ಗುರುವಾರ, ಆಗಸ್ಟ್ 22, 2013

ಸೇವೆಯು ನಿಮ್ಮ ಸ್ವಭಾವ

ಅಗಸ್ಟ್ ೨೨, ೨೦೧೩
ಬೆಂಗಳೂರು, ಭಾರತ
 
ಪ್ರಶ್ನೆ: ಗುರುದೇವ, ಮೋಕ್ಷಕ್ಕಿರುವ ಬಯಕೆಯೂ ಒಂದು ಬಯಕೆಯಾಗಿದೆ ಮತ್ತು ಅದೊಂದು ಆವಶ್ಯಕತೆ ಕೂಡಾ ಆಗಿದೆ. ಆದರೆ ಬಯಕೆಗಳಿರುವಲ್ಲಿಯವರೆಗೆ, ಒಬ್ಬನಿಗೆ ದೇವರನ್ನು ಸಾಕ್ಷಾತ್ಕರಿಸಲು ಸಾಧ್ಯವಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿ. 

ಶ್ರೀ ಶ್ರೀ ರವಿ ಶಂಕರ್:
ಮೋಕ್ಷಕ್ಕಾಗಿ ಒಂದು ಬಯಕೆಯನ್ನು ಹೊಂದಿರುವುದು ಬಹಳ ಸ್ವಾಭಾವಿಕವಾದುದು. ನಿಮ್ಮೆಲ್ಲಾ ಬಯಕೆಗಳು ಈಡೇರಿದ ಬಳಿಕ, ಉಳಿಯುವುದೆಂದರೆ ಇದೊಂದೇ. ಸಂಪೂರ್ಣ ಶರಣಾಗತಿಯ ಒಂದು ಸ್ಥಿತಿಯಲ್ಲಿ; ಸಮಾಧಿಯ ಒಂದು ಸ್ಥಿತಿಯಲ್ಲಿ, ಮೋಕ್ಷದ ಬಯಕೆಯು ಅದಾಗಿಯೇ (ಅಪ್ರಯತ್ನವಾಗಿ) ಅರಳುತ್ತದೆ. 

ಸಂತ ಕಬೀರರು ಸಾಮಾನ್ಯವಾಗಿ ಜನರಲ್ಲಿ, ಎಲ್ಲವನ್ನೂ ತ್ಯಜಿಸಿ ಅಥವಾ ಬಿಟ್ಟುಬಿಟ್ಟು ತಮ್ಮನ್ನು ದೇವರಿಗೆ ಅರ್ಪಿಸುವಂತೆ ಕೇಳಿಕೊಳ್ಳುತ್ತಿದ್ದರು. ಕೆಲವು ಶಿಷ್ಯರು ಒಂದು ದಿನ ಸಂತ ಕಬೀರರಲ್ಲಿಗೆ ಹೋದರು. ಈ ಶಿಷ್ಯರು ಬಹಳ ಬುದ್ಧಿವಂತರಾಗಲು ಪ್ರಯತ್ನಿಸಿದರು. ಅವರು ಅವರಿಗಂದರು, "ನಾವು ಎಲ್ಲವನ್ನೂ ತ್ಯಜಿಸಬೇಕಾದರೆ, ಮತ್ತೆ ಯಾಕೆ ನಾವು ನಾಮಜಪವನ್ನು ಮಾಡುತ್ತಿರಬೇಕು? ಅದನ್ನು ಕೂಡಾ ನಾವು ತ್ಯಜಿಸಬೇಕು." ಹಾಗಾಗಿ ಅವರು ಎಲ್ಲವನ್ನೂ ಬಿಟ್ಟುಬಿಟ್ಟರು - ತಮ್ಮ ಮನೆ, ತಮ್ಮ ಹೆತ್ತವರು, ತಮ್ಮ ಗುರು ಮತ್ತು ದೇವರ ಹೆಸರನ್ನು ಜಪಿಸುವುದನ್ನು ಕೂಡಾ. ಆಗ ಸಂತ ಕಬೀರರು ಹೀಗಂದರು, "ನೀವು ದೇವರ ಪವಿತ್ರ ನಾಮಗಳನ್ನು ಜಪಿಸುವುದನ್ನು ಬಿಟ್ಟುಬಿಟ್ಟಿರಿ, ಆದರೆ ನಿಮಗೆ ನಿಮ್ಮ ಕೋಪವನ್ನು, ನಿಮ್ಮ ಕಾಮವನ್ನು ಬಿಟ್ಟುಬಿಡಲು ಸಾಧ್ಯವಾಗಲಿಲ್ಲ. ನೀವೇನು ಮಾಡಿದಿರಿ, ನನ್ನ ಪ್ರಿಯರೇ?" ನೋಡಿ, ನೀವು ನೀವಾಗಿಯೇ ಅಪ್ರಯತ್ನವಾಗಿ ಜಪವನ್ನು ಬಿಟ್ಟಾಗ, ಅದು ಪರವಾಗಿಲ್ಲ (ಅಂದರೆ, ಭಕ್ತಿಯ ಒಂದು ಪರಾಕಾಷ್ಠೆಯನ್ನು ತಲಪುವುದು ಮತ್ತು ಯಾವತ್ತೂ ದೇವರೊಂದಿಗೆ ಒಂದಾಗಿರುವ ಭಾವನೆಯನ್ನು ಹೊಂದಿರುವುದು).

ದೇವರ ನಾಮಗಳನ್ನು ಜಪಿಸಲು ತಮಗೆ ಸೋಮಾರಿತನವುಂಟಾದುದಾಗಿ ಶಿಷ್ಯರು ಸಂತ ಕಬೀರರಿಗೆ ಹೇಳಿದರು. ನಾನಿದರ ಬಗ್ಗೆ ನಿನ್ನೆಯಷ್ಟೇ ಮಾತನಾಡಿದೆನು. ಜನರು ಹೆಚ್ಚಾಗಿ, "ಓ! ಇದನ್ನು ಮಾಡಲು ನನಗೆ ಬಹಳ ಬೇಜಾರಾಯಿತು" ಎಂದು ಹೇಳುತ್ತಾರೆ. ಆಹಾರವನ್ನು ತಿನ್ನುವಾಗ ನಿಮಗೆ ಸೋಮಾರಿತನವಾಗಲೀ ಅಥವಾ ಬೇಜಾರಾಗಲೀ ಆಗುವುದಿಲ್ಲ. ಆದರೆ ಏನಾದರೂ ಒಳ್ಳೆಯದನ್ನು ಮಾಡುವಾಗ ನಿಮಗೆ ಸೋಮಾರಿತನವುಂಟಾಗುತ್ತದೆ. ತಿನ್ನುವುದನ್ನು ನೀವು ಯಾಕೆ ಬಿಟ್ಟುಬಿಡುವುದಿಲ್ಲ? ನೀವು ದಿನವೂ ಸ್ನಾನ ಮಾಡುತ್ತೀರಿ, ಆದರೆ ಅದರಿಂದ ನಿಮಗೆ ಬೇಜಾರಾಗುವುದಿಲ್ಲ. ನಿಮ್ಮ ಹಲ್ಲುಗಳನ್ನು ಉಜ್ಜುವುದರಿಂದ ನಿಮಗೆ ಬೇಜಾರಾಗುವುದಿಲ್ಲ. ಸುಮ್ಮನೇ ನಿಮ್ಮನ್ನೇ ಗಮನಿಸಿ! ನೀವೇನು ಹೇಳುತ್ತಿರುವಿರಿ, ನೀವೇನು ಮಾಡುತ್ತಿರುವಿರಿ ಮತ್ತು ನೀವೆಲ್ಲಿಗೆ ಹೋಗುತ್ತಿರುವಿರಿ ಎಂದು.

ಅದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೀಗೆಂದು ಹೇಳುವುದು,

ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ I
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ II  (೩.೫)


ಇದರರ್ಥವೇನೆಂದರೆ, ಪ್ರಪಂಚದಲ್ಲಿ ಯಾರಿಗೂ ಏನನ್ನೂ ಮಾಡದೇ ಇರಲು ಸಾಧ್ಯವಿಲ್ಲ. ನಾವು ಕನಿಷ್ಠಪಕ್ಷ ಏನನ್ನಾದರೂ ಮಾಡಬೇಕು ಮತ್ತು ನಾವು ಏನನ್ನೇ ಮಾಡಿದರೂ, ನಾವದನ್ನು ನಮ್ಮ ವಿವೇಕವನ್ನು ಉಪಯೋಗಿಸಿ ಮಾಡಬೇಕು ಹಾಗೂ ನಾವು ನಮ್ಮ ಮನಸ್ಸಿನ ಉದ್ವೇಗಗಳಿಂದ ಮಾಡಬಾರದು. ನೀವು ಈ ಪ್ರಪಂಚಕ್ಕೆ ಬಂದಿರುವಾಗ, ಎಲ್ಲರಿಗೂ ಲಾಭದಾಯಕವಾಗುವಂತಹ ಒಳ್ಳೆಯದನ್ನೇನಾದರೂ ಮಾಡಿ. ನಿಮಗೇನು ಸಿಗುವುದು ಎಂಬುದನ್ನು ಮಾತ್ರ ಚಿಂತಿಸುವಲ್ಲಿ ಸಿಕ್ಕಿಬೀಳಬೇಡಿ. ನೀವು ಈ ಪ್ರಪಂಚದಿಂದ ತೆಗೆದುಕೊಂಡು ಹೋಗಲು ಏನೂ ಇಲ್ಲ. ಇಲ್ಲಿಂದ ತೆಗೆದುಕೊಂಡು ಹೋಗಲು ಏನೂ ಇಲ್ಲ. ನೀವು ಕೊಡುವುದಕ್ಕಾಗಿ ಬಂದಿರುವಿರಿ. ನೀವಿಲ್ಲಿಗೆ, ಎಲ್ಲರಿಗೂ ಲಾಭದಾಯಕವಾಗುವಂತಹದ್ದೇನನ್ನೋ ಮಾಡಲು ಬಂದಿರುವಿರಿ ಮತ್ತು ನೀವೆಲ್ಲರೂ ಸೇವೆ ಮಾಡುವುದರಲ್ಲಿ ಒಟ್ಟುಸೇರಬೇಕು. "ಸೇವೆ ಮಾಡುವುದರಲ್ಲಿ ನನಗೆ ಯಾವುದೇ ವಿನೋದ ಅಥವಾ ಸಂತೋಷ ಸಿಗುವುದಿಲ್ಲ" ಎಂದು ದೂರಬೇಡಿ. ಸಂತೋಷ ಅಥವಾ ಯಾವುದೋ ರೀತಿಯ ತೃಪ್ತಿ ಪಡೆಯುವ ಸಲುವಾಗಿ ಸೇವೆಯನ್ನು ಮಾಡುವುದು ಕೂಡಾ ಜೀವನದಲ್ಲಿ ಒಂದು ಬಹಳ ಕಳಪೆ ವಿಧಾನವಾಗಿದೆ. ನಿಮಗೆ ಅದರಿಂದ ಯಾವುದೋ ರೀತಿಯ ಸಂತೋಷ ಅಥವಾ ಮನೋರಂಜನೆ ಸಿಗುತ್ತದೆಯೆಂಬ ಕಾರಣಕ್ಕಾಗಿ ನೀವು ಸೇವೆಯನ್ನು ಮಾಡುತ್ತಿರುವುದಾದರೆ, ಆಗ ನೀವು ದೀರ್ಘಕಾಲದವರೆಗೆ ಅದನ್ನು ಉಳಿಸಿಕೊಳ್ಳುವುದಿಲ್ಲ. ನೀವು ಮಾಡಲೇಬೇಕು ಎಂಬ ಕಾರಣಕ್ಕಾಗಿ ನೀವು ಸೇವೆ ಮಾಡಬೇಕು. ಅಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲ. ಇಲ್ಲಿ ಹಲವಾರು ಶಿಕ್ಷಕರು ಕುಳಿತಿರುವಿರಿ.

ನಿಮಗೆ ಸಂತೋಷ ಸಿಗುವುದೆಂಬ ಕಾರಣಕ್ಕಾಗಿ ನೀವು ಕಲಿಸಿದರೆ, ಆಗ ಅದು ದೀರ್ಘಕಾಲ ಉಳಿಯಲಾರದು ಯಾಕೆಂದರೆ ಒಂದು ಸಮಯದ ನಂತರ ನೀವದನ್ನು ಆನಂದಿಸಲಾರಿರಿ. ಆದರೆ ನೀವದನ್ನು, ಜನರಿಗೆ ಅದು ಬೇಕು ಮತ್ತು ಅದರಿಂದ ಅವರು ಪ್ರಯೋಜನ ಪಡೆಯಬಹುದು ಎಂಬ ಕಾರಣಕ್ಕಾಗಿ ಮಾಡಿದರೆ, ಆಗ ನೀವದನ್ನು ಖಂಡಿತವಾಗಿಯೂ ಉಳಿಸಿಕೊಳ್ಳುವಿರಿ. ಕೇವಲ ಆನಂದಿಸುವುದಕ್ಕಾಗಿ ನೀವು ಸೇವೆ ಮಾಡಿದರೆ, ಆಗ ನೀವು ಸ್ವಾರ್ಥಿಯಾಗುವಿರಿ.

ಹಲವಾರು ಜನರು ಸೇವೆ ಮಾಡಲು ಬರುತ್ತಾರೆ. "ನಮಗೆ ಸಂತೋಷವಾಗುತ್ತದೆ, ಅದಕ್ಕಾಗಿ ನಾವು ಸೇವೆ ಮಾಡುತ್ತೇವೆ" ಎಂದು ಅವರು ಹೇಳುತ್ತಾರೆ. ನಂತರ ಸ್ವಲ್ಪ ಸಮಯದ ಬಳಿಕ, ಅವರು ಬೇಡಿಕೆಯನ್ನಿಡಲು ಅಥವಾ ಎಲ್ಲದರ ಬಗ್ಗೆಯೂ ದೂರಲು ಆರಂಭಿಸುತ್ತಾರೆ. ಯಾರಾದರೂ ಅವರಿಗಿಂತ ಉತ್ತಮವಾಗಿ ಸೇವೆ ಮಾಡುತ್ತಿದ್ದರೆ, ಆಗ ಅವರು ಆ ಇನ್ನೊಬ್ಬ ವ್ಯಕ್ತಿಯನ್ನು ಟೀಕಿಸಲು ಮತ್ತು ಅವನನ್ನು ಕೆಳಕ್ಕೆಳೆಯಲು ತೊಡಗುತ್ತಾರೆ. ಅಂತಹ ಜನರು ಹೀಗೆಂದು ಹೇಳುತ್ತಾರೆ, "ನಾನು ಅಷ್ಟೊಂದು ಚೆನ್ನಾಗಿ ಸೇವೆ ಮಾಡುತ್ತೇನೆ, ಆದರೆ ಯಾರೂ ನನ್ನನ್ನು ಪ್ರಶಂಸೆ ಮಾಡುವುದಾಗಲೀ ಅಥವಾ ಗುರುತಿಸುವುದಾಗಲೀ ಇಲ್ಲ". ನೋಡಿ, ಮನಸ್ಸು ನಿಮ್ಮನ್ನು ಎಷ್ಟೊಂದು ರೀತಿಗಳಲ್ಲಿ ತನ್ನ ತರ್ಕದ ಜಾಲದಲ್ಲಿ ಸಿಕ್ಕಿಹಾಕಿಸುತ್ತದೆಯೆಂದರೆ, ನಿಮಗೆ ಅದರ ಬಗ್ಗೆ ತಿಳಿಯುವುದೂ ಇಲ್ಲ.

ಅದಕ್ಕಾಗಿಯೇ ಹೇಳುವುದು, ಗುರುವು ಇರುವಾಗ ಅಲ್ಲಿ ಮನಸ್ಸಿರುವುದಿಲ್ಲವೆಂದು. ಮತ್ತು ಮನಸ್ಸಿರುವಾಗ ಅಲ್ಲಿ ಗುರುವು ಇರುವುದಿಲ್ಲವೆಂದು. ಹಾಗಾಗಿ ಒಂದೋ ನಿಮ್ಮ ಮನಸ್ಸು ಹೇಳುವುದನ್ನು ಕೇಳಿ ಅಥವಾ ನಿಮ್ಮ ಗುರುವು ಹೇಳುವುದನ್ನು ಕೇಳಿ.

ಹಿಂದಿನ ಕಾಲಗಳಲ್ಲಿ ಗುರುಗಳು ಮನಸ್ಸನ್ನು ನಾಶಪಡಿಸುತ್ತಿದ್ದರು. ವಿದ್ಯಾರ್ಥಿಯ ಇಚ್ಛೆಯು ಸ್ವೀಕರಿಸಲ್ಪಡುತ್ತಲೇ ಇರಲಿಲ್ಲ. ನೀವು ಮೈಸೂರಿಗೆ ಹೋಗಲು ಬಯಸಿದ್ದರೆ, ಹಿಂದಿನ ಕಾಲಗಳಲ್ಲಿನ ಗುರುಗಳು ಅದಕ್ಕೆ ಬದಲಾಗಿ ನಿಮ್ಮಲ್ಲಿ ಹೈದರಾಬಾದಿಗೆ ಹೋಗಲು ಹೇಳುತ್ತಿದ್ದರು. ನೀವು ವ್ಯಕ್ತಪಡಿಸುತ್ತಿದ್ದ ಯಾವುದೇ ಬಯಕೆಯನ್ನಾದರೂ, ಚಿಕ್ಕ ಬಯಕೆಗಳನ್ನು ಕೂಡಾ ಅವರು ನಾಶಪಡಿಸುತ್ತಿದ್ದರು. ನಿಮಗೆ ಹಸಿವಾಗುತ್ತಿದ್ದರೆ, ಆಗ ಅವರು ಕುಳಿತುಕೊಂಡು ಕನಿಷ್ಠಪಕ್ಷ ಒಂದು ಗಂಟೆಯವರೆಗಾದರೂ ಮಾತನಾಡಲು ತೊಡಗುತ್ತಿದ್ದರು; ಕೇವಲ ಬಯಕೆಗಳನ್ನು ನಾಶಪಡಿಸಲು. ಬಯಕೆಗಳನ್ನು ಜಯಿಸಿದಾಗ ನೀವು ಈ ವಸ್ತು ಪ್ರಪಂಚವನ್ನು ಪರಾಜಯಗೊಳಿಸಿದಂತೆ ಎಂಬುದು ನಂಬಿಕೆಯಾಗಿತ್ತು. 

ಮನಸ್ಸು ನಿಮ್ಮನ್ನು ಎಷ್ಟು ಚಡಪಡಿಸುವಂತೆ ಮಾಡುತ್ತದೆಯೆಂದರೆ, ಅದು ನೀವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಗುರಿಯಿಲ್ಲದೆ ತಿರುಗುವಂತೆ ಮಾಡುತ್ತದೆ (ತೃಪ್ತಿಯನ್ನು ಹುಡುಕುತ್ತಾ). ಕೆಲವು ಜನರು ತಮ್ಮ ನೌಕರಿಗಳನ್ನು ಬದಲಾಯಿಸುತ್ತಾರೆ. ಅಮೇರಿಕಾ ಮತ್ತು ಇತರ ವಿದೇಶಗಳಲ್ಲಿ ಜನರು ತಮ್ಮ ಗರ್ಲ್‌ಫ್ರೆಂಡ್‌ಗಳನ್ನು ಕೂಡಾ ಬದಲಾಯಿಸುತ್ತಾ ಇರುತ್ತಾರೆ. ತಮ್ಮ ಅರುವತ್ತರ ಹರೆಯದ ಕೊನೆಯಲ್ಲಿ, ಅವರು ಹೇಳುವುದೇನೆಂದರೆ ಇಡೀ ಪ್ರಪಂಚದ ಸುತ್ತಲೂ ಹುಡುಕಿದ ಬಳಿಕವೂ ಅವರಿಗೊಬ್ಬ ಆತ್ಮ ಸಂಗಾತಿ ದೊರೆಯಲಿಲ್ಲವೆಂದು. ತಮಗೆ ಒಬ್ಬ ಆತ್ಮ ಸಂಗಾತಿ ಯಾವಾಗ ಸಿಗುವರೆಂದು ಅವರು ನನ್ನಲ್ಲಿ ಕೇಳುತ್ತಾರೆ. ನಾನವರಿಗೆ "ಇನ್ನೂ ಒಂದು ಇಪ್ಪತ್ತು ವರ್ಷಗಳ ಕಾಲ, ನೀವು ಸ್ವರ್ಗಕ್ಕೆ ಹೋಗುವಲ್ಲಿಯವರೆಗೆ ಕಾಯಿರಿ" ಎಂದು ಹೇಳುತ್ತೇನೆ, "ನೀವು ಅಲ್ಲಿ ಮಾತ್ರ ವಿವಾಹವಾಗುವಿರಿ". (ನಗು). ನೀವು ಯಾವತ್ತೂ ನಿಮ್ಮ ಮನಸ್ಸು ಹೇಳುವುದನ್ನು ಅನುಸರಿಸಿದರೆ, ಆಗ ನಿಮಗೆ ಚಡಪಡಿಕೆಯಾಗುವುದು ಮುಂದುವರಿಯುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ವೇದಗಳು ಸನಾತನವಾದವು ಎಂದು ಹೇಳಲಾಗುತ್ತದೆ, ಆದರೂ ಮಂತ್ರಗಳು ಕೆಲವು ಋಷಿಗಳಿಂದ ಬಂದವು ಎನ್ನಲಾಗುತ್ತದೆ. ವೇದಗಳು ಋಷಿಗಳಿಂದ ಕಂಡುಹಿಡಿಯಲ್ಪಟ್ಟದ್ದಾಗಿದ್ದರೆ, ಅವುಗಳು ಸನಾತನವಾಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:
ನೋಡಿ, ನ್ಯೂಟನ್‌ನ ನಿಯಮವು ಸನಾತನವಾದುದು. ಅದು ಎಲ್ಲಾ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಆದರೆ ಅದನ್ನು ತಿಳಿಯ ಪಡಿಸಿದ್ದು ನ್ಯೂಟನ್. ಅವನು ಅದನ್ನು ಕಂಡುಹಿಡಿದನು (ನಿಯಮದ ಅಸ್ತಿತ್ವವನ್ನು). ಅದೇ ರೀತಿಯಲ್ಲಿ ಮಂತ್ರಗಳು ಯಾವತ್ತೂ ಆಕಾಶದಲ್ಲಿ ದಾಖಲಾಗಿದ್ದವು. ಋಷಿಗಳು ಕೇವಲ ಅದನ್ನು ಆಕಾಶದಿಂದ ತಂದವರು ಮಾತ್ರವಾಗಿದ್ದರು. ಹೀಗೆ ಅವರು ಅದನ್ನು ತಂದರು (ಭೂಮಿಗೆ ಮತ್ತು ಮಾನವಕುಲಕ್ಕೆ) ಮತ್ತು ಮಂತ್ರಗಳನ್ನು ಗುರುತಿಸಿದರು. ಅದಕ್ಕಾಗಿಯೇ ಈ ಮಂತ್ರಗಳನ್ನು ಋಷಿಗಳು ಬರೆದರೆಂದು ಯಾವತ್ತೂ ಹೇಳಲಾಗಿಲ್ಲ. ಅದು ಸಂವೇದನೆ ಮೂಲಕ ಆಯಿತು, ಅಂದರೆ ಅವರು ಮಂತ್ರಗಳನ್ನು ಕೇವಲ ನೋಡಿದರು ಮತ್ತು ಕೇಳಿದರು. ನಂತರ ಅವರು ಅವುಗಳನ್ನು ಹೊರತಂದರು.

ಅವುಗಳನ್ನು ತಂದು ಪ್ರಕಟಿಸುವುದಕ್ಕಿಂತ ಹೆಚ್ಚಿನ ಹೊಗಳಿಕೆಯನ್ನು ಋಷಿಗಳು ತೆಗೆದುಕೊಳ್ಳುವುದಿಲ್ಲ. "ನಾವು ಮಂತ್ರಗಳನ್ನು ಸೃಷ್ಟಿಸಿದೆವು" ಎಂದು ಅವರು ಹೇಳುವುದಿಲ್ಲ. ಮಂತ್ರಗಳನ್ನು ಯಾರೂ ಸೃಷ್ಟಿಸಲಿಲ್ಲ.

ಅದಕ್ಕಾಗಿಯೇ ಅಪೌರೇಷ್ಯ ಎಂದು ಹೇಳಲಾಗಿರುವುದು. ಪೌರೇಷ್ಯ ಎಂದರೆ ಯಾವುದು ಮಾನವರಿಂದ ಮಾಡಲಾಗಿದೆಯೋ ಅದು. ಮಂತ್ರಗಳು ಯಾವತ್ತೂ ಅಸ್ತಿತ್ವದಲ್ಲಿದ್ದವು. ನ್ಯೂಟನ್‌ನ ನಿಯಮಗಳು ನ್ಯೂಟನ್‌ನಿಂದ ಮಾಡಲ್ಪಟ್ಟಿಲ್ಲ ಅಥವಾ ಸೃಷ್ಟಿಸಲ್ಪಟ್ಟಿಲ್ಲ. ಅವುಗಳು ಯಾವತ್ತೂ ಅಲ್ಲಿದ್ದವು. ಅವುಗಳು ನ್ಯೂಟನ್‌ನಿಂದ ಕಂಡುಹಿಡಿಯಲ್ಪಟ್ಟದ್ದು ಮಾತ್ರ. ಹೀಗೆ ಮಂತ್ರಗಳು ಯಾವತ್ತೂ ಅಲ್ಲಿದ್ದವು. ಅದನ್ನು ಬೆಳಕಿಗೆ ತಂದದ್ದು ಋಷಿಗಳು.

ಪ್ರಶ್ನೆ: ವರ್ಷಾಂತರಗಳಲ್ಲಿ ಸನಾತನ ಧರ್ಮವು ಹಲವಾರು ಋಷಿಗಳಿಂದ ಉಲ್ಲೇಖಿಸಲ್ಪಟ್ಟಿದೆ. ಒಬ್ಬನು ಧರ್ಮದ ಶುದ್ಧತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು?

ಶ್ರೀ ಶ್ರೀ ರವಿ ಶಂಕರ್:
ಮೂಢನಂಬಿಕೆಗಳನ್ನು ದೂರಮಾಡುವುದರಿಂದ ಮತ್ತು ಪ್ರಗತಿಪರವಾಗಿರುವುದರಿಂದ. ಧರ್ಮವು ಯಾವತ್ತೂ ಸ್ವಭಾವದಲ್ಲಿ ವೈಜ್ಞಾನಿಕವಾಗಿದೆ. ಧರ್ಮವು ಎಂದೂ ವಿಜ್ಞಾನವನ್ನು ವಿರೋಧಿಸುವುದಿಲ್ಲ. ವಿಜ್ಞಾನವು ಒಂದು ಬೆಳೆಯುತ್ತಿರುವ ವಿಷಯವಾಗಿದೆ ಮತ್ತು ಧರ್ಮದ ಪವಿತ್ರತೆಯನ್ನು ಪವಿತ್ರವಾದ ಉದ್ದೇಶಗಳಿಂದ ಕಾಪಾಡಿಕೊಳ್ಳಲಾಗುತ್ತದೆ.

ಪ್ರಶ್ನೆ: ಗುರುದೇವ, ನಾನು ನನ್ನ ಆಧ್ಯಾತ್ಮಿಕ ಅನ್ವೇಷಣೆಯನ್ನು ಹೇಗೆ ತೀವ್ರಗೊಳಿಸಬಹುದು ಮತ್ತು ವೇಗಗೊಳಿಸಬಹುದು? ಅದನ್ನು ಫಾಸ್ಟ್ ಟ್ರ್ಯಾಕ್‌ನ ಮೇಲೆ ತರಲು ಸಾಧ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್:
ಕೇವಲ ಫಾಸ್ಟ್ ಟ್ರ್ಯಾಕ್‌ನ ಮೇಲೆ ಇರಲು ಬಯಸುವುದಷ್ಟೇ ಸಾಕು. ಅದರರ್ಥ ನೀನು ಈಗಾಗಲೇ ಅಲ್ಲಿರುವೆಯೆಂದು. ಆಧ್ಯಾತ್ಮಿಕವಾಗಿ ಬೆಳೆಯಲಿರುವ ಅನುರಾಗ ಮತ್ತು ಬಯಕೆಗಳು ಅಲ್ಲಿವೆಯೆಂಬ ವಾಸ್ತವವೇ ಒಂದು ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ.

ಪ್ರಶ್ನೆ: ಗುರುದೇವ, ಸಂತೋಷವಾಗಿ, ಸಕಾರಾತ್ಮಕವಾಗಿ ಮತ್ತು ಜೀವನದಲ್ಲಿ ಸಮಸ್ಯೆಗಳಿಲ್ಲದವರು ಸಾಮಾನ್ಯವಾಗಿ ಉತ್ಸುಕತೆಯಿಂದ ದೇವರನ್ನು ಅನ್ವೇಷಿಸುವುದಿಲ್ಲ ಹಾಗೂ ಆರ್ಟ್ ಆಫ್ ಲಿವಿಂಗ್‌ನಂತಹ ಕೋರ್ಸುಗಳಿಗೆ ಸೇರುವುದಿಲ್ಲ. 

ಇನ್ನೊಂದು ಬದಿಯಲ್ಲಿ, ಕೋಪಿಷ್ಠರು ಮತ್ತು ಯೋಚನೆಯಲ್ಲಿ ನಕಾರಾತ್ಮಕವಾಗಿರುವವರು ಜೀವನದ ಸಮಸ್ಯೆಗಳನ್ನು ನಿರ್ವಹಿಸಲಾಗದೆ ವ್ಯಸನಗಳಿಗೆ ಬೀಳುತ್ತಾರೆ. ಅಂತಹ ಜನರು ದೇವರನ್ನು ಅನ್ವೇಷಿಸುತ್ತಾರೆ ಹಾಗೂ ಯೋಗ ಮತ್ತು ಧ್ಯಾನಗಳ ಕಡೆಗೆ ತಿರುಗುತ್ತಾರೆ. ಇದು ಯಾಕೆ ಹೀಗೆ?

ಶ್ರೀ ಶ್ರೀ ರವಿ ಶಂಕರ್:
ಕೇಳು, ಈ ಪ್ರಪಂಚದಲ್ಲಿ ಎಲ್ಲಾ ವಿಧದ ಜನರಿದ್ದಾರೆ. ಕೇವಲ ರೋಗಿಷ್ಠರು, ಬಲಹೀನರು ಮತ್ತು ವಿನಮ್ರರು ಮಾತ್ರ ಸತ್ಯವನ್ನು ಅನ್ವೇಷಿಸುವರು ಎಂದು ಯೋಚಿಸಬೇಡ. ಸಂತೋಷವಾಗಿದ್ದು, ಬಹಳ ಆರೋಗ್ಯವಂತರಾಗಿದ್ದು ಮತ್ತು ಬಹಳ ಹಾಯಾಗಿದ್ದುಕೊಂಡು ಬಹಳ ಅನುರಾಗವನ್ನು(ಆಧ್ಯಾತ್ಮಿಕರಾಗಿರಲು) ಹೊಂದಿರುವ ಜನರು ಕೂಡಾ ಇದ್ದಾರೆ.

ಬಹುಶಃ ಅದು ಸ್ವಲ್ಪ ಕಡಿಮೆ ಅಥವಾ ಸ್ವಲ್ಪ ಹೆಚ್ಚು ಇರಬಹುದು. ಆದರೆ, ಸಾಮಾನ್ಯವಾಗಿ ಜನರು ಹೀಗೆಯೇ ಎಂದು ನೀನು ಎಂದಿಗೂ ಮುದ್ರೆಯೊತ್ತಲು ಸಾಧ್ಯವಿಲ್ಲ. 

ಪ್ರಶ್ನೆ: ಗುರುದೇವ, ನಾವು ಪೂಜೆ ಮಾಡುವಾಗ ಪ್ರಾರ್ಥನೆ ಮಾಡುತ್ತಿರುವುದು ಯಾರು? ಪ್ರಾರ್ಥನೆ ಮಾಡುತ್ತಿರುವವರೊಬ್ಬರು ಮತ್ತು ಯಾರಿಗೆ ಪೂಜೆಯನ್ನು ಅರ್ಪಿಸಲಾಗುವುದೋ ಅವರು ಒಂದೇ? ಹಾಗಾದರೆ ವ್ಯತ್ಯಾಸವೇನು ಮತ್ತು ಪ್ರಾರ್ಥಿಸಬೇಕಾದ ಅಗತ್ಯವೇನು?

ಶ್ರೀ ಶ್ರೀ ರವಿ ಶಂಕರ್:
ಒಂದು ನದಿಯೂ ನೀರೇ ಮತ್ತು ಒಂದು ಸರೋವರವೂ ನೀರೇ. ಎರಡೂ ನೀರೇ ಆಗಿವೆ. ಆದರೆ ಒಂದು ನೀರನ್ನು ಪಡೆಯುತ್ತದೆ (ಸರೋವರ) ಮತ್ತು ಇನ್ನೊಂದರಲ್ಲಿ ನೀರು ಅದರೊಳಕ್ಕೆ ಹರಿಯುತ್ತಿರುವುದಾಗಿದೆ (ನದಿ). ಅದೇ ರೀತಿಯಲ್ಲಿ, ನಿಮ್ಮಲ್ಲಿರುವ ಚಿಕ್ಕ ಮನಸ್ಸು ಪ್ರಾರ್ಥಿಸುತ್ತದೆ ಮತ್ತು ನಿಮ್ಮಲ್ಲಿರುವ ದೊಡ್ಡ ಮನಸ್ಸು ಅದನ್ನು ಸ್ವೀಕರಿಸುತ್ತದೆ. ಹೀಗೆ ಅಲ್ಲಿ ಎರಡೂ ಜೊತೆಯಾಗಿವೆ - ದೊಡ್ಡ ಮನಸ್ಸು ಅಥವಾ ಆತ್ಮ ಮತ್ತು ಚಿಕ್ಕ ಮನಸ್ಸು (ಸೀಮಿತ ಮನಸ್ಸು). ಹೀಗೆ ನೋಡಿ, ಸಣ್ಣ ವ್ಯಕ್ತಿತ್ವ ಆಗಿರುವ ಚಿಕ್ಕ ಮನಸ್ಸು ಮತ್ತು ಪರಮಾತ್ಮವಾಗಿರುವ ದೊಡ್ಡ ಮನಸ್ಸು. ಎಲ್ಲವೂ ನೀರೇ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ನದಿಯು (ಸಣ್ಣ ಜೀವ) ನೀರಾಗಿದೆ ಮತ್ತು ಸಾಗರ (ಪರಮಾತ್ಮ) ಕೂಡಾ ನೀರಾಗಿದೆ. ನದಿಯು ಸಾಗರದೊಳಕ್ಕೆ ಹರಿಯುತ್ತದೆ. ಅದೇ ರೀತಿಯಲ್ಲಿ, ತೊಂದರೆಗೊಳಗಾಗಿರುವ, ಪ್ರಪಂಚವನ್ನು ಅನುಭವಿಸುತ್ತಿರುವ ಮತ್ತು ಬಯಕೆಗಳನ್ನು ಹಾಗೂ ಭಯಗಳನ್ನು ಹೊಂದಿರುವ ಚಿಕ್ಕ ಮನಸ್ಸು, ಸಾಗರದಂತಿರುವ, ಸ್ಥಿರವಾಗಿ, ಆನಂದಪೂರ್ಣವಾಗಿ ಹಾಗೂ ಶಕ್ತಿಯಿಂದ ತುಂಬಿರುವ ದೊಡ್ಡ ಮನಸ್ಸನ್ನು ಪ್ರಾರ್ಥಿಸುತ್ತದೆ ಹಾಗೂ ಚಿಕ್ಕ ಮನಸ್ಸು ಅದರ ಸಮೀಪಕ್ಕೆ ಬರುತ್ತದೆ.

ಪ್ರಶ್ನೆ: ಗುರುದೇವ, ಭಗವಾನ್ ಮಹಾವೀರ, ಭಗವಾನ್ ಬುದ್ಧ ಮತ್ತು ಭಗವಾನ್ ಕೃಷ್ಣರಂತಹ ಹಲವಾರು ಮಹಾತ್ಮರು ಭಾರತದಿಂದ ಬಂದರು. ಹೀಗಿದ್ದರೂ ಭಾರತವು ಅಷ್ಟೊಂದು ಬಳಲುತ್ತಿದೆ. ಇಲ್ಲಿ ಬಹಳಷ್ಟು ಅಪರಾಧ ಮತ್ತು ಭ್ರಷ್ಟಾಚಾರಗಳಿವೆ. ಯಾಕೆ?

ಶ್ರೀ ಶ್ರೀ ರವಿ ಶಂಕರ್:
ಈ ವ್ಯಕ್ತಿಗಳು ಪರಿಣಾಮಕಾರಿಯಾಗಿರಲಿಲ್ಲವೆಂಬುದು ನಿನ್ನ ಅರ್ಥವೇ? ಇಲ್ಲ, ಅದು ಹಾಗಲ್ಲವೇ ಅಲ್ಲ. ಭಾರತವು ಆಧ್ಯಾತ್ಮರಹಿತವಾಗಿರುತ್ತಿದ್ದರೆ ಏನಾಗುತ್ತಿತ್ತು ಎಂಬುದನ್ನು ಸುಮ್ಮನೇ ಕಲ್ಪಿಸು. ಈ ದೇಶದ ವಿಧಿ ಏನಾಗಿರುತ್ತಿತ್ತು? ನಿನಗೆ ಊಹಿಸಲೂ ಸಾಧ್ಯವಿಲ್ಲ. ಎಲ್ಲೆಲ್ಲಾ ಆಧ್ಯಾತ್ಮಿಕತೆಯ ಒಂದು ಕೊರತೆಯಿದೆಯೋ ಅಲ್ಲಿ ಬಹಳಷ್ಟು ಹಿಂಸಾಚಾರವಿದೆಯೆಂಬುದನ್ನು ನೀನು ಗಮನಿಸಿರುವೆಯಾ? ಉದಾಹರಣೆಗೆ, ಎಲ್ಲೆಲ್ಲಾ ನಕ್ಸಲರು ಇರುವರೋ, ಅಲ್ಲಿ ಅವರಿಗೆ ಧರ್ಮದಲ್ಲಿ ನಂಬಿಕೆಯಿಲ್ಲ; ಅವರಿಗೆ ದೇವರಲ್ಲಿ ಮತ್ತು ಆಧ್ಯಾತ್ಮಿಕತೆಯಲ್ಲಿ ನಂಬಿಕೆಯಿಲ್ಲ. ಕಮ್ಯುನಿಸ್ಟ್‌ಗಳು ಆಧ್ಯಾತ್ಮ ಎಂಬ ಪದದ ಕಡೆಗೆ ಬಹಳ ತಿರಸ್ಕಾರ ಹೊಂದಿದ್ದಾರೆ. ಇತ್ತೀಚಿನವರೆಗೆ ಅವರು ಸ್ವಾಮಿ ವಿವೇಕಾನಂದರನ್ನು ಕೂಡಾ ತಿರಸ್ಕರಿಸುತ್ತಿದ್ದರು. ಆದರೆ ಈಗ, ಕಳೆದ ೫-೬ ವರ್ಷಗಳಿಂದ ಅವರು ಹೇಗೋ ತಮ್ಮ ಮನೆಗಳಲ್ಲಿ ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ಹಾಕಲು ಆರಂಭಿಸಿದ್ದಾರೆ, ಇದಾಗಿರುವುದು ಒಂದು ದಶಕಕ್ಕಿಂತಲೂ ಹೆಚ್ಚಿನ ಹಿಂದೆಯೇನಲ್ಲ. ಕಮ್ಯುನಿಸ್ಟರು ಆಧ್ಯಾತ್ಮವನ್ನು ಆರಾಧಿಸಲು ತೊಡಗಿದ್ದಾರೆ, ಅನಿವಾರ್ಯತೆಯಿಂದ ಅದನ್ನು ಸ್ವೀಕರಿಸಿದ್ದಾರೆ. ಈ ಎಲ್ಲಾ ಕಾಲದಲ್ಲಿ ಅವರು ಏನನ್ನು ಸೃಷ್ಟಿಸಿದ್ದಾರೆಂಬುದು ನಿಮಗೆ ಕಾಣಿಸುತ್ತಿದೆಯೇ? ಕೇವಲ ಹಿಂಸಾಚಾರದ ಒಂದು ಸಂಸ್ಕೃತಿ, ಬೇರೇನೂ ಇಲ್ಲ. ಅಲ್ಲವೇ?

ಹಾಗಾಗಿ ದೇಶದ ಅಭಿವೃದ್ಧಿಗೆ ಆಧ್ಯಾತ್ಮವು ಆವಶ್ಯಕವಾಗಿದೆ. ಇದಿಲ್ಲದೆ ಭಾರತವು ಎಂದೋ ಬಾಲ್ಕನ್ ರಾಜ್ಯಗಳಂತೆ ಆಗಿರುತ್ತಿತ್ತು. ಆಂಧ್ರ ಪ್ರದೇಶದಲ್ಲಿ ಏನಾಗುತ್ತಿದೆಯೆಂಬುದನ್ನು ಸುಮ್ಮನೆ ನೋಡಿ. ಒಬ್ಬಳು ಮಹಿಳೆಯು, ಸ್ವಂತ ಲಾಭಕ್ಕಾಗಿ ಅಥವಾ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಥವಾ ಯಾತಕ್ಕಾಗಿಯೋ ಆಂಧ್ರ ಪ್ರದೇಶವನ್ನು ವಿಭಜಿಸುವ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಈಗ ಅಲ್ಲಿ ಎಲ್ಲೆಲ್ಲೂ ಬೆಂಕಿಯಿದೆ. ಒಂದು ಇಡೀ ತಿಂಗಳು ಅಲ್ಲಿ ಸಾರ್ವಜನಿಕ ಅಶಾಂತಿಯಿತ್ತು ಮತ್ತು ಆಂಧ್ರ ಪ್ರದೇಶವು ಒಂದು ನಿಶ್ಚಲ ಸ್ಥಿತಿಗೆ ಬಂದಿದೆ. ಭಾರತವನ್ನು ಇನ್ನೂ ಸ್ಥಿಮಿತದಲ್ಲಿ ಇಡುತ್ತಿರುವುದು ಆಧ್ಯಾತ್ಮವಾಗಿದೆ. ಭಾರತದ ಆಧ್ಯಾತ್ಮ ಪ್ರಕೃತಿಯಿಂದಾಗಿ, ನಾವು ಎಲ್ಲರನ್ನೂ ಸ್ವೀಕರಿಸಿದೆವು.

ನಾವು ಪ್ರಪಂಚದ ಎಲ್ಲಾ ಧರ್ಮಗಳನ್ನು ಆದರದಿಂದ ಸ್ವೀಕರಿಸಿದೆವು. ನಾವು ಪ್ರತಿಯೊಬ್ಬರಿಗೂ, ಪ್ರತಿಯೊಂದು ಸಮುದಾಯದಿಂದ ಬಂದವರಿಗೂ ಜಾಗವನ್ನು ನೀಡಿದೆವು. ಯಹೂದಿಯರ ವಿರುದ್ಧ ಎಂದಿಗೂ ಯಾವತ್ತೂ ಕಾನೂನು ಕ್ರಮ ಕೈಗೊಳ್ಳದೇ ಇದ್ದ ಒಂದೇ ಒಂದು ದೇಶವೆಂದರೆ ಭಾರತ. ಪ್ರಪಂಚದ ಪ್ರತಿಯೊಂದು ಇತರ ದೇಶದಲ್ಲೂ ಅವರಿಗೆ ಸಮಸ್ಯೆಗಳಿದ್ದವು. ಪಾರ್ಸಿಗಳು ಇರಾನಿನಿಂದ ಬಂದರು ಮತ್ತು ಅವರು ಈ ದೇಶದ ಜನರಲ್ಲಿ ಬೆರೆತರು. ಇಲ್ಲಿ ಪ್ರತಿಯೊಂದು ಧರ್ಮವೂ ಇದೆ ಮತ್ತು ಅಲ್ಲಿ ಸಾಮರಸ್ಯವಿದೆ. ಬಂದು ಇಲ್ಲಿರಲು ಎಲ್ಲಾ ಜನರಿಗೂ ಒಂದು ಪ್ರಾಮಾಣಿಕವಾದ ಸ್ವಾಗತವು ಇಲ್ಲಿದೆ. ಇದು ಕೇವಲ ಆಧ್ಯಾತ್ಮಿಕತೆಯ ಕಾರಣದಿಂದಾಗಿ ಮಾತ್ರ.

ಆಧ್ಯಾತ್ಮವು ಎಲ್ಲಾ ಧರ್ಮಗಳ ಜನರನ್ನು ಒಂದುಗೂಡಿಸುತ್ತದೆ. ಇದು ಆಧ್ಯಾತ್ಮಿಕತೆಯಿಲ್ಲದೆ ಕೇವಲ ಒಂದು ಧಾರ್ಮಿಕ ರಾಷ್ಟ್ರವಾಗಿದ್ದಿದ್ದರೆ, ಅದು ಹಾಗಿರುತ್ತಿರಲಿಲ್ಲ. ರೋಮ್‌ನಲ್ಲಿ, ಕಾಂಸ್ಟೇಂಟಿನೋಪಲ್‌ನಲ್ಲಿ ಏನಾಯಿತೆಂದು ನೋಡಿ. ಅಲ್ಲಿ ಇಗರ್ಜಿಯಿತ್ತು, ಆದರೆ ನಂತರ ಅದನ್ನು ನಾಶಪಡಿಸಿ ಮಸೀದಿಗಳನ್ನು ನಿರ್ಮಿಸಲಾಯಿತು ಅಥವಾ ಮಸೀದಿಯನ್ನು ನಾಶಪಡಿಸಿ ಚರ್ಚ್ ನಿರ್ಮಿಸಲಾಯಿತು. ಈ ರೀತಿಯ ಸಂಗತಿ ಆಗುತ್ತಾ ಇತ್ತು ಮತ್ತು ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರು ಕೊಲ್ಲಲ್ಪಟ್ಟರು. ಎಲ್ಲರ ಹೃದಯ ಮತ್ತು ಮನಸ್ಸುಗಳನ್ನು ಒಂದು ಮಾಡಲು ಬೇಕಾಗಿರುವುದು ಆಧ್ಯಾತ್ಮವಾಗಿದೆ. ಜನರು ಯಾವ ಧರ್ಮವನ್ನು ಅಥವಾ ಧಾರ್ಮಿಕ ಪಂಥವನ್ನು ಅನುಸರಿಸುವರೆಂಬುದು ಮುಖ್ಯವಲ್ಲ. ಅತೀ ಮುಖ್ಯವಾದುದೇನೆಂದರೆ ಒಬ್ಬ ಒಳ್ಳೆಯ ಮನುಷ್ಯನಾಗಿರುವುದು ಮತ್ತು ದೇವರೊಂದಿಗೆ ಜೋಡಿಕೊಂಡಿರುವುದು. ಇದು ಅತ್ಯಂತ ಮುಖ್ಯವಾದ ವಿಷಯ.

ಈಜಿಪ್ಟ್‌ನಲ್ಲಿ ಏನಾಗುತ್ತಿದೆ ಮತ್ತು ಕಳೆದ ರಾತ್ರಿ ಸಿರಿಯಾದಲ್ಲಿ ಏನಾಯಿತೆಂದು ನಿಮಗೆ ಗೊತ್ತೇ? ಅದನ್ನು ನಂಬಲಸಾಧ್ಯ(ಈ ದೇಶಗಳಲ್ಲಿನ ಸಾರ್ವಜನಿಕ ಅಶಾಂತಿ ಮತ್ತು ನಾಗರಿಕ ಹಿಂಸಾಚಾರಗಳನ್ನು ಉಲ್ಲೇಖಿಸುತ್ತಾ). ಪ್ರತಿದಿನವೂ ಬಹಳಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಮತ್ತು ಶಿಕ್ಷೆಗೊಳಗಾಗುತ್ತಿದ್ದಾರೆ.

ಪ್ರಶ್ನೆ: ಗುರುದೇವ, ಆಧ್ಯಾತ್ಮ ಪಥದಲ್ಲಿ, ’ಉಪಸ್ಥಿತಿ’ (ಇರುವಿಕೆ) ಎಂಬ ಪದವನ್ನು ನಾನು ಆಗಾಗ್ಗೆ ಕೇಳುತ್ತಿರುತ್ತೇನೆ. ’ಉಪಸ್ಥಿತಿ’ ಎಂದರೇನು? ಅದು ಕೇವಲ ಮನಸ್ಸಿನ ಒಂದು ಸ್ಥಿತಿಯೇ?

ಶ್ರೀ ಶ್ರೀ ರವಿ ಶಂಕರ್:
ನೋಡು, ’ಉಪಸ್ಥಿತಿ’ ಅಂದರೆ ಇರುವುದು. ನೀನು ನನ್ನಲ್ಲಿ, ಕಿವಿಯೆಂದರೇನು ಮತ್ತು ಅದು ಕಣ್ಣುಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂದು ಕೇಳಿದರೆ, ನಾನು ಏನು ಹೇಳಲು ಸಾಧ್ಯ? ಒಬ್ಬರು ಮಾತನಾಡುತ್ತಿದ್ದು, ನಿನ್ನ ಮನಸ್ಸು ಬೇರೆಲ್ಲೋ ಇದೆ ಎಂದು ಇಟ್ಟುಕೊಳ್ಳೋಣ, ಆಗ ನೀನು "ಅಲ್ಲಿ ಇಲ್ಲ". ನಾನು ನಿನ್ನ ಅನುಪಸ್ಥಿತಿಯನ್ನು ವಿವರಿಸಬಲ್ಲೆ. ನೀನು ಉಪಸ್ಥಿತನಾಗಿರುವಾಗ, ಅದರರ್ಥ ನೀನು ಪ್ರತಿಯೊಂದು ಪದವನ್ನೂ ಕೇಳಿಸಿಕೊಳ್ಳುವೆಯೆಂದು - ಅದು ಉಪಸ್ಥಿತಿ. ನೀನು ಭಯಭೀತನಾಗಿರುವಾಗ, ನೀನು ಸಂಪೂರ್ಣವಾಗಿ ಉಪಸ್ಥಿತನಾಗಿರುವೆ (ಸಂಪೂರ್ಣವಾಗಿ ಜಾಗರೂಕನಾಗಿರುವುದನ್ನು ಮತ್ತು ವರ್ತಮಾನದ ಕ್ಷಣದಲ್ಲಿರುವುದನ್ನು ಉಲ್ಲೇಖಿಸುತ್ತಾ). ಯಾರೊಂದಿಗಾದರೂ ಅಥವಾ ಯಾವುದರೊಂದಿಗಾದರೂ ನೀನು ಗಾಢವಾದ ಪ್ರೇಮದಲ್ಲಿರುವಾಗ, ನಿನ್ನ ಗಮನವು ಅಷ್ಟೊಂದು ಪೂರ್ತಿಯಾಗಿ ಅಲ್ಲಿರುತ್ತದೆ.

ಅದೇ ರೀತಿಯಲ್ಲಿ ನೀನು ಹೋಗಬಹುದಾದ ಅತ್ಯಂತ ಸಮೀಪದ್ದೆಂದರೆ ಇದು. ಹಾಗಾಗಿ ’ಉಪಸ್ಥಿತಿ’ ಎಂದರೆ, ನಿನ್ನ ಸುತ್ತಲೂ ಏನೋ ಇದೆ ಎಂಬ ಅನುಭವ. ನೀನು ನಿನ್ನ ಕಣ್ಣುಗಳನ್ನು ಮುಚ್ಚುವೆ ಹಾಗೂ ಒಬ್ಬರು ನಿನ್ನ ಸಮೀಪಕ್ಕೆ ಬಂದಿರುವರೆಂಬುದು ನಿನಗೆ ತಿಳಿದಿದೆಯೆಂದಿಟ್ಟುಕೊಳ್ಳೋಣ. ನೀನು ಅವರನ್ನು ನೋಡಿಲ್ಲ, ಆದರೂ ಅವರು ಅಲ್ಲಿ ಇರುವರೆಂದು ನಿನಗನ್ನಿಸುತ್ತದೆ.

ಆದುದರಿಂದ, ’ಉಪಸ್ಥಿತಿ’ ಎಂದರೆ, ದೃಷ್ಟಿ, ವಾಸನೆ, ಶ್ರವಣ, ಸ್ಪರ್ಷ ಮತ್ತು ರುಚಿಗಳನ್ನು ಮೀರಿದ ಆ ಒಂದು ಅನುಭವ.

ಪ್ರಶ್ನೆ: ಗುರುದೇವ, ನನ್ನ ವಿವಾಹಕ್ಕಾಗಿ ನಾನು ನನ್ನ ಹೃದಯವನ್ನು ಕೇಳಲೇ ಅಥವಾ ಜ್ಯೋತಿಷ್ಯವನ್ನೇ?

ಶ್ರೀ ಶ್ರೀ ರವಿ ಶಂಕರ್:
ನೀನು ಎರಡನ್ನೂ ಸ್ವಲ್ಪ ಸ್ವಲ್ಪ ಬಳಸಬೇಕು.

ಪ್ರಶ್ನೆ: ಗುರುದೇವ, ನಿಮ್ಮ ಉತ್ತರವು ಸ್ಪಷ್ಟವಾಗಿ ಹಾಸ್ಯಾಸ್ಪದವಾಗಿರುವ ಒಂದು ಪ್ರಶ್ನೆಯನ್ನು ಒಂದು ಮಹತ್ತರವಾದ ಪ್ರಶ್ನೆಯನ್ನಾಗಿ ಪರಿವರ್ತಿಸುತ್ತದೆ. ನಾನು ಯಾವತ್ತಾದರೂ ನಿಮ್ಮಂತೆ ಉತ್ತರಿಸಲು ಸಾಧ್ಯವಿದೆಯೇ? ನಿಮ್ಮಂತೆ ಉತ್ತರಿಸಲು ನಾನು ಏನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್:
ಸುಮ್ಮನೇ ವಿಶ್ರಾಮ ಮಾಡು. ಪ್ರಶ್ನೆಗಳ ಬಗ್ಗೆ ಚಿಂತಿಸಬೇಡ. ನೀನು ಚಿಂತಿಸದಿರುವಾಗ ಸ್ವಾಭಾವಿಕತೆಯು ಬರುತ್ತದೆ.

ಪ್ರಶ್ನೆ: ಕಾಮವಾಸನೆಯನ್ನು ಸೋಲಿಸುವುದು ಹೇಗೆ? 

ಶ್ರೀ ಶ್ರೀ ರವಿ ಶಂಕರ್:
ನೀನು ’ಮೌನದ ಮಾರ್ದನಿ’ ಅಥವಾ ’ಆತ್ಮೀಯರಿಗೊಂದು ಕಿವಿಮಾತು’ ಪುಸ್ತಕಗಳನ್ನು ಓದಿಲ್ಲವೆಂದು ನನಗನ್ನಿಸುತ್ತದೆ. ಆ ಪುಸ್ತಕಗಳಲ್ಲಿ ನಾನು ಹಲವಾರು ಉಪಾಯಗಳನ್ನು ನೀಡಿರುವೆನು. ನೀನು ಅವುಗಳೆಲ್ಲವನ್ನು ಅನ್ವಯಿಸಬೇಕು. ಅವುಗಳಲ್ಲಿ ಯಾವುದಾದರೂ ಕೆಲಸ ಮಾಡಿದರೆ, ಅದು ಒಳ್ಳೆಯದು. ಯಾವುದೂ ಕೆಲಸ ಮಾಡದಿದ್ದರೆ, ಆಗ ನಿನಗೆ ಸ್ವಲ್ಪ ವಯಸ್ಸಾಗುವಲ್ಲಿಯವರೆಗೆ ಕಾಯು ಮತ್ತು ಅದು ಮಾಯವಾಗುವುದು. ಅದು ಮಾಯವಾಗಬೇಕು, ಆದರೆ ಹಾಗಾಗದಿದ್ದರೆ, ಆಗ ಅಲ್ಲಿ ಸ್ವಲ್ಪ ಗಂಭೀರವಾದ ಸಮಸ್ಯೆಯಿರುವುದು. ಆಗ ನಾವು ಒಬ್ಬರು ಎಂಡೋಕ್ರೈನೋಲೊಜಿಸ್ಟ್‌ಗಾಗಿ (ಹಾರ್ಮೋನಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವೈದ್ಯರು) ಹುಡುಕಬೇಕು. ಯಾಕೆಂದರೆ ಶರೀರದಲ್ಲಿನ ಹಾರ್ಮೋನುಗಳ ಅಸಮತೋಲನಗಳ ಕಾರಣದಿಂದ ಕೆಲವೊಮ್ಮೆ ಹಾಗಾಗುತ್ತದೆ. ನೀನು ಸಂಯಮದ ಭಾಷೆಯನ್ನು ಅನುಸರಿಸಿದರೆ, ಆಗ ನೀನು ಬಚಾವಾಗುವೆ. ಅದು ನಿನ್ನಲ್ಲಿ ಅತಿಯಾಗಿದ್ದರೆ, ಆಗ ನೀನು ಅನುಸರಿಸಬಹುದಾದ ಹಲವಾರು ವಿಷಯಗಳನ್ನು ನಾನು ನಿನಗೆ ನೀಡಿರುವೆನು. ನೀನು ನಿನ್ನ ಆಹಾರದ ಕಡೆಗೆ ನೋಡಿಕೊಳ್ಳಬಹುದು. ನೀನು ನಿನ್ನ ಸಂಗದ ಕಡೆಗೆ ನೋಡಿಕೊಳ್ಳಬಹುದು. ನೀನು ನಿನ್ನನ್ನು ವ್ಯಸ್ತನಾಗಿ ಇರಿಸಿಕೊಳ್ಳಬಹುದು. ನೋಡು, ಕಾಮದ ತೃಪ್ತಿಗೆ ಕೊನೆಯಿಲ್ಲ.

ಕಾಮವನ್ನು ತಣಿಸಲು ಲಭ್ಯವಿರುವ ಎಲ್ಲಾ ಮೂಲಗಳು ಮತ್ತು ದಾರಿಗಳು ಖಾಲಿಯಾದಾಗ, ಮನಸ್ಸು ಲಭ್ಯವಿಲ್ಲದಿರುವ ಮೂಲಕ್ಕೆ ಅಂಟಿಕೊಳ್ಳುತ್ತದೆ. ಯಾವುದು ಲಭ್ಯವಿಲ್ಲವೋ ಅದನ್ನು ಹೊಂದಲು ಅದು ಬಯಸುತ್ತದೆ ಮತ್ತು ಆಗಲೇ ನಿಮಗೆ ಪ್ರಪಂಚದಲ್ಲಿ ಕಾಮದ ಹಲವಾರು ವಿಕೃತಿಗಳು ಕಂಡುಬರುವುದು. ಎಲ್ಲಾ ರೀತಿಯ ವಿಕೃತಿಗಳನ್ನು ನೋಡುವುದು ಜನರಿಗೆ ನಿಜಕ್ಕೂ ಭಯವನ್ನುಂಟುಮಾಡುತ್ತದೆ. ಜನರು ಪ್ರಾಣಿಗಳೊಂದಿಗೆ ಮತ್ತು ಯಾವುದರೊಂದಿಗೆಲ್ಲಾ ಸಂಭೋಗ ಮಾಡಲು ಪ್ರಯತ್ನಿಸುತ್ತಾರೆ! ನೀವು ಊಹಿಸಲೂ ಸಾಧ್ಯವಿಲ್ಲ. ಶಿಶುಕಾಮಿಗಳು ಮೊದಲಾದಂತಹ ಬೇರೆ ಬೇರೆ ವಿಕೃತಿಗಳಿವೆ ಮತ್ತು ಈ ಎಲ್ಲಾ ವಿಕೃತಿಗಳು ಒಬ್ಬ ವ್ಯಕ್ತಿಯಲ್ಲಿ ಮಾನಸಿಕ ರೋಗವನ್ನುಂಟುಮಾಡುತ್ತವೆ. ಅದಕ್ಕಾಗಿಯೇ ನೀವು ಜ್ಞಾನದಲ್ಲಿ ಆಳಕ್ಕೆ ಹೋಗಬೇಕು. ’ಆತ್ಮೀಯರಿಗೊಂದು ಕಿವಿಮಾತು’ ಪುಸ್ತಕದಲ್ಲಿ ಆ ವಿಷಯಗಳನ್ನು ಓದಿ.

ಪ್ರಶ್ನೆ: ಗುರುದೇವ, ನಾವು ತ್ರಯಂಬಕೇಶ್ವರ ದೇವಾಲಯವಿರುವ (ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅಥವಾ ಭಗವಾನ್ ಶಿವನಿಗೆ ಮೀಸಲಾಗಿರುವ ಪವಿತ್ರ ಸ್ಥಳಗಳಲ್ಲಿ ಒಂದು) ನಾಸಿಕ್ ಪಟ್ಟಣದವರು. ’ತ್ರಯಂಬ’ ಎಂಬುದು ದೇವಿಯ ಹೆಸರುಗಳಲ್ಲಿ ಒಂದಾಗಿರುವಾಗ, ಭಗವಾನ್ ಶಿವನು ಈ ಹೆಸರನ್ನು ಪಡೆದುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:
ನೋಡು, ನಾನು ಸ್ಥಳ ಪುರಾಣಗಳನ್ನು ಓದಿಲ್ಲ. ಆದುದರಿಂದ ನನಗೆ ಅದರ ಬಗ್ಗೆ ತಿಳಿಯದು. ಮಹಾರಾಷ್ಟ್ರದ ಹಲವಾರು ಜನರಿದ್ದಾರೆ, ಅವರನ್ನು ಕೇಳು. ಹಲವಾರು ಕಥೆಗಳಿವೆ. ಹೌದು, ಭಗವಾನ್ ಶಿವನಿಗೆ ಮೂರು ಕಣ್ಣುಗಳಿವೆ, ಅದಕ್ಕಾಗಿ ಅವನು ’ತ್ರಿನೇತ್ರ’ ಎಂದು ಕರೆಯಲ್ಪಡುತ್ತಾನೆ. ಮತ್ತು ಆ ಮೂರು ಕಣ್ಣುಗಳು ಯಾವುವು? ಮಾನವ ಶರೀರದ ಒಳಗೆ ಮೂರು ಪ್ರಧಾನ ನಾಡಿಗಳಿವೆ - ಇಡ, ಪಿಂಗಳ ಮತ್ತು ಸುಷುಮ್ನ ನಾಡಿ.  

ಯಾಕೆಂದರೆ ಹೊರಗಡೆ ಕಾಣಿಸುವುದು ಅದೇ. ಹಾಗಾಗಿ ಜನರು ತಮಗೆ ಏನು ಕಾಣಿಸುವುದೋ ಅದರ ಬಗ್ಗೆ ಮಾತನಾಡುತ್ತಾ ಮತ್ತು ಸಂಬಂಧ ಕಲ್ಪಿಸುತ್ತಾ ಹೋಗುತ್ತಾರೆ. ಹಠ ಯೋಗವು (ಹೆಚ್ಚಾಗಿ ಆಸನಗಳನ್ನು ಒಳಗೊಂಡ, ಯೋಗದ ಒಂದು ಶಾಖೆ ಅಥವಾ ಅಂಗ) ಅಷ್ಟಾಂಗ ಯೋಗದ ಒಂದು ಬಹಳ ಚಿಕ್ಕ ಭಾಗ ಮಾತ್ರ. ಯೋಗವೆಂದರೆ ಇದೇ ಎಂದು ಜನರು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅದು ಪರವಾಗಿಲ್ಲ. ಅದು ಕೂಡಾ ಶರೀರವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮತ್ತು ರೋಗಗಳಿಂದ ಮುಕ್ತವಾಗಿಟ್ಟುಕೊಳ್ಳಲು ಒಳ್ಳೆಯದು.

ಪ್ರಶ್ನೆ: ಗುರುದೇವ, ಒಬ್ಬ ವ್ಯಕ್ತಿಯು ಯಾರನ್ನಾದರೂ ಪ್ರೀತಿಸುವಾಗ ಅದು ಮೋಹವೆಂದು ಕರೆಯಲ್ಪಡುತ್ತದೆ. ಆದರೆ ದೇವರು ಅಥವಾ ಆತ್ಮ ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯೊಬ್ಬರು ಯಾರನ್ನಾದರೂ ಪ್ರೀತಿಸುವಾಗ ಅದು ಮೋಹವೆಂದು ಕರೆಯಲ್ಪಡುವುದಿಲ್ಲ. ಎರಡರ ನಡುವೆಯಿರುವ ವ್ಯತ್ಯಾಸವೇನು? ನಾವು ನಮ್ಮ ಪ್ರಾಪಂಚಿಕ ಪ್ರೇಮವನ್ನು, ದೈವಿಕ ಪ್ರೇಮದಷ್ಟು ಸ್ವೀಕಾರಾರ್ಹವಾಗಿಸುವಂತೆ ಹೇಗೆ ಬದಲಾಯಿಸಬಹುದು?

ಶ್ರೀ ಶ್ರೀ ರವಿ ಶಂಕರ್:
ನೀನು ಈಗಾಗಲೇ ನಿನ್ನ ಪ್ರಶ್ನೆಗೆ ಉತ್ತರಿಸಿರುವೆ. ನೀನು ಒಂದು ಪ್ರಶ್ನೆಯನ್ನು ಕೇಳುತ್ತಿರುವೆಯೆಂದು ತೋರುತ್ತದೆ, ಆದರೆ ನೀನು ಕೇವಲ ನಿನ್ನ ಅಭಿಪ್ರಾಯವನ್ನು ಕೊಡುತ್ತಿರುವುದು ಮಾತ್ರ. ಒಂದು ನಿಜವಾದ ಪ್ರಶ್ನೆ ಮತ್ತು ಒಂದು ಹೇಳಿಕೆ ಇವುಗಳ ನಡುವೆ ನಾನು ಅಂತರವನ್ನು ತಿಳಿದುಕೊಳ್ಳಬಲ್ಲೆನು.

ಪ್ರಶ್ನೆ: ಗುರುದೇವ, ನನ್ನಲ್ಲಿ ಬಹಳಷ್ಟು ಜ್ಞಾನವಿದೆ, ಆದರೆ ಭಕ್ತಿಯಿರುವುದು ತುಂಬಾ ಕಡಿಮೆ. ನಾನು ಜ್ಞಾನದಿಂದ ಭಕ್ತಿಯ ಕಡೆಗೆ ಹೋಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:
ಮೊದಲನೆಯದಾಗಿ, ನಿನ್ನಲ್ಲಿ ಕಡಿಮೆ ಭಕ್ತಿಯಿರುವುದೆಂದು ಯೋಚಿಸುವುದನ್ನು ನಿಲ್ಲಿಸು. ನಿನ್ನಲ್ಲಿ ಭಕ್ತಿಯಿಲ್ಲವೆಂದು ಯಾರು ಹೇಳುತ್ತಾರೆ? ಅದು ಅಲ್ಲಿದೆ ಮತ್ತು ಹೇರಳವಾಗಿದೆ. ಅದು ಯಾವತ್ತೂ ಕಡಿಮೆಯಾಗಲು ಸಾಧ್ಯವಿಲ್ಲ.

ಅದು ಹೆಚ್ಚಾಗಬೇಕೆಂದು ನೀನು ಬಯಸುವುದಾದರೆ, ನಾರದ ಭಕ್ತಿ ಸೂತ್ರವನ್ನು ಓದು, ಭಜನೆಗಳನ್ನು ಹಾಡು, ನರ್ತಿಸು ಮತ್ತು ಆಚರಿಸು. ನೀನು ಅತಿಯಾಗಿ ಓದುತ್ತಿರುವುದಾದರೆ, ನೀನದನ್ನು ಕಡಿಮೆ ಮಾಡಬೇಕು. ಬದಲಾಗಿ, ಹೆಚ್ಚು ಸೇವೆ ಮಾಡು ಮತ್ತು ಜನಸೇವೆ ಮಾಡು.

ಪ್ರಶ್ನೆ: ಗುರುದೇವ, ಭಾರತಕ್ಕೆ ಯಾವಾಗಲಾದರೂ ಒಳ್ಳೆಯ ನಾಯಕತ್ವವು ದೊರೆಯುವುದೇ? ಭಾರತದಲ್ಲಿ ಒಳ್ಳೆಯ ನಾಯಕನನ್ನು ಪಡೆಯುವುದು ಅಷ್ಟೊಂದು ಕಷ್ಟವೇ?

ಶ್ರೀ ಶ್ರೀ ರವಿ ಶಂಕರ್:
ಇಲ್ಲ, ಅದು ಹಾಗಲ್ಲ. ಭಾರತವು ಖಂಡಿತವಾಗಿಯೂ ಒಳ್ಳೆಯ ನಾಯಕರನ್ನು ಹೊಂದುವುದು. ಭಾರತದಲ್ಲಿ ಬಹಳ ಪ್ರತಿಭಾಶಾಲಿಯಾದ ಮತ್ತು ಒಳ್ಳೆಯ ಜನರಿದ್ದಾರೆ. ಆದರೆ ಅದಕ್ಕಾಗಿ ನೀವೆಲ್ಲರೂ ಕೆಲಸ ಮಾಡಬೇಕಾಗುತ್ತದೆ. ನೀವು ಎದ್ದು ನಿಲ್ಲುವುದು ಮತ್ತು ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲುವುದು ಈ ಕ್ಷಣದ ಅಗತ್ಯ. ಇವತ್ತು ನಮ್ಮ ದೇಶವು ಅಷ್ಟೊಂದು ಕೆಟ್ಟ ಸ್ಥಿತಿಯಲ್ಲಿರಲು ಕಾರಣವೆಂದರೆ, ಕೆಟ್ಟ ಜನರಿಂದಾಗಿಯಲ್ಲ, ಆದರೆ ಒಳ್ಳೆಯ ಮತ್ತು ಶ್ರೇಷ್ಠ ಜನರ ಮೌನದಿಂದಾಗಿ. ಇವತ್ತು ದೇಶದಲ್ಲಿ ಈ ಪರಿಸ್ಥಿತಿಯಿರುವುದು ಯಾಕೆಂದರೆ ಒಳ್ಳೆಯ ಜನರು ಮೌನವಾಗಿರುತ್ತಾರೆ, ಹಿಂದೆ ಉಳಿಯುತ್ತಾರೆ, ನಿರುತ್ಸಾಹಿಗಳಾಗಿರುತ್ತಾರೆ ಮತ್ತು ಸೋಮಾರಿಗಳಾಗಿರುತ್ತಾರೆ. ಮೊದಲನೆಯದಾಗಿ, ಒಳ್ಳೆಯ ಜನರು ರಾಜಕೀಯ ಅಭ್ಯರ್ಥಿಗಳಾಗಬೇಕು ಮತ್ತು ಒಳ್ಳೆಯ ನಾಗರಿಕರ ಒಂದು ವೋಟ್ ಬ್ಯಾಂಕ್ ಸೃಷ್ಟಿಯಾಗಬೇಕು, ಆಗ ಯಾವ ಪಕ್ಷವೂ ಒಬ್ಬ ಅಪರಾಧಿಗೆ ಚೀಟಿ ನೀಡಲಾರದು ಎಂಬುದು ನಿಮಗೆ ಕಾಣಿಸುವುದು. ಶಿಕ್ಷೆಗೊಳಗಾದ ಅಪರಾಧಿಗಳನ್ನು ಸಂಸತ್ತಿನಲ್ಲಿ ಕುಳಿತುಕೊಳ್ಳಲು ಅನುಮತಿಸಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳುತ್ತದೆ. ಆದರೆ ಇವತ್ತು ಸಂಸತ್ತಿನಲ್ಲಿರುವ ಎಲ್ಲಾ ರಾಜಕಾರಣಿಗಳು, ಶಿಕ್ಷೆಗೊಳಗಾದ ಅಪರಾಧಿಗಳನ್ನು ಅಲ್ಲಿ ಕುಳಿತುಕೊಳ್ಳಲು ಅನುಮತಿಸಬೇಕೆಂದು ಹೇಳುತ್ತಾರೆ.

ಸಂಸತ್ತಿಗೆ ಶಿಕ್ಷೆಗೊಳಗಾದ ಅಪರಾಧಿಗಳ ಪ್ರವೇಶವನ್ನು ನಿರಾಕರಿಸುವ ಸರ್ವೋಚ್ಛ ನ್ಯಾಯಾಲಯದ ನಿರ್ಧಾರದ ವಿರುದ್ಧ ಎಲ್ಲಾ ಪಕ್ಷಗಳು ಒಂದಾಗಿವೆ. ಇದು ನಿಮಗೆಲ್ಲರಿಗೂ ಅಚ್ಚರಿಯುಂಟುಮಾಡುವುದಿಲ್ಲವೇ? ಶಿಕ್ಷೆಗೊಳಗಾದ ಅಪರಾಧಿಗಳು ಉಳಿಯಬೇಕೆಂದು ಪಕ್ಷಗಳು ಬಯಸುತ್ತವೆ. ಇದು ಬಹಳ ವಿಚಿತ್ರ. ಮನಸ್ಸುಗಳಲ್ಲಿ ಏನು ನಡೆಯುತ್ತದೆಯೆಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಕ್ಷೇತ್ರದಲ್ಲಿ ಕೆಲವು ಪ್ರಮುಖ ಸಂಶೋಧನೆಯಾಗಬೇಕಾಗಿದೆ. ಒಂದೇ ಪಕ್ಷದ ಜನರು ತಮ್ಮದೇ ಜನರ ಮತ್ತು ಪಕ್ಷದ ಸದಸ್ಯರ ವಿರುದ್ಧ ಹೋಗುವುದನ್ನು ನಾವು ನೋಡುತ್ತೇವೆ. ಅವರು ದೇಶದ ಬಗ್ಗೆಯಿರಲಿ, ತಮ್ಮ ಪಕ್ಷದ ಬಗ್ಗೆಯೇ ಕಾಳಜಿ ವಹಿಸುವುದಿಲ್ಲ. ಅವರು ದೇಶದ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ಈ ರಾಜಕಾರಣಿಗಳ ಮೇಲೆ ಸಂಶೋಧನೆ ನಡೆಸುವಂತೆ ನಾವು ಮನೋವಿಜ್ಞಾನಿಗಳಲ್ಲಿ ಕೇಳಿಕೊಳ್ಳಬೇಕು. ಅವರ ಮನಸ್ಸುಗಳು ಈ ವಿಧವಾಗಿ ಯಾಕೆ ಕೆಲಸ ಮಾಡುತ್ತವೆ? ಯಾರಿಗೂ ಪ್ರಯೋಜನಕಾರಿಯಾಗದಂತಹ ಕಾರ್ಯಗಳನ್ನು ಅವರು ಯಾಕೆ ಮಾಡುತ್ತಾರೆ? ಅವರು ತಾವು ಕುಳಿತಿರುವ ಮರದ ಬೇರುಗಳು ಮತ್ತು ರೆಂಬೆಗಳನ್ನೇ ಕತ್ತರಿಸುತ್ತಾರೆ. ಯಾಕೆ?

ಪ್ರಶ್ನೆ: ಗುರುದೇವ, ಕಾರ್ಪೊರೇಟ್ ಜಗತ್ತೆಂದರೆ ಲಾಭ ಮಾಡುವುದು. ಮತ್ತು ಆಧ್ಯಾತ್ಮ ಜಗತ್ತೆಂದರೆ ಸಂಪತ್ತನ್ನು ಹಂಚುವುದು. ಒಂದು ಸಂತುಲನವನ್ನು ಕಾಯ್ದುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:
ಅದು ನೀನು ಹೇಗೆ ಒಂದು ಬೈಕನ್ನು ಓಡಿಸುವೆಯೋ ಹಾಗೆಯೇ. ನೀನು ನಿನ್ನ ಸಂಸ್ಥೆಯು ಲಾಭ ಗಳಿಸುವಂತೆ ಮಾಡಬೇಕು. ನೀನು ನಷ್ಟವನ್ನನುಭವಿಸಿದರೆ, ನೀನು ದಾನಿಯಾಗಲಾದರೂ ಹೇಗೆ ಸಾಧ್ಯ? ಆಗ ನಿನಗೆ ದಾನ ಮಾಡಲು ಸಾಧ್ಯವಿಲ್ಲ, ಸರಿಯಾ? ಹಾಗಾಗಿ ನೀನು ಎರಡರ ಬಗ್ಗೆಯೂ  ಗಮನವಿರಿಸಬೇಕು.

ಪ್ರಶ್ನೆ: ಗುರುದೇವ, ಆಧ್ಯಾತ್ಮವು ನನ್ನನ್ನು ಶ್ರೀಮಂತನಾಗಿಸಬಲ್ಲದೇ? ನಾನು ಆರ್ಥಿಕವಾಗಿ ಬಹಳ ಶ್ರೀಮಂತನಾಗಿರುವೆನು. 

ಶ್ರೀ ಶ್ರೀ ರವಿ ಶಂಕರ್:
ಆಧ್ಯಾತ್ಮವು ನಿನ್ನನ್ನು ಶ್ರೀಮಂತನನ್ನಾಗಿಸುವುದು ಎಂದು ಯೋಚಿಸಬೇಡ. ಆಧ್ಯಾತ್ಮವು ನಿನ್ನನ್ನು ಹೆಚ್ಚು ಶಕ್ತಿಶಾಲಿಯಾಗಿಸುವುದು. ಆಗ ಈ ಶಕ್ತಿಯನ್ನು ಕಠಿಣ ಪರಿಶ್ರಮದೊಂದಿಗೆ ಒಂದು ಒಳ್ಳೆಯ ರೀತಿಯಲ್ಲಿ ಬಳಸು. ಸಂಸ್ಕೃತದಲ್ಲಿ ಒಂದು ಮಾತಿದೆ; ಯಾರು ಕಠಿಣ ಪರಿಶ್ರಮ ಮಾಡುವರೋ ಅವರು ಮಾತ್ರ ಶ್ರೀಮಂತರೂ, ಶಕ್ತಿ ಸಾಮರ್ಥ್ಯಗಳಿಂದ ತುಂಬಿದವರೂ ಆಗಬಲ್ಲರು. ಕಠಿಣ ಪರಿಶ್ರಮಕ್ಕೆ ನಿಮ್ಮಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸವಿರಬೇಕು, ಇದನ್ನು ಆಧ್ಯಾತ್ಮವು ನಿಮಗೆ ನೀಡುತ್ತದೆ. ಆತ್ಮವಿಶ್ವಾಸ ಮತ್ತು ಒಂದು ಸಿಂಹಕ್ಕಿರುವಂತಹ ನಿರ್ಭಯತೆಯನ್ನು ಕೇವಲ ಆಧ್ಯಾತ್ಮಕ್ಕೆ ಮಾತ್ರ ನಿಮಗೆ ನೀಡಲು ಸಾಧ್ಯ. ಬೇರೆ ಯಾವುದೇ ಮಾರ್ಗವಿಲ್ಲ.