ಶುಕ್ರವಾರ, ಆಗಸ್ಟ್ 9, 2013

ಸುದೀರ್ಘ ಕ್ಷಣವಿದು

ಅಗಸ್ಟ್ ೦೯, ೨೦೧೩
ಬೆಂಗಳೂರು, ಭಾರತ


 ಪ್ರಶ್ನೆ: ಗುರುದೇವ, ವರ್ತಮಾನದ ಕ್ಷಣವು ಅನಂತವಾದುದು ಎಂದು ನೀವು ಹೇಳಿರುವಿರಿ. ಅದು ಅಗಾಧವಾದುದು ಮತ್ತು ಆಳವಾದುದು ಎರಡೂ ಆಗಿದೆ. ವರ್ತಮಾನದ ಕ್ಷಣದ ಅಗಾಧತೆ ಮತ್ತು ಆಳತೆಯ ಮೇಲೆ ನೀವು ದಯವಿಟ್ಟು ಪ್ರಕಾಶ ಬೀರಬಲ್ಲಿರೇ? ವರ್ತಮಾನದ ಕ್ಷಣದ ಅಗಾಧತೆ ಎಂಬುದರ ಅರ್ಥ, ಒಂದೇ ಸಮಯಕ್ಕೆ ಬಹಳಷ್ಟು ಸಂಗತಿಗಳು ಸಂಭವಿಸುತ್ತಿವೆಯೆಂದೇ?

ಶ್ರೀ ಶ್ರೀ ರವಿ ಶಂಕರ್:
ಹೌದು, ಅದುವೇ ಇದು. ಆಕಾಶದಂತೆಯೇ. ನಾವು ಹೆಚ್ಚಾಗಿ ’ಆಕಾಶದಷ್ಟು ಎಲ್ಲೆ’ ಎಂದು ಹೇಳುತ್ತೇವೆ, ಅಲ್ಲವೇ? ಅದರ ಅರ್ಥವೇನು? ಅದರರ್ಥ ಆಕಾಶವೆಂಬುದು ಎಲ್ಲೆಯಿಲ್ಲದಂತಹುದು. ಸಾಗರಕ್ಕೆ ಒಂದು ತಳವಿದೆ, ಆದರೆ ಆಕಾಶಕ್ಕೆ ಒಂದು ಸೂರು ಇಲ್ಲ. ಅದಕ್ಕೆ ಕೊನೆಯಿಲ್ಲ. ಅದು ಅಂತ್ಯವಿಲ್ಲದ್ದು ಮತ್ತು ಆರಂಭವಿಲ್ಲದ್ದು. ಹಾಗೆಯೇ ನಮ್ಮ ಚೇತನವಿರುವುದು, ಮತ್ತು ಹಾಗೆಯೇ ವರ್ತಮಾನದ ಕ್ಷಣ ಕೂಡಾ ಇರುವುದು. ಅದು ಎಷ್ಟೊಂದು ಆಳವಾದುದೆಂದರೆ, ವರ್ತಮಾನದ ಕ್ಷಣದಲ್ಲಿ ಸ್ಥಿರವಾಗಿ ಮತ್ತು ಸ್ಥಾಪಿತವಾಗಿರುವುದು ಮೋಕ್ಷವಾಗಿದೆ. ಹಾಗಾಗಿ ಹಿಂದಿನದರ ಬಗ್ಗೆ ಮರೆತುಬಿಡು ಮತ್ತು ಭವಿಷ್ಯದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸು. ಒಮ್ಮೆ ನಿನಗೆ ನಿನ್ನ ಭವಿಷ್ಯದ ಬಗ್ಗೆ ನಂಬಿಕೆ ಬಂದರೆ, ನಂತರ ನೀನು ಅದರ ಬಗ್ಗೆ ಯೋಚಿಸುವುದಿಲ್ಲ.

ಭವಿಷ್ಯದ ಬಗ್ಗೆ ನೀವು ಯಾವಾಗ ಚಿಂತಿಸುವಿರಿ ಎಂಬುದು ನಿಮಗೆ ಗೊತ್ತೇ? ನೀವು ಚಿಂತಿಸುವುದು ಯಾವಾಗ ಎಂದರೆ ಅದರ ಬಗ್ಗೆ ನಂಬಿಕೆ ಅಥವಾ ವಿಶ್ವಾಸ ಇಲ್ಲದಿರುವಾಗ. ನಿಮ್ಮ ಕಾರು ಹೊರಗಡೆ (ಪಾರ್ಕಿಂಗ್ ಲಾಟ್‌ನಲ್ಲಿ) ಇರುವುದು ಎಂಬ ನಂಬಿಕೆ ನಿಮ್ಮಲ್ಲಿರುವ ಕಾರಣದಿಂದಲೇ ನೀವಿಲ್ಲಿ ಚಿಂತೆಯಿಲ್ಲದೆ ಕುಳಿತುಕೊಂಡಿರುವುದು. ಅಲ್ಲವೇ? ಯಾರಾದರೂ ನಿಮ್ಮ ಕಾರನ್ನು ಎತ್ತಿ ಒಯ್ಯಬಹುದು ಎಂಬ ಭಯ ನಿಮ್ಮಲ್ಲಿದ್ದರೆ, ಆಗ ನೀವಿಲ್ಲಿ ಕುಳಿತಿದ್ದರೂ ನಿಮ್ಮ ಮನಸ್ಸು ಹೊರಗಡೆಯಿರುವ ನಿಮ್ಮ ಕಾರಿನ ಬಗ್ಗೆ ಚಿಂತಿಸುತ್ತಾ ಹೋಗುವುದು. ವಿಶ್ವಾಸವನ್ನು ಹೊಂದಿರುವುದು, ಭವಿಷ್ಯದ ಬಗ್ಗೆ ಚಿಂತಿಸುವುದರಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಕ್ಷಮಿಸುವುದು ಮತ್ತು ನಿಮ್ಮ ಭೂತಕಾಲವನ್ನು ಮರೆಯುವುದು ನಿಮ್ಮನ್ನು ಭೂತಕಾಲದಿಂದ (ಮರುಗುವಿಕೆಯಿಂದ) ಮುಕ್ತಗೊಳಿಸುವುದು. ನಮ್ಮ ಭೂತಕಾಲವು ಯಾವಾಗ ನಮ್ಮನ್ನು ವಿಹ್ವಲಗೊಳಿಸುತ್ತದೆ?

ಭೂತಕಾಲದಲ್ಲಿ ಏನೆಲ್ಲಾ ಸಂಭವಿಸಿತೋ ಅದಕ್ಕಾಗಿ ನಾವು ಜನರನ್ನು ಅಥವಾ ನಮ್ಮನ್ನೇ ಕ್ಷಮಿಸದಿರುವಾಗ, ಭೂತಕಾಲವು ನಮ್ಮ ಮೇಲೆ ಒಂದು ಭಾರವಾದ ಹೊರೆಯಾಗಿಬಿಡುತ್ತದೆ ಮತ್ತು ನಾವು ಭೂತಕಾಲದಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ನಾವು ಪೂರ್ಣವಾಗಿ ವರ್ತಮಾನದ ಕ್ಷಣದಲ್ಲಿರುವಾಗ ಮಾತ್ರ ನಾವು ಆಳವಾಗಿ ಒಳಕ್ಕೆ ಹೋಗುವುದು. ಅದು ಧ್ಯಾನ. ದೇವರು ಮತ್ತು ಪ್ರಪಂಚ ಎರಡು ಪ್ರತ್ಯೇಕ ಅಥವಾ ಬೇರೆ ಬೇರೆ ಘಟಕಗಳಲ್ಲ; ಅವುಗಳು ಒಂದೇ. ಒಂದು ಬದಿಯಲ್ಲಿ ನೆಹರೂರವರನ್ನು ಮತ್ತು ಇನ್ನೊಂದು ಬದಿಯಲ್ಲಿ ಸ್ವಲ್ಪ ತಿರುಗಿಸಿದರೆ ಮಹಾತ್ಮಾ ಗಾಂಧಿಯವರನ್ನು ನೋಡಬಹುದಾದಂತಹ ಆ ೩-ಡಿ ಚಿತ್ರಗಳನ್ನು ಅಥವಾ ಹಾಲೋಗ್ರಾಂಗಳನ್ನು ನೀವು ನೋಡಿದ್ದೀರಾ? ದೇವರು ಮತ್ತು ಪ್ರಪಂಚ ಇರುವುದು ಹಾಗೆಯೇ, ಒಂದು ೩-ಡಿ ಹಾಲೋಗ್ರಾಂನಂತೆಯೇ.

ಈ ’ಪ್ರಪಂಚ’ ಎಂಬುದರ ಅರ್ಥವೇನು? ನೀವು ನೋಡುವುದೇನೆಂದರೆ, ಕಾರ್ಬೋಹೈಡ್ರೇಟುಗಳು, ಪ್ರೊಟೀನುಗಳು ಮತ್ತು ಅಮಿನೋ ಆಸಿಡ್‌ಗಳು ಮೊದಲಾದವುಗಳು, ಅಲ್ಲವೇ? (ನಗು) ಅಂತಿಮವಾಗಿ ಎಲ್ಲವೂ ಮಾಡಲ್ಪಟ್ಟಿರುವುದು ಅವುಗಳಿಂದಲೇ.

ಆದರೆ ಇವುಗಳು ಟೊಳ್ಳು ಮತ್ತು ಖಾಲಿಯಾಗಿವೆ. ಚಡಪಡಿಕೆಯಿಂದಿರುವುದು ಹಾಗೂ ಕೆಲವು ಸಮಯಗಳಲ್ಲಿ ಮೇಲೆ ಕೆಳಗೆ ಹೋಗುತ್ತಿರುವುದು ಮನಸ್ಸಾಗಿದೆ. ವಿವಿಧ ಬಣ್ಣಗಳ ದೀಪಗಳು ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಬೆಳಗುತ್ತಿವೆ. ಕೆಲವರಲ್ಲಿ ಕೋಪದ ದೀಪವು ಬೆಳಗುತ್ತಿದೆ, ಕೆಲವರಲ್ಲಿ ಅದು ಅಸೂಯೆಯ ದೀಪ, ಮೊದಲಾದವು. ಸಮಯದಿಂದ ಸಮಯಕ್ಕೆ ತಮ್ಮ ಬಣ್ಣಗಳನ್ನೂ ಬದಲಾಯಿಸುವ, ದೀಪಾವಳಿ ಅಥವಾ ಕ್ರಿಸ್‌ಮಸ್ ದೀಪಗಳಂತೆಯೇ; ಸಂಜೆಯ ಹೊತ್ತಿನಲ್ಲಿ ದೀಪಗಳು ಉರಿಯುವಾಗ ವಿಶಾಲಾಕ್ಷಿ ಮಂಟಪದ ಮೇಲ್ಭಾಗವು ಹೇಗೆ ತನ್ನ ಬಣ್ಣಗಳನ್ನು ಬದಲಾಯಿಸುವುದೋ ಹಾಗೆಯೇ. ಮೂಲಭೂತ ಮಟ್ಟದಲ್ಲಿ ಎಲ್ಲವೂ ಕಣಗಳಿಂದ ಸಂಯೋಜಿಸಲ್ಪಟ್ಟಿವೆ. 

ನನ್ನನ್ನು ಸ್ವಿಟ್ಜರ್‌ಲ್ಯಾಂಡಿನ ಸಿ.ಇ.ಆರ್.ಎನ್. ಗೆ ಆಮಂತ್ರಿಸಲಾಯಿತು. ಅಲ್ಲಿ ಅವರು ಕಣಗಳ ಬಗ್ಗೆ ಸಂಶೋಧನೆ ನಡೆಸುತ್ತಾರೆ ಮತ್ತು ಇತ್ತೀಚೆಗೆ ’ದೇವ’ಕಣವನ್ನು ಕಂಡುಹಿಡಿದರು (ಹಿಗ್ಸ್ ಬೋಸನ್ ಕಣವು ಅತ್ಯಂತ ಚಿಕ್ಕದಾದ ಅವಿಭಾಜಕ ಕಣ ಮತ್ತು ವಸ್ತುವಿನ ಘಟಕವಾಗಿದೆಯೆಂಬ ಸಂಶೋಧನೆಯನ್ನು ಉಲ್ಲೇಖಿಸುತ್ತಾ). ಅಲ್ಲಿ ಕೆಲಸ ಮಾಡುವ ವಿಜ್ಞಾನಿಗಳನ್ನು ನಾನು ಭೇಟಿಯಾದೆ. ಅದೆಲ್ಲವೂ ಬಹಳ ಆಸಕ್ತಿಕರವಾಗಿತ್ತು. ಅವರೆಲ್ಲರ ಮುಖಗಳ ಮೇಲೆ ಒಂದು ಹೊಳಪಿತ್ತು, ಅವರು ವರ್ತಮಾನದ ಕ್ಷಣದಲ್ಲಿ ಜೀವಿಸುತ್ತಿರುವಂತೆ. ಅವರಲ್ಲಿ ಒಬ್ಬರು ಹೀಗೆಂದು ಹೇಳಿದರು, "ನಾನು ಕಣ ಭೌತಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾಗ ನಾನಿಲ್ಲಿಗೆ ಒಬ್ಬ ಸಹಾಯಕನಾಗಿ ಸೇರಿದೆ. ನಾನು ನಲುವತ್ತು ವರ್ಷಗಳವರೆಗೆ ಸಂಶೋಧನೆ ನಡೆಸಿ ಕಂಡುಬಂದದ್ದೇನೆಂದರೆ, ನಾನು ಸಂಶೋಧನೆ ನಡೆಸುತ್ತಿದ್ದ ಕಣವು ಅಸ್ತಿತ್ವದಲ್ಲಿಯೇ ಇಲ್ಲವೆಂದು!" ವೀಕ್ಷಕನ ಕಾರಣದಿಂದಾಗಿ ಮಾತ್ರ, ವಸ್ತುವು ಕಣಗಳನ್ನು ಒಳಗೊಂಡಿದೆಯೆಂದು ಗ್ರಹಿಸಲಾಗುವುದು. ನಾವು (ವೀಕ್ಷಕರಾಗಿ) ಇಲ್ಲದಿದ್ದರೆ, ಆಗ ಅದು ಕೂಡಾ ಇರುವುದಿಲ್ಲ. ನಾನು ಅವರಿಗೆ ಯೋಗ ವಾಸಿಷ್ಠ ಪುಸ್ತಕವನ್ನು ಮತ್ತು ನಮ್ಮ ಭಕ್ತರಾದ ಡಾ. ಡಿ.ಕೆ.ಹರಿ ಮತ್ತು ಶ್ರೀಮತಿ ಹೇಮಾ ಹರಿಯವರಿಂದ ಬರೆಯಲ್ಪಟ್ಟ ’ಸೃಷ್ಟಿ’ ಎಂಬ ಹೆಸರಿನ ಇನ್ನೊಂದು ಪುಸ್ತಕವನ್ನು ನೀಡಿದೆ. ಅವುಗಳು ಬಹಳವಾಗಿ ಹೋಲುತ್ತಿದ್ದವು. ನಾನು ಅವರಲ್ಲಿ, ’ದೇವ ಕಣ’ ಎಂದು ಯಾಕೆ ಹೆಸರಿಸಲಾಯಿತು ಮತ್ತು ಅವರು ಅದನ್ನು ಹೇಗೆ ಕಂಡುಹಿಡಿದರು ಎಂದು ಕೇಳಿದಾಗ ಅವರು ನನಗೆ ಒಂದು ಬಹಳ ಸುಂದರವಾದ ವಿಷಯವನ್ನು ಹೇಳಿದರು. ಅವರಂದರು, "ಗುರುದೇವ, ಮೊದಲಿಗೆ ನಾವು ಈ ಕಣವನ್ನು ’ಎಲ್ಲಾ ಕಣಗಳ ದೇವರು’ ಎಂದು ಕರೆಯಲು ಯೋಚಿಸಿದೆವು, ಯಾಕೆಂದರೆ ಇದು ಮೂಲಭೂತವಾದ ಕಣ, ಇದರಿಂದ ಇತರ ಎಲ್ಲವೂ  ಮಾಡಲ್ಪಟ್ಟಿದೆ. ಆದರೆ ಆಗ ಮಾಧ್ಯಮಗಳು ಹೇಳಿದುದೇನೆಂದರೆ, ಅಂತಹ ಒಂದು ಶೀರ್ಷಿಕೆ ಅನುಚಿತವಾಗಬಹುದು ಮತ್ತು ನಾವದನ್ನು ’ದೇವ ಕಣ’ ಎಂದು ಬದಲಾಯಿಸಬೇಕು ಎಂದು. ಹೆಸರು ಬಂದುದು ಹೀಗೆ."

ಈ ವಿಜ್ಞಾನಿಗಳು ಹೇಳಿರುವುದು, ನಮ್ಮ ವೇದಗಳಲ್ಲಿ ಪ್ರಾಚೀನ ದಿನಗಳಲ್ಲಿ ಬರೆಯಲಾದುದಕ್ಕೆ ಮತ್ತು ವಿವರಿಸಲಾದುದಕ್ಕೆ ಬಹಳವಾಗಿ ಹೋಲುತ್ತದೆ. ಪ್ರಪಂಚವು ೧೯ ಬಿಲಿಯನ್ ವರ್ಷಗಳಿಂದ ಅಸ್ತಿತ್ವದಲ್ಲಿದೆಯೆಂದು ವೇದಗಳು ಹೇಳುತ್ತವೆ.

ವಿಜ್ಞಾನಿಗಳು ಕೂಡಾ ಇದೇ ಸಂಖ್ಯೆಯ ಸಮೀಪಕ್ಕೆ ಬರುತ್ತಾರೆ. ಅಸ್ತಿತ್ವವು ೧೮ ಬಿಲಿಯನ್ ವರ್ಷಗಳಷ್ಟು ಹಳೆಯದು ಮತ್ತು ಮಾನವರು ೧೨ ಬಿಲಿಯನ್ ವರ್ಷಗಳಿಂದ ಅಸ್ತಿತ್ವದಲ್ಲಿದ್ದಾರೆ ಎಂದು ಅವರು ಹೇಳುತ್ತಾರೆ. ನಮ್ಮ ವೈದಿಕ ಪಂಚಾಂಗಗಳು ಕೂಡಾ ಅದೇ ತೀರ್ಮಾನಕ್ಕೆ ಬರುತ್ತವೆ.  ಪ್ರತಿಯೊಂದು ಕಾಲಘಟ್ಟದಲ್ಲಿದ್ದ ಜನರಿಗೆ ಇದರ ಬಗ್ಗೆ ಒಂದು ರೀತಿಯ ಜ್ಞಾನವಿತ್ತು ಎಂದು ನನಗನ್ನಿಸುತ್ತದೆ. ನಂತರ ಕಾಲಾನಂತರದಲ್ಲಿ ಈ ವಿಜ್ಞಾನಗಳು ಮಾಯವಾದವು ಮತ್ತು ಪ್ರಪಂಚದಿಂದ ಕಾಣೆಯಾದವು. ಆ ದಿನಗಳಲ್ಲಿ ಭಾರತದ ವಿಶ್ವವಿದ್ಯಾಲಯಗಳಲ್ಲಿ ಈ ಎಲ್ಲಾ ವಿಜ್ಞಾನಗಳನ್ನು ಕಲಿಸಲಾಗುತ್ತಿತ್ತು ಮತ್ತು ಚರ್ಚಿಸಲಾಗುತ್ತಿತ್ತು.

ನಮ್ಮಲ್ಲಿ ತಕ್ಷಶಿಲೆ ವಿಶ್ವವಿದ್ಯಾಲಯದಂತಹ ವೈದಿಕ ವಿಶ್ವವಿದ್ಯಾಲಯಗಳಿದ್ದವು (ಇವತ್ತು ಆಧುನಿಕ ದಿನದ ಪಾಕಿಸ್ತಾನದಲ್ಲಿ). ನಿಜವಾಗಿಯೂ ಆಯುರ್ವೇದ ವಿಜ್ಞಾನವು ಈಗ ಯಾವುದು ಪಾಕಿಸ್ತಾನವಾಗಿದೆಯೋ ಅಲ್ಲಿ ಹುಟ್ಟಿತು. ಹಿಂದೆ ಮಧ್ಯ ಯುಗಗಳಲ್ಲಿ ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳ ಬಗ್ಗೆ ಬಹಳಷ್ಟು ಆಳವಾದ ಸಂಶೋಧನೆ ನಡೆಸಲಾಗಿತ್ತು.

ನೈಮಿಶಾರಣ್ಯ ಎಂದು ಕರೆಯಲ್ಪಡುತ್ತಿದ್ದ ಕಾಡುಗಳ ಒಂದು ಪ್ರದೇಶವಿತ್ತು. ಅದನ್ನು ಇವತ್ತಿನ ಮಧ್ಯಪ್ರದೇಶ ರಾಜ್ಯದಲ್ಲಿ ಕಂಡುಹಿಡಿಯಲಾಯಿತು ಮತ್ತು ಬಹಳ ದೀರ್ಘ ಕಾಲದ ಹಿಂದೆ ಬರೆಯಲಾಯಿತು. ಆದರೆ ಒಂದು ವಿಜ್ಞಾನವಾಗಿ ಅದನ್ನು ತಕ್ಷಶಿಲೆ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ ಕಲಿಸಲಾಯಿತು. ಒಂದು ಕಾಲದಲ್ಲಿ ಹಲವಾರು ಮಹಾನ್ ಆಯುರ್ವೇದ ವೈದ್ಯರು, ವೃತ್ತಿಪರರು ಮತ್ತು ವಾಸ್ತುಶಿಲ್ಪಿಗಳೆಲ್ಲಾ ತಕ್ಷಶಿಲೆ ವಿಶ್ವವಿದ್ಯಾಲಯದಿಂದ ಬಂದರು. ಹೀಗೆ ಪ್ರಾಚೀನ ಮತ್ತು ಆಧುನಿಕ ವಿಧಾನಗಳು ಬಹಳ ಸಾಮ್ಯತೆಯುಳ್ಳವು. ನಾವು ಜೀವನದಲ್ಲಿ ಎರಡನ್ನೂ ಜೊತೆಯಲ್ಲಿ ತೆಗೆದುಕೊಳ್ಳಬೇಕು. ನಮ್ಮ ಜೀವನವು ಒಂದು ಮರದಂತೆ. ಬೇರುಗಳು ಹಳೆಯವು ಆದರೆ ಎಲೆಗಳು ಹೊಸತಾಗಿವೆ. ಹೀಗಾಗಿ ನಾವು ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನಗಳನ್ನು ನಮ್ಮೊಂದಿಗೆ ಜೊತೆಯಲ್ಲಿ ತೆಗೆದುಕೊಳ್ಳಬೇಕು.

ನಮ್ಮ ಹೃದಯವು ಹಳೆಯ ಮತ್ತು ಪರಿಚಿತವಾಗಿರುವುದಕ್ಕಾಗಿ ಹಂಬಲಿಸುತ್ತದೆ, ಆದರೆ ಮನಸ್ಸು ಯಾವತ್ತೂ ಯಾವುದೋ ಹೊಸತಕ್ಕಾಗಿ ಹಂಬಲಿಸುತ್ತದೆ. ನಮ್ಮ ಮನಸ್ಸು ಹೊಸ ವಿಷಯಗಳಿಗಾಗಿ ಮತ್ತು ಇತ್ತೀಚಿನ ಫ್ಯಾಷನ್‌ಗಳಿಗಾಗಿ ಹಂಬಲಿಸುತ್ತದೆ. ’ಹಳೆಯ’ ಫ್ಯಾಷನ್ ಯಾವುದಾಗಿತ್ತು ಎಂದು ನೀವು ಯಾವತ್ತೂ ಹೇಳುವುದಿಲ್ಲ, ನೀವು ಯಾವತ್ತೂ ಒಂದು ಫ್ಯಾಷನ್ ಆಗಿರುವುದನ್ನು ಹೊಸತೆಂದು ಕರೆಯುತ್ತೀರಿ, ಅಲ್ಲವೇ. ನಮ್ಮ ಮಿತ್ರರ ಬಗ್ಗೆ, ನಾವು ಯಾವತ್ತೂ ಅದೊಂದು ಹಳೆಯ ಗೆಳೆತನವೆಂದು ಹೇಳುತ್ತೇವೆ. ವಾಸ್ತವವಾಗಿ ಜನರು ಪ್ರೇಮದಲ್ಲಿ ಬೀಳುವಾಗ ಅವರು ಹೇಳುವುದೇನೆಂದರೆ, ಅದು ಅವರ ಹಿಂದಿನ ಜನ್ಮಗಳ ಪ್ರೇಮದ ಮುಂದುವರಿಕೆಯೆಂದು. ಕೇವಲ ಒಂದು ಜನ್ಮದಿಂದ ಮಾತ್ರವಲ್ಲ, ಆದರೆ ಹಲವಾರು ಜನ್ಮಗಳಿಂದ.

ಇದು ಯಾಕೆಂದರೆ, ಹೃದಯವು ಹಳತರಲ್ಲಿ ಹೆಮ್ಮೆ ಪಡುತ್ತದೆ ಮತ್ತು ಮನಸ್ಸು ಯಾವುದೆಲ್ಲಾ ಹೊಸತಾಗಿರುವುದೋ ಅದರಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುತ್ತದೆ. ಜೀವನದಲ್ಲಿ ಎರಡೂ ಅಗತ್ಯವಾಗಿವೆ.

ಪ್ರಶ್ನೆ: ಗುರುದೇವ, ಸಮಾನಾಂತರ ವಿಶ್ವಗಳ ಬಗ್ಗೆ ದಯವಿಟ್ಟು ವಿವರವಾಗಿ ವಿವರಿಸಿ. ನಾವು ತದ್ರೂಪವಾಗಿ ಇತರ ವಿಶ್ವಗಳಲ್ಲಿ ಇದ್ದೇವೆ ಎಂಬುದು ನಿಜವೇ? ಈ ವಿಶ್ವದಲ್ಲಿನ ನಮ್ಮ ಕರ್ಮಗಳು ಇತರ ವಿಶ್ವಗಳಲ್ಲಿನ ನಮ್ಮ ಅವಳಿಜವಳಿಗಳ ಮೇಲೆ ಪ್ರಭಾವ ಬೀರುತ್ತವೆಯೇ? ಇತರ ವಿಶ್ವಗಳಿಗೆ ನಾವು ಪ್ರವೇಶವನ್ನು ಹೇಗೆ ಪಡೆಯಬಹುದು?

ಶ್ರೀ ಶ್ರೀ ರವಿ ಶಂಕರ್:
ಈ ವಿಶ್ವದಲ್ಲಿ ಕೆಲಸ ಮಾಡಲು ನಿನಗೆ ಬಹಳಷ್ಟು ಅವಕಾಶವಿದೆ. ಹೀಗಾಗಿ ಈಗಿನ ಮಟ್ಟಿಗೆ ನಾವು ಈ ವಿಶ್ವದ ಬಗ್ಗೆ ಚಿಂತಿಸೋಣ. ಈ ವಿಶ್ವದಲ್ಲಿ ನಾವು ಏನಾದರೂ ಒಳ್ಳೆಯದನ್ನು ಮಾಡೋಣ. ಎಲ್ಲಾ ಸಮಯವೂ ’ನನಗೇನು ಸಿಗುತ್ತದೆ?’ ಎಂದು ಮಾತ್ರ ಯೋಚಿಸದೇ ಇರೋಣ. ಈ ಪ್ರಪಂಚದಲ್ಲಿ ಬೆಂಕಿ ಎದ್ದಿದೆ (ಕಲಹ ಮತ್ತು ನೋವು) ಮತ್ತು ಈ ಬೆಂಕಿಯನ್ನು ನಂದಿಸಲು ಇಲ್ಲಿ ನಿನ್ನ ಅಗತ್ಯವಿದೆ. ಈ ಪ್ರಪಂಚದಲ್ಲಿ ಇವತ್ತು ಎಷ್ಟೊಂದು ಹಿಂಸಾಚಾರವಾಗುತ್ತದೆಯೆಂಬುದು ನಿನಗೆ ಗೊತ್ತೇ? ಅದು ನಂಬಲಸಾಧ್ಯವಾದುದು. ಹೀಗಾಗಿ ನಾವೆಲ್ಲರೂ ಈಗ ಈ ಪ್ರಪಂಚದಲ್ಲಿ ಏನಾದರೂ ಒಳ್ಳೆಯದನ್ನು ಮಾಡೋಣ. ನಿನಗೆ ಖಂಡಿತವಾಗಿಯೂ ಇತರ ಪ್ರಪಂಚಗಳನ್ನು ಪಡೆಯದಂತೆ ಭಾಸವಾಗದು. ನೀವು ಧ್ಯಾನದಲ್ಲಿ ಆಳಕ್ಕೆ ಹೋದಾಗ, ನಿಮಗೆ ವಿವಿಧ ಆಯಾಮಗಳಿಗೆ ಪ್ರವೇಶ ಸಿಗುತ್ತದೆ. ಅದರ ಹೊರತಾಗಿ ನೀವು ಒಳ್ಳೆಯ ಯೋಗ್ಯತೆ ಗಳಿಸಬೇಕು ಮತ್ತು ಅದು ನಿನ್ನಲ್ಲಿಗೆ ಬರುವುದು ನೀನು ಸೇವೆ ಮಾಡುವಾಗ. ಸೇವೆ, ಸಾಧನೆ ಮತ್ತು ಸತ್ಸಂಗಗಳನ್ನು ಮಾಡು ಹಾಗೂ ಬೇರೆ ಯಾವುದರ ಬಗ್ಗೆಯೂ ಚಿಂತಿಸಬೇಡ. ನನಗೆ ಕೂಡಾ ತಿಳಿಯದು. ಹಲವಾರು ವಿಶ್ವಗಳಿವೆ.

ಪ್ರಶ್ನೆ: ಗುರುದೇವ, ಪ್ರತಿಸಲವೂ ಧ್ಯಾನದ ಜ್ಞಾನದ ಬಗೆಗಿನ ನಿಮ್ಮ ಮಾತುಗಳಲ್ಲಿ ನೀವು ಅರಿವಿನ ಬಗ್ಗೆ ಉಲ್ಲೇಖಿಸಿರುವಿರಿ. ಈ ಅರಿವು ಎಂದರೇನು?

ಶ್ರೀ ಶ್ರೀ ರವಿ ಶಂಕರ್:
ನೀವೆಲ್ಲರೂ ಕೇಳಿಸಿಕೊಳ್ಳುತ್ತಿರುವಿರೇ? (ಸಭಿಕರು ’ಹೌದು’ ಎಂದು ಹೇಳುತ್ತಾರೆ). ಅದು ಅರಿವು.

ಪ್ರಶ್ನೆ: ಗುರುದೇವ, ಧ್ಯಾನದ ಬಳಿಕ ಅರಿವು ಬರುವುದು ಎಂದು ನೀವು ಹೇಳಿರುವಿರಿ. ಸಾಕಷ್ಟು ಅಭ್ಯಾಸದ ಬಳಿಕ ಒಬ್ಬರು ಧ್ಯಾನ ಮಾಡಬೇಕಾದ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ವಿವರಿಸಿ.

ಶ್ರೀ ಶ್ರೀ ರವಿ ಶಂಕರ್:
ಹೌದು, ಸಾಕಷ್ಟು ಅಭ್ಯಾಸದ ಬಳಿಕ ಧ್ಯಾನವು ತನ್ನಿಂತಾನೇ ಆಗುತ್ತದೆ. ನಂತರ ಆ ಹಂತವನ್ನು ತಲುಪಿದ ಬಳಿಕ, ನೀವು ಕುಳಿತುಕೊಳ್ಳುವಾಗ, ನಡೆಯುವಾಗ ಅಥವಾ ಮಾತನಾಡುವಾಗ ಅಥವಾ ಏನನ್ನಾದರೂ ಮಾಡುವಾಗ, ಧ್ಯಾನವಾಗುವುದು ಮುಂದುವರಿಯುತ್ತದೆ.

ಪ್ರಶ್ನೆ: ಗುರುದೇವ, ಯೋಚನೆಗಳು ಮತ್ತು ಭಾವನೆಗಳು ನಮ್ಮ ಕರ್ಮಗಳ ಮೇಲೆ ಪ್ರಭಾವ ಬೀರುತ್ತವೆಯೇ? ಶ್ರೀ ರಾಮಚರಿತಮಾನಸದಲ್ಲಿ ಹೇಳಿರುವಂತೆ, ’ಜಾಕಿ ರಹಿ ಭಾವನಾ ಜೈಸಿ, ಪ್ರಭು ಮೂರತ್ ದೇಖಿ ತಿನ್ ತೈಸಿ’ (ಅರ್ಥ: ಒಬ್ಬನು ಯಾವೆಲ್ಲಾ ರೀತಿಯಲ್ಲಿ ದೇವರನ್ನು ಗ್ರಹಿಸಲು ಪ್ರಯತ್ನಿಸುವನೋ, ಅದೇ ರೂಪದಲ್ಲಿ ದೇವರು ಅವನಿಗೆ ಕಾಣಿಸಿಕೊಳ್ಳುತ್ತಾರೆ).

ಶ್ರೀ ಶ್ರೀ ರವಿ ಶಂಕರ್:
ಹೌದು, ಅದು ನಿಜಕ್ಕೂ ಸರಿಯಾದುದು. ಒಬ್ಬನ ಯೋಚನೆಗಳು ಮತ್ತು ಭಾವನೆಗಳು ಇವುಗಳೆರಡೂ ಅವನ ಕರ್ಮವನ್ನು ನಿರ್ಧರಿಸುತ್ತವೆ. ಒಬ್ಬನು ತನ್ನ ಸುತ್ತಲಿರುವ ಜನರು ಮತ್ತು ವಸ್ತುಗಳನ್ನು ಗ್ರಹಿಸುವ ರೀತಿಯಲ್ಲೇ ಅವರು ಅವನಿಗೆ ಕಾಣಿಸಿಕೊಳ್ಳುತ್ತಾರೆ. ಜನರು ಯಾವ ರೀತಿಯಲ್ಲಿರುವರೆಂದು ನೀವು ಗ್ರಹಿಸುವಿರೋ ಅದೇ ರೀತಿಯಲ್ಲಿ ಅವರು ನಿಮಗೆ ಕಾಣಿಸಿಕೊಳ್ಳುತ್ತಾರೆ. ನೀವೊಬ್ಬ ವ್ಯಕ್ತಿಯನ್ನು ಒಬ್ಬ ಮಿತ್ರನಾಗಿ ಕಂಡರೆ, ಅವನು ನಿಮಗೆ ಒಬ್ಬ ಮಿತ್ರನಾಗಿ ಬರುತ್ತಾನೆ.

ಒಬ್ಬನನ್ನು ನೀವು ನಿಮ್ಮ ಶತ್ರುವೆಂದು ಪರಿಗಣಿಸಿದರೆ, ಅವನು ನಿಮ್ಮೊಂದಿಗೆ ಒಬ್ಬ ಶತ್ರುವಿನಂತೆ ವರ್ತಿಸುವನು. ಆಗ ಅವರು ಏನನ್ನೂ ಮಾಡದೇ ಇದ್ದರೂ ಕೂಡಾ ಅವರು ನಿಮ್ಮ ಶತ್ರುವಿನಂತೆ ಕಾಣಿಸುವರು. ’ಯಥಾ ದೃಷ್ಟಿ ತಥಾ ಸೃಷ್ಟಿ’ ಎಂದು ಹೇಳಲಾಗಿದೆ (ಅರ್ಥ: ಒಬ್ಬನ ದೃಷ್ಟಿ ಹೇಗಿರುವುದೋ ಹಾಗೆ ಅವನಿಗೆ ಪ್ರಪಂಚವು ಕಾಣಿಸುತ್ತದೆ).

ಪ್ರಶ್ನೆ: ಗುರುದೇವ, ಉಪನಿಷತ್ತುಗಳಲ್ಲಿ ಒಂದು ಉಕ್ತಿಯಿದೆ, ’ಸಹಜ್ ಸ್ಮರಣ್ ಹಿ ಉಸ್‌ಕಾ ಧ್ಯಾನ್ ಹೈ’. (ಅರ್ಥ: ಸುಮ್ಮನೇ ದೇವರ ಸ್ಮರಣೆ ಮಾಡುವುದೇ ಅವನ ಧ್ಯಾನವಾಗಿದೆ.) ಈ ಪ್ರಯತ್ನವಿಲ್ಲದ ಸ್ಮರಣೆ (ದೇವರ) ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್:
ನೀವು ಯಾವುದಾದರೂ ಕೆಲಸವನ್ನು ಮಾಡಬೇಕಾದಾಗ ನಿಮ್ಮ ಮನಸ್ಸು ಅದರಲ್ಲಿ ಬಹಳ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಆ ಕೆಲಸದ ಯೋಚನೆಯು ಬೆಳಗ್ಗಿನಿಂದ ಸಂಜೆಯವರೆಗೆ ನಿಮ್ಮೊಂದಿಗಿರುತ್ತದೆ. ಅಲ್ಲವೇ? ಉದಾಹರಣೆಗೆ, ಇಂತಿಂತ ಒಬ್ಬ ವ್ಯಕ್ತಿಗೆ ನೀವು ಏನನ್ನೋ ಹೇಳಬೇಕಾಗಿದೆಯೆಂದು ನಿಮಗನ್ನಿಸುತ್ತದೆ. ಈಗ, ನೀವೇನನ್ನು ಹೇಳಬೇಕಾಗಿದೆಯೋ ಅದನ್ನು ನೀವು ಹೋಗಿ ಆ ವ್ಯಕ್ತಿಗೆ ಹೇಳುವಲ್ಲಿಯವರೆಗೆ, ಆ ಯೋಚನೆಯು ಮತ್ತೆ ಮತ್ತೆ ನಿಮ್ಮ ಮನಸ್ಸಿಗೆ ಬರುತ್ತಾ ಇರುವುದಿಲ್ಲವೇ? ಇದುವೇ ಸಹಜ ಸ್ಮರಣೆ. ಒಮ್ಮೆ ನಿಮ್ಮ ಮನಸ್ಸು ಯಾವುದರ ಮೇಲಾದರೂ ತಳವೂರಿದರೆ, ಆಗ ಆ ವಿಷಯದ ಯೋಚನೆಗಳು ಮತ್ತೆ ಮತ್ತೆ ನಿಮ್ಮ ಮನಸ್ಸಿನಲ್ಲಿ ಬರುತ್ತಿರುತ್ತವೆ. ಮತ್ತು ಅದು ಅಪ್ರಯತ್ನವಾಗಿ ಆಗುತ್ತದೆ. 

ಪ್ರಶ್ನೆ: ಪ್ರೀತಿಯ ಗುರುದೇವ, ಅಷ್ಟಾಂಗ ಯೋಗದಲ್ಲಿನ (ಯೋಗಸೂತ್ರಗಳಲ್ಲಿ ಮಹಾಋಷಿ ಪತಂಜಲಿಯವರಿಂದ ನೀಡಲ್ಪಟ್ಟಂತೆ, ಯೋಗದ ಎಂಟು ಶಾಖೆಗಳಲ್ಲಿ ಒಂದನ್ನು ಉಲ್ಲೇಖಿಸುತ್ತಾ) ’ಪ್ರತ್ಯಾಹಾರ’ ಎಂಬುದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್:
ಪ್ರತ್ಯಾಹಾರವೆಂದರೆ ಬದಲಿ ಆಹಾರ. ಅದರರ್ಥ, ನೀವು ಸಾಧಾರಣವಾಗಿ ತಿನ್ನುವ ಆಹಾರವನ್ನು ತಿನ್ನುವುದರಿಂದ ದೂರವಿರುವುದು ಅಥವಾ ತ್ಯಜಿಸುವುದು ಮತ್ತು ಬೇರೇನನ್ನೋ ತಿನ್ನುವುದನ್ನು ಆಯ್ಕೆ ಮಾಡಿಕೊಳ್ಳುವುದು (ಆಧ್ಯಾತ್ಮಿಕ ಅಭ್ಯಾಸಗಳಿಗಾಗಿ ಶರೀರಕ್ಕೆ ಸರಿಹೊಂದುವಂತಹ ಆಹಾರವನ್ನು ಉಲ್ಲೇಖಿಸುತ್ತಾ). ನಮ್ಮ ಇಂದ್ರಿಯಗಳು ಬಹಿರ್ಮುಖವಾಗಿ ಹೋಗುವ ಪ್ರವೃತ್ತಿಯನ್ನು ಹೊಂದಿವೆ. ಅವುಗಳನ್ನು ಅಂತರ್ಮುಖವಾಗಿ ತರಲು ನಮಗೊಂದು ಬೇರೆಯ ರೀತಿಯ ಆಹಾರಪಥ್ಯ ಮತ್ತು ಆಲೋಚನೆಗಳ ಅಗತ್ಯವಿದೆ. ಅದು ’ಪ್ರತ್ಯಾಹಾರ’ವಾಗಿದೆ. ಅಳುತ್ತಿರುವ ಶಿಶುಗಳಿಗೆ, ಅವರನ್ನು ಶಾಂತಪಡಿಸುವುದಕ್ಕಾಗಿ ನಾವೊಂದು ಉಪಶಾಮಕವನ್ನು ನೀಡುವಂತೆಯೇ, ಚಡಪಡಿಸುತ್ತಿರುವ ಹಾಗೂ ಶಾಂತವಲ್ಲದ ಮನಸ್ಸಿಗೆ ನಾವು ಪ್ರತಿಯಾಗಿ ಏನನ್ನಾದರೂ ನೀಡುತ್ತೇವೆ. ಅದು ಪ್ರತ್ಯಾಹಾರವಾಗಿದೆ. ಅಂತರ್ಮುಖವಾಗಿ ಹೋಗುವುದು ಮೊದಲ ಹೆಜ್ಜೆಯಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಯಾವತ್ತೂ ಅತ್ಯುತ್ತಮವಾಗಿ ಸೇವೆ ಮಾಡಿದರೂ, ನನಗೆ ಯಾವತ್ತೂ ಹಣದ ಅಭಾವದ ಅನುಭವವಾಗುತ್ತದೆ. ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್:
ಹಣದ ಅಭಾವವನ್ನು ಯಾರು ಅನುಭವಿಸುವುದಿಲ್ಲ? ಪ್ರಪಂಚದಲ್ಲಿನ ಎಲ್ಲಾ ಸರಕಾರಗಳೂ ಹಣದ ಅಭಾವವನ್ನು ಅನುಭವಿಸುತ್ತಿವೆ. ಅಮೇರಿಕವು ದೊಡ್ಡ ಸಾಲದಲ್ಲಿದೆ. ಈ ದೇಶವು ಸಾಲದಲ್ಲಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬಹುತೇಕ ಇತರ ಪ್ರತಿಯೊಂದು ದೇಶವೂ ಸಾಲದಲ್ಲಿದೆ. ಇದೆಲ್ಲವನ್ನೂ ಒಂದು ವಿಶಾಲ ದೃಷ್ಟಿಕೋನದಿಂದ ನೋಡು, ಮತ್ತು ನಂತರ, ’ನನಗೇನು ಬೇಕೋ ಅದು ನನಗೆ ಲಭಿಸುತ್ತಿದೆ’ ಎಂಬುದು ನಿನಗೆ ಕಂಡುಬರುವುದು. ಪ್ರತಿಯೊಬ್ಬರ ಅಗತ್ಯಕ್ಕೆ ಸಾಕಾಗುವಷ್ಟು ಇದೆ, ಆದರೆ ಪ್ರತಿಯೊಬ್ಬರ ಲೋಭಕ್ಕೆ ಸಾಕಾಗುವಷ್ಟು ಇಲ್ಲ.

ಯಾವತ್ತೂ ಒಂದು ಸಮಸ್ಯೆಯನ್ನು ನೀವು ಅಮರಗೊಳಿಸಬಾರದು. ’ನಾನು ಯಾವತ್ತೂ ದುಃಖಿ’ ಅಥವಾ ’ನಾನು ಯಾವತ್ತೂ ರೋಗಿಷ್ಠ’ ಎಂದು ನೀವು ಯಾವತ್ತೂ ಹೇಳಬಾರದು. ಯಾರು ಯಾವತ್ತೂ ರೋಗಿಷ್ಠರಾಗಿರುತ್ತಾರೆ? ಯಾರಾದರೂ ಯಾವತ್ತೂ ರೋಗಿಷ್ಠರಾಗಿರಲು ಸಾಧ್ಯವೇ? ಇಲ್ಲ. ಹೆಚ್ಚಾಗಿ ನಾವು ಒಂದು ಸಮಸ್ಯೆಯನ್ನು ಸಾಧಾರಣೀಕರಿಸುತ್ತೇವೆ ಮತ್ತು ಅಮರಗೊಳಿಸುತ್ತೇವೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ.   

ಪ್ರಶ್ನೆ: ಗುರುದೇವ, ಒಂದು ಒಳ್ಳೆಯ ಸತ್ಸಂಗದ ಬಳಿಕ ನನಗೆ ನನ್ನೊಳಗೆ ಪ್ರಾಣದ ಒಂದು ಏರಿಕೆಯ ಅನುಭವವಾಗುತ್ತದೆ. ಆದರೆ ಸತ್ಸಂಗದ ಬಳಿಕ ನನಗೆ ಆಕ್ರಮಣಶೀಲತೆ ಮತ್ತು ಚಡಪಡಿಕೆಯ ಒಂದು ಹಠಾತ್ತನೆಯ ಅನುಭವ ಕೂಡಾ ಆಗುತ್ತದೆ. ದಯವಿಟ್ಟು ವಿವರಿಸಿ.

ಶ್ರೀ ಶ್ರೀ ರವಿ ಶಂಕರ್:
ಅದು ಒತ್ತಡದ ಬಿಡುಗಡೆಯಾಗುವುದಾಗಿದೆ. ಕೆಲವೊಮ್ಮೆ ಒತ್ತಡ; ಕಾರ್ಪೆಟ್‌ನ ಕೆಳಗಿರುವ ಧೂಳು ಈ ರೀತಿಯಲ್ಲಿ ಮೇಲೆ ಬರುತ್ತದೆ. ಅದರ ಬಗ್ಗೆ ಚಿಂತಿಸಬೇಡ.

ಪ್ರಶ್ನೆ: ಗುರುದೇವ, ಒಬ್ಬರು ನೌಕರಿಯಿಂದ ನಿವೃತ್ತರಾಗುವ ಸರಿಯಾದ ವಿಧಾನ ಯಾವುದು ಮತ್ತು ಅದರ ನಂತರ ಅವರು ಏನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್:
ನೋಡು, ಆಯ್ಕೆಯು ನಿನ್ನದು ಮತ್ತು ಆಶೀರ್ವಾದಗಳು ನನ್ನದು. ಭೂಮಿಯ ಮೇಲೆ ನೀನು ಮಾಡಬಹುದಾದುದು ಬಹಳಷ್ಟಿದೆ. ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕನಾಗು. ಬೇರೆ ಬೇರೆ ಜಾಗಗಳಿಗೆ ಹೋಗು ಮತ್ತು ಒಳ್ಳೆಯ ಕೆಲಸವನ್ನು ಮಾಡು, ಜಾಗೃತಿಯನ್ನು ಹರಡು. ನಮ್ಮ ಗ್ರಾಮಗಳಲ್ಲಿ ಬಹಳಷ್ಟು ಕೆಲಸ ಮಾಡುವುದಿದೆ. ಆರೋಗ್ಯ, ಶುಚಿತ್ವ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿಯನ್ನು ಸೃಷ್ಟಿಸು. ನೀನು ಆರ್ಟ್ ಆಫ್ ಲಿವಿಂಗ್‌ನ ಒಬ್ಬ ಶಿಕ್ಷಕನಾಗಬಹುದು ಮತ್ತು ಎಲ್ಲೆಡೆಗೆ ಹೋಗಿ ಜನರಿಗೆ ಕಲಿಸಬಹುದು.