ಬುಧವಾರ, ಆಗಸ್ಟ್ 21, 2013

ಮನದೊಳಗಿನ ದೈವವೆ, ನಿನಗೆ ನಮಸ್ಕಾರ

ಅಗಸ್ಟ್ ೨೧, ೨೦೧೩
ಬೆಂಗಳೂರು, ಭಾರತ

ವತ್ತು ರಕ್ಷಾಬಂಧನವಾಗಿದೆ, ಆದುದರಿಂದ ನಾನು ಅದರ ಬಗ್ಗೆ ಸ್ವಲ್ಪ ಮಾತನಾಡುವೆನು. ಈ ದಿನದಂದು ಸಹೋದರಿಯು ಸಹೋದರನ ಕೈಗೆ ಪವಿತ್ರ ದಾರವನ್ನು ಅಥವಾ ಬ್ಯಾಂಡ್‌ನ್ನು ಕಟ್ಟಿ ಅವನಲ್ಲಿ, ತನ್ನನ್ನು ಸದಾಕಾಲವೂ ಸಂರಕ್ಷಿಸುವಂತೆ ಕೇಳಿಕೊಳ್ಳುತ್ತಾಳೆ ಎಂದು ಹೆಚ್ಚಾಗಿ ನಂಬಲಾಗುತ್ತದೆ. ಸಾಮಾನ್ಯವಾಗಿ ಕೇಳಿಬರುವುದು ಮತ್ತು ಹೇಳಲಾಗುವುದು ಇದನ್ನು, ಅಲ್ಲವೇ? ಆದರೆ ಇದು ರಕ್ಷಾಬಂಧನದ ಸಾರ ಮತ್ತು ಉತ್ಸಾಹ ಅಲ್ಲವೇ ಅಲ್ಲ! ರಕ್ಷಾಬಂಧನದ ನಿಜವಾದ ರಹಸ್ಯವೆಂದರೆ, ಒಬ್ಬಳು ಸಹೋದರಿಯು ತನ್ನ ಸಹೋದರನ ಕೈಗೆ ದಾರವನ್ನು ಕಟ್ಟುವಾಗ ಅದು, "ನಾನು ನಿನ್ನನ್ನು ಸದಾಕಾಲವೂ ಸಂರಕ್ಷಿಸುವೆನು" ಎಂದು ಹೇಳುವ ಒಂದು ಸೂಚಕವಾಗಿದೆ. ಹಾಗಾಗಿ ತಮ್ಮ ಸಹೋದರರ ಸಂರಕ್ಷಣೆ ಮತ್ತು ಯೋಗಕ್ಷೇಮಗಳಿಗಾಗಿ ಪ್ರಾರ್ಥಿಸುವುದು ಮತ್ತು ಹಾರೈಸುವುದು ಸಹೋದರಿಯರಾಗಿರುವರು. ಇದುವೇ ರಕ್ಷಾಬಂಧನದ ನಿಜವಾದ ಅರ್ಥ.

ಅದೇ ರೀತಿಯಲ್ಲಿ, ಶ್ರಾವಣೀ ಉಪಾಕರ್ಮವೆಂದರೆ, ಜನಿವಾರವನ್ನು (ಒಬ್ಬನು ಧರಿಸುವ ಪವಿತ್ರ ದಾರ) ನಿಯಮಿತವಾಗಿ ಬದಲಿಸುವ ಕ್ರಿಯೆಯಾಗಿದೆ. ಹೇಳಲ್ಪಟ್ಟ ಎಲ್ಲಾ ಪದ್ಧತಿಗಳನ್ನು ಆಚರಿಸಿ, ಹಳತನ್ನು ತೆಗೆದು, ಹೊಸತನ್ನು ಧರಿಸುವುದು ಇದಾಗಿದೆ. ಜನಿವಾರವನ್ನು ಬದಲಾಯಿಸುವ ಸಮಯದಲ್ಲಿ ಒಬ್ಬನು ಗಾಯತ್ರಿ ಮಂತ್ರವನ್ನು ಉಚ್ಛರಿಸುತ್ತಾನೆ.

ಗಾಯತ್ರಿಯೆಂದರೆ ಐದು ಮುಖಗಳುಳ್ಳ ಮತ್ತು ಒಂದು ತಾವರೆಯ ಮೇಲೆ ಕುಳಿತಿರುವ ದೇವತೆಯಲ್ಲ. ಇದನ್ನು ಸಾಕಷ್ಟು ನಂತರ ಜನರಿಂದ ಒಂದು ಸಾಂಪ್ರದಾಯಿಕ ನಂಬಿಕೆಯನ್ನಾಗಿ ಮಾಡಲಾಯಿತು. ಗಾಯತ್ರಿ ಮಂತ್ರವು ಒಂದು ಸಾಮೂಹಿಕ ಮಂತ್ರವಾಗಿದೆ. ಮಂತ್ರದ ಕೊನೆಯ ಭಾಗದಲ್ಲಿ, "ಧಿಯೋ ಯೋನಃ ಪ್ರಚೋದಯಾತ್" ಎಂದು ಹೇಳಲಾಗಿದೆ. ಹಾಗಾಗಿ ಇದರರ್ಥ, "ದೇವರ ಪ್ರಕಾಶದಿಂದ ಎಲ್ಲರ ಬುದ್ಧಿಯೂ ಬೆಳಗಲಿ" ಎಂದು ಹೇಳುವುದರ ಮೂಲಕ ದೇವರನ್ನು ಪ್ರಾರ್ಥಿಸುವುದಾಗಿದೆ. ಅದು ಒಬ್ಬ ವ್ಯಕ್ತಿಯ ಬುದ್ಧಿ ಮಾತ್ರ ಬೆಳಗುವುದಕ್ಕಾಗಿ ಪ್ರಾರ್ಥಿಸುವುದಲ್ಲ. ಅಲ್ಲ, ಅದು ಸಾಮೂಹಿಕ ಬುದ್ಧಿಗಾಗಿ ಪ್ರಾರ್ಥಿಸುವುದಾಗಿದೆ; ಪ್ರತಿಯೊಬ್ಬ ವ್ಯಕ್ತಿಯ ಬುದ್ಧಿಯೂ ನಕಾರಾತ್ಮಕತೆಯಿಂದ ಮುಕ್ತವಾಗಿ, ದೇವರ ಪ್ರಕಾಶದಿಂದ ಬೆಳಗಲಿ. ಮಂತ್ರವು ಇದನ್ನು ಬಹುವಚನದಲ್ಲಿ ಹೇಳುತ್ತದೆ ಮತ್ತು ಏಕವಚನದಲ್ಲಲ್ಲ. ಅದಕ್ಕಾಗಿಯೇ - "ಭರ್ಗೋ ದೇವಸ್ಯ ಧೀಮಹಿ" ಎಂದು ಹೇಳಲಾಗಿರುವುದು. ಇದರರ್ಥ, "ನಿನ್ನ ದೈವಿಕ ಪ್ರಕಾಶವು ನನ್ನ ಸೀಮಿತ ಮನಸ್ಸಿನ ಎಲ್ಲಾ ಪಾಪಗಳನ್ನು ಭಸ್ಮವಾಗಿ ನಾಶಗೊಳಿಸಲಿ; ಮತ್ತು ನಮ್ಮೆಲ್ಲರ ಬುದ್ಧಿಯು ನಿನ್ನ ದೈವಿಕ ಪ್ರಕಾಶದಿಂದ ಬೆಳಗಲಿ" ಎಂದಾಗಿದೆ. ಇದು ಗಾಯತ್ರಿ ಮಂತ್ರದ ಮೂಲಕ ಮಾಡಲಾಗುವ ಪ್ರಾರ್ಥನೆಯಾಗಿದೆ. ಇದು ದೇವರಿಗೆ ಅರ್ಪಿಸುವ ಅತ್ಯಂತ ಸರ್ವೋಚ್ಛ ಪ್ರಾರ್ಥನೆಯೆಂದು ಪರಿಗಣಿಸಲಾಗುತ್ತದೆ ಮತ್ತು ಅದು ನಿಜವೇ. ಅದು ಸೂಕ್ಷ್ಮ ಸೃಷ್ಟಿಯ ಎಲ್ಲಾ ಜಗತ್ತುಗಳನ್ನೂ ಕೂಡಾ ಒಳಗೊಂಡಿದೆ. ನಮ್ಮದೇ ಶರೀರದೊಳಗೆ ಹಲವಾರು ಜಗತ್ತುಗಳಿವೆ. ನಮ್ಮ ಶರೀರದೊಳಗೆ ಏಳು ಲೋಕಗಳು (ಸೃಷ್ಟಿಯ ಏಳು ಲೋಕಗಳು: ಭೂ, ಭುವಸ್, ಸ್ವರ್, ಮಹಸ್, ಜನಸ್, ತಪಸ್ ಮತ್ತು ಸತ್ಯ ಲೋಕಗಳನ್ನು ಉಲ್ಲೇಖಿಸುತ್ತಾ) ಮತ್ತು ಏಳು ಶಕ್ತಿ ಚಕ್ರಗಳಿವೆ, ಪ್ರತಿಯೊಂದು ಚಕ್ರವು ಒಂದು ನಿರ್ದಿಷ್ಟ ಲೋಕದೊಂದಿಗೆ ಸಂಬಂಧ ಹೊಂದಿದೆ. ನಮ್ಮ ಅಸ್ತಿತ್ವದ ಏಳು ಹಂತಗಳು ಕೂಡಾ ಇವೆ. ಜ್ಞಾನದ ಏಳು ಹಂತಗಳಿವೆ. ಹಾಗಾಗಿ ಗಾಯತ್ರಿ ಮಂತ್ರದ ಮೂಲಕ, ಅಸ್ತಿತ್ವದ ಏಳು ಹಂತಗಳಲ್ಲಿ ಅಭಿವೃದ್ಧಿ ಹೊಂದಿ ಮತ್ತು ಮೇಲಕ್ಕೇರಿ ದೈವಿಕ ಪ್ರಕಾಶದ ಕಡೆಗೆ ಸಾಗಲೆಂದೂ, ನಮ್ಮ ಅಸ್ತಿತ್ವದ ಈ ಏಳು ಹಂತಗಳಲ್ಲಿ ಪ್ರತಿಯೊಂದರಲ್ಲೂ ನಾವು ಸಾಫಲ್ಯತೆಯನ್ನು ಮತ್ತು ತೃಪ್ತಿಯನ್ನು ಅನುಭವಿಸುವಂತಾಗಲಿ ಎಂದೂ ನಾವು ಪ್ರಾರ್ಥಿಸುತ್ತೇವೆ. ಇದು, ಸ್ವೀಕರಿಸಲು ಮತ್ತು ಅನಂತತೆಯೊಂದಿಗೆ ಒಂದಾಗಲು ಸಾಧ್ಯವಾಗಲಿರುವ ಒಂದು ಪ್ರಾರ್ಥನೆಯಾಗಿದೆ.

ನೋಡಿ, ಉದಾಹರಣೆಗೆ, ವಾಯುವು ಯಾವತ್ತೂ ಇರುತ್ತದೆ. ನೀವೊಂದು ಆಳವಾದ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ, ನೀವು ವಾಯುವನ್ನು ಅಷ್ಟೊಂದು ಸಂಪೂರ್ಣವಾಗಿ ಸ್ವೀಕರಿಸುತ್ತೀರಿ. ಅದೇ ರೀತಿಯಲ್ಲಿ, ಚೈತನ್ಯ ಶಕ್ತಿಯು ನಿಮ್ಮ ಸುತ್ತಲೂ ಎಲ್ಲೆಡೆಯೂ ಮತ್ತು ಸದಾಕಾಲವೂ ಇದೆ. ಗಾಯತ್ರಿ ಮಂತ್ರದ ಮೂಲಕ, ಗೌರವದ ಒಂದು ಅಳವಾದ ಭಾವದೊಂದಿಗೆ ಮತ್ತು ಸಂಪೂರ್ಣ ಅರಿವಿನೊಂದಿಗೆ ನೀವು ಸ್ವೀಕರಿಸುತ್ತೀರಿ ಮತ್ತು ನಿಮ್ಮ ಸುತ್ತಲಿರುವ ಈ ಅದ್ಭುತವಾದ ಚೈತನ್ಯದೊಂದಿಗೆ ಒಂದಾಗುತ್ತೀರಿ. ಇದರ ಫಲವಾಗಿ ಏನಾಗುತ್ತದೆ? ನಿಮ್ಮೆಲ್ಲಾ ಪಾಪಗಳು ಸುಟ್ಟು ಬೂದಿಯಾಗುತ್ತವೆ ಮತ್ತು ನೀವು ಶುದ್ಧವಾಗುತ್ತೀರಿ. ಮಂತ್ರದಲ್ಲಿರುವ ’ಭರ್ಗೋ’ ಎಂಬ ಪದದ ಅರ್ಥ, ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದು ಎಂದು. ಹಾಗಾಗಿ ಗಾಯತ್ರಿ ಮಂತ್ರದ ಮೂಲಕ ನಾವು, "ದೈವಿಕ ಪ್ರಕಾಶವನ್ನು ನಾನು ನನ್ನ ಬುದ್ಧಿಯಲ್ಲಿ ಎತ್ತಿಹಿಡಿಯುವಂತಾಗಲಿ ಮತ್ತು ಒಳಗೊಳ್ಳುವಂತಾಗಲಿ ಮತ್ತು ಅದು ನಮ್ಮೆಲ್ಲರ ಮನಸ್ಸುಗಳನ್ನು ಹಾಗೂ ಬುದ್ಧಿಗಳನ್ನು ಬೆಳಗಲಿ ಮತ್ತು ಉದಾತ್ತ ವಿಚಾರಗಳು ಹಾಗೂ ಕೃತ್ಯಗಳ ಕಡೆಗೆ ನಮ್ಮನ್ನು ಪ್ರೇರೇಪಿಸಲಿ" ಎಂದು ಪ್ರಾರ್ಥಿಸುತ್ತೇವೆ. ಇದು ಗಾಯತ್ರಿ ಮಂತ್ರದ ಸಾರವಾಗಿದೆ ಮತ್ತು ಇದು ಗಾಯತ್ರಿ ಉಪಾಸನೆ ಕೂಡಾ ಆಗಿದೆ.  ಗಾಯತ್ರಿಯೆಂದರೆ ಒಬ್ಬಳು ದೇವತೆಯೆಂಬ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಕೂರಬೇಡಿ. ನೀವು ಕುಳಿತುಕೊಳ್ಳುವಾಗ, ನಿಮ್ಮ ಆತ್ಮವನ್ನು, ನಿಮ್ಮೊಳಗೆ ಯಾವತ್ತೂ ಪ್ರಕಾಶಿಸುವ ಬೆಳಕು, ಚೈತನ್ಯದ ದೈವಿಕ ಪ್ರಕಾಶವಾಗಿ ನೆನಪಿಸಿಕೊಳ್ಳಿ ಮತ್ತು ಅರಿತುಕೊಳ್ಳಿ. ಸೂರ್ಯನನ್ನು ಸಾಧಾರಣವಾಗಿ ಒಬ್ಬ ದೇವತೆಯಾಗಿ ಪರಿಗಣಿಸಲಾಗುತ್ತದೆ, ಆದರೆ ಅದು ನಿಜಕ್ಕೂ ಹಾಗಲ್ಲ. ಮಂತ್ರದಲ್ಲಿ ನಾವು, ’ತತ್ ಸವಿತುರ್-ವರೇಣ್ಯಮ್’ ಎಂದು ಹೇಳುತ್ತೇವೆ. ಸವಿತುರ್ ಎಂಬ ಪದವು ಇಲ್ಲಿ, ಸೂರ್ಯನ ಬೆಳಕಿಗೆ ಕಾರಣವೆಂದು ಪರಿಗಣಿಸಲಾಗುವ ಸವಿತ್ರ ದೇವತೆಯನ್ನು ಉಲ್ಲೇಖಿಸುತ್ತದೆ. ಆದರೆ ಇಲ್ಲಿ ಇದರರ್ಥವು: ಎಲ್ಲವನ್ನೂ ಬೆಳಗುವ ಒಬ್ಬನು, ಎಲ್ಲರನ್ನೂ ಶುದ್ಧೀಕರಿಸಿ ಎಲ್ಲಾ ಪಾಪಗಳನ್ನು ತೊಳೆಯುವವನು, ಪರಮಾತ್ಮ, ಮತ್ತು ಸವಿತ್ರ ಎಂದರೆ ಅರ್ಥ ಅದು. ಹಾಗಾಗಿ ನಾವು ’ಸವಿತುರ್’ ಎಂದು ಹೇಳುವಾಗ ನಾವು ಈ ಪ್ರಾರ್ಥನೆಯನ್ನು ದೇವರಿಗೇ; ಪರಬ್ರಹ್ಮನಿಗೇ ಅರ್ಪಿಸುತ್ತಿರುತ್ತೇವೆ. ಅವನನ್ನೇ ಇಲ್ಲಿ ಸವಿತ್ರ ಎಂದು ಉಲ್ಲೇಖಿಸಿರುವುದು. ಇಲ್ಲಿರುವ ಆಳವಾದ ಅರ್ಥ ಇದು.

ಪ್ರಶ್ನೆ: ಗುರುದೇವ, ನಾವು ಸಗುಣದಿಂದ ನಿರ್ಗುಣದೆಡೆಗೆ ಹೇಗೆ ಹೋಗಬಹುದು?

ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದು ಸಗುಣವೂ ನಿರ್ಗುಣ ದೈವತ್ವದ ಒಂದು ಪ್ರಕಟನೆಯಾಗಿದೆ. ಶರೀರವು ಗುಣಗಳನ್ನು ಹೊಂದಿದೆ (ಅಂದರೆ, ರೂಪ ಅಥವಾ ಲಕ್ಷಣಗಳನ್ನು ಹೊಂದಿದೆ; ಹಾಗೆಯೇ ಅದು ಮೂರು ಗುಣಗಳಾದ ಸತ್ವ, ರಜಸ್ ಮತ್ತು ತಮೋಗುಣಗಳ ಪ್ರಭಾವಕ್ಕೆ ಒಳಗಾಗಿದೆ ಎಂಬ ಅರ್ಥವೂ ಇದೆ); ಆದರೆ ಆತ್ಮವು ನಿರ್ಗುಣವಾಗಿದೆ. ಇದಕ್ಕಿರುವ ಉತ್ತರವೆಂದರೆ ಧ್ಯಾನ. ಸಗುಣಕ್ಕೆ ರೂಪ, ಆಕಾರ, ಹೆಸರು ಮೊದಲಾದವು ಇವೆ, ಆದರೆ ಅದು ನಿರ್ಗುಣದಿಂದ ಬರುತ್ತದೆ.

ಪ್ರಶ್ನೆ: ಗುರುದೇವ, ಭಗವಾನ್ ಶಿವನು ಒಂದು ಶರೀರವನ್ನು ತೆಗೆದುಕೊಳ್ಳಲಿಲ್ಲ ಮತ್ತು ಪ್ರಾಯಶಃ ದುರ್ಗಾದೇವಿ, ಸರಸ್ವತಿ ದೇವಿ, ಗಾಯತ್ರಿ ದೇವಿ ಮೊದಲಾದ ದೇವತೆಯರು ಕೂಡಾ ತೆಗೆದುಕೊಳ್ಳಲಿಲ್ಲ. ಹಾಗಾದರೆ ಇವರೆಲ್ಲರೂ ಒಂದೇ ಶಕ್ತಿಯ ವಿವಿಧ ರೂಪಗಳಾಗಿರುವರೇ? ಅವರ ನಡುವೆಯಿರುವ ವ್ಯತ್ಯಾಸವೇನು?

ಶ್ರೀ ಶ್ರೀ ರವಿ ಶಂಕರ್: ಹೌದು, ಅವರು ಮೂಲಭೂತವಾಗಿ ಒಂದೇ. ಅವರೆಲ್ಲರೂ ವಿವಿಧ ಶಕ್ತಿಗಳಾಗಿರುವರು ಮತ್ತು ಅವರು ಅವರ ಹೆಸರುಗಳು, ಅವರ ರೂಪಗಳು ಮತ್ತು ತೋರಿಕೆಗಳಲ್ಲಿ ವ್ಯತ್ಯಸ್ತರಾಗಿರುವರು; ಆದರೂ ಮೂಲಭೂತವಾಗಿ ಅವರೆಲ್ಲರೂ ಒಂದೇ ಆಗಿರುವರು.

ಪ್ರಶ್ನೆ: ಗುರುದೇವ, ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ಅರ್ಜುನನಲ್ಲಿ, "ಪ್ರತಿಯೊಬ್ಬರೂ ನನಗೆ ಸಮಾನವಾಗಿ ಪ್ರಿಯರು" ಎಂದು ಹೇಳುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ಅವನು ಅರ್ಜುನನಲ್ಲಿ, "ನೀನು ನನಗೆ ಅತ್ಯಂತ ಪ್ರಿಯನು" ಎಂದು ಹೇಳುತ್ತಾನೆ. ಈ ವಿರೋಧಾಭಾಸವು ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಭಗವದ್ಗೀತೆಯುದ್ದಕ್ಕೂ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಅಧ್ಯಾಯದಲ್ಲೂ ಬಹಳಷ್ಟು ವಿರೋಧಾಭಾಸಗಳಿವೆ. ಅದಕ್ಕಾಗಿಯೇ ಒಂದು ಹಂತದಲ್ಲಿ ಅರ್ಜುನನು ಕೃಷ್ಣ ಪರಮಾತ್ಮನಲ್ಲಿ ಹೀಗೆಂದು ಹೇಳುತ್ತಾನೆ, "ಓ ಭಗವಂತ! ನನಗೆ ಒಂದು ಮಾರ್ಗವನ್ನು ಮಾತ್ರ ಹೇಳು (ದುಃಖದಿಂದ ಮುಕ್ತನಾಗುವ ಕಡೆಗೆ). ಕೆಲವೊಮ್ಮೆ ನೀನು ಭಕ್ತಿ ಯೋಗವು ಅತ್ಯುತ್ತಮವೆಂದು ಸಲಹೆ ನೀಡುವೆ; ಕೆಲವೊಮ್ಮೆ ನೀನು ಕರ್ಮ ಯೋಗವು ಶ್ರೇಷ್ಠವೆಂದು ಹೇಳುವೆ ಮತ್ತು ಇತರ ಸಮಯಗಳಲ್ಲಿ ನೀನು ಜ್ಞಾನ ಯೋಗವೊಂದೇ ಮಾರ್ಗವೆಂದು ಹೇಳುವೆ. ಇದೆಲ್ಲದರಿಂದ ನಾನು ಬಹಳ ಗೊಂದಲಕ್ಕೀಡಾಗಿರುವೆನು, ಆದುದರಿಂದ ಇವೆಲ್ಲವುಗಳಲ್ಲಿ ದಯವಿಟ್ಟು ಒಂದನ್ನು ಸಲಹೆ ಮಾಡು".

ಹೀಗೆ, ಗೀತೆಯಲ್ಲಿ ಅರ್ಜುನ ಕೂಡಾ ಅದನ್ನೇ ಹೇಳುತ್ತಾನೆ. ಆದರೆ ಸತ್ಯವಿರುವುದೇ ಹಾಗೆ. ಸತ್ಯವು ಬಹು-ಆಯಾಮವುಳ್ಳದ್ದು, ಮತ್ತು ಕೇವಲ ಏಕ-ಆಯಾಮವುಳ್ಳದ್ದಾಗಲೀ ಅಥವಾ ಒಂದು ಮುಖವುಳ್ಳದ್ದಾಗಲೀ ಅಲ್ಲ. ಅದಕ್ಕಾಗಿಯೇ, ಆ ಬಹು-ಆಯಾಮಗಳ ಸತ್ಯವನ್ನು ಹೇಳಲು ಅಥವಾ ವ್ಯಕ್ತಪಡಿಸಲು ವಿಭಿನ್ನ ರೀತಿಗಳು ಮತ್ತು ಅಭಿವ್ಯಕ್ತಿಗಳು ಬೇಕಾಗಿವೆ. ಹಾಗಾಗಿ, ಕೃಷ್ಣ ಪರಮಾತ್ಮನು ಅರ್ಜುನನಲ್ಲಿ, ಒಂದು ಏಣಿಯನ್ನು ಹತ್ತಲು ಹೇಳುತ್ತಾನೆ, ಮತ್ತು ನಂತರ ಬೇರೊಂದು ಏಣಿಯಲ್ಲಿ ಕಾಲನ್ನಿಡಲು ಹೇಳುತ್ತಾನೆ ಮತ್ತು ಹೀಗೆಯೇ ಮುಂದುವರಿಸುತ್ತಾನೆ. ಅವನು ಅರ್ಜುನನಲ್ಲಿ ಒಂದೇ ಏಣಿಯಲ್ಲಿ ಉಳಿಯಲು ಹೇಳುವುದೇ ಇಲ್ಲ. ಒಬ್ಬ ವ್ಯಕ್ತಿಯನ್ನು ಹಂತ ಹಂತವಾಗಿ ಒಂದು ಏಣಿಯಿಂದ ಇನ್ನೊಂದರ ಮೂಲಕವಾಗಿ ದೇವರ ಕಡೆಗೆ ಕರೆದೊಯ್ಯುವ ವಿಶೇಷವಾದ ಕಲೆಯನ್ನು ಭಗವದ್ಗೀತೆಯು ತೋರಿಸುತ್ತದೆ. ಈಗ ನಿನಗೆ ಹೀಗೆಂದು ಕೇಳುವ ಇಚ್ಛೆಯಾಗಬಹುದು, "ನಾನು ಬೇರೆ ಯಾವುದೋ ಏಣಿಯ ಮೇಲೆ ಹೆಜ್ಜೆಯಿಡಬೇಕೆಂದು ನೀವು ಬಯಸಿದ್ದಾದರೆ, ನಾನು ಇದರ ಮೇಲೆ ಕಾಲೂರುವಂತೆ ನೀವು ನನ್ನಲ್ಲಿ ಹೇಳಿದ್ದಾದರೂ ಯಾಕೆ?" ಇದನ್ನೇ ಅರ್ಜುನ ಕೂಡಾ ಕೃಷ್ಣ ಪರಮಾತ್ಮನಲ್ಲಿ ಹೇಳುವುದು. ಆದರೆ ಅದು ಸರಿಯಲ್ಲ. ಹಾಗಾಗಿ ಕೃಷ್ಣ ಪರಮಾತ್ಮನು, ಅವನು ಒಂದು ಏಣಿಯನ್ನು ಹತ್ತುವಂತೆ ಮಾಡಿ, ನಂತರ ಇನ್ನೊಂದಕ್ಕೆ ಸಾಗುವಂತೆ ಮಾಡುತ್ತಾನೆ.

ಇದು ಭಗವದ್ಗೀತೆಯ ವಿಶೇಷತೆಯಾಗಿದೆ. ಒಂದು ಪ್ರೌಢವಾದ ಹಾಗೂ ಆಳವಾದ ಧರ್ಮಗ್ರಂಥವು ಆದರ್ಶಪ್ರಾಯವಾಗಿ ಇರಬೇಕಾದುದು ಹೀಗೆಯೇ. ಒಂದರ ನಂತರ ಇನ್ನೊಂದು ವಿರೋಧಾಭಾಸಗಳ ಮೂಲಕ ಮಾತ್ರವೇ ಅಂತಿಮ ಸತ್ಯವು ಅನಾವರಣಗೊಳ್ಳುವುದು. ಎಲ್ಲೆಲ್ಲಾ ಯಾವುದೇ ವಿರೋಧಾಭಾಸಗಳಿಲ್ಲದೇ ಅಥವಾ ಯೋಚನೆಗಳಲ್ಲಿ ಸಂಘರ್ಷಣೆಗಳಿಲ್ಲದೇ ಕಂಡುಬಂದರೂ ಕೂಡಾ, ಅದು ಕೂಡಾ ಪರವಾಗಿಲ್ಲ; ಅದು ಒಂದು ಪ್ರಾಥಮಿಕ ಹಂತದಲ್ಲಿನ ಜ್ಞಾನವಾಗಿದೆಯೆಂದು ಮಾತ್ರ.

ಪ್ರಾಥಮಿಕ ಶಿಕ್ಷಣದಲ್ಲಿ ಒಬ್ಬನಿಗೆ ಯಾವುದೇ ಸಂಕೀರ್ಣತೆ ಅಥವಾ ವಿರೋಧಾಭಾಸಗಳು ಕಂಡುಬರುವುದಿಲ್ಲ. ಉದಾಹರಣೆಗೆ, ಅ, ಆ, ಇ, ಈ ಮೊದಲಾದ ವರ್ಣಮಾಲೆಗಳನ್ನು ಕಲಿಯುವಾಗ ನಿಮಗೆ ಗೊಂದಲವಾಗುವಂತಹದ್ದು ಅಥವಾ ವಿರೋಧಾಭಾಸವಾಗುವಂತಹದ್ದು ಯಾವುದೂ ಕಂಡುಬರುವುದಿಲ್ಲ. ಆದರೆ ಒಂದು ಆಳವಾದ ಧರ್ಮಗ್ರಂಥದಲ್ಲಿ ನಿಮಗೆ ಗೊಂದಲವಾಗುವಂತಹದ್ದು ಮತ್ತು ವಿರೋಧಾಭಾಸಗಳು ಖಂಡಿತಾ ಕಂಡುಬರುತ್ತವೆ. ಅದು ಯಾಕೆ ಹಾಗೆ? ಅದು ಯಾಕೆಂದರೆ ಈ ಪ್ರಪಂಚವು ಬಹು-ಆಯಾಮವುಳ್ಳದ್ದಾಗಿರುವುದರಿಂದ. ಪ್ರಪಂಚವು ಒಂದು ಗೋಳದಂತೆ ಗುಂಡಗಾಗಿದೆ.

ಹಲವು ವರ್ಷಗಳ ಮೊದಲು, ಇರಾನಿನಿಂದ ಒಬ್ಬರು ಸಜ್ಜನರು ಇಲ್ಲಿಗೆ ಬಂದಿದ್ದರು. ಇದು ಸುಮಾರು ೧೦-೧೫ ವರ್ಷಗಳ ಹಿಂದೆ ಇರಬೇಕು. ಅವರೊಬ್ಬ ಇಮಾಮ್ ಆಗಿದ್ದರು ಮತ್ತು ಅವರು ಅಯಾತೊಲ್ಲಾ ಖೊಮೈನಿ (ಇರಾನಿನ ಒಬ್ಬರು ಧಾರ್ಮಿಕ ಮುಖಂಡರು) ಅವರ ಆಪ್ತಮಿತ್ರರಾಗಿದ್ದರು ಹಾಗೂ ಅವರಿಗೆ ಉತ್ತರಾಧಿಕಾರಿಯಾಗಿದ್ದರು. ಅವರಿಗೆ ಸಾಕಷ್ಟು ವಯಸ್ಸಾಗಿತ್ತು, ಸುಮಾರು ೭೫-೮೦ ವರ್ಷಗಳಾಗಿತ್ತು. ಆ ದಿನಗಳಲ್ಲಿ ನಾನು ಹಳೆಯ ಆಶ್ರಮದ ಶಕ್ತಿ ಕುಟೀರದಲ್ಲಿ ಉಳಕೊಳ್ಳುತ್ತಿದ್ದೆ.

ಕುಟೀರಕ್ಕೆ ಬರಲು ಒಬ್ಬರು ಮೆಟ್ಟಿಲುಗಳನ್ನು ಹತ್ತಬೇಕು. ಆ ಸಜ್ಜನರು ಮೆಟ್ಟಿಲುಗಳನ್ನು ಹತ್ತಿ ನನ್ನ ಬಳಿಗೆ ಬಂದಾಗ ಅವರಂದರು, "ಗುರುದೇವ, ನೀವು ಅತ್ಯಂತ ಹೆಚ್ಚು ಕರುಣಾಮಯಿಗಳೆಂದು ಹೆಸರು ಪಡೆದಿರುವಿರಿ. ನಿಮಗೆ ಗೊತ್ತೇ, ಈಗ ಹಲವಾರು ವರ್ಷಗಳಿಂದ ನನ್ನನ್ನು ಒಂದು ಪ್ರಶ್ನೆಯು ಕಾಡುತ್ತಿದೆ. ನಾನು ನಿಮ್ಮಲ್ಲಿ ಕೇಳಲು ಬಯಸುತ್ತೇನೆ - ’ಒಂದು ಸತ್ಯ ಮಾತ್ರವಿರುವುದಾದರೆ, ಅದನ್ನು ತಿಳಿಯಲು ಕೂಡಾ ಒಂದೇ ಒಂದು ಮಾರ್ಗ ಮಾತ್ರವಿರಬೇಕು, ಅಲ್ಲವೇ? ಒಂದು ಪ್ರಶ್ನೆಗೆ ಒಂದೇ ಒಂದು ಸರಿಯಾದ ಉತ್ತರವಿರುತ್ತದೆ. ಒಂದೇ ಪ್ರಶ್ನೆಗೆ ನಾಲ್ಕು ಅಥವಾ ಐದು ಬೇರೆ ಬೇರೆ ಸರಿಯುತ್ತರಗಳಿರಲು ಸಾಧ್ಯವಿಲ್ಲ. ಹಾಗಾದರೆ ಒಂದು ಸತ್ಯವಿರುವುದಾದರೆ, ಅದಕ್ಕಾಗಿ ಒಂದೇ ಒಂದು ನಿಜವಾದ ಧರ್ಮವಿರಬೇಕು. ಪ್ರಪಂಚದಲ್ಲಿ ಯಾಕೆ ಅಷ್ಟೊಂದು ಧರ್ಮಗಳಿವೆ? ಇತರ ಎಲ್ಲಾ ಧರ್ಮಗಳು ಸುಳ್ಳಾಗಿರಬೇಕು. ಸತ್ಯಕ್ಕೆ ಒಂದೇ ಒಂದು ಸರಿಯಾದ ದಾರಿಯಿರಲು ಸಾಧ್ಯ’. ಅವರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದರು ಎಂಬುದು ನನಗೆ ಕೂಡಲೇ ಅರ್ಥವಾಯಿತು.

ಮೂಲಭೂತವಾಗಿ ಅವರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದರೆಂದರೆ, ಇಸ್ಲಾಂ ಮಾತ್ರವೇ ನಿಜವಾದ ಧರ್ಮ ಮತ್ತು ದೇವರ ಕಡೆಗಿರುವ ಮಾರ್ಗವೆಂದು ಹಾಗೂ ಇತರೆಲ್ಲಾ ಧರ್ಮಗಳೂ ನಕಲಿ ಅಥವಾ ಸುಳ್ಳು ಎಂದು. ಹೀಗೆ, ಮೂಲತಃ ಅವರ ಮನಸ್ಸಿನಲ್ಲಿದ್ದುದು ಈ ಪ್ರಶ್ನೆ, ಆದರೆ ಅವರು ಬೇರೊಂದು ರೀತಿಯಲ್ಲಿ ನನ್ನನ್ನು ಕೇಳುತ್ತಿದ್ದರು. ಅವರಂದರು, "ಗುರುದೇವ, ಎಲ್ಲಾ ಧರ್ಮಗಳು ಒಳ್ಳೆಯವೆಂದೂ, ಗೌರವಿಸಲು ಯೋಗ್ಯವಾದವೆಂದೂ ಜನರು ಹೆಚ್ಚಾಗಿ ಹೇಳುತ್ತಾರೆ, ಆದರೆ ಅದು ಸಾಧ್ಯವಿಲ್ಲ. ಒಬ್ಬನೇ ದೇವರಿರುವುದು, ಆದರೆ ಅವನನ್ನು ತಲಪಲು ವಿವಿಧ ಮಾರ್ಗಗಳಿವೆಯೆಂಬುದು ಸಾಮಾನ್ಯವಾಗಿ ಹೇಳುವ ಮಾತು. ಆದರೆ ಅದು ಸಾಧ್ಯವಿಲ್ಲ. ಒಂದೇ ಒಂದು ನಿಜವಾದ ಧರ್ಮವಿರುವುದು, ಉಳಿದವುಗಳೆಲ್ಲಾ ಮಾನವನಿಂದ ತಯಾರಿಸಲ್ಪಟ್ಟವು ಮತ್ತು ಅವುಗಳು ತಪ್ಪು’. ನಾನು ಅವರಿಗೆ ಮುಗುಳ್ನಕ್ಕು ಹೀಗೆಂದು ಹೇಳಿದೆ, "ದಯವಿಟ್ಟು ಮೊದಲು ಕುಳಿತುಕೊಳ್ಳಿ". ನಂತರ ನಾನು ಅವರಿಗೆ ಹೀಗೆ ಹೇಳಿದೆ, "ಆಶ್ರಮಕ್ಕೆ ಬರಲು ಬೇರೆ ಬೇರೆ ಮಾರ್ಗಗಳು ಅಥವಾ ದಾರಿಗಳೂ ಇರಬಲ್ಲದು. ಒಂದು ದಾರಿ ಎಂದರೆ, ಆಶ್ರಮದ ಗೇಟಿನಿಂದ ನೇರವಾಗಿ ಬಂದು ಕೊನೆಯಲ್ಲಿ ಬಲಕ್ಕೆ ತಿರುಗುವುದು. ನಂತರ, ಇನ್ನೊಂದು ದಾರಿಯೆಂದರೆ, ನೇರವಾಗಿ ಹೋಗಿ ಎಡಕ್ಕೆ ತಿರುಗಿ ಆಶ್ರಮವನ್ನು ತಲಪುವುದು. ಇನ್ನೂ ಒಂದು ದಾರಿಯೆಂದರೆ, ಎಲ್ಲೂ ತಿರುಗದೆ ಒಂದು ನೇರವಾದ ಮಾರ್ಗವನ್ನು ಅನುಸರಿಸಿ ಆಶ್ರಮಕ್ಕೆ ನೇರವಾಗಿ ಬರುವುದು. ಈಗ ನಿಮಗೆ ಏನನ್ನಿಸುತ್ತದೆ? ಈ ಎಲ್ಲಾ ಮಾರ್ಗಗಳು ತಮ್ಮದೇ ರೀತಿಯಲ್ಲಿ ಸರಿಯಾಗಿಲ್ಲವೇ? ಅವುಗಳೆಲ್ಲವೂ ಸರಿ. ಒಬ್ಬರು ಬೆಂಗಳೂರು ನಗರ ಪ್ರದೇಶದಿಂದ ಆಶ್ರಮದ ಕಡೆಗೆ ಬರುತ್ತಿರುವಾಗ ಅವರೊಂದಿಗೆ, ನೇರವಾಗಿ ಬಂದು ಆಶ್ರಮಕ್ಕಾಗಿ ಬಲಕ್ಕೆ ತಿರುಗಬೇಕೆಂದು ಹೇಳಲಾಗುವುದು. ಆದರೆ ಒಬ್ಬರು ಕನಕಪುರದ ಪ್ರದೇಶದಿಂದ ಬರುತ್ತಿರುವುದಾದರೆ, ಆಗ ಅವರೊಂದಿಗೆ ನೇರವಾಗಿ ಹೋಗಿ ಕೊನೆಯಲ್ಲಿ ಆಶ್ರಮಕ್ಕಾಗಿ ಎಡಕ್ಕೆ ತಿರುಗಲು ಹೇಳಲಾಗುವುದು. ಹೀಗೆ, ಆ ದಾರಿ ಕೂಡಾ ಸರಿಯಾದುದು.

ಮತ್ತೆ, ಒಬ್ಬರು ಬನ್ನೇರುಘಟ್ಟ ಪ್ರದೇಶದಿಂದ ಬರುತ್ತಿರುವುದಾದರೆ, ಅವರೊಂದಿಗೆ, ಎಲ್ಲೂ ತಿರುಗದೆ ನೇರವಾಗಿ ಬರುತ್ತಿರಲು ಹೇಳಲಾಗುವುದು. ಮತ್ತು ಆ ದಾರಿ ಕೂಡಾ ಸರಿ. ಆದುದರಿಂದ, ಎಲ್ಲಾ ದಾರಿಗಳೂ ಸರಿ. ತಾನು ಜೀವನದಲ್ಲಿ ಯಾವ ದಾರಿಯಲ್ಲಿ ನಿಂತಿರುವೆನೆಂಬುದನ್ನು ಒಬ್ಬನು ನೋಡಬೇಕು. ಪ್ರಪಂಚದಲ್ಲಿ ಮನುಷ್ಯನು, ವಿವಿಧ ಕಾಲಘಟ್ಟಗಳಲ್ಲಿ, ಜೀವನದಲ್ಲಿ ವಿವಿಧ ಘಟ್ಟಗಳಲ್ಲಿ ಮತ್ತು ವಿವಿಧ ಪ್ರದೇಶಗಳು ಅಥವಾ ಸಂಸ್ಕೃತಿಗಳಲ್ಲಿ ಇದ್ದನು. ಹಾಗಾಗಿ, ಒಬ್ಬನಿದ್ದ ಸ್ಥಿತಿ ಅಥವಾ ಜಾಗಕ್ಕನುಸಾರವಾಗಿ, ದೇವರನ್ನು ತಲಪಲು ವಿವಿಧ ಮಾರ್ಗಗಳನ್ನು ತೋರಿಸಲಾಗಿದೆ. ಅದುವೇ ಇದು."

ನಮ್ಮ ಪೂರ್ವಜರು, ಪ್ರಾಚೀನ ಮುನಿಗಳು ಮತ್ತು ಋಷಿಗಳು ಇದನ್ನು ಚೆನ್ನಾಗಿ ತಿಳಿದಿದ್ದರು ಮತ್ತು ಹಾಗಾಗಿ, ದೇವರನ್ನು ತಲಪಲು ಒಬ್ಬನು ತೆಗೆದುಕೊಳ್ಳಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಅವರು ಹೇಳಿದರು. ಸನಾತನ ಧರ್ಮವು ಎಷ್ಟೊಂದು ವಿಶಾಲ ಹಾಗೂ ವಿಸ್ತೃತವಾಗಿದೆಯೆಂದರೆ ಅದು ನಿಮ್ಮನ್ನು ಬಹಳ ಗೊಂದಲಗೊಳಿಸುತ್ತದೆ, ಆದರೆ ಅದು ಸತ್ಯಕ್ಕಿರುವ ದಾರಿಯನ್ನು ಕೂಡಾ ತೋರಿಸುತ್ತದೆ. ಸನಾತನ ಧರ್ಮದ ಪ್ರಕಾರ, ಇದು ಸರಿ ಮತ್ತು ಅದು ಕೂಡಾ ಸರಿ.

ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಎಲ್ಲಾ ಮಾರ್ಗಗಳು ಒಳಗೊಂಡಿರುವ ಯಾವುದಾದರೊಂದು ಧರ್ಮವಿರುವುದಾದರೆ ಅದು ಸನಾತನ ಧರ್ಮ. ಅದು ಯಾಕೆಂದರೆ, ಅದು ಯಾವುದೇ ಒಂದು ನಿರ್ದಿಷ್ಟ ಋಷಿಯಿಂದ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿಯಿಂದ ಸೃಷ್ಟಿಸಲ್ಪಟ್ಟದ್ದಾಗಲೀ ಅಥವಾ ನೀಡಲ್ಪಟ್ಟದ್ದಾಗಲೀ ಅಲ್ಲ. ಈ ಸಂಪ್ರದಾಯಕ್ಕೆ ಸಾವಿರಾರು ಜ್ಞಾನಿ ಋಷಿಗಳು ಮತ್ತು ಮುನಿಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ ಹಾಗೂ ತಮ್ಮ ಜ್ಞಾನ ಮತ್ತು ಅನುಭವಗಳೊಂದಿಗೆ ಅದನ್ನು ಸಂಪನ್ನಗೊಳಿಸಿದ್ದಾರೆ. ಹೀಗೆ, ಈ ಸನಾತನ ಧರ್ಮದ ಪ್ರಾಚೀನ ಸಂಪ್ರದಾಯದಲ್ಲಿ ಅವರೆಲ್ಲರ ವಿವೇಕ ಮತ್ತು ಜ್ಞಾನವು ಒಂದುಗೂಡಿದೆ. ಇದನ್ನು ಕೇಳಿ ಇಮಾಮರು ಬಹಳ ಸಂತೋಷಗೊಂಡರು ಮತ್ತು ಅವರಿಗದು ಬಹಳ ಮೆಚ್ಚುಗೆಯಾಯಿತು.

ಅವರಂದರು, "ಗುರುದೇವ, ಇವತ್ತು ನನಗೆ ನನ್ನ ಉತ್ತರ ಸಿಕ್ಕಿತು ಮತ್ತು ನಾನು ಬಹಳ ತೃಪ್ತನಾಗಿರುವೆನು". ಇದನ್ನು ಹೇಳುತ್ತಾ ಅವರು ಬೀಳ್ಕೊಂಡರು.

ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ, ಎಲ್ಲೆಲ್ಲಾ ಒಬ್ಬರಿಗೆ ವಿರೋಧಾಭಾಸಗಳು ಮತ್ತು ಸ್ಪಷ್ಟವಾದ ವಿರೋಧಾತ್ಮಕ ಯೋಚನೆಗಳು ಹಾಗೂ ದಾರಿಗಳು ಕಂಡುಬರುವುದೋ ಅಲ್ಲಿ ಅವರಿಗೆ ಸತ್ಯದ ಬೆಳಕು ಕೂಡಾ ಖಂಡಿತವಾಗಿ ಕಂಡುಬರುವುದು.

ಪ್ರಶ್ನೆ: ಗುರುದೇವ, ಕ್ಷಮೆಯನ್ನು ದಾನವೆಂಬುದಾಗಿ ಕೂಡಾ ಕರೆಯಲಾಗಿದೆ. ಇದು ಯಾಕೆ ಹಾಗೆ? ಅದನ್ನು ಕ್ಷಮಾದಾನವೆಂದು ಕರೆಯಲಾಗಿದೆ.

ಶ್ರೀ ಶ್ರೀ ರವಿ ಶಂಕರ್: ಈ ಪದಗಳ ಜಾಲದಲ್ಲಿ ಸಿಕ್ಕಿಬೀಳಬೇಡ. ಅದು ಕೇವಲ ಪದಗಳ ಆಟವಾಗಿದೆ. ಒಂದೇ ವಿಷಯವನ್ನು ತಿಳಿಯಪಡಿಸಲು ಬೇರೆ ಬೇರೆ ಜನರು ಬೇರೆ ಬೇರೆ ಪದಗಳನ್ನು ಬಳಸುತ್ತಾರೆ. ಕ್ಷಮೆಯೆಂದರೆ ಕೇವಲ ಕ್ಷಮೆ, ಅಷ್ಟೆ.

ಪ್ರಶ್ನೆ: ಗುರುದೇವ, ಕಾಲ ಕಾಲಕ್ಕೆ ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಭಗವಾನ್ ಶಿವ ಇವರು ತಮ್ಮ ಪಾತ್ರಗಳನ್ನು ಅದಲು ಬದಲು ಮಾಡಿಕೊಳ್ಳುತ್ತಾರೆಯೇ? ಕಾಲಂತರದಲ್ಲಿ ಅದೇ ಪಾತ್ರವನ್ನು ಮತ್ತೆ ಮತ್ತೆ ಮಾಡುತ್ತಾ ಅವರಿಗೆ ಬೇಜಾರಾಗುವುದಿಲ್ಲವೇ?

ಶ್ರೀ ಶ್ರೀ ರವಿ ಶಂಕರ್: ಇದಕ್ಕಾಗಿಯೇ ಒಂದು ಕಾಲದಲ್ಲಿ ಅವರೆಲ್ಲರೂ ಒಟ್ಟುಸೇರಿ ಒಂದಾದರು ಮತ್ತು ಭಗವಾನ್ ದತ್ತಾತ್ರೇಯ ಆದರು. ಅವರಲ್ಲಿ ಮೂವರೂ ಗುರುಗಳಾಗಿರುವರು.

ಪ್ರಶ್ನೆ: ಗುರುದೇವ, ಹಲವು ಜನರ ಧರ್ಮಗಳು ಪುನರ್ಜನ್ಮದಲ್ಲಿ ನಂಬಿಕೆಯಿರಿಸುವುದಿಲ್ಲ. ಅಂತಹ ಜನರು ಮೋಕ್ಷವನ್ನು ಹೊಂದುವರೇ?

ಶ್ರೀ ಶ್ರೀ ರವಿ ಶಂಕರ್: ಒಬ್ಬರು ನಂಬಲಿ ಅಥವಾ ನಂಬದಿರಲಿ, ಅದು ಯಾವತ್ತಾದರೂ ಸತ್ಯವನ್ನು ಬದಲಾಯಿಸುವುದೇ? ಸತ್ಯವು ಯಾವಾಗಲೂ ಅದಿದ್ದಂತೆಯೇ ಇರುವುದು. ಒಬ್ಬರು ನಂಬದೇ ಇದ್ದರೆ, ಆಗ ಅಷ್ಟೇ! ಅವರು ಅದನ್ನು ನಂಬುವುದಿಲ್ಲ ಅಷ್ಟೆ. ಅದು ಸತ್ಯವನ್ನು ಯಾವುದೇ ರೀತಿಯಲ್ಲಿಯೂ ಕಡಿಮೆ ಮಾಡುವುದಿಲ್ಲ.

ಇವತ್ತು ವಿಜ್ಞಾನಿಗಳು ಪುನರ್ಜನ್ಮವಿದೆಯೆಂಬುದನ್ನು ಸಾಬೀತುಪಡಿಸಿದ್ದಾರೆ. ಹಾಗಾದರೆ ಹೇಳಲು ಬೇರೇನು ಉಳಿದಿದೆ? ಕೆಲವು ಧರ್ಮಗಳಲ್ಲಿ, ಭೂಮಿಯು ಗೋಳಾಕಾರದಲ್ಲಿರದೆ ಒಂದು ಚೌಕಾಕಾರದಲ್ಲಿದೆಯೆಂದು ನಂಬಲಾಗಿತ್ತು. ಭೂಮಿಯು ಸ್ಥಿರವಾಗಿದ್ದು, ಭೂಮಿಯ ಸುತ್ತಲೂ ಸುತ್ತುತ್ತಿರುವುದು ಸೂರ್ಯನೆಂದು ಕೆಲವು ಧರ್ಮಗಳು ನಂಬಿದ್ದವು. ವಿಜ್ಞಾನಿಗಳು ಈ ನಂಬಿಕೆಯ ವಿರುದ್ಧ ಎದ್ದು ನಿಂತಾಗ, ಅವರನ್ನು ಬೇಟೆಯಾಡಿ ಜೀವಂತವಾಗಿ ಸುಟ್ಟುಹಾಕಲಾಯಿತು. ಕೆಲವರನ್ನು ಗಲ್ಲಿಗೇರಿಸಲಾಯಿತು. ಇದು ನಡೆದುದು ಸ್ಪ್ಯಾನಿಷ್ ಶೋಧನೆ ಎಂದು ಯಾವುದನ್ನು ಕರೆಯಲಾಗುವುದೋ ಅದರಲ್ಲಿ.

ಸ್ಪೈನಿನಲ್ಲಿ ಮಧ್ಯ ಯುಗಗಳಲ್ಲಿ, ಪ್ರತಿಯೊಬ್ಬ ವಿಜ್ಞಾನಿಯನ್ನು ಕೂಡಾ ಕೊಲ್ಲಲಾಯಿತು ಮತ್ತು ಅವರನ್ನು ಸೈತಾನನ ಒಂದು ರೂಪ ಅಥವಾ ದೂತರನ್ನಾಗಿ ಪರಿಗಣಿಸಲಾಯಿತು ಹಾಗೂ ಅವರನ್ನು ಕೊಲೆ ಮಾಡಲಾಯಿತು. ಇದು ಬಹಳ ಹಿಂದೆಯೇನೂ ಅಲ್ಲ, ಇದು ನಡೆದುದು ಸುಮಾರು ೧೦೦-೨೦೦ ವರ್ಷಗಳ ಹಿಂದೆ. ಇವತ್ತು ಅವೇ ಧರ್ಮಗಳು ತಮ್ಮ ಹೊರನೋಟದಲ್ಲಿ ಹೆಚ್ಚು ವೈಜ್ಞಾನಿಕವಾಗಿವೆ.

ಭಾರತವು ಬಹಳ ಆರಂಭದಿಂದಲೂ ಯಾವಾಗಲೂ ಒಂದು ವೈಜ್ಞಾನಿಕ ಮತ್ತು ಪ್ರಾಯೋಗಿಕವಾದ ದೃಷ್ಟಿಕೋನವನ್ನು ಪಾಲಿಸಿದೆ. ಇಲ್ಲಿ ಯಾವುದೇ ವಿಜ್ಞಾನಿ ಅಥವಾ ಸಂಶೋಧಕರು ಯಾವತ್ತೂ ಹತ್ಯೆಗೊಳಗಾಗಿಲ್ಲ. ವಾಸ್ತವವಾಗಿ, ಚಾರ್ವಾಕದಂತಹ ಒಂದು ನಾಸ್ತಿಕ ಪಂಥ ಕೂಡಾ ನಮ್ಮ ದೇಶದಲ್ಲಿ ಗೌರವಿಸಲ್ಪಟ್ಟಿದೆ. ಅದರ ಅನುಯಾಯಿಗಳಿಗೆ, ತಮ್ಮ ತತ್ವಗಳು ಮತ್ತು ತತ್ವಶಾಸ್ತ್ರವನ್ನು ಅನುಸರಿಸಲು ಹಾಗೂ ಹರಡಲು ಅನುಮತಿ ನೀಡಲಾಯಿತು. ಚಾರ್ವಾಕ ಪಂಥದ ಸೀಮಿತ ಬುದ್ಧಿಯು ಇಷ್ಟೇ ಆಗಿದ್ದರೆ, ಅದೂ ಸರಿಯೆಂದು ಪ್ರಾಚೀನ ಭಾರತೀಯರು ಯೋಚಿಸುತ್ತಿದ್ದರು ಮತ್ತು ಅವರಿಂದ ಸ್ವೀಕರಿಸಲ್ಪಟ್ಟರು. ಅವರು ಸಾಮಾನ್ಯವಾಗಿ ಹೀಗೆಂದು ಹೇಳುತ್ತಿದ್ದರು, "ದೇವರು ಮತ್ತು ಸೃಷ್ಟಿಯ ಬಗ್ಗೆ ನಿಮ್ಮ ಸೀಮಿತ ಬುದ್ಧಿಶಕ್ತಿಯು ತಿಳಿದುಕೊಳ್ಳಬಹುದಾದದ್ದು ಹಾಗೂ ಅರ್ಥ ಮಾಡಿಕೊಳ್ಳಬಹುದಾದದ್ದು ಇದೇ ಆಗಿದ್ದರೆ, ಅದು ಕೂಡಾ ಪರವಾಗಿಲ್ಲ. ನಿಮ್ಮ ಬುದ್ಧಿಶಕ್ತಿಯು ಪಕ್ವವಾದಂತೆ, ಕಾಲಾಂತರದಲ್ಲಿ ನಿಮಗೆ ಹೆಚ್ಚಿನ ಜ್ಞಾನ ಮತ್ತು ತಿಳುವಳಿಕೆ ಲಭಿಸುವುದು".

ಪ್ರಪಂಚದಲ್ಲಿ, ಇನ್ನೊಂದು ದೇಶವನ್ನು ಯಾವತ್ತಿಗೂ ಆಕ್ರಮಿಸದ ದೇಶವೆಂದರೆ ಭಾರತ ಮಾತ್ರ. ಚರಿತ್ರೆಯಲ್ಲಿ ಅದು ಯಾವತ್ತಿಗೂ ಬೇರೆ ಯಾವುದೇ ದೇಶವನ್ನು ಸುಲಿಗೆ ಮಾಡುವುದಾಗಲೀ ಅಥವಾ ವಶಪಡಿಸಿಕೊಳ್ಳುವುದಾಗಲೀ ಮಾಡಿಲ್ಲ.

ಆದರೂ ಭಾರತವು ಚರಿತ್ರೆಯಲ್ಲಿ ಹಲವಾರು ಸಾರಿ ವಿದೇಶಿ ಆಕ್ರಮಣಕಾರರಿಂದ ಲೂಟಿಗೈಯಲ್ಪಟ್ಟಿತು ಮತ್ತು ಸುಲಿಗೆ ಮಾಡಲ್ಪಟ್ಟಿತು. ಚರಿತ್ರೆಯಲ್ಲಿ ಅದು ಹಲವಾರು ಸಾರಿ ಆಕ್ರಮಣಕ್ಕೊಳಗಾಯಿತು ಮತ್ತು ನಾವು ೧೦೦೦ ವರ್ಷಗಳ ಕಾಲ ಗುಲಾಮರಾಗಿ ಉಳಿದೆವು. ಇದೆಲ್ಲದರ ಹೊರತಾಗಿಯೂ, ನಾವು ಎತ್ತರಕ್ಕೇರುವುದನ್ನು ಮತ್ತು ಪ್ರಗತಿ ಹೊಂದುವುದನ್ನು ಮುಂದುವರಿಸಿರುವೆವು.

ಹೀಗಿದ್ದರೂ, ಪ್ರಸ್ತುತದಲ್ಲಿ ನಮ್ಮ ದೇಶವು ಒಂದು ಬಹಳ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಉತ್ಪನ್ನಗಳ ಬೆಲೆಗಳು ಮೇಲಕ್ಕೇರುತ್ತಿವೆ ಮತ್ತು ಪ್ರತಿದಿನವೂ ಕುಸಿಯುತ್ತಿರುವ ಭಾರತದ ರೂಪಾಯಿಯ ವಿರುದ್ಧ ಡಾಲರ್ ಮೇಲಕ್ಕೇರುತ್ತಿದೆ.

ಎಲ್ಲೆಡೆಯೂ ಎಷ್ಟೊಂದು ಮಿತಿಮೀರಿದ ಭ್ರಷ್ಟಾಚಾರವಿದೆ. ಇವತ್ತು ಜನರು ನಾಚಿಕೆಯಿಲ್ಲದೆ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಬಹಳ ಆಘಾತಕಾರಿ. ಹಿಂದಿನ ದಿನಗಳಲ್ಲಿ, ಒಂದು ಜಾಗವು ಭ್ರಷ್ಟವಾಗಿದೆಯೆಂದು ಕಂಡುಬಂದಲ್ಲಿ ಜನರು ರಾಜೀನಾಮೆ ನೀಡಿ, ಆ ಸಂಸ್ಥೆಯನ್ನು ಅಥವಾ ಹುದ್ದೆಯನ್ನು ತೊರೆಯುತ್ತಿದ್ದರು. ಆದರೆ ಇವತ್ತು ನಮ್ಮ ದೇಶದಲ್ಲಿ ಹಲವಾರು ದುರಾಚಾರಗಳು ನಡೆಯುತ್ತಿವೆ. ಭಾರತದಲ್ಲಿ ಕಾಮನ್‌ವೆಲ್ತ್ ಪಂದ್ಯಗಳನ್ನು ಸಂಘಟಿಸುತ್ತಿದ್ದ ಸಂದರ್ಭದಲ್ಲಿ, ಕೆಲವು ಮಂತ್ರಿಗಳನ್ನು ಲಂಚ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಯಿತು. ಆದರೆ ಸ್ವಲ್ಪ ಸಮಯದ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಮತ್ತು ಸಂಸತ್ತಿನಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಯಿತು. ಇತ್ತೀಚೆಗೆ ನಡೆದ ೨ಜಿ ಹಗರಣದಲ್ಲಿ, ಕೆಲವು ಸರಕಾರಿ ಅಧಿಕಾರಿಗಳನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸೆರೆಮನೆಗೆ ಕಳುಹಿಸಲಾಯಿತು. ಆದರೆ ಕೆಲವು ದಿನಗಳ ಬಳಿಕ ಅವರನ್ನು ಹೋಗಲು ಬಿಡಲಾಯಿತು ಮತ್ತು ಅವರು ಸಂಸತ್ತಿಗೆ ಮರಳಿ ಹೋದರು. ಅವರನ್ನು ಜೈಲಿಗೆ ಹಾಕಲಾಗಿದ್ದರೂ ಕೂಡಾ, ಅಲ್ಲಿದ್ದ ಸಂದರ್ಭದಲ್ಲಿ ಅವರು ಹೊರಗಿದ್ದುದಕ್ಕಿಂತ ಹೆಚ್ಚು ಆರೋಗ್ಯವಂತರಾದರು. ಬಹುಶ: ತಾವು ಮೊದಲು ಏನನ್ನು ತಿಂದಿದ್ದರೋ (ಹಣ) ಅದನ್ನು ಜೀರ್ಣಿಸಿಕೊಳ್ಳುವುದಕ್ಕಾಗಿ ಅವರು ಅಲ್ಲಿಗೆ ಹೋಗಿರಬೇಕು (ನಗು). ಅದರ ನಂತರ ಮತ್ತೊಮ್ಮೆ ಹೊರಹೋಗಲು ಅವರನ್ನು ಬಿಡುಗಡೆಗೊಳಿಸಲಾಯಿತು. ಈ ಆರೋಪಿ ವ್ಯಕ್ತಿಗಳ ಕಡತಗಳು, ಮಹಾರಾಷ್ಟ್ರದಲ್ಲಿನ ಪ್ರಾಕೃತಿಕ ವಿಕೋಪಗಳಲ್ಲಿ ’ನಿಗೂಢವಾಗಿ’ ಸುಟ್ಟುಹೋಗುತ್ತವೆ (ಅಂದರೆ, ನಿಜವಾದ ಸಾಕ್ಷ್ಯಗಳನ್ನು ಪ್ರಾಕೃತಿಕ ವಿಕೋಪಗಳ ಸುಳ್ಳು ನೆಪಗಳಲ್ಲಿ ನಾಶಪಡಿಸಲಾಗುತ್ತದೆ). ಅಂತಹ ಕಡತಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿಡಲಾದಂತಹ ಒಂದು ಸರಕಾರಿ ಕಛೇರಿಗೆ ಬೆಂಕಿ ಹಿಡಿದು ಸಂಪೂರ್ಣವಾಗಿ ಸುಟ್ಟುಹೋಗುತ್ತದೆ.

ಇಂತಹ ಘಟನೆಗಳನ್ನು ನೋಡಿ ಜನರ ಹೃದಯಗಳು ಸುಡುತ್ತಿವೆ. ನಿಮಗೆ ಗೊತ್ತಿದೆಯಾ, ಕೆಲವು ಕಡತಗಳನ್ನು ಎಂತಹ ಪ್ರದೇಶದಲ್ಲಿ ಇರಿಸಲಾಗಿದೆಯೆಂದರೆ, ಅಲ್ಲಿ ನಿಜವಾಗಿ ಬೆಂಕಿ ತಗಲುವ ಅವಕಾಶ ಇಲ್ಲವೇ ಇಲ್ಲ. ಆದರೂ ಅಂತಹ ಜಾಗಗಳಲ್ಲಿ ಕಡತಗಳು ಕಾಣೆಯಾಗುತ್ತವೆ ಅಥವಾ ಸುಟ್ಟುಹೋಗುತ್ತವೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಸುಮಾರು ೧೭೫ ಕಡತಗಳು ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾದವು. ಇದು ನಿಜಕ್ಕೂ ಆಘಾತಕಾರಿ. ನಮ್ಮ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರಲಿಲ್ಲ. ಈ ದಿನಗಳಲ್ಲಿ ಜನರು ಮುಕ್ತವಾಗಿ ಕಳವು ಮಾಡುತ್ತಾರೆ ಮತ್ತು ನಂತರ ಅವರನ್ನು ಅಪರಾಧದ ಅಪರಾಧಿಗಳೆಂದು ಸಾಬೀತುಪಡಿಸುವ ಎಲ್ಲಾ ಪುರಾವೆಗಳನ್ನು ನಾಶಪಡಿಸುತ್ತಾರೆ. ಅದು ಮುಗಿಯಿತು. ಇದು ನಿಜಕ್ಕೂ ನಮ್ಮ ದೇಶದಲ್ಲಿ ಒಂದು ಅವನತಿಯಾಗಿದೆ ಮತ್ತು ಅತ್ಯಂತ ಚಿಂತೆಯ ವಿಷಯವಾಗಿದೆ. ಯಾವಾಗೆಲ್ಲಾ ಅಂತಹ ಅವನತಿ ಉಂಟಾಗುವುದೋ, ಆಗ ದೇಶದ ಜನರು ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಾಗುತ್ತಾರೆ ಮತ್ತು ಒಟ್ಟಿಗೆ ಎದ್ದೇಳುತ್ತಾರೆ. ಅದಕ್ಕಿರುವ ಸಮಯವು ಬಂದಿದೆ. ಅಲ್ಲವೇ? ನೀವೆಲ್ಲರೂ ಏನು ಹೇಳುವಿರಿ?

ಪ್ರಶ್ನೆ: ಗುರುದೇವ, ನಾನು ಸೋಮಾರಿತನವನ್ನು ಹೇಗೆ ಜಯಿಸಬಹುದು? ಬಂದು ಈ ಪ್ರಶ್ನೆಯನ್ನು ಕೇಳಲು ಸಹ ನನಗೆ ಒಂದು ತಿಂಗಳು ಹಿಡಿಯಿತು!

ಶ್ರೀ ಶ್ರೀ ರವಿ ಶಂಕರ್: ಈ ಪ್ರಶ್ನೆಗೆ ನಾನು ಮುಂದಿನ ವರ್ಷ ಉತ್ತರಿಸುವೆನು! (ನಗು). ನಿನಗೆ ಉತ್ತರವನ್ನು ಕೊಡಲು ನಾನು ಯಾಕೆ ಅವಸರಪಡಬೇಕು? ಹೇಗಿದ್ದರೂ ಈ ಕೂಡಲೇ ನಿನಗೆ ಉತ್ತರವನ್ನು ಕೊಡುವುದರಿಂದ ಯಾವ ಪ್ರಯೋಜನವೂ ಇಲ್ಲ.

ನಿನಗೆ ಬೇಕಿದ್ದಷ್ಟು ಕಾಲ ಸೋಮಾರಿಯಾಗಿ ಉಳಿ. ಒಂದಲ್ಲ ಒಂದು ದಿನ ನಿನಗೆ ಅದು ಬೇಜಾರೆನಿಸುವುದು. ಮನುಷ್ಯನಿಗೆ ಬಹಳ ಸುಲಭವಾಗಿ ಬೇಸರಿಕೆಯುಂಟಾಗುತ್ತದೆ; ಮತ್ತು ಒಬ್ಬ ಸೋಮಾರಿ ವ್ಯಕ್ತಿಗೆ ಇನ್ನೂ ವೇಗವಾಗಿ ಬೇಸರಿಕೆಯುಂಟಾಗುತ್ತದೆ. ನಿನಗೆ ಅದು ಸಾಕುಸಾಕಾದ ಕ್ಷಣದಲ್ಲೇ, ಹೊಸ ದಾರಿಗಳು ನಿನಗೆ ತೆರೆದುಕೊಳ್ಳುವುವು. ಏನನ್ನಾದರೂ ಹೇಳಿ ನಾನು ನನ್ನ ಗಂಟಲು ಯಾಕೆ ಬಳಲಿಸಿಕೊಳ್ಳಬೇಕು? ನಾನು ಕೂಡಾ ನಿನ್ನ ಉತ್ತರಕ್ಕಾಗಿರುವ ಸಮಯವನ್ನು ಮುಂದೆ ಹಾಕುತ್ತಾ ಇರುವೆನು.

ಮಹಾಋಷಿ ಅಷ್ಟಾವಕ್ರ ಹೀಗೆಂದು ಹೇಳುತ್ತಾರೆ, "ಒಬ್ಬ ಸೋಮಾರಿ ವ್ಯಕ್ತಿಗಿಂತ ಹೆಚ್ಚು ಸಂತೋಷವಾಗಿರುವವರು ಯಾರೂ ಇಲ್ಲ." ಅವರು ಸೋಮಾರಿತನದ ಬಗ್ಗೆ ಅಂತಹ ಉದಾತ್ತ ಪ್ರಶಂಸೆಗಳನ್ನು ಮಾಡುತ್ತಾರೆ. "ಎಷ್ಟು ಸೋಮಾರಿಯಾಗೆಂದರೆ, ನಿನ್ನ ಮನಸ್ಸಿನಲ್ಲಿ ಯಾವುದರ ಬಗ್ಗೆಯೂ ಬಯಕೆಗಳು ಬರುವುದು ನಿಲ್ಲುತ್ತದೆ" ಎಂದು ಅವರು ಹೇಳುತ್ತಾರೆ. ನಿನಗೆ ಹಸಿವಾದಾಗ ಮಾತ್ರ ನೀನು ಅಡುಗೆಮನೆ ಅಥವಾ ಒಂದು ಹೋಟೇಲಿನ ಕಡೆಗೆ ಓಡುವೆ. ಹಾಗೆ ಮಾಡುವುದನ್ನು ಕೂಡಾ ನಿಲ್ಲಿಸು ಎಂದು ನಾನು ಹೇಳುವೆನು! (ನಗು). ಇವತ್ತು ನಿನಗೆ ಹಸಿವಾದರೂ ಕೂಡಾ, ನೀನದನ್ನು ಮುಂದೆ ಹಾಕಿ ನಾಳೆ ಅಥವಾ ಬಹುಶಃ ಮುಂದಿನ ತಿಂಗಳಾದರೂ ತಿನ್ನು. ನಿನಗೆ ಈಗ ಬಾಯಾರಿಕೆಯಾದರೆ, ಕುಡಿದು ಅದನ್ನು ತಣಿಸಲು ಅವಸರವೇನಿದೆ?

ನೀನು ನೀರನ್ನು ಆಮೇಲೆ ಕುಡಿಯಬಹುದು. ವಿಶ್ರಾಮ ಮಾಡು ಮತ್ತು ಮಲಗಿಕೊಂಡಿರು. ನೀರು ತನ್ನಿಂತಾನೇ ನಿನ್ನ ಬಾಯಿಗೆ ಬರುವುದು! (ನಗು). ಅದೇ ರೀತಿಯಲ್ಲಿ, ಕೋಪಗೊಳ್ಳುವುದರಲ್ಲಿ ಅಥವಾ ಯಾರನ್ನಾದರೂ ಶಪಿಸುವುದರಲ್ಲಿ ಕೂಡಾ ಸೋಮಾರಿಯಾಗಿರು. ನಿನಗೆ ಏನಾದರೂ ಕೆಟ್ಟ ಕೆಲಸವನ್ನು ಅಥವಾ ಲೋಭದಿಂದಾಗಿ ಒಂದು ಹಗರಣವನ್ನು ಮಾಡಬೇಕೆಂದು ಅನ್ನಿಸಿದರೆ, ಆಗ ಅದರ ಬಗ್ಗೆ ಸೋಮಾರಿತನದಿಂದಿರು. ಆದರೆ ಅಂತಹ ವಿಷಯಗಳಲ್ಲಿ ನೀವು ಸೋಮಾರಿತನದಿಂದ ವರ್ತಿಸುವುದಿಲ್ಲ. ವಾಸ್ತವವಾಗಿ ನೀವು ಅಂತಹ ವಿಷಯಗಳನ್ನು ಬಹಳ ಬೇಗನೇ ಮಾಡುತ್ತೀರಿ. ನೀವು ಯಾರನ್ನಾದರೂ ಶಪಿಸಬೇಕಿದ್ದರೆ, ನೀವು ಒಂದು ಕ್ಷಣ ಕೂಡಾ ಯೋಚಿಸುವುದಿಲ್ಲ. ನೀವದನ್ನು ಕೂಡಲೇ ಮಾಡುತ್ತೀರಿ. ಅಂತಹ ಕ್ಷಣಗಳಲ್ಲಿ ನೀವು ಸೋಮಾರಿತನವನ್ನು ಅನುಭವಿಸುವುದೇ ಇಲ್ಲ. ಅಲ್ಲವೇ? ಹಾಗಾಗಿ ನೀವು ೧೦೦% ಸೋಮಾರಿಯಾದರೆ (ಜೀವನದ ಎಲ್ಲಾ ಮಗ್ಗುಲುಗಳಲ್ಲಿಯೂ), ಆಗ ನೀವು ನಿಜವಾಗಿಯೂ ಜ್ಞಾನಿಯಾಗಿರುವಿರಿ. ಆಗ ನೀವು ಒಬ್ಬ ನಿಷ್ಕಾಮ-ಕರ್ಮ ಯೋಗಿಯಾಗಿರುವಿರಿ (ಯಾವುದೇ ವಿಷಯಕ್ಕೆ ಅಂಟಿಕೊಳ್ಳದೆ ಕೆಲಸ ಮಾಡುವ ವ್ಯಕ್ತಿ). ಆದರೆ ನಾನು ಹೇಳುತ್ತೇನೆ ಕೇಳಿ, ಇದು ಮಾಡಲು ಅತ್ಯಂತ ಕಷ್ಟಕರವಾದುದು. ಸಂಪೂರ್ಣವಾಗಿ ೧೦೦% ಸೋಮಾರಿಯಾಗುವುದು ಬಹಳ ಕಠಿಣ. ಹೇಗೆ ನೀವು ೧೦೦% ನಿರೀಶ್ವರವಾದಿಯಾಗಲು ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ ನೀವು ೧೦೦% ಸೋಮಾರಿಯಾಗಲು ಸಾಧ್ಯವಿಲ್ಲ. ಅದು ಅಸಾಧ್ಯ.
 
ಪ್ರಶ್ನೆ: ಗುರುದೇವ, ನಾನೊಬ್ಬ ಪತ್ರಕರ್ತ. ಒಬ್ಬ ಒಳ್ಳೆಯ ಪತ್ರಕರ್ತನ ಗುಣಗಳು ಯಾವುದಾಗಿರಬೇಕು ಎಂಬುದನ್ನು ದಯವಿಟ್ಟು ವಿವರಿಸಿ.

ಶ್ರೀ ಶ್ರೀ ರವಿ ಶಂಕರ್: ಮೊದಲನೆಯದೆಂದರೆ, ಜನರ ಮುಂದೆ ಸತ್ಯವನ್ನು ಪ್ರಸ್ತುತಪಡಿಸುವುದು. ಕೆಲವೊಮ್ಮೆ ಸತ್ಯವು ಎಷ್ಟೊಂದು ಕಹಿ ಮತ್ತು ಭಯಾನಕವಾದುದಾಗಿರಬಹುದೆಂದರೆ, ಅದು ಜನರ ಹೃದಯಗಳನ್ನು ನುಚ್ಚುನೂರುಗೊಳಿಸಬಹುದು ಮತ್ತು ಅವರ ಉತ್ಸಾಹವನ್ನು ಕೊನೆಗೊಳಿಸಬಹುದು. ಅವರು ಸಂಪೂರ್ಣವಾಗಿ ಭಯ ಮತ್ತು ಅಸುರಕ್ಷತೆಯ ಹಿಡಿತಕ್ಕೊಳಗಾಗಬಹುದು. ಹಾಗಾಗಿ ಜನರಿಗೆ ಸತ್ಯವನ್ನು ಪ್ರಸ್ತುತಪಡಿಸುವುದರೊಂದಿಗೆ, ನೀನು ಅವರ ನಂಬಿಕೆ ಮತ್ತು ಉತ್ಸಾಹಗಳನ್ನು ಎತ್ತಿಹಿಡಿಯುವಲ್ಲಿ ಅವರಿಗೆ ಸಹಾಯ ಮಾಡುವುದನ್ನು ಹಾಗೂ ಒಂದು ಉತ್ತಮವಾದುದಕ್ಕಾಗಿ ಅವರ ಭರವಸೆಗಳನ್ನು ಜೀವಂತವಾಗಿರಿಸುವುದನ್ನು ಖಾತ್ರಿಪಡಿಸು. ಹೀಗೆ, ಒಂದು ಕಡೆಯಲ್ಲಿ ಸತ್ಯವನ್ನು ಅದಿರುವಂತೆಯೇ, ಅದನ್ನು ವಿಕೃತಗೊಳಿಸದೆಯೇ ನೀನು ಪ್ರಸ್ತುತಪಡಿಸಬೇಕು ಮತ್ತು ಇನ್ನೊಂದು ಕಡೆಯಲ್ಲಿ, ಎಲ್ಲಾ ಸಮಯದಲ್ಲೂ ಜನರಲ್ಲಿ ಯಾವತ್ತೂ ಭರವಸೆಯ ಒಂದು ಕಿರಣವು ಹೊತ್ತಿರುವುದನ್ನು ಕೂಡಾ ನೀನು ಖಾತ್ರಿಪಡಿಸಿಕೊಳ್ಳಬೇಕು. ಇಲ್ಲವಾದರೆ, ಜನರು ಮಾನಸಿಕ ರೋಗಗಳು ಮತ್ತು ಖಿನ್ನತೆಗೆ ಬಲಿಯಾಗುವರು. ನಿಮಗೆ ಗೊತ್ತಾ, ಭಾರತದಲ್ಲಿ ಖಿನ್ನತೆಯಂತಹ ಸಂಗತಿಯೇ ಇರಲಿಲ್ಲ.

ಇದಕ್ಕಾಗಿಯೇ ಹಿಂದಿ ಅಥವಾ ಸಂಸ್ಕೃತದಲ್ಲಿ ಅದಕ್ಕೆ ಸಂಬಂಧಿಸಿದ ಪದ ಇಲ್ಲದಿರುವುದು. ಭಾರತೀಯ ಪದ್ಧತಿಯಲ್ಲಿ ಆ ಹೆಸರಿನ ಯಾವುದೇ ರೋಗ ಕೂಡಾ ಇಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯು ಎಷ್ಟು ಉನ್ನತ ವಿಕಸನ ಹೊಂದಿತ್ತು ಹಾಗೂ ಶ್ರೀಮಂತವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.

ಪ್ರಶ್ನೆ: ಗುರುದೇವ, ಇವತ್ತು ನಿದ್ರಾಹೀನತೆಯ ಸಮಸ್ಯೆಯು ಸಾಕಷ್ಟು ಪ್ರಚಲಿತವಾಗಿದೆ, ವಿಶೇಷವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ. ಯೋಗ ಮತ್ತು ಧ್ಯಾನಗಳ ಮೂಲಕ ಈ ಸಮಸ್ಯೆಗೆ ಯಾವುದಾದರೂ ಪರಿಹಾರ ಸಿಗುವುದೇ? ಈ ದಿನಗಳಲ್ಲಿ ನಾನು ಇದನ್ನು ಅನುಭವಿಸಲು ತೊಡಗಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿಯೂ ಇದಕ್ಕೆ ಯೋಗ ಮತ್ತು ಧ್ಯಾನಗಳ ಮೂಲಕ ಒಂದು ಪರಿಹಾರವಿದೆ. ನೀನು ನಿಯಮಿತವಾಗಿ ಯೋಗ ನಿದ್ರೆ ಮತ್ತು ಯೋಗಾಸನಗಳನ್ನು ಅಭ್ಯಸಿಸಬೇಕು. ಅದು ಖಂಡಿತವಾಗಿಯೂ ಸಹಕಾರಿಯಾಗುವುದು. ನಿಮಗೆ ಶಂಖಪುಷ್ಪಿ ಮತ್ತು ಮೇಧ್ಯ ರಸಾಯನದಂತಹ ಆಯುರ್ವೇದ ಔಷಧಿಗಳೂ ಸಹಾಯ ಮಾಡುವುವು. ಗಸಗಸೆ ಕೂಡಾ ಸಹಾಯ ಮಾಡಬಲ್ಲದು. ತಮಿಳುನಾಡಿನಲ್ಲಿ ಅದು ಅದಿರಸಂ ಎಂದು ಕರೆಯಲ್ಪಡುತ್ತದೆ.

ನೀನು ಅದನ್ನು ಒಂದು ಅಥವಾ ಒಂದೂವರೆ ಚಮಚದಷ್ಟು ತೆಗೆದುಕೊಂಡು, ಅರೆದು, ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ತೆಗೆದುಕೊಳ್ಳಬಹುದು. ನಿನಗೆ ಗಾಢ ನಿದ್ರೆ ಬರುವುದು. ನೀನು ಬೇರೆ ಯಾವುದಾದರೂ ಖಾಯಿಲೆಯಿಂದ ಬಳಲುತ್ತಿರುವುದಾದರೆ, ನೀನು ಘರ್ ಕ ಡಾಕ್ಟರ್ ಎಂಬ ಕಿಟ್‌ನಲ್ಲಿರುವ (ಮನೆಯಲ್ಲಿನ ಸಾಮಾನ್ಯ ಖಾಯಿಲೆಗಳು ಮತ್ತು ಅಸ್ವಸ್ಥತೆಗಳಿಗಾಗಿರುವ ಆಯುರ್ವೇದದ ಔಷಧಿಗಳನ್ನು ಹೊಂದಿದ ಒಂದು ಔಷಧೀಯ ಸಾಮಾನುಗಳ ಗಂಟು) ಔಷಧಿಗಳನ್ನು ತೆಗೆದುಕೊಳ್ಳಬಹುದು.

ಪ್ರಶ್ನೆ: ಗುರುದೇವ, ಅತಿಯಾದ ಜ್ಞಾನವು ಒಬ್ಬ ವ್ಯಕ್ತಿಯನ್ನು ದುಃಖಿತನನ್ನಾಗಿಸಬಲ್ಲದೇ? ನನ್ನ ತಂದೆಗೆ ಅದುವೇ ಆಗುತ್ತಿರುವುದೆಂದು ನನಗನ್ನಿಸುತ್ತದೆ.

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅದು ಸಾಧ್ಯವಿಲ್ಲ. ಮೊದಲನೆಯದಾಗಿ, ಅತಿಯಾದ ಜ್ಞಾನವೆಂಬುದಿಲ್ಲ. ಉದಾಹರಣೆಗೆ, ಮಳೆ ಬರುತ್ತಿದ್ದರೆ, ಅದು ಜ್ಞಾನ. ಅದರ ಬಗ್ಗೆ ಹೆಚ್ಚಿನ ಜ್ಞಾನ ಅಥವಾ ಕಡಿಮೆ ಜ್ಞಾನವೆಂಬುದೇನು? ಮಳೆ ಬರುವುದು ನಿಂತರೆ, ಮಳೆ ನಿಂತಿರುವುದರ ಬಗ್ಗೆ ಯಾವುದಾದರೂ ವ್ಯಕ್ತಿ ಹೆಚ್ಚು ಅಥವಾ ಕಡಿಮೆ ತಿಳಿದಿರುತ್ತಾನೆಯೇ? ಅಧಿಕವಾದ ಜ್ಞಾನ ಎಂಬುದೇನೂ ಇಲ್ಲ. ಹೌದು, ನೀವು ನಿಮ್ಮ ಬುದ್ಧಿಯನ್ನು ಅತಿಯಾಗಿ ಬಳಸಿದರೆ, ಆಗ ಜೀವನವು ಬಹಳ ಶುಷ್ಕವಾಗುತ್ತದೆ ಮತ್ತು ನೀವು ಯಾವುದೇ ಭಾವನಾರಹಿತರಾಗುತ್ತೀರಿ. ಆಗ ನೀವು ನಿಮ್ಮ ಬುದ್ಧಿಯ ಮೂಲಕ ಮಾತ್ರ ಕೆಲಸ ಮಾಡುತ್ತೀರಿ, ಬೇರೆ ಯಾವುದರಿಂದಲೂ ಅಲ್ಲ. ಇದು ಒಬ್ಬ ವ್ಯಕ್ತಿಯನ್ನು ಒಳಗಿನಿಂದ ವ್ಯಾಕುಲಗೊಳಿಸುತ್ತದೆ ಮತ್ತು ಅಸುರಕ್ಷಿತಗೊಳಿಸುತ್ತದೆ.

ಪ್ರಶ್ನೆ: ಗುರುದೇವ, ಕೆಲವು ದಿನಗಳ ಹಿಂದೆ ನೀವು ತಂಪು ಕನ್ನಡಕ ಧರಿಸಿರುವುದನ್ನು ನಾನು ನೋಡಿದೆ. ಆಗ ಆನು ಯೋಚಿಸಿದುದೇನೆಂದರೆ, ಜೀವನದ ಕಠಿಣ ಸೂರ್ಯಕಿರಣಗಳಿಂದ ನಮ್ಮನ್ನು ರಕ್ಷಿಸಲು ನೀವು ನಮಗೆ ಸುದರ್ಶನ ಕ್ರಿಯೆಯೆಂಬ ಕನ್ನಡಕ ನೀಡಿರುವಿರೆಂದು. ನಾನು ಆತ್ಮಸಾಕ್ಷಾತ್ಕಾರದ ಟೋಪಿಯನ್ನು ಯಾವಾಗ ಧರಿಸಬಲ್ಲೆನೆಂಬುದನ್ನು ನಾನು ತಿಳಿಯಲು ಬಯಸುತ್ತೇನೆ.

ಶ್ರೀ ಶ್ರೀ ರವಿ ಶಂಕರ್: ಆತ್ಮಸಾಕ್ಷಾತ್ಕಾರವೆಂದರೆ, ನಿನಗೆ ಬೇಕಾದಾಗ ಧರಿಸಿ, ನಿನಗೆ ಬೇಕಾದಾಗ ತೆಗೆಯಬಹುದಾದ ಒಂದು ಟೋಪಿಯಂತಲ್ಲ. ಅದು, ತುಂಬಾ ಉದ್ದವಾಗಿ ಬೆಳೆದಾಗ ಕತ್ತರಿಸಿ ಸರಿಪಡಿಸಬಹುದಾದಂತಹ ನಿನ್ನ ತಲೆಯ ಮೇಲಿನ ಕೂದಲಿನಂತೆಯೂ ಅಲ್ಲ. ಅದು, ಯಾವತ್ತೂ ಕಡಿಮೆಯಾಗದ ಅಥವಾ ಮಾಯವಾಗದ, ನಿನ್ನೊಳಗಿರುವ ಪ್ರಕಾಶದ ಹೊಳಪಾಗಿದೆ. ಅದು ಬೆಳೆಯುವುದೂ ಇಲ್ಲ, ಕ್ಷೀಣಿಸುವುದೂ ಇಲ್ಲ. ಅದು ಕೇವಲ ’ಇದೆ’. ನೀನು ಕೇವಲ ಅದನ್ನು ಅರಿಯಬೇಕು ಮತ್ತು ಅದನ್ನು ಗುರುತಿಸಬೇಕು. ನೀನು ಸ್ಥಿರವಾದ ಮತ್ತು ನಿನ್ನ ಆತ್ಮದಲ್ಲಿ ವಿರಮಿಸಿದ ಕ್ಷಣ, ಕೂಡಲೇ ನೀನದನ್ನು ಗುರುತಿಸುವೆ.

ಅದಕ್ಕಾಗಿಯೇ ಸಂಸ್ಕೃತದಲ್ಲಿ ಒಂದು ಮಾತಿದೆ - ’ಪ್ರತ್ಯ-ಭಿಗ್ಯ ಹೃದಯ’. ಇದರರ್ಥ, ಆ ಆಂತರಿಕ ಪ್ರಕಾಶವನ್ನು ಗುರುತಿಸುವುದು, ಒಳಗಿನಿಂದ ಇರುವ ಪ್ರಕಾಶದ ಬಗ್ಗೆ ಅರಿಯುವುದು.