ಸೋಮವಾರ, ಆಗಸ್ಟ್ 12, 2013

ಷರತ್ತುಗಳಿಲ್ಲದೆ ಪ್ರೀತಿಸಿ

ಆಗಸ್ಟ್ ೧೨, ೨೦೧೩
ಬೆಂಗಳೂರು, ಭಾರತ

ಪ್ರ: ಗುರುದೇವ್, ಯಾವಾಗ ಇಬ್ಬರು ವ್ಯಕ್ತಿಗಳಲ್ಲಿ ಪ್ರೀತಿ ಉಂಟಾಗುತ್ತದೊ ಆಗ ಅವರು ಮದುವೆಯಾಗಲು ನಿರ್ಧರಿಸುತ್ತಾರೆ. ನಂತರದಲ್ಲಿ ಪ್ರೀತಿಯು ನಂದುವುದರೊಂದಿಗೆ ಕೊನೆಗೊಳ್ಳುತ್ತದೆ. ಏಕೆ?

ಶ್ರೀಶ್ರೀ: ನೋಡಿ, ನಾನು ಈ ವಿಷಯವನ್ನು ವಿವರಿಸಲಾಗುವುದಿಲ್ಲ. ನನಗೆ ಇದರಲ್ಲಿ ಅನುಭವವಿಲ್ಲ (ನಗು). ಒಂದು ನನಗೆ ಮದುವೆಯ ವಿಷಯದಲ್ಲಿ ಅನುಭವವಿಲ್ಲ ಮತ್ತು  ಪ್ರೀತಿಯು ನಿರ್ಗಮನದಲ್ಲಿ ಕೊನೆಗೊಳ್ಳುವ ಅನುಭವವೂ ಇಲ್ಲ!

ನೋಡಿ, ಯಾವಾಗ ನಾವು ಒಬ್ಬ ವ್ಯಕ್ತಿಯನ್ನು ಏನನ್ನಾದರೂ ಪಡೆಯುವ ಸಲುವಾಗಿ ಪ್ರೀತಿಸುತ್ತೇವೆಯೊ, ಅಂತಹ ಪ್ರೀತಿಯು ಖಂಡಿತವಾಗಿ ಸಮಾಪ್ತಿಯಾಗುತ್ತದೆ. ಆದರೆ ಪ್ರತಿಯಾಗಿ ಏನನ್ನಾದರು ಕೊಡುವ ಅಥವಾ ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ಅಂಥಹ ಪ್ರೀತಿಯು ಕೊನೆಗೊಳ್ಳುವುದಿಲ್ಲ. ನೀವುಗಳು 'ಅವರಿಂದ ಏನನ್ನು ಪಡೆಯಬಹುದು?' ಎಂಬ ಭಾವನೆಯಿಂದಿದ್ದರೆ, ಸದಾ ಕಾಲ ಅವರಿಂದ ಪ್ರೀತಿಯ ಹೆಸರಲ್ಲಿ ಏನನ್ನಾದರೂ ಪಡೆಯುವ ಓಟದಲ್ಲೇ ಇರುತ್ತೀರ. ಅಂತಹ ಪ್ರೀತಿಯು ಒಂದಲ್ಲ ಒಂದು ದಿನ ಕೊನೆಗೊಳ್ಳಲೇಬೇಕು.

ಆದರೆ ನೀವು ಒಬ್ಬ ಕೊಡುವ, ಸದಾ ಕಾಲ ಅವರಿಗೆ ಹೇಗೆ ಸಮಾಧಾನವನ್ನು ಕೊಡಬಹುದು ಎಂಬುದನ್ನು ಚಿಂತಿಸುತ್ತಿದ್ದರೆ, ಅಂತಹ ಪ್ರೀತಿಯು ಬಹಳ ಕಾಲ ಬಾಳಿಕೆ ಬರುತ್ತದೆ. ನೀವು 'ನನ್ನ ಪತಿ/ ಪತ್ನಿಯನ್ನು ಹೇಗೆ ಸುಖವಾಗಿಡಲಿ?' ಎಂದು ಆಲೋಚಿಸಿದರೆ ಆ ಪ್ರೀತಿಯು ಉಳಿಯುತ್ತದೆ. ಮತ್ತು ಈ ಆಲೋಚನೆಯು ಇಬ್ಬರಿಂದಲೂ ಬರಬೇಕು. ನಂತರವಷ್ಟೇ ಇಬ್ಬರಲ್ಲೂ ಪ್ರೀತಿ ಉಳಿಯುತ್ತದೆ. ಇಬ್ಬರು ಒಂದೇ ಗುರಿಯನ್ನಿಟ್ಟುಕೊಳ್ಳಬೇಕು. ಯಾವಾಗ ಎರಡು ಗೆರೆಗಳು ವಿರುದ್ಧ ದಿಕ್ಕಿನಲ್ಲಿ ಹಾದುಹೋಗುತ್ತವೆಯೋ ಆಗ ಅವುಗಳು ಸಂಧಿಸುವುದಿಲ್ಲ. (ಇದರರ್ಥ, ಅವರ ಪ್ರೀತಿಯನ್ನುಳಿಸಿಕೊಳ್ಳಲು ತುಂಬಾ ಒದ್ದಾಡಬೇಕಾಗುತ್ತದೆ.) ಯಾವಾಗ ಇಬ್ಬರು ಒಟ್ಟಿಗೆ ಸಾಗಲು ಆರಂಭಿಸಿ ಒಬ್ಬರನ್ನೊಬ್ಬರು ಕೇಂದ್ರಬಿಂದುವನ್ನಾಗಿರಿಸಿ, ಒಂದೇ ಗುರಿಯೆಡೆಗೆ ಸಾಗುತ್ತಾರೋ ಆಗ ಪ್ರೀತಿಯು ಬಹುದೂರ ಸಾಗುತ್ತದೆ.  ಗೊತ್ತಾಯಿತೆ?

ಪ್ರ. ಗುರುದೇವ್, ಧರ್ಮವನ್ನನುಸರಿಸದೆ ನನಗೆ ಆಧ್ಯಾತ್ಮಿಕತೆಯಲ್ಲಿರಲು ಸಾಧ್ಯವೇ?  ಧರ್ಮವು ಅಗತ್ಯವೇ?

ಶ್ರೀಶ್ರೀ: ಆಧ್ಯಾತ್ಮಿಕತೆಯು ಧರ್ಮದ ಒಂದು ಭಾಗ. ಆಧ್ಯಾತ್ಮಿಕತೆಯು ಎಲ್ಲರನ್ನು ಒಂದುಗೂಡಿಸುತ್ತದೆ. ಇದು ತನ್ನೊಳಗಿನಿಂದಲೆ ಬರುವಂತಹ ಅನುಭವ. ಇದೇ ಎಲ್ಲಾ ಧರ್ಮದ ತಿರುಳು.  ನೀವು ಆಧ್ಯಾತ್ಮಿಕತೆಯಲ್ಲಿದ್ದು ಧರ್ಮದಲ್ಲಿಲ್ಲ ಎಂದರೆ ಅದು ಸಾಧ್ಯವಾಗದು. ನಮ್ಮ ಜೀವನ ಹಾಗು ಸಮಾಜದಲ್ಲಿ ಧರ್ಮಕ್ಕೆ ಅದರದೇ ಆದ ಸ್ಥಾನ ಹಾಗು ಪ್ರಾಮುಖ್ಯತೆ ಇದೆ. ಆಧ್ಯಾತ್ಮಿಕತೆಗು ಅದರದೇ ಆದ ಸ್ಥಾನ ಇದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇದು ಎಲ್ಲರ ಹೃದಯಗಳನ್ನು ಬೆಸೆಯುತ್ತದೆ.

ಆಚಾರ, ಪದ್ಧತಿ, ಸಂಪ್ರದಾಯ ಇವುಗಳು ಧರ್ಮದ ಮುಖ್ಯ ಭಾಗಗಳು. ಇವುಗಳು ಸ್ವಾಸ್ಥ್ಯ ಸಮಾಜಕ್ಕೆ ಅತ್ಯಗತ್ಯ. ಆದರೆ ಹೃದಯಗಳನ್ನು, ಜೀವಾತ್ಮವನ್ನು ಬೆಸೆಯುವ  ಕಲೆಯೇ ಆಧ್ಯಾತ್ಮಿಕತೆ. ಇದು ಸಹ ಅತ್ಯಗತ್ಯ.

ಪ್ರ. ಗುರುದೇವ್, ಒಬ್ಬ ಗರ್ವಿಷ್ಟ ವ್ಯಕ್ತಿಯು ತನ್ನನ್ನು ಹಾಗು ತನ್ನ ಸಂಸಾರವನ್ನು ಮುಳುಗಿಸುತ್ತಿದ್ದಾನೆ ತನ್ನ ಅಹಂ ನಿಂದಾಗಿ. ನೀವು ಹೇಳಿದಿರಿ ಪ್ರೀತಿಯೊಂದೇ ದಾರಿ ಅಹಂ ಅನ್ನು ದೂರವಿಡಲು ಎಂದು. ಆದರೆ ಗುರುದೇವ್, ನನ್ನಲ್ಲಿ ಯಾವುದೇ ಪ್ರೀತಿಯು ಉಂಟಾಗುತ್ತಿಲ್ಲ ಆ ಅಹಂ ತುಂಬಿದ ವ್ಯಕ್ತಿಗಾಗಿ. ಇದಕ್ಕೆ ಪರಿಹಾರ ನೀಡಿ.

ಶ್ರೀಶ್ರೀ: ನೋಡಿ, ಒಬ್ಬರು ಅಹಂ ನಿಂದ ತುಂಬಿದ್ದರೆ ಅದು ಅಜ್ಞಾನ ಹಾಗು ಅರಿವಿನ ಅಭಾವ. ನೀವು ಅವರ ಮೂರ್ಖತನಕ್ಕೆ ಹಾಗು ಅಜ್ಞಾನಕ್ಕೆ ಕೋಪಿಸಿಕೊಂಡರೆ ನೀವೂ ಕೂಡ ಅವರಂತೆಯೇ ಅಜ್ಞಾನ ಹಾಗು ಮೂರ್ಖತನಕ್ಕೆ ಒಳಗಾಗುತ್ತೀರ. ಆದ್ದರಿಂದಾಗಿಯೆ ನಾವು ಅವರಿಗಾಗಿ ಅನುಕಂಪ ಹೊಂದಬೇಕು. ನೀವು ತಿಳಿಯಬೇಕು ಆ ವ್ಯಕ್ತಿಯು ಈ ರೀತಿ ಯಾಕೆ ವರ್ತಿಸುತ್ತಿದ್ದಾನೆಂದರೆ ಅವನಲ್ಲಿ ಜ್ಞಾನ, ಅರಿವುಗಳು ಅವನ ಅಹಂನಲ್ಲಿ ಮುಳುಗಿಹೋಗುತ್ತಿವೆ ಎಂದು. ಇದನ್ನು ತಿಳಿಯುವುದರಿಂದ ನಮ್ಮ ಮನಸ್ಸನ್ನು ಕೋಪದಿಂದ ಉಳಿಸಿಕೊಳ್ಳಬಹುದು. ಇಲ್ಲವಾದರೆ ನೀವು ನಿಮ್ಮ ಕೋಪದಿಂದ ಸುಟ್ಟು ಹೋಗಬೇಕಾಗುತ್ತದೆ. ಮತ್ತು ಮನಸ್ಸಿನ ಶಾಂತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಯಾರದೋ ಮೂರ್ಖತನದಿಂದ. ಅದರಿಂದ ಉಪಯೋಗವೇನು?

ಪ್ರ. ಗುರುದೇವ್, ಯಾರಾದರು ನಮ್ಮನ್ನು ಸತತ ತೊಂದರೆಗೊಳಪಡಿಸುತ್ತಿದ್ದಲ್ಲಿ ಅದನ್ನು ಹೇಗೆ ಸಹಿಸಿಕೊಳ್ಳುವುದು, ಅಂಥ ಸ್ಥಿತಿಯಲ್ಲಿ ಏನು ಮಾಡಬಹುದು? ನಮ್ಮ ತಾಳ್ಮೆಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು? 

ಶ್ರೀಶ್ರೀ: ಇದು ನಿಮ್ಮ ವೈಯುಕ್ತಿಕ ತೊಂದರೆಯೇ? ಅಥವಾ ನನ್ನಲ್ಲಿ ನೇರವಲ್ಲದ ಪ್ರಶ್ನೆಯನ್ನು ಕೇಳುತ್ತಿರುವಿರೆ? ನೀವು ನನ್ನಿಂದ ನೇರವಾದ ಉತ್ತರವನ್ನು ನೇರವಲ್ಲದ ಪ್ರಶ್ನೆಗೆ ಕೇಳಿದರೆ (ನಗು) ಅದು ಹೇಗೆ ಸಾಧ್ಯ?

ನೀವು ಪರಿಸ್ಥಿತಿಯನ್ನು ನೋಡಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ. ಯಾರಾದರು ನಿಮಗೆ ಸತತವಾಗಿ ತೊಂದರೆ ಕೊಡುತ್ತಿದ್ದರೆ ಒಂದು ಅಲ್ಲಿಂದ ಹೊರಹೋಗಿ ಇಲ್ಲ  ಅವರನ್ನು ಎದುರಿಸಿ. ಒಬ್ಬರ ಪೀಡನೆಯನ್ನು ಸಹಿಸಿಕೊಳ್ಳುವಂತೆ ನಾನು ಸೂಚಿಸುವುದಿಲ್ಲ.

ಪರಿಸ್ಥಿತಿಯನ್ನು ಜ್ಞಾನದಿಂದ, ಜಾಣ್ಮೆಯಿಂದ, ಶಕ್ತಿಯಿಂದ ಹಾಗು ಪ್ರೀತಿಯಿಂದ ಗೆಲ್ಲಲು ಪ್ರಯತ್ನಿಸಿ. ಇದನ್ನು ಅಧಿಕಾರ ಮಾತ್ರದಿಂದ ಮಾಡಲು ಸಾಧ್ಯವಿಲ್ಲ. ಯಾರಾದರು ದೈಹಿಕ ಶಕ್ತಿಯಿಂದ ಇದನ್ನು ನಿವಾರಿಸುತ್ತೇನೆಂದರೆ ಅದು ಅಸಾಧ್ಯ. ಅಲ್ಲಿ ಜಾಣ್ಮೆ, ಜ್ಞಾನ ಹಾಗು ಕ್ರಿಯೆಯು ಮುಖ್ಯವಾಗುತ್ತದೆ. ಪ್ರೀತಿಯು ಕಠಿಣ ಕಲ್ಲನ್ನೂ ಕರಗಿಸುತ್ತದೆ. ಪ್ರೇಮದಿಂದ ನೀವು ಬದಲಾವಣೆ ತರಲು ಸಾಧ್ಯ.

ಪ್ರ.  ಗುರುದೇವ್, ಮಹನೀಯರು ಹೇಳಿದ್ದಾರೆ ಈ ಪ್ರಪಂಚವು ಕನ್ನಡಿಯಿದ್ದಂತೆ. ನಾವೇನೇ ಮಾಡಿದರು ಜೀವನದಲ್ಲಿ ಅದು ನಮಗೇ ತಿರುಗಿ ಬರುತ್ತದೆ. ಮತ್ತೆ ಏಕೆ ಒಳ್ಳೆಯ ವ್ಯಕ್ತಿಗಳು ಒಳ್ಳೆಯದನ್ನು ಮಾಡಿದರೂ ಕೆಟ್ಟ ಕಾಲವನ್ನು ಕಳೆಯಬೇಕು?

ಶ್ರೀಶ್ರೀ: ಇದೊಂದು ವಿಸ್ತಾರವಾದ ಚರ್ಚೆ. ನಾನು ಇದರ ಬಗ್ಗೆ ವಿಶದವಾಗಿ 'ಸೆಲೆಬ್ರೇಟಿಂಗ್ ಸೈಲೆನ್ಸ್' ಎಂಬ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಒಳ್ಳೆಯ ವ್ಯಕ್ತಿಗಳು ಅವರ ಒಳ್ಳೆಯ ಗುಣ ಹಾಗು ಪುಣ್ಯದಿಂದ ತೊಂದರೆಯನ್ನನುಭವಿಸುವುದಿಲ್ಲ. ಇದಕ್ಕೆ ಬೇರೆ ಬೇರೆಯಾದ ಕಾರಣಗಳಿವೆ ಅದನ್ನು ನಾವು ನೋಡಬೇಕು.

ಪ್ರ. ಗುರುದೇವ್, ಜೀವನದಲ್ಲಿ ಒಂದು ದೊಡ್ಡ ನಿರ್ಣಯಕ್ಕೆ ಮುನ್ನ ಒಂದು ವಿರಾಮ ಸ್ಥಿತಿ ಬರುತ್ತದೆ. ಅನೇಕ ವೇಳೆ ಅನ್ನಿಸುತದೆ, ನಾನು ಸರಿಯಾದ ನಿರ್ಧಾರಕ್ಕೆ ಬಂದಿದ್ದೇನೆಯೋ ಇಲ್ಲವೋ ಎಂದು. ನಾನು ಸರಿಯಾದ ನಿರ್ಧಾರವನ್ನು ಹೇಗೆ ಕೈಗೊಳ್ಳಲಿ?

ಶ್ರೀಶ್ರೀ: ನಿಮ್ಮ ಹಿಂದಿನ ಜೀವನದತ್ತ ಒಮ್ಮೆ ತಿರುಗಿ ನೋಡಿ. ಇದೇನು ಮೊದಲ ಸಲವಲ್ಲ, ಹಿಂದೆಯೂ ನಿಮ್ಮ ಮನಸ್ಸು ಇಕ್ಕಟ್ಟಿಗೆ ಒಳಗಾಗಿತ್ತು. ಇಂಥಹ ಪ್ರಶ್ನೆಗಳು ಹಾಗು ಸನ್ನಿವೇಶವನ್ನು ಹಿಂದೆಯೂ ಎದುರಿಸಿದ್ದೀರಿ. ಎಲ್ಲ ಸಮಯದಲ್ಲೂ ಅದರಿಂದ ಹೊರಗೆ ಬರುವಂತಹ ಸಹಾಯವು ಒದಗಿ ಬಂದಿತ್ತು. ಮತ್ತು ನೀವು ಯಾವಾಗ ಸಹಾಯಕ್ಕಾಗಿ ಯಾಚಿಸಿದರೂ ಆ ಸಹಾಯವು ಒದಗಿ ಬರುತ್ತದೆ. ನಿಮ್ಮ ಗೊಂದಲವು ತಕ್ಕ ಸಮಯದಲ್ಲಿ ನಿವಾರಣೆಯಾಗುತ್ತದೆ ಚಿಂತಿಸದಿರಿ.

ಪ್ರ. ಗುರುದೇವ್, 'ಮುಂಡನ್ ಸಂಸ್ಕಾರ' ದ ಪ್ರಾಮುಖ್ಯತೆಯನ್ನು ತಿಳಿಸಿ. ದಯಮಾಡಿ ಅದರ ಬಗ್ಗೆ ವಿವರಿಸಿ.

ಶ್ರೀಶ್ರೀ: ನಮ್ಮ ಹಿರಿಯರು ಹೇಳಿದ್ದಾರೆ, ಮಗುವಿನ ಮೊದಲ ಕೂದಲನ್ನು ತೆಗೆಯಬೇಕೆಂದು. ನಂತರ ಹೊಸ ಕೂದಲು ಬೆಳೆಯುತ್ತದೆ. ಮೊದಲ ಹಲ್ಲುಗಳೆಲ್ಲಾ ಬಿದ್ದು ನಂತರ ಹೇಗೆ ಹೊಸ ಹಲ್ಲುಗಳು ಬರುತ್ತವೋ ಹಾಗೆಯೇ ಇದು. ಆದರೆ ಕೂದಲನ್ನು ತೆಗೆಯಬೇಕು ಅದು ಹಲ್ಲಿನ ಹಾಗೆ ತನಗೆ ತಾನೇ ಉದುರುವುದಿಲ್ಲ. ಕೆಲವು ಸಮಯದಲ್ಲಿ ಅವು ಬೆಳೆಯುತ್ತವೆ.

ಮುಂಡನ ಸಂಸ್ಕಾರವು ಸಂಪ್ರದಾಯಬದ್ದ ಆಚರಣೆ. ನಾವು ಈ ಪ್ರಪಂಚಕ್ಕೆ ಬಂದಿದ್ದೇವೆ, ನಿರ್ವಹಿಸಲು ಕೆಲವು ಜವಾಬ್ದಾರಿಗಳಿವೆ ಎಂಬುದನ್ನು ಅದು ನೆನಪಿಸುತ್ತದೆ. ಜೀವನದ ಕೊನೆವರೆಗೂ ಸಕ್ರಿಯ ಸೇವೆ ಹಾಗು ತಂದೆ ತಾಯಿಯೆಡೆಗೆ ವಿಧೇಯರಾಗಿರಬೇಕೆಂಬುದ್ದನ್ನು ತಿಳಿಸುತ್ತದೆ. ಇದೇ ಮುಂಡನ್ ಸಂಸ್ಕಾರದ ಉದ್ದೇಶ. ಮನುಷ್ಯನ ಜೀವನದಲ್ಲಿ ೧೬ ಸಂಸ್ಕಾರಗಳಿವೆ ಎಂಬುದಾಗಿ ಧರ್ಮಗ್ರಂಥ ತಿಳಿಸುತ್ತದೆ. ಹಾಗೆಯೇ ನಾಮಕರಣ ಸಂಸ್ಕಾರವೂ ಒಂದು.

ಪ್ರ. ಗುರುದೇವ್, ಶ್ರಾವಣ ಮಾಸ ಆರಂಭವಾಗಿದೆ. ಈ ಮಾಸದಲ್ಲಿ 'ರುದ್ರ ಪೂಜಾ' ದ ಪ್ರಾಮುಖ್ಯತೆಯೇನು?
ಶ್ರೀ.ಶ್ರೀ: ನೀವು ಧರ್ಮಗ್ರಂಥವನ್ನು ಓದಿದರೆ ನಿಮಗೆ ತಿಳಿಯುತ್ತದೆ ಎಲ್ಲಾ ಮಾಸಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದೆ. ಎಲ್ಲಾ ಮಾಸಗಳೂ ಒಳ್ಳೆಯವು ಹಾಗು ಶುಭಕರ. ಶ್ರಾವಣ ಮಾಸದಲ್ಲಿ ತುಂಬಾ ಮಳೆಯಾಗುತ್ತದೆ. ಈ ಸಮಯದಲ್ಲಿ ನೀವು ಕುಳಿತು ಧ್ಯಾನ ಹಾಗು ದೇವರ ಚಿಂತನೆ ಮಾಡಿ. ಭಾರತದ  ಹಿಂದಿನ ದಿನಗಳಲ್ಲಿ  ಮಳೆಗಾಲದಲ್ಲಿ ಹೆಚ್ಚು ಕೆಲಸ ಸಾಗುತ್ತಿರಲಿಲ್ಲ.

ಒಂದು ಕೃಷಿ ಭೂಮಿಯಲ್ಲಿ ಕೆಲಸ ಮಾಡಲಾಗುತ್ತಿರಲಿಲ್ಲ ಅಥವಾ ಮನೆಯ ಇತರೆ ಕೆಲಸಗಳೂ ಸಾಗುತ್ತಿರಲಿಲ್ಲ. ಆದ್ದರಿಂದ ಜನರು ಆಲಸಿಗಳಾಗಿರುತ್ತಿದ್ದರು. ಮನೆಯಲ್ಲೇ ಇದ್ದು ಬೇಜಾರಾಗಿ ಮತ್ತೊಬ್ಬರ ಮುಖ ನೋಡಿದರೆ ಕೋಪ  ಕಾರುತ್ತಿದ್ದರು.

ಇದೆಲ್ಲದರ ಬದಲಾಗಿ ದೇವರ ಜಪವನು ಮಾಡುವಂತೆ ತಿಳಿಸಲಾಯಿತು. ಎಲ್ಲದರಲ್ಲಿಯೂ ಶಿವನನ್ನು ಕಾಣುವಂತೆ ಹೇಳಲಾಯಿತು. ಶಿವನು ಎಲ್ಲರ ಹೃದಯಾಳದಲ್ಲಿ ನೆಲಸಿದ್ದಾನೆ. ಅವನು 'ನಿರ್ಗುಣ' (ಒಂದು ಆಕೃತಿ ಅಥವ ಗುಣಧರ್ಮ ಇಲ್ಲದಿರುವುದು). ಅವನು 'ನಿರಾಕಾರ' (ಆಕಾರ ಅಥವಾ ಆಕೃತಿ ಇಲ್ಲದಿರುವುದು). ಅವನು 'ಪರಬ್ರಹ್ಮ' (ಅಪ್ರತಿಮ ಅಲೌಕಿಕ ಪ್ರಜ್ಞೆ) ಇಂಬುದು ಎಲ್ಲೆಡೆಯೂ ವ್ಯಾಪಿಸಿದೆ. ಇದರಲ್ಲಿ ನಂಬಿಕೆ ಇಡಿ. ಇದೇ ರುದ್ರಪೂಜೆ.

ಪ್ರ. ಗುರುದೇವ್, ಕೆಲವು ದಿನದ ಹಿಂದೆ ನೀವು 'ಮಾಯಾ' ದ ಬಗ್ಗೆ ಹೇಳಿದಿರಿ. ನಾನು ನನ್ನ ಅತ್ತೆಯ ಬಗ್ಗೆ ಚಿಂತಿಸುತ್ತಿದ್ದೆ. ದೇವರು ಅವರಿಗೆ ಎಲ್ಲವನ್ನು ಕೊಟ್ಟಿದ್ದಾನೆ. ಅವರ ಹತ್ತಿರ ಒಳ್ಳೆಯ ಮನೆ, ಕಾರು, ಆಳು-ಕಾಳುಗಳು ಹಾಗು ನನ್ನಂಥ ಒಳ್ಳೆಯ ಸೊಸೆ ಎಲ್ಲವೂ ಇದೆ. ಆದರೂ ಅವರ ಮುಖ ಉಗ್ರವಾಗಿರುತ್ತದೆ. ಅನಿರೀಕ್ಷಿತವಾಗಿ ಅವರ ಹೆಸರು 'ಮಾಯಾ'. ಮಾಯಾ ನನಗೀಗ ತಿಳಿದಿದೆ. ಮಾಯದಿಂದ ಬಿಡಿಸಿಕೊಳ್ಳುವುದನ್ನು ದಯವಿಟ್ಟು ತಿಳಿಸಿ (ನಗು).

ಶ್ರೀಶ್ರೀ: ನಾನು ಮೊದಲು ಮಾಯಳನ್ನು ಕೇಳಿ ನಂತರ ಹೇಳುತ್ತೇನೆ! (ನಗು).

ಬಹುಶಃ ಅವರಿಗೂ ಯಾರಿಂದಲೋ ಬಿಡಿಸಿಕೊಳ್ಳುವ ಇಚ್ಚೆ ಇರಬೇಕು. ಬಿಡುಗಡೆಯು ಕೇವಲ ಒಂದು ಕಡೆಯದಲ್ಲ. ನೋಡಿ, ನಿಮ್ಮ ಅಮ್ಮನು ಕೆಲವು ಸಲ ಬೈದಿರುತ್ತಾರೆ. ಹೌದಲ್ಲವೆ? ಅವರ ಅಮ್ಮನಿಂದ ಬೈಸಿಕೊಳ್ಳದಿರುವ ಒಂದೇ ಒಂದೂ ಹುಡುಗಿಯೂ ಇಲ್ಲದಿಲ್ಲ. ಇಲ್ಲಿರುವವರೆಲ್ಲರೂ ಅವರಮ್ಮನಿಂದ ಬೈಸಿಕೊಂಡವರೆ. ಹೌದಲ್ಲವೇ? ಆದರೆ ನಿಮ್ಮ ಅತ್ತೆಯು ಬೈದರೆ, ಅವರು ನಿಮ್ಮ ಅಮ್ಮನ 10%ನಷ್ಟೂ ಬೈದಿರುವುದಿಲ್ಲ. ನಿಮ್ಮ ಸ್ವಂತ ಅಮ್ಮ ನಿಮ್ಮನ್ನು ಖಂಡಿಸಿದರೆ ಅದನ್ನು ಸುಲಭವಾಗಿ ಅರಗಿಸಿಕೊಳ್ಳುತ್ತೀರ. ಆ ಚಿವುಟುವಿಕೆಯ ಅರಿವೇ ಆಗಿರುವುದಿಲ್ಲ. ನಿಮ್ಮ ಅಮ್ಮನೆಡೆಗಿನ ಪ್ರೀತಿ ಅವರು ಬೈದುದರಿಂದ ಕಡಿಮೆಯಾಗಿರುವುದಿಲ್ಲ. ಅಲ್ಲವೇ? ಇಲ್ಲ. ಅದು ಕಡಿಮೆಯಾಗುವುದಿಲ್ಲ. ಅತ್ತೆಯೂ ನಿಮ್ಮ ಅಮ್ಮನೇ. ಅವರು ನಿಮ್ಮ ಗಂಡನ ಅಮ್ಮ. ನಿಮ್ಮನ್ನು ಮಗಳೆಂದು ತಿಳಿದು ಕೆಲವೊಮ್ಮೆ ಒರಟಾದ ಮಾತಾಡಿರಬಹುದು. ಅದನ್ನು ಸುಲಭವಾಗಿ ತೆಗೆದುಕೊಂಡು ಒಪ್ಪಿಕೊಳ್ಳಿ. ನೀವು ಯಾಕೆ ಕ್ಷೋಭೆ ಹಾಗು ಪೀಡನೆಗೊಳಗಾಗುತ್ತೀರ? ಅದನ್ನು ಹೃದಯಕ್ಕೆ ಹಚ್ಚಿಕೊಂಡು ದುಃಖಿತರಾಗುತ್ತೀರ?

ನಿಮ್ಮ ಅತ್ತೆಯ ಹತ್ತಿರ ಹೋಗಿ ಲವಲವಿಕೆಯಿಂದ ಮಾತನಾಡಿ ಅವರ ಜೊತೆ ಇರಿ. ಸಂಸಾರ ಬಂಧನವು ಮುರಿಯದಂತೆ ನೋಡಿಕೊಳ್ಳಿ.

ನಾವುಗಳು ಇಂಥಹ ಸಣ್ಣ ಸಣ್ಣ ಕಾರಣಗಳನ್ನು ಮನಸ್ಸಿಗೆ ಹಚ್ಚಿಕೊಂಡು ದುಃಖಿತರಾಗುತ್ತೇವೆ. ಇದನ್ನು ಮಾಡಬಾರದು. ಸರಿಸುಮಾರು ನಿಮ್ಮ ಅಮ್ಮ ಹಾಗು ಅತ್ತೆಯವರು ಒಂದೇ ವಯಸ್ಸಿನವರಾಗಿರುತ್ತಾರೆ. ಅವರ ಗುಣಗಳು ಆದಷ್ಟೂ ಒಂದೇ ಆಗಿರುತ್ತವೆ. ನಿಮ್ಮ ಅಮ್ಮ ಬೈದರೆ ಅದನ್ನು ಅತ್ತೆಯ ಮನೆಯಲ್ಲಿ ತೀರಿಸಲು ಸಿದ್ದರಾಗಿರುತ್ತೀರ. ಕೆಲವು ಸಲ ಈ ಚುಚ್ಚುಮದ್ದುಗಳು ಕೆಲಸಮಾಡುವುದಿಲ್ಲ. ಕೆಲವು ಸಲ ಕೆಲ ಸಲಹೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಅತ್ತೆಯ ಮಾತುಗಳನ್ನು ನುಂಗಿಕೊಂಡು ಅವರನ್ನು ಪ್ರೀತಿಯಿಂದ ತಬ್ಬಿ. ನಂತರ ನಿಮ್ಮ ಸಂಸಾರ ಒಡೆಯುವುದಿಲ್ಲ. ನಿಮ್ಮ ಗಂಡನಿಗೆ ಖುಷಿಯಾಗುತ್ತದೆ ನಂತರದಲ್ಲಿ ನಿಮ್ಮ ಅತ್ತೆಯೂ ಖುಷಿಯಾಗಿರುತ್ತಾರೆ. ನನಗನ್ನಿಸುತ್ತಿದೆ, ಅತ್ತೆ-ಸೊಸೆಯರನ್ನು ಸಂಭಾಳಿಸುವುದು ಹೇಗೆ ಎಂಬ ಪುಸ್ತಕವನ್ನು ನಾನು ಬರೆಯಬಹುದೇನು ಮುಂದಿನ ದಿನಗಳಲ್ಲಿ (ನಗು).

ಸರಿ, ಇದಕ್ಕಾಗೇ ಒಂದು ಕೋರ್ಸ್ ಅನ್ನು ರಚಿಸೋಣ. ಅಲ್ಲಿ ಅತ್ತೆ-ಸೊಸೆಯರನ್ನು ಕೂರಿಸಿ ಅವರಿಗೆ ಇಷ್ಟ ಬಂದ ಹಾಗೆ ಸಾಕು ಎನ್ನುವಷ್ಟು ಬೈಯಲು ಹೇಳೋಣ. ಅದು ಮುಗಿದ ನಂತರ ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಾರೆ.

ಸಂಸ್ಕೃತದಲ್ಲಿ ಒಂದು ಸುಂದರವಾದ ಸುಭಾಷಿತವಿದೆ. 'ದದತು ದದತು ಗಾಲಿ, ಗಾಲಿ ಪಂತೊ ಭವತು'. ಗಾಲಿ ಎಂಬ ಶಬ್ದಕ್ಕೆ ಮೂರು ಅರ್ಥಗಳಿವೆ. ಮೊದಲನೆಯ ಗಾಲಿ ಪದದ ಅರ್ಥ ನಿಂದನೆ ಅಥವಾ ಧರ್ಮ ನಿಂದನೆ.  ಎರಡನೆಯ ಗಾಲಿ ಪದದ ಅರ್ಥ ಸಂಪತ್ತು ಅಥವಾ ಆಸ್ತಿ. ಮೂರನೆಯ ಗಾಲಿ ಪದದ ಅರ್ಥ ಚಕ್ರ, ಅಂದರೆ ಮುಂದುವರೆಯುವ ಲಕ್ಷಣ. ಆದ್ದರಿಂದ ನಿಂದಿಸುವವರಿಗೆ ನೀವು ಹೇಳಬೇಕು "ನೀನು ನನ್ನನ್ನು ನಿಂದಿಸುತ್ತಲೇ ಇರು ಆದರೆ ನಾನು ಮಾತ್ರ ನಿನಗೆ ಸಂಪತ್ತು ಹಾಗು ಒಳ್ಳೆಯ ಬೆಳವಣಿಗೆ ಆಗಲಿ ಎಂದು ಆಶಿಸುತ್ತೇನೆ. ಇದು ನನ್ನ ಆಶೀರ್ವಾದ. ನೀನು ನನಗೆ ಎಷ್ಟೇ ಬೈದರೂ ನಾನು ನಿನಗೆ ಒಳ್ಳೆಯದನ್ನೇ ಬಯಸುತ್ತೇನೆ. ಪ್ರತಿಸಲ ನಿನ್ನ ಬೈಗುಳದಿಂದ ನನ್ನ ಕೆಟ್ಟ ಕರ್ಮಗಳು ಕಳಚುತ್ತವೆ".  ಪ್ರತಿಸಲ ಯಾರಾದರು ನಮ್ಮನ್ನು ನಿಂದಿಸಿದಾಗ, ಅವರು ನಮ್ಮ ಕೆಟ್ಟ ಕರ್ಮಗಳನ್ನು ತೆಗೆದು ಹಾಕುತ್ತಾರೆ. ಆದ್ದರಿಂದ ನಾವು ನಾಚಿಕೆ ಅಥವಾ ಕೋಪಿಸಿಕೊಳ್ಳಬಾರದು.

ಐದು ಬೆರಳುಗಳ ಮಧ್ಯೆ ಯಾರು ಬಲಿಷ್ಠರೆಂದು ಒಂದು ಚರ್ಚೆ ನಡೆಯುತ್ತಿತ್ತು. ನಿಮ್ಮಲ್ಲಿ ಎಷ್ಟು ಜನಕ್ಕೆ ಈ ಕಥೆಯು ಗೊತ್ತಿದೆ? (ಸಭಿಕರಲ್ಲಿ ತುಂಬಾ ಜನ ಕೈ ಎತ್ತುತ್ತಾರೆ). ನಾನು ಈ ಕಥೆಯನ್ನು 'ಗುರು ಪೂರ್ಣಿಮ'ದಂದು ಹೇಳಿದ್ದೇನೆ. ಇರಲಿ, ಮತ್ತೊಂದು ಬಾರಿ ಹೇಳುತ್ತೇನೆ. ಒಂದು ಬಾರಿ ಎಲ್ಲಾ ಬೆರಳುಗಳ ಮಧ್ಯೆ ಚರ್ಚೆ ನಡೆಯುತ್ತದೆ ಯಾರು ಬಲಿಷ್ಠರು ಅಥವಾ ಮಹತ್ವವುಳ್ಳವರು ಎಂದು. ಹೆಬ್ಬೆರಳು ಹೇಳಿತು, "ನಾನು ನಿಮ್ಮೆಲ್ಲರಿಗಿಂತ ಭಿನ್ನ. ನಾನು ಬಲಿಷ್ಠ. ಯಾರಾದರು ಗೆದ್ದರೆ ತಮ್ಮ ಹೆಬ್ಬೆರಳನ್ನು ಗೆಲುವಿನ ಸಂಕೇತವನ್ನಾಗಿ ತೋರಿಸುತ್ತಾರೆ. ನಾನೇ ಮಹತ್ವವುಳ್ಳವನು ಏಕೆಂದರೆ ನಾನು ವಿಜಯದ ಸಂಕೇತ".

ಇದನ್ನು ಕೇಳಿ ತೋರು(ಮೊದಲ) ಬೆರಳು ಹೇಳಿತು "ನಾನು ಎಲ್ಲರಿಗು ದಾರಿ ತೋರಿಸುವವನು. ನಾನು ರಸ್ತೆಯನ್ನು ತೋರಿಸಿದಾಗ ಮಾತ್ರವೇ ನೀವು ಸರಿಯಾದ ಮಾರ್ಗದಲ್ಲಿ ಹೋಗಿ ನಿಲ್ದಾಣವನ್ನು ತಲುಪುತ್ತೀರಿ. ನಾನು ದಾರಿ ತೋರುವೆ. ನಾನು ನಿನಗಿಂತ ದೊಡ್ಡವನು.  ನಾನೇ ಮಹತ್ವವುಳ್ಳವನು. "ಮಧ್ಯದ ಬೆರಳು ಹೇಳಿತು, ನಿಮ್ಮ ಮಧ್ಯೆ ಜಗಳ ಬೇಡ.

ಮಧ್ಯದತ್ತ ನೋಡಿ ಮತ್ತು ಎತ್ತರವಿರುವವರು ಯಾರು!. ಅದು ನಾನು. ನಾನು ಮಧ್ಯದಲ್ಲಿ ನಿಲ್ಲುತ್ತೇನೆ. ನಾನೇ ನಿಮ್ಮೆಲ್ಲರಿಗಿಂತ ಎತ್ತರ. ಅದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಚರ್ಚೆ ಮಾಡುವುದು ಮೂರ್ಖತನ. ನಾನೇ ಮಹತ್ವದವನು. "ಉಂಗುರ ಬೆರಳು ಹೇಳುತ್ತದೆ, ಯಾರು ಮಹತ್ವದವರೋ ಅವರಿಗೆ ಕಿರೀಟ ತೊಡಿಸಲಾಗುತ್ತದೆ. ರಾಜರು ಮಾತ್ರ ಕಿರೀಟ ತೊಟ್ಟುಕೊಳ್ಳುತ್ತಾರೆ.

ಚಕ್ರವರ್ತಿಗಳು ಹಾಗು ರಾಜರು ಅಮೂಲ್ಯವಾದ ಆಭರಣ ತೊಟ್ಟುಕೊಳ್ಳುತ್ತಾರೆ. ಯಾರಿಗೆ ಉಂಗುರ ಸಿಕ್ಕುತ್ತಿದೆ. ಅದು ನನಗೆ ಮಾತ್ರ!. ಆದ್ದರಿಂದಲೇ ನಾನು ಶ್ರೇಷ್ಠ. ಎಲ್ಲ ಬೆರಳುಗಳು ಇದೇ ರೀತಿ ವಾದಿಸುತ್ತಿದ್ದವು. ಕೊನೆಯ ಬೆರಳು ಏನೂ ಹೇಳಲಿಲ್ಲ.

ಸುಮ್ಮನೆ ನಗುತ್ತಿತ್ತು. ಎಲ್ಲರು ಕೇಳಿದರು ನಿನಗೆ ಏನಾದರು ಹೇಳುವುದಿದೆಯ ಎಂದು. ಅದು ಮತ್ತೆ ಜೋರಾಗಿ ನಗಲಾರಂಭಿಸಿತು. ಎಲ್ಲರು ಕೇಳಿದರು "ಏಕೆ ನಗುತ್ತಿರುವೆ ಎಂದು?"  ನಾವು ಶ್ರೇಷ್ಠರನ್ನು ಭೇಟಿಯಾದಾಗ ಅಥವಾ ದೇವರ ಮುಂದೆ ನಿಂತುಕೊಳ್ಳುವಾಗ ಯಾವ ಬೆರಳು ಮುಂದಿರುತ್ತದೆ? (ಒಬ್ಬರು ಅವರ ಕೈಯನ್ನು ಜೋಡಿಸಿದಾಗ ಅಥವಾ ನಮಸ್ಕಾರ ಹೇಳುವಾಗ) ಯಾರು ದೇವರಿಗೆ ಹತ್ತಿರವೋ ಅದೇ ಶ್ರೇಷ್ಠತೆ. ಅದೇ ನನ್ನ ನಂಬಿಕೆ. ಯಾರಾದರು ದೇವರ ಮುಂದೆ ನಮಸ್ಕರಿಸುವಾಗ ನನ್ನನ್ನು ಮುಂದೆ ತರುತ್ತಾರೆ. ಆದ್ದರಿಂದಲೇ ನಾನು ಶ್ರೇಷ್ಠ".

ಇದು ಹೇಳುತ್ತದೆ, ವಿನಯ ಹಾಗು ನಿಗರ್ವಿಯಾದವನೇ ದೇವರಿಗೆ ಸೇರಿದವನು. ನೀವು ಸಣ್ಣವರಾದಾಗ (ನಿಮ್ಮ ಅಹಂ ಅನ್ನು ಕಳಚಿದಾಗ) ದೇವರಿಗೆ ಹತ್ತಿರವಾಗುತ್ತೀರ. ಹತ್ತಿರವಾಗಲು ಏನು ಮಾಡುತ್ತೀರಿ? ನೀವು ಕಿರಿ ಬೆರಳಾಗಬೇಕು. ಸಣ್ಣವರಾಗಿ (ಅರ್ಥ ವಿನಯ ಹಾಗು ವಿಧೇಯತೆಯಿಂದಿರಿ) ದೇವರಿಗೆ ಸದಾ ಹತ್ತಿರದಲ್ಲಿರುತ್ತೀರ.