ಗುರುವಾರ, ಆಗಸ್ಟ್ 29, 2013

ದೈವವು ವ್ಯಕ್ತಿಯಲ್ಲ, ಶಕ್ತಿ

ಅಗಸ್ಟ್ ೨೯, ೨೦೧೩
ಬೆಂಗಳೂರು, ಭಾರತ


 ಇವತ್ತು ಆಚರಣೆಯ ಒಂದು ಸಮಯವಾಗಿದೆ. ನಮ್ಮ ಸ್ವಯಂಸೇವಕರಿಂದ ೧೧೦೦ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲಾಗಿದೆ (ಅನ್ನಕೂಟ ಅಥವಾ ಗೋವರ್ಧನ ಪೂಜೆ: ಶ್ರೀಕೃಷ್ಣ ಪರಮಾತ್ಮನು ಗೋವರ್ಧನ ಪರ್ವತವನ್ನು ಎತ್ತಿ ಇಂದ್ರ ದೇವನನ್ನು ಪರಾಜಯಗೊಳಿಸಿದ ದಿನವನ್ನು ನೆನಪಿಸುವ ಸಂದರ್ಭವನ್ನು ಉಲ್ಲೇಖಿಸುತ್ತಾ). ನಾವು ಜ್ಞಾನದಲ್ಲಿ ಇನ್ನೂ ಆಳಕ್ಕೆ ಹೋದಾಗ, ಪ್ರತಿದಿನವೂ ಒಂದು ಆಚರಣೆಯಾಗುತ್ತದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳಿರುವ ಕೆಲವು ವಿಷಯಗಳನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು.

ಶ್ರೀಕೃಷ್ಣ ಪರಮಾತ್ಮನು ಹೇಳಿರುವ ಮೊದಲನೆಯ ವಿಷಯವೆಂದರೆ, ’ಬಾ, ನನ್ನಲ್ಲಿ ಪೂರ್ಣ ಶರಣಾಗತಿಯನ್ನು ಪಡೆದುಕೋ ಮತ್ತು ನಾನು ನಿನ್ನನ್ನು ನಿನ್ನ ಎಲ್ಲಾ ಪಾಪಗಳು ಹಾಗೂ ನಕಾರಾತ್ಮಕತೆಗಳಿಂದ ಮುಕ್ತಗೊಳಿಸುವೆನು. ನೀನು ನಿನ್ನ ಸ್ವಂತ ಪ್ರಯತ್ನಗಳಿಂದ ನಿನ್ನನ್ನು ನಿನ್ನ ಪಾಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ’.

ಅವನು ಹೇಳಿರುವ ಎರಡನೆಯ ವಿಷಯವೆಂದರೆ, ’ಎಲ್ಲರನ್ನೂ ನನ್ನಲ್ಲಿ ನೋಡು ಮತ್ತು ಎಲ್ಲರಲ್ಲೂ ನನ್ನನ್ನು ಮಾತ್ರ ನೋಡು’. ಇದರರ್ಥ, ಎಲ್ಲರನ್ನೂ ಮತ್ತು ಎಲ್ಲವನ್ನೂ ಶ್ರೀಕೃಷ್ಣ ಪರಮಾತ್ಮನ ಒಂದು ಪ್ರಕಟನೆಯಾಗಿ ನೋಡುವುದೆಂದು. ಗೀತೆಯಲ್ಲಿ ಅವನು ಅರ್ಜುನನಿಗೆ ಹೀಗೆಂದು ಹೇಳುತ್ತಾನೆ, ’ನಾನೊಬ್ಬ ವ್ಯಕ್ತಿಯಲ್ಲ (ಈ ಸೀಮಿತ ಭೌತಿಕ ಶರೀರಕ್ಕೆ ಸೀಮಿತವಾಗದ). ನಾನೊಂದು ಶಕ್ತಿ; ನಾನು ಆನಂದ. ನಾನು ಎಲ್ಲರಲ್ಲೂ ವಾಸಿಸುತ್ತೇನೆ, ಹಾಗಾಗಿ ನಿನ್ನ ಸುತ್ತಲಿರುವ ಎಲ್ಲರಲ್ಲೂ ನನ್ನನ್ನು ನೋಡು’.

ನಾವು ಕೇವಲ ಈ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಆಗ ಅದು ಸಾಕು. ಒಂದು ಅಂಶವು ಅರ್ಜುನನಿಗೆ ಸಂಬಂಧಿಸಿದುದು, ಎರಡನೆಯದ್ದು ರಾಧಾ ದೇವಿಗೆ. ಅರ್ಜುನನು ಶರಣಾಗತನಾಗಿ ಪರಮಾತ್ಮನ ಆಶ್ರಯ ಪಡೆಯಬೇಕಾಯಿತು, ಆದರೆ ರಾಧಾ ದೇವಿಗೆ ಹಾಗೆ ಮಾಡಬೇಕಾಗಿ ಬರಲಿಲ್ಲ ಯಾಕೆಂದರೆ, ಅವಳು ಶ್ರೀಕೃಷ್ಣ ಪರಮಾತ್ಮನನ್ನು ಎಲ್ಲೆಡೆಯೂ, ತನ್ನ ಸುತ್ತಲಿರುವ ಎಲ್ಲದರಲ್ಲೂ ನೋಡುತ್ತಿದ್ದಳು. ಅವಳಿಗೆ ಬೇರೇನನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಈ ಎರಡನ್ನೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಶ್ರೀಕೃಷ್ಣ ಪರಮಾತ್ಮನು ಬೃಹತ್ತಾದ ಗೋವರ್ಧನ ಪರ್ವತವನ್ನು ಹೇಗೆ ಸಂಪೂರ್ಣವಾಗಿ ತನ್ನ ಕಿರುಬೆರಳಿನ ಮೇಲೆ ಎತ್ತಿಕೊಂಡನು ಎಂಬ ಕಥೆಯನ್ನು ನೀವೆಲ್ಲರೂ ಕೇಳಿರಬೇಕು. ’ಗೋ’ ಎಂದರೆ ಜ್ಞಾನ ಮತ್ತು ಜ್ಞಾನವು ಒಂದು ಬೃಹತ್ತಾದ ಪರ್ವತದಂತೆ ಬಹಳ ಅಗಾಧವಾಗಿದೆ. ಆದರೆ ಜ್ಞಾನದಲ್ಲಿ ಅರಳಿರುವವರೊಬ್ಬರು ಒಂದು ಬೃಹತ್ತಾದ ಪರ್ವತವನ್ನು ಕೂಡಾ ಬಹಳ ಸುಲಭವಾಗಿ ಮತ್ತು ಅನಾಯಾಸವಾಗಿ, ಕೇವಲ ತಮ್ಮ ಕಿರುಬೆರಳನ್ನುಪಯೋಗಿಸಿ ಎತ್ತಬಲ್ಲರು. ನಿಮ್ಮ ಕಿರುಬೆರಳಿನಿಂದ ನೀವು ಏನನ್ನಾದರೂ ಎತ್ತಬಲ್ಲಿರೇ? ಕಿರುಬೆರಳನ್ನುಪಯೋಗಿಸಿ ನೀವು ನಿಜವಾಗಿ ಏನನ್ನೂ ಎತ್ತಲು ಸಾಧ್ಯವಿಲ್ಲ, ಅಲ್ಲವೇ? ಆದರೆ ಇಲ್ಲಿ, ಶ್ರೀಕೃಷ್ಣ ಪರಮಾತ್ಮನು ತನ್ನ ಕಿರುಬೆರಳನ್ನುಪಯೋಗಿಸಿ ಇಡೀ ಗೋವರ್ಧನ ಪರ್ವತವನ್ನು ಎತ್ತಿದನು. ಗೋವರ್ಧನ ಎಂಬ ಪದದ ಅರ್ಥವೇನೆಂದರೆ, ಯಾವುದು ನಮ್ಮ ಜ್ಞಾನವನ್ನು ವರ್ಧಿಸುವುದೋ ಮತ್ತು ಹೆಚ್ಚು ಮಾಡುವುದೋ ಅದು. ಹೀಗಾಗಿ ನಾವು ಜ್ಞಾನದ ಚೌಕಟ್ಟಿನಲ್ಲಿ ನಿಲ್ಲುವಾಗ, ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದ (ದುಃಖ ಮತ್ತು ಯಾತನೆಗಳನ್ನು ಸೂಚಿಸುತ್ತಾ) ನಾವೊಂದು ಸಂರಕ್ಷಣೆಯನ್ನು, ಒಂದು ಕವಚವನ್ನು ಪಡೆಯುತ್ತೇವೆ. ಪ್ರಪಂಚದ ದುಃಖಗಳಿಂದ ಆಶ್ರಯ ಪಡೆದುಕೊಳ್ಳಲು, ನೀವು ಗೋವರ್ಧನ ಪರ್ವತದ (ಜ್ಞಾನ) ಸಂರಕ್ಷಣೆಯಡಿಗೆ ಬರಬೇಕು, ಮತ್ತು ಹೀಗೆ ಮಾಡುವುದರಿಂದ ನೀವು ಅರಳುವುದು ಮುಂದುವರಿಯುತ್ತದೆ ಹಾಗೂ ಜ್ಞಾನದಲ್ಲಿ ಹೆಚ್ಚು ಹೆಚ್ಚು ಪ್ರಗತಿ ಹೊಂದುವಿರಿ.

’ಗೋ’ ಎಂಬ ಪದಕ್ಕೆ ನಾಲ್ಕು ಬೇರೆ ಬೇರೆ ಅರ್ಥಗಳಿವೆ: ಜ್ಞಾನ, ಗಮನ, ಪ್ರಾಪ್ತಿ ಮತ್ತು ಮೋಕ್ಷ. ಗಮನವೆಂದರೆ, ಜೀವನದಲ್ಲಿ ಮುಂದಕ್ಕೆ ಸಾಗುತ್ತಾ ಇರುವುದು ಮತ್ತು ಭೂತಕಾಲದ ಕಡೆಗೆ ಹಿಂದಿರುಗಿ ನೋಡದಿರುವುದು. ಪ್ರಾಪ್ತಿಯೆಂದರೆ ನೀವು ಪಡೆದಿರುವ ಎಲ್ಲದರ ಕುರಿತು ವಿಚಾರ ಮಾಡುವುದು. ನೀವು ನಿಮ್ಮ ಜೀವನದ ಕಡೆಗೆ ತಿರುಗಿ ನೋಡಿ, ನೀವು ಏನನ್ನು ಪಡೆದಿರುವಿರಿ ಎಂಬುದರ ಕುರಿತು ವಿಚಾರ ಮಾಡುವಾಗ, ನಿಮ್ಮ ಜೀವನದಲ್ಲಿ ನೀವು ಜ್ಞಾನವಲ್ಲದೆ ಬೇರೇನನ್ನೂ ಪಡೆದಿಲ್ಲವೆಂಬುದು ನಿಮಗೆ ಮನದಟ್ಟಾಗುವುದು (ಅರ್ಥ: ಜೀವನದಲ್ಲಿ ಪಡೆದಿರುವ ಬೇರೆ ಎಲ್ಲವೂ ಕ್ಷಣಿಕ ಅಥವಾ ತಾತ್ಕಾಲಿಕವಾದುದು). ನಿಮ್ಮ ಮುಂದೆ ಸಾವು ಬರುವಾಗ, ನಿಮಗೆ ನೀವೇ ಉತ್ತರ ಕೊಡಬೇಕಾದಂತಹ ಎರಡೇ ಎರಡು ಪ್ರಶ್ನೆಗಳಿರುವುವು: ಒಂದನೆಯದು, ನೀವು ಎಷ್ಟು ಜ್ಞಾನವನ್ನು ಪಡೆದಿರುವಿರಿ ಎಂಬುದು ಮತ್ತು ಎರಡನೆಯದು, ನಿಮ್ಮ ಸುತ್ತಲಿರುವ ಎಲ್ಲರಿಗೂ ನೀವು ಎಷ್ಟು ಪ್ರೀತಿಯನ್ನು ನೀಡಿರುವಿರಿ ಎಂಬುದು. ಜೀವನದಲ್ಲಿ ಕೊಡುವ ಮತ್ತು ಪಡೆಯುವ ಪ್ರಕ್ರಿಯೆ ಇರುವುದು ಇಷ್ಟೇ. ಪಡೆಯುವುದರಲ್ಲಿ, ನೀವು ಎಷ್ಟು ಜ್ಞಾನವನ್ನು ಪಡೆದಿರುವಿರಿ ಎಂಬುದರ ಬಗ್ಗೆ ವಿಚಾರ ಮಾಡಬೇಕು ಹಾಗೂ ಕೊಡುವುದರಲ್ಲಿ, ಎಲ್ಲರೊಂದಿಗೂ ನೀವು ಎಷ್ಟು ಪ್ರೀತಿಯನ್ನು ಹಂಚಿಕೊಂಡಿರುವಿರಿ ಎಂಬುದನ್ನು ನೀವು ನೋಡಬೇಕು. ಅಂತಹ ಜ್ಞಾನವು ನಿಮ್ಮ ಜೀವನದಲ್ಲಿ ಹೆಚ್ಚಾದಾಗ, ಅದುವೇ ಪ್ರಾಪ್ತಿ. ಹೀಗೆ, ಪರಮಾತ್ಮನು ತನ್ನ ಕಿರುಬೆರಳಿನಿಂದ ಸುಲಭವಾಗಿ ಎತ್ತಿದ ಗೋವರ್ಧನದ ಸಂರಕ್ಷಣೆಯಲ್ಲಿ ನೀವಿರುವಾಗ ಈ ಎಲ್ಲಾ ನಾಲ್ಕು: ಜ್ಞಾನ, ಗಮನ, ಪ್ರಾಪ್ತಿ ಮತ್ತು ಮೋಕ್ಷಗಳು ನಿಮ್ಮ ಬಳಿ ಬರುತ್ತವೆ.

ಶ್ರೀಕೃಷ್ಣ ಪರಮಾತ್ಮನು ಪರ್ವತವನ್ನು ಎತ್ತಿದಾಗ, ಅವನ ಇತರ ಎಲ್ಲಾ ಗೊಲ್ಲರು ಕೂಡಾ ಪರ್ವತದ ಕೆಳಗೆ ಅವನೊಂದಿಗೆ ನಿಂತರು ಮತ್ತು ಪರ್ವತಕ್ಕೆ ಆಧಾರ ನೀಡಲು ತಮ್ಮ ಬಿದಿರಿನ ಕೋಲುಗಳನ್ನು ಇಟ್ಟರು. ತಾವು ಕೂಡಾ ಇದರ ಒಂದು ಭಾಗವಾಗಿರುವೆವೆಂದು ಹಾಗೂ ಯಾವುದೋ ಒಂದು ರೀತಿಯಲ್ಲಿ ತಾವು ಕೊಡುಗೆಯನ್ನು ನೀಡುತ್ತಿರುವೆವೆಂದು ಭಾವಿಸಲು ಅವರು ಬಯಸಿದ್ದರು. ತಮ್ಮಲ್ಲಿನ ಕರ್ತೃತ್ವದ ಆ ಭಾವವನ್ನು ತೃಪ್ತಗೊಳಿಸಲು ಅವರು ಕೂಡಾ ಬಯಸಿದ್ದರು. ಇದರಿಂದ ಅರ್ಥವಾಗುವುದೇನೆಂದರೆ: ದೇವರು ಎಲ್ಲವನ್ನೂ ಮಾಡುವನಾದ್ದರಿಂದ, ನಾವು ಯಾವುದೇ ಪ್ರಯತ್ನವನ್ನು ಯಾಕೆ ಮಾಡಬೇಕು ಎಂದು ನಾವು ಯೋಚಿಸಬಾರದು. ಇಲ್ಲ, ನೀವು ಕೂಡಾ ನಿಮ್ಮ ಪ್ರಯತ್ನಗಳನ್ನು ಮಾಡಬೇಕು ಮತ್ತು ಇತರರೊಂದಿಗೆಯೇ ನಿಮ್ಮ ಕೋಲನ್ನು ಹಾಕಬೇಕು (ಪರ್ವತವನ್ನು ಎತ್ತಿಹಿಡಿಯುವಲ್ಲಿ ಕೊಡುಗೆ ನೀಡಲು). ದೇವರು ಹೇಗಿದ್ದರೂ ಎಲ್ಲವನ್ನೂ ಮಾಡುತ್ತಿದ್ದಾರೆ, ಆದರೆ ಅದರರ್ಥ ನೀವು ಏನನ್ನೂ ಮಾಡದೆಯೇ ಸುಮ್ಮನಿರಬೇಕೆಂದಲ್ಲ. ಇಲ್ಲ, ನೀವು ಕೂಡಾ ನಿಮ್ಮ ಪ್ರಯತ್ನಗಳನ್ನು ಕೊಡುಗೆಯಾಗಿ ನೀಡಬೇಕು ಮತ್ತು ನಿಮ್ಮ ಕೋಲನ್ನು ಪರ್ವತದ ಕೆಳಗೆ ಇಡಬೇಕು. ಹೀಗೆ ಇಲ್ಲಿನ ಆಳವಾದ ಅರ್ಥವೇನೆಂದರೆ, ನಾವು ನಮ್ಮ ಕರ್ತವ್ಯವನ್ನು ಮತ್ತು ನಾವೇನನ್ನು ಮಾಡಬೇಕೋ ಅದನ್ನು ಮಾಡಬೇಕು.

ಆಲಸಿಯಾಗಿ ಮತ್ತು  ನಿರ್ಲಕ್ಷ್ಯವಾಗಿ ಇರುವುದಕ್ಕೆ ಬದಲಾಗಿ, ನಾವು ಮುನ್ನೆಚ್ಚರಿಕೆಯಿಂದಿರಬೇಕು ಮತ್ತು ಜವಾಬ್ದಾರರಾಗಬೇಕು. ಇದನ್ನು ಮಾಡುವುದು, ಕರ್ಮ, ಜ್ಞಾನ ಮತ್ತು ಭಕ್ತಿ ಈ ಮೂರನ್ನೂ ಒಗ್ಗೂಡಿಸುತ್ತದೆ.

ಅದು ಹೇಗೆ ಹಾಗೆ? ತನ್ನನ್ನು ದುಃಖ ಮತ್ತು ಯಾತನೆಗಳಿಂದ ಕಾಪಾಡಿಕೊಳ್ಳಲಿಕ್ಕಾಗಿ ಒಬ್ಬನು ಸುರಕ್ಷತೆಗಾಗಿ, ಪ್ರೇಮ ಮತ್ತು ನಂಬಿಕೆಗಳ ಒಂದು ಭಾವ; ಅಂದರೆ ಭಕ್ತಿಯಿಂದ ದೇವರನ್ನು ಕೂಗುತ್ತಾನೆ. ನಿಮ್ಮದೇ ಕೋಲನ್ನು ಪರ್ವತದ ಕೆಳಗೆ ಇಡುವುದು (ಒಬ್ಬನು ತನ್ನ ಪ್ರಯತ್ನಗಳನ್ನು ಮಾಡುವುದು ಅಥವಾ ತನ್ನ ಕರ್ತವ್ಯವನ್ನು ಮಾಡುವುದು) ಕರ್ಮ ಯೋಗವಾಗಿದೆ, ಮತ್ತು ದೇವರು ಎಲ್ಲವನ್ನೂ ಎತ್ತಿಹಿಡಿಯುತ್ತಾನೆ ಹಾಗೂ ನಿಗಾ ವಹಿಸುತ್ತಾನೆ ಎಂದು ತಿಳಿದಿರುವುದು ಜ್ಞಾನವಾಗಿದೆ. ಜೀವನದಲ್ಲಿ ಎಲ್ಲಾ ಮೂರೂ ಮುಖ್ಯವಾಗಿವೆ.

ಪ್ರಶ್ನೆ: ಗುರುದೇವ, ಶ್ರೀಕೃಷ್ಣ ಪರಮಾತ್ಮನು ಇತರರ ಮನೆಗಳಲ್ಲಿದ್ದ, ಬೆಣ್ಣೆಯಿಂದ ತುಂಬಿದ ಮಡಕೆಗಳನ್ನು ಒಡೆಯಲು ಪ್ರಾರಂಭಿಸಿದನು ಯಾಕೆಂದರೆ, ಆ ಸಮಯದಲ್ಲಿ ಮಕ್ಕಳಿಗೆ ಸಾಕಷ್ಟು ಹಾಲು ಮತ್ತು ಬೆಣ್ಣೆ ಸಿಗುತ್ತಿರಲಿಲ್ಲ. ಇಂದು ಕೂಡಾ ಅದೇ ಪರಿಸ್ಥಿತಿಯು ಪ್ರಚಲಿತವಾಗಿದೆ. ನಾವೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್:
ಬೆಣ್ಣೆಯನ್ನು ಮಡಕೆಗಳಲ್ಲಿ ಸಂಗ್ರಹಿಸಿ, ಎತ್ತರದಲ್ಲಿ ಮಕ್ಕಳಿಗೆ ಸಿಗದಂತೆ ಇಡಲಾಗುತ್ತಿತ್ತು. ಅದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು ಹತ್ತಿ ಮಡಕೆಗಳನ್ನು ಒಡೆಯುತ್ತಿದ್ದನು. ಈ ಕಥೆಯು ಒಂದು ರೀತಿಯಲ್ಲಿ ಸಾಂಕೇತಿಕವೂ ಆಗಿದೆ. ಇವತ್ತು ಮಕ್ಕಳಿಗೆ ಏನು ಬೇಕೋ ಅದನ್ನು ಅವರಿಗೆ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಪ್ರಶ್ನೆ: ಗುರುದೇವ, ಇವತ್ತಿನ ಕಾಲಕ್ಕೆ ಶ್ರೀಕೃಷ್ಣ ಪರಮಾತ್ಮನ ಯಾವ ರೂಪವು ಹೆಚ್ಚು ಮುಖ್ಯವಾಗಿದೆ: ಸುದರ್ಶನ ಚಕ್ರವನ್ನು ಹಿಡಿದಿರುವ ರೂಪವೇ; ಕೊಳಲನ್ನು ಹಿಡಿದಿರುವ ರೂಪವೇ; ಅಥವಾ ಒಂದು ರಥದ ಚಕ್ರವನ್ನು ತನ್ನ ಕೈಗಳಿಂದ ಎತ್ತಿಹಿಡಿದಿರುವ ರೂಪವೇ?

ಶ್ರೀ ಶ್ರೀ ರವಿ ಶಂಕರ್:
ಅವುಗಳಲ್ಲಿ ಎಲ್ಲವೂ ಇವತ್ತಿಗೆ ಮುಖ್ಯವೂ ಪ್ರಸಕ್ತವೂ ಆಗಿವೆ. ಜೀವನದಲ್ಲಿ ಕೊಳಲಿಲ್ಲದಿದ್ದರೆ (ಅಂದರೆ ಸಂಗೀತ, ಗಾಯನ, ಮೊದಲಾದವು ಇಲ್ಲದಿದ್ದರೆ), ಆಗ ಜೀವನವು ಬಹಳ ಶುಷ್ಕವೂ, ರುಚಿಯಿಲ್ಲದ್ದೂ ಆಗುತ್ತದೆ. ಮತ್ತು ಒಬ್ಬನಲ್ಲಿ ಧೈರ್ಯ ಹಾಗೂ ಪರಾಕ್ರಮ ಇಲ್ಲದಿದ್ದರೆ, ಆಗ ಕೂಡಾ ಅವನಿಗೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಅದೇ ಸಮಯದಲ್ಲಿ, ಸಮಾಜವು ಅಡೆತಡೆಯಿಲ್ಲದೆ ನಡೆಯುತ್ತಾ ಇರಬೇಕು. ಸಮಾಜವು ಸರಿಯಾಗಿ ಕೆಲಸ ಮಾಡುವುದು ನಿಂತಾಗ ದೇಶದಲ್ಲಿರುವ ಎಲ್ಲವೂ ಕೂಡಾ ನಿಶ್ಚಲವಾಗುತ್ತದೆ. ಇವತ್ತು ಎಲ್ಲಾ ಉದ್ಯಮಿಗಳು ದುಃಖಿತರಾಗಿದ್ದಾರೆ. ತಮ್ಮ ಉದ್ಯಮಗಳು ಮತ್ತು ವ್ಯವಹಾರಗಳು ನಷ್ಟದಲ್ಲಿವೆಯೆಂದೂ, ನಿಂತುಹೋಗಿವೆಯೆಂದೂ ಹಲವು ಕೈಗಾರಿಕೋದ್ಯಮಿಗಳು ದೂರುತ್ತಾರೆ.

ಹೀಗಾಗಬಾರದು. ಅವುಗಳು ಕೂಡಾ ಅಡೆತಡೆಯಿಲ್ಲದೆ ಕೆಲಸ ಮಾಡುತ್ತಿರಬೇಕು. ಹೀಗೆ ಅದು ಅಡೆತಡೆಯಿಲ್ಲದೆ ನಡೆಯುವಂತೆ ಮಾಡಲು ನಿಮಗೆ ಯಾರಾದರೂ ಬೇಕು. ಮತ್ತು ಸುದರ್ಶನ ಚಕ್ರವು ಬಹಳ ಮುಖ್ಯವಾಗಿದೆ. ಇವತ್ತು ನಮ್ಮ ಸಮಾಜದಲ್ಲಿ ಹಲವಾರು ದುಶ್ಯಾಸನರು ಮತ್ತು ಶಕುನಿಯರು ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಾರೆ. ಸಮಾಜದಲ್ಲಿ ಮತ್ತೊಮ್ಮೆ ಅವರಿಗೆ ಅವರ ಸರಿಯಾದ ಜಾಗವನ್ನು ತೋರಿಸಬೇಕಾಗಿದೆ. ಇವತ್ತು ನಮ್ಮ ದೇಶದಲ್ಲಿ ಹಲವಾರು ಶಿಶುಪಾಲರಿದ್ದಾರೆ. ಹಾಗಾಗಿ ಇವತ್ತಿನ ಕಾಲದಲ್ಲಿ ಸುದರ್ಶನ ಚಕ್ರವು ಬಹಳಮಟ್ಟಿಗೆ ಆವಶ್ಯಕವಾಗಿದೆ.

ಪ್ರಶ್ನೆ: ಗುರುದೇವ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅನನ್ಯ ಶರಣ ಭಾವದ ಬಗ್ಗೆ ಮಾತನಾಡಿರುವನು. ದಯವಿಟ್ಟು ಇದರ ಬಗ್ಗೆ ಸ್ವಲ್ಪ ಹೆಚ್ಚು ಮಾತನಾಡಿ. ಹಾಗೆಯೇ ಗೋಪಿ ಭಾವವೆಂದರೇನು ಎಂಬುದರ ಬಗ್ಗೆ ದಯವಿಟ್ಟು ವಿವರಿಸಿ. 

ಶ್ರೀ ಶ್ರೀ ರವಿ ಶಂಕರ್:
ಗೋಪಿ ಭಾವವೆಂದರೆ ಮುಗ್ಧತೆ ಮತ್ತು ಆಳವಾದ ಪ್ರೇಮದ ಒಂದು ಭಾವನೆ. ಗೋಪಿ ಎಂಬ ಪದದ ಅರ್ಥವೇನೆಂದರೆ, ಜ್ಞಾನವನ್ನು ಅಷ್ಟೊಂದು ಪೂರ್ತಿಯಾಗಿ ಮತ್ತು ಸಂಪೂರ್ಣವಾಗಿ, ಬೇರೇನೂ ಉಳಿಯದಂತೆ, ನೆನೆಸಿಟ್ಟು ಕುಡಿದಿರುತ್ತಾರೋ ಅವರು. ಒಬ್ಬರು ಜ್ಞಾನದಲ್ಲಿ ಬಹಳ ಆಳವಾಗಿ ಮುಳುಗಿರುವಾಗ, ಪ್ರೇಮ ಮಾತ್ರ ಉಳಿಯುತ್ತದೆ. ಹೀಗೆ ಅಂತಹ ಒಂದು ಆಳವಾದ ಮತ್ತು ಉನ್ನತ ಸ್ಥಿತಿಯಲ್ಲಿ ವ್ಯಕ್ತಗೊಳಿಸಲ್ಪಡುವುದು ಆ ಅತೀವ ಪ್ರೇಮವಾಗಿದೆ. ಜೀವನದಲ್ಲಿ ಪ್ರೇಮದ ಅಂತಹ ಒಂದು ಸುಂದರವಾದ ಮತ್ತು ತೀವ್ರವಾದ ಭಾವನೆಯು ಉದಯಿಸುವಾಗ, ಅದು ಗೋಪಿ ಭಾವ ಎಂದು ಕರೆಯಲ್ಪಡುತ್ತದೆ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

Focus on responsibility of this day, this moment