ಶುಕ್ರವಾರ, ಆಗಸ್ಟ್ 23, 2013

ಶಬ್ದಗಳನ್ನು ಮೀರಿದ ಸತ್ಯ



ಅಗಸ್ಟ್ ೨೩, ೨೦೧೩
ಬೆಂಗಳೂರು, ಭಾರತ


"ಎಲ್ಲವೂ ಅವನು; ಮತ್ತು ಬೇರಾರೂ ಇಲ್ಲ", ಇದು ದೇವರ ಪ್ರೇಮದಲ್ಲಿ ಮಿಂದ ಭಕ್ತರ ಭಾಷೆ. ಅವರಿಗೆ, ಎಲ್ಲೆಡೆಯೂ ದೇವರು ಮಾತ್ರ. ದೇವರಲ್ಲದೆ ಬೇರೇನೂ ಅಸ್ತಿತ್ವದಲ್ಲಿಲ್ಲ. ಇದು ಭಕ್ತರ ರೀತಿ. 

ಪ್ರಶ್ನೆ: ಗುರುದೇವ, ನನ್ನ ವೃತ್ತಿ ಹೇಗಿದೆಯೆಂದರೆ, ಸುಳ್ಳುಗಳನ್ನು ಹೇಳದಿರಲು ನನಗೆ ಸಾಧ್ಯವಿಲ್ಲ. ಸುಳ್ಳು ಹೇಳುವುದನ್ನು ಆಶ್ರಯಿಸದೆ ನಾನು ನನ್ನ ವೃತ್ತಿಯಲ್ಲಿ ಉತ್ತಮವಾಗಿರಲು ಯಾವುದಾದರೂ ಮಾರ್ಗವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಅದು ಯಾವ ವೃತ್ತಿ? (ನಗು) ಅದು ಒಬ್ಬ ವಕೀಲನ ವೃತ್ತಿಯೆಂದು ತೋರುತ್ತದೆ. ನೋಡು, ಇವತ್ತೂ ಕೂಡಾ ಒಳ್ಳೆಯದಲ್ಲದ ಮೊಕದ್ದಮೆಗಳನ್ನು (ಅಂದರೆ ಭ್ರಷ್ಟ ಮತ್ತು ಸುಳ್ಳರ ಮೊಕದ್ದಮೆಗಳು); ಅಥವಾ ಇತರರಿಗೆ ಹಾನಿಯನ್ನುಂಟುಮಾಡಬಹುದಾದ ಮೊಕದ್ದಮೆಗಳನ್ನು ತೆಗೆದುಕೊಳ್ಳದ ಹಲವಾರು ಉತ್ಕೃಷ್ಟ ಹಾಗೂ ಸಮರ್ಥ ವಕೀಲರುಗಳಿದ್ದಾರೆ. ಪ್ರಖ್ಯಾತ ವಕೀಲರು ಮೊದಲು ಯಾವತ್ತೂ ಮೊಕದ್ದಮೆಯ ಅಧ್ಯಯನ ನಡೆಸುತ್ತಾರೆ ಮತ್ತು ನಂತರ ಅದನ್ನು ಜಯಿಸುವ ಯಾವುದಾದರೂ ಸಂಭವನೀಯತೆ ಇದೆಯೇ ಎಂಬುದರ ಮೌಲ್ಯಮಾಪನ ಮಾಡುತ್ತಾರೆ. ನಂತರ ಮಾತ್ರ ಅವರು ಅದನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ನೀನು ಕೂಡಾ ನಿರ್ಣಯಿಸು ಮತ್ತು ನಿನ್ನ ವಿವೇಚನೆಯನ್ನುಪಯೋಗಿಸು.   

ಸತ್ಯವನ್ನು ಶಬ್ದಗಳ ಮೂಲಕ ವ್ಯಕ್ತಪಡಿಸಿದಾಗ ಅದು ಸುಳ್ಳಾಗುತ್ತದೆ (ಅಂದರೆ, ಸತ್ಯವೆಂದರೆ, ಯಾವುದು ಶಬ್ದಗಳನ್ನು ಮೀರಿದುದೋ ಮತ್ತು ಯಾವುದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲವೋ ಅದು). ಹಳೆಯ ಕಾಲದಿಂದ ಬಂದ ಒಂದು ಮಾತಿದೆ - "ವಾಚ್ಯಾರಂಭಃ ವಿಕಾರೋ ನಾಮಧ್ಯೇಯ". ಇದರರ್ಥ, ಶಬ್ದಗಳ ಮೂಲಕ ಮಾತನಾಡಲ್ಪಟ್ಟಾಗ ಸತ್ಯವು ಒಂದು ಸುಳ್ಳಾಗಿ ವಿಕೃತಗೊಳ್ಳುತ್ತದೆ. ಯಾವುದೆಲ್ಲಾ ವ್ಯಕ್ತವಾಗಿ ಬರುವುದೋ ಅದೊಂದು ಸುಳ್ಳಾಗುತ್ತದೆ, ಅದು ವಿಕೃತವಾಗುತ್ತದೆ. ಹಾಗಾಗಿ ಚಿಂತಿಸಬೇಡ. ಸತ್ಯವು ಮಾತನಾಡಲ್ಪಡುವುದಿಲ್ಲ. ಯಾವುದು ಮಾತನಾಡಲ್ಪಡುವುದೋ ಅದು ಸತ್ಯವಲ್ಲ. ಸತ್ಯವು ತ್ರಿಕಾಲ-ಬಂಧಿತ ಎಂದು ಹೇಳಲ್ಪಡುತ್ತದೆ (ಎಲ್ಲಾ ಸಮಯಗಳಲ್ಲೂ ಪ್ರಸಕ್ತವಾದುದು; ಅಥವಾ ಸತ್ಯವು ಭೂತ, ವರ್ತಮಾನ ಮತ್ತು ಭವಿಷ್ಯಕಾಲಗಳನ್ನು ಮೀರಿದುದು ಎಂದು ಅರ್ಥ). ಹಾಗಾಗಿ ಯಾವುದು ಎಲ್ಲಾ ಮೂರೂ ಕಾಲಗಳಲ್ಲೂ ಒಂದೇ ಆಗಿರುವುದೋ ಅದು ಸತ್ಯವಾಗಿದೆ. ಹಾಗಾಗಿ ನೀನು ಯಾವುದೇ ಚಿಂತೆಗಳಿಲ್ಲದೆಯೇ ನಿನ್ನ ವೃತ್ತಿಯನ್ನು ಮುಂದುವರಿಸು. ಅದನ್ನು ಪ್ರಾಮಾಣಿಕವಾಗಿ ಮಾಡು. ಉಳಿದುದನ್ನು ದೇವರಿಗೆ ಸಮರ್ಪಿಸು.

ಪ್ರಶ್ನೆ: ಗುರುದೇವ, ಹಣೆಯ ಮೇಲೆ ತಿಲಕವನ್ನು ಹಚ್ಚುವುದರ ಮಹತ್ವವೇನು? ಅದು ಏನನ್ನು ಪ್ರತಿನಿಧಿಸುತ್ತದೆ? ನಮ್ಮ ದೇಶದಲ್ಲಿ ವಿವಾಹಿತ ಸ್ತ್ರೀಯರು ಕೂಡಾ ತಿಲಕವನ್ನು ಹಚ್ಚುತ್ತಾರೆ. ಇದರ ಹಿಂದಿರುವ ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ಮೂರನೆಯ ಕಣ್ಣು ಅಲ್ಲಿದೆ (ಜಾಗರೂಕತೆ ಅಥವಾ ಅರಿವಿನೊಂದಿಗೆ ಸಂಬಂಧ ಹೊಂದಿದ ಕೇಂದ್ರವನ್ನು ಉಲ್ಲೇಖಿಸುತ್ತಾ). ಹಾಗಾಗಿ, ನಮ್ಮ ಶರೀರ ಮತ್ತು ಮನಸ್ಸುಗಳ ಮೇಲೆ ಒಂದು ಮಹತ್ತರವಾದ ಪರಿಣಾಮವನ್ನು ಹೊಂದಿದ ಪೀನಿಯಲ್ ಮತ್ತು ಪಿಟ್ಯೂಟರಿ ಗ್ರಂಥಿಗಳ ಸ್ಥಾನದಲ್ಲಿ ಗಂಧ ಅಥವಾ ಸಿಂಧೂರ ಹಚ್ಚುವ ಒಂದು ಪದ್ಧತಿಯಿದೆ. ಇದನ್ನು ಹಚ್ಚಲಿರುವ ಒಂದು ಕಾರಣವೆಂದರೆ, ಹಣೆಯ ಆ ಭಾಗಕ್ಕೆ ಗೌರವವನ್ನು ಕೊಡುವುದು. ಅದು ನಮ್ಮ ಗಮನವನ್ನು ಉತ್ತೇಜಿಸುತ್ತದೆ. 

ನೀವು ಯೋಚಿಸುವಾಗಲೆಲ್ಲಾ, ನೀವೇನು ಮಾಡುವಿರಿ? ನಿಮ್ಮ ಕೈಯು ತನ್ನಿಂತಾನೇ ಈ ಜಾಗಕ್ಕೆ ಹೋಗುತ್ತದೆ. ನೀವೊಂದು ತಪ್ಪು ಮಾಡಿದಾಗ, ನಿಮ್ಮ ಕೈಯು ತಲೆಗೆ ಹೋಗುತ್ತದೆ. ನೀವು ಯೋಚಿಸುವಾಗ ಅಥವಾ ಯಾವುದರ ಬಗ್ಗೆಯಾದರೂ ಆಳವಾಗಿ ವಿಚಾರ ಮಾಡುವಾಗ ಅಥವಾ ಯಾವುದಾದರೂ ಸಮಸ್ಯೆ ಬರುವಾಗ ಕೂಡಾ ನೀವು ನಿಮ್ಮ ಕೈಯನ್ನು ಹೀಗೆ ಇಡುತ್ತೀರಿ. ನೀವು ಯಾವುದೇ ದೇಶಕ್ಕೆ ಅಥವಾ ಪ್ರಪಂಚದ ಯಾವುದೇ ಮೂಲೆಗೆ ಹೋದರೂ, ಎಲ್ಲೆಡೆಯೂ ಜನರು ಹೀಗೆ ಯೋಚಿಸುತ್ತಾರೆಂಬುದು ನಿಮಗೆ ಕಾಣಸಿಗುತ್ತದೆ. ಇದು ವಿವೇಕದ ಆಸನವಾಗಿದೆ. ಇದು ಜ್ಞಾನದ ಪೀಠವಾಗಿದೆ. ಅದಕ್ಕಾಗಿಯೇ ಚಂದನ, ಕುಂಕುಮ ಅಥವಾ ಸಿಂಧೂರವನ್ನು ಅಲ್ಲಿ ಹಚ್ಚಲಾಗುವುದು. ಇದು ಸಾಂಕೇತಿಕವಾಗಿದೆ.

ಪ್ರಶ್ನೆ: ಗುರುದೇವ, ಪ್ರತಿಕ್ರಮಣ ಎಂಬುದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಜೈನ ಧರ್ಮದಲ್ಲಿ ಪ್ರತಿಕ್ರಮಣ ಎಂದು ಕರೆಯಲ್ಪಡುವ ಒಂದು ಪದ್ಧತಿಯಿದೆ. ಪ್ರತಿ ರಾತ್ರಿಯೂ ಮಲಗುವ ಮುನ್ನ, ಅವರು ತಮ್ಮಷ್ಟಕ್ಕೇ ಕುಳಿತುಕೊಂಡು, ಬೆಳಗ್ಗಿನಿಂದ ತಾವು ಮಾಡಿರುವ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ಹೀಗೆ, ರಾತ್ರಿ ಮಲಗುವ ಮುನ್ನ ಒಂದು ಅಥವಾ ಎರಡು ಗಂಟೆಗಳ ಕಾಲ ಅವರು, ತಾವೇನು ಮಾಡಿದೆವು ಎಂಬುದನ್ನು ನೆನಪಿಗೆ ತಂದುಕೊಳ್ಳುತ್ತಾರೆ ಮತ್ತು ಅದರ ಬಗ್ಗೆ ವಿಚಾರ ಮಾಡುತ್ತಾರೆ. ಇದು ಪ್ರತಿಕ್ರಮಣ ಎಂದು ಕರೆಯಲ್ಪಡುತ್ತದೆ. ಇದು, ಮನಸ್ಸಿಗೆ ಬಂದಿರಬಹುದಾದ ಯಾವುದೇ ಸಂಸ್ಕಾರಗಳು ಅಥವಾ ಕರ್ಮದ ಸಂಸ್ಕಾರಗಳನ್ನು ಅಳಿಸುವ ಒಂದು ಕಲೆಯಾಗಿದೆ. ಅದು ಪ್ರತಿಕ್ರಮಣ ಎಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರುದೇವ, ಒಬ್ಬನು ತನ್ನ ಕರ್ಮವನ್ನು ಮಾಡಿದ ಬಳಿಕ ಅವನು ಫಲಗಳು ಅಥವಾ ಫಲಿತಾಂಶಗಳಿಗಾಗಿ ಬಯಕೆಯನ್ನು ಹೊಂದಿರಬಾರದು ಯಾಕೆ? ಹಾಗೆ ಅನ್ನಿಸುವುದು ಸ್ವಾಭಾವಿಕವಲ್ಲವೇ?

ಶ್ರೀ ಶ್ರೀ ರವಿ ಶಂಕರ್: ಸರಿ, ಹಾಗಾದರೆ ಬಯಕೆಯನ್ನು ಇಟ್ಟುಕೋ (ನಗು). ಫಲಿತಾಂಶಕ್ಕಾಗಿ ನೀವು ಬಯಕೆ ಅಥವಾ ನಿರೀಕ್ಷೆಯನ್ನು ಹೊಂದಿರಬಾರದು ಎಂದು ಹೇಳಲಾಗಿಲ್ಲ. ಆದರೆ ಫಲಿತಾಂಶದ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಒಂದು ವಸ್ತುವಿನ ಅಗತ್ಯ ಅಥವಾ ಬಯಕೆಯು ಏಳುವ ಮುನ್ನವೇ ನಿಮಗದು ಲಭಿಸಿದರೆ, ಅದು ಅತಿಭಾಗ್ಯದ ಒಂದು ಸಂಕೇತವಾಗಿದೆ. ಭಾಗ್ಯ  ಎಂಬುದರ ಅರ್ಥವೇನು? ಅದು, ನಿಮಗೊಂದು ವಸ್ತುವಿನ ಅಗತ್ಯ ಏಳುವ ಮೊದಲೇ ನಿಮಗದು ಲಭ್ಯವಾಗುವುದಾಗಿದೆ. ಸ್ವಲ್ಪ ಕಡಿಮೆ ಭಾಗ್ಯವಂತರು ಯಾರೆಂದರೆ, ಯಾರಿಗೆ ತಾವು ಬಯಸಿದಾಗ ಆ ವಸ್ತುವು ಸಿಗುವುದೋ ಅವರು. ಕೇಳಿಕೊಳ್ಳದೆ ಇದ್ದರೂ ಎಲ್ಲವೂ ಲಭ್ಯವಾಗುವಾಗ, ಅದು ಸಿದ್ಧಿಯಾಗಿದೆ. ಕೇಳಿದ ಬಳಿಕ ಯಾರ ಬಯಕೆಗಳು ಈಡೇರುವುವೋ ಅವನು, ಕೇಳಿಕೊಳ್ಳದಿದ್ದರೂ ಕೂಡಾ ಯಾರ ಬಯಕೆಗಳು ಈಡೇರುವುವೋ ಅವನಿಗಿಂತ ಸ್ವಲ್ಪ ಕಡಿಮೆ ಭಾಗ್ಯವಂತನು. ಮತ್ತು ಯಾರ ಮನಸ್ಸಿನಲ್ಲಿ ಹಲವಾರು ಬಯಕೆಗಳು ಏಳುತ್ತವೆಯೋ, ಆದರೆ ಬಹಳಷ್ಟು ಪ್ರಯತ್ನದ ಬಳಿಕ ಯಾರಿಗೆ ಸ್ವಲ್ಪ ಮಾತ್ರವೇ ಲಭಿಸುವುದೋ ಅಂತಹವನೊಬ್ಬನಿದ್ದರೆ, ಅಂತಹ ಒಬ್ಬ ವ್ಯಕ್ತಿಯು ಇನ್ನೂ ಕಡಿಮೆ ಭಾಗ್ಯವಂತನು. ಜೀವನವಿಡೀ ಕೇವಲ ಹೆಣಗಾಡುತ್ತಾ, ತಾನು ಬಯಸುವ ಫಲಿತಾಂಶಗಳನ್ನು ಪಡೆಯದೇ ಇರುವವನೊಬ್ಬನು ಎಲ್ಲರಲ್ಲಿ ಅತ್ಯಂತ ಕಡಿಮೆ ಭಾಗ್ಯಶಾಲಿ. 

ಈಗ, ಒಬ್ಬನು ಏಣಿಯ ಒಂದು ಮೆಟ್ಟಿಲಿನಿಂದ ಇನ್ನೊಂದಕ್ಕೆ ಹೇಗೆ ದಾಟಬಹುದು? ಇದು ಸಾಧ್ಯವಿರುವುದು ಸತ್ಕರ್ಮದ ಮೂಲಕ. ಸಾಧನೆ, ಸೇವೆ ಮತ್ತು ಸತ್ಸಂಗಗಳನ್ನು ಮಾಡುವುದು, ಇದೆಲ್ಲವೂ ಇದಕ್ಕೆ ಸಹಾಯ ಮಾಡುತ್ತದೆ. ನಿಮಲ್ಲಿ ಎಷ್ಟು ಮಂದಿಗೆ, ನೀವು ಮನಸ್ಸಿನಲ್ಲಿ ಯೋಚಿಸಿದುದೆಲ್ಲವೂ ನಿಮಗೆ ಸಿಗುತ್ತದೆಯೆಂದು ಅನ್ನಿಸುತ್ತದೆ?

(ಸಭಿಕರಲ್ಲಿ ಹಲವರು ಕೈಗಳನ್ನೆತ್ತುತ್ತಾರೆ)

ನಿಮ್ಮಲ್ಲಿ ಎಷ್ಟು ಮಂದಿಗೆ, ಯೋಚಿಸುವ ಮೊದಲೇ ಅದು ಆಗಿಬಿಡುತ್ತದೆ?  

(ಸಭಿಕರಲ್ಲಿ ಹಲವರು ಕೈಗಳನ್ನೆತ್ತುತ್ತಾರೆ)

ಇದು ಸಿದ್ಧಿಯಾಗಿದೆ. ನೀವೆಲ್ಲರೂ ಸಿದ್ಧರಾಗಿರುವಿರಿ (ಅಸಾಮಾನ್ಯ ಸಾಮರ್ಥ್ಯಗಳಿರುವ ಪರಿಪೂರ್ಣರು). (ನಗು)

ಪ್ರಶ್ನೆ: ಗುರುದೇವ, ಒಂದು ಪರಿಸ್ಥಿತಿಯಲ್ಲಿ ಒಬ್ಬನು ಅಸಹಾಯಕತೆಯನ್ನು ಅನುಭವಿಸುವಾಗ ಮತ್ತು ಆ ಅಸಹಾಯಕತೆಯು ಹತಾಶೆಯಾಗಿ, ಕ್ರೋಧವಾಗಿ ಮತ್ತು ದುಃಖವಾಗಿ ಬದಲಾಗುವಾಗ ಅವನು ಏನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನೋಡು, ನಿನ್ನೊಂದಿಗೆ ಒಂದು ಇನ್ನೂ ದೊಡ್ಡದಾದ ಶಕ್ತಿಯಿದೆಯೆಂಬುದನ್ನು ಮತ್ತು ಅದು ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆಯೆಂಬುದನ್ನು ನೀನು ಮರೆಯುತ್ತಿರುವೆ. ನೀನು ಅಸಹಾಯಕತೆಯನ್ನು ಅನುಭವಿಸುವಾಗ, ಅದುವೇ ಪ್ರಾರ್ಥಿಸಲು ಅತ್ಯುತ್ತಮವಾದ ಸಮಯ. ನಿನ್ನ ಪ್ರಾರ್ಥನೆಯು ಪ್ರಾಮಾಣಿಕವಾಗಿರುವುದು ಮತ್ತು ನಿಜಕ್ಕೂ ಸಫಲವಾಗುವುದು.

ಪ್ರಶ್ನೆ: ಗುರುದೇವ, ನನ್ನ ಜೀವನದ ಉದ್ದೇಶವೇನು? ನಾನು ಈ ಭೂಮಿಯಲ್ಲಿ ಯಾಕಿರುವೆನು ಮತ್ತು ನೀವಿರುವ ಅದೇ ಯುಗದಲ್ಲಿ ಯಾಕಿರುವೆನು? ಈ ಜೀವನಕ್ಕೆ ಒಂದು ಉದ್ದೇಶವಿರಲೇಬೇಕು. ನಾನದನ್ನು ಹೇಗೆ ತಿಳಿದುಕೊಳ್ಳುವೆನು?

ಶ್ರೀ ಶ್ರೀ ರವಿ ಶಂಕರ್: ಒಂದು ಬಹಳ ಒಳ್ಳೆಯ ಉದ್ದೇಶವಿದೆ. ಬಹಳಷ್ಟು ಕೆಲಸ ಮಾಡುವುದಿದೆ; ಬಹಳಷ್ಟು ಸೇವೆ ಮಾಡಬೇಕಾಗಿದೆ. "ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ" (ವಾಲಂಟಿಯರ್ ಫಾರ್ ಬೆಟರ್ ಇಂಡಿಯಾ - VBI) ಎಂಬ ಉಪಕ್ರಮವನ್ನು ಸೇರು. ಬಹಳಷ್ಟು ಸೇವೆ ಮಾಡಲಾಗುತ್ತಿದೆ ಮತ್ತು ದೇಶಕ್ಕೆ ನಿನ್ನ ಅಗತ್ಯವಿದೆ. ನಿನ್ನ ಸೇವೆ, ಸಾಧನೆ ಮತ್ತು ಸತ್ಸಂಗಗಳನ್ನು ಮಾಡು. ನೀನು ಕೇಳಿಸಿಕೊಳ್ಳುತ್ತಿರುವ ಜ್ಞಾನ ಮತ್ತು ಆನಂದವನ್ನು ಹರಡು.

ಪ್ರಶ್ನೆ: ಗುರುದೇವ, ದಯವಿಟ್ಟು ನೀವು ಮನುಸ್ಮೃತಿಯ ಬಗ್ಗೆ ಮಾತನಾಡಬಲ್ಲಿರಾ? ಅದು ಇವತ್ತು ಪ್ರಸಕ್ತವೇ?

ಶ್ರೀ ಶ್ರೀ ರವಿ ಶಂಕರ್: ನೋಡು, ಮನುಸ್ಮೃತಿಯು ಮನು ಎಂದು ಕರೆಯಲ್ಪಡುವ ಒಬ್ಬ ರಾಜನಿಂದ ಬರೆಯಲ್ಪಟ್ಟಿತು. ಅವನೊಬ್ಬ ಬಹಳ ಬುದ್ಧಿವಂತ ರಾಜನಾಗಿದ್ದನು. ಮನುಸ್ಮೃತಿಯಲ್ಲಿರುವ, ಸ್ತ್ರೀಯರು ಹೇಗೆ ಯಾವಾಗಲೂ ಸಂರಕ್ಷಿಸಲ್ಪಡಬೇಕು ಎಂಬುದರ ಬಗ್ಗೆ ಅಥವಾ ಜಾತಿ ಪದ್ಧತಿಯ ಬಗ್ಗೆ ಮಾತನಾಡುವ ಕೆಲವು ವಾಕ್ಯಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅವುಗಳನ್ನು ಮೂಲದಿಂದ ತಿರುಚಲಾಗಿದೆ (ಅಂದರೆ ಬಹಳ ಎಳೆಯಲಾಗಿದೆ) ಎಂದು ನಾನು ಹೇಳುವೆನು. ಆದರೆ ಇದು ಋಷಿಗಳ ಒಂದು ಗ್ರಂಥವಲ್ಲ. ಅದೊಬ್ಬ ರಾಜನಿಂದ ಬರೆಯಲ್ಪಟ್ಟುದು, ಹಾಗಾಗಿ ಅದೊಂದು ಸಂವಿಧಾನದಂತೆ. ಅಷ್ಟೇ. ಹಾಗಾಗಿ ಮನುಸ್ಮೃತಿಯು ಸನಾತನ ಧರ್ಮದ ಒಂದು ಪ್ರಮಾಣವಲ್ಲ. ನಾವದನ್ನು ಅನುಸರಿಸುವ ಅಗತ್ಯವಿಲ್ಲ. ಅದೊಂದು ಸಂವಿಧಾನದಂತೆ. ಭಾರತದ ಸಂವಿಧಾನದಂತೆ, ಆ ದಿನಗಳಲ್ಲಿದ್ದ ಜನರು ಕೂಡಾ ನಿರ್ದಿಷ್ಟ ನಿಯಮಗಳನ್ನು ಮಾಡಿದರು. ಹೀಗೆ ಆ ಕಾಲದಲ್ಲಿ ಮನುವು ನಿರ್ದಿಷ್ಟ ನಿಯಮಗಳನ್ನು ಮಾಡಿದನು. ಆದರೆ ಅದೊಂದು ಜಾಗತಿಕ ಗ್ರಂಥವಲ್ಲ ಮತ್ತು ಎಲ್ಲರೂ ಅದನ್ನು ಅನುಸರಿಸುವ ಅಗತ್ಯವಿಲ್ಲ. ಅದು ಎಲ್ಲರಿಗೂ, ಎಲ್ಲೆಡೆಯೂ, ಎಲ್ಲಾ ಕಾಲಕ್ಕೂ ಅನ್ವಯವಾಗುವುದಿಲ್ಲ. ಅದು ಹಾಗೆ ಅಲ್ಲವೇ ಅಲ್ಲ. 

ಆದರೆ ಮನುಸ್ಮೃತಿಯಲ್ಲಿ ಕೆಲವು ಬಹಳ ಒಳ್ಳೆಯ ವಿಷಯಗಳು ಕೂಡಾ ಪ್ರಸ್ತಾಪಿಸಲ್ಪಟ್ಟಿವೆ. ಅದು ಬಹಳ ಒಳ್ಳೆಯ ಜ್ಞಾನವನ್ನು ಹೊಂದಿದೆ. ಹಾಗಾಗಿ ನೀವು ಇವತ್ತಿಗೆ ಯಾವುದು ಪ್ರಸ್ತುತವೋ ಅದನ್ನು ತೆಗೆದುಕೊಳ್ಳಬೇಕು ಮತ್ತು ಉಳಿದುದನ್ನು ಬಿಡಬೇಕು. ನಮ್ಮ ದೇಶದಲ್ಲಿ ನಮ್ಮ ಜನರು ಇದನ್ನು ಅನುಸರಿಸುತ್ತಾ ಬಂದಿದ್ದಾರೆ. ನೀವು ಯಾವತ್ತೂ ಪ್ರಪಂಚದಲ್ಲಿರುವ ಎಲ್ಲಾ ಧರ್ಮಗ್ರಂಥದ ಕಡೆಗೆ ತರ್ಕ ಮತ್ತು ವಿವೇಕದಿಂದ ನೋಡಬೇಕು. ಇದನ್ನೇ ಧರ್ಮಗ್ರಂಥಗಳು ಕೂಡಾ ಹೇಳುವುದು. ಜ್ಞಾನವನ್ನು ಅಥವಾ ಒಂದು ನಿರ್ದಿಷ್ಟ ಧರ್ಮಗ್ರಂಥವನ್ನು ಅನ್ವಯಿಸುವಾಗ ನೀವು ದೇಶ ಮತ್ತು ಕಾಲವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವುಗಳು ಹೇಳುತ್ತವೆ. ಇದು ಮುಖ್ಯವಾದುದು. ಇವತ್ತು ಪ್ರಪಂಚದಲ್ಲಿ ಅಷ್ಟೊಂದು ಸಮಸ್ಯೆಗಳು ಯಾಕಿವೆ? ಅದು ಯಾಕೆಂದರೆ, ಕೆಲವು ಜನರು, ೨೦೦೦ ವರ್ಷಗಳಷ್ಟು ಅಥವಾ ೧೪೦೦ ವರ್ಷಗಳಷ್ಟು ಹಳೆಯ ಧರ್ಮಗ್ರಂಥಗಳನ್ನು ಇವತ್ತು ಜಾರಿಗೆ ತರಲು ಬಯಸುತ್ತಾರೆ. ಆದರೆ ಅವುಗಳು ಇವತ್ತು ಅನ್ವಯವಾಗುವುದೇ ಇಲ್ಲ. ಮಧ್ಯ ಪೂರ್ವದಲ್ಲಿರುವ ಇಡೀ ಸಮಸ್ಯೆಯೆಂದರೆ ಇದುವೇ. ಇವತ್ತಿನ ಸಮಯಕ್ಕೆ ಅನ್ವಯವಾಗದಿರುವಂತಹ ನಿಯಮಗಳನ್ನು ಕೆಲವು ಜನರು ಹೇರಲು ಬಯಸುತ್ತಾರೆ. ಆ ಸಮಯದಲ್ಲಿ ಅದಕ್ಕೆ ಪ್ರಸಕ್ತತೆಯಿತ್ತು, ಆದರೆ ಅವುಗಳು ಈಗ ಪ್ರಸಕ್ತವಾಗಿ ಉಳಿದಿಲ್ಲ.

ಪ್ರಶ್ನೆ: ಗುರುದೇವ, ಮನುಷ್ಯನಾಗಿರುವುದರ ಅತ್ಯುತ್ತಮವಾದ ಪ್ರಕಟನೆ ಯಾವುದು - ಧ್ಯಾನವೇ ಅಥವಾ ಸೇವೆಯೇ?

ಶ್ರೀ ಶ್ರೀ ರವಿ ಶಂಕರ್: ಎರಡರದ್ದೂ ಅಗತ್ಯವಿದೆ. ಇದು, ಟಿ.ವಿ.ಯನ್ನು ನೋಡುವುದು ಉತ್ತಮವೇ ಅಥವಾ ಅದನ್ನು ಕೇಳಿಸಿಕೊಳ್ಳುವುದೇ ಎಂದು ಕೇಳುವಂತೆ. ನಾನೇನು ಹೇಳುವುದು? ಅವುಗಳೆರಡೂ ಜೊತೆಯಲ್ಲಿ ಕೈ ಕೈ ಹಿಡಿದುಕೊಂಡು ಸಾಗುತ್ತವೆ. ಸೇವೆಯೆಂದರೆ ಅರ್ಥವೇನು? ಅದರರ್ಥವೆಂದರೆ, ನಿನ್ನಿಂದ ಎಷ್ಟೇ ಸ್ವಲ್ಪ ಮಟ್ಟಿನದು ಸಾಧ್ಯವಾಗಲಿ, ಸುಮ್ಮನೆ ಅದನ್ನು ಮಾಡು. ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲವೋ, ಅದನ್ನು ಮಾಡಬೇಡ. ನಿನಗಿದು ಅರ್ಥವಾಯಿತೇ?

ಪ್ರಶ್ನೆ: ಗುರುದೇವ, ನಾವು ತರತರದ ಭಕ್ಷ್ಯಗಳನ್ನು ತಯಾರಿಸುತ್ತೇವೆ, ಆದರೂ ನಮಗೆ ಅವುಗಳು ಬೇಜಾರಾಗುತ್ತವೆ. ಆದರೆ ಒಂದೇ ಮೇವನ್ನು ದಿನವೂ ತಿನ್ನುವ ಹಲವಾರು ಪ್ರಾಣಿಗಳಿವೆ, ಅವುಗಳಿಗೆ ಬೇಜಾರಾಗುವುದಿಲ್ಲ. ದೇವರು ಯಾಕೆ ಪ್ರಾಣಿಗಳಿಗೆ ಅಷ್ಟೊಂದು ಅನುಗ್ರಹವನ್ನು ನೀಡಿದನು?

ಶ್ರೀ ಶ್ರೀ ರವಿ ಶಂಕರ್: ಅವುಗಳು ವರ್ತಮಾನದಲ್ಲಿ ಜೀವಿಸುತ್ತವೆ ಮತ್ತು ನೀವು ನಿಮ್ಮ ಸ್ಮೃತಿಯಲ್ಲಿ ಜೀವಿಸುತ್ತೀರಿ.

ಪ್ರಶ್ನೆ: ಗುರುದೇವ, ಪಂಚಾಂಗದ ಜ್ಞಾನದಿಂದ ಒಬ್ಬನು ಮೋಕ್ಷವನ್ನು ಪಡೆಯಬಹುದು ಎಂದು ಹೇಳಲಾಗಿದೆ. ಈ ಪಂಚಾಂಗವೆಂದರೇನು ಎಂದು ದಯವಿಟ್ಟು ನನಗೆ ತಿಳಿಸಿ.

ಶ್ರೀ ಶ್ರೀ ರವಿ ಶಂಕರ್: ಪಂಚಾಂಗವು ಗ್ರಹಗಳು ಮತ್ತು ಆಕಾಶಕಾಯಗಳ ಚಲನೆಯನ್ನು ಸೂಚಿಸುತ್ತದೆ. ಜ್ಯೋತಿಷ್ಯವೇ ಪಂಚಾಂಗವಾಗಿದೆ. ನೀವು ಯಾರೋ ಒಬ್ಬರ ಮೇಲೆ ಕೋಪಗೊಂಡಿರುವಿರೆಂದು ಇಟ್ಟುಕೊಳ್ಳೋಣ, ಆಗ ನೀವು, "ಅವನು ಯಾಕೆ ನನಗೆ ಹೀಗೆ ಮಾಡಿದ?" ಎಂದು ಯೋಚಿಸುತ್ತಾ ಇರುತ್ತೀರಿ. ಈಗ, ನಿಮಗೆ ಜ್ಯೋತಿಷ್ಯದ ಜ್ಞಾನವಿದ್ದರೆ, ಆಗ, ಆ ಮನುಷ್ಯನದ್ದೇನೂ ತಪ್ಪಿಲ್ಲವೆಂಬುದು ನಿಮಗೆ ಅರಿವಾಗುವುದು. ’ನನ್ನ ಜಾತಕದಲ್ಲಿ ಯಾವುದೋ ಗ್ರಹಗಳ ಗತಿಯ ಪ್ರಭಾವದಿಂದಾಗಿ ಇದು ಸಂಭವಿಸಿತು. ಹಾಗಾಗಿ ನಾನು ಅವಮಾನವನ್ನು ಅನುಭವಿಸಬೇಕಾಯಿತು’ ಎಂದು ನೀವು ಯೋಚಿಸುವಿರಿ. ಇದು ಮುಕ್ತಿಯಾಗಿದೆ. ಆ ವ್ಯಕ್ತಿಯೊಂದಿಗೆ ರಾಗ ದ್ವೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಮನಸ್ಸು ಬೇರ್ಪಡುತ್ತದೆ. ನಿಮ್ಮ ಸಮಯವು ಕೆಟ್ಟದಾಗಿದೆಯೆಂಬುದನ್ನು ಅರ್ಥಮಾಡಿಕೊಳ್ಳಲು ಜ್ಯೋತಿಷ್ಯವು ನಿಮಗೆ ಸಹಾಯ ಮಾಡುತ್ತದೆ; ಅದಕ್ಕಾಗಿಯೇ ಒಳ್ಳೆಯ ಜನರು ಕೂಡಾ ನಿಮ್ಮೊಂದಿಗೆ ಜಗಳವಾಡುವುದು ಮತ್ತು ಸಮಯವು ಚೆನ್ನಾಗಿದ್ದರೆ, ನಿಮ್ಮ ಶತ್ರುಗಳು ಕೂಡಾ ಅಗತ್ಯದ ಸಮಯಗಳಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಹಾಗಾಗಿ, ನೀವಿದನ್ನು ಅರ್ಥಮಾಡಿಕೊಂಡಾಗ, ನಿಮ್ಮ ಮನಸ್ಸಿನಲ್ಲಿರುವ ರಾಗ ದ್ವೇಷಗಳು ಕರಗಿ ಹೋಗುತ್ತವೆ ಮತ್ತು ಮನಸ್ಸು ಶಾಂತವಾಗುತ್ತದೆ. 

ಮುಕ್ತಿಯೆಂದರೇನು? ನೀವು ಬಹಳ ನೀರನ್ನು ಕುಡಿದಿರಿ ಮತ್ತು ನಿಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಇಟ್ಟುಕೊಳ್ಳೋಣ. ಆದರೆ ನೀವೊಂದು ಸಭೆಯಲ್ಲಿ ಕುಳಿತಿರುವಿರಿ ಮತ್ತು ನಿಮಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೊನೆಯಲ್ಲಿ ನೀವು ಹೋಗಿ ಬಂದಾಗ ನಿಮಗೆ ಸಮಾಧಾನವಾಗುತ್ತದೆ, "ಹಾ! ಕೊನೆಗೂ ನಾನು ಮುಕ್ತನಾದೆ" ಎಂದು ಹೇಳುವಂತೆ.(ನಗು) ಅದೇ ರೀತಿಯಲ್ಲಿ ಹಸಿವಿನಿಂದ ಮುಕ್ತಿ. ನೀವು ಒಂದು ಜಾಗದಲ್ಲಿ ನಿರಂತರವಾಗಿ ಕುಳಿತುಕೊಂಡಿರುವಿರಿ ಎಂದು ಇಟ್ಟುಕೊಳ್ಳೋಣ; ಉದಾಹರಣೆಗೆ ಒಂದು ಬಸ್ ಅಥವಾ ರೈಲಿನಲ್ಲಿ ೮-೧೦ ಗಂಟೆಗಳವರೆಗೆ. ಬಸ್ ನಿಂತ ತಕ್ಷಣ, ನೀವು ಎದ್ದುನಿಂತು ಮೈಮುರಿದುಕೊಳ್ಳುತ್ತೀರಿ, ನಿಮಗೆ ಮುಕ್ತಿ ಸಿಕ್ಕಿತೆಂದು ನೀವು ಹೇಳುತ್ತೀರಿ. ಕೊನೆಯ ಪರೀಕ್ಷೆಯು ಮುಗಿದ ದಿನ, ಮಕ್ಕಳು ಹೇಗೆ ಆನಂದಭರಿತರಾಗಿ ಮನೆಗೆ ಬರುತ್ತಾರೆ ಮತ್ತು ತಮ್ಮೆಲ್ಲಾ ಪುಸ್ತಕಗಳನ್ನು ಬದಿಗೆ ಹಾಕುತ್ತಾರೆ ಎಂಬುದನ್ನು ಸುಮ್ಮನೆ ನೋಡಿ; ಅವರಿಗೆ ಮುಕ್ತಿ ಸಿಕ್ಕಿತೇನೋ ಎಂಬಂತೆ. ಹೀಗೆ ಮನೆಯಲ್ಲಿ ಯಾವುದಾದರೂ ಮದುವೆ ಅಥವಾ ಒಂದು ಔತಣಕೂಟ ಮುಗಿದು ಎಲ್ಲಾ ಅತಿಥಿಗಳು ಹೋದಾಗ ನೀವು, "ಹಾ! ಕೊನೆಗೂ ಇದು ಮುಗಿಯಿತು" ಎಂದು ಉದ್ಗರಿಸುತ್ತೀರಿ! ಅಲ್ಲವೇ

ಯಾವಾಗೆಲ್ಲಾ ನಿಮಗೆ ಈ ’ಹಾ’ ಎಂದು ಅನ್ನಿಸುವುದೋ, ಅದನ್ನು ಮುಕ್ತಿಯೆಂಬುದಾಗಿ ಯೋಚಿಸಿ ಮತ್ತು ಅಲ್ಲಿ ’ಓ ದೇವರೇ’ (ಅವ್ಯವಸ್ಥೆ ಮತ್ತು ಗೊಂದಲ) ಎಂಬ ಭಾವನೆಯಿರುವಾಗ, ಅದನ್ನು ಬಂಧನವೆಂಬುದಾಗಿ ಯೋಚಿಸಿ. ನಾವು ಜೀವನದಲ್ಲಿ ತೃಪ್ತರಾಗಿರುವಾಗ, ಅದು ಜೀವನ್ಮುಕ್ತಿಯಾಗಿದೆ. ಇದು ನಿಮಗೆ, "ನನಗೆ ಈ ಜೀವನದಲ್ಲಿ ಇನ್ನೂ ಹೆಚ್ಚಿನದೇನೂ ಬೇಕಿಲ್ಲ. ನಾನು ತೃಪ್ತನಾಗಿರುವೆನು ಮತ್ತು ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇತರರ ಸೇವೆ ಮಾಡುವೆನು. ಈ ಸಂಪೂರ್ಣ ಪ್ರಪಂಚವು ನನ್ನದು; ಇದೆಲ್ಲವೂ ನನ್ನ (ಆತ್ಮದ) ಪ್ರತಿಬಿಂಬ ಮತ್ತು ನನ್ನದೇ ಸ್ವಭಾವ" ಎಂದು ಅನ್ನಿಸುವ ಒಂದು ಹಂತವಾಗಿದೆ. ನೀವು ಒಳಗಿನಿಂದ ಈ ಜ್ಞಾನದಲ್ಲಿ ಅಷ್ಟೊಂದು ದೃಢವಾಗಿ ಸ್ಥಾಪನೆಯಾದಾಗ ಮತ್ತು ಬಲವಾದಾಗ, ತೃಪ್ತಿ ಮತ್ತು ಆನಂದವು ನಿಮ್ಮಲ್ಲಿ ಉದಯಿಸುತ್ತವೆ. ಎಲ್ಲಾ ದೂರುಗಳು ಮಾಯವಾಗುತ್ತವೆ. ಬಯಕೆಯು ಏಳುವ ಮುನ್ನವೇ ಎಲ್ಲವೂ ಲಭ್ಯವಾಗುತ್ತದೆ. ತಕ್ಷಣವೇ ಎಲ್ಲಾ ಅಗತ್ಯವಿರುವ ಜ್ಞಾನವು ಮನಸ್ಸಿಗೆ ಬರುತ್ತದೆ. ಇದೆಲ್ಲವೂ ಜೀವನ್ಮುಕ್ತಿಯೆಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರುದೇವ, ನೀವು ದೇವರು. ಹಾಗಾದರೆ ನೀವು ಯಾವ ದೇವರನ್ನು ನಂಬುವಿರಿ?

ಶ್ರೀ ಶ್ರೀ ರವಿ ಶಂಕರ್: ’ಯಾವ ದೇವರು’ ಎಂದು ನೀನು ಕೇಳುವೆಯಾ? ಹಲವಾರು ದೇವರುಗಳಿರುವರೇ? ಒಬ್ಬರೇ ಒಬ್ಬರಿರುವುದು ಮತ್ತು ಅದುವೇ ನಿನ್ನಲ್ಲಿರುವುದು, ನನ್ನಲ್ಲಿರುವುದು. ಅಲ್ಲಿ ಇಬ್ಬರಿಲ್ಲ.

ಪ್ರಶ್ನೆ: ಗುರುದೇವ, ಸಾವು ಎಂದರೇನು? ಸತ್ತ ನಂತರ ಒಬ್ಬ ವ್ಯಕ್ತಿಗೆ ಏನಾಗುತ್ತದೆ? ಒಬ್ಬನು ಒಂದು ಭೂತವಾಗುತ್ತಾನೆ ಎಂದು ಕೆಲವು ಜನರು ಹೇಳುತ್ತಾರೆ; ಒಬ್ಬನು ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂದು ಇತರರು ಹೇಳುತ್ತಾರೆ. ಸಾವಿನ ನಂತರ ನಿಜವಾಗಿಯೂ ಏನಾಗುತ್ತದೆ?

ಶ್ರೀ ಶ್ರೀ ರವಿ ಶಂಕರ್: ಅದನ್ನು ಕಂಡುಹಿಡಿಯಲು ಬಹಳ ಸಮಯ ಉಳಿದಿದೆ. ನೀನು ಖಂಡಿತವಾಗಿಯೂ ತಿಳಿಯುವೆ. ಮೊದಲು ಈ ಜೀವನವೆಂದರೇನು ಎಂಬುದನ್ನು ಅರ್ಥ ಮಾಡಿಕೋ.

ಪ್ರಶ್ನೆ: ಗುರುದೇವ, ಸಾವಿನ ನಂತರ ನಾವು ನಮ್ಮ ಅಂಗಗಳನ್ನು ದಾನ ಮಾಡಬಹುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಮಾಡಬಹುದು. ಈ ಜನ್ಮದಲ್ಲಿ ಅಂಗಗಳನ್ನು ದಾನ ಮಾಡಿದ ಕಾರಣ ನಿನ್ನ ಮುಂದಿನ ಜನ್ಮದಲ್ಲಿ ನಿನಗೆ ಯಾವುದೇ ಸಮಸ್ಯೆಗಳು ಉಂಟಾಗಲಾರವು. ನಿನ್ನ ಮುಂದಿನ ಜನ್ಮದಲ್ಲಿ ನೀನು ಕುರುಡನಾಗಿ ಅಥವಾ ಕುಂಟನಾಗಿ ಹುಟ್ಟಲಾರೆ. ಆದರೆ, ನಿನಗೊಂದು ಹೆಚ್ಚಿನ ಕಣ್ಣು ಸಿಗುವುದೆಂದು ಕೂಡಾ ಇದರರ್ಥವಲ್ಲ (ನಗು). ’ಈ ಜನ್ಮದಲ್ಲಿ ನಾನು ನನ್ನ ಕಣ್ಣುಗಳನ್ನು ದಾನ ಮಾಡಿದೆ, ಹಾಗಾಗಿ ಮುಂದಿನ ಜನ್ಮದಲ್ಲಿ ನನಗೆ ನಾಲ್ಕು ಕಣ್ಣುಗಳಿರಬೇಕು’ ಎಂದು ಯೋಚಿಸಬೇಡ! ಅದು ಆ ರೀತಿ ಆಗಲೇ ಆಗದು.

ಪ್ರಶ್ನೆ: ಗುರುದೇವ, ಸುಮೇರು ಮಂಟಪದ (ಆಶ್ರಮದಲ್ಲಿರುವ ಒಂದು ಜಾಗ) ಕೆಳಗಿರುವ ಗುಹೆಯಲ್ಲಿ ತಪಸ್ಸು ಮಾಡುತ್ತಿರುವ ಜನರಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಇನ್ನೂ ಮೋಕ್ಷ ಹೊಂದಿಲ್ಲವೇ?
 
ಶ್ರೀ ಶ್ರೀ ರವಿ ಶಂಕರ್: ಕೇಳು, ಅಲ್ಲಿ ಯಾವುದೇ ಆತ್ಮವೂ ತಪಸ್ಸು ಮಾಡುತ್ತಿಲ್ಲ. ಹಾಗೇನೂ ಇಲ್ಲವೇ ಇಲ್ಲ.

ಪ್ರಶ್ನೆ: ಗುರುದೇವ, ಹೆತ್ತವರು ನಮ್ಮ ಮೊದಲ ಗುರುಗಳು ಎಂದು ಹೇಳಲಾಗಿದೆ. ಇಲ್ಲಿಗೆ ಬಂದಿರುವ ಜನರಲ್ಲಿ ಎಷ್ಟು ಮಂದಿ ಅವರ ಹೆತ್ತವರನ್ನು ಗೌರವಿಸುತ್ತಾರೆ? ಇದರ ಬಗ್ಗೆ ನೀವು ಏನನ್ನು ಹೇಳಲು ಬಯಸುವಿರಿ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿಯೂ ಅವರು ಅವರ ಹೆತ್ತವರನ್ನು ಗೌರವಿಸಬೇಕು. ಒಬ್ಬರು ತಮ್ಮ ಹೆತ್ತವರನ್ನು ಗೌರವಿಸಬೇಕು ಮತ್ತು ಅವರ ಆಜ್ಞೆಯನ್ನು ಪಾಲಿಸಬೇಕು.

ಪ್ರಶ್ನೆ: ಗುರುದೇವ, ನನ್ನ ಸ್ನೇಹಿತನು ಹೆಚ್ಚಾಗಿ ಟೀಕೆ ಮಾಡುತ್ತಾನೆ ಮತ್ತು ಕೆಟ್ಟ ವಿಷಯಗಳನ್ನು ಮಾತನಾಡುತ್ತಾನೆ. ನಾನು ಕೋರ್ಸನ್ನು ಮಾಡಿರುವುದರಿಂದ ನಾನು ಆಶೀರ್ವಾದಗಳಲ್ಲಿ ನಂಬಿಕೆಯಿಟ್ಟಿದ್ದೇನೆ. ನನಗೆ ಅವನಿಗಾಗಿ ದುಃಖವಾಗುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಅದು ಪರವಾಗಿಲ್ಲ. ಅದರಿಂದಾಗಿ ನೀನು ದುಃಖಿತನಾಗಬಾರದು. ಸರಿಯಾ! ಸುಮ್ಮನೇ ಮುಗುಳ್ನಗು ಈಗ.