಲದಕ್ಕಿಂತಲೂ ಹಳೆಯದಾಗಿದೆ. ವಾಸ್ತವವಾಗಿ, ಅದು ಸಾಕಷ್ಟು ಹಳೆಯದು, ಸೂರ್ಯನು ಅಷ್ಟೊಂದು ಹಳೆಯದಾಗಿರುವಂತೆಯೇ; ಅದು ಸುಮಾರು ೧೯ ಬಿಲಿಯನ್ ವರ್ಷಗಳಷ್ಟು ಹಳೆಯದು. ಆದರೂ ಪ್ರತಿದಿನವೂ ಸೂರ್ಯನ ಕಿರಣಗಳು ಹೊಸತು ಮತ್ತು ತಾಜಾವಾಗಿವೆ. ನಿನಗೆ ಯಾವತ್ತಿಗೂ ಅದೇ ಕಿರಣಗಳು ನಾಳೆ ಸಿಗುವುದಿಲ್ಲ.

ಪ್ರಶ್ನೆ: ಗುರುದೇವ, ನಾನು ನನ್ನ ಜೀವನವನ್ನು ಅದರ ಸಂಪೂರ್ಣ ಶಕ್ತಿಗನುಸಾರವಾಗಿ ಹೇಗೆ ಜೀವಿಸಬಹುದು?
ಶ್ರೀ ಶ್ರೀ ರವಿ ಶಂಕರ್: ಅದನ್ನೇ ನೀನು ಇಲ್ಲಿ (ಆರ್ಟ್ ಆಫ್ ಲಿವಿಂಗ್‌ನಲ್ಲಿ) ಕಲಿಯುತ್ತಿರುವುದು. ಅದು ಜೀವನದಲ್ಲಿ ವಿರೋಧಾಭಾಸಗಳನ್ನು ನಿಭಾಯಿಸುವ ಸಾಮರ್ಥ್ಯ: ಕ್ರಿಯೆಯೊಂದಿಗೆ ವಿರಮಿಸುವುದು. ನೀನು ಎಲ್ಲಾ ಸಮಯದಲ್ಲೂ ಕೇವಲ ಕ್ರಿಯಾಶೀಲನಾಗಿದ್ದರೆ, ಅದು ಕೆಲಸ ಮಾಡದು. ನೀನು ಕೇವಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ, ಆಗ ಕೂಡಾ ಅದು ಕೆಲಸ ಮಾಡದು. ನೀನು ಎರಡನ್ನೂ ಹಿಡಿದು ನಡೆಯಬೇಕು. ತಿಳಿಯಿತೇ?
ಅದೇ ರೀತಿಯಲ್ಲಿ, ನೀನು ಮೋಜುಪ್ರಿಯನಾಗಿದ್ದು ಯಾವತ್ತೂ ಮೋಜು ಮಾಡುತ್ತಾ ಇರಲು ಸಾಧ್ಯವಿಲ್ಲ. ನೀನು ಯಾವತ್ತೂ ಗಂಭೀರವಾಗಿರಲು ಕೂಡಾ ಸಾಧ್ಯವಿಲ್ಲ. ನಿನ್ನಲ್ಲಿ ಮೋಜುತನ ಮತ್ತು ಗಂಭೀರತೆಗಳಿರಬೇಕು.
ಅದೇ ರೀತಿಯಲ್ಲಿ, ನೀನು ವಿವೇಕಿಯಾಗಿ ಮತ್ತು ಸಂವೇದನಾಶೀಲನಾಗಿ ಇರಬೇಕು. ವಿವೇಕಿಗಳಾಗಿರುವವರು ಸಂವೇದನಾಶೀಲರಾಗಿರುವುದಿಲ್ಲ, ಮತ್ತು ಸಂವೇದನಾಶೀಲರಾಗಿರುವವರು ವಿವೇಕಿಗಳಾಗಿರುವುದಿಲ್ಲ. ನಿಮಗೆ ಎರಡೂ ಬೇಕು. ನೀವು ನೇರವಾಗಿರಬೇಕು, ಆದರೂ ನೀವು ವಿನಮ್ರರಾಗಿಯೂ ಕೂಡಾ ಇರಬೇಕು. ನೇರವಾಗಿರುವ ಜನರು ಹೆಚ್ಚಾಗಿ ತಾವು ನಿಷ್ಠುರವಾಗಿರುವುದಾಗಿ ಲೇಬಲ್ ಹಚ್ಚಿಸಿಕೊಳ್ಳುತ್ತಾರೆ ಮತ್ತು ವಿನಮ್ರರಾಗಿರುವವರು ಹಲವು ಸಲ ದುರ್ಬಲರಾಗಿಯೂ ಸೌಮ್ಯರಾಗಿಯೂ ಪರಿಗಣಿಸಲ್ಪಡುತ್ತಾರೆ. ನಮಗೆ ಎರಡರ ಒಂದು ಸಂಯೋಗದ ಅಗತ್ಯವಿದೆ: ನೇರವಾಗಿ ಮತ್ತು ವಿನಮ್ರರಾಗಿರುವುದು.

ಪ್ರಶ್ನೆ: ಗುರುದೇವ, ಪುರುಷೋತ್ತಮ ಯೋಗವನ್ನು ಪ್ರತಿಪಾದಿಸುವಾಗ, ಶ್ರೀಕೃಷ್ಣ ಪರಮಾತ್ಮನು ಮೂರು ತರಹದ ಪುರುಷರು: ಕ್ಷರ, ಅಕ್ಷರ ಮತ್ತು ಉತ್ತಮ ಪುರುಷರ ಬಗ್ಗೆ ಮಾತನಾಡುತ್ತಾನೆ. ದಯವಿಟ್ಟು ಇದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿ.
ಶ್ರೀ ಶ್ರೀ ರವಿ ಶಂಕರ್: ಕ್ಷರವೆಂದರೆ ಯಾವುದು ಬದಲಾಗುತ್ತಾ ಇರುವುದೋ ಅದು. ಸಂಪೂರ್ಣ ಜಗತ್ತು ಮತ್ತು ಅದರಲ್ಲಿರುವ ಎಲ್ಲವೂ ಬದಲಾಗುತ್ತಾ ಇರುತ್ತದೆ. ಹೀಗೆ ಯಾವುದು ನಿರಂತರವಾಗಿ ಬದಲಾಗುತ್ತಾ ಇರುವುದೋ ಅದು ಒಂದು ರೀತಿಯ ಪುರುಷ.

ಸುಮ್ಮನೇ ನಿಮ್ಮನ್ನು ಗಮನಿಸಿ,  ನಿಮ್ಮ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಏಳುತ್ತವೆ ಮತ್ತು ನಿಮ್ಮಲ್ಲಿ ಹಲವಾರು ಭಾವನೆಗಳು ಏಳುತ್ತವೆ. ನಿಮ್ಮ ಶರೀರ, ನಿಮ್ಮ ಯೋಚನೆಗಳು ಮತ್ತು ನಿಮ್ಮ ಭಾವನೆಗಳು, ಅವುಗಳೆಲ್ಲವೂ ನಿರಂತರವಾಗಿ ಬದಲಾಗುತ್ತಾ ಇರುತ್ತವೆ. ಈಗ, ಯಾವುದು ಬದಲಾಗುವುದಿಲ್ಲವೋ ಅದು ಅಕ್ಷರವೆಂದು ಕರೆಯಲ್ಪಡುವುದು. ಮತ್ತು ಈ ಎರಡು ಪ್ರಕಾರಗಳನ್ನು ಮೀರಿರುವ, ಅತ್ಯಂತ ಸೂಕ್ಷ್ಮ ಹಾಗೂ ಮೂಲಭೂತ ತತ್ವವನ್ನೇ ನಾವು ಪರಮ ಪುರುಷ ಎಂದು ಕರೆಯುವುದು.
 
ಪ್ರಶ್ನೆ: ಗುರುದೇವ, ನಮ್ಮ ಪ್ರಾಚೀನ ವಿದ್ವಾಂಸರು ಯಾವತ್ತಿಗೂ ನಮ್ಮ ಪವಿತ್ರ ಧರ್ಮಗ್ರಂಥಗಳನ್ನು, ಒಂದು ನಿರ್ದಿಷ್ಟ ಸ್ಥಳ ಅಥವಾ ಕಾಲಕ್ಕೆ ಮಾತ್ರ ಸೀಮಿತವಾಗಲು ಅಥವಾ ಪ್ರಸಕ್ತವಾಗಲು ಬಿಡಲಿಲ್ಲ ಎಂದು ನೀವು ಹೇಳಿರುವಿರಿ. ಹಾಗಾದಲ್ಲಿ, ಈ ಧರ್ಮಗ್ರಂಥಗಳು ಕೇವಲ ಈ ವಿದ್ವಾಂಸರಿಂದ ಹೇಳಲ್ಪಟ್ಟ ಕಥೆಗಳು ಮಾತ್ರವೇ ಅಥವಾ ಅವುಗಳು ನೈಜ ಜೀವನದ ಘಟನೆಗಳೇ?
ಶ್ರೀ ಶ್ರೀ ರವಿ ಶಂಕರ್: ಅವುಗಳೆಲ್ಲವೂ ಸತ್ಯ ಘಟನೆಗಳು. ಆದರೆ ಈ ನೈಜ ಘಟನೆಗಳ ಬಗ್ಗೆ ಬರೆಯುವಾಗ ಕೂಡಾ ನಮ್ಮ ವಿದ್ವಾಂಸರು, ನಿರೂಪಣೆಗಳು ಒಂದು ಜಾಗಕ್ಕೆ ಅಥವಾ ಕಾಲಕ್ಕೆ ಮಾತ್ರ ನಿಶ್ಚಿತವಾಗಲು ಅಥವಾ ಪ್ರಸಕ್ತವಾಗಲು ಬಿಡಲಿಲ್ಲ. ಇದು ನಮ್ಮ ಧರ್ಮಗ್ರಂಥಗಳ ವಿಶೇಷತೆಯಾಗಿದೆ.
ಇದು, ಎಲ್ಲಾ ಕಾಲಕ್ಕೂ ಸರಿಯಾಗುವಂತೆ ಮತ್ತು ಎಲ್ಲೆಡೆಯೂ ಪ್ರಸಕ್ತವಾಗುವಂತೆ ಒಂದು ಕವಿತೆಯನ್ನು ಬರೆಯಬೇಕೆಂದು ಒಬ್ಬರಲ್ಲಿ ಹೇಳಿದರೆ ಹೇಗೆಯೋ ಹಾಗೆ. ನೀವೊಂದು ಕವಿತೆಯನ್ನು ಕೇವಲ ಒಂದು ನಿರ್ದಿಷ್ಟ ಘಟನೆ ಅಥವಾ ದೀಪಾವಳಿ, ಹೋಳಿಯಂತಹ ಹಬ್ಬಕ್ಕಾಗಿ ಬರೆದರೆ, ಆಗ ನೀವು ಆ ಕವಿತೆಯನ್ನು ಆ ಸಮಯದಲ್ಲಿ ಮಾತ್ರ ಹಾಡಬಹುದು.

ಹೋಳಿಗಾಗಿರುವ ಹಾಡುಗಳನ್ನು ಬೇರೆ ಯಾವುದೇ ಹಬ್ಬದ ಸಮಯದಲ್ಲಿ ನೀವು ಹಾಡಲು ಸಾಧ್ಯವಿಲ್ಲ, ಅಲ್ಲವೇ? ಅಂತಹ ಹಾಡುಗಳು ವಿಶೇಷ ಸಮಯಗಳಿಗಾಗಿ ಮತ್ತು ನಿರ್ದಿಷ್ಟ ಸಂದರ್ಭಗಳಿಗಾಗಿರುತ್ತವೆ.
ಆದರೆ ಕೆಲವು ಹಾಡುಗಳು ಹೇಗಿರುತ್ತವೆಯೆಂದರೆ, ಅವುಗಳನ್ನು ಯಾವುದೇ ಕಾಲದಲ್ಲಾದರೂ ಹಾಡಬಹುದು. ಆದುದರಿಂದ, ಎಲ್ಲೆಡೆಯೂ ಮತ್ತು ಎಲ್ಲಾ ಕಾಲಗಳಲ್ಲೂ ಪ್ರಸಕ್ತವಾಗಿರಬೇಕೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಧರ್ಮಗ್ರಂಥಗಳು ಬರೆಯಲ್ಪಟ್ಟವು.

ಪ್ರಶ್ನೆ: ಗುರುದೇವ, ಎರಡು ದಿನಗಳ ಹಿಂದೆ ನೀವು, ’ಎಲ್ಲಾ ಅಸ್ತವ್ಯಸ್ತತೆಗಳ ನಡುವೆ, ಆಂತರಿಕ ಸ್ಥಿರತೆಯೊಂದಿಗೆ ಆಚರಿಸಿ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಆಳವಾದ ವಿಶ್ರಾಂತಿಯಲ್ಲಿರುವ ಪುಟ್ಟ ಕೃಷ್ಣನನ್ನು ಎಚ್ಚರಿಸಿ, ಯಾಕೆಂದರೆ ಇದು ವಿನೋದಪೂರ್ಣರಾಗುವ ಸಮಯ, ನಿಜವಾಗಿಯೂ! ಜ್ಞಾನವನ್ನು ವಿನೋದಪೂರ್ವಕವಾಗಿ ಬೋಧಿಸಿ’ ಎಂದು ಟ್ವೀಟ್ ಮಾಡಿದ್ದಿರಿ. ದಯವಿಟ್ಟು ಇದರ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿ ಶಂಕರ್: ಹೌದುಹೊರಗಿನ ಎಲ್ಲಾ ಅಸ್ತವ್ಯಸ್ತತೆಗಳ ನಡುವೆ, ಆಂತರಿಕ ಸ್ಥಿರತೆಯೊಂದಿಗೆ ಆಚರಿಸಿ. ಹೀಗೆ, ಹೊರಗೆ ಅಸ್ತವ್ಯಸ್ತತೆಯಿರುವಾಗ, ನೀವು ಆ ಆಂತರಿಕ ಸ್ಥಿರತೆಯನ್ನು ಪಡೆಯುವಿರಿ.
ಜ್ಞಾನವು ತಲೆಯ ಮೇಲೊಂದು ಹೊರೆಯಾಗಬಾರದು. ಅದು ಬಹಳ ಸಹಜವಾಗಿರಬೇಕು. ಹಾಗಾಗಿ ನೀವು ಜ್ಞಾನದ ಮೂಲಕ ವಿನೋದಪೂರ್ಣರಾಗಬೇಕು. ತಿಳಿಯಿತೇ?

ಪ್ರಶ್ನೆ: ಗುರುದೇವ, ನಾನು ಬಹಳಷ್ಟು ಪ್ರೀತಿಸುವ ಮತ್ತು ಗೌರವಿಸುವ ಒಬ್ಬರೆದುರು ಬುದ್ಧಿವಂತಿಕೆಯಿಂದ ಅಥವಾ ಜಾಣತನದಿಂದ ವರ್ತಿಸಲು ನನಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಾನು ಹಲವಾರು ತಿಳಿಗೇಡಿ ವಿಷಯಗಳನ್ನು ಮಾಡುತ್ತೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಚಿಂತಿಸಬೇಡ, ಅದು ಪರವಾಗಿಲ್ಲ. ಮೂರ್ಖತನದಿಂದ ವರ್ತಿಸುವುದರಲ್ಲಿ ಕೂಡಾ ಸ್ವಲ್ಪ ಸೌಂದರ್ಯವಿದೆ. ಆ ತಿಳಿಗೇಡಿ ವರ್ತನೆ ಕೂಡ ಜನರನ್ನು ರಂಜಿಸುತ್ತದೆ.
ಕೆಲವೊಮ್ಮೆ ತನ್ನ ರೀತಿಗಳಿಂದಾಗಿ ಒಬ್ಬ ಮೂರ್ಖ ವ್ಯಕ್ತಿಯು ನೀಡುವ ಆನಂದ ಮತ್ತು ರಂಜನೆಯನ್ನು ಒಬ್ಬ ಬುದ್ಧಿವಂತ ವ್ಯಕ್ತಿಯು ನೀಡಲಾರನು.