ಗುರುವಾರ, ಅಕ್ಟೋಬರ್ 4, 2012

ತೀರ್ಥಯಾತ್ರೆಯ ಮಹತ್ವ

04
2012
Oct
ಬೆಂಗಳೂರು ಆಶ್ರಮ, ಭಾರತ



ಪ್ರಶ್ನೆ: ಪ್ರೀತಿಯ ಗುರೂಜಿ, ದಯವಿಟ್ಟು ನೀವು ಬಂಧನದ ಬಗ್ಗೆ ಮಾತನಾಡುವಿರಾ? ಆತ್ಮವು ಯಾಕೆ ಸಿಕ್ಕಿಹಾಕಿಕೊಂಡಂತೆ ಅನುಭವಿಸುತ್ತದೆ, ಮತ್ತು ಬಂಧನದ ಕಾರಣಗಳೇನು?
ಶ್ರೀ ಶ್ರೀ ರವಿಶಂಕರ್: ಬಂಧನದ ಕಾರಣವು ಅಜ್ಞಾನವಾಗಿದೆ, ಮತ್ತು ಅಲ್ಲಿ ಅಜ್ಞಾನ ಯಾಕಿದೆ? ಅದಕ್ಕೆ ಯಾವುದೇ ಉತ್ತರವಿಲ್ಲ. ದೇವರು ಯಾಕೆ ಮೊದಲು ಈ ಅಜ್ಞಾನವನ್ನು, ನಂತರ ಅದರಿಂದ ಹೊರಬರಲಿರುವ ದಾರಿಯನ್ನು  ಸೃಷ್ಟಿಸಿದ? ಅದಕ್ಕೇ ಇದನ್ನು ಲೀಲೆ (ದೇವರ ಒಂದು ಆಟ ಅಥವಾ ನಾಟಕ) ಎಂದು ಕರೆಯುವುದು. ಅದು, "ನಾವು ಫುಟ್ಬಾಲ್ ಪಂದ್ಯವನ್ನು ಯಾಕೆ ಆಡುತ್ತೇವೆ? ಚೆಂಡನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ತಳ್ಳುವ, ಕೆಲವು ತರಬೇತುದಾರರು ಮತ್ತು ಕೆಲವು ಆಟಗಾರರು ಒಂದು ಬದಿಯಲ್ಲಿ ಹಾಗೂ ಕೆಲವರು ಇನ್ನೊಂದು ಬದಿಯಲ್ಲಿ ಇರುವ ಮೈದಾನ ಯಾಕಿದೆ? ಅವರು ಯಾಕೆ ತಮ್ಮದೇ ಚೆಂಡುಗಳನ್ನು ಇಟ್ಟುಕೊಂಡು ತಮ್ಮದೇ ಭಾಗಗಳಲ್ಲಿ ಇರುವುದಿಲ್ಲ?" ಎಂದು ಕೇಳಿದಂತೆ. ಆಗ ಅಲ್ಲಿ ಯಾವುದೇ ಪಂದ್ಯವಿರುವುದಿಲ್ಲ! ಆದುದರಿಂದ, ಅಜ್ಞಾನದ ಕಾರಣದಿಂದಾಗಿ ಅಲ್ಲೊಂದು ಆಟವಿದೆ, ಒಂದು ಪಂದ್ಯವಿದೆ. ಅದಕ್ಕಾಗಿಯೇ ಸಂಪೂರ್ಣ ಪ್ರಪಂಚವು ಪರಮಪುರುಷನ ಲೀಲೆ ಎಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರೂಜಿ, ಅನ್ವೇಷಕನು ತಿಳುವಳಿಕೆಯನ್ನು ಸಾಕ್ಷಾತ್ಕಾರವೆಂದು, ಮತ್ತು ಸಾಕ್ಷಾತ್ಕಾರವನ್ನು ಮೋಕ್ಷವೆಂದು ತಪ್ಪಾಗಿ ತಿಳಿದುಕೊಳ್ಳಬಾರದೆಂಬ ಒಂದು ಮಾತಿದೆ. ದಯವಿಟ್ಟು ನೀವು ಇದನ್ನು ವಿವರಿಸುವಿರಾ?
ಶ್ರೀ ಶ್ರೀ ರವಿಶಂಕರ್: ಇದನ್ನು ಯಾರು ಹೇಳಿದರು? ಇನ್ನೊಬ್ಬರ ಹೇಳಿಕೆಗಳ ಮೇಲೆ ವ್ಯಖ್ಯಾನ ನೀಡುವ ಅಭ್ಯಾಸ ನನಗಿಲ್ಲ. ತಿಳುವಳಿಕೆಯೆಂಬುದು ಬೌದ್ಧಿಕವಾದುದು. ಅನುಭವವು ಅದಕ್ಕಿಂತ ಸೂಕ್ಷ್ಮವಾದುದು, ಮತ್ತು ಅನುಭವವನ್ನು ಮೀರಿದುದು ಮೋಕ್ಷವಾಗಿದೆ - ನೀವು ಅನುಭವವಲ್ಲದೆ, ಅನುಭವಿಸುವವರಾಗಿರುವಿರಿ ಎಂಬುದನ್ನು ನೀವು  ಅರ್ಥೈಸಿಕೊಂಡಾಗ.
ಅದಕ್ಕೇ ಭಗವದ್ಗೀತೆಯಲ್ಲಿ ಹೇಳಿರುವುದು, ’ನಾಸ್ತಿ ಬುದ್ಧಿರ್ ಅಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ, ನ ಚಾಭಾವಯತಃ ಶಾಂತಿರ್ ಅಶಾಂತಸ್ಯ ಕುತಃ ಸುಖಂ’ (ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೬೬)
ನಿಮ್ಮ ವೈಯಕ್ತಿಕ ಮನಸ್ಸು, ನಿಮ್ಮೊಳಗೆ ಆಳದಲ್ಲಿರುವ ವಿಶ್ವಾತ್ಮನೊಂದಿಗೆ ಒಂದುಗೂಡಿಲ್ಲದಿದ್ದರೆ, ನಿಮ್ಮಲ್ಲಿ ಬೌದ್ಧಿಕ ತೀಕ್ಷ್ಣತೆಯೂ ಇರುವುದಿಲ್ಲ, ನಿಮ್ಮಲ್ಲಿ ಭಾವನಾತ್ಮಕ ನಿರಾಳತೆ ಮತ್ತು ಸ್ಪಷ್ಟತೆಯೂ ಇರುವುದಿಲ್ಲ.

ಪ್ರಶ್ನೆ: ಗುರೂಜಿ, ಒಬ್ಬರಿಗೆ ಗುರುವಿನೊಂದಿಗೆ ನೇರವಾದ ಸಂಪರ್ಕವಿದ್ದರೆ ಅವರು ದೇವಾಲಯಗಳನ್ನು ಸಂದರ್ಶಿಸುವುದರ ಅಗತ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್: ದೇವಾಲಯಗಳನ್ನು ಸಂದರ್ಶಿಸುವುದು ಹೆಚ್ಚಾಗಿ ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ವಿದ್ಯಮಾನವಾಗಿದೆ. ಖಂಡಿತವಾಗಿ ಅದಕ್ಕೊಂದು ಆಧ್ಯಾತ್ಮಿಕ ಸ್ವಾದ ಕೂಡಾ ಇದೆ. ಆದರೆ ಅದು ಅಗತ್ಯವಲ್ಲ. ನೀವು ಮನೆಯಲ್ಲಿ ಕುಳಿತುಕೊಂಡು, ನೀವಿರುವಲ್ಲಿಯೇ ದೇವಾಲಯವನ್ನು ಅನುಭವಿಸಬಹುದು.
ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜೀವಂತವಾಗಿರಿಸುವ ಸಲುವಾಗಿ, ಮತ್ತು ನಮ್ಮ ಮಕ್ಕಳಲ್ಲಿ ಹಾಗೂ ನಮ್ಮ ಯುವಜನತೆಯಲ್ಲಿ, ಪವಿತ್ರತೆಯ ಒಂದು ಭಾವನೆಯನ್ನು ತರಲಿಕ್ಕಾಗಿ, ಒಮ್ಮೊಮ್ಮೆ ಯಾತ್ರೆ ಹೋಗುವುದು, ದೇವಾಲಯಗಳಿಗೆ ಕೂಡಾ ಹೋಗುವುದು ಒಳ್ಳೆಯದು. ಅದು, ಅಲ್ಲಿ ಮಾತ್ರ ನೀವು ದೇವರನ್ನು ಹುಡುಕಬಹುದು ಎಂಬ ಕಾರಣಕ್ಕಾಗಿಯಲ್ಲ, ಆದರೆ ಸಂಪ್ರದಾಯಗಳನ್ನು ಜೀವಂತವಾಗಿರಿಸಲು. ಅದಕ್ಕಾಗಿಯೇ ನಮ್ಮಲ್ಲಿ ಉತ್ಸವಾಚರಣೆಗಳಿರುವುದು, ಮತ್ತು ಯಾತ್ರೆಗಳನ್ನಿಟ್ಟಿರುವುದು ಜನರನ್ನು ಒಂದುಗೂಡಿಸಲು. ಆದುದರಿಂದ, ಇದು ಇರುವುದು ಹೆಚ್ಚಾಗಿ ಸಾಮಾಜಿಕ ಕಾರಣದಿಂದ.
ನೀವು ನಿಮ್ಮ ಧ್ಯಾನವನ್ನು ಮತ್ತು ಭಜನೆ ಹಾಡುವುದನ್ನು ಮನೆಯಲ್ಲಿ ಮಾಡಬಹುದು. ಆದರೆ ನೀವಿಲ್ಲಿಗೆ, ಆಶ್ರಮಕ್ಕೆ ಬರುವಾಗ ಮತ್ತು ನಾವು ಜೊತೆಯಲ್ಲಿ ಧ್ಯಾನ ಮಾಡುವಾಗ, ಭಜನೆಗಳನ್ನು ಜೊತೆಯಲ್ಲಿ ಹಾಡುವಾಗ, ಸಾಮೂಹಿಕ ಪ್ರಜ್ಞೆಯಲ್ಲಿ ಒಂದು ಏರಿಕೆಯುಂಟಾಗುತ್ತದೆ. ನಿಮ್ಮ ಸಾಮೂಹಿಕ ಶಕ್ತಿಯು ಏರುತ್ತದೆ ಮತ್ತು ಅದಕ್ಕೊಂದು ಬೇರೆಯ ಸ್ವಾದವಿರುತ್ತದೆ.
ಅದೇ ಸಮಯದಲ್ಲಿ ಯಾರಾದರೂ, "ನಾವು ಮನೆಯಲ್ಲಿಯೇ ಧ್ಯಾನ ಮಾಡಬಾರದೇ?" ಎಂದು ಕೇಳಿದರೆ, ನಾನನ್ನುತ್ತೇನೆ, ಖಂಡಿತವಾಗಿ ನೀವು ಮಾಡಬಹುದು. ನೀವು ಮನೆಯಲ್ಲಿ ಕೂಡಾ ಕುಳಿತುಕೊಂಡು ಧ್ಯಾನ ಮಾಡಬೇಕು ಮತ್ತು ಕೆಲವೊಮ್ಮೆ ನೀವು ಇಲ್ಲಿಗೆ ಕೂಡಾ ಬರಬೇಕು. ದೇವಾಲಯಗಳಿಗೂ ಹಾಗೆಯೇ.

ಪ್ರಶ್ನೆ: ಗುರೂಜಿ, ಶಬ್ದದ ಕಂಪನಗಳು ಮತ್ತು ಅವುಗಳು ಆಲೋಚನೆಗಳ ಮೂಲಕ ಹೇಗೆ ಕಾರ್ಯ ನಿರ್ವಹಿಸುತ್ತವೆಯೆಂಬುದರ ಬಗ್ಗೆ ದಯವಿಟ್ಟು ಮಾತನಾಡಿ. ಉದಾಹರಣೆಗೆ ಧ್ಯಾನದಲ್ಲಿ ಹೇಗೆ ನಾವು ನಮ್ಮ ಮಂತ್ರವನ್ನು ತೆಗೆದುಕೊಳ್ಳುತ್ತೇವೆ?
ಶ್ರೀ ಶ್ರೀ ರವಿಶಂಕರ್: ಅದು ಕೆಲಸ ಮಾಡುತ್ತದೆ! ಅಷ್ಟೇ! ಅದು ಹೇಗೆ ಕೆಲಸ ಮಾಡುತ್ತದೆ, ನಮಗೆ ಗೊತ್ತಿಲ್ಲ. ನೋಡಿ, ಈ ದಿನಗಳಲ್ಲಿ ಬೇರೆ ಬೇರೆ ವಸ್ತುಗಳ ಮೇಲೆ ಸಂವೇದಕ (ಸೆನ್ಸರ್) ಗಳಿರುತ್ತವೆ ಮತ್ತು ನೀವದನ್ನು ಮುಟ್ಟಿದಾಗ, ಬಲ್ಬು ಉರಿಯುತ್ತದೆ. ಕೇವಲ ನಿಮ್ಮ ಸ್ಪರ್ಶವು ಬೀಗಗಳನ್ನು ತೆರೆಯಬಲ್ಲದು. ನಿಮ್ಮ ಫೋನು, ನಿಮ್ಮ ಕೇವಲ ಒಂದು ಸ್ಪರ್ಶದಿಂದ ಕೆಲಸ ಮಾಡುತ್ತದೆ. ನಿಮ್ಮ ಲ್ಯಾಪ್ ಟಾಪ್ ಮತ್ತು ಐಪ್ಯಾಡುಗಳೂ ಕೂಡಾ ಈ ರೀತಿಯಲ್ಲಿ ಕೆಲಸ ಮಾಡುತ್ತವೆ. ಕೇವಲ ಒಂದು ಸ್ಪರ್ಶದಿಂದ ಇದೆಲ್ಲಾ ಆಗುತ್ತದೆ, ಅಲ್ಲವೇ? ಆದುದರಿಂದ, ಎಲ್ಲಾ ಐದು ಜ್ಞಾನಗಳು - ಸ್ಪರ್ಶ, ವಾಸನೆ, ರುಚಿ, ದೃಷ್ಟಿ ಮತ್ತು ಶಬ್ದ - ಇವುಗಳು ವಿದ್ಯುತ್ಕಾಂತೀಯ ಕಂಪನಗಳಲ್ಲದೆ ಬೇರೇನೂ ಅಲ್ಲ. ವಿಜ್ಞಾನವು ಇದನ್ನು ಬಹಳ ಚೆನ್ನಾಗಿ ವಿವರಿಸಬಲ್ಲದು.

ಪ್ರಶ್ನೆ: ಪ್ರೀತಿಯ ಗುರೂಜಿ, ನಿಮ್ಮ ಭಕ್ತರ ಸಾಗರದಲ್ಲಿ ನಾನೊಂದು ಚಿಕ್ಕ ಬಿಂದು ಮಾತ್ರವೆಂಬುದನ್ನು ನಾನು ಕಂಡುಕೊಂಡಿದ್ದೇನೆ. ಆದರೂ, ನೀವು ನನ್ನನ್ನು ಪ್ರೀತಿಸುತ್ತಿರುವಿರಿ ಮತ್ತು ನನ್ನ ಅಗತ್ಯಗಳ ಬಗ್ಗೆ ನಿಮಗೆ ತಿಳಿದಿದೆಯೆಂಬುದರ ಬಗ್ಗೆ ನನಗೆ ವಿಶ್ವಾಸವಿದೆ. ನಾನು ನಿಮಗೆ ವಿಶೇಷವಾದವನು ಎಂದು ನನಗೆ ಅನಿಸುವಂತೆ ಮಾಡುವುದು ನನ್ನ ಅಹಂಕಾರವೇ?
ಶ್ರೀ ಶ್ರೀ ರವಿಶಂಕರ್: ಅಲ್ಲ, ಅದು ಸಂಪೂರ್ಣವಾಗಿ ಸರಿಯಾದುದು. ನೀನು ವಿಶೇಷವಾದವನು ಎಂಬುದನ್ನು ಅನುಭವಿಸಬೇಕು. ಅದಕ್ಕಾಗಿಯೇ ಹೇಳಿರುವುದು - ಅನುಪಮ (ಸರಿಸಾಟಿಯಿಲ್ಲದವನು), ಅದ್ವಿತೀಯ, ಅಪ್ರಮೇಯ (ಅಸಮಾನ). ಇವುಗಳು ಆತ್ಮನ ಗುಣಗಳಾಗಿವೆ. ಆತ್ಮನು ಹೋಲಿಕೆಗೆ ಮೀರಿದವನು.
ಆದುದರಿಂದ ನೀನು ನಿನ್ನ ಬಗ್ಗೆ ಬಹಳ ವಿಶೇಷವಾದವನೆಂದು ಅಂದುಕೊಳ್ಳಬಹುದು - ಯಾವುದೇ ಅಡ್ಡಿಯಿಲ್ಲ. ಆದರೆ ಯಾವುದೇ ಬೇಡಿಕೆಯನ್ನಿಡಬೇಡ. ಅದು ನಿನ್ನೊಳಗೆ ಅನಿಸಿಕೆಗಳಾಗಿ ಉಳಿಯುವ ಹಂತದ ವರೆಗೆ, ನೀನು ಸುರಕ್ಷಿತವಾಗಿರುವೆ ಮತ್ತು ಇತರ ಎಲ್ಲರೂ ಸುರಕ್ಷಿತವಾಗಿರುವರು. ಆದರೆ ನೀನು, "ನಾನು ಬಹಳ ವಿಶೇಷವಾದವನು, ಆದುದರಿಂದ ನನಗೆ ಈ ಸೌಕರ್ಯವನ್ನು ನೀಡಿ" ಎಂದು ಹೇಳಿದರೆ, ಆಗ ಅದು ಬಹಳ ಕಷ್ಟವಾಗುತ್ತದೆ.
ನೀನು ವಿಶೇಷವಾದವನು ಎಂದು ಅಂದುಕೊಳ್ಳಬೇಕೆಂದು ನಾನು ಬಯಸುತ್ತೇನೆ.

ಪ್ರಶ್ನೆ: ಗುರೂಜಿ, ಕೆಲವೊಮ್ಮೆ, ನಾವು ಯಾವುದರ ಬಗ್ಗೆ ಅತೀ ಹೆಚ್ಚು ಭಯಪಡುತ್ತೇವೆಯೋ ಅದೇ ವಿಷಯವು ನಮ್ಮನ್ನು ಬಿಡುಗಡೆಗೊಳಿಸಬಲ್ಲದ್ದಾಗಿರುತ್ತದೆ. ಹಾಗಾದರೆ, ದೇವರು ಯಾಕೆ ನಮ್ಮಲ್ಲಿ ಭಯವನ್ನು ಹಾಕಿದ್ದಾನೆ? ಭಯವಿರುವ ಯಾವುದೇ ಅಗತ್ಯವಿರಲಿಲ್ಲ. 
ಶ್ರೀ ಶ್ರೀ ರವಿಶಂಕರ್: ಭಯವೆಂಬುದು ಕೇವಲ ಪ್ರೀತಿಯು ತಲೆಕೆಳಗಾದುದು. ಆದುದರಿಂದ ಪ್ರೀತಿಯಿರುವಾಗ, ಸ್ವಲ್ಪ ಭಯ ಕೂಡಾ ಬರುತ್ತದೆ.
ಜ್ಞಾನ, ವೈರಾಗ್ಯ, ವಿವೇಕ - ಇವುಗಳು, ಭಯವನ್ನು ಪುನಃ ಪ್ರೀತಿಯಾಗಿ ಪರಿವರ್ತಿಸಲು ಸಹಾಯ ಮಾಡುವ ವಿಷಯಗಳಾಗಿವೆ.
ಪ್ರೀತಿಯು ಮೋಹವಾಗಿ ಮಾರ್ಪಟ್ಟಾಗಲೇ ಭಯವು ಎದ್ದೇಳುವುದು. ಆದುದರಿಂದ ವೈರಾಗ್ಯ ಮತ್ತು ವಿವೇಕದ ಮೂಲಕ, ಪ್ರೀತಿಯನ್ನು ಅದರ ಶುದ್ಧವಾದ ರೂಪದಲ್ಲಿ ಇಟ್ಟುಕೊಳ್ಳಿ.

ಪ್ರಶ್ನೆ: ಪ್ರೀತಿಯ ಗುರೂಜಿ, ಆಧ್ಯಾತ್ಮಿಕ ಪಥವು ಯಾಕೆ ಕೆಲವೊಮ್ಮೆ ಅಷ್ಟೊಂದು ಕಠಿಣವಾಗಿದೆ ಮತ್ತು ಆಯಾಸಗೊಳಿಸುತ್ತದೆ? ನಾನು ಅಜ್ಞಾನಿಯಾಗಿದ್ದಾಗ ಜೀವನವು ಹೆಚ್ಚು ಸರಳವಾಗಿತ್ತು ಎಂದು ಕೆಲವೊಮ್ಮೆ ನನಗನಿಸುತ್ತದೆ.
ಶ್ರೀ ಶ್ರೀ ರವಿಶಂಕರ್: ಆಧ್ಯಾತ್ಮವು ಕಠಿಣವೇ? (ಶ್ರೀ ಶ್ರೀಯವರು ನಗುತ್ತಾರೆ) ಹಾಗೆ ಹೇಳುವವರು ಯಾರು? ಅದು ಕಠಿಣವಾಗಿದ್ದರೆ, ನೀನು ನಗುತ್ತಿರಲು ಹೇಗೆ ಸಾಧ್ಯ? ಮೊದಲು ನೀನು ಸಂವೇದನಾರಹಿತನಾಗಿದ್ದೆ, ಈಗ ನೀನು ಸಂವೇದನಾಶೀಲನಾಗಿರುವೆ, ಅಷ್ಟೇ!
ನೀವು ದಪ್ಪಚರ್ಮದವರಾಗಿರುವಾಗ, ಯಾವುದೂ ದೊಡ್ಡ ವಿಷಯವೇ ಅಲ್ಲ. ನಿಮಗೆ ಏನೂ ಅನ್ನಿಸುವುದೇ ಇಲ್ಲ. ನೀವು ಹಾಗೆಯೇ ಸುಮ್ಮನೇ ನಿಮ್ಮ ಜೀವನವನ್ನು ನಡೆಸುವಿರಿ. ಆದರೆ ನೀವು ಸಂವೇದನಾಶೀಲರಾದಾಗ; ಬಟ್ಟೆಯು ಶುದ್ಧ ಮತ್ತು ಬಿಳಿಯಾದಾಗ, ಒಂದು ಚಿಕ್ಕ ಕಲೆ ಅಥವಾ ಬೊಟ್ಟು ಕೂಡಾ ದೊಡ್ಡದಾಗಿ ಕಾಣಿಸುತ್ತದೆ, ಅಷ್ಟೇ.
ಆಧ್ಯಾತ್ಮವು ನಿಮಗೆ ದುಃಖವನ್ನು ತರುವುದೇ ಇಲ್ಲ. ’ಹೇಯಂ ದುಃಖಂ ಅನಾಗತಂ’ ಎಂದು ಹೇಳಲಾಗಿದೆ. ಅದು ಯೋಗದ ತತ್ವವಾಗಿದೆ, ಯೋಗದ ಲಕ್ಷ್ಯವಾಗಿದೆ.
ಯೋಗದ ಗುರಿಯೆಂದರೆ, ಮುಂದೆ ಬರಲಿರುವ ದುಃಖವನ್ನು ನಿಲ್ಲಿಸುವುದು.

ಪ್ರಶ್ನೆ: ನನ್ನ ಪ್ರೀತಿಯ ಗುರೂಜಿ, ಆಧ್ಯಾತ್ಮಿಕ ಪಥದಲ್ಲಿರುವ ಗಮನವನ್ನು ಮರಳಿ ಪಡೆಯಲು, ಪ್ರಾಪಂಚಿಕ ಜೀವನದಲ್ಲಿನ ಸೋಲು ಪ್ರಮುಖವಾದುದೇ?
ಶ್ರೀ ಶ್ರೀ ರವಿಶಂಕರ್: ಅಲ್ಲ. ಗಮನವನ್ನು ಪಡೆಯಲು ನೀನು ಸೋಲಬೇಕಾಗಿಲ್ಲ. ಅಂತಹ ಒಂದು ಸಂಕಲ್ಪವನ್ನು ನಿನ್ನ ಮನಸ್ಸಿನಲ್ಲಿ ಹಾಕಬೇಡ. ಅದೊಂದು ಆವಶ್ಯಕ ಸಂಗತಿಯಲ್ಲ.

ಪ್ರಶ್ನೆ: ಗುರೂಜಿ, ನೀವು ಬಹಳ ಉದಾರಿ. ನೀವು ನನ್ನೆಲ್ಲಾ ಇಚ್ಛೆಗಳನ್ನು ಪೂರೈಸಿದ್ದೀರಿ, ಆದರೆ ನಾನು ನಿಮಗೆ ಮಾಡಿದ ಎಲ್ಲಾ ಬದ್ಧತೆಗಳನ್ನು ನಾನು ಪೂರೈಸಿಲ್ಲ. ನೀವು ನನ್ನನ್ನು ಶಿಕ್ಷಿಸುವಿರೇ ಅಥವಾ ನನ್ನ ಮುಂದಿನ ಇಚ್ಛೆಗಳನ್ನು ಪೂರೈಸುವಿರೇ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ. 
ಶ್ರೀ ಶ್ರೀ ರವಿಶಂಕರ್: (ನಗುತ್ತಾರೆ) ಅದನ್ನು ಯಾಕೆ ಈಗ ನಾನು ನಿನಗೆ ಬಹಿರಂಗಪಡಿಸಬೇಕು? ನಾನು ನಿನ್ನನ್ನು ಅದರ ಬಗ್ಗೆ ಊಹೆ ಮಾಡಿಕೊಂಡಿರಲು ಬಿಡುತ್ತೇನೆ. ಬೇರೆ ಏನನ್ನಾದರೂ ಇಚ್ಛಿಸುವುದರ ಮೊದಲು ನೀನು ನಿನ್ನ ಬದ್ಧತೆಗಳನ್ನು ಪೂರೈಸುವುದು ಒಳ್ಳೆಯದು. ನಾನು ನಿನ್ನನ್ನು ಒಬ್ಬ ಲೋಭಿ ವ್ಯಕ್ತಿಯನ್ನಾಗಿ ಮಾಡಲು ಬಯಸುವುದಿಲ್ಲ. ಇಲ್ಲದಿದ್ದರೆ ನೀನು ಬಹಳ ಲೋಭಿಯಾಗುವೆ.
ನಿನ್ನ ಬಯಕೆಗಳು ಪೂರೈಸಲ್ಪಡುತ್ತಿವೆಯೆಂಬುದು ನಿನಗೆ ತಿಳಿದಾಗ, ನೀನು ದೊಡ್ಡ ವಿಷಯಗಳನ್ನು ಬಯಸಬೇಕು, ಕೇವಲ ನಿನಗಾಗಿರುವ ವಿಷಯಗಳಿಗಲ್ಲ. ದೇಶಕ್ಕಾಗಿ, ಪ್ರಪಂಚಕ್ಕಾಗಿ, ಮಾನವಕುಲಕ್ಕಾಗಿ ಬಯಕೆಗಳನ್ನಿರಿಸು.
ನಿನ್ನ ಬಯಕೆಗಳು ಏನಾದರೂ ದೊಡ್ಡದನ್ನು ಸಾಧಿಸಲಾಗಿದ್ದರೆ ಮತ್ತು ಈ ಜ್ಞಾನವನ್ನು ಜನರಿಗೆ ತರಲಾಗಿದ್ದರೆ, ಆಗ ಅದು ಹೆಚ್ಚು ಅರ್ಥಪೂರ್ಣವಾದುದು. ಆಗ ನೀನು ಬೆಳೆಯುತ್ತಿರುವೆಯೆಂದು ಅರ್ಥ.
ನೀನೊಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು, "ವೇದಾಂತದ ಜ್ಞಾನವು ಸಾವಿರಾರು ಜನರನ್ನು ತಲಪಲಿ; ಯೋಗವು ಸಾವಿರಾರು ಜನರನ್ನು ತಲಪಲಿ." ನೀವು ಇಂತಹ ಬಯಕೆಗಳನ್ನು ನಿಮ್ಮಲ್ಲಿ ಬೆಳೆಯಿಸಿಕೊಳ್ಳಬೇಕು. ನಿಜವಾಗಿ ನೀವೊಂದು ಬಯಕೆಯನ್ನು ಬೆಳೆಯಿಸಲು ಸಾಧ್ಯವಿಲ್ಲ, ಆದರೆ ಇದು ಬಯಕೆಗಳಿಗಿರುವ ಸರಿಯಾದ ದಿಕ್ಕಾಗಿದೆ.

ಪ್ರಶ್ನೆ: ಪ್ರೀತಿಯ ಗುರೂಜಿ, ಹನ್ನೆರಡು ಜ್ಯೋತಿರ್ಲಿಂಗಗಳು ಹೇಗೆ ಮತ್ತು ಯಾವಾಗ ಅಸ್ತಿತ್ವಕ್ಕೆ ಬಂದವು? ದಯವಿಟ್ಟು ಇದರ ಮೇಲೆ ಸ್ವಲ್ಪ ಪ್ರಕಾಶ ಬೀರಿ. 
ಶ್ರೀ ಶ್ರೀ ರವಿಶಂಕರ್: ನೋಡಿ, ಪ್ರತಿಯೊಂದು ಜ್ಯೋತಿರ್ಲಿಂಗದ ಹಿಂದೆಯೂ, ಅದು ಹೇಗೆ ಬಂತೆಂಬುದಕ್ಕೆ ಬೇರೆ ಬೇರೆ ಕಥೆಯಿದೆ. ಪ್ರತಿಯೊಂದಕ್ಕೂ ಒಂದು ಸ್ಥಳ ಪುರಾಣವು ಜೋಡಿಕೊಂಡಿದೆ. ಉದಾಹರಣೆಗೆ, ಭಗವಾನ್ ರಾಮನು ರಾಮೇಶ್ವರಂಗೆ ಹೋದನು ಮತ್ತು ಭಗವಾನ್ ಶಿವನನ್ನು ಪೂಜಿಸುವುದರ ಮೂಲಕ ಅಲ್ಲಿ ಜ್ಯೋತಿರ್ಲಿಂಗವನ್ನು ಸ್ಥಾಪಿಸಿದನು.
ಭಕ್ತಿಯ ಒಂದು ಎಳೆಯಿಂದ ಭಾರತದ ಎಲ್ಲಾ ಜನರನ್ನು ಒಂದುಗೂಡಿಸುವುದು ಗುರಿಯಾಗಿತ್ತು. ಭಾರತದಲ್ಲಿರುವ ಬೇರೆ ಬೇರೆ ಜನರು ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಕಾಶಿಯಲ್ಲಿ (ಈಗ ವಾರಣಾಸಿ) ಒಂದು ಬೇರೆಯ ಭಾಷೆಯಿದೆ, ರಾಮೇಶ್ವರಂನಲ್ಲಿ ಒಂದು ಬೇರೆಯ ಭಾಷೆಯಿದೆ.
ಪ್ರಾಚೀನ ಕಾಲದಲ್ಲಿ, ಜನರಲ್ಲಿ ರಾಮೇಶ್ವರಂನ್ನು ಸಂದರ್ಶಿಸಲು ಹೇಳಲಾಗುತ್ತಿತ್ತು ಮತ್ತು ಅಲ್ಲಿಂದ ಕಾಶಿಗೆ ತೀರ್ಥಯಾತ್ರೆ ಹೋಗಿ ಗಂಗೆಯಲ್ಲಿ ಮೀಯಲು ಅವರಲ್ಲಿ ಹೇಳಲಾಗುತ್ತಿತ್ತು. ನಂತರ, ಕಾಶಿಯಿಂದ ಗಂಗೆಯ ಪವಿತ್ರ ನೀರನ್ನು ತಮ್ಮೊಂದಿಗೆ ರಾಮೇಶ್ವರಂಗೆ ತಂದು ಅಲ್ಲಿನ ಜ್ಯೋತಿರ್ಲಿಂಗಕ್ಕೆ ಅರ್ಪಿಸಲು ಅವರಲ್ಲಿ ಹೇಳಲಾಗುತ್ತಿತ್ತು. ನಂತರ, ಅರ್ಪಣೆಯನ್ನು ತಿರುಗಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಅವರಲ್ಲಿ ಹೇಳಲಾಗುತ್ತಿತ್ತು.
ಹಿಂದಿನ ಕಾಲದಲ್ಲಿ ಇದನ್ನು ಮಾಡುತ್ತಿದ್ದುದರ ಉದ್ದೇಶವೆಂದರೆ, ರಾಷ್ಟ್ರೀಯ ಏಕತೆಯ ಒಂದು ಭಾವನೆಯನ್ನು ತರುವುದಕ್ಕಾಗಿ (ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲ್ಪಟ್ಟಿದ್ದ ಈ ಪವಿತ್ರ ದೇವಾಲಯಗಳನ್ನು ಸಂದರ್ಶಿಸುವುದರ ಮೂಲಕ).
ಅದು, ಭಗವಾನ್ ಶಿವನಿಗೆ ನೀವು ಪವಿತ್ರ ನೀರನ್ನು ಅರ್ಪಿಸುವುದರ ಅಗತ್ಯವಿದೆಯೆಂದಲ್ಲ. ಭಗವಂತ ಶಿವನು ಅದರೊಂದಿಗೆ ಏನು ಮಾಡುತ್ತಾನೆ? ಸೃಷ್ಟಿಯಲ್ಲಿರುವ ಸಂಪೂರ್ಣ ನೀರು ಅವನಿಗೆ ಸೇರಿದ್ದು. ಗಂಗೆಯ ಪವಿತ್ರ ನೀರನ್ನು ಕಾಶಿಯಿಂದ ರಾಮೇಶ್ವರಂಗೆ ತೆಗೆದುಕೊಂಡು ಹೋಗುವುದರಲ್ಲಿ ಭಗವಂತ ಶಿವನಿಗೆ ಯಾವುದೇ ಅರ್ಥವಿಲ್ಲ ಅಥವಾ ಪ್ರಾಮುಖ್ಯತೆಯಿಲ್ಲ. ಹೌದು, ಆದರೆ ದೇಶಕ್ಕೆ ಅದರಲ್ಲೊಂದು ನಿರ್ದಿಷ್ಟ ಮಹತ್ವವಿದೆ.
ದೇಶದ ವಿವಿಧ ಭಾಗಗಳಿಗೆ ಜನರು ಜೊತೆಯಾಗಿ ತೀರ್ಥಯಾತ್ರೆ ಕೈಗೊಳ್ಳುವಾಗ, ಅವರು ಪರಸ್ಪರರೊಂದಿಗೆ ಸ್ನೇಹದ ಬಂಧಗಳನ್ನು ಸ್ಥಾಪಿಸುತ್ತಾರೆ. ನೋಡಿ, ದಕ್ಷಿಣ ಭಾರತದ ಜನರು ಉತ್ತರ ಭಾರತದ ಅಮರನಾಥ ದೇವಾಲಯಕ್ಕೆ ತೀರ್ಥಯಾತ್ರೆ ಹೋಗುತ್ತಾರೆ. ಆದುದರಿಂದ ಈ ತೀರ್ಥಯಾತ್ರೆಯು, ದಕ್ಷಿಣದ ಕನ್ಯಾಕುಮಾರಿಯ ಜನರನ್ನು ಉತ್ತರದ ಕಾಶ್ಮೀರದ ಜನರೊಂದಿಗೆ ಜೋಡಿಸುವ ಮತ್ತು ಒಂದುಗೂಡಿಸುವ ಒಂದು ಮಾಧ್ಯಮವಾಗುತ್ತದೆ. ತೀರ್ಥಯಾತ್ರೆಗಳು ಇದನ್ನು ಮಾಡುವ ಮಾಧ್ಯಮಗಳಾಗುತ್ತವೆ. ಯಾವಾಗೆಲ್ಲಾ ನಾವು ಏನನ್ನಾದರೂ ಪವಿತ್ರತೆಯ ಮತ್ತು ಶುದ್ಧತೆಯ ಒಂದು ಭಾವನೆಯಲ್ಲಿ ಮಾಡುತ್ತೇವೆಯೋ, ಆಗ ನಮ್ಮ ಸಂಪೂರ್ಣ ಪ್ರಜ್ಞೆಯು ಅರಳಲು ಶುರುವಾಗುತ್ತದೆ.
ಅದಕ್ಕಾಗಿಯೇ, ಎಲ್ಲಾ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಒಂದೇ ಜಾಗದಲ್ಲಿ ಅಥವಾ ಒಂದೇ ರಾಜ್ಯದಲ್ಲಿ ಇಡಲಾಗಿಲ್ಲ. ಕೆಲವನ್ನು ಉತ್ತರದಲ್ಲಿ, ಕೆಲವನ್ನು ದಕ್ಷಿಣದಲ್ಲಿ, ಕೆಲವನ್ನು ಪಶ್ಚಿಮದಲ್ಲಿ - ಅವುಗಳನ್ನು ಎಲ್ಲೆಡೆಗಳಲ್ಲೂ ಹಂಚಲಾಗಿತ್ತು, ಮತ್ತು ಆ ದಿನಗಳಲ್ಲಿ, ಅವುಗಳೆಲ್ಲಾ ಪ್ರಯಾಣಿಸಲು ಬಹಳ ಕಷ್ಟಕರವಾಗಿದ್ದಂತಹ ಜಾಗಗಳಾಗಿದ್ದವು. ಅಲ್ಲಿಗೆ ತಲಪಲು ಬಹಳ ಕಷ್ಟವಾಗುತ್ತಿತ್ತು. ದೇವಾಲಯಗಳನ್ನು ತಲಪಲು ಒಬ್ಬರು ದಟ್ಟವಾದ ಕಾಡುಗಳ ಮೂಲಕ, ಅಪಾಯಕರ ಕಣಿವೆಗಳ ಮೂಲಕ, ನಗರಗಳ ಅವಶೇಷಗಳ ಮೂಲಕ ಅಥವಾ ಹಿಮಾವೃತವಾಗಿದ್ದ ಉನ್ನತ ಪರ್ವತಗಳ ತುದಿ, ಮೊದಲಾದವುಗಳ ಮೂಲಕ ಹೋಗಬೇಕಾಗುತ್ತಿತ್ತು. ಉದಾಹರಣೆಗೆ, ಕೇದಾರನಾಥ ದೇವಾಲಯವು ಹಿಮಾಲಯ ಶ್ರೇಣಿಯೊಳಗೆ ಆಳದಲ್ಲಿ ಸ್ಥಾಪಿಸಲ್ಪಟ್ಟಿದೆ.
ಈ ರೀತಿಯಲ್ಲಿ, ಭಗವಂತ ಶಿವನನ್ನು ಅವನ ಪವಿತ್ರ ದೇವಾಲಯಗಳ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿ, ಆ ದಿನಗಳ ಪವಿತ್ರ ಋಷಿಗಳು ಮತ್ತು ಸಂತರು ಒಂದು ಏಕೀಕೃತ ರಾಷ್ಟ್ರವನ್ನು ಕಟ್ಟಿದರು.
ಹಾಗೆಯೇ, ’ತತ್ರೋಪಜಗ್ಮುರ್ ಭುವನಂ ಪುನಾನಾ ಮಹಾನುಭಾವಾ ಮುನಯಃ ಸ-ಶಿಷ್ಯಃ
                ಪ್ರಾಯೇನ ತೀರ್ಥಾಭಿಗಮಾಪದೇಶೈಃ ಸ್ವಯಂ ಹಿ ತೀರ್ಥಾನಿ ಪುನಂತಿ ಸಂತಃ’ - ಶ್ರೀಮದ್ ಭಾಗವತಂ (ಸಂಧಿ ೧, ಅಧ್ಯಾಯ ೧೯, ಶ್ಲೋಕ ೮)
ಇದರರ್ಥ, ಎಲ್ಲೆಲ್ಲಾ ಒಬ್ಬ ಪವಿತ್ರ ಸಂತನು ಕುಳಿತುಕೊಳ್ಳುತ್ತಾನೋ, ಆ ಸ್ಥಳವೇ ತೀರ್ಥಯಾತ್ರೆಯ ಒಂದು ಪವಿತ್ರ ಸ್ಥಳವಾಗುತ್ತದೆ.
ಹಲವಾರು ಸಂತರು ಈ ಪವಿತ್ರ ಸ್ಥಳಗಳನ್ನು ಸಂದರ್ಶಿಸಿದ್ದಾರೆ, ಅಲ್ಲಿ ಧ್ಯಾನ ಮಾಡಿದ್ದಾರೆ ಮತ್ತು ತಪಸ್ಸು ಮಾಡಿದ್ದಾರೆ ಹಾಗೂ ಹೀಗೆಯೇ ಕಾಲಾಂತರದಲ್ಲಿ ಈ ಸ್ಥಳಗಳ ಪಾವಿತ್ರ್ಯ ಮತ್ತು ವೈಭವಗಳು ಹೆಚ್ಚಾದುದು.
ಹೇಗಿದ್ದರೂ, ಇವತ್ತು ಈ ಸ್ಥಳಗಳಲ್ಲಿ ಬಹಳಷ್ಟು ಅಶುಚಿತ್ವ ಮತ್ತು ಅನಾಡಳಿತಗಳಿರುವುದು ನಿಮಗೆ ಕಾಣಿಸುತ್ತದೆ. ಅವುಗಳು ಸರಿಯಾಗಿ ನಿರ್ವಹಿಸಲ್ಪಡುತ್ತಿಲ್ಲ ಅಥವಾ ಆಯೋಜಿಸಲ್ಪಡುತ್ತಿಲ್ಲ. ಈ ದಿನಗಳಲ್ಲಿ, ಈ ಸ್ಥಳಗಳಲ್ಲಿ, ಭಕ್ತಿ ಅಥವಾ ಶ್ರದ್ಧೆಯ ಯಾವುದೇ ಒಂದು ಭಾವನೆಯಿಲ್ಲದೆ, ಬಹಳಷ್ಟು ಹಾಲು ಮತ್ತು ಇತರ ವಸ್ತುಗಳು ಒಂದು ವ್ಯರ್ಥಮಾಡುವ ರೀತಿಯಲ್ಲಿ ಅಜಾಗರೂಕತೆಯಿಂದ ಅರ್ಪಿಸಲ್ಪಡುತ್ತಿದೆ. ಅವರು ಕೇವಲ ನಿಮ್ಮನ್ನು ಶಾಸ್ತ್ರಗಳು ಹಾಗೂ ಕಾಣಿಕೆಗಳ ಮೂಲಕ ಧಾವಂತ ಪಡಿಸುತ್ತಾರೆ. ಇದು ಪೂಜೆಯಲ್ಲ. ಭಕ್ತಿಯ ಒಂದು ಭಾವನೆಯಿಂದ ಮತ್ತು ಒಂದು ಧ್ಯಾನಾವಸ್ಥೆಯಲ್ಲಿ, ಮನಸ್ಸಿನಿಂದ ಮಾಡುವ ಆರಾಧನೆಯು, ನಿಜವಾದ ಅರ್ಥದಲ್ಲಿ ಪೂಜೆಯಾಗುತ್ತದೆ.
ನೀವು ಕೇವಲ ನಿಮ್ಮ ಸ್ವಂತ ಸ್ವಾರ್ಥದ ಬಯಕೆಯನ್ನು ಅಥವಾ ಹಸಿವನ್ನು, ಅಥವಾ ಯಾವುದಾದರೂ ಆರ್ಥಿಕ ಸಾಲ ಪೂರೈಸಲು ಪೂಜೆ ಮಾಡಿದರೆ, ಆಗ ನೀವು ಕೇವಲ ನಿಮ್ಮನ್ನೇ ಮೂರ್ಖರನ್ನಾಗಿಸುತ್ತಿರುತ್ತೀರಿ. ಆದುದರಿಂದ ಒಬ್ಬರು ಅದನ್ನು ಮಾಡಬಾರದು. ನೀವದನ್ನು ಒಂದು ಭಕ್ತಿಯ ಭಾವನೆಯಿಂದ ಮಾಡಬೇಕು.
ರುದ್ರಂನ್ನು (ಭಗವಂತ ಶಿವನನ್ನು ಹೊಗಳಿ ಪಠಿಸುವ ಶ್ಲೋಕಗಳ ಸಾಲುಗಳು) ಪಠಿಸಿಕೊಂಡು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡುವಾಗ, ನಾವು ಸುಮ್ಮನೇ ನಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಅದರೊಳಗೆ, ನಮ್ಮದೇ ಆತ್ಮದೊಳಕ್ಕೆ ಮುಳುಗಬೇಕು. ನಾವು ಧ್ಯಾನದಲ್ಲಿ ಆಳಕ್ಕೆ ಹೋಗಬೇಕು. ಆಗ ಅದು ಅರ್ಥಪೂರ್ಣವಾದುದು.
ಸುಖದಾಯಕವಾದ ಚಿದಾಕಾಶವಾಗಿ ಎಲ್ಲೆಲ್ಲೂ ಪ್ರಕಟಗೊಂಡಿರುವ ಶಿವತತ್ವದ ಆ ಅನಂತವಾದ ವಿಶಾಲತೆಯನ್ನು ನಾವು ಅನುಭವಿಸಬೇಕು.