ಗುರುವಾರ, ಆಗಸ್ಟ್ 15, 2013

ಆಧ್ಯಾತ್ಮ ಪ್ರಧಾನ ಭಾರತ

ಬೆಂಗಳೂರು, ಭಾರತ
೧೫ ಅಗಸ್ಟ್ ೨೦೧೩

’ಹ್ಯಾಪ್ಪಿನೆಸ್ ಪ್ರೋಗ್ರಾಮ್’ (ಸಂತೋಷ ಕಾರ್ಯಕ್ರಮ), ಇದುವೇ ನಮಗೆ ಬೇಕಾಗಿರುವುದು.

ಇವತ್ತು ನಾವು ನಮ್ಮ ದೇಶದಲ್ಲಿ ಎಂತಹ ಒಂದು ಮುಗ್ಗಟ್ಟಿನ ಮೂಲಕ ಹಾದುಹೋಗುತ್ತಿದ್ದೇವೆ. ಎಲ್ಲೆಡೆಯೂ ಅಂಧಕಾರವಿದೆ ಮತ್ತು ಯಾವುದೇ ಭರವಸೆಯಿಲ್ಲ. ಬೆಲೆಗಳು ಮೇಲಕ್ಕೇರಿವೆ ಮತ್ತು ಜನರು ಅಸುರಕ್ಷತೆಯನ್ನು ಅನುಭವಿಸುತ್ತಿದ್ದಾರೆ. ಬಹುತೇಕ ಎಲ್ಲರೂ, ಪ್ರತಿಯೊಂದು ದೇಶವೂ, ಪ್ರತಿಯೊಂದು ಸಮುದಾಯವೂ ಅಸುರಕ್ಷತೆಯನ್ನು ಅನುಭವಿಸುತ್ತಿದೆ. ಈ ಸಮಯದಲ್ಲಿ ಬೇಕಾದುದೇನೆಂದರೆ, ನಮ್ಮ ಹೃದಯಗಳನ್ನು ಹೊಸ ಭರವಸೆಗಳಿಂದ ಮತ್ತು ನಮ್ಮ ಮನಸ್ಸುಗಳನ್ನು ಒಂದು ಹೊಸ ದಿಶೆಯಿಂದ ತುಂಬಿಸಬಲ್ಲ ಸಂತೋಷದ ಒಂದು ಅಲೆ, ಮತ್ತು ನಾವೆಲ್ಲರೂ ಈ ಬದಲಾವಣೆಗೆ ಸಿದ್ಧರಾಗಿದ್ದೇವೆ.

ನೀವು ಒಂದು ಬದಲಾವಣೆಗೆ ಸಿದ್ಧರಾಗಿರುವಿರಾ?

(ಸಭಿಕರಿಂದ ’ಹೌದು’ ಎಂಬ ಗಟ್ಟಿಯಾದ ಉದ್ಗಾರ)

ನಮಗೆಲ್ಲರಿಗೂ ನಮ್ಮ ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆ ಬೇಕು ಮತ್ತು ನಮ್ಮ ಮನೋಭಾವದಲ್ಲಿ ಬದಲಾವಣೆ ಬೇಕು. ಅನ್ಯಾಯದೊಂದಿಗೆ ಸಂತೃಪ್ತವಾಗಿಲ್ಲದಿರುವುದು. ಅಜ್ಞಾನದೊಂದಿಗೆ ಸಂತೃಪ್ತವಾಗಿಲ್ಲದಿರುವುದು. ಆದರೆ ನಮಗೆ ನಮ್ಮ ಯೋಚನಾ ಪ್ರಕ್ರಿಯೆಯಲ್ಲಿ ಒಂದು ಬದಲಾವಣೆ, ನಮ್ಮ ಮನೋಭಾವದಲ್ಲಿ ಒಂದು ಬದಲಾವಣೆ ಮತ್ತು ನಮ್ಮ ಸಮಾಜದಲ್ಲಿ ಒಂದು ಬದಲಾವಣೆಯ ಅಗತ್ಯವಿದೆ.

ಇವತ್ತು, ನಮ್ಮ ದೇಶದಲ್ಲಿ ವ್ಯಸನಗಳು ನಿಜಕ್ಕೂ ಅಧಿಕವಾಗಿವೆ. ಮದ್ಯಸಾರದ ಮಾರಾಟವು ಮೂರು ಪಟ್ಟುಗಳಷ್ಟು ಅಧಿಕವಾಗಿದೆ. ಮಕ್ಕಳು ಮಾದಕ ದ್ರವ್ಯಗಳ ವ್ಯಸನಕ್ಕೀಡಾಗುತ್ತಿದ್ದಾರೆ. ಮತ್ತು ಆತ್ಮಹತ್ಯೆಗಳು ನಡೆಯುತ್ತಿವೆ. ಈ ಎಲ್ಲಾ ಕೆಡುಕುಗಳು ಯಾಕೆ? ಅದು ಅಸಂತೋಷದ ಕಾರಣದಿಂದ. ಒಬ್ಬ ಸಂತೋಷಕರವಾಗಿರುವ ವ್ಯಕ್ತಿಯು ಹೋಗಿ ಯಾರಿಗೂ ತೊಂದರೆಯನ್ನುಂಟುಮಾಡುವುದಿಲ್ಲ, ಅವನು ಕೇವಲ ಸಂತೋಷವನ್ನು ಹರಡುತ್ತಾನೆ. ಸಮಾಜದಲ್ಲಿ ಹೆಚ್ಚಿನ ಅಸಂತೋಷವನ್ನು ಸೃಷ್ಟಿಸುವುದು ಅಸಂತೋಷವಾಗಿರುವ ಜನರು.

ಹಾಗಾಗಿ, ಈಗ ನಾವು ನಮ್ಮ ಸಮಾಜದಲ್ಲಿ ಸಂತೋಷವನ್ನು ತಿರುಗಿ ತರಬೇಕಾಗಿದೆ. ಮತ್ತು ಜ್ಞಾನವಿಲ್ಲದೆ, ವಿವೇಕವಿಲ್ಲದೆ ಸಂತೋಷವಿರಲು ಸಾಧ್ಯವಿಲ್ಲ.

ನಿಮ್ಮಲ್ಲಿ ದೂರದ ಕೇರಳದಿಂದ ಬಂದಿರುವ ಸುಮಾರು ೧೨,೦೦೦ ಜನರನ್ನು ನೋಡಲು ಬಹಳ ಸಂತೋಷವಾಗುತ್ತಿದೆ. ನೀವೆಲ್ಲರೂ ಹೊಂದಿರುವ ಆನಂದ ಮತ್ತು ಬದ್ಧತೆ, ನಮ್ಮ ದೇಶ, ನಮ್ಮ ಸಮಾಜದ ಕಡೆಗೆ ನೀವು ಹೊಂದಿರುವ ಕಾಳಜಿ - ಇದು ಈ ಸಮಯದಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸಬೇಕಾಗಿರುವಂಥಹದ್ದು. ಸಂತೋಷದ ಈ ಅಲೆಯು ಯಶಸ್ವಿಯಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ - ಕೇರಳದಲ್ಲಿ ಯಾವುದೆಲ್ಲಾ ಪ್ರಾರಂಭವಾಗುವುದೋ ಅದು ಹಿಮಾಲಯಗಳತನಕವೂ ಹೋಗುತ್ತದೆ, ಮತ್ತು ಅದರಾಚೆಗೂ ಕೂಡಾ. ಹಿಮಾಲಯಗಳಾಚೆಗೆ ಚೈನಾವಿದೆ ಮತ್ತು ಇಲ್ಲಿ ನಮ್ಮ ಚೈನಾದ ಗೆಳೆಯರೂ ಇದ್ದಾರೆ. ಮತ್ತು ಇಲ್ಲಿ ಪಾಕಿಸ್ತಾನ, ಗಲ್ಫ್, ತಮಿಳುನಾಡು ಮತ್ತು ಉತ್ತರ ಭಾರತದಿಂದಲೂ ಜನರಿದ್ದಾರೆ. ಹೀಗೆ, ಈ ಸಂತೋಷವು ಶ್ರೀಲಂಕಾಕ್ಕೆ ಕೂಡಾ ಹರಡಬೇಕಾಗಿದೆ ಮತ್ತು ನಾವೆಲ್ಲರೂ ಅದಕ್ಕಾಗಿ ಕೆಲಸ ಮಾಡಬೇಕು. ಶ್ರೀಲಂಕಾವು ಬಹಳಷ್ಟು ಯಾತನೆಯನ್ನು ಅನುಭವಿಸಿದೆ.

ನಿಮ್ಮ ಬ್ಯಾಟರಿಗಳು ಚಾರ್ಜ್ ಆದಾಗ, ಎಲ್ಲರೂ ನಿಮ್ಮ ಜಿಲ್ಲೆಗಳಿಗೆ, ನಿಮ್ಮ ಗ್ರಾಮಗಳಿಗೆ ಹೋಗಬೇಕು ಮತ್ತು ದುಃಖವನ್ನು ತೊಡೆದು ಹಾಕಲು, ಬಡತನವನ್ನು ತೊಡೆದು ಹಾಕಲು, ಹಿಂಸೆ ಮತ್ತು ಭ್ರಷ್ಟಾಚಾರಗಳನ್ನು ತೊಡೆದು ಹಾಕಲು ಗ್ರಾಮಗಳಲ್ಲಿ ಕೆಲಸ ಮಾಡಬೇಕು.

ಭಾರತವು ಪ್ರತಿಭೆಗಳ ಒಂದು ಜಾಗವಾಗಿದೆ. ನೋಡಿ, ಹಲವಾರು ಪ್ರತಿಭೆಗಳಿವೆ ಇಲ್ಲಿ.

ನಿಮಗೆ ಗೊತ್ತಾ, ನಿಮ್ಮಲ್ಲಿ ಎಲ್ಲಾ ೧೨,೦೦೦ ಜನರು ಇಲ್ಲಿ ಅಷ್ಟೊಂದು ಅದ್ಭುತವಾಗಿ ಹಾಡು ಹೇಳುತ್ತಿರುವಾಗ, ನಿಮ್ಮಲ್ಲಿನ ಆರು ಕೋಟಿ ಜನರನ್ನು ಸುಮ್ಮನೇ ಕಲ್ಪಿಸಿಕೊಳ್ಳಿ (ಕೇರಳ ರಾಜ್ಯದ ಜನಸಂಖ್ಯೆ). ಪ್ರತಿಯೊಂದು ಗ್ರಾಮದಿಂದಲೂ, ಎಲ್ಲಾ ಒತ್ತಡಗಳನ್ನು ಮತ್ತು ಚಿಂತೆಗಳನ್ನು ಮರೆತು ಜನರು ಹಾಡಲು ಮತ್ತು ನರ್ತಿಸಲು ತೊಡಗುವಂತೆ ನಾವು ಮಾಡಬೇಕು. ಒಂದು ಉತ್ತಮ ಭಾರತಕ್ಕಾಗಿ ಜನರು ಒಂದು ಹೊಸ ಕಲ್ಪನೆಯನ್ನು ಹೊಂದುವಂತೆ ನಾವು ಮಾಡಬೇಕು. ಉತ್ತಮ ಭಾರತಕ್ಕಾಗಿ ನಾವು ಸ್ವಯಂಸೇವಕರಂತೆ ಕೆಲಸ ಮಾಡಬೇಕು - ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ.

ನೋಡಿ, ಇವತ್ತು ನಮ್ಮ ಸಮಾಜದ ಅಷ್ಟೊಂದು ಸಾಧನೆಗೈದ ಜನರು ಇಲ್ಲಿದ್ದಾರೆ (ಆಶ್ರಮದಲ್ಲಿ ನಮ್ಮನ್ನು ಭೇಟಿ ಮಾಡುತ್ತಿರುವ). ಅವರು ನಮ್ಮನ್ನು ಇವತ್ತು ಬೆಳಗ್ಗಿನಿಂದ ಸ್ಫೂರ್ತಿಗೊಳಿಸಿರುವರು; ಅವರು ನಮಗೆ ಹಲವಾರು ವಿಷಯಗಳನ್ನು ಹೇಳಿರುವರು.

ನಮ್ಮ ಹಿರಿಯರಲ್ಲಿದ್ದ ಈ ಕಾಳಜಿಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹಲವಾರು ಜನರ; ನಮ್ಮ ಪೂರ್ವಿಕರಲ್ಲಿ ಹಲವರ ತ್ಯಾಗದಿಂದ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಅದನ್ನು ನಾವು ಸಂರಕ್ಷಿಸಬೇಕಾಗಿದೆ. ನಾವದನ್ನು ಬಹುತೇಕ ಕಳೆದುಕೊಳ್ಳುತ್ತಿದ್ದೇವೆ.

ಈ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು ಎಂಬುದು ನಿಮಗೆ ಗೊತ್ತೇ? ಸತ್ಸಂಗಗಳ ಮೂಲಕ! ಮಹಾತ್ಮಾ ಗಾಂಧಿಯವರು ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಹೋಗಿ ದೊಡ್ಡ ಸತ್ಸಂಗಗಳನ್ನು ನಡೆಸಿದರು. ಮತ್ತು ಈ ಸತ್ಸಂಗಗಳಲ್ಲಿ ಜನರು ’ರಘುಪತಿ ರಾಘವ್ ರಾಜಾ ರಾಮ್’ ಎಂದು ಹಾಡಲು ಶುರು ಮಾಡಿದಾಗ, ಎಲ್ಲರೂ ಜೊತೆಸೇರಿದರು. ಅವರು ’ವಂದೇ ಮಾತರಂ’ ಹಾಡಲು ಪ್ರಾರಂಭಿಸಿದರು.

ಒಂದು ಬೃಹತ್ ಚೇತನವು ದೇಶದಲ್ಲಿ ಎದ್ದುಬಂತು ಮತ್ತು ಅದು ನಮಗೆ ಸ್ವಾತಂತ್ರ್ಯವನ್ನು ತಂದಿತು. ಇದನ್ನು ನಾವು ಮರೆತಿದ್ದೇವೆ. ನಾವೊಂದು ಆಧ್ಯಾತ್ಮಿಕ ದೇಶವೆಂಬುದನ್ನು ನಾವು ಮರೆತಿರುವೆವು.

ಸಂಸ್ಕೃತದಲ್ಲಿ ಒಂದು ಮಾತಿದೆ, ’ಕಾವ್ಯ ಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಂ’. ಅಂದರೆ, ಒಬ್ಬ ಬುದ್ಧಿವಂತ ವ್ಯಕ್ತಿಯು ತನ್ನ ಸಮಯವನ್ನು ಜ್ಞಾನ, ಸಂಗೀತ, ಸಾಹಿತ್ಯ, ವಿಜ್ಞಾನ ಮತ್ತು ಜನರನ್ನು ಒಟ್ಟು ತರುವುದು, ಇವುಗಳಲ್ಲಿ ಕಳೆಯುತ್ತಾನೆ. ಆದರೆ ಮೂರ್ಖರು ಯಾವತ್ತೂ, ವ್ಯಸನಗಳು, ವಾಗ್ವಾದಗಳು ಮತ್ತು ಜಗಳಗಳಲ್ಲಿ ನಿರತರಾಗುವುದರಲ್ಲಿ ತಮ್ಮ ಸಮಯ ಕಳೆಯುವುದನ್ನು ಆನಂದಿಸುತ್ತಾರೆ.

ಹಾಗೆ, ಇಲ್ಲಿ ನಮ್ಮಲ್ಲಿ ಹಲವಾರು ಬುದ್ಧಿವಂತ ಜನರಿದ್ದಾರೆ. ನಿಮಗೆ ಗೊತ್ತಾ, ಬುದ್ಧಿವಂತ ಜನರು ಮಾತ್ರ ಆಧ್ಯಾತ್ಮಿಕವಾಗಲು ಸಾಧ್ಯ. ನಾನು ನಿಮಗೆ ಹೇಳುತ್ತೇನೆ ಕೇಳಿ, ಕಡಿಮೆ ಬುದ್ಧಿಶಕ್ತಿಯಿರುವ ಜನರು ಆಧ್ಯಾತ್ಮಕ್ಕೆ ಬರುವುದಿಲ್ಲ.

ಇದು ಮಾನದಂಡ - ಒಬ್ಬ ಬುದ್ಧಿವಂತ ವ್ಯಕ್ತಿ ಯಾರು? ಯಾರಲ್ಲಿ ಸ್ವಲ್ಪ ಆಧ್ಯಾತ್ಮಿಕತೆಯಿರುವುದೋ ಅವರು. ಅವರಲ್ಲಿ ಅದು ಇಲ್ಲದಿದ್ದರೆ, ಆಗ ಅಲ್ಲೇನೋ ಸರಿಯಿಲ್ಲ. ಅವರು ಕಣ್ಣುಗಳಿಗೆ ಪಟ್ಟಿಗಳಿರುವ ಒಂದು ಕುದುರೆಯಂತೆ. ಅವರಲ್ಲಿ ವಿಶಾಲ ದೃಷ್ಟಿಯಿಲ್ಲ. ಅವರು ತಮ್ಮ ಜೀವನವನ್ನು ನೋಡುವುದಿಲ್ಲ. ತಾವು ಯಾರೆಂಬುದು ಅವರಿಗೆ ತಿಳಿಯದು.

ನಿಮಗೆ ಗೊತ್ತಾ, ಈ ಆಶ್ರಮದ ಎದುರು ಭಾಗದಲ್ಲಿರುವ ಜಾಗವು ಕೇರಳದ ನಾರಾಯಣ ಗುರು ಆಶ್ರಮಕ್ಕೆ ಸೇರಿದೆ. ನಾವಿಲ್ಲಿಗೆ ಮೊದಲು ಬಂದಾಗ ಅಲ್ಲಿ,’ನಾರಾಯಣ ಗುರು ಆಶ್ರಮ’ ಎನ್ನುವ ಒಂದು ಫಲಕವಿತ್ತು. ಅಲ್ಲೇನಾಯಿತು ಎಂಬುದು ನನಗೆ ತಿಳಿಯದು, ಈಗ ಬೇರೆ ಯಾರೋ ತೆಗೆದುಕೊಂಡಿದ್ದಾರೆ. ಹೀಗೆ ನಾವು ಇಲ್ಲಿ ನಾರಾಯಣ ಗುರು ಆಶ್ರಮದ ಎದುರಲ್ಲೇ ಇದ್ದೇವೆ.
ನಾರಾಯಣ ಗುರುಗಳು ಬಹಳಷ್ಟು ಮಾನವ ಸೇವೆಯನ್ನು ಮಾಡಿರುವರು ಮತ್ತು ಬಹಳಷ್ಟು ಜನರನ್ನು ಒಟ್ಟುಗೂಡಿಸಿರುವರು. ಆರ್ಟ್ ಆಫ್ ಲಿವಿಂಗ ಜಗತ್ತಿನಾದ್ಯಂತ ಕೊಂಡೊಯ್ಯುತ್ತಿರುವುದು ಇದೇ ಸಂದೇಶವನ್ನು.

ಕೇರಳದಲ್ಲಿ ಆ ಚೇತನವನ್ನು ಪುನಃ ಹಚ್ಚಬೇಕು. ನಾವದನ್ನು ಜೀವಂತವಾಗಿ ಇರಿಸಬೇಕು. ಕೇರಳವು ದೇವರ ಸ್ವಂತ ನಾಡು ಎಂದು ಕರೆಯಲ್ಪಡುತ್ತದೆ. ಹಾಗಾಗಿ ನಾವು ನಮ್ಮ ಸಮಾಜದೊಳಕ್ಕೆ ಆ ಚೇತನವನ್ನು ಮತ್ತೆ ತರಬೇಕಾಗಿದೆ.

ಇಷ್ಟೊಂದು ಉತ್ಸಾಹೀ ಯುವಕರೊಂದಿಗೆ - ಚೇತನ ಮತ್ತು ವಯಸ್ಸು ಎರಡರಲ್ಲೂ - ನಾವು ಹಲವಾರು ಹ್ಯಾಪ್ಪಿನೆಸ್ ಕಾರ್ಯಕ್ರಮಗಳನ್ನು ಖಂಡಿತವಾಗಿಯೂ ಮಾಡುವೆವು ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ!

ಒಮ್ಮೆ ನಾನು ಪುಣೆಯಲ್ಲಿದ್ದೆ ಮತ್ತು ಅಲ್ಲಿ ವೇದಿಕೆಯ ಮೇಲೆ ಹಲವಾರು ರಾಜಕಾರಣಿಗಳಿದ್ದರು. ಜನರು ನನ್ನಲ್ಲಿ, "ಈ ಭ್ರಷ್ಟ ಜನರು ನಿಮ್ಮ ಸುತ್ತಲೂ ಯಾಕಿರುವರು ಗುರುದೇವ?" ಎಂದು ಕೇಳಿದರು.

ನಾನಂದೆ, "ಎಲ್ಲಾ ಭ್ರಷ್ಟ ಜನರನ್ನು ನನ್ನ ಬಳಿಗೆ ಕಳುಹಿಸಿ, ನಾನು ಅವರೊಂದಿಗೆ ಕುಳಿತುಕೊಳ್ಳಲು ಬಯಸುತ್ತೇನೆ. ಅವರು ಇಲ್ಲಿ ಸುಧಾರಣೆಯಾಗುವುದಿಲ್ಲವೇ ಎಂದು ನೋಡೋಣ."

ಅವರು ಇಲ್ಲಿ ಸುಧಾರಣೆಯಾಗದಿದ್ದರೆ, ಮತ್ತೆ ಬೇರೆಲ್ಲಿ ಅವರು ಸುಧಾರಣೆಗೊಳ್ಳುವರು?ನೀವೊಂದು ಆಸ್ಪತ್ರೆಯನ್ನು ತೆರೆದು, ರೋಗಿಗಳಿಗೆ ಪ್ರವೇಶವಿಲ್ಲ ಎಂದು ಹೇಳಿದರೆ, ಅದರಲ್ಲೇನೂ ಅರ್ಥವಿಲ್ಲ!

ಸುಧಾರಣೆಯಾಗಲು ಸಾಧ್ಯವಿರುವುದು ಆಧ್ಯಾತ್ಮ ಕ್ಷೇತ್ರದಲ್ಲಿಯೇ ಆಗಿದೆ. ಅಪರಾಧಿಗಳು ಕೂಡಾ ಸುಧಾರಣೆಗೊಳ್ಳಬಲ್ಲರು ಯಾಕೆಂದರೆ ಪ್ರತಿಯೊಬ್ಬ ಮನುಷ್ಯನ ಒಳಗೂ ಸೌಂದರ್ಯವಿದೆ ಮತ್ತು ಅಲ್ಲಿ ಆನಂದವಿದೆ. ನಾವು ಕೇವಲ ಅದನ್ನು ಆಹ್ವಾನಿಸಬೇಕಷ್ಟೆ ಮತ್ತು ಆ ಆಂತರಿಕ ಸಂಪತ್ತು ಬರುತ್ತದೆ. ಆಗ ಜನರು ಎಲ್ಲಾ ತಪ್ಪು ಪ್ರವೃತ್ತಿಗಳನ್ನು ಮರೆತುಬಿಡುತ್ತಾರೆ; ಅವರು ಸುಮ್ಮನೇ ಅದನ್ನು ಬಿಟ್ಟುಬಿಡುತ್ತಾರೆ.

ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ I
ಸಾಧುರೇವ ಸ ಮನ್ತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ II’. (ಅಧ್ಯಾಯ ೯, ಶ್ಲೋಕ ೩೦)

ಒಬ್ಬನು ಎಷ್ಟೇ ಬಿದ್ದವನಾಗಿರಲಿ, ಅವನು ಜ್ಞಾನಕ್ಕೆ ಬಂದ ತಕ್ಷಣ, ಧ್ಯಾನ ಮಾಡಲು ಬಂದು ಆಧ್ಯಾತ್ಮಿಕನಾದ ತಕ್ಷಣ, ನೀವನನ್ನು ಕ್ಷಮಿಸಬೇಕು ಮತ್ತು ಅವನ ತಪ್ಪನ್ನು ಮರೆಯಬೇಕು, ಯಾಕೆಂದರೆ ಅವನು ಸರಿಯಾದ ಪಥದಲ್ಲಿ ಮತ್ತು ಸರಿಯಾದ ಜ್ಞಾನದಲ್ಲಿ ನಡೆಯಲು ಪ್ರಾರಂಭಿಸುವನು.

ಸಮಾಜವನ್ನು ಪರಿವರ್ತಿಸಲು ನಮ್ಮಲ್ಲಿ ಈ ಜ್ಞಾನ, ಈ ವಿವೇಕವಿದೆ. ಆದುದರಿಂದ ನಾವು ಯಾರನ್ನೂ ಆರೋಪಿಸುವುದಿಲ್ಲ. ನಮಗೆ ಯಾರ ಮೇಲೂ ಕೋಪವಿಲ್ಲ. ಆದರೆ ನಾವು ಎಲ್ಲರೊಂದಿಗೂ ಸಹಾನುಭೂತಿಯಿಂದಿರುವೆವು.

ನಿಮಗೆ ಯಾವುದಾದರೂ ಅನ್ಯಾಯ ಕಂಡುಬಂದಾಗ ಏನಾಗುತ್ತದೆ? ಕೋಪ ಬರುತ್ತದೆ. ಮತ್ತು ನೀವು ಕೋಪಗೊಂಡಾಗ, ನೀವೇನು ಮಾಡಲು ಬಯಸುವಿರೋ ಅದನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ, ಯಾಕೆಂದರೆ ಕ್ರೋಧವು ನಿಮ್ಮ ಶಕ್ತಿಯಲ್ಲಿ ಬಹಳಷ್ಟನ್ನು ಕೊಂಡೊಯ್ಯುತ್ತದೆ. ಆದರೆ ನೀವು, ಸಹಾನುಭೂತಿಯೊಂದಿಗೆ, ಆ ಕ್ರೋಧವನ್ನು ಸೃಜನಶೀಲತೆಯ ಕಡೆಗೆ ಪ್ರವಹಿಸಿದರೆ, ನೀವು ಯಾವುದೇ ಪರಿಸ್ಥಿತಿಯನ್ನು ಬೇಕಾದರೂ ಬದಲಾಯಿಸಬಹುದು ಮತ್ತು ಅದುವೇ ವಿವೇಕವಾಗಿದೆ. ನಿಮ್ಮೆಲ್ಲರಲ್ಲೂ ಆ ಶಕ್ತಿಯಿದೆ. ಧ್ಯಾನದ ಮೂಲಕ ನೀವು ಗಳಿಸುವ ಆಂತರಿಕ ಶಕ್ತಿ ಅಥವಾ ಆಧ್ಯಾತ್ಮಿಕತೆಯು ಉಪಯೋಗಕ್ಕೆ ಬರುವುದು ಅಲ್ಲಿಯೇ.

ಕೃಷ್ಣನು ಈ ಗರಿಯನ್ನು ಯಾಕೆ ಹೊಂದಿದ್ದನು (ತನ್ನ ಕಿರೀಟದ ಮೇಲೆ) ಎಂಬುದು ನಿಮಗೆ ತಿಳಿದಿದೆಯೇ?

ನಿಮಗೆ ಗೊತ್ತಾ, ಕಿರೀಟವು (ಒಬ್ಬ ರಾಜನ) ಯಾವತ್ತೂ ಬಹಳ ಭಾರವಾಗಿರುತ್ತದೆ. ಹಾಗಾಗಿ, ಕಿರೀಟವನ್ನು ಹೊಂದಿರುವ ಜನರು ಬಹಳ ಸಂತೋಷವಾಗಿರುವುದಿಲ್ಲ. ಆದರೆ ನವಿಲುಗರಿಯು ಏನನ್ನು ಸೂಚಿಸುತ್ತದೆಯೆಂದರೆ, ಕಿರೀಟವು ಬಹಳ ಹಗುರವಾಗಿದೆಯೆಂದು. ಅಂದರೆ, ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ, ಆದರೆ ಜವಾಬ್ದಾರಿಯು ಬಹಳಷ್ಟು ಹಗುರವಾಗಿದೆ ಮತ್ತು ಬಹಳ ವರ್ಣರಂಜಿತವೂ ಆಗಿದೆ. ಜವಾಬ್ದಾರಿಯ ಭಾರದಿಂದ ನೀವು ಸಿಕ್ಕಿಹಾಕಿಕೊಳ್ಳುವುದಿಲ್ಲ.
ನಿಮ್ಮಲ್ಲಿ ವಿವೇಕವಿರುವಾಗ, ನಿಮ್ಮ ಕಿರೀಟವು ಗರಿಯಷ್ಟು ಹಗುರವಾಗಿರುವುದು! ಇದರರ್ಥ, ಭಾರದ ಒಂದು ಭಾವನೆಯಿಲ್ಲದೆಯೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಹೀಗೆ, ದೇಶದ ಕಡೆಗೆ ನಮ್ಮ ಜವಾಬ್ದಾರಿಯಿದೆ ಮತ್ತು ಈ ಜವಾಬ್ದಾರಿಯನ್ನು ನಾವು, ಸಿಕ್ಕಿಹಾಕಿಕೊಳ್ಳದೆಯೇ ಹೊರಲಿದ್ದೇವೆ!

ನಿಮಗೆ ಗೊತ್ತಾ, ನೀವು ನಿಮ್ಮ ಆನಂದ, ನಿಮ್ಮ ಉತ್ಸಾಹಗಳನ್ನು ಕಳೆದುಕೊಂಡರೆ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಮೊತ್ತಮೊದಲನೆಯದಾಗಿ, ನಿಮ್ಮಲ್ಲಿ ಕಿಚ್ಚಿರಲೇಬೇಕು. ನಿಮ್ಮಲ್ಲಿ ಉತ್ಸಾಹ, ಆನಂದವಿರಲೇಬೇಕು. ಈ ಆನಂದದೊಂದಿಗೆ ನೀವು ಸಮಾಜದಲ್ಲಿ ಬಹಳಷ್ಟನ್ನು ಸಾಧಿಸಬಹುದು.