ಮಂಗಳವಾರ, ಆಗಸ್ಟ್ 20, 2013

ನಾರೀ ಶಕ್ತಿ

ಅಗಸ್ಟ್ ೨೦, ೨೦೧೩
ಬೆಂಗಳೂರು, ಭಾರತ

ವತ್ತು ಶ್ರಾವಣ ಹುಣ್ಣಿಮೆಯ ಮಂಗಳಕರವಾದ ದಿನವಾಗಿದೆ.

ಸಾಧಾರಣವಾಗಿ ಹೇಳಲಾಗುವುದೇನೆಂದರೆ, ತನ್ನ ಸಹೋದರಿಯನ್ನು ರಕ್ಷಿಸುವುದು ಮತ್ತು ನೋಡಿಕೊಳ್ಳುವುದು ಸಹೋದರನೆಂದು.

ಇವತ್ತು ನಾವು ರಕ್ಷಾಬಂಧನ ಹಬ್ಬದ ಮೂಲಕ ಒಂದು ಬಹಳ ವಿಶೇಷವಾದ ಮತ್ತು ಅನನ್ಯವಾದ ಸಂಪ್ರದಾಯವನ್ನು ಆಚರಿಸುತ್ತಿದ್ದೇವೆ. ಇದರಲ್ಲಿ ತನ್ನ ಸಹೋದರನನ್ನು ಸಂರಕ್ಷಿಸುವುದು ಸಹೋದರಿಯಾಗಿರುವಳು! ನಮ್ಮ ದೇಶದ ಸ್ತ್ರೀಯರು ಹೆಚ್ಚಾಗಿ ಬಲಹೀನರೆಂದೂ ಶಕ್ತಿಯಿಲ್ಲದವರೆಂದೂ ಕರೆಯಲ್ಪಡುತ್ತಾರೆ. ಹಾಗಾಗಿ, ಅಬಲೆಯೂ, ದುರ್ಬಲಳೂ ಆಗಿ ಪರಿಗಣಿಸಲ್ಪಡುವ ಒಬ್ಬಳು ಸ್ತ್ರೀಯು ಒಬ್ಬ ಪುರುಷನನ್ನು ಹೇಗೆ ಸಂರಕ್ಷಿಸಬಲ್ಲಳು ಮತ್ತು ಅವನಿಗೆ ನೈತಿಕ ಬಲವನ್ನೂ, ಬೆಂಬಲವನ್ನೂ ಹೇಗೆ ನೀಡಬಲ್ಲಳು ಎಂಬುದು ಅಚ್ಚರಿಪಡಲು ಯೋಗ್ಯವಾದುದು.

ಸ್ತ್ರೀಯರು ಬಲಹೀನರು ಮತ್ತು ಶಕ್ತಿಯಿಲ್ಲದವರು ಎಂಬ ಒಂದು ಬೆಳೆಯುತ್ತಿರುವ ತಪ್ಪು ಗ್ರಹಿಕೆಯು ಯುಗಗಳಿಂದಲೂ ಇದೆ. ಅದು ಹಾಗಲ್ಲವೇ ಅಲ್ಲ. ಸ್ತ್ರೀಯರು ತಮ್ಮೊಳಗೆ ಒಂದು ಬಹಳ ವಿಶೇಷವಾದ ಶಕ್ತಿಯನ್ನು ಹೊಂದಿದ್ದಾರೆ - ಸಂಕಲ್ಪ ಶಕ್ತಿ.

ಹಾಗಾಗಿ ಒಬ್ಬಳು ಸ್ತ್ರೀ ಕೂಡಾ, ತನ್ನ ಬಲವಾದ ಇಚ್ಛಾ ಶಕ್ತಿ ಮತ್ತು ಆಂತರಿಕ ಬಲವನ್ನು ಉಪಯೋಗಿಸಿ ಒಬ್ಬ ಪುರುಷನನ್ನು ಸಂರಕ್ಷಿಸಬಲ್ಲಳು ಮತ್ತು ಆಧಾರ ನೀಡಬಲ್ಲಳು. ಭಾರತದಲ್ಲಿ ನಾವು ಯಾವತ್ತೂ ಸ್ತ್ರೀಯರನ್ನು ಯಾವುದೇ ರೀತಿಯಲ್ಲಿ ಕೂಡಾ ಬಲಹೀನರಾಗಿ ಅಥವಾ ಕೀಳಾಗಿ ಪರಿಗಣಿಸಲೇ ಇಲ್ಲ. ಒಬ್ಬಳು ಸ್ತ್ರೀಯು ಬಲಹೀನಳಾಗಲು ಹೇಗೆ ಸಾಧ್ಯ? ಒಬ್ಬಳು ಸ್ತ್ರೀಯಲ್ಲಿ ಎಷ್ಟೊಂದು ಸಾಮರ್ಥ್ಯ ಮತ್ತು ಶಕ್ತಿಯಿದೆಯೆಂದರೆ ಅವಳು ಅಗಾಧವಾದ ಸೂರ್ಯನನ್ನು ಕೂಡಾ ತಡೆಯಬಲ್ಲಳು! ನೀವೆಲ್ಲರೂ ಸತ್ಯವಾನ ಮತ್ತು ಅವನ ಪತ್ನಿ ಸಾವಿತ್ರಿಯ ಕಥೆಯನ್ನು ಕೇಳಿರಬೇಕು.  ಅವಳು ತನ್ನ ಪತಿಯ ಮೇಲೆ ಎಷ್ಟು ಭಕ್ತಿ ಹೊಂದಿದ್ದಳೆಂದರೆ, ಅವಳು ಯಮನೊಂದಿಗೆಯೇ ತನ್ನ ಪತಿಯನ್ನು ದೂರವೊಯ್ಯುವುದರ ವಿರುದ್ಧವಾಗಿ ಹೋರಾಡಿದಳು ಮತ್ತು ಅವನನ್ನು ಮರಳಿ ಜೀವಂತವಾಗಿಸಿದಳು. ಅದೇ ರೀತಿಯಲ್ಲಿ, ನೀವು ದೇವಿ ಅನುಸೂಯಳ ಸ್ಫೂರ್ತಿದಾಯಕ ಕಥೆಯನ್ನು ಕೂಡಾ ಕೇಳಿರಬೇಕು.

ಹೀಗೆ, ಸ್ತ್ರೀಯರು ಭಾವನೆಗಳ ಶಕ್ತಿಯನ್ನು ಹೊಂದಿರುತ್ತಾರೆ ಹಾಗೂ ತಮ್ಮೊಳಗೆ ಮಹತ್ತರವಾದ ಆಂತರಿಕ ಶಕ್ತಿಯನ್ನು ಹೊಂದಿರುತ್ತಾರೆ. ಒಬ್ಬರಲ್ಲಿರಬಹುದಾದ ಮಹತ್ತರವಾದ ಶಕ್ತಿಯೆಂದರೆ ಇದು. ಒಬ್ಬರು ತಮ್ಮ ಆಂತರಿಕ ಶಕ್ತಿಯನ್ನು ಕಳೆದುಕೊಂಡರೆ, ಆಗ ಬಾಹ್ಯ ಶಾರೀರಿಕ ಶಕ್ತಿಯಿಂದ ಯಾವುದೇ ಉಪಯೋಗವಿಲ್ಲ. ಶಾರೀರಿಕವಾಗಿ ಶಕ್ತಿಶಾಲಿಯಾಗಿರಬೇಕಾದರೆ, ಒಬ್ಬರು ಮೊದಲಿಗೆ ಆಂತರಿಕವಾಗಿ ಶಕ್ತಿಶಾಲಿಯಾಗಿರಬೇಕು (ಬಲವಾದ ಇಚ್ಛಾ ಶಕ್ತಿ ಮತ್ತು ಧೈರ್ಯವನ್ನು ಉಲ್ಲೇಖಿಸುತ್ತಾ). ಇಲ್ಲಿ ಆಂತರಿಕ ಶಕ್ತಿಯೆಂದರೆ - ಬುದ್ಧಿ ಶಕ್ತಿ ಮತ್ತು ಆಂತರಿಕ ಇಚ್ಛೆ ಹಾಗೂ ಭಾವನೆಗಳ ಶಕ್ತಿ - ಇವುಗಳೆರಡೂ. ಒಬ್ಬಳು ಸ್ತ್ರೀಯು ಇವುಗಳೆರಡರ ಒಂದು ವಿಶೇಷವಾದ ಹಾಗೂ ಸುಂದರವಾದ ಸಂಯೋಗವನ್ನು ಹೊಂದಿರುತ್ತಾಳೆ. ಹಾಗಾಗಿ ರಕ್ಷಾಬಂಧನದ ದಿನದಂದು, ಪುರುಷರನ್ನು ಸಂರಕ್ಷಿಸುವ ಪಣವನ್ನು ತೆಗೆದುಕೊಳ್ಳುವುದು ಸ್ತ್ರೀಯರಾಗಿರುವರು (ಸಹೋದರನ ಕೈಗೆ ಒಂದು ಪವಿತ್ರವಾದ ದಾರವನ್ನು ಕಟ್ಟುವ ಮೂಲಕ).

ಪ್ರಶ್ನೆ: ಗುರುದೇವ, ನಮ್ಮ ಅಂತರರಾಷ್ಟ್ರೀಯ ಕುಟುಂಬ ಸದಸ್ಯರಲ್ಲಿ ಹಲವರು, ನಿಮಗೆ ದಾರಗಳನ್ನು ಯಾಕೆ ಕಟ್ಟಲಾಗಿದೆಯೆಂದು ಕೇಳುತ್ತಿದ್ದಾರೆ.

ಶ್ರೀ ಶ್ರೀ ರವಿ ಶಂಕರ್: ಹೌದು, ಅದನ್ನೇ ನಾನು ಹೇಳುತ್ತಿದ್ದುದು. ಈ ರಾಖಿಗಳಲ್ಲಿ ಹೆಚ್ಚಿನವುಗಳನ್ನು ಚೈನಾದಲ್ಲಿ ಮಾಡಲಾಗಿದೆ. ಈ ದಿನಗಳಲ್ಲಿ ನಮ್ಮೆಲ್ಲಾ ಉತ್ಸವಗಳು ಚೈನಾದೊಂದಿಗೆ ಬಹಳಷ್ಟು ಸಂಬಂಧ ಹೊಂದಿವೆ. ಎಲ್ಲಾ ಗಣೇಶ ವಿಗ್ರಹಗಳು ಚೈನಾದಲ್ಲಿ ಮಾಡಲ್ಪಡುತ್ತವೆ. ಕೃಷ್ಣ ಪರಮಾತ್ಮನು ಚೈನಾಕ್ಕೆ ವಲಸೆ ಹೋಗಿದ್ದಾನೆ, ಅವನು ಅಲ್ಲಿಂದ ಬರುತ್ತಿದ್ದಾನೆ. ರಾಖಿಯೂ ಹಾಗೆಯೇ.

ರಾಖಿಯೆಂದರೆ, ಸ್ತ್ರೀಯರು ತಮ್ಮ ಸಹೋದರರಿಗೆ ಒಂದು ಪವಿತ್ರವಾದ ದಾರವನ್ನು ಕಟ್ಟುವ ಒಂದು ಉತ್ಸವವಾಗಿದೆ. ನಿಮಗೆ ಗೊತ್ತಾ, ನಿಮ್ಮಲ್ಲಿ ಹೇಗೆ ಸ್ನೇಹಿತರ ದಿನವೆಂದು ಇದೆಯೋ ಮತ್ತು ನೀವು ನಿಮ್ಮ ಸ್ನೇಹಿತರಿಗೆ ಸ್ನೇಹದ ದಾರವನ್ನು ಕಟ್ಟುವಿರೋ, ಅದೇ ರೀತಿಯಲ್ಲಿ ಇದು ಸ್ತ್ರೀಯರು, ವಿಶೇಷವಾಗಿ ಸಹೋದರಿಯರು ಸಹೋದರರಿಗೆ ಕಟ್ಟುವ ಒಂದು ಸಂರಕ್ಷಣೆಯ ದಾರವಾಗಿದೆ ಮತ್ತು ಅವರು ಅವನಿಗೆ ಸದಾಕಾಲವೂ ಸಂರಕ್ಷಣೆ ಹಾಗೂ ಸುರಕ್ಷತೆಯನ್ನು ಹಾರೈಸುತ್ತಾರೆ.

ಹೀಗೆ ಅವರಿದನ್ನು ಸಂರಕ್ಷಿಸುವ ಒಂದು ಉದ್ದೇಶದಿಂದ ಮಾಡುತ್ತಾರೆ. ಉದ್ದೇಶವು ಬಹಳ ಶಕ್ತಿಶಾಲಿಯಾದುದು. ನಿಮಗೆ ಗೊತ್ತಾ, ಸಂಕಲ್ಪ ಶಕ್ತಿ, ಹಾರೈಕೆಯ ಶಕ್ತಿಗೆ ಒಂದು ಬಹಳ ಅನನ್ಯವಾದ ಸ್ಥಾನವಿದೆ. ಮತ್ತು ಅದನ್ನೇ ಈ ರಕ್ಷಾಬಂಧನ ಉತ್ಸವವು ಸೂಚಿಸುವುದು. ಹೀಗೆ, ಇದು ಸಹೋದರರು ಮತ್ತು ಸಹೋದರಿಯರಿಗೆ ಇರುವ ಒಂದು ಉತ್ಸವವಾಗಿದೆ. ಮತ್ತು ಅವರು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ದಾರವನ್ನು ಕಟ್ಟಿ ಸಂರಕ್ಷಣೆಯನ್ನು ಹಾರೈಸುತ್ತಾರೆ. ಹೀಗೆ ಇಲ್ಲಿ ಹಲವಾರು ಹಿತೈಷಿಗಳಿದ್ದಾರೆ, ಅದಕ್ಕಾಗಿಯೇ ನನ್ನ ಕೈಯಲ್ಲಿ ಕೂಡಾ ಅಷ್ಟೊಂದು ದಾರಗಳು ಕಟ್ಟಿರುವುದು.

ಪ್ರಶ್ನೆ: ಗುರುದೇವ, ಧರ್ಮಗಳ ನಡುವೆ ರೀತಿ ರಿವಾಜುಗಳು ಮತ್ತು ಚಿಹ್ನೆಗಳು ವ್ಯತ್ಯಸ್ತವಾಗಿದ್ದರೂ ಕೂಡಾ ಮೂಲ ಮೌಲ್ಯಗಳು ಒಂದೇ ಆಗಿವೆ. ಹಾಗಾದರೆ ಜನರನ್ನು ಇನ್ನೊಂದು ಧರ್ಮಕ್ಕೆ ಮತಾಂತರಿಸುವ ಜ್ವರತೆ ಯಾಕಿದೆ? ಮತ್ತು ಮೂಲ ಮೌಲ್ಯಗಳು ಒಂದೇ ಆಗಿದ್ದರೆ, ಅವರು ಮತಾಂತರಗೊಂಡರೂ ಕೂಡಾ ಅದರ ಬಗ್ಗೆ ನಾವು ಯಾಕೆ ಜ್ವರತೆಯಿಂದಿರಬೇಕು?

ಶ್ರೀ ಶ್ರೀ ರವಿ ಶಂಕರ್: ಹೌದು; ಮೂಲ ಮೌಲ್ಯಗಳು ಒಂದೇ ಆಗಿವೆ, ಆದರೆ ರೀತಿ ರಿವಾಜುಗಳು ಮತ್ತು ಪದ್ಧತಿಗಳು ವಿಭಿನ್ನವಾಗಿವೆ. ಸ್ಥಳದಿಂದ ಸ್ಥಳಕ್ಕೆ, ದೇಶದಿಂದ ದೇಶಕ್ಕೆ ಜನಸಂಖ್ಯಾ ಶಾಸ್ತ್ರ ಮತ್ತು ನಂಬಿಕೆಗಳಲ್ಲಿ ಒಂದು ಬದಲಾವಣೆಯಾಗುತ್ತದೆ. ಪರಿವರ್ತನೆಯು  ಕೇವಲ ಧರ್ಮದಲ್ಲಾಗಿದ್ದರೆ, ಅದೊಂದು ಬೇರೆ ವಿಷಯ. ದುರದೃಷ್ಟವಶಾತ್, ಅದು ರಾಜಕೀಯವೂ ಆಗಿದೆ. ಮತಾಂತರಗಳು ಆಗುತ್ತಿರುವುದು ಕೇವಲ ಧರ್ಮದ ಕಾರಣಕ್ಕಾಗಿ ಅಥವಾ ಯಾರನ್ನಾದರೂ ರಕ್ಷಿಸುವುದಕ್ಕಾಗಿಯಲ್ಲ, ಆದರೆ ಅದರ ಹಿಂದೆ, ಯಾವುದೋ ರೀತಿಯ ರಾಜಕೀಯ ಅಧಿಕಾರ ಅಥವಾ ಶಕ್ತಿಯನ್ನು ಬಯಸುವ ಒಂದು ಕೆಟ್ಟದಾದ ವಿನ್ಯಾಸವಿದೆ. ಭೂಮಿಯ ಮೇಲೆ ವಿವಿಧ ನಾಗರಿಕತೆಗಳು ಅಥವಾ ಸಂಸ್ಕೃತಿಗಳು ಉಳಿದಿರಲು ಇದು ಒಳ್ಳೆಯದೇ ಅಲ್ಲ. ಇವತ್ತು ಧರ್ಮ ಅಥವಾ ಧಾರ್ಮಿಕ ಪಂಥಗಳ ಹೆಸರಿನಲ್ಲಿ ಎಲ್ಲಾ ಯುದ್ಧಗಳನ್ನು ಮಾಡಲಾಗುತ್ತಿದೆ, ಇದು ಅತಿರೇಕದಲ್ಲಿ ಕೊನೆಯಾಗುತ್ತಿದೆ. ’ಎಲ್ಲರೂ ನನ್ನಂತಿರಬೇಕು! ಎಲ್ಲರೂ ನಾನು ಅನುಸರಿಸುವ ಧರ್ಮವನ್ನೇ ಅನುಸರಿಸಬೇಕು’ ಎಂದು ಅತಿರೇಕಿಗಳು ಹೇಳುತ್ತಾರೆ. ತಮ್ಮ ಪಂಥವಲ್ಲದೆ ಬೇರೇನೂ ಅಸ್ತಿತ್ವದಲ್ಲಿಲ್ಲವೆಂಬುದನ್ನು ನೋಡುವುದು ಅವರ ಕಲ್ಪನೆಯಾಗಿದೆ. ಇದು ಪ್ರಪಂಚಕ್ಕೆ ಅಪಾಯಕಾರಿಯಾದುದು, ಯಾಕೆಂದರೆ ಪ್ರಪಂಚವು ವೈವಿಧ್ಯಮಯವಾದುದು, ಮತ್ತು ವೈವಿಧ್ಯತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ.

ಇದು, ಈ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಮಾಡುವಂತೆ. ಕೆಲವೊಮ್ಮೆ ಅವರು ಬಂದು ಇತರ ಎಲ್ಲಾ ಬೀಜಗಳನ್ನು ಸುಟ್ಟುಹಾಕುತ್ತಾರೆ (ಅಂದರೆ, ಒಂದು ದೇಶಕ್ಕೆ ಮತ್ತು ಸಂಸ್ಕೃತಿಗೆ ವಿಶೇಷವಾಗಿರುವ, ಅಸ್ತಿತ್ವದಲ್ಲಿರುವ ಪ್ರಾದೇಶಿಕ ಅಥವಾ ದೇಶೀಯ ಕಲೆಗಾರಿಕೆ). ಅವರು ತಮ್ಮ ಸ್ವಂತ ಬೇಳೆ ಮಾತ್ರ (ಉತ್ಪನ್ನಗಳು ಅಥವಾ ಪದ್ಧತಿಗಳನ್ನು ಉಲ್ಲೇಖಿಸುತ್ತಾ) ಸಮೃದ್ಧಿ ಹೊಂದಬೇಕು ಮತ್ತು ಮುಂದುವರಿಯಬೇಕೆಂದು ಬಯಸುತ್ತಾರೆ. ಉದಾಹರಣೆಗೆ ಮೊನ್ಸಾಟೋ ರೀತಿಯ ಕಂಪೆನಿಗಳು.

ಹಾಗಾಗಿ, ಇದು ಸಂಭವಿಸಿದರೆ, ಆಗ ಒಂದೇ ಒಂದು ಬೀಜ ಉಳಿಯುವುದು. ಅವರು ವೈವಿಧ್ಯತೆಯನ್ನು ಸಹಿಸಲಾರರು, ಮತ್ತು ಇದು ಅವರದ್ದೇ ಆದ ದುರುದ್ದೇಶಗಳಿಂದಾಗಿ.

ಈ ಸುಂದರವಾದ ಭೂಮಿಯಲ್ಲಿ ಹಲವಾರು ವೈವಿಧ್ಯಮಯ ಪಂಥಗಳಿವೆ, ಹಲವಾರು ಸುಂದರವಾದ ತತ್ವಶಾಸ್ತ್ರಗಳು, ಜೀವನ ಮಾರ್ಗಗಳು, ಆರಾಧನೆಯ ಹಲವಾರು ಮಾರ್ಗಗಳು ಮತ್ತು ಅದ್ಭುತವಾದ ಸಂಸ್ಕೃತಿಗಳಿವೆ. ಇವುಗಳನ್ನು ಸಂರಕ್ಷಿಸಬೇಕಾಗಿದೆ. ಯಾವಾಗೆಲ್ಲಾ ಒಬ್ಬ ವ್ಯಕ್ತಿಯು ಮತಾಂತರಗೊಳ್ಳುವನೋ, ಆಗ ಅವನು ಒಂದು ಧರ್ಮವನ್ನು ಧಿಕ್ಕರಿಸಿ ಇನ್ನೊಂದಕ್ಕೆ ಹೋಗುತ್ತಾನೆ. ತನ್ನದೇ ಆದ ಧರ್ಮವನ್ನು ಕಳಂಕಿಸದೆ ಅಥವಾ ಕೀಳು ಮಾಡದೆಯೇ ಅವನು ಇನ್ನೊಂದು ಧರ್ಮಕ್ಕೆ ಪರಿವರ್ತನೆಯಾಗಲು ಸಾಧ್ಯವಿಲ್ಲ. ಮತ್ತು ಇದುವೇ ಒಳ್ಳೆಯದಲ್ಲದಿರುವುದು. ನಾವು ಕಳಂಕ ಮಾಡಬಾರದು. ನೀವು ನಿಮ್ಮದೇ ಆದ ಧರ್ಮವನ್ನು ಕಳಂಕ ಮಾಡುತ್ತಿರುವಿರಾದರೆ, ಆಗ ನೀವು ಅದರ ಬಗ್ಗೆ ಆಳವಾಗಿ ಕಲಿತಿಲ್ಲವೆಂದಾಯಿತು; ನೀವು ಅದರ ಬಗ್ಗೆ ತಿಳಿದಿಲ್ಲವೆಂಬುದನ್ನು ಅದು ತೋರಿಸುತ್ತದೆ. ನಾವು ಈ ರೀತಿಯ ಮತಾಂತರವನ್ನು ತಡೆಯಬೇಕೆಂದು ನಾವು ಹೇಳುವುದು ಇದಕ್ಕಾಗಿಯೇ. ಅಂತಹ ಜನರು ಅಥವಾ ಪಕ್ಷಗಳು, ವಿವಿಧ ರೀತಿಯ ಆಮಿಷಗಳನ್ನೊಡ್ಡುವುದರ ಮೂಲಕ ಜನರನ್ನು ಮತಾಂತರಗೊಳಿಸುತ್ತಾರೆ. ಉದಾಹರಣೆಗೆ ಅವರಿಗೆ ಒಳ್ಳೆಯ ಶಾಲೆಗಳಲ್ಲಿ ಸೀಟುಗಳನ್ನು ನೀಡುವುದು ಅಥವಾ ಅವರಿಗೆ ಆಹಾರ, ಹಣ, ಉದ್ಯೋಗ ಅಥವಾ ಮೋಟಾರ್ ಬೈಕುಗಳು ಮುಂತಾದವುಗಳನ್ನು ನೀಡುವುದು ಮತ್ತು ನಂತರ ಅವರನ್ನು ಮತಾಂತರಗೊಳಿಸಲು ಪ್ರಯತ್ನಿಸುವುದು. ಒಂದು ಕುಟುಂಬದೊಳಗೆ ಅದು ಎಷ್ಟೊಂದು ಯಾತನೆಗಳನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೆಂಬುದು ನಿಮಗೆ ಗೊತ್ತೇ? ನಮಗೆ ನಿಜವಾಗಿಯೂ ಕಲ್ಪನೆಯೇ ಇಲ್ಲ. ಹಾಗಾಗಿ, ಒಂದು ದೀರ್ಘಕಾಲದಿಂದ ಹೆತ್ತವರು ಅನುಸರಿಸುತ್ತಿರುವ ಮತ್ತು ಮಾಡುತ್ತಿರುವ ಸಾಂಪ್ರದಾಯಿಕ ಉತ್ಸವಗಳಲ್ಲಿ ಪಾಲ್ಗೊಳ್ಳಲು ಅಚಾನಕ್ಕಾಗಿ ಕುಟುಂಬದ ಮಕ್ಕಳಿಗೆ ಇಚ್ಛೆಯಿಲ್ಲದಾಗುತ್ತದೆ. ಅವರು ತಮ್ಮದೇ ಆದ ಸಂಬಂಧಿಕರೊಂದಿಗೆ ಬೆರೆಯುವುದಿಲ್ಲ.

ಎಲ್ಲವೂ ವಿಭಿನ್ನವಾಗಿರಬೇಕೆಂದು ಅವರು ಬಯಸುತ್ತಾರೆ. ಈ ಸಮಸ್ಯೆಗಳು ಏಳುತ್ತವೆ ಮತ್ತು ಅವುಗಳು ಒಂದು ಕುಟುಂಬದೊಳಗೆ, ಹಾಗೆಯೇ ಒಂದು ಸಮಾಜಗಳಲ್ಲಿ ಮತ್ತು ಸಮುದಾಯಗಳಲ್ಲಿ ಅಷ್ಟೊಂದು ಅಸಾಮರಸ್ಯವನ್ನು ಸೃಷ್ಟಿಸುತ್ತವೆ.

ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಮತ್ತು ಆದರಿಸಬೇಕೆಂದು ನಾನು ಹೇಳುವುದು ಅದಕ್ಕಾಗಿಯೇ. ಆದರೆ, ಅಂಧಾಭಿಮಾನದಿಂದ ಧಾರ್ಮಿಕರಾಗುವುದರ ಬದಲಾಗಿ ನಾವು ಹೆಚ್ಚು ಆಧ್ಯಾತ್ಮಿಕರು ಕೂಡಾ ಆಗಬೇಕು.

ಪ್ರಶ್ನೆ: ಗುರುದೇವ, ನೀವು ದಯವಿಟ್ಟು ಸನ್ಯಾಸದ ಬಗ್ಗೆ ಮಾತನಾಡಬಲ್ಲಿರಾ? ಒಬ್ಬ ಸನ್ಯಾಸಿಯಾಗುವುದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಸನ್ಯಾಸವೆಂದರೆ ಸಂಪೂರ್ಣವಾಗಿ ಕೇಂದ್ರಿತನಾಗಿರುವುದು. ಅದರರ್ಥ ’ಎಲ್ಲರೂ ನನಗೆ ಸೇರಿದವರು ಮತ್ತು ನಾನು ಎಲ್ಲರಿಗೂ ಸೇರಿದವನು. ನನಗಾಗಿ ಏನೂ ಬೇಡ ಮತ್ತು ಎಲ್ಲವನ್ನೂ ಕೊಡಲು ನಾನು ಸಿದ್ಧನಿದ್ದೇನೆ’ ಎಂದು ಭಾವಿಸುವುದು.

ಪ್ರಶ್ನೆ: ಗುರುದೇವ, ಒಬ್ಬ ವ್ಯಕ್ತಿಯು ಅತ್ಯಂತ ಘೋರ ಅಪರಾಧವನ್ನು ಮಾಡಿ, ಅದರ ಬಗ್ಗೆ ತಪ್ಪಿತಸ್ಥ ಭಾವನೆ ಬಾರದೇ ಇದ್ದರೆ ಅಥವಾ ಪಶ್ಚಾತ್ತಾಪ ಪಡದೇ ಇದ್ದರೆ, ಅವನಿಗೆ ಅದರ ಕರ್ಮವು ತಗಲುವುದಿಲ್ಲ, ಆದರೆ ಒಬ್ಬನು ಒಂದು ಚಿಕ್ಕ ತಪ್ಪು ಮಾಡಿ, ಕೂಡಲೇ ಅದರ ಬಗ್ಗೆ ಪಶ್ಚಾತ್ತಾಪ ಪಟ್ಟರೆ ಅವನಿಗೆ ಅದರ ಕರ್ಮವು ತಗಲುತ್ತದೆಯೆಂದು ನಾನು ಎಲ್ಲೋ ಓದಿದ್ದೇನೆ. ಅದು ನಿಜವೇ?

ಶ್ರೀ ಶ್ರೀ ರವಿ ಶಂಕರ್: ಅದು ಕೇವಲ ಪಶ್ಚಾತ್ತಾಪ ಪಡುವ ಬಗ್ಗೆಯಲ್ಲ. ಅಲ್ಲಿ ಇನ್ನೂ ಹೆಚ್ಚಿನದೇನೋ ಇದೆ. ಅದು, ನಿಮ್ಮೊಳಗಿರುವ ಅಕರ್ತೃ ಚೈತನ್ಯದ ಬಗ್ಗೆ ಜಾಗೃತವಾಗಿರುವುದು. ಪ್ರತಿಯೊಬ್ಬರ ಒಳಗೂ ಎರಡು ವಿಷಯಗಳಿವೆ. ಒಂದು ಕರ್ತೃ ಮತ್ತು ಒಂದು ಅಕರ್ತೃ. ನಿಮ್ಮ ಗುರುತು ಸಂಪೂರ್ಣವಾಗಿ ನಿಮ್ಮೊಳಗಿರುವ ಅಕರ್ತೃ ಅಂಶದೊಂದಿಗೆ ಇರುವಾಗ, ಅದು ಅಂಟಿಕೊಳ್ಳುವುದಿಲ್ಲ. ಅದಕ್ಕಾಗಿ ನೀವು ಟೊಳ್ಳು ಮತ್ತು ಖಾಲಿಯಾಗಬೇಕು.

ಪ್ರಶ್ನೆ: ಗುರುವು ಭಕ್ತನನ್ನು ಆಯ್ಕೆ ಮಾಡುತ್ತಾರೆಯೇ ಅಥವಾ ಭಕ್ತನು ಗುರುವನ್ನು ಆಯ್ಕೆ ಮಾಡುತ್ತಾನೆಯೇ?

ಶ್ರೀ ಶ್ರೀ ರವಿ ಶಂಕರ್: ಅವರು ಪರಸ್ಪರರನ್ನು ಆಯ್ಕೆ ಮಾಡಿಕೊಳ್ಳುವಲ್ಲಿಯವರೆಗೆ ಅದು ಮುಖ್ಯವಲ್ಲ! (ನಗು). ಇದಕ್ಕಾಗಿ ಎರಡು ಮಾರ್ಗಗಳಿವೆ ಎಂದು ಸಂಸ್ಕೃತದಲ್ಲಿ ಹೇಳಲಾಗಿದೆ: ದೇವರು ನಿಮ್ಮನ್ನು ಆಯ್ಕೆ ಮಾಡುವರೋ ಅಲ್ಲಾ ನೀವು ದೇವರನ್ನು ಆಯ್ಕೆ ಮಾಡುವಿರೋ ಎಂದು. ಅದು ಕೋತಿ ಮತ್ತು ಬೆಕ್ಕಿನ ಮರಿಗಳಂತೆ ಎಂದು ಅವರು ಹೇಳುತ್ತಾರೆ. ತಾಯಿ ಕೋತಿಯು ಸುಮ್ಮನೆ ತಿರುಗಾಡುತ್ತಿರುತ್ತದೆ ಮತ್ತು ಕಣ್ಣಿಟ್ಟಿರುವುದು ಹಾಗೂ ತಾಯಿಯನ್ನು ಅನುಸರಿಸುವುದು ಮರಿಗಳಾಗಿವೆ.

ಆದರೆ ಇನ್ನೊಂದು ಕಡೆಯಲ್ಲಿ ಬೆಕ್ಕಿನ ಮರಿಗಳು ತಾಯಿಯ ಬಗ್ಗೆ ಚಿಂತಿಸುವುದಿಲ್ಲ ಮತ್ತು ಅವುಗಳು ತಾಯಿಯ ಕಡೆಗೆ ನೋಡುವುದು ಕೂಡಾ ಇಲ್ಲ. ಅವುಗಳು ಸುಮ್ಮನೇ ಆಟವಾಡುತ್ತಿರುತ್ತವೆ ಮತ್ತು ಮರಿಗಳನ್ನು ನೋಡಿಕೊಳ್ಳುವುದು ಹಾಗೂ ಮರಿಗಳನ್ನು ತನ್ನದೇ ಬಾಯಿಯಲ್ಲಿ ಹಿಡಿದುಕೊಂಡು ಅವುಗಳನ್ನು ಸುತ್ತಲೂ ಕರೆದೊಯ್ಯುವುದು ತಾಯಿ ಬೆಕ್ಕಾಗಿದೆ.

ಇಲ್ಲಿ ಬೆಕ್ಕಿಗೆ ಮರಿಗಳ ಬಗ್ಗೆ ಕಾಳಜಿಯಿದೆ. ಅಲ್ಲಿ, ತಾಯಿಯ ಬಗ್ಗೆ ಕಾಳಜಿಯಿರುವುದು ಕೋತಿಮರಿಗೆ. ತಾಯಿಕೋತಿಯು ನೋಡುವುದಿಲ್ಲ, ಕೋತಿಮರಿಯು ಹೋಗಿ ತಾಯಿಗೆ ಅಂಟಿಕೊಳ್ಳುತ್ತದೆ. ಹೀಗೆ ಇಲ್ಲಿ ಎರಡು ವಿಷಯಗಳಿವೆ: ಒಂದು ಭಕ್ತನ ಮಾರ್ಗ. ಭಕ್ತನು ಬೆಕ್ಕಿನ ಮರಿಯಂತೆ, ದೇವರು ಮಾರ್ಗದರ್ಶನ ಮಾಡಲು ಬಿಡುವುದು. ಮತ್ತು ಒಬ್ಬ ತತ್ವಜ್ಞಾನಿ ಅಥವಾ ಒಬ್ಬ ಯೋಗಿಯು, ತಾಯಿಯನ್ನು ಹಿಡಿದುಕೊಳ್ಳುವ ಕೋತಿಮರಿಯಂತೆ. ಅವನು ದೇವರನ್ನು ಹಿಡಿದುಕೊಂಡಿರುತ್ತಾನೆ. ಹಾಗಾಗಿ ಒಬ್ಬನು ಒಬ್ಬ ಕರ್ಮ ಯೋಗಿ, ಇನ್ನೊಬ್ಬನು ಒಬ್ಬ ಭಕ್ತಿ ಯೋಗಿ. ನೀವು ಯಾವುದೇ ಒಂದಾಗುವ ಅಥವಾ ಕೆಲವು ಸಮಯಗಳಲ್ಲಿ ಎರಡೂ ಆಗುವ ಆಯ್ಕೆ ಮಾಡಿಕೊಳ್ಳಬಹುದು.

ಪ್ರಶ್ನೆ: ತಿಳಿದವನೊಬ್ಬನು (ಸತ್ಯವನ್ನು) ಅದನ್ನು ಹೇಳುವುದಿಲ್ಲ ಮತ್ತು ಅದರ ಬಗ್ಗೆ ಮಾತನಾಡುವವನು ನಿಜವಾಗಿಯೂ ತಿಳಿದಿರುವುದಿಲ್ಲ ಎಂದು ಹೇಳಲಾಗುತ್ತದೆ. ಈಗ ನನಗೆ ಇದು ತಿಳಿದಿರುವುದರಿಂದ, ಯಾರಾದರೂ ನನ್ನಲ್ಲಿ ನಾನು ಜ್ಞಾನೋದಯ ಹೊಂದಿದ್ದೇನೆಯೇ ಅಥವಾ ಇಲ್ಲವೇ ಎಂದು ಕೇಳಿದರೆ, ನಾನೇನು ಹೇಳಬೇಕು? ಅಥವಾ ಹೇಳಬಾರದು?

ಶ್ರೀ ಶ್ರೀ ರವಿ ಶಂಕರ್: ’ಹೌದು’ ಎಂದು ಹೇಳುವುದಕ್ಕಿಂತ ’ಇಲ್ಲ’ ಎಂದು ಹೇಳುವುದು ಸುಲಭ. ಹಾಗಾಗಿ ನಿನ್ನ ಸಮಯದ ಲಭ್ಯತೆಗನುಗುಣವಾಗಿ ಆಯ್ಕೆ ಮಾಡು. ಯಾಕೆಂದರೆ, ನೀನು ಹೌದು ಅಥವಾ ಇಲ್ಲವೆಂದು ಹೇಳದೆ, ಒಬ್ಬ ವ್ಯಕ್ತಿಗೆ ಅದನ್ನು ಅನುಭವ ಮಾಡಲು ಸಾಧ್ಯವಾಗದಿದ್ದರೆ, ನೀನು ಹೌದು ಅಥವಾ ಇಲ್ಲವೆಂದು ಹೇಳಿದ ಬಳಿಕವೂ ಅದು ಅವರಿಗೆ ಅನುಭವ ಆಗಲಾರದು. ಯಾರಾದರೂ, "ಇಲ್ಲಿ ಲೈಟಿನ ಸ್ವಿಚ್ಚುಗಳು ಆನ್ ಆಗಿವೆಯೇ?" ಎಂದು ಕೇಳಿದರೆ, ಅದರರ್ಥ ಅವರು ತಮ್ಮ ಕಣ್ಣುಗಳನ್ನು ತೆರೆದಿಲ್ಲವೆಂದು. ಹಾಗಾಗಿ ನೀನು ಹೌದು ಎಂದರೂ ಅಥವಾ ಇಲ್ಲವೆಂದರೂ, ಅದರಿಂದ ಅವರಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸರಿಯಾ? ಅವರು ಕುರುಡರಾಗಿದ್ದರೆ, ಆಗ ನೀನು "ಹೌದು, ಲೈಟುಗಳು ಉರಿಯುತ್ತಿವೆ" ಎಂದು ಹೇಳಿದರೂ ಅದು ಅವರಿಗೆ ಹೇಗೆ ಬಾಧಕವಾಗುತ್ತದೆ? ಅದು ಅವರ ಮೇಲೆ ಯಾವುದಾದರೂ ಪ್ರಭಾವವನ್ನು ಹೇಗೆ ಮಾಡುತ್ತದೆ? ಮತ್ತು ನೀನು "ಇಲ್ಲ" ಎಂದು ಹೇಳಿದರೆ, ಆಗ ಕೂಡಾ ಅದಕ್ಕೆ ಯಾವುದೇ ಅರ್ಥವಿಲ್ಲ. ಹಾಗಾಗಿ, ಈ ಎಲ್ಲಾ ಸಂದರ್ಭಗಳಲ್ಲಿ ಸುವರ್ಣ ತತ್ವವೆಂದರೆ - ಮೌನದೊಂದಿಗೆ ಮುಗುಳ್ನಗು. ತಿಳಿಯಿತೇ? ಅವರು ಅದನ್ನು ಅನುಭವಿಸಲು ಸಾಧ್ಯವಾದರೆ, ಆಗ ನೀನು ಇಲ್ಲವೆಂದು ಹೇಳಿದರೂ ಸಹ, ಅವರಿಗದು ಅನುಭವವಾಗುವುದು.

ಒಮ್ಮೆ ನಾನು ಸ್ವೀಡನ್‌ನಲ್ಲಿದ್ದೆ ಮತ್ತು ಅಲ್ಲೊಂದು ಸಭೆ ಇತ್ತು. ಸಭಿಕರಲ್ಲಿ ಒಬ್ಬ ಪತ್ರಕರ್ತನಿದ್ದ. ಅವನು ನನ್ನಲ್ಲಿ, "ನೀವು ಜ್ಞಾನೋದಯಗೊಂಡವರೇ? ಸುಮ್ಮನೇ ಸುತ್ತಿ ಬಳಸಿ ಮಾತನಾಡಬೇಡಿ. ನನಗೆ ಹೇಳಿ. ನಾನು ನಿಮ್ಮಲ್ಲಿ ಕೇಳಲು ಬಯಸುತ್ತೇನೆ, ನೀವು ಜ್ಞಾನೋದಯಗೊಂಡವರೇ?" ಎಂದು ಕೇಳಿದ. ನಾನು ಸುಮ್ಮನೇ ನೋಡಿ ಮುಗುಳ್ನಕ್ಕೆ. ನಾನು ಅವನಿಗೆ ಹೇಳಿದೆ, "ನೀನು ಬಹಳ ಬುದ್ಧಿವಂತನೆಂದು ನನಗೆ ಗೊತ್ತು." ಆಗ ಅವನಂದ, "ಆದರೆ, ನೀವು ಜ್ಞಾನೋದಯಗೊಂಡವರೇ?" "ಅಲ್ಲ" ಎಂದು ಹೇಳುವುದು ಉತ್ತಮ, ಆಗ ಇಡೀ ಸಂವಾದವು ಕೊನೆಯಾಗುತ್ತದೆ. "ಹೌದು" ಎಂದು ಹೇಳುವುದರ ಮೂಲಕ ಯಾವುದನ್ನಾದರೂ ಸಾಬೀತುಪಡಿಸುವ ತೊಂದರೆ ತೆಗೆದುಕೊಳ್ಳುವುದು ಯಾಕೆ? ಅದು ಇನ್ನೂ ದೊಡ್ಡ ತಲೆನೋವು. ಮತ್ತು ಇದನ್ನು ಸಾಬೀತುಪಡಿಸಲು ಪ್ರಯತ್ನಿಸಿದವರೆಲ್ಲಾ ಇನ್ನೂ ಹೆಚ್ಚಿನ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ’ಹೌದು’ ಎಂದು ಹೇಳುವುದರಿಂದ ಏನಾಗಲಿದೆ? ಹಾಗಾಗಿ ನಾನು "ಅಲ್ಲ" ಎಂದು ಹೇಳಿದೆ. ಆದರೆ ನಂತರ ಇದಕ್ಕೆ ಆ ಪತ್ರಕರ್ತನು, "ಇಲ್ಲ, ನೀವು ನನಗೆ ನಿಜವನ್ನು ಹೇಳುತ್ತಿಲ್ಲ. ನಾನು ನಿಮ್ಮನ್ನು ನಂಬುವುದಿಲ್ಲ" ಎಂದು ಹೇಳಿದ. ಹಾಗಾದರೆ ನೀವು ನಿಮ್ಮಲ್ಲೇ ನಂಬಿಕೆಯನ್ನಿರಿಸಿ ಮತ್ತು ನಿಮ್ಮ ಹೃದಯ ಏನನ್ನು ಹೇಳುತ್ತಿರುವುದೋ ಅದನ್ನು ನಂಬಿ.

ಪ್ರಶ್ನೆ: ಗುರುದೇವ, ಇವತ್ತು ಜನಿವಾರಗಳನ್ನು ಬದಲಾಯಿಸುತ್ತಿರುವಾಗ ಪಂಡಿತರು ಋಷಿ ವಂದನವನ್ನು ಉಚ್ಛರಿಸಿದರು. ಈ ಮಂತ್ರದ ಮಹತ್ವವನ್ನು ನೀವು ದಯವಿಟ್ಟು ವಿವರಿಸಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಇವತ್ತು ನಾವು ಋಷಿಗಳನ್ನು - ಈ ಜ್ಞಾನವನ್ನು ಜೀವಂತವಾಗಿರಿಸಿದ ಮತ್ತು ಈ ಜ್ಞಾನವನ್ನು ನಿಮ್ಮ ಬಳಿಗೆ ತಂದ ಪ್ರಾಚೀನ ಋಷಿಗಳು ಹಾಗೂ ಮುನಿಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರು ವೇದಗಳ ಮಹಾನ್ ಮಂತ್ರಗಳನ್ನು ನೀಡಿದ್ದಾರೆ. ಹಾಗಾಗಿ, ಇವತ್ತು ಜನರು ಜನಿವಾರವನ್ನು ಬಾಲಾಯಿಸುವಾಗ ಅವರು ಈ ಮಂತ್ರವನ್ನು ಪಠಿಸುತ್ತಾರೆ.

ಜನಿವಾರವು ಯಾವುದನ್ನು ಪ್ರತಿನಿಧಿಸುತ್ತದೆ? ಅದರರ್ಥ, ಯೋಚನೆಯಿಂದ, ಮಾತಿನಿಂದ ಮತ್ತು ಕೆಲಸದಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಎಂದು. ನೀವು ಜವಾಬ್ದಾರಿಯನ್ನು ಹೆಗಲಿನಲ್ಲಿ ಹೊತ್ತಿದ್ದೀರೆಂಬುದನ್ನು ನೆನಪಿಸಲು, ಅವರೊಂದು ನೂಲನ್ನು ಹಾಕುತ್ತಾರೆ. ಅದು, "ನಾನು ಈ ಜವಾಬ್ದಾರಿಯನ್ನು ಹೊತ್ತಿದ್ದೇನೆ" ಎಂದು ಹೇಳುವಂತೆ. ಮತ್ತು ಕೃತಜ್ಞತೆಯನ್ನು ಅನುಭವಿಸುವುದು ಪ್ರಕ್ರಿಯೆಯ ಒಂದು ಭಾಗವಾಗಿದೆ.

ಪ್ರಶ್ನೆ: ಎಂದಾದರೂ ಒಬ್ಬ ಭಕ್ತನು ದೇವರಿಂದ ಅಥವಾ ಗುರುವಿನಿಂದ ಏನನ್ನಾದರೂ ಕೇಳಬೇಕೆಂದಿದ್ದರೆ, ಅವನು ಕೇಳಬಹುದಾದ ಅತ್ಯುತ್ತಮವಾದುದು ಯಾವುದು?

ಶ್ರೀ ಶ್ರೀ ರವಿ ಶಂಕರ್: ಹೇ! ಈಗ, ನೀನು ಏನನ್ನು ಕೇಳಬೇಕೆಂಬುದನ್ನು ಕೂಡಾ ನಾನೇ ಹೇಳಬೇಕೇ? ಅದರ ಅಗತ್ಯವಿದೆಯೆಂದು ನನಗನ್ನಿಸುವುದಿಲ್ಲ. ನಿನ್ನ ಆವಶ್ಯಕತೆಯು ಸಹಜವಾಗಿ ಬರುತ್ತದೆ. ಅದು ಸುಮ್ಮನೇ ಒಳಗಿನಿಂದ ಬರುತ್ತದೆ. ನಿನಗೆ ಕೇಳದಿರಲು ಸಾಧ್ಯವಿಲ್ಲ. ಏನನ್ನಾದರೂ ಕೇಳುವಂತೆ ನೀನು ನಿನ್ನನ್ನು ಬಲವಂತಪಡಿಸಲು ಸಾಧ್ಯವಿಲ್ಲ. ಆಗ, ಅದು ಅಸಲಿ ಆಗಿರುವುದಿಲ್ಲ.