ಬುಧವಾರ, ಆಗಸ್ಟ್ 28, 2013

ಯೋಗಃ ಕರ್ಮಸು ಕೌಶಲಂ

೨೮ನೇ ಆಗಸ್ಟ್ ೨೦೧೩
 ಬೆಂಗಳೂರು, ಭಾರತ
ಮ್ಮೊಳಗೆ ಕುಶಲತೆಯು ಅರಳಿದಾಗ ಅದನ್ನು ಯೋಗ ಎನ್ನುವರು. ‘ಯೋಗಃ ಕರ್ಮಸು ಕೌಶಲಂ’ ಎನ್ನುತ್ತಾರೆ. ನಾವು ಯಾವುದಾದರೊಂದು ಕೆಲಸ ಮಾಡಬೇಕಾದರೆ, ‘ಇದು ನಡೆಯುತ್ತದೆಯೋ ಇಲ್ಲವೋ’ ಅಥವಾ ‘ಅರ್ಧದಷ್ಟೇ ನಡೆಯುವುದೋ’ ಅಥವಾ ‘ತುಂಬಾ ಸಮಯ ತೆಗೆದುಕೊಳ್ಳುವುದೇನೋ’ ಇತ್ಯಾದಿ ಯೋಚಿಸುತ್ತಾ ಅರೆಮನಸ್ಸಿನಿಂದ ಮಾಡುವುದಿಲ್ಲ. ಒಮ್ಮೆ ಕೆಲಸವೊಂದನ್ನ್ನು ಮಾಡಬೇಕೆಂದು ತೀರ್ಮಾನಿಸಿದ ಮೇಲೆ ಅದನ್ನು ಮಾಡಿಬಿಡಿ. ಕೇವಲ ಆಲೋಚನಾ ಮಾತ್ರದಿಂದಲೇ ಕಾರ್ಯಗಳು ಪೂರ್ಣಗೊಂಡರೆ, ಅಂತಹ ಸಾಮರ್ಥ್ಯವನ್ನು ಸಿದ್ಧಿ ಎನ್ನುವರು. ಸಿದ್ಧಿಯನ್ನು ಪಡೆಯುವುದೇ ಮಾನವ ಜೀವನದ ಉದ್ದೇಶ. ಕೇವಲ ಲೌಕಿಕ ಸುಖ-ಭೋಗಗಳನ್ನು ಪಡೆಯುವುದಷ್ಟೇ ಅಲ್ಲ.

ಶ್ರೀಕೃಷ್ಣನ ವಿನಾ ಭಾರತವು ಭಾರತವೆನಿಸದು ಹಾಗೂ ರಾಮಾಯಣ ಮತ್ತು ಮಹಾಭಾರತವೂ ಇರುತ್ತಿರಲಿಲ್ಲ. ಇವೆರಡು ಮಹಾಕಾವ್ಯಗಳು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ, ಒಟ್ಟಾಗಿ ಇತಿಹಾಸವೆನ್ನುವರು. ಇದು ಯಾವುದೋ ಒಂದು ಧರ್ಮ ಅಥವಾ ಒಂದು ಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ಇಡೀ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ.

ನಮ್ಮ ದೇಶದ ಪ್ರತಿ ಹಳ್ಳಿಯಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಓದುತ್ತಾರೆ, ಚರ್ಚಿಸುತ್ತಾರೆ. ಈ ಮಹಾಕಾವ್ಯಗಳ ವಿಶಿಷ್ಟತೆಯೆಂದರೆ ಯಾವುದೋ ಒಂದು ಕಾಲದಲ್ಲಿ ಸಂಭವಿಸಿದ್ದು, ಈಗ ನಡೆಯುತ್ತಿಲ್ಲವೆಂದಲ್ಲ. ಇವು ಈಗಲೂ ಜೀವಂತವಾಗಿವೆ, ಇಂದಿಗೂ ನಡೆಯುತ್ತಿವೆ.  ಪ್ರತಿಯೊಬ್ಬರ ಜೀವನದಲ್ಲೂ ಪ್ರತಿನಿತ್ಯ ಮಹಾಭಾರತ ನಡೆಯುತ್ತಿದೆ. ಪ್ರತಿದಿನ ಗೀತಾ ಪ್ರವಚನ ನಡೆಯುತ್ತಿದೆ.

ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಜನ್ಮದಿನವೆಂದು ಆಚರಿಸುತ್ತೇವೆ. ಕೃಷ್ಣನು ಆನಂದದ ಪ್ರತೀಕ. ಸಂತೋಷವನ್ನು ಆಚರಿಸುವುದರ ಮೂಲಕ ಅಭಿವ್ಯಕ್ತಪಡಿಸುತ್ತೇವೆ. ಆದ್ದರಿಂದಲೇ ಆನಂದದ ಜನ್ಮವನ್ನು ಆಚರಿಸುವುದು. (ದಿವ್ಯ) ಆನಂದವು ಜನ್ಮಾಷ್ಟಮಿಯಂದು ಆವಿರ್ಭವಿಸಿದ ದಿನ. ನಿಜವಾಗಿಯೂ, ಇಲ್ಲಿ ‘ಜನ್ಮ’ ಎನ್ನುವ ಪದದ ಬಳಕೆ ಸರಿಯಲ್ಲ. ಶ್ರೀಕೃಷ್ಣನು ಎಂದೂ ಜನಿಸಿರಲಿಲ್ಲ. ಆ (ದಿವ್ಯ) ಆನಂದವು ಚಿರಸ್ಥಾಯಿಯಾಗಿರುವುದು, ಆದರೆ ಈ ದಿನ ಸ್ಪಷ್ಟವಾಗಿ ಪ್ರತ್ಯಕ್ಷಗೊಂಡಿರುವನು. ಶ್ರೀಕೃಷ್ಣನ್ನನ್ನು ಎಲ್ಲಿ ಕಾಣುವಿರಿ? ಎಲ್ಲೆಡೆಯೂ!  ಕೃಷ್ಣನು ಹೇಳುತ್ತಾನೆ – ಯಾರು ನನ್ನನ್ನು ಸರ್ವತ್ರ, ಸರ್ವರಲ್ಲಿಯೂ ಕಾಣುವನೋ ಮತ್ತು ಸರ್ವರನ್ನೂ ನನ್ನಲ್ಲಿ ಕಾಣುವನೋ ಅವನೇ ನಿಜವಾದ ಪ್ರಾಜ್ಞ. ಈಗ ಜಗತ್ತಿನಲ್ಲಿ ಯಾರೂ ದಡ್ಡರಾಗಲು ಬಯಸುವುದಿಲ್ಲ. ಪ್ರತಿಯೊಬ್ಬರೂ ಬುದ್ಧಿವಂತರಾಗಲು ಬಯಸುವರು. ಆದ್ದರಿಂದ ಯಾರು ಪರಮಾತ್ಮನ್ನನ್ನು ಇಡೀ ಸೃಷ್ಟಿಯಲ್ಲಿ ಆವಿರ್ಭವಿಸಿರುವ ಆನಂದ ತತ್ವವೆಂದು ಗುರುತಿಸುವರೋ ಅವರೇ ನಿಜವಾಗಲೂ ಬುದ್ಧಿವಂತರು. ಎಲ್ಲವೂ ಆನಂದತತ್ವದಿಂದ ಜನಿಸಿದೆ.ಇದೇ ಜನ್ಮಾಷ್ಟಮಿಯ ವಿಶೇಷ ಸಂದೇಶ. ಇದರ ಅವಶ್ಯಕತೆಯೇನು?

ಆಂತರ್ಯದಲ್ಲಿ ಮುಗ್ಧನಾಗುವ ಅವಶ್ಯಕತೆಯಿದೆ. ನಿಮ್ಮಲ್ಲಿ ಮಗುವಿನಂತಹ ಮುಗ್ಧತೆಯಿರಬೇಕು. ‘ಭೋಲೇ ಭಾವ್ ಮಿಲೇ ರಘುರಾಯಿ’ಎಂದು ಹೇಳುತ್ತಾರೆ (ಮುಗ್ಧ ಹಾಗೂ ಪವಿತ್ರ ಭಾವನೆಗಳಿಂದ ದೇವರನ್ನು ಪಡೆಯಬಹುದು).

ಇವತ್ತಿನ ಜ್ಞಾನ: ತೀವ್ರವಾಗಿ ಆನಂದಿಸುವ ಹಾಗೂ ಆಚರಿಸುವ ಸಮಯ ಬಂದಿದೆ! (ನಗೆ) ಆಳವಾದ ವಿಶ್ರಾಮದಿಂದ ಮಾತ್ರ ಶ್ರೀಕೃಷ್ಣನ ಸಾಕ್ಷಾತ್ಕಾರವಾಗುವುದು. ನಿಮ್ಮ ಕಷ್ಟ ಹಾಗೂ ಪರಿಶ್ರಮಗಳಿಂದ ಕೃಷ್ನನ ಸಾಕ್ಷಾತ್ಕಾರವನ್ನು ಪಡೆಯಬಹುದು. ಯಾವಾಗ ಈ ಆಳವಾದ ವಿಶ್ರಾಮವಾಗುವುದು? ನಿಮ್ಮ ಮನಸ್ಸು ಯಾವಾಗ ಚಡಪಡಿಕೆಯಿಲ್ಲದೇ, ಜ್ವರಪೀಡಿತ ಆಸೆಗಳಿಂದ ಬಂಧಿತವಾಗಿಲ್ಲವೋ ; ಬಯಕೆ ಹಾಗೂ ಹೇವರಿಕೆಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲವೋ ಆಗ ವಿಶ್ರಾಮವಾಗುವುದು. ಆ ಗಹನವಾದ ವಿಶ್ರಾಮದಲ್ಲಿ ಕೃಷ್ಣನ ಜನ್ಮಕ್ಕೆ ಸಾಕ್ಷಿಯಾಗಬಹುದು (ದಿವ್ಯ ಆನಂದದ ಜನ್ಮ).

ಶ್ರೀಕೃಷ್ಣನ ಜನ್ಮವನ್ನು ಆಧ್ಯಾತ್ಮದ ದೃಷ್ಟಿಯಿಂದ ನೋಡಬೇಕು. ದೇವಕಿ (ಕೃಷ್ಣನ ತಾಯಿ) ದೇಹವನ್ನು ಪ್ರತಿನಿಧಿಸಿದರೆ, ವಾಸುದೇವ (ಕೃಷ್ಣನ ತಂದೆ) ಪ್ರಾಣಶಕ್ತಿಯನ್ನು ಪ್ರತಿನಿಧಿಸುತ್ತಾನೆ. ದೇಹದಲ್ಲಿ ಪ್ರಾಣಶಕ್ತಿಯು ಸಂಚರಿಸಿದಾಗ ಆನಂದದ (ಕೃಷ್ಣನ) ಜನನವಾಗುತ್ತದೆ. ಆದರೆ ಆ ಸಮಯದಲ್ಲಿ ಅಹಂ (ಕೃಷ್ಣನ ಮಾವ ಕಂಸ) ಆನಂದವನ್ನು ಹಾಳು ಮಾಡಲು ಬಯಸುತ್ತದೆ. ಎಲ್ಲಿ ಆನಂದವಿರುವುದೋ ಅಲ್ಲಿ ಅಹಂ ಇರಲು ಸಾಧ್ಯವಿಲ್ಲ. ಆನಂದದಿಂದ ತುಂಬಿರುವ ವ್ಯಕ್ತಿಯು ಯಾರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ಇತರರಿಗೆ ತೊಂದರೆ ನೀಡಿ, ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಇತರರಿಗೆ ತೊಂದರೆ ನೀಡುವವನೇ ಸ್ವತಃ ಕಷ್ಟದಲ್ಲಿದ್ದು, ನೋವು ಅಥವಾ ಹಾನಿಯುಂಟಾಗಿರುತ್ತದೆ. ಅಂಥವರೇ ಸುತ್ತಮುತ್ತಲಿನವರಿಗೆ ತೊಂದರೆ ನೀಡುವುದು. ಯಾರಿಗೆ ಅನ್ಯಾಯವಾಗಿದೆಯೋ ಅವನೇ ಇತರರಿಗೆ ಅನ್ಯಾಯ ಮಾಡುವನು. ತುಷ್ಟ ಹಾಗೂ ತೃಪ್ತನಾದ ವ್ಯಕ್ತಿ ಯಾರಿಗೂ ತೊಂದರೆ ನೀಡುವುದಿಲ್ಲ; ಯಾರ ವಸ್ತುವನ್ನು ಕದಿಯುವುದಿಲ್ಲ. ಆದ್ದರಿಂದ ಜ್ಞಾನ, ಸಂತೋಷ ಮತ್ತು ಪ್ರೀತಿ, ಅಹಂನ ದೊಡ್ಡ ವೈರಿ. ಕೃಷ್ಣನು ಪ್ರೀತಿ ಮತ್ತು ಆನಂದದ ಚಿಹ್ನೆ. ಪ್ರೀತಿಯಿರುವಲ್ಲಿ ಅಹಂ ಇರಲು ಹೇಗೆ ಸಾಧ್ಯ?

ಅಹಂಗೆ ಪ್ರೀತಿಯ ಭಯವಷ್ಟೇ, ಬೇರೇನೂ ಇಲ್ಲ. ಇದಕ್ಕೆ ಕಾರಣ ಪ್ರೀತಿಯ ಮುಂದೆ ಅಹಂ ತಲೆ ಬಾಗಲೇಬೇಕು. ಎಷ್ಟೇ ಮಹಾನ್ ವ್ಯಕ್ತಿಯಾಗಿದ್ದರೂ ತನ್ನ ಮಗುವಿನ ಪ್ರೀತಿಯ ಮುಂದೆ ಕರಗಲೇಬೇಕು. ಮಗುವಿಗೆ ಆರೋಗ್ಯ ಸರಿಯಿಲ್ಲದಾಗ, ಎಷ್ಟೇ ಧೈರ್ಯ ಹಾಗೂ ಶಕ್ತಿವಂತನಾಗಿದ್ದರೂ ತನ್ನ ಮಗುವಿನ ಆರೋಗ್ಯಕ್ಕಾಗಿ, ಪ್ರೀತಿ ಮತ್ತು ಕಾಳಜಿಯ ಮೇರೆಗೆ ಕರಗಿಬಿಡುವನು. ಸಹಜವಾಗಿಯೇ ಚಿಂತಿತನಾಗುವನು. ಆದ್ದರಿಂದ ಅಹಂನ ದೊಡ್ಡ ವೈರಿ - ಪ್ರೀತಿ, ಸಂತೋಷ ಮತ್ತು ಸಹಜತೆ. ಕೃಷ್ಣನು ಯಾವುದನ್ನು ಪ್ರತಿನಿಧಿಸುತ್ತಾನೆ? ಅವನು ಸುಖ-ಸಂತೋಷ ಮತ್ತು ಸಹಜವಾಗಿರುವುದುರ ಸಂಕೇತ; ಆನಂದದ ಮೂಲ.

ಈ ಕಾರಣದಿಂದಲೇ ಅಹಂ ಮತ್ತು ಪ್ರೀತಿಯ ನಡುವೆ ಯುದ್ಧವಿರುವುದು, ಏಕೆಂದರೆ ಪ್ರೀತಿಯು ಉದಯಿಸುವುದರಿಂದ ಅಹಂ ಕರಗಿ, ಮಾಯವಾಗುತ್ತದೆ. ಕಂಸನು ಅಹಂ ಅನ್ನು ಪ್ರತಿನಿಧಿಸುತ್ತಾನೆ ಮತ್ತು ಶರೀರದ ಜನನದೊಂದಿಗೆ ಅಹಂ ಜನಿಸುತ್ತದೆ.

ದೇವಕಿಯು (ದೇಹ) ಕಂಸನ ಸಹೋದರಿ. ಕೃಷ್ಣನು ಕಾರಾಗೃಹದಲ್ಲಿ ಜನಿಸಿದಾಗ ಕಾವಲುಗಾರರೆಲ್ಲ ಮಲಗಿದ್ದರು. ಸಂತೋಷ (ಕೃಷ್ಣ) ಇಲ್ಲದಿದ್ದಾಗ ದೇಹವು ಜೈಲಿನಂತೆ ಭಾಸವಾಗುವುದು. ಈ ಸೆರೆಮನೆಯಲ್ಲಿ (ದೇಹ) ಪ್ರೀತಿಯು (ಕೃಷ್ಣ) ಜನಿಸಿದಾಗ, ಇಂದ್ರಿಯಗಳೆಲ್ಲವೂ (ಸೆರೆಮನೆಯ ಕಾವಲುಗಾರರು) ಮಲಗಿದ್ದವು. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ ಎಲ್ಲವೂ ದೇಹದ ಕಾವಲುಗಾರರು, ಸಂತೋಷವನ್ನು ಬಾಹ್ಯದಲ್ಲೇ ಹುಡುಕುತ್ತವೆ. ಅವೆಲ್ಲ ಕಂಸ (ಅಹಂ) ನ ಕಾವಲುಗಾರರು. ನಾವು ಅಂತರ್ಮುಖಿಯಾದಾಗ, ಸಂತೋಷದ ಮೂಲ, ಆನಂದ (ಕೃಷ್ಣ) ಜನಿಸುವೆಡೆಗೆ ತಿರುಗಿದಾಗ ಕಾವಲುಗರರೆಲ್ಲರೂ ಮಲಗುತ್ತಾರೆ. ಕೃಷ್ಣನು ಜನಿಸಿದ ಮೇಲೆ, ಕಂಸನಿಂದ ರಕ್ಷಣೆ ಹಾಗೂ ಸುರಕ್ಷತೆಗಾಗಿ ಬೇರೆ ಕಡೆಗೆ ಸ್ಥಳಾಂತರಿಸಬೇಕಾಗಿತ್ತು. ಆದ್ದರಿಂದ ಬೃಂದಾವನದ ನಂದ ಮತ್ತು ಯಶೋದೆಯರ ಮನೆಗೆ ಕೃಷ್ಣನನ್ನು ತಂದುಬಿಡಲಾಯಿತು. ಹೀಗೆ ಈ ಕಥೆಗಳನ್ನೆಲ್ಲ ಆಳವಾಗಿ ಯೋಚಿಸಿದಾಗ ಅವುಗಳ ಆಧ್ಯಾತ್ಮಿಕ ತಾತ್ಪರ್ಯ ಮತ್ತು ಮೌಲ್ಯಗಳ ಅರಿವಾಗುವುದು. ಈ ಕಥೆಗಳ ಮತ್ತು ಸನ್ನಿವೇಶಗಳ ನೀತಿ ಮತ್ತು ಪ್ರಾಮುಖ್ಯತೆಯು ಒಂದು ಸ್ಥಳ ಅಥವಾ ಕಾಲಕ್ಕೆ ಸೀಮಿತವಾಗಿಲ್ಲ; ರಾಮಾಯಣ ಅಥವಾ ಮಹಾಭಾರತವನ್ನೇ ತೆಗೆದುಕೊಳ್ಳಿ.

ಕೃಷ್ಣನು ತನ್ನ ಕಿರೀಟದಲ್ಲಿ ನವಿಲು ಗರಿಯನ್ನು ಏಕ್ಕೆ ಸಿಕ್ಕಿಸಿಕೊಂಡಿರುವನೆಂದು ನಿಮಗೆ ಗೊತ್ತೇ? ಇದರ ಹಿಂದಿನ ರಹಸ್ಯ ಎಷ್ಟು ಜನರಿಗೆ ತಿಳಿದಿಲ್ಲ? ಕೃಷ್ಣನು ಎಂದಿಗೂ ನೇರವಾಗಿ ನಿಲ್ಲುವುದಿಲ್ಲ ಅಥವಾ ನಡೆಯುವುದಿಲ್ಲ. ಒಂದು ಕಾಲು ಸಂಪೂರ್ಣವಾಗಿ ಭೂಸ್ಪರ್ಶ ಮಾಡುತ್ತಿದ್ದು ಇನ್ನೊಂದು ಭೂಮಿಯ ಮೇಲಿದ್ದು, ಕೇವಲ ಕಾಲ್ಬೆರಳುಗಳ ಮೇಲೆ ವಿಶ್ರಮಿಸಿದ್ದಾನೆ. ಓರೆಯಾಗಿ ನಿಲ್ಲುತಾನೆ ಆದರೆ ನೇರವಾಗಿ ಮಾತನಾಡುತ್ತಾನೆ. ಕಿರೀಟದಲ್ಲಿ ನವಿಲು ಗರಿಯೇಕೆ?

ಸಾಮಾನ್ಯವಾಗಿ ಕಿರೀಟವು ಭಾರವಾಗಿದ್ದು, ಜವಾಬ್ದಾರಿಯ ಚಿಹ್ನೆಯಾಗಿದೆ.  ಕಿರೀಟಧಾರಿಯು ಇಡೀ ಸಮಾಜಕ್ಕೆ ಜವಾಬ್ದಾರಿಯುತನಾಗಿರುವನು. ಆದ್ದರಿಂದ ಯಾರು ಕಿರೀಟವನ್ನು ಧರಿಸುವರೋ ಅವರಿಗೆ ಅತಿ ಹೊರೆಯಾಗಬಹುದು.

ಸಮಾಜದಲ್ಲಿ ತಪ್ಪುಗಳು ನಡೆದಾಗ ಯಾರನ್ನು ಹೊಣೆ ಮಾಡುತ್ತೀರ? ರಾಜನನ್ನು  ತಾನೆ?  ಆದ್ದರಿಂದ ರಾಜನ ಕಿರೀಟ ಆತನು ಹೊತ್ತಿರುವ ಜವಾಬ್ದಾರಿಯ ಹೊರೆಯನ್ನು ಸೂಚಿಸುತ್ತದೆ. ಆದರೆ ನಿಮ್ಮೆಲ್ಲ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ನವಿಲು ಗರಿಯಂತೆ ಹಗುರವಾಗಿ ಮತ್ತು ಶ್ರಮರಹಿತವಾಗಿ ನಿರ್ವಹಿಸಿದರೆ ಯಾವ ಹೊರೆಯೂ ಅನಿಸದು. ಇದೇ ಶ್ರೀಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯು ಸೂಚಿಸುವುದು. ಇದು ಅನೇಕ ಜವಾಬ್ದಾರಿಗಳನ್ನು, ಹೊರೆಯೆನಿಸದೆ, ಹೊರಲು ಶಕ್ಯವಾಗಿವಾಗಿರುವುದರ ಸಂಕೇತ.

ಭಗವಂತನಿಗೆ ತನ್ನ ಸೃಷ್ಟಿಯು ಎಂದಿಗೂ ಹೊರೆಯೆನಿಸದು. ತಾಯಿಗೆ ತನ್ನ ಮಗುವು ಎಂದೂ ಹೊರೆಯೆನಿಸದು. ಹಾಗೆಯೇ ಯೋಗೀಶ್ವರನೆಂದು ಕರೆಯಲ್ಪಡುವ ಶ್ರೀಕೃಷ್ಣನಿಗೆ ಯಾವುದೇ ಜವಾಬ್ದಾರಿಯು ಎಂದೂ ಹೊರೆಯೆನಿಸದು. ಪ್ರತಿಯೊಂದು ಜವಾಬ್ದಾರಿಯೂ ಹಗುರ ಮತ್ತು ಸುಲಭವೆಂದೆನಿಸುವುದು.  ಆದ್ದರಿಂದಲೇ ಅವನ ಕಿರೀಟ ನವಿಲುಗರಿಯಿಂದ ಅಲಂಕೃತವಾಗಿದೆ. ನವಿಲು ಗರಿಯು ಬಣ್ಣ-ಬಣ್ಣಗಳಿಂದ ತುಂಬಿರುವಂತೆ ಅವನಿಗೆ ಅನೇಕ ಜವಾಬ್ದಾರಿಗಳಿವೆ, ಆದರೆ ಅವೆಲ್ಲವೂ ಹೊರೆಯಾಗಿಲ್ಲ. ಎಲ್ಲವೂ ಲೀಲೆಯಂತೆ ತೋರುತ್ತದೆ.

ಕೃಷ್ಣನ ಅನೇಕ ಹೆಸರುಗಳಲ್ಲಿ ಮಾಕನ್ ಚೋರ್ (ಬೆಣ್ಣೆ ಕಳ್ಳ ಅಥವಾ ನವನೀತ  ಚೋರ) ಕೂಡ ಒಂದು. ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆಯನ್ನು ಪಡೆಯುತ್ತೇವೆ. ಹಾಲು ದ್ರವ ಪದಾರ್ಥವಾಗಿದ್ದು, ಪೌಷ್ಟಿಕವಾಗಿರುತ್ತದೆ. ಅದರಿಂದ ಗಟ್ಟಿಯಾದ ಸಂಸ್ಕರಿಸಿದ ಮೊಸರು ದೊರೆಯುತ್ತದೆ. ಮೊಸರನ್ನು ಕಡೆದಾಗ ಬೆಣ್ಣೆ ದೊರೆಯುತ್ತದೆ. ಪಾತ್ರೆಯಲ್ಲಿ ಬೆಣ್ಣೆಯು ಮುಳುಗದೇ, ತೇಲುತ್ತದೆ. ಆದ್ದರಿಂದ ಬೆಣ್ಣೆ ಹಗುರ ಮತ್ತು ಅತ್ಯಂತ ಪೌಷ್ಟಿಕವಾದುದು. ಹೀಗೆ ಬೆಣ್ಣೆಯಂತೆ ನಮ್ಮ ಬುದ್ಧಿಶಕ್ತಿಯು ಪರಿಷ್ಕೃತ ಮತ್ತು ಪ್ರೌಢವಾದಾಗ ಮತ್ತು ಜ್ಞಾನದಲ್ಲಿ ಅರಳಿದಾಗ, ಸ್ಥಿತಪ್ರಜ್ಞರಾಗುವೆವು, ಅಂದರೆ ಸದಾ ಕಾಲದಲ್ಲಿಯೂ ಸಮಚಿತ್ತತೆಯನ್ನು ಹೊಂದಿರುವುದು.  ಆದರೆ ಅತ್ಯಂತ ಸಮಚಿತ್ತತೆಯುಳ್ಳವರ ಮನಸ್ಸು ಹಾಗೂ ಹೃದಯಗಳನ್ನೂ ಕದಿಯಬಲ್ಲವನೇ ಕೃಷ್ಣ! ಕೃಷ್ಣನೆಂದರೆ ಶುದ್ಧ ಆಕರ್ಷಣೆ. ಅತ್ಯಂತ ಮೇಧಾವಿ ಮತ್ತು ಜ್ಞಾನಿಯಾದವನ್ನನ್ನು ಆಕರ್ಷಿಸುವ ಸಾಮಥ್ರ್ಯವಿರುವುದು ಕೃಷ್ಣನಿಗೆ ಮಾತ್ರ. ಅತ್ಯಂತ ವಿರಕ್ತ ಹಾಗೂ ನಿರ್ಲಿಪ್ತ ಸಾಧು-ಸನ್ಯಾಸಿಗಳನ್ನು ಆಕರ್ಷಿಸಬಲ್ಲವನು ಕೃಷ್ಣ. ಜ್ಞಾನ ಹಾಗೂ ವಿವೇಕದಲ್ಲಿ (ಬೆಣ್ಣೆಯಂತೆ) ಪಕ್ವವಾಗಿರುವವನೇ ಪ್ರಾಜ್ಞ ಸನ್ಯಾಸಿ. ಆದರೆ ಅಂತಹ ಸನ್ಯಾಸಿಯ ಮನಸ್ಸು-ಹೃದಯಗಳನ್ನೂ ಕದಿಯಬಲ್ಲವನೆಂದರೆ ಕೃಷ್ಣ. ಆದ್ದರಿಂದಲೇ ಅವನ್ನನ್ನು ಮಾಕನ್ ಚೋರ್ ಎನ್ನುವುದು. ಅತ್ಯಂತ ವಿರಕ್ತ ಹಾಗೂ ಜ್ಞಾನಿಯ ಹೃದಯವನ್ನು ಕರಗಿಸುವ, ಮನಸ್ಸನ್ನು ಕದಡಬಲ್ಲವನು ಕೃಷ್ಣನೊಬ್ಬನೇ. ಇದನ್ನು ಹೇಗೆ ಮಾಡುವನು? ಪ್ರೀತಿಯಿಂದ.

ಸರಿ, ನೀವೆಲ್ಲರೂ ‘ಕ’ (ಕೃಷ್ಣನ ಹೆಸರಿನ ಮೊದಲ ಅಕ್ಷರ) ವನ್ನು ‘ಅ’ ‘ಅ’ ಸ್ವರ ಪ್ರಯೋಗಿಸದೆ ಉಚ್ಚರಿಸಬಲ್ಲಿರಾ? ಒಮ್ಮೆ ಪ್ರಯತ್ನಿಸಿ. (ಸಭಿಕರು ಪ್ರಯತ್ನಿಸಿ ಬಿಟ್ಟುಬಿಡುವರು). ನೋಡಿ, ನೀವೆಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲವಲ್ಲವೇ?

ಆದ್ದರಿಂದ ‘ಕ’ ಶಬ್ದವನ್ನು ಉಚ್ಚರಿಸಲು ಯತ್ನಿಸಿದಾಗ ಆ ಶಬ್ದದ ಮೂಲಕ್ಕೆ ಸೆಳೆದೊಯ್ಯುತ್ತದೆ, ಅದೇ ಬ್ರಹ್ಮನ್. ಅದು ಧ್ವನಿ ಹಾಗೂ ಶಬ್ದ ಪ್ರತಿಫಲಿಸುವ ಆಕಾಶವಾಗಿದೆ, ಏಕೆಂದರೆ ಬ್ರಹ್ಮನ್ ಅಥವಾ ಆತ್ಮ ತತ್ವವನ್ನು ಧ್ವನಿ ಅಥವಾ ಶಬ್ದಗಳಿಂದ ತಲುಪಲು ಸಾಧ್ಯವಿಲ್ಲ. ಬ್ರಹ್ಮನ್ ಆಕಾಶತತ್ವದಲ್ಲಿ ಹರಟುವ ಮನಸ್ಸು ವಿಶ್ರಮಿಸುವುದು, ಧ್ವನಿ ಅಥವಾ ಶಬ್ದವಿರದು, ಆಳವಾದ ಪ್ರಶಾಂತತೆಯ ಅನುಭವವಾಗುವುದು. ಆ ಸ್ಥಿತಿಯಲ್ಲಿ ಗಾಢವಾದ ಧ್ಯಾನಕ್ಕಿಳಿದು ಆತ್ಮನೊಂದಿಗೆ ಒಂದಾಗುವಿರಿ.

ಆದ್ದರಿಂದ ‘ಅ’ ಕಾರವನ್ನುಚ್ಚರಿಸದೇ ‘ಕ’ ಶಬ್ದವನ್ನು ಉಚ್ಚರಿಸಲು ಯತ್ನಿಸುವುದು ಧ್ಯಾನವೇ ಸರಿ. ನೀವೆಲ್ಲರೂ ಇದನ್ನೊಮ್ಮೆ ಪ್ರಯತ್ನಿಸಬೇಕು, ಮಲಗುವ ಮುನ್ನ ಅಥವಾ ಬೆಳಿಗ್ಗೆ ಎದ್ದ ನಂತರ ಅಥವಾ ದಿನದ ಯಾವ ವೇಳೆಯಲ್ಲಾದರೂ ಸರಿ ಇದನ್ನು ಪ್ರಯತ್ನಿಸಿ ಹಾಗೂ ನಿಮ್ಮ ಮನಸ್ಸು -ಬುದ್ಧಿಗಳಲ್ಲಿನ ಸಂವೇದನೆಯನ್ನು ಗಮನಿಸಿ. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಂಭೀಭೂತವಾಗಿ, ಗಾಢ ಮೌನ ಆವರಿಸುವುದು. ಇಂತಹ ಸ್ಥಿತಿಯಲ್ಲಿ ವಿಸ್ಮಯದಿಂದ ಆಳಕ್ಕಿಳಿಯುತ್ತೀರ, ಸುಂದರವಾದ ಮುಗ್ಧತೆ ನಿಮ್ಮೊಳಗೆ ಉದಯಿಸುವುದು. ನೀವು ಚಿಕ್ಕವರಿದ್ದಾಗ ಮುಗ್ಧತೆಯಿಂದ ಕೇಳುತ್ತಿದ್ದ ಎಲ್ಲ ಪದಗಳನ್ನು ಪುನರುಚ್ಚರಿಸುತ್ತಿದ್ದಿರಿ. ಆ ಮುಗ್ಧತೆಯ ಸ್ಥಿತಿಗೆ ನೀವು ಮರಳಬೇಕು. ಅದು ಎಲ್ಲ ಶಬ್ದ ಮತ್ತು ಧ್ವನಿಗಳು ಹುಟ್ಟುವ ಮೂಲಕ್ಕೆ ಕರೆದೊಯ್ಯುತ್ತದೆ.

ಭಗವದ್ಗೀತೆಯಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ:

ಪೂರ್ವಾಭ್ಯಾಸೇನ ತೇನೈವ ಹ್ರಿಯತೆ ಹ್ಯವಶೊ-ಅಪಿ ಸಃ |
ಜಿಜ್ಞಾಸುರ್-ಅಪಿ ಯೋಗಸ್ಯ ಶಬ್ದ-ಬ್ರಹ್ಮಾತಿವರ್ತತೆ || (೬.೪೪)


‘ಯೋಗದ ಬಗ್ಗೆ ಜಿಜ್ಞಾಸೆಯಿರುವ ಜ್ಞಾನಿಯೂ ಕೂಡ ಕಡೆಯಲ್ಲಿ ಶಬ್ದಾತೀತವಾದ ಮೂಲವನ್ನು (ಬ್ರಹ್ಮವನ್ನು) ತಲುಪುತ್ತಾನೆ.’
ಇಂದು ವಿಶ್ವದಾದ್ಯಂತ ಜನರೆಲ್ಲರು ಸಂಪರ್ಕ ಹೊಂದಿದ್ದು, ಸಾವಿರಾರು ಆರ್ಟ್ ಆಫ್ ಲಿವಿಂಗ್ ಕೇಂದ್ರಗಳು ಜನ್ಮಾಷ್ಟಮಿಯನ್ನು ಆಚರಿಸುತ್ತಿರುವುದನ್ನು ಎಲ್ಲರು ವೀಕ್ಷಿಸುತ್ತಿದ್ದಾರೆ. ಆದ್ದರಿಂದ ನಾವು ವಿಶ್ವದೆಲ್ಲೆಡೆಯಿಂದ ನೆರೆದಿರುವುದು ಜನ್ಮಾಷ್ಟಮಿಯನ್ನು (ಆನಂದದ ಉತ್ಸವ) ಆಚರಿಸಲು. ಇವತ್ತು ಸಮಾಜದಲ್ಲಿ ಅಂತಹ ಆನಂದದ ಅಲೆಯನ್ನು ತರಬೇಕು. ಇದು ನಮ್ಮೆಲ್ಲರ ಕರ್ತವ್ಯ.

ಪ್ರ: ಗುರೂಜೀ, ಶ್ರೀಕೃಷ್ಣನು ಕಾಲದ ಪರೀಕ್ಷೆಯಲ್ಲಿ ಹೇಗೆ ಯಶಸ್ವಿಯಾಗಿದ್ದಾನೆ (ಶಾಶ್ವತವಾಗಿದ್ದಾನೆ)? ಇಷ್ಟು ಕಾಲ ಕಳೆದ್ದಿದ್ದರೂ ಹೇಗೆ ಕೃಷ್ಣನು ಜನರ ಹೃದಯದಲ್ಲಿ ನಿವಾಸನಾಗಿದ್ದಾನೆ?


ಶ್ರೀಶ್ರೀ:
ಹೌದು, ಆ ರಹಸ್ಯವನ್ನು ನಿಮ್ಮ ಹೃದಯದಲ್ಲೇ ಪರಿಹರಿಸಿರಿ. ನೀವೇ ಅನ್ವೇಷಿಸಬೇಕು. ಕಡೆಯಲ್ಲಿ ಸತ್ಯಕ್ಕೇ ಸದಾ ಗೆಲುವು. ಸತ್ಯವು ಸನಾತನವಾದುದು. ಅದನ್ನೆಂದಿಗೂ ನಾಶಪಡಿಸಲಾಗದು. ಆದ್ದರಿಂದಲೇ ೫೧೦೦ ವರ್ಷಗಳು ಉರುಳಿದರೂ ಶ್ರೀಕೃಷ್ಣನು ಜೀವಂತವಾಗಿರುವುದು. ಇದೇಕೆ ಹೀಗೆಂದರೆ ಆತನು ಯಾವುದೇ ಒಂದು ನಿರ್ದಿಷ್ಟ ಸ್ಥಳ ಅಥವಾ ಕಾಲಕ್ಕೆ ಸೀಮಿತವಾಗಿಲ್ಲ.

ಕೃಷ್ಣನು ಸನಾತನನು. ಅನಾದಿ ಮತ್ತು ಅನಂತವಾದುದನ್ನು ಸನಾತನ ಎನ್ನುವರು. ಇದರ ಅರ್ಥ ಸದಾ ಅಸ್ತಿತ್ವದಲ್ಲಿರುವುದು ಮತ್ತು ಸದಾ ಉಪಸ್ಥಿತವಾಗಿರುವುದೆಂದು. ಎಲ್ಲಿಂದ ಆರಂಭವಾಯಿತೆಂದು ಯಾರಿಗೂ ತಿಳಿಯದು. ಅಂತಹ ಜ್ಞಾನವನ್ನು ಕೃಷ್ಣನು ನೀಡಿದ್ದಾನೆ.

ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ – ‘ನಾನು ಮತ್ತು ನೀನು ಅನೇಕ ಜನ್ಮಗಳನ್ನು ಪಡೆದಿದ್ದೇವೆ, ಆದರೆ ಅವೆಲ್ಲವೂ ನನಗೆ ಸ್ಮರಣೆಯಲ್ಲಿದೆ, ನಿನಗಿಲ್ಲ.  ನಾವಿಬ್ಬರೂ ಅನಾದಿ - ಎಷ್ಟು ಬಾರಿ ಜನ್ಮ ತಳೆದಿದ್ದೇವೆಂದು ಯಾರಿಗೂ ತಿಳಿಯದು . ನಾವು ಈ ಭೂಮಿಗೆ ಬರುತ್ತೇವೆ, ತೆರಳುತ್ತೇವೆ, ಪುನಃ ಬರುತ್ತೇವೆ.’

ಪ್ರ: ಗುರೂಜೀ, ಭಗವದ್ಗೀತೆಯ ೧೪ನೇ ಅಧ್ಯಾಯ ೨೭ನೇ ಶ್ಲೋಕದಲ್ಲಿ ಶ್ರೀಕೃಷ್ಣನು ಪರಬ್ರಹ್ಮದ ಕಾರಣಕರ್ತನೂ ತಾನೇ ಮತ್ತು ಅದರ ಅಸ್ತಿತ್ವವೂ ತಾನೇ ಎಂದು ಹೇಳುತ್ತಾನೆ. ಇದು ಅನೇಕ ಪಂಡಿತರಲ್ಲಿ ಗೊಂದಲವನ್ನುಂಟು ಮಾಡಿದೆ. ಇದನ್ನು ಓದಿದಾಗ ಆದಿ ಶಂಕರಾಚಾರ್ಯರೂ ಗೊಂದಲಗೊಂಡಿದ್ದರು. ದಯವಿಟ್ಟು ಇದರ ಬಗ್ಗೆ ತಿಳಿಸುವಿರಾ?

ಶ್ರೀಶ್ರೀ:
ಕೃಷ್ಣನು ಮೂರು ರೀತಿಯಲ್ಲಿ ಜ್ಞಾನವನ್ನು ನೀಡಿದನು: ಪ್ರಥಮ ಪುರುಷ, ಮಧ್ಯಮ ಪುರುಷ ಮತ್ತು ಉತ್ತಮ ಪುರುಷ (ನಿರ್ಲಿಪ್ತ ಜ್ಞಾನಿ ಅಥವಾ ಸ್ವಯಂ). ಆದ್ದರಿಂದ ಕೃಷ್ಣನು ಕೆಲವೊಮ್ಮೆ ದೇವರನ್ನು ‘ಅವನನ್ನು’ ಅಥವಾ ‘ಅದು’ ಅಥವಾ ‘ಅವನು’ ಇನ್ನು ಕೆಲವೊಮ್ಮೆ, ‘ನೀನು’ ಅಥವಾ ‘ನಿನ್ನ’ ಎಂದು ಸಂಬೋಧಿಸಿದ್ದಾನೆ; ಆತ್ಮವನ್ನು ಕುರಿತು ದೇವರ ಬಗ್ಗೆ ಮಾತನಾಡುವಾಗ, ‘ನಾನು’ ಅಥವಾ ‘ನನಗೆ’ ಎಂದು ಸಂಬೋಧಿಸಿದ್ದಾನೆ.

ಆದ್ದರಿಂದಲೇ ನಾವು ‘ತತ್ ತ್ವಂ ಅಸಿ’ (ಅದು ನೀನೇ) ಮತ್ತು ‘ಸರ್ವಂ ಖಲ್ವಿದಂ ಬ್ರಹ್ಮಾಸಿ’ (ಎಲ್ಲವೂ ಬ್ರಹ್ಮವೇ’) ಎನ್ನುತ್ತೇವೆ. ‘ತತ್ ತ್ವಂ ಅಸಿ’ ಎಂದರೆ ಅದು ನೀನೇ, ಅದು (ಆತ್ಮ ಅಥವಾ ಚೇತನ) ನಿನ್ನೊಳಗೇ ಇದೆ.  ಇನ್ನು ‘ಅಹಂ ಬ್ರಹ್ಮಾಸ್ಮಿ’ ಎಂದೂ ಹೇಳುತ್ತೇವೆ; ಅದರ ಅರ್ಥ ‘ನಾನು ಬ್ರಹ್ಮ’. ಹೀಗೆ ಕೆಲವು ಬಾರಿ ಕೃಷ್ಣನು ‘ಬನ್ನಿ, ನನ್ನನ್ನು ಆಶ್ರಯಿಸಿ’ ಎಂದರೆ, ಇನ್ನು ಕೆಲವು ಬಾರಿ ‘ದೇವರನ್ನು ಆಶ್ರಯಿಸಿ’ ಎನ್ನುತ್ತಾನೆ. ಹೇಳಿರುವ ರೀತಿಯಲ್ಲಿ ಎರಡೂ ಸರಿಯಾಗಿದೆ. ಒಬ್ಬ ವ್ಯಕ್ತಿಯನ್ನು ಆತನಿರುವ ಪಥದಿಂದ ಮುಂದಕ್ಕೆ ಕರೆದುಕೊಂಡು ಹೋಗುವುದು ಗುರುವಿನ ಕರ್ತವ್ಯ. ಕೃಷ್ಣನು ತನ್ನ ವಿಶ್ವರೂಪ ದರ್ಶನವನ್ನು ನೀಡುವ ಮೊದಲು ಅರ್ಜುನನಿಗೆ ಹೀಗೆ ಹೇಳುತ್ತಾನೆ:

ಈಶ್ವರಃ ಸರ್ವ ಭೂತಾನಾಂ ಹೃದೇ-ದೇಶೇ ಅರ್ಜುನ ತಿಷ್ಠತಿ  |
ಭ್ರಾಮಯನ್ ಸರ್ವ-ಭೂತಾನಿ ಯಂತ್ರಾರೂಢಾನಿ ಮಾಯಯಾ  || (೧೮.೬೧)


ಎಲ್ಲರ ಹೃದಯದಲ್ಲೂ ಭಗವಂತನು ವಾಸವಾಗಿದ್ದಾನೆಂದು ಹೇಳುತ್ತಾನೆ. ನಂತರ ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿ ತನ್ನೊಳಗೇ ಸರ್ವವೂ ಆವಾಸವಾಗಿದೆಯೆಂದು ತೋರಿಸುತ್ತಾನೆ, ನಂತರ ‘ಎಲ್ಲವನ್ನೂ ಸಮರ್ಪಿಸಿ ನನ್ನನ್ನೇ ಆಶ್ರಯಿಸು’ ಎನ್ನುತ್ತಾನೆ.

ಗೀತೆಯನ್ನು ಸಾವಿರಾರು ಬಗೆಯಲ್ಲಿ ವಿಶ್ಲೇಷಿಸಿ ಹೇಳಿರುವುದನ್ನು, ಟೀಕೆ ಎನ್ನುತ್ತಾರೆ. ಆದರೆ ಮುಖ್ಯವಾಗಿ ತಿಳಿಯಬೇಕಾಗಿರುವುದು, ಸತ್ಯವು ಒಂದೇ, ಆದರೆ ಅದನ್ನು ವಿವಿಧ ರೀತಿಯಲ್ಲಿ ಕಾಲಕ್ಕೆ ತಕ್ಕಂತೆ (ಆ ಕಾಲದ ಮಾನವನ ಸ್ಥಿತಿ ಮತ್ತು ಅಗತ್ಯಕ್ಕೆ ತಕ್ಕಂತೆ) ವಿವರಿಸಿದ್ದಾರೆ. ಗೀತೆಯಲ್ಲಿ ಮೊದಲಿನಿಂದ ಕೊನೆಯವರೆಗೂ ವಿರೋಧಾರ್ಥಕವಾಗಿದೆ. ಸ್ವಯಂ ಅರ್ಜುನನೇ ಕೃಷ್ಣನ್ನನ್ನು ಕೇಳುತ್ತಾನೆ, ‘ಹೇ ದೇವ! ಕಷ್ಟಗಳಿಂದ  ಮುಕ್ತವಾಗಿರಲು ನಿಶ್ಚಿತ ಮಾರ್ಗ ಯಾವುದೆಂದು ತಿಳಿಸು.  ಅನೇಕ ಮಾರ್ಗಗಳನ್ನು ಕೇಳಿ ಗೊಂದಲ ಗೊಂಡಿದ್ದೇನೆ. ಒಮ್ಮೆ ಒಂದು ಮಾರ್ಗವನ್ನು ಸೂಚಿಸಿ, ಇನ್ನೊಮ್ಮೆ ಇನ್ನೊಂದನ್ನು ತಿಳಿಸಿರುವೆ.  ಈಗಾಗಲೇ ಗೊಂದಲದಲ್ಲಿದ್ದು, ಖಿನ್ನನಾಗಿದ್ದೇನೆ, ಇನ್ನೂ ನನ್ನನ್ನೇಕೆ ಗೊಂದಲಗೊಳಿಸುತ್ತಿರುವೆ?’ ನೋಡಿ, ಭಗವದ್ಗೀತೆಯು ದಿವ್ಯತೆಯ ಕಡೆಗೆ, ಆತ್ಮನೆಡೆಗೆ ಹಂತ-ಹಂತವಾಗಿ ಏರಲು ಅನನ್ಯವಾದ ಮಾರ್ಗವನ್ನು ತೋರಿಸಿರುವುದು. ಗೀತೆಗೆ ಸಮನಾದ ಗ್ರಂಥವು ಬೇರೊಂದಿಲ್ಲ. ವಿರೋಧದ ನಂತರ ವಿರೋಧ, ಅದರ ಮೂಲಕ ಸತ್ಯದೆಡೆಗೆ ಕರೆದುಕೊಂಡು ಹೋಗುವಂತಹ ಗ್ರಂಥ- ಗೀತೆಯ ವಿನಾ ಬೇರೊಂದಿಲ್ಲ.

ಪ್ರ: ಗುರೂಜೀ, ರಾಮಾಯಣದಲ್ಲಿ ರಾವಣನು ಸೀತಾದೇವಿಯನ್ನು ಅಪಹರಿಸಿದನು ಮತ್ತು ಮಹಾಭಾರತದಲ್ಲಿ ರುಕ್ಮಿಣಿಯು ಶಿಶುಪಾಲನ್ನನ್ನು ವಿವಾಹವಾಗಲು ಒತ್ತಡವಿದ್ದಾಗ, ಶ್ರೀಕೃಷ್ಣನು ರುಕ್ಮಿಣಿಯನ್ನು ಅಪಹರಿಸಿದನು. ಭಗವಂತನು ಶ್ರೀಕೃಷ್ಣನ ಅವತಾರವೆತ್ತಿದಾಗ, ರಾವಣನು ಶಿಶುಪಾಲನಾಗಿ, ಸೀತಾದೇವಿಯು ರುಕ್ಮಿಣೀದೇವಿಯಾಗಿ ಅವತಾರವೆತ್ತಿದರು. ಆದ್ದರಿಂದ ಇಲ್ಲಿಯೂ ಕರ್ಮ ಬಂಧನವಿರುವುದೇ?

ಶ್ರೀಶ್ರೀ: ‘ಗಹನೋ ಕರ್ಮಣೋ ಗತಿಃ’
(ಕರ್ಮದ ಆಳವನ್ನು ಅರಿಯಲಾಗದು) ಎನ್ನುತ್ತಾರೆ. ಕರ್ಮದ ಗತಿ ಮತ್ತು ರೀತಿ ರಹಸ್ಯಮಯವಾದುದು ಮತ್ತು ಅದರ ಆಳವನ್ನು ಅರಿಯಲಾಗದು. ಯಾರೂ ಅರಿಯಲಾರರು.

ಪ್ರ: ಗುರೂಜೀ, ‘ಇಂದು ಬಹಳ ಮಂದಿ ದುಃಶಾಸನರು ಮತ್ತು ಶಕುನಿಯರಿದ್ದಾರೆ. ಸಮಾಜದಲ್ಲಿ ಅವರಿಗಿರುವ ಯೋಗ್ಯವಾದ ಸ್ಥಳವನ್ನು ತೋರಿಸಬೇಕು’ ಎಂದು ಟ್ವೀಟ್ ಮಾಡಿದ್ದೀರ. ಇವತ್ತಿನ ದುಃಶಾಸನರು ಮತ್ತು ಶಕುನಿಯರು ಯಾರು ಮತ್ತು ಅವರ ಅರ್ಹ ಸ್ಥಳ ಯಾವುದು?

ಶ್ರೀಶ್ರೀ:
ಅದನ್ನು ನೀವೇ ಊಹಿಸಲು ಬಿಡುವೆನು. ಅವರ ಅರ್ಹ ಸ್ಥಳ ಕೃಷ್ಣನ ಜನ್ಮಸ್ಥಳ (ಸೆರೆಮನೆ). ಗೊತ್ತಾಯಿತೇ? ಎಲ್ಲ ದುಃಶಾಸನ ಮತ್ತು ಶಕುನಿಯರು ಸೆರೆಮನೆಗೆ ಹೋಗಬೇಕು. ಅಲ್ಲವೇ?