ಭಾನುವಾರ, ಆಗಸ್ಟ್ 25, 2013

ಸಮರ್ಪಣ, ಶಿವಧ್ಯಾನ

ಅಮೃತಬಿ೦ದು’ ಸರಣಿಯ ಬರಹಗಳು

ಹತ್ತೊಂಭತ್ತನೆಯ ಕ೦ತು

ಅನುದಿನವೂ ಮನನ ಮಾಡಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೭.೦೮.'೧೩ರಂದು ಪ್ರಕಟವಾಗಿತ್ತು)

ಶಿವಸೂತ್ರಗಳು ಮೂಲತಃ ಸಂಸ್ಕತದಲ್ಲಿದೆ. ಮನುಷ್ಯ ತನ್ನ ಜೀವನದಲ್ಲಿ ಗುರಿಯನ್ನು ಸೇರುವುದಕ್ಕೆ ಅಗತ್ಯವಾದ, ಚಿಂತೆಯಿಂದ ಪಾರಾಗುವುದಕ್ಕೆ ಬೇಕಾಗುವಂಥ ಅಪಾರವಾದ ಜ್ಞಾನವು ಸೂತ್ರಗಳ ರೂಪದಲ್ಲಿ, ಇದರಲ್ಲಿ ಅಡಕವಾಗಿದೆ. ಬೇರೆ ಬೇರೆ ರೀತಿಯ ಹಲವಾರು ಸೂತ್ರಗಳ ಮೂಲಕ ನಮ್ಮನ್ನು ಮತ್ತೆ ಮತ್ತೆ ದಾರಿಗೆ ತರುವುದಕ್ಕೆ ಶಿವಸೂತ್ರಗಳಲ್ಲಿ ಮಹಾನ್ ಪ್ರಯತ್ನ ನಡೆದಿದೆ. ಇದನ್ನು ಮತ್ತೆ ಮತ್ತೆ ಪಾರಾಯಣ ಮಾಡಬೇಕು.

ಹೀಗೆ ಪುನರುಕ್ತಿ ಮಾಡಿದಾಗ ನಮ್ಮ ಚಿತ್ತದಲ್ಲಿರತಕ್ಕಂಥ ಬೇರೆ ಬೇರೆ ಕಣಗಳಿಗೆ, ಬೇರೆ ಬೇರೆ ಜೀವದ ಅಂಶಕ್ಕೆ ಜ್ಞಾನ ಒದಗುತ್ತದೆ. ಒಂದು ಸಮಾಜದಲ್ಲಿ ಸಾವಿರಾರು ಜನರು ಇರುವ ಹಾಗೆ, ನಿಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತಿತ್ವವಿಲ್ಲ; ನೂರಾರು, ಸಾವಿರಾರು ವ್ಯಕ್ತಿತ್ವವಿದೆ. ಒಂದು ಹಳ್ಳಿಯಲ್ಲಿರುವ ಎಲ್ಲರು ಸುಶಿಕ್ಷಿತರು ಎನ್ನಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು ತಾನೆ? ಹಾಗೆ ನಾವು ಪೂರ್ಣ ಜ್ಞಾನವಂತರಾಗಲು ನಮ್ಮ ತಲೆಯಲ್ಲಿರುವ ಎಲ್ಲಾ ಅಣುಗಳಿಗೂ ಜ್ಞಾನದ ಬೋಧೆ ಉಂಟಾಗಬೇಕು.

ನಮ್ಮಲ್ಲಿರುವ ಅಣುಗಳೆಲ್ಲವೂ ಬೇರೆ ಬೇರೆ ಸಮಯದಲ್ಲಿ, ಸರದಿಯಲ್ಲಿ ಫ್ಯಾಕ್ಟರಿ ಶಿಫ್ಟ್ ತರಹ ಕೆಲಸ ಮಾಡುತ್ತದೆ. ಒಂದು ದಿನ ಅಭ್ಯಾಸ, ಸಾಧನೆ ಬಿಟ್ಟು ಬಿಟ್ಟರೆ ಅಂದಿನ ಸರದಿಯಲ್ಲಿರುವ ಅಣುಗಳ ಸರದಿ ಮತ್ತೆ ಬರಲು ಒಂದು ವರ್ಷ ಬೇಕಾಗುತ್ತದೆ!  ಅಭ್ಯಾಸ, ಪುನರುಕ್ತಿ ಮಾಡಿದಾಗ ನಮ್ಮ ತಲೆಯಲ್ಲಿರುವ ಕೋಟ್ಯಾಂತರ ಜೀವಾಣುಗಳೆಲ್ಲವೂ ಸುಶಿಕ್ಷಿತವಾಗುತ್ತವೆ.

ಇಷ್ಟೆಲ್ಲಾ ಜ್ಞಾನ ತಿಳಿದುಕೊಂಡ ನಂತರ, ಏನು ಮಾಡಲು ಹೇಳ್ತಾರೆ? ನಾಳೆ ತಿಳಿದು ಕೊಳ್ಳೋಣ.

* * * * *

ತೃಪ್ತಿಯಿಂದ ಸಮರ್ಪಸಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೮.೦೮.'೧೩ರಂದು ಪ್ರಕಟವಾಗಿತ್ತು)

ಹಿಂದಿನ ಸೂತ್ರಗಳಲ್ಲಿ ನಾವು ವಿಚಾರ ಮಾಡಿದ್ದೆವು - ನಮ್ಮ ಜ್ಞಾನ ಎಲ್ಲಿದೆ? ವಸ್ತುವಿನಲ್ಲಿದೆಯಾ? ಕಣ್ಣಿನಲ್ಲಿದೆಯಾ?

ಎಲ್ಲಿದೆ?.. ನಮ್ಮ ಮನಸ್ಸಿನಲ್ಲಿದೆ, ನಮ್ಮ ಚೇತನದಲ್ಲಿದೆ. ಈ ಚೇತನಕ್ಕೆ ಮತ್ತೆ ಮತ್ತೆ ಜ್ಞಾನದ ಪೋಷಣೆ ಬೇಕು. ಇಷ್ಟೆಲ್ಲಾ ಜ್ಞಾನ ತಿಳಿದು ಕೊಂಡ ನಂತರ, ಕಡೆಗೆ ಎಲ್ಲವನ್ನೂ. ಜ್ಞಾನವನ್ನೂ ಸಹ ಸಮರ್ಪಣೆ ಮಾಡಲು ಹೇಳುತ್ತಾರೆ.

ನೀನೇ ಜ್ಞಾನ ಸ್ವರೂಪನಾಗಿರು. ‘ಜ್ಞಾನಾತ್ ಧ್ಯಾನಂ ವಿಶಿಷ್ಯತೇ’… ಧ್ಯಾನದಲ್ಲಿ ಕುಳಿತುಕೊಂಡು ನಾನೇ ಜ್ಞಾನ ಸ್ವರೂಪನಾಗಿದ್ದೇನೆ ಅಂದುಕೊ. ಧ್ಯಾನದಿಂದ ಪಡೆಯುವುದು ಉತ್ತಮವಾದ, ಶುದ್ಧವಾದ, ದೋಷರಹಿತವಾದ ಜ್ಞಾನ  ಆ ತರಹ ಜ್ಞಾನದಿಂದ ತೃಪ್ತಿ ಸಿಗುತ್ತೆ. ಜ್ಞಾನ, ತೃಪ್ತಿ, ಎರಡೂ ಜೊತೆ ಜೊತೆಯಾಗಿಯೇ ಇರುತ್ತೆ. ಎಷ್ಟು ಜ್ಞಾನ ಇದೆಯೋ ಅಷ್ಟು ತೃಪ್ತಿ ಇರುತ್ತೆ; ಎಷ್ಟು ಅಜ್ಞಾನ ಇರುತ್ತೋ ಅಷ್ಟು ಅತೃಪ್ತಿ ಇರುತ್ತೆ.

ಹಾಗೇ ನಾವು ಕೃತಜ್ಞರಾದಷ್ಟೂ ತೃಪ್ತರಾಗುತ್ತೀವಿ. ತೃಪ್ತರಾದಷ್ಟೂ ಬೇರೆಯವರಿಗೆ ಉಪಕಾರಿಗಳಾಗುತ್ತೀವಿ. ಅತೃಪ್ತನಾದ ಮನುಷ್ಯ ಬೇರೆಯವರಿಗೆ ಉಪಕಾರಿ ಆಗುವುದಕ್ಕೆ ಸಾಧ್ಯವಿಲ್ಲ.

ಯಾವುದದರಿಂದ ತೃಪ್ತಿ ಸಿಗುತ್ತೆ ನಿಮಗೆ? ಯಶಸ್ಸು ತೃಪ್ತಿ ಕೊಡುತ್ತಾ? ಸಂಪತ್ತು ಕೊಡುತ್ತಾ ತೃಪ್ತಿ? ಇಲ್ಲ! ತೃಪ್ತಿ ಯಾವಾಗ ಬರ ಬೇಕು ನಿಮಗೆ? ನಾಳೆ? ನಾಡಿದ್ದು? ಹತ್ತು ವರುಷ ಆದ ಮೇಲೆ?

‘ಅದು’ ಆದ ಮೇಲೆ, ‘ಇದು’ ಆದ ಮೇಲೆ ತೃಪ್ತಿಯಾಗಿರ್ತಿನಿ ಅಂದುಕೋಬೋಡಿ. ನಾನು ‘ಈಗಲೇ’ ತೃಪ್ತನಾಗಿದೀನಿ. ನನ್ನ ಸ್ವಭಾವವೇ ತೃಪ್ತಿ ಅಂತ ತಿಳಿದುಕೊಳ್ಳಬೇಕು. ತೃಪ್ತಿಯಿಂದ ಭಕ್ತಿಯಿಂದ ಭಗವಂತನಿಗೆ ಎಲ್ಲವನ್ನೂ ಸಮರ್ಪಿಸಿ, ಮನಸ್ಸನ್ನು ಖಾಲಿ ಮಾಡಿಕೊಂಡಾಗ ಚೇತನ ಅರಳುತ್ತದೆ. ಅನಂತದಲ್ಲಿ ವಿಸ್ತಾರವಾಗುತ್ತದೆ.

* * * * *

ಶಿವನಿಗೆ ಎಲ್ಲವೂ ಅರ್ಪಣೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೯.೦೮.'೧೩ರಂದು ಪ್ರಕಟವಾಗಿತ್ತು)

“ಶಿವಾರ್ಪಣಮಸ್ತು”.

ಇದು ಶಿವಸೂತ್ರದ ಕೊನೆಯ, ಅಮೂಲ್ಯವಾದ ಸೂತ್ರ. ಸರ್ವೇಶ್ವರನಾದ ಶಿವನಿಗೆ ಅರ್ಪಿತವಾಗಲಿ. ಯಾವುದನ್ನು ಅರ್ಪಣೆ ಮಾಡುತ್ತೀರ? ಮಾಡುವುದಕ್ಕೇನಿದೆ? ಕೂಲಂಕುಷವಾಗಿ ನೋಡೋಣ

ಶಿವನ ಮೊದಲ ಹೆಸರು ಪಶುಪತಿ. ಪಶು ಎಂದರೆ ಈ ಶರೀರ, ಎಂದರೆ ಇದರ ವೃತ್ತಿ ಪ್ರವೃತ್ತಿಗಳು ಪ್ರಕೃತಿ ನಿಯಮಕ್ಕೆ ಅನುಸಾರವಾಗಿ ತನ್ನಷ್ಟಕ್ಕೆ ತಾನೆ ನಡೆದುಕೊಂಡು ಹೋಗುತ್ತವೆ. ಇದರ ಅಧಿಪತಿ ಶಿವ.

ನಂತರ ಪ್ರಾಣಶಕ್ತಿ: ನಮ್ಮ ಪ್ರಾಣಕ್ಕೆ ಯಾರು ಅಧಿಪತಿ? ಶಿವ ಅಧಿಪತಿ. ಕೆಲವು ಸಲ ವೇದನೆಯ, ನೋವಿನ ಕ್ಷಣಗಳಲ್ಲಿ ಈ ಪ್ರಾಣ ದಹಿಸುತ್ತದೆ, ನೊಂದು ಬೆಂದುಹೋಗಿರುತ್ತೆ. ಪ್ರಾಣದ ಉರಿಯುವಿಕೆ ನಮಗೆ ಗೊತ್ತಾಗುವಾಗ ನಾವು ‘ಪಶು’ವಿನಿಂದ ಜೀವ ಭಾವ ದಕಡೆಗೆ ಬಂದಿರುತ್ತೇವೆ. ಉರಿಯುತ್ತಿರುವ ಈ ಪ್ರಾಣಕ್ಕೆ ಯಾರು ಅಧಿಪತಿ? ಶಿವ ಅಧಿಪತಿ, ಸಮರ್ಪಣೆ ಮಾಡಿಬಿಡು.

ಇದಾದ ಮೇಲೆ ಸೋಮನಾಥ: ಸೋಮ ಎಂದರೆ ಮನಸ್ಸು, ಮನೋತತ್ವ. ನಮ್ಮ ಮನಸ್ಸಿನಲ್ಲಿರುವ ಸದ್ವಿಚಾರ, ದುರ್ವಿಚಾರ ಎಲ್ಲಾದಕ್ಕೂ ಯಾರು ಅಧಿಪತಿ? ಶಿವ ಅಧಿಪತಿ, ಮನಸ್ಸನ್ನು ಸಮರ್ಪಣೆ ಮಾಡಿಬಿಡು.

ಮನಸ್ಸಿನ ನಂತರ? ಬುದ್ಧಿ. ಗೌರಿತತ್ವವೇ ಬುದ್ಧಿ. “ ಆತ್ಮಾತ್ವಂ ಗಿರಿಜಾಮತಿ:……….” ಶಿವ ಮಾನಸ ಪೂಜೆಯಲ್ಲಿ ಹೇಳ್ತಾರೆ ಬುದ್ಧೀನೇ ಗೌರೀ ಅಂತ. ಬುದ್ಧಿಗೆ ಅಧಿಪತಿ? ಗೌರೀ ಪತಿ, ಶಿವ, ಮತ್ತೆ ಅರ್ಪಣೆ ಮಾಡು.

ನಂತರ ಆತ್ಮಪತಿ – ಈಶ್ವರ ಅಂದರೆ ಆತ್ಮನಾಥ ಈಶ್ವರನಿಗೆ ಅರ್ಪಣೆ ಮಾಡು. ಆತ್ಮಾರ್ಪಣೆ ಮಾಡು. ‘ಆತ್ಮಾತ್ಮಂ’ ಎಂದರೆ ಶಿವೋಹಂ. ಒಂದು ರೀತಿಯಲ್ಲಿ ಶಿವೋಹಂ, ಶಿವಾರ್ಪಣಂ ಎರಡೂ ಒಂದೇ. ಶಿವಾರ್ಪಣವಾದಾಗ ಏನು ಪ್ರಕಾಶಕ್ಕೆ ಬರುತ್ತದೆ? ‘ಶಿವೋಹಂ, ಶಿವೋಹಂ!’

“ಶಿವಾರ್ಪಣಮಸ್ತು”

* * * * *

ಗೋಕುಲಾಷ್ಟಮಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೦.೦೮.'೧೩ರಂದು ಪ್ರಕಟವಾಗಿತ್ತು)

ಶ್ರೀ ಕೃಷ್ಣ ಜನಿಸಿದ ದಿನವನ್ನು ಗೋಕುಲಾಷ್ಟಮಿ ಎನ್ನುತ್ತೀವಿ. ಶ್ರೀ ಕೃಷ್ಣನ ಜನ್ಮ ಆದದ್ದು ಮಥುರಾದಲ್ಲಿ ಅಲ್ಲವಾ? ಯಾಕೆ ಮಥುರಾಷ್ಟಮಿ ಅನ್ನುವುದಿಲ್ಲ?

ಸಾಧಾರಣವಾಗಿ ಅಷ್ಟಮಿಯ ದಿನ ಯಾವ ಶುಭಕಾರ್ಯವನ್ನೂ ಮಾಡುವುದಿಲ್ಲ. ಆದರೆ ಗೋಕುಲಕ್ಕೆ ಅಷ್ಟಮಿ ತುಂಬಾ ಒಳ್ಳೆಯದೇ ಆಯಿತು. ಗೋ ….. ಎಂದರೇನು? ಸಂಸ್ಕ್ರತದಲ್ಲಿ ‘ಜ್ಞಾನ’ ಎಂದೂ ಅರ್ಥವಿದೆ. ಗೋಕುಲ ಅಂದರೆ ಜ್ಞಾನದ ಕುಲ.

ಜ್ಞಾನಕ್ಕೆ, ಆಧ್ಯಾತ್ಮಿಕಕ್ಕೆ ಅಷ್ಟಮಿ ತುಂಬಾ ಶ್ರೇಷ್ಠ. ಕೃಷ್ಣನ ಜನನವಾಯಿತು ಅಂದರೆ ಜ್ಞಾನದ ಕಿರಣದ ಉದಯವಾಯಿತು. ಆ ದಿನ ಜ್ಞಾನದ ಆವಿರ್ಭಾವವಾಯಿತು. ಜ್ಞಾನದ ಕುಲಕ್ಕೆ ಒಳ್ಳೆಯದಾಯ್ತು.

ಗೋಕುಲಕ್ಕೆ ಕೃಷ್ಣ ಬಂದ ತಕ್ಷಣ ಅಲ್ಲಿ ಆನಂದದ ಉದಯವೇ ಆಯ್ತು. ಎಲ್ಲೆಡೆಯೂ ಸಂಭ್ರಮ, ಉಲ್ಲಾಸ, ಉತ್ಸಾಹದ ಉತ್ಸವ ತಾನೇ ತಾನಾಯ್ತು! ಅದಕ್ಕೆ ಗೋಕುಲಾಷ್ಟಮಿ ಅಂತ ಹೇಳುತ್ತೀವಿ.

ಎಲ್ಲಾ ಜ್ಞಾನದ ಸಾರ ಭಗವದ್ಗೀತೆ.  ಅಷ್ಟಮಿಯ ದಿನ ಜ್ಞಾನದ ಕುಲಕ್ಕೆ ದೀಪ ಹಚ್ಚಿದ ಹಾಗೆ ಬೆಳಕು ಉಂಟಾಯಿತು.

ಯೋಗೀಶ್ವರ. ಜಗದ್ಗುರು ಎನಿಸಿದ ಗೀತಾಚಾರ್ಯರಾದ ಶ್ರೀ ಕೃಷ್ಣನ ಆಗಮನವಾಯ್ತು. ಅವತಾರವಾಯ್ತು.

* * * * *

ಪೂರ್ಣಾವತಾರ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೧.೦೮.'೧೩ರಂದು ಪ್ರಕಟವಾಗಿತ್ತು)

ನಂದ ಕಂದ ಮುಕುಂದನ ಆಗಮನದಿಂದ ಗೋಕುಲವು ಸಂಭ್ರಮಿಸುತ್ತಿದ್ದರೆ, ಅಲ್ಲಿ, ಮಥುರಾನಗರಿಯಲ್ಲಿ ಭಯದ ವಾತಾವರಣ ಉಂಟಾಯಿತು.

ಕೃಷ್ಣ ಹುಟ್ಟುವ ಎಷ್ಟೋ ಮುಂಚೆಯೇ, ಅವನು ಹುಟ್ಟುತ್ತಾನೆ ಅಂತ ಗೊತ್ತಾದ ತಕ್ಷಣವೇ ಅವನ ಅಪ್ಪ, ಅಮ್ಮನನ್ನು ಜೈಲಿಗೆ ಹಾಕಿಬಿಟ್ಟರು. ಆಮೇಲೆ ಹುಟ್ಟಿದ. ತಕ್ಷಣ ತಂದೆ ತಾಯಿಯಿಂದ ದೂರ ಆಗಬೇಕಾಯಿತು. ಚಿಕ್ಕಮಗು ಆಗಿದ್ದಾಗಿಂದಲೇ ಎಂಥೆಂಥ ಅಸುರರನ್ನೆಲ್ಲಾ ಕೊಲ್ಲಬೇಕಾಯ್ತು!

ಕೃಷ್ಣ ಹೋದಲೆಲ್ಲಾ ಒಂದಲ್ಲ ಒಂದು ಜಂಜಡ, ಪರದಾಟ, ಸಮಸ್ಯೆ. ಶ್ರೀ ಕೃಷ್ಣನ ಜೀವನದ ದುಃಖವನ್ನು, ಕಷ್ಟಗಳನ್ನು ಬೇರೆ ಯಾವ ಜೀವಿಯೂ ಸಹಿಸಲು ಸಾಧ್ಯವೇ ಇಲ್ಲ. ಆದರೂ ಅ ಸಮಸ್ಯೆಗಳ, ಸಂಕಷ್ಟಗಳ ಮಧ್ಯದಲ್ಲಿಯೇ ನಸುನಗುತ್ತಾ, ಪ್ರಸನ್ನನಾಗಿ, ಸಂತೋಷವನ್ನು, ಆನಂದವನ್ನು ಅಭಿವ್ಯಕ್ತಿಸುತ್ತಿದ್ದ. ಪ್ರೇಮ ಸ್ವರೂಪನಾದ ಪರಮಾತ್ಮ.

ಅದಕ್ಕೇ ಕೃಷ್ಣನನ್ನು ಪೂರ್ಣಜ್ಞಾನಿ ಎನ್ನುವುದು. ಪೂರ್ಣಾವತಾರ ಎನ್ನುವುದು. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಶ್ರೀಕೃಷ್ಣ ಪರಿಪೂರ್ಣನಾಗಿದ್ದಾನೆ. ಸರ್ವವ್ಯಾಪ್ತವಾದ ಆ ಚೇತನವು ನಮ್ಮಲ್ಲಿಯೂ ಇದೆ. ಅದು ಬೆಳಗುವಂತೆ ಮಾಡಿಕೊಳ್ಳಬೇಕಷ್ಟೇ.

* * * * *

ಕೃಷ್ಣ ತತ್ವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೨.೦೮.'೧೩ರಂದು ಪ್ರಕಟವಾಗಿತ್ತು)

ಕೃಷ್ಣ ಎಂದರೆ ಅತ್ಯಂತ ಆಕರ್ಷಣೀಯ ಎಂದರ್ಥ. ಯಾವುದೇ ಆಕರ್ಷಣೆಯು ಎಲ್ಲೇ ಉಂಟಾದರೂ ಅದು ಕೃಷ್ಣನಿಂದಲೇ, ಅದೇ ಕೃಷ್ಣ ತತ್ವ. ಅದು ಸರ್ವವ್ಯಾಪಿ. ಕೃಷ್ಣನು ಆ ನಿರಾಕಾರವಾದ ತತ್ವದ ಕೇಂದ್ರ. ಅವನೇ ದೈವತ್ವ.

ಸಾಮಾನ್ಯವಾಗಿ ಜನರು ಯಾವುದರಿಂದ ಆಕರ್ಷಿತರಾದಾಗಲೂ ಆ ಆಕರ್ಷಣೆಯ ಹಿಂದಿರುವ ದೈವೀ ಚೇತನವನ್ನು ಗುರುತಿಸುವುದಿಲ್ಲ. ಆಕರ್ಷಣೆಗೆ ಕಾರಣವನ್ನು ವ್ಯಕ್ತಿಯಲ್ಲಿಯೋ, ವಸ್ತುವಿನಲ್ಲಿಯೋ, ಪರಿಸ್ಥಿತಿಯಲ್ಲಿಯೋ ಕಂಡುಕೊಳ್ಳುತ್ತಾರೆ.

ಇದು ತಿರುಳನ್ನು ಬಿಟ್ಟು ಬಿಟ್ಟು ಹೊರಗಿನ ಸಿಪ್ಪಯನ್ನು ಹಿಡಿದುಕೊಂಡ ಹಾಗೆ. ಆಗ ಪರಿಣಾಮವಾಗಿ ನಿಮ್ಮ ಕೈಯಲ್ಲಿ ಸಿಪ್ಪೆ ಮಾತ್ರವೇ ಉಳಿಯುವುದು!

ರಾಧೆಯ ಹಾಗೆ ಚತುರರಾಗಬೇಕು. ‘ಕೃಷ್ಣಮಯಿ’ಯಾದ ಆ ರಾಧೆಯ ಜಗತ್ತೆಲ್ಲವೂ ಕೃಷ್ಣಮಯವೇ ಆಗಿತ್ತು! ಆಕರ್ಷಣೆ ಇರುವ ಕಡೆಯಲ್ಲೆಲ್ಲಾ ಕೃಷ್ಣನನ್ನೇ ಕಾಣಲು ನಿಮಗೆ ಸಾಧ್ಯವಾದರೆ ನೀವು ರಾಧೆಯೇ ಆಗುವಿರಿ. ಆಗ ನೀವು ಯಾವಾಗಲೂ ನಿಮ್ಮ ಕೇಂದ್ರದಲ್ಲಿಯೇ ಇರುತ್ತೀರ.

ಸೌಂದರ್ಯ, ಸಂತೋಷ, ಸತ್ಯಗಳಿರುವ ಕಡೆಗೇ ಓಡುವುದು ಮನಸ್ಸಿನ ಸ್ವಭಾವ. ಅದಕ್ಕೇ ಕೃಷ್ಣ ಅರ್ಜುನನಿಗೆ – ‘ಸುಂದರವಾಗಿರುವುದರಲ್ಲಿ ಸೌಂದರ್ಯ, ಬಲಿಷ್ಠವಾಗಿರುವುದರಲ್ಲಿ ಬಲ, ಹಾಗೂ ಜ್ಞಾನಿಯಲ್ಲಿರುವ ವಿವೇಕವೇ ನಾನು’ – ಎಂದು ಹೇಳ್ತಾನೆ. ಹೀಗೆ ಅವನು ಮನಸ್ಸನ್ನು ಆಕರ್ಷಿಸಿ ತನ್ನಿಂದ ಅದು ದೂರ ಸರಿಯದಂತೆ ಮಾಡುತ್ತಾನೆ.

* * * * *

ಅಸೂಯಾ – ಅನಸೂಯಾ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೪.೦೮.'೧೩ರಂದು ಪ್ರಕಟವಾಗಿತ್ತು)

ರ್ಜುನನು ಅಸೂಯಾರಹಿತನಾಗಿರುವುದರಿಂದಲೇ ಅವನಿಗೆ ‘ರಾಜಗುಹ್ಯ’ ಎಂದರೆ ಉತ್ಕಷ್ಟವಾದ ರಹಸ್ಯವನ್ನು ತಿಳಿಸುತ್ತಿರುವುದಾಗಿ ಕೃಷ್ಣ ಹೇಳುತ್ತಾನೆ.

ಅಸೂಯೆ ಎಂದರೆ, ದೋಷವನ್ನು ಹುಡುಕುವ ಹಾಗೂ ಎಲ್ಲದರಲ್ಲೂ, ಉತ್ತಮವಾಗಿರುವುದರಲ್ಲಿಯೂ ದುರುದ್ದೇಶವನ್ನು ಕಾಣುವ ಮನಃಸ್ಥಿತಿ.

ಈಗ ನಿಮಗೊಂದು ಗೆಳೆತನವಿರುತ್ತೆ. ಹತ್ತು ವರ್ಷಗಳ ನಂತರ ಎನೋ ದೋಷ ಕಂಡುಬರುತ್ತೆ. ಆ ಸ್ನೇಹದಿಂದ ದೂರವಿರಲು ನಿರ್ಧರಿಸುತ್ತೀರಿ. ಈಗ ನೀವು ಆ ಸಮಗ್ರ ಬಾಂದವ್ಯದಲ್ಲಿ ಒಳ್ಳೆಯದೇನನ್ನೂ ಕಾಣಲಾರಿರಿ. ಅಸೂಯೆ ಎಂದರೆ ಇದೇ. ಆಧ್ಯಾತ್ಮ ಮಾರ್ಗದಲ್ಲಿ ಇದ್ದುದೆಲ್ಲವೂ ದೋಷಯುಕ್ತವೆಂದು ಭಾವಿಸುತ್ತೀರಿ. ಇದೇ ಅಸೂಯೆ.

ಜ್ಞಾನವು ಪ್ರಜ್ಞೆಯ ಬೇರೆ ಬೇರೆ ಸ್ತರಗಳಲ್ಲಿ ಭಿನ್ನ ಭಿನ್ನವಾಗಿರುತ್ತೆ. ನೀವು ಒಂದು ನಿರ್ಧಿಷ್ಟವಾದ ಪ್ರಜ್ಞೆಯ ಮಟ್ಟದಲ್ಲಿ, ಅರಿವಿನ ಹಂತದಲ್ಲಿ ‘ಅನಸೂಯ’ರಾಗುತ್ತೀರಿ. ‘ಅನಸೂಯ’ ಎಂದರೆ ದೋಷವನ್ನರಸುವ ದೃಷ್ಟಿಯಿಂದ ಮುಕ್ತರಾಗುವುದು ಎಂದು ಅರ್ಥ.

ತಪ್ಪು ಕಂಡುಹಿಡಿಯುವ ದೃಷ್ಟಿಯಿಂದ ಪೂರ್ಣವಾಗಿ ಮುಕ್ತರಾಗದಿದ್ದಾಗ, ಜ್ಞಾನವನ್ನು ಪಡೆಯುವುದರಿಂದ ಪ್ರಯೋಜನ ಆಗುವುದಿಲ್ಲ. ಅದು ಅರಳಲು ಸಾಧ್ಯವಾಗುವುದಿಲ್ಲ.

ಕನ್ನಡಿಯ ಮೇಲೆ ಧೂಳಿದ್ದರೆ ಅದನ್ನು ಒರೆಸಬಹುದು. ಕಣ್ಣಿನಲ್ಲಿಯೇ ಪೊರೆ ಬಂದಿದ್ದರೆ? ಆಗ ಪೊರೆಯನ್ನು ನಿವಾರಿಸಬೇಕು. ಈ ಜಗತ್ತು ಮಂಕಾಗಿ ಕಾಣುತ್ತಿರುವುದು ಕೇವಲ ನನ್ನ ದೃಷ್ಟಿಯಿಂದ ಮಾತ್ರ ಎಂದು ಅರಿಯುತ್ತದೆ. ಅನಸೂಯ, ಅಲ್ಲಿಗೆ ಸಮಸ್ಯೆಯ ಅರ್ಧಭಾಗ ಪರಿಹಾರವಾದಂತೆಯೇ!

* * * * *