ಬುಧವಾರ, ಅಕ್ಟೋಬರ್ 24, 2012

ಮನಸ್ಸಿಗೆ ಮಹತ್ವವಿದೆ


೨೪ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ

ನಿಮಗೆ ಗೊತ್ತಾ, ಎಷ್ಟೇ ಬೆಲೆ ತೆತ್ತಾದರೂ ನೀವು ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಬೇಕು.
ಏನಾಗುತ್ತದೆಯೆಂದರೆ, ನೀವೊಂದು ಸಂತೋಷದ ಮನೋಸ್ಥಿತಿಯಲ್ಲಿರುತ್ತೀರಿ, ಒಂದು ಆನಂದದ ಮನೋಸ್ಥಿತಿಯಲ್ಲಿರುತ್ತೀರಿ ಮತ್ತು ಒಬ್ಬರು ಬಂದು, ನಿಮಗಿಷ್ಟವಿಲ್ಲದಿರುವ ಏನನ್ನೋ ನಿಮ್ಮ ಕಿವಿಗಳಲ್ಲಿ ಹೇಳುತ್ತಾರೆ.
ಅವರನ್ನುತ್ತಾರೆ, "ಇಂತಿಂಥವರು ನಿನ್ನ ಬಗ್ಗೆ ಹೀಗೆ ಹೇಳಿದರು", ಮತ್ತು "ನೀನೇನು ಮಾಡುತ್ತಿರುವೆ? ಇದು ಒಳ್ಳೆಯದಲ್ಲ" ಎಂದು ಹೇಳುತ್ತಾ ಅವರು ನಿಮ್ಮನ್ನು ಸೂಕ್ಷ್ಮವಾಗಿ ಟೀಕಿಸುತ್ತಾರೆ. ಕೂಡಲೇ ನಿಮ್ಮ ಮನಸ್ಸಿಡೀ ತಿರುಗಲು ಶುರುವಾಗುತ್ತದೆ ಮತ್ತು ನಿಮಗೆ ಹಿತವಾಗುವುದಿಲ್ಲ. ನಿಮಗೆ ಬಹಳ ಅಹಿತವಾಗಲು ತೊಡಗುತ್ತದೆ.
ಹಾಗಾದರೆ ಇದೆಲ್ಲಾ ಆಗುವುದು ಹೇಗೆ? ಯಾರೋ ಒಬ್ಬರು ಸ್ವಲ್ಪ ನಕಾರಾತ್ಮಕತೆಯನ್ನು ಹಾಕುತ್ತಾರೆ. ಇದು ಸರ್ವೇಸಾಮಾನ್ಯ. ನಿಮ್ಮ ದೈನಂದಿನ ಬದುಕಿನಲ್ಲಿ ನಿಮಗೆ, ಜನರು ಬಂದು ನಿಮ್ಮ ಮನಸ್ಸನ್ನು, ನಿಮ್ಮ ಛಲವನ್ನು ಅಲ್ಲಾಡಿಸುವ ಸ್ವಲ್ಪ ನಕಾರಾತ್ಮಕತೆಯನ್ನು ಹಾಕುವುದು ಕಂಡುಬರುತ್ತದೆ. ಹೀಗಾಗಲು ಬಿಡಬೇಡಿ.
ಜನರು ಸ್ವಲ್ಪ ನಕಾರಾತ್ಮಕತೆಯನ್ನು ಹಾಕುವುದು ಸ್ವಾಭಾವಿಕ ಮತ್ತು ಸಾಮಾನ್ಯ. ಆದರೆ ನೀವು ಒಳಗಡೆ ಆಳವಾದ ಸಂಪರ್ಕದಲ್ಲಿರುವಾಗ, ನಿಮ್ಮಲ್ಲಿ ಆ ಅಂತಃಸ್ಫುರಣೆ ಇರುವಾಗ, ನೀವು ಕೇವಲ ಮುಗುಳ್ನಗೆಯೊಂದಿಗೆ ಅವುಗಳೆಲ್ಲದರ ಮೂಲಕ ಹಾದುಹೋಗುವಿರಿ. ನೀವು ನಿಮ್ಮ ಕಿವಿಗಳೊಳಗೆ ಒಂದು ಶೋಧಕ(ಫಿಲ್ಟರ್)ವನ್ನು ಹಾಕಿಕೊಳ್ಳುವಿರಿ.
ನಿಮಗೆ ಗೊತ್ತಾ, ಪ್ರಪಂಚವಿರುವುದೇ ಹಾಗೆ. ಅಲ್ಲಿ ಕೆಲವು ಹಿತಕರ ಹಾಗೂ ಕೆಲವು ಅಹಿತಕರ ಸಂಗತಿಗಳಿರುತ್ತವೆ ಎಂಬುದು ನಿಮಗೆ ಗೊತ್ತಿದೆ. ಅವುಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಮತ್ತು ನಮ್ಮ ಗುರಿಯತ್ತ ಸಾಗುತ್ತೇವೆ, ಇದು ಬಹಳ ಮುಖ್ಯವಾದುದು.
ಈ ಒಂಭತ್ತು ದಿನಗಳಲ್ಲಿ ನಾವು ಮಾಡಿದ ಎಲ್ಲಾ ಸಾಧನೆ ಮತ್ತು ಯಜ್ಞಗಳು ಹಾಗೂ ಈ ಎಲ್ಲಾ ಆಚರಣೆಗಳು, ಉತ್ಸಾಹ ಮತ್ತು ಶಕ್ತಿಗಳ ನಿಮ್ಮ ಮೂಲ ಹಂತಕ್ಕೆ ತಿರುಗಿ ಬರಲು ನಿಮಗೆ ಸಹಾಯ ಮಾಡುತ್ತವೆ.  
ಆದುದರಿಂದ, ನಿಮ್ಮ ಹೃದಯವನ್ನು ಬಲವಾಗಿರಿಸಿ ಮತ್ತು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸಿ, ಹಾಗೂ ಜೀವನದ ಗಾಡಿಯು ಬಹಳ ಸರಾಗವಾಗಿ ಓಡುತ್ತದೆ. ಚಿಕ್ಕ ವಿಷಯಗಳನ್ನು ಬಿಡಿ ಮತ್ತು ದೊಡ್ಡದನ್ನು ಯೋಚಿಸಿ. ನಾವು ಸಮಾಜಕ್ಕಾಗಿ, ದೇಶಕ್ಕಾಗಿ, ಪ್ರಪಂಚಕ್ಕಾಗಿ ಏನು ಮಾಡಬಹುದು ಎಂದು ಯೋಚಿಸಿ. ಈ ರೀತಿಯಲ್ಲಿ, ಜೀವನದಲ್ಲಿ ನಿಮಗೊಂದು ದೊಡ್ಡ ಗುರಿಯಿರಬೇಕು.
ಜನರು ಸಾಧಾರಣವಾಗಿ ಚಿಕ್ಕ ಪುಟ್ಟ ವಿಷಯಗಳನ್ನು ಕೇಳುತ್ತಾರೆ. ಜನರನ್ನುತ್ತಾರೆ, "ಗುರುದೇವ, ನಮಗೊಂದು ಕಾರನ್ನು ಕಳುಹಿಸಿ, ನಮಗೆ ಟ್ಯಾಕ್ಸಿ ಸಿಗುತ್ತಿಲ್ಲ." ಅವರು ಇಂತಹ ಚಿಕ್ಕ ವಿಷಯಗಳನ್ನು ಕೇಳುತ್ತಿರುತ್ತಾರೆ. ಅದು ಕೂಡಾ ಪರವಾಗಿಲ್ಲ. ಅಂತಹ ವಿಷಯಗಳನ್ನು ಕೇಳಿಕೊಳ್ಳುವುದರಿಂದ ಯಾವುದೇ ಹಾನಿಯಿಲ್ಲ, ಆದರೆ ಏನಾದರೂ ದೊಡ್ಡದರ ಬಗ್ಗೆ ಯೋಚಿಸಿ. ಅದಕ್ಕಾಗಿಯೇ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಸಾವಿರಾರು ವರ್ಷಗಳಿಂದ ಜನರು ಹೇಳುತ್ತಿದ್ದಾರೆ, ’ಸುಖೀ ಬಸೆ ಸಂಸಾರ್ ಸಬ್ ದುಃಖಿಯಾ ರಹೆ ನ ಕೋಯೆ’, (ಎಲ್ಲರೂ ಸಂತೋಷವಾಗಿರಲಿ, ಯಾರೂ ದುಃಖಿತರಾಗಿರುವುದು ಬೇಡ).
ನಾವು ಕೂಡಾ ಪ್ರಾರ್ಥಿಸುವಾಗ ಅದನ್ನೇ ಹೇಳುತ್ತೇವೆ, ’ಲೋಕಾ: ಸಮಸ್ತಾ: ಸುಖಿನೋ ಭವಂತು’, (ಸಂಪೂರ್ಣ ಲೋಕವು ಸಂತೋಷವಾಗಿರಲಿ). ಕೇವಲ ಈ ಲೋಕ ಮಾತ್ರವಲ್ಲ, ಆದರೆ ಸೂಕ್ಷ್ಮ ಲೋಕಗಳಲ್ಲಿ ವಾಸಿಸುವವರು ಕೂಡಾ, ನಮ್ಮ ಪೂರ್ವಜರು ಕೂಡಾ ಸಂತೋಷವಾಗಿರಲಿ. ಇದನ್ನೇ ನಾವು ಆಶಿಸುವುದು.
ಮುಖ್ಯವಾದುದೇನೆಂದರೆ ನೀವು ತೃಪ್ತರಾಗಿರಬೇಕು. ಸಮಯದಿಂದ ಸಮಯಕ್ಕೆ ನೀವು ನಿಮ್ಮ ಮೌಲ್ಯಮಾಪನ ಮಾಡುತ್ತಿರಬೇಕು. ನಿಮ್ಮನ್ನೇ ಕೇಳಿಕೊಳ್ಳಿ, ನಾನೇನು ಮಾಡುತ್ತಿರುವೆನೋ ಅದರಿಂದ ಇತರರಿಗೆ ಲಾಭವಾಗುತ್ತಿದೆಯೇ ಇಲ್ಲವೇ ಎಂದು. ಒಂದು ವಿಷಯವು ಅಲ್ಪಾವಧಿಗೆ ನೋವನ್ನು ತಂದರೂ, ದೀರ್ಘಾವಧಿಗೆ ಅದು ಎಲ್ಲರಿಗೂ ಲಾಭದಾಯಕವಾಗಿದ್ದರೆ, ಆಗ ಅದು ಮಾಡಬಹುದಾದ ಸರಿಯಾದ ವಿಷಯ. ಇದೊಂದು ಪರೀಕ್ಷೆ.
ಯಾವುದೇ ಕೆಲಸವನ್ನು ಮಾಡುವ ಮೊದಲು, ನೀವು ನಿಮ್ಮಲ್ಲೇ ಕೇಳಿಕೊಳ್ಳಬೇಕು, "ನಾನು ಕೇವಲ ಚಿಕ್ಕ ವಿಷಯಗಳ ಮೇಲೆ ಗಮನ ಹರಿಸುತ್ತಿರುವೆನೇ ಅಥವಾ ನಾನು ಒಂದು ವಿಶಾಲ ದೃಷ್ಟಿಕೋನದಿಂದ ಯೋಚಿಸುತ್ತಿರುವೆನೇ?" ಇದು ಆವಶ್ಯಕವಾಗಿದೆ.
ಆದುದರಿಂದ, ನಿಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುವುದು ಅಗತ್ಯ. ನಮ್ಮ ನಿರ್ಧಾರಗಳು ತಪ್ಪಾಗುವುದು ದೃಷ್ಟಿಕೋನವು ಸಂಕುಚಿತವಾಗಿರುವಾಗ. ಆದರೆ ನಮ್ಮಲ್ಲಿ ವಿಶಾಲ ದೃಷ್ಟಿಕೋನವಿರುವಾಗ, ದೀರ್ಘಾವಧಿಯ ಕಲ್ಪನೆಯಿರುವಾಗ, ನಮ್ಮೊಳಗೆ ಒಂದು ಅಂತರ್ಬೋಧೆಯ ಜಾಗೃತಿ ಬೆಳೆಯಲು ಪ್ರಾರಂಭವಾಗುತ್ತದೆ.
ಇವತ್ತು ವಿಜಯದ ದಿನ; ಕೆಟ್ಟದರ ಮೇಲೆ ಒಳ್ಳೆಯದರ ವಿಜಯ. ಹೊಸದಾಗಿ ಯೋಚಿಸುವುದನ್ನು ಪ್ರಾರಂಭಿಸಲು ಇದೊಂದು ಒಳ್ಳೆಯ ದಿನ. ನಿಮ್ಮನ್ನೇ ಕೇಳಿಕೊಳ್ಳಿ, "ಸರಿ, ನಾನೀಗ ಏನು ಮಾಡಲು ಬಯಸುತ್ತೇನೆ?"
ನಿಮಗಾಗಿ ಒಂದು ಗುರಿಯನ್ನಿಟ್ಟುಕೊಳ್ಳಿ ಮತ್ತು ಪ್ರಪಂಚಕ್ಕಾಗಿ ಒಂದು ಗುರಿಯನ್ನಿಟ್ಟುಕೊಳ್ಳಿ. ಅವೆರಡೂ ಒಂದೇ ಆದರೆ, ಆಗ ಅದು ಶ್ರೇಷ್ಠ. ಅದು ಒಂದೇ ಆಗಿಲ್ಲದಿದ್ದರೆ, ಆಗಲೂ ಅದು ಪರವಾಗಿಲ್ಲ. ನಿಮ್ಮಲ್ಲಿ ಎರಡೂ ಇರಬಹುದು, ಆದರೆ ಅವುಗಳು ಪರಸ್ಪರ ವಿರೋಧಾತ್ಮಕವಾಗಿಲ್ಲ ಎಂಬುದನ್ನು ನೋಡಿಕೊಳ್ಳಿ.
ಮೊದಲನೆಯದಾಗಿ ಸಮಾಜಕ್ಕಾಗಿ, ಲೋಕಕ್ಕಾಗಿ, ಜನರಿಗಾಗಿ ಒಂದು ಕನಸು ಮತ್ತು ನಂತರ ನಿಮ್ಮ ಬಯಕೆಗಳು, ನಿಮ್ಮ ಇಚ್ಛೆಗಳು ಏನಿವೆಯೋ ಅವುಗಳು ಖಂಡಿತವಾಗಿ ನೆರವೇರುತ್ತವೆ. ಅದು ಈಗಾಗಲೇ ಆಗುತ್ತಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ, ನೀವೇನು ಕೇಳುವಿರೋ ಅದು ನಿಮಗೆ ಸಿಗುವ ಅನುಭವವಾಗಿದೆ? (ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಒಬ್ಬ ಸಾಧಕನಿಗೆ (ಅನ್ವೇಷಕ) ಅದು ಹೀಗೆಯೇ. ’ಪ್ರತ್ಯವಯೋ ನ ವಿದ್ಯತೆ’ ಎಂದು ಹೇಳಲಾಗಿದೆ. ಒಮ್ಮೆ ನಿಮಗೆ ದಾರಿಯು ಸಿಕ್ಕಿದರೆ, ಆಗ ಅದರ ಮೇಲೆ ಯಾವ ತಡೆಗಳೂ ಇರುವುದಿಲ್ಲ. ನಂತರ, ನೀವು ಯಾವ ಸಂಕಲ್ಪವನ್ನು ತೆಗೆದುಕೊಂಡರೂ, ನೀವು ಏನನ್ನೇ ಯೋಚಿಸಿದರೂ, ಅದು ಪ್ರಯತ್ನವಿಲ್ಲದೆಯೇ ಆಗಲು ತೊಡಗುತ್ತದೆ.
ಕಳೆದ ತಿಂಗಳು, ಅಶ್ವಿನ್ (ಅಶ್ವಯುಜ) ಮಾಸವು ಬಹಳ ಮುಖ್ಯವಾದ ಮಾಸವಾಗಿದೆ. ಯಾಕೆ? ಯಾಕೆಂದರೆ ಹದಿನೈದು ದಿನಗಳು, ಅಗಲಿ ಹೋದ ನಮ್ಮ ಪೂರ್ವಜರ ಸ್ಮರಣೆಗಾಗಿ ಮೀಸಲಾಗಿದ್ದವು ಮತ್ತು ಉಳಿದ ಹದಿನೈದು ದಿನಗಳು ದೇವರನ್ನು ಆರಾಧಿಸುವುದರಲ್ಲಿ ಮತ್ತು ಅವರೊಂದಿಗೆ ಸಂಭಾಷಿಸುವುದರಲ್ಲಿ ಕಳೆಯಲಾಗುತ್ತದೆ. ಅದಕ್ಕಾಗಿಯೇ ಇದೊಂದು ಬಹಳ ಮುಖ್ಯವಾದ ಮಾಸ, ಮತ್ತು ಹುಣ್ಣಿಮೆಯ ರಾತ್ರಿಯವರೆಗೆ ಉತ್ಸವಗಳು ಮುಂದುವರಿಯುವುವು.
ಆದರೆ ನಮಗೆ, ಪ್ರತಿದಿನವೂ ಒಂದು ಆಚರಣೆ, ಅಲ್ಲವೇ? ಎಲ್ಲೆಡೆಯೂ ಆಚರಣೆಯಿದೆ. ಹಾಗಿದ್ದರೂ, ಈ ತಿಂಗಳು ಸ್ವಲ್ಪ ವಿಶೇಷವಾಗಿದೆ.

ಪ್ರಶ್ನೆ: ಗುರುದೇವ, ಈ ಲೋಕದಲ್ಲಿ, ಮಹಾತ್ಮರು ಮತ್ತು ರಾಕ್ಷಸರು ಇಬ್ಬರೂ ಇದ್ದಾರೆ. ಮಹಾತ್ಮರನ್ನು ಅನುಸರಿಸುವವರು ಸಾತ್ವಿಕರಾಗುತ್ತಾರೆ. ಆಗ ರಾಕ್ಷಸರು ಸಾತ್ವಿಕರನ್ನು ದಮನ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಸಮಯಗಳಲ್ಲಿ ಏನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಒಳ್ಳೆಯ ಜನರು ಒಗ್ಗಟ್ಟಿನಿಂದಿರುವುದು ಅಗತ್ಯವಾಗಿದೆ. ಸಮಾಜವು ಕೆಟ್ಟಿರುವುದು ಕೆಲವು ಕೆಟ್ಟ ಜನರಿಂದಾಗಿಯಲ್ಲ, ಆದರೆ ಒಳ್ಳೆಯವರ ಮೌನದಿಂದಾಗಿ. ಒಳ್ಳೆಯ ಉದ್ದೇಶವನ್ನು ಹೊಂದಿದವರು ಮೌನವಾಗಿರುತ್ತಾರೆ ಮತ್ತು ಮತದಾನ ಮಾಡಲೂ ಹೋಗುವುದಿಲ್ಲ. ಅವರು ಯೋಚಿಸುತ್ತಾರೆ, ’ನಾವು ಯಾಕೆ ಕಾಳಜಿ ವಹಿಸಬೇಕು, ಹೇಗಿದ್ದರೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಕೆಲಸವನ್ನು ಮಾಡೋಣ ಮತ್ತು ಸಂತೋಷವಾಗಿರೋಣ’. ಇಂತಹ ಉದಾಸೀನ ಭಾವನೆಗಳೊಂದಿಗೆ ಅವರು ಸುಮ್ಮನೇ ಕುಳಿತುಕೊಳ್ಳುತ್ತಾರೆ. ಇದು ಸರಿಯಲ್ಲ, ನೀವು ಕ್ರಿಯಾತ್ಮಕರಾಗಬೇಕು. ಜಡತ್ವವನ್ನು ಒಂದು ಒಳ್ಳೆಯ ಗುಣವಾಗಿ ಪರಿಗಣಿಸಬಾರದು. ಒಬ್ಬ ವ್ಯಕ್ತಿಯು ನಿಷ್ಕ್ರಿಯನಾಗಿ ಉಳಿದರೆ, ಮತ್ತು ಏನನ್ನೂ ಮಾಡದೇ, ನಂತರ "ನಾನೊಬ್ಬ ಒಳ್ಳೆಯ ವ್ಯಕ್ತಿ" ಎಂದು ಹೇಳಿದರೆ, ಆ ಒಳ್ಳೆಯತನ ಯಾವುದಕ್ಕೂ ಉಪಯೋಗವಿಲ್ಲ. ನೀವು ಒಳ್ಳೆಯವರಾಗಿದ್ದರೆ ಮತ್ತು ಸಹಾನುಭೂತಿ ಹೊಂದಿದವರಾಗಿದ್ದರೆ, ಸ್ವಲ್ಪ ಕೆಲಸವನ್ನು ಕೂಡಾ ಮಾಡಿ. ಅಲ್ಲವೇ? ಯಾವುದನ್ನು ನಿಮಗೆ ಸರಿಪಡಿಸಲು ಸಾಧ್ಯವಿದೆಯೋ, ಅದನ್ನು ನೀವು ಸರಿಪಡಿಸಬೇಕು. ಯಾವುದನ್ನು ನಿಮಗೆ ಸರಿಪಡಿಸಲು ಸಾಧ್ಯವಿಲ್ಲವೋ, ಯಾವುದು ನಿಮ್ಮ ಸಾಮರ್ಥ್ಯವನ್ನು ಮೀರಿದುದೋ, ಅದಕ್ಕೆ ಪ್ರಾರ್ಥನೆಯು ಅತ್ಯುತ್ತಮವಾದ ಆಯ್ಕೆಯಾಗಿದೆ.
ಅದಕ್ಕಾಗಿಯೇ ನಾಲ್ಕು ಸಂಗತಿಗಳು ಜೀವನದಲ್ಲಿ ಬಹಳ ಮುಖ್ಯವಾದವು: ಭಕ್ತಿ, ಮುಕ್ತಿ, ಶಕ್ತಿ ಮತ್ತು ಯುಕ್ತಿ.
ಯುಕ್ತಿಯೊಂದಿಗೆ ನೀವು ನಿಮ್ಮ ಕೆಲಸವನ್ನು ಸಾಧಿಸಬಹುದು. ಜೀವನದಲ್ಲಿ ಶಕ್ತಿ ಕೂಡಾ ಬೇಕು. ಆದರೆ ಕೇವಲ ಯುಕ್ತಿ ಮತ್ತು ಶಕ್ತಿಗಳು ಕೆಲಸ ಮಾಡವು. ಅವುಗಳೊಂದಿಗೆ ನಿಮಗೆ ಭಕ್ತಿ ಮತ್ತು ಮುಕ್ತಿ ಕೂಡಾ ಬೇಕು. ನಿಮಗೆ ಗೊತ್ತಾ, ನೀವು ಒಳಗಿನಿಂದ ಒಂದು ಸ್ವಾತಂತ್ರ್ಯದ ಭಾವನೆಯನ್ನು ಅನುಭವಿಸುವಾಗ, ಅದು ನಿಮಗೆ ಎಷ್ಟೊಂದು ಬಲವನ್ನು ತರುವುದೆಂದರೆ, ನೀವು ಯಾವುದೇ ಕೆಲಸವನ್ನು ಮಾಡಲು ಬಯಸಿದರೂ ಅದು ಅನಾಯಾಸವಾಗಿ ನೆರವೇರುತ್ತದೆ.
ಒಳ್ಳೆಯ ಜನರು, ತಾವು ಬಲಹೀನರು ಎಂದು ಯಾವತ್ತೂ ಯೋಚಿಸಬಾರದು. ನೀವು ಎಲ್ಲಿ ಬಲಹೀನರಾಗಿರುವಿರಿ? ನಿಮ್ಮಲ್ಲಿ ಅಷ್ಟೊಂದು ಅಗಾಧವಾದ ಶಕ್ತಿಯಿದೆ, ನೀವದನ್ನು ಗುರುತಿಸಬೇಕು. ಮೊನ್ನೆ ಏನಾಯಿತೆಂಬುದು ನಿಮಗೆ ನೆನಪಿದೆಯಾ? ಇಲ್ಲಿಗೆ (ಯಜ್ಞಶಾಲೆ) ಬಂದಾಗ ಆನೆಗೆ ಯಾಕೆ ಅಷ್ಟೊಂದು ಭಯವಾಯಿತು ಎಂಬುದು ನಿಮಗೆ ಗೊತ್ತಾ?
(ಚಂಡಿ ಹೋಮದಲ್ಲಿ ಭಾಗವಹಿಸಲು ಕರೆತರಲಾದ ಆಶ್ರಮದ ಆನೆಯಾದ ಇಂದ್ರಾಣಿಯ ಬಗ್ಗೆ)
ಅವಳು ಭಯಗೊಂಡಳು, ಯಾಕೆಂದರೆ ಅವಳು ತನ್ನನ್ನು ತಾನೇ ಪರದೆಯ ಮೇಲೆ ನೋಡಿದಳು (ಕಾರ್ಯಕ್ರಮವನ್ನು ಸಭಿಕರೆಲ್ಲರಿಗೂ ಕಾಣಿಸುವುದಕ್ಕಾಗಿ ದೊಡ್ಡ ಪರದೆಯ ಮೇಲೆ ಬಿತ್ತರಿಸಲಾಗುತ್ತಿತ್ತು)  ಮತ್ತು ಅಲ್ಲಿ ಇನ್ನೊಂದು ಆನೆ ನಿಂತಿದೆಯೆಂದು ಯೋಚಿಸಿದಳು. ಅದು ತನ್ನದೇ ಪ್ರತಿಬಿಂಬವೆಂಬುದು ಅವಳಿಗೆ ಅರ್ಥವಾಗಲಿಲ್ಲ. ಆದುದರಿಂದ ನಾವು ಆ ಪರದೆಯನ್ನು ಆರಿಸಬೇಕಾಯಿತು. ಇದುವೇ ನಮ್ಮೊಂದಿಗೆ ಆಗುತ್ತಿದೆ. ನಾವು ನಮ್ಮ ಗುರುತನ್ನು ಕಳೆದುಕೊಂಡಿದ್ದೇವೆ ಮತ್ತು ನಾವು ಯಾರೆಂಬುದು ನಮಗೆ ತಿಳಿಯದು. ಒಮ್ಮೆ ನಾವಿದನ್ನು ತಿಳಿದುಕೊಂಡರೆ, ಜೀವನದಲ್ಲಿ ಯಾವುದೇ ದುಃಖವಿರುವುದಿಲ್ಲ.

ಪ್ರಶ್ನೆ: ಗುರುದೇವ, ದಯವಿಟ್ಟು ನಮಗೆ ೧೨ ಜ್ಯೋತಿರ್ಲಿಂಗಗಳ ಮಹತ್ವವನ್ನು ತಿಳಿಸಿ.  
ಶ್ರೀ ಶ್ರೀ ರವಿ ಶಂಕರ್: ನೋಡು, ಜ್ಯೋತಿ ನಿನ್ನೊಳಗಿದೆ ಮತ್ತು ಎಲ್ಲಿ ಜ್ಯೋತಿಯಿರುವುದೋ ಅಲ್ಲಿ ಶಿವನಿರುತ್ತಾನೆ.  
ಜ್ಯೋತಿರ್ಲಿಂಗವು ನಿಮ್ಮೊಳಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳು ನಮ್ಮ ಶರೀರದಲ್ಲಿಯೇ ಇವೆ. ನಮ್ಮ ಶರೀರದಲ್ಲಿ ಹನ್ನೆರಡು ಸ್ಥಾನಗಳಿವೆ.
ಈಗ, ಹಿಂದಿನ ದಿನಗಳಲ್ಲಿ, ಜನರು ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣಿಸಲೆಂದು, ಹನ್ನೆರಡು ಜ್ಯೋತಿರ್ಲಿಂಗಗಳನ್ನು ಕೇದಾರನಾಥ ಮತ್ತು ರಾಮೇಶ್ವರಂನ ನಡುವೆ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಯಿತು. ಇದು, ಭಾರತವನ್ನು ಒಂದು ಏಕೀಕೃತ ರಾಷ್ಟ್ರವನ್ನಾಗಿ ಮಾಡಲು ನಮ್ಮ ಪೂರ್ವಜರಿಂದ ಮಾಡಲ್ಪಟ್ಟ ಒಂದು ಉಪಾಯವಾಗಿತ್ತು. ಭಾರತವನ್ನು ಏಕೀಕೃತಗೊಳಿಸಲು ಬೇರೆ ಯಾವುದೇ ಮಾರ್ಗವಿರಲಿಲ್ಲ. ಬೇರೆ ಯಾವ ರೀತಿಯಲ್ಲಿ ನಿಮಗೆ ಭಾರತವನ್ನು ಏಕೀಕೃತಗೊಳಿಸಲು ಸಾಧ್ಯ? ಪ್ರತಿಯೊಂದು ಸ್ಥಳದಲ್ಲಿ ಒಂದು ಬೇರೆಯ ಭಾಷೆಯಿದೆ. ತಮಿಳುನಾಡು ಮತ್ತು ಉತ್ತರಪ್ರದೇಶಗಳ ನಡುವಿನ ಸಂಬಂಧವೇನು? ಅವುಗಳು, ಬೇರೆ ಬೇರೆ ಸಂಸ್ಕೃತಿಗಳು, ಸಂಪ್ರದಾಯಗಳು, ಆಹಾರ, ವೇಷಭೂಷಣಗಳನ್ನು ಹೊಂದಿದ ಎರಡು ಬೇರೆ ಬೇರೆ ದೇಶಗಳಂತೆ. ಎಲ್ಲವೂ ಬೇರೆ ಬೇರೆ.
ಆದುದರಿಂದ, ಜನರಲ್ಲಿ ರಾಮೇಶ್ವರಂನ್ನು ಸಂದರ್ಶಿಸಲು ಹೇಳಲಾಯಿತು, ಮತ್ತು ನಂತರ ಅಲ್ಲಿಂದ ಕಾಶಿಗೆ ತೀರ್ಥಯಾತ್ರೆ ಹೋಗಿ ಪವಿತ್ರ ಗಂಗೆಯಲ್ಲಿ ಮೀಯಲು ಅವರಲ್ಲಿ ಹೇಳಲಾಯಿತು.  ಅದರ ನಂತರ, ಗಂಗೆಯ ಪವಿತ್ರ ನೀರನ್ನು ಕಾಶಿಯಿಂದ ರಾಮೇಶ್ವರಂಗೆ ತಮ್ಮೊಂದಿಗೆ ಹಿಂದಕ್ಕೆ ತಂದು ಅದನ್ನು ಅಲ್ಲಿಯ ಜ್ಯೋತಿರ್ಲಿಂಗಕ್ಕೆ ಅರ್ಪಿಸಲು ಅವರಲ್ಲಿ ಹೇಳಲಾಯಿತು. ಅವರದನ್ನು ಒಂದು ಪದ್ಧತಿಯನ್ನಾಗಿ ಮಾಡಿದರು ಮತ್ತು ಹೀಗೆಯೇ ಭಾರತದ ಎಲ್ಲಾ ಭಾಗಗಳ ಜನರು ಒಗ್ಗಟ್ಟಾದುದು. ಇಲ್ಲದಿದ್ದರೆ ಅದು ಯುರೋಪಿನಂತೆ ಇಪ್ಪತ್ತನಾಲ್ಕು ದೇಶಗಳಾಗಿ ವಿಂಗಡಿಸಲ್ಪಟ್ಟಿರುತ್ತಿತ್ತು.
ಭಾರತದ ವಿವಿಧ ಭಾಗಗಳನ್ನು ಒಗ್ಗಟ್ಟಾಗಿಸುವ ಈ ಬಹಳ ಮುಖ್ಯವಾದ ಕೆಲಸವನ್ನು ನಮ್ಮ ಪೂರ್ವಜರು ಸಾಧಿಸಿದ್ದಾರೆ. ಅದಕ್ಕಾಗಿಯೇ, ಗಂಗಾನದಿಯಿಂದ ನೀವು ನೀರನ್ನು ತಂದು ಅದನ್ನು ರಾಮೇಶ್ವರಂನಲ್ಲಿ ಅರ್ಪಿಸಬೇಕೆಂದು ಹೇಳಿರುವುದು.

ಪ್ರಶ್ನೆ: ಗುರುದೇವ, ಜ್ಞಾನವನ್ನು ಆಲಿಸುವಾಗ ಕೆಲವೊಮ್ಮೆ ನಮ್ಮ ಮನಸ್ಸು, "ಓ, ಇದನ್ನು ನಾನು ಈಗಾಗಲೇ ಕೇಳಿದ್ದೇನೆ" ಎಂದು ಯೋಚಿಸುತ್ತದೆ. ಜ್ಞಾನವನ್ನು ಪುನಃ ಪಡೆಯಲು ನಾವು ಯಾವತ್ತೂ ಆ ಅಚ್ಚರಿಯ ಮತ್ತು ತೆರೆದ ಮನಸ್ಸಿನ ಒಂದು ಸ್ಥಿತಿಗೆ ಹೋಗುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ನೀನಿದನ್ನು ಕೇಳಿರುವೆಯೆಂದು ನಿನಗನ್ನಿಸಿದರೆ, ಆಗ ಅದು ಈಗಾಗಲೇ ಚೈತನ್ಯದಲ್ಲಿ, ಆತ್ಮದಲ್ಲಿ ಇದೆ. ಅದು ಒಳ್ಳೆಯದು. ಗುರುತಿಸುವುದು, ಹೀರಿಕೊಳ್ಳುವುದು ಮತ್ತು ನಂತರ ಅದರ ಒಂದು ಭಾಗವಾಗುವುದು - ಈ ಮೂರು ಹಂತಗಳು ಸ್ವಾಭಾವಿಕವಾಗಿ ಆಗುತ್ತವೆ.

ಪ್ರಶ್ನೆ: ಗುರುದೇವ, ದುರ್ಗಾ ದೇವಿಯ ವಿವಿಧ ಶಸ್ತ್ರಾಸ್ತ್ರಗಳ ಮಹತ್ವದ ಬಗ್ಗೆ ದಯವಿಟ್ಟು ನಮಗೆ ತಿಳಿಸಿ.
ಶ್ರೀ ಶ್ರೀ ರವಿ ಶಂಕರ್: ನಾನು ನಿಮಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ. ಆ ದಿನಗಳಲ್ಲಿ ಅವರಲ್ಲಿ ಬಂದೂಕುಗಳಿರಲಿಲ್ಲ. ಆ ದಿನಗಳಲ್ಲಿ, ಅವರಲ್ಲಿ ಕೇವಲ ತ್ರಿಶೂಲವಿತ್ತು. ಆ ದಿನಗಳಲ್ಲಿ ಬಂದೂಕುಗಳಿರುತ್ತಿದ್ದರೆ, ಆಗ ಬಹುಶಃ ದುರ್ಗಾ ಮಾತೆಯ ಕೈಗಳಲ್ಲಿ ಎ.ಕೆ.-೪೭ ಇರುತ್ತಿತ್ತು.
ದೇವತೆಗಳು ದೇವಿ ಮಾತೆಯಲ್ಲಿ, "ದೇವಿ, ನೀನು ಯಾಕೆ ಈ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿರುವೆ? ನಿನ್ನ ಒಂದು ಶಬ್ದದಿಂದ ಎಲ್ಲಾ ರಾಕ್ಷಸರನ್ನು ಸುಟ್ಟು ಬೂದಿ ಮಾಡಲು ನಿನಗೆ ಸಾಧ್ಯವಿದೆ" ಎಂದು ಹೇಳಿದರೆಂದು ಹೇಳಲಾಗುತ್ತದೆ. ದೇವತೆಗಳು ನಂತರ ತಾವೇ ಹೀಗೆಂದು ಉತ್ತರವನ್ನು ನೀಡಿದರು, "ನೀನು ಎಷ್ಟೊಂದು ಕರುಣಾಮಯಿಯಾಗಿರುವೆಯೆಂದರೆ, ರಾಕ್ಷಸರನ್ನು ಕೂಡಾ ನೀನು ನಿನ್ನ ಶಸ್ತ್ರಾಸ್ತ್ರಗಳಿಂದ ಪವಿತ್ರಗೊಳಿಸಲು ಬಯಸುವೆ. ನೀನು ಅವರನ್ನು ಮುಕ್ತಗೊಳಿಸಲು ಬಯಸುವೆ ಮತ್ತು ಅದಕ್ಕಾಗಿಯೇ ನೀನಿದನ್ನು ಮಾಡುತ್ತಿರುವೆ." ಇದರ ಹಿಂದಿರುವ ಸಂದೇಶವೆಂದರೆ, ಕಾರ್ಯಕ್ಕೆ ಅದರದ್ದೇ ಆದ ಬೆಲೆಯಿದೆ ಎಂದು ಹೇಳುವುದು. ಸಂಕಲ್ಪ ಇರುವುದು ಮಾತ್ರ ಸಾಕಾಗುವುದಿಲ್ಲ. ನೋಡಿ, ನಾವು ಕೆಲಸ ಮಾಡಲು ಸಾಧ್ಯವಾಗಲೆಂದು ದೇವರು ನಮಗೆ ಕೈಗಳನ್ನು ಮತ್ತು ಕಾಲುಗಳನ್ನು ಕೊಟ್ಟಿದ್ದಾರೆ.
ಈಗ, ದೇವಿ ಮಾತೆಗೆ ಅಷ್ಟೊಂದು ಕೈಗಳು ಯಾಕಿವೆ? ಅದು, ದೇವರು ಕೂಡಾ ಕೆಲಸ ಮಾಡುತ್ತಾರೆ, ಮತ್ತು ಕೇವಲ ಒಂದು ಕೈಯ ಮೂಲಕವಲ್ಲ, ಬದಲಾಗಿ ಸಾವಿರಾರು ಕೈಗಳ ಮೂಲಕ ಹಾಗೂ ಸಾವಿರಾರು ರೀತಿಗಳಲ್ಲಿ ಎಂಬುದನ್ನು ಸೂಚಿಸಲು.
ರಾಕ್ಷಸರನ್ನು ನಾಶಮಾಡಲು ದೇವಿಯ ಬಳಿ ಸಾವಿರ ದಾರಿಗಳಿವೆ. ಆಕೆಯು ದುಷ್ಟರನ್ನು ಒಂದು ಹೂವಿನ ಮೂಲಕ ಕೂಡಾ ಓಡಿಸಬಲ್ಲಳು; ಗಾಂಧಿಗಿರಿಯಂತೆ. ದೇವಿಯು ತನ್ನ ಕೈಯಲ್ಲಿ ಒಂದು ಹೂವನ್ನು ಹಿಡಿದುಕೊಂಡಿರುವುದು ಅದಕ್ಕಾಗಿಯೇ; ವಿಷಯಗಳನ್ನು ಒಂದು ಹೂವಿನ ಮೂಲಕ ಇತ್ಯರ್ಥಗೊಳಿಸಲು. ನಂತರ ಶಂಖವನ್ನು ಊದುವುದರ ಮೂಲಕ ಮತ್ತು ಜ್ಞಾನವನ್ನು ನೀಡುವುದರ ಮೂಲಕ. ಅದು ಕೂಡಾ ಕೆಲಸ ಮಾಡದಿದ್ದರೆ, ಆಗ ಅವಳು ಸುದರ್ಶನ ಚಕ್ರವನ್ನು ಉಪಯೋಗಿಸುತ್ತಾಳೆ.
ಹೀಗೆ, ಅವಳಲ್ಲಿ ಒಂದಕ್ಕಿಂತ ಹೆಚ್ಚು ಉಪಾಯಗಳಿವೆ. ಇದು, ಈ ಪ್ರಪಂಚದಲ್ಲಿ ಬದಲಾವಣೆಗಳನ್ನು ತರಲು ಕೇವಲ ಒಂದು ಉಪಾಯವು ಕೆಲಸ ಮಾಡಲಾರದು ಎಂಬುದನ್ನು ಸೂಚಿಸಲು. ನೀವು ಹಲವಾರು ಮಾರ್ಗಗಳನ್ನು ಕಂಡುಹಿಡಿಯಬೇಕಾಗುತ್ತದೆ.
ಇದೇ ರೀತಿ ನಮ್ಮ ಸಂಬಂಧಗಳು ಕೂಡಾ. ನಾವು ಎಲ್ಲಾ ಸಂದರ್ಭಗಳಲ್ಲೂ ಕಠಿಣವಾಗಿರಲು ಸಾಧ್ಯವಿಲ್ಲ. ನೀವು ಎಲ್ಲಾ ಸಮಯದಲ್ಲೂ ನಿಮ್ಮ ತಂದೆಯೊಂದಿಗೆ ಹಠದಿಂದಿದ್ದರೆ ಮತ್ತು ಎಲ್ಲಾ ವಿಷಯಗಳೂ ಸರಿಯಾಗಬೇಕೆಂದು ಇಚ್ಛಿಸಿದರೆ, ಆಗ ಅದು ಆಗುವುದಿಲ್ಲ. ಕೆಲವೊಮ್ಮೆ ಪ್ರೀತಿ, ಕೆಲವೊಮ್ಮೆ ಹಠಮಾಡುವುದು ಮತ್ತು ಕೆಲವೊಮ್ಮೆ ಕೋಪ ಕೆಲಸ ಮಾಡುತ್ತದೆ.
ಅದೇ ರೀತಿ ಮಕ್ಕಳೊಂದಿಗೆ ಕೂಡಾ. ತಮ್ಮ ಮಕ್ಕಳನ್ನು ಬೆಳೆಸಲು ಹೆತ್ತವರು ಎಲ್ಲಾ ವಿವಿಧ ರೀತಿಯ ಉಪಾಯಗಳನ್ನು ಮತ್ತು ವರ್ತನೆಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂದು ನೋಡಿ. ಪ್ರತಿಸಲವೂ ಕೋಲನ್ನು ಉಪಯೋಗಿಸುವುದು ಕೆಲಸ ಮಾಡುವುದಿಲ್ಲ. ಕೆಲವೊಮ್ಮೆ ಅವರು ಪ್ರೀತಿಯ ಮೂಲಕ ಕೂಡಾ ತಮ್ಮ ಕೆಲಸವನ್ನು ಸಾಧಿಸಬೇಕು.
ಆದುದರಿಂದ, ಹೇಳಿರುವುದು ಇದನ್ನು. ಒಂದು ಸಮಸ್ಯೆಗೆ ಹಲವಾರು ಪರಿಹಾರಗಳಿರುತ್ತವೆ ಮತ್ತು ಅದಕ್ಕಾಗಿಯೇ ದೇವಿಯು ಹಲವಾರು ಶಸ್ತ್ರಾಸ್ತ್ರಗಳಿಂದ ಸಿಂಗರಿಸಲ್ಪಟ್ಟಿರುವುದು.

ಪ್ರಶ್ನೆ: ಗುರುದೇವ, ದೇವಿಮಾತೆಯ ಚಿನ್ನಮಸ್ತ ರೂಪದ ಬಗೆಗಿನ ಮಹತ್ವದ ಬಗ್ಗೆ ದಯವಿಟ್ಟು ನಮಗೆ ತಿಳಿಸಿ. 
ಶ್ರೀ ಶ್ರೀ ರವಿ ಶಂಕರ್: ದೇವಿ ಮಾತೆಯು ತನ್ನದೇ, ಕತ್ತರಿಸಿದ ತಲೆಯನ್ನು ಹಿಡಿದುಕೊಂಡಿರುವುದನ್ನು ನೀವು ನೋಡಿರಬಹುದು ಮತ್ತು ನಿಮಗೆ ಭಯವಾಗಿದ್ದಿರಬಹುದು. ಈ ಚಿತ್ರಣದ ಅರ್ಥವೇನೆಂಬುದು ನಿಮಗೆ ಗೊತ್ತಾ?
ಬೆಳಗ್ಗಿನಿಂದ ರಾತ್ರಿಯ ವರೆಗೆ ನಾವು ನಮ್ಮ ತಲೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ತಲೆಯಿಲ್ಲದಿರುವಾಗ ಅಲ್ಲಿ ಯಾವುದೇ ಚಿಂತೆಗಳಿರುವುದಿಲ್ಲ, ಸಮಸ್ಯೆಗಳಿರುವುದಿಲ್ಲ ಮತ್ತು ಜಗಳಗಳಿರುವುದಿಲ್ಲ. ಆಗ ಕೆಲಸ ಮಾಡುವುದು ಕೇವಲ ಹೃದಯ ಮತ್ತು ಈ ಹೃದಯದಿಂದ ಪ್ರೀತಿಯ, ಸಂತೋಷದ, ಆನಂದದ ಹಾಗೂ ಸರಳತೆಯ ಕಾರಂಜಿಗಳು ಚಿಮ್ಮುತ್ತವೆ.
ಎಲ್ಲಾ ಭೇದಗಳು ಏಳುವುದು ತಲೆಯಲ್ಲಿ, ಹೃದಯದಿಂದಲ್ಲ. ಜಾತಿ, ಮತ, ಅಂತಸ್ತು ಮೊದಲಾದವುಗಳ ಭೇದಗಳು ಎಲ್ಲವೂ ಬರುವುದು ತಲೆಯಿಂದ. ದುರಹಂಕಾರ ಶುರುವಾಗುವುದು ತಲೆಯಲ್ಲಿ, ತಪ್ಪು ಕಾರ್ಯಗಳು ಪ್ರಾರಂಭವಾಗುವುದು ತಲೆಯಲ್ಲಿ, ಹಿಂಸೆ ಕೂಡಾ ಪ್ರಾರಂಭವಾಗುವುದು ತಲೆಯಲ್ಲಿ. ಯಾರೊಬ್ಬರೂ ಯಾವತ್ತೂ ಹೃದಯದಿಂದ ಹಿಂಸೆ ಮಾಡುವವರಾಗಿಲ್ಲ. ಅದೆಲ್ಲವೂ ಬರುವುದು ತಲೆಯಿಂದ.
ಚಿನ್ನಮಸ್ತ ಅಂದರೆ, ದೇವಿಯು ಶರೀರದಿಂದ ತಲೆಯನ್ನು ಕತ್ತರಿಸಿದ್ದಾಳೆ ಎಂದು ಅರ್ಥ. ತಲೆಯನ್ನು ತೆಗೆದಾಗ, ಶುದ್ಧವಾದ ಪ್ರಜ್ಞೆಯಲ್ಲಿ ಉಳಿಯುವುದೇನೆಂದರೆ, ಅದು ಹೃದಯ. ಕೇವಲ ಹೃದಯ ಮಾತ್ರ ಉಳಿದಾಗ, ಪ್ರೀತಿ, ಸಹಾನುಭೂತಿ ಮತ್ತು ಸಂತೋಷಗಳು ಜೀವನದಲ್ಲಿ ಅರಳುತ್ತವೆ. ದುಷ್ಟತೆಯು ನಾಶವಾಗುತ್ತದೆ. ಇದು ಚಿನ್ನಮಸ್ತದ ಹಿಂದಿರುವ ಸಂಕೇತ.
ಈ ಎಲ್ಲಾ ಚಿತ್ರಣಗಳು ಸಾಂಕೇತಿಕವಾದುದು. ಈ ಚಿತ್ರಣಗಳ ಹಿಂದೆ ರಹಸ್ಯಗಳು ಅಡಗಿವೆ. ಅಂತಹ ರಹಸ್ಯಗಳನ್ನು ಅನ್ವೇಷಿಸಬೇಕು.